ರಾಹುಲ್ ಗಾಂಧಿಯವರ ಇನ್‌ಸ್ಟಾಗ್ರಾಂನಲ್ಲಿನ ‘Ask Me Anything’ ಪೋಸ್ಟ್ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದು ಸಾಮಾಜಿಕ ಜಾಲತಾಣದ ಸಾಮಾನ್ಯ ಸಂವಾದದ ಪ್ರಯತ್ನದಂತೆ ಕಾಣಬಹುದು. ಆದರೆ ಅದರ ರಾಜಕೀಯ ಅರ್ಥವನ್ನು ಗಮನಿಸಿದರೆ, ಇದು ಯುವ ಮತದಾರರೊಂದಿಗೆ ನೇರ ಸಂಪರ್ಕ ಸಾಧಿಸುವ ಹೊಸ ಪ್ರಯತ್ನವೇ ಎಂಬ ಪ್ರಶ್ನೆ ಎದುರಾಗುತ್ತದೆ.
2014ಕ್ಕೂ ಮೊದಲು ದೇಶದ ರಾಜಕೀಯದಲ್ಲಿ ರಾಹುಲ್ ಗಾಂಧಿ ಅವರನ್ನು ದೊಡ್ಡ ಯುವ ಸಮೂಹ ಸುತ್ತುವರಿದಿತ್ತು. ಆದರೆ 2014ರ ನಂತರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ರಾಜಕೀಯವಾಗಿ ಹೊಸ ನಿರೂಪಣೆಯನ್ನು ಕಟ್ಟಿತು. ‘ಅಭಿವೃದ್ಧಿ’, ‘ಹೊಸ ಭಾರತ’, ‘ಯುವಶಕ್ತಿ’ ಮತ್ತು ಬಲಿಷ್ಠ ನಾಯಕತ್ವದಂತಹ ರಾಜಕೀಯ ಸಂದೇಶಗಳು ಯುವ ಮತದಾರರ ದೊಡ್ಡ ವರ್ಗವನ್ನು ಬಿಜೆಪಿಯತ್ತ ಸೆಳೆದವು. ಸಾಮಾಜಿಕ ಜಾಲತಾಣಗಳನ್ನೂ ರಾಜಕೀಯ ಸಂವಹನದ ಪ್ರಮುಖ ವೇದಿಕೆಯನ್ನಾಗಿ ಬಳಸಿಕೊಂಡ ಬಿಜೆಪಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ಗಿಂತ ವೇಗವಾಗಿ ಡಿಜಿಟಲ್ ಪಾಲಿಟಿಕ್ಸ್ ನ ಭಾಷೆಯನ್ನು ಅಳವಡಿಸಿಕೊಂಡಿತು.
ಆದರೆ ಕಳೆದ ಕೆಲವು ವರ್ಷಗಳಲ್ಲಿ ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಗಳ ಲಕ್ಷಣಗಳು ಗೋಚರಿಸುತ್ತಿವೆ. ಅದರಲ್ಲೂ ಇತ್ತೀಚೆಗೆ ನಡೆದ ನೀಟ್ ಅಕ್ರಮದ ವಿರುದ್ಧ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ ಭಾರತೀಯ ರಾಜಕೀಯದಲ್ಲಿ ಹೊಸ ಮುನ್ನೋಟವನ್ನು ತೋರಿಸುತ್ತಿದೆ. ಯುವಕರ ನಿರೀಕ್ಷೆಗಳು ಬದಲಾಗುತ್ತಿವೆಯೇ? ಇಂದಿನ ಯುವಜನತೆಯ ರಾಜಕೀಯ ಆದ್ಯತೆಗಳನ್ನು ಕೇವಲ ರಾಷ್ಟ್ರವಾದ ಅಥವಾ ನಾಯಕತ್ವದ ಪ್ರಶ್ನೆಗಳಿಗೆ ಸೀಮಿತಗೊಳಿಸಲಾಗುವುದಿಲ್ಲ. ನಿರುದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅನಿಶ್ಚಿತತೆ, ಶಿಕ್ಷಣದ ವೆಚ್ಚ, ಸಾಮಾಜಿಕ ಅಸಮಾನತೆ, ಉದ್ಯೋಗದ ಗುಣಮಟ್ಟ, ಆರ್ಥಿಕ ಅವಕಾಶಗಳು ಮತ್ತು ಭವಿಷ್ಯದ ಭದ್ರತೆ—ಇವು ಯುವಕರ ರಾಜಕೀಯ ಚರ್ಚೆಯ ಕೇಂದ್ರದಲ್ಲಿರುವ ಪ್ರಶ್ನೆಗಳು.
ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ನಿರಂತರವಾಗಿ ಯುವಕರು, ವಿದ್ಯಾರ್ಥಿಗಳು, ಸಾಮಾಜಿಕವಾಗಿ ಹಿಂದುಳಿದ ವರ್ಗಗಳು ಮತ್ತು ಆರ್ಥಿಕ ಅಸಮಾನತೆ ಕುರಿತು ಮಾತನಾಡುತ್ತಿರುವುದು ಗಮನಾರ್ಹ. ಇದು ಸ್ವತಃ ದೊಡ್ಡ ಮತಬ್ಯಾಂಕ್ ನಿರ್ಮಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ರಾಜಕೀಯ ಸಂವಹನದಲ್ಲಿ ಒಂದು ಪ್ರಮುಖ ಬದಲಾವಣೆಯನ್ನು ಇದು ಸೂಚಿಸಬಹುದು. ಯುವಕರು ಕೇವಲ ಮತದಾರರು ಎಂದು ನೋಡುವ ಬದಲು, ಅವರನ್ನು ನೇರವಾಗಿ ಪ್ರಶ್ನಿಸುವ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸುವ ರಾಜಕೀಯ ಸಂಸ್ಕೃತಿಯನ್ನು ನಿರ್ಮಿಸಲು ಸಾಧ್ಯವೇ? ‘Ask Me Anything’ ಮಾದರಿಯ ಸಂವಾದದ ರಾಜಕೀಯ ಮಹತ್ವ ಏನು !? ಇದು ಕೇವಲ Instagram ತಂತ್ರವೇ? ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ವೈರಲ್ ಆಗುವುದು ಮತ್ತು ಅದು ಚುನಾವಣಾ ಮತವಾಗಿ ಪರಿವರ್ತನೆಯಾಗುವುದು ಎರಡು ವಿಭಿನ್ನ ಸಂಗತಿಗಳು. ರಾಹುಲ್ ಗಾಂಧಿಯವರ ಮುಂದಿರುವ ನಿಜವಾದ ಸವಾಲು Instagram, YouTube ಅಥವಾ Xನಲ್ಲಿ ಜನಪ್ರಿಯತೆ ಗಳಿಸುವುದಲ್ಲ. ಆ ಡಿಜಿಟಲ್ ಸಂಪರ್ಕವನ್ನು ತಳಮಟ್ಟದ ರಾಜಕೀಯ ಸಂಘಟನೆಗೆ ಪರಿವರ್ತಿಸುವುದು. ಯುವಜನರೊಂದಿಗೆ ನೇರವಾಗಿ ಮಾತನಾಡುವುದು ಸುಲಭ. ಆದರೆ ಅವರ ಸಮಸ್ಯೆಗಳನ್ನು ಸಂಘಟಿತ ರಾಜಕೀಯ ಬೇಡಿಕೆಗಳಾಗಿ ಪರಿವರ್ತಿಸುವುದು ಕಷ್ಟ.ಕಾಂಗ್ರೆಸ್ ಈ ಅಂತರವನ್ನು ತುಂಬಲು ಸಾಧ್ಯವಾದರೆ, ಸಾಮಾಜಿಕ ಜಾಲತಾಣದ ಸಂವಾದ ಕೇವಲ ಇಮೇಜ್ ನಿರ್ಮಾಣದ ಪ್ರಯತ್ನವಾಗದೆ, ಹೊಸ ರಾಜಕೀಯ ನೆಲೆಯನ್ನು ನಿರ್ಮಿಸುವ ಸಾಧನವಾಗಬಹುದು.
ಇನ್ನು, ರಾಹುಲ್ ಗಾಂಧಿಯವರ ರಾಜಕೀಯ ಪಯಣದ ಒಂದು ಪ್ರಮುಖ ಅಂಶ ಅವರ ಮೇಲಿದ್ದ ‘ಪಪ್ಪು’ ಎಂಬ ವ್ಯಂಗ್ಯಾತ್ಮಕ ರಾಜಕೀಯ ಚಿತ್ರಣ. ಒಂದು ಕಾಲದಲ್ಲಿ ಈ ಚಿತ್ರಣ ಸಾಮಾಜಿಕ ಜಾಲತಾಣದ ರಾಜಕೀಯದಲ್ಲಿ ಅವರ ವಿರುದ್ಧ ಪರಿಣಾಮಕಾರಿಯಾಗಿ ಬಳಸಲ್ಪಟ್ಟಿತ್ತು. ಆದರೆ ಭಾರತ್ ಜೋಡೋ ಯಾತ್ರೆ, ಭಾರತ್ ಜೋಡೋ ನ್ಯಾಯ ಯಾತ್ರೆ ಹಾಗೂ ಸಂಸತ್ತಿನ ಒಳಗೆ ಮತ್ತು ಹೊರಗಿನ ಅವರ ನಿರಂತರ ರಾಜಕೀಯ ಚಟುವಟಿಕೆಗಳು ಆ ಚಿತ್ರಣವನ್ನು ಬದಲಾಯಿಸಲು ಪ್ರಯತ್ನಿಸಿವೆ. ಇಂದು ರಾಹುಲ್ ಗಾಂಧಿಯವರ ರಾಜಕೀಯ ಭಾಷೆಯನ್ನು ಗಮನಿಸಬೇಕಿದೆ.
ಅಸಮಾನತೆ, ಸಾಮಾಜಿಕ ನ್ಯಾಯ, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಅಧಿಕಾರದ ಕೇಂದ್ರೀಕರಣ ಮುಂತಾದ ಪ್ರಶ್ನೆಗಳು ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತಿವೆ. ಇದು ಅವರ ರಾಜಕೀಯ ವ್ಯಕ್ತಿತ್ವದಲ್ಲಿ ಆಗಿರುವ ಬದಲಾವಣೆಯೇ ಅಥವಾ ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ರೂಪಿಸಿಕೊಂಡ ಹೊಸ ತಂತ್ರವೇ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ʻ ಮೋದಿ ನಂತರದ ರಾಜಕೀಯದಲ್ಲಿ ರಾಹುಲ್‌ಗೆ ಅವಕಾಶವಿದೆಯೇ? ಒಂದೆಡೆ ಬಲಿಷ್ಠ ಕೇಂದ್ರ ನಾಯಕತ್ವದ ಮಾದರಿ ಇದ್ದರೆ, ಮತ್ತೊಂದೆಡೆ ಹೆಚ್ಚು ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ಸಂಸ್ಥೆಗಳ ಸ್ವಾಯತ್ತತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಮೇಲೆ ಒತ್ತು ನೀಡುವ ಪರ್ಯಾಯ ರಾಜಕೀಯವನ್ನು ಕಾಂಗ್ರೆಸ್ ಮುಂದಿಡಲು ಪ್ರಯತ್ನಿಸುತ್ತಿದೆ. ಈ ಪರ್ಯಾಯ ರಾಜಕೀಯಕ್ಕೆ ಯುವಜನತೆ ಎಷ್ಟು ಸ್ಪಂದಿಸುತ್ತದೆ ಎಂಬುದೇ ಮುಂದಿನ ಹಂತದ ಪ್ರಮುಖ ಪ್ರಶ್ನೆ.
ಇನ್ನು, ಯುವಕರು ಮತ್ತೆ ರಾಹುಲ್ ಗಾಂಧಿಯವರತ್ತ ತಿರುಗುತ್ತಿದ್ದಾರೆಯೇ? ಇದಕ್ಕೆ ಈಗಲೇ ಖಚಿತ ಉತ್ತರ ನೀಡುವುದು ರಾಜಕೀಯವಾಗಿ ಅತಿರೇಕವಾಗುತ್ತದೆ. ಯುವಜನತೆ ಏಕರೂಪದ ಮತದಾರ ಸಮೂಹವಲ್ಲ. ನಗರ ಯುವಕರು, ಗ್ರಾಮೀಣ ಯುವಕರು, ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಮೊದಲ ಬಾರಿಗೆ ಮತ ಚಲಾಯಿಸುವವರು—ಪ್ರತಿಯೊಬ್ಬರ ರಾಜಕೀಯ ಆದ್ಯತೆ ವಿಭಿನ್ನ. ಆದರೆ ಒಂದು ವಿಷಯ ಮಾತ್ರ ಸ್ಪಷ್ಟ. ಇಂದು ‘ನನ್ನ ಭವಿಷ್ಯ ಏನು?’ ಎಂಬ ಪ್ರಶ್ನೆಯಾಗಿ ಬದಲಾಗುತ್ತಿದ್ದರೆ, ಅದು ಭಾರತೀಯ ರಾಜಕೀಯಕ್ಕೆ ಮಹತ್ವದ ಬದಲಾವಣೆ. ಈ ಬದಲಾವಣೆಯನ್ನು ರಾಹುಲ್ ಗಾಂಧಿ ರಾಜಕೀಯವಾಗಿ ಹಿಡಿದಿಟ್ಟುಕೊಳ್ಳಲು ಸಾಧ್ಯವಾದರೆ, ಅದು ಕಾಂಗ್ರೆಸ್‌ಗೆ ಮಾತ್ರವಲ್ಲ, ಇಡೀ ವಿರೋಧ ಪಕ್ಷದ ರಾಜಕೀಯಕ್ಕೆ ಹೊಸ ಅವಕಾಶವನ್ನು ಸೃಷ್ಟಿಸಬಹುದು.
Ask Me Anything’ಗಿಂತ ದೊಡ್ಡದಾದ ಪ್ರಶ್ನೆ ಏನೆಂದ್ರೇ, ರಾಹುಲ್ ಗಾಂಧಿ ಯುವಕರ ಪ್ರಶ್ನೆಗಳಿಗೆ ಉತ್ತರಿಸುವುದು ಒಂದು ಸಂಗತಿ. ಆದರೆ ಯುವಕರ ಪ್ರಶ್ನೆಗಳನ್ನು ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡುವುದು ಮತ್ತೊಂದು ಸಂಗತಿ. ಅವು ಏನೆಂದ್ರೇ, ನಿರುದ್ಯೋಗದ ಬಗ್ಗೆ ಮಾತನಾಡುವುದಾದರೆ ಉದ್ಯೋಗ ಸೃಷ್ಟಿಗೆ ಸ್ಪಷ್ಟ ಯೋಜನೆ ಏನು? ಶಿಕ್ಷಣದ ಬಗ್ಗೆ ಮಾತನಾಡುವುದಾದರೆ ವಿದ್ಯಾರ್ಥಿಗಳಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಶಿಕ್ಷಣ ಹೇಗೆ? ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದಾದರೆ ಅದನ್ನು ಆಡಳಿತದ ನೀತಿಗಳಲ್ಲಿ ಹೇಗೆ ಜಾರಿಗೆ ತರಲಾಗುತ್ತದೆ? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿದಾಗ ಮಾತ್ರ ಸಾಮಾಜಿಕ ಮಾಧ್ಯಮದ ಸಂವಾದವು ಮತದಾರರ ವಿಶ್ವಾಸವಾಗಿ ಬದಲಾಗಬಹುದು. ಇನ್ನು, ಹೊಸ ರಾಜಕೀಯ ಅಧ್ಯಾಯದ ಮುನ್ಸೂಚನೆಯೇ? ಕಾದು ನೋಡಬೇಕು.
ರಾಹುಲ್ ಗಾಂಧಿಯವರ ರಾಜಕೀಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಒಂದು ಗಮನಾರ್ಹ ಬದಲಾವಣೆ ಕಂಡುಬರುತ್ತಿದೆ. ಅವರು ಕೇವಲ ಚುನಾವಣಾ ರಾಜಕಾರಣಿಯಂತೆ ಕಾಣಿಸಿಕೊಳ್ಳುವುದಕ್ಕಿಂತ, ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ವಿರೋಧ ಪಕ್ಷದ ಧ್ವನಿಯಾಗಿ ತಮ್ಮನ್ನು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈಗ Instagramನ ‘Ask Me Anything’ ಮಾದರಿಯ ನೇರ ಸಂವಾದಗಳು ಆ ರಾಜಕೀಯ ಪ್ರಯೋಗಕ್ಕೆ ಡಿಜಿಟಲ್ ಆಯಾಮವನ್ನು ಸೇರಿಸುತ್ತಿವೆ.
ಯುವಜನತೆ ನಿಜವಾಗಿಯೂ ಈ ಪ್ರಯತ್ನಕ್ಕೆ ಸ್ಪಂದಿಸುತ್ತಿದೆಯೇ? ರಾಹುಲ್ ಗಾಂಧಿಯವರ ಹೊಸ ರಾಜಕೀಯ ಭಾಷೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಯ ಪ್ರಶ್ನೆಗಳನ್ನು ಮತ್ತೆ ರಾಜಕೀಯದ ಕೇಂದ್ರಕ್ಕೆ ತರಬಹುದೇ? ಮತ್ತು ಅತ್ಯಂತ ಮುಖ್ಯವಾಗಿ ಮೋದಿ ಯುಗದಲ್ಲಿ ರಾಜಕೀಯವಾಗಿ ದೂರ ಸರಿದಿದ್ದ ಯುವ ಸಮೂಹದ ಒಂದು ಭಾಗ ಮತ್ತೆ ರಾಹುಲ್ ಗಾಂಧಿಯವರತ್ತ ಮುಖ ಮಾಡುತ್ತಿದ್ದರೆ, ಅದು ಕೇವಲ ಕಾಂಗ್ರೆಸ್‌ನ ಪುನರುತ್ಥಾನವೇ? ಅಥವಾ ಭಾರತೀಯ ರಾಜಕೀಯದ ದಿಕ್ಕಿನಲ್ಲೇ ನಡೆಯುತ್ತಿರುವ ನಿಧಾನವಾದ ಬದಲಾವಣೆಯ ಸೂಚನೆಯೇ? ಈ ಪ್ರಶ್ನೆಗಳಿಗೆ ಉತ್ತರವನ್ನು Instagramನ ‘likes’ ಅಥವಾ ‘views’ ನೀಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಮತಪೆಟ್ಟಿಗೆಯೇ ಅಂತಿಮ ಉತ್ತರ ನೀಡಲಿಕ್ಕಿದೆ. ಕಾದು ನೋಡಣ.
- ಶ್ರೀರಾಜ್ ವಕ್ವಾಡಿ
Monday, August 10, 2026
‘Ask Me Anything’ ರಾಹುಲ್ ಗಾಂಧಿ ಹೊಸ ರಾಜಕೀಯ!
Subscribe to:
Post Comments (Atom)
No comments:
Post a Comment