Thursday, December 28, 2023

ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿಯೂ ಮುದಿ ಮುತ್ಸದ್ದಿಯನ್ನೇ ಮುಂದಿಟ್ಟರೆ ...


(ಸಾಂದರ್ಭಿಕ ಚಿತ್ರ) 

2024ರಲ್ಲೂ ರಾಹುಲ್‌ ಗಾಂಧಿಗೆ ಖರ್ಗೆ ಪರ್ಯಾಯವೇ ? | ಶೂನ್ಯ ತಂತ್ರಗಾರಿಕೆಯ ʼಇಂಡಿಯಾʼ !

ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನ ಹೆಚ್ಚಾಗುತ್ತಿದೆ. ಲೋಕಸಭಾ ಚುನಾವಣೆಯ ಅಂತಿಮ ಹಂತದ ಪೂರ್ವ ಸಿದ್ಧತೆಯು ಅನೇಕ ಕುತೂಹಲಕಾರಿಯಾದ ಘಟನೆಗಳಿಗೆ ಸಾಕ್ಷಿಯಾಗುತ್ತಿವೆ. ಇತ್ತೀಚೆಗೆ ಅಂದರೆ, ಡಿಸೆಂಬರ್ 19ರಂದು ನಡೆದ ʼಇಂಡಿಯಾʼ ಮೈತ್ರಿಕೂಟದ ಚುನಾವಣಾ ಪೂರ್ವ ಸಿದ್ಧತೆಯ ಕುರಿತ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ʼಇಂಡಿಯಾʼ ಮೈತ್ರಿಕೂಟದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಘೋಷಿಸಬೇಕು ಎಂದು ಸಲಹೆ ನೀಡಿರುವುದು ಇಡೀ ರಾಜಕೀಯ ವಲಯವನ್ನೇ ಕಣ್ಣರಳಿಸಿ ನೋಡುವಂತೆ ಮಾಡಿದೆ.

ವರದಿಗಳ ಪ್ರಕಾರ ಮೈತ್ರಿಕೂಟ 26 ಪಕ್ಷಗಳ ಪೈಕಿ 12 ಪಕ್ಷಗಳು ಈ ವಿಚಾರಕ್ಕೆ  ಬೆಂಬಲಿಸಿವೆ.  ಉಳಿದ ಪಕ್ಷಗಳು ಈ ವಿಚಾರಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದವು ಎಂಬ ಮಾಹಿತಿ ಇದೆ. ಅದೇನೇ ಇರಲಿ, ಅಲ್ಲಿಯೂ ʼರಾಜಕೀಯʼ ಇದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿರುವುದು ಸತ್ಯ. ಇನ್ನು, ಖರ್ಗೆ ಅವರೇ ಹೇಳುವಂತೆ ʼಇಂಡಿಯಾʼ ಮೈತ್ರಿಕೂಟ ಮೊದಲು 2024ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವತ್ತ ಗಮನಹರಿಸಬೇಕು, ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎನ್ನುವ ವಿಚಾರದ ನಿರ್ಧಾರವನ್ನು ಕಾಯ್ದಿರಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದರು. ಖರ್ಗೆ ಗಾಂಧಿ ಕುಟುಂಬದ ವಿದೇಯ ನಾಯಕ. ಖರ್ಗೆ ಕಾಂಗ್ರೆಸ್‌ ಅಧ್ಯಕ್ಷರಾದಾಗ ಸೋನಿಯಾ ನೆರಳಿನಂತೆ ಕಾರ್ಯ ನಿರ್ವಹಿಸಲಿದ್ದಾರೆ ಎನ್ನುವ ಮಾತುಗಳು ಸ್ವತಃ ಕಾಂಗ್ರೆಸ್‌ ಪಾಳಯದಿಂದಲೇ  ಕೇಳಿ ಬಂದಿತ್ತು. ಸೋನಿಯಾ ಹಾಗೂ ರಾಹುಲ್‌ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಖರ್ಗೆ, ಈ ವಿಚಾರವನ್ನು ಪಕ್ಷದಲ್ಲೇ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಕೂತಿರುವಾಗ ʼಹ್ಹು ಸರಿ ಆಯ್ತುʼ ಎಂದು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಯೂ ಇಲ್ಲ. ಒಂದೆಡೆ ಗಾಂಧಿ ಕುಟುಂಬಕ್ಕೆ ನೋವಾಗದ ರೀತಿಯಲ್ಲಿಯೂ, ಇನ್ನೊಂದೆಡೆ ಮಿತ್ರ ಪಕ್ಷಗಳನ್ನು ಸಮಾಧಾನಿಸುವಂತೆಯೂ ನೋಡಿಕೊಳ್ಳಬೇಕಿತ್ತು. ಏನೇ ಇರಲಿ, ಒಂದು ವೇಳೆ ಪವಾಡವೆಂಬಂತೆ ʼಇಂಡಿಯಾʼ ಮೈತ್ರಿ ಲೋಕಸಭೆಯಲ್ಲಿ ಗೆದ್ದು, ಪ್ರಧಾನಿ ಆಗುವ ಆಫರ್ ಖರ್ಗೆಯರಿಗೆ ಬಂದರೇ, ಖರ್ಗೆಯವರು ಅದನ್ನು ಬಿಟ್ಟುಕೊಟ್ಟಾರೆಯೇ ? ಎಂಬ ಪ್ರಶ್ನೆಯೂ ನಮ್ಮ ಮುಂದಿದೆ.

ಪ್ರಧಾನಿ ನರೇಂದ್ರ ಮೋದಿ  ʼಇಂಡಿಯಾʼ ಮೈತ್ರಿಗೆ ನೀತಿ, ನಿಯತಿ ಮತ್ತು ನೇತೃತ್ವ (ನೀತಿ, ಉದ್ದೇಶ, ನಾಯಕತ್ವ) ಕೊರತೆಯಿದೆ ಎಂದು ಕಾಮೆಂಟ್ ಮಾಡಿ ಹಲವು ಬಾರಿ ವಾಗ್ದಾಳಿ ನಡೆಸಿದ್ದಾರೆ. ಒಂದು ಹಂತದಲ್ಲಿ ಅದು ಹೌದು ಕೂಡ. ʼಇಂಡಿಯಾʼ ಮೈತ್ರಿಕೂಟದ ನೀತಿ, ಉದ್ದೇಶ ಹಾಗೂ ನಾಯಕತ್ವ ಏನು/ಯಾವುದು/ಯಾರು ? ಎಂಬುವುದರ ಬಗ್ಗೆ ಸ್ವತಃ ಮೈತ್ರಿಕೂಟವೇ ಈವರೆಗೆ ಸ್ಪಷ್ಟಪಡಿಸಿಲ್ಲ. ಇಂತಹ ಸಂದರ್ಭದಲ್ಲಿ ಮೈತ್ರಿಕೂಟದ ಉನ್ನತ ಶ್ರೇಣಿಯ ನಾಯಕರ ಪೈಕಿ ಮಮತಾ ಬ್ಯಾನರ್ಜಿ ಮತ್ತು ಕೇಜ್ರಿವಾಲ್, ಹೆಚ್ಚುತ್ತಿರುವ ಕುತೂಹಲ ಹಾಗೂ ರಾಜಕೀಯ ಒತ್ತಡಗಳ ನಡುವೆ ಲೋಕಸಭಾ ಚುನಾವಣೆಗೆ ʼಇಂಡಿಯಾʼ ಮೈತ್ರಿಕೂಟ ತನ್ನ ನಾಯಕತ್ವದ ವರ್ಚಸ್ಸನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ತಿಳಿದಿದ್ದಾರೆ ಅಂತನ್ನಿಸುತ್ತಿದೆ. ಆದರೂ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಮಲ್ಲಿಕಾರ್ಜುನ್‌ ಖರ್ಗೆ ಎಷ್ಟು ಸಮರ್ಥರು ಹಾಗೂ ಎದುರಾಳಿ ನರೇಂದ್ರ ಮೋದಿಗೆ ಎಷ್ಟರ ಮಟ್ಟಿಗೆ ಸರಿಸಾಠಿಯಾಗಿ ನಿಲ್ಲಬಲ್ಲರು ಎನ್ನುವುದು ಸದ್ಯ ಭಾರತೀಯ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಷಯ.

ಹೌದು, 2019ಲೋಕಸಭಾ ಚುನಾವಣೆಯಲ್ಲಿ ಮತದಾರರು ತಮ್ಮ ಮತ ಚಲಾಯಿಸುವಾಗ ʼಪ್ರಧಾನ ಮಂತ್ರಿʼ ಯಾರು ಎಂಬುವುದನ್ನು ಪ್ರಮುಖವಾಗಿ ಪರಿಗಣಿಸಿದ್ದಾರೆ ಎಂದು ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ ಹೇಳುತ್ತದೆ. ಈ ವಿಚಾರಕ್ಕೆ ಸಂಬಂಧಿಸಿ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ. 37ರಷ್ಟು  ಮಂದಿ ʼನಾವು ಪ್ರಧಾನಿ ಮುಖ ನೋಡಿ ಓಟ್‌ ಹಾಕಿದ್ದೇವೆʼ ಎಂದು ಹೇಳಿಕೊಂಡಿದ್ದಾರೆ.  ಹೌದು, ಶೇ. 37ರಷ್ಟು  ಮಂದಿ ಪ್ರಧಾನಿ ಯಾರು ಎಂದು ನೋಡಿ ತಮ್ಮ ಮತ ಚಲಾಯಿಸಿದ್ದಾರೆ ಎಂದಾದರೇ ಅದು ಸಣ್ಣ ವಿಚಾರವಲ್ಲ ಎನ್ನುವುದನ್ನು ʼಇಂಡಿಯಾʼ ಮೈತ್ರಿಕೂಟ ಅರಿತುಕೊಳ್ಳಬೇಕಿದೆ. ಖರ್ಗೆಯವರು ಹಿರಿಯ ನಾಯಕರಾಗಿರಬಹುದು ಆದರೇ, ಮೋದಿ ವರ್ಸಸ್‌ ಖರ್ಗೆ ಆದರೇ, ʼಇಂಡಿಯಾʼ ಮೈತ್ರಿಕೂಟಕ್ಕೆ ಲಾಭವಾದಿತೇ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ. ಪ್ರಬಲ ಹಾಗೂ ಸಮರ್ಥ ನಾಯಕನೋರ್ವನನ್ನು ತನ್ನ ಪ್ರಧಾನಿ ಅಭ್ಯರ್ಥಿ ಎಂದು ತುರ್ತಾಗಿ ಘೋಷಣೆ ಮಾಡದೇ ಇದ್ದರೇ, ʼಇಂಡಿಯಾʼ ದೊಡ್ಡ ಸಂಖ್ಯೆಯ ಮತದಾರರನ್ನು ನಿರಾಯಾಸವಾಗಿ ಕಳೆದುಕೊಳ್ಳಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.   

ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆಯೇ ಯಾಕೆ ? :

ಖರ್ಗೆಯವರನ್ನು ʼಇಂಡಿಯಾʼ ಮೈತ್ರಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾಗಬೇಕು ಎಂಬ ವಾದ ಅಥವಾ ಚರ್ಚೆಯ ಹಿಂದೆ ಬಹಳ ದೊಡ್ಡ ವಿಷಯವಿದೆ ಎನ್ನುವುದನ್ನು ಮರೆಯುವುದಕ್ಕೆ ಖಂಡಿತ ಸಾಧ್ಯವಿಲ್ಲ. ದೇಶದ ಜನಸಂಖ್ಯೆಯ ಶೇ. 17ರಷ್ಟಿರುವ ದಲಿತ ಸಮುದಾಯಕ್ಕೆ ಸೇರಿರುವ ಖರ್ಗೆ, ದೇಶದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು ಎನ್ನುವುದು ಮಮತಾ ಬ್ಯಾನರ್ಜಿ ಹಾಗೂ ಅರವಿಂದ ಕೇಜ್ರೀವಾಲ್‌ ಅವರ ಸಮರ್ಥನೆ. ಖರ್ಗೆ ಹಿರಿಯ ನಾಯಕರೇನೋ ಹೌದು, ಆದರೇ ಅವರೊಬ್ಬ ಉತ್ತಮ ಸಂಸತ್‌ ಪಟುವಾಗಿಯೂ ಗುರುತಿಸಿಕೊಂಡವರಲ್ಲ, ದೇಶಕ್ಕೆ ದೇಶವೇ ಗುರುತಿಸುವಂತಹ ನಾಯಕನಾಗಿಯೂ ಗುರುತಿಸಿಕೊಂಡವರಲ್ಲ.

ಖರ್ಗೆಯವರನ್ನು ಪ್ರಧಾನಿಯಾಗಿ ಘೋಷಿಸುವುದರಿಂದ ದಲಿತ ಸಮುದಾಯದ ಮತಗಳನ್ನು ಸೆಳೆಯಬಹುದು, ವಿಶೇಷವಾಗಿ 2019ರಲ್ಲಿ ಭಾರತದಾದ್ಯಂತ ಶೇ. 3.7ರಷ್ಟು ಮತಗಳನ್ನು ಗಳಿಸಿದ ಮಾಯಾವತಿಯವರ ಬಿಎಸ್‌ಪಿ ಗೆ ಸೆಡ್ಡು ಹೊಡೆಯಬಹುದು. ಲೋಕಸಭೆಯಲ್ಲಿ ಎಂಭತ್ನಾಲ್ಕು ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಿಡಲಾಗಿದೆ. ಈ ಪೈಕಿ ಕಳೆದ ಬಾರಿ ಬಿಜೆಪಿ  ನೇತೃತ್ವದ ಎನ್‌ಡಿಎ 54 ಕ್ಷೇತ್ರಗಳನ್ನು ಗೆದ್ದಿದೆ, ಕಾಂಗ್ರೆಸ್ ನೇತೃತ್ವದ ಯುಪಿಎ ಕೇವಲ 11 ಮತ್ತು ಪ್ರಾದೇಶಿಕ ಪಕ್ಷಗಳು ಒಟ್ಟು 19 ಕ್ಷೇತ್ರಗಳನ್ನು ಗೆದ್ದಿದ್ದವು.

2019ರಲ್ಲಿ ಎನ್‌ಡಿಎ ಶೇ. 41ರಷ್ಟು ಪರಿಶಿಷ್ಟ ಜಾತಿಗಳ ಬೆಂಬಲವನ್ನು ಪಡೆದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಶೇ. 28ರಷ್ಟು ಮತಗಳನ್ನು ಗಳಿಸಿತ್ತು. ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸುವ ಮಮತಾ ಮತ್ತು ಕೇಜ್ರಿವಾಲ್ ಅವರ ನಿರ್ಧಾರದಲ್ಲಿನ ರಾಜಕೀಯ ಒಳಾರ್ಥಗಳನ್ನು ಗಮನಿಸಬೇಕು. ಒಂದು ಮೆಸೇಜ್‌ ಪಾಸ್‌ ಮಾಡುವುದರ ಮೂಲಕ ಎರಡು ವಿಷಯಗಳನ್ನು ಮೈತ್ರಿಕೂಟದ ಮುಂದಿಡುವ ಪ್ರಯತ್ನವಿದು. ಒಂದನೇಯದು ಕಾಂಗ್ರೆಸ್ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅವರ ಹೆಸರನ್ನು ಮೈತ್ರಿಕೂಟದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಪ್ರಸ್ತಾಪಿಸುವ ಸಾಧ್ಯತೆಗಳನ್ನು ದೂರ ಸರಿಸುವುದು ಮತ್ತು ಎರಡನೆಯದಯ ಮೈತ್ರಿಕೂಟದಲ್ಲಿ ತಮ್ಮ ಪ್ರಭಾವವವನ್ನು ಬಲವಾಗಿ ಬೇರೂರುವುದಾಗಿತ್ತು.

ಆದಾಗ್ಯೂ, ಈ ʼಇಂಡಿಯಾʼ ಮೈತ್ರಿಕೂಟ ರಚನೆಗೂ ಮುನ್ನಾ ಬ್ಯಾನರ್ಜಿ ಹಾಗೂ ಕೇಜ್ರೀವಾಲ್‌ ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ನೇತೃತ್ವವನ್ನು ತೆಗಳಿದವರೇ ಆಗಿದ್ದಾರೆ.  ಭಾರತ್ ಜೋಡೋ ಯಾತ್ರೆಯ ನಂತರ ರಾಹುಲ್ ಜನಪ್ರಿಯತೆ ಹೆಚ್ಚಳವಾಗಿರುವುದರಿಂದ ಕಾಂಗ್ರೆಸ್‌, ಪ್ರಧಾನಿ ಅಭ್ಯರ್ಥಿತನಕ್ಕೆ ರಾಹುಲ್‌ ಅವರನ್ನೇ ಸೂಚಿಸಬಹುದೆಂಬ ಕಾರಣಕ್ಕೆ, ಪ್ರಧಾನಿ ಅಭ್ಯರ್ಥಿಯ ಚರ್ಚೆ ಬರುವುದಕ್ಕೆ ಮುನ್ನವೇ ಮಮತಾ ಹಾಗೂ ಕೇಜ್ರಿವಾಲ್‌ ಇಬ್ಬರೂ ಖರ್ಗೆ ಹೆಸರನ್ನು ಮುಂದಕ್ಕೆ ತಂದು ಒಂದು ಚರ್ಚೆಯನ್ನು ನಿರೀಕ್ಷಿಸಿರಬಹುದು.

ಇನ್ನು, ಮಮತಾ ಬ್ಯಾನರ್ಜಿ ಮತ್ತು ಕೇಜ್ರಿವಾಲ್ ಇಬ್ಬರೂ ಕೂಡ ನಿತೀಶ್ ಕುಮಾರ್ ಅಥವಾ ಅಖಿಲೇಶ್ ಯಾದವ್ ಅವರಂತಹ ಪ್ರಾದೇಶಿಕ ನಾಯಕರಿಗೆ ದೊರಕುವ ಸಾಧ್ಯತೆಗಳಿದ್ದ ಮೈತ್ರಿಕೂಟದ ಸಂಚಾಲಕ ಹುದ್ದೆ ಅಥವಾ ಪ್ರಧಾನ ಮಂತ್ರಿ ಅಭ್ಯರ್ಥಿತನದ ಅವಕಾಶದಿಂದ ಅವರನ್ನು ದೂರತಳ್ಳಿದರು ಎನ್ನುವುದನ್ನು ನಾವಿಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಿದೆ.   

ʼಇಂಡಿಯಾ” ಮೈತ್ರಿಯ ನಿತೀಶ್ ಕುಮಾರ್, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ, ಶರದ್ ಪವಾರ್ ಮತ್ತು ಎಂ.ಕೆ ಸ್ಟಾಲಿನ್ ಒಂದು ಸಮಾನ ಹುದ್ದೆಯ ನಿರೀಕ್ಷೆಯಲ್ಲಿರುವವರೇ ಆಗಿದ್ದಾರೆ. ಅನೇಕರು ಪ್ರಧಾನಿ ಹುದ್ದೆಯ ಆಕಾಂಕ್ಷಿಗಳೆ. ವರೆಲ್ಲರೂ 1996ಲೋಕಸಭಾ ಚುನಾವಣೆಯ ನಂತರ ದೇವೇಗೌಡರಿಗೆ ಸಿಕ್ಕಂತಹ ಅನಿರೀಕ್ಷಿತ ತಿರುವಿನ ನಿರೀಕ್ಷೆಯಲ್ಲಿಯೇ ಇದ್ದಾರೆ.

ಮಲ್ಲಿಕಾರ್ಜುನ ಖರ್ಗೆ : ಪ್ಲಸ್‌, ಮೈನಸ್‌ !   

ʼಇಂಡಿಯಾʼ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿತನಕ್ಕೆ ಈಗ ʼಖರ್ಗೆʼ ಮಿತ್ರಪಕ್ಷಗಳ ಆಯ್ಕೆಯಾಗಿದೆ. ಸುಮಾರು 50 ವರ್ಷಗಳಿಗಿಂತ ಹೆಚ್ಚು ಸುದೀರ್ಘ ರಾಜಕೀಯ ಅನುಭವವುಳ್ಳ ಅವರು, ಮುತ್ಸದ್ಧಿ ರಾಜಕಾರಣಿ. ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಹೀಗಾಗಿ 2024ರ ಲೋಕಸಭಾ ಚುನಾವಣೆಗೆ ಒಬಿಸಿ (ಇತರ ಹಿಂದುಳಿದ ವರ್ಗ) ಮತಗಳನ್ನು ಸೆಳೆಯಬಹುದು ಎಂಬುವುದು “ಇಂಡಿಯಾ” ಮಿತ್ರಪಕ್ಷಗಳ ಪ್ರಾಥಮಿಕ ಹಂತದ ತಂತ್ರಗಾರಿಕೆ ಎನ್ನುವ ಹಾಗೆ ಕಾಣಿಸುತ್ತಿದೆ.

ದಲಿತ ಮುಖ್ಯಮಂತ್ರಿ, ದಲಿತ ಪ್ರಧಾನಿ ವಿಚಾರ ರಾಜಕೀಯದಲ್ಲಿ ಆಗಾಗ ಕೇಳಿಸುವ ವಿಷಯಗಳು. ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ನ ಸೈದ್ಧಾಂತಿಕ ನಿಲುವನ್ನು ಒಪ್ಪುವ ಅಥವಾ ಅದಕ್ಕೆ ಸಮನಾಗಿರುವ ಎಲ್ಲಾ ಪಕ್ಷಗಳು ಹಿಂದುಳಿದ ವರ್ಗಗಳಿಗೆ, ದಲಿತರ ಪರವಾಗಿಯೇ ಸದಾ ನಿಲ್ಲುತ್ತವೆ ಎನ್ನುವುದನ್ನು ತೋರಿಸುವ ಯತ್ನವೂ ಈ ʼಖರ್ಗೆ ಮ್ಯಾಟರ್‌ʼ ನಲ್ಲಿ ಅಡಗಿದೆ ಎನ್ನುವುದು ಅಕ್ಷರಶಃ ಸತ್ಯ.  

ಖರ್ಗೆ ಯಾರಲ್ಲಿಯೂ ನಿಷ್ಠುರ ಮಾಡಿಕೊಂಡವರಲ್ಲ, ಹಿರಿಯ ನಾಯಕ ಹಾಗೂ ಪಕ್ಷನಿಷ್ಠ ನಾಯಕ. ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದ ನಾಯಕ ಎನ್ನುವುದು ದೊಡ್ಡ ಪ್ಲಸ್‌ ಪಾಯಿಂಟ್‌ ಆಗಿ ಕಾಣಿಸಿಕೊಂಡರೇ, ಹೊಸ ಮತದಾರರನ್ನು ತಲುಪುವಲ್ಲಿ ಖರ್ಗೆ ಸೋಲುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಹುಲ್‌ ಪ್ರಧಾನಿ ಅಭ್ಯರ್ಥಿತನವನ್ನು ನಿರ್ಲಕ್ಷ್ಯ ಮಾಡುವವರಿಗೆ ಉತ್ತರವಾಗಿ ಖರ್ಗೆಯವರನ್ನು ಮುಂದಿಡುತ್ತೇವೆ ಎಂದು ಹೇಳಿದರೂ ಕೂಡ, ಖರ್ಗೆ ಅವರಿಗೆ ಮೋದಿಯವರಿಗಿರುವ  ವಾಕ್‌ ಚತುರತೆ ಇಲ್ಲ ಮತ್ತು ಪ್ಯಾನ್-ಇಂಡಿಯಾ ಲೀಡರ್‌ ಕೂಡ ಅಲ್ಲ. ಖರ್ಗೆ ದಕ್ಷಿಣ ಭಾರತಕ್ಕೆ ಸೀಮಿತವಾಗಿದ್ದಾರೆ.  81 ವರ್ಷದ ಖರ್ಗೆ ಯುವಕರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದಿರಬಹುದು ಎನ್ನುವ ಮಾತುಗಳನ್ನು ಅಲ್ಲಗಳೆಯುವಂತಿಲ್ಲ.

ರಾಹುಲ್‌ಗೆ ಪರ್ಯಾಯವಂತೂ ಖರ್ಗೆ ಅಲ್ಲವೇ ಅಲ್ಲ. ರಾಹುಲ್‌ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮಾಡಿದರೇ ಮೈತ್ರಿಕೂಟ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಮೈತ್ರಿ ತಿಳಿದಿದ್ದರೇ, ಅದೇ ಮುಳುವಾಗಬಹುದೇನೋ. ರಾಹುಲ್‌ ಪ್ರಧಾನಿ ಅಭ್ಯರ್ಥಿತನಕ್ಕೆ ಅಸಮರ್ಥರಂತೂ ಅಲ್ಲವೇ ಅಲ್ಲ. ರಾಹುಲ್‌ ನಾಯಕತ್ವ ಒಪ್ಪಿಕೊಳ್ಳದ ಪಕ್ಷಗಳೆಲ್ಲಾ ಮೈತ್ರಿಯಾಗಿರುವುದೇ ಸಮಸ್ಯೆ ಅಷ್ಟೆ. ಇಲ್ಲಿ ಹಿರಿತನ, ವಯಸ್ಸಿನ ಅನುಭವ, ರಾಜಕೀಯ ಅನುಭವ, ಪ್ರತಿಷ್ಠೆ, ನಾಯಕತ್ವ ಎಲ್ಲವೂ ʼರಾಹುಲ್‌ʼ ಆಯ್ಕೆ ಮಾಡುವಲ್ಲಿ ಅಡ್ಡಿಯಾಗುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಮೈತ್ರಿ ಅಂತಿಮ ನಿರ್ಧಾರಕ್ಕೆ ಶೀಘ್ರವಾಗಿ ಬರಲೇ ಬೇಕಿದೆ. ಖರ್ಗೆ, ರಾಹುಲ್‌ ಅಥವಾ ಇನ್ಯಾರು ಎನ್ನುವುದನ್ನು ನಿರ್ಧರಿಸಿ ಅವರ ರಾಜಕೀಯ ವರ್ಚಸ್ಸನ್ನು ವೃದ್ಧಿಸಿದರಷ್ಟೇ ಒಂದಿಷ್ಟು ಬದಲಾವಣೆ ನಿರೀಕ್ಷಿಸಬಹುದು. ʼಇಂಡಿಯಾʼ ಶೂನ್ಯ ತಂತ್ರಗಾರಿಕೆಯಿಂದ ಮೊದಲು ಹೊರಬರಬೇಕಿದೆ. ಇಲ್ಲವಾದರೇ, ದಕ್ಷಿಣ ಉತ್ತರಳ ಚುನಾವಣಾ ವಿಭಜನೆಗಷ್ಟೇ ಈ ಲೋಕಸಭೆ ಚುನಾವಣೆ  ಸೀಮಿತವಾಗಿರಲಿದೆ ಎನ್ನುವುದು ನಿಶ್ಚಿತ. 

-ಶ್ರೀರಾಜ್‌ ವಕ್ವಾಡಿ


Thursday, December 21, 2023

ಮೂರು ರಾಜ್ಯಗಳ ಸಿಎಂ ಆಯ್ಕೆಯ ಹಿಂದೆ ಬಿಜೆಪಿಯ ಹಲವು ಸಂದೇಶಗಳು

 


ಯಾದವ, ಬ್ರಾಹ್ಮಣ, ಬುಡಕಟ್ಟು : ಲೋಕಸಭೆಗೆ ಬಿಜೆಪಿ ತಂತ್ರಗಾರಿಕೆ | ಮೇಲ್ಜಾತಿಗಳ ಬಿಜೆಪಿ ಒಲವು ! 

ಬ್ರಾಹ್ಮಣರ ಅಥವಾ ಮೇಲ್ವರ್ಗದ ಪಕ್ಷ ಎಂಬ ಪ್ರತಿಪಕ್ಷಗಳ ಆರೋಪದ ನಡುವೆ ಬಿಜೆಪಿ, ʼತಾನು ಹಾಗಲ್ಲʼ ಎಂಬುವುದನ್ನು ತೋರಿಸುವ ಪ್ರಯತ್ನವನ್ನು ಇತ್ತೀಚೆಗೆ ನಡೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ತೋರಿಸಿದೆ ಎಂದನ್ನಿಸುತ್ತಿದೆ. ಬಿಜೆಪಿ  ಒಂದು ಕಾಲ ಘಟ್ಟದಲ್ಲಿ ಬ್ರಾಹ್ಮಣರ ಪಕ್ಷವಾಗಿತ್ತು, ಆದರೇ, ಇಂದು ಇದು ಬ್ರಾಹ್ಮಣರ  ಪಾರ್ಟಿಯಾಗಿ ಉಳಿದಿಲ್ಲ, ದೇಶದ ಮೂಲೆ ಮೂಲೆಗಳಲ್ಲಿರುವ   ಹಳ್ಳಿ ಹಳ್ಳಿಗಳಲ್ಲೂ ವ್ಯಾಪಿಸಿ ಸರ್ವಸ್ಪರ್ಶಿ ಸರ್ವಗ್ರಾಹಿ ಪಕ್ಷವಾಗಿದೆ ಎಂಬುವುದನ್ನು ತೋರಿಸುವ ಪ್ರಯತ್ನವೂ ಇದು ಎನ್ನುವುದರಲ್ಲಿ ಅನುಮಾನವಿಲ್ಲ.

ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರ ಹಿಡಿದ ಹಿಂದಿ ಭಾಷಿಕರ ಮೂರು ರಾಜ್ಯಗಳಲ್ಲಿನ ಒಗಟು ಈ ಮೂಲಕ ಬಗೆಹರಿದಿದೆ. ಬಿಜೆಪಿ ಮೂರು ರಾಜ್ಯಗಳಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಹುದ್ದೆಗಳಿಗೆ ಅಚ್ಚರಿಯ ಆಯ್ಕೆಗಳನ್ನು ಹೆಸರಿಸಿದೆ ಮತ್ತು ʼಇಬ್ಬರು ಉಪ ಮುಖ್ಯಮಂತ್ರಿʼ ಸೂತ್ರವನ್ನು ಜಾತಿ ಲೆಕ್ಕಾಚಾರ ಮಾಡಿ ತಂತ್ರಗಾರಿಕೆಯನ್ನು ಹೆಣೆದಿದೆ.

2024ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಅಜೇಯ ಸಾಮಾಜಿಕ ಒಕ್ಕೂಟವನ್ನು ರಚಿಸುವ ಪ್ರಯತ್ನದಲ್ಲಿ ಸಮಾಜದ ಎಲ್ಲಾ ವರ್ಗಗಳ ನಿರೀಕ್ಷೆಗಳನ್ನು ಪೂರೈಸಲು ಬಿಜೆಪಿ ಪ್ರಯತ್ನಿಸಿದೆ. ಪ್ರತಿಪಕ್ಷಗಳ ಜಾತಿ ಗಣತಿಯ ಒತ್ತಾಯದ ವಿವಾದಕ್ಕೆ ಸೆಡ್ಡು ಹೊಡೆದಂತಿದೆ. ಬಿಜೆಪಿ ಪಕ್ಷ ಹುಟ್ಟಿಕೊಂಡಾಗಿನಿಂದ ಮೇಲ್ವರ್ಗದ ಬಗ್ಗೆ ತುಸು ಹೆಚ್ಚೇ ಒಲವು ತೋರಿಸಿಕೊಂಡು ಬಂದದ್ದು ಹೌದಾದರೂ, ಇತ್ತೀಚೆಗಿನ ವರ್ಷಗಳಲ್ಲಿ ಜಾತಿ ಗಣತಿ ನಡೆಸಬೇಕು ಎಂಬೆಲ್ಲಾ ಒತ್ತಾಯಗಳು ಪ್ರತಿಪಕ್ಷಗಳಿಂದ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಮತ್ತು ಜಾತಿ ಗಣತಿಯನ್ನು ಪ್ರತಿಪಕ್ಷಗಳು ತಮ್ಮ  ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ ಮುಂದಾಗಿರುವ ಪ್ರಯತ್ನದ ವಿರುದ್ಧ ಬಿಜೆಪಿ ಹೂಡಿದ ಪ್ರತಿತಂತ್ರ ನಿಜಕ್ಕೂ ಹುಬ್ಬೇರಿಸುವಂತೆ ಮಾಡಿದೆ.

ಹೌದು, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ಚುನಾವಣೆಯನ್ನು ನಾವು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ರಾಜಸ್ಥಾನ: ಬ್ರಾಹ್ಮಣ ಮುಖ್ಯಮಂತ್ರಿ + ಠಾಕೂರ್ ಸಮುದಾಯದ ಉಪ ಮುಖ್ಯಮಂತ್ರಿ + ಪರಿಶಿಷ್ಟ ಜಾತಿ ಉಪ ಮುಖ್ಯಮಂತ್ರಿ + ಸಿಂಧಿ ಸ್ಪೀಕರ್, ಛತ್ತೀಸ್‌ಗಢ: ಪರಿಶಿಷ್ಟ ಪಂಗಡದ ಮುಖ್ಯಮಂತ್ರಿ + ಯಾದವೇತರ (ಒಬಿಸಿ) ಉಪ ಮುಖ್ಯಮಂತ್ರಿ + ಬ್ರಾಹ್ಮಣ ಸಮುದಾಯದ ಉಪ ಮುಖ್ಯಮಂತ್ರಿ + ಠಾಕೂರ್ ಸಮುದಾಯದ ಸ್ಪೀಕರ್ ಇನು, ಮಧ್ಯಪ್ರದೇಶ: ಯಾದವ ಸಮುದಾಯ (ಒಬಿಸಿ) ಮುಖ್ಯಮಂತ್ರಿ + ಪರಿಶಿಷ್ಟ ಜಾತಿ ಉಪ ಮುಖ್ಯಮಂತ್ರಿ + ಬ್ರಾಹ್ಮಣ ಉಪ ಮುಖ್ಯಮಂತ್ರಿ + ಠಾಕೂರ್ ಸಮುದಾಯದ ಸ್ಪೀಕರ್

1980ರಲ್ಲಿ ಬಿಜೆಪಿ ಸ್ಥಾಪನೆಯಾದಾಗಿನಿಂದ ಅಥವಾ ರಚನೆಯಾದಾಗಿನಿಂದ ಮೇಲ್ವರ್ಗದ ಜಾತಿಗಳು ಸಾಂಪ್ರದಾಯಿಕವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿವೆ. ವಾಸ್ತವವಾಗಿ, ಬಿಜೆಪಿಯನ್ನು "ಬ್ರಾಹ್ಮಣ ಪರ"ವಾದ ಪಕ್ಷವೆಂದು ಹೇಳಲಾಗುತ್ತದೆ, ಮಾತ್ರವಲ್ಲದೇ, ಬಿಜೆಪಿಗೆ ಮೇಲ್ವರ್ಗದವರನ್ನು ಬಿಟ್ಟರೇ, ಬೇರೆ ಯಾರೂ ಕಾಣಿಸುವುದಿಲ್ಲ ಎಂಬ ಆರೋಪಗಳನ್ನೆಲ್ಲಾ ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳು ಹೊರಿಸುತ್ತವೆ. ಇತ್ತೀಚೆಗಿನ ಮೂರು ಹಿಂದಿ ಭಾಷಿಕ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಬ್ರಾಹ್ಮಣರು ಮತ್ತು ಠಾಕೂರರು ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದರು. ಆದರೂ, ಇಲ್ಲಿ ಬಿಜೆಪಿ ಮಾಡಿದ ಕಾರ್ಯತಂತ್ರ ನಿಜಕ್ಕೂ ಆಶ್ಚರ್ಯ ಅಂತನ್ನಿಸುತ್ತದೆ.

ಮಧ್ಯಪ್ರದೇಶದಲ್ಲಿ ಶೇ. 58ರಷ್ಟು ಬ್ರಾಹ್ಮಣರು ಬಿಜೆಪಿಗೆ ಮತ ಹಾಕಿದರೆ,ಶೇ. 32ರಷ್ಟು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಛತ್ತೀಸ್‌ಗಢದಲ್ಲಿ ಶೇ. 58 ರಷ್ಟು ಬ್ರಾಹ್ಮಣರು ಬಿಜೆಪಿಗೆ ಮತ್ತು ಶೇ. 30 ರಷ್ಟು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ರಾಜಸ್ಥಾನದಲ್ಲಿ ಶೇ. 63 ರಷ್ಟು ಬ್ರಾಹ್ಮಣರು ಬಿಜೆಪಿಗೆ ಮತ ಹಾಕಿದರೆ, ಶೇ. 21 ರಷ್ಟು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ತಿಳಿಯಬಹುದಾಗಿದೆ.

ಇನ್ನು, ಮಧ್ಯಪ್ರದೇಶದಲ್ಲಿ ಶೇ. 56 ರಷ್ಟು ಠಾಕೂರ್/ರಜಪೂತರು ಬಿಜೆಪಿಗೆ ಮತ್ತು ಶೇ. 33 ರಷ್ಟು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಛತ್ತೀಸ್‌ಗಢದಲ್ಲಿ, ಠಾಕೂರರು ಮತ್ತು ಬ್ರಾಹ್ಮಣರನ್ನು ಹೊರತುಪಡಿಸಿ ಶೇ. 64 ರಷ್ಟು ಇತರ ಮೇಲ್ಜಾತಿಗೆ ಸೇರಿದವರು ಬಿಜೆಪಿಗೆ ಮತ ಹಾಕಿದ್ದಾರೆ ಮತ್ತು ಶೇ. 26 ರಷ್ಟು ಕಾಂಗ್ರೆಸ್‌ಗೆ ಬೆಂಬಲ ನೀಡಿದರು. ರಾಜಸ್ಥಾನದಲ್ಲಿ, ಶೇ. 64 ರಷ್ಟು ಠಾಕೂರ್‌ ಸಮುದಾಯಕ್ಕೆ ಸೇರಿದವರು ಬಿಜೆಪಿಗೆ ಮತ ಹಾಕಿದರೆ, ಶೇ. 20 ರಷ್ಟು ಮಾತ್ರ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ.

ಬಿಜೆಪಿಯು ಮೇಲ್ವರ್ಗದ ದೀರ್ಘಾವಧಿಯ ಬೆಂಬಲಕ್ಕೆ ಈ ಮೂರು ಹಿಂದಿ ಭಾಷಿಕ ರಾಜ್ಯಗಳಲ್ಲಿ ತನ್ನ ಕೃತಜ್ಞತೆಯನ್ನು ಸಲ್ಲಿಸುವಂತಹ ಪ್ರಯತ್ನ ಮಾಡಿದೆ. ಮತ್ತು ಈ ಎರಡೂ ಸಮುದಾಯಗಳಿಗೆ ಮುಖ್ಯಮಂತ್ರಿ, ಮೂರು ಉಪಮುಖ್ಯಮಂತ್ರಿಗಳು ಹುದ್ದೆಗಳು ಮತ್ತು ಎರಡು ಸ್ಪೀಕರ್ ಸ್ಥಾನಗಳನ್ನು ನೀಡಿದೆ. ಇದರ ಹಿಂದೆಯೂ ರಾಜಕೀಯ ಲೆಕ್ಕಚಾರವಿದೆ.

1996ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೇವಲ ಶೇ. 35 ಷ್ಟು ಮೇಲ್ಜಾತಿಯವರು ಬಿಜೆಪಿಗೆ ಮತ ಹಾಕಿದ್ದರು, ಇದು 1999 ರಲ್ಲಿ ಶೇ. 40 ಕ್ಕೆ ಏರಿತು ಆದರೆ 2009 ರಲ್ಲಿ ಶೇ. 29ಕ್ಕೆ  ಕುಸಿಯಿತು (ಸಿಎಸ್‌ಡಿಎಸ್ ಪೋಸ್ಟ್ ಪೋಲ್ ಡೇಟಾ ಮಾಹಿತಿಯ ಪ್ರಕಾರ). ಮತ್ತೆ 2014ರಲ್ಲಿ ಶೇ. 47ಕ್ಕೆ ಏರಿತು ಮತ್ತು ಕಾಂಗ್ರೆಸ್‌ ಮೇಲಿನ ಮತದಾರರ ಅಸಮಾಧಾನದ ಹಿನ್ನೆಲೆಯಲ್ಲಿ 2019ರಲ್ಲಿ ಶೇ. 61 ಕ್ಕೆ ಏರಿತು.

1984 ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ 404 ಕ್ಷೇತ್ರಗಳನ್ನು ಗೆಲ್ಲುವುದರ ಮೂಲಕ ಇಡೀ ದೇಶದ ರಾಜಕೀಯ ವಲಯವನ್ನೇ ಬೆರಗಾಗಿಸಿದ್ದರು. ಆ ದಾಖಲೆಯನ್ನು ಮುರಿಯಲು ಬಿಜೆಪಿ ಪ್ರಯತ್ನಿಸಬಹುದಾದ 2024ಲೋಕಸಭಾ ಚುನಾವಣೆಗಾಗಿ ಈ ಲೆಕ್ಕಚಾರ ಮಾಡಿದ್ದಾರೆ ಎಂಬ ರಾಜಕೀಯ ವಲಯದಲ್ಲಿದೆ.

ಮಧ್ಯಪ್ರದೇಶದಲ್ಲಿ ಯಾದವ ಸಮುದಾಯಕ್ಕೆ ಸಿಎಂ ಪಟ್ಟ !

ಮೋಹನ್ ಯಾದವ್ ಅವರು ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಉಜ್ಜಯಿನಿ ದಕ್ಷಿಣ ಕ್ಷೇತ್ರದ ಶಾಸಕ. ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಶಿವರಾಜ್‌ ಚೌಹಾಣ್, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪ್ರಹ್ಲಾದ್ ಪಟೇಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅಂತಹ ಇನ್ನೂ ಕೆಲವು ಪ್ರಭಾವಿ ನಾಯಕರ ಹೆಸರುಗಳು ಸಿಎಂ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಲ್ಲಿರುವಾಗ ಬಿಜೆಪಿ ಹೈಕಮಾಂಡ್ ನ ಈ ಆಯ್ಕೆ ಮಧ್ಯಪ್ರದೇಶದ ರಾಜಕೀಯ ವಲಯವನ್ನೇ ಬೆರಗುಗೊಳಿಸಿತ್ತು.ಯಾದವ ಸಮುದಾಯಕ್ಕೆ ಇಲ್ಲಿ ಮಣೆ ಹಾಕಲಾಯ್ತು. ಇದಲ್ಲದೆ, ಪರಿಶಿಷ್ಟ ಜಾತಿ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಉಪ ಮುಖ್ಯಮಂತ್ರಿ  ಹುದ್ದೆ ನೀಡಿತ್ತು ಜಗದೀಶ್ ದಿಯೋರಾ ಮತ್ತು ರಾಜೇಶ್ ಶುಕ್ಲಾ ಅವರು ಉಪ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು.

ಮೋಹನ್ ಯಾದವ್ ಅವರು ಉಜ್ಜಯಿನಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೇತನ್ ಪ್ರೇಮನಾರಾಯಣ್ ಯಾದವ್ ವಿರುದ್ಧ 12,941 ಮತಗಳ ಅಂತರದಿಂದ ಗೆದ್ದಿದ್ದಾರೆ. 95,699 ಮತಗಳನ್ನು ಪಡೆಯುವ ಮೂಲಕ ಸತತ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉಜ್ಜಯಿನಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಉಜ್ಜಯಿನಿ ದಕ್ಷಿಣ ಕ್ಷೇತ್ರವು 2003ರಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಇದು ಬಿಜೆಪಿಯ ಜಾತಿ ಲೆಕ್ಕಚಾರ.

ಬಹಳ ಪ್ರಮುಖವಾಗಿ ಯುಪಿಯಲ್ಲಿ ಯಾದವ ಸಮುದಾಯವು ಅಖಿಲೇಶ್ ಯಾದವ್‌ಗೆ ಬಲವಾಗಿ ಒಲವು ಹೊಂದಿದೆ. ಸಮಾಜವಾದಿ ಪಕ್ಷದ ರಾಜಕೀಯವು ಪ್ರಾಥಮಿಕವಾಗಿ ಅದರ ಮುಸ್ಲಿಂ-ಯಾದವ್ ಸಮುದಾಯದ ಬೆಂಬಲವನ್ನು ಆಧರಿಸಿದೆ. ಬಿಹಾರದಲ್ಲಿ ಲಾಲು ಯಾದವ್ ಅವರ ಆರ್‌ಜೆಡಿಗೂ ಕೂಡ ಯಾದವ್‌ ಸಮುದಾಯವೇ ಮಹತ್ವದ ಪಾತ್ರ. ಲೋಕಸಭಾ ಚುನಾವಣೆಗಳಲ್ಲಿ ಯಾದವರ ವರ್ಗಗಳು ಮೋದಿಗೆ ಮತ ಹಾಕುತ್ತಾರೆ ಎಂಬುದಂತೂ ನಿಜ, ಆದರೆ ಯುಪಿ ಮತ್ತು ಬಿಹಾರದಲ್ಲಿ ಬಿಜೆಪಿಯಿಂದ ದೂರ ಉಳಿದಿರುವ ಹಿಂದೂಗಳಲ್ಲಿ ಯಾದವ ಸಮುದಾಯದವರು ಪ್ರಮುಖರು. ಯಾದವ ಸಮುದಾಯದವರನ್ನು ಇಲ್ಲಿ ಮುಖ್ಯಮಂತ್ರಿ ಮಾಡಿದರೇ, ಯುಪಿ ಹಾಗೂ ಬಿಹಾರದಲ್ಲಿ ವರ್ಕೌಟ್‌ ಆಗಬಹುದೇ ಎಂಬುವುದು ಮೋದಿ ಲೆಕ್ಕಚಾರ ಅಂತನ್ನಿಸುತ್ತಿದೆ.

ಛತ್ತೀಸ್‌ಗಢದಲ್ಲಿ ಬುಡಕಟ್ಟು ನಾಯಕನಿಗೆ ಸಿಎಂ ಸ್ಥಾನ !
ಬುಡಕಟ್ಟು ನಾಯಕ ವಿಷ್ಣು ದೇವ್ ಸಾಯಿ ಅವರನ್ನು ಛತ್ತೀಸ್‌ಗಢದ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಮೋದಿ ಈ ಚುನಾವಣೆಯಲ್ಲಿ ಬುಡಕಟ್ಟು ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಂತಿದೆ. ಛತ್ತೀಸ್‌ಗಢದಲ್ಲಿ 29 ಪರಿಶಿಷ್ಟ ಪಂಗಡದ ಕ್ಷೇತ್ರಗಳಲ್ಲಿ 17 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದ್ದರೆ, ಮಧ್ಯಪ್ರದೇಶದಲ್ಲಿ 47 ಪರಿಶಿಷ್ಟ ಪಂಗಡದ ಕ್ಷೇತ್ರಗಳಲ್ಲಿ 27 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ರಾಜಸ್ಥಾನದಲ್ಲೂ ಬುಡಕಟ್ಟು ಸಮುದಾಯ ಬಿಜೆಪಿಯತ್ತ ಹೆಚ್ಚು ಒಲವು ತೋರಿದೆ.

ಪಿಎಂ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಬುಡಕಟ್ಟು ಜನಾಂಗಕ್ಕೂ ಮಹತ್ವ ನೀಡುತ್ತಿದ್ದಾರೆ ಎಂಬ ನಂಬಿಕೆಯನ್ನು ಮೂಡಿಸಿದ್ದಾರೆ. ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅವರನ್ನು ಎನ್‌ಡಿಎ ಸರ್ಕಾರದ ರಾಷ್ಟ್ರಪತಿಯನ್ನಾಗಿ ಮಾಡಿದ್ದೆಲ್ಲವೂ ರಾಜಕೀಯದ್ದೇ ಉದ್ದೇಶ.

2011 ರ ಜನಗಣತಿಯ ಪ್ರಕಾರ, ಬುಡಕಟ್ಟು ಸಮುದಾಯಗಳು ದೇಶದ ಜನಸಂಖ್ಯೆಯ ಶೇ. 8.6 ರಷ್ಟಿವೆ ಮತ್ತು 543 ಲೋಕಸಭಾ ಕ್ಷೇತ್ರಗಳಲ್ಲಿ 47 ಕ್ಷೇತ್ರಗಳನ್ನು ಅವರಿಗೆ ಮೀಸಲಿಡಲಾಗಿದೆ. ಬುಡಕಟ್ಟು ಪ್ರಾಬಲ್ಯವನ್ನು ಹೊಂದಿರುವ ಜಾರ್ಖಂಡ್ ನಲ್ಲಿ ಲೋಕಸಭಾ ಚುನಾವಣೆಯ ಮುಗಿದ ತಕ್ಷಣವೇ ವಿಧಾನಸಭಾ ಚುನಾವಣೆ ಇದೆ. ಇದು ಕೂಡ ಒಂದು ಚುನಾವಣಾ ಲೆಕ್ಕಚಾರ.  

ಸಾಮಾಜಿಕ ಸಮತೋಲನಕ್ಕಾಗಿ, ಒಬಿಸಿ (ಇತರ ಹಿಂದುಳಿದ ವರ್ಗಗಳು) ಸಮುದಾಯದಿಂದ ಅರುಣ್ ಸಾವೊ ಮತ್ತು ಮೇಲ್ವರ್ಗದ ವಿಜಯ್ ಶರ್ಮಾ ಅವರನ್ನು ಉಪಮುಖ್ಯಮಂತ್ರಿಗಳಾನ್ನಾಗಿ ಮಾಡಲಾಗಿದೆ.

ರಾಜಸ್ಥಾನದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ !

ಪ್ರಬಲ ಸಂಘಟನಾ ಸಂಪರ್ಕ ಹೊಂದಿರುವ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಗೊಂಡ ಭಜನ್ ಲಾಲ್ ಶರ್ಮಾ ಅವರನ್ನು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ, ಪಿಎಂ ಮೋದಿ ಇಲ್ಲಿಯೂ ರಾಜಕೀಯ ಲೆಕ್ಕಚಾರ ಹೂಡಿದ್ದಾರೆ. ಶರ್ಮ ಒಬ್ಬ ಬ್ರಾಹ್ಮಣ. ವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿರುವುದರಿಂದ  ರಾಜಸ್ಥಾನದಲ್ಲಿ ಮಾತ್ರವಲ್ಲದೆ ದೇಶದ ಇತರ ಭಾಗಗಳಲ್ಲಿನ ಮೇಲ್ಜಾತಿಗಳಿಗೆ ಬಲವಾದ ಸಂದೇಶವನ್ನು ನೀಡುವುದು ಮೋದಿ ಉದ್ದೇಶವಾಗಿತ್ತು. ನೆನಪಿಡಿ, ಮೋದಿ ಸರ್ಕಾರವು ಈ ಹಿಂದೆ ಮೇಲ್ಜಾತಿಗಳಲ್ಲಿನ ಆರ್ಥಿಕ ಹಿಂದುಳಿದ ವರ್ಗಗಳಿಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ನೀಡಿತ್ತು. ಮತ್ತೆ, ಸಾಮಾಜಿಕ ಸಮತೋಲನಕ್ಕಾಗಿ, ಠಾಕೂರ್/ರಜಪೂತರಾದ ದಿಯಾ ಕುಮಾರಿ ಮತ್ತು ದಲಿತರಾದ ಪ್ರೇಮ್ ಚಂದ್ ಬೈರ್ವಾ ಅವರನ್ನು ಹೈಕಮಾಂಡ್ ಉಪ ಮುಖ್ಯಮಂತ್ರಿಗಳಾಗಿ ಮಾಡಿದೆ.

-ಶ್ರೀರಾಜ್‌ ವಕ್ವಾಡಿ

Thursday, December 14, 2023

2024ರ ಉತ್ತರ, ದಕ್ಷಿಣದ ಸಮರ 1977ರ ಚುನಾವಣೆಯನ್ನು ನೆನಪಿಸಲಿದೆಯೇ !?

ಕಾಂಗ್ರೆಸ್‌ನ ಕೆಟ್ಟ ಪರಿಸ್ಥಿತಿ ಹಾಗೂ ಗೆಲ್ಲುವ ಹೆಣಗಾಟ | ಬಿಜೆಪಿ ಮುಕ್ತ ದಕ್ಷಿಣ !

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಯ 3-1 ಸ್ಕೋರ್‌ಲೈನ್ ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳ ಕಣ್ಣು ತೆರೆಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ. "ದಕ್ಷಿಣ ಭಾರತವು ಬಿಜೆಪಿ ಮುಕ್ತವಾಗಿದೆ" ಎಂಬ ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳ ಅಭಿಪ್ರಾಯ ದೊಡ್ಡ ಸವಾಲನ್ನೇ ʼಇಂಡಿಯಾʼ ಮೈತ್ರಿಯ ಎದುರು ಇರಿಸಿದೆ ಎಂಬಂತೆ ಕಾಣಿಸುತ್ತಿದೆ. 2024ರಲ್ಲಿ "ಉತ್ತರ ಭಾರತ ಮತ್ತು ದಕ್ಷಿಣ ಭಾರತ" ಚುನಾವಣಾ ಕದನದ ಈ ಸೈದ್ಧಾಂತಿಕ ನಿಲುವನ್ನು ಪ್ರತಿಪಾದಿಸುವವರು 1977ರ ಸಾರ್ವತ್ರಿಕ ಚುನಾವಣೆಯ ಉದಾಹರಣೆಯನ್ನು ನೀಡುತ್ತಾರೆ, ಆದರೇ, ಅಂದು ಕಾಂಗ್ರೆಸ್ ಉತ್ತರದಲ್ಲಿ ಜನತಾ ಪಕ್ಷದಿಂದ ಸೋಲನುಭವಿಸಬೇಕಾಯಿತು, ದಕ್ಷಿಣ ಭಾರತದಲ್ಲಿ ತನ್ನ ಬಲವನ್ನು ಉಳಿಸಿಕೊಂಡಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. 

ಅಂದು ಚುನಾಯಿತರಾದ 154 ಕಾಂಗ್ರೆಸ್ ಸಂಸದರ ಪೈಕಿ 94 ಮಂದಿ ದಕ್ಷಿಣದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ಲಕ್ಷದ್ವೀಪದ ಅಭ್ಯರ್ಥಿಗಳಾಗಿದ್ದರು. ದಕ್ಷಿಣದಲ್ಲಿ 1977ರಲ್ಲಿ ಕೇವಲ ಮೂರು ಸ್ಥಾನಗಳನ್ನು ಮಾತ್ರ ಜನತಾ ಪಕ್ಷ ಗೆಲ್ಲಲು ಸಾಧ್ಯವಾಯಿತು.

1977ವರೆಗೆ ಪ್ರಬಲವಾದ ಅವಿರೋಧವಿಲ್ಲದೇ ಕಾಂಗ್ರೆಸ್‌ ದೇಶವನ್ನು ಆಳಿತ್ತು. 1977ರ ಲೋಕಸಭೆ ಚುನಾವಣೆಯ ಕಥೆಯೇ ಬೇರೆ. 1971ರಲ್ಲಿ, ಇಂದಿರಾ ಗಾಂಧಿಯವರು ತಮ್ಮ ಗೆಲುವಿನ ಬಗ್ಗೆ ವಿಶ್ವಾಸ ಹೊಂದಿದ್ದರು ಮತ್ತು ಮಧ್ಯಂತರ ಚುನಾವಣೆಯನ್ನು ಘೋಷಿಸಿದ್ದರು. ಕಾಂಗ್ರೆಸ್‌ ಅಧಿಕಾರ ಹಿಡಿಯಿತು. ಪ್ರಧಾನ ಮಂತ್ರಿಯಾಗಿ ಇಂದಿರಾಗಾಂಧಿ ಅಧಿಕಾರ ವಹಿಸಿದರು. 1977 ರಲ್ಲಿ ಮಧ್ಯಂತರ ಚುನಾವಣೆ ಘೋಷಣೆಯಾದಾಗ ಅದೇ ಹಿಂದಿನ ಗೆಲುವಿನ ಭವಿಷ್ಯವಿದೆ ಎಂದು ಅವರು ಭಾವಿಸಿದ್ದರು. ಆದರೆ ಚುನಾವಣಾ ಫಲಿತಾಂಶ ಇಂದಿರಾ ಗಾಂಧಿ ಅವರ ನಿರೀಕ್ಷೆಗೆ ಹಾಗೂ ಕಾಂಗ್ರೆಸ್ ಗೆ ದೊಡ್ಡ ಆಘಾತವನ್ನೇ ನೀಡಿತ್ತು. ಕಾಂಗ್ರೆಸ್‌ ಜನತಾ ಒಕ್ಕೂಟದ ಎದುರು ಹೀನಾಯ ಸೋಲನ್ನು ಅನುಭವಿಸಿತು. ಎಲ್ಲಾ ವಿರೋಧ ಪಕ್ಷಗಳು ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸುವ ಏಕೈಕ ಉದ್ದೇಶದಿಂದ ಒಗ್ಗೂಡಿದ್ದೇ ಈ ಫಲಿತಾಂಶದ ಹಿಂದಿನ ಶಕ್ತಿಯಾಗಿತ್ತು. ಸ್ವಾತಂತ್ರ್ಯದ ನಂತರ ಭಾರತದ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ತನ್ನ ಬಹುಮತವನ್ನು ಕಳೆದುಕೊಂಡಿತು.

ಕಾಂಗ್ರೆಸ್ 30 ವರ್ಷಗಳಲ್ಲಿ ತನ್ನ ಅತ್ಯಂತ ಹೀನಾಯ ಸೋಲನ್ನು ಎದುರಿಸಿತು, ಸ್ಪರ್ಧಿಸಿದ 492 ಕ್ಷೇತ್ರಗಳಲ್ಲಿ 154 ಕ್ಷೇತ್ರಗಳಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ಉತ್ತರ ಭಾರತದ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಪಕ್ಷವು ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಲೋಕಸಭೆ ಕ್ಷೇತ್ರಗಳ ವಿಷಯದಲ್ಲಿ ದೊಡ್ಡ ರಾಜ್ಯವಾಗಿದ್ದ ಉತ್ತರ ಪ್ರದೇಶ ಮೊದಲ ಚುನಾವಣೆಯಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೇ,  1977 ರ ಚುನಾವಣೆಯಲ್ಲಿ ಇಂದಿರಾ ಅವರ ಲೆಕ್ಕಾಚಾರ ಉಲ್ಟಾ ಹೊಡೆಯಿತು.

ಅಂತಹುದ್ದೇ ಒಂದು ಪರಿಸ್ಥಿತಿ 2024ಲೋಕಸಭಾ ಚುನಾವಣೆಯ ಹೊತ್ತಿಗೆ ಎದುರಾಗಿದೆ. ಅಂದು ಕೇಂದ್ರದಲ್ಲಿದ್ದದ್ದು ಕಾಂಗ್ರೆಸ್‌ ಸರ್ಕಾರ, ಇಂದು ಬಿಜೆಪಿ. ಅಂದು ಕಾಂಗ್ರೆಸ್‌ ತುರ್ತು ಪರಿಸ್ಥಿತಿಯಂತಹ ಕಾರಣಕ್ಕೆ ವಿರೋಧ ಪಕ್ಷಗಳಿಂದ ಬಲವಾದ ವಿರೋಧ ಎದುರಿಸಿತ್ತು. ಇಂದು ಬಿಜೆಪಿ ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗ, ಕೋಮು ವೈಷಮ್ಯದಂತಹ ಸಮಸ್ಯೆಗಳಿಂದ ವಿರೋಧವನ್ನು ಎದುರಿಸುತ್ತಿದೆ. ಆದರೇ, ಅಂದಿನ ವಿರೋಧ ಪಕ್ಷಗಳು ತೋರಿಸಿದ್ದ ಒಗ್ಗಟ್ಟು ಹಾಗೂ ಬಲ, ಇಂದಿನ ವಿರೋಧ ಪಕ್ಷಗಳ ಮೀತ್ರ ಪಕ್ಷಗಳು ತೋರಿಸಿದಂತೆ ಕಾಣಿಸುತ್ತಿಲ್ಲ. ಅಂದು ವಿರೋಧ ಪಕ್ಷಗಳ ಒಕ್ಕೂಟದ ನಾಯಕತ್ವವೇ ಆಡಳಿತರೂಢ ಪಕ್ಷ ಕಾಂಗ್ರೆಸ್‌ ಸೋಲಿಗೆ ಕಾರಣವಾಗಿತ್ತು, ಆದರೇ, ಇಂದಿನ ಪರಿಸ್ಥಿತಿ ತದ್ವಿರುದ್ಧ.

ಭಾರತದ ದಕ್ಷಿಣ ಭಾಗ 132 ಲೋಕಸಭಾ ಕ್ಷೇತ್ರಗಳಿವೆ. ತೆಲಂಗಾಣ17, ಆಂಧ್ರ25, ಕರ್ನಾಟಕ28, ತಮಿಳುನಾಡಿನ 39, ಕೇರಳ20, ಮತ್ತು ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ತಲಾ ಒಂದು ಲೋಕಸಭಾ ಕ್ಷೇತ್ರಗಳು.  ಕಾಂಗ್ರೆಸ್ ಪಕ್ಷ ಮತ್ತು ಅದರ ಮಿತ್ರಪಕ್ಷಗಳಾದ ಯುಪಿಎ (ಡಿಎಂಕೆ, ಸಿಪಿಐ, ಸಿಪಿಎಂ ಇತ್ಯಾದಿ) ಈಗಾಗಲೇ ತಮಿಳುನಾಡಿನಲ್ಲಿ 2019ರಲ್ಲಿ 39 ಕ್ಷೇತ್ರಗಳಲ್ಲಿ 37 ಕ್ಷೇತ್ರಗಳನ್ನು ಗೆದ್ದಿದೆ. ಕೇರಳದಲ್ಲಿ ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ 19 ಕ್ಷೇತ್ರಗಳನ್ನು ಗೆದ್ದಿದೆ.

ಇನ್ನು, 2019ರಲ್ಲಿ ತೆಲಂಗಾಣದಲ್ಲಿ ಬಿಆರ್‌ಎಸ್ ಒಂಬತ್ತು, ಬಿಜೆಪಿ ನಾಲ್ಕು, ಕಾಂಗ್ರೆಸ್ ಮೂರು ಮತ್ತು ಎಐಎಂಐಎಂ ಒಂದು ಸ್ಥಾನವನ್ನು ಗೆದ್ದಿದೆ. 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್‌ 119 ವಿಧಾನಸಭಾ ಕ್ಷೇತ್ರಗಳಲ್ಲಿ 64 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿದಿದೆ.  2024ಚುನಾವಣೆಗೆ ಕಾಂಗ್ರೆಸ್ ತನ್ನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುವ ಭರವಸೆಯನ್ನು ನೀಡಿದೆ. ಕಾಂಗ್ರೆಸ್ ಶೇ. 39.4 ಮತಗಳನ್ನು ಪಡೆದರೆ, ಬಿಆರ್‌ಎಸ್‌ ಶೇ. 37.4 ಮತ್ತು ಬಿಜೆಪಿ ಶೇ. 13.9 ಮತಗಳನ್ನು ಪಡೆದುಕೊಂಡಿವೆ. ಲೋಕಸಭೆಯಲ್ಲಿ ತ್ರಿಕೋನ ಹೋರಾಟ ನಡೆಯುವ ಸಾಧ್ಯತೆ ಇದೆ ಎನ್ನುವ ರಾಜಕೀಯ ಲೆಕ್ಕಚಾರವನ್ನು ತಳ್ಳಿಹಾಕುವಂತಿಲ್ಲ.

ಇದು ಆಂಧ್ರದ ಮೇಲೆ ಪರಿಣಾಮ ಬೀರಬಹುದು ಎಂದು ಕಾಂಗ್ರೆಸ್ ಬೆಂಬಲಿಗರು ಭಾವಿಸಿದ್ದರೂ, ಈ ಕ್ಷಣದಲ್ಲಿ ಇದೊಂದು ಕಾಂಗ್ರೆಸ್‌ನ ಆಶಾಭಾವ ಎಂಬಂಷ್ಟೇ ತೋರುತ್ತಿದೆ. ಆಂಧ್ರಪ್ರದೇಶದಲ್ಲಿ ರಾಜ್ಯ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಶೇ.1.5 ಕ್ಕಿಂತ ಕಡಿಮೆ ಮತಗಳನ್ನು ಗಳಿಸುವ ಮೂಲಕ ಶೂನ್ಯಕ್ಕೆ ಕುಸಿಯುವತ್ತ ಇದೆ. ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದ ಹೊರತು, ಅಲ್ಲಿ ರಾಜಕೀಯ ಪವಾಡವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಒಲವು ಹೆಚ್ಚಾಗುತ್ತಿದೆ. ಟಿಡಿಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ ಎಂಬ ಮಾತಿದೆ.

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪ್ರಭಾವಶಾಲಿ ಗೆಲುವಿನ ಮೇಲೆ ಸವಾರಿ ಮಾಡುತ್ತಾ, ಕಾಂಗ್ರೆಸ್ ತನ್ನ ಕ್ಕಲಿಗ ಮತ್ತು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಸಂಕ್ಷಿಪ್ತ ರೂಪ) ಒಕ್ಕೂಟ ಮತ್ತು ಅದರ ʼಗ್ಯಾರಂಟಿʼಗಳ ಈಡೇರಿಕೆಯಲ್ಲಿ ಲೋಕಸಭಾ ಚುನಾವಣೆಯಲ್ಲೂ ಗಣನೀಯ ಲಾಭವನ್ನು ಗಳಿಸುವ ನಿರೀಕ್ಷೆಯಲ್ಲಿದೆ. 1999ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 28 ಲೋಕಸಭಾ ಕ್ಷೇತ್ರಗಳ ಪೈಕಿ 18 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿತ್ತು. ಆದಾಗ್ಯೂ, 2004 ರಿಂದ, 2019ರ ಲೋಕ ಸಭಾ ಚುನಾವಣೆಯವರೆಗೆ, ಅಂದರೇ ಎಲ್ಲಾ ನಾಲ್ಕು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ, ಗರಿಷ್ಠ ಸಂಖ್ಯೆಯ ಕ್ಷೇತ್ರಗಳನ್ನು ಗೆದ್ದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ. ವೈ ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಧ್ಯಕ್ಷರಾಗಿ, ಲಿಂಗಾಯತ ಮತದಾರರನ್ನು ಮರಳಿ ಓಲೈಸಿಕೊಳ್ಳಲು ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳ ಕೆಲವು ನಷ್ಟಗಳನ್ನು ಸರಿಪಡಿಸಿಕೊಳ್ಳಲು ಯೋಜಿಸುತ್ತಿದೆ.

ಹಾಗಾಗಿ 2019ರಲ್ಲಿ ತನ್ನ ಮಿತ್ರಪಕ್ಷಗಳೊಂದಿಗೆ ದಕ್ಷಿಣ ಭಾರತದ 132 ಲೋಕಸಭಾ ಕ್ಷೇತ್ರಗಳಲ್ಲಿ 63 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್‌ಗೆಬಾರಿ ಅಷ್ಟು ಸುಲಭ ಸಾಧ್ಯವಿಲ್ಲ ಎನ್ನುವುದು ರಾಜ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಇದುವರೆಗೆ ತನ್ನ ಮಗನ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದ ಹೈಕಮಾಂಡ್‌ ಮೇಲೆ ತುಸು ಮುನಿಸಿಕೊಂಡಿದ್ದ ಬಿಎಸ್‌ವೈ ಈ ಬಾರಿ ಲೋಕಸಭಾ ಚುನಾವಣೆಗೆ ತುಸು ಹೆಚ್ಚೇ ಹುರುಪಿನಿಂದ ಓಡಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು, ಜೆಡಿಎಸ್‌ ಕೂಡ ಬಿಜೆಪಿಯೊಂದಿಗೆ  ಮೈತ್ರಿಯಾಗಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಜ್ಯದಲ್ಲಿ ಕಾಣುತ್ತಿರುವ ಕನಸು ನನಸಾಗುವುದಕ್ಕೆ ಸ್ವಲ್ಪ ಕಷ್ಟವಿದೆ ಎಂದೇ ಕಾಣಿಸುತ್ತಿದೆ.

ಕಾಂಗ್ರೆಸ್ ಅಥವಾ ʼಇಂಡಿಯಾʼ ಮೈತ್ರಿ 2024ರಲ್ಲಿ ಕೇವಲ ದಕ್ಷಿಣ ಭಾರತವನ್ನೇ ಕೇಂದ್ರವಾಗಿಟ್ಟುಕೊಂಡರೇ, ʼಇಂಡಿಯಾʼ ಮೈತ್ರಿಕೂಟಕ್ಕಾಗಿ ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶವನ್ನಾಗಿ ಸ್ಥಾಪಿಸಬೇಕಾಗುತ್ತದೆ ಎಂಬುವುದು ಅಪಹಾಸ್ಯದ ಮಾತಲ್ಲ. ಉತ್ತರ ಭಾರತದಲ್ಲಿ ಹಿಂದಿದ್ದ ರಾಜಕೀಯ ವರ್ಚಸ್ಸನ್ನು ಕಾಂಗ್ರೆಸ್‌ ಮತ್ತು ʼಇಂಡಿಯಾʼ ಮೈತ್ರಿ ಕೂಟ ಮತ್ತೆ ಮರಳಿ ಪಡೆದುಕೊಳ್ಳುವ ಪ್ರಯತ್ನ ಮಾಡಬೇಕಿರುವುದು ತುರ್ತಿದೆ.

2019ರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ 190 ಕ್ಷೇತ್ರಗಳಲ್ಲಿ ನೇರನೇರಾ ಸ್ಪರ್ಧೆಯನ್ನು ಎದುರಿಸಿದ್ದವು. ವುಗಳಲ್ಲಿ ಬಿಜೆಪಿ 175 ಮತ್ತು ಕಾಂಗ್ರೆಸ್ ಕೇವಲ 15 ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೆ ಸಾಧ್ಯವಾಯ್ತು. ಕ್ಷೇತ್ರಗಳಲ್ಲಿ 115(ಶೇ. 60ರಷ್ಟು) ಉತ್ತರ ಭಾರತದಲ್ಲಿವೆ. 2024ರಲ್ಲಿ ಬಿಜೆಪಿಯನ್ನು ಸರಿಗಟ್ಟುವ ಒಂದು ಪ್ರಬಲವಾದ ರಾಜಕೀಯ ಸೈದ್ಧಾಂತಿಕ ಬದ್ಧತೆ, ನಿರೂಪಣೆ ಮತ್ತು ಸಮರ್ಥ ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಈ ಕ್ಷೇತ್ರಗಳನ್ನು ಗೆಲ್ಲಲು ಮತ್ತೆ ವಿಫಲ ಪ್ರಯತ್ನ ಮಾಡುತ್ತದೆ ಎಂದು 2023 ರಲ್ಲಿ ನಡೆದ ಬಹುತೇಕ ಎಲ್ಲಾ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶಗಳು ತೋರಿಸುತ್ತವೆ.

ಕ್ಷೇತ್ರಗಳಲ್ಲಿ, ʼಇಂಡಿಯಾʼ ಮೈತ್ರಿ ಕೂಟದ ಪ್ರಾದೇಶಿಕ ಪಕ್ಷಗಳು ಸೀಮಿತ ಪಾತ್ರವನ್ನು ಹೊಂದಿವೆ, ಇದು ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಕಠಿಣ ಪರಿಸ್ಥಿತಿಯನ್ನು ಎದುರು ಮಾಡಿಕೊಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಡಿಎಂಕೆ ತಮಿಳುನಾಡು ಮತ್ತು ಪುದುಚೇರಿಯ ಹೊರತಾಗಿ ಬೇರೆಲ್ಲೂ ಇಲ್ಲ. ಇಲ್ಲಿ ಕೇವಲ 40 ಕ್ಷೇತ್ರಗಳಷ್ಟೆ(ತಮಿಳುನಾಡ ಹಾಗೂ ಪುದುಚೆರಿ). ಕಾಂಗ್ರೆಸ್ ತನ್ನ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿಯೂ ಸಹ 250 ರಿಂದ 300 ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕಾಗುತ್ತದೆ ಮತ್ತು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟವನ್ನು 1977ರ ಜನತಾ ಒಕ್ಕೂಟಕ್ಕೆ ಖಂಡಿತ ಹೋಲಿಸುವುದಕ್ಕೆ ಸಾಧ್ಯವಿಲ್ಲ. ಇನ್ನು, ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಂದಿನ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಹೋಲಿಸುವುದಕ್ಕೆ ಸಾಧ್ಯವಿಲ್ಲ. ಪರಿಸ್ಥಿತಿ ತದ್ವಿರುದ್ಧ. ವಿರೋಧಕ್ಕೆ ಅಂದಿದ್ದಷ್ಟೇ ಇಂದೂ ಬಲವಾದ ಕಾರಣವಿರಬಹುದು. ವಿರೋಧ ಪಕ್ಷ ಪ್ರಬಲವಾಗಿಲ್ಲ ಅನ್ನಿಸುತ್ತಿದೆ. ಅಂದಿದ್ದ ಸರ್ಕಾರವೂ ಪ್ರಬಲವಾಗದೇ ಇದ್ದಿದ್ದು ಕೂಡ ಜನತಾ ಒಕ್ಕೂಟದ ಗೆಲುವಿಗೆ ಕಾರಣವಾಗಿರಬಹುದು. ಆದರೇ, ಇಂದು ಸರ್ಕಾರ ಪ್ರಬಲವಾಗಿದೆ. ಯಾವುದೇ ಪಕ್ಷ ತನ್ನನ್ನು ಮೀರಿಸದಿರುವಂತೆ ತಂತ್ರಗಾರಿಕೆಯನ್ನು ಹೂಡುತ್ತಿರುವುದು ವಿರೋಧ ಪಕ್ಷಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

-ಶ್ರೀರಾಜ್‌ ವಕ್ವಾಡಿ