ಧರ್ಮಸ್ಥಳದ ಸುತ್ತಮುತ್ತ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ, ಕೊಲೆ, ನಾಪತ್ತೆ ಹಾಗೂ ಅಸಹಜ ಸಾವುಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಧರ್ಮಸ್ಥಳ ಪ್ರಕರಣದ ಎಸ್‌ಐಟಿ (ವಿಶೇಷ ತನಿಖಾ ತಂಡ) ತನಿಖೆಯ ಅಂತಿಮ ವರದಿಯನ್ನು ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಬದಲಾಗಿ ನೇರವಾಗಿ ಬೆಳ್ತಂಗಡಿಯ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಈ ನಡುವೆ ಎಸ್‌ಐಟಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ, ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ, ರಾಜ್ಯ ಮಹಿಳಾ ಆಯೋಗಕ್ಕೆ ಸಾವಿರ ಪುಟಗಳ ಪ್ರತ್ಯೇಕ ವರದಿಯನ್ನು ಸಲ್ಲಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹದ ಸುದ್ದಿಗಳು ಹರಿದಾಡುತ್ತಿವೆ. ಮಾತ್ರವಲ್ಲದೇ ಗೃಹ ಇಲಾಖೆಯ ಸಂಬಂಧಿತ ಶಾಖೆಯಲ್ಲಿ ಈ ಕುರಿತು ನಡೆದ ಸಭೆಯ ನಡೆದಿದೆ, ಸಭೆಯ ನಡವಳಿಯೂ ಲಭ್ಯವಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಇದು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸರ್ಕಾರದ ತನಿಖಾ ಸಂಸ್ಥೆಯೊಂದು ನಡೆಸಿದ ತನಿಖೆಯ ವರದಿಯನ್ನು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವಾಗಿದ್ದರೆ, ಅದನ್ನು ಮುಚ್ಚಿಡುವುದಕ್ಕೆ…. ಬೇಡ ಬಿಡಿ ಸ್ವಲ್ಪ ಸಭ್ಯ ಭಾಷೆಯಲ್ಲೇ ಹೇಳುವುದಾದರೇ, ಬಹಿರಂಗಗೊಳಿಸದೇ ಇರುವುದಕ್ಕೆ ಸರ್ಕಾರ ನೀಡುವ ಕಾರಣವೂ ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು. ವಿಶೇಷವಾಗಿ, ಹಲವು ವರ್ಷಗಳಿಂದ ಜನರಲ್ಲಿ ಅನುಮಾನ ಮತ್ತು ಆತಂಕ ಹುಟ್ಟಿಸಿರುವ ಸಾವು-ನಾಪತ್ತೆ ಪ್ರಕರಣಗಳ ಸರಣಿಗೆ ಸಂಬಂಧಿಸಿದ ತನಿಖೆಯ ಪಾರದರ್ಶಕತೆಯ ಅಗತ್ಯ ಇಲ್ಲಿ ಬಹಳ ಮುಖ್ಯ. ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿರುವುದು ಹೌದಾದರೇ, ಅದನ್ನು ಬಹಿರಂಗಪಡಿಸಲು ಕಾನೂನುಬದ್ಧವಾಗಿ ಸಾಧ್ಯವಿಲ್ಲ ಎನ್ನುವುದಾದರೆ, ಯಾವ ನಿರ್ದಿಷ್ಟ ಕಾರಣದಿಂದ ಸಾಧ್ಯವಿಲ್ಲ? ಯಾವ ಕಾನೂನು ವಿಧಿಯ ಅಡಿಯಲ್ಲಿ ಮಾಹಿತಿಯನ್ನು ಒದಗಿಸುವುದಕ್ಕೆ ನಿರಾಕರಿಸಲಾಗಿದೆ? ತನಿಖೆ ಇನ್ನೂ ಬಾಕಿಯಿದೆಯೇ? ಯಾರಾದರೂ ಆರೋಪಿಗಳ ಹಿತಾಸಕ್ತಿಗೆ ಧಕ್ಕೆಯಾಗಬಹುದೇ? ಅಥವಾ ವರದಿಯಲ್ಲಿರುವ ಕೆಲವು ಅಂಶಗಳು ರಾಜಕೀಯವಾಗಿ ಅಥವಾ ಆಡಳಿತಾತ್ಮಕವಾಗಿ ಅಸಹಜ ಪ್ರಶ್ನೆಗಳನ್ನು ಹುಟ್ಟುಹಾಕಬಹುದೇ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕಾಗಿದೆ. ಇಲ್ಲದಿದ್ದಲ್ಲಿ, ವರದಿ ಸಲ್ಲಿಕೆ ಆಗಿರುವುದು ಹೌದಾದಲ್ಲಿ ವರದಿಯನ್ನು ಬಹಿರಂಗಗೊಳಿಸಬೇಕಿದೆ.
ಇದರ ಜೊತೆಗೆ ಮತ್ತೊಂದು ಗಂಭೀರ ಪ್ರಶ್ನೆ ಉದ್ಭವಿಸುತ್ತದೆ. ಎಸ್‌ಐಟಿ ವರದಿಯ ಬಗ್ಗೆ ಗೃಹ ಇಲಾಖೆಯ ಮಟ್ಟದಲ್ಲಿ ಸಭೆಗಳು ನಡೆದಿದ್ದರೆ, ಅದರ ನಡವಳಿ ಎಲ್ಲಿ? ಸಭೆಯೇ ನಡೆದಿಲ್ಲ ಎಂದಾದರೆ, ವರದಿ ಸರ್ಕಾರದ ಮಟ್ಟದಲ್ಲಿ ಹೇಗೆ ಪರಿಶೀಲನೆಯಾಯಿತು? ಸಭೆ ನಡೆದಿದ್ದರೂ ನಡವಳಿ ದಾಖಲಾಗಿಲ್ಲ ಎಂದಾದರೆ, ಆಡಳಿತಾತ್ಮಕವಾಗಿ ಅದು ಹೇಗೆ ಸಮರ್ಥನೀಯ? ಇಲ್ಲಿ ಬೇರೇನೋ ʼಷಡ್ಯಂತ್ರʼ ಆಗಿದೆ ಎನ್ನುವುದೇ ಇದರ ಅರ್ಥ ಅಲ್ವಾ!? ನೋಡಿ, ಮಾಹಿತಿಯನ್ನು ನೀಡದಿರುವುದು ಮತ್ತು ಮಾಹಿತಿಯೇ ಇಲ್ಲದಿರುವುದು—ಇವೆರಡೂ ಒಂದೇ ವಿಷಯವಲ್ಲ. ಈ ವ್ಯತ್ಯಾಸವನ್ನು ಸರ್ಕಾರವೇ ಸ್ಪಷ್ಟಪಡಿಸಬೇಕು. ಧರ್ಮಸ್ಥಳದ ಸುತ್ತ ಮುತ್ತ ನಡೆದಿದೆ ಎಂದು ಹೇಳಲಾಗುತ್ತಿರುವ ಈ ಸೂಕ್ಷ್ಮ ಪ್ರಕರಣಗಳಲ್ಲಿ ಜನರ ನಂಬಿಕೆ ಅತ್ಯಂತ ಮುಖ್ಯ. ತನಿಖೆಯ ಮೇಲೆ ಅನುಮಾನ ಮೂಡಿದಾಗ ಕೇವಲ “ತನಿಖೆ ನಡೆದಿದೆ” ಎಂದು ಹೇಳುವುದಷ್ಟೇ ಸಾಲದು. ತನಿಖೆಯ ವ್ಯಾಪ್ತಿ ಏನು? ಯಾವ ಪ್ರಕರಣಗಳನ್ನು ತನಿಖೆಗೆ ಒಳಪಡಿಸಿಕೊಳ್ಳಲಾಯಿತು? ಯಾವ ಸಾಕ್ಷ್ಯಗಳನ್ನು ಪರಿಗಣಿಸಲಾಯಿತು? ಯಾವ ನಿರ್ಣಯಕ್ಕೆ ಬರಲಾಯಿತು? ಮುಂದಿನ ಕ್ರಮವೇನು? ಇಂತಹ ಮೂಲಭೂತ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಾಗುತ್ತದೆ.
ಇಲ್ಲಿ “ಸರ್ಕಾರ ಯಾರನ್ನು ರಕ್ಷಿಸುತ್ತಿದೆ?” ಎಂಬ ರಾಜಕೀಯ ಪ್ರಶ್ನೆಯೂ ಸಹಜವಾಗಿಯೇ ಕೇಳಿಬರುತ್ತದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಸಾಕ್ಷ್ಯವಿಲ್ಲದೆ ಆರೋಪ ಹೊರಿಸುವುದು ಸರಿಯಲ್ಲ. ಬದಲಿಗೆ, ವರದಿ ಸಲ್ಲಿಕೆ ಆಗಿದ್ದು ಹೌದಾದರೇ, ವರದಿ ಬಹಿರಂಗಪಡಿಸದಿರುವ ಕಾರಣವೇನು ಎಂಬುದನ್ನು ಬಹಿರಂಗಪಡಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಪರಿಣಾಮಕಾರಿ ಪ್ರಶ್ನೆಯಲ್ಲವೇ ? ಈ ಬಗ್ಗೆ ಒಂದೇ ಒಂದು ಮಾತಿಲ್ಲ ಯಾಕೆ ? ಅಧಿವೇಶನ ನಡೆಯುತ್ತಿದೆ. ಯಾವೊಬ್ಬ ಜನಪ್ರತಿನಿಧಿಯೂ ಈ ಬಗ್ಗೆ ಮಾತೇ ಆಡಿಲ್ಲ. ಕಳೆದ ಅಧಿವೇಶನದ ಸಂದರ್ಭದಲ್ಲಿ ಈ ಬಗ್ಗೆ ಬಹಳ ದೊಡ್ಡ ವಿವಾದವನ್ನೇ ಎಬ್ಬಿಸಿದ್ದ ವಿಪಕ್ಷದವರು, ಈ ಬಗ್ಗೆ ಒಂದೇ ಒಂದು ಮಾತು ಆಡುತ್ತಿಲ್ಲ. ಪಾದಯಾತ್ರೆ ಮಾಡಿದವರು, ಧರ್ಮ ರಕ್ಷಣೆ ಎಂದವರು, ಷಡ್ಯಂತ್ರ ಎಂದವರು ಈಗ ತುಟಿ ಬಿಚ್ಚದೇ ಉಳಿದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ. ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಕೆಯಾಗಿ, ಆ ವರದಿಯನ್ನು ಸಾರ್ವಜನಿಕಗೊಳಿಸಲು ಸಾಧ್ಯವಿಲ್ಲ ಎನ್ನುವುದಾದರೆ, ಕನಿಷ್ಠ ಅದರ ನಿರಾಕರಣೆಯ ಕಾನೂನು ಆಧಾರವನ್ನು ಸ್ಪಷ್ಟವಾಗಿ ಪ್ರಕಟಿಸಬೇಕು. ಅಥವಾ ಇನ್ನೂ ವರದಿ ಸಲ್ಲಿಕೆಯಾಗಿಲ್ಲ, ತನಿಖೆಯ ಮುಂದಿನ ಹಂತ ಇನ್ನೂ ಆಗಬೇಕಿದೆ ಎನ್ನುವುದನ್ನಾದರೂ ಹೇಳಬೇಕು. ತನಿಖೆ ಪೂರ್ಣಗೊಂಡಿಲ್ಲ ಎನ್ನುವ ಸಬೂಬು ಕೊಡುವುದಾದರೇ, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮಾಹಿತಿಯನ್ನಷ್ಟೇ ಬಹಿರಂಗಪಡಿಸುವ ಸಾಧ್ಯತೆಯನ್ನಾದರೂ ಪರಿಶೀಲಿಸಬೇಕು. ವೈಯಕ್ತಿಕ ಗೌಪ್ಯತೆ, ಸಾಕ್ಷಿಗಳ ಸುರಕ್ಷತೆ ಅಥವಾ ಬಾಕಿ ತನಿಖೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯಿದ್ದರೆ, ಆ ಮಾಹಿತಿಯನ್ನು ಮಾತ್ರ ಮುಚ್ಚಿಟ್ಟು, ಸ್ವಾರಿ…. ಬಹಿರಂಗಗೊಳಿಸದೇ, ಉಳಿದ ಮಾಹಿತಿಯನ್ನು ಸಾರ್ವಜನಿಕಗೊಳಿಸುವ ಮಾರ್ಗವೂ ಇದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರಕ್ಕೆ ಮಾಹಿತಿ ಮುಚ್ಚಿಡುವ…. ಸ್ವಾರಿ ಒನ್ಸ್ ಅಗೈನ್… ಬಹಿರಂಗಗೊಳಿದೇ ಇರುವ ಅಧಿಕಾರ ಇರಬಹುದು; ಆದರೆ ಮಾಹಿತಿ ಬಹಿರಂಗಗೊಳಿದೇ ಇರುವುದು, ಅಧಿಕಾರ ಜನರಿಗೆ ಉತ್ತರ ಕೊಡದಿರುವ ಪರವಾನಗಿ ಅಲ್ಲ. ಧರ್ಮಸ್ಥಳದ ಪ್ರಕರಣಗಳಲ್ಲಿ ನಿಜಕ್ಕೂ ಯಾವುದೇ ಬಹಿರಂಗಗೊಳಿಸದೇ ಇರುವ ಸಂಗತಿ ಇಲ್ಲದಿದ್ದರೆ, ಸರ್ಕಾರ ಪಾರದರ್ಶಕತೆಯಿಂದ ನಡೆದುಕೊಳ್ಳುವುದರಲ್ಲಿ ಹಿಂಜರಿಯಬೇಕಾದ ಅಗತ್ಯವೇನು? ನೋಡಿ, ಜನರ ಪ್ರಶ್ನೆ, ಸೌಜನ್ಯ ಪರ ಹೋರಾಟಗಗಾರರು ಮತ್ತು ಈ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಹೋರಾಡುತ್ತಿರುವವರ ಪ್ರಶ್ನೆಗಳು ಸರಳವಾಗಿವೆ, ಎಸ್‌ಐಟಿ ಯಾವ ಮಾಹಿತಿಯನ್ನು ಕಲೆಹಾಕಿದೆ? ಎಸ್ ಐ ಟಿ ತನಿಖೆಯ ಮುಂದಿನ ಹಂತಕ್ಕೆ ಪ್ರತ್ಯೇಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಹೌದಾ? ಹೌದಾದಲ್ಲಿ ಎಸ್ ಐ ಟಿ ಸಲ್ಲಿಕೆ ಮಾಡಿರುವ ವರದಿಯಲ್ಲಿ ಏನಿದೆ? ರಾಜ್ಯ ಸರ್ಕಾರ ಅದನ್ನು ಯಾಕೆ ಬಹಿರಂಗಪಡಿಸುತ್ತಿಲ್ಲ? ವರದಿ ಬಹಿರಂಗವಾದರೆ ಯಾರಿಗೆ ತೊಂದರೆಯಾಗುತ್ತದೆ? ಮತ್ತು ವರದಿಯನ್ನು ಮುಚ್ಚಿಡುವುದರಿಂದ,,,, ಸ್ವಾರಿ ಬಹಿರಂಗಗೊಳಿಸದೇ ಇರುವುದರಿಂದ ಯಾರಿಗೆ ಲಾಭ? ಈ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡುವವರೆಗೆ, ಅನುಮಾನಗಳಿಗೆ ಅವಕಾಶ ಉಳಿಯುತ್ತದೆ. ಆ ಅನುಮಾನಗಳನ್ನು ನಿವಾರಿಸುವ ಜವಾಬ್ದಾರಿಯೂ ಸರ್ಕಾರದ್ದೇ.
ಸತ್ಯ ಯಾರ ಪರವಾಗಿದ್ದರೂ ಸರಿ, ಅದು ಹೊರಬರಬೇಕು. ತನಿಖೆ ಯಾರನ್ನೇ ಒಳಗೊಂಡಿದ್ದರೂ ಸರಿ, ಕಾನೂನಿನ ಮುಂದೆ ಎಲ್ಲರೂ ಸಮಾನರಾಗಬೇಕು. ಧರ್ಮಸ್ಥಳದ ಪ್ರಕರಣಗಳಲ್ಲಿ ಜನರಿಗೆ ಬೇಕಾಗಿರುವುದು ರಾಜಕೀಯ ಆರೋಪ-ಪ್ರತ್ಯಾರೋಪವಲ್ಲ; ಸತ್ಯ, ಪಾರದರ್ಶಕತೆ ಮತ್ತು ನ್ಯಾಯ. ಪಟ್ಟಭದ್ರ ಹಿತಾಸಕ್ತಿ ಸೋಲಲಿ, ನ್ಯಾಯವೇ ಗೆಲ್ಲಲಿ.
-ಶ್ರೀರಾಜ್ ವಕ್ವಾಡಿ
No comments:
Post a Comment