ದೇಶದ ಪರೀಕ್ಷಾ ಕ್ಷೇತ್ರದ ಸುಧಾರಣೆಗೆ ಉದ್ಯಮಿ ನಂದನ್ ನೀಲಕೇಣಿ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ ರಚನೆ ಮಾಡಲಾಗಿದೆ. ಶಿಕ್ಷಣ ಕ್ಷೇತ್ರದ ಸುಧಾರಣೆಯನ್ನು ಮಾಡಬೇಕಿರುವುದು ಉದ್ಯಮಿಯಾ ಅಥವಾ ಶಿಕ್ಷಣ ತಜ್ಞರಾ ? ಎನ್ನುವ ಪ್ರಶ್ನೆ ಉದ್ಭವವಾಗಿದೆ. ಹತ್ತಾರು ದಿನಗಳ ಕಾಲ ಪರೀಕ್ಷಾ ವ್ಯವಸ್ಥೆಯ ಲೋಪ, ನೀಟ್ ಅಕ್ರಮವನ್ನು ವಿರೋಧಿಸಿ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ದೆಹಲಿಯ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ದರು. ಸೋನಮ್ ವಾಂಗ್ಚುಕ್ ಯಾಕೆ ಈ ಉನ್ನತ ಮಟ್ಟದ ಕಾರ್ಯಪಡೆಯ ನೇತೃತ್ವ ವಹಿಸಬಾರದು ? ಅಥವಾ ಬೇರೆ ಯಾರೂ ಶಿಕ್ಷಣ ತಜ್ಞರು ದೇಶದಲ್ಲಿ ಇಲ್ವೇ !?
ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಪರೀಕ್ಷಾ ಕಾರ್ಯಪಡೆ ರಚನೆ ಮಾಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಮಾಜಿ ಅಧ್ಯಕ್ಷ ಎಸ್. ಸೋಮನಾಥ್, ಗುಪ್ತಚರ ಬ್ಯೂರೋ(ಐಬಿ)ದ ಮಾಜಿ ನಿರ್ದೇಶಕ ತಪನ್ ದೇಕಾ, ಐಐಟಿ ಚೆನ್ನೈನ ನಿರ್ದೇಶಕ ವಿ. ಕಾಮಕೋಟಿ, ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕವಲ್ ಮತ್ತು ಲಾಜಿಸ್ಟಿಕ್ಸ್ ತಜ್ಞ ಅಮೃತ್ ಲಾಲ್ ಮೀನಾ ಅವರು ಈ ಪರೀಕ್ಷಾ ಕಾರ್ಯಪಡೆಯ ಪ್ರಮುಖ ಸದಸ್ಯರಾಗಿದ್ದಾರೆ. ದೇಶದ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು ಉದ್ಯಮಿ ಹಾಗೂ ತಂತ್ರಜ್ಞಾನ ತಜ್ಞ ನಂದನ್ ನೀಲಕೇಣಿ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಿರುವುದು, ನೀಟ್ (NEET) ಅಕ್ರಮ ಸೇರಿದಂತೆ ಸಾಲು ಸಾಲು ಪರೀಕ್ಷಾ ಅಕ್ರಮಗಳಿಂದ ಕಂಗೆಟ್ಟಿರುವ ವ್ಯವಸ್ಥೆಗೆ ಸರಕಾರ ನೀಡುತ್ತಿರುವ 'ಕಾರ್ಪೊರೇಟ್ ಮಾದರಿಯ ಪರಿಹಾರ' ಎನ್ನಬಹುದಾ!? ಯೋಚನೆ ಮಾಡಲೇಬೇಕಿದೆ.
'ಶಿಕ್ಷಣ'ವನ್ನು 'ತಂತ್ರಜ್ಞಾನದ ಸರಕನ್ನಾಗಿ' ನೋಡುತ್ತಿರುವ ಧೋರಣೆ ಇಲ್ಲಿ ಮುಖ್ಯವಾಗಿ ಕಾಣಿಸುತ್ತಿದೆ. ಶಿಕ್ಷಣ ಎಂಬುದು ಕೇವಲ ದತ್ತಾಂಶ ಅಥವಾ ಡಾಟಾ, ಅಲ್ಗೋರಿದಮ್ ಹಾಗೂ ಎನ್‌ಕ್ರಿಪ್ಶನ್ ಪರೀಕ್ಷಿಸುವ ತಾಂತ್ರಿಕ ಪ್ರಕ್ರಿಯೆಯಲ್ಲ. ಅದು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯ.
'ಟೆಕ್ನೋ-ಫಿಕ್ಸ್' ಭ್ರಮೆ ಇಲ್ಲಿ ಎದ್ದು ಕಾಣಿಸುತ್ತಿದೆ. ಉದ್ಯಮಿ ನಂದನ್ ನೀಲಕೇಣಿ ಅವರು ತಾಂತ್ರಿಕ ಮೂಲಸೌಕರ್ಯ ನಿರ್ಮಿಸುವಲ್ಲಿ ನಿಪುಣರಿರಬಹುದು. ಅವರು ಜಗತ್ತಿನ ಅತಿ ದೊಡ್ಡ ಬಯೋಮೆಟ್ರಿಕ್ ಗುರುತು ಕಾರ್ಯಕ್ರಮ ಆಧಾರ್ ಅನ್ನು ನಿರ್ವಹಿಸುತ್ತಿರುವ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರದ ಸಂಸ್ಥಾಪಕ ಚೇರ್ಮನ್ ಆಗಿಯೂ ಕೆಲಸ ಮಾಡಿದ್ದರು. ಆದರೆ ಪರೀಕ್ಷಾ ಪೇಪರ್ ಸೋರಿಕೆಗೆ ಕಾರಣ 'ಡಿಜಿಟಲ್ ಸೆಕ್ಯುರಿಟಿ'ಯ ಕೊರತೆಯಷ್ಟೇ ಅಲ್ಲ, ಅದರ ಹಿಂದೆ ಕಾರ್ಯಾಚರಿಸುತ್ತಿರುವ ಮಾಫಿಯಾ, ಭ್ರಷ್ಟಾಚಾರ ಮತ್ತು ತರಬೇತಿ ಕೇಂದ್ರಗಳ ದಂಧೆಯೂ ಇಲ್ಲಿದೆ.
ಉದ್ಯಮಿಗಳ ದೃಷ್ಟಿಕೋನವಗಮನಿಸಬೇಕು.ಉದ್ಯಮಿಗೆ ಪ್ರತಿ ವಿಷಯವೂ 'ಸ್ಕೇಲ್' & 'ಎಫಿಷಿಯನ್ಸಿ' (Efficiency) ಮಾದರಿಯಲ್ಲಿ ಕಾಣಿಸುತ್ತದೆ. ಆದರೆ ಶಿಕ್ಷಣ ಕ್ಷೇತ್ರಕ್ಕೆ ಬೇಕಾಗಿರುವುದು ಲಾಭ-ನಷ್ಟದ ಲೆಕ್ಕಾಚಾರವಲ್ಲ, ಬದಲಿಗೆ ಪ್ರತಿಯೊಂದು ಮಗುವಿಗೂ ಸಿಗಬೇಕಾದ ಸಮಾನ ಅವಕಾಶ.
ಸೋನಮ್ ವಾಂಗ್ಚುಕ್ ಅವರಂತಹ ಶಿಕ್ಷಣ ತಜ್ಞರು ಯಾಕೆ ಈ ಸಮಿತಿ ಅಥವಾ ಕಾರ್ಯಪಡೆಯ ನೇತೃತ್ವ ವಹಿಸಬಾರದು? ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಪರೀಕ್ಷಾ ವ್ಯವಸ್ಥೆಯ ಲೋಪಗಳು ಮತ್ತು ನೀಟ್ ಅಕ್ರಮದ ವಿರುದ್ಧ ಧ್ವನಿಯೆತ್ತಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅವರನ್ನೇ ಈ ಕಾರ್ಯಪಡೆಯ ಮುಖ್ಯಸ್ಥರನ್ನಾಗಿ ಮಾಡಬಹುದಿತ್ತು ಅಲ್ವಾ!?
ಸೋನಮ್ ವಾಂಗ್ಚುಕ್ ಅಥವಾ ನೈಜ ಶಿಕ್ಷಣ ತಜ್ಞರು ಯಾಕೆ ಬೇಕು? ವಾಂಗ್ಚುಕ್ ಅವರು ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿ ವಿಫಲರಾದ ಮಕ್ಕಳನ್ನೇ ಇಟ್ಟುಕೊಂಡು ಪ್ರಾಯೋಗಿಕ ಶಿಕ್ಷಣ ನೀಡಿದವರು. ಅವರಿಗೆ ಪರೀಕ್ಷೆಯ ಭಯ, ಗ್ರಾಮೀಣ ಮಕ್ಕಳ ಸವಾಲುಗಳು ಮತ್ತು ಮೂಲಭೂತ ಲೋಪಗಳ ಸ್ಪಷ್ಟ ಅರಿವಿದೆ. ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಧ್ವನಿ ಎತ್ತಿದ್ದಾರೆ. ಶಿಕ್ಷಣ ಧಂದೆಯಾಗುತ್ತಿರುವುದನ್ನು ತಡೆಯಲು ಶಿಕ್ಷಣ ಸಂಸ್ಥೆಗಳನ್ನು ಲಾಭಕೋರರಿಂದ ಮುಕ್ತಗೊಳಿಸಬೇಕು. ಒಬ್ಬ ಉದ್ಯಮಿಗೆ ಈ 'ಮಾರುಕಟ್ಟೆ ಮಾದರಿ'ಯನ್ನು ಪ್ರಶ್ನಿಸಲು ರಾಜಕೀಯ-ಸಾಮಾಜಿಕ ಮಿತಿಗಳಿರುತ್ತವೆ, ಆದರೆ ವಾಂಗ್ಚುಕ್ ಅವರಂತಹ ಜನಪರ ಹೋರಾಟಗಾರರಿಗೆ ಆ ಬದ್ಧತೆ ಇರುತ್ತದೆ. ಇನ್ನು, ಪರೀಕ್ಷೆಗಳು ಇಂದು ವಿದ್ಯಾರ್ಥಿಗಳನ್ನು ಆತ್ಮಹತ್ಯೆಯತ್ತ ತಳ್ಳುತ್ತಿವೆ. ತಂತ್ರಜ್ಞಾನದಿಂದ ಅಕ್ರಮ ತಡೆಯಬಹುದೇ ಹೊರತು, ಮಕ್ಕಳ ಮೇಲಿನ 'ಮಾನಸಿಕ ಒತ್ತಡ' ಕಡಿಮೆ ಮಾಡಲು ಶಿಕ್ಷಣ ತಜ್ಞರೇ ಬೇಕು. ಬೇರೆ ಶಿಕ್ಷಣ ತಜ್ಞರಿಗೇಕೆ ಅವಕಾಶ ಸಿಗಲಿಲ್ಲ?
ಭಾರತದ ಇತಿಹಾಸದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತಂದವರು ಶಿಕ್ಷಣ ತಜ್ಞರೇ ಹೊರತು ಕಾರ್ಪೊರೇಟ್ ದಿಗ್ಗಜರಲ್ಲ. ಡಾ. ಡಿ.ಎಸ್. ಕೊಠಾರಿ (ಕೊಠಾರಿ ಕಮಿಷನ್ - 1964) ಭಾರತದ ಶಿಕ್ಷಣ ವ್ಯವಸ್ಥೆಯ ಅಡಿಪಾಯ ಹಾಕಿದವರು ವಿಜ್ಞಾನಿ ಹಾಗೂ ಶಿಕ್ಷಣ ತಜ್ಞ ಡಾ. ಕೊಠಾರಿ. ಅವರು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸಿದ್ದರು. ಪ್ರೊ. ಯಶ್‌ಪಾಲ್ (Yashpal Committee - 1993/2009): 'ಕಲಿಕೆಯು ಹೊರೆಯಾಗಬಾರದು' ಅಥವಾ Learning without Burden ಎಂಬ ಪರೀಕ್ಷಾ ಪದ್ಧತಿಯ ಒತ್ತಡವನ್ನು ಕಡಿಮೆ ಮಾಡಲು ಮತ್ತು ಶಿಕ್ಷಣದ ವ್ಯಾಪಾರೀಕರಣವನ್ನು ತಡೆಯಲು ಪ್ರೊ. ಯಶ್‌ಪಾಲ್ ಶ್ರಮಿಸಿದರು. ಇಂದು ಪ್ರೊ. ಸಾಂದೀಪ್ ಪಾಂಡೆ, ಶಾಂತಾ ಸಿನ್ಹಾ, ಅಥವಾ ವಿಶ್ವವಿದ್ಯಾಲಯಗಳ ಜನಪರ, ವಿದ್ಯಾರ್ಥಿ ಪರ ಪ್ರಾಧ್ಯಾಪಕರಂತಹ ನೂರಾರು ಶಿಕ್ಷಣ ತಜ್ಞರು ದೇಶದಲ್ಲಿದ್ದಾರೆ. ಆದರೂ ಸರಕಾರ ಉದ್ಯಮಿಗಳನ್ನೇ ತಜ್ಞರನ್ನಾಗಿ ಆಯ್ಕೆ ಮಾಡುತ್ತಿರುವುದು ಯಾಕೆ? ಇದಕ್ಕೆ ಉತ್ತರವೇ ಇಲ್ಲ. ಶಿಕ್ಷಣ ಕ್ಷೇತ್ರವನ್ನು ಮತ್ತೆ ವ್ಯಾಪಾರಕ್ಕೆ ಅಡವಿಡುವ ಹುನ್ನಾರವೇ!? ನೋಡಿ, ಪರೀಕ್ಷಾ ನಿರ್ವಹಣೆಯನ್ನು ಸಾಫ್ಟ್‌ವೇರ್ ಕಂಪನಿಗಳಿಗೆ, ಖಾಸಗಿ ಡೇಟಾ ಸೆಂಟರ್‌ಗಳಿಗೆ ವಹಿಸುವ ಶಿಫಾರಸುಗಳನ್ನು ಸರ್ಕಾರವೇ ಖುದ್ದಾಗಿ ಮಾಡಿದಂತಿದೆ. ವಿದ್ಯಾರ್ಥಿಗಳ ಖಾಸಗಿ ದತ್ತಾಂಶವನ್ನು ತಾಂತ್ರಿಕ ಕಂಪನಿಗಳ ಕೈಗೆ ಒಪ್ಪಿಸುವ ಅಪಾಯ ಎದ್ದು ಕಾಣಿಸುತ್ತಿದೆ.
ಗ್ರಾಮೀಣ, ದಲಿತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಅಥವಾ ಸಂಕೀರ್ಣ ತಾಂತ್ರಿಕ ಪರೀಕ್ಷಾ ಪದ್ಧತಿಗಳು ತಲುಪುತ್ತವೆಯೇ ಎಂಬುದನ್ನು ಈ ಕಾರ್ಪೊರೇಟ್ ಮಾದರಿಗಳು ಯೋಚಿಸುವುದಿಲ್ಲ ಎನ್ನುವುದು ಇಲ್ಲಿ ಮುಖ್ಯಾಂಶ.
ಒಟ್ಟಿನಲ್ಲಿ, ಪರೀಕ್ಷಾ ಅಕ್ರಮಗಳನ್ನು ತಡೆಯಲು 'ತಂತ್ರಜ್ಞಾನ' ಒಂದು ಉಪಕರಣ ಅಷ್ಟೇ, ಅದೇ 'ಸಂಪೂರ್ಣ ಪರಿಹಾರ' ಅಲ್ಲ. ಪರೀಕ್ಷಾ ಪದ್ಧತಿಯನ್ನು ಬದಲಾಯಿಸುವುದು ಎಂದರೆ ಕೇವಲ ಕಂಪ್ಯೂಟರ್ ಸಾಫ್ಟ್‌ವೇರ್ ಬದಲಾಯಿಸುವುದಲ್ಲ, ವಿದ್ಯಾರ್ಥಿ ಕೇಂದ್ರಿತ, ಭ್ರಷ್ಟಾಚಾರ ಮುಕ್ತ ಮತ್ತು ಮಾನವೀಯ ಮೌಲ್ಯಗಳಿರುವ ವ್ಯವಸ್ಥೆಯನ್ನು ನಿರ್ಮಿಸುವುದೇ ಆಗಿದೆ.
ಸೋನಮ್ ವಾಂಗ್ಚುಕ್ ಅವರಂತಹ ಹೋರಾಟಗಾರರನ್ನು ಮತ್ತು ಶಿಕ್ಷಣ ತಜ್ಞರನ್ನು ಹೊರಗಿಟ್ಟು, ಕೇವಲ ಉದ್ಯಮಿಗಳ ಕೈಗೆ ಶಿಕ್ಷಣದ ಚುಕ್ಕಾಣಿ ನೀಡುವುದು "ರೋಗಕ್ಕೆ ಔಷಧ ನೀಡುವ ಬದಲು, ರೋಗಲಕ್ಷಣಗಳನ್ನು ಮಾತ್ರ ಮುಚ್ಚಿಹಾಕುವ" ಪ್ರಯತ್ನವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
-ಶ್ರೀರಾಜ್ ವಕ್ವಾಡಿ
No comments:
Post a Comment