Saturday, November 20, 2021

ಈ ಕಾಯ್ದೆಗಳಿಂದ ಅನುಕೂಲಗಳೇ ಆಗುತ್ತವೆ ಎಂದವರೇ...




ಪಂಚರಾಜ್ಯ ಚುನಾವಣೆಗೆ ಮೋದಿ ಗಿಮಿಕ್ | ಪಂಜಾಬ್ ನಲ್ಲಿ ಸಿಂಗ್ ಕಿಂಗ್ ಮೇಕರ್ 

ಈ ‘ರೇ’ ಎನ್ನುವ ಶಬ್ದ ಅಥವಾ ಅಕ್ಷರ ಕನ್ನಡ ಶಬ್ದಕೋಶದಲ್ಲಿರುವ ಅತ್ಯಂತ ಅಸಹನೀಯ ಮತ್ತು ಅಸಹ್ಯ ಅಂತನ್ನಿಸುತ್ತಿದೆ. ಹೌದು, ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲಗಳೇ ಹೊರತಾಗಿ ಏನೂ ಸಮಸ್ಯೆಯಾಗುವುದಿಲ್ಲ. ಕೃಷಿ ಕಾಯ್ದೆಗಳಲ್ಲಿ ಸುಧಾರಣೆ ತಂದಿರುವುದಕ್ಕಾಗಿ ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದು ಪದೇ ಪದೇ ಹೇಳುತ್ತಿದ್ದ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವ‘ರೇ’ ಈ ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಘೋಷಿಸಿ, ಕಳೆದೊಂದು ವರ್ಷದಿಂದ ಈ ಮೂರು ಕೃಷಿ ಕಾಯ್ದೆಗಳ ವಿರುದ್ಧ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಹೋರಾಟ ನಡೆಸಿದ ರೈತರ ಮುಂದೆ ಕೊನೆಗೂ ಸೋಲೊಪ್ಪಿಕೊಂಡಿದ್ದಾರೆ.

ಒಂದೊಮ್ಮೆಯೂ ಈ ಹಿಂದೆ ಈ ವಿಚಾರವಾಗಿ ಪ್ರತ್ಯಕ್ಷವಾಗಿ ರೈತರ ಮುಂದೆ ಬಂದು ಒಂದು ಸೊಲ್ಲೆತ್ತದ ಮಾನ್ಯ ಪ್ರಧಾನಿಗಳು “ನಮ್ಮಿಂದ ತಪ್ಪಾಗಿದೆ, ದೇಶದ ರೈತರ ಕ್ಷಮೆ ಕೇಳುತ್ತೇನೆ” ಎಂದು ಕಾಯ್ದೆಗಳನ್ನು ವಾಪಾಸ್ ಪಡೆಯುತ್ತೇವೆ ಎಂದು ಹೇಳುವ ಸ್ಥಿತಿ ಮಾನ್ಯ ಪ್ರಧಾನ ಮಂತ್ರಿಗಳಿಗೆ ಬರಬಾರದಿತ್ತು. ಮೋದಿ ಸುಳಿವೇ ಇಲ್ಲದಂತೆ ಏಕಾಏಕಿ ಬಂದು ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಹೇಳಿರುವುದರಿಂದ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿವೆ. ದೇಶ ಮಟ್ಟದಲ್ಲಿ ಚರ್ಚೆಯಾಗುವುದನ್ನು ನೋಡುವುದೇ ಪ್ರಧಾನಿಯವರಿಗೆ ವಿಪರೀತ ಸಂತಸ ನೀಡುವ ಸಂಗತಿ ಎಂದು ಕಾಣಿಸುತ್ತಿದೆ. ರಾಷ್ಟ್ರದ ರಾಜಧಾನಿ ದೆಹಲಿಯ ಗಡಿ ಭಾಗಗಳಲ್ಲಿ ಹಾಗೂ ಇತರೆ ರಾಜ್ಯಗಳಲ್ಲಿ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದ ರೈತರ ವಿರುದ್ಧ ಕಡೆಗೂ ಮಣಿದು ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿರುವುದರ ಹಿಂದೆ ಪ್ರಧಾನಿ ಹಾಗೂ ಬಿಜೆಪಿಯ ‘ಮೆಘಾ ಪ್ಲ್ಯಾನ್’ ಇದೆ ಎನ್ನುವುದು ಅಕ್ಷರಶಃ ಸತ್ಯ. ೨೦೧೪ ರಲ್ಲಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಬಿಜೆಪಿಯ ಜೊತೆಗೆ ನಿಂತು ದೇಶ ಗೆಲ್ಲಲು ತಂತ್ರ ಹೆಣೆದಿದ್ದರು. ಅಲ್ಲಿಂದೀಚೆಗೆ ಬಿಜೆಪಿ ಪಕ್ಷವೇ ತಂತ್ರ ಹೆಣೆಯುವಷ್ಟು ಬೆಳೆದು ನಿಂತಿದೆ ಎನ್ನುವುದನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕೆಲವು ನಿರ್ಧಾರಗಳೇ ಸೂಚಿಸುತ್ತವೆ. ಒಂದು ರೀತಿಯಲ್ಲಿ ಚುನಾವಣೆಯ ಒಂದೇ ಒಂದು ಉದ್ದೇಶಕ್ಕಾಗಿ ಬಿಜೆಪಿ ಯಾವುದಕ್ಕೂ ಬೇಕಾದರೂ ಸಿದ್ಧ ಎಂಬುವುದು ಈಗೀಗ ಸ್ಪಷ್ಟವಾಗುತ್ತಿದೆ. ಪ್ರಧಾನಿಗಳು ಹೇಳಿರುವ ಹಾಗೆಯೇ, “ರೈತರಿಗಾಗಿ ಕೃಷಿ ಕಾಯ್ದೆಗಳನ್ನು ತಂದೆವು, ದೇಶಕ್ಕಾಗಿ ವಾಪಾಸ್ ಪಡೆಯುತ್ತಿದ್ದೇವೆ” ಎಂಬ ಮಾತಿನಲ್ಲೇ ತಮ್ಮ ಆಡಳಿತ ವರ್ಚಸ್ಸಿಗೆ ಧಕ್ಕೆ ಆಗಬಾರದೆಂಬ ಕಾಳಜಿ ಇದು ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಕಾಯ್ದೆ ‘ಪರ’ರ ಉಲ್ಟಾ ನಿಲುವು : ಕೇಂದ್ರ ಸರ್ಕಾರ ಅಂಗೀಕಾರ ಮಾಡಿದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಸಿದ ರೈತ ಪ್ರತಿಭಟನಾಕಾರರನ್ನು ಖಲಿಸ್ತಾನಿಗಳು, ದೇಶ ದ್ರೋಹಿಗಳು, ಭಯೋತ್ಪಾದಕರು ಎಂದು ಕರೆದ ಪ್ರದಾನಿ ಮೋದಿ ಅವರ ಅನುಯಾಯಿಗಳು ಏಕಾಏಕಿ ಈಗ ತಮ್ಮ ನಾಲಿಗೆ ಬದಲಾಯಿಸಿಕೊಂಡಿರುವುದನ್ನು ನೋಡಿದರೇ, ವಿಚಿತ್ರ ಅನ್ನಿಸುತ್ತಿದೆ. ಯಾರು ರೈತರ ಪ್ರತಿಭಟನೆಯನ್ನು ದೇಶ ದ್ರೋಹ ಚಟುವಟಿಕೆ ಎಂದು ಜರೆದಿದ್ದರೋ, ಅವರು ಈಗ ‘ಪ್ರತಿಭಟನೆ, ವಿರೋಧ ಮಾಡುವುದು ಪ್ರಜಾಪ್ರಭುತ್ವದ ಬ್ಯೂಟಿ’ ಎಂದು ಸಾಫ್ಟ್ ಧೋರಣೆ ತೋರಿಸುತ್ತಿರುವುದನ್ನು ನೋಡಿದರೇ, ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಅಷ್ಟಕ್ಕೂ ೨೦೧೪ ರಿಂದ ಕೆಲವರಿಗಂತೂ ಅನುಕೂಲಕ್ಕೆ ತಕ್ಕ ಹಾಗೆ ನಾಲಿಗೆ ಬದಲಾಯಿಸಿಕೊಳ್ಳುವ ಅಭ್ಯಾಸ ರೂಢಿಯಾಗಿ ಬಿಟ್ಟಿದೆ.       

ಮುಂದಿನ ವರ್ಷ ಬರಲಿರುವ ಪಂಚರಾಜ್ಯ ಚುನಾವಣೆಯನ್ನು ಉದ್ದೇಶಿಸಿಕೊಂಡೇ ಕೇಂದ್ರ ಸರ್ಕಾರ ಈ ಕಾಯ್ದೆಗಳ ಹಿಂಪಡೆಯುವ ನಿರ್ಧಾರಕ್ಕೆ ಮುಂದಾಗಿದ್ದು ಎನ್ನುವುದು ಎಳೆ ಕೂಸಿಗೂ ಗೊತ್ತಿರುವ ವಿಚಾರ. ಆದರೇ, ಬಿಜೆಪಿ ಹಾಗಲ್ಲ ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿರುವುರದ ಮೂಲಕ ಜನರ ಕಿವಿಯ ಮೇಲೆ ಹೂವಿಡೋದಲ್ಲ, ಲಾಲ್ ಬಾಗ್ ನನ್ನೇ ಇಡುತ್ತಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವುದು ಸ್ಪಷ್ಟ. ಆದರೇ, ಅದನ್ನು ತೋರಿಸಿಕೊಳ್ಳಲಾಗದ ಇರಿಸು ಮುರಿಸಿನ ಸ್ಥಿತಿಯಲ್ಲಿದೆ ಬಿಜೆಪಿ. 

ವಾಪಾಸ್ ಪಡೆಯುವ ಉದ್ದೇಶ ಪಂಚರಾಜ್ಯ ಚುನಾವಣೆ : ಈ ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲಗಳೇ ಆಗುತ್ತವೆ ಎಂದವರೇ, ದಿಢೀರ್ ಆಗಿ ವಾಪಾಸ್ ಪಡೆಯುವುದಾಗಿ ಹೇಳಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೇ, ಬಿಜೆಪಿ ಬಲವಾದ ರಾಜಕೀಯ ಲೆಕ್ಕಾಚಾರವನ್ನೇ ಹಾಕಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಬರುವ ವರ್ಷ, ಅಂದರೇ ೨೦೨೨ ರಲ್ಲಿ ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಹಾಗೂ ಗೋವಾ ವಿಧಾನ ಸಭಾ ಚುನಾವಣೆಯನ್ನು ಎದುರಿಸುತ್ತಿವೆ. ಇದೇ ಉದ್ದೇಶಕ್ಕಾಗಿ ಕೇಂದ್ರ ಈ ವಾಪಾಸಾತಿ ನಿರ್ಧಾರಕ್ಕೆ ಮುಂದಾಗಿದೆ. ಹೌದು, ೨೦೧೪ ರಲ್ಲಿ ಭೂಸ್ವಾಧೀನ ಸುಗ್ರಿವಾಜ್ಞೆಯ ವಿರುದ್ಧವೂ ಕೇಂದ್ರ ಸರ್ಕಾರದ ವಿರುದ್ಧ ರೈತರು ಬಾರಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಪ್ರತಿ ಪಕ್ಷ ಕಾಂಗ್ರೆಸ್ ಕೂಡ ದೊಡ್ಡ ಮಟ್ಟದಲ್ಲಿ ಆಕ್ರೋಶ ಹೊರ ಹಾಕಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಇದು ಸೂಟ್ ಬೂಟ್ ಸರ್ಕಾರ’ ಎಂದು ನೇರಾನೇರವಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಜರೆದಿದ್ದರು. ದೊಡ್ಡ ಮಟ್ಟದಲ್ಲಿ ವಿರೋಧ ಬಂದ ಕಾರಣದಿಂದಾಗಿ ೨೦೧೫ ರಲ್ಲಿ ಬಿಹಾರ ವಿಧಾನ ಸಭಾ ಚುನಾವಣೆಯ ಮುಂಚಿತವಾಗಿ ಇದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭೂಸ್ವಾಧೀನ ಸುಗ್ರಿವಾಜ್ಞೆಯನ್ನು ಹಿಂಪಡೆದಿತ್ತು. ಅದಾದ ಮೇಲೆ ಈಗ ಮತ್ತೊಮ್ಮೆ ಕೇಂದ್ರ ಹಿಂದ್ಹೆಜ್ಜೆ ಇಟ್ಟು ತೀವ್ರ ಮುಖಭಂಗ ಅನುಭವಿಸಿದೆ. 

ಪಂಚರಾಜ್ಯ ಚುನಾವಣೆಯ ಲೆಕ್ಕಾಚಾರ ಖಂಡಿತ ಇದ್ದೇ ಇದೆ. ಬರುವ ವರ್ಷ ಬರಲಿರುವ ವಿಧಾನ ಸಭಾ ಚುನಾವಣೆಯ ಸಮೀಕ್ಷೆಗಳು ಈಗಾಗಲೇ ಹೊರಬಿದ್ದಿದ್ದು, ಪಂಜಾಬ್ ನಲ್ಲಿ ಬಿಜೆಪಿ ಶೂನ್ಯ ಗಳಿಕೆಯ ಸಾಧನೆ ಮಾಡಲಿದೆ ಎಂಬ ಸಮೀಕ್ಷೆಯ ಭವಿಷ್ಯಕ್ಕೆ ಹೆದರಿ, ಬಿಜೆಪಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಹೌದು, ಬಿಜೆಪಿಗೂ ಗೊತ್ತು, ಪಂಜಾಬ್ ನಲ್ಲಿ ಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸುವುದಕ್ಕೆ ಸಾಧ್ಯವಿಲ್ಲವೆಂದು, ಆದರೂ ಪ್ರತಿಪಕ್ಷ ಕಾಂಗ್ರೆಸ್ ನ ಎದುರು ಮರ್ಯಾದೆ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಮಾತ್ರವಲ್ಲದೇ, ಪಂಜಾಬ್ ನಲ್ಲಿ ಸಿಖ್ ಧರ್ಮದ ಮತದಾರರೇ ನಿರ್ಣಾಯಕವಾಗಿ ಪರಿಣಮಿಸುವ ಕಾರಣದಿಂದಾಗಿ ಸಿಖ್ ರನ್ನು ಎದುರು ಹಾಕಿಕೊಂಡು ಬಿಜೆಪಿ ಸ್ಪರ್ಧೆ ಮಾಡುವುದಕ್ಕೆ ಸಾಧ್ಯವಿಲ್ಲ. ಅದೇ ಕಾರಣದಿಂದಾಗಿ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ಜನ್ಮ ದಿನದಂದು ಈ ನಿರ್ಧಾರ ಬಿಜೆಪಿ ಕೈಗೊಂಡಿದೆ ಎನ್ನಲಾಗುತ್ತಿದೆ. 

ಪಂಜಾಬ್ ನಲ್ಲಿ ಅಮರಿಂದರ್ ಸಿಂಗ್ ಕಿಂಗ್ ಮೇಕರ್ : ಹೌದು, ಪಂಜಾಬ್ ನಲ್ಲಿ ಕಾಂಗ್ರೆಸ್ ಒಡೆದು ಇಬ್ಭಾಗವಾದ ಬಳಿಕ ಅಲ್ಲಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಕ್ಷದಿಂದ ಹೊರಬಂದು ಹೊಸ ಪಕ್ಷ ಕಟ್ಟಿರುವುದರಿಂದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅಮರಿಂದರ್ ಸಿಂಗ್ ಕಿಂಗ್ ಮೇಕರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಪಂಜಾಬ್ ನಲ್ಲಿ ಅಮರಿಂದರ್ ಪ್ರಭಾವಿ ನಾಯಕ. ಅವರೆದುರಿಗೆ ಸರಿಯಾಗಿ ನಿಲ್ಲುವ ಬೇರೊಬ್ಬ ನಾಯಕ ಸದ್ಯಕ್ಕೆ ಪಂಜಾಬ್ ನಲ್ಲಿ ಇಲ್ಲ ಎಂದೇ ಹೇಳಬಹುದು. ಪಂಜಾಬ್ ನಲ್ಲಿ ಬಿಜೆಪಿ ಮರ್ಯಾದೆ ಉಳಿಸಿಕೊಳ್ಳಬೇಕೆಂದರೇ, ಅಮರಿಂದರ್ ಮನವೊಲಿಸಲೇಬೇಕು. ಅದರ ಮೊದಲ ಹಂತ ಈಗಾಗಲೇ ಆಗಿದೆ ಎಂದು ಕಾಣಿಸುತ್ತದೆ. ಕಾಂಗ್ರೆಸ್ ನಿಂದ ಹೊರಬಂದ ಬಳಿಕ ಅಮರಿಂದರ್ ಸಿಂಗ್ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಜೊತೆಗೆ ಒಂದು ಸುತ್ತಿನ ಮಾತು ಕತೆ ನಡೆಸಿದ್ದಾರೆ. ಆ ಬಳಿಕ ಅಮರಿಂದರ್ ಸಿಂಗ್ ಹೊಸ ಪಕ್ಷದ ಮುಖೇನ ಸ್ಪಧಿಸುವುದಾಗಿ ಘೋಷಿಸಿದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಕ್ಷ, ಬಿಜೆಪಿ ಪ್ರಾಯೋಜಿತ ಪಕ್ಷ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇನ್ನು, ಚುನಾವಣೆಗೆ ಬಿಜೆಪಿಯೊಂದಿಗೆ ಅಮರಿಂದರ್ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅಮರಿಂದರ್ ಮೈತ್ರಿಗೆ ಒಪ್ಪಿದರೇ, ಕಾಂಗ್ರೆಸ್ ನನ್ನು ಸುಲಭವಾಗಿ ಮಣಿಸಬಹುದು ಎಂಬ ದೃಷ್ಟಿ ಬಿಜೆಪಿಗಿದೆ. ಮಾತ್ರವಲ್ಲದೇ, ಮೈತ್ರಿಗೆ ಒಪ್ಪಬೇಕಾದರೇ, ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು ಎಂದು ಅಮರಿಂದರ್ ಡಿಮ್ಯಾಂಡ್ ಮಾಡಿದ್ದರಂತೆ, ಅದೇ ಕಾರಣಕ್ಕೇ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದ್ದರೂ, ಬಿಜೆಪಿ ಅದೊಂದೇ ಉದ್ದೇಶಕ್ಕೆ ಮಾತ್ರ ಹಿಂಪಡೆದದ್ದಲ್ಲ ಎಂಬಂತೆ ಕಾಣಿಸುತ್ತಿದೆ. ಉತ್ತರ ಪ್ರದೇಶದಲ್ಲಿಯೂ ಕೂಡ ಕೆಲವು ಭಾಗಗಳಲ್ಲಿ ಸಿಖ್ ಮತದಾರರೇ ನಿರ್ಣಾಯಕ. ಉತ್ತರ ಪ್ರದೇಶದಲ್ಲಿಯೂ ಕೂಡ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಮಟ್ಟದ ವ್ಯತ್ಯಾಸ ಕಾಣಬಹುದು ಎಂಬ ಸಮೀಕ್ಷೆ ಹೊರಬಂದಿದೆ. ಮತ್ತು ತನ್ನ ಆಡಳಿತದ ವರ್ಚಸ್ಸಿಗೆ ಬಹುವಾಗಿ ಇದು ಹೊಡೆತ ಬೀಳುವ ಸಾಧ್ಯತೆ ಇದೆ ಎಂಬ ಕಾರಣದಿಂದಲೇ ಕೇಂದ್ರ ಈ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ ಎನ್ನುವುದು ಸ್ಪಷ್ಟ.   

ವಿರೋಧ ಎಲ್ಲಿಂದ ಆರಂಭ..?  : ಹಾಗೆ ಹೇಳುವುದಕ್ಕೆ ಹೋದರೇ, ರೈತರ ಉತ್ಪಾದನೆ ವ್ಯಾಪಾರ ಹಾಗೂ ವಾಣಿಜ್ಯ ಕಾಯ್ದೆ, ರೈತರ ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ ಗಳ ವಿರುದ್ಧ ೨೦೧೭ರಲ್ಲೇ ಹೋರಾಟದ ಕಿಚ್ಚು ಹೊತ್ತಿತ್ತು. ಹೌದು, ೨೦೧೭ ರಲ್ಲಿ ಕೇಂದ್ರ ಸರ್ಕಾರ ಮಾದರಿ ಕೃಷಿ ಕಾಯ್ದೆಗಳ ಬಿಡುಗಡೆ ಮಾಡಿತ್ತು. ಆದಾಗ್ಯೂ ಒಂದು ನಿರ್ದಿಷ್ಟ ಅವಧಿಯ ನಂತರ ಈ ಕಾಯ್ದೆಗಳಲ್ಲಿ ಸೂಚಿಸಲಾದ ಹಲವಾರು ಸುಧಾರಣೆಗಳನ್ನು ರಾಜ್ಯಗಳು ಜಾರಿಗೆ ತಂದಿಲ್ಲ ಎಂಬ ಕಾರಣದಿಂದಾಗಿ ಅನುಷ್ಠಾನದ ಕುರಿತಾಗಿ ಚರ್ಚೆ ಮಾಡುವ ಉದ್ದೇಶದಿಂದ ಏಳು ಮುಖ್ಯಮಂತ್ರಿಗಳನ್ನು ಒಳಗೊಂಡ ಸಮಿತಿಯೊಂದನ್ನು ಜುಲೈ ೨೦೧೯ ರಲ್ಲಿ ರಚಿಸಲಾಯಿತು. ಅದಾಗಲೇ ಸಣ್ಣ ಮಟ್ಟದಲ್ಲಿ ಪಂಜಾಬ್, ಉತ್ತರ ಪ್ರದೇಶ ಹಾಗೂ ಹರಿಯಾಣ ಸೇರಿ ಕೆಲವೆಡೆ ವಿರೋಧ ಎದ್ದಿತ್ತು. 

ಇನ್ನು, ಕೃಷಿ ಉತ್ಪನ್ನಗಳು, ಉತ್ಪನ್ನಗಳ ಮಾರಾಟ, ಸಂಗ್ರಹಣೆ, ಕೃಷಿ ಮಾರುಕಟ್ಟೆ ಹಾಗೂ ಗುತ್ತಿಗೆ ಕೃಷಿ ಸುಧಾರಣೆ ಸೇರಿ ಇತರೆ ವಿಷಯಗಳ ಬಗ್ಗೆ ಜೂನ್ ೨೦೨೦ ರ ಮೊದಲ ವಾರದಲ್ಲಿ ಮೂರು ಸುಗ್ರಿವಾಜ್ಞೆ ಅಥವಾ ತಾತ್ಕಾಲಿಕ ಕಾನೂನುಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಈ ತಾತ್ಕಾಲಿಕ ಕಾನೂನುಗಳನ್ನು ಮಸೂದೆಗಳಾಗಿ ಮಂಡಿಸಲಾಯಿತು ಹಾಗೂ ಸಪ್ಟೆಂಬರ್ ೧೫, ೧೮ರ ೨೦೨೦ ರಂದು ಕೇಂದ್ರ ಅಂಗೀಕರಿಸಿತ್ತು. ಸಪ್ಟೆಂಬರ್ ೨೨ ರೊಳಗೆ ರಾಜ್ಯಸಭೆಯು ಮೂರು ಮಸೂದೆಗಳನ್ನು ಅಂಗೀಕರಿಸಿತು. ಆದರೇ, ಪೂರ್ಣ ಮತವನ್ನು ಗಳಿಸುವುದಕ್ಕೆ ಕೇಂದ್ರಕ್ಕೆ ಸಾಧ್ಯವಾಗದೇ ಇರುವ ಕಾರಣದಿಂದಾಗಿ ಪೂರ್ಣ ಮತದಾನಕ್ಕಾಗಿ ವಿಪಕ್ಷಗಳ ಮನವಿಯನ್ನು ಕಡೆಗಣಿಸಿ ಧ್ವನಿಮತದ ಮೂಲಕ ಅಂಗೀಕರಿಸಿತು. ೨೦೨೦ ಸಪ್ಟೆಂಬರ್ ೨೮ ರಂದು ಮಸೂದೆಗಳಿಗೆ ರಾಷ್ಟ್ರಪತಿಗಳು ಸಹಿ ಹಾಕುವ ಮೂಲಕ ತಮ್ಮ ಒಪ್ಪಿಗೆಯನ್ನು ನೀಡಿದ್ದರು, ಈ ಕಾರಣದಿಂದಾಗಿ ಅವುಗಳನ್ನು ಕಾಯ್ದೆಗಳಾಗಿ ಪರಿವರ್ತಿಸಲಾಯಿತು. 

ಸಪ್ಟೆಂಬರ್ ೨೦೨೦ ರಲ್ಲಿ ಪಂಜಾಬ್, ಹರಿಯಾಣ , ರಾಜಸ್ಥಾನಗಳಲ್ಲಿ ಈ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಆರಂಭವಾಗಿತ್ತಾದರೂ, ಎರಡು ತಿಂಗಳುಗಳ ನಂತರ ತೀವ್ರ ಸ್ವರೂಪಕ್ಕೆ ಪಡೆದುಕೊಂಡು ದೇಶವ್ಯಾಪಿ ಈ ಪ್ರತಿಭಟನೆ ನಡೆಯಿತು. ಉಳಿದಂತೆ ಪ್ರತಿಭಟನೆ, ಪ್ರತಿಭಟನೆಯನ್ನು ಹಿಂಸಾಚಾರವೆಂದು ಬಿಂಬಿಸಿದ್ದು, ನೂರಾರು ಮಂದಿ ರೈತರ ಸಾವು, ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು, ದೇಶ ದ್ರೋಹಿಗಳೆಂದು ಕರೆದಿದ್ದು, ರೈತರ ಮೇಲೆ ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಿದ್ದು, ಪ್ರಾಯೋಜಿತ ಪ್ರತಿಭಟನೆ ಎಂದು ಬಿಂಬಿಸಿದ್ದು ಎಲ್ಲವೂ ಒಂದು ದೊಡ್ಡ ಇತಿಹಾಸ. ಕಳೆದೊಂದು ವರ್ಷದಿಂದ ನಡೆಯುತ್ತಿರುವ ಈ ಪ್ರತಿಭಟನೆಗೆ ಕಡೆಗೂ ರಾಷ್ಟ್ರಪತಿ ಅಂಕಿತ ಬಿದ್ದ ಮೇಲೂ ವಾಪಸ್ ಪಡೆದುಕೊಂಡು ರೈತರ ವಿರುದ್ಧ ತನ್ನ ಸೋಲನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಒಪ್ಪಿಕೊಂಡಿದೆ.  

ಇನ್ನು, ಕೃಷಿ ಕಾಯ್ದೆಯನ್ನು ವಿಪಕ್ಷಗಳು ಚುನಾವಣಾ ಅಸ್ತ್ರ ವನ್ನಾಗಿ ಬಳಸುವುದನ್ನು ತಪ್ಪಿಸುವುದಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಆದರೇ, ಪ್ರತಿಪಕ್ಷಗಳಿಗೆ ಇದೊಂದೇ ಅಸ್ತ್ರ ಅಲ್ಲ. ಆದರೇ, ಈ ವಿವಾದಿತ ಕೃಷಿ ಕಾಯ್ದೆಗಳು ದೊಡ್ಡ ಅಸ್ತ್ರವಾಗಿತ್ತು ಎನ್ನುವುದು ಸತ್ಯ. ಒಟ್ಟಿನಲ್ಲಿ, ಕೇಂದ್ರ ಸರ್ಕಾರ ಈ ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಲಾಗುತ್ತದೆ ಎಂದು ಹೇಳಿದ್ದು, ಪೂರ್ಣವಾಗಿ ಹಿಂಪಡೆಯುತ್ತದೆಯೇ ಅಥವಾ ತಿದ್ದುಪಡಿಯನ್ನು ಮಾತ್ರ ವಾಪಾಸ್ ಪಡೆಯುತ್ತದೆಯೇ ಎನ್ನುವುದರ ಬಗ್ಗೆ ಕುತೂಹಲ ಸೃಷ್ಟಿಸಿದೆ. 

-ಶ್ರೀರಾಜ್ ವಕ್ವಾಡಿ  


Tuesday, November 9, 2021

ಮತ್ತೊಂದು ಹೊಸ ಬದಲಾವಣೆಯತ್ತ ರಾಜ್ಯ ಬಿಜೆಪಿ..!?


 

ಹಾನಗಲ್ ಸೋಲು | ರಾಜ್ಯಾಧ್ಯಕ್ಷ ಸ್ಥಾನದಿಂದ ಕಟೀಲ್ ಔಟ್..? | ಬಿಎಸ್.ವೈ ಪುತ್ರನಿಗೆ ಲಾಭ..?

“ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ” ಎಂಬ ಮಾತು ರಾಜ್ಯ ಬಿಜೆಪಿಯಲ್ಲಂತೂ ಒಂದು ರೀತಿಯಲ್ಲಿ ಅದು ಸಂಪ್ರದಾಯದ ಮಾತಿದ್ದಂತೆ. ನಾಯಕತ್ವದ ಬದಲಾವಣೆಯೇ ಇಲ್ಲ ಎಂದು ಹೇಳುತ್ತಿರುವಾಗಲೇ ರಾಜ್ಯ ಬಿಜೆಪಿಯಲ್ಲಾದ ಬದಲಾವಣೆಗಳು ಒಂದು ದೊಡ್ಡ ಇತಿಹಾಸವೇ ಸರಿ. “ನಾಯಕತ್ವ”ದ ವಿಚಾರದಲ್ಲಿ ಅತ್ಯಂತ ಗೊಂದಲ ಹಾಗೂ ವಿವಾದ ಸೃಷ್ಟಿ ಮಾಡಿಕೊಂಡ ರಾಜಕೀಯ ಪಕ್ಷಗಳ ಸಾಲಿನಲ್ಲಿ ಬಿಜೆಪಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಈಗ ಮತ್ತೆ ರಾಜ್ಯ ಬಿಜೆಪಿಯ ಪಡಸಾಲೆಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯ ವಿಚಾರ ನಿಧಾನಕ್ಕೆ ಮುನ್ನೆಲೆಗೆ ಬಂದಿದೆ. 

ಹೌದು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಆಡಳಿತದ ಸಂದರ್ಭದಲ್ಲಿ ಹೈಕಮಾಂಡ್ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನು ನಳೀನ್ ಕುಮಾರ್ ಕಟೀಲ್ ಅವರ ಹೆಗಲಿಗೆ ಹೊರಸಿದ್ದಾಗಲೇ ಯಡಿಯೂರಪ್ಪ ಒಳಗೊಳಗೆ ಮುನಿಸಿಕೊಂಡಿದ್ದ ವಿಚಾರ ನಿಮಗೆ ಗೊತ್ತಿರದೇ ಇಲ್ಲ ಬಿಡಿ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಮಗ ವಿಜಯೇಂದ್ರ ಅವರ ಪಾಲಿಗೆ ದೊರಕಿಸಿ ಕೊಡಬೇಕು ಎಂಬ ಬಯಕೆ ಮಾನ್ಯ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರಲ್ಲಿತ್ತು, ಆದರೇ, ದುರಾದೃಷ್ಟವೋ ಎಂಬ0ತೆ ರಾಜಕೀಯದಲ್ಲಿ ಯುಡಿಯೂರಪ್ಪನವರ ಕನಸುಗಳೆಲ್ಲಾ ಅಲ್ಲಿಂದಾದಿಯಾಗಿ ಒಂದೊ0ದೇ ವಿಫಲವಾಗುತ್ತಲೇ ಬಂತು. ಅಷ್ಟಾಗಿಯೂ ವಿಜಯೇಂದ್ರ ಯಡಿಯೂರಪ್ಪ ರಾಜ್ಯದಲ್ಲಿ ಸೂಪರ್ ಸಿಎಂ ಎಂಬ ಹಾಗೇ ಕಾರ್ಯ ನಿರ್ವಹಿಸುತ್ತಿದ್ದರ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಒಳ ಬೇಗುದಿ ಆರಂಭವಾಗಿತ್ತು. ಯಡಿಯೂರಪ್ಪರಿಗಿಂತ ವಿಜಯೇಂದ್ರ ಅವರದ್ದೇ ಪ್ರಭಾವ ಜಾಸ್ತಿಯಿತ್ತು ಎಂಬ ವಿರೋಧದ ಮಾತು ರಾಜ್ಯ ಬಿಜೆಪಿಯಲ್ಲೇ ಕೇಳಿ ಬಂದಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರ. ಆದರೂ, ಯಡಿಯೂರಪ್ಪ ತಮ್ಮ ಮಗನನ್ನು ಹೇಗಾದರೂ ಮಾಡಿ ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ವಿಪರೀತ ಪ್ರಯತ್ನ ಪಟ್ಟಿದ್ದರು.  ಮಾಜಿ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಸಿ. ಎಂ ಉದಾಸಿ ನಿಧನದ ಕಾರಣದಿಂದಾಗಿ ತೆರವುಗೊಂಡಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರದ ಟಿಕೇಟ್ ನನ್ನು ತಮ್ಮ ಮಗನಿಗೆ ಕೊಡಿಸಬೇಕು ಎಂಬ ಪ್ರಯತ್ನವನ್ನು ಬಿಎಸ್ ವೈ ಪಟ್ಟಿದ್ದರೂ, ಅದು ಕೂಡ ಫಲಿಸಲಿಲ್ಲ. ವಿಜಯೇಂದ್ರ ಒದ್ದಾಡಿದ್ದರೂ ನಿರೀಕ್ಷೆ ಹುಸಿಯಾಯಿತು. ಹಾನಗಲ್ ವಿಧಾನಸಭಾ ಕ್ಷೇತ್ರದ ಮೇಲೆ ವಿಜಯೇಂದ್ರ ಕಣ್ಣಿಟ್ಟಿದ್ದರಾದರೂ ಎಲ್ಲವೂ ಅದಲು ಬದಲಾಯಿತು. ಮಂತ್ರಿ ಪಟ್ಟದ ಕನಸು ಭಗ್ನವಾಯಿತು. ಈಗ ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಸ್ಥಾನ ಕಳೆದುಕೊಂಡ ನಂತರವ0ತೂ ರಾಜ್ಯಾಧ್ಯಕ್ಷ ಬದಲಾವಣೆಯ ಚರ್ಚೆ ಹುಟ್ಟಿದ್ದು, ಆ ಸ್ಥಾನಕ್ಕೆ ವಿಜಯೇಂದ್ರ ಕಣ್ಣಿಟ್ಟಿದ್ದಾರೆ, ಮಾತ್ರವಲ್ಲದೇ, ಅಧಿಕಾರದಲ್ಲಿ ಇಲ್ಲದಿದ್ದರೂ ಯಡಿಯೂರಪ್ಪ ತಮ್ಮ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುವುದಕ್ಕೆ ಪ್ರಭಾವ ಬೀರುತ್ತಿದ್ದಾರೆ ಎಂಬ ಗುಸುಗುಸು ಮಾತು ಕೇಳಿ ಬರುತ್ತಿದೆ. 

ಬಿಜೆಪಿ ಹೈಕಮಾಂಡ್ ಗೆ ಸಮುದಾಯವೇ ಸಮಸ್ಯೆ : ರಾಜ್ಯ ಬಿಜೆಪಿಯ ಜನಕ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು ಕೂಡ ಹೌದು ಯಡಿಯೂರಪ್ಪ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ಸ್ವಾಮಿಜಿಗಳು ಯಡಿಯೂರಪ್ಪ ಪರವಾಗಿ ವಹಿಸಿಕೊಂಡು ಬೀದಿಗಿಳಿದು ಮುಖ್ಯಮಂತ್ರಿ ಬದಲಾವಣೆ ಸಲ್ಲ ಎಂದು ಪ್ರಭಾವ ತೋರಿಸಿದ್ದೆಲ್ಲಾ ಒಂದು ಹಂತದಲ್ಲಿ ಬಿಜೆಪಿ ಹೈಕಮಾಂಡ್ ಗೂ ಕೂಡ ಬಿಸಿ ಮುಟ್ಟಿಸಿತ್ತು. ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದರೇ ಬಿಜೆಪಿ ಲಿಂಗಾಯತ ಸಮುದಾಯಕ್ಕೆ ಮಣಿಯದೇ ಇರುವುದಕ್ಕೆ ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಯಡಿಯೂರಪ್ಪ ತಮ್ಮ ಸಮುದಾಯವನ್ನು ಬೆಳೆಸಿದ ನಾಯಕ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಮದೂಗುವ ಮತ್ತು ಪ್ರಭಾವ ಹೊಂದಿರುವ ಇನ್ನೊಬ್ಬ ಲಿಂಗಾಯತ ನಾಯಕ ರಾಜ್ಯದಲ್ಲಿ ಇಲ್ಲ ಎಂದರೇ ತಪ್ಪಿಲ್ಲ. ಹಾಗಾಗಿ ಈ ಸಮುದಾಯದ ವಿಚಾರ ಬಿಜೆಪಿ ಹೈಕಮಾಂಡ್ ಗೆ ಒಂದು ರೀತಿಯಲ್ಲಿ ಮುಗಿಯದ ಸಮಸ್ಯೆಯಂತಾಗಿದೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರನ್ನು ಇಳಿಸಿದ್ದು ಲಿಂಗಾಯತ ಸಮುದಾಯಕ್ಕೆ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಯಡಿಯೂರಪ್ಪರ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಅದೇ ಸಮುದಾಯದ ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಹೈಕಮಾಂಡ್ ನೇಮಕ ಮಾಡಿದೆಯಾದರೂ, ಲಿಂಗಾಯತ ಸಮುದಾಯಕ್ಕೆ ತೃಪ್ತಿಯಿಲ್ಲ. ಆ ರೀತಿಯಲ್ಲಿ ಲಿಂಗಾಯತ ಸಮುದಾಯವನ್ನು ಯಡಿಯೂರಪ್ಪ ಓಲೈಸಿಕೊಂಡಿದ್ದಾರೆ. ಯಡಿಯೂರಪ್ಪ ಮಾತಿಗೆ ಇಲ್ಲ ಎಂದು ಲಿಂಗಾಯತ ಸಮುದಾಯ ಹೇಳುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ವಯಸ್ಸಿನ ಕಾರಣಕ್ಕೆ ಮತ್ತೆ ಯಡಿಯೂರಪ್ಪ ಅವರಿಗೆ ಅಧಿಕಾರ ದೊರಕದಿದ್ದರೂ, ಅವರ ಮಗನಿಗೆ ಸ್ಥಾನ ಸಿಗಬೇಕು ಎಂಬ ದೃಷ್ಟಿಯಿಂದ ಸಮುದಾಯದ ಬೆಂಬಲ ಪಡೆಯದೇ ಇರುವುದಿಲ್ಲ. ಆ ಎಲ್ಲಾ ಕಾರ್ಯಗಳಿಗೆ ಈಗಾಗಲೇ ನಾಂದಿ ಸಿಕ್ಕಿದೆ ಎಂಬ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಮತ್ತು ತಂದೆಯವರ ಕಾಲವಾದ ಮೇಲೂ ಲಿಂಗಾಯತ ಸಮುದಾಯದ ಓಲೈಕೆ ರಾಜಕಾರಣವನ್ನು ಪುತ್ರ ವಿಜಯೇಂದ್ರ ಯಡಿಯೂರಪ್ಪ ಮುಂದುವರಿಸಿಕೊ0ಡು ಹೋಗುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಿ ಬಿಜೆಪಿಗೆ ಕರ್ನಾಟಕದಲ್ಲಿ ಯಾವುದೇ ವಿಚಾರದಲ್ಲಿ ಮುನ್ನಡೆಯುವುದಕ್ಕೆ ಸದ್ಯಕ್ಕಂತೂ ಸಾಧ್ಯವಿಲ್ಲ ಎಂದು ಕಾಣಿಸುತ್ತಿದೆ.    

ಹಾನಗಲ್ ಸೋಲು : ವಿಜಯೇಂದ್ರಗೆ ಲಾಭ ..?: ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಕಂಡ ಸೋಲಿಗೆ ರಾಜ್ಯದ ಬಿಜೆಪಿ ನಾಯಕತ್ವದ ಬಗ್ಗೆ ಹೈಕಮಾಂಡ್ ತುಸು ಮುನಿಸಿಕೊಂಡ0ತೆ ಕಾಣಿಸುತ್ತಿದೆ. ಮಧ್ಯ ಪ್ರದೇಶ, ತೆಲಂಗಾಣ, ಅಸ್ಸಾಂ ಇನ್ನಿತರ ಕಡೆಗಳಲ್ಲಿನ ಚುನಾವಣೆಗಳಲ್ಲಿನ ಗೆಲುವಿಗೆ ಕೇಂದ್ರ ಶುಭಾಶಯ ಹೇಳಿದೆ. ಆದರೇ, ಕರ್ನಾಟಕದ ವಿಚಾರಕ್ಕೆ ಶುಭಾಶಯಗಳು ಇಲ್ಲವೇ ಇಲ್ಲ. ಇದು ಕರ್ನಾಟಕದ ರಾಜ್ಯ ಬಿಜೆಪಿಯ ಬಗ್ಗೆ ಅಸಮಾದಾನವನ್ನು ಸೂಚಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾನಗಲ್ ವಿಧಾನಸಭಾ ಉಪ ಚುನಾವಣೆಯಲ್ಲಾದ ಸೋಲಿಗೆ ಮಾಧ್ಯಮಗಳೆದುರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಸಾಮೂಹಿಕ ನಾಯಕತ್ವ” ಇಲ್ಲಿದ್ದಿದ್ದು ಎಂದು ಹೇಳಿ ಜಾರಿಕೊಂಡರೂ, ಹೈಕಮಾಂಡ್ ಕೇಳಿದ ಪ್ರಶ್ನೆಗೆ ಸಿಎಂ ಹೈಕಮಾಂಡ್ ಗೆ ಸಲ್ಲಿಸಿರುವ ಉಪ ಚುನಾವಣೆಯ ಸಂಪೂರ್ಣ ಕಾರ್ಯವೈಖರಿಯ ವರದಿ ಕೆಲವರ ಪಾಲಿಗೆ ಮುಳುವಾಗಲಿದೆಯೇ ಎಂಬ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ. ಹಾನಗಲ್ ವಿಧಾನಸಭಾ ಕ್ಷೇತ್ರ ಹೇಳಿಕೇಳಿ ಪಂಚಮಸಾಲಿ ಸಮುದಾಯದ ಪ್ರಾಬಲ್ಯವಿರುವ ಪ್ರದೇಶ. ಸುಮಾರು ೬೦,೦೦೦ಕ್ಕೂ ಅಧಿಕ ಮತದಾರರು ಪಂಚಮಸಾಲಿ ಸಮುದಾಯದವರೇ ಆಗಿದ್ದಾರೆ. ಆದರೇ, ರಾಜಕೀಯದ ಸಹಜ ಸಮುದಾಯದ ಓಲೈಕೆಗೆ ರಾಜ್ಯದ ಪ್ರಮುಖ ಆ ಸಮುದಾಯದ ನಾಯಕರೇ ಹಾನಗಲ್ ವಿಧಾನಸಭಾ ಉಪ ಚುನಾವಣೆಗೆ ಸಂಬ0ಧಿಸಿದ0ತೆ ಮೌನವಾಗಿರುವುದೇ ಸೋಲಿಗೆ ಕಾರಣವಾಗಿದೆಯಾ..? ಎಂಬ ಮತ್ತೊಂದು ಪ್ರಶ್ನೆಯನ್ನು ಸೃಷ್ಟಿಸಿದೆ. ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದ್ದ ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ, ಜಗದೀಶ್ ಶೆಟ್ಟರ್ ಚುನಾವಣೆಯ ಪ್ರಚಾರಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಬಿಡಿಸಿಕೊಳ್ಳಲಾಗದ ಚಕ್ರವ್ಯೂಹದೊಳಗೆ ಸಿಲುಕಿಸಿದ ಹಾಗಾಯ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇನ್ನು, ಹಾನಗಲ್ ವಿಚಾರಕ್ಕೆ ಸಂಬ0ಧಿಸಿದ0ತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಂದ ಯಾವುದೇ ಲಾಭ ಆಗಿಲ್ಲ ಎಂಬ ಅತೃಪ್ತಿಯ ಮಾತುಗಳು ಕಟೀಲ್ ವಿರುದ್ಧ ಈಗ ಕೇಳಿ ಬರುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಬಗ್ಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತಾಡಿದ್ದಾರೆ ಎಂಬ ಆಡಿಯೋ ಗೂ ಹಾಗೂ ಈ ಹಾನಗಲ್ ವಿಚಾರಕ್ಕೆ ಎಲ್ಲೋ ಒಂದು ಕಡೆಯಲ್ಲಿ ಲಿಂಕ್ ಆದ ಹಾಗಿದೆ ಎಂದು ಮೇಲ್ನೋಟಕ್ಕೆ ಕಾಣಿಸಿಕೊಳ್ಳುತ್ತಿದೆ. ಈ ದೂರು ಯಡಿಯೂರಪ್ಪ ಅವರ ಪರ ಬಣದಿಂದಲೇ ಕೇಳಿಬರುತ್ತಿರುವುದರಿಂದ ಅಧಿಕಾರದಿಂದ ಹೊರಗೆ ಇದ್ದರೂ ಬಿಎಸ್ ವೈ ಪ್ರಭಾವ ಇನ್ನೂ ಬಿಜೆಪಿಯಲ್ಲಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಇತ್ತ, ಈ ನಡುವೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಯಡಿಯೂರಪ್ಪ ಅವರ ಋಣ ಬೊಮ್ಮಾಯಿ ಅವರಿಗೆ ಇರುವುದರಿಂದ ಯಡಿಯೂರಪ್ಪ ವಿರುದ್ಧವಾಗಿಯೂ ಬೊಮ್ಮಾಯಿ ನಡೆದುಕೊಳ್ಳುವ ಹಾಗಿಲ್ಲ. ಅತ್ತ, ರಾಜ್ಯಾಧ್ಯಕ್ಷರ ವಿರುದ್ಧದ ಧ್ವನಿಯನ್ನೂ ಹೊರಹಾಕುವಂತಿಲ್ಲ. ಈ ಎಲ್ಲಾ ಮೈನಸ್ ಪಾಯಿಂಟ್ ಗಳನ್ನು ವಿಜಯೇಂದ್ರ ಸಾಫ್ಟ್ ಆಗಿ ಲಾಭ ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂಬ ಮಾತು ಬಿಜೆಪಿ ಪಡಸಾಲೆಯಲ್ಲಿಯೇ ಕೇಳಿಬರುತ್ತಿದೆ.

ಕಟೀಲ್ ಗೆ ಆಡಿಯೋ ತಂದ ಆಪತ್ತು..?! : ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು  ಮಾತಾಡಿದ್ದು ಎಂದು ಹೇಳಲಾಗಿದ್ದ ಆಡಿಯೋ ವೈರಲ್ ಆದದ್ದು, ರಾಜ್ಯ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತಂದಿದ್ದ0ತೂ ಸುಳ್ಳಲ್ಲ. ಆ ಸಮಸ್ಯೆಯನ್ನು ಹೈಕಮಾಂಡ್ ಗೆ ಬಹಳ ಸಾಫ್ಟ್ ಆಗಿಯೇ ನಿಭಾಯಿಸಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಅನಿವಾರ್ಯತೆಯನ್ನು ತಂದೊಡ್ಡಿತು. ಆ ನಂತರ ರಾಜ್ಯದಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಅವರ ಕಾರ್ಯಚಟುವಟಿಕೆಗಳು ಹಾಗೂ ಹಾನಗಲ್ ಉಪ ಚುನಾವಣೆಯ ವಿಚಾರ ಎಲ್ಲವೂ ಸೇರಿ ಹೈಕಮಾಂಡ್ ಗೂ ಕೂಡ ಕಟೀಲ್ ಮೇಲೆ ಅಸಮಾಧಾನ ಇರುವುದು ನೇರವಾಗಿ ಕಾಣಿಸುತ್ತಿದೆ. ಇದು ಬಹುಶಃ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಸ್ಥಾನಕ್ಕೆ ಆಪತ್ತು ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ. 

ಇನ್ನು, ರಾಜ್ಯಾಧ್ಯಕ್ಷರ ಬದಲಾವಣೆಯ ವಿಚಾರದ ಬಗ್ಗೆ ಹೈಕಮಾಂಡ್ ಕೂಡ ಪ್ಲ್ಯಾನಿಂಗ್ ನಲ್ಲಿದ್ದು, ರಾಜ್ಯದ ವೈಬ್ರೆಂಟ್ ನಾಯಕನೋರ್ವನಿಗೆ ರಾಜ್ಯ ಬಿಜೆಪಿಯ ಹೊಣೆಗಾರಿಕೆಯನ್ನು ನೀಡಬೇಕು ಎಂಬ ಅಂದಾಜಿನಲ್ಲಿದೆ. ಏನೇ ಆದರೂ, ಲಿಂಗಾಯತ ಸಮುದಾಯವನ್ನು ತೊರೆದು ಹೈಕಮಾಂಡ್ ಮುಂದೆ ಹೋಗುವ ಹಾಗೆ ಖಂಡಿತ ಸಾಧ್ಯವಿಲ್ಲ. ಲಿಂಗಾಯತ ಸಮುದಾಯದೊಂದಿಗೆ ಹಿಂದುಳಿದ ಸಮುದಾಯಗಳ ಮತದಾರರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಒಬ್ಬ ಪ್ರಭಾವಿ ನಾಯಕನಿಗೆ ರಾಜ್ಯಾಧ್ಯಕ್ಷ ಹೊಣೆಗಾರಿಕೆಯನ್ನು ಹೈಕಮಾಂಡ್ ಹೊರಿಸಬೇಕಾಗಿದೆ. ಇನ್ನು, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್ ವೈ ಅವರನ್ನು ಹೊರತಾಗಿ ಚುನಾವಣೆಯನ್ನು ಎದುರಿಸುವುದಕ್ಕೆ ಸದ್ಯಕ್ಕಂತೂ ಬಿಜೆಪಿಗೆ ಸಾಧ್ಯವಿಲ್ಲ ಎಂಬುವುದು ಹೈಕಮಾಂಡ್ ಗೆ ಚೆನ್ನಾಗಿ ಗೊತ್ತಿದೆ. ರಾಜ್ಯದಲ್ಲಿ ಯಾವುದೇ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಅಸಮಾಧಾನ ಉಂಟಾಗುವ ಯಾವುದೇ ಬೆಳವಣಿಗೆ ಆಗದಂತೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎನ್ನುವುದು ಮುಖ್ಯಮಂತ್ರಿ ಬದಲಾವಣೆಯ ಸಂದರ್ಭದಲ್ಲೇ ಗೊತ್ತಾಗಿದೆ. ಇನ್ನು ಮುಂದೆಯೂ, ಯಡಿಯೂರಪ್ಪ ಅವರ ಕಾಲದವರೆಗೂ ಕೂಡ ಯಡಿಯೂರಪ್ಪರನ್ನು ನಿರ್ಲಕ್ಷಿಸಿ ಹೋಗುವುದಕ್ಕೆ ಸಾಧ್ಯವಿಲ್ಲ. ಶೀಘ್ರದಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂಬ ಮಾತುಗಳು ಈಗ ಮುನ್ನೆಲೆಯಲ್ಲಿದ್ದು, ಹೊಸ ರಾಜ್ಯಾಧ್ಯಕ್ಷರನ್ನು ಹೈಕಮಾಂಡ್ ನೇಮಿಸಿದರೇ, ಅದು ಕೂಡ ಯಡಿಯೂರಪ್ಪರಿಗೆ ಸಮಾಧಾನ ತರುವ ಹಾಗೆಯೇ ಇರಲಿದೆ ಎಂಬ ವಿಶ್ಲೇಷಣೆ ಮಾಡಬಹುದಾಗಿದೆ. ಎನ್ನುವಲ್ಲಿಗೆ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಎಸ್ ವೈ ಪುತ್ರ ವಿಜಯೇಂದ್ರ ಯಡಿಯೂರಪ್ಪ ಪ್ರಯತ್ನದಲ್ಲಿದ್ದಾರೆ ಎನ್ನುವುದಂತೂ ಸತ್ಯ. 

ಒಟ್ಟಿನಲ್ಲಿ, “ನಾಯಕತ್ವದ” ಅಸಮಾಧಾನ ಇನ್ನೂ ರಾಜ್ಯ ಬಿಜೆಪಿಯಲ್ಲಿದ್ದು, ರಾಜ್ಯದ ಬಿಜೆಪಿಯ ಹೊಸ ಸಾರಥಿ ಯಾರಾಗ್ತಾರೆ..? ಅವರ ತಂಡ ಹೇಗೆ ರಾಜ್ಯದಲ್ಲಿ ಬಿಜೆಪಿಗೆ ಲಾಭ ತಂದುಕೊಡಲಿದೆ ಎಂಬುವುದರ ಬಗ್ಗೆ ಸದ್ಯದ ಕುತೂಹಲವಾಗಿದೆ. 

-ಶ್ರೀರಾಜ್ ವಕ್ವಾಡಿ        


Saturday, November 6, 2021

ಸಮಾಜದ ರಾಕ್ಷಸೀಯತೆಯನ್ನು ತೆರೆದಿಟ್ಟ “ಜೈ ಭೀಮ್”



ಸಮಾಜವನ್ನು ಇಂದಿಗೂ ಅತಂತ್ಯ ಭೀಕರವಾಗಿ ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಶೋಷಿತರ, ಸಮಾಜದ ಅತ್ಯಂತ ಕೆಳ ಅಂಚಿನಲ್ಲಿರುವವರ ಧ್ವನಿ ಅಡಗಿಸಿ ಮೆರೆದಾಡುವ ಉಳ್ಳವರ, ಅಧಿಕಾರಿಗಳ ದರ್ಪವೂ ಒಂದು. ಮಾತ್ರವಲ್ಲದೇ, ಅದು ಸಮಾಜಕ್ಕೆ ಘಾತುಕವೂ ಹೌದು. ನಾವೆಲ್ಲರೂ ಇಂದಿಗೂ ಆಧುನೀಕತೆ, ಶತಮಾನಗಳಿಂದ ಬಳುವಳಿಯಂತೆ ಬಂದ ಅಭಿವೃದ್ಧಿ, ಸ್ವಾತಂತ್ರದ ಸ್ವೀಕಾರದ ದೊಡ್ಡ ಭ್ರಮೆಯಲ್ಲಿಯೇ ಇದ್ದೇವೆ ಅಂತನ್ನಿಸುತ್ತಿದೆ. ಸಮಾಜಕ್ಕೆ ಎರಡು ಮುಖ ಎನ್ನುವುದು ಮತ್ತೆ ಮತ್ತೆ ಸಾಭೀತಾಗುತ್ತಿದೆ. ಒಂದು ಅಭಿವೃದ್ಧಿಯಲ್ಲದ “ಅಭಿವೃದ್ಧಿ ”, ಇನ್ನೊಂದು ಅಭಿವೃದ್ಧಿಯಾಗಲೇಬೇಕಾಗಿರುವವುಗಳ ವಿನಾಶ. ಅಧಿಕಾರದ ಧೋರಣೆ, ದುಃಸ್ಥಿತಿ, ಅಸ್ವಸ್ಥತೆ, ವ್ಯವಸ್ಥೆಯ ಭಂಜನೆ, ವಾಸ್ತವದ ರಾಕ್ಷಸೀಯತೆ, ಅವ್ಯಕ್ತ ಆತಂಕ, ನ್ಯಾಯ, ಅನ್ಯಾಯ, ನೈರಾಶ್ಯದ ನಡುವಿನ ಆಶಾವಾದ, ನೆತ್ತರು, ಮೌನ, ಸಾವು, ಗದ್ಗದಿತ ಧ್ವನಿಗಳ ದೃಶ್ಯ ರೂಪವೇ “ಜೈ ಭೀಮ್”.

ಶೋಷಿತ ಸಮುದಾಯದ ಕಣ್ಣೀರಿನ ಕಥೆ ಒಂದೆಡೆಯಾದರೇ, ಆ ನೋವಿನ ಕಥೆಗೆ ಧ್ವನಿಯಾಗುವ ನ್ಯಾಯವಾದಿ ಚಂದ್ರುವಿನ ವೃತ್ತಿಪರತೆಯ ಜೊತೆಜೊತೆಗೆ ಸಾಗುವ ಸಿನೆಮಾ ನೋಡುಗನನ್ನು ಗಂಭೀರ ಚಿಂತನೆಗೆ ದೂಡುತ್ತದೆ. ಪೊಲೀಸರ ಉಗ್ರ ಕಪಿಮುಷ್ಟಿಯೊಳಗೆ ಸಿಲುಕಿ ನರಳುವ ಇರುಳರು ಎಂಬ ಬುಡಕಟ್ಟು ಜನಾಂಗದ ನತದೃಷ್ಟ ಬದುಕಿನ ಸಂಕಷ್ಟ ಇತಿಹಾಸಕ್ಕೆ ಈ ಸಿನೆಮಾ ಕನ್ನಡಿ ಹಿಡಿದಿದೆ. ಇಂತಹ ನತದೃಷ್ಟ ಸಮುದಾಯಗಳ ಧ್ವನಿಗಳು ಉಸಿರಾಡುವ ಬಿಸಿ ಗಾಳಿಯಿಂದಲೇ ಈ ದೇಶ ಇಂದು ಅಭಿವೃದ್ಧಿಯ ಜಪ-ನೆಪದಲ್ಲಿಯೇ ಬದುಕುತ್ತಿದೆ ಎನ್ನುವುದು ದೊಡ್ಡ ದುರಂತವೇ ಸರಿ. 

ಬುಡಕಟ್ಟು ಜನಾಂಗಗಳ ಅಥವಾ ಇಂತಹ ದಮನಿತ ಸಮುದಾಯಗಳ ನಿಟ್ಟುಸಿರಿನ ಕನಸುಗಳನ್ನು ಹೊಸಕಿ ಹಾಕುವ ಉಗ್ರ ಸ್ವರೂಪವೇ ಈ ಸೋ ಕಾಲ್ಡ್ ನಾಗರೀಕತೆಯೋ ಏನೋ ಎಂಬಷ್ಟರ ಮಟ್ಟಿಗೆ ಅಸಹ್ಯ ಹುಟ್ಟಿಸುತ್ತಿದೆ. ದಮನಿತ ವ್ಯಕ್ತಿಯೋರ್ವನ ಅಮಾನುಷ ಹತ್ಯೆಯ ಪ್ರಕರಣದೊಂದಿಗೆ ಸಾಗುವ ನ್ಯಾಯವಾದಿ ಚಂದ್ರುವಿನ ಇಂಟ್ರೆಸ್ಟಿಂಗ್ ಹೋರಾಟ, ತನಿಖೆ, ಸತ್ಯವನ್ನು ಸುಳ್ಳು ಮಾಡುವ, ಸುಳ್ಳನ್ನು ಸತ್ಯ ಮಾಡುವ ಹಣ, ಅಧಿಕಾರ, ದರ್ಪಗಳ ನಡುವೆ ಗೆಲ್ಲುವ ಕಥೆ ನಿಜಕ್ಕೂ ರೋಮಾಂಚನಕಾರಿಯಾಗಿದೆ.

ಸಮಾಜಕ್ಕೆ ಇದು ನಿನ್ನದೇ ಪ್ರತಿ ರೂಪ ಎಂದು ತೋರಿಸುವ ಹಾಗೆ ಚಿತ್ರ ಮೂಡಿ ಬಂದಿದೆ. ಸಿನೆಮಾ ತಂಡ ಕಥೆಯ ಒಂದಿಷ್ಟು ದೃಶ್ಯಗಳನ್ನು ತುಸು ಹೆಚ್ಚೇ ವೈಭವೀಕರಿಸಿರಬಹುದು ಎಂದು ತಿಳಿದುಕೊಂಡರೂ ಕೂಡ ಸಮಾಜ ಇಂದು ಅಂತಹ ತಗ್ಗಿದ(ತಗ್ಗಿಸಿದ) ಧ್ವನಿಗಳ ಶೋಷಣೆಯಲ್ಲಿಯೇ ನಿರತವಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಸಂವಿಧಾನ, ಹಕ್ಕು, ಅಭಿವ್ಯಕ್ತಿ, ನ್ಯಾಯ ಇವೆಲ್ಲವೂ ಸತ್ತಿವೆಯೇ, ಬದುಕಿವೆಯೇ ಎಂಬ ಗಂಭೀರ ಪ್ರಶ್ನೆಯೊಂದನ್ನು ಈ ಸಿನೆಮಾ ಪ್ರತಿಯೊಬ್ಬ ನೋಡುಗನ ಮನಸ್ಸಿಗೆ ಒಮ್ಮೆ ಕೇಳಿ ಬೀಡುತ್ತದೆ. 

ಟೀಕೆಗೆ ಬಹುಶಃ ಈ ಸಿನೆಮಾ ಅವಕಾಶ ಮಾಡಿಕೊಟ್ಟಿಲ್ಲ. ಆದರೇ, ಈ ಸಿನೆಮಾ ಆಗಲೇ ಬೇಕಾದ ಒಂದು ಆತ್ಮಾವಲೋಕನಕ್ಕೆ ದೊಡ್ಡ ಅವಕಾಶವನ್ನು ಮಾಡಿಕೊಟ್ಟಿದೆ. ಸಿನೆಮಾದ ಎರಡನೇ ಭಾಗವಂತೂ ಒಂದು ದೀರ್ಘ ಮೌನ ಹಾಗೂ ಸೂಕ್ಷ್ಮ ಸಂವೇದನೆಗೆ ಒಳಪಡಿಸುತ್ತದೆ ಎಂದರೇ ತಪ್ಪಿಲ್ಲ. ಸಮಾಜದ ಕೆಳಸ್ತರದಲ್ಲಿರುವ ಸಮುದಾಯಗಳಿಗೆ ನ್ಯಾಯ ದೊರಕಿಸಿ ಕೊಟ್ಟಿತೇ..? ಎಂಬ ನಮ್ಮ ನಿಮ್ಮೆಲ್ಲರ ಸಹಜ ಪ್ರಶ್ನೆಗೆ ಉತ್ತರ.. ಖಂಡಿತ ಇಲ್ಲ. ಆದರೇ, ಅಂತಹ ಅದೆಷ್ಟೋ ಸಮುದಾಯಗಳ ಆರ್ದ್ರ ಸ್ಥಿತಿಯ ಬಗ್ಗೆ ಮತ್ತೆ ಸಮಾಜಕ್ಕೆ ನೆನಪಿಸಿಕೊಟ್ಟಿದ್ದಂತೂ ನಿಜ. ಸಮಾಜ ತನ್ನನ್ನು ತಾನು ಗಂಭೀರವಾಗಿ ಪ್ರಶ್ನಿಸಿಕೊಳ್ಳುವಂತೆ ಮಾಡಿದ್ದಂತೂ ಸತ್ಯ. 

ಸಿನೆಮಾ ತಮಿಳಿನ ಮೂಲವಾದರೂ ಹಾಗನ್ನಿಸುವುದಿಲ್ಲ. ಕಥೆಯ ನಿರೂಪಣಾ ಶೈಲಿ ತುಂಬಾ ಇಷ್ಟವಾಗುವುದರಲ್ಲಿ ಎರಡನೇ ಮಾತಿಲ್ಲ. ಒಂದಿನಿತೂ ಕುತೂಹಲಕ್ಕೆ ಧಕ್ಕೆ ತಾರದ ರೀತಿಯಲ್ಲಿ ನಿರ್ದೇಶಕ ಟಿ. ಜೆ ಜ್ಞಾನವೇಲ್ ಯಶಸ್ವಿಯಾಗಿದ್ದಾರೆ. ಎಸ್ ಆರ್ ಕಥೀರ್ ಅವರ ಸಿನೆಮಾಟೋಗ್ರಾಫಿ ಅದ್ಭುತ. ಚಂದ್ರುವಿನ ಪಾತ್ರ ನಿರ್ವಹಿಸಿದ ತಮಿಳಿನ ಸ್ಟಾರ್ ನಟ ಸೂರ್ಯ, ತನಿಖಾಧಿಕಾರಿ ಐಜಿಪಿ ಪೆರುಮಾಳ್ ಪಾತ್ರದಲ್ಲಿ ಕಾಣಿಸಿಕೊಂಡ ಬಹುಭಾಷಾ ನಟ ಪ್ರಕಾಶ್ ರೈ, ಕೆಂಚರಾಜು ಪಾತ್ರ ನಿಭಾಯಿಸಿದ ಕೆ. ಮಣಿಕಂಡನ್ ಅವರ ಮನೋಜ್ಞ ಅಭಿನಯಕ್ಕೆ ಭೇಷ್ ಹೇಳಲೇ ಬೇಕು. ಸಿನೆಮಾ ಎಲ್ಲಿಯೂ ಕುತೂಹಲವನ್ನು ಕಿತ್ತುಕೊಳ್ಳದೇ, ನೋಡುಗನ ಮನಸ್ಸನ್ನು ಹಿಡಿದಿಟುಕೊಳ್ಳುತ್ತದೆ. ಮಾತ್ರವಲ್ಲದೇ, ಈ ಸಿನೆಮಾ ಕಥಾವಸ್ತು ಆಯ್ಕೆಯ ಗಂಭೀರ ಮನಸ್ಥಿತಿಯ ಪ್ರತಿರೂಪವಾಗಿ ಮೂಡಿಬಂದಿದೆ ಎನ್ನುವುದು ಗರಿಷ್ಠೀಕರಣವಲ್ಲ. ಥ್ಯಾಂಕ್ಯೂ.  

-ಶ್ರೀರಾಜ್ ವಕ್ವಾಡಿ          


Saturday, October 30, 2021

ಪೆಗಾಸಸ್ ಪೆಡಂಭೂತ : ಸುಪ್ರೀಂ ಚಾಟಿ ಕೇಂದ್ರಕ್ಕೆ ಆಪತ್ತು..!?


ಇಸ್ರೇಲ್ ಸೈಬರಾಯುಧ | ಅನುಮಾನ ಹುಟ್ಟಿಸುತ್ತಿರುವ ಮೋದಿ ‘ಟ್ವೀಟ್ ಕೃತಜ್ಞತೆ’..!    


ಕೇಂದ್ರದ ಹಾಲಿ ಸರ್ಕಾರಕ್ಕೆ ಬೆಂಬಿಡದೆ ಕಾಡುತ್ತಿರುವ ಹಲವು ಸಂಕಷ್ಟಗಳಲ್ಲಿ ಪೆಗಾಸಸ್ ಬೇಹುಗಾರಿಕೆಯ ಪೆಡಂಭೂತವೂ ಒಂದು. ಹೌದು, ಕಳೆದ ಎರಡು ಮೂರು ತಿಂಗಳುಗಳ ಹಿಂದೆ ದೇಶದ ಪ್ರಮುಖ ಪ್ರಭಾವಿ ರಾಜಕಾರಣಿಗಳು, ಪತ್ರಕರ್ತರು ಹಾಗೂ ಹಲವು ಇತರೆ ಪ್ರಮುಖ ಮುನ್ನೂರಕ್ಕೂ ಅಧಿಕ ಮಂದಿಯ ದೂರವಾಣಿಯ ಸಂಖ್ಯೆಗಳ ಮೇಲೆ ಬೇಹುಗಾರಿಕೆಯನ್ನು ಮಾಡಲಾಗಿದೆ ಎಂಬ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯ ವರದಿಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಸಂಸತ್ ಮುಂಗಾರು ಅಧಿವೇಶನ ಆಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿ ವಿಪಕ್ಷಗಳು ಕೇಂದ್ರ ಸರ್ಕಾರ ಇಸ್ರೇಲ್ ನಿಂದ ಇದನ್ನು ಖರೀದಿಸಿ ಬೇಹುಗಾರಿಕೆ ನಡೆಸಿದೆ ಎಂಬ ಆರೋಪವನ್ನು ಮಾಡಿದ್ದವು. ಅಧಿವೇಶನದ ಉದ್ದಕ್ಕೂ ವಿಪಕ್ಷಗಳು ಈ ಬಗ್ಗೆ ಪ್ರತಿಭಟನೆ ಮಾಡಿ ಬಲವಾದ ವಿರೋಧವನ್ನು ವ್ಯಕ್ತ ಪಡಸಿದೆಯಾದರೂ, ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ರೀತಿಯಲ್ಲೂ ಅಧಿಕೃತವಾಗಿ ಪ್ರತಿಕ್ರಿಯಿಸದೇ, ಮುಖ್ಯವಾಗಿ ಅಧಿವೇಶನದಲ್ಲಿ ಏನೆಲ್ಲಾ ಚರ್ಚೆಯಾಗಬೇಕಿತ್ತೋ ಅದನ್ನು ಹೊರತಾಗಿ ಉಳಿದ್ದನ್ನೆಲ್ಲಾ ಚರ್ಚೆ ಮಾಡಿ ಮುಗಿಸಿತ್ತು. ವಿಪಕ್ಷಗಳ ನಿರಂತರ ವಿರೋಧವಿದ್ದರೂ ಪ್ರಧಾನ ಮಂತ್ರಿಯಾಗಲಿ ಅಥವಾ ಕೇಂದ್ರದ ಗೃಹ ಮಂತ್ರಿಗಳಾಗಲಿ ಯಾವುದೇ ಪ್ರತಿಕ್ರಿಯೆಯನ್ನೂ ಈ ಬಗ್ಗೆ ನೀಡದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದರು. ಆದರೇ, ಈಗ ಸುಪ್ರೀಂ ಕೋರ್ಟ್ ಈ ಬಗ್ಗೆ ತನಿಖೆ ಮಾಡುವ ಉದ್ದೇಶದಿಂದ ಸಮಿತಿಯನ್ನು ರಚಿಸಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ದೊಡ್ಡ ತಲೆಬಿಸಿಯಾಗಿ ಪರಿಣಮಿಸಿದೆ ಎನ್ನುವುದಂತೂ ಸುಳ್ಳಲ್ಲ. 

ಸರ್ಕಾರಗಳಿಗೆ ಅಲ್ಲದೇ ಬೇರೆ ಯಾರಿಗೂ ಸ್ಪೈವೇರ್ ಗಳ ಮಾರಾಟಕ್ಕೆ ಇಸ್ರೇಲ್ ಸರ್ಕಾರ ಅನುಮತಿ ನೀಡುದಿಲ್ಲ. ರಫ್ತಿಗೆ ಸರ್ಕಾರದ ಅನುಮತಿ ಬೇಕೆಬೇಕು. ಸರ್ಕಾರೇತರರಿಗೆ ಅಥವಾ ಸರ್ಕಾರೇತರ ಯಾವುದೇ ಸಂಸ್ಥೆಗಳಿಗೆ ಇಸ್ರೇಲ್ ಸರ್ಕಾರ ಇದನ್ನು ರಫ್ತು ಮಾಡುದಿಲ್ಲ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿರುವುದು ಈಗ ಪ್ರಧಾನಿ ಮೋದಿ ಮುಂದಾಳತ್ವದ ಕೇಂದ್ರ ಸರ್ಕಾರದ ಮೇಲೆ ಮತ್ತಷ್ಟು ಅನುಮಾನ ಹುಟ್ಟಿಸಿಹಾಕಿದೆ. ಇನ್ನು, ದೇಶದಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ವಿರೋಧಕ್ಕೆ ಗ್ರಾಸವಾಗಿದ್ದ ಪೆಗಾಸಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ವಿ ರವೀಂದ್ರನ್ ನೇತೃತ್ವದ ಸಮಿತಿಯನ್ನು ರಚಿಸಿದ ಬೆನ್ನಿಗೆ ಪತ್ರಿಕಾಗೋಷ್ಟಿಯಲ್ಲಿ ‘ಪೆಗಾಸಸ್ ಸ್ಪೈವೇರ್ ನನ್ನು ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ ಮತ್ತು ಈ ಪೆಗಾಸಸ್ ಸ್ಪೈವೇರ್ ಮಾಲಕತ್ವ ಹೊಂದಿರುವ ಎನ್ ಎಸ್ ಒ ಸಂಸ್ಥೆಯು ಈ ಸ್ಪೈವೇರ್ ನನ್ನು ಸರ್ಕಾರೇತರರಿಗೆ ಮಾರಾಟ ಮಾಡುವುದಿಲ್ಲ’ ಎಂದು ಭಾರತದಲ್ಲಿ ಇತ್ತೀಚೆಗಷ್ಟೇ ನೇಮಕಗೊಂಡಿರುವ ಇಸ್ರೇಲ್ ನ ರಾಯಭಾರಿ ನೌರ್ ಗಿಲೋನ್ ಹೇಳಿರುವುದು ಪ್ರಕರಣಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. 

ಇನ್ನು, ಪತ್ರಿಕಾಗೋಷ್ಟಿಯಲ್ಲಿ.. ಸ್ಪೈವೇರ್ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಸರ್ಕಾರವನ್ನು ಭಾರತ ಸರ್ಕಾರ ಸಂಪರ್ಕ ಮಾಡಿದೆಯೇ ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಗಿಲೋನ್, ಎನ್ ಎಸ್ ಒ ಒಂದು ಖಾಸಗಿ ಸಂಸ್ಥೆ. ಎನ್ ಎಸ್ ಒ ಅಥವಾ ಅಂತಹ ಯಾವುದೇ ಸಂಸ್ಥೆಗಳು ಸ್ಪೈವೇರ್ ಗಳನ್ನು ರಫ್ತು ಮಾಡುವುದಾದರೇ ಇಸ್ರೇಲ್ ಸರ್ಕಾರದ ರಫ್ತು ಪರವಾನಿಗೆಯನ್ನು ಪಡೆಯುವುದ ಅಗತ್ಯ. ಸರ್ಕಾರಗಳಿಗೆ ಮಾತ್ರ ರಫ್ತು ಮಾಡುವುದಾದರೇ ಇಸ್ರೇಲ್ ಸರ್ಕಾರ ಅನುಮತಿಸುತ್ತದೆ ಎಂದಷ್ಟೇ ಹೇಳಿರುವುದು ಕೂಡ ತನಿಖೆಗೆ ಒಂದು ವಸ್ತುವಾಗಲಿದೆ. 

ಕಳೆದ ಜೂನ್ ೧೪. ೨೦೨೧ ರಂದು ಇಸ್ರೇಲ್ ನ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನ್ನೆಟ್ ಆಯ್ಕೆಯಾದ ಸಂದರ್ಭದಲ್ಲಿ ಪ್ರಧಾನಿ ಮೋದಿ, ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಭಾರತ ಹಾಗೂ ಇಸ್ರೇಲ್ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಗೊಳಿಸಲು ಇಸ್ರೇಲ್ ನ ನೂತನ ಪ್ರಧಾನಿ ನಫ್ತಾಲಿಯವರನ್ನು ಭೇಟಿಯಾಗಲು ಬಯಸುತ್ತೇನೆ. ಮುಂದಿನ ವರ್ಷ ರಾಜತಾಂತ್ರಿಕ ಸಂಬಂಧಗಳ ಉನ್ನತೀಕರಣದ ೩೦ ವರ್ಷಗಳನ್ನು ಆಚರಿಸುತ್ತಿದಂತೆ, ನಿಮ್ಮನ್ನು ಭೇಟಿ ಮಾಡಲು ಮತ್ತು ‘ನಮ್ಮ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಗಾಢಗೊಳಿಸಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿರುವುದು ಮಾತ್ರವಲ್ಲದೇ, ಇದೇ ಸಂದರ್ಭದಲ್ಲಿ ಇಸ್ರೇಲ್ ನ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೂ “ಭಾರತ ಹಾಗೂ ಇಸ್ರೇಲ್ ಕಾರ್ಯತಂತ್ರದ ಸಹಭಾಗಿತ್ವಕೆ ಕೃತಜ್ಞತೆ. ಭಾರತ ಹಾಗೂ ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ನಿಮ್ಮ ನಾಯಕತ್ವ ಹಾಗೂ ವೈಯಕ್ತಿಕ ಗಮನಕ್ಕೆ ಕೃತಜ್ಞತೆ ತಿಳಿಸುತ್ತೇನೆ” ಎಂದು ಯಾರಿಗೂ ಇಷ್ಟೇಲ್ಲಾ ಕೃತಜ್ಞತೆ ತಿಳಿಸದ ಪ್ರಧಾನಿ ನರೇಂದ್ರ ಮೋದಿ ಅವರ ಈ ಎರಡೆರಡು “ಟ್ವೀಟ್ ಕೃತಜ್ಞತೆ” ಈಗ ಪೆಗಾಸಸ್ ಗೆ ಸಂಬಂಧಿಸಿದಂತೆ ಅನುಮಾನ ಮೂಡಿಸುತ್ತಿದೆ. ಇನ್ನು, ಇಸ್ರೇಲ್ ನ ನೂತನ ಪ್ರಧಾನಿ ನಫ್ತಾನಿ ಬಲಪಂಥೀಯ ಪಕ್ಷ ಯಾಮಿನಿ ಪಾರ್ಟಿಯ ಮುಖಂಡ ಎನ್ನುವುದು ಈ ಬಗ್ಗೆ ಮತ್ತಷ್ಟು ಕುತುಹೂಲದೊಂದಿಗೆ ಸಂಶಯಾಸ್ಪದವಾಗಿದೆ. ಮಾತ್ರವಲ್ಲದೇ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಸ್ರೇಲ್ ಸರ್ಕಾರದೊಂದಿಗೆ ರಾಜಕೀಯ ಆಂತರಿಕ ಲಾಭಕ್ಕಾಗಿ ಪೆಗಾಸಸ್ ಸ್ಪೈವೇರ್ ವಿಚಾರವಾಗಿ ಸಂಪರ್ಕ ಮಾಡಿರಬಹುದು ಎನ್ನುವುದನ್ನೂ ಕೂಡ ಅಲ್ಲಗಳೆಯುವಂತಿಲ್ಲ. 

ಇಲ್ಲಾ ತನಿಖೆಯಾಗಲೇ ಬೇಕೆಂದು ಹೇಳ್ತು ಸುಪ್ರೀಂ : ವಿರೋಧ ಪಕ್ಷಗಳ ವಿರೋಧವನ್ನು ಹಾಗೂ ತನಿಖೆಯ ಮನವಿಯ ಅರ್ಜಿಯನ್ನು ವಿಚಾರಣೆ ಮಾಡಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಸರ್ಕಾರದ  ರಾಷ್ಟ್ರೀಯ ಭದ್ರತೆಯ ನೆಪಕ್ಕೆ ಎಲ್ಲಾ ಸಂದರ್ಭದಲ್ಲಿಯೂ ಬಾಯಿ ಮುಚ್ಚಿಕೊಳ್ಳುವುದಕ್ಕೆ ಸಾಧ್ಯವಿಲ್ಲವೆಂದು ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರನ್ನೊಳಗೊಂಡ ನ್ಯಾಯಪೀಠ ಖಡಕ್ ವಾರ್ನ್ ಮಾಡಿದ್ದಲ್ಲದೇ, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಪ್ರತಿ ಬಾರಿ ವಿನಾಯಿತಿ ನೀಡುವುದಕ್ಕೆ ಸಾಧ್ಯವಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನೆಡೆಯಲೇ ಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದೆ. ಇನ್ನು, ಇತ್ತೀಚೆಗೆ ಕೋವಿಡ್ ನಿರ್ವಹಣೆ ಸೇರಿ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಖಡಕ್ ವಾರ್ನ್ ಮಾಡುತ್ತಿರುವುದು ಮಾತ್ರವಲ್ಲದೇ, ಹಲವು ಪ್ರಕರಣಗಳಿಗೆ ತನಿಖೆ ಸಲುವಾಗಿ ಸಮಿತಿ ರಚಿಸುತ್ತಿರುವುದು ಎನ್ ವಿ. ರಮಣ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೇಲೆ ಆದ ಮಹತ್ತರ ಬೆಳವಣಿಗೆಗಳೇ ಎಂದು ಹೇಳಬಹದಾಗಿದ್ದು, ಇದು ಕಳೆದ ಕೆಲವು ವರ್ಷಗಳಿಂದೀಚೆಗೆ ಜನರಿಗೆ ಸುಪ್ರೀಂ ಕೋರ್ಟ್ ಮೇಲೆ ಇದ್ದ ಅಪನಂಬಿಕೆಯನ್ನು ಕೂಡ ಸ್ವಲ್ಪ ಮಟ್ಟಿಗೆ ತೆಗೆದುಹಾಕಿದೆ ಎನ್ನಬಹುದಾಗಿದೆ. 

ಪೆಗಾಸಸ್ : ಸುಪ್ರೀಂ ಕೋರ್ಟ್ ಏನ್ ಹೇಳಿದೆ..? : ವಿಚಾರಣೆಯ ವೇಳೆ  ಕೇಂದ್ರ ಸರ್ಕಾರವ ವಿರುದ್ಧ ಕಿಡಿ ಕಾರಿದ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಭದ್ರತೆಯ ವಿಚಾರಕ್ಕಾಗಿ ರಹಸ್ಯವಾಗಿಯೇ ಇರಬೇಕು ಎಂಬ ವಿಚಾರವನ್ನು ಕೇಂದ್ರ ಸರ್ಕಾರ ಸಾಬೀತು ಪಡಿಸಬೇಕು ಎಂದು ಹೇಳಿದ್ದಲ್ಲದೇ, ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ಗೂಢಚರ್ಯೆಯಂತಹ ಬೇಹುಗಾರಿಕೆಯನ್ನು ಮಾಡುವುದಕ್ಕೆ ಅವಕಾಶ ನೀಡಲಾಗುವುದಿಲ್ಲ. ದೇಶದ ಭದ್ರತೆಯ ವಿಚಾರದ ನೇಪ ಒಡ್ಡಿದ ಮಾತ್ರಕ್ಕೆ ಪ್ರತಿ ಬಾರಿ ವಿನಾಯಿತಿ ನೀಡಲು ಅಸಾಧ್ಯ. ವೈಯಕ್ತಿಕ ಗೌಪ್ಯತೆಯನ್ನಯ ಉಲ್ಲಂಘಿಸಿ ಒಬ್ಬ ವ್ಯಕ್ತಿಯ ಮೇಲೆ ಗೂಢಚರ್ಯೆ ಮಾಡುವುದಕ್ಕೆ ಸಾಧ್ಯವಿಲ್ಲ. ಸೂಕ್ತ ಭದ್ರತೆಯ ನೆಪ ಹೇಳಿ ಸುಮ್ಮನೆ ಸರ್ಕಾರ ಕೂರಲಾಗದು, ಅಂತಹ ಅಂಶಗಳನ್ನು ಅಂಶಗಳನ್ನು ಮುಂದಿಡಬೇಕೆಂದು ಕೇಂದ್ರ ಸರ್ಕಾರಕ್ಕೆ ಖಡಕ್ ಆಗಿ ಸುಪ್ರೀಂ ಕೋರ್ಟ್ ಗೆ ಆದೇಶಿಸಿರುವುದು ಮೋದಿ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ. 

ಇನ್ನು, ಪೆಗಾಸಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಇರುವ ಸಮಿತಿಯನ್ನು ರಚಿಸಿದ್ದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ವಿ ರವೀಂದ್ರನ್ ಉಸ್ತುವಾರಿಯಲ್ಲಿ ಮೂವರು ಇರುವ ಸಮಿತಿಯಲ್ಲಿ ಗುಜರಾತ್ ನ ರಾಷ್ಟ್ರೀಯ ವಿಧಿ ವಿಜ್ಞಾನ ವಿವಿಯ ಮುಖ್ಯಸ್ಥ ನವೀನ್ ಕುಮಾರ್ ಚೌಧರಿ, ಕೇರಳದ ಅಮೃತ ವಿಶ್ವ ವಿದ್ಯಾಪೀಠಂ ಸ್ಕೂಲ್ ಆಫ್ ಎಂಜಿನಿಯರಿಂಗ್ ಪ್ರೊಫೆಸರ್ ಹಾಗೂ ಬಾಂಬೆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸೀನಿಯರ್ ಪ್ರೊಫೇಸರ್ ಅಶ್ವಿನ್ ಅನಿಲ್ ಗುಮಸ್ಥೆ ಇದ್ದಾರೆ. ಈ ಮೂವರ ಸಮಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ಅವರಿಗೆ ವರದಿ ಸಲ್ಲಿಸಲಿದೆ. 

ಕಾಂಗ್ರೆಸ್ ನದ್ದು ಏನ್ ವಾದ..? : ಕೇಂದ್ರ ಸರ್ಕಾರ ಈ ಬಗ್ಗೆ ಪ್ರತಿಪಕ್ಷಗಳ ಯಾವುದೇ ವಾದಕ್ಕೂ ಅಧಿಕೃತವಾಗಿ ಪ್ರತಿಕ್ರಿಯಿಸದಿದ್ದರೂ ಪರೋಕ್ಷವಾಗಿ ಇದು ಪ್ರತಿಪಕ್ಷಗಳ ರಾಜಕೀಯ ಕುತಂತ್ರ ಹೇಳುತ್ತಿದೆ. ಇತ್ತ ಕಾಂಗ್ರೆಸ್ ಕೂಡ ರಾಜಕೀಯ ಲಾಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರೋಧ ಪಕ್ಷಗಳ ಪ್ರಭಾವಿ ನಾಯಕರ ವಿರುದ್ಧವಾಗಿ ಈ ಬೇಹುಗಾರಿಕೆಯನ್ನು ಪ್ರಯೋಗಿಸಲಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಗೂಢಚರ್ಯೆ ಮಾಡುವ ಅಧಿಕಾರ ಸರ್ಕಾರಕ್ಕೆ ನೀಡಿದ್ದು ಯಾರು..? ಯರ‍್ಯಾರ ವಿರುದ್ಧವಾಗಿ ಪೆಗಾಸಸ್ ಬೇಹುಗಾರಿಕೆಯನ್ನು ಪ್ರಯೋಗಿಸಲಾಗಿದೆ..? ಬೇರೆ ದೇಶಗಳು ಭಾರತೀಯರಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಂಡಿದ್ದೀರಿ..? ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕೇಳಿತ್ತಾದರೂ ಕೇಂದ್ರ ಸರ್ಕಾರ ಉತ್ತರ ನೀಡಿದ್ದಿರಲಿಲ್ಲ, ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಆರೋಪವನ್ನು ನಿರ್ಲಕ್ಷಿಸಿತ್ತು. ಸಂಸತ್ ಅಧಿವೇಶನದುದ್ದಕ್ಕೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರತಿಭಟನೆ ಮಾಡಿ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಗೆ ಆಗ್ರಹಿಸಿತ್ತಾದರೂ, ಬಿಜೆಪಿ ಸರ್ಕಾರ ಅದಕ್ಕೆ ಒಪ್ಪಿರಲಿಲ್ಲ. ಸದ್ಯ ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಮಿತಿ ರಚನೆ ಮಾಡಿದ್ದು ಕಾಂಗ್ರೆಸ್ ವಾದಕ್ಕೆ ಬೆಂಬಲ ನೀಡಿದಂತಾಗಿದೆ.

ಒಟ್ಟಿನಲ್ಲಿ, ಪೆಗಾಸಸ್ ಪ್ರಕರಣದಲ್ಲಿ ಕಾನೂನು ಎತ್ತಿ ಹಿಡಿಯುವುದೇ ತಮ್ಮ ಉದ್ದೇಶ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ತೀವ್ರ ಹಿನ್ನೆಡೆಯಾಗಿದ್ದು, ಮಾತ್ರವಲ್ಲದೇ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಸಮಿತಿ ರಚಿಸಿರುವ ಉದ್ದೇಶವೇ ಸಾಂವಿಧಾನಿಕ ಮೌಲ್ಯ ಎತ್ತಿ ಹಿಡಿಯುವುದೇ ಆಗಿದೆ ಎಂದು ಹೇಳಿರುವುದು ಕೇಂದ್ರ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿರುವುದಂತೂ ಸತ್ಯ. ಕೇಂದ್ರ ಸರ್ಕಾರದ ಸಮರ್ಥನೆ ಹಾಗೂ ಪ್ರತಿ ಪಕ್ಷಗಳ ಆರೋಪಗಳ ಆಚೆಗೆ ಸಮಿತಿ ಯಾವ ಉತ್ತರವನ್ನು ಪೆಗಾಸಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಿದೆ ಎನ್ನುವುದರ ಮೇಲೆ ಸದ್ಯ ಕುತೂಹಲ ಮೂಡಿಸಿದೆ. 

-ಶ್ರೀರಾಜ್ ವಕ್ವಾಡಿ

Friday, October 1, 2021

ಜಿ23 ಅಸಮಾಧಾನ ‘ಗಾಂಧಿ ಕುಟುಂಬ ರಾಜಕಾರಣ’ದ ಅಂತ್ಯಕ್ಕೆ ನಾಂದಿ..?

ನಾಯಕತ್ವದ ಬಗ್ಗೆ ‘ಜಿ23 ಪಡೆ’ಗೆ ಮಾತ್ರವಲ್ಲ ಅತೃಪ್ತಿ..!? | ಕಾಂಗ್ರೆಸ್ ಸ್ಥಿತಿ ಚಿಂತಾಜನಕ 

ಹೌದು, ಇಂತಹದ್ದೊಂದು ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು. ದೇಶಕ್ಕೆ ಸ್ವಾತಂತ್ರ್ಯ ತಂದುಕಕೊಟ್ಟ ಪಕ್ಷ ಎಂದು ಹೇಳಿಕೊಳ್ಳಿವ ರಾಷ್ಟ್ರೀಯ ಕಾಂಗ್ರೆಸ್ ಈಗ ಅಪ್ಪ ಅಮ್ಮ ಇಲ್ಲದಂತಾಗುತ್ತಿರುವ ಹಾಗಾಗಿದೆ. ಅದಕ್ಕೆ ತಕ್ಕಂತೆ ಕಾಂಗ್ರೆಸ್ ನ ಹಿರಿಯ ನಾಯಕರ ಅಸಮಧಾನ ಹಾಗೂ ಪಾರಂಪರಿಕ ಗಾಂಧಿ ಕುಟುಂಬದ ನಡುವೆ ಇರುವ ಮುಸುಕಿನ ಭಿನ್ನ ಧ್ವನಿ ಈಗ ಮತ್ತಷ್ಟು ಗಟ್ಟಿಯಾಗಿದೆ ಎಂದು ಕಾಣಿಸುತ್ತಿದೆ. ಕಳೆದ ವರ್ಷ ಪಕ್ಷದ ನಾಯಕತ್ವ ಬದಲಾವಣೆಯ ವಿಚಾರಕ್ಕೆಂದು ಕರೆದಿದ್ದ ಸಿಡಬ್ಲ್ಯೂಸಿ (ಕಾಂಗ್ರೆಸ್ ವರ್ಕಿಂಗ್ ಕಮಿಟಿ) ಸಭೆಯಲ್ಲಿಯೇ ಜಿ೨೩ ಪಡೆ, ‘ಹಲವು ವರ್ಷಗಳ ಹಿಂದಿನಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ಪಕ್ಷಕ್ಕಾಗಿ ದಶಕಗಳಿಂದ ಮಣ್ಣು ಹೊತ್ತಿದ್ದೇವೆ, ನಮಗೆ ಸರಿಯಾದ ಸ್ಥಾನಮಾನವೇ ದೊರಕಲಿಲ್ಲ’ ಎಂದು ಪರೋಕ್ಷವಾಗಿ ನಾಯಕತ್ವ ಬದಲಾವಣೆಯ ಬಗ್ಗೆ ಕಿಡಿ ಹೊತ್ತಿಸಿತ್ತು. ಆದಾಗ್ಯೂ, ಸಭೆಯ ಅಂತಿಮದಲ್ಲಿ ಮತ್ತೆ ಸೋನಿಯಾ ಗಾಂಧಿಯವರನ್ನೇ ಪಕ್ಷದ ಸದ್ಯದ ಪರಮೋಚ್ಛ ನಾಯಕಿ ಎಂಬ ತೀರ್ಮಾನಕ್ಕೆ ಬರಲಾಯಿತು. 

ಸಿಡಬ್ಲ್ಯೂಸಿ ಸಭೆಯ ಸಂದರ್ಭದಲ್ಲಿ ‘ಜಿ23’ ಪತ್ರದ ಮುಖೇನ ನಾಯಕತ್ವ ಬದಲಾವಣೆ ಹಾಗೂ ಪಕ್ಷದ ಅಜೆಂಡಾ, ಸಿದ್ಧಾಂತಗಳಲ್ಲಿನ ಕೆಲವು ವಿಮರ್ಶಾತ್ಮಕ ಪರಿವರ್ತನೆಯ ಬಗ್ಗೆ ಪಕ್ಷದ ನಾಯಕಿ ಸೋನಿಯಾ ಗಾಂಧಿಗೆ ಒಪ್ಪಿಸಿದ್ದು ಕೂಡ ಗಾಂಧಿ ಕುಟುಂಬಕ್ಕೆ ಎಚ್ಚರಿಕೆಯ ಕರೆಗಂಟೆಯಂತಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದಾದ ಬಳಿಕ ಹಿರಿಯ ನಾಯಕರಾದ ಕಪಿಲ್ ಸಿಬಲ್, ಗುಲಾಮ್ ನಬಿ ಆಜಾದ್ ಸೇರಿ ಕೆಲವರು ನಡೆದುಕೊಂಡ ರೀತಿ ರಾಷ್ಟ್ರೀಯ ಕಾಂಗ್ರೆಸ್, ಮನೆಯೊಂದು ಎರಡು ಬಾಗಿಲು ಎಂಬತ್ತಾಗಿದ್ದನ್ನು ಸ್ಪಷ್ಟವಾಗಿ ದೇಶದ ಜನರಿಗೆ ತಿಳಿಯುವಂತೆ ಆಯಿತು. ಈಗ ‘ಅದೇ ಕಾಂಗ್ರೆಸ್ ನ ಸಮರ್ಥ ನಾಯಕತ್ವ’ದ ವಿಚಾರ ಮುನ್ನೆಲೆಗೆ ಬಂದಿದೆ. 

ಪಂಜಾಬ್ ರಾಜ್ಯ ರಾಜಕಾರಣದಲ್ಲಿ ಆದ ಇತ್ತೀಚೆಗಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ‘ಸಮರ್ಥ ನಾಯಕತ್ವ’ದ ಕೂಗು ಮತ್ತೆ ಜೋರಾಗಿ ಕೇಳಿ ಬಂದಿದೆ. ಪಕ್ಷ ಹಾಗೂ ಪಕ್ಷದ ಕೆಲವು ಹಿರಿಯ ನಾಯಕರ ಗುಂಪು ಒಂದೆಡೆಯಾದರೇ, ಅದೇ ಹಿಂದಿನ ಗಾಂಧಿ ಕುಟುಂಬಕ್ಕೆ ವಿದೇಯತೆಯಿಂದ ಇದ್ದು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಯವರನ್ನೇ ಬೆಂಬಲಿಸುವ ಗುಂಪಿನ ನಡುವಿನ ಬರ್ಕುಡಿ ಹೊಯ್ದಾಟ ಹಾಗೂ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಾಧಾನ, ಅತೃಪ್ತಿ, ಮುನಿಸು, ಕೋಪ, ತಾಪ ಎಲ್ಲಾ ಈಗ ಒಂದೆಡೆ ಸೇರಿ ಬಂದು ದೇಶದ ಜನರೆದುರಿಗೆ ಬಟಾಬಯಲಾಗಿದೆ. 

ಕಾಂಗ್ರೆಸ್ ಹಿರಿಯ ನಾಯಕರ ಇರಿಸು ಮುರಿಸು :

ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕ ಹಾಗೂ ಕೇರಳದ ವಯನಾಡಿನ ಸಂಸದ ರಾಹುಲ್ ಗಾಂಧಿ, ಅವ್ಯಾಹತವಾಗಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತರಾಟೆ ತೆಗೆದುಕೊಳ್ಳುತ್ತಿರುವುದಲ್ಲದೇ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರವನ್ನು ಹಿಡಿಯುವ ಪ್ರಯತ್ನದಲ್ಲಿದ್ದರೇ, ಇತ್ತ.. ಪಕ್ಷದ ಹಿರಿಯ ನಾಯಕರ ಅಸಮಾಧಾನ ಹಾಗೂ ಇರಿಸು ಮುರಿಸು ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಶೇಮ್ ಉಂಟು ಮಾಡುತ್ತಿದೆ. ಕಾಂಗ್ರೆಸ್ ನಿಷ್ಠ ಹಿರಿಯ ನಾಯಕರು ಎಂದು ಹೇಳಿಕೊಳ್ಳುವವರ ನಡೆಗಳು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ಕಪಿಲ್ ಸಿಬಲ್, ಗುಲಾಮ್ ನಬಿ ಆಜಾದ್ ಅವರಂತಹ ಕೆಲವು ನಾಯಕರು ಪಕ್ಷದ ನಾಯಕತ್ವದ ಬಗ್ಗೆ ಬಹಿರಂಗವಾಗಿ ಅಸಮಾಧಾನದ ಹೇಳಿಕೆಗಳನ್ನು ನೀಡುತ್ತಿರುವುದು ಹಲವು ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷದ ನಿರ್ನಾಮಕ್ಕೆ ನಾಂದಿ ಸಿಕ್ಕಿದೆಯೇ ಎಂಬ ಪ್ರಶ್ನೆ ಎಬ್ಬಿಸುತ್ತಿದೆ. ಸೆಕ್ಯುಲರ್ ಪಕ್ಷ ಎಂದು ಹೇಳಿಕೊಂಡೇ ದೇಶದಲ್ಲಿ ಹಲವು ವರ್ಷಗಳ ಕಾಲ ಆಡಳಿತ ನಡೆಸಿರುವ ಪಕ್ಷದ ಒಳಗೇ ‘ಸೆಕ್ಯುಲರ್’ ಗೆ ಸರಿಯಾದ ಅರ್ಥ ಸಿಗುತ್ತಿಲ್ಲವೇನೋ ಎಂಬ ಹಾಗೆ ಪ್ರಶ್ನೆಯೊಂದು ಬಲವಾಗಿ ಬೇರೂರುವಂತೆ ಮಾಡಿದೆ. ೨೦೧೪ ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಎನ್ ಡಿ ಎ ಸರ್ಕಾರ ದೇಶದ ಅಧಿಕಾರ ಹಿಡಿದಾಗಲೇ ಸಾರ್ವಜನಿಕ ವಲಯದಲ್ಲಿ ಕಾಂಗ್ರೆಸ್ ಪಕ್ಷ ಮೂಲೆಗೆ ಸರಿಯುತ್ತಿದೆ ಎಂಬ ಮಾತು ಬಲವಾಗಿ ಕೇಳಿತ್ತು, ಈಗ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೆಲವು ವೈಫಲ್ಯಗಳನ್ನು ಎತ್ತಿ ವಿರೋಧಿಸುವುದಕ್ಕೆ ಸರಿಯಾದ ವಿರೋಧ ಪಕ್ಷವೇ ಇಲ್ಲ ಎಂಬಂತಾಗಿ ಆ ಮಾತು ಸತ್ಯವಾದಂತೆ ಕಾಣಿಸುತ್ತಿದೆ. ಎನ್ ಡಿ ಎ ಸರ್ಕಾರದ ಮೈನಸ್ ಪಾಯಿಂಟ್ ಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಕಾಂಗ್ರೆಸ್ ಬಲವಾದ ಪಡೆಯನ್ನು ಹೊಂದಿರಬೇಕಾದ ಸಂದರ್ಭದಲ್ಲೇ ಮನೆಯೊಂದು ಎರಡು ಬಾಗಿಲು ಎಂಬಂತಾಗಿರುವುದು ದುರಂತವೇ ಸರಿ.

ಗಾಂಧಿ ಕುಟುಂಬಕ್ಕೆ ಬಿಸಿ ಮುಟ್ಟಿಸಿದ ಸಿಬಲ್ ನಡೆ :

ಪಂಜಾಬ್ ಕಾಂಗ್ರೆಸ್ ನಲ್ಲಿ ನಡೆದ ರಾಜಕೀಯ ತಲ್ಲಣಗಳ ಬಗ್ಗೆ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ಗಾಂಧಿ ಕುಟುಂಬ ಹಾಗೂ ನಾಯಕತ್ವದ ವಿರುದ್ಧವಾಗಿ ನಡೆಸಿದ ಬಹಿರಂಗ ಅಸಮಾಧಾನದ ಹೇಳಿಕೆಯ ಬೆನ್ನಿಗೆ ಸಿಬಲ್ ಮನೆ ಮೇಲೆ ಸೋನಿಯಾ ಗಾಂಧಿ ಹಾಗೂ ಗಾಂಧಿ ಕುಟುಂಬದ ವಿದೇಯ ಕಾರ್ಯಕರ್ತರು ಎಂದು ಹೇಳಲ್ಪಡುವವರು ದಾಳಿ ನಡೆಸಿರುವುದು ಕಾಂಗ್ರೆಸ್ ಗೆ ಅಳಿಸಲಾಗದ ಒಂದು ಕಪ್ಪು ಚುಕ್ಕಿಯಂತಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಸಿಬಲ್, ಪಕ್ಷವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ನಮ್ಮದು ಜಿ ೨೩ ಹೊರತಾಗಿ ಜಿ ಹುಜೂರ್ 23 ನಾಯಕರಲ್ಲ ಎಂದು ಗಾಂಧಿ ಕುಟುಂಬದ ವಿರುದ್ಧ ತಮ್ಮ ನಿಲುವನ್ನು ಪುನರುಚ್ಛರಿಸಿರುವುದು ಗಾಂಧಿ ಕುಟುಂಬಕ್ಕೆ ಬಿಸಿ ಮುಟ್ಟಿಸಿದ್ದಂತೂ ಸತ್ಯ. ಇನ್ನು, ಪಕ್ಷದ ನಾಯಕರ ಆಪ್ತರೆನ್ನಿಸಿಕೊಂಡಿದ್ದವರು ಈಗ ಪಕ್ಷ ತೊರೆದಿದ್ದಾರೆ. ನಾಯಕರಿಂದ ಅಂತರ ಕಾಯ್ದುಕೊಂಡವರು ಇನ್ನೂ ಪಕ್ಷದಲ್ಲೇ ಇದ್ದೇವೆ. ಪಕ್ಷ ಹಾಗೂ ಪಕ್ಷದ ಸಿದ್ಧಾಂತಗಳನ್ನು ಬಿಟ್ಟು, ಬೇರೆಲ್ಲೋ ಹೋಗುವರು ನಾವಲ್ಲ. ಸುಶ್ಮಿತಾ ದೇವ್, ಜಿತಿನ್ ಪ್ರಸಾದ್, ಜ್ಯೋತಿರಾದಿತ್ಯ ಸಿಂದಿಯಾ ಅವರೆಲ್ಲಾ ಪಕ್ಷವನ್ನು ತೊರೆದಿದ್ದು ಏಕೆ ಎಂಬ ಪ್ರಶ್ನೆಯನ್ನು ಎತ್ತಬೇಕಿದೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯ ಬಗ್ಗೆ ಅಸಮಾಧಾನವನ್ನು ಸಿಬಲ್ ಹೊರಹಾಕಿದ್ದಾರೆ. 

ಕಪಿಲ್ ಸಿಬಲ್ ಔತಣ ಕೂಟ, ಗಾಂಧಿ ಕುಟುಂಬ ಗೈರು : 

ಇದೇ ಆಗಷ್ಟ್ ನ ಎರಡನೇ ವಾರದಂದು ಸಿಬಲ್ ಅವರ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಔತಣ ಕೂಟಕ್ಕೆ ಗಾಂಧಿ ಕುಟುಂಬದ ಗೈರು ಹಾಜರಿ, ಸಿಬಲ್ ಸೇರಿ ಜಿ ೨೩ ಸದಸ್ಯರ ಮೇಲೆ ಗಾಂಧಿ ಕುಟುಂಬಕ್ಕೆ ಅಸಮಾಧಾನ ಇರುವುದು ಎದ್ದು ತೋರಿಸುವಂತಿತ್ತು. ಇನ್ನು, ಔತಣ ಕೂಟದಲ್ಲಿ ಜಿ23 ಸದಸ್ಯರುಗಳಾದ ಗುಲಾಮ್ ನಬಿ ಆಜಾದ್, ಪಕ್ಷದ ಸಂಸದ ಶಶಿ ತರೂರ್, ಭೂಪೇಂದ್ರ ಸಿಂಗ್ ಹೂಡ, ಆನಂದ್ ಶರ್ಮಾ, ಮನೀಷ್ ತಿವಾರಿ, ಪಿ. ಚಿದಂಬರ್ ಸೇರಿ ಪ್ರಮುಖರು ಭಾಗಿ ಆಗಿದ್ದು, ನಾವೆಲ್ಲಾ ಒಂದಾಗಿದ್ದೇವೆ ಎಂದು ಗಾಂಧಿ ಕುಟುಂಬಕ್ಕೆ ಕನ್ನಡಿ ಹಿಡಿದು ತೋರಿಸುವಂತಿತ್ತು. ಇನ್ನು, ಯುಪಿಎಯೇತರ ನಾಯಕರಾದ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್, ಎನ್ ಸಿಯ ಓಮರ್ ಅದ್ಬುಲ್ಲಾ, ಬಿಜು ಜನತಾದಳದ ಪಿನಾಕಿ ಮಿಶ್ರಾ, ಅಕಾಲಿದಳದ ನರೇಶ್ ಗುಜ್ರಾಲ್, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ಟಿಡಿಪಿ, ಟಿ ಆರ್ ಎಸ್, ಡಿಎಂಕೆ, ವೈಎಸ್ ಆರ್ ನ ಪ್ರಮುಖ ನಾಯಕರು ಔತಣ ಕೂಟದಲ್ಲಿ ಭಾಗವಹಿಸಿದ್ದು ರಾಜಕೀಯ ವಲಯದಲ್ಲಿ ಹಲವು ಗುಸುಗುಸು ಊಹಾಪೋಹಗಳಿಗೆ ಸಾಕ್ಷಿಯಾಗಿತ್ತು. ಆದಾಗ್ಯೂ, ಪಕ್ಷದವರು ಹಾಗೂ ಇತರೆ ಪಕ್ಷದವರೂ ಸೇರಿದ್ದ ಈ ಔತಣಕೂಟದಲ್ಲಿಯೂ ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವ ಹಾಗೂ ರಾಜಕೀಯ ಕಾರ್ಯತಂತ್ರಗಳ ಬಗ್ಗೆಯೂ ಚರ್ಚೆ ಆಗಿತ್ತು ಎನ್ನುವುದು ಅಚ್ಚರಿಯ ಸಂಗತಿ. ಮಾತ್ರವಲ್ಲದೇ, ‘ಪಕ್ಷದ ಒಳಗೆ ಹಾಗೂ ಹೊರಗೆ ಏನೇ ಆಗಲಿ ತಮ್ಮ ಬೆಂಬಲ ಜಿ23 ಗೆ ಇರಲಿದೆ’ ಎಂದು ಶರದ್ ಪವಾರ್ ಬೆಂಬಲ ಸೂಚಿಸಿದ್ದರು. ಇನ್ನು, ಇತರೆ ಪಕ್ಷದ ಪ್ರಮುಖ ನಾಯಕರು ತಮಗೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಬೇಕೆಂಬ ಬಯಕೆ ಇದ್ದರೂ ಕಾಂಗ್ರೆಸ್ ನಲ್ಲಿ ನಾಯಕತ್ವವೇ ಸರಿಯಾಗಿ ಇಲ್ಲದಿರುವುದರ ಬಗ್ಗೆ ಪ್ರಸ್ತಾಪಿಸಿದ್ದರು. ಎನ್ನುವಲ್ಲಿಗೆ ಸಿಬಲ್ ಕರೆದಿದ್ದ ದೇಶದ ಪ್ರಮುಖ ರಾಜಕೀಯ ಪಕ್ಷದ, ಪ್ರಮುಖ ನಾಯಕರ ಅಭಿಪ್ರಾಯವೂ ‘ಜಿ23’ ಯ ಅಭಿಪ್ರಾಯವೇ ಆಗಿದೆ ಎನ್ನುವುದು ಸ್ಪಷ್ಟ. 

ಪ್ರಧಾನಿ ಮೋದಿಯನ್ನು ಹೊಗಳಿದ ಆಜಾದ್ :

ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನ ಬಹುತೇಕ ನಾಯಕರು ಕೇಂದ್ರ ಸರ್ಕಾರದ ವೈಫಲ್ಯವನ್ನು ಟೀಕೆ ಮಾಡಿದ್ದಕ್ಕಿಂತ ಹೆಚ್ಚು ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳಿದ್ದರು. ರಾಜ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದ ಹಿರಿಯ ತಲೆ ಗುಲಾಮ್ ನಬಿ ಆಜಾದ್, ಕಳೆದ ಕೆಲವು ತಿಂಗಳುಗಳ ಹಿಂದೆ ಶ್ರೀನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದರು. ಪ್ರಧಾನಿ ಮೋದಿಯವರ ಹಲವು ಗುಣಗಳು ನನಗಿಷ್ಟ. ತಾವು ಚಹಾ ಮಾರಾಟ ಮಾಡುತ್ತಿದ್ದರು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತಾವು ನಡೆದುಕೊಂಡು ಬಂದ ಹಾದಿಯನ್ನು ಹಾಗೂ ತಮ್ಮತನವನ್ನು ಮರೆತಿಲ್ಲ ಎಂದು ಹೇಳಿದ್ದು ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿತ್ತು. ಇನ್ನು, ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಗುಲಾಮ್ ನಬಿ ಆಜಾದ್ ಅವರ ವಿದಾಯದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದರು. ಆಜಾದ್ ಅವರೊಂದಿಗಿನ ವೈಯಕ್ತಿಕ ಸಂಬಂಧವನ್ನು ನೆನಪಿಸಿಕೊಂಡಿದ್ದರು. ಈ ಸದನದಲ್ಲಿ ಆಜಾದ್ ಸ್ಥಾನವನ್ನು ತುಂಬುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದರು. ಆಜಾದ್ ಅಚ್ಚರಿಯ ಹೇಳಿಕೆ, ಆಜಾದ್ ಪಕ್ಷಾಂತರ ಆಗಬಹುದೇ ಎಂಬ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. 

ಕಾಂಗ್ರೆಸ್ ಗೆ ಮೈತ್ರಿ ಜಪ :

ಕಾಂಗ್ರೆಸ್ ಗೆ ಸ್ವತಂತ್ರವಾಗಿ ಲೋಕಸಭಾ ಚುನಾವಣೆಯನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ ಎಂಬ ಅರಿವು ಆಗಿದೆ ಎಂದು ಕಾಣಿಸುತ್ತಿದೆ. ಇದಕ್ಕೆ ಪಕ್ಷಕ್ಕಿಲ್ಲದ ಸಮರ್ಥ ನಾಯಕತ್ವವೂ ಕಾರಣ. ಆದರೇ, ರಾಷ್ಟ್ರೀಯ ಕಾಂಗ್ರೆಸ್ ಅದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ. ಜಿ೨೩ ಪಡೆ ಕೂಡ ತಮ್ಮ ವಿರುದ್ಧ ಬಿದ್ದಿರುವ ಕಾರಣದಿಂದಾಗಿ ನಾಯಕತ್ವದ ಬದಲಾವಣೆಯ ವಿಚಾರವನ್ನು ಮತ್ತೆ ಮುನ್ನೆಲೆಗೆ ತರುವುದಕ್ಕೆ ಗಾಂಧಿ ಕುಟುಂಬವೂ ಮುಂದಾಗುವುದಿಲ್ಲ. ಇನ್ನು, ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂಬ ಉದ್ದೇಶದಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಕಾಂಗ್ರೆಸ್ ನ ನಾಯಕಿ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಮೈತ್ರಿ ಮಾತುಕತೆ ನಡೆಸಿದ್ದಾರೆ. ಆದರೇ, ಮೈತ್ರಿಗೂ ಕೂಡ ಸೋನಿಯಾ ಗಾಂಧಿ ನೇತೃತ್ವವೇ ಬೇಕು ಎಂಬ ಕೂಗು ಕೂಡ ಕೇಳಿ ಬರುತ್ತಿದೆ. ಇನ್ನು, ಸೋನಿಯಾ ಗಾಂಧಿ ಕೂಡ ಪ್ರಮುಖ ಪಕ್ಷಗಳ ಮುಖಂಡರನ್ನು ಸಭೆ ಕರೆದು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೇ, ಮೈತ್ರಿಗೆ ಒಪ್ಪುವ ಪಕ್ಷಗಳು, ಮೈತ್ರಿಗೆ ಸೋನಿಯಾ ಗಾಂಧಿ ನೇತೃತ್ವವನ್ನು ಒಪ್ಪುತ್ತಾರೆಯೇ ಎಂಬ ಪ್ರಶ್ನೆ ಎದ್ದಿದೆ. ಕಾಂಗ್ರೆಸ್ ಗೆ ಮೈತ್ರಿ ಇಷ್ಟವಿಲ್ಲದಿದ್ದರೂ, ಸದ್ಯಕ್ಕೆ ಬೇರೆ ಗತಿಯಿಲ್ಲ. ಇನ್ನು, ಮಮತಾ ಬ್ಯಾನರ್ಜಿಯವರೇ ಮೈತ್ರಿ ವಿಚಾರ ಮುನ್ನೆಲೆಗೆ ತಂದಿರುವ ಕಾರಣದಿಂದಾಗಿ, ಸೋನಿಯಾ ನೇತೃತ್ವಕ್ಕೆ ಸದ್ಯಕ್ಕೆ ಒಪ್ಪಿದರಾದರೂ ಮುಂದೆ ಒಪ್ಪುತ್ತಾರೆಯೇ ಎನ್ನುವುದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.  

ರಾಹುಲ್ ರಹಸ್ಯ ಸಭೆ / ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಗೆ ಸೇರ್ಪಡೆ ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಯಕತ್ವಕ್ಕೆ ಪಕ್ಷದೊಳಗೆಯೇ ಅಸಮಾಧಾನ ಕೇಳಿಬರುತ್ತಿದ್ದರೂ ತಮ್ಮ ಬೆಂಬಲಿಗರೊAದಿಗೆ ಇತ್ತೀಚೆಗೆ ರಾಜಕೀಯ ಕಾರ್ಯತಂತ್ರ ಹೆಣೆದಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಇನ್ನು, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಸೋರ್ ಅವರನ್ನು ಕೂಡ ಭೇಟಿಯಾಗಿದ್ದರು. ಪ್ರಶಾಂತ್ ಕಿಶೋರ್ ಭೇಟಿ ಹಾಗೂ ಅವರ ಕಾಂಗ್ರೆಸ್ ಸೇರ್ಪಡೆಯ ಬಗ್ಗೆಯೂ ತಮ್ಮ ಬೆಂಬಲಿಗರೊಂದಿಗೆ ಅಭಿಪ್ರಾಯವನ್ನು ಕೇಳಿದ್ದಾರೆ ಎಂದು ಕೂಡ ವರದಿಯಾಗಿತ್ತು. ಆದರೇ, ಪ್ರಶಾಂತ್ ಕಿಶೋರ್ ಅವರ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಸೋನಿಯಾ ಗಾಂಧಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಹೇಳಿತ್ತು. ಜಿ23 ಪಡೆಯ ವಿರೋಧ ಇರುವ ಕಾರಣದಿಂದಾಗಿ ತಮ್ಮ ಪಡೆಯನ್ನು ಭದ್ರಗೊಳಿಸಿಗೊಳ್ಳುವುದರತ್ತ ಕಾರ್ಯೋನ್ಮುಖರಾಗಿದ್ದಾರೆ ಎನ್ನುವುದಕ್ಕೆ ರಾಹುಲ್ ಗಾಂಧಿಯವರ ಇಂತಹ ಕೆಲವು ನಡೆಗಳೇ ಸಾಕ್ಷಿ. ಇನ್ನು, ಕನ್ಹಯ್ಯ ಕುಮಾರ್ ಹಾಗೂ ಜಿಗ್ನೇಶ್ ಮೆವಾನಿ ಇತ್ತೀಚೆಗೆ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿರುವುದು ಕಾಂಗ್ರೆಸ್ ಗೆ, ರಾಹುಲ್ ಗಾಂಧಿಗೆ ಆನೆ ಬಲ ಬಂದಂತಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದ್ದರೂ, ನಟವರ್ ಸಿಂಗ್ ರಂತಹ ಹಿರಿಯ ನಾಯಕರೇ, ‘ಮೂರು ಗಾಂಧಿ’ಗಳು(ಸೋನಿಯಾ, ರಾಹುಲ್, ಪ್ರಿಯಾಂಕ) ಬೇರೆಯವರಿಗೆ ಅವಕಾಶ ನೀಡುವುದಿಲ್ಲವೆಂದು ನೇರಾನೇರವಾಗಿ ಗಾಂಧಿ ಕುಟುಂಬದ ಮೇಲೆ ಆರೋಪ ಹೊರಿಸಿರುವುದರ ನಡುವೆ ರಾಹುಲ್ ಗಾಂಧಿ ಯುವ ನಾಯಕರನ್ನು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಎಂಥವರೇ ಪಕ್ಷಕ್ಕೆ ಸೇರ್ಪಡೆಯಾದರೂ ಪಂಜಾಬ್, ಛತ್ತೀಸ್ ಗಡ, ರಾಜಸ್ಥಾನ ಹಾಗೂ ಗೋವಾದಲ್ಲಿನ ಕಾಂಗ್ರೆಸ್ ನಾಯಕರ ರಾಜೀನಾಮೆ ಪರ್ವ ರಾಷ್ಟ್ರೀಯ ಕಾಂಗ್ರೆಸ್ ಗೆ ದೊಡ್ಡ ಹೊಡೆತವಾಗಿ ಪರಿಣಮಿಸಲಿದೆ ಎನ್ನುವುದಂತೂ ಸತ್ಯ. ಇವೆಲ್ಲದರೊಂದಿಗೆ ರಾಹುಲ್ ಗಾಂಧಿ ಜಿ೨೩ ಪಡೆಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ದೊಡ್ಡ ಕುತೂಹಲ. 

ಒಟ್ಟಿನಲ್ಲಿ, ಕಾಂಗ್ರೆಸ್ ನ ಸ್ಥಿತಿಯಂತೂ ಬಿಕ್ಕಟ್ಟಿನಲ್ಲಿದೆ ಎನ್ನುವುದಂತೂ ಸತ್ಯ. ಪಕ್ಷವನ್ನು ಸಮರ್ಥವಾಗಿ ಕಟ್ಟಿಕೊಳ್ಳದೇ ಇದ್ದಲ್ಲಿ ಬಹುಶಃ ಕಾಂಗ್ರೆಸ್ ಊಹಿಸಿಕೊಳ್ಳಲಾರದ ಫಲಿತಾಂಶವನ್ನು ಕಾಣಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ನ ಸದ್ಯದ ಸ್ಥಿತಿಯಂತೂ ಚಿಂತಾಜನಕವಾಗಿದೆ. ಇನ್ನಾದರೂ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಅಂತಿಮ ಚುಕ್ಕಿ ಇಟ್ಟು ಪಕ್ಷದ ಹಿರಿಯರನ್ನು, ಅನುಭವಿ ನಾಯಕರನ್ನು, ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜಯ ಗಳಿಸಿ ಅಧಿಕಾರ ಹಿಡಿಯುವ ಭ್ರಮೆಯಿಂದ ಹೊರಬಂದು ಪಕ್ಷವನ್ನು ಸದೃಢಗೊಳಿಸುವತ್ತ ಕಾಂಗ್ರೆಸ್ ಕೆಲಸ ಮಾಡಿಲ್ಲವಾದಲ್ಲಿ ಕಾಂಗ್ರೆಸ್ ಒಂದು ಸಾಮಾನ್ಯ ಪ್ರಾದೇಶಿಕ ಪಕ್ಷದಂತೆ ಅಲ್ಲೋ ಇಲ್ಲೋ ಒಂದೆರಡು ಕಡೆಗಳಲ್ಲಿ ಅಸ್ತಿತ್ವ ಉಳಿಸಿಕೊಳ್ಳಬಹುದೇನೋ ಹೊರತಾಗಿ ಹೆಚ್ಚಲ್ಲ. ರಾಜಕೀಯದ ಬೆಳವಣಿಗೆಯನ್ನು ಯಾರಿಗೂ ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಈ ಎಲ್ಲದರ ನಡುವೆ ಕಾಂಗ್ರೆಸ್ ತನ್ನೊಳಗೇ ಇರುವ ಮೂಟೆ ರಾಶಿಯ ಸಮಸ್ಯೆಗಳನ್ನು ಹೇಗೆ ಸರಿಪಡಿಸಿಕೊಳ್ಳುತ್ತದೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿನ ಸದ್ಯದ ಕುತೂಹಲವಾಗಿದೆ.

-ಶ್ರೀರಾಜ್ ವಕ್ವಾಡಿ     

  



   

    

          


Wednesday, September 22, 2021

ಸಿದ್ದು ಪರ ಖರ್ಗೆ ಬ್ಯಾಟಿಂಗ್ | ಸೋನಿಯಾ ಅಭಯವಿದ್ದರೂ ಡಿಕೆಶಿಗೆ ನಾಯಕತ್ವ ಡೌಟ್ ಫುಲ್..!


ಪ್ರತಿಷ್ಠೆ, ನಾಯಕತ್ವದ ಮುಸುಕಿನ ಗುದ್ದಾಟದಲ್ಲಿ ಡಿಕೆಶಿ, ಸಿದ್ದು..? ಡಿಕೆಶಿ ವಿರುದ್ಧ ಖರ್ಗೆ ಯಾಕೆ ಮುನಿಸು..? 

ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದು ಹಾಗೂ ಅದಾದ ಬಳಿಕ ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ವಿಚಾರದಲ್ಲಾದ ‘ಪಾಲಿಟಿಕಲ್ ಹೈ ಡ್ರಾಮ’ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕಂತೂ ದೊಡ್ಡ ಮಟ್ಟದಲ್ಲಿ ಲಾಭ ಆಗುವಂತೆ ಕಾಣಿಸುತ್ತಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ಆಗುತ್ತಿವೆ. ಆದರೇ, ಕಾಂಗ್ರೆಸ್ ಆ ಲಾಭವನ್ನು ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದು ಬಹಳ ಮುಖ್ಯವಾಗಿದೆ. ರಾಜ್ಯ ಬಿಜೆಪಿಯಲ್ಲಿ ನಡೆದ ನಾಯಕತ್ವದ ಗೊಂದಲಗಳು, ಅಸಮಾಧಾನಗಳು, ಅತೃಪ್ತಿಗಳು ಒಂದೆಡೆಯಾದರೇ, ಇನ್ನೊಂದೆಡೆ ಕಾಂಗ್ರೆಸ್ ನಲ್ಲಿಯೂ ಈಗ ನಾಯಕತ್ವದ ಚರ್ಚೆ ಆರಂಭವಾಗಿದೆ. 

ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಮತ್ತೊಂದಿಷ್ಟು ದಿನಗಳು ಬಾಕಿ ಇರುವಾಗಲೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಹುದ್ದೆಯ ಬಗ್ಗೆ ಚರ್ಚೆ ಆರಂಭವಾಗಿದೆ. ವಿರೋಧ ಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರ ನಡುವೆ ಈಗಾಗಲೇ ಒಳಗಿಂದೊಳಗೆ ಪೈಪೋಟಿ ಆರಂಭವಾಗಿರುವುದು ಉಭಯ ನಾಯಕರ ನಡೆಗಳು ತೋರಿಸಿಕಕೊಡುತ್ತಿವೆ. ತಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂದು ಜನರಿಗೆ ತೋರಿಸುವುದಕ್ಕೆ ಉಭಯ ಕಾಂಗ್ರೆಸ್ ನ ದೈತ್ಯ ನಾಯಕರು ಪ್ರಯತ್ನ ಪಡುತ್ತಿದ್ದರೂ ಕೂಡ ಇಬ್ಬರಲ್ಲೂ ಪ್ರತಿಷ್ಠೆಯ ಕಿಚ್ಚು ಸಣ್ಣದಾಗಿ ಉರಿಯಲಾರಂಭಿಸಿದೆ ಎನ್ನುವುದಂತೂ ಅಕ್ಷರಶಃ ಸತ್ಯ.

ಪಂಜಾಬ್ ಕಾಂಗ್ರೆಸ್ ನಲ್ಲಿ ನಡೆದ ಗೊಂದಲಗಳು ಕರ್ನಾಟಕದಲ್ಲಿಯೂ ಆಗಬಹುದೇ ಎನ್ನುವ ಬಿಲಿಯನ್ ಡಾಲರ್ ಪ್ರಶ್ನೆಯೊಂದು ಈಗ ಹುಟ್ಟಿಕೊಂಡಿದೆ. ಪಂಜಾಬ್ ನಲ್ಲಿ ‘ಸಿಂಗ್ ದ್ವಯರ’ (ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಪಂಜಾಬ್ ನ ಪ್ರದೇಶ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನವಜಿತ್ ಸಿಂಗ್ ಸಿಧು) ಮುಸುಕಿನ ಗುದ್ದಾಟ ಅಂತಿಮವಾಗಿ ಪಂಜಾಬ್ ನ ಮುಖ್ಯಮಂತ್ರಿಯ ಅಚ್ಚರಿಯ ಆಯ್ಕೆ ಅಥವಾ ಬದಲಾವಣೆಯ ತನಕ ತಂದು ತಲುಪಿಸಿದ್ದು ಗೊತ್ತೇ ಇದೆ. ಆದರೇ, ಕರ್ನಾಟಕ್ಕೆ ಪಂಜಾಬ್ ನ ಸ್ಥಿತಿಯನ್ನು ಹೋಲಿಸುವುದಕ್ಕೆ ಸಾಧ್ಯವಿಲ್ಲ. ಆದರೇ, ಹಾಗಯೇ ಇಲ್ಲಿಯೂ ಆಗಬಹುದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. 

ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ವಿಚಾರವಾಗಿ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಪಂಜಾಬ್ ನ ಕಾಂಗ್ರೆಸ್ ನ ವಿಚಾರವಾಗಿ ನಡೆದ ಒಂದಿಷ್ಟು ಬೆಳವಣಿಗೆಯನ್ನು ಗಮನಿಸಿದರೇ, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ತಮ್ಮ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲೇಬೇಕು ಎನ್ನುವುದನ್ನು ಸ್ಪಷ್ಟವಾಗಿ ಕಾಣಿಸುತ್ತಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಗೊಂದಲದ ಗೂಡಾಗಿದೆ, ಅಮರಿಂದರ್ ಸಿಂಗ್ ನಾಯಕತ್ವ ಇನ್ಮುಂದೆ ಪಂಜಾಬ್ ನಲ್ಲಿ ನಡೆಯಲ್ಲ ಎಂಬ ಲೋಕಸಭೆಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ನೇತೃತ್ವದ ಸಮಿತಿಯ ನಿರ್ಧಾರವೇ ಮುಖ್ಯಮಂತ್ರಿ ಬದಲಾವಣೆಗೆ ಮುಖ್ಯ ಕಾರಣ ಎನ್ನಲಾಗುತ್ತಿದ್ದು, ಕರ್ನಾಟಕದಲ್ಲಿ ಡಿಕೆಶಿ ಪಡೆಗೆ ಎಚ್ಚರಿಕೆಯಂತಾಗಿದೆ ಎನ್ನುವುದು ಸತ್ಯ. ಖರ್ಗೆ ಮಾತಿಗೆ ಕಾಂಗ್ರೆಸ್ ಹೈಕಮಾಂಡ್ ಪಂಜಾಬ್ ವಿಚಾರಕ್ಕೆ ಅಸ್ತು ಎಂದಿದೆ ಎಂದಾದಲ್ಲಿ ಕರ್ನಾಟಕದ ವಿಚಾರದಲ್ಲಿಯೂ ಖರ್ಗೆ ಮಾತಿಗೆ ಹೈಕಮಾಂಡ್ ಬೆಲೆ ನೀಡಿಯೇ ನೀಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಕರ್ನಾಟಕದ ವಿಚಾರದಲ್ಲಿ ಖರ್ಗೆ ಸಿದ್ದು ಪರ ಬ್ಯಾಟಿಂಗ್..!?

ಡಿ. ಕೆ ಶಿವಕುಮಾರ್ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನೇತೃತ್ವದ ಸರ್ಕಾರ ಇದ್ದಾಗ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಿರುವುದು ಗೊತ್ತೇ ಇರುವ ವಿಚಾರ. ಆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಕಾಂಗ್ರೆಸ್ ನ ಹಿರಿಯ ನಾಯಕರಿಗೆ ಸಣ್ಣ ಮಟ್ಟಿನ ಅವಮಾಧಾನವಾಗಿತ್ತು. ಡಿಕೆಶಿ ಬೆಳವಣಿಗೆ ಖರ್ಗೆ ಅವರನ್ನು ಒಳಗೊಂಡು ಹಲವು ನಾಯಕರಿಗೆ ಅಸಮಧಾನ ಉಂಟು ಮಾಡಿದ್ದಂತೂ ಸುಳ್ಳಲ್ಲ. ಕಾಂಗ್ರೆಸ್ ನ ಹೈಕಮಾಂಡ್ ಪಕ್ಷದ ವಿಚಾರವಾಗಿ ಹಾಗೂ ವೈಯಕ್ತಿಕವಾಗಿ ಡಿಕೆಶಿಯನ್ನು ಬೆಂಬಲಿಸಿದ್ದು ಹಲವು ನಾಯಕರ ಕೆಂಗಣ್ಣಿಗೂ ಗುರಿಯಾಗಿದೆ. ಅದು ಸ್ವತಃ ಡಿಕೆಶಿ ಅವರಿಗೂ ಗೊತ್ತಿದೆ. ರಾಜ್ಯದಲ್ಲಿ ಡಿಕೆಶಿ ತಮ್ಮ ಪ್ರತಿಷ್ಠೆಯನ್ನು ವೃದ್ಧಿಸಿಕೊಳ್ಳುವುದಕ್ಕೆ ಹೆಚ್ಚು ಪ್ರಾಶಸ್ಯ ನೀಡುತ್ತಿದ್ದಾರೆ. ಪಕ್ಷಕ್ಕಿಂತ ವೈಯಕ್ತಿಕ ಹಿತಾಸಕ್ತಿಯೇ ಅವರಿಗೆ ಜಾಸ್ತಿಯಾಗಿದೆ. ತಮ್ಮ ಪ್ರಚಾರಕ್ಕಾಗಿ ಒಂದು ಟೀಮ್ ನನ್ನೇ ಡಿಕೆಶಿ ಕಟ್ಟಿಕೊಂಡಿದ್ದಾರೆ ಎಂಬ ಮಾತನ್ನು ಖರ್ಗೆ ಕಾಂಗ್ರೆಸ್ ನ ಹೈಕಮಾಂಡ್ ಗೆ ಒಪ್ಪಿಸುತ್ತಿದ್ದಂತೆ, ಹೈಕಮಾಂಡ್ ಖರ್ಗೆ ಮಾತಿಗೆ ಬೆಲೆ ಕೊಟ್ಟು ಡಿಕೆಶಿ ಪ್ರಚಾರಕ್ಕಾಗಿ ಇಟ್ಟುಕೊಂಡಿದ್ದ ಟೀಮ್ ನನ್ನು ಹೊರಗೆ ಕಳುಸಿತು ಎನ್ನುವುದೊಂದೇ ಸಾಕು ಖರ್ಗೆ ಮಾತಿಗೆ ಕಾಂಗ್ರೆಸ್ ನೀಡುವ ಬೆಲೆ ಎಷ್ಟು ಎನ್ನುವುದನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. 

ಇನ್ನು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆಗೆ ದೊಡ್ಡ ಪ್ರಮಾಣದ ವಿರೋಧದ ನಡುವೆಯೂ ಅವಕಾಶ ಕೊಟ್ಟಿರುವ ಋಣ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇರುವ ಕಾರಣದಿಂದಾಗಿ ಅವರು ಸಿದ್ದರಾಮಯ್ಯ ಪರವಾಗಿಯೇ ಬ್ಯಾಟಿಂಗ್ ಮಾಡುತ್ತಾರೆ ಎನ್ನುವುದು ಸ್ಪಷ್ಟ. ಖರ್ಗೆ ಕರ್ನಾಟಕದ ಮೂಲದವರು, ಪಕ್ಷದ ಹಿರಿಯ ನಾಯಕರು ಆಗಿರುವುದರಿಂದ ಈ ಎಲ್ಲಾ ಹಿನ್ನೆಲೆಯಲ್ಲಿ ಖರ್ಗೆ ಸಿದ್ದರಾಮಯ್ಯ ಅವರ ಹೆಸರನ್ನೇ ಶಿಫಾರಸ್ಸು ಮಾಡುವ ಸಾಧ್ಯತೆ ಹೆಚ್ಚಿದ್ದು, ಕಾಂಗ್ರೆಸ್ ಹೈಕಮಾಂಡ್ ಕೂಡ ಖರ್ಗೆ ಮಾತಿಗೆ ಅಸ್ತು ಹೇಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಡಿಕೆಶಿಗೆ ಸೋನಿಯಾ ಅಭಯವಿದ್ದರೂ ಕರ್ನಾಟಕದ ನಾಯಕತ್ವ ಡೌಟ್ ಫುಲ್..!

ಸೋನಿಯಾ ಗಾಂಧಿ ಪಕ್ಷದ ಪರಮೋಚ್ಛ ನಾಯಕಿಯಾದರೂ ಕೂಡ ಕೊನೆಗೆ ನಡೆಯುವ ಮಾತು ರಾಹುಲ್ ಗಾಂಧಿ ಅವರದ್ದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಕೆಪಿಸಿಸಿ ಅಧ್ಯಕ್ಷ ಸ್ಥಾನವು ಪಡೆಯುವುದಕ್ಕೆ ಡಿಕೆಶಿ ಎಷ್ಟು ಹರಸಾಹಸ ಪಟ್ಟಿದ್ದರೂ ಎನ್ನುವುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಡಿಕೆಶಿ ಅವರ ಪ್ರಯತ್ನ ಒಂದಿಷ್ಟು ಕಡಿಮೆಯಾಗಿದ್ದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂ ಬಿ ಪಾಟೀಲ್ ಗೆ ಹೈಕಮಾಂಡ್ ಮಣೆ ಹಾಕುತ್ತಿತ್ತು. ಆ ಮಟ್ಟಿಗೆ ಡಿಕೆಶಿ ಜಾಣ ನಡೆಯನ್ನು ಪ್ರದರ್ಶಿಸಿದ್ದರು ಎಂದರೇ ತಪ್ಪಿಲ್ಲ. ಆದರೇ, ವಿಧಾನ ಸಭಾ ಚುಣಾವಣಾ ನಾಯಕತ್ವ ಡಿಕೆಶಿಗೆ ಒಲಿಯುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದೇ ಹೇಳಲಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ಹೋಲಿಸಿದರೇ ಡಿಕೆಶಿ ಅವರ ಬೆಂಬಲಿಗರ ಸಂಖ್ಯೆ ಕಡಿಮೆ ಇದೆ ಎನ್ನುವುದು ಸ್ವತಃ ಡಿಕೆಶಿಗೂ ಗೊತ್ತಿದೆ. ಅದೇ ಕಾರಣದಿಂದಾಗಿ, ರಾಜ್ಯದಾದ್ಯಂತ ತಮ್ಮ ಬೆಂಬಲಿಗರ ಪಡೆಯನ್ನು ವೃದ್ಧಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಇನ್ನು ಉಳಿದಿದ್ದು ಕೆಲವೇ ಕೆಲವು ತಿಂಗಳುಗಳು ಆ ಅವಧಿಯಲ್ಲಿ ಸಿದ್ದರಾಮಯ್ಯ ಅವರಿಗೆ ನಾಯತ್ವದ ವಿಚಾರದಲ್ಲಿ ಸಮನಾಗಿ ಡಿಕೆಶಿ ನಿಲ್ಲುತ್ತಾರೆಯೇ ಎನ್ನುವುದೇ ಯಕ್ಷ ಪ್ರಶ್ನೆ. ಅದೆಂತಹುದ್ದೇ ಪ್ರಯತ್ನವು ಡಿಕೆಶಿ ಮಾಡಿದರೂ, ರಾಹುಲ್ ಗಾಂಧಿ ಟೀಮ್ ನಲ್ಲಿಯೇ ಮಲ್ಲಿಕಾರ್ಜುನ ಖರ್ಗೆ ಗುರುತಿಸಿಕೊಂಡಿರುವ ಕಾರಣದಿಂದಾಗಿ ಡಿಕೆಶಿ ಬಗ್ಗೆ ಖರ್ಗೆ ಅಸಮಾಧಾನದ ಸಲಹೆಯನ್ನೇ ನೀಡುತ್ತಾರೆ ಎನ್ನುವುದಕ್ಕೆ ಡಿಕೆಶಿ ವಿಚಾರವಾಗಿ ಖರ್ಗೆ ತೆಗೆದುಕೊಂಡಿರುವ ಕೆಲವು ನಿರ್ಧಾರಗಳೇ ಸಾಕು. ಹಾಗಾಗಿ ಸೋನಿಯಾ ಗಾಂಧಿ ಅವರ ಕೃಪಾಕಟಾಕ್ಷ ಕನಕಪುರ ಬಂಡೆ ಮೇಲೆ ಇದ್ದರೂ  ಕರ್ನಾಟಕ ಕಾಂಗ್ರೆಸ್ ನ ನಾಯಕತ್ವವನ್ನು ನೀಡುವುದಕ್ಕೆ ರಾಹುಲ್ ಟೀಮ್ ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.   

ಸಿದ್ದರಾಮಯ್ಯ ಜನಪ್ರಿಯತೆ ಕುಗ್ಗದಿರುವುದೇ ಡಿಕೆಶಿಗೆ ಪ್ರಾಬ್ಲಂ..!

ಅವಧಿ ಪೂರ್ಣಗೊಳಿಸಿ ಯಶಸ್ವಿ ಸರ್ಕಾರವನ್ನು ನಡೆಸಿದ ಸಿದ್ದರಾಮಯ್ಯ ಅವರ ಜನಪ್ರಿಯತೆ ಇಂದಿಗೂ ಹಾಗೆಯೇ ಇದೆ ಎನ್ನುವುದೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ಡೊಡ್ಡ ತಲೆ ನೋವಾಗಿದೆ. ಬಿಜೆಪಿಯಂತಹ ಹಿಂದುತ್ವವಾದಿ ಪಕ್ಷದ ಬಲವಾದ ವಿರೋಧದ ನಡುವೆಯೂ ಯಶಸ್ವಿಯಾಗಿ ಐದು ವರ್ಷ ಆಡಳಿತ ನಡೆಸಿದ ಕೀರ್ತಿ ಹಾಗೂ ನಂತರದ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬೇಕಾಗುವಷ್ಟು ಸೀಟ್ ಬರಲಿಲ್ಲವಾದರೂ ಬಿಜೆಪಿಯನ್ನು ಅಧಿಕಾರ ಹಿಡಿಯದಂತೆ ಮಾಡುವಲ್ಲಿ ಪೈಪೋಟಿ ನೀಡಿದ ಸಿದ್ದರಾಮಯ್ಯ ನೇತೃತ್ವದ ಪಕ್ಷದ ಬಗ್ಗೆ ಹೈಕಮಾಂಡ್ ಗೆ ದೊಡ್ಡ ಮಟ್ಟಿನ ವಿಶ್ವಾಸ ಇರುವುದರಿಂದ ಹಾಗೂ ಸಿದ್ದರಾಮಯ್ಯ ಒಬ್ಬ ಮುಖ್ಯಮಂತ್ರಿಯಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ನೇರಾ ನೇರವಾಗಿ ಪ್ರತಿಕ್ರಿಯಿಸಿ ರಾಷ್ಟç ಮಟ್ಟದಲ್ಲಿಯೂ ಗುರುತಿಸಿಕೊಂಡಿರುವ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದು ಮೇಲೆ ಬಹಳ ದೊಡ್ಡ ವಿಶ್ವಾಸ ಇದೆ ಎಂದು ಕಾಣಿಸುತ್ತಿದೆ. ಇನ್ನು, ಹಿಂದಿನ ವಿಧಾನ ಸಭಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ಡಿಕೆಶಿಯಾದರೂ, ಅವರ ರಾಜಕೀಯ ಬದುಕಿಗೆ ಅಂಟಿಕೊ0ಡ ಕೆಲವು ಕಪ್ಪು ಚುಕ್ಕೆಗಳು ಮುಂದೆ ಕಾಂಗ್ರೆಸ್ ನ ನೇತೃತ್ವದ ಹೊಣೆಗಾರಿಕೆ ಡಿಕೆಶಿ ಹೆಗಲ ಮೇಲೆ ಹಾಕಿದರೇ, ವರ್ಕೌಟ್ ಆಗುವುದಿಲ್ಲ ಎನ್ನುವುದು ಹೈಕಮಾಂಡ್ ಗೆ ಚೆನ್ನಾಗಿ ಗೊತ್ತಿದೆ. 

ಶಾಸಕರ ಮನ ಓಲೈಕೆಗೆ ಡಿಕೆಶಿ ಶತಪ್ರಯತ್ನ..!

ಜನಪ್ರಿಯತೆಯ ವಿಚಾರಕ್ಕೆ ಬಂದರೇ, ಶಿವಕುಮಾರ್ ಅವರಿಗಿಂತ ಸಿದ್ದರಾಮಯ್ಯ ಅವರಿಗೇ ಹೆಚ್ಚು ಶಾಸಕರ ಬೆಂಬಲ ಇರುವುದರಿಂದ ಡಿಕೆಶಿ ಶಾಸಕರ ಮನ ಓಲೈಕೆಯ ಪ್ರಯತ್ನದಲ್ಲಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ತಮ್ಮ ಬೆಂಬಲಿಗರ ಪಡೆಯನ್ನು ವಿಸ್ತರಿಸಿಕೊಳ್ಳುವತ್ತ ಡಿಕೆಶಿ ಮುಖಮಾಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ನ ಅತೃಪ್ತ ನಾಯಕರ ಮನವೊಲಿಸಿ ತಮ್ಮ ಟೀಮ್ ಗೆ ಸೇರಿಸಿಕೊಳ್ಳುವತ್ತ ಪ್ರಯತ್ನದಲ್ಲಿದ್ದಾರೆ ಎಂಬ ಗುಸುಗುಸು ಚರ್ಚೆಯಾಗುತ್ತಿದೆ. ಹಲವರನ್ನು ಈಗಾಗಲೇ ಡಿಕೆಶಿ ಸಂಪರ್ಕಿಸಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಇನ್ನು, ಪಕ್ಷ ವೃದ್ಧಿಸಿಕೊಳ್ಳುವ ಹಾಗೂ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳುವುದು ಡಿಕೆಶಿಗೇನೂ ಹೊಸತಲ್ಲ. ೨೦೦೧ ರಲ್ಲಿ ಮಹಾರಾಷ್ಟç ಕಾಂಗ್ರೆಸ್ ಗಿದ್ದ ಬಿಕ್ಕಟ್ಟಿನ ಸಮಯದಲ್ಲಿ ಡಿಕೆಶಿ ವಹಿಸಿದ ನಿರ್ಣಾಯಕ ಪಾತ್ರ, ೨೦೧೭ ರಲ್ಲಿ ಪಕ್ಷಾಂತಕ್ಕೆ ಮುಂದಾಗಿದ್ದ ಸುಮಾರು ೪೨ ಗುಜರಾತ್ ನ ಶಾಸಕರನ್ನು ಬೆಂಗಳೂರಿನ ತಮ್ಮ ರೆಸಾರ್ಟ್ ನಲ್ಲಿ ಇರಿಸಿ, ಪಕ್ಷಾಂತರವಾಗದೇ ಇರುವಂತೆ ನೋಡಿಕೊಂಡು ಪಕ್ಷದ ಏಳ್ಗೆಗೆ ದುಡಿದ ಇತಿಹಾಸ ಡಿಕೆಶಿ ಜೊತೆಗಿದೆ. ಆದರೇ, ಕರ್ನಾಟಕದಲ್ಲಿ ಅಂತಹ ಛಾಪು ಡಿಕೆಶಿ ಉಳಿಸಿಕೊಂಡಿದ್ದಾರೆಯೇ, ಬೆಳೆಸಿಕೊಂಡಿದ್ದಾರೆಯೇ ಎನ್ನುವುದು ಇಲ್ಲಿ ಪ್ರಮುಖ ವಿಷಯವಾಗಿದೆ.  

ಚುನಾವಣೆಯಾದ ಬಳಿಕೆ ಟಗರು ವರ್ಸಸ್ ಬಂಡೆ..!?

ಪಕ್ಷದ ಏಳ್ಗೆಗಾಗಿ, ಬಲವರ್ಧನೆಗಾಗಿ ಕಾಂಗ್ರೆಸ್ ಹೈಕಮಾಂಡ್ ಈಗ ರಾಜ್ಯದ ಪ್ರಬಲ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆಶಿಯವರಿಗೆ ಜೊತೆಯಾಗಿ ಕೆಲಸ ಮಾಡಿ ಎಂದು ಸೂಚಿಸಿದೆ. ಆದರೇ, ಇಬ್ಬರಲ್ಲೂ ನಾಯಕತ್ವದ ಮೋಹ ಇದೆ ಎನ್ನುವುದು ಸ್ಪಷ್ಟ. ಮುಖ್ಯಮಂತ್ರಿ ಅಭ್ಯರ್ಥಿ ಅಥವಾ ಕೆಪಿಸಿಸಿ ನಾಯಕತ್ವದ ಬದಲಾವಣೆಯ ವಿಚಾರ ಬಂದಾಗ ಉಭಯ ನಾಯಕರು ಬಂಡಾಯ ಏಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚುನಾವಣೆಯ ತನಕ ಜೊತೆಗಿದ್ದು, ತದನಂತರ ರಾಜ್ಯ ಕಾಂಗ್ರೆಸ್ ಮನೆಯೊಂದು ಎರಡು ಬಾಗಿಲು ಎಂಬ0ತಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಜನರ ಮುಂದೆ ನಾವೆಲ್ಲಾ ಒಂದೇ ಎಂದು ಹೇಳಿಕೊಂಡು ಸಿದ್ದು ಹಾಗೂ ಡಿಕೆಶಿ ಇದ್ದರೂ ನಾಯಕತ್ವದ ವಿಚಾರದಲ್ಲಿ ವೈರಿಗಳಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗುತ್ತಿದೆ. 

ಇವರೆಲ್ಲಾ ಡಿಕೆಶಿ ಟೀಮ್ ಗೆ ಎಂಟ್ರಿ..?

ಬಿಜೆಪಿಯಲ್ಲಿನ ಅನುಭವಿ ಅತೃಪ್ತ ನಾಯಕರನ್ನು ಕಾಂಗ್ರೆಸ್ ಗೆ, ಅದರಲ್ಲಿಯೂ ತಮ್ಮ ಟೀಮ್ ಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಡಿಕೆಶಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ರಮೇಶ್ ಜಾರಕಿಹೊಳಿ ಹಾಗೂ ಜೊಲ್ಲೆ ಫ್ಯಾಮಿಲಿಯನ್ನು ಎದುರಿಸುವ ಕಾರಣದಿಂದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಂಪುಟದ ಅರಣ್ಯ ಹಾಗೂ ಆಹಾರ ಇಲಾಖೆಯಯ ಸಚಿವ ಉಮೇಶ್ ಕತ್ತಿ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಪ್ರಯತ್ನ ಮಾಡುವುದರ ಮೂಲಕ ಬೆಳಗಾವಿಯಲ್ಲಿ ತಮ್ಮ ಟೀಮ್ ನ ಬಲವರ್ದನೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನು, ತುಮುಕೂರಿನ ಬಿಜೆಪಿ ಸಂಸದ ಬಸವರಾಜು, ಬಸವರಾಜು ಪುತ್ರ ಜ್ಯೋತಿ ಗಣೇಶ್, ಹಳೆಮೈಸೂರು ಭಾಗದ ಶ್ರೀನಿವಾಸ್ ಪ್ರಸಾದ್, ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಹರ್ಷವರ್ಧನ್, ಸಚಿವ ಸಂಪುಟದ ವಿಚಾರಕ್ಕೆ ಸಂಬ0ಧಿಸಿದ0ತೆ ತಮ್ಮ ಪಕ್ಷದ ವಿರುದ್ಧವೇ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತ ಪಡಿಸಿದ ಗೊಲ್ಲ ಸಮುದಾಯದ ಹಿರಿಯೂರಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ರಾಯಚೂರಿನ ದೇವದುರ್ಗದ ಶಾಸಕ ಶಿವನಗೌಡ ನಾಯಕ್, ವಲಸೆ ಬಂದು ಬಿಜೆಪಿ ಸರ್ಕಾರದ ರಚನೆಗೆ ಸಹಕಾರ ನೀಡಿದ, ಪ್ರಸ್ತುತ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸಂಪುಟದಲ್ಲಿ ಸ್ಥಾನ ಪಡೆದಿರುವ ಕೆ. ಗೋಪಾಲಯ್ಯ (ಅಬಕಾರಿ ಇಲಾಖೆಯ ಸಚಿವ) ಹಾಗೂ ನಾರಾಯಣ ಗೌಡ (ಕ್ರೀಡೆ ಹಾಗೂ ರೇಷ್ಮೆ ಇಲಾಖೆಯ ಸಚಿವ) ಅವರನ್ನು ಕೂಡ ತಮ್ಮ ಕೈ ಬಲ ಪಡಿಸಿಕೊಳ್ಳುವ ಕಾರಣದಿಂದಾಗಿ ಸಂಪರ್ಕ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. 

ಒಟ್ಟಿನಲ್ಲಿ, ನಾಯಕತ್ವಕ್ಕಾಗಿ ಯಾರು ಬೆವರು ಸುರಿಸುತ್ತಿದ್ದಾರೋ ಇಲ್ಲವೋ, ಆದರೇ, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮಾತ್ರ ರಾಜ್ಯದಾದ್ಯಂತ ಪ್ರಯತ್ನದಲ್ಲಿದ್ದಾರೆ ಎನ್ನುವುದಂತೂ ಸತ್ಯ. ಇನ್ನು, ಬರುವ ವಿಧಾನ ಸಭಾ ಚುನಾವಣೆಗೆ ಡಿಕೆಶಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡುತ್ತದಾ..? ಸಿದ್ದರಾಮಯ್ಯ ಅವರನ್ನೇ ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುತ್ತದಾ..? ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಕೂಡ ಕಳೆದುಕೊಳ್ಳುತ್ತಾರಾ..? ಇಷ್ಟೆಲ್ಲಾ ಪ್ರಚಾರ ಮಾಡಿಕೊಳ್ಳುತ್ತಿರುವ ಡಿಕೆಶಿಯವರ ಪ್ರಯತ್ನ ಸಂಪೂರ್ಣ ವಿಫಲವಾಗುತ್ತದಾ..? ಡಿಕೆಶಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಅಚ್ಚರಿಯ ಆಯ್ಕೆ ಮಾಡುತ್ತದಾ ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿದ್ದಲ್ಲದೇ, ಈ ಆಪರೇಶನ್ ನಲ್ಲಿ ಡಿಕೆಶಿ ಸಕ್ಸಸ್ ಸ್ಟೋರಿ ಬರೆಯುತ್ತಾರೆಯೇ ಎಂಬುವುದನ್ನು ಕಾದು ನೋಡಬೇಕಾಗಿದೆ.    

-ಶ್ರೀರಾಜ್ ವಕ್ವಾಡಿ     

          


Sunday, August 22, 2021

ಯುನೈಟೆಡ್ ಕಿಂಗ್‌ ಡಂ ನ ಮಹಿಳೆಯರು ಅಲ್ಲಿನ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಂಡಿರುವುದ್ಯಾಕೆ..?

 


ವಿಶ್ವದ ಅಗ್ರಗಣ್ಯ ಶಕ್ತಿಯಾಗಿದ್ದ ಬ್ರಿಟನ್ ನಲ್ಲಿ ಲೈಂಗಿಕ ಕಿರುಕುಳ ಅನುಭವಿಸದೇ ಇರುವ ಮಹಿಳೆಯರೇ ಇಲ್ಲ..!

ಯುಕೆಯು ಒಂದು ಅಭಿವೃದ್ಧಿ ಹೊಂದಿದ ದೇಶವಾಗಿದ್ದು, ಅತ್ಯಲ್ಪ ಮೊತ್ತದ ಜಿಡಿಪಿಗೆ ಸಂಬಂಧಿಸಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯನ್ನು ಹಾಗೂ ಖರೀದಿ ಸಾಮರ್ಥ್ಯದ ಹೋಲಿಕೆಗೆ ಸಂಬಂಧಿಸಿ ವಿಶ್ವದ ಏಳನೇ ಅತಿದೊಡ್ಡಆರ್ಥಿಕತೆಯನ್ನು ಹೊಂದಿದೆ.  ವಿಶ್ವದ ಮೊದಲ ಕೈಗಾರಿಕೀಕೃತ ದೇಶವಾಗಿತ್ತು ಹಾಗೂ 19ನೇ ಹಾಗೂ 20ನೇ ಶತಮಾನಗಳ ಅವಧಿಯಲ್ಲಿ ವಿಶ್ವದ ಅಗ್ರಗಣ್ಯ ಶಕ್ತಿಯಾಗಿತ್ತು. ಆದರೆ ಎರಡು ಜಾಗತಿಕ ಸಮರಗಳ ಆರ್ಥಿಕ ವೆಚ್ಚ ಹಾಗೂ 20ನೇ ಶತಮಾನದ ದ್ವಿತೀಯಾರ್ಧದಲ್ಲಿನ ತನ್ನ ಚಕ್ರಾಧಿಪತ್ಯದ ಕುಸಿತದಿಂದಾಗಿ ಜಾಗತಿಕ ವಿದ್ಯಮಾನಗಳಲ್ಲಿ ಅದರ ಅಗ್ರಗಣ್ಯ ಪಾತ್ರವು ಕುಗ್ಗಿಹೋಯಿತು. 

ಇಷ್ಟಾಗಿಯೂ ಸಹ ಸದೃಢವಾದ ಆರ್ಥಿಕ, ಸಾಂಸ್ಕೃತಿಕ, ಸೈನಿಕ, ವೈಜ್ಞಾನಿಕ ಮತ್ತು ರಾಜಕೀಯ ಪ್ರಭಾವಗಳೊಂದಿಗೆ ಇಂಗ್ಲೆಂಡ್ ಪ್ರಮುಖ ಶಕ್ತಿಯಾಗಿಯೇ ಉಳಿದಿದೆ. ಮಾತ್ರವಲ್ಲದೇ ಇಂಗ್ಲೆಂಡ್ ಅಣ್ವಸ್ತ್ರ ಶಕ್ತಿಯಾಗಿದ್ದು, ರಕ್ಷಣಾ ವೆಚ್ಚಗಳಿಗೆ ಸಂಬಂಧಿಸಿ ವಿಶ್ವದಲ್ಲೇ ನಾಲ್ಕನೇ ಉನ್ನತ ಸ್ಥಾನವನ್ನು ಹೊಂದಿದೆ. ಐರೋಪ್ಯ ಒಕ್ಕೂಟದಲ್ಲಿ ಇದೊಂದು ಸದಸ್ಯ ಸಂಸ್ಥಾನವಾಗಿದ್ದು, ಸಂಯುಕ್ತ ರಾಷ್ಟ್ರಗಳ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನವನ್ನು ಹೊಂದಿದೆ. 

ಯುನೈಟೆಡ್ ಕಿಂಗ್‌ ಡಂ ಒಂದು ಸಾಂವಿಧಾನಿಕ ರಾಜಪ್ರಭುತ್ವದ ಮತ್ತು ಏಕೀಕೃತ ಸಂಸ್ಥಾನವಾಗಿದ್ದು, ಇಂಗ್ಲೆಂಡ್, ಉತ್ತರ ಐರ್ಲೆಂಡ್, ಸ್ಕಾಟ್ಲೆಂಡ್ ಹಾಗೂ ವೇಲ್ಸ್ ಎಂಬ ನಾಲ್ಕು ದೇಶಗಳನ್ನು ಒಳಗೊಂಡಿದೆ.

ತನ್ನ ರಾಜಧಾನಿಯಾದ ಲಂಡನ್‌ ನಲ್ಲಿ ಇದರ ಸರ್ಕಾರದ ಅಧಿಕಾರ ಕೇಂದ್ರವಿದ್ದು ಸಂಸದೀಯ ವ್ಯವಸ್ಥೆಯಿಂದ ಆಳಲ್ಪಡುತ್ತಿದೆಯಾದರೂ, ಕ್ರಮವಾಗಿ ಉತ್ತರ ಐರ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ಲೆಂಡ್‌ ನ ರಾಜಧಾನಿಗಳಾದ ಬೆಲ್‌ಫಾಸ್ಟ್‌, ಕಾರ್ಡಿಫ್ ಹಾಗೂ ಎಡಿನ್‌ ಬರ್ಗ್‌ ಗಳಲ್ಲಿರುವ ಮೂರು ಪ್ರಾತಿನಿಧಿಕ ರಾಷ್ಟ್ರೀಯ ಆಡಳಿತಗಳೂ ಈ ಆಳ್ವಿಕೆಯ ಜೊತೆಗಿವೆ. 

ಇಷ್ಟೆಲ್ಲಾ ಇರುವ ಇಂಗ್ಲೆಂಡ್ ನಲ್ಲಿ ಮಹಿಳೆಯರು ನಿತ್ಯ ನಿರಂತರವಾಗಿ ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಿದ್ದಾರೆಂದರೇ, ನೀವು ಒಪ್ಪಲೇ ಬೇಕು. ಹೌದು, ಬಹುತೇಕ ಬ್ರಿಟನ್ ನ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಬಲಿಪಶುಗಳಾಗಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆಯಾದ  ಸಮೀಕ್ಷೆಯ ವರದಿವೊಂದು ಮಾಹಿತಿ ನೀಡಿದೆ.

ಸಮೀಕ್ಷೆಗೆ ಒಳಗೊಂಡ ಬಹುತೇಕ ಎಲ್ಲಾ 18 ರಿಂದ 24 ವರ್ಷದೊಳಗಿನ ಮಹಿಳೆಯರು  ಸಾರ್ವಜನಿಕ ವಲಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ್ದಾರೆ ಎಂದು ಹೇಳಿಕೊಂಡಿದ್ದಾರೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

ಯುನೈಟೆಡ್ ಸ್ಟೇಷನ್ಸ್ ಈಕ್ವಿಟಿ ಫಾರ್ ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಅಥವಾ ವುಮೆನ್ ಯು ಕೆ ನಡೆಸಿದ ಸಮೀಕ್ಷೆಯಲ್ಲಿ ಈ ರೀತಿಯ ವರದಿಯಾಗಿದೆ ಎಂದು ತಿಳಿದು ಬಂದಿದೆ.

ಬ್ರಿಟಿಷ್ ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ ಯುಗೊವ್ ಮೂಲಕ ನಡೆಸಿದ ಈ ಸಮೀಕ್ಷೆಯಲ್ಲಿ ಶೇಕಡಾ 97ರಷ್ಟು ಮಹಿಳೆಯರು ತಮಗಾದ ಲೈಂಗಿಕ ಕಿರುಕುಳವನ್ನು ಹೇಳಿಕೊಳ್ಳುವುದಕ್ಕೆ ಮುಜುಗರ ಪಟ್ಟರೇ, ಶೇಕಡಾ 45 ರಷ್ಟು ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸಿಯಾದ ಮೇಲೆ ಹೇಳಿ ಪ್ರಯೋಜನ ಇಲ್ಲ, ಹೇಳಿಕೊಳ್ಳುವುದರಿಂದ ವ್ಯವಸ್ಥೆಯಲ್ಲಿ ಏನು ಬದಲಾಗುವುದಿಲ್ಲ ಎಂದು ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ಬಹುತೇಕ ಎಲ್ಲಾ ಮಹಿಳೆಯರು ವ್ಯವಸ್ಥೆಯ ಬಗ್ಗೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಈ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ದಿ ಗಾರ್ಡಿಯನ್ ನೊಂದಿಗೆ ನಡೆಸಿದ ಒಂದು ಸಂದರ್ಶನದಲ್ಲಿ ವುಮೆನ್ ಯು ಕೆ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕಿ ಕ್ಲೇರ್ ಬಾರ್ನೆಟ್, ಯುವತಿಯರು ಸಮಾಜದಲ್ಲಿ ಕೆಲವರು ತಮ್ಮನ್ನು ಒಂದು ವಸ್ತುವಾಗಿ ನೋಡುತ್ತಿರುವ ವಿರುದ್ಧ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡಿದ್ದಾರೆ. ಒಂದಿಷ್ಟು ಧೈರ್ಯಶಾಲಿಯಾಗಿದ್ದಾರೆ. ಆದರೇ, ವಯಸ್ಸಾದ ಮಹಿಳೆಯರು ಕತ್ತಲಾದಾಗ ಹಾಗೂ ಇನ್ನು ಕೆಲವು ಸಂದರ್ಭದಲ್ಲಿ ತಮ್ಮ ರಕ್ಷಣೆಯ ಬಗ್ಗೆ ಭಯ ಪಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ನಾವಿಂದು ಮಹಿಳೆಯ ಸಬಲೀಕರಣ ಆಗುತ್ತಿದೆ ಎಂದು ಬಯಸುತ್ತೇವೆ ಆದರೇ, ಇಂದು ಪ್ರತಿ ಮನೆ ಮನೆಯಲ್ಲೂ ಮಹಿಳೆ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾಳೆ. ಮಿತಿಯೊಳಗೆ ಬದುಕುತ್ತಾಳೆ. ಅದನ್ನು ವ್ಯಕ್ತ ಪಡಿಸುವುದಕ್ಕಾಗೆ ಪರದಾಡುತ್ತಾಳೆ. ಇದು ಮಾನವ ಹಕ್ಕುಗಳ ಬಿಕ್ಕಟ್ಟು ಎಂದು ಸಹ ಬಾರ್ನಟ್ ಹೇಳಿಕೊಂಡಿದ್ದಾರೆ.

ಪ್ರಪಂಚದಾದ್ಯಂತ ಲಿಂಗಭೇದಭಾವದ ಉದಾಹರಣೆಗಳನ್ನು ದಾಖಲಿಸುವ ಗುರಿಯನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿರುಯವ ವೆಬ್ ಸೈಟ್ ‘ಎವರಿಡೆ ಸೆಕ್ಸಿಸಮ್ ಪ್ರಾಜೆಕ್ಟ್’ ನ ಸಂಸ್ಥಾಪಕಿ ಲಾರಾ ಬೇಟ್ಸ್ ಮಹಿಳೆಯರು ತಮ್ಮ ಸುತ್ತಲಿನ ವ್ಯವಸ್ಥೆಯ ಬಗ್ಗೆ ಸಂಪೂರ್ಣ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

-ಶ್ರೀರಾಜ್ ವಕ್ವಾಡಿ

Sunday, August 15, 2021

ಪೋರ್ನೋಗ್ರಫಿ ಸ್ಟಾರ್ ಮತೀಯ ವೈಷಮ್ಯದಲ್ಲಿ ಬೆಂದಿದ್ದೇಕೆ..?

 


ಮಾಡೆಲಿಂಗ್ ಕ್ಷೇತ್ರವೆಂದು ಮಿಯಾ ಕಲೀಫ ಕಾಲಿಟ್ಟಿದ್ದು ‘ಸೆಕ್ಸ್’ ಲೋಕಕ್ಕೆ..!

ಮಿಯಾ ಕಲೀಫ ಪೋರ್ನೋಗ್ರಫಿ ನಟಿ ಎಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ. ಆದರೇ, ಆಕೆಯ ಅದರ ಆಚೆಗಿನ ಬದುಕಿನ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ. 

ಗೂಗಲ್, ವಿಕಿಪೀಡಿಯ ಎಲ್ಲಿಯೂ ಇಲ್ಲದ ಮಿಯಾ ಕಲೀಫ ಎಂಬ ಪೋರ್ನೋಗ್ರಫಿ ನಟಿಯ ಬದುಕಿನ ಹಿಂದಿನ ಕಥೆಯನ್ನು ತೆರೆದಿಡುವ ಪ್ರಯತ್ನ ಈ ಲೇಖಬದಲ್ಲಿದೆ. 

ಜಗತ್ತಿನಾದ್ಯಂತ 2016 ಹಾಗೂ 2018 ರಲ್ಲಿ ಪೋರ್ನ್ ಕ್ಷೇತ್ರದಲ್ಲಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಸರ್ಚ್ ಆದ ಹೆಸರು ಮಿಯಾ ಕಲೀಫ. 

ಪೋರ್ನೋಗ್ರಫಿಯಲ್ಲಿ ದೊಡ್ಡ ಮಟ್ಟದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಹೆಸೆರೆಂದರೇ ಮಿಯಾ ಕಲೀಫ ಎಂದೇ ಹೇಳಬಹುದು. ಸಾಮಾಜಿಕ ಜಾಲತಾಣಗಳ ದೈತ್ಯ ವೇದಿಕೆಗಳನ್ನೆಸಿಕೊಂಡ ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವೀಟರ್ ಎಲ್ಲಾ ಕಡೆ ಪೇಮ್, ನೇಮ್ ಎಲ್ಲದರ ಜೊತೆಗೆ ಮಿಯಾ ಕಲೀಫ ಹೆಸರಿನ ಜೊತೆಗೆ ದೊಡ್ಡ ವಿವಾದವೂ ಸುತ್ತಿಕೊಂಡಿತ್ತು. 

ಮಿಯಾ ಕಲೀಫ ಪೋರ್ನೋಗ್ರಫಿ ಕ್ಷೇತ್ರದಲ್ಲಿ ಎಲ್ಲರಂತೆ ಅಲ್ಲ. ತನ್ನನ್ನು ತಾನು ಸಾಮಾಜಿಕವಾಗಿ ತೊಡಗಿಸಿಕೊಂಡವಳು, ಸಾಧ್ಯವಾದಷ್ಟು ತಪ್ಪುಗಳನ್ನು ಪ್ರಶ್ನಿಸಿದವಳು. ಅವಳ ಹೆಸರಿನ ಮೇಲೆ ಅವಳ ವ್ಯಕ್ತಿತ್ವವನ್ನು ಬೇರೆಯಾಗಿ ರೂಪಿಸಿದ ಸಿದ್ಧಾಂತ, ಸಾಮಾಜಿಕ ವ್ಯವಸ್ಥೆಯನ್ನು ಬಿಟ್ಟು ಯೋಚಿಸಿದರೇ, ಮಿಯಾ ಕಲೀಫ ನಡೆದು ಬಂದ ದಾರಿ ಅಷ್ಟು ಸುಲಭದ್ದಲ್ಲ. 

ಜಾತಿ, ಧರ್ಮ, ವರ್ಣಗಳ ಬರ್ಕುಡಿ ಹೊಡೆದಾಟ, ಕಚ್ಚಾಟಗಳು, ಸಿದ್ಧಾಂತಗಳ ವಾಗ್ಯುದ್ಧಗಳು  ಆರಂಭವಾಗಿದ್ದು ಇಂದು ನಿನ್ನೆಯಲ್ಲ. ಅದಕ್ಕೆ ಸಾವಿರಾರು ವರ್ಷಗಳ ದೊಡ್ಡ ಇತಿಹಾಸವೇ ಇದೆ ಎಂದು ಹೇಳಬಹುದು. 

ಮಿಯಾ ಕಲೀಫಳ ಬದುಕಿನ ಆರಂಭಕ್ಕೆ ಒಂದು ಒಳ್ಳೆಯ ಬಾಗಿಲೇ ಇರಲಿಲ್ಲ. ಜನಾಂಗೀಯ ದ್ವೇಷಕ್ಕೆ, ವರ್ಣ ಬೇಧಕ್ಕೆ ಸಿಲುಕಿ ತನ್ನ ಬದುಕಿನಲ್ಲಿ ಅಸಹನೀಯ ಸ್ಥಿತಿ ಕಂಡ ಹೆಣ್ಣವಳು. ತನಗಿಷ್ಟವಲ್ಲದ ಪೋರ್ನೋಗ್ರಫಿ ಕ್ಷೇತ್ರಕ್ಕೆ ತನಗೆ ಅರಿವಿಲ್ಲದೇ ಅದರ ಕಷ್ಟದ ಸಂಕೋಲೆಯಲ್ಲಿ ಸಿಲುಕಿ ಬೆಂದವಳು. ಆಕೆ ಕಂಡಿದ್ದು ಹೋರಾಟದ ಬದುಕು ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ಸಾಮಾಜಿಕ ವಂಚನೆಗೆ ಸಿಲುಕಿದ ಕಲೀಫ, ಮೂಲತಃ ಪಶ್ಚಿಮ ಏಷ್ಯಾದ ಲೆಬನಾನಿನವಳು. ಬಿಳಿಯರ ದೇಶವೆಂದೇ ಕರೆಯಲ್ಪಡುವ ತನ್ನ ಕುಟುಂಬಕ್ಕೆ ಅಮೆರಿಕಕ್ಕೆ ಕಾಲಿಟ್ಟು ತನ್ನ ಬದುಕನ್ನು ಹೊಸ ದಾರಿಯಲ್ಲಿ ಕಂಡುಕೊಳ್ಳಬೇಕು ಎಂದುಕೊಂಡ ಕಲೀಫ ಕಂಡಿದ್ದು ಬರೀ ಶೋಚನೀಯ ಸ್ಥಿತಿ. 

ಅಮೆರಿಕಾದಲ್ಲಿ ತನ್ನ ಬಾಲ್ಯದಿಂದಲೇ, ಅಂದರೆ ಶಾಲಾದಿನಗಳಿಂದಲೇ ವರ್ಣ ಬೇಧಕ್ಕೆ ಸಿಲುಕಿ ಬದಿಗೆ ತಳ್ಳಲ್ಪಟ್ಟವಳು. ಅಲ್ಲಿನ ಸಾಮಾಜಿಕ ಅಸಮಾನತೆ, ತಾರತಮ್ಯ ಎಲ್ಲವನ್ನೂ ಕಂಡು ಬದುಕಿದ ಕಲೀಫ, ವಯೋಸಹಜವಾಗಿ ಅಮೆರಿಕಾದ ಹುಡುಗನೋರ್ವನೊಂದಿಗೆ ಪ್ರೀತಿಗೆ ಬೀಳುತ್ತಾಳೆ. ಆದರೇ, ಆ ಪ್ರೀತಿಯೂ ಕಲೀಫಳಿಗೆ ಹಿತ ನೀಡಲಿಲ್ಲ. ಆತನಿಂದಲೂ ಮೋಸ ಹೋಗಿ ಕಲೀಫ ಸೋರಗಿದವಳು. 

ದೇಹ ಸೌಂದರ್ಯವನ್ನು ಹೊಗಳಿದ ಒಬ್ಬನಿಂದ ಮಾಡೆಲ್ ಕ್ಷೇತ್ರಕ್ಕೆಂದು ಕಾಲಿಟ್ಟ ಕಲೀಫ, ಕಂಡಿದ್ದು ಪೋರ್ನೋಗ್ರಫಿ ಎಂಬ ಕರಾಳ ಕ್ಷೇತ್ರವನ್ನು. ಮಾಡೆಲ್ ಆಗಬೇಕೆಂಬ ಬಹುದೊಡ್ಡ ಕನಸ್ಸನ್ನು ಹೊತ್ತು, ಮಾಡೆಲ್ ಕ್ಷೇತ್ರಕ್ಕೆ ಕಾಲಿಟ್ಟು ಭ್ರಮನಿರಸನಕ್ಕೊಳಗಾದ ಕಲೀಫಳ ಬದುಕು ಕರುಣಾಜನಕ. 

ಗೊತ್ತಿಲ್ಲದ, ಇಷ್ಟವಿಲ್ಲದ ಪೋರ್ನೋಗ್ರಫಿ  ಕ್ಷೇತ್ರಕ್ಕೆ ತನಗೆ ಅರಿವಿಲ್ಲದೇ ಕಾಲಿಟ್ಟ ಕಲೀಫ, ತನ್ನ ದೇಶದವರಿಂದಲೇ ದೇಶದ್ರೋಹಿ ಎಂಬ ಹಣೆ ಪಟ್ಟಿಯನ್ನು ಹಚ್ಚಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗುತ್ತದೆ. 

2014 ರಲ್ಲಿ ಪೋರ್ನೋಗ್ರಫಿ ಕ್ಷೇತ್ರಕ್ಕೆ ಕಾಲಿಟ್ಟ ಕಲೀಫ, ನಟಿಸಿದ್ದು ಕೇವಲ ಹನ್ನೆರಡು ಪೋರ್ನ್ ವೀಡಿಯೋ ಗಳಲ್ಲಿ ಮಾತ್ರ. ಕಲೀಫ ಈಗ ಮಾಜಿ ನೀಲಿ ಚಿತ್ರದ ನಟಿ. ಕಲೀಫ ಇಂದಿಗೆ ಪೋರ್ನೋಗ್ರಫಿ ಕ್ಷೇತ್ರದಿಂದ ಕಾಲ್ಕಿತ್ತು ಏಳು ವರ್ಷಗಳಾದರೂ ಇಂದಿಗೂ ಪೋರ್ನ್ ಕ್ಷೇತ್ರದಲ್ಲಿ ಮಿಯಾ ಕಲೀಫ ಹೆಸರು ಟಾಪ್ ಲೆವೆಲ್ ನಲ್ಲೇ ಇದೆ. 

ಕೇವಲ ಮೂರರಿಂದ ನಾಲ್ಕು ತಿಂಗಳುಗಳ ಕಾಲ ಮಾತ್ರವಷ್ಟೇ ಪೋರ್ನೋಗ್ರಫಿ ಕ್ಷೇತ್ರದಲ್ಲಿ ಇದ್ದ ಕಲೀಫ ಅಂತರ್ಜಾಲದಲ್ಲಿ ಅತಿ ಹೆಚ್ಚು ಸರ್ಚ್ ಆದ ಹೆಸರು. 

ಲೆಬನಾನ್ ನ ಮೂಲದವಳಾದ ಕಲೀಫ. ನಡೆದ ದೊಡ್ಡ ಮತೀಯ ಘರ್ಷಣೆ ನಡೆಯುತ್ತದೆ. ಮುಸಲ್ಮಾನರ ದೇಶದಲ್ಲಿ ಮುಸಲ್ಮಾನ ಹಾಗೂ ಕ್ರೈಸ್ತ ಧರ್ಮದವರೊಂದಿಗೆ ಮತೀಯ ಸಂಘರ್ಷ ನಡೆಯುತ್ತದೆ. ಕಲೀಫ ಮೂಲತಃ  ಮುಸ್ಲಿಂ ಧರ್ಮಕ್ಕೆ ಸೇರಿದವಳಾದರೂ, ನಂತರದ ದಿನಗಳಲ್ಲಿ ಆಕೆಯ ಕುಟುಂಬ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತದೆ. 

2000 ದ ಸಂದರ್ಭದಲ್ಲಿ ಅಮೆರಿಕಾಕ್ಕೆ ತನ್ನ ಕುಟುಂಬಕ್ಕೆ ಬಂದ ಕಲೀಫ, ಇಲ್ಲಿ ಕಂಡಿದ್ದು ಕೂಡ ಕಷ್ಟದ ದಿನಗಳನ್ನೇ. ಅಲ್ಲಿನ ಟ್ವಿನ್ ಟವರ್ ಗಳು ದ್ವಂಸವಾದ ಸಂದರ್ಭವದು. ವಸಾಮ ಬಿನ್ ಲಾಡೆನ್ ಉಗ್ರರ ಪಡೆಯ ದಾಳಿಗೆ ಬಲಿಯಾದ ನಂತರ ಅಮೆರಿಕಾದಲ್ಲೂ ಘರ್ಷಣೆಗಳು, ಸಾಮಾಜಿಕ ದಂಗೆಗಳು, ರಾಜಕೀಯ ಕೋಲಾಹಲ ಸೃಷ್ಟಿಯಾಗಿದ್ದು ದೊಡ್ಡ ಇತಿಹಾಸ. 

ಅಮೆರಿಕಾದಲ್ಲೂ ಮುಸ್ಮೀಮರ ಮೇಲೆ ಮತೀಯ ವೈಷಮ್ಯ ತಾರಕಕ್ಕೇರಿತ್ತು. ಮಿಯಾ ಕಲೀಫ ಅವರ ಕುಟುಂಬ ಇದೇ ಸಂದರ್ಭದಲ್ಲಿ ಅಮೆರಿಕಾಕ್ಕೆ ಬಂದಿದ್ದಷ್ಟೇ, ಅಮೆರಿಕಾದಲ್ಲಿ ಮುಸ್ಮೀಂ ರ ಮೇಲೆ ದೊಡ್ಡ ವೈಷಮ್ಯದ ವಾತಾವರಣ ಸೃಷ್ಟಿಯಾಗಿದ್ದ ಕಾರಣದಿಂದಾಗಿ ಮಿಯಾ ಕಲೀಫ ಕುಟುಂಬ ಕೂಡ ಈ ಘರ್ಷಣೆ, ವೈಷಮ್ಯದ ಬಿಸಿಗೆ ಬೇಯಬೇಕಾಯ್ತು ಎನ್ನುವುದು ಸತ್ಯ. 

ಮಿಯಾ ಕಲೀಫ ಮುಸ್ಮೀಂ ಟು ಕ್ರಿಶ್ಚಿಯನ್ ಗೆ ಕನ್ವರ್ಟ್ ಆದವಳು ಎಂಬ ವಿಷಯವೇ ಅಮೆರಿಕಾದಲ್ಲಿ ಆಕೆ ಪ್ರತ್ಯೇಕತೆಯ ವಾತಾವರಣಕ್ಕೆ ಒಳಗಾಗಬೇಕಾಗುತ್ತದೆ.

ಮಿಯಾ ಕಂದು ಮೈ ಬಣ್ಣದ ಚೆಲುವೆ. ಕಂದು ಬಣ್ಣದ ಮೈ ಇರುವವರಿಗೆ ಸಾಮಾಜಿಕ ವಂಚನೆ, ತಾತ್ಸಾರ ಎಲ್ಲವೂ ಅಮೆರಿಕಾದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಮಿಯಾ ಅನುಭವಿಸಬೇಕಾಗಿ ಬರುತ್ತದೆ. ಕರಿಯರೆಲ್ಲಾ ಉಗ್ರವಾದಿಗಳು ಎಂಬ ಧೋರಣೆ ಅಮೆರಿಕಾದಲ್ಲಿ ಸೃಷ್ಟಿಯಾಯಿತು. ಜನಾಂಗೀಯ ದ್ವೇಷ, ವರ್ಣ ಬೇಧದ ಧೋರಣೆ ಮಿಯಾ ಕುಟುಂಬದ ಮೇಲೂ ದೊಡ್ಟ ಪರಿಣಾಮ ಬೀರುತ್ತದೆ. 

ಕಂದು ವರ್ಣದವಳು ಎಂಬ ಕಾರಣಕ್ಕೆ ಸಾಮಾಜಿಕವಾಗಿ ವಂಚನೆಗೆ ಒಳಗಾಗಿದ್ದ ಮಿಯಾ ಸ್ವಲ್ಪ ಅರಳಿದ್ದು ಹೈಸ್ಕೂಲಿನ ಸಂದರಗಭದಲ್ಲಿ. ಅಮೆರಿಕಾದ ಮೂಲದ ಹುಡುಗನೋರ್ವ ಮಿಯಾಳ ದೇಹ ಸೌಂದರ್ಯಕ್ಕೆ ಮಾರು ಹೋಗಿ ಮಿಯಾಳಿಗೆ ಪ್ರಪೋಸ್ ಮಾಡುತ್ತಾನೆ. ಮಿಯಾ ಕೂಡ ಆತನನ್ನು ಮನಸಾರೆ ಇಷ್ಟ ಪಡುತ್ತಾಳೆ. ಪ್ರೇಮಾಂಕುರವಾಗುತ್ತದೆ. 

ಕಾಲೇಜು ಮುಗಿಸಿದ ನಂತರ ಮನೆಯವರ ತೀವ್ರ ವಿರೋಧದ ನಡುವೆಯೂ ಮಿಯಾ ಆ ಹುಡುಗನೊಂದಿಗೆ ಮದುವೆಯಾಗುತ್ತಾಳೆ. 

ಸಣ್ಣ ವಯಸ್ಸಿನಲ್ಲಿ ಅಷ್ಟೇನೂ ಆಕರ್ಷಕಳಾಗಿಲ್ಲದ ಮಿಯಾ, ಕಾಲೇಜಿನ ದಿನಗಳಲ್ಲಿ ಆಕರ್ಷಕ  ದೇಹ ಸೌಂದರ್ಯವನ್ನು ಪಡೆದು, ಯಾರಿಂದ ವರ್ಣ ಬೇಧಕ್ಕೊಳಗಾಗಿದ್ದಳೋ, ಅವರೇ ತಿರುಗಿ ನೋಡುವ ಹಾಗೆ ಮಾಡುತ್ತಾಳೆ. 

ಇತಿಹಾಸ ವಿಷಯದಲ್ಲಿ ಪದವಿ ಓದುತ್ತಿರುವಾಗ ಯಾರನ್ನು ಇಷ್ಟ ಪಟ್ಟಿದ್ದಳೋ ಆತನಿಂದಲೇ ತಿರಸ್ಕಾರಕ್ಕೆ ಒಳಗಾಗುತ್ತಾಳೆ. ಒಂಟಿ ಬದುಕನ್ನು ಎದುರಿಸಬೇಕಾಗಿ ಬಂದರೂ, ಮಿಯಾ ಮೊದಲಿಗಿಂತ ದುಪ್ಪಟ್ಟು ಗಟ್ಟಿಯಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಒಗ್ಗಿಕೊಳ್ಳುವ ಧೈರ್ಯ ಹೊಂದಿದ್ದಳು. ಪದವಿ ಮುಗಿಸುತ್ತಾಳೆ. 

ಒಂದೊಮ್ಮೆ ರಸ್ತೆಯೊಂದರಲ್ಲಿ ಈಕೆಯನ್ನು ಕಂಡ ಶ್ರೀಮಂತ ಪ್ರೊಡ್ಯುಸರ್ ಒಬ್ಬ ಮಾಡೆಲಿಂಗ್ ಕ್ಷೇತ್ರಕ್ಕೆ ಬರುವಂತೆ ಪ್ರೇರೇಪಿಸುತ್ತಾರೆ. ಯಾವದೇ ಅರಿವಿಲ್ಲದೇ ಮಾಡೆಲಿಂಗ್ ಕ್ಷೇತ್ರಕ್ಕೆಂದು ಕಾಲಿಟ್ಟಾಗ ಅದು ಮಾಡೆಲಿಂಗ್ ಕ್ಷೇತ್ರವಾಗಿರಲಿಲ್ಲ. ಅದು ಪೋರ್ನೋಗ್ರಫಿ ಕ್ಷೇತ್ರವಾಗಿತ್ತು ಎನ್ನುವುದು ಆಕೆ ಅಲ್ಲಿ ಬಂಧಿಯಾದ ಮೇಲೆ ತಿಳಿಯಿತು. 

ಪ್ರೀತಿಯ ಕಾರಣದಿಂದ ತನ್ಮ ಕುಟುಂಬದಿಂದ ದೂರವಾಗಿದ್ದ ಮಿಯಾ, ಪೋರ್ನೋಗ್ರಫಿ ಕ್ಷೇತ್ರಕ್ಕೆ ಕಾಲಿಡುವಾಗ ಒಬ್ಬಂಟಿ. ತನಗೆ ತಾನು ಮಾಡುತ್ತಿರುವುದು ಸರಿಯೇ, ತಪ್ಪೇ ಎನ್ನುವುದರ ಬಗ್ಗೆ ಅರಿವೇ ಇಲ್ಲದ ಪರಿಸ್ಥಿತಿಯಲ್ಲಿ ಕಲೀಫ ಇದ್ದಿದ್ದಳು. 

ಮಾಡೆಲಿಂಗ್ ಕ್ಷೇತ್ರದಲ್ಲಿ  ಜಾಗತಿಕ ಮಟ್ಟದಲ್ಲಿ ಹೆಸರು ಮಾಡಬೇಕೆಂಬ ಮಹತ್ತರ ಕನಸಿನೊಂದಿಗೆ ಕಾಲಿಟ್ಟಿದ್ದು, ಅಮೆರಿಕಾ ಮೂಲದ ಅಂತಾರಾಷ್ಟ್ರೀಯ ಪೋರ್ನೋಗ್ರಫಿ ಪ್ರೊಡಕ್ಷನ್ ಸಂಸ್ಥೆ ಬ್ಯಾಂಗ್ ಬ್ರೋಸ್ ಸಂಸ್ಥೆಗೆ. 

ಕಲೀಫಾ ಮೊದಲು ನಟಿಸಿದ ಮೊದಲ ಪೋರ್ನೋಗ್ರಫಿ ಶೋಗಳಲ್ಲಿ ಮುಸ್ಲೀಂ ಸಾಂಪ್ರದಾಯಿಕ ಧಿರಿಸನ್ನು ಧರಿಸಿ ನಟಿಸುವಂತೆ ಆ ಪ್ರೊಡಕ್ಷನ್ ಸಂಸ್ಥೆ ಕಲೀಫಳನ್ನು ಒತ್ತಾಯಿಸುತ್ತದೆ. ಆದರೇ, ಅದೇ ದೊಡ್ಡ ವಿವಾದದ ಮೂಟೆಯನ್ನು ಕಲೀಫಳ ತಲೆ ಮೇಲೆ ತಂದಿಡುತ್ತದೆ ಎಂಬ ಸಣ್ಣ ಆಲೋಚನೆಯೂ ಇಲ್ಲದ ಮುಗ್ದೆಯಾಗಿದ್ದಳು ಕಲೀಫ ಎಂದರೇ ತಪ್ಪಿಲ್ಲ‌. 

ಆ ದೃಶ್ಯ ಬಹಿರಂಗವಾದಾಗ ಮುಸ್ಲಿಂ ದೇಶಗಳಲ್ಲಿ ಮಿಯಾ ಕಲೀಫಳ ವಿರುದ್ಧ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತದೆ. ಪ್ರೊಡಕ್ಷನ್ ಸಂಸ್ಥೆಯಲ್ಲಿ ಈ ಸಾಂಪ್ರದಾಯಿಕ ಧಿರಿಸು ಧರಿಸುವುದರಿಂದ ಏನಾದರೂ ಸಮಸ್ಯೆಯಾಗುತ್ತದೆಯೇ ಎಂದು ಸ್ವತಃ ಕಲೀಫ ಕೇಳುತ್ತಾಳೆ, ಆದರೇ, ಆ ಪ್ರೊಡಕ್ಷನ್ ಸಂಸ್ಥೆ ಈಕೆಗೆ ಏನೂ ಸಮಸ್ಯೆಯಾಗುವುದಿಲ್ಲ ಎಂದು ಒತ್ತಾಯಿಸಿ ನಟನೆ ಮಾಡಿಸುತ್ತದೆ. 

ಮುಸ್ಲಿಂ ಧರ್ಮದ ಸಾಂಪ್ರದಾಯಿಕ ಧಿರಿಸು ಆಕೆಗೆ ಇಷ್ಟೊಂದು ವಿವಾದ ತಂದೊಡ್ಡುತ್ತದೆ ಎಂದು ಆಕೆಗೆ ಗೊತ್ತೇ ಇರುವುದಿಲ್ಲವೆಂದು ಇತ್ತೀಚೆಗೆ ಬಿಬಿಸಿ ಚಾನೆಲ್ ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತಾಡುವಾಗ, "ಹಣದ ಹಿಂದೆ ನಡೆಯುವ ಈ ಆಧುನಿಕ ಜಗತ್ತು ಯಾರನ್ನು ಯಾವ ರೀತಿಯಲ್ಲಿ ಬಲಿ ತೆಗೆದುಕೊಳ್ಳುತ್ತದೆ ಎನ್ನುವುದು ತಿಳಿಯುವುದಿಲ್ಲ" ಎಂಬ ಮಾತೇ ದೊಡ್ಡ ಸಾಕ್ಷಿ. 

ಪೋರ್ನೋಗ್ರಫಿ ಕ್ಷೇತ್ರದಲ್ಲಿ ಕೇವಲ 12 ವೀಡಿಯೋ ಗಳಲ್ಲಿ ನಟಿಸಿದ ಕಲಿಫ ದುಡಿದಿದ್ದು ಕೇವಲ 12,000 ಡಾಲರ್. ಆದರೇ, 2016 ರಿಂದ ಈವರೆಗೆ ಪೋರ್ನ್ ಸೈಟ್ ಗಳಲ್ಲಿ ಅತಿ ಹೆಚ್ಚು ಸರ್ಚ್ ಗೆ ಒಳಗಾಗಿರುವ ನಟಿ. 

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಟಿಕ್ ಟಾಕ್ ನಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದಾರೆ. ಅವರು ಹಾಕುವ ಪೋಸ್ಟ್ಗಳನ್ನು ನೋಡೋಕೆ ಪಡ್ಡೆ ಹುಡುಗರು ಕಾಯುತ್ತಿರುತ್ತಾರೆ. ಈಗ ಪಾಕಿಸ್ತಾನ ಅವರಿಗೆ ಟಿಕ್ ಟಾಕ್ ಖಾತೆಯನ್ನು ಬ್ಯಾನ್ ಮಾಡುವ ಮೂಲಕ ಶಾಕ್ ನೀಡಿದೆ. ಹಾಗಂತ ಮಿಯಾ ಕೈಕಟ್ಟಿ ಕೂತಿಲ್ಲ. ಅವರು ಖಡಕ್ ಆಗಿಯೇ ಇದಕ್ಕೆ ಉತ್ತರಿಸಿದ್ದಾರೆ.

ಮೌಲ್ಯವಿಲ್ಲದ ಹಾಗೂ ನೈತಿಕವಲ್ಲದ ಪೋಸ್ಟ್ ಗಳನ್ನು ಮಿಯಾ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನ ಈ ಮೊದಲು ಅವರ ಟಿಕ್ ಟಾಕ್ ಖಾತೆಯನ್ನು ಬ್ಯಾನ್ ಮಾಡಿತ್ತು. ಏಪ್ರಿಲ್ ತಿಂಗಳಲ್ಲಿ ಈ ನಿಷೇಧವನ್ನು ಹಿಂಪಡೆಯಲಾಗಿತ್ತು. ಆದರೆ, ಮಿಯಾ ಮೊದಲಿನ ರೀತಿಯಲ್ಲೇ ಪೋಸ್ಟ್ಗಳನ್ನು ಮಾಡಲು ಆರಂಭಿಸಿದ್ದಾರೆ. ಹೀಗಾಗಿ, ಮತ್ತೆ ಅವರ ಟಿಕ್ ಟಾಕ್ ಖಾತೆ ಬ್ಯಾನ್ ಆಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಿಯಾ, ಟಿಕ್ಟಾಕ್ ಖಾತೆ ಬ್ಯಾನ್ ಮಾಡಿದ ಪಾಕಿಸ್ತಾನಕ್ಕೆ ನನ್ನ ಶೌಟೌಟ್. ಫ್ಯಾಸಿಸಂನಿಂದ ದೂರ ಉಳಿಯ ಬಯಸುವ ಪಾಕಿಸ್ತಾನಿ ಫ್ಯಾನ್ಸ್ಗಾಗಿ ನಾನು ನನ್ನ ಟಿಕ್ಟಾಕ್ ವಿಡಿಯೋಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡುತ್ತೇನೆ ಎಂದಿದ್ದಾರೆ. ಮಿಯಾ ಟಿಕ್ಟಾಕ್ನಲ್ಲಿ 2.2 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. 

ನೀಲಿ ಚಿತ್ರಗಳಲ್ಲಿ ನಟನೆ ನಿಲ್ಲಿಸಿದ್ದ ಮಿಯಾ ಇತ್ತೀಚೆಗೆ ಹೋರಾಟಗಳಲ್ಲಿ ಸಕ್ರಿಯವಾಗಿದ್ದಾರೆ. ಮಿಯಾ ಖಲೀಫಾ ಫೆಬ್ರವರಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಭಾರತದ ರೈತರು ನಡೆಸುತ್ತಿದ್ದ ಪ್ರತಿಭಟನೆ ಬೆಂಬಲಿಸಿ ಸುದ್ದಿಯಾಗಿದ್ದರು.

-ಶ್ರೀರಾಜ್ ವಕ್ವಾಡಿ 

Sunday, August 8, 2021

ನಿಮ್ಮ ಭಾವನೆಯ ಆ ಮೂರು ಅಂಶಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲ..! ಆ ಅಂಶಗಳ್ಯಾವುವು..?

 



ಮನುಷ್ಯನಿಗೆ ಭಾವನೆಗಳನ್ನು ಹೊರತಾಗಿ ಬದುಕುವುದಕ್ಕೆ ಸಾಧ್ಯವಿಲ್ಲ. ಭಾವನೆಗಳು ನೀವು ಹೇಗೆ ಯೋಚಿಸುತ್ತೀರಿ ಮತ್ತು ಕಾರ್ಯನಿರ್ವಹಿಸುತ್ತವೆ ಎಂಬುದರ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ನೀವು ಪ್ರತಿದಿನ ಅನುಭವಿಸುವ ಭಾವನೆಗಳು ನಿಮ್ಮ ಜೀವನದಲ್ಲಿ ನೀವು ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ಮತ್ತು ಪ್ರಭಾವಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಭಾವನೆಯ ಮೂರು ಮೂಲಭೂತ ಅಂಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬದುಕಿನಲ್ಲಿ ಬಹಳ ಮುಖ್ಯ. ಈ ಮೂರು ಅಂಶಗಳನ್ನು ನಾವು ಅರ್ಥ ಮಾಡಿಕೊಂಡಿಲ್ಲವೆಂದಾದಲ್ಲಿ ಭಾವನೆಗಳಿಂದಲೇ ಕೊರಗಬೇಕಾಗುತ್ತದೆ ಎನ್ನವುದು ಸತ್ಯ. 

ಸಾಮಾನ್ಯವಾಗಿ ಕೆಲವರು ತಮ್ಮನ್ನು ತಾವು ಭಾವನಾತ್ಮಕ ಜೀವಿ ಎಂದು ಗುರುತಿಸಿಕೊಳ್ಳುತ್ತಾರೆ. ಅದು ಇನ್ನೊಬ್ಬರು ತನ್ನ ಮೇಲೆ ಒಂದಿಷ್ಟು ಅನುಕಂಪ ಇಟ್ಟುಕೊಳ್ಳಲಿ ಎಂಬ ತಂತ್ರವೂ ಹೌದು ಎನ್ನುತ್ತದೆ ಮನಃಶಾಸ್ತ್ರ. ಆದರೇ, ಎಲ್ಲಾ ಸಂದರ್ಭದಲ್ಲಿಯೂ ಅಲ್ಲ. 

ಒಂದು ಭಾವನೆಯು ಮೂರು ಅಂಶಗಳಿಂದ ಕೂಡಿದೆ : 

ವ್ಯಕ್ತಿನಿಷ್ಠ ಅಂಶ :  ಇದು ನೀವು ಭಾವನೆಯನ್ನು ಹೇಗೆ ಅನುಭವಿಸುತ್ತೀರಿ ಎನ್ನುವುದರ ಮೇಲೆ ಆಧರಿಸಿ ಇರುತ್ತದೆ. ಭಾವನೆಗಳನ್ನು ಅನುಭವಿಸುವುದು ಮುಖ್ಯ.ಅನುಭವಿಸುವ ಗುಣ ಇಲ್ಲದಿದ್ದರೇ. ಭಾವನೆಗಳಲ್ಲೇ ಮುಳಗಿ ಹೋಗಬೇಕಾಗುತ್ತದೆ ಎನ್ನುವುದು ಅಕ್ಷರಶ‍ಃ ಸತ್ಯ. 

ಶಾರೀರಿಕ ಅಂಶ : ಇದು ನಿಮ್ಮ ದೇಹವು ಭಾವನೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುವುದನ್ನು ಅನುರಿಸಿ ಇರುತ್ತದೆ. ಶಾರೀರಿಕ ಪ್ರತಿಕ್ರಿಯೆಯೂ ಭಾವನೆಗಳಿಗೆ ಮುಖ್ಯವಾಗುತ್ತದೆ. ಭಾವನಗೆಗಳಿಗೆ ಶರೀರ ಪ್ರತಿಕೂಲವಾಗಿ ಸ್ಪಂದಿಸದೇ ಇದ್ದರೇ ವ್ಯತ್ಯಾಸ ಆಗುವ ಸಾಧ್ಯತೆಯೂ ಇದೆ.

ಅಭಿವ್ಯಕ್ತಿಗೊಳಿಸುವ ಅಂಶ  : ಭಾವನೆಗೆ ಪ್ರತಿಕ್ರಿಯೆಯಾಗಿ ನೀವು ಹೇಗೆ ವರ್ತಿಸುತ್ತೀರಿ ಎನ್ನುವುದು ಕೂಡ ಇಲ್ಲಿ ಬಹಳ ಮುಖ್ಯವಾಗುತ್ತದೆ. ಉದಾಹರಣೆಗೆ, ಅಳುವನ್ನು ಅದುಮಿಟ್ಟುಕೊಂಡರೇ, ಅದು ನಿಮ್ಮನ್ನು ಮತ್ತಷ್ಟು ಹಿಂಸಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಅಳು ಬಂದಾಗ ಅಳುವುದು, ಸಿಟ್ಟು ಬಂದಾಗ ಅದನ್ನು ವ್ಯಕ್ತ ಪಡಿಸಿಕೊಳ್ಳುವುದು ಭಾವನೆಗಳ ವಿಚಾರದಲ್ಲಿ ಮುಖ್ಯವಾಗುತ್ತದೆ.  

ಭಾವನೆಗಳು ಕ್ಷಣಿಕವಾಗಬಹುದು, ಉದಾಹರಣೆಗೆ ಸಹೋದ್ಯೋಗಿಯ ಮೇಲಿನ ಕೋಪ, ಅಥವಾ ಅವರ ಸಂಬಂಧವನ್ನು ಕಳೆದುಕೊಳ್ಳುವ ದುಃಖ ದೀರ್ಘಕಾಲೀನವಾಗಬಹುದು. ಆದರೆ ನೀವು ಮೊದಲಿಗೆ ಭಾವನೆಗಳನ್ನು ಏಕೆ ಅನುಭವಿಸುತ್ತೀರಿ ? ಭಾವನೆಗಳು ಯಾವ ಕಾರ್ಯವನ್ನು ಹೊಂದಿವೆ ? ಭಾವನೆ ನಮಗೆ ಸಹಾಯ ಮಾಡುವ ಕೆಲವು ವಿಧಾನಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.

ಭಾವನೆಯು ಚಿತ್ತಸ್ಥಿತಿ, ಮನೋಧರ್ಮ, ವ್ಯಕ್ತಿತ್ವ ಮತ್ತು ಸ್ವಭಾವ ಹಾಗೂ ಪ್ರೇರಣೆಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಇಂಗ್ಲಿಷ್ ಪದ 'ಇಮೋಷನ್' ನನ್ನು ಫ್ರೆಂಚ್ ಪದ ಇಮೌವಾಯರ್ ನಿಂದ ಪಡೆಯಲಾಗಿದೆ. ಇದು ಲ್ಯಾಟಿನ್ ಪದ ಇಮೋವೀರ್ ನನ್ನು ಆಧರಿಸಿದೆ, ಇದರಲ್ಲಿ ಇ ಅಂದರೆ 'ಹೊರಗೆ' ಮತ್ತು ಮೋವೂರ್ ಅಂದರೆ 'ಚಲನೆ' ಎಂದರ್ಥ.

 ಸಂಬಂಧಿತ ಪದ "ಮೋಟಿವೇಶನ್” ನನ್ನೂ ಸಹ ಮೋವೀರ್ ನಿಂದ ಪಡೆಯಲಾಗಿದೆ.

ಭಾವನೆ ಮತ್ತು ಭಾವನೆಯಿಂದಾಗುವ ಪರಿಣಾಮಗಳ, ಪ್ರಧಾನವಾಗಿ ವರ್ತನೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳ, ಮಧ್ಯೆ ಸಂಬಂಧಿತ ಭಿನ್ನತೆ ಇರುತ್ತದೆ. 

ಸಾಮಾನ್ಯವಾಗಿ ಹೆಚ್ಚಿನವು ಅವರವರ ಭಾವನಾತ್ಮಕ ಸ್ಥಿತಿಯ ನೇರ ಪರಿಣಾಮವಾಗಿ ಕೆಲವು ರೀತಿಗಳಲ್ಲಿ ವರ್ತಿಸುತ್ತಾರೆ, ಅಳುವುದು, ಜಗಳವಾಡುವುದು ಅಥವಾ ತೊರೆದುಬಿಡುವುದು ಹೀಗೆ ಹಲವು…. ಅನುಗುಣವಾದ ವರ್ತನೆಯಿಲ್ಲದ ಭಾವನೆಯನ್ನು ಹೊಂದಿದ್ದರೆ, ಭಾವನೆಗೆ ವರ್ತನೆಯ ಅಗತ್ಯವಿಲ್ಲ ಎಂದು ನಾವು ಪರಿಗಣಿಸಬಹುದು.

ಯೋಚನೆಯೊಂದನ್ನು ಪಡೆದು ಅದು ಭಾವನಾತ್ಮಕ ಪ್ರತಿಕ್ರಿಯೆಯಾಗಿ ಹೊರಹೊಮ್ಮುವ ಮೊದಲು ಒಂದು "ಅದ್ಭುತವಾದ ಕೆಲ ಸೆಕೆಂಡು" ಇರುತ್ತದೆ ಎಂದು ನರ ವೈಜ್ಞಾನಿಕ ಸಂಶೋಧನೆಯು ಸೂಚಿಸುತ್ತದೆ. ಆ ಕೆಲ ಕ್ಷಣಗಳಲ್ಲೆ ಭಾವನೆಗಳು ನಮ್ಮನ್ನು ಸಂತೋಷ ಪಡಿಸಲೂ ಬಹದು ಮತ್ತು ದುಃಖ ಪಡಿಸಲೂ ಬಹುದು. 

ಭಾವನೆಗಳನ್ನು ನಮಗೆ ನಿಯಂತ್ರಿಸಲು ಸಾಧ್ಯವಿಲ್ಲವೆನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೇ, ಮೇಲೆ ಹೇಳಿರುವ ಮೂರು ಅಂಶಗಳನ್ನು ಅಳವಡಿಸಿಕೊಂಡರೇ, ಭಾವನೆಗಳಿಗೆ ಪ್ರತಿ ಸ್ಪಂದಿಸುವುದಕ್ಕೆ ಆಗುತ್ತದೆ. ಮಾತ್ರವಲ್ಲದೇ, ಎಲ್ಲಾ ಭಾವನೆಗಳನ್ನು ಕೇವಲ ಭಾವನೆಗಳಂತೆಯೇ ಸ್ವೀಕರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಭಾವನೆಗಳು ‘ಕೊರಗು’ ಗಳಾಗಿ ಪರಿವರ್ತೆನಯಾಗುತ್ತವೆ. 

ನಿಮ್ಮ ಭಾವನೆಗಳು, ನೀವು ಕಂಡುಹಿಡಿದಂತೆ, ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತವೆ. ಭಾವನೆಗಳು ಸಂಕ್ಷಿಪ್ತ, ದೀರ್ಘಕಾಲೀನ, ತೀವ್ರವಾದ, ಮತ್ತು ಸಂಕೀರ್ಣ ಜೀವನವನ್ನು ಬದಲಾಯಿಸುವಂತಹುದು. ಕೆಲವು ರೀತಿಯಲ್ಲಿ ಕಾರ್ಯನಿರ್ವಹಿಸಲು ಅವರು ನಿಮ್ಮನ್ನು ಪ್ರೇರೇಪಿಸಬಹುದು ಮತ್ತು ನಿಮ್ಮ ಸಾಮಾಜಿಕ ಜೀವನದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಬೇಕಾದ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿಕೊಡುತ್ತದೆ. 

-ಶ್ರೀರಾಜ್ ವಕ್ವಾಡಿ

Friday, August 6, 2021

ಬೊಮ್ಮಾಯಿ ಸಂಪುಟ ಕೇವಲ ಸಮಾಧಾನದ ಪರಿಹಾರ..!

 


ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ರಾಜ್ಯ ಬಿಜೆಪಿ ಸರ್ಕಾರದ ನೊಗ ಹೊತ್ತುಕೊಂಡ ಬಸವರಾಜ ಬೊಮ್ಮಾಯಿ ಅವರಿಗೆ ನೊಗ ಭಾರವಾಗಿದ್ದಂತೂ ಸ್ಪಷ್ಟವಾಗಿ ಕಾಣಿಸುತ್ತಿದೆ. ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಎಲ್ಲಿಯೂ ಇಲ್ಲದ ಮಹತ್ತರವಾದ ಬದಲಾವಣೆ ಆಗುತ್ತದೆ ಎಂಬ ದೊಡ್ಡ  ನಿರೀಕ್ಷೆಗಳೆಲ್ಲಾ ಹುಸಿ ಆಗಿ ಹೋಗಿವೆ. 

ರಾಜ್ಯ ಸರ್ಕಾರದ ಸಚಿವ ಸಂಪುಟ ಹೇಗಾಗಿದೆ ಎಂದರೇ, ಹಿರಿತನ, ಸಮುದಾಯಗಳ ಮಾನದಂಡದಲ್ಲಿ ನೀಡಿದ ಸಮಾಧಾನದ ಪರಿಹಾರದಂತಾಗಿದೆ. ಬಿಜೆಪಿ ಹೈಕಮಾಂಡ್ ಗೆ ಕರ್ನಾಟಕದ ಬಿಜೆಪಿ ನಾಯಕರನ್ನು ಸಮಾಧಾನ ಪಡಿಸುವುದೇ ಒಂದು ರೀತಿಯಲ್ಲಿ ಮೂಲಮಂತ್ರದಂತಾಗಿದೆ. ಅತ್ತ ಯಡಿಯೂರಪ್ಪರವರನ್ನು ಮೂಲೆಗುಂಪು ಮಾಡುವುದಕ್ಕೆ ಸಾಧ್ಯವಿಲ್ಲದೇ ಅವರನ್ನು ಸಮಾಧಾನ ಪಡಿಸುವುದರಲ್ಲೇ ಹೈಕಮಾಂಡ್ ಜಾಣತನದ ಪರಿಹಾರ ಒದಗಿಸಿದೆ. 

ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಕರ್ನಾಟಕ ಬಿಜೆಪಿಗೆ ಪಿತಾಮಹ ಇದ್ದ ಹಾಗೆ. ಯಡಿಯೂರಪ್ಪ ಅವರಿಗೆ ಸಮನಾದಂತಹ ನಾಯಕ ಬಿಜೆಪಿ ಕರ್ನಾಟಕದಲ್ಲಿ ಇಲ್ಲದಿರುವುದರಿಂದ ಯಡಿಯೂರಪ್ಪರನ್ನು ಬದಿಗೊತ್ತಿ ಪಕ್ಷ ಬೆಳೆಸುತ್ತೇವೆ ಎಂದರೇ, ದಕ್ಷಿಣ ಭಾರತದಲ್ಲಿಯೇ ಬಿಜೆಪಿ ದೊಡ್ಡ  ಆಘಾತ ಕಾಣಬೇಕಾಗುತ್ತದೆ ಎಂಬ ಭಿತಿಯಲ್ಲಿಯೇ ಹೈಕಮಾಂಡ್ ಜಾಣತನ ತೋರಿಸಬೇಕಾದ ಸ್ಥಿತಿಯಲ್ಲಿದೆ. ಅತ್ತ ಕೋಲು ಮುರಿಯಬಾರದು, ಇತ್ತ ಹಾವು ಸಾಯಬಾರದು ಹಾಗಾಗಿದೆ ಬಿಜೆಪಿ ಹೈಕಮಾಂಡ್ ಕಥೆ. 

ಅಳೆದು ತೂಗಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆಯೇ ಅತೃಪ್ತ ಬಿಜೆಪಿ ನಾಯಕರ ಅಸಮಾಧಾನದ ಕಿಡಿ ರಾಜ್ಯ ಬಿಜೆಪಿ ವಲಯದಲ್ಲಿ ಜೀವ ಪಡೆದಿದ್ದು, ಸರ್ಕಾರದ ಅಸ್ತಿತ್ವದ ಮೇಲೆ ದೊಡ್ಡ ಪ್ರಶ್ನೆಯೆಬ್ಬಿಸಿದೆ. ಇದುವರೆಗೆ ಪೂರ್ಣ ಬಹುಮತ ಇಲ್ಲದೇ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಮಾಡಿರುವುದರಿಂದ ಸರ್ಕಾರ ರಚನೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೊಟ್ಟಿದ್ದ ಮಾತು ಉಳಿಸಿಕೊಳ್ಳುವ ಜವಾಬ್ದಾರಿ ಬಿ. ಎಸ್ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಬೊಮ್ಮಾಯಿ ಮೇಲೆ ಇತ್ತು ಎನ್ನುವುದು ಈಗ ಸಚಿವ ಸಂಪುಟದಲ್ಲಿ ಮತ್ರಿಗಿರಿ ಪಡೆದ ವಲಸಿಗರ ಪಟ್ಟಿ ನೋಡಿದರೆ ತಿಳಿಯುತ್ತದೆ. 

ಹೈಕಮಾಂಡ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಗೆ, ಬಿ. ಎಸ್ ಯಡಿಯೂರಪ್ಪ ಅವರ ಸಲಹೆಯನ್ನು ಪಡೆಯುವುದು ಬೇಡ, ನೀವು ನಿಮ್ಮ ನೇತೃತ್ವದಲ್ಲೇ ರಾಜ್ಯದಲ್ಲಿ ಕಾರ್ಯನಿರ್ವಹಿಸಿ ಎಂದಿದ್ದರೂ, ಬೊಮ್ಮಾಯಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ವೈ ಅವರನ್ನು ‘ನಮ್ಮ ನಾಯಕರು’ ಎಂದು ಸಂಭೋದಿಸುತ್ತಿರುವುದನ್ನು ಗಮನಿಸಿದರೇ, ಯಡಿಯೂರಪ್ಪ ಅವರ ಕೈಯಲ್ಲೇ ಇನ್ನೂ ಸೂತ್ರ ಇದೆ. ಸಚಿವ ಸಂಪುಟವೂ ಬಿ. ಎಸ್ ವೈ ನಿರ್ದೇಶನದಲ್ಲಿಯೇ ನಡೆದಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. 

ತ್ರಿಶಂಕು ಸ್ಥಿತಿಯಲ್ಲಿ ಬೊಮ್ಮಾಯಿ : 

ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈಗ ತ್ರಿಶಂಕು ಸ್ಥಿತಿ. ಅತ್ತ ಹೈಕಮಾಂಡ್, ಇತ್ತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಕೇಳಿಕೊಂಡೇ ಮುಂದುವರಿಯಬೇಕಾದ ಸ್ಥಿತಿ. ಒಂದು ರೀತಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಈಗಾಗಲೇ ಹಗ್ಗದ ಮೇಲೆ ನಡಿಗೆ ಆರಂಭಿಸಿದ್ದಾರೆ ಎನ್ನುವುದು ಸತ್ಯ. 

ಸಮುದಾಯ, ಜಾತಿ ಲೆಕ್ಕಾಚಾರ, ಹಿರಿತನ, ಸರ್ಕಾರದ ರಚನೆಯಲ್ಲಿ ಪಾಲು, ಪಕ್ಷ ಸಂಘಟನೆ ಹಾಗೂ ಮುಂದಿನ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ರಚನೆ ಮಾಡಲಾಗಿದೆ.  ಸರ್ಕಾರವನ್ನು ಅರ್ಧದಾರಿಯಿಂದ ಪೂರ್ಣತ್ವದೆಡೆಗೆ ಸಾಗಿಸುವ ಹೊಣೆಗಾರಿಗೆ ಬೊಮ್ಮಾಯಿ ಅವರಿಗಿದ್ದು, ಪಕ್ಷದ ಹಿರಿಯ ನಾಯಕರೊಂದಿಗೆ ವಿಶ್ವಾಸ, ಗೌರವ ಇರಿಸಿಕೊಳ್ಳಬೇಕಾದ ಅನಿವಾರ್ಯವಿದೆ. 

ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಕೆಲವು ಸಚಿವರು ಭ್ರಷ್ಟಾಚಾರದ ಆರೋಪವನ್ನು ಹೊತ್ತಿದ್ದರು. ಆ ಎಲ್ಲಾ ಕಳಂಕದಿಂದ ಮುಕ್ತವಾಗಿ ಸರ್ಕಾರವನ್ನು ಮುನ್ನಡೆಸುವ ನೇತೃತ್ವ ಬೊಮ್ಮಾಯಿ ಅವರ ಮೇಲಿದೆ. ಹೈಕಮಾಂಡ್ ಕೂಡ ಅದೇ ಸಲಹೆಯನ್ನು ಬೊಮ್ಮಾಯಿಗೆ ನೀಡಿದ್ದಾರೆ. ಆದರೇ, ಈಗಾಗಲೇ ಇತ್ತೀಚೆಗಷ್ಟೇ ‘ಮೊಟ್ಟೆ ಕೇಸ್’ ನಲ್ಲಿ ಸಿಲುಕಿಕೊಂಡಿದ್ದ ಶಶಿಕಲಾ ಜೊಲ್ಲೆ ಅವರಿಗೆ ಸ್ಥಾನ ಸಿಕ್ಕಿದ್ದು, ಅತೃಪ್ತ ಶಾಸಕರಿಗೆ, ಪ್ರತಿಪಕ್ಷಗಳಿಗೆ ಈ ವಿಚಾರ ಆಹಾರವಾಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. 

ಈಶ್ವರಪ್ಪ ಅಸಮಾಧಾನ, ಕಾಂಗ್ರೆಸ್ ಗೆ ವರದಾನ..? 

ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಸಚಿವ ಈಶ್ವರಪ್ಪರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕದೇ ಇರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದರು. ಕೊನೆಯ ಪಕ್ಷ ಉಪ ಮುಖ್ಯಮಂತ್ರಿ ಸ್ಥಾನವನ್ನಾದರೂ ನೀಡಲಿ ಎಂದು ಈಶ್ವರಪ್ಪ ಪಕ್ಷದ ಹೈಕಮಾಂಡ್ ನನ್ನು ಬಹಿರಂಗವಾಗಿ ಬೇಡಿಕೊಂಡಿದ್ದರು. ಅದು ಕೂಡ ಫಲಿಸಲಿಲ್ಲ. 

ಕಳೆದ ಸಚಿವ ಸಂಪುಟದಲ್ಲಿ, ಅಂದರೇ, ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಮೂರು ಉಪ ಮುಖ್ಯಮಂತ್ರಿ ಸ್ಥಾನ ರಚಿಸಿ ರಾಜ್ಯ ಬಿಜೆಪಿಯಲ್ಲಿ ಹೇಳುವಂತದ್ದೇನೂ ಬದಲಾವಣೆಯಾಗಿರಲಿಲ್ಲ. ಈಶ್ವರಪ್ಪ ಅವರಿಗೂ ಆ ಸಂದರ್ಭದಲ್ಲಿಯೂ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕಿಲ್ಲ. ಆಗ ಅಸಮಧಾನ ತೋರ್ಪಡಿಸಿಕೊಳ್ಳುವುದಕ್ಕೆ ಆಗದ ಸ್ಥಿತಿಯಲ್ಲಿ ಈಶ್ವರಪ್ಪ ಇದ್ದಿದ್ದರು. ಗೋವಿಂದ ಕಾರಜೋಳ, ಡಾ. ಸಿ ಎನ್. ಅಶ್ವಥ್ ನಾಯಾರಣ  ಲಕ್ಷ್ಮಣ ಸವದಿಯವರಿಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕಾಲಾಗಿತ್ತು. 

ಸಮುದಾಯವವನ್ನು ಬಿಟ್ಟು ಬಿಡಬಾರದು, ಯಾವ ನಾಯಕರಿಗೂ ಅಸಮಾಧಾನ ಉಂಟಾಗಬಾರದೆಂಬ ಉದ್ದೇಶದಿಂದಲೇ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್ ಅವಕಾಶವನ್ನೇ ನೀಡಿಲ್ಲ. ಇದು ಉಪ ಮುಖ್ಯಮಂತ್ರಿ ಸ್ಥಾನದ ರೇಸ್ ನಲ್ಲಿದ್ದ ಈಶ್ವರಪ್ಪ, ಸುನಿಲ್ ಕುಮಾರ್, ಆರ್. ಅಶೋಕ್, ಶ್ರೀರಾಮುಲು ಪಾಲಿಗೆ ಕಹಿಯಾಗಿತ್ತು ಎನ್ನುವುದು ಸತ್ಯ. 

ಈಶ್ವರಪ್ಪ ಈ ಬಗ್ಗೆ ಈಗಾಗಲೇ ಅಸಮಧಾನ ವ್ಯಕ್ತ ಪಡಿಸಿದ್ದು, ಈವರೆಗೆ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿರಲಿಲ್ಲ. ಮುಂದೆ ಪೂರ್ಣ ಬಹುಮತ ಸಿಗಲಿದೆ. ಆಗ  ರಾಷ್ಟ್ರವಾದಿ ನಾಯಕ ಮುಖ್ಯಮಂತ್ರಿಯಾಗುತ್ತಾರೆ ಎಂದು ಈಗಾಗಲೇ ಬೊಮ್ಮಾಯಿ, ಹೈಕಮಾಂಡ್ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದು, ಬಂಡಾಯದ ಸುಳಿವು ನೀಡಿದ್ದಾರೆ. ಆ ರಾಷ್ಟ್ರವಾದಿ ನಾಯಕ ಯಾರು..? ಆ ರಾಷ್ಟ್ರವಾದಿ ನಾಯಕ ಈಶ್ವರಪ್ಪನವರೇ..? ಅಥವಾ ಇನ್ಯಾರು..? ಒಂದು ವೇಳೆ  ಈಶ್ವರಪ್ಪ ನಾಯಕತ್ವದಲ್ಲಿ ಮುಂದೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದರೂ, ಸಮರ್ಥ ಆಡಳಿತ ನೀಡುವಲ್ಲಿ ಹಿನ್ನಡೆ ಅನುಭವಿಸಬಹುದು ಎನ್ನುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದಕ್ಕೆ ಈಶ್ವರಪ್ಪ ವೃದ್ಧಿಸಿಕೊಳ್ಳದ ವಿಶ್ವಾಸಾರ್ಹ ರಾಜಕೀಯದ ಮುಖವೇ ಸಾಕ್ಷಿ. 

ಪಕ್ಷದಲ್ಲಿನ ಹಿರಿಯ ನಾಯಕ ಈಶ್ವರಪ್ಪ ಅವರನ್ನೊಳಗೊಂಡು ಕೆಲವರ ಅಸಮಾಧಾನವನ್ನೇ ಕಾಂಗ್ರೆಸ್ ಲಾಭ ಮಾಡಿಕೊಳ್ಳಬಹುದು. ಆದರೂ, ಯಡಿಯೂರಪ್ಪ ಅವರ ಇರುವ ತನಕ ಅಷ್ಟು ಸುಲಭವಾಗಿ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಬಹುಮತದೊಂದಿಗೆ ಅಧಿಕಾರ ಹಿಡಿಯುವುದಕ್ಕೆ ಸಾಧ್ಯವಿಲ್ಲ ಎನ್ನುವ ರಾಜಕೀಯ ವಿಶ್ಲೇಷಣೆಯನ್ನು ತೆಗೆದು ಹಾಕುವಂತಿಲ್ಲ. ಆದರೇ, ಯಡಿಯೂರಪ್ಪ ಕೂಡ ಒಂದು ವೇಳೆ ಪಕ್ಷ ನೀಡುತ್ತಿರುವ ಗೌರವ ಕಡಿಮೆಯಾಗಿಯೋ, ಸಮಧಾನದಿಂದಲೋ ಬಿಜೆಪಿ ವಿರುದ್ಧ 2011 ರಂತೆ ತಿರುಗಿ ಬಿದ್ದರೇ, ಕಾಂಗ್ರೆಸ್ ಗೆ ಲಾಭ ಆಗುವುದಂತೂ ಸತ್ಯ.    

ಇನ್ನು, ಬಿ. ಎಸ್ ವೈ ಸರ್ಕಾರದಲ್ಲಿ ಸವದಿಯವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದು, ಸಮುದಾಯದ ಲೆಕ್ಕಾಚಾರದಲ್ಲಿ ಬಿ. ಎಸ್. ವೈ ಅವರ ಉತ್ತರಾಧಿಕಾರಿಯಾಗಬಹುದೇನೋ ಎಂಬ ಯೋಚನೆಯಲ್ಲಿ ಹೈಕಮಾಂಡ್ ಇದ್ದಿತ್ತೇನೋ ಎಂದು ನಾವು ಅರ್ಥೈಸಿಕೊಂಡರೂ, ಸವದಿ ಒಬ್ಬ ಸಮುದಾಯದ ನಾಯಕರಾಗಿ, ಪಕ್ಷದ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರಲಿಲ್ಲ. ಅವರ ಮೇಲೆ ಹಿಂದೆ ಇದ್ದ ವಿವಾದಗಳು ಅವರಿಗೆ ಆ ವರ್ಚಸ್ಸನ್ನು ತಂದುಕೊಟ್ಟಿಲ್ಲ. ಇತ್ತ, ಅರವಿಂದ ಬೆಲ್ಲದ ಅವರ ಕಥೆಯೂ ಹಾಗೆ ಆಗಿ ಹೋಯಿತು. ಜಿಂದಾಲ್ ಒಳಗೊಂಡು ಇತರೆ ವಿಷಯಗಳನ್ನು ಮುಂದಿಟ್ಟುಕೊಂಡು ಬಿ ಎಸ್ ವೈ ಅವರ ವಿರುದ್ಧ ಮಾತನಾಡಿ, ಎದುರು ಹಾಕಿಕೊಂಡರು. ಹಾಗಾಗಿ ಯಡಿಯೂರಪ್ಪ ಅವರ ಆಪ್ತ ಬಣದಲ್ಲೊಬ್ಬರಾದ ಬಸವರಾಜ ಬೊಮ್ಮಾಯಿ ಅವರಿಗೆ ಮಣೆ ಹಾಕಲಾಯಿತು. ಹಾಗಾಗಿ ಸಂಪುಟದಲ್ಲಿ ಈ ಇಬ್ಬರನ್ನೂ ಸೇರಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಈಗ ಈ ಎಲ್ಲಾ ಅತೃಪ್ತರ ಗುಂಪು ಸರ್ಕಾರದ ವಿರುದ್ಧ ತಿರುಗಿ ಬೀಳಬಹುದೇ ಎನ್ನುವುದು ಪ್ರಶ್ನೆಯಾಗಿದೆ. 

ಯಡಿರೂಪ್ಪರ ಕೆಂಗಣ್ಣಿಗೆ ಭಸ್ಮವಾದ ಯತ್ನಾಳ್, ಬೆಲ್ಲದ, ಯೋಗೇಶ್ವರ್ : 

ಮಾಜಿ ಬಿಎಸ್ ಯಡಿಯೂರಪ್ಪ ಬದಲಾವಣೆ ಕುರಿತು ಬಹಿರಂಗವಾಗಿ ಭಿನ್ನಮತವೆಬ್ಬಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಸಿಪಿ ಯೋಗೇಶ್ವರ್, ಅರವಿಂದ್ ಬೆಲ್ಲದ್... ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಇದು ಯಡಿಯೂರಪ್ಪರನ್ನು ಸಮಾಧಾನ ಮಾಡುವುದಕ್ಕೆ ಹೈಕಮಾಂಡ್ ಮಾಡಿದ ತಂತ್ರ. ಆದರೇ, ಹೈಕಮಾಂಡ್ ಹೆಣೆದ ತಂತ್ರದ ವಿರುದ್ಧ ಈ ಮೂವರು ತಿರುಗಿ ಬೀಳಬಹುದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹೈಕಮಾಂಡ್ ಈ ಮೂವರಿಗೆ ಸಮಾಧಾನ ತರಿಸುವ ಕೆಲಸ ಮಾಡದಿದ್ದರೇ, ಸರ್ಕಾರವನ್ನು ಮತ್ತೆ ಅಲುಗಾಡಿಸುವ ಪ್ರಯತ್ನವನ್ನಂತೂ ಮಾಡಿಯೇ ಮಾಡುತ್ತಾರೆ ಎನ್ನುವುದು ಸತ್ಯ. 

ಈಗಾಗಲೇ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಸ್ಥಾನ ತನ್ನ ಪಾಲಿಗಾಗುತ್ತಿದ್ದದ್ದನ್ನು ತಪ್ಪಿಸಿದ್ದು ಯಡಿಯೂರಪ್ಪ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಆ ಕೋಪ ಮತ್ತಷ್ಟು ರೌದ್ರತೆಯನ್ನು ಕೂಡ ಕಂಡುಕೊಳ್ಳುವ ಎಲ್ಲಾ ಸಾಧ್ಯತೆ ಇದೆ. 

ಇನ್ನು, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಸುತ್ತಬೇಕು. ಇದನ್ನು ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ.  ನನ್ನನ್ನು ಗುರುತಿಸಿರುವ ಕ್ಷೇತ್ರ ವರುಣಾ, ನಾನು ಅಲ್ಲಿಗೆ ಹೆಚ್ಚು ಒತ್ತು ಕೊಡುತ್ತೇನೆ ಎಂದು ಹೇಳಿಕೆ ನೀಡಿದ ಯಡಿಯೂರಪ್ಪ ಪುತ್ರ ಬಿ. ವೈ ವಿಜಯೇಂದ್ರ ಅವರ ಮೇಲೆ ಈ ಅತೃಪ್ತರ ವಕ್ರ ದೃಷ್ಟಿಯಂತೂ ಇದ್ದೇ ಇರುತ್ತದೆ. 

ಸರ್ಕಾರ ರಚನೆಗೆ ಸಹಾಯ ಮಾಡಿದವರಿಗೆ ಸ್ಥಾನಮಾನ..!

ಸರ್ಕಾರ ವಿಶ್ವಾಸ ಕಳೆದುಕೊಂಡಾಗ, ಬಹುಮತವಿಲ್ಲದ ಸಂದರ್ಭದಲ್ಲಿ ಸರ್ಕಾರದ ರಚನೆಗೆ ಸಹಾಯ ಮಾಡಿರುವ ಹಾಗೂ ಪಕ್ಷಕ್ಕೆ ನಿಷ್ಠೆಯಿಂದಿರುವ ಕಾರಣಕ್ಕೆ ಡಾ. ಕೆ. ಸುಧಾಕರ್, ಎಸ್ ಟಿ. ಸೋಮಶೇಖರ್, ಆನಂದ್ ಸಿಂಗ್, ಶಿವರಾಂ ಹೆಬ್ಬಾರ್, ಬಿ. ಸಿ ಪಾಟೀಲ್, ಬೈರತಿ ಬಸವರಾಜ್, ಕೆ. ಗೋಪಾಲಯ್ಯ, ಎಂ. ಟಿ. ಬಿ ನಾಗಾರಾಜ್, ಕೆ. ಸಿ ನಾರಾಯಣ ಗೌಡ, ಮುನಿರತ್ನ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಂಪುಟದಲ್ಲಿ ಹೈ ಕಮಾಂಡ್ ಮಣೆ ಹಾಕಿದ್ದು, ಇದಕ್ಕೆ ಯಡಿಯೂರಪ್ಪರ ಶಿಫಾರಸ್ಸು ಕೂಡ ಇದೆ ಎನ್ನುವುದರಲ್ಲಿ ಅನುಮಾನವಿಲ್ಲ. ಸರ್ಕಾರ ರಚನೆಗೆ ಸಹಕರಿಸಿದ ವಲಸಿಗರಿಗೆ ಬೊಮ್ಮಾಯಿ ನೇತೃತ್ವದ ಮೂಲಕ ಯಡಿಯೂರಪ್ಪ ಮತ್ತೆ ಋಣ ತೀರಿಸಿಕೊಂಡಿದ್ದಾರೆ. ಆದರೇ, ಅತೃಪ್ತರು, ಪಕ್ಷದಲ್ಲಿ ಹಲವಾರು ವರ್ಷಗಳಿಂದ ಇದ್ದ ಹಿರಿಯ ನಾಯಕರು ಪಕ್ಷದ ವಿರುದ್ಧ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರೂ, ಮುಂದಿನ ಚುನಾವಣೆಯ ಸಂದರ್ಭದಲ್ಲಾದರೂ  ಅಸಮಾಧಾನ ತೋರಿಸಿಕೊಳ್ಳಬಹುದು. ಇದು ಬಿಜೆಪಿಗೆ ಕೆಟ್ಟ ಪರಿಣಾಮವನ್ನು ಕೂಡ ಉಂಟು ಮಾಡಬಹುದು.  

ಈ ಎಲ್ಲಾ ಸಮಾಧಾನ, ಅಸಮಾಧಾನಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ಸಚಿವರ, ಶಾಸಕರ ವಿಶ್ವಾಸ ಉಳಿಸಿಕೊಳ್ಳಬೇಕಾಗಿದೆ. ಜೊತೆಗೆ ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಬೇಕಾಗಿದೆ. ಈ ವಿಶ್ವಾಸ ಕಳೆದುಕೊಂಡರೇ, ಮತ್ತೆ ಸರ್ಕಾರದಲ್ಲಿ ಗೊಂದಲ ಸೃಷ್ಟಿ ಆಗುವುದಂತೂ ಖಚಿತ. ಬಹಳ ಮುಖ್ಯವಾಗಿ ಬಿ. ಎಸ್. ಯಡಿಯೂರಪ್ಪರಿಗೆ ಯಾವ ಸಂದರ್ಭದಲ್ಲಿಯೂ ನೋವಾಗದ ಹಾಗೆ ನೋಡಿಕೊಳ್ಳಬೇಕಾಗಿದೆ. ಈ ಎಲ್ಲಾ ಒತ್ತಡದ ನಡುವೆ ಬೊಮ್ಮಾಯಿ ಸರ್ಕಾರವನ್ನು ಹೇಗೆ ನಡೆಸುತ್ತಾರೆ ಎನ್ನುವುದರಲ್ಲಿ ಕುತೂಹಲ ಮೂಡಿಸಿದೆ.

-ಶ್ರೀರಾಜ್ ವಕ್ವಾಡಿ

Thursday, August 5, 2021

ವಿಶೇಷ ಸ್ಥಾನಮಾನ ರದ್ದಾಗಿ ಇಂದಿಗೆ 2 ವರ್ಷ | ಜಮ್ಮು ಕಾಶ್ಮೀರದಲ್ಲಾದ ಬದಲಾವಣೆಗಳೇನು.?

 


ನರೇಂದ್ರ ಮೋದಿ ಸರ್ಕಾರ ಎರಡು ವರ್ಷಗಳ ಹಿಂದೆ ಈ ದಿನ ಜಮ್ಮು ಮತ್ತು ಕಾಶ್ಮೀರದ ವಿಚಾರಕ್ಕೆ ಸಂಬಂಧಪಟ್ಟಂತೆ  ಐತಿಹಾಸಿಕ ಬದಲಾವಣೆಯನ್ನು ತಂದಿತು. ಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ ಡಿಎ ಸರ್ಕಾರ ನಿರ್ಧಾರ ಕೈಗೊಂಡಿತ್ತು. 

ಹೌದು, ಆಗಸ್ಟ್ 5, 2019 ರಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ಅದರ ವಿಭಜನೆಯನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡುವುದಾಗಿ ಪ್ರಸ್ತಾಪವನ್ನು ಮಂಡಿಸಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಏನು..? 370 ನೇ ವಿಧಿ ಏನು..? ‘35–ಎ’ಕಲಂ ಏನನ್ನು ಹೇಳುತ್ತದೆ..? ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಆದ ಬದಲಾವಣೆಗಳೇನು ಎನ್ನುವುದಕ್ಕೆ ಈ ಲೇಖನ ಸಂಕ್ಷಿಪ್ತ ಮಾಹಿತಿ ನೀಡುತ್ತದೆ. 

370 ನೇ ವಿಧಿ ಏನು ಹೇಳುತ್ತದೆ..? 

ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಿಂದೆ ದೊಡ್ಡ ಇತಿಹಾಸವಿದೆ. ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಪ್ರಚೋದಿತ ದಾಳಿ ನಡೆಯುತ್ತದೆ. ಇದಕ್ಕೆ ಹೆದರಿದ ಅಲ್ಲಿನ ಕೊನೆಯ ರಾಜ ಹರಿಸಿಂಗ್‌ ಓಡಿ ಬಂದು ಭಾರತದ ಬೆಂಬಲ ಕೇಳುತ್ತಾರೆ. ನೆರವು ಕೊಡಲು ಸರ್ಕಾರ ಷರತ್ತು ಹಾಕುತ್ತದೆ. ಅದೇ ವಿಲೀನದ ಷರತ್ತು. ಈ ಹಿನ್ನೆಲೆಯಲ್ಲಿ ಸಂವಿಧಾನದ 370ನೇ ಕಲಂ ಹುಟ್ಟು ಪಡೆಯುತ್ತದೆ. ಅದರಂತೆ ಕಾಶ್ಮೀರದ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಕ್ಷೇತ್ರಗಳು ಕೇಂದ್ರ ಸರ್ಕಾದ ಅಧೀನಕ್ಕೆ ಒಳಪಡುತ್ತವೆ. ಉಳಿದೆಲ್ಲ ಅಧಿಕಾರ ರಾಜ್ಯದಲ್ಲಿ ಉಳಿಯುತ್ತದೆ. ಉಭಯ ಪಕ್ಷಗಳು ನಿಯಮ ಮೀರಿ ಆಚೀಚೆ ಸರಿಯುವಂತಿಲ್ಲ. ಇದರಲ್ಲಿ ಏನೇ ಬದಲಾವಣೆ ಆಗಬೇಕಾದರೂ ಸಂವಿಧಾನ ಸಮಿತಿಯಲ್ಲಿ ಚರ್ಚೆ ಆಗಬೇಕು. ಆದರೆ ಈಗ ಸಂವಿಧಾನ ಸಮಿತಿ ಇಲ್ಲದಿರುವುದರಿಂದ ಸಂಸತ್ತು, ರಾಜ್ಯ ವಿಧಾನಸಭೆಯದೇ ಪರಮಾಧಿಕಾರವಾಗಿದೆ.

ಸಂವಿಧಾನದ 370 ನೇ ವಿಧಿಯು ಜಮ್ಮು-ಕಾಶ್ಮೀರ ರಾಜ್ಯದ ಕುರಿತು ವಿವರಿಸುತ್ತದೆ. ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನವು ಅಸ್ತಿತ್ವದಲ್ಲಿದೆ. 1956ರ ನವೆಂಬರ್‌ 17ರಂದು ರಾಜ್ಯದ ವಿಧಾನಸಭೆಯು ಸರ್ವಾನುಮತದಿಂದ ಇದನ್ನು ಅಂಗೀಕರಿಸಿದೆ. ಈ ಸಂವಿಧಾನದ 1 ರಿಂದ8 ಮತ್ತು 158ನೇ ವಿಧಿಗಳು ಅಂದೇ ಜಾರಿಗೆ ಬಂದಿವೆ. ಉಳಿದೆಲ್ಲಾ ವಿಧಿಗಳು ಜಾರಿಗೆ ಬಂದದ್ದು 1957ರ ಜನವರಿ 26ರಂದು.ಇದರಿಂದಾಗಿಯೇ ಜಮ್ಮು-ಕಾಶ್ಮೀರದ ಸಂವಿಧಾನವು ದೇಶದಲ್ಲಿ ಜಾರಿಯಲ್ಲಿರುವ ಎರಡನೇ ಸಂವಿಧಾನ ಎಂದೂ ಹೇಳಲಾಗುತ್ತಿದೆ. ಕಾಶ್ಮೀರದ ಸಂವಿಧಾನವು ತಿದ್ದುಪಡಿಗೊಳ್ಳುವುದು ಅಲ್ಲಿನ ವಿಧಾನಸಭೆಯಲ್ಲಿ. ಈ ರಾಜ್ಯದಲ್ಲಿ ಆಸ್ತಿ ಹೊಂದಿರುವವರು ಪ್ರತ್ಯೇಕ ಕಾನೂನು ಪಾಲಿಸಬೇಕು ಹಾಗೂ ಪ್ರತ್ಯೇಕ ನಾಗರಿಕತೆ ಹೊಂದಿರಬೇಕು ಎನ್ನುತ್ತದೆ ಈ ವಿಧಿ. ರಾಜ್ಯದ ಜನರ ಮೂಲಭೂತ ಹಕ್ಕುಗಳು ಕೂಡ ಇತರ ರಾಜ್ಯಗಳಿಗಿಂತ ಭಿನ್ನವಾಗಿದೆ. 

‘35–ಎ’ಕಲಂ ಏನು ಹೇಳುತ್ತದೆ..?  

ಇದು ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದ್ದು. 35ಎ ಕಲಂ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿಲ್ಲ. ಅಲ್ಲದೆ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು. ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ. ಆದರೆ, ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ. ಜತೆಗೆ, ಆತನ ಪತ್ನಿಗೂ ಈ ಎಲ್ಲ ಹಕ್ಕುಗಳು ಪ್ರಾಪ್ತವಾಗುತ್ತವೆ. ಸಂವಿಧಾನಕ್ಕೆ ಈ ಕಲಂ ಸೇರ್ಪಡೆಯಾಗಿದ್ದು ಕೂಡ ಸಂಸತ್ತಿನ ನಿರ್ಣಯದ ಮೂಲಕ ಅಲ್ಲ. ಬದಲಿಗೆ, ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಇರುವ ವಿಶೇಷಾಧಿಕಾರ ಬಳಸಿ ರಾಷ್ಟ್ರಪತಿ ಹೊರಡಿಸಿದ ಅಧಿಸೂಚನೆಯ ಮೂಲಕ. 1954ರಲ್ಲಿ ರಾಷ್ಟ್ರಪತಿಗಳು ಅಧಿಸೂಚನೆ ಹೊರಡಿಸಿದ್ದರು.

ಈ ಎರಡು ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಏನೇನು ಬದಲಾಗಿದೆ..?

ಹೊರ ರಾಜ್ಯದವರೂ ಜಮ್ಮು ಕಾಶ್ಮೀರದಲ್ಲಿ ಭೂಮಿ ಖರೀದಿಸಬಹುದು :

2019 ರ ತನಕ 35ಎ ಕಲಂ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿರಲಿಲ್ಲಿ.  ಆದರೇ, ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ಈಗ ಯಾವೊಬ್ಬ ದೇಶದ ನಾಗರಿಕನೂ ಜಮ್ಮು ಕಾಶ್ಮೀರದಲ್ಲಿ ಭೂ ಖರೀದಿಸಬಹುದು, ಆಸ್ತಿ ಹೊಂದಬಹುದಾಗಿದೆ. 

ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಹಾಗೂ ಸಂವಿಧಾನವಿಲ್ಲ.!

2019 ರಲ್ಲಿ ನರೇಂದ್ರ ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ದೇಶದ ತ್ರಿವರ್ಣ ಧ್ವಜ ಹಾರಿತ್ತು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವಿದ್ದಾಗ ಸ್ವತಂತ್ರ ಧ್ವಜವನ್ನು ಹೊಂದುವ ಅವಕಾಶವಿತ್ತು. ತನ್ನದೇ ಆದ ದಂಡ ಸಂಹಿತೆಯನ್ನು ಹೊಂದಿತ್ತು, ಇದನ್ನು ರಣಬೀರ್ ದಂಡ ಸಂಹಿತೆ ಎಂದು ಕರೆಯಲಾಗುತ್ತಿತ್ತು. 

ಮಹಿಳೆಯರಿಗೆ ಸಮಾನತೆ :

ಆಗಸ್ಟ್ 2019 ಕ್ಕಿಂತ ಮೊದಲು, ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಜಮ್ಮು ಕಾಶ್ಮೀರದಲ್ಲಿ ಇದ್ದ ಎಲ್ಲಾ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ. ಆದರೆ, ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ. ವಿಶೇಷ ಸ್ಥಾನಮಾನ ರದ್ದುಗೊಂಡ ನಂತರ ಈಗ ಜಮ್ಮ ಕಾಶ್ಮೀರದಲ್ಲಿ ಮಹಿಳೆಯರಿಗೆ ಸಮಾನತೆಯ ಹಕ್ಕು ಲಭಿಸಿದೆ. 

ಗುಪ್ಕರ್ ಅಲಿಯನ್ಸ್ - ಕಾಶ್ಮೀರಿ ಮಹಾ ಘಟಬಂಧನ್ :

2014 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ದೇಶದಾದ್ಯಂತ ಬಹುತಮತಗಳಿಂದ ಭರ್ಜರಿ ಗೆಲುವು ಕಂಡ ನಂತರ, ಪ್ರತಿಪಕ್ಷಗಳ ಒಗ್ಗೂಡುವಿಕೆಯ ಬೆಳವಣಿಗೆಗಳು ಕಂಡವು. ಬಿಹಾರದಲ್ಲಿ ರಾಷ್ಟ್ರೀಯ ಜನತಾದಳ (ಆರ್‌ ಜೆಡಿ) ಮತ್ತು ಜನತಾದಳ-ಯುನೈಟೆಡ್ (ಜೆಡಿಯು) ಮೈತ್ರಿಯಾಗುವ ಮೂಲಕ ಪ್ರತಿಪಕ್ಷಗಳ ಒಗ್ಗೂಡುವಿಕೆ ಆರಂಭವಾಯಿತು. ಈ ಪ್ರಯೋಗವನ್ನು ಮಹಾ ಘಟಬಂಧನ್, ಮಹಾ ಮೈತ್ರಿ ಎಂದು ಕರೆಯಲಾಯಿತು. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಇದು ಯಶಸ್ಸು ಕೂಡ ಕಂಡಿತು.  

ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪ್ರತಿಸ್ಪರ್ಧಿಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮೈತ್ರಿಯಾದವು. 

ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಮತ್ತು ಪಿಡಿಪಿ ಯ ಮೆಹಬೂಬ ಮುಫ್ತಿ ಅವರು ಕೈಜೋಡಿಸಿದರು. ಗೃಹ ಬಂಧನದಿಂದ 2020 ರಲ್ಲಿ ಬಿಡುಗಡೆಯಾದ ನಂತರ ಮೈತ್ರಿ ಸಭೆಗಳನ್ನು ನಡೆಸಿದರು. ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ಲಭ್ಯವಿರುವ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುವ ನಿರ್ಣಯವನ್ನು ಅಂಗೀಕರಿಸಿದರು. 

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಮ್ಮ ಕಾಶ್ಮೀರದ ಪ್ರಾದೇಶಿಕ ಪಕ್ಷಗಳನ್ನು ಸಭೆಗೆ ಕರೆದ್ದರು. ಎಲ್ಲಾ ಪಕ್ಷಗಳು ಚುನಾವಣೆಗೆ ಒಮ್ಮತವನ್ನು ಸೂಚಿಸಿದ್ದವು. ಕೇಂದ್ರ ಸರ್ಕಾರ ಡಿಲಿಮಿಟೇಶನ್ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿತ್ತು. 

ಗುಪ್ಕರ್ ಒಕ್ಕೂಟವು ಮುಂದಿನ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ ಎಂದು ಹೇಳಲಾಗಿದೆ.

ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿಗೆ ಪಾಸ್ ಪೋರ್ಟ್ ಇಲ್ಲ..!

ವಿಧ್ವಂಸಕ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಭಾರತೀಯ ಪಾಸ್‌ ಪೋರ್ಟ್‌ ಗಳನ್ನು ನೀಡದಿರಲು ಸರ್ಕಾರ ಇತ್ತೀಚೆಗೆ ನಿರ್ಧರಿಸಿತು.

ಇನ್ನು, ವಿಶೇಷ ಸ್ಥಾನಮಾನ ರದ್ದು ಮಾಡುವುದೆಂದರೆ ಕಾಶ್ಮೀರ ವಿಲೀನದ ವೇಳೆ ರಾಜ ಹರಿಸಿಂಗ್ ಜತೆ ಮಾಡಿಕೊಂಡ ಷರತ್ತಿನ ಉಲ್ಲಂಘನೆಯೂ ಆಗುತ್ತದೆ ಎಂಬ ವಾದವೂ ಇದ್ದಿತ್ತು. ಈ ವಾದ ವಿವಾದಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, 2019 ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿತ್ತು. 

-ಶ್ರೀರಾಜ್ ವಕ್ವಾಡಿ

Monday, August 2, 2021

ಕಂಪೆನಿಯ ಯಶಸ್ಸಿಗೆ ಉದ್ಯೋಗಿಗಳೇ ಕಾರಣ, ಸಿಇಒ ಗಳಲ್ಲ..! : ಡಾನ್


(ಸಿಬ್ಬಂದಿಗಳ ಸಂಬಳ ಹೆಚ್ಚಳಕ್ಕೆ ಶೇಕಡಾ. 90ರಷ್ಟು ಸಂಬಳವನ್ನು ಕಡಿತಗೊಳಿಸಿಕೊಂಡ ಸಿಇಒ..! )

ಉದ್ಯಮ ಕ್ಷೇತ್ರದಲ್ಲಿ ತಿಂಗಳ ಕೊನೆಯಲ್ಲಿ ಎಲ್ಲರೂ ಬಯಸುವುದು ಕೈ ತುಂಬಾ ಸಂಬಳ. ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ, ವೃತ್ತಿ ಧರ್ಮ ಪಾಲಿಸುತ್ತಿದ್ದರೂ, ಮಾತ್ರವಲ್ಲದೇ ತನ್ನ ಸಹೋದ್ಯೋಗಿಗಳೊಂದಿಗೆ ಎಷ್ಟೇ ಆಪ್ತ ಬಂಧವನ್ನು ಹೊಂದಿದ್ದರೂ ಕೂಡ  ಸಂಬಳದ ವಿಚಾರದಲ್ಲಿ ಯಾರೂ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಕೈಗೆ ಸೇರುವ ಸಂಬಳ ಒಂದೆರಡು ದಿನ ತಡವಾದರೂ ಕೂಡ ಎಲ್ಲಾ ಯೋಜನೆಗಳು ಬದಲಾಗುತ್ತವೆ, ಮಾತ್ರವಲ್ಲದೆ ಮಾನಸಿಕ ಸ್ಥಿತಿಯೂ ಬದಲಾವಣೆಯಾಗುತ್ತದೆ. 

ತನಗೆ ಬಂದ ಸಂಬಳದ ಪಾಲಿನಲ್ಲಿ ನನಗಿಷ್ಟೇ ಸಾಕು, ಉಳಿದದ್ದನ್ನು ಸಂಸ್ಥೆಯ ಸಹೋದ್ಯೋಗಿಗಳಿಗೆ ಅಥವಾ ಉದ್ಯೋಗಿಗಳಿಗೆ ನೀಡಿ, ಅದರಿಂದ ಸಂಸ್ಥೆಯ ಬೆಳವಣಿಗೆಗೂ ಲಾಭವಾಗುತ್ತದೆ. ಉದ್ಯೋಗಿಗಳಿಗೆ ಕಾರ್ಯ ಕ್ಷೇತ್ರದಲ್ಲಿ ಒಂದು ಪೂರಕವಾದ ವಾತಾವರಣ ಸೃಷ್ಟಿಯಾಗುತ್ತದೆ ಎನ್ನುವ ವಿಶಾಲವಾದ ಮನಸ್ಸು ಯಾರಿಗಿದೆ ಹೇಳಿ..? ಖಂಡಿತಾ ಇಲ್ಲ. ಕೆಲಸದ ವಿಷಯದಲ್ಲಿ ಅವರೆಷ್ಟು ಒಳ್ಳೆಯತನದಿಂದ ಇದ್ದರೂ, ಹಣದ ವಿಚಾರದಲ್ಲಿ ಎಲ್ಲರೂ ಹತ್ತಾರು ಬಾರಿ ಯೋಚಿಸಿಯೇ ಮುಂದೆ ನಡೆಯುತ್ತಾರೆ. ಆದರೇ, ಇಲ್ಲೊಂದು ಸಂಸ್ಥೆಯ ಸಿಇಒ ಅಥವಾ ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿ ತನಗೆ ಬರುವ ಸಂಬಳದ  90 ಶೇಕಡಾ ಪಾಲನ್ನು ಸಂಸ್ಥೆಯ ಇತರೆ ಉದ್ಯೋಗಿಗಳಿಗೆ ನೀಡುವಂತೆ ಧಾರಾಳತನವನ್ನು ಮೆರೆದಿದ್ದಾರೆ.  



ಕ್ರೆಡಿಟ್ ಕಾರ್ಡ್ ಸಂಸ್ಕರಣಾ ಕಂಪನಿ ಗ್ರಾವಿಟಿ ಪೇಮೆಂಟ್ಸ್  ಮುನ್ನಡೆಸುತ್ತಿರುವ ಡಾನ್ ಪ್ರೈಸ್, ತಮಗೆ ಬರುತ್ತಿರುವ ಒಟ್ಟಾರೆ ಸಂಬಳದ ಒಟ್ಟು 90 ಶೇಕಡಾವನ್ನು ಕಡಿತಗೊಳಿಸಿಕೊಂಡಿದ್ದಾರೆ. ಉಳಿದದ್ದನ್ನು ತನ್ನ ಅಡಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ನೀಡುವುದಕ್ಕೆ ಮುಂದೆ ಬಂದು ಉದ್ಯೋಗಿಗಳಿಗೆ ಸಿಹಿ ಉಣಿಸಿದ್ದಲ್ಲದೇ ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ. 

ತನ್ನ ಸಹೋದ್ಯೋಗಿ ರೋಸಿಟಾ ಎಂಬಾಕೆಗೆ ಆದ ಆರ್ಥಿಕ ಸಮಸ್ಯೆಯನ್ನು ಗಮನಿಸಿದ ಡಾನ್, ಈ ನಿರ್ಧಾರಕ್ಕೆ ಬಂದಿದ್ದಾರೆ. ಜೀವನಕ್ಕೆ ಯಾರಿಗೂ ಕಷ್ಟವಾಗಬಾರದು, ಜೀವನವನ್ನು ಯಾವುದೇ ಕೊರತೆ ಇಲ್ಲದೆ ಬದುಕುವಂತಹ ಸಂಬಳ ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೂ ಇರಬೇಕು ಎನ್ನುವುದೆ ತನ್ನ ಉದ್ದೇಶ ಎನ್ನುತ್ತಾರೆ ಡಾನ್. 

ಈ ಬಗ್ಗೆ ತನ್ನ ಟ್ವೀಟರ್ ಖಾತೆಯ ಮೂಲಕ ಇತ್ತೀಚೆಗೆ ಬರೆದುಕೊಂಡಿರುವ ಡಾನ್, ಫಾಸ್ಟ್ ಫುಡ್ ಚೈನ್‌ ನಲ್ಲಿ ಮ್ಯಾನೇಜರ್ ಆಗಲು ತರಬೇತಿ ಪಡೆಯುತ್ತಿದ್ದ ರೋಸಿಟಾ ಎಂಬ ಉದ್ಯೋಗಿಗೆ  ಹಣದ ಸಮಸ್ಯೆ ಇದೆ ಎಂದು ಅರಿತುಕೊಂಡೆ. ಇದರಿಂದ ನನ್ನ ಮನ ಕಲುಕಿತು ಎಂದು ಡಾನ್ ಬರೆದುಕೊಂಡಿದ್ದರು.

ಸಂಸ್ಥೆಯಿಂದ ಬರುತ್ತಿದ್ದ ಆದಾಯದಿಂದ ಜೀವನ ನಿರ್ವಹಣೆ ಕಷ್ಟ ಸಾಧ್ಯ ಎಂಬ ಉದ್ದೇಶದಿಂದ ರೋಸಿಟಾ, ಇನ್ನೊಂದು ಉದ್ಯೋಗವನ್ನು ಪ್ರಾರಂಭಿಸಬೇಕಾದ ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಸಿಇಒ ಡಾನ್, ತನ್ನ ಸಂಸ್ಥೆಯಲ್ಲಿ ದುಡಿಯುತ್ತಿರುವ ಯಾವೊಬ್ಬ ಉದ್ಯೋಗಿಗೂ ಸಂಬಳದ ಕಾರಣದಿಂದ ಜೀವನ ನಿರ್ವಹಣೆಗೆ ಕಷ್ಟವಾಗಬಾರದು ಎಂಬ ಉದ್ದೇಶದಿಂದ ತನಗೆ ಬರುತ್ತಿದ್ದ ಆದಾಯದ ಶೇಕಡಾ 90 ರಷ್ಟು ಪಾಲನ್ನು ತನ್ನ ಸಹೋದ್ಯೋಗಿಗಳಿಗೆ ನೀಡಲು ನಿರ್ಧಾರಿಸಿದ್ದಾಗಿ ಡಾನ್ ಹೇಳುತ್ತಾರೆ. 

'ರೋಸಿಟಾ ತನ್ನ ಮತ್ತೊಂದು ವೃತ್ತಿಯ ಬಗ್ಗೆ ಯಾವುದೇ ವಿಚಾರವನ್ನು ಬಿಟ್ಟುಕೊಡುತ್ತಿರಲಿಲ್ಲ. ತನನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ ಎಂಬ ಭಯದಿಂದ ವರ್ತಿಸುತ್ತಿದ್ದಳು. ಛೇ, ನಾನು ನನ್ನ ಸಂಸ್ಥೆಯಲ್ಲಿ ಎಂತಹ ಭಯದ ವಾತಾವರಣವನ್ನು ಸೃಷ್ಟಿ ಮಾಡಿದ್ದೇನೆ..? ಯಾಕೆ ಹೀಗೆ ಈ ವಾತಾವರಣ, ಸಂಸ್ಕೃತಿ ಸಂಸ್ಥೆಯಲ್ಲಿ ಸೃಷ್ಟಿಯಾಯಿತು..? ಒಬ್ಬ ಉದ್ಯೋಗಿಗೆ ಸಂಸ್ಥೆಯಲ್ಲಿ ಪೂರಕವಾದ ವಾತಾವರಣವಿಲ್ಲದಿರಿವುದು ಎಂತಹ ಸ್ಥಿತಿ..? ಎಂದು ಡಾನ್  ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ. 

'ರೊಸಿಟಾ ಕಾಲೇಜ್ ಗ್ರಾಡ್ ಆದರೆ ವರ್ಷಕ್ಕೆ $ 30,000 ಗಳಿಸುತ್ತಿದ್ದಳು. ಅವಳು ಸಂಸ್ಥೆಯ ಕೆಲಸವನ್ನು 5 ಕ್ಕೆ ಮುಗಿಸುತ್ತಾಳೆ ಮತ್ತು ಒಂದುವರೆ ವರ್ಷದಿಂದ  5: 30 ರಿಂದ 11 ರ ತನಕ  ಪ್ರತಿ ದಿನ ರಾತ್ರಿಯೂ ಮೆಕ್ ಡೋನಾಲ್ಡ್ ನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಕೆಲಸ ಮಾಡುತ್ತಿದ್ದಾಳೆ. 

ತನ್ನ ಇನ್ನೊಂದು ಉದ್ಯೋಗವನ್ನು ತೊರೆಯಬೇಕಾದರೇ ತನಗೆ $ 10,000 (£ 7,156.50) ಹೆಚ್ಚಿಸುವ ಅಗತ್ಯವಿದೆ ಎಂದು ರೋಸಿಟಾ ಡಾನ್‌ ಗೆ ಹೇಳಿಕೊಂಡಾಗ,  ಕೆಲವು ಹೆಚ್ಚುವರಿ ಕರ್ತವ್ಯಗಳನ್ನು ನಿಭಾಯಿಸುವುದಾರೇ, ವೇತನದ ಪ್ರಮಾಣವನ್ನು ಹೆಚ್ಚಳ ಮಾಡಲಾಗುವುದೆಂದು ಡಾನ್ ಭರವಸೆ ನೀಡುತ್ತಾರೆ. 

ಆಕೆ ಈಗ ಮಾನಸಿಕವಾಗಿಯೂ, ಆರ್ಥಿಕವಾಗಿಯೂ ಸುಧಾರಿಸಿದ್ದಾಳೆ. ತನ್ನ ಮತ್ತೊಂದು ಉದ್ಯೋಗವನ್ನು ತ್ಯಜಿಸಿ ಸಂಪೂರ್ಣ ಸಂಸ್ಥೆಯ ಕಾರ್ಯದಲ್ಲಿಯೇ ತೊಡಗಿಕೊಂಡಿದ್ದಾಳೆ. ಆಕೆಯ ಕಾರ್ಯಕ್ಷಮತೆಯೂ ಸುಧಾರಿಸಿದೆ ಎಂದು ಹೆಮ್ಮೆಯಿಂದ ತನ್ನ ಉದ್ಯೋಗಿ ರೋಸಿಟಾ ಬಗ್ಗೆ ಹೇಳುತ್ತಾರೆ ಡಾನ್ ಪ್ರೈಸ್.

ಅಷ್ಟೇ ಅಲ್ಲ, ಇದಾದ ಬಳಿಕ ಕೆಲವೇ ದಿನಗಳ ಅಂತರದಲ್ಲಿ ರೋಸಿಟಾ ಸಂಸ್ಥೆಯ ಆಪರೇಷನ್ ಡೈರೆಕ್ಟರ್ ಆಗಿ ಬಡ್ತಿ ಪಡೆಯುತ್ತಾಳೆ. ಮಾತ್ರವಲ್ಲದೇ ರೋಸಿಟಾ ಯಶಸ್ಸಿನ ಪರಿಣಾಮವಾಗಿ, ಅವರು ಕಂಪನಿಯ ಎಲ್ಲಾ ಉದ್ಯೋಗಿಗಳ ಕನಿಷ್ಠ ಸಂಬಳವನ್ನು $ 70,000 ಕ್ಕೆ ಹೆಚ್ಚಿಸಲು ನಿರ್ಧರಿಸುತ್ತಾರೆ.

ಇದು, ಗ್ರಾವಿಟಿ ಪೇಮೆಂಟ್ಸ್  ಕಂಪೆನಿಯ ಸಿಇಒ ತೆಗೆದುಕೊಂಡ ನಿರ್ಧಾರದ ಬಗ್ಗೆ ಜಗತ್ತೇ ಬೆರಗುಗಣ್ಣಿನಿಂದ ಕಾಣುವ ಹಾಗೆ ಮಾಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

'ಮಿಲಿಯನೇರ್ ಜೀವನಶೈಲಿಯನ್ನು ನಾನು ಕಳೆದುಕೊಂಡಿಲ್ಲ : ಡಾನ್ 

ಡಾನ್ ತನ್ನ ಸ್ವಂತ ವೇತನ ಶೇಕಡಾ 90 ರಷ್ಟನ್ನು ಕಡಿತಗೊಳಿಸಿ, ಅಂದರೇ, ಅಂದಾಜು $ 1.1M (£ 787,017) ನಿಂದ $ 70,000 ಗೆ ಕಡಿತಗೊಳಿಸಿಕೊಂಡು, ತನ್ನ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸಲು ಮುಂದಾದರು. 

'ಮಿಲಿಯನೇರ್ ಜೀವನಶೈಲಿಯನ್ನು ನಾನು ಕಳೆದುಕೊಂಡಿಲ್ಲ. ನಾನು ನನ್ನ  ಸಂಸ್ಥೆಯ ಉದ್ಯೋಗಿಗಳ ಪಾಲಿಗೆ ಒಬ್ಬ ಒಳ್ಳೆಯ ಬಾಸ್ ಆಗಿದ್ದೇನೆ ಎನ್ನುವುದರ ಬಗ್ಗೆ ನನಗೆ ಸಂತೋಷವಿದೆ. ನೆಮ್ಮದಿ ಇದೆ. ಸಂಸ್ಥೆಯ ನೂರಾರು ವಿದ್ಯಾರ್ಥಿಗಳ ಮುಖದಲ್ಲಿ ಸಂತಸ ಕಂಡಿದ್ದೇನೆ. ಶ್ರೀಮಂತನಾಗಿ ಬದುಕುವುದೆಂದರೇ, ಹಣ ಸಂಪಾಧನೆ ಮಾಡುವುದಕ್ಕಿಂತ ಇನ್ನೊಬ್ಬರ ಮುಖದಲ್ಲಿ ಸಂತಸ ಕಾಣುವುದೇ ಆಗಿದೆ ಎನ್ನುತ್ತಾರೆ ಡಾನ್. 

ಕಂಪೆನಿಯ ಆದಾಯ ಮೂರು ಪಟ್ಟು ಏರಿಕೆ..!

ಸಿಇಒ ಡಾನ್ ಪ್ರೈಸ್ ತೆಗೆದುಕೊಂಡ ಈ ನಿರ್ಧಾರದಿಂದ ಕಂಪೆನಿಗೆ ಏನು ಪ್ರಯೋಜನವಾಯಿತಿ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಹೌದು, ಡಾನ್ ತೆಗೆದುಕೊಂಡ ನಿರ್ಧಾರದಿಂದ ಕಂಪನಿಯ ಆದಾಯವು ಮೂರು ಪಟ್ಟು ಹೆಚ್ಚಾಗಿದೆ. ಗ್ರಾಹಕರ ಸಂಖ್ಯೆ ದ್ವಿಗುಣವಾಗಿದೆ, ಸಂಸ್ಥೆಯ ಉದ್ಯೋಗಿಗಳ ಬದುಕು ಮೊದಲಿಗಿಂತ ಚೆನ್ನಾಗಿದ್ದು, ಸಂಸ್ಥೆಯ ಉದ್ಯೋಗಿಗಳು ಹೊಸದಾಗಿ ಖರೀದಿಸಿದ ಮನೆಗಳು 10 ಪಟ್ಟು ಹೆಚ್ಚಾಗಿದೆ. ಉದ್ಯೋಗಿಗಳು ದಾಖಲೆಯ ಮಾರಾಟವನ್ನು ನಡೆಸಿದ್ದಾರೆ ಮತ್ತು ನಾವು ಈಗ 20,000 ಸಣ್ಣ ವ್ಯಾಪಾರ ಗ್ರಾಹಕರನ್ನು ಹೊಂದಿದ್ದೇವೆ ಎನ್ನುತ್ತದೆ ಕಂಪೆನಿ. 

ಈ ಬಗ್ಗೆ ಹರ್ಷ ವ್ಯಕ್ತ ಪಡಿಸುವ ಡಾನ್, 'ನಾನು ಇನ್ನೂ ಉತ್ತಮ ಬಾಸ್ ಆಗಲು ಕಲಿಯುತ್ತಿದ್ದೇನೆ. ಇತರ ಸಿಇಒಗಳಿಗೆ ಹೋಲಿಸಿದಾಗ ಮಾತ್ರ ನಾನು "ಚೆನ್ನಾಗಿ" ಕಾಣುತ್ತೇನೆ. ನಾನು ಇನ್ನಷ್ಟು ಚೆನ್ನಾಗಿ ನನ್ನ ಉದ್ಯೋಗಿಗಳೊಂದಿಗೆ ಇರಲು ಬಯಸುತ್ತೇನೆ ಎನ್ನುತ್ತಾರೆ.

'ನಿಮ್ಮ ಉದ್ಯೋಗಿಗಳನ್ನು ಕೇಳಿ, ಅವರನ್ನು ನಂಬಿ, ಅವರಿಗೆ ಸಂಸ್ಥೆಯಲ್ಲಿ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿ. ಕಂಪನಿಯ ಯಶಸ್ಸಿಗೆ ಉದ್ಯೋಗಿಗಳೇ ಕಾರಣ. ಸಿಇಒಗಳಲ್ಲ. ’ ಎಂದು ಅಬಿಪ್ರಾಯ ವ್ಯಕ್ತಪಡಿಸುತ್ತಾರೆ ಡಾನ್. 

-ಶ್ರೀರಾಜ್ ವಕ್ವಾಡಿ

Saturday, July 31, 2021

'ಸುರಗಂಗೆ' ಪಾರ್ವತಿ ಜಿ. ಐತಾಳರ ಕೃತಿಗಳ ಒಳಸೂಚಿ

 


ಡಾ. ಪಾರ್ವತಿ ಜಿ. ಐತಾಳ್ ಇದುವರೆಗೆ ಪ್ರಕಟಿಸಿದ ಅಪೂರ್ವ ಸಾಹಿತ್ಯ ಕೊಡುಗೆಗಳ ಸಂಕಲನ 'ಸುರಗಂಗೆ'. ಅನುವಾದ ಕ್ಷೇತ್ರದಲ್ಲಿ ಅತ್ಯಪೂರ್ವ ಸಾಧನೆಗೈದಿರುವ ಅವರ ಬದುಕೇ ಸಾಹಿತ್ಯಕ್ಕೆ ಒಂದು ರೀತಿಯಲ್ಲಿ ಮುಡಿಪು‌. 

ಬದುಕು ಮತ್ತು ಬರಹ, ಕಾವ್ಯ ಮತ್ತು ಸ್ಪಂದನ, ಕೃತಿ ಮತ್ತು ಕೃಷಿಗಳ ಒಟ್ಟು ಸ್ವರೂಪವಾಗಿ 'ಸುರಗಂಗೆ' ಮೂಡಿಬಂದಿದೆ. ಅವರ ಸಂವೇದನೆಯೇ ಇಲ್ಲಿ ಬರಹಗಳ ಮೂರ್ತರೂಪವೆತ್ತಿವೆ‌. ಕನ್ನಡ ಮಲಯಾಳಂ ಒಳಗೊಂಡು ಪಂಚ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಪಾರ್ವತಿ ಜಿ‌. ಐತಾಳ್ ಅವರನ್ನೇ ಪ್ರತಿಬಿಂಬಿಸುವ ಅವರ 80 ಕ್ಕೂ ಅಧಿಕ ಕೃತಿಗಳ ಒಟ್ಟು ತೆಳು ಸಾರದಂತೆ ಹೊರಬಂದಿದೆ ಈ ಕೃತಿ‌. 

ಆತ್ಮಸ್ಥೈರ್ಯ ತೋರಿದ ಸೃಜನಶೀಲ ಸಂಕಲ್ಪ ಶಕ್ತಿಯಾಗಿ ತೋರುವ ಸ್ತ್ರೀ ಅಂತರ್ಮುಖಗಳು ಪಾರ್ವತಿ ಜಿ. ಐತಾಳ್ ಅವರ ಅಷ್ಟೂ ಕೃತಿಗಳಲ್ಲಿ ಕಾಣಸಿಗುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ‌. ಅವರ ಕೃತಿಗಳನ್ನು ಓದುವುದೇ ಒಂದು ಸ್ತ್ರೀಯರ ಬದುಕಿನ ಸಮರ್ಥ ಹಾಗೂ ಸಾರ್ಥಕ ಸಂವೇದನೆ ಎಂದರೇ ತಪ್ಪಾಗಲಾರದು. 

ಸ್ತ್ರೀ ಸಂವೇದನೆಯ ಬಂಡಾಯ ಧೋರಣೆಯಲ್ಲಿ ಮೂಡಿ ಬಂದಿಲ್ಲ ಎನ್ನುವುದೇ ಪಾರ್ವತಿ ಜಿ. ಐತಾಳ್ ಅವರ ಎಲ್ಲಾ ಕೃತಿಗಳ ಹಿರಿಮೆ. ಅದೊಂದು ಸಮಾಜದ ಧ್ವನಿ, ಉಸಿರು, ವೇದನೆಯಾಗಬೇಕು ಎನ್ನುವುದೇ ಅವರ ಎಲ್ಲಾ ಕೃತಿಗಳ ಆಶಯ. ಸಿಡಿ, ಗುಡುಗು, ಕಿಡಿ, ದಾಳಿ, ದ್ವೇಷ, ಅಸೂಯೆ, ಸೌಮ್ಯ ಹೀಗೆ ಹೆಣ್ಣಿನ ಎಲ್ಲಾ ವಯಸ್ಸಿನ, ಎಲ್ಲಾ ಆಯಾಮದ ವಸ್ತು ಚಿತ್ರಣವನ್ನು ಅವರ ಕಥಾ ವಸ್ತುಗಳ ಆಯ್ಕೆಯಲ್ಲಿ ನಮಗೆ ಕಾಣಸಿಗುತ್ತವೆ. 

ವಿಶ್ವದ ನೆಲೆಯಲ್ಲಿ ಸ್ತ್ರೀ ಸ್ತರಗಳ ಸ್ವರ ಇರಬೇಕು ಎಂಬ ಆಶಯ ಒಟ್ಟು ಸಂಕಲನವಾಗಿ ಈ ಕೃತಿ ಹೊರಬಂದಿದೆ‌. ನರೇಂದ್ರ ಎಸ್‌. ಗಂಗೊಳ್ಳಿ ಇದರ ಸಂಪಾದನೆಯನ್ನು ಚೆನ್ನಾಗಿ ಮಾಡಿದ್ದಾರೆ. 

ದಾರ್ಶನಿಕ ಪ್ರಜ್ಞೆಗಳ ದಾಖಲೀಕರಣ ಪಾರ್ವತಿ ಜಿ. ಐತಾಳ್ ಅವರ ಅನುವಾದ ಕೃತಿಗಳಲ್ಲಿ ಕಾಣುವ ಗುಣಧರ್ಮ‌. ಗೊತ್ತಿಲ್ಲದ ಒಬ್ಬ ಲೇಖಕನ ಬದುಕನ್ನು ಮತ್ತು ಅವರ ಕೃತಿಯನ್ನು ಪರಿಚಯಿಸುವ ಕೆಲಸವನ್ನು ಮಾತ್ರ ಮಾಡುವುದು ಅನುವಾದವಲ್ಲ, ಇನ್ನೊಂದು ಭಾಷೆಗೆ ಭಾವವನ್ನು ಜೋಡಿಸುವ ಕೆಲಸವನ್ನು ಅನುವಾದ ಮಾಡುತ್ತದೆ ಎಂದು ತೋರಿಸಿಕೊಟ್ಟ ಕೆಲವೇ ಕೆಲವು ಅನುವಾದಕರಲ್ಲಿ ಡಾ‌. ಪಾರ್ವತಿ ಜಿ. ಐತಾಳ್ ಅಗ್ರಸ್ಥಾನದಲ್ಲಿ ಕಾಣಿಸುತ್ತಾರೆ ಎನ್ನುವುದಕ್ಕೆ ಅವರ ಅನುವಾದ ಕೃತಿಗಳಲ್ಲಿನ ಆಪ್ತ ಶೈಲಿಯೇ ಸಾಕ್ಷಿ‌. 

ಬರಿಯ ಸ್ತ್ರೀ ಸಂವೇದನೆ ಅಲ್ಲ ಅಥವಾ ಬರಿಯ ಸ್ತ್ರೀ ಪರ ಕಾಳಜಿ ಅಲ್ಲ‌. ಸ್ತ್ರೀ ಪುರುಷರ ಸಮಾನತೆಯ ಮೃದುವಾದ ವಾದ ಸಂವಾದಗಳು ಇವರ ಕೃತಿಗಳಲ್ಲಿ ಗಮನಾರ್ಹ. ಮಾನವ ಸಂಬಂಧಗಳ ಬೆಳವಣಿಗೆ ಹಾಗೂ ಅದರ ಉಳಿವಿಕೆಯೂ ಅವರ ಎಲ್ಲಾ ಕೃತಿಗಳಲ್ಲಿ ಮುಖ್ಯಾಂಶಗಳಾಗಿ ಕಾಣಸಿಗುತ್ತವೆ. ಪ್ರಸ್ತುತತೆಗೆ ದರ್ಪಣ ರೂಪಿಯಾಗಿಯೂ ಅವರ ಸ್ವರಚಿತ ಹಾಗೂ ಅನುವಾದ ಕೃತಿಗಳಿವೆ ಎನ್ನುವುದು ವಿಶೇಷ. ಅಂದರೇ ಕೇವಲ ಕಾಲ್ಪನಿಕ ಮಾತ್ರವಲ್ಲ ವಾಸ್ತವದ ವಸ್ತು ಚಿತ್ರಣವೂ ಇಲ್ಲಿ ಪ್ರಾಧಾನ್ಯತೆಯನ್ನು ಕಂಡುಕೊಳ್ಳುತ್ತವೆ‌. 

ಕೃತಿಗಳು ಒಂದು ಚಿಂತನೆಗೆ ಒಳಪಡಿಸಬೇಕು. ಅವಘಡಗಳನ್ನು ತಂದಿತ್ತ ಪಲ್ಲಟಗಳಿಗೆ ಉತ್ತರವಾಗಿರಬೇಕು. ಸಂವೇದನೆಯನ್ನು ಮೀಟುವ ಶಕ್ತಿಯಾಗಿರಬೇಕು ಎನ್ನುವುದಕ್ಕೆ ಪ್ರತಿರೂಪವಾಗಿ ಇವರ ಕೃತಿಗಳಿವೆ ಎನ್ನುವುದು ಸತ್ಯ. 

ಸ್ತ್ರೀ ಸಂವೇದನೆಯ ಆಕ್ರೋಶಗಳು ಅವರ ಕೆಲವು ಕೃತಿಗಳಲ್ಲಿ ಸಣ್ಣದಾದ ಎಳೆ ತೋರಿಸಿಕೊಟ್ಟರೂ, ಪಾರ್ವತಿ ಜಿ. ಐತಾಳ್ ವಾಸ್ತವ ಬದುಕಿನಲ್ಲಿ ಬಂಡಾಯ ಎದ್ದೋ, ಹೋರಾಟ ಮಾಡಿಯೋ, ಪ್ರತಿಭಟನೆ ಮಾಡಿಯೋ ತಾನು 'ಸ್ತ್ರೀ ಧ್ವನಿ' ಎಂದು ತೋರಿಸಿಕೊಟ್ಟಂತಹ ವ್ಯಕ್ತಿತ್ವದವರಲ್ಲ. ಅವರೊಳಗಿನ ಅವ್ಯಕ್ತಗಳು ಅವರ ಕೃತಿಗಳಲ್ಲಿ ನೈಜ ಧ್ವನಿಯಾಗಿ ವ್ಯಕ್ತವಾಗಿವೆ ಎನ್ನುವುದಕ್ಕೆ ಅವರ ಕೃತಿಗಳು ಹಾಗೂ ಕುವೆಂಪು ಭಾಷಾ ಭಾರತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೊಳಗೊಂಡು ಅನೇಕ ಪ್ರಶಸ್ತಿಗಳು ಲಭಿಸಿದ್ದೇ ಸಾಕ್ಷಿ. 

ಮತ್ತೊಂದು ವಿಚಾರ ಅವರ ಕೃತಿಗಳಲ್ಲಿ ಕಾಣುವುದೇನೆಂದರೇ, ಸಂವೇದನೆ ಎನ್ನುವುದು ಬೌದ್ಧಿಕ ಚರ್ಚೆ ಮಾತ್ರವಲ್ಲ. ಅದಹ ಬೌದ್ಧಿಕ ಚರ್ಚೆಯ ಗಡಿ ದಾಟಿ ಎಲ್ಲಾ ವರ್ಗದ ಮಹಿಳೆಯರಿಗೆ ತಲುಪಬೇಕೆಂಬ ಆಶಯವಿದೆ‌. ಅನಾಮಿಕವಾಗಿಯೇ ಉಳಿದುಬಿಟ್ಟ ಅದೆಷ್ಟೋ ಹೆಣ್ಣು ಮಕ್ಕಳ ಮೂಕ ಸಂವೇದನೆಯನ್ನು ಅಕ್ಷರಕ್ಕಿಳಿಸಿ ಸಮಾಜದ ವ್ಯವಸ್ಥೆಗೆ ರಾಚುವಂತಹ ಶಕ್ತಿ ಅವರ ಬಹುತೇಕ ಎಲ್ಲಾ ಕೃತಿಗಳಲ್ಲಿ ಕಾಣಸಿಗುತ್ತವೆ.

ಇಷ್ಟೆಲ್ಲಾ ಪ್ರಬಲ ಧ್ವನಿ ಇರುವ ಒಬ್ಬ ಲೇಖಕಿಯ ಸುಮಾರು ಎಂಬತ್ತಕ್ಕೂ ಅಧಿಕ ಕೃತಿಗಳು ಕನ್ನಡದ ಓದುಗರಿಗೆ ಅಷ್ಟಾಗಿ ತಲುಪಿಲ್ಲ ಎನ್ನುವ ಬೇಸರ ನನಗಿದೆ. ಸಂಪಾದಕರು ಮತ್ತು ಅವರ ಬಳಗ ಅದೇ ಬೇಸರದಲ್ಲಿ ಪಾರ್ವತಿ ಜಿ. ಐತಾಳ್ ಅವರ ಕೃತಿ ನೋಟವನ್ನಾದರೂ ಕನ್ನಡದ ಓದುಗರಿಗೆ ತಲುಪಿಸುವ ಪ್ರಯತ್ನದಲ್ಲಿ ಈ 'ಸುರಗಂಗೆ'ಯನ್ನು ಹೊರಗೆ ತಂದಿರಬಹುದೆಂದು ನನಗೆ ಅನ್ನಿಸಿದೆ‌. ಪಾರ್ವತಿ ಜಿ. ಐತಾಳ್ ಅವರಿಗೆ ಮಲಯಾಳಂ ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿದೆ, ಸ್ಥಾನಮಾನವಿದೆ‌.  ಕನ್ನಡದಲ್ಲಿ ಅಷ್ಟಿಲ್ಲ. ಅದು ಬಲಾಢ್ಯರ ಪಾಲಾಗಿದೆ ಅಂತ ನನಗೆ ಅದೆಷ್ಟೋ ಬಾರಿ ಅನ್ನಿಸಿದೆ‌. ಕನ್ನಡದಲ್ಲಿಯೂ ಪಾರ್ವತಿ ಜಿ. ಐತಾಳ್ ಅಂತಹ ಒಬ್ಬ ಒಳ್ಳೆಯ ಲೇಖಕಿಯ ಧ್ವನಿಯನ್ನು ಮತ್ತಷ್ಟು ಪರಿಚಯಕ್ಕೆ ತರುವ ಪ್ರಯತ್ನದಲ್ಲಿ ಸಂಪಾದಕರು ಮತ್ತು ಅವರ ತಂಡ ಮಾಡಿದ ಪ್ರಯತ್ನ ಮೆಚ್ಚುವಂತದ್ದು‌. ಆ ಪ್ರಯತ್ನ ಸಾಫಲ್ಯ ಕಂಡುಕೊಳ್ಳಲಿ. 

ಪಾರ್ವತಿ ಜಿ. ಐತಾಳ್ ಅವರ ಕೃತಿಗಳು ಕೇವಲ ಓದಿಗೆ ಖುಷಿ ಕೊಡುವವು ಮಾತ್ರ ಅಲ್ಲ. ಅದರೊಳಗೆ ಪರಾಮರ್ಶಿಸುವ, ಚಿಂತನೆಗೊಳಪಡಿಸುವ ಅಗಾಧ ಶಕ್ತಿಗಳಿವೆ‌. ಅದರ ಇಣುಕು ನೋಟ 'ಸುರಗಂಗೆ'ಯಾಗಿ ಬಂದಿದೆ‌. ಲೇಖಕಿಯ ಎಲ್ಲಾ ಕೃತಿಗಳನ್ನು ಓದುವುದಕ್ಕೆ ಸಿಗದವರಿಗೆ, ಅವರ ಬಗ್ಗೆ ತಿಳಿಯುವುದಕ್ಕೆ 'ಸುರಗಂಗೆ' ವಿಕಿಪೀಡಿಯ ಇದ್ದ ಹಾಗೆ. 

ಅವರಿಂದ ಸ್ತ್ರೀ ಸಂವೇದನೆಯ ಹೊಸ ನೆಲೆಗಟ್ಟಿನ ಕೃತಿಗಳು ಮತ್ತಷ್ಟು ಬರಲಿ ಎನ್ನುವುದು ನನ್ನ ತುಂಬೊಲವಿನ ಹಾರೈಕೆಯೊಂದಿಗೆ ಒಳ್ಳೆಯ ಓದಿನ ಚಿಂತನೆ ನೀಡಬಲ್ಲ ಪಾರ್ವತಿ ಅವರ ಕೃತಿಗಳು ನಿಮ್ಮ ಓದಿಗೆ ದಕ್ಕಲಿ‌. 

-ಶ್ರೀರಾಜ್ ವಕ್ವಾಡಿ


ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಮಾದರಿಯಾಗಿದ್ದ ಕೇರಳ ಈಗೇಕೆ ಹೀಗೆ..?!

 



ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ಕೊಂಚ ಮಟ್ಟಿಗೆ ದೇಶ ಮತ್ತೆ ಚೇತರಿಸಿಕೊಳ್ಳುತ್ತಿದೆ ಎಂಬಷ್ಟರಲ್ಲೇ ಕೇರಳದಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆಯ ಸುಳಿವು ಸಿಕ್ಕಿದ್ದು, ಈಗ ಮತ್ತಷ್ಟು ಆಘಾತಕಾರಿಯಾಗಿದೆ. 

ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲಿ ಮಾದರಿ ರಾಜ್ಯ ಎನ್ನಿಸಿಕೊಂಡಿದ್ದ ಕೇರಳದಲ್ಲಿ ಈಗ ಸೋಂಕು ನಿಯಂತ್ರಣಕ್ಕೆ ಬಾರದೇ ಕಳೆದ ಕೆಲವು ದಿನಗಳಿಂದ ಪ್ರತಿ ನಿತ್ಯ ಇಪ್ಪತ್ತು ಸಾವಿರಕ್ಕೂ ಹೆಚ್ಚು ಸೋಂಕು ಪತ್ತೆಯಾಗುತ್ತಿರುವುದರಿಂದ ಮೂರನೇ ಅಲೆ ತನ್ನ ಹಬ್ಬುವಿಕೆಯನ್ನು ಆರಂಭ ಮಾಡಿದೆಯೇ ಎಂಬ ಪ್ರಶ್ನೆಯೊಂದನ್ನು ಎಬ್ಬಿಸಿದೆ. 

ಕೋವಿಡ್ ನ ಮೊದಲ ಅಲೆಯನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದ ಕೇರಳ, ಈಗ ಯಾಕೆ ವಿಫಲವಾಯಿತು..? ಕೇರಳ ಸರ್ಕಾರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯದ ಧೋರಣೆ ಮಾಡಿತೇ..? 

ದೇವರ ನಾಡು ಎಂದು ಕರೆಸಿಕೊಳ್ಳೂವ ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿಯೂ ಈಗ ಸೋಂಕಿನ ಹೆಚ್ಚಳವಾಗುತ್ತಿರುವುದು ಮತ್ತಷ್ಟು ಭೀತಿ ಹೆಚ್ಚಿಸಿದೆ. 

ಕಳೆದ ಬಾರಿ ಕೋವಿಡ್  ಸೋಂಕು ತಡೆಗಟ್ಟುವಲ್ಲಿ ಕೇರಳ ಸರ್ಕಾರ ಕೈಗೊಂಡ ಕ್ರಮಗಳು ಅಂತರಾಷ್ಟ್ರೀಯ  ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಕೇರಳದಲ್ಲಿ ಸೋಂಕು ಮೊದಲು ಕಾಣಿಸಿಕೊಂಡಾಗಲೇ 28 ದಿನಗಳ ಕ್ವಾರಂಟೈನ್, ಹಳ್ಳಿ ಹಳ್ಳಿಗಳಲ್ಲಿ ಕ್ಲೀನಿಂಗ್, ಸ್ಕ್ರೀನಿಂಗ್ ಬೂತ್‌ ಗಳನ್ನು ಅಳವಡಿಸಿದ್ದಲ್ಲದೇ, ಅಲ್ಲಿನ ತುರ್ತು ಪರಿಸ್ಥಿತಿಗಾಗಿ ಕೇರಳ ಸರ್ಕಾರ ಬರೋಬ್ಬರಿ 20,000 ಕೋಟಿ ಪ್ಯಾಕೇಜ್, ರಿವರ್ಸ್ ಕ್ವಾರಂಟೈನ್ ನಂತಹ ಉಪಕ್ರಮಗಳನ್ನು ಜಾರಿಗೆ ತಂದು ಪ್ರಶಂಸೆಗೆ ಪಾತ್ರವಾಯಿತು. ಆದರೇ, ಈಗ ಮತ್ತೆ ಅದೇ ಕೇರಳ ಕೋವಿಡ್ ಸೋಂಕಿನಿಂದ ಬಳಲುತ್ತಿದೆ. 

ಕಳೆದ ಬಾರಿ ದೇಶದಾದ್ಯಂತ ಲಾಕ್ ಡೌನ್ ತೆರವುಗೊಳಿದರೇ ಏನಾಗಬಹುದು ಎಂಬುದರ ಬಗ್ಗೆ ಚಿಂತೆ ಮಾಡಿತ್ತು ಕೇರಳ. ರಿವರ್ಸ್ ಕ್ವಾರಂಟೈನ್ ಯೋಜನೆಯನ್ನು ರೂಪುಗೊಳಿಸಿ ಕೋವಿಡ್ ಸೋಂಕಿನಿಂದ ಹಿರಿಯವರನ್ನು ರಕ್ಷಿಸುವಲ್ಲಿ ನಿರಂತರ ಪ್ರಯತ್ನ ಮಾಡಿತ್ತು ಎನ್ನುವುದನ್ನು ಮರೆಯುವಂತಿಲ್ಲ. 

ಕೇರಳ ಮೊದಲ ಅಲೆಯಲ್ಲಿ ಜಾರಿಗೆ ತಂದಿದ್ದ “ರಿವರ್ಸ್ ಕ್ವಾರಂಟೈನ್” ಅಂದ್ರೆ ಏನು..? 

 ‘ರಿವರ್ಸ್ ಕ್ವಾರಂಟೈನ್’ಕೋ ವಿಡ್ ಸೋಂಕನ್ನು ಬಡಿದೋಡಿಸಬೇಕೆಂಬ ಉದ್ದೇಶದಿಂದ ಆಗಿನ ಪಿಣರಾಯ್ ವಿಜಯನ್ ನೇತೃತ್ವದ ಸರ್ಕಾರದ ಆರೋಗ್ಯ ಮಂತ್ರಿಯಾಗಿದ್ದ ಕೆ. ಕೆ ಶೈಲಜಾ (ಶೈಲಜಾ ಟೀಚರ್) ಜಾರಿಗೆ ತಂದ ಯೋಜನೆ.  

ಸೋಂಕು ನಿಯಂತ್ರಣಕ್ಕೆ ಬರಬೇಕು, ನಾಗರಿಕರ ಬದುಕು ಕೂಡ ಸಹಜ ಸ್ಥಿತಿಗೆ ಬರಬೇಕು ಎಂಬೆಲ್ಲಾ ಯೋಜನೆಗಳ ಬಗ್ಗೆ ಸಮಯೋಚಿತವಾಗಿ ಪೂರ್ವವಾಗಿ ಯೋಜಿಸಿ ಈ ರಿವರ್ಸ್ ಕ್ವಾರಂಟೈನ್ ಯೋಜನೆಯನ್ನು ರಾಜ್ಯದಾದ್ಯಂತ ಕಾರ್ಯ ರೂಪಕ್ಕೆ ತಂದಿತ್ತು.  

ಈ ಕ್ವಾರಂಟೈನ್ ಸಂಪೂರ್ಣ ಭಿನ್ನವಾಗಿತ್ತು. ಸೋಂಕು ತಗಲಿದವರನ್ನು ಅಥವಾ ಅವರನ್ನು ಸಂಪರ್ಕಿಸಿದವರನ್ನು ಪ್ರತ್ಯೇಕಿಸಿ ಇಡುವುದು ಕ್ವಾರಂಟೈನ್ ಆದರೇ, ಸೋಂಕು ಇಲ್ಲದೇ ಇರುವವರನ್ನೂ ಪ್ರತ್ಯೇಕಿಸಿ ಇರಿಸುವುದೇ ಕೇರಳದ ಈ ರಿವರ್ಸ್ ಕ್ವಾರಂಟೈನ್‌ ನ ಸೂತ್ರವಾಗಿತ್ತು. ಇಡೀ ದೇಶಕ್ಕೆ ದೇಶವೇ ಹೋಮ್ ಕ್ವಾರಂಟೈನ್‌ ನಲ್ಲಿರುವಾಗ ಇದೇನು ವಿಶೇಷ ಅಲ್ಲ ಅಂತನ್ನಿಸಿದರೂ ಶೈಲಜಾ ಟೀಚರ್ ಅವರ ಪ್ಲ್ಯಾನ್ ಸಕ್ಸಸ್ ಆದ ಮೇಲೆ ವಿಶ್ವದೆಲ್ಲೆಡೆಯಿಂದ ಶ್ಲಾಘನೆಯ ಮಹಾಪೂರವೇ ಹರಿದು ಬಂದಿತ್ತು. 

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಗುರುತಿಸಿ ಅವರನ್ನು ಯಾವುದೇ ರೀತಿಯಲ್ಲಿ ಸೋಂಕಿಗೆ ಒಳಗಾಗದಂತೆ ಮನೆಯಲ್ಲಿಯೇ ಪ್ರತ್ಯೇಕಿಸಿ ಇರಿಸುವುದೇ ಕೇರಳ ಸರ್ಕಾರದ ರಿವರ್ಸ್ ಕ್ವಾರಂಟೈನ್‌ ನ ಯೋಜನೆ. ಕೇರಳದ ಒಟ್ಟು 3.47 ಕೋಟಿ ಜನಸಂಖ್ಯೆಯ ಪೈಕಿಯಲ್ಲಿ ಅಂದಾಜು 12 ರಿಂದ 13 ಶೇಕಡಾ ಜನರು ಅನಾರೋಗ್ಯದಿಂದಿದ್ದಾರೆ ಕೇರಳ ಸರ್ಕಾರ ಹೇಳುತ್ತದೆ.

 ಸ್ಥಳೀಯ ಮಟ್ಟದ ಆಡಳಿತಗಳ ಸಹಾಯದಿಂದ ಅನಾರೋಗ್ಯದವರನ್ನೆಲ್ಲಾ ಪತ್ತೆಹಚ್ಚಿ ಅವರನ್ನು ಸುರಕ್ಷಿತವಾಗಿರಿಸುವ ಕೇರಳ ಸರ್ಕಾರದ ಯೋಚನೆಯಿದು. ಟ್ರ್ಯಾಕ್, ಟ್ರೇಸ್, ಟ್ರೀಟ್‌ಮೆಂಟ್ ಸೂತ್ರವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದಕ್ಕೆ ಕೇರಳ ಸರ್ಕಾರ ವೈದ್ಯಕೀಯ ಇಲಾಖೆಗಳ ಸಹಕಾರದೊಂದಿಗೆ ಒಂದು ಹೆಜ್ಜೆ ಮುಂದಿಟ್ಟ ಯೋಜನೆ.  

ಇನ್ನು, ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು, ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ನಿವಾರಿಸಲು ಹಾಗೂ ಸಾಮಾಜಿಕ ಜನ ಜೀವನವನ್ನು ಸಹಜ ಸ್ಥಿತಿಗೆ ಬರುವಂತೆ ಮಾಡುವ ಬಗ್ಗೆ ಕೇಂದ್ರ ಸರ್ಕಾರವನ್ನು ಒಳಗೊಂಡು ಎಲ್ಲಾ ರಾಜ್ಯ ಸರ್ಕಾರಗಳು ಯೋಜನೆ ಮಾಡುತ್ತಿದ್ದ ಸಂದರ್ಭ, ಬಹುತೇಕ ಎಲ್ಲಾ ರಾಜ್ಯಗಳು ಹಣೆಗೆ ಕೈಕೊಟ್ಟು ಕೂತಿದ್ದವು. ಇನ್ನು, ಲಾಕ್ಡೌನ್ ಕೊಂಚ ಸಡಿಲಗೊಳಿಸುವುದನ್ನೂ ಕೆಲವು ರಾಜ್ಯ ಸರ್ಕಾರಗಳು ಮಾಡುವುದಕ್ಕೆ ಮುಂದಾಗಿದ್ದ ಸಂದರ್ಭದಲ್ಲಿ, ಕೇರಳ ಸರ್ಕಾರ ಮಾತ್ರ ಮುಂದಾಲೋಚನೆಯಿಂದ ಆರ್ಥಿಕ ಸ್ಥಿತಿ ಸರಿದೂಗಿಸುವ ಯೋಚನೆಯೊಂದಿಗೆ ಇಂತಹದ್ದೊಂದು ನೂತನ ಸೋಂಕು ನಿಯಂತ್ರಣಕ್ಕೆ ತರುವ ಮಾರ್ಗದ ಪ್ರಯತ್ನಕ್ಕೆ ಅಲ್ಲಿನ ಸ್ಥಳಿಯ ಆಡಳಿತದ ಸಹಕಾರದಿಂದ ಮುಂದಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು. 

ಹೌದು,  ರಾಜಕೀಯ ಸಿದ್ಧಾಂತಗಳಲ್ಲಿ ಭಿನ್ನತೆ ಇದೆ ಎಂಬ ಕಾರಣದಿಂದ ಕೇರಳವನ್ನು ಬದಿಗೆ ದೂಡುವ ಧೋರಣೆಯೊಂದು ರಾಜಕೀಯ ವಲಯದಲ್ಲಿ ಮತ್ತು ಸಾಮಾಜಿಕ ವಲಯದಲ್ಲಿ ಕೂಡ ನಡೆದಿತ್ತು ಎನ್ನುವುದನ್ನು ಒಪ್ಪಲೇಬೇಕು. ಆದರೇ, ಕೇರಳ ಸರ್ಕಾರ ಸೋಂಕು ನಿವಾರಣೆಗೆ  ಕೈಗೊಂಡ ಕ್ರಮಗಳಿಂದ ಅಲ್ಲಿನ ಸೋಂಕಿನ ಹೊಸ ಪ್ರಕರಣಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಿ ಜಗತ್ತಿಗೆ ತೋರಿಸಿದೆ. 

ಮೊದಲನೆ ಅಲೆಯ ಸಂದರ್ಭದಲ್ಲಿ ರಾಷ್ಟ್ರದ ಅತಿ ಹೆಚ್ಚು ಸೋಂಕಿತರು ಹೊಂದಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಕೇರಳ, ಸೋಂಕು ಹರಡುವಿಕೆಯ ನಿಯಂತ್ರಣ ಮಾಡುವ ಬಿಗಿ ಕ್ರಮಗಳನ್ನು ಪಾಲನೆಗೆ ತರುವ  ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು. ಅದಕ್ಕೆ ಕೇರಳದಲ್ಲಿ, ಕೋವಿಡ್ ತಡೆಗಟ್ಟುವಿಕೆಗೆ ತಂದ ಕ್ರಮಗಳನ್ನು ಅಮೇರಿಕಾ ಮೂಲದ ‘ದಿ ವಾಸಿಂಗ್ಟನ್ ಪೋಸ್ಟ್’ಎಂಬ ಸುದ್ದಿ ಸಂಸ್ಥೆಯೂ ಹಾಡಿ ಹೊಗಳಿದ್ದೇ ಸಾಕ್ಷಿ.

ಕೇರಳಕ್ಕೆ ‘ನಿಫಾ’ ಸೋಂಕನ್ನು ಎದುರಿಸಿದ ಅನುಭವವಿತ್ತು..!

‘ನಿಫಾ’ ಮನುಷ್ಯರಿಂದ ಪ್ರಾಣಿಗಳಿಗೆ, ಪ್ರಾಣಿಗ‌ಳಿಂದ ಮನುಷ್ಯರಿಗೆ  ಹರಡುವ ಸೋಂಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 2018ರಲ್ಲಿ ನಿಫಾ ಸೋಂಕು ಕಾಣಿಸಿಕೊಂಡಾಗಲೇ, ಕೇರಳ ಸರ್ಕಾರ, ಐಸೋಲೇಷನ್, ಕ್ವಾರಂಟೈನ್‌ ಗಳಂತಹ ಕ್ರಮಗಳನ್ನು ಕೈಗೊಂಡು ಯಶಸ್ವಿಯಾಗಿತ್ತು. ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಸುಮಾರು 40 ರಿಂದ 5೦ ಮಂದಿಗೆ ಈ ಸೋಂಕು ಕಾಣಿಸಿಕೊಂಡು, ಸೋಂಕಿನಿಂದ ಸುಮಾರು 17 ಮಂದಿ ಸಾವಿಗೀಡಾಗಿದ್ದರು. ಆದರೇ, ನಿಫಾ ಸೋಂಕನ್ನು ರಾಜ್ಯದ ಇತರೆ ಯಾವ ಕಡೆಗಳಿಗೂ ಹರಡದಂತೆ ಕೇರಳ ಸರ್ಕಾರ ಯಶಸ್ವಿಯಾಗಿತ್ತು. ‘ನಿಫಾ’ ಕಾಣಿಸಿಕೊಂಡಾಗ ಎದುರಿಸಿದ ಸವಾಲುಗಳು, ಪಾಲಿಸಿದ ನಿಯಮಗಳು.. ಕೋವಿಡ್ ಸೋಂಕಿನ ಮೊದಲ ಅಲೆಯನ್ನು ನಿಯಂತ್ರಣ ಮಾಡುವಲ್ಲಿ ಕೇರಳ ಸರ್ಕಾರಕ್ಕೆ ಸಹಾಯವಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ.

ಆದರೇ, ಈಗೇಕೆ ಹೀಗೆ..? 

ಕೇರಳದಲ್ಲಿಯೇ ಮೊದಲ ಕೊರೋನಾ ಸೋಂಕು ದೃಢಗೊಂಡಿದ್ದು. ಕೇರಳದ ಕಾರಣದಿಂದಾಗಿ ರಾಜ್ಯದ ಮಂಗಳೂರಿಗೆ ಹಾಗೂ ಮಡಿಕೇರಿಗೆ ಅಪಾಯದ ಸಂಭವವೂ ಇದ್ದಿತ್ತು. ಆ ಬಗ್ಗೆ ಕರ್ನಾಟಕ ಸರ್ಕಾರ ತಲೆಗೆ ಕೈವೊತ್ತಿ ಕುಳಿತಿತ್ತು. ಅದೇ ಪರಿಸ್ಥಿತಿ ಈಗ ಮತ್ತೆ ಕರ್ನಾಟಕಕ್ಕೆ ಬಂದಿದೆ. ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಪಾಲನೆಗೆ ಕರ್ನಾಟಕ ಜಾರಿಗೆ ತರುವುದರ ಮೂಲಕ ಯಶಸ್ವಿಯಾಯಿತು. ಈಗ ಅದೇ ಸೂತ್ರವನ್ನು ಕರ್ನಾಟಕ ಮಾಡದಿದ್ದಲ್ಲಿ ಕರ್ನಾಟಕವೂ ಕೂ ಸೋಂಕಿನಿಂದ ಮತ್ತೆ ಸೊರಗಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಕಾಲೋಚಿತ ನಿಯಂತ್ರಣದ ಕ್ರಮಗಳನ್ನು ಕೇರಳ ರಾಜ್ಯ ಸರ್ಕಾರ ಕೈಗೊಂಡಿದ್ದ ಸರ್ಕಾರ ಈಗ ಎಡವಿತೇ..? ಯಾವುದೋ ಒಂದು ಸಮುದಾಯದವರನ್ನು ಓಲೈಸುವುದಕ್ಕೆ ಹೋಗಿ ಈ ಅಪಾಯವನ್ನು ತನ್ನ ಬುಡಕ್ಕೆ ತಂದಿಟ್ಟುಕೊಂಡಿತೇ ಎಂಬ ಚರ್ಚೆ ಸಾಮಾಜಿಕ ವಲಯದಲ್ಲಿ ಈಗ ಹರಿದಾಡುತ್ತಿದೆ. 

ಇತ್ತೀಚೆಗಷ್ಟೇ ಸೆರೋ ಸರ್ವೇ ಬಿಡುಗಡೆಗೊಳಿಸಿದ ಒಂದು ಅಧ್ಯಯನ ವರದಿಯಲ್ಲಿ ಕೇರಳದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಜನರಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಯಾಗಿದೆ ಎಂದು ಹೇಳಿದೆ. ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯ ಕಡಿಮೆ ಜನರಲ್ಲಿ ಸೃಷ್ಟಿಯಾಗಿರುವುದು ಮತ್ತು ಕೇರಳ ಸರ್ಕಾರ ತೆಗೆದುಕೊಂಡ ಕೆಲವು ತಪ್ಪು ನಿರ್ಧಾರಗಳೇ ಮತ್ತೆ ಕೇರಳದಲ್ಲಿ ಸೋಂಕು ಹೆಚ್ಚಳವಾಗುವುದಕ್ಕ ಕಾರಣ ಇರಬಹುದು ಎನ್ನಲಾಗುತ್ತಿದೆ.  

ಕೋವಿಡ್ ಸೋಂಕಿನ ಜೊತೆಗೆ ಹೊಸದಾಗಿ ಹುಟ್ಟಿಕೊಂಡ ಝೀಕಾ ವೈರಸ್ ಕೂಡ ಕೇರಳದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಕೋವಿಡ್ ನಿಯಂತ್ರಣ ಮಾಡುವಲ್ಲಿ ಮಾದರಿ ರಾಜ್ಯ ಎನ್ನಿಸಿಕೊಂಡಿದ್ದ ಕೇರಳ, ಈಗ ಭಯ ಹುಟ್ಟಿಸುತ್ತಿದೆ ಎನ್ನುವುದು ಸುಳ್ಳಲ್ಲ.  

ಕೇರಳದೊಂದಿಗೆ ತನ್ನ ಗಡಿ ಹಂಚಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪಾಸಿಟಿವಿಟಿ ದರ ಶೇಕಡಾ 4 ನ್ನು ದಾಟಿದೆ. ಕೊಡಗಿನ ಪಾಸಿಟಿವಿಟಿ ದರ 3. 51ಕ್ಕೆ ಹೆಚ್ಚಳವಾಗಿದ್ದು ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. 

ಒಟ್ಟಿನಲ್ಲಿ,  ಗಡಿ ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ಮಾಡದಿದ್ದಲ್ಲಿ ಕರ್ನಾಟಕ ಮತ್ತೆ ಕೋವಿಡ್ ಸೋಂಕಿನ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. 

-ಶ್ರೀರಾಜ್ ವಕ್ವಾಡಿ