ರಾಜ್ಯ ಸಚಿವ ಸಂಪುಟದಲ್ಲಿ ನಡೆದಿರುವ ಖಾತೆಗಳ ಮರುಹಂಚಿಕೆ ಮೇಲ್ನೋಟಕ್ಕೆ ಆಡಳಿತಾತ್ಮಕ ನಿರ್ಧಾರವೆನಿಸಿದರೂ, ಅದರ ಹಿಂದೆ ಇರುವ ರಾಜಕೀಯ ಸಂದೇಶವನ್ನು ನಿರ್ಲಕ್ಷಿಸುವಂತಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿಯಿದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ಕೃಷ್ಣ ಬೈರೇಗೌಡರಿಗೆ ವಹಿಸಿರುವುದು ಕುತೂಹಲ ಮೂಡಿಸಿದೆ.
ಕೃಷ್ಣ ಬೈರೇಗೌಡ ಸಾಮಾನ್ಯವಾಗಿ ಯಾವುದೇ ಇಲಾಖೆಯನ್ನು ಸಮರ್ಥವಾಗಿ ವಹಿಸಿಕೊಂಡು ಹೋಗುವ ನಾಯಕ. ಆಡಳಿತಾತ್ಮಕ ವಿಚಾರಗಳ ಆಳವಾದ ಅರಿವು, ಸದನದ ಕಾರ್ಯವಿಧಾನದ ಮೇಲೆ ಹಿಡಿತ, ವಿಷಯ ಮಂಡಿಸುವ ಸಾಮರ್ಥ್ಯ ಹಾಗೂ ಸರ್ಕಾರದ ನೀತಿಗಳನ್ನು ಸಮರ್ಥವಾಗಿ ಸಮರ್ಥಿಸಿಕೊಳ್ಳುವ ರಾಜಕೀಯ ಕೌಶಲ್ಯ—ಇವೆಲ್ಲವೂ ಅವರಲ್ಲಿರುವ ಪ್ರಮುಖ ಗುಣಗಳು. ಹೀಗಾಗಿ, ಅವರಿಗೆ ಸಂಸದೀಯ ವ್ಯವಹಾರಗಳಂತಹ ರಾಜಕೀಯವಾಗಿ ಸೂಕ್ಷ್ಮವಾದ ಖಾತೆ ನೀಡಿರುವುದು ಕೇವಲ ಇಲಾಖಾ ಬದಲಾವಣೆ ಎಂದು ನೋಡುವುದು ಸರಳೀಕರಣವಾಗುತ್ತದೆ. ಗಮನಿಸಿ, ಸರ್ಕಾರಕ್ಕೆ ವಿಧಾನಸಭೆಯ ಒಳಗಿನ ನಿರ್ವಹಣೆ ಅತ್ಯಂತ ಮಹತ್ವದ್ದು. ಪ್ರತಿಪಕ್ಷದ ಪ್ರಶ್ನೆಗಳಿಗೆ ಉತ್ತರಿಸುವುದು ಮಾತ್ರವಲ್ಲದೆ, ಮಸೂದೆಗಳ ಮಂಡನೆ, ಚರ್ಚೆಗಳನ್ನು ಸಮನ್ವಯಗೊಳಿಸುವುದು, ಸದನದ ಗೊಂದಲಗಳನ್ನು ನಿಭಾಯಿಸುವುದು ಹಾಗೂ ಸರ್ಕಾರದ ನಿಲುವನ್ನು ಪರಿಣಾಮಕಾರಿಯಾಗಿ ಮಂಡಿಸುವುದು ಸಂಸದೀಯ ವ್ಯವಹಾರಗಳ ಸಚಿವರ ಪ್ರಮುಖ ಹೊಣೆ. ಈ ಹಿನ್ನೆಲೆಯಲ್ಲಿ ಕೃಷ್ಣ ಬೈರೇಗೌಡರ ಆಯ್ಕೆ ಒಂದು ‘ಮ್ಯಾನೇಜ್‌ಮೆಂಟ್’ ನಿರ್ಧಾರಕ್ಕಿಂತ ‘ಪಾಲಿಟಿಕಲ್ ಕಮ್ಯುನಿಕೇಶನ್’ ನಿರ್ಧಾರವಾಗಿಯೂ ಕಾಣುತ್ತದೆ.
ಸರ್ಕಾರದ ಮುಂದಿನ ಅವಧಿಯಲ್ಲಿ ಹಲವು ಸೂಕ್ಷ್ಮ ವಿಚಾರಗಳು ವಿಧಾನಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಪ್ರತಿಪಕ್ಷದ ಆಕ್ರಮಣ, ಸರ್ಕಾರದ ವಿರುದ್ಧದ ಆರೋಪಗಳು, ಆಡಳಿತಾತ್ಮಕ ನಿರ್ಧಾರಗಳ ಕುರಿತು ಚರ್ಚೆಗಳು—ಇವೆಲ್ಲವನ್ನೂ ಎದುರಿಸಲು ಸದನದಲ್ಲಿ ಅನುಭವ ಹೊಂದಿರುವ ಮತ್ತು ವಿಷಯಾಧಾರಿತವಾಗಿ ಮಾತನಾಡಬಲ್ಲ ಸಚಿವರ ಅಗತ್ಯವಿದೆ. ಸಂಸದೀಯ ವ್ಯವಹಾರಗಳ ಖಾತೆ ಮುಖ್ಯಮಂತ್ರಿ ಬಳಿಯೇ ಉಳಿಯಬೇಕೆಂಬ ಅನಿವಾರ್ಯತೆ ಇರಲಿಲ್ಲ. ಆದರೆ ಅದನ್ನು ಯಾರಿಗೆ ನೀಡಬೇಕು ಎಂಬುದು ಮುಖ್ಯ. ಡಿಕೆ ಶಿವಕುಮಾರ್ ಅವರು ತಮ್ಮ ಬಳಿಯಿದ್ದ ಈ ಖಾತೆಯನ್ನು ಕೃಷ್ಣ ಬೈರೇಗೌಡರಿಗೆ ವಹಿಸುವ ಮೂಲಕ ವ್ಯಕ್ತಿಗಿಂತ ವ್ಯವಸ್ಥೆ ಮುಖ್ಯ’ ಎಂಬ ಸಂದೇಶ ನೀಡಲು ಪ್ರಯತ್ನಿಸಿದ್ದಾರೆಯೇ?ಎಂಬ ಪ್ರಶ್ನೆ ಎದುರಾಗುತ್ತದೆ.
ಇದರ ಮತ್ತೊಂದು ಆಯಾಮವೂ ಇದೆ. ಮುಖ್ಯಮಂತ್ರಿಗೆ ಹಲವು ಪ್ರಮುಖ ಜವಾಬ್ದಾರಿಗಳಿರುವ ಸಂದರ್ಭದಲ್ಲಿ, ಪ್ರತಿಯೊಂದು ಇಲಾಖೆಯ ಸೂಕ್ಷ್ಮ ನಿರ್ವಹಣೆಯನ್ನು ಸ್ವತಃ ನೋಡಿಕೊಳ್ಳುವುದಕ್ಕಿಂತ, ಸಮರ್ಥ ಸಚಿವರಿಗೆ ನಿರ್ದಿಷ್ಟ ಹೊಣೆಗಾರಿಕೆ ನೀಡುವುದು ಆಡಳಿತಾತ್ಮಕವಾಗಿ ಪರಿಣಾಮಕಾರಿ. ಕೃಷ್ಣ ಬೈರೇಗೌಡರಂತಹ ಸಚಿವರಿಗೆ ಹೆಚ್ಚಿನ ಜವಾಬ್ದಾರಿ ನೀಡುವುದರಿಂದ ಸರ್ಕಾರದೊಳಗಿನ ಕೆಲಸದ ಹಂಚಿಕೆ ಮತ್ತಷ್ಟು ಸ್ಪಷ್ಟವಾಗುತ್ತದೆ.ಕೃಷ್ಣ ಬೈರೇಗೌಡರಿಗೆ ‘ಗ್ರೇಟರ್ ಬೆಂಗಳೂರು’ ಜೊತೆಗೆ ಸಂಸದೀಯ ವ್ಯವಹಾರಗಳ ಜವಾಬ್ದಾರಿ ನೀಡಿರುವುದು ಇದೇ ಕಾರಣಕ್ಕೆ ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಮತ್ತೊಂದು ರಾಜಕೀಯ ಸಂದೇಶವನ್ನು ಗಮನಿಸಬೇಕು.
ಕೃಷ್ಣ ಬೈರೇಗೌಡರಿಗೆ ಈಗಾಗಲೇ ಗ್ರೇಟರ್ ಬೆಂಗಳೂರು ಅಭಿವೃದ್ಧಿಯಂತಹ ಅತ್ಯಂತ ಮಹತ್ವದ ಖಾತೆಯ ಹೊಣೆ ಇದೆ. ಬೆಂಗಳೂರು ಅಭಿವೃದ್ಧಿ ಎಂದರೆ ಕೇವಲ ನಗರಾಡಳಿತದ ವಿಚಾರವಲ್ಲ; ಅದು ಮೂಲಸೌಕರ್ಯ, ಸಂಚಾರ, ನೀರು, ನಗರ ಯೋಜನೆ, ಮಹಾನಗರದ ಆಡಳಿತ ವ್ಯವಸ್ಥೆ ಸೇರಿದಂತೆ ಭವಿಷ್ಯದ ಬೆಂಗಳೂರಿನ ರಾಜಕೀಯ-ಆಡಳಿತಾತ್ಮಕ ರೂಪುರೇಷೆಗಳಿಗೆ ಸಂಬಂಧಿಸಿದ ವಿಷಯ. ಅಂತಹ ಪ್ರಮುಖ ನಗರಾಭಿವೃದ್ಧಿಯ ಹೊಣೆಗಾರಿಕೆಯ ಜೊತೆಗೆ ಸಂಸದೀಯ ವ್ಯವಹಾರಗಳ ಖಾತೆಯನ್ನೂ ನೀಡಿರುವುದು, ಅವರ ಮೇಲಿನ ಸರ್ಕಾರದ ನಂಬಿಕೆ ಹೆಚ್ಚಿರುವುದನ್ನು ಸೂಚಿಸುತ್ತದೆ. ಆದರೆ ಪ್ರಶ್ನೆ ಇಲ್ಲಿಯೇ ನಿಲ್ಲುವುದಿಲ್ಲ.
ಇದು ಕೃಷ್ಣ ಬೈರೇಗೌಡರನ್ನು ಸರ್ಕಾರದ ಪ್ರಮುಖ ‘ಫ್ರಂಟ್‌ಲೈನ್’ ಸಚಿವರನ್ನಾಗಿ ರೂಪಿಸುವ ಪ್ರಯತ್ನವೇ?
ಸರ್ಕಾರದಲ್ಲಿ ಎಲ್ಲವೂ ಸರಾಗವಾಗಿದ್ದರೆ, ಈ ಖಾತೆ ಬದಲಾವಣೆಯನ್ನು ಕೇವಲ ಆಡಳಿತಾತ್ಮಕ ಮರುಹಂಚಿಕೆ ಎಂದು ಹೇಳಬಹುದು. ಆದರೆ ರಾಜಕೀಯದಲ್ಲಿ ಖಾತೆಗಳು ಕೇವಲ ಕಡತಗಳ ವಹಿವಾಟಿನ ಸಾಧನವಲ್ಲ; ಅವು ಅಧಿಕಾರ, ಪ್ರಭಾವ ಮತ್ತು ರಾಜಕೀಯ ಪಾತ್ರದ ಸೂಚಕಗಳೂ ಹೌದು.ಹೀಗಾಗಿ ಕೇಳಬೇಕಾದ ಪ್ರಶ್ನೆ ಏನೆಂದರೆ, ಕೃಷ್ಣ ಬೈರೇಗೌಡರಿಗೆ ಸಂಸದೀಯ ವ್ಯವಹಾರಗಳ ಖಾತೆ ನೀಡಿರುವುದು ಅವರ ಸಾಮರ್ಥ್ಯಕ್ಕೆ ನೀಡಿದ ಮನ್ನಣೆಯೇ? ಅಥವಾ ಸರ್ಕಾರದ ಮುಂದಿನ ರಾಜಕೀಯ ಹೋರಾಟಗಳಿಗೆ ಅವರನ್ನು ಮುಂಚೂಣಿಗೆ ತರುವ ತಂತ್ರವೇ?
ಮುಖ್ಯವಾಗಿ, ವಿಧಾನಸಭೆಯಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಜವಾಬ್ದಾರಿ ಈಗ ಮತ್ತಷ್ಟು ಸ್ಪಷ್ಟವಾಗಿ ಕೃಷ್ಣ ಬೈರೇಗೌಡರ ಹೆಗಲಿಗೆ ಬಂದಿದೆ. ಇದರಿಂದ ಪ್ರತಿಪಕ್ಷದ ಟೀಕೆಗಳಿಗೆ ಸರ್ಕಾರದ ಪರವಾಗಿ ತಕ್ಷಣ, ತರ್ಕಬದ್ಧವಾಗಿ ಮತ್ತು ರಾಜಕೀಯವಾಗಿ ಉತ್ತರಿಸುವ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶವೂ ಇರಬಹುದು. ಇಮ್ನು, ಸಿಎಂ ಡಿಕೆಶಿ ಅವರ ‘ತಂತ್ರ’ ಇಲ್ಲಿ ಕಾಣುತ್ತದೆಯೇ?
ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಶೈಲಿಯನ್ನು ಗಮನಿಸಿದರೆ, ಪ್ರಮುಖ ಹೊಣೆಗಾರಿಕೆಗಳನ್ನು ಸಮರ್ಥ ನಾಯಕರಿಗೆ ಹಂಚುವ ಮೂಲಕ ತಮ್ಮ ಮೇಲಿನ ಆಡಳಿತಾತ್ಮಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಮತ್ತು ಪಕ್ಷ-ಸರ್ಕಾರದ ರಾಜಕೀಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಪ್ರಯತ್ನವಾಗಿರಬಹುದು.
ಅದರಲ್ಲೂ ಸಂಸದೀಯ ವ್ಯವಹಾರಗಳ ಖಾತೆಯನ್ನು ಕೃಷ್ಣ ಬೈರೇಗೌಡರಿಗೆ ನೀಡಿರುವುದು ಸರ್ಕಾರದ ಪರವಾಗಿ ಸದನದಲ್ಲಿ ಗಂಭೀರವಾದ, ವಿಷಯಾಧಾರಿತ ಮತ್ತು ಸಂಘಟಿತ ಪ್ರತಿಕ್ರಿಯೆ ನೀಡುವ ಅಗತ್ಯವನ್ನು ಮುಖ್ಯಮಂತ್ರಿ ಗುರುತಿಸಿದ್ದಾರೆ ಎಂಬ ಸಂದೇಶ ನೀಡುತ್ತದೆ.ಆದರೆ ಇದರ ರಾಜಕೀಯ ಪರಿಣಾಮ ಇನ್ನೂ ದೊಡ್ಡದಾಗಬಹುದು.
ಕೃಷ್ಣ ಬೈರೇಗೌಡರಿಗೆ ಒಂದರ ಹಿಂದೆ ಒಂದರಂತೆ ಮಹತ್ವದ ಜವಾಬ್ದಾರಿಗಳು ಬರುತ್ತಿರುವುದು ಕಾಂಗ್ರೆಸ್ ಸರ್ಕಾರದಲ್ಲಿ ಅವರ ಪಾತ್ರ ವಿಸ್ತರಿಸುತ್ತಿರುವುದರ ಸೂಚನೆಯೇ? ಅಥವಾ ಇದು ಕೇವಲ ಆಡಳಿತದ ಅಗತ್ಯಕ್ಕೆ ತಕ್ಕಂತೆ ಮಾಡಿದ ಜವಾಬ್ದಾರಿ ಹಂಚಿಕೆಯೇ? ಉತ್ತರವನ್ನು ಮುಂದಿನ ಕೆಲವು ನಡೆಗಳು ಸ್ಪಷ್ಟಪಡಿಸುತ್ತವೆ. ಒಟ್ಟಿನಲ್ಲಿ, ಡಿಕೆ ಶಿವಕುಮಾರ್ ತಮ್ಮ ಬಳಿಯಿದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಳ್ಳದೆ ಕೃಷ್ಣ ಬೈರೇಗೌಡರಂತಹ ಸಮರ್ಥ ಸಚಿವರಿಗೆ ವಹಿಸಿರುವುದು, ಸರ್ಕಾರದ ಸದನ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನವಾಗಿ ಕಾಣುತ್ತದೆ.ಆದರೆ ರಾಜಕೀಯದ ಕಣ್ಣಿನಿಂದ ನೋಡಿದರೆ, ಇದು ಇನ್ನೊಂದು ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ
“ಕೃಷ್ಣ ಬೈರೇಗೌಡರಿಗೆ ಖಾತೆ ಸಿಕ್ಕಿದೆಯೇ, ಅಥವಾ ಸರ್ಕಾರದ ಮುಂದಿನ ರಾಜಕೀಯ ಸಮರಕ್ಕೆ ಒಂದು ಪ್ರಮುಖ ‘ಸ್ಪೀಕರ್’ ಸಿಕ್ಕಿದ್ದಾರೆಯೇ? ಇದು ಕುತೂಹಲವಾಗಿಯೇ ಉಳಿಯುತ್ತದೆ. ಮತ್ತು ಕೃಷ್ಣ ಬೈರೇಗೌಡರಂತಹ ಸಮರ್ಥ ನಾಯಕರನ್ನು ಇನ್ನಷ್ಟು ಯಶಸ್ವಿಯಾಗಿ ಬಳಸಿಕೊಂಡರೇ, ಕಾಂಗ್ರೆಸ್ ಗೆ ಒಳಿತು, ರಾಜ್ಯದ ಜನತೆಗೂ ಒಳಿತು.
- ಶ್ರೀರಾಜ್ ವಕ್ವಾಡಿ
No comments:
Post a Comment