Friday, November 13, 2020

ಮಣ್ಣ ಹಣತೆಯ ಭವ್ಯ ಶಕ್ತಿ



ದೀಪಾವಳಿ ಬಂತಲ್ಲ

ಹೊಳಪಾಗಿ, ಬೆಳಕಾಗಿ

ಚೆಲುವಾಗಿ, ನಲಿವಾಗಿ


ಮಣ್ಣ ಹಣತೆಯ

ಭವ್ಯ ಶಕ್ತಿಯ

ರಮ್ಯತೆಯ

ದಿವ್ಯಾನುಬಂಧದಲಿ

ಅOತರOಗದ ಕಾವ್ಯ

ರಾಗ ಹೆಣೆದುಕೊಳ್ಳಲಿ


ನನ್ನ, ನಿಮ್ಮ ಹಣತೆ

ಶ್ರುತಿಶ್ರಾವ್ಯದಲಿ

ಮತ್ತೆ ಸಂಭ್ರಮದಲಿ

ಎದೆಯೂರ ಬೀದಿಗಳಲಿ

ಮತ್ತೆ ಮತ್ತೆ ಜ್ವಲಿಸಲಿ


ಬಾ..

ಹಣತೆಯ

ಧ್ಯಾನ ಶೋಭೆಯಲಿ

ನನ್ನ ನೀ, ನಿನ್ನ ನಾ

ತುಂಬೊಲವ ಅನುರಾಗದಲಿ

ಕಣ್ತುಂಬಿಸಿಕೊಳ್ಳುವ..!


ದೀಪಾವಳಿ ಬಂತಲ್ಲ..

ಬೆಳಕೆOದರೇ..

ಕೇವಲ ಸಡಗರವಲ್ಲ,

ಹೊಸತೊಂದರ

ಅರುಣೋದಯ..!

-ಕಾವ್ಯ ಬೈರಾಗಿ

(ಶ್ರೀರಾಜ್ ವಕ್ವಾಡಿ)

Monday, October 12, 2020

‘ಕೊರೋನ ನಂತರದ ಗ್ರಾಮ ಭಾರತ’ದೊಳಗೆ ನಿತ್ಯ ಸತ್ಯ


ದೇರ್ಲ ಅವರೇ ಹೇಳುವ ಹಾಗೆ “ಬರೀ ಕನಸನ್ನಷ್ಟೇ ಅಲ್ಲ, ವಾಸ್ತವ ಬದುಕನ್ನೇ ಕೊರೋನಾ ಕಸಿದುಕೊಂಡಿದೆ”. ಕೊರೋನಾ ಇಡಿಯ ವ್ಯವಸ್ಥೆಯನ್ನು ಅಡಿಮೇಲಾಗಿ ಮಾಡಿ ಮಾನವನ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಮತ್ತವನ ಮನಸ್ಸನ್ನೂ.

‘ಕೊರೋನಾ ನಂತರದ ಗ್ರಾಮಭಾರತ’ ಹಲವು ಆಯಾಮಗಳಲ್ಲಿ ಹಳ್ಳಿ ಬದುಕನ್ನು ಪುಟ ಪುಟವಾಗಿ ತೆರೆದಿಡುತ್ತದೆ. 

ನಾನು ಸಾಮಾನ್ಯವಾಗಿ ಪುಸ್ತಕಗಳ ಓದಿನ ಅನಿಸಿಕೆಯನ್ನು ಹಂಚಿಕೊಳ್ಳುವುದಿಲ್ಲ ಅಥವಾ ಬರೆಯುವುದಕ್ಕೆ ಮುಂದಾಗಿದ್ದು, ಮುಂದಾಗುವುದು ಬಹಳ ಕಡಿಮೆ. ಈ ಕೃತಿಯ ಕುರಿತಾಗಿ ನಾಲ್ಕಕ್ಷರ ಬರೆಯುವುದಕ್ಕೆ ಹೊರಟಿರುವ ಕಾರಣ, ಕೃತಿಕಾರ ನರೇಂದ್ರ ರೈ ದೇರ್ಲ ಅವರ ಬರಹಗಳಲ್ಲಿನ ನಾಳೆಯ ಭಾರತದ ಕನಸುಗಳು, ಗ್ರಾಮ ಭಾರತದ ಸೊಗಡು, ಹಳ್ಳಿಯ ಇನ್ನೊಂದು ಗಂಭೀರ ಮುಖ, ಹಳ್ಳಿ ಬದುಕಿನ ಸಮಸ್ಯೆ, ‘ನಗರಗಳು ಕುಲಕೆಟ್ಟ ವೇಗದಲ್ಲೇ ಗ್ರಾಮಗಳು ಬದಲಾದರೇ ಉಳಿಯುವುದೇನು..?’ ಎಂಬ ದೇರ್ಲ ಅವರೊಳಗಿನ ಆತಂಕ. 

ಹಳ್ಳಿಗಳನ್ನು ಬಿಟ್ಟು ನಗರವೇ ಚೆಂದ ಅಂದ ಎಂದು ಹೋಗಿದ್ದ ಮಂದಿಯೆಲ್ಲಾ ಮೂಟೆ ಹೊತ್ತು ಮರಳಿ ಗೂಡಿಗೆ ಎಂಬ0ತೆ ಮತ್ತದೇ ಹೊರಟಲ್ಲೇ ನೆಲೆ ಕಾಣಲು ಮುಖ ಮಾಡಿದ್ದು ಕೊರೋನಾ ನಂತರದ ದಿನಮಾನಗಳು. ಮರಳಿ ಬಂದವರಿಗೆ ಹಳ್ಳಿ ನೀಡಿದ ಸ್ವಾಗತ ಮತ್ತು ಆಶ್ರಯ ಅಚ್ಚರಿಯೇ ಸರಿ.

ಎಲ್ಲೋ ದೂರದ ಮಹಾ ನಗರಗಳಲ್ಲಿ ಬದುಕು ಕಂಡುಕೊ0ಡು ಈ ಕೊರೋನಾ ಎಂಬ ಕಾಯಿಲೆಗೆ ಹೆದರಿ ಹಳ್ಳಿಗೆ ಹಿಂತಿರುಗಿದಾಗ ಈ ಹಿಂದೆಲ್ಲಾ ಮದುವೆ ಮುಂಜಿಗೆ0ದು ಬಂದು ಹೋಗುತ್ತಿದ್ದಾಗಿದ್ದ ಆತಿಥ್ಯ, ಇಲ್ಲಿಯೇ ಹೊಸ ಬದುಕು ಕಾಣಬೇಕು ಎಂದು ಹೊರಟು ಬಂದಿರುವವರ ಬಗ್ಗೆ ಬದಲಾದ ಭಾವನೆಯ ಬಗೆಯನ್ನು ದೇರ್ಲ ಅವರು ಚೆನ್ನಾಗಿ ವಿವರಿಸಿದ್ದಾರೆ. ‘ಇಲ್ಲಿರುವವರಿಗೇ ಕಷ್ಟ, ಈಗ ಇವನೊಬ್ಬ ಮತ್ತೆ ವಕ್ಕರಿಸಿದ’ ಎಂಬುವುದು ಸಹಜವಾಗಿ ಹಳ್ಳಿ ಬದುಕನ್ನು ಕಂಡವರಿಗೆ ಒಪ್ಪಿಕೊಳ್ಳಲಾಗದ ವಾಸ್ತವದ ನಿಜ ಮುಖದ ಅಧ್ಯಯನ ದೇರ್ಲರದ್ದು. 

ಸೆಗಣಿ, ಕೆಸರು, ಗಂಜಲ, ನಮ್ಮದು ಇಪ್ಪತ್ತನಾಲ್ಕು ಗಂಟೆ ಎ.ಸಿ ಹವೆ ಎಂದೆಲ್ಲಾ ಸಾಂಪ್ರದಾಯಿಕ ರೈತಾಪಿಗಳನ್ನು ಟೀಕಿಸಿ ನಗರದೆಡೆಗೆ ಮುಖ ಮಾಡಿ ಹೋದವರು ಈಗ ಹಳ್ಳಿಗೆ ಬಂದು, ಹಳ್ಳಿಯ ಪಡಸಾಲೆಯಲ್ಲಿ ಕೂತು ವರ್ಕ್ ಫ್ರಂ ಹೋಮ್ ಮಾಡಿ, ಉಳಿದ ಸಮಯದಲಿ ಕೈ ಕಾಲು ಕೆಸರು ಮಾಡಿಕೊಂಡು ಕೃಷಿ ಮಾಡುತ್ತಿರುವಾಗ, ‘ನಮ್ಮದಾದದ್ದು ಆಯ್ತು ಬಿಡಿ, ನೀವು ಮಣ್ಣಿಗಿಳಿಯುವುದು ಬೇಡ’ ಅಂದ ಹಿರಿಯವರೇ ಮುಸಿ ಮುಸಿ ನಗುವಂತೆ ಕೊರೋನಾ ಮಾಡಿ ಬಿಟ್ಟಿದೆ ಅಂತ ಲೇಖಕರು ಬಹಳ ಮಾರ್ಮಿಕವಾಗಿ ಹಳ್ಳಿ ಬದುಕಿನ ಗಟ್ಟಿತನವನ್ನು, ಹಳ್ಳಿ ಬದುಕಿನ ಬಗ್ಗೆ ಕೇವಲವಾಗಿ ಮಾತನಾಡುವವರಿಗೆ ಸತ್ಯದ ಕಹಿ ರಾಚಿ ಹೊಡೆಯುವಂತೆ ಹೇಳಿರುವುದು ನಮ್ಮನ್ನು ಕೃತಿ ಒಳಗೆ ಮತ್ತಷ್ಟು ಎಳೆದುಕೊಳ್ಳುತ್ತದೆ. 

ಇನ್ನು, ಸ್ವದೇಶೀಯತೆ. 

ಚೀನಾದಿಂದ ಆಮದಾಗುವ ಕಳೆಕೊಚ್ಚುವ ಯಂತ್ರ. ಯಂತ್ರದ ಬ್ಲೇಡ್ ನ ಫಿನಿಶಿಂಗ್ ಆಧಾರದಲ್ಲಿ ನಮ್ಮ ರೈತರನ್ನು ತಲುಪುವ ಮತ್ತು ಈಗೀಗ ನಮ್ಮ ರೈತರಿಗೆ ಬೇಕಾಗುವುದು ಕೂಡ ಅದೇ. ಆ ಯಂತ್ರದ ಹರಿತವಾದ ಬ್ಲೇಡ್. ಚೀನಾ ಕಂಪೆನಿಯ ಮಾಲಿಕತ್ವ. ವಾಸ್ತವಾಂಶವೆ0ದರೇ, ಆ ಯಂತ್ರದ ಹರಿತವಾದ ಬ್ಲೇಡ್ ನಮ್ಮ ದೇಶದಿಂದಲೇ ಚೀನಾಗೆ ರಫ್ತಾದ ಕಬ್ಬಿಣದಿಂದಲೇ ತಯಾರಿಸಿದ್ದು. ಇದು, ವರ್ತಮಾನದ ಗಡಿಬಿಡಿಯ ಆರ್ಥಿಕ ಸ್ಥಿತಿ ಗತಿಯ ಹಪಹಪಿಯ ಸ್ವದೇಶಿಯತೆಯನ್ನು ಕಟುವಾಗಿ ಟೀಕಿಸುವಂತೆ ಮಾಡುತ್ತದೆ. 

ಈ ಎಲ್ಲದರ ಆಚೆಯಲ್ಲಿ... ದೇರ್ಲರ ಆಳ, ವಿಸ್ತಾರ ನೋಟ ಅವರ ಅಧ್ಯಯನಶೀಲತೆಯಲ್ಲಿ ಇಲ್ಲಿ ಕಾಣಸಿಗುವುದು ಭವಿಷ್ಯದ ಗ್ರಾಮ ಭಾರತ. ‘ಸಾಲ, ಬಡತನ, ಮಣ್ಣಿನ ಮನೆ, ಕಾಲಿನ ಕೆಸರು, ಗಂಜಲದ ವಾಸನೆ, ಬರಿಗಾಲ ಓಡಾಟ ಇವೆಲ್ಲಾ ಅವಮಾನವಲ್ಲ ಎಂಬ ಅರಿವು ಮೂಡಬೇಕು. ಶುದ್ಧ ನೀರು, ಸ್ವಚ್ಛ ಗಾಳಿ, ವಿಷವಿಲ್ಲದ ಹಾಲು, ತರಕಾರಿ, ಅನ್ನ, ನಿರ್ಮಲ ಸಂಪನ್ನ ಪ್ರೀತಿಯೇ ವರ್ತಮಾನದ ಬಹುದೊಡ್ಡ ಸುಖ ಎಂಬ ಅರಿವು ಬರಬೇಕು’ ಎಂಬ ಅವರ ಮಾತುಗಳಲ್ಲಿ ನಾಳೆಯ ಭಾರತದ ಶಿಖರದೆತ್ತರದ ಆಶಯಗಳಿವೆ ಎನ್ನುವುದು ಅಪ್ಪಟ ಸತ್ಯ.

ಸರಳ ಜೀವನಕ್ಕೆ ಕೊರೋನ, ಹಳ್ಳಿಯಲ್ಲಿ ತೋರಿಸಿದ ಹಲವು ದಾರಿಗಳನ್ನು, ಹಳ್ಳಿಯ ಅವಕಾಶಗಳನ್ನು ‘ಯುಗಧರ್ಮವನ್ನು ಪಾಲಿಸುವುದು ಆಯಾಯ ಕಾಲದ ಧರ್ಮ’ ಎಂದು ಹೇಳಿ ಹಳೆಯ ತಲೆಮಾರಿನವರ ಬಾಯಿ ಮುಚ್ಚಿಸುವ ಹೊಸ ತಲೆಮಾರಿನವರಿಗೆ ಈ ಕೃತಿ ಅನೇಕ ಆಯಾಮಗಳಲ್ಲಿ ಕನ್ನಡಿ ಹಿಡಿದು ಇಲ್ಲೇ ಇದೆ ನಿತ್ಯ ಸತ್ಯ ಎನ್ನುವುದನ್ನು  ತೋರಿಸಿಕೊಟ್ಟಿದೆ. 

ಈ ಓದು ಖುಷಿ ಕೊಟ್ಟಿದೆ. 

-ಕಾವ್ಯ ಬೈರಾಗಿ

 (ಶ್ರೀರಾಜ್ ವಕ್ವಾಡಿ) 


 






Sunday, August 23, 2020

ಕೋವಿಡ್ ಮೆಡಿಕಲ್ ಮಾಫಿಯಾ..!!!


“ಕೋವಿಡ್” ಅದೊಂದು ಮಾರಕ ಸೋಂಕಲ್ಲ, ಅದು ಆಳುವವರ ಮಾಫಿಯಾ ಎನ್ನುವುದು ಸತ್ಯವಾಗ್ತಿದೆ. ಕೋವಿಡ್ ಹೆಸರಿಲ್ಲಿ ಕೋಟಿ ಗಟ್ಟಲೆ ನುಂಗಿ ತೇಗುತ್ತಿರುವವರ ಅಸಲಿ ಮುಖ ಬಯಲಾಗ್ತಿದೆ. ಹೆಣದ ಮುಂದಿಟ್ಟುಕೊಂಡು ದಂಧೆ ನಡೆಸುತ್ತಿರುವ ವಿಷಯ ನಿಧಾನವಾಗಿ ಒಂದೊಂದಗಿ ಹೊರ ಬರುತ್ತಿದೆ. 

ಕೋವಿಡ್ ಇಂದ ಮೃತರಾದವರನ್ನು ಸತ್ತ ನಾಯಿ, ನರಿಗಳನ್ನು ಮಣ್ಣು ಮಾಡಿದ ಅಮಾನುಷ ಘಟನೆಗಳನ್ನೆಲ್ಲಾ ಕಂಡು ಹಳಸಿ ಹೋಗಿ ಆಯ್ತು. ಈಗ ಯಾರದ್ದೋ ಹೆಸರಿನಲ್ಲಿ ಇನ್ಯಾರದ್ದೋ ಶವ ಕಳುಹಿಸಿ ಉಡುಪಿಯ ಕೋವಿಡ್ ಆಸ್ಪತ್ರೆಯೊಂದು ಯಡವಟ್ಟು ಮಾಡಿಕೊಂಡಿರುವ ವಿಚಾರ ಸಾಮಾಜಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಸೋಂಕು ದಂಧೆಯಾಗಿ ಬದಲಾಗಿದ್ದು ನೇರಾನೇರವಾಗಿ ಕಾಣಸಿಗುತ್ತಿದೆ. 

ಇನ್ನು, ಖಾಸಗಿ ಆಸ್ಪತ್ರೆಗಳು ಡಬ್ಬಲ್ ಬಿಲ್ ಮಾಡಿದ್ದಾಯ್ತು, ಸಾಮಾನ್ಯ ಹೊರ ರೋಗಿಗಳನ್ನು ನಿರ್ಲಕ್ಷಿಸಿದ್ದಾಯ್ತು, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಡ ಹಾಗೂ ನಿರ್ಗತಿಕ ರೋಗಿಗಳನ್ನು ಅಪರಾತ್ರಿಯಲ್ಲಿ ಎಲ್ಲೆಲ್ಲೋ ನಡು ದಾರಿಯಲ್ಲಿ ಬಿಟ್ಟು ಕ್ರೂರತನ ತೋರಿಸಿದ್ದೂ ಮುಗಿಯಿತು. ಈಗ ಅಮಾಯಕರ ಬದುಕಿನೊಂದಿಗೆ ಆಟ ಆಡುತ್ತಿವೆ. ಕ್ವಾರಂಟೈನ್ ವಿಷಯದಲ್ಲಿ ಆಸ್ಪತ್ರೆಯೊಂದಿಗೆ, ಹೋಟೇಲ್ ಮಾಲೀಕರೊಂದಿಗೆ ರಾಜಕೀಯ ನಾಯಕರುಗಳು, ಜಿಲ್ಲಾಧಿಕಾರಿಗಳು ಶಾಮೀಲು ಮಾಡಿಕೊಂಡು ಬಡವರ ಕಷ್ಟದ ಹಣವನ್ನು ನುಂಗಿ ಕಕ್ಕಿದ್ದಾದರೂ ಇನ್ನೂ ಸಾಲದೇನೋ.. 

ಈಗ ಕೋವಿಡ್ ಹೆಸರಿನಲ್ಲಿ ಯರ‍್ಯಾರದ್ದೋ ಶವ ಕಳುಹಿಸಿಕೊಡುವುದು ಆರಂಭವಾಗಿದೆ. ಇಷ್ಟೆಲ್ಲಾ ಯಡವಟ್ಟು ಮಾಡುವ ಆಸ್ಪತ್ರೆಗಳು.. ಪಿಪಿಇ ಕಿಟ್ ಅಲ್ಲಿ ಪ್ಯಾಕ್ ಮಾಡಲಾಗುವ, “ಕೋವಿಡ್‌ನಿಂದ ಮೃತರಾದವರ ಶವ ಎಂದು ಹೇಳಲಾಗುವ” ಆ ಮೃತ ದೇಹದ ಅಂಗಾಂಗಗಳನ್ನು ಕದ್ದಿರಲು ಸಾಧ್ಯವಿಲ್ಲವೇ..? ಎನ್ನುವ ಆತಂಕಕಾರಿಯಾದ ಪ್ರಶ್ನೆ ಈಗ ಕಾಡ್ತಿದೆ. ಆ್ಯಂಬುಲೆನ್ಸ್ನಲ್ಲಿ ಪಿಪಿಇ ಕಿಟ್‌ಗಳಿಂದ ಕವರ್ ಮಾಡಿ ಯಾವುದೋ ಲಾರಿಗಳಲ್ಲೋ, ಗೂಡ್ಸ್ ವಾಹನಗಳಲ್ಲೋ ಪಾರ್ಸೆಲ್ ಕಳುಹಿಸದ ಹಾಗೆ ಸ್ಮಶಾನಕ್ಕೆ ಹೆಣ ಕಳುಹಿಸಿ, ಕುಟುಂಬದವರಿಗೆ ಸರಿಯಾಗಿ ನೋಡುವುದಕ್ಕೂ ಬಿಡದೇ ಮಣ್ಣು ಮಾಡಲಾಗುವ ಆ ದೇಹದಲ್ಲಿನ ಎಷ್ಟು ಅಂಗಾಂಗಗಳನ್ನು ಕದ್ದು, ಮಾರಿ ಹಣ ಮಾಡಿರಲಿಕ್ಕಿಲ್ಲ..? ನಿಜ, ದೊಡ್ಡದೊಂದು ಮೆಡಿಕಲ್ ಮಾಫಿಯ ನಡೆಯುತ್ತಿದೆ ಎನ್ನುವುದರಲ್ಲಿ ಅನುಮಾನವೇ ಬೇಕಾಗಿಲ್ಲ.

ಸುಳ್ಳು ಬರೀ ಸುಳ್ಳು, ಎಲ್ಲವೂ ಹಸಿ ಹಸಿ ಸುಳ್ಳು. ಕೋವಿಡ್ “ಮಾಫಿಯಾ” ಹೊರತಾಗಿ ಬೇರೇನೂ ಅಲ್ಲ. ಇದು ವೈದ್ಯಕೀಯ ವರ್ಗದೊಂದಿಗೆ ಆಳುವವರ ದೊಡ್ಡ ದಂಧೆ ಎನ್ನುವುದರಲ್ಲಿ ಯಾವುದೇ ಸಂದೇಹ ಪಡಬೇಕಾಗಿಲ್ಲ. ಖಾಸಗಿ ಆಸ್ಪತ್ರೆಗಳು ಈಗಿನ ಕೋವಿಡ್ ಸಂಕಟದ ಕಾಲದಲ್ಲಿ ಬಡ, ನಿರ್ಗತಿಕರ, ಮಧ್ಯಮವರ್ಗದವರ ಸುಲಿಗೆಯಲ್ಲಿ ತೊಡಗಿವೆ ಎನ್ನುವುದಕ್ಕೆ ಇದು ಅಪ್ಪಟ ಸಾಕ್ಷಿ. ಕ್ಯಾರೇ ಇಲ್ಲದಂತೆ ವರ್ತಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಅಸಲಿ ಮುಖ ಇದು. ಇಡಿಯ ದೇಶದಲ್ಲಿ ಬಿಳಿ ಕೋಟಿನ ಲೂಟಿಕೋರರ ಹಾವಳಿ ಅತಿಯಾಗಿದೆ ಎನ್ನುವುದರಲ್ಲಿ ನೋ ಡೌಟ್ಸ್.  

ಹೈಟೆಕ್ ಆಸ್ಪತ್ರೆಗಳಲ್ಲಿ “ಸೇಲ್ಸ್ ರಿವ್ಯೂ” ಮಾಡಲಾಗುತ್ತದೆ ಎಂಬ ವಿಚಾರ ನಿಮಗೂ ಗೊತ್ತಿರಬಹುದು. ಡಾಕ್ಟರ್‌ಗಳನ್ನು ಕೂರಿಸಿಕೊಂಡು ಎಷ್ಟು ಲಾಭ ಬಂತು ..? ಅಂತ ಮೀಟಿಂಗ್ ಮಾಡಲಾಗ್ತದೆ. ಯಾವ ಡಾಕ್ಟರ್ ಎಷ್ಟು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುತ್ತಾನೆ. ಆತನಿಂದ ಎಷ್ಟು ಲಾಭ ಆಸ್ಪತ್ರೆಗೆ ಬರುತ್ತದೆ ಎಲ್ಲವನ್ನೂ ಮಾಡಲಾಗ್ತದೆ. ‘ಆಪರೇಷನ್ ಟಾರ್ಗೇಟ್’, ಒಬ್ಬ ರೋಗಿಯನ್ನು ಬದುಕಿಸುವುದು ಮತ್ತು ಸಾಯಿಸುವುದನ್ನು ಆಸ್ಪತ್ರೆಯ ಮಂಡಳಿ ಡಿಸೈಡ್ ಮಾಡುತ್ತದೆ ಅಂದರೆ ನೀವು ಅಚ್ಚರಿ ಪಡಬೇಕಾಗಿಲ್ಲ. 

ಹೌದು. ಈ ಕೋವಿಡ್ ಆರಂಭವಾದ ಮೇಲೆ ಆಗಿದ್ದೆಲ್ಲವೂ ಇಂತದ್ದೇ ಅಂತ ಬಿಡಿಸಿ ಬಿಡಿ ಬಿಡಿಯಾಗಿ ಹೇಳುವ ಅಗತ್ಯವೇನೂ ಇಲ್ಲ. ಪಕ್ಕಾ ದಂಧೆ ಆಗಿ ಬಿಟ್ಟಿದೆ. ಕೋವಿಡ್ ಪರೀಕ್ಷಾ ಪರಿಕರಗಳಿಂದಾದಿಯಾಗಿ ಟ್ರೀಟ್‌ಮೆಂಟ್, ಕ್ವಾರಂಟೈನ್, ಸೀಲ್ಡೌನ್ ತನಕವೂ ಕೂಡ ಆಳುವ ರಾಜಕೀಯ ನಾಯಕರ ಪ್ರಭಾವ ಇದೆ ಎನ್ನುವುದು ಪದಶಃ ಸತ್ಯ. 

ಮೃತರಾದವರ ಶವವನ್ನೇ ಬದಲು ಮಾಡಿ ಕಳುಹಿಸುವುದೆಂದರೇ ಏನು..? ಇದು ಬೇಜವಾಬ್ದಾರಿಯ ಪರಮಾವದಿ ಅಲ್ಲದೇ ಮತ್ತೇನಲ್ಲ. ಕೊರೋನಾ ನಿಯಂತ್ರಿಸುವಲ್ಲಿ ಎಲ್ಲಾ ಸೌಲಭ್ಯವಿದೆ, ಎಲ್ಲವನ್ನೂ ಮುತುವರ್ಜಿಯಿಂದ ಮಾಡ್ತಿದ್ದೇವೆ ಅಂತ ಪುಂಗಿ ಊದುತ್ತಿದ್ದ ಆಳುವವರು, ಜಿಲ್ಲಾಧಿಕಾರಿಗಳು, ವೈಧ್ಯಾಧಿಕಾರಿಗಳು ಯಾರದ್ದೋ ಶವದ ಬದಲಾಗಿ ಇನ್ಯಾರದ್ದೋ ಶವವನ್ನು ಕಳುಹಿಸಿಕೊಡುವಾಗ ಎಲ್ಲಿ ಹೋಗಿದ್ದಾರೆ..? 

ಕೋವಿಡ್ ಹೆಸರಿನಲ್ಲಿ ಆಗುತ್ತಿರುವ ದಂಧೆ ಮತ್ತು ಅವ್ಯವಸ್ಥೆ ಈಗ ಬಟಾಬಯಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆಯಿದ್ದರೂ ಒತ್ತಾಯ ಪೂರ್ವಕವಾಗಿ ಕೊರೋನಾ ಚಿಕಿತ್ಸೆ ಮಾಡಿ ಹಣ ಕೊಳ್ಳೆಹೊಡೆಯುತ್ತಿರುವ, ಸುಳ್ಳು ಸುಳ್ಳು ಟೆಸ್ಟಿಂಗ್ ರಿಪೋರ್ಟ್ ನೀಡಿ ಮಾಫಿಯಾ ನಡೆಸುತ್ತಿರುವ, ಹೆಣಗಳ ಮುಂದೆ ಕೋವಿಡ್ ಡ್ರಾಮ ಮಾಡುವ ಬಿಳಿಕೋಟಿನ ದಂಧೆಕೋರರ ಧೋರಣೆ ಇಡೀಯ ಸಾಮಾಜಿಕ ವಲಯವನ್ನೇ ಆತಂಕಕ್ಕೊಳಪಡಿಸಿದೆ. 

ಅಮಾಯಕರ ಹೆಣ ಮುಂದಿಟ್ಟುಕೊಂಡು ಹೇಸಿಗೆ ತಿನ್ನುವ ಕೆಲಸಕ್ಕೆ ಖಾಸಗಿ ಆಸ್ಪತ್ರೆಗಳೊಂದಿಗೆ ಕೈ ಜೋಡಿಸಿರುವ ರಾಜಕೀಯ ನಾಯಕರಿಗೆ ಆರಿಸಿ ಕುರ್ಚಿ ಸಿಗುವಂತೆ ಮಾಡಿದವರೇ ಮುಂದಿನ ಸಾಲಿನಲ್ಲಿ ಸರಿಯಾದದ್ದನ್ನೇ ಪಾಠ ಕಲಿಸಬೇಕಿದೆ.     

-ಶ್ರೀರಾಜ್ ವಕ್ವಾಡಿ


Sunday, August 16, 2020

ದನಿ..!

 

ಗೋವಿನ 

ಕೊರಳಲ್ಲಾಡುವ ಘಂಟೆ 

ದನಿಮಾಡುತ್ತಿದೆ 

ಆ ಸಂಭ್ರಮಕ್ಕೆ 

ಪೂರ್ತಿ ಪಾಲ್ಪಡೆಯಲಾಗ್ತಿಲ್ಲ..! 


ಕ್ಷಮಿಸಿ 

ನಿಶೆಯ ಕತ್ತಲೆಯ

ಸಡಗರಕ್ಕಿನ್ನು 

ಕೊನೆಯಾಗಿಲ್ಲ ಎಂದು 

ಹೇಳಲ್ಹೊರಟೆ ಅಷ್ಟೇ...! 


ಬದುಕೆಂದರೇ, 

ನನ್ನ ಕಣ್ಣಿನ ಬಿಂದುವಿನಲಿ 

ನಾನೇ ಕಾಣುವ ನನ್ನದೇ ಬಿಂಬ..! 


ನಾಳೆಗಳಿಲ್ಲದ ಇಂದು 

ವಿಷಾದ ಹಾಡುತ್ತಿದೆ...! 


ಇಂದು ಇಲ್ಲದ ನಿನ್ನೆ 

ಮತ್ತದೇ ಬಣ್ಣವಿಲ್ಲದ

ಕಾವ್ಯಕ್ಕೆ ರಾಗ ಹಾಕುತ್ತಿದೆ...! 


ನೀವು ಏನೇ ಹೇಳಿ 

ಇದು ದನಿಯಿಲ್ಲದ ದನಿ..! 

-ಕಾವ್ಯ ಬೈರಾಗಿ 

(ಶ್ರೀರಾಜ್ ವಕ್ವಾಡಿ)

Sunday, June 7, 2020

ತಿರುವು..!




ಬೇಗ ಮುಗಿದು 
ಹೋಗಲಿ 
ಕಾಣದೆ ತಿರುಗುವ 
ತಿರುವು ..! 

ಹೇಗೋ ಇದ್ದಿದ್ದರೇ
ಹೇಗೋ ಉಳಿದು 
ಬಿಡಬಹುದಿತ್ತು..!
ಹೇಗೆಲ್ಲಾ ಇರಲು 
ಒಪ್ಪಲಿಲ್ಲ 
ಆಗೆಲ್ಲಾ ಹಾಗೆ 
ಆಗಲಿಲ್ಲ..! 

ಏನೂ ತೋಚದ ಮೇಲೆ 
ಬೇಗ ಕೊನೆಯಾಗಿ 
ಹೋರಡಲಿ...! 

ಸೇರಬಹುದಾದ
ದಿಗಂತ್ಯಗಳು 
ಕ್ಷಮಿಸಲಿ..! 

ನಾಳೆ ಕಳೆದು 
ಹೋಗುವುದು 
ಇಂದಾದರೇನು...?

ಹಾಗೆಲ್ಲಾ ಹಿತವಿಲ್ಲ...!
-ಕಾವ್ಯ ಬೈರಾಗಿ 
(ಶ್ರೀರಾಜ್ ವಕ್ವಾಡಿ) 


Thursday, June 4, 2020

ಶಾಲೆಗಳು ಮತ್ತೆ ಮಾತಾಡುತ್ತಿವೆ..!


(ಸಾಂದರ್ಭಿಕ ಚಿತ್ರ)

ಇಡೀ ಜಗತ್ತನ್ನು ಆವರಿಸಿಕೊಂಡಿರುವ ಕೊರೋನಾ ಮುಂದೆ ಯಾವ ಮಟ್ಟಕ್ಕೆ ಹೋಗಿ ತಲುಪಬಹುದೆಂಬುದನ್ನು ಯಾರಿಗೂ ಊಹಿಸುವುದಕ್ಕೆ ಸಾಧ್ಯವಿಲ್ಲ. ಕೊರೋನಾ ಪೂರ್ಣ ಮಟ್ಟದಲ್ಲಿ ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲಾಗಿಸಿಬಿಟ್ಟಿದೆ. ಈ ನಡುವೆ ರಾಜ್ಯ ಸರ್ಕಾರ ಆರಂಭದಲ್ಲಿ ಅತ್ಯಂತ ಯಶಸ್ವಿಯಾಗಿ ಸೋಂಕು ನಿಯಂತ್ರಿಸಲು ನಿರ್ಧಾರಗಳನ್ನು ಕೈಗೊಂಡಿದ್ದರೂ ಈಗೀಗ ಪದೇ ಪದೇ ವಿವಾದಾತ್ಮಕ ನಿರ್ಧಾರಗಳನ್ನು ತರಾತುರಿಯಲ್ಲಿ ಕೈಗೊಳ್ಳುತ್ತಿರುವುದು ಭ್ರಮನಿರಸ ಹುಟ್ಟಿಸುತ್ತಿದೆ.

ಬಹಳ ಮುಖ್ಯವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳು ತುಂಬಾ ಗೊಂದಲವುಂಟುಮಾಡುತ್ತಿವೆ. ಕೇಂದ್ರ ಸರ್ಕಾರ ಸೂಚಿಸಿದ ನಿರ್ಬಂಧಗಳನ್ನು ಸಡಿಲಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಸದರಿ ಮಾರ್ಗಸೂಚಿಯಲ್ಲಿ ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭ ಮಾಡುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೊಟ್ಟಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಗಳ ಪುನರಾರಂಭ ಮಾಡುವುದಕ್ಕೆ ದಿನಾಂಕವನ್ನು ಘೋಷಿಸಿದೆ. ಇದರ ಬೆನ್ನಲ್ಲೇ ಭಾರಿ ವಿರೋಧವೂ ಬಂತು. ಕೊರೋನಾ ಸೋಂಕು ದಿನನಿತ್ಯ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಶಾಲೆಗಳನ್ನು ಆರಂಭಿಸುತ್ತಿರುವುದಕ್ಕೆ ದಿನಾಂಕ ಸೂಚಿಸಿದ್ದು ಒಂದು ಯಡವಟ್ಟಾದರೇ, ದಿನಾಂಕ ಘೋಷಿಸಿ ಆದ ಮೇಲೆ ಪೋಷಕರ ಅಭಿಪ್ರಾಯ ಕೇಳುತ್ತೇವೆ ಅಂತ ಹೇಳುತ್ತಿರುವುದು ಮತ್ತೊಂದು ಯಡವಟ್ಟು. ಹೀಗೆ ಗಂಟೆಗೊಂದು ತರಾತುರಿಯಲ್ಲಿ ಯಾವುದೇ ಪೂರ್ವ ಯೋಜನೆಗಳಿಲ್ಲದೆ ಶಿಕ್ಷಣ ಇಲಾಖೆ ನಿರ್ಧಾರ ಕೈಗೊಳ್ಳುತ್ತಿದೆ ಎನ್ನುವುದಕ್ಕೆ ಇದು ಉತ್ತಮ ಸಾಕ್ಷಿ.

ಈಗಾಗಲೇ, ಫ್ರಾನ್ಸ್ನಲ್ಲಿ ಶಾಲೆ ಆರಂಭ ಮಾಡಿದ ಮೇಲೆ ಸುಮಾರು ಎಪ್ಪತ್ತು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿರುವ ಕಾರಣದಿಂದಾಗಿ ಅಲ್ಲಿನ ಸರ್ಕಾರ ಪುನಃ ಶಾಲೆಗಳನ್ನು ಮುಚ್ಚಿಸಿತು. ದಕ್ಷಿಣ ಕೋರಿಯಾದಲ್ಲಿಯೂ ಇದೇ ಸ್ಥಿತಿ. ಶಾಲೆಗಳು ಪ್ರಾರಂಭವಾದ ಮೇಲೆ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡದ್ದರಿಂದ ಐನೂರಕ್ಕೂ ಹೆಚ್ಚು ಶಾಲೆಗಳನ್ನು ಮತ್ತೆ ಮುಚ್ಚಿಸಿದೆ ಅಲ್ಲಿನ ಸರ್ಕಾರ. ಇಂತೆಲ್ಲಾ ಉದಾಹರಣೆಗಳು ಮುಂದೆ ಇದ್ದರೂ ಕೂಡ ಶಿಕ್ಷಣ ಇಲಾಖೆ ಶಾಲೆ ಆರಂಭಿಸುವುದಕ್ಕೆ ಮುಂದಾಗುತ್ತಿರುವುದನ್ನು ನೋಡಿದರೇ, ಶಿಕ್ಷಣ ಇಲಾಖೆ ಮತ್ತು ಸರ್ಕಾರ ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದಿದೆಯಾ..? ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಕಾಡುತ್ತಿದೆ.

‘ವಿದ್ಯಾರ್ಥಿಗಳ ಮೇಲೆ ಯಾವುದೇ ರೀತಿಯ ಒತ್ತಡವನ್ನು ಹಾಕುವುದಿಲ್ಲ. ವಿದ್ಯಾರ್ಥಿಗಳ ಸುರಕ್ಷಣಾ ಹೊಣೆಗಾರಿಕೆ ನಮ್ಮದು’ ಎಂದು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಬಹಳ ಧೈರ್ಯದಿಂದ ಹೇಳುತ್ತಿವೆ. ಆದರೇ, ಇದು ಭಾಗಶಃ ಯಶಸ್ವಿಯಾಗಬಹುದಷ್ಟೇ. ಉದಾಹರಣೆಗೆ, ಒಂದು ಹಿರಿಯ ಪಾಥಮಿಕ ಶಾಲೆಯಲ್ಲಿ ಏಳು ತರಗತಿಗೆ ಸಾಮಾನ್ಯವಾಗಿ ಏಳು ತರಗತಿ ಕೋಣೆಗಳಿರುತ್ತವೆ. ಒಂದೊಂದು ತರಗತಿಯಲ್ಲಿ ಐವತ್ತು ವಿದ್ಯಾರ್ಥಿಗಳಿದ್ದರೇ, ಒಂದು ತರಗತಿ ಕೋಣೆಯಲ್ಲಿ ಸಾಮಾನ್ಯವಾಗಿ ಇರುವ ಹತ್ತು ಡೆಸ್ಕ್ ಬೆಂಚುಗಳಲ್ಲಿ ಹೇಗೆ ಸಾಮಾಜಿಕ ಅಂತರ ಕಾಯ್ದಿರಿಸಿ ಆ ವಿದ್ಯಾರ್ಥಿಗಳನ್ನು ಪಾಠ ಕೇಳಿ ಅಂತ ಕೂರಿಸುತ್ತಾರೆ..? ಸ್ಯಾನಿಟೈಸ್, ಸಾಮಾಜಿಕ ಅಂತರ, ಸ್ಕ್ರೀನಿಂಗ್ , ಕ್ಲೀನಿಂಗ್ ಮಾಡಿ ವಿದ್ಯಾರ್ಥಿಗಳ ಕ್ಷೇಮ ಪಾಲನೆ ಮಾಡುತ್ತೇವೆ ಅಂತ ಹೇಳುವ ಸರ್ಕಾರ ಅಥವಾ ಶಿಕ್ಷಣ ಇಲಾಖೆ ಹೇಗೆ ವಿದ್ಯಾರ್ಥಿಗಳನ್ನು ನಿಭಾಯಿಸುತ್ತದೆ ಎನ್ನುವುದೇ ದೊಡ್ಡ ತಲೆನೋವಿನ ಪ್ರಶ್ನೆಯಾಗಿದೆ.

ಮತ್ತೊಂದು ವಿಚಾರ, ಕರ್ನಾಟಕ ಸರ್ಕಾರದ ಕೋವಿಡ್19 ಇನ್‌ಫರ‍್ಮೇಶನ್  ಪೊರ‍್ಟಲ್ ಆಫಿಶಿಯಲ್ ವೆಬ್ಸೆಟ್ ಅಲ್ಲಿ ಈಗ ಲಭ್ಯ ಇರುವ ಮಾಹಿತಿಯ ಪ್ರಕಾರ ಕರ್ನಾಟಕದಾದ್ಯಂತ 246 ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ಬಹುತೇಕ ಎಲ್ಲವೂ ಸರ್ಕಾರಿ ಶಾಲೆಗಳು, ವಸತಿ ಶಾಲೆಗಳು, ಬಿಸಿಎಮ್ ಹಾಸ್ಟೇಲ್‌ಗಳಾಗಿವೆ. ಈಗ, ಇನ್ನೂ ಕೂಡ ಬೇರೆ ಬೇರೆ ಊರುಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ಹೊರನಾಡಿನಿಂದ ಬಂದವರನ್ನು ಕ್ವಾರಂಟೈನ್ ಅಲ್ಲಿ ಇಡಲು ನಿಯೋಜಿಸಲಾಗುತ್ತಿದೆ. ಅವುಗಳು ರಾಜ್ಯ ಸರ್ಕಾರದ ಈ ಅಧಿಕೃತ ವೆಬ್ಸೆಟ್ ಹೇಳುತ್ತಿರುವ ಲೆಕ್ಕದ ಹೊರಗಿನವುಗಳು ಎಂಬುವುದು ಬಹಳ ಮುಖ್ಯ. ಶಿಕ್ಷಣ ಇಲಾಖೆ ಈ ಶಾಲೆಗಳಲ್ಲಿ ಹೇಗೆ ತರಗತಿಗಳನ್ನು ಪ್ರಾರಂಭಿಸುತ್ತದೆ..? ಅಲ್ಲಿನ ವಿದ್ಯಾರ್ಥಿಗಳ ಸ್ಥಿತಿಗಳ ಬಗ್ಗೆ ಸರ್ಕಾರವಾಗಲಿ, ಶಿಕ್ಷಣ ಇಲಾಖೆಯಾಗಲಿ ಆಳವಾದ ಆಲೋಚನೆಯನ್ನು ಮಾಡಿದಂತೆ ಕಾಣುತ್ತಿಲ್ಲ.

ಶಿಕ್ಷಣ ಇಲಾಖೆ ಕೈಗೊಳ್ಳುತ್ತಿರುವ ಎಲ್ಲಾ ನಿರ್ಧಾರಗಳನ್ನು ಗಮನಿಸುತ್ತಿರುವಾಗ ವಿದ್ಯಾರ್ಥಿಗಳನ್ನು ಬೆಂಕಿಯೊಂದಿಗೆ ಸರಸವಾಡುವುದಕ್ಕೆ ಮುಂದೂಡುವ ದುಸ್ಸಾಹಸಕ್ಕೆ ಮುಂದಾಗುತ್ತಿದೆಯಾ ಎಂಬ ಚಿಂತೆ ಹೆಚ್ಚಾಗುತ್ತಿದೆ. ಶಿಕ್ಷಣ ಇಲಾಖೆಯ ಈ ನಿರ್ಧಾರಕ್ಕೆ ಶಿಕ್ಷಕರು, ಪೋಷಕರು, ಶಿಕ್ಷಣ ತಜ್ಞರು ಹಿಂದೆ ಮುಂದೆ ನೋಡದೇ, ಮಕ್ಕಳ ಮತ್ತು ಶಿಕ್ಷಕರ ಹಿತ ಗಮನಿಸದೇ ತೆಗೆದುಕೊಳ್ಳುತ್ತಿರುವ ಸರ್ಕಾರದ ಆತುರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.


( ಸಾಂದರ್ಭಿಕ ಚಿತ್ರ )

ಕರ್ನಾಟಕದಾದ್ಯಂತ 44,615 ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು 5,240 ಸರ್ಕಾರಿ ಪ್ರೌಢ ಶಾಲೆಗಳಿವೆ. ಹಾಗೂ 1,229 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ.  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಜುಲೈಯಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಪುನರಾರಂಭಿಸುತ್ತೇವೆ ಅಂತ ಒಂದೆಡೆ ಹೇಳಿದರೇ, ಇನ್ನೊಂದೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ಕೈಗೊಂಡು ಶಾಲೆಗಳನ್ನು ತೆರೆಯುತ್ತೇವೆ ಅಂತ ಈ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವವರಿಗೆ ಉತ್ತರಿಸುತ್ತಾರೆ. 44,615ಸರ್ಕಾರಿ ಪ್ರಾಥಮಿಕ ಶಾಲೆಗಳನ್ನೊಳಗೊಂಡು  ಒಟ್ಟು 6,469 ಪ್ರೌಢ ಶಾಲೆಗಳಲ್ಲಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಲಕ್ಷ ಲಕ್ಷ ವಿದ್ಯಾರ್ಥಿಗಳನ್ನು ಕೊರೊನಾ ವೈರಸ್ ತಾಂಡವಾಡುತ್ತಿರುವ ಈ ಸಂದರ್ಭದಲ್ಲಿ ಹೇಗೆ ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿಗಳನ್ನು ಮಾಡುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಶಾಲೆ ಪುನರಾರಂಭವನ್ನು ವಿರೋಧಿಸಿ ‘ಪೇರೇಂಟ್ಸ್ ಅಸೋಶಿಯೇಶನ್’ ದೇಶಾದ್ಯಂತ ನಡೆಸಲಾದ ಆನ್‌ಲೈನ್ ಸಮೀಕ್ಷೆಯಲ್ಲಿ ಲಕ್ಷೋಪಲಕ್ಷ ಮಂದಿ ಪೋಷಕರು ಸೋಂಕಿಗೆ ಲಸಿಕೆ ಸಿಗುವವರೆಗೆ ‘ನೋ ಸ್ಕೂಲ್’ ಅಂತ ಹೇಳಿದ್ದಾರೆ ಎನ್ನುವುದು ಅಚ್ಚರಿಯ ವಿಷಯ. ವಿದ್ಯಾರ್ಥಿಗಳ ಹಿತಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರು ಕೂಡ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.

ಇನ್ನು, ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವುದಕ್ಕೆ ಸರ್ಕಾರ ಉತ್ತೇಜಿಸುತ್ತಿದೆ. ಹಲವು ಶಾಲೆಗಳು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿವೆ. ಆದರೇ, ಅದಕ್ಕೆ ಬೇಕಾದ ವ್ಯವಸ್ಥೆಗಳಿಂದ ಎಷ್ಟೋ ಹಳ್ಳಿ ಹಳ್ಳಿಯ ವಿದ್ಯಾರ್ಥಿಗಳು ಹೊರಗಿದ್ದಾರೆ ಎನ್ನುವುದರ ಬಗ್ಗೆ ತುರ್ತಾಗಿ ಸರ್ಕಾರ ಗಮನ ನೀಡಬೇಕಾಗಿದೆ. 

ಇತ್ತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮತ್ತು ಪಿಯುಸಿಯ ಬಾಕಿ ಉಳಿದ ಇಂಗ್ಲೀಷ್ ಪರೀಕ್ಷೆಗಳಿಗೆ ದಿನಾಂಕ ನಿಗದಿ ಮಾಡಿದೆ. ಸೋಂಕಿನ ಬಗ್ಗೆ ವೈದ್ಯಕೀಯ ಕ್ಷೇತ್ರ ಸ್ಪಷ್ಟವಾದ ನಿಲುವಿಗೆ ಬಾರದೆ ಇರುವಾಗಲೇ ಶಿಕ್ಷಣ ಇಲಾಖೆ ಪರೀಕ್ಷೆಗೆ ಮುಂದಾಗಿರುವುದರಿಂದ ಆ ನಿರ್ಧಾರವೂ ಕೂಡ ತೀವ್ರ ಚರ್ಚೆಗೆ ಒಳಗಾಗಿದೆ. ಆದರೂ ಶಿಕ್ಷಣ ಇಲಾಖೆ ಸುರಕ್ಷತೆ ವಹಿಸಿ ಪರೀಕ್ಷೆ ನಡೆಸಿಯೇ ನಡೆಸುತ್ತೇವೆ ಎಂಬ ದೃಢ ನಿರ್ಧಾರವನ್ನು ಬಿಟ್ಟುಕೊಡುತ್ತಿಲ್ಲ. ಶಾಲೆ ಪುನರಾರಂಭಿಸುವುದಕ್ಕೆ ಮತ್ತು ಪರೀಕ್ಷೆ ನಡೆಸುವುದಕ್ಕೆ, ಸಾಮಾಜಿಕ ಹಿತಕ್ಕಾಗಿ, ವಿದ್ಯಾರ್ಥಿಗಳ ಹಿತಕ್ಕಾಗಿ ವಿರೋಧಗಳು ಕೇಳಿ ಬರುತ್ತಿರುವಾಗ ಪರೀಕ್ಷೆ ಎದುರಿಸಲಿರುವ ಎಸ್.ಎಸ್.ಎಲ್.ಸಿ ಸೇರಿ ಪಿಯುಸಿ ವಿದ್ಯಾರ್ಥಿಗಳಲ್ಲಿ ಮತ್ತೆ ಯಾವಾಗ ಶಿಕ್ಷಣ ಇಲಾಖೆ ಪರೀಕ್ಷೆ ಮುಂದೂಡುತ್ತದೋ ಅಥವಾ ಇನ್ನು ಯಾವ ಗೊಂದಲದ ನಿರ್ಣಯ ಕೈಗೊಳ್ಳುತ್ತದೋ ಎಂಬುವುದರ ಬಗ್ಗೆ ಚಿಂತೆ ಕಾಡುತ್ತಿರುವುದಂತೂ ಸುಳ್ಳಲ್ಲ.

ಒಟ್ಟಿನಲ್ಲಿ, ಶಿಕ್ಷಣ ವ್ಯವಸ್ಥೆಯಲ್ಲಿ ಉಲ್ಬಣಿಸುತ್ತಿರುವ ಅನೇಕ ಗೊಂದಲಗಳಿಗೆ ತಾರ್ಕಿಕ ಅಂತ್ಯ ನೀಡಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಸಮಾಧಾನವುಂಟು ಮಾಡುವ ಸೂಕ್ತ ನಿರ್ಧಾರವನ್ನು ಶಿಕ್ಷಣ ಇಲಾಖೆ ಮತ್ತು ಸರ್ಕಾರ ಕೈಗೊಳ್ಳಲಿ ಎನ್ನುವುದೇ ಈ ಲೇಖನದ ಆಶಯ.
-ಶ್ರೀರಾಜ್ ವಕ್ವಾಡಿ 


Tuesday, June 2, 2020

ಸರ್ಕಾರದ ಹೊಣೆಗೇಡಿ ನಿರ್ಧಾರಗಳಿಗೆ ಏನನ್ನಬೇಕು..?!



ದೇಶಕ್ಕೆ ಕೊರೋನಾ ಗಂಡಾಂತರ ತಪ್ಪಿದಂತೆ ಕಾಣುತ್ತಿಲ್ಲ. ಲಾಕ್ಡೌನ್ ಸಡಿಲಿಕೆ ಆದ ಮೇಲೆಯೇ ಸೋಂಕಿತರ ಪಟ್ಟಿ ಉದ್ದಕ್ಕೆ ಬೆಳೆಯುತ್ತಿದೆ. ಈ ನಡುವೆ ರೈಲು, ವಿಮಾನ, ಬಸ್‌ಗಳ ಮೂಲಕ ಕೊರೋನಾ ಸೋಂಕನ್ನು ಆಮದು ರಫ್ತು ಮಾಡಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ.

ಭಾರತದಲ್ಲಿ ಅರ್ಧದಷ್ಟು ಕೊರೋನಾ ಸೋಂಕು ದೃಢಗೊಂಡಿದ್ದು ಲಾಕ್ಡೌನ್ ಸಡಿಲಿಕೆಯಾದ ಮೇಲೆಯೇ ಎನ್ನುವುದು ಒಪ್ಪಲೇ ಬೇಕಾದ ವಿಚಾರ. ಅದನ್ನು ಸ್ವತಃ ಕೇಂದ್ರ ಆರೋಗ್ಯ ಇಲಾಖೆಯೇ ಹೇಳುತ್ತದೆ. ಮತ್ತೊಂದು ಅಚ್ಚರಿ ಹುಟ್ಟಿಸುವ ವಿಷಯವೇನೆಂದರೇ, ದೇಶದಲ್ಲಿ ಲಾಕ್ಡೌನ್ ಘೋಷಿಸುವ ಮುಂಚೆಯೇ ಸುಮಾರು 512 ಮಂದಿಗೆ ಕೊರೋನಾ ಸೋಂಕು ಹರಡಿವೆಯಂತೆ. ಮೊದಲ ಹಂತದ ಲಾಕ್ಡೌನ್ ಅಲ್ಲಿ  10,877 ಕೊರೋನಾ ಸೋಂಕುಗಳು ಪತ್ತೆಯಾಗಿದ್ದ ಭಾರತದಲ್ಲಿ, ನಾಲ್ಕನೇ ಹಂತದ ಲಾಕ್ಡೌನ್ (ಸಡಿಲಿಕೆಯ ಲಾಕ್ಡೌನ್)  ಮುಗಿಯುವ ವೇಳೆಗೆ ಬರೋಬ್ಬರಿ 1 ಲಕ್ಷದ 83 ಸಾವಿರಕ್ಕಿಂತಲೂ ಹೆಚ್ಚು ಸೋಂಕು ಪತ್ತೆಯಾಗಿವೆ. ಪ್ರತಿ ದಿನ ಅತಿ ಹೆಚ್ಚು ಸೋಂಕು ದೃಢಗೊಳ್ಳುತ್ತಿರುವ ಜಗತ್ತಿನ ಇತರೆ ದೇಶಗಳ ಪಟ್ಟಿಯಲ್ಲಿ ಭಾರತ ಈಗ ಮೂರನೇ ಸ್ಥಾನದಲ್ಲಿ ಇದೆ. ಕೊರೋನಾ ಹಾಟ್‌ಸ್ಪಾಟ್ ದೇಶಗಳ ಪಟ್ಟಿಯಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ ಎನ್ನುವುದನ್ನು ತಲೆಕೆಳಗೆ ಮಾಡಿ ನಾವೆಲ್ಲಾ ಒಪ್ಪಿಕೊಳ್ಳಲೇ ಬೇಕಾಗಿದೆ. ಇದಕ್ಕೆಲ್ಲಾ ಲಾಕ್ಡೌನ್ ಸಡಿಲಿಕೆಯೇ ಕಾರಣವೆನ್ನುವುದು ಸತ್ಯಾಂಶ.

ಈಗ ದೇಶದಲ್ಲಿ ದಿನವೊಂದಕ್ಕೆ 8000ಕ್ಕೂ ಅಧಿಕ ಸೋಂಕು ದಢಗೊಳ್ಳುತ್ತಿರುವ ಕಾಲದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸೋಂಕಿನೊಂದಿಗೆ ಬದುಕಲು ಕಲಿಯಬೇಕು ಎಂಬ ಪಾಠ ಹೇಳಿಕೊಡುತ್ತಿರುವುದು ತಲೆ ಮೇಲೆ ಕೈ ಇಟ್ಟುಕೊಳ್ಳುವ ಪರಿಸ್ಥಿತಿ ತಂದೊಡ್ಡಿದೆ. ದೇಶದಾದ್ಯಂತ ಈಗಾಗಲೇ 200 ರೈಲುಗಳ ಸಂಚಾರಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಇನ್ನೂ ಕೂಡ ವಿದೇಶಗಳಲ್ಲಿರುವ ಭಾರತದ ಮೂಲ ವಾಸಿಗಳಿಗೆ ಲೋಹದ ಹಕ್ಕಿಗಳ ವಿಶೇಷ ಹಾರಾಟಕ್ಕೆ  ಅನುಮತಿ ನೀಡಲಾಗುತ್ತಿದೆ. ಬಸ್‌ಗಳ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಟ್ರಾವೆಲಿಂಗ್ಸ್ನಿಂದ ಸೋಂಕನ್ನು ಸರ್ಕಾರಗಳು ತಮ್ಮ ತಮ್ಮ ರಾಜ್ಯ, ಜಿಲ್ಲೆಗಳಿಗೆ  ಉಚಿತವಾಗಿ ಆಮದು, ರಫ್ತು ಮಾಡಿಕೊಳ್ಳುತ್ತಿವೆಯಾ..? ಎಂಬ ಆತಂಕ ಜನರಲ್ಲಿ ಹೆಚ್ಚಾಗಿದೆ.

ಇತ್ತ, ರಾಜ್ಯ ಸರ್ಕಾರದಲ್ಲಿ ಮಹಾರಾಷ್ಟ್ರದಿಂದ ಬರುವವರನ್ನು ಹೊರತು ಪಡಿಸಿ ಯಾರಿಗೂ ಸರ್ಕಾರಿ ಕ್ವಾರಂಟೈನ್ ಮಾಡಲಾಗುವುದಿಲ್ಲ, ಹೋಮ್ ಕ್ವಾರಂಟೈನ್ ಅಲ್ಲಿರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಮಾತ್ರವಲ್ಲದೇ, ಸರ್ಕಾರಿ ಕ್ವಾರಂಟೈನ್ ಕೂಡ ಏಳು ದಿನಗಳಿಗೆ ಇಳಿಸಲಾಗಿದೆ. ಈಗಾಗಲೇ, ಹಲವೆಡೆ ವರದಿಗಳು ಬರುವ ಮುನ್ನವೇ ಏಳುದಿನಗಳ ಸರ್ಕಾರಿ ಕ್ವಾರಂಟೈನ್ ಪೂರೈಸಿದ ಅಂತರಾಜ್ಯ, ಅಂತರಾಷ್ಟ್ರದಿಂದ ಬಂದ ನಾಡಿನ ಮೂಲ ವಾಸಿಗಳನ್ನು ಮನೆಗೆ ಕಳುಹಿಸಿದ ಮರುದಿನ ಸೋಂಕು ದೃಢಗೊಂಡ ಕಾರಣದಿಂದ ಅವರಿರುವ  ಊರು ಕೇರಿಗಳನ್ನು ಸೀಲ್ ಡೌನ್ ಮಾಡಿದ ಸಾಕಷ್ಟು ಉದಾಹರಣೆಗಳೂ ಕಂಡು ಬಂದಿವೆ. ಸ್ಥಳಿಯರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ. ಹೀಗೆ, ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವೂ ಕೂಡ ದಿನಕ್ಕೊಂದು ಯಡವಟ್ಟು ಸೃಷ್ಟಿಸಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.

ಈ ನಡುವೆ ಸೋಂಕಿನ ಪತ್ತೆ ಪರೀಕ್ಷೆಗಳು ಸರಿಯಾಗಿ ನಡೆಯುತ್ತಿಲ್ಲವೇ..? ವರದಿಗಳನ್ನು ಮುಚ್ಚಿ ಹಾಕಲಾಗುತ್ತಿದೆಯೆ..? ರೋಗ ಹರಡುತ್ತಿರುವ ಮೂಲ ಕಾರಣವನ್ನು ಪತ್ತೆ ಹಚ್ಚುವಲ್ಲಿ ಸರ್ಕಾರ, ಆರೋಗ್ಯ ಇಲಾಖೆ ವಿಫಲವಾಗಿವೆಯೇ ಎಂಬೆಲ್ಲಾ ಪ್ರಶ್ನೆಗಳು ಜನ ಸಾಮಾನ್ಯರನ್ನು ಕಾಡಲಾರಂಭಿಸಿವೆ.

ಈಗ ತನ್ನ ಕೈ ಸುಟ್ಟುಕೊಂಡ ಮೇಲೆ ‘ಲಿವಿಂಗ್ ವಿಥ್ ಕೊರೋನಾ’ ಎಂದು ಹೇಳುತ್ತಿರುವ ಸರ್ಕಾರಕ್ಕೆ ಲಾಕ್ಡೌನ್ ಯಾಕೆ ಘೋಷಿಸುವ ಅಗತ್ಯ ಆರಂಭದಲ್ಲಿತ್ತು..? ಹಸಿವು, ಬಡತನದಲ್ಲಿ ಒಂದಿಷ್ಟು ಮಂದಿ ಹೆಣವಾಗಲಿ ಎಂಬ ಕಾರಣಕ್ಕಾ..? ಆರ್ಥಿಕ ಸಮಸ್ಥಿತಿ ತರುವುದಕ್ಕೆ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಸರ್ಕಾರಕ್ಕೆ ಯಾವ ಘನತೆ ಇದೆ..? ಎಂಬುವುದನ್ನು ಕೇಳುವಂತಾಗಿದೆ. ಕ್ವಾರಂಟೈನ್, ಲಾಕ್ಡೌನ್ ನ ಮೂಲ ಆಶಯವನ್ನೇ ಅಡಿಮೇಲು ಮಾಡಿದ ಸರ್ಕಾರದ ಹೊಣೆಗೇಡಿ ಚಾಣಾಕ್ಷತನಕ್ಕೆ ಏನನ್ನಬೇಕು..?
-ಶ್ರೀರಾಜ್ ವಕ್ವಾಡಿ


Sunday, May 31, 2020

ಶಿಕ್ಷಣ ಇಲಾಖೆಯ ಯಡವಟ್ಟುಗಳು ಮತ್ತು ವಿದ್ಯಾರ್ಥಿಗಳು..!



ಕೊರೋನಾ ವೈರಸ್ ಇಡೀ ವಿಶ್ವಕ್ಕೆ ವಿಶ್ವವನ್ನೇ ಹೈರಾಣಾಗಿಸಿದೆ. ಶಾಲಾ, ಕಾಲೇಜು ಆರಂಭ ಮತ್ತು ಬಾಕಿ ಉಳಿದಿರುವ ಪರೀಕ್ಷೆಗಳ ಬಗ್ಗೆ ಶಿಕ್ಷಣ ಇಲಾಖೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಅಕ್ಷರಶಃ ವಿದ್ಯಾರ್ಥಿಗಳ, ಉಪನ್ಯಾಸಕರ ಪಾಲಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಈಗಾಗಲೇ ಶೈಕ್ಷಣಿಕ ಪರಿವರ್ತನೆಯ ಬಗ್ಗೆ ಸರ್ಕಾರದ ಮತ್ತು ಶಿಕ್ಷಣ ಇಲಾಖೆಯ ಗಮನಕ್ಕೆ ಶಿಕ್ಷಣ ತಜ್ಞರು ಗಮನಕ್ಕೆ ತಂದಿದ್ದಾರೆ. ಆದರೂ ಶಿಕ್ಷಣ ಇಲಾಖೆ ತೆಗೆದುಕೊಳ್ಳುತ್ತಿರುವ ಧಾವಂತದ ನಿರ್ಧಾರಗಳು ವಿದ್ಯಾರ್ಥಿಗಳಿಗೆ ಒತ್ತಡ ಅನ್ನಿಸುತ್ತಿರುವುದಂತೂ ಅಪ್ಪಟ ಸತ್ಯ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗಳು ಗೊಂದಲದಿಂದ ಕಾರ್ಯ ನಿರ್ವಹಿಸುತ್ತಿದೆ ಅಂತನ್ನಿಸುತ್ತಿದೆ. ಶೈಕ್ಷಣಿಕ ವಲಯದಲ್ಲಿ ಇದು ಅತಿ ಸಹಜವಾದ ಚರ್ಚೆಗೆ ಒಳಗಾಗಿದೆ ಮತ್ತು ಹಾಸ್ಯಾಸ್ಪದಕ್ಕೂ ಕಾರಣವಾಗಿದೆ.

80% ಪಾಠ ಆಗಿದ್ದು ಮಾಧ್ಯಮಗಳ ಕ್ಯಾಮೆರಾಕ್ಕೆ ಮಾತ್ರ..!
ಮಾರ್ಚ್ ತಿಂಗಳ ಅಂತ್ಯದಲ್ಲೇ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ ಅಶ್ವಥ್ ನಾರಾಯಣ ಅವರು ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಸಿಲೇಬಸ್ ಈಗಾಗಲೇ ಶೇಕಡಾ 80 ರಷ್ಟು ಮುಗಿದಿದೆ ಎಂದು ಹೇಳುತ್ತಿದ್ದರು. ಆದರೇ, ವಾಸ್ತವ ಬೇರೆಯೇ ಆಗಿತ್ತು. ರಾಜ್ಯದ ಉನ್ನತ ಶಿಕ್ಷಣ ಸಚಿವರು ನೀಡುತ್ತಿರುವ ಹೇಳಿಕೆಗಳು ಮಾಧ್ಯಮಗಳ ಕ್ಯಾಮೆರಾಗಳಿಗಾಗಿ ಇತ್ತು ಎನ್ನುವುದು ಆಮೇಲೆ ಬೆಳಕಿಗೆ ಬಂತು. ‘ಯೂನಿವರ್ಸಿಟಿಗಳ ಒತ್ತಡದಿಂದ ಕಾಲೇಜಿನ ಆಡಳಿತ ಸಂಸ್ಥೆಗಳು 80% ಪಾಠ ಮುಗಿದಿದೆ ಅಂತ ಸುಳ್ಳು ಹೇಳುತ್ತಿದೆ. ಇನ್ನೂ ಕೂಡ 50% ಸಿಲೇಬಸ್ ಕಂಪ್ಲೀಟ್ ಆಗಬೇಕಿದೆ’ ಎಂದು ಟಿವಿ ಮಾಧ್ಯಮಗಳಲ್ಲಿ ರಾಜ್ಯಾ ವ್ಯಾಪಿ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿರುವ ಉದಾಹರಣೆ ನಮ್ಮ ಮುಂದಿದೆ.

ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಮೇಲೆ ಪರಿಣಾಮ
ವಿದ್ಯಾಭ್ಯಾಸದಲ್ಲಿ  ಆಸಕ್ತಿ ಹೊಂದಿದ  ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ. ಹಲವಾರು ವಿದ್ಯಾರ್ಥಿಗಳು ಉಪನ್ಯಾಸಕರ ಸಲಹೆಗಳನ್ನು ವೇದವಾಕ್ಯದಂತೆ ಪರಿಪಾಲಿಸುವ ಮನಸ್ಥಿತಿ ಹೊಂದಿರುತ್ತಾರೆ. ಎಷ್ಟೋ ವಿದ್ಯಾರ್ಥಿಗಳು ಪರೀಕ್ಷೆ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸಕರನ್ನೇ ಅವಲಂಭಿಸಿ ಇರುತ್ತಾರೆ. ಪ್ರತ್ಯಕ್ಷ ಸಲಹೆ, ಮಾರ್ಗದರ್ಶನಕ್ಕಾಗಿ ಹೊಂದಿಕೊಂಡವರಾಗಿರುತ್ತಾರೆ. ಹಾಗಿರುವ ಸಂದರ್ಭದಲ್ಲಿ, ಶಿಕ್ಷಣ ಇಲಾಖೆ ದಿನಕ್ಕೊಂದು ಹೇಳಿಕೆ ನೀಡುವುದು, ಕಾಲೇಜು ಆರಂಭದ ಮತ್ತು ಪರೀಕ್ಷೆಯ ಸಮಯ ನಿಗದಿ ಮಾಡುವುದು, ಮತ್ತೆ ಮುಂದೆ ದೂಡುವುದು, ಮತ್ತೆ ಅದರಲ್ಲಿ ಗೊಂದಲ ಸೃಷ್ಟಿ ಮಾಡುವುದು ನಿರಂತರವಾದಾಗ ವಿದ್ಯಾರ್ಥಿಗಳು ವಿಚಲಿತರಾಗುವುದು ಸಹಜ.



ಆನ್‌ಲೈನ್ ತರಗತಿಗಳು ಹರಕೆ ಬಲಿ ಸಂದಾಯ..!
ಆನ್‌ಲೈನ್ ತರಗತಿಗಳಿಗೆ ಇಂಟರ್‌ನೆಟ್ ಸೇವೆಯ ಲಭ್ಯತೆಯ ನಿಖರತೆ ಇಲ್ಲ. ಸಿಲೇಬಸ್ ಕಂಪ್ಲೀಟ್ ಮಾಡುವ ತರಾತುರಿಯಲ್ಲಿ ಕೆಲವು ಉಪನ್ಯಾಸಕರು ಶಾಸ್ತçಕ್ಕೆ ಹರಕೆ ಬಲಿ ಸಂದಾಯ ಮಾಡುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ತಲುಪಿದೆ..? ಅರ್ಥವಾಗಿದೆಯಾ..? ಎಂಬ ಪ್ರಶ್ನೆಗಳು ಗಾಳಿಗೆ ತೂರಿ ಬಿಟ್ಟಂತಾಗಿದೆ. ಬಹುತೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ನೀಡಲು ಬಯಸಿದ ಯಾವುದೇ ಸೌಲಭ್ಯಗಳನ್ನು ತಲುಪಿಸುವಲ್ಲಿ ಇಲಾಖೆ ವಿಫಲವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಪ್ರಾಯೋಗಿಕ ತರಗತಿಗಳು ಮತ್ತು ರಿಸರ್ಚ್, ಪ್ರಾಜೆಕ್ಟ್ ವರ್ಕ್ಗಳ ಸ್ಥಿತಿ..?
ವಿಜ್ಞಾನ ವಿಷಯಗಳ ಪ್ರಾಯೋಗಿಕ ತರಗತಿಗಳು ಕೆಲವಂಶ ನಿಂತುಹೋಗಿವೆ. ಶಿಕ್ಷಣ ಇಲಾಖೆ ಆನ್‌ಲೈನ್ ಅಲ್ಲಿ ಮಾಡಿ ಪೂರೈಸಿ ಎನ್ನುತ್ತಿದೆ. ತರಗತಿ ಕೋಣೆಯಲ್ಲಿ ಕುಳಿತು ಪಾಠ ಕೇಳುವಾಗಲೇ ಅರ್ಥೈಸಿಕೊಳ್ಳಲಾಗದ ವಿದ್ಯಾರ್ಥಿಗಳ ಸ್ಥಿತಿ ಏನ..?
ಇನ್ನು, ಅಂತಿಮ ವರ್ಷದ ಸ್ನಾತಕೋತ್ತರ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ಎಲ್ಲಾ ವಿಷಯಗಳ ವಿದ್ಯಾರ್ಥಿಗಳಿಗೆ ರಿಸರ್ಚ್, ಪ್ರಾಜೆಕ್ಟ್ ವರ್ಕ್ಗಳು ಅರ್ಧರ್ಧಕ್ಕೆ ನಿಂತು ಹೋಗಿವೆ. ಅವುಗಳ ಸ್ಥಿತಿಗತಿಗಳು ಏನು..? ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಶಿಕ್ಷಣ ಇಲಾಖೆಗೆ ಏನು ಸಾಧ್ಯ..?
ಅಂತಿಮ ಘಟ್ಟದಲ್ಲಿರುವ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ಭವಿಷ್ಯವನ್ನು ಖಾಲಿ ಖಾಲಿಯಾಗಿ ಕಾಣಿಸುವಂತೆ ಮಾಡಿದೆ ಎನ್ನುವುದು ಪದಶಃ ಹೌದು. ಈ ಹಂತದಲ್ಲಿರುವ ಎಷ್ಟೋ ವಿದ್ಯಾರ್ಥಿಗಳು ಈಗ ಉದ್ಯೋಗ ಕಂಡುಕೊಳ್ಳುವುದಕ್ಕೆ ತುದಿಗಾಲಲ್ಲಿ ಇದ್ದಾರೆ. ಏಪ್ರಿಲ್, ಮೇ, ಜೂನ್ ತಿಂಗಳುಗಳಲ್ಲಿ ಜಾಬ್ ವೇಕನ್ಸಿಗಳನ್ನು ನೋಡಿಕೊಂಡು ಭವಿಷ್ಯ ಕಂಡುಕೊಳ್ಳುತ್ತಿದ್ದರು. ಆದರೇ, ಈ ಕೊರೋನಾ ವೈರಸ್‌ನ ಕಾರಣವಾಗಿ ಎಲ್ಲವೂ ಅಡಿಮೇಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಇನ್ನೂ ಸಂಪೂರ್ಣವಾಗಿ ಲಾಕ್ಡೌನ್ ತೆರವು ಮಾಡುವುದಕ್ಕೆ ಸಾಧ್ಯವಾಗದೇ ಇರುವ ಸ್ಥಿತಿಯಲ್ಲಿ, ದಿನೇ ದಿನೇ ಕೊರೋನಾ ಸೋಂಕು ದೃಢಗೊಂಡವರ ಸಂಖ್ಯೆ ಹೆಚ್ಚಾಗುತ್ತಿರುವ ಈ ಅತಂತ್ರ ಸ್ಥಿತಿಯಲ್ಲಿಯೂ ಶಿಕ್ಷಣ ಇಲಾಖೆ, ಬರುವ ತಿಂಗಳಲ್ಲಿ ಪರೀಕ್ಷೆ ಮಾಡುತ್ತೇವೆ ಅಂತ ಹೇಳುತ್ತಾ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿರುವುದು ಕೊಲೆ ಮಾಡಿದಷ್ಟೇ ಅಪರಾಧ ಎನ್ನುವುದರಲ್ಲಿ ಏನೂ ತಪ್ಪಿಲ್ಲ.

ಒಂದೇ ಆ ಎಲ್ಲಾ ವಿದ್ಯಾರ್ಥಿಗಳ ಈ ಹಿಂದಿನ ಪರೀಕ್ಷೆಗಳಲ್ಲಿನ ಕಾರ್ಯಕ್ಷಮತೆ ನೋಡಿ ಉತ್ತೇಜಿಸಬಹುದು. ಅಥವಾ ಒಂದು ವೇಳೆ ಪರೀಕ್ಷೆ ನಡೆಸಲೇ ಬೇಕು ಅಂತಾದರೇ ಪರೀಕ್ಷೆಗಳ ಮಾದರಿಯಲ್ಲಿ ಬದಲಾವಣೆ ತರುವುದು ಅತ್ಯಗತ್ಯ. ಅಥವಾ ಓಪನ್ ಬುಕ್ ಎಕ್ಸಾಂ ಮಾಡುವುದು ಉತ್ತಮ. ಇದು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಪಾಲಿಗೆ ಏನೋ ಒಂದು ರೀತಿಯಲ್ಲಿ ಉತ್ತೇಜಿಸಿದಂತಾಗುತ್ತದೆ.



 ಸದ್ಯಕ್ಕೆ ಜುಲೈ ತನಕ ಶಾಲಾ ಕಾಲೇಜು ತೆರೆಯುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಒಟ್ಟಿನಲ್ಲಿ ಭವಿಷ್ಯದ ಒತ್ತಡದಲ್ಲಿರುವ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ಇಲಾಖೆ ಇನ್ನು ಮುಂದಾದರೂ ಯಡವಟ್ಟು ಸೃಷ್ಟಿಸದೇ, ಸಮಾಧಾನ ಉಂಟು ಮಾಡುವ ನಿರ್ಣಯವನ್ನು ಕೈಗೊಳ್ಳಬೇಕಾಗಿದೆ.
-ಶ್ರೀರಾಜ್ ವಕ್ವಾಡಿ  

Friday, May 29, 2020

‘ಹೆಸರು’ ಎಲ್ಲವನ್ನೂ ನಿರ್ಧರಿಸುವುದೆಂದರೇ...



 ಸಾಧನೆಗಿಲ್ಲದ ಮಾನ್ಯತೆ ಇಂದು, ಒಂದು ಹೆಸರು, ಸರ‍್ನೇಮ್, ಜಾತಿ, ಧರ್ಮ ತಂದುಕೊಡುತ್ತದೆ. ಅದೇ ಹೆಸರು, ಸರ‍್ನೇಮ್, ಜಾತಿ, ಧರ್ಮ ಎನ್ನುವುದು ಆ ವ್ಯಕ್ತಿಯನ್ನು ವಿನಾಕಾರಣ ದ್ವೇಷಿಸುವಂತೆ ಅಥವಾ ದೂರವಿಡುವಂತೆ ಮಾಡುತ್ತದೆ ಅಂದರೇ ಅದಕ್ಕಿಂತ ದೊಡ್ಡ ದುರಂತ ಈ ಪ್ರಪಂಚದಲ್ಲಿಲ್ಲ. ಅದಕ್ಕಿಂತ ಹೆಚ್ಚು ಈ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಜಾತಿಗೆ, ಧರ್ಮಕ್ಕೆ ಸೇರಿದವರಿಗೆ, ಇವರು ಈ ಪಕ್ಷಕ್ಕೆ ಸೇರಿದವರು, ಈ ಸಿದ್ಧಾಂತಕ್ಕೆ ಸೇರಿದವರು ಅಂತ ಹಣೆಗೆ ಲೇಬಲ್ ಅಂಟಿಸುವ ಮನೋಧೋರಣೆ ಸಾಮಾಜಿಕ ವಲಯದಲ್ಲಿ ಸೃಷ್ಟಿಯಾಗಿದೆ ಎನ್ನುವುದು ಇನ್ನೂ ಭಯ ಹುಟ್ಟಿಸುತ್ತದೆ. ದ್ವೇಷಕ್ಕೆ ಜಾತಿ, ಧರ್ಮಗಳು ಈ ಸಮಾಜದಲ್ಲಿ ಹೀಗೊಂದು ಮುಖ ಮಾಡಿಕೊಡುತ್ತದೆ ಅಂತ ನಾನಂತೂ ಅಂದುಕೊಂಡಿರಲಿಲ್ಲ.

ಒಂದು ಹೆಸರು, ಜಾತಿ, ಧರ್ಮ, ಸರ‍್ನೇಮ್ ಒಬ್ಬ ವ್ಯಕ್ತಿಗೆ ಕಳಂಕ ಹುಟ್ಟಿಸುತ್ತದೆ ಅಂತಾದರೇ, ಅವುಗಳಿದ್ದು ಏನಾಗಬೇಕಿದೆ..? ಒಂದು ಹೆಸರು, ಅದು ಇನ್ನೊಬ್ಬನಿಗೆ ಕತ್ತಿ, ಚೂರಿ, ಪಿಸ್ತೂಲು, ತಲ್ವಾರು ಹಿಡಿಯುವಂತೆ ಪ್ರೇರಣೆ ನೀಡುತ್ತದೆ ಅಂತಾದರೇ, ಈ ಸಮಾಜ ಎಂತಹ ಸ್ಥಿತಿಯಲ್ಲಿದೆ ಎನ್ನುವುದನ್ನು ನಾವೊಂದಿಷ್ಟು ಚಿಂತೆ ಮಾಡಬೇಕಿದೆ.

ಕವಿಗಳು, ಸಂತರು, ಜ್ಞಾನಿಗಳು, ವಿದ್ವಾಂಸರೆಲ್ಲರೂ ‘ಮಾನವ ಧರ್ಮ’ವೇ ಶ್ರೇಷ್ಟವೆಂದು ಹೇಳಿಯಾಯಿತು. ಮಾನವನ ಉದ್ಧಾರಕ್ಕೆ, ವಿಕಾಸಕ್ಕೆ ಧರ್ಮ, ಜಾತಿಯ ಚೌಕಟ್ಟು ಬೇಕು. ಆದರೇ, ಅದು ರಾಜಕೀಯ, ಸಿದ್ಧಾಂತಗಳಲ್ಲಿ ನಲುಗಿ ಹೋಗಿ ದ್ವೇಷ ಬೇಳೆಸಿಕೊಳ್ಳುವುದಕ್ಕೆ ಪ್ರೇರೇಪಿಸುತ್ತಿರುವುದು ವಿಷಾದನೀಯ. ಈಗಿನ ಸಮಾಜ ಜಾತಿ, ಧರ್ಮಗಳು ಹಿಂಸಾಚಾರಕ್ಕೆ ಇಳಿದು ಮಾನವ ಧರ್ಮವನ್ನು ಹಾಳು ಮಾಡಿ ಮಾನವೀಯತೆಯನ್ನೇ ಧಿಕ್ಕರಿಸುವ ಮಟ್ಟಿಗೆ ಬಂದಿದೆ ಎಂದರೂ ತಪ್ಪಿಲ್ಲ.

ಜಾತಿ, ಧರ್ಮ ಕರ್ಮಗಳ ಪಂಥವಾದಗಳು, ಸಿದ್ಧಾಂತವಾದಗಳು ಸಾಮಾಜಿಕ ಸಮಸ್ಥಿತಿಯನ್ನು ಕಳೆದು ಹಾಕುವುದರಲ್ಲಿ ಪ್ರಧಾನ ಕಾರ್ಯ ನಿರ್ವಹಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಧರ್ಮದ ಸಾರವನ್ನು ಅಳವಡಿಸಿಕೊಳ್ಳುವುದು ಧರ್ಮ. ಸತ್ಯ, ಅಹಿಂಸೆ, ನೀತಿ, ನ್ಯಾಯ ಧಾರಣೆ ಮಾಡಿಕೊಳ್ಳುವುದು ಎಲ್ಲಾ ಧರ್ಮಗಳ ಸಾರ. ನೀನು ಬದುಕು, ಎಲ್ಲರನ್ನೂ ಬದುಕಿಸು ಎನ್ನುವುದೇ ನಿಜ ಧರ್ಮ ಹೊರತು, ಜಾತಿ, ಹೆಸರುಗಳ ಆಧಾರದಲ್ಲಿ ಆತನನ್ನು ನಿರ್ಧರಿಸುವುದು ಧರ್ಮವಲ್ಲ. ಬದುಕುವುದೇ ಒಂದು ಧ್ಯಾನ. ಜೀವಿಸುವುದು, ಜೀವನ ಶೈಲಿ ಅದರ ಒಂದು ಮಗ್ಗಲು.

ಒಂದು ಜಾತಿಯ ವಿಚಾರದಿಂದ, ಹೆಸರಿನಿಂದ, ಧರ್ಮದ ಸಿದ್ಧಾಂತಗಳಿಂದ ಜನ ಗಲಭೆ ಎಬ್ಬಿಸುತ್ತಾರೆಂದರೇ, ಇನ್ನು ಹೆಚ್ಚು ಕಾಲ ಈ ವ್ಯವಸ್ಥೆಗೆ ಉಳಿಗಾಲವಿಲ್ಲ ಎನ್ನುವುದು ಸ್ಪಷ್ಟ. ಮಹಾತ್ಮರ ಧರ್ಮದ ವಿವರಣೆಯನ್ನು ಕಸದ ತೊಟ್ಟಿಗೆ ತಳ್ಳಿ ಧರ್ಮಾಂಧತೆಯನ್ನು ಬೆಳೆಸುವುದೇ ಕೆಲವರ ಕಾಯಕವಾಗಿ ಹೋಗಿದೆ. ರಾಜಕೀಯ ಸ್ವಾರ್ಥದ ದುರುದ್ದೇಶಕ್ಕಾಗಿ ಈ ಜಾತಿ, ಧರ್ಮಗಳು ಗಲಭೆ, ಕೋಮು ದಳ್ಳುರಿಯ ಹೆಸರಿನಲ್ಲಿ ಬೆಂದು ಹೋಗುತ್ತಿವೆ. ಆ ಕಳಂಕವನ್ನೇ ಅಪ್ಪಿಕೊಂಡು ಇಂದು ಮಾನವ ಧರ್ಮವನ್ನು ಬಿಟ್ಟು ಸೃಷ್ಟಿಸಿಕೊಂಡ ಯಾವುದೋ ಜಾತಿಯಲ್ಲಿ, ಧರ್ಮದಲ್ಲಿ ಹುಟ್ಟುವ ಮಗುವೊಂದು ಬೆಳೆಯುತ್ತದೆ. ಒಂದು ಮಗು ತನಗಿಟ್ಟ ಹೆಸರಿನಿಂದ, ಆ ಹೆಸರಿನ ಜೊತೆಗಿರುವ ಜಾತಿಯಿಂದ, ಆ ಜಾತಿ ಗುರುತಿಸಲ್ಪಡುವ ಧರ್ಮದಿಂದ ಈ ಸಮಾಜದಲ್ಲಿ ಇಂದು ಭಯದಿಂದ ಬದುಕುತ್ತದೆ ಅಂತಾದರೇ, ಸಮಾಜ ಎಂತಹ ದುಸ್ಥಿತಿಯಲ್ಲಿದೆ ಎನ್ನುವುದನ್ನು ನೀವೆ ಊಹಿಸಿಕೊಳ್ಳಿ.

ಒಂದು ಜಾತಿ ಅಥವಾ ಧರ್ಮ ಪ್ರೀತಿಸಿದವರನ್ನು ದೂರ ಮಾಡುವುದಾದರೇ, ಒಂದು ಜಾತಿ ಅಥವಾ ಧರ್ಮ ಇಬ್ಬರ ನಡುವಿನ ಸ್ನೇಹಕ್ಕೆ ಧಕ್ಕೆ ಉಂಟು ಮಾಡುವುದಾದರೇ, ಒಂದು ಜಾತಿ ಅಥವಾ ಧರ್ಮ ಸಮಾಜದೊಳಗೆ ವಿಷಮ ಸ್ಥಿತಿ ಉಂಟು ಮಾಡುವುದಾದರೇ, ಆ ಜಾತಿ ಧರ್ಮ ಯಾಕೆ ಬೇಕು..? ಅಥವಾ ಇದು ನಿಜಕ್ಕೂ ನಾವಿವತ್ತು ಪಾಲಿಸುತ್ತಿರುವ ಜಾತಿ, ಧರ್ಮಗಳೇ ಹೇಳಿಕೊಟ್ಟಿದ್ದಾ..? ಅಥವಾ ಬದಲಾಗಬಾರದ ರೀತಿಯಲ್ಲಿ ಬದಲಾದ ನಮ್ಮ ಮನಸ್ಥಿತಿಯೋ..? ಉಳಿಯಬೇಕಾದ ಸಮಾಜ ಇಂತಹ ಗಂಭೀರವಾದ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿದೆ.

ಹೆಸರೇ ಎಲ್ಲವನ್ನೂ ನಿರ್ಧರಿಸುವುದಾದರೇ...

ನಾಳೆ ಅಮ್ಮನ ಬಸಿರಿನಿಂದ ಹೊರಬರುವ ಮಗುವಿಗೆ ಆಯುಧಗಳ ಮೇಲೆ ನಿಂತಿರುವ ಜಾತಿ, ಧರ್ಮಗಳ ನೆರಳು ಬೀಳದಿರಲಿ. ಆ ಮಗು, ತನಗಿಟ್ಟ ಹೆಸರು ಮತ್ತು ಸರ‍್ನೇಮ್, ಜಾತಿಯ ಭಯವಿಲ್ಲದೆ ಬಾಳಿ ಬದುಕಲಿ.
-ಶ್ರೀರಾಜ್ ವಕ್ವಾಡಿ

Thursday, May 28, 2020

ನೀವಿನ್ನೂ ಕಾಣದಿರುವ ನಿಮ್ಮನ್ನು ನೋಡಿಕೊಳ್ಳಿ..!



‘ನಿಮ್ಮ ಬಗ್ಗೆ ಸ್ವಲ್ಪ ವಿವರಿಸಿ’ ಅಂತ ಯಾರಾದ್ರೂ ಕೇಳಿಕೊಂಡರೇ, ಕೆಲಹೊತ್ತು ನಾನು ನೀವು ಎಲ್ಲರೂ ಸಣ್ಣಕ್ಕೆ ನಕ್ಕು ತಬ್ಬಿಬ್ಬಾಗುತ್ತೇವೆ. ಹಾಗಾಗುವುದು ನಮ್ಮ ಮೇಲಿನ ಅಪನಂಬಿಕೆಯಿಂದಲೋ ಅಥವಾ ಗೊತ್ತಿಲ್ಲದೆಯೋ ಅಲ್ಲ. ಅದೊಂದು ಅನಿರ್ವಚನೀಯ ಭಾವ. ಒಮ್ಮೊಮ್ಮೆ ‘ನಮ್ಮ ಬಗ್ಗೆ ಇನ್ನೊಬ್ಬರಿಗೆ ಹೇಳಿ ಏನಾಗಬೇಕು..?’ ಅಂತ ಅನ್ನಿಸಬಹುದು. ಅದು ತಪ್ಪೇನಲ್ಲ. ನಿಮ್ಮೊಳಗೆ ಆತ್ಮಪ್ರಜ್ಙೆ. ಇದರೊಳಗಿರುವುದೇ ಮೀರುವ ಶಕ್ತಿ. ‘ನೀವಂದ್ರೇ ಏನು..?’ ಎನ್ನುವ ಪ್ರಶ್ನೆಗೆ ಕಾಣುವ ಉತ್ತರದ ಮೂಲ.

ಹೀಗೆ ಅನ್ನಿಸುವವರಿಗೆಲ್ಲರಿಗೂ ತಮ್ಮ ಬಗ್ಗೆ ಸಂಪೂರ್ಣವಾಗಿ ಗೊತ್ತಿದೆ ಅಂತಲ್ಲ. ಎಷ್ಟೋ ಜನರಿಗೆ ಅವರವರ ಬಗ್ಗೆ, ಅವರವರ ಶಕ್ತಿ, ಸಾಮರ್ಥ್ಯದ ಬಗ್ಗೆ ತಿಳಿದಿರುವುದಿಲ್ಲ. ಹಾಗಾದ್ರೇ, ಗೊತ್ತಾಗುವುದಕ್ಕೆ ಏನು ಮಾಡಬೇಕು..?

ನಿನ್ನೊಳಗೆ ನೀನೇ ಇಲ್ಲದಿದ್ದರೇ, ನಿನ್ನನ್ನು ನೀನು ಕಾಣುವುದಕ್ಕೆ ಖಂಡಿತ ಸಾಧ್ಯವಿಲ್ಲ.

ಮತ್ತೊಂದೇನೆಂದರೇ, ನಿಮ್ಮೊಳಗೆ ನೀವೇ ಇಲ್ಲದಿದ್ದರೇ, ಬೇರೆಯವರು ನಿಮ್ಮನ್ನು ನಂಬುವುದಿರಲಿ, ನಿಮ್ಮನ್ನು ನೀವೇ ನಂಬುವುದಿಲ್ಲ. ನಿಮಗೆ ಗೊತ್ತಿಲ್ಲ, ನೀವೆಂದರೇ, ಕಾಣದೇ ಇರುವ ಅನಂತ ದೈತ್ಯ ಶಕ್ತಿ. ನಿಮ್ಮನ್ನು ನೀವು ಒಂದು ಹುಲ್ಲು ಕಡ್ಡಿಯಷ್ಟಾದರೂ ನಂಬದಿದ್ದರೇ, ನೀವು ನೀವಾಗಿಲ್ಲ ಅಂತರ್ಥ.

ನೀವೇ ನಿಮಗೆ ವಿರೋಧಿಯಂತೂ ಆಗೋದಕ್ಕೆ ಸಾಧ್ಯವಿಲ್ಲ. ನಿಮ್ಮ ಇರುವಿಕೆಯನ್ನು ವಿರೋಧಿಸಿಕೊಳ್ಳಬಹುದಷ್ಟೇ. ನಿಮ್ಮ ಬಗ್ಗೆ ನಂಬಿಕೆ ಇಲ್ಲದೇ ಇರುವುದು ನಿಮ್ಮನ್ನು ನೀವು ನಿಮ್ಮೊಳಗೆ ಕಂಡುಕೊಳ್ಳದೇ ಇರುವುದರಿಂದ ಅಷ್ಟೇ. ಎದುರಾಗುವ ಗುಡ್ಡೆ ಗಾತ್ರದ ಕಷ್ಟ, ದುಃಖಗಳಿಂದಲೇ ನಮ್ಮನ್ನು ನಾವು ನೋಡಿಕೊಳ್ಳಬೇಕು. ಆಗ ನೀವು ಖಂಡಿತ ಹೆಮ್ಮೆಯಿಂದ ನಿಮ್ಮ ಬಗ್ಗೆ ಹೇಳಿಕೊಳ್ಳುತ್ತೀರಿ. ನೀವೆಂದರೇ, ಏನೇನೋ ಅಲ್ಲ. ಎಲ್ಲವನ್ನೂ ಗೆಲ್ಲುವ ಶಕ್ತಿ.

ಬದುಕು ನೂಕುವುದಕ್ಕೆ, ನೆಮ್ಮದಿಯಿಂದ ಇರುವುದಕ್ಕೆ ನೀವು ಶಿವನನ್ನೋ, ಅಲ್ಲನನ್ನೋ, ಯೇಸುವನ್ನೋ ನಂಬಬೇಕಂತಿಲ್ಲ. ನಿಮ್ಮನ್ನು ನೀವು ನಂಬಿದರೆ ಸಾಕು..!
-ಶ್ರೀರಾಜ್ ವಕ್ವಾಡಿ

Wednesday, May 27, 2020

ಹೇಳತೀರದ ಬದುಕಿಗೆ ದೂರದಲ್ಲಿ ಹಿತ ನೀಡುವ ತೀರವಿದೆ..!




ಇನ್ನೂ ಕೂಡ ಅದೇಷ್ಟೋ ವಲಸೆ ಕಾರ್ಮಿಕರು ಅಲ್ಲಲ್ಲೇ ಇದ್ದಾರೆ. ನಡು ರಸ್ತೆಯಲ್ಲಿ, ಅದು ಯಾವುದೋ ಗೊತ್ತಿಲ್ಲದ ಊರಿನ ರೈಲ್ವೇ ಸ್ಟೇಷನ್‌ನಲ್ಲಿ ಇದ್ದು ತಮ್ಮ ಹುಟ್ಟೂರಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ವಲಸೆ ಕೂಲಿ ಕಾರ್ಮಿಕರ ಸಮಸ್ಯೆ ಹೇಳತೀರದು. ಸರ್ಕಾರ ಪ್ಯಾಕೇಜ್‌ಲ್ಲಿ ಸಾಫ್ಟ್ ಕಾರ್ನರ್ ಧೋರಣೆ ತೋರಿಸಿದ್ದು ಬಿಟ್ಟರೇ, ಇವರ ಪಾಲಿಗಾಗಲಿಲ್ಲ.

ನಡು ರಸ್ತೆಯಲ್ಲಿ ಶವವಾದವರು, ಬದುಕು  ಕಳೆದು ಕೊಂಡವರ ವಿಷಯವೆಲ್ಲಾ ಹಳೆಯದಾಗಿ ಹೋಗಿದೆ. ಅದೇಷ್ಟೋ ಕೂಲಿ ಕಾರ್ಮಿಕರು ದಾರಿಯಲ್ಲಿ ನಡೆದು ನಡೆದು ಸುಸ್ತಾಗಿ ಬಳಲಿ ಬೆಂಡಾಗಿ ಅಸುನೀಗಿದ್ದಾರೆ, ಕೊಳೆತ ಶವ ಪತ್ತೆಯಾದವು, ತೊಡೆ ಮೇಲೆ ತನ್ನ ಸ್ನೇಹಿತನ್ನು ಮಲಗಿಸಿಕೊಂಡು ಸಹಾಯ ಹಸ್ತ ಚಾಚುತ್ತಿರುವ ದೃಶ್ಯ ಕಂಡು ಬಂತು, ರಾತ್ರಿ ಬಸ್ ಸ್ಟ್ಯಾಂಡ್ನಲ್ಲಿ ಒಂಟಿ ವೃದ್ದೆಯೊಬ್ಬಳು  ‘ಜೇವಲಾ ದೆವುನ್ ಮಧತ್ ಕರಾ’ (ಊಟ ನೀಡಿ ಸಹಾಯ ಮಾಡಿ) ಅಂತ ಮರಾಠಿಯಲ್ಲಿ ಕೂಗಿ ಬೇಡಿದ ದೃಶ್ಯ ಕರುಳು ಹಿಚುಕಿಸಿತು. ರೈಲು ಚಲಿಸಲಾರಂಭಿಸಿದಾಗ ಮೆಟ್ಟಿಲಿಗೆ ಕಾಲಿಡಲಾಗದೇ ಅಲ್ಲಲ್ಲೇ ಉಳಿದುಕೊಂಡವರ ಪಾಡು ಮನ ಕಲುಕುವಂತೆ ಮಾಡಿತು. ಹೀಗೆ ಒಂದೇ ಎರಡೇ. ಲೆಕ್ಕಕ್ಕೆ ಸಿಕ್ಕವುಗಳೆಷ್ಟು..? ಸಿಗದೇ ಇದ್ದವುಗಳೆಷ್ಟು..? ವರದಿಯಾದವುಗಳೆಷ್ಟು..? ವರದಿಗೆ ಸಿಗದೇ ಉಳಿದವುಗಳೆಷ್ಟು..? ಉತ್ತರವಿಲ್ಲದ ಮೌನ.

ಅದೆಲ್ಲೋ ಹಳ್ಳಿ ಹಳ್ಳಿಗಳಲ್ಲಿ ಬದುಕು ಕಂಡುಕೊಳ್ಳುತ್ತಿದ್ದವರನ್ನು ನಗರಕ್ಕೆ ಕರೆತಂದಾತ ಇಲ್ಲಿ ನೀನು ಬೇಕಾದಷ್ಟು ಹಣ ಮಾಡಬಹುದೆಂದು ಭ್ರಮೆ ಹುಟ್ಟಿಸಿ ಅಲ್ಲೆಲ್ಲೋ ರಸ್ತೆ ಬದಿಗಳಲ್ಲಿ, ಚರಂಡಿಗಳ ಪಕ್ಕದಲ್ಲಿ, ಕೊಚ್ಚೆ ನೀರು ಹರಿಯುವ ಮೋರಿಗಳ ಅಕ್ಕಪಕ್ಕದಲ್ಲಿ ತಗಡು ಶೀಟು ಹಾಕಿ ವಾಸಕ್ಕೆ ನೆಲೆ ಮಾಡಿಕೊಟ್ಟು ಬೇಕಾದಾಗ ಬೇಕಾದ ಹಾಗೆ ದುಡಿಸಿಕೊಂಡ ಗುತ್ತಿಗೆದಾರ ಈಗ ಮಾತಾಡಿಸದೇ ಕೈ ತೊಳೆದುಕೊಂಡು ‘ನಾನು ನಿಮ್ಮ ಆಟದಲ್ಲಿ ಇಲ್ಲವೆಂದು’ ಹೊರನಡೆದ. ಆಡಳಿತ ಸರ್ಕಾರ ‘ಬಡವರ ಪರವಾಗಿ, ವಲಸೆ ಕಾರ್ಮಿಕರ ಪರವಾಗಿ ನಾವಿದ್ದೇವೆ’ ಅಂತ ಹೇಳಿದ್ದನ್ನು ರಸ್ತೆ ನಡುವೆ ಎಲ್ಲೋ ಶವವಾಗಿ ಹೋದವರೂ ಕೇಳಿಸಿಕೊಂಡಿದ್ದರು. ಯಾವ ಸರ್ಕಾರವೂ ಪ್ರಾಮಾಣಿಕವಾಗಿ ನೆರವಿಗೆ ಬಂದಿಲ್ಲ. ನಿರೀಕ್ಷೆ ಹುಟ್ಟಿಸಿ ಬದುಕನ್ನೇ ಕಿತ್ತುಕೊಂಡರು. ಅವರ ಭವಿಷ್ಯದ ಚಿಂತನೆಗೆ ಕಂಬನಿಯೊಂದೇ ಸದ್ಯಕ್ಕೆ ಕಾಣುತ್ತಿರುವ ಉತ್ತರ.

ಅವರ ಬೇಡಿಕೆಯೊಂದೇ, ಅವರವರ ಊರಿಗೆ ಹೋಗಬೇಕಾದದ್ದು ಅಷ್ಟೇ. ವಿದೇಶಗಳಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ಲೋಹದ ಹಕ್ಕಿಯಲ್ಲಿ ಕರೆಸಿಕೊಂಡು ಸಕಲ ಸೌಲಭ್ಯಗಳೊಂದಿಗೆ ಕ್ವಾರಂಟೈನ್ ಮಾಡುವ ಸರ್ಕಾರಕ್ಕೆ ರಸ್ತೆಗಳಲ್ಲಿ ನಡೆದು ಹೋಗುತ್ತಾ ಪಾದದ ಚರ್ಮ ಸುಲಿಸಿಕೊಂಡ ವಲಸೆ ಕಾರ್ಮಿಕರ ಕಣ್ಣೀರು ಕಾಣಿಸುವುದೇ ಇಲ್ಲ. ‘ಸರ್ಕಾರ ಕಲ್ಪಿಸಿದ ಉಚಿತ ರೈಲು ಸೇವೆ ಅಂತ  ಶ್ರಮಿಕ ರೈಲಿನಲ್ಲಿ ತಮ್ಮೂರಿಗೆ ಮರಳುವ ಆಸೆಗಣ್ಣಿನಿಂದ ‘ಸೇವಾ ಸಿಂಧು’ವಿನಲ್ಲಿ ಆನ್‌ಲೈನ್ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡು, ಪೋಲೀಸ್ ಠಾಣೆಯಲ್ಲಿ ಫಾರ್ಮ್ ಸಲ್ಲಿಸಿದ್ದರೂ, ಅದನ್ನು ಎಷ್ಟೋ ಭಾರಿ ವಿಚಾರಿಸಿದ್ದರೂ, ಅಧಿಕಾರಿಗಳು ಹೇಳಿದ್ದೆಲ್ಲವನ್ನೂ ಮಾಡಿದರೂ ಕೂಡ ಪೋಲಿಸರು ದಬಾಯಿಸಿ ಕಳುಹಿಸಿದರು, ಹಾಗಾಗಿ ಅನಿವಾರ್ಯವಾಗಿ ನಾವು ನಡೆದುಕೊಂಡೇ ಊರಿಗೆ ಮರಳಲು ಮಂದಾದೆವು’ ಅಂತ ಅದೆಷ್ಟೋ ವಲಸೆ ಕಾರ್ಮಿಕರು ದಾರಿ ಮಧ್ಯದಲ್ಲಿ ಮಾಧ್ಯಮ ವರದಿಗಾರರು ಕ್ಯಾಮೇರಾ ಹಿಡಿದು, ಲೋಗೋ ಅವರ ಮುಖದೆದುರಿಗೆ ಇಟ್ಟಾಗ ಹೇಳಿಕೊಂಡಿದ್ದು ಸರ್ಕಾರದ ಅವ್ಯಸ್ಥೆಯನ್ನು ಬಯಲು ಮಾಡಿತು. ಸರ್ಕಾರ ಕೆಳವರ್ಗವನ್ನು ಯಾವ ಮಟ್ಟಿಗೆ ಕಂಡುಕೊಳ್ಳುತ್ತದೆ ಎನ್ನುವುದನ್ನು ಹೇಳುವುದಕ್ಕೆ ಇದೊಂದೇ ಉದಾಹರಣೆ ಸಾಕಲ್ಲವೇ..?

ಹೀಗೆ ನಡೆದುಕೊಂಡೇ ತಮ್ಮ ಊರಿನ  ನಿರೀಕ್ಷೆಯಲ್ಲಿರುವವರು ಅದೆಷ್ಟು ಮಂದಿಯಿದ್ದಾರೋ ಗೊತ್ತಿಲ್ಲ. ಬದುಕು ಕಳೆದು ಕೊಂಡವರು ಎಷ್ಟಿದ್ದಾರೋ ಗೊತ್ತಿಲ್ಲ. ನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಅದಕ್ಕೆ ಉದಾಹರಣೆ ಎಂಬಂತೆ,  ಪಾಟ್ನಾದ ಬಿಹಾರದ ಮುಝಫರಪುರ್ ರೈಲ್ವೇ ಸ್ಟೇಷನ್‌ನಲ್ಲಿ ಎಳೆಗೂಸೊಂದು ತನ್ನ ತಾಯಿ ಮೇಲೆ ಹೊದಿಸಿದ ಮಗ್ಗುಲ ಹಾಸಿಗೆಯನ್ನು ಎಳೆಯುತ್ತಾ ತನ್ನ ಅಮ್ಮನನ್ನು ಎಬ್ಬಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಾರ್ಮಿಕರ ಅತಂತ್ರ ದುಸ್ಥಿತಿಯನ್ನು ಈ ದೃಶ್ಯ ಕಣ್ಣಿಗೆ ಕುಕ್ಕಿ ಕುಕ್ಕಿ ಹೇಳುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಶನಿವಾರ (23.05.2020) ಗುಜರಾತ್‌ನಿಂದ ತನ್ನ ಮಗುವಿನೊಂದಿಗೆ ರೈಲು ಹತ್ತಿದ ಆಕೆ ಹಸಿವಿನಿಂದ ಬಳಲಿದ್ದಳು. ಸೋಮವಾರ (25.05.2020) ಬಿಹಾರದ ಮುಝಫರ್‌ಪುರ್ ರೈಲ್ವೇ ಸ್ಟೇಷನ್ ತಲುಪುವಾಗ ಆಕೆ ಕುಸಿದು ಬಿದ್ದು ಅಸುನೀಗಿದ್ದಾಳೆ. ಆಕೆಯ ಮೃತ ದೇಹವನ್ನು ಹಾಗೆಯೇ ರೈಲ್ವೇ ಸ್ಟೇಷನಲ್ಲಿನ ಫ್ಲಾಟ್‌ಫಾರ್ಮ್ನಲ್ಲಿ ದುಪ್ಪಟ್ಟೆ ಹಾಸಿ ಕೆಲ ಹೊತ್ತುಗಳ ಕಾಲ ಮಲಗಿಸಿಲಾಗಿತ್ತು. ಆ ವಿಷಯದ ಪರಿವೇ ಇಲ್ಲದ ಕೂಸು ಅಮ್ಮನನ್ನು ಎಬ್ಬಿಸುವಂತೆ ಆ ದುಪ್ಪಟ್ಟೆಯನ್ನು ಎಳೆಯುತ್ತಿತ್ತು ಎಂದು ಸುದ್ದಿ ಮೂಲಗಳು ಹೇಳುತ್ತಿವೆ. ಇಂತಹ ಅದೇಷ್ಟೋ ಘಟನೆಗಳು ನಡೆಯುತ್ತಲೇ ಇವೆ. ಹಸಿವು, ನೀರಡಿಕೆಯಿಂದ ಮೃತಪಟ್ಟ ವಲಸೆ ಕಾರ್ಮಿಕರ ಪಟ್ಟಿ ಮಾಡಲು ಮುಂದಾದರೇ, ಆ ಪಟ್ಟಿ ಮಾರುದ್ದ ಬೆಳೆಯಬಹುದೇನೋ. ಸರ್ಕಾರ ಇನ್ನೂ ವಲಸೆ ಕಾರ್ಮಿಕರ ಪಾಲಿಗೆ ದಿವ್ಯ ನಿರ್ಲಕ್ಷ್ಯ ಧೋರಣೆಯನ್ನು ತೋರಿಸುತ್ತಿದೆ ಎನ್ನುವುದು ದೊಡ್ಡ ದುರಂತ.



ನಡೆದು ಸಾಗುತ್ತಿರುವವರಿಗೆ, ಅದೆಲ್ಲೋ ಗೊತ್ತಿಲ್ಲದ ಅರ್ಧ ಊರಿಗೆ ತಲುಪಿದವವರಿಗೆ, ಪಾದ ಸುಟ್ಟುಕೊಂಡವರಿಗೆ, ಆಹಾರಿಲ್ಲದೇ ಹೊಟ್ಟೆ ಬೆನ್ನಿಗಂಟಿಸಿಕೊಂಡವರಿಗೆ ಈ ಸರ್ಕಾರದ ಬಗೆಗಿರುವ ನಂಬಿಕೆಗಿಂತ ತಮ್ಮ ಕಾಲುಗಳ ಮೇಲೆ ಅಪಾರವಾಗಿ ನಂಬಿಕೆ ಹುಟ್ಟಿರಬಹುದು. ಹಾಗಾಗಿಯೇ, ತಮ್ಮೂರಿಗೆ ಮುಖ ಮಾಡಿ ಇನ್ನೂ ಸಾಗುತ್ತಿದ್ದಾರೆ..!
-ಶ್ರೀರಾಜ್ ವಕ್ವಾಡಿ  

Tuesday, May 26, 2020

ಕೊನೆ ಬರೆಯುವ ಕಾವ್ಯ



ಒಹ್
ನಾನು, ಸುಮ್ಮನೆ ನೋಡಿ 
ಕನಿಕರ ಪಡುತ್ತಿದ್ದೇನಷ್ಟೇ
ಅವರು ಮೈಲು ಮೈಲು 
ನಡೆದಿದ್ದಾರೆ...

ದೂರ ದೂರ ದೂರ 
ನೆಲದಲ್ಲೇ ನೆಲೆ ಕಳೆದುಕೊಂಡು 
ಜಗದ ಕಣ್ಣಿಗೆ ಬೀಳದಂತೆ 
ಬಿಸಿಲಾಯಿತೆಂದು ಕೂರದೆ,
ಇರುಳಾಯಿತೆಂದು ವಿರಮಿಸದೆ
ಗುಳೇ ಹೋಗುತ್ತಿದ್ದಾರೆ..! 

ಬೇರೆ ಎಲ್ಲಾ ಏತಕೆ...? 
ಸುಟ್ಟ ಮೈ, ಹರಿದ ರಕ್ತ ಸಾಲದೆ..!? 
ಇವರ ನೆತ್ತರು ಸುರಿಸಿ 
ಮಹಲು ಕಟ್ಟಿಸಿಕೊಂಡವರೆಲ್ಲಾ 
ಹವಾನಿಯಂತ್ರಿತ ಕೋಣೆಯೊಳಗೆ 
ವಿರಾಜಮಾನರಾಗಿದ್ದಾರೆ. 
ಇವರಿನ್ನೂ 
ವಿಚಿತ್ರ ಮೌನದ ದಾರಿಯಲ್ಲಿ 
ಬೆಂದ ಕಾಯವನ್ನು ಕಥಿಸುತ್ತಿದ್ದಾರೆ...! 

ಬದುಕೆಂದರೇ, ಕೊನೆ 
ಬರೆಯುವ ಕಾವ್ಯ
ತನುವೆಂದರೇ, ಕೃಶವಾಗಿ 
ಕರಗುವ ಭಾವ್ಯ..! 

ಏನೂ ಇಲ್ಲವಾಗಿ 
ಹೋದದ್ದಕ್ಕೆ 
ಎಲ್ಲವನ್ನೂ ಸೃಷ್ಟಿಸುವ 
ತಾಕತ್ತಿದೆ..‌! 
-ಕಾವ್ಯ ಬೈರಾಗಿ 
(ಶ್ರೀರಾಜ್ ವಕ್ವಾಡಿ)

Sunday, May 24, 2020

‘ಬೆಳಕು’ ಅಂದ್ರೆ ಇನ್ನೇನೋ ಅಲ್ಲ..!



ಕತ್ತಲೆ ಉಳಿದೆಲ್ಲವೂಗಳಿಗಿಂತ ಚುರುಕಾಗಿರುತ್ತದೆ. ಬಹುಬೇಗನೆ ಅದು ಆಕ್ರಮಿಸಿಕೊಳ್ಳುತ್ತದೆ. ಬೆಳಕು ಆರುವುದು ಮತ್ತು ಉರಿಯುವುದು ಕತ್ತಲೆಯಿಂದಲ್ಲ. ಬೆಳಕೆಂದರೇ  ಏನೇನೋ ಅಲ್ಲ. ನಿನ್ನೊಳಗಿನ ಆಶಾಭಾವ.

ಕತ್ತಲೆ ನಮ್ಮನ್ನು ಸುತ್ತುವರಿಯಲೇ ಬೇಕು. ಅದು ಖಂಡಿತವಾಗಿ ನಮ್ಮನ್ನು ಒಂದೊಮ್ಮೆ ಸುತ್ತುವರಿವುತ್ತದೆ. ಆಗಲೇ ನಮ್ಮ ಕನಸು, ಗುರಿ ಪೂರ್ಣವಾಗಿ, ಸ್ಪಷ್ಟವಾಗಿ ನೆನಪಾಗುವುದು. ಕತ್ತಲೆ ನಮಗೆ ಒಂದು ಅನಾಮತ್ತಾದ ದಿಗಿಲು ಹುಟ್ಟಿಸಬಹುದು. ಆದರೇ, ಅದು ನಮ್ಮ ಬದುಕಿಗೆ ಪೂರ್ಣವಿರಾಮ ಇಡುವಂತೆ ಮಾಡುವುದಿಲ್ಲ.

ಯಾವ ಕಣ್ಣಿಗೂ ತೋರದೇ ಇರುವಷ್ಟು ಇಲ್ಲಿ ಕತ್ತಲೆ ಇಲ್ಲ. ಮತ್ತು ನಿನ್ನ ಒಳಮನಸ್ಸಿಗೆ ಗಾಯವಾಗುವಷ್ಟು ಕೂಡ ಕತ್ತಲೆ ಇಲ್ಲ. ಹಾಗೊಂದುವೇಳೆ ಇದ್ದಿತ್ತಾಗಿದ್ದರೇ, ಆ ಕತ್ತಲೆಯನ್ನು ದಾಟಿ ಬಂದವರು ‘ಆ ಕತ್ತಲೆಯ ದಿನಗಳು ಒಂದಿಷ್ಟು ಬುದ್ದಿ, ಪಾಠ ತಿಳಿಸಿಕೊಟ್ಟಿತು’ ಅಂತ ಹೇಳುವುದಕ್ಕೆ ಸಾಧ್ಯವೇ ಇಲ್ಲ.

ನೀವು ನಂಬುವುದಾದರೇ ನಂಬಿ. ಇಲ್ಲವಾದರೇ ಬಿಡಿ. ಕತ್ತಲೆ ನಿಮ್ಮನ್ನು ಒಳ್ಳೆಯ ದಾರಿಯತ್ತ ಸಾಗುವಂತೆ ಮಾಡುವಷ್ಟು ಬೆಳಕು ಕೂಡ ಮಾಡುವುದಿಲ್ಲ. ‘ಕತ್ತಲೆ’  ಆ ಕ್ಷಣಕ್ಕೆ ಅಹಿತವಾದರೂ, ಮುಂದೊಂದು ದಿನ ‘ಹಾಗಾಗಿದ್ದರಿಂದಲೇ ಒಳ್ಳೆಯದಾಯಿತು’ ಅಂತ ನೀವು ಹೇಳಿಯೇ ಹೇಳುತ್ತೀರಿ. ಅದೇ ಕತ್ತಲೆಯ ವಿಶೇಷ.

ಕತ್ತಲಿರುವಾಗ ಅದರ ಧ್ವನಿ ಕೇಳಿಸುವುದಿಲ್ಲ, ಅದರ ಆಳ, ವಿಸ್ತಾರ ಕಾಣಿಸುವುದಿಲ್ಲ. ಅದರ ಆಯಸ್ಸು ತೀರಿದ ಮೇಲೆ ಬೆಳಕು ಹರಿಯುವ ಹೊತ್ತಿಗೆ ಎಲ್ಲವೂ ಕಾಣಿಸುತ್ತವೆ, ಕೇಳಿಸುತ್ತವೆ. ಅದೆಷ್ಟು ರಣಭೀಕರ ಎಂಬುವುದು ನಿಮಗೆ ಅರಿವಾಗುತ್ತದೆ. ಅದನ್ನು ಮೀರಿದ ಮೇಲೆ ನೀವು ಈಗ ಹೇಳಿ, ನೀವು ಗ್ರೇಟ್ ಹೌದೋ ಅಲ್ವೋ..?

ಇಲ್ಲಿ, ಸಹಜತೆಯೇ ಅಸಹಜತೆ‌ ಅನ್ನಿಸಿಕೊಳ್ಳುತ್ತದೆ. ಕತ್ತಲು ಆಕ್ರಮಿಸಿಕೊಳ್ಳುವುದು ಸಹಜವೇ ಹೊರತು, ಅಸಹಜ ಅಲ್ಲ. ಕವಿದ ಮೋಡ ಚಂದ್ರನ ಬೆಳಕಿಗೆ ಕರಗದೇ ಇರುವುದಿಲ್ಲ. ಇಲ್ಲಿ ಚಂದ್ರ ಇನ್ನ್ಯಾರೋ ಅಲ್ಲ, ನೀವೆ.
-ಶ್ರೀರಾಜ್ ವಕ್ವಾಡಿ

Saturday, May 23, 2020

ನಿಶಾ



(ಸಣ್ಣ ಕಥೆ)

ತೋಳಿನೊಳಗೆ ಬಂಧಿಯಾಗಿದ್ದ ನಿಶಾಳ ಎಡಗೈಯನ್ನು ತಪ್ಪಿಸಿಕೊಂಡು ಆಕೆಯನ್ನು ದೂರ ಸರಿಸಿ ಮನೀಶ್ ಎದ್ದು ಬಂದು ಸ್ವಲ್ಪ ದೂರದಲ್ಲಿ ಸಪ್ಪೆ ಮೋರೆ ಮಾಡಿಕೊಂಡು ಕುಳಿತ. ಅವಳ ಮೃದು ತೆಳು ತೋಳನ್ನು ತಳ್ಳಿದ ನೋವು ಇವನಿಗಾದರೂ ತೋರಿಸಿಕೊಂಡಿರಲಿಲ್ಲ. ಸ್ವಲ್ಪ ಮೌನದ ನಂತರ, ನಿಶಾ ಎದ್ದು ಬಂದು ಮನೀಶ್‌ನ ಹೆಗಲಿಗೆ ತಲೆಯಾನಿಸಿ ಕುಳಿತಳು.

‘ನಿಶಾ...!’ ಮನೀಶ್‌ನ ಕಣ್ಗಳು ತುಸು ಕೆಂಪಾಗಿದ್ದವು.

ನಿಶ್ಚಲದಂತಿದ್ದ ಬಿಸಿಲಿಗೆ ಮತ್ತಷ್ಟು ಉರಿ ಸುರಿದಂತಾಯ್ತು. ನಿಶಾ, ಮನೀಶ್‌ನ ಹೆಗಲು ಬಿಟ್ಟಿರಲಿಲ್ಲ. ಅವನ ಎಡಗೈ ಅವಳ ಹಾಲ್ಗೆನ್ನೆಯನ್ನು ಹಿತವಾಗಿ ಸವರಿತು. ನಿಶಾಳ ಕಣ್ಗಳು ತುಂಬಿಕೊಂಡವು.

ನಿಶಾ.. ಇದೇನ್ ಹೀಗೆ..?

ಇಲ್ಲಾ, ನನ್ನಿಂದ ಆಗ್ತಿಲ್ಲ. ನಿನ್ನನ್ನು ಬಿಟ್ಟಿರುವುದಕ್ಕೆ ಸಾಧ್ಯವಿಲ್ಲ.

‘ನಿಶಾ, ಇದು ಈಗ ನೀನು ಹೇಳೋ ಮಾತಲ್ಲ. ನನ್ನಿಂದ ನಿನ್ನ ಭವಿಷ್ಯ ಹಾಳಾಗ್ಬರ‍್ದು. ನೀನೀಗ ನನ್ನನ್ನು ತೊರೆದು ಬದುಕಲೇ ಬೇಕು. ನಾವು ಎಡವಿದ್ದೇವೆ ನಿಜ. ಆದರೇ, ಇದೇ ಮೊದಲು, ಇದೇ ಕೊನೆ. ನಾನಿನ್ನು ನಿನ್ನ ಪಾಲಿಗೆ ‘ಪಾಸ್ಟ್’. ಆಗಷ್ಟೇ ಆ ಪ್ರೀತಿಗೆ ಮಬ್ಬು ಮುಸುಕು ಕವಿದಿತ್ತು.  ಯಾವುದರಿಂದ ಆವರಿಸಿಕೊಂಡು ನಿಶಾ ಮನೀಶ್‌ನನ್ನು ಹತ್ತಿರವಾಗಿಸಿಕೊಂಡಿದ್ದಳೋ, ಅದನ್ನೇ ಸರಿಸಿಕೊಳ್ಳಬೇಕಾದ ಕಾಲ ನಿಶಾಳ ಎದುರು ಬಂದು ನಿಂತಿತು.

ಐ’ಮ್ ಸ್ವಾರಿ. ನಿಶಾಳ ಧ್ವನಿ ಗದ್ಗದಿತವಾಗಿತ್ತು. ಮನೀಶ್ ಒಪ್ಪದ ಮನಸ್ಸಿಲ್ಲಿ ‘ಇಟ್ಸ್ ಓಕೆ’ ಅಂತಂದ.
ಮೊದಲೇ ಅಂದುಕೊಂಡಿದ್ವಿ. ‘ಪೇರೆಂಟ್ಸ್ ಗೆ ಇಷ್ಟವಿಲ್ಲದಿದ್ದರೇ, ಅವರ ಮನಸ್ಸಿಗೆ ನೋವು ಕೊಟ್ಟು, ಅವರಿಂದ ದೂರ ಹೋಗಿ ಇರುವ ಎಲ್ಲರ ಪ್ರೀತಿಯಂತೆ ನಮ್ಮ ಪ್ರೀತಿಯಾಗಬಾರದು’ ಅಂತ. ನಾವು ದೂರವಾಗುವ ಕಾಲ ಬಂದಿದೆ ಅಂತನ್ನಿಸುತ್ತಿದೆ. ಪ್ರೀತಿಯೆಂದರೇ, ಇನ್ಮೇಲಿನ ನನ್ನ ಮತ್ತು ನಿನ್ನ ನಡುವಿನ ದೂರ.

ನಿನ್ನ ಪ್ರತಿ ಸನಿಹ ನನಗೆ ನೂರು ಅಚ್ಚರಿ. ಆದರೇ, ಇನ್ಮೇಲೆ ಅದಿಲ್ಲದ ಶೂನ್ಯ.

ನಿಶಾ ಕರಗಿದ್ದಳು.

ಮನೀಶ್ ಬಿಕ್ಕಿದ. ನಿಶಾನೂ ಬಿಕ್ಕುವುದಕ್ಕಾರಂಭಿಸದಳು.

‘ಐ ಲವ್ ಯೂ’.  ಇಬ್ಬರಲ್ಲೂ ದೂರವಾಗುವ ಅಹಿತ ಭಾವ ಇಮ್ಮಡಿಸಿತ್ತು.

ಎರಡೂ ಮನಸ್ಸುಗಳು ಸಾವರಿಸಿಕೊಂಡವು.

ಪ್ರೀತಿಯೆಂದರೇ, ಕೊನೆಗೆ ಉಳಿಯುವ ಕಣ್ಣ ಹನಿಯ ಪಸೆ. ಇಬ್ಬರ ಹೆಜ್ಜೆಗಳು ವಿಮುಖವಾದವು. ತುಂಬಾ ದೂರ ಸ್ತಬ್ಧತೆಯ ಧ್ವನಿ ಹೆಗಲಾಯಿತು. ಇವನಿಗೆ ಅವಳಿಲ್ಲದ ಮೌನ. ಅವಳಿಗೆ ಇವನಿಲ್ಲದ ಮೌನ.

ಇನ್ನೂ ನಿಂತಿಲ್ಲ ತೊಟ್ಟಿಕ್ಕುವ ಹನಿ.
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)  
📱 : 8762723716 

Friday, May 22, 2020

ನಿಮ್ಮನ್ನು ನೀವು ಗೆದ್ದರೆ ಸಾಕು..!



ಹಾಗೆಲ್ಲಾ ಸುಮ್ಮನೆ ಅದು ಕಣ್ಣಿಡುವುದಿಲ್ಲ. ಇಟ್ಟರೇ ಉರಿಗಣ್ಣನ್ನೇ ಇಟ್ಟು ಬಿಡುತ್ತದೆ. ಅದರ ಆಕ್ರಮಣವೇ ಹಾಗೆ. ಹೇಳದೆ ಕೇಳದೆ ದಾಳಿ ಮಾಡಿ ಬಿಡುತ್ತದೆ. ಮೈಮೇಲೆ ಎಗರಿ ಬಿಡುತ್ತದೆ. ಹಿಂಡಿ ಹಿಪ್ಪೆ ಮಾಡುತ್ತದೆ. ನಿಮ್ಮ ಕಣ್ಣ ಮೇಲೆ ನೀರಾಡಿಸಿ ಬಿಡುತ್ತದೆ. ಅಂಟು ಕಳೆದ ಮೇಲೆ ತುಟಿ ಅಗಲಿಸುತ್ತೀರಿ. ಹಾರುತ್ತೀರಿ, ಕುಣಿದು ಕುಪ್ಪಳಿಸುತ್ತೀರಿ, ‘ಓಹ್ಹೋ’ ಎಂದು ಹೋಗಾಡುತ್ತೀರಿ, ಕೊನೆಗೆ ಒಳಗೊಳಗೆ ಬಿಕ್ಕುತ್ತೀರಿ.

ಇಷ್ಟೆ ಅಲ್ವೇ..?

ಇದುವರೆಗೆ ಸಂಕಲನಗೊಂಡವುಗಳೆಲ್ಲಾ ಬರೀ ವಿಷಾದ ಗೀತೆಗಳಿರಬಹುದು. ಆ ಗೀತೆಗೆ ಕೊರಳೊಡ್ಡಿದ ವಿಷಯ, ವಸ್ತುಗಳೆಲ್ಲಾ ಇತಿಹಾಸದ ಕಾಲಘಟ್ಟದ ಬದುಕಿನಲ್ಲಿ ಪಾತ್ರವಾದವನದ್ದಲ್ಲ.

ಪಾತ್ರವನ್ನು ಅರಿತುಕೊಳ್ಳುವ ವೇಗ ಎಷ್ಟು ನಿಧಾನದ್ದು, ಎಷ್ಟು ಆಳದ್ದು, ಎಷ್ಟು ಕ್ಲಿಷ್ಟದ್ದು, ಎಲ್ಲವೂ ಆದ ಮೇಲೆ ಅದು ಅನಿವಾರ್ಯ ಮತ್ತು ಅಗತ್ಯದ್ದು. ಉಳಿಯುವುದೊಳಗೆ ಪಕ್ವವಾಗುವುದಕ್ಕೆ. ಅದು ಮೊದಲ್ಗೊಂಡು ಉದ್ದಕ್ಕೆ ಬೆಳೆಯುವುದಕ್ಕೆ ಆರಂಭವಾದಾಗ ಕಾವ್ಯವೆಂದೋ, ಕಥೆಯೆಂದೋ, ಕಾದಂಬರಿಯೆಂದೋ, ಪ್ರಬಂಧವೆಂದೋ ಗುರುತಿಸಿಕೊಂಡು ವಿಮರ್ಶೆಗೊಳಪಡುತ್ತದೆ.

ಪ್ರತಿ ತಿರುವಿನಲ್ಲಿ ಆರ್ತಕ್ಕೋ, ವಿಷಾದಕ್ಕೋ, ವಿನೋದಕ್ಕೋ, ಸಂತಸಕ್ಕೋ ಪ್ರೀತಿಯಿಂದ ಒತ್ತಾಯಿಸುತ್ತದೆ. ಯಾವುದಾದರೊಮದರ ಪಾಲನ್ನು ನಾವು ಪಡೆಯಲೇ ಬೇಕು. ಅದು ಅನಿವಾರ್ಯ ಕೂಡ. ಆಮೇಲೆ ಈ ಭೂಮಿಯ ಚರಿತ್ರೆಗೆ ಒಳಪಡಬೇಕು. ಹೆಸರು ಪಡೆದುಕೊಂಡವರು ಆತ್ಮ ಚರಿತ್ರೆಗಳಲ್ಲಿ ತಮ್ಮನ್ನೇ ತಾವು ಹೊಗಳಿಕೊಳ್ಳುವಂತೆ ಆಗದಿದ್ದರೂ ಏನಾದರೂ ಆಗಿಯೇ ಆಗುತ್ತೇವೆ. ಒಂದು ವ್ಯವಸ್ಥೆಯ ಒಳ್ಳೆಯ ಅಥವಾ ಕೆಟ್ಟ ಸಂಪ್ರದಾಯಗಳಿಗೆ ತಲೆಯಾನಿಸಿಕೊಂಡೇ ಬದುಕುವಾಗ ಅದು ದಿಟ್ಟಿಸುತ್ತದೆ. ಉರಿಗಣ್ಣಿನಿಂದಲೇ ಪರೀಕ್ಷಿಸುತ್ತದೆ.

ಕಾಲವೆಂದರೇ, ಬದಲಾಗದೇ ಇರುವ ಜಡ ಅಲ್ಲ. ಅದಕ್ಕೆ ಅಂದಿನಿಂದ ಈಗಿನವೊರೆಗೆ ಬಹಳ ವಿಶೇಷವಾದ ವಿಶಾಲವಾದ ವಿಸ್ತಾರವಾದ ಕಣ್ಣುಗಳಿಲ್ಲ. ಸಾಮಾನ್ಯ ಅದು. ಅದಕ್ಕಿಂದ ಪ್ರಖರವಾದ ಕಣ್ಣುಗಳು ನಿಮಗಿವೆ. ಸುಡುವುದಕ್ಕಲ್ಲ. ಬೆಳಗನ್ನು ಕಾಣುವುದಕ್ಕೆ.   ನೀವು ಬದುಕಿನಲ್ಲಿ ಗೆಲ್ಲಬೇಕಾದರೇ, ಕಾಲವನ್ನು ಸೋಲಿಸಬೇಕಂತಿಲ್ಲ. ನಿಮ್ಮನ್ನು ಗೆದ್ದರೆ ಸಾಕು.
-ಶ್ರೀರಾಜ್ ವಕ್ವಾಡಿ 

Thursday, May 21, 2020

ಅದಕ್ಕೆ ಕೊನೆ ಹಾಡಿ..! ಪದ್ಯವಾಗುವ ಶಕ್ತಿಯಿದೆ ನಿಮ್ಮಲ್ಲಿ..!



ಬಹುಶಃ ಅದು ಕೊನೆಯಾಗಲೇ ಬೇಕು..!

ಕರಗಿಸಿದ ಕತ್ತಲೆಗೆ ಎದುರಾಗಿ ನಿಂತು ಹೊಡೆಯುವ ಧೈರ್ಯ ತಂದುಕೊಳ್ಳುವ ಭೀಮ ಗಾತ್ರದ ಶಕ್ತಿ ನಿಮ್ಮ ಒಳಗೆಲ್ಲೋ ಇದೆ. ಈಗ ನೀವದನ್ನು ಹೊರಗೆ ಕರೆಯಲೇ ಬೇಕು. ನಿಮಗೆ ನಾಳೆಗಳನ್ನು ಅತ್ಯಂತ ಸಂಭ್ರಮದಿಂದ ಕಾಣುವಂತಹ ಎಲ್ಲಾ ಸಾಮರ್ಥ್ಯವೂ ಇದೆ.

ಯಾಕೆ..? ಅನುಮಾನನಾ..?

ನಿಮ್ಮ ನಿಧಾನದಲ್ಲಿ ವೇಗವಿದೆ, ನಿಮ್ಮ ಮೌನದಲ್ಲಿ ಹರ್ಷವಿದೆ, ನಿಮ್ಮ ದುಃಖದಲ್ಲಿ ಸುಖವಿದೆ. ನಿಮಗೆ ಹತ್ತಿರದಲ್ಲೇ ಒಂದು ತಿರುವಿದೆ. ಅಲ್ಲಿ ತಿರುಗಬೇಕಷ್ಟೇ. ನಿರ್ಧಾರಗಳು ಕುಸಿಯದಿರಲಿ. ಸಮಸ್ತ ಭಾವ ಇಷ್ಟಕಾವ್ಯ ನಿಮ್ಮ ಎದೆ ತೆಕ್ಕೆಯಲ್ಲೇ ಇದೆ. ಅವುಗಳಿಗೆ ನಿಮ್ಮದೇ ಯಜಮಾನಿಕೆ.

‘ಭಾವುಕತೆಯ ತೀವ್ರತೆ’ ನಿಮಗೆ ಗೊತ್ತಿಲ್ಲ ಸ್ವಾಮಿ’ ಎಂದು ನೀವು ಹೇಳಬಹುದು. ಆದರೇ, ನಿಮ್ಮ ಬದುಕಿನಲ್ಲಿ ಆ ಅನುಭವವನ್ನು ವಿಸ್ತರಿಸುವ ಅಥವಾ ಕಡಿತಗೊಳಿಸುವ ತೀರ್ಮಾನ ಮಾಡಬೇಕಾದದವರು ನೀವೇ. ಮತ್ಯಾರೂ ಅದನ್ನು ಮಾಡಲಾರರು. ನಿಮ್ಮ ಮನಸ್ಸಿಗೆ, ನಿಮ್ಮ ಒಳಮನಸ್ಸಿನ ಕ್ರಿಯೆಗೆ ಕಾಯುವಷ್ಟು ತಾಳ್ಮೆ ಇಲ್ಲ. ನೀವೇನೂ ನಿರ್ಣಯ ಕೈಗೊಂಡಿಲ್ಲವೆಂದರೇ, ನಿಮ್ಮನ್ನು ಅದು ಕೊರೆಯಲಾರಂಭಿಸುತ್ತದೆ. ನಿಮ್ಮ ಮನಸ್ಸು, ನಿಮ್ಮ ಮೌನದ ತೀವ್ರವಾದ ವಿಸ್ತಾರವನ್ನು ಕಂಡು ನಿಮ್ಮನ್ನು ಕೊಲ್ಲುವುದಕ್ಕೆ ಕತ್ತಿ, ಚೂರಿ, ತಲ್ವಾರು, ಪಿಸ್ತೂಲು ಹಿಡಿದುಕೊಂಡು ತಯಾರಾಗುತ್ತದೆ. ಹಾಗಾಗಿ, ಮೌನ ಎಲ್ಲದಕ್ಕೂ ಉತ್ತರವಲ್ಲ. ಲವಲವಿಕೆ ನಿಮ್ಮನ್ನು ನೀವು ಊಹಿಸಿಕೊಳ್ಳಲಾರದಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಎನ್ನುವುದರಲ್ಲಿ ಏನು ಅಚ್ಚರಿ ಇಲ್ಲ.

ಕೊನೆ ಹಾಡಬೇಕಾಗಿರುವುದು ನಿಮ್ಮೊಳಗಿನ ನೈತ್ಯಾತ್ಮಿಕ ಹೊಲಸುಗಳಿಗೆ.

ಅವಿತಿದೆ ನಿಮ್ಮ ಎದೆಯಾಳದಲ್ಲಿ ಜಗ ಗೆಲ್ಲುವ ಶಕ್ತಿ. ನಿಮಗೆ ಖಂಡಿತ ಗೊತ್ತಿಲ್ಲ, ನೀವೀಗ ಏನಿದ್ದೀರಿ ಅದಲ್ಲ ನೀವು. ನೀವೆಂದರೇ, ಧನಾತ್ಮಕತೆಯ ತೊಟ್ಟಿಲು ತೂಗುವ ಕೈಗಳು.

ನಕ್ಷತ್ರ ನಗುವಿನ ಸಾರೂಪ್ಯ ನಿಮ್ಮಲ್ಲೇ ಇದೆ. ನೀವು ನೀವಾದ ಮೇಲೆ ಖಂಡಿತ ಅದು ಮಿನುಗುತ್ತದೆ. ಬದುಕೆಂದರೇ, ಏನೇನೋ ಅಲ್ಲ. ಪದ್ಯವಾಗುವ ಅವಕಾಶ.
-ಶ್ರೀರಾಜ್ ವಕ್ವಾಡಿ 


Wednesday, May 20, 2020

ಭಯಾನಕ ಸದ್ದಿಗೆ ‘ಸುದ್ದಿ ವಾಹಿನಿಗಳು ಗಡಗಡ..!’



ಇವತ್ತು ಏನೂ ಬರೆಯಬಾರದೆಂದು ಕೂತಿದ್ದೆ. ಏನೂ ವಿಷಯವಿಲ್ಲದೇ ಬರೆದರೆ ಒತ್ತಾಯದಿಂದ ವಾಕರಿಕೆ ಮಾಡಿದಂತಾಗುತ್ತದೆ ಎಂದು ಇವತ್ತೊಂದಿನ ಆರಾಮವಾಗಿರೋಣ ಅಂತಿದ್ದೆ.

ಅಷ್ಟೊತ್ತಿಗಾಗಲೇ ‘ಧಡಾರ್..!’ ಎಂಬ ಸದ್ದು ಕೇಳಿದ ವರದಿ ಎಲ್ಲಾ ಕನ್ನಡ ಸುದ್ದಿ ವಾಹಿನಿಗಳಲ್ಲಿ  ಹರಿದಾಡುತ್ತಿತ್ತು. ಬೆಂಗಳೂರಿನ ಹತ್ತೂರಿಗೆ ಅದು ಕೇಳಿಸಿತಂತೆ, ಅಲ್ಯಾರೋ ಪಾಪದವರ ಮನೆಯ ಗೋಡೆ ಬಿರುಕು ಬಿಟ್ಟಿತ್ತಂತೆ, ಅಲ್ಲೊಬ್ಬರಿಗೆ ಮೂರು ಮೂರು ಭಾರಿ ಶಬ್ದ ಕೇಳಿಸಿತ್ತಂತೆ, ಮತ್ತೊಬ್ಬರಿಗೆ ಎರಡು ಸೆಂಕೆಂಡ್‌ಗಳಷ್ಟು ಸದ್ದು ಕೇಳಿಸಿತ್ತಂತೆ, ಮತ್ತೊಬ್ಬರು ಬಾಂಬ್ ಸ್ಫೋಟದಂತೆ ಕೇಳಿಸಿತು ಅಂದ್ರು, ಮೇಲಿಂದ ಮಹಡಿ ಮೇಲೆ ದೊಡ್ಡ ಬಂಡೆಯೊಂದು ಬಿದ್ದಂತಾಯಿತು ಅಂದ್ರು ಇನ್ನೊಬ್ರು. ಭೂಕಂಪವಂತೆ, ಈ ಅಂತೆ ಕಂತೆಗಳಲ್ಲಿ ಕನ್ನಡ ಸುದ್ದಿ ವಾಹಿನಿಗಳ ಪರದೆಗಳೆಲ್ಲಾ ‘ಗಡಗಡ’ ಅಲ್ಲಾಡುವುದಕ್ಕೆ ಆರಂಭವಾಗಿತ್ತು.

ಅಬ್ಬಬ್ಬಾ...! ಭೂಕಂಪ ಸೃಷ್ಟಿ ಮಾಡಿ ಬಿಡುವ ತಾಕತ್ತು ಕನ್ನಡ ಸುದ್ದಿ ವಾಹಿನಿಗಳಿಗೆ ಒಲಿದಿದ್ದು ಯಾವಾಗ ಅಂತ ಗೊತ್ತಾಗಲಿಲ್ಲ. ವಿಂಗ್ ಕಮಾಂಡರ್ ಸುದರ್ಶನ್ ಎನ್ನುವವರು ಸುಖೋಯ್ ಯುದ್ಧ ವಿಮಾನ 1230 ಕಿಲೋ ಮೀಟರ್ ವೇಗ ರೀಚ್ ಮಾಡಿ ಈ ಸೌಂಡ್ ಆಗಿದೆ ಅಂತ ಹೇಳಿದರು. ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ  ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ,  ರಿಕ್ಟರ್ ಮಾಪಕದಲ್ಲಿ ಭೂಕಂಪವಾಗಿದ್ದು ದಾಖಲಾಗಿಲ್ಲ. ಬೆಂಗಳೂರಿಗರು ಆತಂಕ ಪಡುವ ಅಗತ್ಯವಿಲ್ಲ ಅಂತ ಹೇಳಿದ ಮೇಲೂ  “ಎಲ್ಲಿಂದ ಬಂತು ಗೊತ್ತಿಲ್ಲ, ಹೇಗೆ ಬಂತು ಗೊತ್ತಿಲ್ಲ, ಯಾಕೆ ಬಂತು ಅಂತ ಗೊತ್ತಿಲ್ಲ ಪಕ್ಕದಲ್ಲೇ ಆಗಿರುವಂತೆ ಸೌಂಡ್ ಕೇಳಿಸಿದಂತೆ. ‘ಭಯಾನಕ ಸ್ಫೋಟಕ್ಕೆ ಬೆಚ್ಚಿಬಿದ್ದ ಬೆಂಗಳೂರು..!’, ಕೊರೋನಾ ಭಯದಲ್ಲಿ ಡೋಲಾಯಮಾನವಾಗಿದ್ದ ಬೆಂಗಳೂರು ಈ  ನಿಗೂಢ ಸ್ಫೋಟದ ಸದ್ದಿಗೆ ಗಡಗಡ ನಡುಗುತ್ತಿದೆ” ಹಾಗೆ ಹೀಗೆ ಅಂತೆಲ್ಲಾ ಸುದ್ದಿ ವಾಹಿನಿಗಳ ನಿರೂಪಕರೊಬ್ಬಬ್ಬರು ಒಂದೊಂದು ರೀತಿಯಲ್ಲಿ ಬೊಬ್ಬೆ ಹಾಕುತ್ತಿದ್ದರು. ಸಾಲದಕ್ಕೆ ಪಬ್ಲಿಕ್ ಫೋನ್ ಇನ್ ಕಾಲ್ ತಗೊಂಡು, ಕಾಲ್ ಮಾಡಿದವರಲ್ಲಿ ಅದು ಹೇಗೆ ಸೌಂಡ್ ಆಯ್ತು..? ಸಿಡಿಲು ಬಡಿದಂತಾಯ್ತಾ..? ಧಮ್ ಅಂತಾ..? ಭೂಮಿ ನಡುಗಿದಂಗಾಯ್ತಾ..? ಹಿಂದೆ ಏನಾದ್ರು ಈ ಥರದ ಶಬ್ದ ಕೇಳಿಸಿಕೊಂಡಿದ್ದೀರಾ ..? ಸಿಲಿಂಡರ್ ಸ್ಫೋಟವಾಗುತ್ತಲಾ..ಅಂತ ಸ್ಫೋಟನಾ ಇದು..? ಅಬ್ಬಾ.. ಪುಂಖಾನುಪುಂಖ ತಲೆಬುಡವಿಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕೊರೋನಾ ಕೊರೋನಾ ಅಂತ ಹೇಳುತ್ತಿದ್ದ ಸುದ್ದಿ ವಾಹಿನಿಗಳಿಗೆ ಒಂದು ಹೊಸ ಸುದ್ದಿ ಸಿಕ್ಕಿಬಿಟ್ಟಿದ್ದೇ ತಡ, ಎಲ್ಲೂ ಇಲ್ಲದ ಎಕ್ಸ್ಕ್ಸೂಸೀವ್ ಮಾಹಿತಿ ನಮ್ಮಲ್ಲಿದೆ, ನಮ್ಮಲ್ಲೇ ಮೊದಲು ಅಂತ ಆ ‘ಸೌಂಡನ್ನು’ ಓಡಿಸಿದ್ದೇ ಓಡಿಸಿದ್ದು. ಆ ಸ್ಫೋಟಕ್ಕಿಂತ ತೀವ್ರತೆ ಇವರ ಧ್ವನಿ ಏರಿಳಿತಳದಲ್ಲೇ ಇತ್ತು ಎನ್ನುವುದು ಅಪ್ಪಟ ಸತ್ಯ. ಅದು ಯಾವುದೇ ವಿಷಯವಾಗಲಿ, ಸಾಮಾಜಿಕ ವಲಯದಲ್ಲಿ ಆ ವಿಷಯ ತಣ್ಣಗಾದರೂ ಸುದ್ದಿ ವಾಹಿನಿಗಳ ಪರದೆ ಮೇಲೆ ಧಗಧಗ ಉರಿಯುತ್ತಿರುತ್ತದೆ. ಇದು ವಿಷಾದವೋ, ವಿನೋದವೋ ಗೊತ್ತಿಲ್ಲ.

‘ತಬ್ಲಿಘಿ ವೈರಸ್’, ‘ಜಮಾತ್ ವೈರಸ್’ ಎಂದು ಬೊಬ್ಬೆ ಹಾಕಿದ ಕನ್ನಡ ಸುದ್ದಿ ವಾಹಿನಿಗಳು ಸದ್ಯ, “ಕೊರೋನಾ ವೈರಸ್ಸಿನಿಂದಲೇ ಸದ್ದು ಉಂಟಾಗಿರಬಹುದಾ..?” ಎಂದು ಕೇಳಿ “ಕೊರೋನಾ ಸೌಂಡು..!” ಅಂತ ಹೇಳಲಿಲ್ಲ ಎನ್ನುವುದೇ ಸಮಾಧಾನಕರ ವಿಷಯ.  ನಮ್ಮ ಕನ್ನಡ ಸುದ್ದಿ ವಾಹಿನಿಗಳಿಗೆ ‘ಇರುವೆ ಹೋದರೇ, ಆನೆ ಹೋಯಿತು’ ಎನ್ನುವ ಬುದ್ಧಿ ಅದು ಯಾಕೋ ಗೊತ್ತಿಲ್ಲ. ಅದರಿಂದ ಲಾಭ ಏನಂತ ಕೂಡ ಗೊತ್ತಿಲ್ಲ. ಆ ಛಾಳಿ ಮಾತ್ರ ಬಿಡುವುದಿಲ್ಲ. ಭಾರತದಲ್ಲಿ ಜನರ ಮಾನಸಿಕ ಒತ್ತಡವನ್ನು ಹೆಚ್ಚಿಸುವುದಕ್ಕೆ ಏನಾದರೂ ಅವಾರ್ಡ್ಗಳನ್ನು ಕೊಡುವುದಿದ್ದರೇ, ಅಲ್ಲಿ ಕನ್ನಡದ ಸುದ್ದಿ ವಾಹಿನಿಗಳು ಮತ್ತು ಸುದ್ದಿ ವಾಚಕರು, ವಿಶ್ಲೇಷಕರು ನಾಮಿನೇಟ್ ಆಗುತ್ತಾರೆ ಎನ್ನುವುದರಲ್ಲಿ ಎಳ್ಳಷ್ಟು ಸಂದೇಹವಿಲ್ಲ. ಸಂತೆಗೆ ಹೋದರೇ, ‘ಹತ್ತು ರೂಪಾಯಿಗೆ ಎರಡು, ಹತ್ತು ರೂಪಾಯಿಗೆ ಎರಡು’ ಅಂತ ಕೂಗಾಡಿ ವ್ಯಾಪಾರ ಮಾಡುವ ಮಾರುಕಟ್ಟೆ ವ್ಯಾಪಾರಿಯಂತೆ ವರ್ತಿಸುವಂತಹ ಸ್ಥಿತಿ ಕನ್ನಡ ಸುದ್ದಿ ನಿರೂಪಕರಿಗೆ ಬಂತಲ್ಲಾ ಎನ್ನುವುದು ವಿಷಾದನಿಯ ಸಂಗತಿ. ಸುದ್ದಿ ವಾಹಿನಿಯವರು ಹೇಳುವ ಆ ‘ಭಯಾನಕ ಸ್ಫೋಟದ ಧ್ವನಿ’ ಅದೆಷ್ಟು ಜನರು ಕೇಳಿ ಬೆಚ್ಚಿ ಬಿದ್ದಿದ್ದಾರೋ ಗೊತ್ತಿಲ್ಲ. ಆದರೇ, ಇವರ ವಿಶ್ಲೇಷಣೆಯ ಸ್ಪಿರಿಟ್ ನೋಡಿಯಂತೂ ಬೆದರಿದ್ದಂತೂ ಸತ್ಯ.

ಪತ್ರಿಕೋದ್ಯಮದ ಜವಾಬ್ದಾರಿಯೇನು..? ಪತ್ರಕರ್ತರು ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವುದನ್ನೇ ಮರೆತಂತಿದೆ. ಇದು ಮಾಧ್ಯಮಪತಿಗಳ ಒತ್ತಡವೋ, ಟಿಆರ್‌ಪಿ ಸ್ಪರ್ಧೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಎಷ್ಟೋ ಜನ ಇಂತಹ ಕೆಲವು ಪಿಶಾಚಿ ಧ್ವನಿಗಳಿಂದಾಗಿ ಕೆಲವರು ಸುದ್ದಿ ವಾಹಿನಿಗಳನ್ನು ನೋಡುವುದನ್ನೇ ಬಿಟ್ಟಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದುದ್ದಲ್ಲ.
-ಶ್ರೀರಾಜ್ ವಕ್ವಾಡಿ.

Tuesday, May 19, 2020

ತೀರದ ‘ತೀರ ತಲುಪದ ಬದುಕು..!’



ಈ ಬಗ್ಗೆ ಮತ್ತೆ ಮತ್ತೆ ಯಾಕೆ ಬರೆಯುತ್ತೇನೆ ಅಂತ ಗೊತ್ತಾಗ್ತಿಲ್ಲ ನನಗೆ. ಬರೆದಷ್ಟು ಹೆಚ್ಚು ಹೆಚ್ಚು ಬರೆಯಬೇಕು ಅನ್ಸುತ್ತೆ. ಇನ್ನೂ ತೀರ ತಲುಪದ ಬದುಕಿನ ಕಥೆ ಕೇಳುವವರು ಯಾರೂ ಇಲ್ಲ.

ಈ ಭಾರತ ಸಮಬಾಳ್ವೆಯ ಭವ್ಯ ಭಾರತವಾಗಿ ನಿಲ್ಲಲಿ. ಉದ್ಯೋಗಪತಿಗಳಿಗೆ ರೆಡ್ ಕಾರ್ಪೇಟ್ ಹಾಸುವ ಧೋರಣೆಗೆ ಇಂದೇ ಕೊನೆ ಹಾಡುವಂತಾಗಲಿ. ಮೈಕ್ ಮುಂದೆ ಬೃಹನ್ನಾಟಕದ ಸಂಭಾಷಣೆ ಬಿಗಿಯುವ ದೇಶದ ಪ್ರಾಮುಖ್ಯ ಮಂತ್ರಿಗಳಿಗೆ ಇನ್ನಾದರೂ ಬುದ್ಧಿ ಬರಲಿ. ಉತ್ತರದಿಂದ ದಕ್ಷಣಕ್ಕೆ, ದಕ್ಷಿಣದಿಂದ ಉತ್ತರಕ್ಕೆ, ಪಶ್ಚಿಮದಿಂದ ಪೂರ್ವಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಇನ್ನೂ ಅದೆಷ್ಟೋ ಪಾದಗಳು ಹೆಜ್ಜೆ ಹಾಕುತ್ತಿವೆ. ದೇಶ ಇಂತಹ ಹತಭಾಗ್ಯದಿಂದ ಮುಕ್ತವಾಗಿ ಬೆಳೆಯಲಿ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಧನೋರಾ ಗ್ರಾಮದಲ್ಲಿ ಪುಣೆಯಿಂದ ಸುಮಾರು 250 ಕಿಲೋ ಮೀಟರ್‌ಗಳಷ್ಟು ದೂರ ನಡೆದು ಬಂದಿದ್ದ ಕಬ್ಬು ಕಟಾವು ಮಾಡುವ ಕಾರ್ಮಿಕನೊಬ್ಬನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂಬ ಸುದ್ದಿ ರಾಷ್ಟ್ರವ್ಯಾಪಿ ಹಬ್ಬಿತು.  4-5 ದಿನಗಳ ಹಿಂದೆ ತಾಯಿಯೊಬ್ಬಳು ತನ್ನ ಮುಖಕ್ಕೆ ಸೆರಗು ಮುಚ್ಚಿಕೊಂಡು ತನ್ನ ಮಗುವನ್ನು ತಳ್ಳು ಬ್ಯಾಗಿನ ಮೇಲೆ ಮಲಗಿಸಿಕೊಂಡು ಪಂಜಾಬ್‌ನಿಂದ ಝಾನ್ಸಿಗೆ ಕಾಲ್ನಡಿಗೆ ಹೋಗುತ್ತಿರುವ ದೃಶ್ಯ ಕಂಡು ಬಂತು. ಕೊಪ್ಪಳದಲ್ಲಿ ಹತ್ತಾರು ಮಧ್ಯಪ್ರದೇಶದ ಕೂಲಿ ಕಾರ್ಮಿಕರು ತಮ್ಮ ತಮ್ಮ ಮಕ್ಕಳನ್ನು ಸೊಂಟದ ಮೇಲೆ ಎತ್ತುಕೊಂಡು ನಮಗೆ ಹೊಟ್ಟೆಗ ತುತ್ತಿಲ್ಲ, ಮಾಡಲು ಕೆಲಸವಿಲ್ಲ ಹೇಗಾದರೂ ಮಾಡಿ ನಮ್ಮನ್ನು ಊರಿಗೆ ತಲುಪಿಸುವಂತೆ ಮಾಡಿ ಅಂತ ತಮ್ಮ ಅಳಲನ್ನು ಹೇಳಿಕೊಂಡದ್ದು ವರದಿಯಾಯಿತು. ಗುಜರಾತ್ ನಲ್ಲಿ ಲಾರಿ ಏರಿ ಹೊರಟಿದ್ದ ಕಾರ್ಮಿಕರನ್ನು ಇಳಿಸಿ ಪೋಲಿಸರು ಅಮಾನುಷವಾಗಿ ಹಲ್ಲೆ ಮಾಡುವ ವೀಡಿಯೋವೊಂದು ವೈರಲ್ ಆಯ್ತು. ಗುಜರಾತ್‌ನಲ್ಲಿನ ಸೂರತ್‌ನ ಗಾರ್ಮೆಂಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರಿಬ್ಬರು ಯಾಕೂಬ್ ಮತ್ತು ಅಮೃತ್ ಜೊತೆಯಾಗಿ ತಮ್ಮ ಊರು ಉತ್ತರಪ್ರದೇಶಕ್ಕೆ ಹೋಗುವ ದಾರಿ ಮಧ್ಯದಲ್ಲಿ ಯಾಕೂಬ್, ಜ್ವರ, ವಾಂತಿ ಎಂದು ಬಳಲುತ್ತಿರುವ ತನ್ನ ಸ್ನೇಹಿತ ಅಮೃತ್‌ನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಸಹಾಯಕ್ಕಾಗಿ ಬೇಡುತ್ತಿರುವ ಕರಳು ಹಿಚುಕುವ ಸನ್ನಿವೇಶ ದೇಶವ್ಯಾಪಿ ಸುದ್ದಿ ಮಾಡಿತು. ಮೊನ್ನೆ ಮೊನ್ನೆಯಷ್ಟೇ, ಲೂದಿಯಾದಿಂದ 1300 ಕಿಲೋಮೀಟರ್ ದೂರದ ಮಧ್ಯಪ್ರದೇಶಕ್ಕೆ  ನಡೆದು ಹೋಗುತ್ತಿದ್ದ ವಲಸೆ ಕಾರ್ಮಿಕರ ಕುಟುಂಬವೊಂದರ ಬಾಲಕ ಗಾಯಗೊಂಡ ಕಾರಣದಿಂದ ಇಬ್ಬರು ಸ್ಟ್ರೆಚರ್‌ನಲ್ಲಿ ಹೊತ್ತು ಸಾಗಿದ ಹೃದಯ ವಿದ್ರಾವಕ ದೃಶ್ಯವೊಂದನ್ನು ರಾಷ್ಟ್ರೀಯ ಖಾಸಗಿ ಸುದ್ದಿವಾಹಿನಿ ವರದಿ ಮಾಡಿತು. ಉತ್ತರ ಪ್ರದೇಶದಲ್ಲಿ 23 ವಲಸೆ ಕಾರ್ಮಿಕರು ಟ್ರಕ್ ಅಪಘಾತದಲ್ಲಿ ಮರಣ ಹೊಂದಿದರು. ಉತ್ತರ ಪ್ರದೇಶದಿಂದ 500 ಕಿಲೋಮೀಟರ್ ದೂರದ ಛತ್ತೀಸ್‌ಘಡಕ್ಕೆ ತನ್ನ ಮಗುವಿನೊಂದಿಗೆ ಲಕ್ಷ್ಮೀ ಸಾಹು ಎಂಬ ಮಧ್ಯ ವಯಸ್ಸಿನ ಮಹಿಳೆ ಸೈಕಲ್ ಸವಾರಿ ಹೊಗುತ್ತಾಳೆ. ಔರಂಗಬಾದ್‌ನಲ್ಲಿ ರೈಲು ಹಳಿಗಳ ಮೇಲೆ ಮಲಗಿದ್ದ ಹದಿನಾಲ್ಕು ಮಂದಿ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲ್ ಹರಿದು ಮೃತರಾದ ಸುದ್ದಿ ಎಲ್ಲರಿಗೂ ಗೊತ್ತಿರುವ ವಿಷಯ.

ಹೀಗೆ ಒಂದೇ ಎರಡೇ..? ವಲಸೆ ಕಾರ್ಮಿಕರ ಬವಣೆ ಹೇಳತೀರದು. ಇರಲು ಜಾಗವಿಲ್ಲ, ದುಡಿಮೆಯಿಲ್ಲ, ಹೊಟ್ಟೆಗೆ ತುತ್ತಿಲ್ಲ. ವಲಸೆ ಕಾರ್ಮಿಕರ ಗೋಳು ಕೇಳುವವರು ಯಾರಿಲ್ಲ. ಇನ್ನೂ ಸಾವಿರ ಸಾವಿರ ಮಂದಿ ರಸ್ತೆಯ ಮಧ್ಯೆದಲ್ಲಿ ದಾರಿ ಸವೆಸುತ್ತಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ, ಇಂತವರ ಬದುಕು ನೋಡಿದರೆ ಹೃದಯ ನಿಂತ ಹೋಗುತ್ತದೆ ಅಂತ ಹೇಳಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ವಲಸೆ ಕಾರ್ಮಿಕರಿಗೆ 5 ಕೆ.ಜಿ ಧಾನ್ಯ ಮತ್ತು 1 ಕೆ.ಜಿ ಬೇಳೆ ಕೋಡುತ್ತೇವೆ ಅಂತ ಹೇಳಿದ್ದು ಬಿಟ್ಟರೇ ಮತ್ತೇನೂ ಇಲ್ಲ.

ಒಣ ಹೊಟ್ಟೆಯನ್ನು ತಿವಿದು ಬಗೆದು ನೋಡುವಷ್ಟು ಕಾಲ ಕ್ರೂರಿಯಾಗಬಾರದಿತ್ತು. ಇದು ಭ್ರಮೆ ಹುಟ್ಟಿಸುತ್ತಿರುವ ರಾಜಕೀಯ ನಾಯಕರ ಕೊರಳಿಗೆ ಹಾಕಿದ ಶವಮಾಲೆ ಅಲ್ಲದೇ ಮತ್ತೇನು..? ಜನರು ಉದ್ಯಮಪತಿಗಳಿಗೆ, ಖಾಸಗೀಕರಣಕ್ಕೆ ಮಣೆ ಹಾಕುವ ಸರ್ಕಾರದ ಯೋಜನೆಗಳನ್ನು ವೈಭವೀಕರಿಸುತ್ತಾರೆ. ಬಡತನ, ಹಸಿವೆಯಲ್ಲಿ ಸಾಯುವ ಜನರ ಬಗ್ಗೆ ಏನೂ ಮಾತಾಡುವುದಿಲ್ಲ. ಭಾರತ ಯಾಕೆ ವಾಸ್ತವವನ್ನು ಗೋಡೆ ಕಟ್ಟಿ ಮುಚ್ಚಿ ಹಾಕುತ್ತದೆ..? ಆಡಳಿತ ವರ್ಗಕ್ಕೆ ಸತ್ಯಾಂಶವನ್ನು ಒಪ್ಪಿಕೊಳ್ಳುವುದಕ್ಕೆ ಯಾಕೆ ಸಾಧ್ಯವಿಲ್ಲ..? ವಾಸ್ತವ ಅಂದರೇ, ಗೋಡೆಗೆ ಅಂಟಿರುವ ಬಣ್ಣ ಮಾತ್ರನಾ..?

ಅವರೆಲ್ಲರೂ ರಾತ್ರಿ ಹಗಲೆನ್ನದೆ ನಡೆಯುತ್ತಿದ್ದಾರೆ. ಇಲ್ಲಿ ಹಸಿದವರ ಬದುಕು ಎಂದಿಗೂ ನಿಕೃಷ್ಟವೇ ಇರಬೇಕು..! ಇದನ್ನು ‘ಇದು ನನ್ನ ಭಾರತ’ ಎಂದು ಹೇಳಿಕೊಳ್ಳುವ ನನಗೊಲಿದ ದೌರ್ಭಾಗ್ಯ ಎಂದು ಹೇಳದೇ ಮತ್ತೇನನ್ನು ಹೇಳಬೇಕು..?!


-ಶ್ರೀರಾಜ್ ವಕ್ವಾಡಿ 
 

Monday, May 18, 2020

ರಕ್ತ ಅಚ್ಚೆಬ್ಬಿಸಿದೆ | ನಾನು ಹೇಳಲೇ ಬೇಕು.. ‘ಇದು ನನ್ನ ಭಾರತ..!’



ಇದು ಬಹಳ ದೂರ ಕಾಡುತ್ತೆ.

ಹೋಗಹೋಗತ್ತಿದ್ದಂತೆ, ಅಲ್ಲಲ್ಲೇ ಬಾಡಿ ಉದುರಿದ ಜೀವಗಳ ದೃಶ್ಯ, ಇನ್ನಷ್ಟು ದೂರ ಖಂಡಿತ ಕಾಡುತ್ತದೆ. ಮೇಲ್ಸ್ತರದ ಸೂಟು ಬೂಟು ಬದುಕಿನ ಆಚೆ ದೇಶಿ ಸಂಕಥನಗಳು ಇನ್ನೂ ಬರಿಗಾಲಲ್ಲೇ ದಾರಿ ಸವೆಸುತ್ತಿವೆ ಎನ್ನುವುದು ದೊಡ್ಡ ದುರಂತ.

ಇದು ನನ್ನ ಭಾರತ..!

ಇದು ದೇಶದ ಕಾರ್ಮಿಕ ವರ್ಗ, ಒಂದೊಂದೆ ಹೆಣೆದು ಆಡಳಿತ ವರ್ಗದ ಕೊರಳಿಗೆ ಹಾಕಿದ ದುಃಖದ ಸರಮಾಲೆ. ಹಸಿವು ಮತ್ತು ಬಡತನ ಎಷ್ಟೊಂದು ಕ್ರೂರಿ..?! ಒಣ ಹೊಟ್ಟೆ ಬಗೆದು ನೋಡಿ ಗಹಗಹಿಸಿ ನಗುವಷ್ಟು ರಾಕ್ಷಸ ಪ್ರವೃತ್ತಿ ಅದರದ್ದು.

ಪತ್ರಿಕಾ ಗೋಷ್ಠಿಯಲ್ಲಿ ಹತ್ತಾರು ಮಾರಾಟವಾದ ಕ್ಯಾಮೆರಾ, ಪತ್ರಕರ್ತರ ಮುಂದೆ ಇಷ್ಟಿಷ್ಟು ಕೋಟಿ (ಎಂಟು ಕೋಟಿ) ವಲಸೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ಲೆಕ್ಕ ಕೊಡ್ತಾರೆ ಅಷ್ಟೇ. ಕಾರ್ಪೋರೇಟ್ ವಲಯದ ಚೇತರಿಕೆಗೆ ಕೋಟಿ ಕೋಟಿ ಘೋಷಿಸುವಾಗ, ದೇಶದ ಜನರಿಗೆ ಏನೇನೋ ಹೇಳಿ ಭ್ರಮೆ ಹುಟ್ಟಿಸುವಾಗ ಅದನ್ನೇ ವಾಸ್ತವ ಅಂದುಕೊಂಡು ಜನ ಪಾಯಸ ಮಾಡಿ ತಿಂದು 'ಭಾರತ ಪ್ರಗತಿ ಕಾಣುತ್ತಿದೆ' ಅಂತ ವಾಟ್ಸ್ಯಾಪ್, ಫೆಸ್ಬುಕ್ ಇನ್ನಾವುದೋ ಇದ್ದಷ್ಟು ಸೋಶಿಯಲ್ ಮೀಡಿಯಾಗಳಲ್ಲಿ ಹರ್ಷ ವ್ಯಕ್ತ ಪಡಿಸುತ್ತಾರೆ. ಆದರೇ, ಬದುಕು ನಿರ್ಬಲವಾಗಿ ಗುಳೆ ಹೊರಟವರು ಮೂಟೆ ತಲೆ ಮೇಲೆ ಹೊತ್ತು ಸಾಗುತ್ತಾ ದಾರಿಯಲ್ಲೆಲ್ಲೋ ಅಸ್ವಸ್ಥರಾಗಿ ಬಿದ್ದು ಸಾಯುವಾಗ... ನಮಗೆ ಭಾರತದ ಬಗ್ಗೆ ಏನೂ ಅನ್ನಿಸುವುದಿಲ್ಲ...!

ನಿಜಾಂಶ, ವಾಸ್ತವಾಂಶ ಖಂಡಿತ ಯಾರಿಗೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಪಾಪ, ಸಿಮೆಂಟ್ ಮೆತ್ತಿಕೊಂಡು ದುಡಿವ ವರ್ಗವದು. ಊರು ತಲುಪಲು ಇನ್ನೂ ದಾರಿ ಮೇಲೆಯೇ ಇದ್ದಾರೆ. ಒಡೆದ ಪಾದಗಳಿಂದ ಸುರಿದ ರಕ್ತ ರಸ್ತೆಯುದ್ದಕ್ಕೂ ಅಚ್ಚೆಬ್ಬಿಸಿದೆ.

ಇದು ಇನ್ನೊಂದಿಷ್ಟು ಕಾಲ ಉಳಿಯುತ್ತದೆ. ಅಧಿಕಾರದ ನಿರ್ಲಕ್ಷ್ಯ ಧೋರಣೆಗೆ ಖಂಡಿತ ಬಲವಾದ ಚಾಟಿ  ಬೀಸುತ್ತದೆ.

ಗೊತ್ತಿಲ್ಲ, ತಲೆ ತಗ್ಗಿಸುತ್ತಾ ‘ಇದು ನನ್ನ ಭಾರತ’ ಅಂತ ಹೇಳಲೇ ಬೇಕಿದೆ.
-ಶ್ರೀರಾಜ್ ವಕ್ವಾಡಿ 

Sunday, May 17, 2020

ಇಲ್ಲಿ ಎಲ್ಲವೂ ಬಾಡಿಗೆ | ದುಃಖ, ಕರಗದ ಕಲ್ಲಲ್ಲ..!




‘ಹೇಳದಾಚೆಗಿನ ಭಾವಗಳಿಗೆ ಸಂಜೆಗತ್ತಲು ಬಹಳ ಆಪ್ತ ಸರ್ ನನಗೆ’ ಅಂತ ಪರಿಚಯದ ಒಬ್ಬ ಹುಡುಗಿ ಹೇಳಿದ್ಲು. ಆಕೆಯ ಧ್ವನಿ ಎಂದಿನಂತಿರಲಿಲ್ಲ.

ಯಾಕೆ..? ಅಂತ ಕೇಳ್ದೆ.

ಆಕೆ ಹೇಳ್ತಾಳೆ..

‘ತೀರದ ನೆನಪುಗಳಿವೆ, ಹೇಳಲಾಗದವುಗಳಿದ್ದಾವೆ, ಹೇಳಿದಷ್ಟು ಉಳಿದು ಬಿಡುವವೂ ಇದ್ದಾವೆ ಸರ್’ ‘ಪ್ರತಿ ಸಂಜೆ ದೇವಸ್ಥಾನದ ಕೆರೆದಂಡೆಯ ಬಳಿಗೆ ಹೋಗ್ತೇನೆ, ಒಂದಿಷ್ಟು ಹೊತ್ತು ಒಳಗೊಳಗೆ ಬಿಕ್ಕಿ ಬಿಕ್ಕಿ ಅಳುತ್ತೇನೆ, ಒಮ್ಮೆ ನೆಗೆದು ಹಾರಿ ಬಿಡುವ ಅಂತ ಅನ್ನಿಸುತ್ತೆ. ಮನಸ್ಸು ಹಿಂದ್ಹೆಜ್ಜೆ ಇಡುತ್ತದೆ’. ಈಗ ಅವಳ ಸ್ವರ ಇಳಿದಿತ್ತು. ಆರ್ತಕ್ಕೆ ತಿರುಗಿತ್ತು. ಅದೇನೋ ಅವಳನ್ನು ಬಲವಾಗಿ ಕೊರಗುತ್ತಿರುವುದು ಕಾಣುತ್ತಿತ್ತು.

‘ಮನಸ್ಸು ಹಿಂದ್ಹೆಜ್ಜೆ’ ಇಡುತ್ತಿದೆ ಅಂತಾದರೇ, ನಿನಗೆ ಮುಂದೆಲ್ಲೋ ಮಹತ್ತರವಾದದ್ದಿದೆ ಅಂತರ್ಥ. ನೀನು ನಿನ್ನಲ್ಲಿಯೇ ನಿನ್ನ ಬಗ್ಗೆ ನಿನಗೇ ಹೆಮ್ಮೆ ಅನ್ನಿಸುವಷ್ಟು ಮಾತಾಡು. ನಿನ್ನಲ್ಲಿ ಹೇಳಲಾಗದವುಗಳಿದ್ದಾವೆ ಎನ್ನುವುದು ಅಪ್ಪಟ ಸುಳ್ಳು. ನೀನದನ್ನು ಇನ್ನೊಬ್ಬರೊಂದಿಗೆ ಹೇಳಿಕೊಳ್ಳಬೇಕೆಂದೇನಿಲ್ಲ. ನೀನು ನಿನ್ನಲ್ಲಿಯೇ ಹೇಳಿಕೊಂಡು ಅದಕ್ಕೆ ಬೇಕಾದ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವಿದೆ. ನಿನ್ನೊಳಗೆ ಅಳತೆ ಮಾಡಿ ಹೇಳಲಾರದಷ್ಟು ದೊಡ್ಡದಾದ ಶಕ್ತಿಯೊಂದಿದೆ.

ಡೌಟ್ ಇದೆಯಾ..?

ಒಮ್ಮೆ ನಿನ್ನನ್ನು ನೀನೇ ಕೇಳಿಕೋ..

ಈ ಹಿಂದೆ ಆದವುಗಳೆಲ್ಲಾ ಬಹುಶಃ ನಿನ್ನದಲ್ಲ. ಮುಂದಿವೆ ಬೆಟ್ಟದಷ್ಟಿವೆ ನೋಡು ಅವುಗಳೆಲ್ಲಾ ನಿನ್ನವು. ಹೋಗು ಬಾಚಿಕೋ, ಅಪ್ಪಿಕೋ.. ಎಸ್, ನಿನ್ನೆ ಎಂಬುವುದೇ ಇಲ್ಲ.

‘ಭಾವನೆಗಳು ಅಳ್ಸುತ್ತ್ವೆ.'

ಒಂದಿಷ್ಟು ಮಾತಾಡು. ದುಃಖ, ಕರಗದ ಕಲ್ಲಲ್ಲ.

ನಿನಗೂ ದುಃಖ, ಸಂಕಟ ಎಲ್ಲವೂ ಬರಬಹುದು. ಆದರೇ, ಅವುಗಳ್ಯಾವುದೂ ನಿನ್ನ ಸ್ವಂತದ್ದಲ್ಲ. ಭೂಮಿ, ನಿನ್ನ ಬಾಡಿಗೆ ಮನೆ. ಅಳು, ದುಃಖ, ಸಂತೋಷ, ಹರ್ಷ ಎಲ್ಲವೂ ನಿನ್ನ ಜೀವಿತಾವಧಿಗೆ ಕಟ್ಟುವ ಬಾಡಿಗೆ..!

‘ನಾನು ನನ್ನೊಂದಿಗೆ ಮಾತಾಡಬಲ್ಲೆ, ಅದರಿಂದ ಏನೋ ಸಮಾಧಾನಳಾಗಬಲ್ಲೆ, ಬರುವುದೆಲ್ಲವನ್ನೂ ಸ್ವೀಕರಿಸಬಲ್ಲೆ. ಆದರೇ, ಹಾಗೆಯೇ ಉಳಿಯುವ ಕಣ್ಣ ಹನಿಯ ಅಂಟು...?!’

ಆಕೆ ಕೇಳಿದ್ಲು.

ಈಗಷ್ಟೇ ನೀನು ಹೇಳಿದ್ದೆಲ್ಲಾ ನೀನು ಮೊದಲು ಮಾಡು. ಬದುಕೆಂದರೇ, ಆಗದೇ ಹೋಗುವ ಪರಿವರ್ತನೆಯಲ್ಲ. ನಾನು ಉತ್ತರಿಸಿದೆ.

ಹೊಸತು ಈಗಲೇ ಆರಂಭ. ನೀನದರ ಸಾರಥಿ. ನೀನಂದರೇ, ದೈವ ಶಕ್ತಿ.

ನಿಮ್ಮ ಬದುಕಿನ ಕೀಲಿಕೈ ನಿಮ್ಮಲ್ಲೇ ಇದೆ. ತೆರೆದು ನೋಡಿ. ವಿಸ್ಮಯ ನಿಮ್ಮ ಮುಂದಿದೆ.
-ಶ್ರೀರಾಜ್ ವಕ್ವಾಡಿ
 

Saturday, May 16, 2020

ವಾವ್ಹ್ ಅಂತೀರಿ.. | ಇಲ್ಲಿ ಎಲ್ಲವೂ ರೋಚಕ..!




ಇಲ್ಲಿ ಎಲ್ಲವೂ ರೋಚಕ ಮತ್ತು ಇಂಟ್ರೆಸ್ಟಿಂಗ್..!

ಹಾಗಂತ ನಾನು ಸ್ಪೆಷಲ್ ಆಗಿ ಹೇಳ್ಬೇಕಂತಿಲ್ಲ. ನಿಮಗೆ ಗೊತ್ತಿದೆ. ಬದುಕನ್ನು ಇಷ್ಟಿಷ್ಟೇ ನೋಡಿ ಸ್ವೀಕರಿಸಿದ ಮಹತ್ತರವಾದ ಅನುಭವ ನಿಮ್ಮ ಜೊತೆಗಿದೆ. ತೆರದುಕೊಳ್ಳುವಾಗ ಕೆಲವೊಂದಿಷ್ಟು ಒಮ್ಮೊಮ್ಮೆ ಒಡೆದು ಚೂರು ಚೂರಾಗಿ ಹೋಗುತ್ತವೆ. ಕೆಲವೊಮ್ಮೆ ಬಿಚ್ಚಿಕೊಳ್ಳುವುದೇ ಇಲ್ಲ. ಇನ್ನೊಮ್ಮೊಮ್ಮೆ ಆರಂಭವೇ ಅಂತ್ಯವಾಗುತ್ತದೆ.

ಅದಕ್ಕೆ ಹೇಳಿದ್ದು, ಇಲ್ಲಿ ಎಲ್ಲವೂ ರೋಚಕ ಅಂತ.

ನಿರೀಕ್ಷಿಸುವುದು ಮತ್ತು ಬಂದವುಗಳನ್ನು ಒಪ್ಪಿಕೊಳ್ಳುವುದು ಕಷ್ಟ ಅನ್ನಿಸಿದರೂ ಸಹ್ಯ.
ಸಮಾಧಾನವಾಗಿ ಅವುಗಳು ಒತ್ತಾಯಿಸುತ್ತವೆ. ನಾವು ದಕ್ಷತೆಯಲ್ಲಿ ಒಳಗೊಳ್ಳುತ್ತೇವೆ.

ಆಮೇಲಿನದ್ದೆಲ್ಲಾ ಇಂಟ್ರೆಸ್ಟಿಂಗ್ ಅಥವಾ ಅನ್‌ಇಂಟ್ರೆಸ್ಟಿಂಗ್.

ಬದುಕು, ನಮಗೆ ಕಾಣದ್ದನ್ನು ಮಾತ್ರ ಮುಂದಿಡುತ್ತದೆ. ನಾವು ಕಂಡದ್ದನ್ನೂ, ಕಾಣದೇ ಇರುವುದನ್ನೂ ಅನುಭವಿಸುತ್ತೇವೆ. ‘ಕಾಣುವುದರೊಳಗೆ ಕಾಣದೇ ಇರುವುದು, ಒಮ್ಮೆ ಕಂಡು ಮತ್ತೊಮ್ಮೆ ಕಾಣುವಷ್ಟರೊಳಗಾಗಿ ಕಾಣೆಯಾಗುವುದು’ ಎಲ್ಲಾ ಇಲ್ಲಿ ನಡೆದು ಹೋಗುವ, ಆಗಿಸಿಕೊಳ್ಳುವ, ತಂತಾನೆ ಮುಗಿದು ಹೋಗುವ ಭಾಗ.

ಭೋರ್ಗರೆಯುವ ಸಮುದ್ರದಲ್ಲಿ ಒಮ್ಮೊಮ್ಮೆ ಸಣ್ಣ ಅಲೆಗಳು ಕಿನಾರೆಗೆ ಪಪ್ಪಿ ಕೊಟ್ಟು ಹೋದರೇ, ಮತ್ತೊಮ್ಮೊಮ್ಮೆ ದೊಡ್ಡ ಅಲೆಗಳು ಬಡಿದು ಹೋಗುತ್ತವೆ.

ಬದುಕೆಂದರೇ, ಬಲಿಯಾಗುವ ಮತ್ತು ಪಾಲ್ಪಡೆಯುವ ಪಾತ್ರ.

ಏರಿಳಿತಗಳ ಪ್ರತಿ ಕಿರು ಮೌನದ ನಂತರ, ನೀವು ಎದುರು ಬಂದು ಮಾತಾಡಲಾರಂಭಿಸುತ್ತೀರಿ, ಖಾಲಿ ಹಾಳೆ ಹಿಡಿದು ನಿಮ್ಮ ಮೂರನೇ ಕಣ್ಣಿಗೆ ಕಂಡದ್ದನ್ನು ಚಿತ್ರಿಸುತ್ತೀರಿ. ವಾವ್ಹ್ ಅಂತೀರಿ.

ಯಾಕೆ ಗೊತ್ತಾ..? ಅಲ್ಲೊಂದು ಹುಣ್ಣಿಮೆ ಹೊಳೆಯುತ್ತಿರುತ್ತದೆ.

‘ನಡೀರಿ ಮುಂದಕ್ಕೆ.. ಕಲ್ಲು-ಮುಳ್ಳುಗಳು ಬದುಕಲ್ಲಿರದೇ, ನೈಸ್ ರೋಡ್ನಲ್ಲಿರುತ್ತದೇನ್ರೀ..?’ ಅಂತ ಗಟ್ಟಿ ಸ್ವರ ಮಾಡಿ ಧೈರ್ಯ ತುಂಬುವವರು ಬೇಕಷ್ಟೇ.
-ಶ್ರೀರಾಜ್ ವಕ್ವಾಡಿ

Friday, May 15, 2020

ನೀವು ಖಂಡಿತ ಹೇಳುತ್ತೀರಿ..!? | ಕಂಗ್ರಾಜುಲೇಶನ್..!



ಈಗ ಮೊದಲಿನಂತಿಲ್ಲ. ಬಿಕ್ಕಿಗೆ ಚುಕ್ಕಿ ದೊರಕಿದೆ. ಆರ್ತ ಕೊನೆ ತಲುಪಿದೆ. ಮನಸ್ಸು ಮತ್ತೆ ಚಿಗುರು ಬಿಚ್ಚಲಾರಂಭಿಸುತ್ತಿದೆ. ಮೌನದ ಕಣ್ಕಟ್ಟುಗಳು ಉದುರಿ ಹೋಗಿ ಮಾತಾಡುವ ಶಕ್ತಿ ಈಗ ಬಂದಿದೆ.
ಮೋಡಗಳಿಂದ ಭರ್ತಿಯಾದ ಆಕಾಶದಿಂದ ಗುಡುಗು, ಮಿಂಚು, ಮಳೆ ಹನಿಯುವುದನ್ನು ನಿರೀಕ್ಷಿಸದೇ ಮತ್ತೇನು ನಿರೀಕ್ಷಿಸುತ್ತೀರಿ..?

ಬದುಕಿನಲ್ಲಿಯೂ ಹಾಗೆ.

ಇಲ್ಲಿ... ಸುಖ, ಸಂತೋಷ, ದುಃಖ, ದುಮ್ಮಾನ, ಸಂಕಟ ಮತ್ತು ಕೊನೆಗೊಂದು ನೆಮ್ಮದಿ ಬಿಟ್ಟರೇ, ಮಹತ್ತರವಾದದ್ದೇನು ಬಯಸುವುದಕ್ಕೆ ಸಾಧ್ಯ..? ಹೇಳಿ ಕೇಳಿ ಇದು ಬದುಕು ಅಷ್ಟೇ. ಅದಕ್ಕಿಂತ ಮಿಗಿಲಾದುದ್ದೇನಲ್ಲ. ಇಲ್ಲಿ ಇವುಗಳನ್ನೆಲ್ಲಾ ನಿರೀಕ್ಷಿಸದಿದ್ದರೂ ಬಂದಾಗ ಸ್ವೀಕರಿಸಿ ಅನುಭವಿಸಲೇ ಬೇಕು.

ಬದುಕೆನ್ನುವುದು ಈ ಸುಖ, ದುಃಖಗಳನ್ನು ಸೇರಿಸಿಕೊಂಡು ಹುಟ್ಟಿಕೊಳ್ಳುವ ವೃತ್ತಾಂತ ಅಷ್ಟೇ. ಅದರಿಂದ ದೊಡ್ಡ ಚರಿತ್ರೆ ನಿರ್ಮಿಸುವುದಕ್ಕೇನೂ ಆಗುವುದಿಲ್ಲ. ಒಂದು ವೇಳೆ ‘ಚರಿತ್ರೆ’ ಅಂತಹದ್ದೊಂದು ಸಾಹಸ ಮಾಡುವುದಕ್ಕೆ ಸಾಧ್ಯವಿದ್ದರೇ, ಅದು ನಿನ್ನಿಂದ ಮಾತ್ರ. ಬದುಕಿನಿಂದ ಖಂಡಿತ ಸಾಧ್ಯವಿಲ್ಲ. ಬದುಕು ನಿನ್ನ ಜೀವಿತಾವಧಿ. ಬದುಕು ನೀನಲ್ಲ. ನೀನು ಬದುಕಲ್ಲ.

ಅತ್ಯಂತ ಪ್ರೀತಿಯಿಂದ ಒಂದು ಥ್ಯಾಂಕ್ಸ್ ಹೇಳಿ.

ಯಾರಿಗೆ..?

‘ನಿಮ್ಮ ಬದುಕಿಗೆ’

ಯಾಕೆ..?

‘ನೀವು ನಡೆವ ದಾರಿಯುದ್ದಕ್ಕೂ ಬೇಕು ಎಂದಾಗ ಬೇಕಾದದ್ದನ್ನು ಕೊಡದೇ ಕಾಡಿಸಿದ್ದಕ್ಕೆ, ಕೇಳದೇ ಇದ್ದರೂ ಬೇಡವಾದದ್ದನ್ನು ಕೊಟ್ಟು ಸಂತೈಸಿದ್ದಕ್ಕೆ.’

ಒಮ್ಮೆ ಆಲೋಚನೆ ಮಾಡು. ಎಲ್ಲವೂ ಮುಗಿದ ಮೇಲೆ ‘ನೀವೀಗ ಎಷ್ಟೋ ನಿರಾಳರಾಗಿದ್ದಿರಿ..!’ ಎಸ್,  ಮತ್ತು ನೀವೀಗ ಹೇಳ್ತೀರಿ, ನಾನೀಗ ‘ಬದಲಾಗಿದ್ದೇನೆ’ ಎಂದು.

‘ಕಂಗ್ರಾಜುಲೇಶನ್’

‘ನೀವು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದೀರಿ ಎಂದು ಸಂತೋಷವಾಯ್ತು.’ ಈ ಬದಲಾವಣೆ ನಿಮ್ಮಿಂದಲೇ ಆಗಬೇಕಿತ್ತು, ಆಗುತ್ತಿದೆ. ಈ ಹಿಂದೆ ಎಷ್ಟು ದುಃಖಿಸಿವೆ ಅನ್ನುವುದಕ್ಕಿಂತ, ಮುಂದೆ ಎಷ್ಟು ಸುಖಿಸಲಿಕ್ಕಿವೆ ಅನ್ನುವುದು ಮುಖ್ಯ. ನಾಳೆಗಳಿಗೆ, ಕೈ ಕುಲುಕುವ ಮುನ್ನ, ಒಂದು ಅರ್ಥಪೂರ್ಣ ಸಂಕಲ್ಪ ಕೈಗೊಳ್ಳಿ. ಆ ಜವಾಬ್ದಾರಿ ನಿಮ್ಮ ಮೇಲೆಯೇ ಇದೆ. ವಹಿಸಿಕೊಳ್ಳಿ.

ಆಗ ನೀವು ಖಂಡಿತ ಹೇಳುತ್ತೀರಿ.

ಏನು ಗೊತ್ತಾ..?

‘ನನ್ನ ಬದುಕು ನನ್ನನ್ನು ಏನು ಮಾಡಬೇಕಂದುಕೊಂಡಿತ್ತೋ, ಅದಕ್ಕಿಂತ ಉತ್ತಮವಾಗಿದ್ದೇನೆ’ ಎಂದು.

ಇಲ್ಲಿ... ಬದುಕೆಂದರೇ, ಆಗಬೇಕಾದ ಬದಲಾವಣೆ. ಪ್ರೀತಿಯೆಂದರೇ, ಕಳೆದುಕೊಳ್ಳಬೇಕಾದದ್ದನ್ನು ಕಳೆದುಕೊಂಡು, ಉಳಿದ ಭಾವನೆಗಳೊಂದಿಗೆ ಮಾತಾಡಿ ಗೆದ್ದು ನಿಲ್ಲುವ ಶಕ್ತಿ.
-ಶ್ರೀರಾಜ್ ವಕ್ವಾಡಿ 


Thursday, May 14, 2020

ನಡಿಗೆಯ ನಿಶ್ಯಬ್ದದ ಕೂಗು..!



ಎವೆಯಿಕ್ಕದೇ ಅದು ದಿಟ್ಟಿಸುತ್ತಿತ್ತು.

ನಾನೇನೂ ಪ್ರತಿಕ್ರಿಯಿಸಿಲ್ಲ. ಆಗ ರಾತ್ರಿಯ ಬಿಸಿಲಿನ ಝಳ ಹೆಚ್ಚಿತ್ತು. ಒಬ್ಬಾಕೆ ತಲೆಯ ಮೇಲೊಂದು ಬಿಳಿ ಚೀಲದ ದೊಡ್ಡದೊಂದು ಮೂಟೆ. ಕಂಕುಳಲ್ಲೊಂದು ಮಗು. ಮತ್ತಿಬ್ಬರು ಎಳೆಯ ಹುಡುಗಿಯರು ಆಕೆಯ ಜೊತೆಗೆ ಹೆಜ್ಜೆಯಿಡುತ್ತಿದ್ದಾರೆ. ಆ ಹೆಣ್ಮಕ್ಕಳಿಗೆ ಬಹುಶಃ ಹತ್ತು ಹನ್ನೆರಡು ವರ್ಷಗಳ ಆಸು ಪಾಸು ಇರಬೇಕು. ಈಕೆಗೊಂದು 38-4೦ ವರ್ಷಗಳಿರಬೇಕು.

ದೂರ ಹೊರಟಿದ್ದೀರಿ..?

ಊರಿಗೆ. ಆ ಧ್ವನಿಯಲ್ಲಿ ಆಯಾಸವಿತ್ತು.

ಯಾವ ಊರಿಗೆ..?

‘ಎಲ್ಲಿಂದ ಇಲ್ಲಿಗೆ ಬಂದಿದ್ದೇನೋ ಅಲ್ಲಿಗೆ..!’ ಇಲ್ಲಿ, ಆಕೆಯ ಧ್ವನಿ ನಿಶ್ಯಬ್ದದ ಕೂಗಿನಂತಿದ್ದಿತ್ತು. ಹೌದು, ಆಕೆ ಎಲ್ಲೋ ಆಕೆಯ ಊರಿಗೆ ಹೊರಟಿದ್ದಾಳೆ. ಜೊತೆಗೆ ಮೂರು ಹೆಣ್ಮಕ್ಕಳು. ಗಂಡ ಇಲ್ಲ. ಮೂರು ಹೆಣ್ಣು ಮಕ್ಕಳನ್ನು ಕೊಟ್ಟು ಸತ್ತು ಹೋಗಿದ್ದಾನೆ.  ಮುಂದೆ ಹೊರಟು ಹೋದಳು.

ಕಾಲಂಶದ ದಾರಿ ಕೂಡ ಮುಗಿದಿರಲಿಲ್ಲ.

ಅಷ್ಟೊತ್ತಿಗಾಗಲೇ, ಆಕೆ ಬೆಂದು ಕರಗಿದ್ದಳು. ರಸ್ತೆ ಪಕ್ಕಗಳಲ್ಲಿ ಬಾಯ್ತೆರೆದು ಮಲಗಿದ್ದ ಚರಂಡಿಗಳೂ ಕೂಡ ಮಾತಾಡಲಿಲ್ಲ. ಗಿಡ ಮರಗಳು ತಂಪೆರೆಯಲಿಲ್ಲ. ಆಕೆಯ ಪಾಲಿಗೆ ನಿಜಕ್ಕೂ ಭಾರವಾದದ್ದೇನನ್ನೋ ಮೇಲಿಂದ ಯಾರೋ ಜಾರಿಸಿ ಬಿಟ್ಟಂಗಾಗಿತ್ತು.

ಒಡೆದ ಪಾದ, ಒಣ ಹೊಟ್ಟೆ. ಬೆವರಲ್ಲಿ ಮಿಂದ ಮೈ.

ಮುಂದೆ ಸಾಗುತ್ತಿದ್ದಾಳೆ.

ಏನೇನೂ ಇದ್ದಿರಲಿಲ್ಲ ಆಕೆಯಲ್ಲಿ. ಊರು ಸೇರಬೇಕೆಂಬುವುದೊಂದೇ, ಅವಳ ಎದೆಯಲ್ಲಿ ಅವಿತಿತ್ತು. ಹಾಗಾಗಿಯೇ, ಅವಳ ಪಾದಗಳು ಸುಟ್ಟು ಗಾಯವಾಗಿದ್ದರೂ, ಚುರುಕು ಹೆಜ್ಜೆಗಳನ್ನಿಡುತ್ತಿದ್ದವು.

ಆಕೆಯದ್ದೋ, ಗಾಳಿ ನುಂಗಿದ ಹೊಟ್ಟೆ. ಅವಳ ಬದುಕೋ, ಏನಿಲ್ಲದ ಶೂನ್ಯ. ಹಗಲು, ರಾತ್ರಿಗಳೆನ್ನದೆ ನಡೆದಿದ್ದಳು. ಊರಿನ್ನೂ ಬರಲಿಲ್ಲ. ಮಣ್ಣಾದ ಬದುಕು, ಉಳಿದಿದ್ದು ದೇಹವೊಂದೆ..! ‘ಪ್ಯಾರ್ ದೇಶ್ ವಾಸಿಯೋ’ ಅಂತಂದವರು ಮುಖ ತೋರಿಸಲಿಲ್ಲ. ಭ್ರಮೆ ಹುಟ್ಟಿಸಿ ಹೋದರು. ಆಕೆ ಇನ್ನೂ ದಾರಿಯಲ್ಲೇ ಇದ್ದಾಳೆ.

ಮೇಲೆ ಕಾಣುವ ಪದರವನ್ನೇ ‘ವಾಸ್ತವ’ ಅಂದುಕೊಂಡಿರುವವರಿಗೆ ಬದುಕೆಂದರೇ, ಹೇಗೆ ಗೊತ್ತಿರುವುದಕ್ಕೆ ಸಾಧ್ಯ..?

ಅದೆಷ್ಟೋ ಕ್ಲಿಷ್ಟ ಬದುಕು ಇನ್ನೂ ಕೂಡ ‘ಗೋಡೆ’ಯಾಚೆಗಿದೆ. ಜೊಡ್ಡು ಪಾಚಿ ಕೊಳಚೆಯಲ್ಲೇ ಬದುಕು ಕಟ್ಟಿಕೊಳ್ಳುತ್ತಿರುವವರು, ಸಿಮೆಂಟ್ ನುಂಗಿ ನಡೆದು ಸಾಗುತ್ತಿರುವ ಲಕ್ಷ ಲಕ್ಷ ಪಾದಗಳ ಬದುಕುಗಳು ಎಂದಿಗೂ ನಿಕೃಷ್ಟ.

ಮತ್ತದೇ, ನೋಟದಲ್ಲಿ ಉರಿ ಸೂಸುತ್ತಿದೆ.

ಬದುಕುವುದೆಂದರೇ, ನಡೆದು ನಡೆದು ಒಣಗಿ ಮಣ್ಣಾಗುವುದು.
-ಶ್ರೀರಾಜ್ ವಕ್ವಾಡಿ 


Wednesday, May 13, 2020

ತಿಂಗಳ 300 ರೂ ಗೌರವಧನವನ್ನೂ ಜನರಿಗಾಗಿ ಮೀಸಲಿಟ್ಟರು ‘ಗುಲಾಬಿ ಅಮ್ಮ’..!



ದೇಶದ ಅಥವಾ ರಾಜ್ಯ ತನ್ನ ರಾಜಧಾನಿ ಸ್ಥಳದಿಂದ ಇಡೀ ದೇಶವನ್ನೋ ಅಥವಾ ರಾಜ್ಯವನ್ನು ನಿಭಾಯಿಸುವುದಕ್ಕೆ ಸಾಧ್ಯವಿಲ್ಲ. ದೇಶದ ಹಳ್ಳಿ ಹಳ್ಳಿ ಪ್ರದೇಶಗಳಲ್ಲಿರುವ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಖಂಡಿತ ಸುಲಭವಿಲ್ಲ. ಅದು ಕಷ್ಟಸಾಧ್ಯ. ಹಾಗಾಗಿಯೇ, ಜಿಲ್ಲೆ, ತಾಲ್ಲೂಕು, ಪಟ್ಟಣ  ಮತ್ತು ಹಳ್ಳಿಗಳಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ನಡೆಸಲು ಚುನಾಯಿತ ಸ್ವರಾಜ್ಯ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು. ಅಂತೆಯೇ, ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯತ್ ರಾಜ್ಯವೆಂಬ ಚುನಾಯಿತ ಸಂಸ್ಥೆ ಆಡಳಿತಕ್ಕೆ ಬಂದವು. ಪಂಚಾಯತ್ ವ್ಯವಸ್ಥೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದು ಇಂದಿಗೆ ಇತಿಹಾಸ.

ಇಂತಹ ಗ್ರಾಮ ಪಂಚಾಯತ್ ಒಂದರಲ್ಲಿ ಸುಮಾರು ಇಪತ್ತು ವರ್ಷಗಳಿಂದ ಅತ್ಯಂತ ಪ್ರಾಮಾಣಿಕವಾಗಿದ್ದುಕೊಂಡು ಇಂದಿಗೂ ಜನಪ್ರೀತಿ ಹೊಂದಿರುವ ಒಬ್ಬ ಮಹಿಳೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮ್ಮೊಂದಿಗಿದ್ದಾರೆ ಎನ್ನುವುದು ಹೆಮ್ಮೆ.

ರಾಜಕೀಯ ಅಂದಮೇಲೆ, ಅಲ್ಲಿನ ವ್ಯವಸ್ಥೆಯಲ್ಲಿ ಮೇಲಾಟಗಳಿರುತ್ತವೆ, ವೈಮನಸ್ಸಿರುತ್ತದೆ, ಪಟ್ಟಭದ್ರ ಹಿತಾಸಕ್ತಿಗಳಿರುತ್ತದೆ, ಹೊಗಳುವವರು, ತೆಗಳುವವರು ಸೇರಿ ಒಮ್ಮೊಮ್ಮೆ ಮಾಡದ ತಪ್ಪಿಗೆ ಕೆಸರು ಮೈಗಂಟಿಸಿಕೊಳ್ಳುವ ಸ್ಥಿತಿಯೂ ಎದುರಾಗುತ್ತದೆ. ಈ ಎಲ್ಲವನ್ನೂ ಎದುರಿಸಿ ಸಮಾಜದ ಪರವಾಗಿ, ಜನರ ಪರವಾಗಿ ನಿಂತು ಯಾವುದೇ ಲಾಭೋದ್ದೇಶಗಳಿಲ್ಲದೆ ಪ್ರಾಮಾಣಿಕವಾಗಿ, ನಿಸ್ವಾರ್ಥವಾಗಿ ದುಡಿದು ಜನರಲ್ಲಿ ಬೆರೆತಿರುವವರನ್ನು ದುರ್ಬಿನ್ ಹಿಡಿದು ಹುಡುಕಿದರೇ, ಅಲ್ಲೆಲ್ಲೋ ಒಬ್ಬರೋ ಇಬ್ಬರೋ ಸಿಗುತ್ತಾರೆ. ಅಂತವರಲ್ಲಿ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮ ಪಂಚಾಯತ್‌ನ ಮೊದಲ ಮಹಿಳಾ ಅಧ್ಯಕ್ಷೆ ಗುಲಾಬಿ ಅಮ್ಮ ಕೂಡ ಒಬ್ಬರು.

ನನಗೆ ಬಡವರಿಗೆ ಏನಾದ್ರೂ ಸಹಾಯ ಮಾಡಬೇಕು ಅಂತ ನನ್ನ ಮನಸಲ್ಲಿದ್ದಿತ್ತು. ಸೇವಾ ಮನೋಭಾವ ಎಳವೆಯಿಂದಲೂ ನನ್ನಲ್ಲಿತ್ತು. ಜನರಿಗಾಗಿ, ಸಮಾಜಕ್ಕಾಗಿ ಏನಾದರೂ ಮಾಡಬೇಕು ಎನ್ನುವ ಕನಸೇ, ರಾಜಕೀಯಕ್ಕೆ ಪ್ರವೇಶ ಪಡೆದುಕೊಳ್ಳುವುದಕ್ಕೆ ಪ್ರೇರಣೆ ನೀಡಿತು. ಈಗ ರಾಜಕೀಯ ಅವಕಾಶವಾದ ಮತ್ತು ಪುರುಷಾತಿರೇಕದ ಧೋರಣೆಗಳು ಮಹಿಳಾ ಪ್ರಾತಿನಿಧ್ಯತೆಯನ್ನು ವಿಫಲಗೊಳಿಸುತ್ತಿದೆ ಎನ್ನುತ್ತಾರೆ ಗುಲಾಬಿ ಅಮ್ಮ.

‘ಗುಲಾಬಿ ಅಮ್ಮ, ಇಂದು ಬೀಜಾಡಿ ಗ್ರಾಮ ಪಂಚಾಯತ್‌ನ ಹಿರಿಯ ಸದಸ್ಯೆ. ಈ ಇಳಿವಯಸ್ಸಿನಲ್ಲೂ ತಮ್ಮ ವಾರ್ಡ್ನ ಹತ್ತಾರು ಸಮಸ್ಯೆಗಳ ಪಟ್ಟಿಯನ್ನು ಇವತ್ತಿಗೂ ಹಿಡಿದು ತಿರುಗುತ್ತಾರೆ. ಇಂದಿಗೂ ಜನಪರ ಕಾರ್ಯಗಳನ್ನು ಮಾಡುವಲ್ಲಿ ಪ್ರಾಮಾಣಿಕತೆ ಎಳ್ಳಷ್ಟೂ ಕಡಿಮೆಯಾಗಿಲ್ಲ. ಬಡವರಿಗೆ, ನಿರ್ಗತಿಕರಿಗೆ, ಅಮಾಯಕರಿಗೆ ತಮ್ಮ ಸ್ವಂತ ಹಣದಿಂದಲೇ ಸಹಾಯ ಮಾಡಿದ ತಾಯಿ ಅವರು. ಹಾಗಾಗಿಯೇ, ಪ್ರತಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಈ ವಾರ್ಡ್ ನ ನಾಗರಿಕರು ಅವರನ್ನೇ ಗೆಲ್ಲಿಸುತ್ತಾರೆ. ಅದು ಅವರ ಪ್ರಾಮಾಣಿಕತೆಯನ್ನು ಹೇಳುತ್ತದೆ' ಅಂತ ಅಲ್ಲಿನ ಸ್ಥಳಿಯರಾದ ಸಂದೇಶ್ ಪೂಜಾರಿ ಮನಬಿಚ್ಚಿ ಹೇಳುತ್ತಾರೆ.

ಒಟ್ಟಿನಲ್ಲಿ, ಒಬ್ಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಆಡಳಿತ ಹೇಗಿರಬೇಕು..? ಜನರಿಗಾಗಿ ಯಾವ ರೀತಿಯಲ್ಲಿ ಗ್ರಾಮ ಪಂಚಾಯತ್ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಹೇಳಿಕೊಟ್ಟವರು ಗುಲಾಬಿ ಅಮ್ಮ.

 ಇನ್ನು ಉಳಿದದ್ದೆಲ್ಲಾ ಸ್ವತಃ ಅವರೇ ಹೇಳುತ್ತಾರೆ ಕೇಳಿ :
ನಾನೊಬ್ಬಳು ಗೃಹಿಣಿ. ಆ ಕಾಲದಲ್ಲಿ ರಾಜಕೀಯಕ್ಕೆ ಕಾಲಿಡುವುದೆಂದರೇ ಮಹಿಳೆಯರಿಗೆ ಅಳುಕಿದ್ದಿತ್ತು. ಮೊದಲಿನಿಂದಲೂ ಬಡವರ ಬಗ್ಗೆ ನನಗೆ ಸೇವೆ ಮಾಡುವ ಮನಸ್ಸಿದ್ದಿತ್ತು. ಆ ಕಾಲದಲ್ಲಿಯೇ, ನಮ್ಮ ಮನೆಯ ಹೆಬ್ಬಾಗಿಲಿನಲ್ಲಿ ನಿರ್ಗತಿಕ ಕೆಲವರಿಗೆ ಆಸರೆಕೊಟ್ಟಂತಹ ತೃಪ್ತಿ ಇದೆ ನನಗೆ. ಇದನ್ನೆಲ್ಲಾ ನೋಡಿ ತಾತ್ಸಾರದಿಂದ ನೋಡಿದವರು ಇದ್ದಾರೆ. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನಲ್ಲಾಗುವ ಸಹಾಯ ಅಂತವರಿಗೆ ಮಾಡುತ್ತಿದ್ದೆ. ತೀರಾ ಬಡಸ್ಥಿಕೆಯಲ್ಲಿರುವವರಿಗೆ ಹಣ ಕೊಟ್ಟು ಸಹಾಯ ಮಾಡುವಷ್ಟು ಒಳ್ಳೆಯ ಸ್ಥಿತಿಯಲ್ಲಿರಲಿಲ್ಲ. ನಾಲ್ಕು ತೆಂಗಿನ ಕಾಯಿಯೋ ಅಥವಾ ಅವರು ಗಂಜಿಯಾದರೂ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲಿ ಅಂತ ಅಲ್ಪ ಸ್ವಲ್ಪ ಅಕ್ಕಿಯೋ ಕೊಟ್ಟು ಸಹಕರಿಸುತ್ತಿದ್ದೆ. ಬಡತನದಲ್ಲೇ ಹುಟ್ಟಿ ಬೆಳೆದಿರುವುದರಿಂದ ಆ ಕಷ್ಟಗಳೆಲ್ಲಾ ಗೊತ್ತಿತ್ತು ನನಗೆ. ಹೀಗೆ ಸಹಾಯ ಮಾಡುತ್ತಿದ್ದ ಸಂದರ್ಭದಲ್ಲಿ, ರಾಜಕೀಯಕ್ಕೆ ಬರುವ ಅವಕಾಶ ದೊರಕಿತು. ಮೊದಲ ಸಾಲಿನಲ್ಲೇ, ಬೀಜಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷತೆ ವಹಿಸಿಕೊಳ್ಳುವ ಜವಾಬ್ದಾರಿ ದೊರಕಿತು. 1999 ರಿಂದ 2001ರ ತನಕ ಅಧ್ಯಕ್ಷೆಯಾಗಿದ್ದೆ. ಸೇವಾ ಮನೋಭಾವ ಇದ್ದಿದ್ದರಿಂದ ರಾಜಕೀಯದಲ್ಲಿ ಪ್ರಾಮಾಣೀಕವಾಗಿ, ಜನಪರವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಯಿತು. ಗ್ರಾಮೀಣ ರಸ್ತೆಗಳಿಗೆ ಪ್ರಮುಖ ಆದ್ಯತೆ ಕೊಟ್ಟಿದ್ದೆ. ಸುಮಾರು 15-16 ಹೊಸ ರಸ್ತೆಗಳು ನನ್ನ ಅವಧಿಯಲ್ಲಾಗಿದೆ ಎನ್ನುವುದು ಹೆಮ್ಮೆ ನನಗೆ. ಕಾಲು ಸಂಕಗಳು, ಒಳಚರಂಡಿ, ನೀರಿನ ವ್ಯವಸ್ಥೆ, ಬೀದಿ ದೀಪ, ಸ್ವಚ್ಛ ಗ್ರಾಮ ಯೋಜನೆಯಡಿಯಲ್ಲಿ ಶೌಚಾಲಯಗಳು, ಗಿರಿಜನ ಸಮುದಾಯದವರಿಗೆ ಮನೆ ನಿರ್ಮಾಣ ನನ್ನ ಅವಧಿಯಲ್ಲಾಗಿದೆ. ಯಾವುದೇ ಯೋಜನೆಯಲ್ಲಿ ಒಂದು ರೂಪಾಯಿ ನಾನು ಇಟ್ಟುಕೊಂಡವಳಲ್ಲ, ಕೆಲಸಗಳಿಂದ ಲಾಭವಾಗಿಲ್ಲ ಎಂದು ಗುತ್ತಿಗೆದಾರರುಗಳೆಲ್ಲಾ ನನ್ನ ಬಗ್ಗೆ ಅಸಮಾಧಾನ ತೋರಿಸಿದ್ದು ಕೂಡ ಇದೆ. ಬಿಪಿಎಲ್ ಕಾರ್ಡ್, ಸಂಧ್ಯಾ ಸುರಕ್ಷಾ, ವಿಧವಾ ಮಾಸಾಶನಗಳನ್ನು ಬಡವರಿಗೆ ಮಾಡಿಸಿಕೊಟ್ಟಿದ್ದೇನೆ. ಜನ ಇಂದಿಗೂ ನನ್ನನ್ನು ‘ಗುಲಾಬಿ ಅಮ್ಮ’ ಅಂತ ಗೌರವದಿಂದ ನೋಡುತ್ತಾರೆ ಎನ್ನುವುದರ ಬಗ್ಗೆ ಆತ್ಮ ತೃಪ್ತಿಯಿದೆ. ನಾನು, ಕಾಂಗ್ರೇಸ್‌ನಿಂದ ಸ್ಪರ್ಧಿಸಿದ್ದರೂ ಕೂಡ ಜನ ನಿಸ್ಪಕ್ಷಪಾತವಾಗಿ ನನ್ನ ಸೇವೆ ನೋಡಿ ಮತ ಹಾಕಿ ಗೆಲ್ಲಿಸಿ ಸೇವೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರು. ವಿರೋಧ ಪಕ್ಷದವರೂ ಕೂಡ ನಾನು ಮಾಡಿದ ಕೆಲಸ ನೋಡಿ ಮತ ಹಾಕಿ ಬೆಂಬಲಿಸಿದ್ದಾರೆ.  ಪಂಚಾಯತ್‌ನ ಆಡಳಿತ ಮಟ್ಟದಲ್ಲಿ ಈಗ ನನ್ನ ಬಗ್ಗೆ ಕೆಲವರು ಭಿನ್ನ ಧ್ವನಿಯಲ್ಲಿ ಮಾತಾಡುತ್ತಾರೆ. ಆದರೇ, ನಾನೆಂದೂ ದ್ವೇಷ ಸಾಧಿಸಿದವಳಲ್ಲ. ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೂ ಕೂಡ ತಪ್ಪು ಮಾತಾಡುತ್ತಾರೆ ಎನ್ನುವುದರ ಬಗ್ಗೆ ಅಸಮಾಧಾನವಿದೆ. ಈಗಂತೂ ಸ್ವಾರ್ಥ ರಾಜಕಾರಣ ತುಂಬಿ ಹೋಗಿದೆ.

ಆಗಿನ ಕಾಲದಲ್ಲಿ ತಿಂಗಳಿಗೆ ಸರ್ಕಾರದಿಂದ ಬರುತ್ತಿದ್ದ 300 ರೂಪಾಯಿ ಗೌರವಧನವನ್ನೂ ಕೂಡ ಎಷ್ಟೋ ಸಂದರ್ಭಗಳಲ್ಲಿ ಸಮಾಜದ ಒಳಿತಿಗಾಗಿ ಕೊಟ್ಟಿದ್ದೇನೆ. ಜನರು ಸಹಕಾರ ನೀಡಿದ್ದಾರೆ, ಗೌರವ ಕೊಟ್ಟಿದ್ದಾರೆ ಆ ಬಗ್ಗೆ ತುಂಬಾ ಸಂತೋಷವಿದೆ. ಅಂತ ಅಪ್ಪಟ ಕುಂದಾಪುರದ ಗ್ರಾಮ್ಯ ಭಾಷೆಯಲ್ಲೇ ಹೇಳುತ್ತಾ ಮಾತಿಗೆ ಚುಕ್ಕಿ ಇಟ್ಟರು ಗುಲಾಬಿ ಅಮ್ಮ. 
-ಶ್ರೀರಾಜ್ ವಕ್ವಾಡಿ 

Tuesday, May 12, 2020

ರೈಲು ಅರ್ಧ ಊರು ತಲುಪಿತ್ತು..!



ರೈಲು ಹೊರಟು ನಿಂತಿತ್ತು.

ಸಿಮೆಂಟಿನಲ್ಲಿ ಮುಖಕ್ಕೆ ಪೌಡರ್ ಹಚ್ಚಿಕೊಳ್ಳುವ, ದುಃಖ ಭಾರದ ಜೊತೆಗೆ ನೂರಾರು ಕೆ.ಜಿ ಮೂಟೆ ಹೊರುವವರೆಲ್ಲಾ ಒಂದೆಡೆ ಸೇರಿದ್ದರು.

ಅವರ ಮುಖದಲ್ಲಿ ಏನೋ ಸಣ್ಣ ಮಂದಹಾಸ.

ಇಡೀ ಪರಿವಾರವೇ, ಮೂಟೆ ಕಟ್ಟಿ ಹೊರಟಿತ್ತು. ಅವರ ಬಳಿಯೇ ಭೂತ, ವರ್ತಮಾನ, ಭವಿಷ್ಯ ಕಾಲಗಳೆಲ್ಲಾ ಇದ್ದವು. ತಲುಪುವುದಕ್ಕೆ ತುದಿ ಕಾಲಿಟ್ಟು ಮುಂದಿದ್ದರು.

ಅಕ್ಕ ಪಕ್ಕದಲ್ಲಿರುವವರಿಗೆ ಅವರೊಳಗೆ ದೊಡ್ಡ ಗುಡ್ಡೆಯಾದ ಕಹಿ ಯಾರಿಗೂ ಕಾಣಿಸಿರಲಿಲ್ಲ. ಪಾಪ...  ಸುಖ, ಸಂತೋಷಗಳೆಲ್ಲಾ ಇವರ ಪಾಲಿಗೆ ಇಂದಿಗೂ ಬೆನ್ನು ತೋರಿಸಿಯೇ ನಿಂತಿವೆ. ಮುಖ ತೋರಿಸಲೇ ಇಲ್ಲ.

ಚುಕುಬುಕು ಹೊರಟೇ ಬಿಟ್ಟಿತ್ತು.

ಅಲ್ಲದೆಷ್ಟೋ ಮಂದಿ, ಇನ್ನೂ ಬೋಗಿಗೆ ಕಾಲಿಡದೇ ಬಾಗಿಲ ಬಳಿಗೆ ಮುಖ ಮಾಡಿ ಓಡುತ್ತಿದ್ದಾರೆ. ಹೆಗಲಿಗೆ ವೇಷಗಳ ತೂಕದ ಚೀಲ. ಅಲ್ಲೊಬ್ಬಳು ತಾಯಿ, ಅವಳ ಸೊಂಟದ ಮೇಲೆ ಕೂಸೊಂದು ಅಳುತ್ತಿತ್ತು. ಮೈ ಸುಕ್ಕು ಕಟ್ಟಿದ ಅಜ್ಜ, ಅಜ್ಜಿ ತುಂಬಾ ದೂರದ ಹಿಂದೆ ಉಳಿದು ಬಿಟ್ಟಿದ್ದಾರೆ.

‘ಸಾಗಿದಷ್ಟು ದಾರಿ ಕಣಮ್ಮಾ’ ಅಂತ ವಯಸ್ಸಾದ ಧ್ವನಿಯೊಂದು ಆರ್ತದಲ್ಲಿ ಮುಳುಗೆದ್ದು ಹೇಳಿತು. ‘ಭೂತವನ್ನು ಹೇಗೋ ಕಳೆದು ಬಂದಿದ್ದೇವೆ. ಭವಿಷ್ಯವನ್ನೂ ಹಾಗೆಯೇ ಕಳೆಯಲು ಸಾಧ್ಯವಿಲ್ಲ’ ಎನ್ನುವುದು ಆ ಧ್ವನಿಯ ಅರ್ಥ.

ಆ ಧ್ವನಿಯ ಹಿಂದೆ ನಡೆದೆ. ಅಲ್ಲೊಬ್ಬರು ಕಟ್ಟಿಗೆ ಹೊತ್ತು ತರುತ್ತಿದ್ದರು, ಮತ್ತೊಬ್ಬರು ಮನೆಯ ಮುಂದೆ ರಾಶಿ ಊದುಬತ್ತಿ ಹಚ್ಚಿ ತಲೆಗೆ ಕೈಕೊಟ್ಟು ಕೂತಿದ್ದರು, ಒಂದಿಬ್ಬರು ಆಚೀಚೆ ಓಡಾಡುತ್ತಿದ್ದರು.

ಆಹುತಿಗೆ ಎಲ್ಲವೂ ತಯಾರಿಯಾಗಿದ್ದಿತ್ತು..! ಮನಸ್ಸಿನ ಶವ ಸಂಸ್ಕಾರಕ್ಕೆ ಕೊಳ್ಳಿಗೆ ಬೆಂಕಿ ಹಚ್ಚುವುದೊಂದೇ ಬಾಕಿ..!

ಇಷ್ಟೋತ್ತಿಗಾಗಲೇ ರೈಲು ಅರ್ಧ ಊರು ತಲುಪಿತ್ತು.

"ಇಲ್ಲಿ ಬದುಕುವುದೆಂದರೇ, ಕೊಳೆತ ಮೇಲೆ ಹನಿಯುವ ಮಳೆ..!"


-ಶ್ರೀರಾಜ್ ವಕ್ವಾಡಿ




Monday, May 11, 2020

ಅವರಿಗೊಂದು ‘ಥ್ಯಾಂಕ್ಸ್’ ಹೇಳಿ..!



ಈಗ ನಾನು ತುಂಬಾ ಪ್ರೀತಿಯಿಂದ ಹೇಳುತ್ತೇನೆ. ಮಾತ್ರವಲ್ಲ, ಅಪರಿಮಿತನಾಗಿ ಹೇಳುತ್ತೇನೆ.

‘ನನ್ನನ್ನು ಸವರಿದವುಗಳಿಗೆಲ್ಲಾ ತುಂಬು ಕೃತಜ್ಞತೆ’.

ಅವುಗಳ ಮುಖಗಳೆಲ್ಲಾ ಥಳಥಳಿಸುವ ಬೆಂಕಿ ಜ್ವಾಲೆಗಳಿಗಿಂತ ಪ್ರಖರವಾಗಿತ್ತು. ಬಹುಶಃ ನನಗೆ ಅಂದು ಸಹಿಸಿಕೊಳ್ಳಲಾಗಲಿಲ್ಲ. ಸಹಿಸಿಕೊಳ್ಳುವುದಕ್ಕೊಂದು ಮಿತಿಯಿದೆ ಅಲ್ವಾ..? ನನ್ನ ಮನಸ್ಸಿಗೆ ನಾನು ಕ್ಷಮೆ ಕೇಳಿ ಸುಟ್ಟು ಹೋದೆ. ಉಳಿದದ್ದು ಸದ್ದು ಮಾಡದೆ ನೆಲಕ್ಕೆ ಉದುರಿದ  ಬೂದಿ ಅಷ್ಟೇ.

‘ಮನಸ್ಸು’ ಈಗ ಗುಟ್ಟು ಹೇಳಿದಂತೆ ಕಿವಿಯ ಬಳಿಗೆ ಬಂದು ಕೇಳುತ್ತಿದೆ.

‘ನಾನು ಅಂದು ಹೋದಾಗ ನೀನು ಹೇಗಿದ್ದೆ..?’

ನಾನು ಉತ್ತರಿಸಿದೆ.

ಏನು..?

“ನೀನು ಮರಳಿ ಬರುವೆ ಎನ್ನುವುದು ಗೊತ್ತಿತ್ತು. ಹಾಗಾಗಿ, ನೀನು ನನ್ನಲ್ಲೇ ಇರುವೆ ಎಂದುಕೊಂಡೆ ನಡೆದೆ, ಕುಣಿದೆ, ದುಃಖಪಟ್ಟೆ, ಆರ್ತದಲ್ಲಿ ಮುಳುಗಿದೆ, ಸಮಾಧಾನ ಪಟ್ಟುಕೊಂಡೆ, ಆಗುವುದೆಲ್ಲಾ ಆಗಿಸಿಕೊಳ್ಳುತ್ತದೆ, ನಡೆಯುವುದೆಲ್ಲಾ ನಡೆಸಿಕೊಳ್ಳುತ್ತದೆ”. ಅಂತಂದೆ.

ತುಟಿ ಅಗಲಿಸಿತು.

ಯಾಕೆ..? ಕೇಳಿದೆ.

ತುಂಬು ಗಟ್ಟಿಯಿಂದ ನಾನಿಲ್ಲದಿದ್ದಲ್ಲೂ ಮುನ್ನುಗ್ಗಿ ನಡೆದದಕ್ಕೆ. ‘ನಾನು ಹೆಮ್ಮೆ ಪಡುತ್ತೇನೆ.’

‘ಭೇಷ್’ ಅಂತ ಹೇಳಿತು.

ಇಲ್ಲಾ, ಮೊದಮೊದಲು, ಎಲ್ಲವೂ ಉದುರಿ ಬೀಳುವಾಗ ದುಃಖವಾಯಿತು. ಉದುರಿದವುಗಳನ್ನೆಲ್ಲಾ ಬಾಚಿಕೊಳ್ಳುತ್ತಿದ್ದೆ. ಜಾಸ್ತಿ ಉದುರಿ ಹೋಗುವಾಗ ನಾನೇ ಒಣಗಿ ಹೋದೆ. ಒಣಗಿ ಬಿದ್ದ ಮರದ ಮೇಲೆ ಮಳೆ ಹನಿಯಲಾರಂಭಿಸಿತು. ಬೆಳಕಿನ ಬಾಣ ಎದೆಗೆ ಚುಚ್ಚಿತು. ಟಿಸಿಲು ಬಿಚ್ಚಿದೆ. ಬಿಚ್ಚಲಾರಂಭಿಸುವಾಗಲೇ, ಅಲ್ಲ್ಯಾರೋ ಬಂದು ಚಿವುಟಿ ಗಾಯ ಮಾಡಿ ಹೋದರು. ಮತ್ತೆ ಟಿಸಿಲೊಡೆದೆ. ಮತ್ತೆ ಚಿವುಟಿ ಒಗೆದರು. ಅವರು ಒಗೆದು ಬಿದ್ದಲ್ಲೇ ಎದ್ದೆ, ತುಳಿದು ಹೋದರು.

ಅದೊಂದು ಭೀಕರವಾದ ಅಭಾವ ರಿಕ್ತತೆ ಕಾಡಿ ಕೊರಗಿಸಿತು.

ವಿಚಿತ್ರವೆಂದರೇ, ಅದು ನನ್ನ ಕ್ರಿಯೆಗೆ ಅವರ ಪ್ರತಿಕ್ರಿಯೆಯೂ ಆಗಿತ್ತು. ಇದ್ದಕ್ಕಿದ್ದಂತೆ ಒಮ್ಮೆ ಗಟ್ಟಿಯಾಗಿ ನಿಂತು ಬಿಡುವ ಧೈರ್ಯದ ನಿರ್ಧಾರ ಮಾಡಿಬಿಟ್ಟೆ. ಆಗಿನ್ನೂ, ಕಾಲಂಶದ ಹಾದಿಯೂ ಕ್ರಮಿಸಿರಲಿಲ್ಲ.

ಆಗ ಮನಸ್ಸು ಮಾತಾಡಿತು.

‘ನಿನ್ನನ್ನು ತುಳಿದವರ‍್ಯಾರೂ ಪರರಲ್ಲ. ನಿನ್ನವರೇ.’

ಅವರಿಗೆ ಸೌಜನ್ಯಕ್ಕೊಂದು ‘ಥ್ಯಾಂಕ್ಸ್’ ಹೇಳಿ.

ಸೋಲುವುದೆಂದರೇ, ಸತ್ತು ಮಣ್ಣಾಗುವುದಲ್ಲ. ಬೆಳೆಯುವುದಕ್ಕೆ ಮೂಲ ಹುಡುಕುವುದು..!
-ಶ್ರೀರಾಜ್ ವಕ್ವಾಡಿ
(📱 8762723716)

Sunday, May 10, 2020

ನಿಶೆಯ ಬೆಳಕಲ್ಲಿ ತೀರ ಕಾಣದು..!



ಈ ಬಗ್ಗೆ ಏನೂ ಬರೆಯಬೇಕು ಅಂತ ಅನ್ನಿಸುತ್ತಿಲ್ಲ. ಬರೆಯಬಾರದು ಅಂತ ಕೂಡ ಅನ್ನಿಸುತ್ತಿಲ್ಲ..! ಬರೆದರೇ, ಹೇಗೆ ಬರೆಯಬೇಕು..? ಬರೆದಾದ ಮೇಲೆ ಹೇಗದನ್ನು ಅರಗಿಸಿಕೊಳ್ಳಬೇಕು..?

ಅಂದು ನಿಶೆಯ ಬೆಳಕು ಸುಡುತ್ತಿತ್ತು. ಅಯ್ಯೋ, ನೀವಂದುಕೊಂಡಿದ್ದು ಸುಳ್ಳು, ನಿಶೆಯ ಕಥೆ ಹೇಳಲು ಹೊರಟಿದ್ದಲ್ಲ ನಾನೀಗ. ಅಲ್ಲಿಂದಲೇ ಆರಂಭವೆನ್ನಲು ಹೊರಟೆ ಅಷ್ಟೇ. ಏನಪ್ಪಾ ಇವನದ್ದು...  ಯಾವುದೂ ಅರ್ಥವಾಗಲ್ಲ ಅಂತ ಅಂದ್ಕೊಳ್ಬೇಡಿ. ಅರ್ಥವಾಗದಿರುವಷ್ಟೇನು ಕ್ಲಿಷ್ಟವಿಲ್ಲ.

‘ನಿಶೆ’ ಅಷ್ಟೇ.

ಬಾಡಿದಷ್ಟು ಚಿಗುರುವ, ಬಿದ್ದರೇ ಏಳುವ, ಎದ್ದರೇ ಬೀಳುವ, ಎದ್ದು ಬೀಳುವ, ಬಿದ್ದು ಏಳುವ ಮತ್ತು ಆರಂಭದಲ್ಲೇ ‘ಸಾಕಪ್ಪಾ ಸಾಕು’ ಎನ್ನುವಷ್ಟು ಭ್ರಮನಿರಸನ ಹುಟ್ಟಿಸುವ ಛಾಳಿ ಯಾವುದಕ್ಕಾದರೂ ಇದ್ದರೇ, ಅದು ಬದುಕಿಗೆ ಮಾತ್ರ.

ಹೌದು, ಅದು ನಿಶೆಯೇ ಸರಿ. ನಿಶೆಯ ಬೆಳಕಿನಲ್ಲಿ ತೀರ ಕಾಣುವುದಿಲ್ಲ.

ಗೊತ್ತಿಲ್ಲದ ಹಾಗೆ...  ಕುಂಡೆಗೆ ಒದೆಯುತ್ತದೆ, ಫಟ್ ಎಂದು ಕೆನ್ನೆಗೆ ಹೊಡೆಯುತ್ತದೆ, ದೂಡಿ ಬೀಳಿಸುತ್ತದೆ, ಕೊರಳಿಗೆ ನೇಣು ಬಿಗಿಯುತ್ತದೆ, ವಿಷದ ಬಾಟಲಿಯ ಮುಚ್ಚುಳ ತೆಗೆಸುತ್ತದೆ, ಕತ್ತಿಯಿಂದ ಕಡಿದುಕೊಳ್ಳಲು ಪ್ರೇರೇಪಿಸುತ್ತದೆ..!

ಕೊನೆಗೆ ಕಿವಿಯಲ್ಲಿ ಮೆಲ್ಲ ಹೇಳುತ್ತದೆ. ‘ನಿನಗೊಂದಿಷ್ಟು ತಾಲೀಮು ಹೇಳಿಕೊಟ್ಟೆ ಅಷ್ಟೇ’ ಅಂತ..!
ಕಾರಿನ ವೇಗಕ್ಕೆ ತಡಬಡಿಸುತ್ತಾ ಹಿಂದೆ ಓಡಿ ಸೋಲುವ ಶ್ವಾನ ಕೊನೆಗೆ ಆಯಾಸದಲ್ಲಿ ಹೇಗೆ ಜೊಲ್ಲು ಸುರಿಸುತ್ತಾ ಕೂರುತ್ತದಲ್ವಾ..? ಹಾಗೆ ಈ ಜೀವನ..!

ಹೋಗುವ ದಾರಿಯ ಮಧ್ಯೆದಲ್ಲೇ, ಇದ್ದಕ್ಕಿದ್ದಂತೆ ಗೋಡೆ ಕಟ್ಟಿಕೊಳ್ಳುತ್ತದೆ.

ಪ್ಲೀಸ್...

ನಾನು ನನ್ನ ಹೆಜ್ಜೆಗಳನ್ನಾದರೂ ಊರುತ್ತೇನೆ. ಬೇರೆಯವರದ್ದಂತೂ ಆಗುವುದಿಲ್ಲ. ನಿಶೆಯಲ್ಲಿ ರಸ್ತೆ ಕಾಣುವುದು ಇಲ್ಲ. ತಿರುವುಗಳೂ ಕೂಡ.

ಬೆಳಕು ಹುಡುಕುವ ಖಯಾಲಿ

“ಬದುಕುವುದೆಂದರೇ, ಹೊಲಿಗೆಯ ಆರಂಭವನ್ನು ಹುಡುಕುವಲ್ಲಿ ಮೌನವಾಗುವ ಸೂಜಿ.”

-ಶ್ರೀರಾಜ್ ವಕ್ವಾಡಿ   
(📱 8762723716)

ಹುಣ್ಣಿಮೆ ಹೊಳಪು..!



ಅಮ್ಮ, ಅಡುಗೆ ಮನೆಯ 
ಹೊಗೆಯಲಿ ಬೆಂದು 
ಬಾಡಿದ ಸುಮ
ಅವಳ ಬೆವರ ಹನಿಗಳ 
ಕನಸುಗಳಲಿ ಹೊದ್ದು 
ಮಲಗುವಷ್ಟಿದೆ ಘಮ...!

ಅವಳ ಪ್ರೀತಿಯೆಂದರೇ, 
ಬೊಗಸೆ ಭರ್ತಿಯಾಗುವಷ್ಟು.
ಸುಕ್ಕೆದ್ದ ಅವಳ ಮೈ ಮೇಲೆ
ಮತ್ತೆ ಮಗುವಾಗಿ ಆಡಬೇಕು..! 

ನಗು ಕಾಯುವ ಜೀವಕ್ಕೆ 
ಎದೆ ತುಂಬಾ ದುಃಖ. 
ಧಗ್ಗೆಂದೆದ್ದ ಒಲೆಯ ಬೆಂಕಿಯ
ಹೊಗೆ ನುಂಗಿದವಳಿಗೆ 
ಎದೆಗೊದೆಯುವ ನೋವೆಲ್ಲಾ 
ಹಿರಿದೇನಲ್ಲ. 
'ಅಮ್ಮ'ನಲ್ಲವೇ, ಅವಳಿಗದು 
ಒಲಿದ ಸಿದ್ಧಿ...!

ಅವಳ ಕೈಗಪ್ಪಿದ 
ಬಳೆಗಳಾಡುವ ಧ್ವನಿ,
ತೂಗಲಾರಂಭಿಸಿದ 
ಕಿವಿಗಳೆರಡರಲ್ಲಿ ಮುಂದೆ ಬಾಗಿ 
ನಿಂತಿರುವ ಬೆಂಡೋಲೆಗಳನು
ನೂರ್ಕಾಲ ಕಂಡು 
ಅವಳ ಹಿಗ್ಗಿದ ಭಾವದಲೆಯ ನೇತ್ರಸಲಿಲದ 
ಒಂದೇ ಒಂದ್ಹನಿ ನಾನಾಗಬೇಕು..!

ಅಮ್ಮನೆಂದರೇ, ಪರ್ಯಾಯವಿಲ್ಲದ 
ಹುಣ್ಣಿಮೆ ಹೊಳಪು...!
-ಕಾವ್ಯ ಬೈರಾಗಿ 
(ಶ್ರೀರಾಜ್ ವಕ್ವಾಡಿ)
📱 : 8762723716






ಅಮ್ಮ ಎಂದರೇ, ಧೀ ಶಕ್ತಿ..!



ನಮ್ಮ ಆಯಸ್ಸನ್ನು ಹೆಚ್ಚಿಸುವ ಶಕ್ತಿ ಇರುವುದೆಂದರೇ, ಅದು ಅಮ್ಮ ಎನ್ನುವ ಅಪೂರ್ವ ಭಾವಕ್ಕೆ ಮಾತ್ರ. ಅವಳ ಮಡಿಲಿನ ಅಪರಿಮಿತ ಸುಖದಾಚೆಗೆ ಬಂದಾಗ ಮಗು ಅಳಲಾರಂಭಿಸುತ್ತದೆ. ಅಮ್ಮ ಎದುರು ಬಂದಾಗಲೇ, ಅಳುವ ಮಗು ಒದ್ದೆಗಣ್ಣಿನ ಮಬ್ಬಿನಿಂದ ಹೊರಬಂದು ತುಟಿ ಅಗಲಿಸಲಾರಂಭಿಸುತ್ತದೆ. ವಾವ್ಹ್, ಮತ್ತೆ ಅಮ್ಮನ ಮಡಿಲಲ್ಲಿ ಮಗುವಾಗಬೇಕು.



‘ಅಮ್ಮ’ ನನ್ನ ಪಾಲಿಗೆ ಮಹತ್ತರ ಕ್ಷಮತೆ. ನನ್ನೆಲ್ಲಾ ನಡೆಗಳ ಹಿಂದಿನ ಎಲುಬು. ನನ್ನ ಅಮ್ಮ, ಅಂಗನವಾಡಿ ಟೀಚರ್. ಹಾಗಾಗಿ, ನನ್ನ ಅಮ್ಮನೇ ನನಗೆ ಮನೆಯ ಮೊದಲ ಗುರುವೂ ಹೌದು, ಶಾಲೆಯ ಮೊದಲ ಟೀಚರ್ ಕೂಡ ಹೌದು. ನನಗೆ ಅಮ್ಮನನ್ನು ಎರಡು ಪಾತ್ರಗಳಲ್ಲಿ ನೋಡಿದ ಅನುಭವವಿದೆ.

ನನ್ನ ಬೆಳವಣಿಗೆಯಲ್ಲಿ ಅಮ್ಮನ ಪ್ರಭಾವ ದೊಡ್ಡದಿದೆ. ನಾನು ಪತ್ರಿಕೋದ್ಯಮದಲ್ಲಿ ಬದುಕು ಕಂಡುಕೊಳ್ಳಲು ಕನಸು ಕಂಡು ಹೊರಟವ. ಬಾಲ್ಯದಲ್ಲಿರುವಾಗಲೇ ಓದುವುದಕ್ಕೆ ಆಸಕ್ತಿ ಹುಟ್ಟಿಸಿದ್ದು ಅಮ್ಮ. ದಿನನಿತ್ಯ ಅಮ್ಮ ಸುದ್ದಿ ಪತ್ರಿಗಳನ್ನು ಹಿಡಿದು ತಾಸುಗಟ್ಟಲೆ ಕೂರುತ್ತಿದ್ದದ್ದು, ವಾರಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಬರುತ್ತಿದ್ದ ಕಥೆ, ಕಾದಂಬರಿಗಳನ್ನು ಬಿಡದೇ ಓದುತ್ತಿದ್ದದ್ದನ್ನು ನನ್ನ ಬಾಲ್ಯದ ಕಣ್ಣುಗಳು ಕಂಡಿದ್ದು ನೆನಪಿದೆ. ಹಾಗಾಗಿ, ನನ್ನ ಶಾಲಾ ದಿನಗಳಿಂದಲೇ ಪತ್ರಿಕೆಗಳ ಓದುವ ಚಟಕ್ಕೆ, ಕಥೆ, ಕಾದಂಬರಿಗಳ ಪುಸ್ತಕಗಳ ಓದುವ ಹುಚ್ಚಿಗೆ ಅಮ್ಮನೇ ಮೂಲ ಸ್ಫೂರ್ತಿ. ಆದ್ದರಿಂದ, ನನ್ನಮ್ಮ ನನಗೆ ದೈತ್ಯ ಶಕ್ತಿ.

ಬಂದ ಕಷ್ಟಗಳನ್ನು, ಎದುರಾದ ಕಷ್ಟಗಳನ್ನು ಒಂದಿನಿತೂ ತೋರಿಸಿಲ್ಲ. ಎಷ್ಟಿದ್ದರೂ ಅದೇ ಅಮ್ಮನ ಮಗ ಅಲ್ಲವೇ..?! ಅವಳ ಒಳನೋವು ಗೊತ್ತಿದೆ. ಆ ಎಲ್ಲಾ ನೋವುಗಳನ್ನು ದೂರ ಮಾಡುವ ಪ್ರಯತ್ನದಲ್ಲಿದ್ದೇನೆ. ನನಗೋ, ಅಮ್ಮ ಅಂದರೇ, ನನ್ನೆದೆಯ ಶಕ್ತಿಯಾಗಿ, ಬದುಕಿನ ಉಕ್ತಿಯಾಗಿ ಜೊತೆಗಿರುವ ಧೀ ಶಕ್ತಿ.

  -ಶ್ರೀರಾಜ್ ವಕ್ವಾಡಿ