ಪಂಚರಾಜ್ಯ ಚುನಾವಣೆಗೆ ಮೋದಿ ಗಿಮಿಕ್ | ಪಂಜಾಬ್ ನಲ್ಲಿ ಸಿಂಗ್ ಕಿಂಗ್ ಮೇಕರ್
ಈ ‘ರೇ’ ಎನ್ನುವ ಶಬ್ದ ಅಥವಾ ಅಕ್ಷರ ಕನ್ನಡ ಶಬ್ದಕೋಶದಲ್ಲಿರುವ ಅತ್ಯಂತ ಅಸಹನೀಯ ಮತ್ತು ಅಸಹ್ಯ ಅಂತನ್ನಿಸುತ್ತಿದೆ. ಹೌದು, ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲಗಳೇ ಹೊರತಾಗಿ ಏನೂ ಸಮಸ್ಯೆಯಾಗುವುದಿಲ್ಲ. ಕೃಷಿ ಕಾಯ್ದೆಗಳಲ್ಲಿ ಸುಧಾರಣೆ ತಂದಿರುವುದಕ್ಕಾಗಿ ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದು ಪದೇ ಪದೇ ಹೇಳುತ್ತಿದ್ದ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವ‘ರೇ’ ಈ ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಘೋಷಿಸಿ, ಕಳೆದೊಂದು ವರ್ಷದಿಂದ ಈ ಮೂರು ಕೃಷಿ ಕಾಯ್ದೆಗಳ ವಿರುದ್ಧ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಹೋರಾಟ ನಡೆಸಿದ ರೈತರ ಮುಂದೆ ಕೊನೆಗೂ ಸೋಲೊಪ್ಪಿಕೊಂಡಿದ್ದಾರೆ.
ಒಂದೊಮ್ಮೆಯೂ ಈ ಹಿಂದೆ ಈ ವಿಚಾರವಾಗಿ ಪ್ರತ್ಯಕ್ಷವಾಗಿ ರೈತರ ಮುಂದೆ ಬಂದು ಒಂದು ಸೊಲ್ಲೆತ್ತದ ಮಾನ್ಯ ಪ್ರಧಾನಿಗಳು “ನಮ್ಮಿಂದ ತಪ್ಪಾಗಿದೆ, ದೇಶದ ರೈತರ ಕ್ಷಮೆ ಕೇಳುತ್ತೇನೆ” ಎಂದು ಕಾಯ್ದೆಗಳನ್ನು ವಾಪಾಸ್ ಪಡೆಯುತ್ತೇವೆ ಎಂದು ಹೇಳುವ ಸ್ಥಿತಿ ಮಾನ್ಯ ಪ್ರಧಾನ ಮಂತ್ರಿಗಳಿಗೆ ಬರಬಾರದಿತ್ತು. ಮೋದಿ ಸುಳಿವೇ ಇಲ್ಲದಂತೆ ಏಕಾಏಕಿ ಬಂದು ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಹೇಳಿರುವುದರಿಂದ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿವೆ. ದೇಶ ಮಟ್ಟದಲ್ಲಿ ಚರ್ಚೆಯಾಗುವುದನ್ನು ನೋಡುವುದೇ ಪ್ರಧಾನಿಯವರಿಗೆ ವಿಪರೀತ ಸಂತಸ ನೀಡುವ ಸಂಗತಿ ಎಂದು ಕಾಣಿಸುತ್ತಿದೆ. ರಾಷ್ಟ್ರದ ರಾಜಧಾನಿ ದೆಹಲಿಯ ಗಡಿ ಭಾಗಗಳಲ್ಲಿ ಹಾಗೂ ಇತರೆ ರಾಜ್ಯಗಳಲ್ಲಿ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದ ರೈತರ ವಿರುದ್ಧ ಕಡೆಗೂ ಮಣಿದು ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿರುವುದರ ಹಿಂದೆ ಪ್ರಧಾನಿ ಹಾಗೂ ಬಿಜೆಪಿಯ ‘ಮೆಘಾ ಪ್ಲ್ಯಾನ್’ ಇದೆ ಎನ್ನುವುದು ಅಕ್ಷರಶಃ ಸತ್ಯ. ೨೦೧೪ ರಲ್ಲಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಬಿಜೆಪಿಯ ಜೊತೆಗೆ ನಿಂತು ದೇಶ ಗೆಲ್ಲಲು ತಂತ್ರ ಹೆಣೆದಿದ್ದರು. ಅಲ್ಲಿಂದೀಚೆಗೆ ಬಿಜೆಪಿ ಪಕ್ಷವೇ ತಂತ್ರ ಹೆಣೆಯುವಷ್ಟು ಬೆಳೆದು ನಿಂತಿದೆ ಎನ್ನುವುದನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕೆಲವು ನಿರ್ಧಾರಗಳೇ ಸೂಚಿಸುತ್ತವೆ. ಒಂದು ರೀತಿಯಲ್ಲಿ ಚುನಾವಣೆಯ ಒಂದೇ ಒಂದು ಉದ್ದೇಶಕ್ಕಾಗಿ ಬಿಜೆಪಿ ಯಾವುದಕ್ಕೂ ಬೇಕಾದರೂ ಸಿದ್ಧ ಎಂಬುವುದು ಈಗೀಗ ಸ್ಪಷ್ಟವಾಗುತ್ತಿದೆ. ಪ್ರಧಾನಿಗಳು ಹೇಳಿರುವ ಹಾಗೆಯೇ, “ರೈತರಿಗಾಗಿ ಕೃಷಿ ಕಾಯ್ದೆಗಳನ್ನು ತಂದೆವು, ದೇಶಕ್ಕಾಗಿ ವಾಪಾಸ್ ಪಡೆಯುತ್ತಿದ್ದೇವೆ” ಎಂಬ ಮಾತಿನಲ್ಲೇ ತಮ್ಮ ಆಡಳಿತ ವರ್ಚಸ್ಸಿಗೆ ಧಕ್ಕೆ ಆಗಬಾರದೆಂಬ ಕಾಳಜಿ ಇದು ಎನ್ನುವುದರಲ್ಲಿ ಸಂಶಯವೇ ಇಲ್ಲ.
ಕಾಯ್ದೆ ‘ಪರ’ರ ಉಲ್ಟಾ ನಿಲುವು : ಕೇಂದ್ರ ಸರ್ಕಾರ ಅಂಗೀಕಾರ ಮಾಡಿದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಸಿದ ರೈತ ಪ್ರತಿಭಟನಾಕಾರರನ್ನು ಖಲಿಸ್ತಾನಿಗಳು, ದೇಶ ದ್ರೋಹಿಗಳು, ಭಯೋತ್ಪಾದಕರು ಎಂದು ಕರೆದ ಪ್ರದಾನಿ ಮೋದಿ ಅವರ ಅನುಯಾಯಿಗಳು ಏಕಾಏಕಿ ಈಗ ತಮ್ಮ ನಾಲಿಗೆ ಬದಲಾಯಿಸಿಕೊಂಡಿರುವುದನ್ನು ನೋಡಿದರೇ, ವಿಚಿತ್ರ ಅನ್ನಿಸುತ್ತಿದೆ. ಯಾರು ರೈತರ ಪ್ರತಿಭಟನೆಯನ್ನು ದೇಶ ದ್ರೋಹ ಚಟುವಟಿಕೆ ಎಂದು ಜರೆದಿದ್ದರೋ, ಅವರು ಈಗ ‘ಪ್ರತಿಭಟನೆ, ವಿರೋಧ ಮಾಡುವುದು ಪ್ರಜಾಪ್ರಭುತ್ವದ ಬ್ಯೂಟಿ’ ಎಂದು ಸಾಫ್ಟ್ ಧೋರಣೆ ತೋರಿಸುತ್ತಿರುವುದನ್ನು ನೋಡಿದರೇ, ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಅಷ್ಟಕ್ಕೂ ೨೦೧೪ ರಿಂದ ಕೆಲವರಿಗಂತೂ ಅನುಕೂಲಕ್ಕೆ ತಕ್ಕ ಹಾಗೆ ನಾಲಿಗೆ ಬದಲಾಯಿಸಿಕೊಳ್ಳುವ ಅಭ್ಯಾಸ ರೂಢಿಯಾಗಿ ಬಿಟ್ಟಿದೆ.
ಮುಂದಿನ ವರ್ಷ ಬರಲಿರುವ ಪಂಚರಾಜ್ಯ ಚುನಾವಣೆಯನ್ನು ಉದ್ದೇಶಿಸಿಕೊಂಡೇ ಕೇಂದ್ರ ಸರ್ಕಾರ ಈ ಕಾಯ್ದೆಗಳ ಹಿಂಪಡೆಯುವ ನಿರ್ಧಾರಕ್ಕೆ ಮುಂದಾಗಿದ್ದು ಎನ್ನುವುದು ಎಳೆ ಕೂಸಿಗೂ ಗೊತ್ತಿರುವ ವಿಚಾರ. ಆದರೇ, ಬಿಜೆಪಿ ಹಾಗಲ್ಲ ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿರುವುರದ ಮೂಲಕ ಜನರ ಕಿವಿಯ ಮೇಲೆ ಹೂವಿಡೋದಲ್ಲ, ಲಾಲ್ ಬಾಗ್ ನನ್ನೇ ಇಡುತ್ತಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವುದು ಸ್ಪಷ್ಟ. ಆದರೇ, ಅದನ್ನು ತೋರಿಸಿಕೊಳ್ಳಲಾಗದ ಇರಿಸು ಮುರಿಸಿನ ಸ್ಥಿತಿಯಲ್ಲಿದೆ ಬಿಜೆಪಿ.
ವಾಪಾಸ್ ಪಡೆಯುವ ಉದ್ದೇಶ ಪಂಚರಾಜ್ಯ ಚುನಾವಣೆ : ಈ ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲಗಳೇ ಆಗುತ್ತವೆ ಎಂದವರೇ, ದಿಢೀರ್ ಆಗಿ ವಾಪಾಸ್ ಪಡೆಯುವುದಾಗಿ ಹೇಳಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೇ, ಬಿಜೆಪಿ ಬಲವಾದ ರಾಜಕೀಯ ಲೆಕ್ಕಾಚಾರವನ್ನೇ ಹಾಕಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಬರುವ ವರ್ಷ, ಅಂದರೇ ೨೦೨೨ ರಲ್ಲಿ ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಹಾಗೂ ಗೋವಾ ವಿಧಾನ ಸಭಾ ಚುನಾವಣೆಯನ್ನು ಎದುರಿಸುತ್ತಿವೆ. ಇದೇ ಉದ್ದೇಶಕ್ಕಾಗಿ ಕೇಂದ್ರ ಈ ವಾಪಾಸಾತಿ ನಿರ್ಧಾರಕ್ಕೆ ಮುಂದಾಗಿದೆ. ಹೌದು, ೨೦೧೪ ರಲ್ಲಿ ಭೂಸ್ವಾಧೀನ ಸುಗ್ರಿವಾಜ್ಞೆಯ ವಿರುದ್ಧವೂ ಕೇಂದ್ರ ಸರ್ಕಾರದ ವಿರುದ್ಧ ರೈತರು ಬಾರಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಪ್ರತಿ ಪಕ್ಷ ಕಾಂಗ್ರೆಸ್ ಕೂಡ ದೊಡ್ಡ ಮಟ್ಟದಲ್ಲಿ ಆಕ್ರೋಶ ಹೊರ ಹಾಕಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಇದು ಸೂಟ್ ಬೂಟ್ ಸರ್ಕಾರ’ ಎಂದು ನೇರಾನೇರವಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಜರೆದಿದ್ದರು. ದೊಡ್ಡ ಮಟ್ಟದಲ್ಲಿ ವಿರೋಧ ಬಂದ ಕಾರಣದಿಂದಾಗಿ ೨೦೧೫ ರಲ್ಲಿ ಬಿಹಾರ ವಿಧಾನ ಸಭಾ ಚುನಾವಣೆಯ ಮುಂಚಿತವಾಗಿ ಇದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭೂಸ್ವಾಧೀನ ಸುಗ್ರಿವಾಜ್ಞೆಯನ್ನು ಹಿಂಪಡೆದಿತ್ತು. ಅದಾದ ಮೇಲೆ ಈಗ ಮತ್ತೊಮ್ಮೆ ಕೇಂದ್ರ ಹಿಂದ್ಹೆಜ್ಜೆ ಇಟ್ಟು ತೀವ್ರ ಮುಖಭಂಗ ಅನುಭವಿಸಿದೆ.
ಪಂಚರಾಜ್ಯ ಚುನಾವಣೆಯ ಲೆಕ್ಕಾಚಾರ ಖಂಡಿತ ಇದ್ದೇ ಇದೆ. ಬರುವ ವರ್ಷ ಬರಲಿರುವ ವಿಧಾನ ಸಭಾ ಚುನಾವಣೆಯ ಸಮೀಕ್ಷೆಗಳು ಈಗಾಗಲೇ ಹೊರಬಿದ್ದಿದ್ದು, ಪಂಜಾಬ್ ನಲ್ಲಿ ಬಿಜೆಪಿ ಶೂನ್ಯ ಗಳಿಕೆಯ ಸಾಧನೆ ಮಾಡಲಿದೆ ಎಂಬ ಸಮೀಕ್ಷೆಯ ಭವಿಷ್ಯಕ್ಕೆ ಹೆದರಿ, ಬಿಜೆಪಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಹೌದು, ಬಿಜೆಪಿಗೂ ಗೊತ್ತು, ಪಂಜಾಬ್ ನಲ್ಲಿ ಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸುವುದಕ್ಕೆ ಸಾಧ್ಯವಿಲ್ಲವೆಂದು, ಆದರೂ ಪ್ರತಿಪಕ್ಷ ಕಾಂಗ್ರೆಸ್ ನ ಎದುರು ಮರ್ಯಾದೆ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಮಾತ್ರವಲ್ಲದೇ, ಪಂಜಾಬ್ ನಲ್ಲಿ ಸಿಖ್ ಧರ್ಮದ ಮತದಾರರೇ ನಿರ್ಣಾಯಕವಾಗಿ ಪರಿಣಮಿಸುವ ಕಾರಣದಿಂದಾಗಿ ಸಿಖ್ ರನ್ನು ಎದುರು ಹಾಕಿಕೊಂಡು ಬಿಜೆಪಿ ಸ್ಪರ್ಧೆ ಮಾಡುವುದಕ್ಕೆ ಸಾಧ್ಯವಿಲ್ಲ. ಅದೇ ಕಾರಣದಿಂದಾಗಿ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ಜನ್ಮ ದಿನದಂದು ಈ ನಿರ್ಧಾರ ಬಿಜೆಪಿ ಕೈಗೊಂಡಿದೆ ಎನ್ನಲಾಗುತ್ತಿದೆ.
ಪಂಜಾಬ್ ನಲ್ಲಿ ಅಮರಿಂದರ್ ಸಿಂಗ್ ಕಿಂಗ್ ಮೇಕರ್ : ಹೌದು, ಪಂಜಾಬ್ ನಲ್ಲಿ ಕಾಂಗ್ರೆಸ್ ಒಡೆದು ಇಬ್ಭಾಗವಾದ ಬಳಿಕ ಅಲ್ಲಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಕ್ಷದಿಂದ ಹೊರಬಂದು ಹೊಸ ಪಕ್ಷ ಕಟ್ಟಿರುವುದರಿಂದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅಮರಿಂದರ್ ಸಿಂಗ್ ಕಿಂಗ್ ಮೇಕರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಪಂಜಾಬ್ ನಲ್ಲಿ ಅಮರಿಂದರ್ ಪ್ರಭಾವಿ ನಾಯಕ. ಅವರೆದುರಿಗೆ ಸರಿಯಾಗಿ ನಿಲ್ಲುವ ಬೇರೊಬ್ಬ ನಾಯಕ ಸದ್ಯಕ್ಕೆ ಪಂಜಾಬ್ ನಲ್ಲಿ ಇಲ್ಲ ಎಂದೇ ಹೇಳಬಹುದು. ಪಂಜಾಬ್ ನಲ್ಲಿ ಬಿಜೆಪಿ ಮರ್ಯಾದೆ ಉಳಿಸಿಕೊಳ್ಳಬೇಕೆಂದರೇ, ಅಮರಿಂದರ್ ಮನವೊಲಿಸಲೇಬೇಕು. ಅದರ ಮೊದಲ ಹಂತ ಈಗಾಗಲೇ ಆಗಿದೆ ಎಂದು ಕಾಣಿಸುತ್ತದೆ. ಕಾಂಗ್ರೆಸ್ ನಿಂದ ಹೊರಬಂದ ಬಳಿಕ ಅಮರಿಂದರ್ ಸಿಂಗ್ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಜೊತೆಗೆ ಒಂದು ಸುತ್ತಿನ ಮಾತು ಕತೆ ನಡೆಸಿದ್ದಾರೆ. ಆ ಬಳಿಕ ಅಮರಿಂದರ್ ಸಿಂಗ್ ಹೊಸ ಪಕ್ಷದ ಮುಖೇನ ಸ್ಪಧಿಸುವುದಾಗಿ ಘೋಷಿಸಿದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಕ್ಷ, ಬಿಜೆಪಿ ಪ್ರಾಯೋಜಿತ ಪಕ್ಷ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇನ್ನು, ಚುನಾವಣೆಗೆ ಬಿಜೆಪಿಯೊಂದಿಗೆ ಅಮರಿಂದರ್ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅಮರಿಂದರ್ ಮೈತ್ರಿಗೆ ಒಪ್ಪಿದರೇ, ಕಾಂಗ್ರೆಸ್ ನನ್ನು ಸುಲಭವಾಗಿ ಮಣಿಸಬಹುದು ಎಂಬ ದೃಷ್ಟಿ ಬಿಜೆಪಿಗಿದೆ. ಮಾತ್ರವಲ್ಲದೇ, ಮೈತ್ರಿಗೆ ಒಪ್ಪಬೇಕಾದರೇ, ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು ಎಂದು ಅಮರಿಂದರ್ ಡಿಮ್ಯಾಂಡ್ ಮಾಡಿದ್ದರಂತೆ, ಅದೇ ಕಾರಣಕ್ಕೇ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದ್ದರೂ, ಬಿಜೆಪಿ ಅದೊಂದೇ ಉದ್ದೇಶಕ್ಕೆ ಮಾತ್ರ ಹಿಂಪಡೆದದ್ದಲ್ಲ ಎಂಬಂತೆ ಕಾಣಿಸುತ್ತಿದೆ. ಉತ್ತರ ಪ್ರದೇಶದಲ್ಲಿಯೂ ಕೂಡ ಕೆಲವು ಭಾಗಗಳಲ್ಲಿ ಸಿಖ್ ಮತದಾರರೇ ನಿರ್ಣಾಯಕ. ಉತ್ತರ ಪ್ರದೇಶದಲ್ಲಿಯೂ ಕೂಡ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಮಟ್ಟದ ವ್ಯತ್ಯಾಸ ಕಾಣಬಹುದು ಎಂಬ ಸಮೀಕ್ಷೆ ಹೊರಬಂದಿದೆ. ಮತ್ತು ತನ್ನ ಆಡಳಿತದ ವರ್ಚಸ್ಸಿಗೆ ಬಹುವಾಗಿ ಇದು ಹೊಡೆತ ಬೀಳುವ ಸಾಧ್ಯತೆ ಇದೆ ಎಂಬ ಕಾರಣದಿಂದಲೇ ಕೇಂದ್ರ ಈ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ ಎನ್ನುವುದು ಸ್ಪಷ್ಟ.
ವಿರೋಧ ಎಲ್ಲಿಂದ ಆರಂಭ..? : ಹಾಗೆ ಹೇಳುವುದಕ್ಕೆ ಹೋದರೇ, ರೈತರ ಉತ್ಪಾದನೆ ವ್ಯಾಪಾರ ಹಾಗೂ ವಾಣಿಜ್ಯ ಕಾಯ್ದೆ, ರೈತರ ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ ಗಳ ವಿರುದ್ಧ ೨೦೧೭ರಲ್ಲೇ ಹೋರಾಟದ ಕಿಚ್ಚು ಹೊತ್ತಿತ್ತು. ಹೌದು, ೨೦೧೭ ರಲ್ಲಿ ಕೇಂದ್ರ ಸರ್ಕಾರ ಮಾದರಿ ಕೃಷಿ ಕಾಯ್ದೆಗಳ ಬಿಡುಗಡೆ ಮಾಡಿತ್ತು. ಆದಾಗ್ಯೂ ಒಂದು ನಿರ್ದಿಷ್ಟ ಅವಧಿಯ ನಂತರ ಈ ಕಾಯ್ದೆಗಳಲ್ಲಿ ಸೂಚಿಸಲಾದ ಹಲವಾರು ಸುಧಾರಣೆಗಳನ್ನು ರಾಜ್ಯಗಳು ಜಾರಿಗೆ ತಂದಿಲ್ಲ ಎಂಬ ಕಾರಣದಿಂದಾಗಿ ಅನುಷ್ಠಾನದ ಕುರಿತಾಗಿ ಚರ್ಚೆ ಮಾಡುವ ಉದ್ದೇಶದಿಂದ ಏಳು ಮುಖ್ಯಮಂತ್ರಿಗಳನ್ನು ಒಳಗೊಂಡ ಸಮಿತಿಯೊಂದನ್ನು ಜುಲೈ ೨೦೧೯ ರಲ್ಲಿ ರಚಿಸಲಾಯಿತು. ಅದಾಗಲೇ ಸಣ್ಣ ಮಟ್ಟದಲ್ಲಿ ಪಂಜಾಬ್, ಉತ್ತರ ಪ್ರದೇಶ ಹಾಗೂ ಹರಿಯಾಣ ಸೇರಿ ಕೆಲವೆಡೆ ವಿರೋಧ ಎದ್ದಿತ್ತು.
ಇನ್ನು, ಕೃಷಿ ಉತ್ಪನ್ನಗಳು, ಉತ್ಪನ್ನಗಳ ಮಾರಾಟ, ಸಂಗ್ರಹಣೆ, ಕೃಷಿ ಮಾರುಕಟ್ಟೆ ಹಾಗೂ ಗುತ್ತಿಗೆ ಕೃಷಿ ಸುಧಾರಣೆ ಸೇರಿ ಇತರೆ ವಿಷಯಗಳ ಬಗ್ಗೆ ಜೂನ್ ೨೦೨೦ ರ ಮೊದಲ ವಾರದಲ್ಲಿ ಮೂರು ಸುಗ್ರಿವಾಜ್ಞೆ ಅಥವಾ ತಾತ್ಕಾಲಿಕ ಕಾನೂನುಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಈ ತಾತ್ಕಾಲಿಕ ಕಾನೂನುಗಳನ್ನು ಮಸೂದೆಗಳಾಗಿ ಮಂಡಿಸಲಾಯಿತು ಹಾಗೂ ಸಪ್ಟೆಂಬರ್ ೧೫, ೧೮ರ ೨೦೨೦ ರಂದು ಕೇಂದ್ರ ಅಂಗೀಕರಿಸಿತ್ತು. ಸಪ್ಟೆಂಬರ್ ೨೨ ರೊಳಗೆ ರಾಜ್ಯಸಭೆಯು ಮೂರು ಮಸೂದೆಗಳನ್ನು ಅಂಗೀಕರಿಸಿತು. ಆದರೇ, ಪೂರ್ಣ ಮತವನ್ನು ಗಳಿಸುವುದಕ್ಕೆ ಕೇಂದ್ರಕ್ಕೆ ಸಾಧ್ಯವಾಗದೇ ಇರುವ ಕಾರಣದಿಂದಾಗಿ ಪೂರ್ಣ ಮತದಾನಕ್ಕಾಗಿ ವಿಪಕ್ಷಗಳ ಮನವಿಯನ್ನು ಕಡೆಗಣಿಸಿ ಧ್ವನಿಮತದ ಮೂಲಕ ಅಂಗೀಕರಿಸಿತು. ೨೦೨೦ ಸಪ್ಟೆಂಬರ್ ೨೮ ರಂದು ಮಸೂದೆಗಳಿಗೆ ರಾಷ್ಟ್ರಪತಿಗಳು ಸಹಿ ಹಾಕುವ ಮೂಲಕ ತಮ್ಮ ಒಪ್ಪಿಗೆಯನ್ನು ನೀಡಿದ್ದರು, ಈ ಕಾರಣದಿಂದಾಗಿ ಅವುಗಳನ್ನು ಕಾಯ್ದೆಗಳಾಗಿ ಪರಿವರ್ತಿಸಲಾಯಿತು.
ಸಪ್ಟೆಂಬರ್ ೨೦೨೦ ರಲ್ಲಿ ಪಂಜಾಬ್, ಹರಿಯಾಣ , ರಾಜಸ್ಥಾನಗಳಲ್ಲಿ ಈ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಆರಂಭವಾಗಿತ್ತಾದರೂ, ಎರಡು ತಿಂಗಳುಗಳ ನಂತರ ತೀವ್ರ ಸ್ವರೂಪಕ್ಕೆ ಪಡೆದುಕೊಂಡು ದೇಶವ್ಯಾಪಿ ಈ ಪ್ರತಿಭಟನೆ ನಡೆಯಿತು. ಉಳಿದಂತೆ ಪ್ರತಿಭಟನೆ, ಪ್ರತಿಭಟನೆಯನ್ನು ಹಿಂಸಾಚಾರವೆಂದು ಬಿಂಬಿಸಿದ್ದು, ನೂರಾರು ಮಂದಿ ರೈತರ ಸಾವು, ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು, ದೇಶ ದ್ರೋಹಿಗಳೆಂದು ಕರೆದಿದ್ದು, ರೈತರ ಮೇಲೆ ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಿದ್ದು, ಪ್ರಾಯೋಜಿತ ಪ್ರತಿಭಟನೆ ಎಂದು ಬಿಂಬಿಸಿದ್ದು ಎಲ್ಲವೂ ಒಂದು ದೊಡ್ಡ ಇತಿಹಾಸ. ಕಳೆದೊಂದು ವರ್ಷದಿಂದ ನಡೆಯುತ್ತಿರುವ ಈ ಪ್ರತಿಭಟನೆಗೆ ಕಡೆಗೂ ರಾಷ್ಟ್ರಪತಿ ಅಂಕಿತ ಬಿದ್ದ ಮೇಲೂ ವಾಪಸ್ ಪಡೆದುಕೊಂಡು ರೈತರ ವಿರುದ್ಧ ತನ್ನ ಸೋಲನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಒಪ್ಪಿಕೊಂಡಿದೆ.
ಇನ್ನು, ಕೃಷಿ ಕಾಯ್ದೆಯನ್ನು ವಿಪಕ್ಷಗಳು ಚುನಾವಣಾ ಅಸ್ತ್ರ ವನ್ನಾಗಿ ಬಳಸುವುದನ್ನು ತಪ್ಪಿಸುವುದಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಆದರೇ, ಪ್ರತಿಪಕ್ಷಗಳಿಗೆ ಇದೊಂದೇ ಅಸ್ತ್ರ ಅಲ್ಲ. ಆದರೇ, ಈ ವಿವಾದಿತ ಕೃಷಿ ಕಾಯ್ದೆಗಳು ದೊಡ್ಡ ಅಸ್ತ್ರವಾಗಿತ್ತು ಎನ್ನುವುದು ಸತ್ಯ. ಒಟ್ಟಿನಲ್ಲಿ, ಕೇಂದ್ರ ಸರ್ಕಾರ ಈ ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಲಾಗುತ್ತದೆ ಎಂದು ಹೇಳಿದ್ದು, ಪೂರ್ಣವಾಗಿ ಹಿಂಪಡೆಯುತ್ತದೆಯೇ ಅಥವಾ ತಿದ್ದುಪಡಿಯನ್ನು ಮಾತ್ರ ವಾಪಾಸ್ ಪಡೆಯುತ್ತದೆಯೇ ಎನ್ನುವುದರ ಬಗ್ಗೆ ಕುತೂಹಲ ಸೃಷ್ಟಿಸಿದೆ.
-ಶ್ರೀರಾಜ್ ವಕ್ವಾಡಿ