Thursday, January 30, 2025

ವಿಜಯೇಂದ್ರ ವಿರುದ್ಧ ಮುಗಿಯದ ಭಿನ್ನರ ಯುದ್ಧ

 

ಪಕ್ಷದ ಶುದ್ಧೀಕರಣಕ್ಕೆ ಮುಂದಾಗದ ಬಿಜೆಪಿ ಹೈಕಮಾಂಡ್‌ | ಬಂಡಾಯ ತೀವ್ರ

ಗ್ಯಾರಂಟಿ ಯೋಜನೆಗಳ ಫಲವಾಗಿ ರಾಜ್ಯದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್‌ ಸರ್ಕಾರವನ್ನು ಹೇಗಾದರೂ ಮಾಡಿ ತಲೆಕೆಳಗಾಗುವಂತೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದ ರಾಜ್ಯ ಬಿಜೆಪಿಯ ಬುಡವೇ ಈಗ ಅಲ್ಲಾಡುತ್ತಿದೆ. ವಿಪಕ್ಷವಾಗಿ ಆಡಳಿತ ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿಯಬೇಕಿದ್ದ ಬಿಜೆಪಿ ತನ್ನೊಳಗಿನ ಭಿನ್ನಮತವನ್ನು ಸರಿಪಡಿಸಿಕೊಳ್ಳುವುದಕ್ಕಾಗಿಯೇ ಹರಸಾಹಸ ಪಡುತ್ತಿರುವುದು ಹಾಸ್ಯಾಸ್ಪದವೇ ಸರಿ.

ನೇರ ಮಾರ್ಗವೋ ಅಥವಾ ವಾಮ ಮಾರ್ಗವೋ ಅದು ಏನೇ ಇರಲಿ, ಪಕ್ಷ ಸಂಘಟನೆಯ ವಿಚಾರದಲ್ಲಿ ಬಿಜೆಪಿ ಮಾಡುವ ಕಾರ್ಯತಂತ್ರವನ್ನು ಕಾಂಗ್ರೆಸ್‌ ಕೂಡ ಬೆರಗು ಕಣ್ಣಿಂದ ಕಾಣುತ್ತದೆ. ಆದರೆ, ಈಗ ಬಿಜೆಪಿಯೊಳಗಿನ ನಾಯಕತ್ವದ ಬಗೆಗಿನ ಬೀದಿ ರಂಪಾಟವನ್ನು ನೋಡಿ ಇವರಿಗಿಂತ ನಾವೇ ಪರವಾಗಿಲ್ಲ ಎಂಬಂತೆ ಕಾಂಗ್ರೆಸ್‌ ಮುಸಿ ಮುಸಿ ನಗುತ್ತಿದೆ ಎಂದನ್ನಿಸುತ್ತಿದೆ. ವಾಸ್ತವ ಏನೆಂದರೆ, ಪಕ್ಷದ ಸಂಘಟನೆಯ ವಿಚಾರದಲ್ಲಿ, ಕಾರ್ಯಕರ್ತರನ್ನು ಜೋಡಿಸುವುದರಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತಲೂ ಒಂದು ಹಂತ ಮೇಲೆಯೇ ಇದೆ. ಆದರೆ, ನಾಯಕತ್ವದ ವಿಚಾರದಲ್ಲಿ ಸಂಪೂರ್ಣ ಶಿಸ್ತು ಕಳೆದುಕೊಂಡಿದೆ ಎನ್ನುವುದು ರಾಜಕೀಯ ವಲಯದ ಅಭಿಪ್ರಾಯ.

ಇಂತಹ ಸ್ಥಿತಿಯಲ್ಲೂ ನಾಯಕತ್ವ, ನೇತೃತ್ವದ ವಿಚಾರದಲ್ಲಿ ರಾಜ್ಯ ಬಿಜೆಪಿಯನ್ನು ಶುದ್ಧೀಕರಣ ಮಾಡುವ ಯೋಚನೆಯಲ್ಲಿಯೂ ಬಿಜೆಪಿ ಹೈಕಮಾಂಡ್‌ ಇದ್ದಂತೆ ಕಾಣಿಸುತ್ತಿಲ್ಲ. ಅಧಿಕಾರದಲ್ಲಿದ್ದಾಗಲೂ, ವಿಪಕ್ಷದಲ್ಲಿದ್ದಾಗಲೂ ರಾಜ್ಯ ಬಿಜೆಪಿ ನಾಯಕರಿಗೆ ನಾಯಕತ್ವ ಅಥವಾ ಜವಾಬ್ದಾರಿಯ ಅಮಲು ತುಸು ಹೆಚ್ಚೇ ಇದೆ. ಬಹುಶಃ ಎಲ್ಲಾ ಕಡೆ, ಎಲ್ಲಾ ಪಕ್ಷಗಳಲ್ಲಿಯೂ ಈ ನಾಯಕತ್ವ ವಹಿಸಿಕೊಳ್ಳುವ ಗೀಳು ಸಾಮಾನ್ಯ. ಆದರೆ ರಾಜ್ಯ ಬಿಜೆಪಿಯಲ್ಲಿ ಅದು ಒಂದು ರೀತಿಯಲ್ಲಿ ರೋಗ. ತಳಮಟ್ಟದ ರಾಜಕಾರಣದಲ್ಲಿ ಎಲ್ಲಾ ವರ್ಗದ ಅರ್ಹ ಕಾರ್ಯಕರ್ತರನ್ನು ಗುರುತಿಸುವ, ಜವಾಬ್ದಾರಿ ನೀಡುವ ಬಿಜೆಪಿಯಲ್ಲಿ ಮೇಲ್ಮಟ್ಟದಲ್ಲಿ ಹಿರಿಯ, ಕಿರಿಯರ ನಡುವೆ ಸಮನ್ವಯ ಇಲ್ಲ ಎನ್ನುವುದು ಎದ್ದು ಕಾಣುತ್ತಿದೆ. ಈಗ ಈ ಕುರಿತಾಗಿ ಬಿಜೆಪಿಯ ತಳಮಟ್ಟದ ಕಾರ್ಯಕರ್ತರಲ್ಲಿಯೂ ಸಿಟ್ಟೆದ್ದಿದೆ. ಮೂಲ ಬಿಜೆಪಿಗರು, ಆರ್‌ಎಸ್‌ಎಸ್‌ ಮೂಲದವರು, ಹೊರಗಿನಿಂದ ಬಂದವರು, ಪ್ರಭಾವ ಮತ್ತು ಕೃಪಾಶೀರ್ವಾದದಿಂದ ಮೇಲ್ಪಂಕ್ತಿಯ ರಾಜಕಾರಣಕ್ಕೆ ಬಂದವರು, ಅಧಿಕಾರ ಹಿಡಿದವರು, ಜವಾಬ್ದಾರಿ ವಹಿಸಿಕೊಂಡವರ ಕಾರಣದಿಂದ ಕಾರ್ಯಕರ್ತರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದಕ್ಕೆ ಬಿಜೆಪಿ ವಿಫಲವಾಗುತ್ತಿದೆ. ಆದಾಗ್ಯೂ, ಬಿಜೆಪಿಯ ಕಾರ್ಯಕರ್ತರಲ್ಲಿ ಹಿಂದುತ್ವದ ಕಿಚ್ಚು ಹೇರಳವಾಗಿ ಇರುವುದರಿಂದ ಈ ನಾಯಕತ್ವಕ್ಕಾಗಿ ಬಡಿದಾಡುವ ಎಲ್ಲಾ ನಾಯಕರನ್ನು ದಿವ್ಯ ನಿರ್ಲಕ್ಷ್ಯ ಮಾಡಿ ಪಕ್ಷಕ್ಕಾಗಿ ದುಡಿಯುವ ಗುಣವಿದೆ. ಇದರಿಂದಲೇ ಬಿಜೆಪಿಯ ಪ್ರಭಾವಿ ನಾಯಕರು ರಾಜಕಾರಣ ಮಾಡತ್ತಿದ್ದಾರೆ.  

ರಾಜ್ಯ ಬಿಜೆಪಿಯ ಶುದ್ಧೀಕರಣದ ಚರ್ಚೆ ಈಗ ಸ್ವಪಕ್ಷೀಯರಿಂದಲೇ ಮತ್ತೆ ಮೇಲೆದ್ದಿದೆ. ರಾಜ್ಯ ಬಿಜೆಪಿಯಲ್ಲಂತೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಕೃಪಾಶೀರ್ವಾದದಿಂದಲೇ ಕೋಟೆ ಕಟ್ಟಿದ ಅನೇಕ ನಾಯಕರಿದ್ದಾರೆ. ಅದು ಮೂಲ ಬಿಜೆಪಿಗರಿಗೆ, ಆರ್‌.ಎಸ್‌.ಎಸ್‌ ಮೂಲದವರಿಗೆ ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಹಿಂದಿನಿಂದಲೂ ಕಾರ್ಯಕರ್ತರ ಪಕ್ಷ ಎಂದು ಗುರುತಿಸಿಕೊಂಡಿರುವ ಬಿಜೆಪಿಯಲ್ಲಿ ಬೆಳೆದ ನಾಯಕರಿಗೆ ಒಬ್ಬ ವ್ಯಕ್ತಿ ಪಕ್ಷಕ್ಕಿಂತ ʼಸುಪ್ರೀಂʼ ಆಗುವುದು ಸುತಾರಾಂ ಇಷ್ಟವಿಲ್ಲ. ನಿಧಾನಕ್ಕೆ ಭಿನ್ನಮತ ಮೇಲೆದ್ದಿತು. ಗುಂಪುಗಾರಿಕೆ ಮುನ್ನೆಲೆಗೆ ಬಂದಿದ್ದಷ್ಟೇ ಅಲ್ಲ ಬೀದಿಗೆ ಬಂತು.

ರಾಜ್ಯ ಬಿಜೆಪಿಯಲ್ಲಿ ಈಗ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ವಿಜಯೇಂದ್ರ ಯಡಿಯೂರಪ್ಪ ಅವರ ಮೇಲಿನ ಸಿಟ್ಟು ಬಿಜೆಪಿಯನ್ನು ಮೂರು ನಾಲ್ಕು ಗುಂಪುಗಳಾಗಿ ಬೇರ್ಪಡುವಂತೆ ಮಾಡಿದೆ. ಈ ಭಿನ್ನಮತ ಚಾಲ್ತಿಯಲ್ಲಿಟ್ಟುಕೊಂಡೇ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಲ್ಲಿಯೇ ಎಲ್ಲಾ ಬಿಜೆಪಿ ನಾಯಕರೂ ಇದ್ದಾರೆ. ಅದೇ ರಾಜ್ಯ ರಾಜಕಾರಣದ ʼಸ್ಪಾಟ್‌ಲೈಟ್ʼ. ಪಕ್ಷದಲ್ಲಿ ಹಿರಿಯವರೆಂದೆನ್ನಿಸಿಕೊಂಡವರೇ ವರಿಷ್ಠರೊಂದಿಗೆ ಲಾಬಿಗೆ ಇಳಿದು ಸಣ್ಣತನ ತೋರಿಸುತ್ತಿರುವಾಗ ಈ ಸಮಸ್ಯೆಗಳು ಸರಿಯಾಗುವುದಾದರೂ ಹೇಗೆ ? ಹೈಕಮಾಂಡ್‌ ಕೂಡ ಈ ಬಗ್ಗೆ ಜಾಣ ಮೌನ ವಹಿಸಿದೆ.  

ಬಿಜೆಪಿಯ ಶಿಸ್ತು ಸಮಿತಿಯಾಗಲಿ, ಕೇಂದ್ರ ಸಂಸದೀಯ ಮಂಡಳಿಯಾಗಲಿ ಗೊಂದಲಗಳ ಬಗ್ಗೆ ಮಾತಾಡುತ್ತಿಲ್ಲ. ಹೆಚ್ಚಾಗಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರ ಮೇಲೆಯೇ ಇರುವ ಅಸಮಧಾನವಾಗಿರುವುದರಿಂದ  ಆ ಪ್ರಭಾವವೂ ಇಲ್ಲಿ ಕೆಲಸ ಮಾಡುತ್ತಿದೆ. ಮಿಗಿಲಾಗಿ ರಾಜ್ಯದಲ್ಲಿ ಈಗ ಚುನಾವಣೆಯ ಸಂದರ್ಭವೇನೂ ಅಲ್ಲ. ಹಾಗಾಗಿ ಜಗಳ ಮಾಡುವಷ್ಟು ಮಾಡಲಿ ಎಂದು ಹೈಕಮಾಂಡ್‌ ಸುಮ್ಮನಾಗಿರುವಂತಿದೆ.  ಇಂತಹ ಸಂದರ್ಭದಲ್ಲಿ ಯಾವ ಗುಂಪಿನ ಪರವಾಗಿಯೂ ತೀರ್ಮಾನ ತೆಗೆದುಕೊಳ್ಳುವುದು ಕೂಡ ಹೈಕಮಾಂಡ್‌ ಗೆ ಕಷ್ಟದ ಸಂಗತಿ. ಎಲ್ಲಾ ಗುಂಪಿನ ನಾಯಕರಿಗೆ ತಮ್ಮದೇ ಆದ ರಾಜಕೀಯ ಪ್ರಭಾವ ರಾಜ್ಯದಲ್ಲಿದೆ. ಹಾಗಾಗಿ ಈ ಸಮಸ್ಯೆ ತಾನಾಗಿಯೇ ಬಗೆಹರಿಯಲಿ ಎಂದು ಕಾದು ನೋಡುವ ತಂತ್ರದಲ್ಲಿ ಹೈಕಮಾಂಡ್‌ ಇದೆ. 

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ನಡುವಿನ ಸಿಎಂ ಪದವಿ ಹಸ್ತಾಂತರ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್‌ ಪಾಳಯದಲ್ಲಿ ಮೇಲೆದ್ದಿದ್ದ ಭಿನ್ನಮತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಒಂದೇ ಒಂದು ಖಡಕ್ ಎಚ್ಚರಿಕೆಯಿಂದ ತಣ್ಣಗಾಯಿತು. ಆದರೇ, ಬಿಜೆಪಿಯಲ್ಲಿ ಎಚ್ಚರಿಕೆ ಕೊಡುವವರೂ ಇಲ್ಲದಂತಾಗಿದೆ. ಎಚ್ಚರಿಕೆ ಕೊಡುವವರ ವಿರುದ್ಧವೇ ಬಿಜೆಪಿಯಲ್ಲಿ ಬಣ ರಾಜಕೀಯ ಸೃಷ್ಟಿಯಾಗಿರುವುದರಿಂದ ಇಲ್ಲಿನ ಪರಿಸ್ಥಿತಿ ಕಾಂಗ್ರೆಸ್‌ಗಿಂತ ಭಿನ್ನ. ಹಾಗಾಗಿ ಬಿಜೆಪಿ ತನ್ನ ಸಂಪೂರ್ಣ ಶಿಸ್ತನ್ನು ಕಳೆದುಕೊಂಡಿದೆ ಎಂದೇ ಹೇಳಬೇಕು.

ಬಿಜೆಪಿಯಲ್ಲಿ ಎರಡು ಹಂತದಲ್ಲಿ ಶುದ್ಧೀಕರಣ ಆಗಬೇಕಿರುವ ಅನಿವಾರ್ಯತೆ ಇದೆ. ಒಂದು ವಿಜಯೇಂದ್ರ ವಿಜಯೇಂದ್ರ ವಿರುದ್ಧ ಬಹಿರಂಗ ಸಮರ ಸಾರಿರುವ ಶಾಸಕ ಬಸವನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಹರೀಶ್ ಮೊದಲಾದವರ ಜತೆಗೆ ಇದೀಗ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದ ಗೌಡ, ಆರ್. ಅಶೋಕ್ ಸೇರಿದಂತೆ ಪ್ರಮುಖ ಮುಖಂಡರು ಸಮರಕ್ಕೆ ಮುಂದಾಗಿರುವುದರ ಬಗ್ಗೆ, ಮತ್ತೊಂದು ಪಕ್ಷದಲ್ಲಿದ್ದೂ ಕಾಂಗ್ರೆಸ್ ಗೆ ನಿಷ್ಠೆ ವ್ಯಕ್ತಪಡಿಸಿರುವ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಮತ್ತು ಆಚೆಗೂ ಇಲ್ಲ, ಈಚೆಗೂ ಇಲ್ಲ ಎಂದು ಪಕ್ಷದ ಒಳಗೆ ಆಗುತ್ತಿರುವ ಗೊಂದಲಗಳನ್ನು ವರಿಷ್ಠರಿಗೆ ಮುಟ್ಟಿಸದೇ ಸುಮ್ಮನೆ ಆಟ ನೋಡುತ್ತಿರುವವರನ್ನೂ ಶುದ್ದೀಕರಣ ಮಾಡಬೇಕಿದೆ.

ಯಡಿಯೂರಪ್ಪ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯದ ಬಿಜೆಪಿಯ ವಿಷಮ ಸ್ಥಿತಿಯಲ್ಲಿ ಮುಖ್ಯಮಂತ್ರಿ ಪದವಿಗೆ ಏರಿದ ಬಸವರಾಜ್‌ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಂದು ಗುಂಪು ಕ್ರಿಯಾಶೀಲವಾಗಿದೆ. ಸಂಘ ಪರಿವಾರ ಅಥವಾ ಬಿಜೆಪಿಯ ಹಿನ್ನೆಲೆ ಇಲ್ಲದಿದ್ದರೂ ಬಸವರಾಜ್ ಬೊಮ್ಮಾಯಿ ಸದ್ಯದ ಪರಿಸ್ಥಿತಿಯಲ್ಲಿ ಆಚೆಗೂ ಇಲ್ಲ, ಈಚೆಗೂ ಇಲ್ಲ ಎಂಬಂತಿರುವ ರಾಜ್ಯ ಬಿಜೆಪಿ ಹೊಸ ಗುಂಪಿನ ನೇತೃತ್ವ ವಹಿಸಿಕೊಂಡಿರುವುದರ ಹಿಂದೆ ಹೊಸ ಲೆಕ್ಕಾಚಾರಗಳು ಹೇರಳವಾಗಿ ಕಾಣಿಸುತ್ತಿವೆ. 

ರಾಜ್ಯ ಬಿಜೆಪಿಗೆ ಲಿಂಗಾಯತ ಮತಗಳೇ ಆಸರೆ. ಬಸವರಾಜ್‌ ಬೊಮ್ಮಾಯಿ ಕೂಡ ಲಿಂಗಾಯತ ಸಮುದಾಯದವರೇ ಆಗಿದ್ದಾರೆ. ಸದ್ಯ ಅಧ್ಯಕ್ಷರಾಗಿರುವ ವಿಜಯೇಂದ್ರ ಯಡಿಯೂರಪ್ಪ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಿಜೆಪಿಯೊಂದಿಗಿನ ರಾಜಕಾರಣದ ಮಾರ್ಗದರ್ಶಕರಾಗಿದ್ದ ಯಡಿಯೂರಪ್ಪ ಅವರನ್ನು ನೇರವಾಗಿ ಎದರು ಹಾಕಿಕೊಳ್ಳುವುದಕ್ಕೆ  ಬೊಮ್ಮಾಯಿ ಅವರಿಗೆ ಸಾಧ್ಯವಿಲ್ಲ. ಹಾಗಾಗಿ ತಟಸ್ಥ ನಿಲುವಿನೊಂದಿಗೆ ಇದ್ದು, ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆದರೆ, ಲಾಭ ಪಡೆದುಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಬೊಮ್ಮಾಯಿ ಇದ್ದಿರಬಹುದು ಎಂದು ಕಾಣಿಸುತ್ತಿದೆ. ಇಲ್ಲವಾದರೇ, ಸಂಸದರಾಗಿರುವಾಗ ವರಿಷ್ಠರಿಗೆ ಇಲ್ಲಿನ ಸಮಸ್ಯೆಗಳನ್ನು ಹೇಳಿ ಸರಿಪಡಿಸಬಹುದಲ್ಲವೇ ? ಹೇಳಿ ಸರಿಪಡಿಸುವ ಸ್ಥಾನದಲ್ಲಿದ್ದುಕೊಂಡವರೇ ತಮಗಾಗುವ ಲಾಭಕ್ಕಾಗಿ ಕಾದು ಕುಳಿತಿದ್ದಾರೆ.

ಇನ್ನು, ಸದ್ಯದ ಮಟ್ಟಿಗೆ ಯಡಿಯೂರಪ್ಪ ಅವರನ್ನು ವಿರೋಧ ಕಟ್ಟಿಕೊಂಡು ವರಿಷ್ಠರು ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳೂ ತೀರಾ ಕಡಿಮೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟು ಸದ್ಯಕ್ಕೆ ಬಗೆ ಹರಿಯುವ ಲಕ್ಷಣಗಳಂತೂ ಕಾಣಿಸುತ್ತಿಲ್ಲ. ಇಂತಹ ವಿಷಮ ಸ್ಥಿತಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಪಕ್ಷದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ವಿಚಾರದಲ್ಲಿ ವಿಜಯೇಂದ್ರ ಎಡವುತ್ತಿದ್ದಾರೆ. ಹಿರಿಯ ನಾಯಕರೊಂದಿಗೆ ಸಮನ್ವಯ ಕಾಯ್ದುಕೊಳ್ಳದೆ ತಮ್ಮದೇ ದಾರಿಯಲ್ಲಿ, ತಂದೆಯ ಕೃಪಾಶೀರ್ವಾದದ ಧೈರ್ಯದಲ್ಲಿ ನಡೆಯುತ್ತಿರುವುದು ಅವರ ಭವಿಷ್ಯದ ಮೇಲೆಯೇ ಕೆಟ್ಟ ಪರಿಣಾಮ ಬೀರಲಿದೆ ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ನೇರವಾಗಿ ಕಾಣಿಸುತ್ತಿದೆ. ಏನೇ ಆಗಲಿ, ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ಭವಿಷ್ಯದ ಬಗ್ಗೆ ದೊಡ್ಡ ಕುತೂಹಲವಂತೂ ಇದೆ.

-ಶ್ರೀರಾಜ್‌ ವಕ್ವಾಡಿ  

Thursday, January 23, 2025

ಕಲ್ಲು ಮುಳ್ಳಿನ ಹಾದಿಯಲ್ಲಿ ಡಿಕೆಶಿ ಮತ್ತು ಮಹಾತ್ವಾಕಾಂಕ್ಷೆ

 


ಕಾಂಗ್ರೆಸ್‌ ಆಂತರಿಕ ಭಿನ್ನಮತ | ಹೈಕಮಾಂಡ್‌ಗೆ ಡಿಕೆಶಿ ಡಿಮಾಂಡೇ ಸವಾಲು !

ತಮ್ಮ ರಾಜಕಾರಣದ ಉದ್ದಗಲಕ್ಕೂ ಕಲ್ಲು ಮುಳ್ಳಿನ ಹಾದಿಯನ್ನೇ ಕಂಡ ಡಿ.ಕೆ ಶಿವಕುಮಾರ್‌ ಅವರ ಮೇಲೆ ಇಂದಿನ ಸ್ಪಾಟ್‌ಲೈಟ್‌. ರಾಜ್ಯದ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ. ಕೆ ಶಿವಕುಮಾರ್‌ ಅವರ ಹಿನ್ನೆಲೆ ಏನೇ ಇರಬಹುದು, ಆದರೆ ಡಿ.ಕೆ ಶಿವಕುಮಾರ್‌ ಅವರ ಸಂಘಟನಾ ಶಕ್ತಿಯ ಬಗ್ಗೆ ಕಾಂಗ್ರೆಸ್‌ ಮಾತ್ರವಲ್ಲದೇ, ಬಿಜೆಪಿಗೂ ತಿಳಿದಿದೆ. ಡಿಕೆಶಿ ಅವರ ಪ್ಲಸ್‌ ಅಂಡ್‌ ಮೈನಸ್‌ ಬಹುಶಃ ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಾಗಿ ಅಧಿಕಾರದಲ್ಲಿದ್ದಾಗೆಲ್ಲಾ ಅವರು ಸ್ವಪಕ್ಷೀಯರಿಂದಲೂ, ವಿಪಕ್ಷಗಳಿಂದಲೂ ಟೀಕೆಗೆ ಗುರಿಯಾದವರೇ ಆಗಿದ್ದಾರೆ. ಇದು ಡಿ.ಕೆ. ಶಿವಕುಮಾರ್‌ ಪರಿಸ್ಥಿತಿ.

ಡಿ. ಕೆ. ಶಿವಕುಮಾರ್‌ ಅವರಿಗೆ ಅಧಿಕಾರದ ಬಗ್ಗೆ ಒಂದು ಮಹತ್ವಾಕಾಂಕ್ಷೆ ಇದೆ. ಅದರ ಜೊತೆಗೆ ಈಗ ರಾಜಕೀಯದ ಸುದೀರ್ಘ ಅನುಭವದ ಹಿನ್ನೆಲೆಯಲ್ಲಿ ಸನ್ನಿವೇಶಕ್ಕೆ ತಕ್ಕುದಾಗಿ ನಡೆದುಕೊಳ್ಳುವ ಪ್ರೌಢಿಮೆಯನ್ನು ಅವರು ಹೇರಳವಾಗಿ ವೃದ್ಧಿಸಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್‌ ಅವರಲ್ಲಿ ಕೆಲವು ವರ್ಷಗಳ ಹಿಂದಿದ್ದ ಸಿಡಿಮಿಡಿ ಸ್ವಭಾವ ಈಗ ಇಲ್ಲ. ಎಲ್ಲವನ್ನೂ ಸಾವಧಾನದಿಂದ ಸ್ವೀಕರಿಸುವ ಮನೋಭಾವವನ್ನು ಅವರು ಬೆಳೆಸಿಕೊಂಡಿದ್ದಾರೆ. ತಮ್ಮ ರಾಜಕೀಯದ ದುರ್ಗಮವಾದ ಹಾದಿಯಲ್ಲಿ ಅವರು ತಮ್ಮಲ್ಲಿ ಇರಿಸಿಕೊಂಡಿರುವ ಅಧಿಕಾರದ ಬಗೆಗಿನ ಮಹಾತ್ವಾಕಾಂಕ್ಷೆಯನ್ನು ದಾಟಲು ಬಹಳ ಕಷ್ಟಪಟ್ಟವರು ಮತ್ತು ಈಗಲೂ ಕಷ್ಟ ಪಡುತ್ತಲೇ ಇದ್ದಾರೆ. ಬಹುಶಃ ರಾಜಕೀಯದಲ್ಲಿ ಇಷ್ಟು ಎತ್ತರಕ್ಕೆ ಏರಿದ ಮೇಲೂ ಡಿಕೆಶಿ ತಮ್ಮ ರಾಜಕೀಯದ ದುಸ್ಥಿತಿಯಿಂದ ಹೊರಬರುವುದಕ್ಕೆ ಇನ್ನೂ ಒದ್ದಾಡುತ್ತಲೇ ಇದ್ದಾರೆ.

ಕಾಂಗ್ರೆಸ್‌ ರಾಜಕೀಯದಲ್ಲಿ ಈಗ ಡಿಕೆಶಿ ಅವರದ್ದೇ ಚರ್ಚೆ. ರಾಜ್ಯ ಕಾಂಗ್ರೆಸ್‌ನ ಒಳಗೆ ಸೃಷ್ಟಿಯಾದ ಒಂದಿಷ್ಟು ಭಿನ್ನಾಭಿಪ್ರಾಯಗಳು ಮತ್ತು ಅದು ಸುದ್ದಿ ಮಾಧ್ಯಮಗಳಲ್ಲಿ ಪಡೆದ ವಾಖ್ಯಾನಗಳು ವಿಪಕ್ಷ ಬಿಜೆಪಿಗೆ ಚರ್ಚೆಯ ವಸ್ತುವಾಯಿತು. ಹೌದು, ಕರ್ನಾಟಕದ ಮಟ್ಟಿಗೆ ಅತ್ಯಂತ ಪ್ರಭಾವಿ ನಾಯಕರು ಎನ್ನಿಸಿಕೊಂಡಿರುವ ಡಿಕೆಶಿ ರಾಜಕೀಯ ವರ್ಚಸ್ಸಿಗೆ ಅಂಟಿದ ಕೆಲವು ಕಳಂಕಗಳೇ ಅವರು ಇನ್ನೂ ಏರಬಹುದಾದ ಎತ್ತರವನ್ನು ಏರುವುದಕ್ಕೆ ಬಿಡದೆ ಕಾಡುತ್ತಿದೆ. ರಾಜಕೀಯದಲ್ಲಿ ಇಂತಹ ಬೆಳವಣಿಗೆ ತೀರಾ ಸಾಮಾನ್ಯ. ರಾಜಕೀಯ ಏರಿಳಿತವನ್ನು ಕಂಡು ಮತ್ತೆ ಮರಳಿ ರಾಜಕೀಯದಲ್ಲಿ ತಮ್ಮದೇ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ. ಡಿಕೆಶಿ ಸಂಘಟನೆಯಲ್ಲಿ ಎತ್ತಿದ ಕೈ. ಪಕ್ಷ ಸಂಘಟನೆಯ ಬಗ್ಗೆ ಅವರಲ್ಲಿದ್ದ ಯೋಚನೆ ಮತ್ತು ಯೋಜನೆ ಬಹುಶಃ ಸಿದ್ದರಾಮಯ್ಯ ಅವರಿಗೂ ಇರಲಿಕ್ಕಿಲ್ಲ. ಹಾಗಂತ ಸಿದ್ದರಾಮಯ್ಯ ಅವರನ್ನು ಒಬ್ಬ ಮಾಸ್‌ ಲೀಡರ್‌ ಎಂದು ಹೇಳುವುದನ್ನು ಖಂಡಿತ ಅಲ್ಲಗಳೆಯುವಂತಿಲ್ಲ. ಎಷ್ಟೇ ಆದರೂ, ಚುನಾವಣೆ, ಪಕ್ಷ ಸಂಘಟನೆ ಎಂದು ಬಂದಾಗ ಕಾಂಗ್ರೆಸ್‌ ಪಾಳಯದಲ್ಲಿ ಕರ್ನಾಟಕದ ಪಾಲಿಗಂತೂ ಮೊದಲು ನೆನಪಾಗುವುದು ಡಿಕೆಶಿ ಎನ್ನುವುದು ಕಾಂಗ್ರೆಸ್ಸಿಗರೂ ಕೂಡ ಒಪ್ಪುವ ವಿಷಯ. ಹೀಗಾಗಿ ಡಿಕೆಶಿ ಅವರನ್ನು ಅಧಿಕಾರದ ವಿಚಾರದಲ್ಲಿ ಸರಿಯಾಗಿ ನಡೆಸಿಕೊಳ್ಳುವುದು ಕಾಂಗ್ರೆಸ್‌ ಹೈಕಮಾಂಡ್‌ಗೂ ಒಂದು ಸವಾಲಿನ ಕೆಲಸ. ಇನ್ನು, ಕರ್ನಾಟಕದ ವಿಚಾರದಲ್ಲಿ ಪಾರ್ಟಿ ಫಂಡ್‌ ಎಂದು ಬಂದಾಗಲೂ ಹೈಕಮಾಂಡ್‌ಗೆ ಮೊದಲು ನೆನಪಾಗುವುದೇ ಡಿಕೆಶಿ. ಹಾಗಾಗಿ ಡಿಕೆಶಿ ಅವರನ್ನು ನಿಭಾಯಿಸುವುದು ತುಸು ಕಷ್ಟ.

ಹಾಗಾಂತ ವೈಯಕ್ತಿಕವಾಗಿ ಡಿ.ಕೆ. ಶಿವಕುಮಾರ್‌ ಅವರ ವಿಚಾರವಾಗಿ ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿ ಅಂತಹ ಒಳ್ಳೆಯ ಒಲವೇನೂ ಇಲ್ಲ. ಒಳ್ಳೆಯ ಅಭಿಪ್ರಾಯವೂ ಇಲ್ಲ. ಆದರೇ, ಪಾರ್ಟಿ ಫಂಡ್‌, ಚುನಾವಣೆ, ಸಂಘಟನೆ ಎಂದು ಬಂದಾಗ ಅದರ ನೇತೃತ್ವ ವಹಿಸಿಕೊಳ್ಳುವುದಕ್ಕೆ ಡಿಕೆಶಿಯೇ ಸಮರ್ಥರು ಎನ್ನುವ ಅಭಿಪ್ರಾಯ ಡಿಕೆಶಿ ಬಗೆಗೆ ಭಿನ್ನಾಭಿಪ್ರಾಯ ಇರಿಸಿಕೊಂಡಿರುವ ಕಾಂಗ್ರೆಸ್‌ ನಾಯಕರಲ್ಲಿಯೂ ಇದೆ ಎನ್ನುವುದು ಅಪ್ಪಟ ಸತ್ಯ. ಡಿಕೆಶಿ ಅವರಿಗೂ ಈ ಪಕ್ಷ ಸಂಘಟನೆ, ಚುನಾವಣೆಯ ಉಸ್ತುವಾರಿ, ಸಮಸ್ಯೆ ನಿವಾರಣೆ, ಪಾರ್ಟಿ ಫಂಡ್‌ ವಿಚಾರದಲ್ಲಿ ತಾವೇ ಹೈಕಮಾಂಡ್‌ಗೆ ಪ್ರಮುಖರಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ವಿಚಾರವೂ ತಿಳಿದಿದೆ. ಇದನ್ನೇ ಬಳಸಿಕೊಂಡು ಒಮ್ಮೊಮ್ಮೆ ತಮ್ಮದಲ್ಲದ ಜವಾಬ್ದಾರಿಗಳಲ್ಲಿ ಹಸ್ತಕ್ಷೇಪ ಮಾಡುವುದು, ಅಧಿಕಾರದ ಧೋರಣೆ ತೋರಿಸುವುದು, ದರ್ಬಾರು ಮಾಡುವುದನ್ನೆಲ್ಲಾ ಡಿಕೆಶಿ ಮಾಡಿದ್ದಾರೆ. ಮಾಡಿಲ್ಲ ಎಂದರೆ ಅದು ತಪ್ಪು. ಅಂತಹ ಸಂದರ್ಭಗಳಲ್ಲಿ ಹೈಕಮಾಂಡ್‌ ಅಂಕುಶ ಪ್ರಯೋಗಿಸಿ ಅವರನ್ನು ಹದ್ದುಬಸ್ತಿನಲ್ಲಿಡುವುದನ್ನೂ ಮಾಡಿಕೊಂಡು ಬಂದಿದೆ. ಹೀಗೆ ಈ ರೀತಿಯಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಪ್ರಕಟಗೊಳಿಸುತ್ತಲೇ ಇರುವುದು ಕಾಂಗ್ರೆಸ್‌ ಹಾಗೂ ಡಿಕೆಶಿ ನಡುವಿನ ರೋಗಗ್ರಸ್ತ ಮನಸ್ಥಿತಿ ಎಂದೇ ಹೇಳಬಹುದು. ಇಂತವನ್ನೆಲ್ಲಾ ಸುದ್ದಿ ಮಾಧ್ಯಮಗಳು ಊಹಾತ್ಮಕವಾಗಿ ರಾಜಕೀಯ ರಂಜನೆಗಾಗಿ ಸುದ್ದಿಗಳನ್ನು ತಯಾರಿಸುತ್ತಾ ಜನರ ದಾರಿ ತಪ್ಪಿಸುತ್ತಾ, ರಾಜಕೀಯ ಚರ್ಚೆಯನ್ನು ತಿರುಚುತ್ತಾ ಬಂದಿದೆ.

ಇನ್ನು, ಡಿಕೆಶಿ ಬಂಡಾಯ, ಕಾಂಗ್ರೆಸ್‌ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ಚಿತ್ರಚಿತ್ರವಾಗಿ ಮಾಧ್ಯಮಗಳು ಸುದ್ದಿ ಮಾಡುತ್ತಲೇ ಬಂದಿವೆ. ಡಿಕೆಶಿ ತಮ್ಮ ಮಾತೃಪಕ್ಷ ಕಾಂಗ್ರೆಸ್‌ ವಿರುದ್ಧ ಬಂಡಾಯ ಏಳುತ್ತಾರೆ ಎನ್ನುವುದು ಅಪ್ಪಟ ಸುಳ್ಳಾದರೂ, ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಭಿನ್ನಾಭಿಪ್ರಾಯ ಇರುವುದು ಸತ್ಯಾಂಶವೇ ಆಗಿದೆ. ಬಹುಶಃ ಇಂತಹ ವಿಷಮ ಸಂದರ್ಭದಲ್ಲಿ ಡಿಕೆಶಿ ಪ್ರತಿಕ್ರಿಯಿಸಿರುವುದರಲ್ಲಿ ಪ್ರೌಢಿಮೆ ಎದ್ದು ಕಾಣಿಸುತ್ತದೆ. ಪಕ್ಷದ ರಾಜ್ಯಾಧ್ಯಕ್ಷರಾಗಿ, ಉಪ ಮುಖ್ಯಮಂತ್ರಿಯಾಗಿ ಪಕ್ಷದೊಳಗಿನ ಈ ಸಮಸ್ಯೆಯನ್ನು ಡಿಕೆಶಿ ನಿಭಾಯಿಸಿರುವುದನ್ನು ಮೆಚ್ಚಲೇ ಬೇಕು. ಸತೀಶ್‌ ಜಾರಕೀಹೊಳಿ, ಡಾ. ಜಿ. ಪರಮೇಶ್ವರ್‌ ಅವರ ಹೇಳಿಕೆಗಳು ಡಿಕೆಶಿ ಅವರನ್ನು ಸ್ವಲ್ಪ ಮಟ್ಟಿಗೆ ಕೆರಳಿಸಿತ್ತು, ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದರಾದರೂ ಆಮೇಲೆ ಏನೂ ಆಗಿಲ್ಲ ಎಂಬಂತೆ ಪಕ್ಷದ ಸಮಸ್ಯೆಗಳು ವಿಪಕ್ಷಗಳ ಬಾಯಿಗೆ ತುತ್ತಾಗಬಾರದು ಎಂಬ ದೃಷ್ಟಿಯಲ್ಲಿ ನಡೆದುಕೊಂಡಿರುವುದು ನಿಜಕ್ಕೂ ಮೆಚ್ಚಲೇ ಬೇಕು.

ಸೋನಿಯಾ ಗಾಂಧಿ ಅವರ ತ್ಯಾಗವನ್ನು ಸದಾ ಉಲ್ಲೇಖಿಸುವ ಡಿಕೆಶಿ, ಈ ಅಧಿಕಾರ ಹಂಚಿಕೆ ಹಾಗೂ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ವಿಚಾರ ಮೇಲೆ ಬಂದಾಗ, ಸೋನಿಯಾರನ್ನೇ ಸ್ಫೂರ್ತಿಯಾಗಿ ಇರಿಸಿಕೊಂಡಂತೆ ʼಪಕ್ಷಕ್ಕಾಗಿ ಉಸಿರು ಬಿಗಿ ಹಿಡಿದು ತ್ಯಾಗ ಮಾಡಿದ್ದೇನೆʼ ಎಂಬ ಹೇಳಿಕೆ ನೀಡಿದ್ದರು. ಆ ಹೇಳಿಕೆಯಲ್ಲಿ ಅವರಿಟ್ಟುಕೊಂಡಿರುವ ಮಹಾತ್ವಕಾಂಕ್ಷೆ ಈಡೇರಿಲ್ಲ ಎನ್ನುವ ನೋವು ಎದ್ದು ಕಾಣಿಸುತ್ತಿತ್ತು. ʼಪಕ್ಷಕ್ಕಾಗಿ ನಾನು ಈ ಹಿಂದಿನಿಂದಲೂ ಹಲವು ತ್ಯಾಗ ಮಾಡಿದ್ದೇನೆ. ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದಲ್ಲೂ ಉಸಿರು ಬಿಗಿ ಹಿಡಿದುಕೊಂಡು ತ್ಯಾಗ ಮಾಡಿದ್ದೇನೆ. ನನಗೆ ಪಕ್ಷವೇ ಮುಖ್ಯ. ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ಕೆಲಸ ಮಾಡುವವರ ಎದುರು ತಲೆಬಾಗಿ ಅವರ ಸೇವೆ ಮಾಡುತ್ತೇನೆ. ನನಗೆ ಫಲದ ಅಗತ್ಯವಿಲ್ಲ' ಎಂದಿದ್ದರು. ಇವೆಲ್ಲಾ ಅವರ ಹೆಚ್ಚುಗಾರಿಕೆ ಎಂಬಂತೆ ಕಾಣುವುದಕ್ಕೆ ಆರಂಭವಾಯಿತು.

ಡಿಕೆಶಿ ಅವರಿಗೆ ಇನ್ನೂ ಅವಕಾಶವಿದೆ. ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮಗೆ ಅಂಟಿರುವ ಎಲ್ಲಾ ಕಳಂಕದಿಂದ ಮುಕ್ತರಾಗಿ, ಪಕ್ಷದವರನ್ನು ಇನ್ನಷ್ಟು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ಎತ್ತರವನ್ನು ಏರುವುದಕ್ಕೆ ಖಂಡಿತ ಸಾಧ್ಯವಿದೆ. ಡಿಕೆಶಿ ಇಂತಹ ವಿಷಮ ಪರಿಸ್ಥಿತಿಯಲ್ಲಿ ತ್ಯಾಗಿಗಳಾಗಿಯೇ ಹೀರೋ ಆದರೇ, ಅವರ ಭವಿಷ್ಯಕ್ಕೂ ಒಳ್ಳೆಯದು ಎಂದು ಅವರು ಅರಿತುಕೊಂಡು ನಡೆದರೇ ಪಕ್ಷಕ್ಕೂ, ಅವರಿಗೂ ಒಳ್ಳೆಯದು. ಹೇಗೂ ಪಕ್ಷ ಸಂಘಟನೆಯಲ್ಲಿ ಡಿಕೆಶಿ ಅವರಿಗೆ ತಮ್ಮದೇ ಆದ ಚಾರ್ಮ್‌ ಇದೆ. ಪಾರ್ಟಿಗೆ ಅಗತ್ಯವಿದ್ದಲ್ಲಿ ಫಂಡ್‌ ಒದಗಿಸುವ ಎಲ್ಲಾ ಸಾಮರ್ಥ್ಯವೂ ಇದೆ. ಪಕ್ಷದಲ್ಲಿ ಪ್ರಭಾವಿಯೂ ಹೌದು. ಸ್ವಲ್ಪ ತಾಳ್ಮೆಯನ್ನು ಅವರು ತಂದುಕೊಳ್ಳಬೇಕಿದೆ. ಪಕ್ಷದ ಒಳಗೆ ಹಾಗೂ ಸಿದ್ದರಾಮಯ್ಯ ಮತ್ತು ಡಿಕೆಶಿ, ಹೈಕಮಾಂಡ್ ನಡುವೆ ಅಧಿಕಾರದ ಹಂಚಿಕೆಯ ಬಗ್ಗೆ ಯಾವ ರೀತಿಯ ಒಪ್ಪಂದ ಆಗಿದೆಯೋ ಗೊತ್ತಿಲ್ಲ. ಆಗದೆ ಇದ್ದರೇ,  ಸಿಎಂ ಸ್ಥಾನಕ್ಕೆ ಡಿಕೆಶಿ ಸದ್ಯಕ್ಕೆ ಡಿಮ್ಯಾಂಡ್‌ ಮಾಡದೆ ಉಳಿದರೇ ಅವರ ಮೇಲೆ ಇನ್ನಷ್ಟು ಭರವಸೆ ಮೂಡಲಿದೆ. ಬಹುಶಃ ಡಿಕೆಶಿ ಕಾಂಗ್ರೆಸ್‌ನ ಭವಿಷ್ಯದ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಇದರ ಮೇಲೆ ಮುಂದೇನಾಗುತ್ತದೆಂದು ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ.

Thursday, January 16, 2025

ನಾಯಕತ್ವವನ್ನು ಕಾಂಗ್ರೆಸ್‌ ತುರ್ತಾಗಿ ವೃದ್ಧಿಸಿಕೊಳ್ಳಬೇಕಿದೆ !



ಕಾಂಗ್ರೆಸ್‌ ರಾಜಕೀಯದ ಇಳಿಜಾರು |ಮುಗಿಯದ ʼಇಂಡಿಯಾʼ ಮೈತ್ರಿಕೂಟದ ಗೊಂದಲ

ಒಂದು ಕೂಟದಲ್ಲಿ  ಎಲ್ಲರೂ ದೊಡ್ಡವರಾದರೆಅಲ್ಲಿ ಎಂದಿಗೂ ಭಿನ್ನಾಭಿಪ್ರಾಯ ಇರುವುದು ಸಹಜ. ಕೂಟದಲ್ಲಿ ಒಬ್ಬನೆ ದೊಡ್ಡವನಿರಬೇಕುಉಳಿದವರು ಸಣ್ಣವರಾಗಿರಬೇಕು. ಹೇಳುವ ಅಥವಾ ನಿರ್ದೇಶಿಸುವ ಸ್ಥಾನದಲ್ಲಿ ಒಬ್ಬನೆ ಇರಬೇಕು. ಉಳಿದವರೆಲ್ಲಾ ಕೇಳುವ ಸ್ಥಾನದಲ್ಲಿರಬೇಕು. ಹಾಗಿದ್ದಾಗ ಮಾತ್ರ ಆ ಕೂಟ ಭಿನ್ನಾಭಿಪ್ರಾಯವಿಲ್ಲದೆ ಸಾಗುತ್ತದೆ. ಒಂದೊಮ್ಮೆ ಭಿನ್ನಾಭಿಪ್ರಾಯಗಳಿದ್ದರೂ ಅದು ಎದ್ದು ಕಾಣಿಸುವುದಿಲ್ಲ.

ರಾಜಕೀಯ ಮೈತ್ರಿಯಲ್ಲಿ ಎಲ್ಲವೂ ಸರಿಯಾಗಿರಬೇಕು ಎಂದರೆ ನೇತೃತ್ವ ಸರಿಯಾಗಿರಬೇಕು. ನೇತೃತ್ವವೆ ಗಟ್ಟಿಯಿಲ್ಲದಿದ್ದರೆ ಅಥವಾ ನೇತೃತ್ವಕ್ಕಾಗಿಯೇ ಎಲ್ಲರೂ ಕಣ್ಣಿಟ್ಟರೆ ಅಲ್ಲಿ ವಿಷಮ ಸ್ಥಿತಿ ಸಹಜವಾಗಿ ಉದ್ಭವಿಸುತ್ತದೆ. ಇದೇ ʼನೇತೃತ್ವʼ ಈಗ ʼಇಂಡಿಯಾʼ ಮೈತ್ರಿಕೂಟದ ಟೊಳ್ಳನ್ನು ಜಗಜ್ಜಾಹೀರು ಮಾಡಿದೆ. ʼಇಂಡಿಯಾʼ ಮೈತ್ರಿಕೂಟದಲ್ಲಿ ಸದಾ ಭಿನ್ನಾಭಿಪ್ರಾಯಗಳು ಏಳುವುದಕ್ಕೆ ಇಲ್ಲಿ ಎಲ್ಲರೂ ದೊಡ್ಡವರಾಗಿರುವುದೇ ಮೂಲ ಕಾರಣ. ಬಿಜೆಪಿ  ಹಾಗೂ ಅದರ ಅಂಗ ಪಕ್ಷಗಳ ವಿರುದ್ಧ ಒಂದು ಸಮರ್ಥ ವಿಪಕ್ಷವಾಗಿ ರೂಪುಗೊಳ್ಳುವುದಕ್ಕೆ ಕಾಂಗ್ರೆಸ್‌ ಹಾಗೂ ಅದರ ನೇತೃತ್ವದ ಇತರೆ ಅಂಗ ಪಕ್ಷಗಳಿಗೆ ಇನ್ನೂ ಸಾಧ್ಯವಾಗಿಲ್ಲ ಎನ್ನುವುದಕ್ಕೆ ಒಂದು ಸ್ಪಷ್ಟ ಸೈದ್ಧಾಂತಿಕ ಬದ್ಧತೆಯ ಕೊರತೆಯೇ ಮೂಲ ಕಾರಣ.   

ಹೇಗೆ ನೋಡಿದರೂ ದೇಶದಲ್ಲಿ ಈಗ ಮೈತ್ರಿಯದ್ದೇ ಚರ್ಚೆ. ಮೈತ್ರಿ ಆದರೆ ಒಂದು ಪರಿಣಾಮಆಗದೆ ಉಳಿದರೆ ಇನ್ನೊಂದು ಪರಿಣಾಮ. ಬಿಜೆಪಿಯನ್ನು ಎದುರಿಸುವುದಕ್ಕೆ ಒಂದಾಗುವುದು ಬಹಳ ಮುಖ್ಯ ಎಂಬ ದೃಷ್ಟಿಯಿಂದ ಜೊತೆಗೂಡಿದ್ದ ʼಇಂಡಿಯಾʼ ಮೈತ್ರಿಕೂಟ ಇಷ್ಟು ಬೇಗ ತನ್ನ ಉದ್ದೇಶ ಹಾಗೂ ಉತ್ಸಾಹವನ್ನು ಈ ಮಟ್ಟಿಗೆ ಕಳೆದುಕೊಳ್ಳುತ್ತದೆ ಎಂಬ ಊಹೆಯೂ ಇರಲಿಲ್ಲ. ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ʼಇಂಡಿಯಾʼ ಮೈತ್ರಿಕೂಟವನ್ನು ಇನ್ನಷ್ಟು ಬಲಗೊಳಿಸುತ್ತದೆ ಎಂಬ ನಿರೀಕ್ಷೆ ಇದ್ದಿತ್ತು. ಹಾಗಾಗಿಲ್ಲ. ʼಇಂಡಿಯಾʼ ಮೈತ್ರಿಕೂಟದಲ್ಲಿರುವ ʼಎಲ್ಲಾ ದೊಡ್ಡವರುʼ ಒಂದೊಂದು ಅಭಿಪ್ರಾಯ ಹೊಂದಿದ್ದಾರೆ. ಬಿಜೆಪಿ ವಿರುದ್ಧ ಅವರ ನಿಲುವು ಇದ್ದರೂಕಾಂಗ್ರೆಸ್‌ ನೇತೃತ್ವವನ್ನು ಅವರು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ.

ʼಮೈತ್ರಿಕೂಟವನ್ನು ಕಟ್ಟುವ ಕೆಲಸ ಮಾಡಿದ್ದೇನೆಅದನ್ನು ಸಮರ್ಥವಾಗಿ ನಿರ್ವಹಣೆ ಮಾಡದೆ ಇದ್ದರೆ ತಾನೇನು ಮಾಡುವುದಕ್ಕೆ ಸಾಧ್ಯವಿದೆ ?ʼ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ದೀದಿ ಮಮತಾ ಬ್ಯಾನರ್ಜಿಹಿರಿಯ ಸದಸ್ಯರಾಗಿ ತಪ್ಪುಗಳನ್ನು ಗುರುತಿಸಿ ಸರಿಪಡಿಸುವುದಕ್ಕೆ ಮುಂದಾಗದೇ ಪ್ರತಿಷ್ಠೆ ಮೆರೆದರು. ನಿತೀಶ್‌ ಕುಮಾರ್‌ ಅಧಿಕಾರದ ಹಪಾಹಪಿಗೆ ಕೂಟವನ್ನೇ ತೊರೆದರು. ಇಂತೆಲ್ಲಾ ಪ್ರಮುಖ ವಿಷಯಗಳು ಮೈತ್ರಿಕೂಟದ ಬಗ್ಗೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯೆ ಮೇಲೇಳುವುದಕ್ಕೆ ಕಾರಣವಾಯಿತು.

ಲೋಕಸಭೆಯ ಚಳಿಗಾಲದ ಅಧಿವೇಶನ ಆರಂಭಗೊಂಡ ದಿನದಿಂದಲೂಕಲಾಪಗಳು ಸರಿಯಾಗಿ ನಡೆಯುತ್ತಿರಲಿಲ್ಲ. ಪ್ರಮುಖವಾಗಿಕಾಂಗ್ರೆಸ್ ಪಕ್ಷ ಉದ್ಯಮಿ ಗೌತಮ್ ಅದಾನಿ ವಿಚಾರಕ್ಕೆ ಸಂಬಂಧಿಸಿದಂತೆಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸದನದ ಹೊರಗೆ ಪ್ರತಿಭಟನೆ ನಡೆಸಿತ್ತು. ಆದರೆಕೆಲವು ದಿನಗಳಿಂದ ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ಕಾಂಗ್ರೆಸ್ ವಿರುದ್ದ ಅಸಮಾಧಾನಗೊಂಡರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ʼಇಂಡಿಯಾʼ ಮೈತ್ರಿಕೂಟ ಮತ್ತು ಮಹಾ ವಿಕಾಸ್ ಅಘಾಡಿಗೆ ಸೋಲಾದ ನಂತರ ಅಲ್ಲಿನ ಮೈತ್ರಿಯಲ್ಲಿ ಅಪಸ್ವರ ಕೇಳಿಬಂತು. ʼಇಂಡಿಯಾʼ ಮೈತ್ರಿಕೂಟ ಅಸ್ತಿತ್ವದಲ್ಲಿಲ್ಲ ಎಂದು ಇತ್ತೀಚೆಗೆ ಓಮರ್‌ ಅಬ್ದುಲ್ಲಾ ಹೇಳಿಕೊಂಡಿರುವುದು ಬಿಜೆಪಿಗೆ ರಾಜಕೀಯ ಅಸ್ತ್ರವಾಗಿ ಸಿಕ್ಕಿತ್ತು. ಅವರು ಹೇಳಿಕೆ ನೀಡಿರುವ ಕೆಲವು ದಿನಗಳ ಬಳಿಕ ಅವರ ತಂದೆ ಫಾರೂಕ್‌ ಅಬ್ದುಲ್ಲಾ ಮೈತ್ರಿಕೂಟ ಶಾಶ್ವತ ಎಂದು ಹೇಳಿದರು. ಶರದ್‌ ಪವಾರ್‌ ಲೋಕಲ್‌ ಫೈಟ್‌ಗೆ ಮೈತ್ರಿಕೂಟ ಯಾಕೆ ಎಂದು ಹೇಳಿಕೆ ಕೊಟ್ಟರು. ಇವೆಲ್ಲಾ ಮೈತ್ರಿಯ ಭವಿಷ್ಯದ ಬಗ್ಗೆ ಪ್ರಶ್ನೆ ಹುಟ್ಟಿಸುತ್ತಿದೆ. ಭಿನ್ನಾಭಿಪ್ರಾಯಗಳಿದ್ದರೂ ಎನ್‌ಡಿಎ ಒಕ್ಕೂಟದಲ್ಲಿ ಹೀಗೆಲ್ಲಾ ಗೊಂದಲಗಳು ಬೀದಿಗೆ ಬರುವುದೇ ಇಲ್ಲ. ಇದೇ ಎನ್‌ಡಿಎ ಒಕ್ಕೂಟಕ್ಕೂ ಹಾಗೂ ʼಇಂಡಿಯಾʼ ಮೈತ್ರಿಕೂಟಕ್ಕೂ ಇರುವ ವ್ಯತ್ಯಾಸ. 

ಇನ್ನುಇದು ಕಳೆದ ಹತ್ತು ಹದಿನೈದು ವರ್ಷಗಳಿಂದ ರಾಜಕೀಯವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಕಾಂಗ್ರೆಸ್‌ ಪಾಲಿನ ದುರಂತವೇ ಸರಿ. ಲೋಕಸಭೆ ಚುನಾವಣೆಯಲ್ಲಿ ಈಗಿರುವ ʼಇಂಡಿಯಾʼ ಮೈತ್ರಿಕೂಟದ ಪಕ್ಷಗಳ ಪೈಕಿ ಅತಿ ಹೆಚ್ಚು ಕ್ಷೇತ್ರಗಳನ್ನು ಪಡೆದಿರುವ ಪಕ್ಷ ಕಾಂಗ್ರೆಸ್. ಆದಾಗ್ಯೂಬೆರಳಂಕಿಯ ಕ್ಷೇತ್ರಗಳನ್ನು ಪಡೆದುಕೊಂಡಿರುವ ಇತರೆ ಅಂಗ ಪಕ್ಷಗಳು ಕಾಂಗ್ರೆಸ್‌ ವಿರುದ್ಧವೇ ಅಸಮಧಾನ ವ್ಯಕ್ತ ಪಡಿಸುತ್ತವೆ ಎಂದರೇಇದು ಕಾಂಗ್ರೆಸ್‌ ರಾಜಕೀಯದಲ್ಲಿ ಕಂಡಂತಹ ಅತ್ಯಂತ ದಯನೀಯ ಸ್ಥಿತಿ. ಇವೆಲ್ಲಾ ಮೈತ್ರಿಕೂಟದ ನೇತೃತ್ವ ವಹಿಸಿಕೊಂಡಿರುವ ಕಾಂಗ್ರೆಸ್‌ತನ್ನೊಂದಿಗೆ ಕೈ ಜೋಡಿಸಿರುವ ಇತರೆ ಪಕ್ಷಗಳೊಂದಿಗೆ ನಡೆಸದೆ ಇರುವ ಸಮನ್ವಯಸಂವಾದಚರ್ಚೆಯ ಕೊರತೆಯನ್ನು ಎದ್ದು ತೋರಿಸುತ್ತಿದೆ. ತನ್ನ ಮೈತ್ರಿಕೂಟವನ್ನೇ ಸರಿಯಾಗಿ ನಡೆಸುವುದಕ್ಕೆ ಆಗದ ಕಾಂಗ್ರೆಸ್‌ದೇಶದ ಆಡಳಿತವನ್ನು ಸಮರ್ಥವಾಗಿ ನಿಭಾಯಿಸುತ್ತದೆಯೇ ಎನ್ನುವ ಪ್ರಶ್ನೆ ಸಹಜವಾಗಿ ಮುಂದೆ ಬರುತ್ತದೆ.

ಕಾಂಗ್ರೆಸ್‌ ತನ್ನ ಸೈದ್ದಾಂತಿಕ ಸ್ಪಷ್ಟತೆಯನ್ನು ಇನ್ನೂ ಕಂಡುಕೊಂಡಿಲ್ಲ ಎಂದೇ ಅನ್ನಿಸುತ್ತದೆ. ಅದೇ ಕಾರಣಕ್ಕೆ ಕಾಂಗ್ರೆಸ್‌ಗೆ ತನ್ನ ನೇತೃತ್ವದಲ್ಲಿರುವ ಮೈತ್ರಿಕೂಟವನ್ನೂ ನಿಭಾಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್‌ ಗೆ ಯಾವುದೇ ಒಂದು ಟೈಮ್‌ ಲೈನ್‌ ಇಲ್ಲವೇನೋ ಅಂತನ್ನಿಸುತ್ತದೆ. ಇನ್ನುಬಹುಶಃ ರಾಹುಲ್‌ ಗಾಂಧಿಯನ್ನು ಹೊರತಾಗಿ ಉಳಿದ ಯಾವೊಬ್ಬ ʼಇಂಡಿಯಾʼ ಮೈತ್ರಿಕೂಟದ ನಾಯಕರಿಗೂ ಅಖಿಲ ಭಾರತೀಯ ಮಟ್ಟದಲ್ಲಿ ಹೆಸರುಕೀರ್ತಿ ಇಲ್ಲ. ಆಯಾಯ ಪ್ರದೇಶಗಳಿಗಷ್ಟೇ ಅವರು ಸೀಮಿತವಾಗಿ ಬೆಳೆದಿದ್ದಾರೆ. ಆದಾಗ್ಯೂಆಯಾಯ ಪ್ರದೇಶಗಳಲ್ಲಿದ್ದುಕೊಂಡೇ ಅವರು ದೇಶದ ಗಮನ ಸೆಳೆದ ನಾಯಕರು. ಹಾಗಾಗಿ ಇಲ್ಲಿ ಇರುವವರೆಲ್ಲರೂ ದೊಡ್ಡವರೇ ಎನ್ನಿಸಿಕೊಂಡಿದ್ದಾರೆ. ಈ ಸ್ಥಿತಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿಲ್ಲ. ಅದುವೆ ಬಿಜೆಪಿಗೆ ಪ್ಲಸ್‌ ಪಾಯಿಂಟ್.‌ 

ʼಇಂಡಿಯಾʼ ಮೈತ್ರಿಕೂಟ ಸರ್ವಸಮ್ಮತ ಒಬ್ಬ ನಾಯಕನನ್ನು ಒಪ್ಪಿಕೊಳ್ಳುವುದಕ್ಕೆ ಇನ್ನೂ ತಯಾರಿಲ್ಲ. ರಾಹುಲ್‌ ಗಾಂಧಿ ಉಳಿದ ಎಲ್ಲಾ ನಾಯಕರಿಗಿಂತ ಜೂನಿಯರ್.‌ ಆದಾಗ್ಯೂ ರಾಹುಲ್‌ ದೇಶ ಮಟ್ಟದಲ್ಲಿ ಹೆಸರುಕೀರ್ತಿಯನ್ನು ಅವರದ್ದೇ ಶೈಲಿಯಲ್ಲಿ ಸಂಪಾದಿಸಿಕೊಂಡಿದ್ದಾರೆ. ಸೀನಿಯರ್‌ ಆಗಿ ತಮಗಿಲ್ಲದ ಈ ರಾಜಕೀಯ ವರ್ಚಸ್ಸು ರಾಹುಲ್‌ ಗಾಂಧಿಗೆ ಇದೆ ಎನ್ನುವುದೇ ಕಾಂಗ್ರೆಸ್‌ ಮತ್ತು ರಾಹುಲ್‌ ನೇತೃತ್ವವನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಮೂಲ ಕಾರಣ. ಮಲ್ಲಿಕಾರ್ಜುನ್‌ ಖರ್ಗೆ ಕಾಂಗ್ರೆಸ್‌ನ ಅಧ್ಯಕ್ಷರಾದರೂ ಕೂಡ ಕಾಂಗ್ರೆಸ್‌ ನಡೆಯುವುದು ರಾಹುಲ್‌ ಗಾಂಧಿ ಹೇಳಿದಂತೆ ಎನ್ನುವ ಅಭಿಪ್ರಾಯ ಮೈತ್ರಿಕೂಟದ ನಾಯಕರಲ್ಲಿದೆ. ಇದೇ ಇವೆಲ್ಲಾ ಗೊಂದಲಕ್ಕೆ ಕಾರಣ. ರಾಹುಲ್‌ ಗಾಂಧಿ ಆಗಲಿಮಲ್ಲಿಕಾರ್ಜುನ್‌ ಖರ್ಗೆಯಾಗಲಿ ಅಥವಾ ಇನ್ಯಾರೇ ಆಗಲಿ ʼಇಂಡಿಯಾʼ ಮೈತ್ರಿಕೂಟದಲ್ಲಿ ಪ್ರಶ್ನಾತೀತ ನಾಯಕ ಎಂದು ಯಾರೂ ಗುರುತಿಸಿಕೊಂಡಿಲ್ಲ. ಅದು ʼಇಂಡಿಯಾʼ ಪ್ರಭಾವಿ ನಾಯಕರ ʼನಾಯಕತ್ವʼದ ಕೊರತೆಯೂ ಹೌದು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತದರ ಎನ್‌ಡಿಎ ಒಕ್ಕೂಟದ ಶಕ್ತಿಶಾಲಿ ಸಿದ್ದಾಂತಕ್ಕೆ ಸರಿಸಮನಾದ ಶಕ್ತಿಶಾಲಿ ವಿಚಾರವನ್ನು ಪ್ರತಿನಿಧಿಸಬೇಕಿರುವ ಸಂದರ್ಭದಲ್ಲಿ ಆಂತರಿಕ ವೈಷಮ್ಯದಲ್ಲೇ ʼಇಂಡಿಯಾʼ ಮೈತ್ರಿಕೂಟ ಕಾಲ ಹರಣ ಮಾಡುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ವೃದ್ಧಿಸಿದೆಯಾದರೂಜನರಲ್ಲಿ ಎಷ್ಟರ ಮಟ್ಟಿಗೆ ವಿಶ್ವಾಸ ಮರು ಗಳಿಸಿಕೊಳ್ಳುವಲ್ಲಿ ಸಫಲವಾಗಿದೆ ಎನ್ನುವುದು ಮುಖ್ಯ. ತನ್ನೊಂದಿಗೆ ಕೈಜೋಡಿಸಿದ ಪಕ್ಷಗಳ ಜೊತೆಗೆ ಹೇಗೆ ಸಮನ್ವಯ ಸಾಧಿಸಿದೆ ಎನ್ನುವುದು ಕೂಡ ಪ್ರಮುಖವಾಗುತ್ತದೆ.

ರಾಜಕಾರಣದಲ್ಲಿ ರಾಹುಲ್‌ ಮಾಗಿರಬಹುದು. ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಉಳಿದವರು ಇಲ್ಲ. ಅದನ್ನು ಒಪ್ಪಿಕೊಳ್ಳುವಂತೆ ಮಾಡುವಲ್ಲಿಯೂ ರಾಹುಲ್‌ ಸೋತಿದ್ದಾರೆ ಎಂದೇ ಹೇಳಬೇಕು. ಇವೆಲ್ಲದಕ್ಕಿಂತಲೂ ಹೆಚ್ಚು ಎಂಬಂತೆ ಮೈತ್ರಿಕೂಟ ವಿವಿಧ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿದೆ. ಈ ಸ್ಥಿತಿಯನ್ನು ಮೀರುವುದಕ್ಕೆ ಪ್ರಯತ್ನವೇ ಆಗುತ್ತಿಲ್ಲ. ಇವೆಲ್ಲದಕ್ಕೂ ಕಾಂಗ್ರೆಸ್‌ ರಾಜಕೀಯದಲ್ಲಿ ಕಾಣುತ್ತಿರುವ ಬಹುದೊಡ್ಡ ಇಳಿಜಾರು ಮುಖ್ಯ ಕಾರಣ. 

ಹೇಳುವುದಕ್ಕಿರುವುದು ಇಷ್ಟೇ. ದೇಶದ ಬಹುತೇಕ ಭಾಗಗಳಲ್ಲಿ ಹೇಳಹೆಸರಿಲ್ಲದ ಪಕ್ಷಗಳು ಮತ್ತದರ ನಾಯಕರ ಬಾಯಿಯಿಂದ ಹೇಳಿಸಿಕೊಳ್ಳುವ ದಾರಿದ್ರ್ಯದಿಂದ ಕಾಂಗ್ರೆಸ್ ಹೊರಬರಬೇಕಿದೆ. ಇದಕ್ಕಾಗಿ ಅಗತ್ಯವಾಗಿ ಕಾಂಗ್ರೆಸ್ ತನ್ನ ನಾಯಕತ್ವವನ್ನು ವೃದ್ಧಿಸಿಕೊಳ್ಳಬೇಕಿದೆ. ಇದಾಗದೇ ಕಾಂಗ್ರೆಸ್‌ ಅಧಿಕಾರದ ಕನಸು ಕಾಣುವುದು ವ್ಯರ್ಥ. 

-ಶ್ರೀರಾಜ್‌ ವಕ್ವಾಡಿ


Thursday, January 9, 2025

ಇನ್ನಾದರೂ ರಾಜ್ಯ ಬಿಜೆಪಿ ಪ್ರಬುದ್ಧ ರಾಜಕಾರಣಕ್ಕೆ ಮುಂದಾಗಲಿ !

 

ನಾಯಕತ್ವದ ಹಪಾಹಪಿಯಿಂದ ಹೊರಬರಲಿ | ಹಾಸ್ಯಾಸ್ಪದ ಪ್ರಹಸನಗಳನ್ನು ನಿಲ್ಲಿಸಲಿ. 

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಇತ್ತೀಚೆಗೆ ನೀಡಿರುವ ಹೇಳಿಕೆಯೊಂದು ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನದ ಬಗೆಗಿರುವ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ. ʼಪ್ರಜಾಪ್ರಭುತ್ವ ನೆಲೆಯಲ್ಲಿ ನಮ್ಮ ಪಕ್ಷದ(ಬಿಜೆಪಿ) ಆಂತರಿಕ ಚುನಾವಣಾ ಪ್ರಕ್ರಿಯೆ ದೇಶದಾದ್ಯಂತ ಜಾರಿಯಲ್ಲಿದೆʼ ಎಂದಿರುವುದಕ್ಕೆ ಪ್ರತಿಕ್ರಿಯಿಸಿ ವರದಿಗಾರರೊಬ್ಬರು ಕೇಳಿದ್ದ ʼಒಂದು ವರ್ಷದ ಹಿಂದೆ ವಿಜಯೇಂದ್ರ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ನೇಮಕ ಮಾಡಿರುವುದರಿಂದ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯುತ್ತದೆಯೇ ಎಂಬ ಪ್ರಶ್ನೆಗೆ, ವಿಜಯೇಂದ್ರ ನೇಮಕವು "ಅನಿವಾರ್ಯ" ಆಗಿತ್ತು ಮತ್ತು ಈಗ ದೇಶಾದ್ಯಂತ ಚುನಾವಣೆ ನಡೆಯಲಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಈಗ ರಾಜಕೀಯವಾಗಿ ಒಂದಿಷ್ಟು ಚರ್ಚೆಗೂ ಕಾರಣವಾಗಿದೆ.

ಕೇಂದ್ರ ಬಿಜೆಪಿಯಲ್ಲಿಯೂ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ. ಇತ್ತ, ರಾಜ್ಯ ಬಿಜೆಪಿಗೆ ವಿಜಯೇಂದ್ರ ಯಡಿಯೂರಪ್ಪ ಅಧ್ಯಕ್ಷರಾಗಿರುವುದು ಬಿಜೆಪಿಯ ಒಂದು ಬಣಕ್ಕೆ  ಸುತಾರಾಂ ಇಷ್ಟವಿಲ್ಲ. ರಾಜ್ಯದ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಶಿಫಾರಸ್ಸಿಗೆ ತಕ್ಕಂತೆ ಸದಾ ತಲೆ ಅಲ್ಲಾಡಿಸುವ ಬಿಜೆಪಿ ಹೈಕಮಾಂಡ್‌ ಬಗ್ಗೆಯೂ ಯಾವುದೇ ಅಂಜಿಕೆ ಇಲ್ಲದೇ ಯತ್ನಾಳ್‌ ತಮ್ಮದೇ ಒಂದು ಬಣ ಸೃಷ್ಟಿಸಿಕೊಂಡು ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಸಮರ ಸಾರಿರುವುದು ಗೊತ್ತಿರುವ ವಿಷಯ. ಆರ್.‌ ಅಶೋಕ್‌ ಅವರನ್ನು ವಿಧಾನಸಭಾ ವಿರೋಧ ಪಕ್ಷದ ನಾಯಕರಾಗಿ ನೇಮಕ ಮಾಡಿದಾಗಲೂ ಅಸಮಧಾನಗೊಂಡಿತ್ತು ಈ ಬಣ. ಪುತ್ರನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಾಭಿಷೇಕ, ವಿಧಾನಸಭೆ ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆಗೊಳಿಸುವಂತೆ ಮಾಡಿ ಯಡಿಯೂರಪ್ಪ ಮತ್ತೆ ಪಕ್ಷದಲ್ಲಿ ತಾವು ಅಧಿಕಾರದ ಕೇಂದ್ರ ಸ್ಥಾನವಾಗಿ ಸಾಬೀತು ಮಾಡಿಕೊಂಡರು. ಈ ಎಲ್ಲಾ ಕಾರಣಕ್ಕಾಗಿ ಯಡಿಯೂರಪ್ಪ ಅವರಿಗೆ ಅತ್ಯಾಪ್ತರೆನ್ನಿಸಿಕೊಂಡವರೂ ಕೂಡ ʼಪಕ್ಷ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲʼ ಎಂಬಂತೆ ಹೈಕಮಾಂಡ್‌ಗೂ ಮುಲಾಜಿಲ್ಲದೆ ಅಭಿಪ್ರಾಯ ಹೊರಹಾಕಿದರು.

ರಾಜ್ಯದ ಬಿಜೆಪಿಯಲ್ಲಿ ಸರ್ವೋಚ್ಛ ನಾಯಕರಾಗಿ ಗುರುತಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ ಅವರನ್ನೂ ಬಿಜೆಪಿಯ ಪಕ್ಷದ ಒಳಗೆ ಇರುವವರೇ ಕಟುವಾಗಿ ಟೀಕಿಸುವವರೆಗೆ ಕಾಲ ಬಂದಿದೆ. ಇವೆಲ್ಲದಕ್ಕೂ ಯಡಿಯೂರಪ್ಪ ಅವರಿಗೆ ತಮ್ಮ ಪುತ್ರನ ಮೇಲಿನ ಇಲ್ಲಸಲ್ಲದ ಪ್ರೀತಿಯೇ ಕಾರಣ. ಯಡಿಯೂರಪ್ಪ ಅವರ ಸ್ವಾರ್ಥದ ಕಾರಣದಿಂದಲೇ ರಾಜ್ಯ ಬಿಜೆಪಿ ಒಡೆದು ಚೂರಾಯಿತು. ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಸರು ಕೇಳುವಂತೆ ಮಾಡಿರುವ ಕೀರ್ತಿಯೂ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ, ಬಿಜೆಪಿ ಒಡೆದು ಎರಡು ಮೂರಾಗುವಂತೆ ಮಾಡಿರುವ ಕೀರ್ತಿಯೂ ಅವರಿಗೇ ಸಲ್ಲುತ್ತದೆ. ಇವೆಲ್ಲಾ ಬಿಜೆಪಿಯವರದ್ದೇ ಅಭಿಪ್ರಾಯ. ಏನೇ ಇರಲಿ, ಯಡಿಯೂರಪ್ಪ ಒಬ್ಬ ಮಾಸ್‌ ಲೀಡರ್‌ ಎನ್ನುವುದರಲ್ಲಿ ಸಂಶಯವಿಲ್ಲ. ಪಕ್ಷದ ಪ್ರಮುಖ ಹುದ್ದೆಗಳು ವಿವಿಧ ಹಂತಗಳಲ್ಲಿ ಬಲಾಢ್ಯರು, ಪಟ್ಟಭದ್ರ ಹಿತಾಸಕ್ತಿಗಳು ಮೇಲುಗೈ ಸಾಧಿಸುವಂತಾಗಿದ್ದು ಯಡಿಯೂರಪ್ಪ ಅವರ ಕಾಲದಲ್ಲಿ. ಪಕ್ಷದೊಳಗಿನ ಒಂದು ಸಾಂಸ್ಥಿಕ ಶಿಸ್ತು ಕದಡಿ ಹೋಗಿರುವುದಕ್ಕೆ ಇವೆಲ್ಲವೂ ಒಂದು ಕಾರಣವಾಗಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಈವರೆಗೆ ರಾಜ್ಯದಲ್ಲಿ ಬಿಜೆಪಿ ಒಂದು ಪರಿಪೂರ್ಣ ಪಕ್ಷವಾಗಿ ಬೆಳೆಯುವುದಕ್ಕೆ ಪದೆ ಪದೆ ಸೋಲುತ್ತಿರುವುದಕ್ಕೂ ಇವೇ ಮೊದಲಾದವು ಕಾರಣ. ಇವೆಲ್ಲವನ್ನು ಯಡಿಯೂರಪ್ಪ ಹಾಗೂ ಅವರ ಅತ್ಯಾಪ್ತ ಬಳಗದವರು ಇದೊಂದು ಚಾರಿತ್ರಿಕ ಸಂದರ್ಭದಲ್ಲಿ ಆಗಬೇಕಾಗಿರುವ ಅನಿವಾರ್ಯತೆ ಎಂಬಂತೆ ಸಮರ್ಥಿಸಿಕೊಳ್ಳಬಹುದಾದರೂ, ಇದು ಬಿಜೆಪಿಯ ಒಂದು ಶಿಸ್ತು ಸ್ವರೂಪ ಸಂಪೂರ್ಣವಾಗಿ ಕಳೆದುಕೊಳ್ಳಲು  ಆದಿಯಾಯ್ತು. ಸ್ವಾರ್ಥಕ್ಕೆ ಪ್ರತಿಸ್ವಾರ್ಥ ಬೆಳೆಯಿತು. ಅಧಿಕಾರಕ್ಕಾಗಿ ಪಕ್ಷದ ಶಿಸ್ತನ್ನು ಬಿಟ್ಟು ಪ್ರಭಾವಿಗಳು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡರು.

ಆ ಬಳಿಕ ಈ ಬೂದಿಯೊಳಗೆ ಕುದಿಯುವ ಬೆಂಕಿಗೆ ಮತ್ತಷ್ಟು ಶಕ್ತಿ ದೊರಕಿದ್ದು, ವಿಜಯೇಂದ್ರ ಯಡಿಯೂರಪ್ಪ ರಾಜ್ಯ ಬಿಜೆಪಿಯ ಅಧ್ಯಕ್ಷರಾದಾಗ. ಪಕ್ಷದ ಒಬ್ಬ ಶಾಸಕನೂ ಆಗಿರದ ಕಾಲಕ್ಕೆ ವಿಜಯೇಂದ್ರ ತಮ್ಮ ತಂದೆ ಯಡಿಯೂರಪ್ಪ ಅವರ ʼಸೂಪರ್‌ ಸಿಎಂʼ ಆಗಿ ಇದ್ದದ್ದು ಕೂಡ ಪಕ್ಷದ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ದೇಶದಾದ್ಯಂತ ಬಿಜೆಪಿ ಜಯ ಸಾಧಿಸುತ್ತಿದ್ದ ಕಾಲದಲ್ಲಿ, ʼದೇಶದಷ್ಟೇ ದೊಡ್ಡದಾದ ಬಿಜೆಪಿʼಯಂತಹ ಪಕ್ಷದ ರಾಜ್ಯ ಘಟಕವನ್ನು ನಿಭಾಯಿಸುವುದಕ್ಕೆ ವಿಜಯೇಂದ್ರ ಸಮರ್ಥರೇ ಅಲ್ಲ ಎನ್ನುವ ಮಾತು ಸ್ವತಃ ಬಿಜೆಪಿಯವರಿಂದಲೇ ಕೇಳಿಬಂತು. ವಿಜಯೇಂದ್ರ ಬೆಂಬಲಿಗರ ಗುಂಪು ಅವರ ಸರಿ ವಯಸ್ಸಿನವರೇ ಆಗಿದ್ದರು. ಹಿರಿಯರ ಗುಂಪು ಅವರನ್ನು ಸದಾ ಟೀಕಿಸುತ್ತಲೇ ಬಂದಿದೆ. ವಿಧಾನಸಭೆ ಚುನಾವಣೆಯ ಹೀನಾಯ ಸೋಲು, ಲೋಕಸಭೆಯಲ್ಲಿ ಕಳೆದ ಚುನಾವಣೆಗಿಂತ ಕಳಪೆ ಪ್ರದರ್ಶನ, ಉಪ ಚುನಾವಣೆಯಲ್ಲಿ ಆದ ತೀವ್ರ ಮುಖಭಂಗ ವಿಜಯೇಂದ್ರ ಅವರ ನೇತೃತ್ವವನ್ನು ಬೊಟ್ಟು ಮಾಡಿ ತೋರಿಸಿತ್ತು. ಬಿಜೆಪಿ ಎಂದಿಗಿಂತಲೂ ಅಂತ್ಯಂತ ಕೆಳಮಟ್ಟಕ್ಕೆ ಇಳಿಯುವಂತಾಗಿ ಬರೀ ವೈಯಕ್ತಿಕ ಟೀಕೆಯಿಂದಲೇ ಮುಳುಗಿ ಹೋಯಿತು. ಆಡಳಿತರೂಢ ಪಕ್ಷದೊಂದಿಗೆ ಪ್ರಬುದ್ಧ ಸಂವಾದಕ್ಕೆ ಬಿಜೆಪಿ ತೆರೆದುಕೊಳ್ಳುವುದಕ್ಕೆ ಎಲ್ಲಿಯೂ ಪ್ರಯತ್ನದ ಹಾದಿಯನ್ನು ಹಿಡಿಯಲಿಲ್ಲ. ಅಪ್ರಬುದ್ಧ ಟೀಕೆಗಳನ್ನು ಮಾಡಿ ಆಡಳಿತರೂಢ ಕಾಂಗ್ರೆಸ್‌ ಮುಂದೆ ಮತ್ತೆ ಮತ್ತೆ ಅಧ್ವಾನ ಅನುಭವಿಸಿತು. ರಾಜ್ಯ ಬಿಜೆಪಿಯ ಅಸಮರ್ಥ ನಾಯಕತ್ವದ ಮುಂದೆ ಪಕ್ಷದ  ಮೌಲ್ಯಗಳು ನೆಲಕಚ್ಚಿದವು. 

ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯವನ್ನು ವಿರೋಧಿಸುವಲ್ಲಿ ರಾಜ್ಯ ಬಿಜೆಪಿ ತೋರಿದ ಅಪ್ರಬುದ್ಧತೆ, ವೈಯಕ್ತಿಕ ಟೀಕೆಗಳಿಗಾಗಿ ಮಾಡುತ್ತಿರುವ ತೀರಾ ಹಾಸ್ಯಾಸ್ಪದ ಪ್ರಹಸನಗಳು, ವಿರೋಧಿಸುವ ಉದ್ದೇಶದಲ್ಲಿ ಬಳಸುತ್ತಿರುವ ಅತಿಯಾದ ಸುಳ್ಳುಗಳೆಲ್ಲಾ ಜನರಲ್ಲಿ ರಾಜ್ಯ ಬಿಜೆಪಿ ಬಗ್ಗೆ ಅಸಹ್ಯ ಎನ್ನುವಷ್ಟರ ಮಟ್ಟಿಗೆ ತಲುಪಿದೆ ಎಂದರೇ ತಪ್ಪಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಮುಡಾ ಹಗರಣ, ವಕ್ಫ್‌ ಆಸ್ತಿ ವಿವಾದ ಸೇರಿದಂತೆ ಬಿಜೆಪಿ ಮಾಡಿದ ಎಲ್ಲಾ ಆರೋಪಗಳು ಸಾರ್ವಜನಿಕ ವಲಯದಲ್ಲಿ ತನಗೆ ಲಾಭವಾಗುವ ಹಾಗೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಲಿಲ್ಲ. ಬಹುಶಃ ಇದು ಆಡಳಿತ ಕಾಂಗ್ರೆಸ್‌ ಸರ್ಕಾರಕ್ಕೂ ಬಲವಾದ ಪೆಟ್ಟು ಬೀಳಲಿಲ್ಲ. ಎನ್ನುವಲ್ಲಿಗೆ ಒಂದು ಸಮರ್ಥ ವಿರೋಧ ಪಕ್ಷವಾಗಿಯೂ ಬಿಜೆಪಿ ಕೆಲಸ ಮಾಡುತ್ತಿಲ್ಲ ಎನ್ನುವುದೇ ಇದರ ಅರ್ಥ.

ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಟೀಕಿಸುವ ಸ್ವಪಕ್ಷೀಯರ ಬಣದಲ್ಲಿರುವವರು ಕೂಡ ಸಮರ್ಥರೆಂದೇನಲ್ಲ. ಅಲ್ಲಿಯೂ ಬರೀ ಟೊಳ್ಳುಗಳೇ ಹೆಚ್ಚು ಕಾಣಿಸುತ್ತಿವೆ. ಬಹುಶಃ ಟೀಕೆಯಷ್ಟೇ ಒಬ್ಬ ನಾಯಕನ ಸಾಮರ್ಥ್ಯವನ್ನು ನಿರ್ಧರಿಸುವುದಿಲ್ಲ. ನಾಯಕತ್ವಕ್ಕೆ ಒಂದು ಗುರಿ, ಸಿದ್ದಾಂತ, ಉದ್ದೇಶ, ಯೋಜನೆ ಹಾಗೂ ತಂತ್ರಗಾರಿಕೆಯೂ ಮುಖ್ಯ. ಸಂಘಟನಾತ್ಮಕವಾಗಿ ಪಕ್ಷವನ್ನು ಬಲಗೊಳಿಸುವ ಹೆಚ್ಚುಗಾರಿಕೆಯೂ ರಾಜಕೀಯ ನಾಯಕತ್ವಕ್ಕೆ ಮುಖ್ಯವಾಗುತ್ತದೆ. ಅಂತಹದ್ದೇನೂ ಇಲ್ಲದೆ ಇರುವ ಒಂದು ನಾಯಕತ್ವ ಅದು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ಹಪಹಪಿಸುವ ನಾಯಕತ್ವ ಅಷ್ಟೇ ಆಗಿ ಉಳಿಯುತ್ತದೆ. ಇದು ಕೊರತೆ ಕಾಂಗ್ರೆಸ್‌ನಲ್ಲಿಯೂ ಇದೆ ಎನ್ನುವುದನ್ನು ಖಂಡಿತ ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಬಹುಶಃ ರಾಜ್ಯ ಬಿಜೆಪಿಯಲ್ಲಿ ಇದು ಹೆಚ್ಚಾಗಿ ಕಾಣಿಸುತ್ತಿರುವುದೇ ರಾಜ್ಯದಲ್ಲಿ ಒಮ್ಮೆಯೂ ತನ್ನ ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವುದಕ್ಕೆ ಸಾಧ್ಯವಾಗದೆ ಇರುವುದಕ್ಕೆ ಕಾರಣ. ಇದೇ ಸ್ಥಿತಿ ಮುಂದುವರಿದರೇ ರಾಜ್ಯ ಬಿಜೆಪಿ ಪಾಲಿಗೆ ಮೈತ್ರಿಯೋ, ಆಪರೇಷನ್‌ ಕಮಲವೋ ಅಷ್ಟೇ ಗತಿ.

ಬರೀ ಹಿಂದುತ್ವದ ಹೆಸರಿನಲ್ಲಿ ಸಾಧಿಸಿದ ಜಯ ಬಹುಶಃ ಸುಧೀರ್ಘ ಕಾಲದವರೆಗೆ ರಾಜಕೀಯ ಅಸ್ತ್ರವಾಗಿ ಬಿಜೆಪಿಯೊಂದಿಗೆ ಇರಲಾರದು. ರಾಜಕೀಯದ ಶಾಶ್ವತ ಯಶಸ್ಸಿಗೆ ಬೌದ್ಧಿಕ ಶ್ರೀಮಂತಿಕೆಯೂ ಮುಖ್ಯ. ಬೌದ್ಧಿಕ ಬಡತನದಿಂದ ಬಿಜೆಪಿ ಹೊರಬರಬೇಕಿರುವ ತುರ್ತಿದೆ. ಅಟಲ್‌ ಬಿಹಾರಿ ವಾಜಪೇಯಿ ಅವರ ಆದರ್ಶ ರಾಜಕಾರಣವನ್ನು, ಸಭ್ಯ ರಾಜಕಾರಣವನ್ನು, ಶಿಸ್ತಿನ ರಾಜಕಾರಣವನ್ನು, ಪ್ರಬುದ್ಧ ರಾಜಕಾರಣವನ್ನು ಪಾಲಿಸುವ ಮನೋಧರ್ಮ ಈಗಿನ ಬಿಜೆಪಿಯ ನಾಯಕರು ಬೆಳೆಸಿಕೊಳ್ಳುವ ಅಗತ್ಯವಿದೆ. ಬಹುಶಃ ಇದರ ಮೇಲೂ ಬಿಜೆಪಿಯ ಭವಿಷ್ಯ ನಿರ್ಧಾರವಾಗುತ್ತದೆ.

ಬರೀ ದ್ವೇಷವೇ ರಾಜಕಾರಣವಲ್ಲ. ಟೀಕೆಗಳೇ ರಾಜಕಾರಣವಲ್ಲ. ಆರೋಪಗಳೇ ರಾಜಕಾರಣವಲ್ಲ. ಅದಕ್ಕೂ ಮೀರಿದ ಪ್ರಬುದ್ಧತೆ ರಾಜಕಾರಣಕ್ಕೆ ಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುವವರೆಗೆ ಬಹುಶಃ ಇದೇ ಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಇರಲಿದೆ ಅನ್ನಿಸುತ್ತದೆ. ಉಳಿದದ್ದು ನಿಮ್ಮ ಯೋಚನೆಗೆ ಬಿಟ್ಟಿದ್ದು.

-ಶ್ರೀರಾಜ್‌ ವಕ್ವಾಡಿ.

Thursday, January 2, 2025

ಸೋನಿಯಾ ಕಪಿಮುಷ್ಟಿಯಲ್ಲಿಯೂ ಸಿಂಗ್‌ ಕಿಂಗ್‌ ಆಗಿ ಮೆರೆದರು !

ಸಿಖ್ಖರ ದ್ವೇಷ ತಣಿಸಲು ಸೋನಿಯಾ ಮುಂದೆ ತಂದ ಮಾಸ್ಟರ್‌ ಪ್ಲ್ಯಾನ್ ಡಾ. ಸಿಂಗ್‌    

 ದೇಶದ ಆರ್ಥಿಕ ಸುಧಾರಣೆಗೆ ಮಹತ್ತರ ಕೊಡುಗೆ ನೀಡಿದ ಸಿಂಗ್, ತಾವು ಎದುರಿಸಿದ ಟೀಕೆಗಳಿಗೆ ಮೌನದಿಂದಲೇ ಮತ್ತು ತಾವು ಜಾರಗೊಳಿಸಿದ ಯೋಜನೆಗಳಿಂದಲೇ ಉತ್ತರಿಸಿದ್ದರು. ಹಾಗಾಗಿ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವ ಕುವೆಂಪು ಅವರ ಮಾತು ಮನಮೋಹನ್‌ ಸಿಂಗ್‌ ಅವರಿಗೆ ಸಾರ್ಥಕವಾಗಿ ಒಪ್ಪುತ್ತದೆ.   

ದೇಶ ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕತೆ ಎಂದು ಪದೆ ಪದೇ ಕ್ರೆಡಿಟ್‌ ತೆಗೆದುಕೊಳ್ಳುವ ಹಾಲಿ ಪ್ರಧಾನಿಯವರಿಗೆ ಸಿಂಗ್‌ ಪ್ರಧಾನಿಯಾಗಿ ಅಧಿಕಾರದಲ್ಲಿರುವಾಗಲೇ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕ ಪ್ರಗತಿ ಹೊಂದಿದ ದೇಶವೆಂದು ಭಾರತ ಕರೆಸಿಕೊಂಡಿರುವುದರ ಬಗ್ಗೆ ಅರಿವಿಲ್ಲವೇನೋ. ಬಹುಶಃ ಅದಕ್ಕೆ ಅವರನ್ನು ಹಾಲಿ ಪ್ರಧಾನಿಗಳು ʼಮೌನ ಮೋಹನʼ ಎಂದು ಸಂಬೋಧಿಸಿದ್ದು. ಸಿಂಗ್‌ ಪ್ರಧಾನಿಯಾಗಿದ್ದ ವೇಳೆ ದೇಶದ ಜಿಡಿಪಿ ಅತಿ ವೇಗದಲ್ಲಿ ಪ್ರಗತಿ ಕಂಡಿತ್ತು. 2006-2007ರಲ್ಲಿ ಜಿಡಿಪಿ ಶೇ.10.08ರ ದರದಲ್ಲಿ ಪ್ರಗತಿ ಸಾಧಿಸಿತ್ತು. 2009ರಲ್ಲಿ ಜಿಡಿಪಿ ದರ ಶೇ.9ಕ್ಕೆ ತಲುಪಿತ್ತು. ಆ ಮೂಲಕ ಭಾರತ ಅತಿ ಶೀಘ್ರದಲ್ಲಿ ಬೆಳೆಯುತ್ತಿರುವ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ಎಂದೆನ್ನಿಸಿಕೊಂಡಿತ್ತು.

ಸಿಂಗ್‌ ನಿಧನರಾಗುವವರೆಗೆ ಈ ದೇಶದ ಪ್ರಗತಿಗಾಗಿ ಅವರು ಜಾರಿಗೆ ತಂದ ಯೋಜನೆಗಳ ಅರಿವು ಬಹುಶಃ ಬಹುತೇಕರಿಗೆ ಇರಲಿಲ್ಲ. ಕಾಂಗ್ರೆಸಿಗರಿಗೂ ತಿಳಿದಿರಲಿಲ್ಲ. ಬಿಡಿ, ತಮ್ಮದೇ ಸರ್ಕಾರದ ಪ್ರಧಾನಿ ಮಾಡಿದ ಯೋಜನೆಗಳ ಬಗ್ಗೆ ದೇಶಕ್ಕೆ ತಿಳಿ ಹೇಳುವುದಕ್ಕೆ ಸಾಧ್ಯವಾಗದೇ ಇರುವಷ್ಟು ಕಾಂಗ್ರೆಸ್‌ಗೆ ದಾರಿದ್ರ್ಯ. ಕಾಂಗ್ರೆಸ್‌ ಇಂದು ಸಾಲುಸಾಲಾಗಿ ಸೋಲು ಕಾಣುತ್ತಿರುವುದಕ್ಕೆ ಇದೇ ಮುಖ್ಯ ಕಾರಣ. ಆಡಳಿತಾವಧಿಯಲ್ಲಿ ʼದಡ್ಡ ಪ್ರಧಾನಿʼ ಎಂದು ವಿಮರ್ಶಕರ ತೀವ್ರ ಟೀಕೆಗೆ ಒಳಗಾಗಿದ್ದ ಸಿಂಗ್‌, ಎಂದೂ ಕೆರಳಲಿಲ್ಲ. ಸಭ್ಯತೆಯಲ್ಲೇ ನಡೆದುಕೊಂಡಿದ್ದರು. ಇನ್ನು, ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಎದುರಿಸದ ಪ್ರಧಾನಿಯೊಬ್ಬರು, ಇಂತಹ ಧೀಮಂತ ಪ್ರಧಾನಿಯನ್ನು ʼಮೌನ ಮೋಹನʼ ಎಂದು ಹಿಯಾಳಿಸಿರುವುದು ಹಾಸ್ಯಾಸ್ಪದವೇ ಸರಿ ಬಿಡಿ.

ಸಿಖ್‌ ಧರ್ಮದ ಸಮಾಧಾನಕ್ಕೆ ʼಸಿಂಗ್‌ʼ ಪ್ರಧಾನಿ !

ಪ್ರತ್ಯೇಕ ಖಲಿಸ್ತಾನ ರಾಷ್ಟ್ರಕ್ಕಾಗಿ ವಿಧ್ವಂಸಕ ಮಾರ್ಗ ಹಿಡಿದಿದ್ದ ಬಂಡುಕೋರರ ನಾಯಕ ಭಿಂದ್ರನ್‌ವಾಲೆ, ಸಿಖ್ಖರ ಪವಿತ್ರ ಕ್ಷೇತ್ರ ಅಮೃತಸರದ ಸ್ವರ್ಣಮಂದಿರವನ್ನೇ ತನ್ನ ಆಶ್ರಯವನ್ನಾಗಿಸಿಕೊಂಡಿದ್ದ. ಶಸ್ತ್ರಾಸ್ತ್ರಗಳೊಂದಿಗೆ ಅಡಗಿಕೊಂಡಿದ್ದ ಬಂಡುಕೋರರನ್ನು ಹೊರದಬ್ಬಲು ಸೇನೆ 'ಆಪರೇಷನ್‌ ಬ್ಲೂ ಸ್ಟಾರ್‌'(1984ರ ಜೂನ್‌ 3-8ರವರೆಗೆ) ತಂತ್ರವನ್ನು ಹೆಣೆದಿತ್ತು.

ಅದು ಇಂದಿರಾ ಗಾಂಧಿ ಎರಡನೆ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಹಿಡಿದ ಕಾಲಘಟ್ಟ. ಮೊರಾರ್ಜಿ ದೇಸಾಯಿ ಹಾಗೂ ಚೌಧರಿ ಚರಣ್‌ ಸಿಂಗ್‌ ಅವರು ಕೆಲವು ತಿಂಗಗಳುಗಳ ಕಾಲಕ್ಕೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಬಳಿಕ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೇರಿದ್ದರು. ಇಂದಿರಾ ಇಂಥದೊಂದು ಗಟ್ಟಿ ನಿರ್ಧಾರ ಮಾಡಿ, ಭಿಂದ್ರನ್‌ವಾಲೆಯನ್ನು ಮಟ್ಟ ಹಾಕಲು ಸೇನೆಗೆ ಸೂಚಿಸಿದ್ದರು. ಅಂದಿನ ಕಾಲಕ್ಕೆ ಇಂದಿರಾಗಾಂಧಿ ತೆಗೆದುಕೊಂಡಿದ್ದ ಈ ನಿರ್ಧಾರ ಇಂದೂ ಕೂಡ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಷಯ. ಈ ಆಪರೇಷನ್‌ ಬ್ಲೂಸ್ಟಾರ್‌ ಬಳಿಕ ನಡೆದ ರಾಜಕೀಯ ಬೆಳವಣಿಗೆ ಕಾಂಗ್ರೆಸ್‌ ಪಾಲಿಗೆ ದೊಡ್ಡ ಆಘಾತವನ್ನೇ ನೀಡಿತ್ತು. ಕೆಲವರು ಇಂದಿರಾ ಗಾಂಧಿ ಅಂದು ತೆಗದುಕೊಂಡಿದ್ದ ನಿರ್ಧಾರವನ್ನು ಟೀಕಿಸಿದರೇ, ಕೆಲವರು ಹೊಗಳಿ ಕೊಂಡಾಡಿದ್ದರು. ʼಆಪರೇಷನ್‌ ಬ್ಲೂ ಸ್ಟಾರ್‌ʼ ಕಾರ್ಯಾಚರಣೆಗೆ ಪ್ರತಿಕಾರವಾಗಿ ಇಂದಿರಾ ಗಾಂಧಿ ಹತ್ಯೆ ನಡೆಯಿತು. ಆಪರೇಷನ್‌ ನ ಸಂದರ್ಭದಲ್ಲಿ ಸೇನಾ ನಾಯಕರಾಗಿದ್ದ ಜನರಲ್‌(ನಿವೃತ್ತ) ಎ.ಎಸ್‌.ವೈದ್ಯ, ಲೆಫ್ಟಿನೆಂಟ್‌ ಕರ್ನಲ್‌ ಕುಲ್ದೀಪ್‌ ಸಿಂಗ್‌ ಬ್ರಾರ್‌ ಅವರ ಬರ್ಬರ ಹತ್ಯೆಯೂ ಯಿತು.

ಇಂದಿರಾ ಗಾಂಧಿ ಅಮೃತಸರರ ಸ್ವರ್ಣಮಂದಿರದೊಳಗೆ  ಸೇನೆಯನ್ನು ನುಗ್ಗಿಸಿ ಕಾರ್ಯಾಚರಣೆ ಮಾಡುವಂತೆ ಆದೇಶ ನೀಡಿರುವುದು ಸಿಖ್‌ ಧರ್ಮದವರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಸಿಖ್‌ ಧರ್ಮದವರ ನಂಬಿಕೆಯ ತಾಣವಾಗಿದ್ದ ಅಮೃತಸರದ ಸ್ವರ್ಣಮಂದಿರದ ಮೇಲೆ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಅಂದು ನಿಕೃಷ್ಟ ಕ್ರಮಕ್ಕೆ ಮುಂದಾಗಿದ್ದಕ್ಕೆ ಕಾಂಗ್ರೆಸ್ ಇಂದಿಗೂ ಅದರ ಪರಿಣಾಮ ಅನುಭವಿಸುತ್ತಿದೆ.

1984 ಅಕ್ಟೋಬರ್‌ 31ರಂದು ಇಂದಿರಾ ಗಾಂಧಿಯನ್ನು ಅವರ ಸಿಖ್‌ ಅಂಗರಕ್ಷಕರಾದ ಸತ್ವಂತ್‌ ಸಿಂಗ್‌ ಮತ್ತು ಬಿಯಾಂತ್‌ ಸಿಂಗ್‌ ಗುಂಡಿಟ್ಟು ಕೊಲೆ ಮಾಡಿದರು. ಇನ್ನು, ಇಂದಿರಾ ಗಾಂಧಿ ಹತ್ಯೆಗೆ ಪ್ರತೀಕಾರವಾಗಿ 1981ರ ನವೆಂಬರ್‌ ನಲ್ಲಿ ಮೂರ್ನಾಲ್ಕು ದಿನಗಳ ಕಾಲ ದೆಹಲಿ ಸೇರಿದಂತೆ ದೇಶಾದ್ಯಂತ ಸಿಖ್ಖರ ಮಾರಣಹೋಮ ನಡೆಯಿತು ಎನ್ನುವ ಕರಾಳ ಇತಿಹಾಸವನ್ನು ನಾವು ಕಾಣುತ್ತೇವೆ. ಬರೋಬ್ಬರಿ 3000ಕ್ಕೂ ಹೆಚ್ಚು ಸಿಖ್ಖರ ಹತ್ಯೆಯಾಯಿತು ಎಂದು ಇತಿಹಾಸ ಹೇಳುತ್ತದೆ. ಕಾಂಗ್ರೆಸ್‌ ನಾಯಕರ ಕೈವಾಡವಿತ್ತು ಎಂದು ಹೇಳಲಾಗುವ ಈ ಗಲಭೆಯಲ್ಲಿ ಕಂಡಕಂಡಲ್ಲಿ ಸಿಖ್ಖರನ್ನು ಜೀವಂತವಾಗಿ ಸುಡಲಾಯಿತು ಎಂದು ಹೇಳಲಾಗುತ್ತದೆ.

ಇಂದಿರಾ ಹತ್ಯೆಯ ನಂತರ ಕಾಂಗ್ರೆಸ್‌ ಅನುಕಂಪದ ಆಧಾರದ ಮೇಲೆ ಭರ್ಜರಿ ಜಯ ಸಾಧಿಸಿತ್ತು. ರಾಜೀವ್‌ ಗಾಂಧಿ ಪ್ರಧಾನಿಯಾದರು. 1985ರಲ್ಲಿ ರಾಜೀವ್‌ ಗಾಂಧಿ ಮತ್ತು ಮೃದು ಧೋರಣೆಯ ಅಕಾಲಿ ದಳದ ನಾಯಕ ಹರಿಚರಣ್ ಸಿಂಗ್‌ ಲೊಂಗ್ವೊಲಾ ಪಂಜಾಬ್‌ ಒಪ್ಪಂದಕ್ಕೆ ಸಹಿ ಹಾಕಿದರು.‌ ಈ ಒಪ್ಪಂದದ ಕಾರಣಕ್ಕಾಗಿಯೇ ಲೊಂಗ್ವೊಲಾ ಹತ್ಯೆ ನಡೆಯಿತು. 1995ರಲ್ಲಿ ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಬಿಯಂತ್‌ ಸಿಂಗ್ ಹತ್ಯೆಯಾಯಿತು. ಕಾಂಗ್ರೆಸ್‌ನ ಮೇಲೆ ಸಿಖ್‌ ಧರ್ಮದವರಲ್ಲಿ ಆಕ್ರೋಶ ಎಂದೂ ಕಡಿಮೆಯಾಗದಂತೆ ಖಲಿಸ್ತಾನಿಗಳು ನೋಡಿಕೊಂಡರು. ಪ್ರತಿಪಕ್ಷಗಳು ಸಿಖ್ಖರಲ್ಲಿ ಕಾಂಗ್ರೆಸ್‌ ಮೇಲೆ ಹುಟ್ಟಿದ ದ್ವೇಷವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡರು. ಬೇರೆ ಬೇರೆ ಸಂಗತಿಗಳು ಇದರೊಂದಿಗೆ ಸೇರಿಕೊಂಡವು. ಉಳಿದದ್ದು ಇತಿಹಾಸ. ಕಾಂಗ್ರೆಸ್‌ ವರ್ಚಸ್ಸು ಕ್ಷೀಣಿಸಿತ್ತು. ಕಾಂಗ್ರೆಸ್‌ ಮರಳಿ ಬಲ ಕಂಡುಕೊಳ್ಳಲು ಕೆಲವು ವರ್ಷಗಳೇ ಬೇಕಾಯಿತು.

2004ರಲ್ಲಿ ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್‌ ಮರಳಿ ಚೇತರಿಸಿಕೊಂಡಿತ್ತು. ಮೈತ್ರಿಪಕ್ಷಗಳೊಂದಿಗೆ ಸರ್ಕಾರ ಅಧಿಕಾರಕ್ಕೆ ಬಂತು. ಸೋನಿಯಾ ಪ್ರಧಾನಿಯಾಗುತ್ತಾರೆಂದು ನಿರೀಕ್ಷೆಯಲ್ಲಿದ್ದ ಕಾಂಗ್ರೆಸಿಗರಿಗೆ ಅಚ್ಚರಿ ಮೂಡಿದ್ದು, ಸೋನಿಯಾ ಮನಮೋಹನ್‌ ಸಿಂಗ್‌ ರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದಾಗ.

ಕಾಂಗ್ರೆಸ್‌ ಮೇಲೆ ಸಿಖ್‌ ಧರ್ಮ ಇರಿಸಿಕೊಂಡಿದ್ದ ಕೋಪ ತಣಿಸುವ ಉದ್ದೇಶದ ಜೊತೆಗೆ ಮೈತ್ರಿ ಪಕ್ಷಗಳನ್ನು ಸಮಧಾನದಲ್ಲಿಡುವುದಕ್ಕೆ ಮನಮೋಹನ್‌ ಸಿಂಗ್‌ ಅಂತಹ ನಾಯಕರು ಸಮರ್ಥರು ಎಂದು ಸೋನಿಯಾ ಭಾವಿಸಿದ್ದರು. 1970-80ರ ದಶಕದಲ್ಲಿ ಖಲಿಸ್ತಾನಿಗಳ ಚಳವಳಿ ಮುಂಪಂಕ್ತಿಗೆ ಬಂದಾಗ 1982 ರಲ್ಲಿ ಕೇಂದ್ರ ಗೃಹ ಸಚಿವ, ಸಿಖ್‌ ಜನಾಂಗದ ಪ್ರಮುಖ ನಾಯಕರಾಗಿದ್ದ ಗ್ಯಾನಿ ಜೈಲ್‌ ಸಿಂಗ್‌ರನ್ನು ರಾಷ್ಟ್ರಪತಿಯನ್ನಾಗಿ ಮಾಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಇನ್ನು, ʼಸೋನಿಯಾ ರಬ್ಬರ್‌ ಸ್ಟ್ಯಾಂಪ್‌ ಮನಮೋಹನ್‌ ಸಿಂಗ್‌ʼ ಎಂಬ ಟೀಕೆ ಕೇಳಿಬಂತು. ಆದರೂ, ಮನಮೋಹನ್‌ ಸಿಂಗ್‌ ರಂತಹ ಪ್ರಧಾನಿಯನ್ನು ಕೊಟ್ಟ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಸೋನಿಯಾ ಅವರ ಉದ್ದೇಶ ಏನೇ ಆಗಿದ್ದರೂ, ಉಳಿದ ಕಾಂಗ್ರೆಸ್‌ನ ಹಿರಿಯ ನಾಯಕರ ನಡುವೆ ಮನಮೋಹನ್‌ ಸಿಂಗ್‌ ಆರ್ಥಿಕವಾಗಿ ಬಳಲುತ್ತಿರುವ ಈ ದೇಶದ ಸ್ಥಿತಿಯನ್ನು ಸುಧಾರಿಸಿಯಾರು ಎಂಬ ನಂಬಿಕೆಯಿಟ್ಟಿದ್ದರು ಎನ್ನುವುದೇ ಇಲ್ಲಿ ಎದ್ದು ಕಾಣುವ ವಿಷಯ.

ಸಿಂಗ್‌ ಅವರನ್ನು ಸೋನಿಯಾ ತಮ್ಮ ಕೈಯೊಳಗೆ ಇರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದರೂ ಕೂಡ ದೇಶದಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ನೀತಿಗಳನ್ನು ಪರಿಚಯಿಸುವ ಮೂಲಕ, ದೇಶದ ಅಭಿವೃದ್ಧಿಗೆ ಸಮರ್ಥ ಮುನ್ನುಡಿ ಬರೆದರು. ಮೌಲ್ಯ ವರ್ಧಿತ ತೆರಿಗೆ ವ್ಯವಸ್ಥೆ, ವಿಶೇಷ ಆರ್ಥಿಕ ವಲಯ ಕಾಯ್ದೆ, ನರೇಗಾ ಯೋಜನೆ, ಭಾರತ-ಅಮೇರಿಕಾ ಪರಮಾಣು ಒಪ್ಪಂದ, ಪೊಲೀಯೊ ಮುಕ್ತ ಭಾರತ, ಆರ್‌ಟಿಐ, ಆಧಾರ್‌ ಕಾರ್ಡ್‌, ಚಂದ್ರಯಾನ, ಮಂಗಳಯಾನ ಹೀಗೆ ಅನೇಕ ಯೋಜನೆಗಳನ್ನು ಸಮರ್ಥವಾಗಿ ಜಾರಿಗೆ ತರುವ ಮೂಲಕ ಸೋನಿಯಾ ಕಪಿಮುಷ್ಟಿಯಲ್ಲಿಯೂ ʼಸಿಂಗ್‌ ಕಿಂಗ್‌ ಆಗಿʼ ಮೆರೆದರು. ಸಿಂಗ್‌ ಹಾಕಿಕೊಟ್ಟು ಮಾರ್ಗವನ್ನು ಮುರಿಯುವ ಉಪಕ್ರಮಗಳಿಂದ ರಚನೆಗೊಂಡ ಭಾರತದಲ್ಲಿ ನಾವೀಗ ಬದುಕುತ್ತಿದ್ದೇವೆ. ಸಿಂಗ್‌ ತಂದ ಯೋಜನೆಗಳನ್ನು ತಾವೇ ತಂದ ಯೋಜನೆಗಳು ಎಂಬಂತೆ ಹಾಲಿ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಇತ್ತ, ಕಾಂಗ್ರೆಸ್‌ ಬಲಹೀನವಾಗಿದೆ.   

-ಶ್ರೀರಾಜ್‌ ವಕ್ವಾಡಿ