Monday, August 31, 2026

ಅಧಿಕಾರದ ʼಸುಳಿʼಯಲ್ಲಿ ನೈತಿಕತೆಯ ಹುಡುಕಾಟ !

ಸಾಹಿತ್ಯ ಒಂದು ಕಾಲದ ಪ್ರಜ್ಞೆಯಾಗಬೇಕು. ಸಾಹಿತಿ ಆ ಕಾಲವನ್ನು ಸಾಧ್ಯವಾದಷ್ಟು ಪರಿಚಯಿಸುವ ಪ್ರಯತ್ನ ಮಾಡಬೇಕು. ತಾನು ಕಂಡ, ಬದುಕಿದ, ಜೀವಿಸಿದ, ಅನುಭವಿಸಿದ ಘಟನೆಗಳನ್ನು ತನ್ನ ಕೃತಿಗಳಲ್ಲಿ ಸಾಹಿತಿ ಒಂದಲ್ಲಾ ಒಂದು ರೀತಿಯಲ್ಲಿ ವ್ಯಕ್ತಪಡಿಸುತ್ತನೇ ಇರುತ್ತಾನೆ. ಹಾಗೆ ವ್ಯಕ್ತಪಡಿಸದವನು ಸಾಹಿತಿಯೇ ಅಲ್ಲ. ಸತೀಶ್‌ ಶೆಟ್ಟಿ ವಕ್ವಾಡಿ ಅವರಿಗೆ ಕಾಲದ ಪ್ರಜ್ಞೆ ಮತ್ತು ರಾಜಕೀಯ ಪ್ರಜ್ಞೆ ಬಹಳ ಚೆನ್ನಾಗಿದೆ. ಅದನ್ನು ಈ ʼಸುಳಿʼ ಕಾದಂಬರಿಯಲ್ಲಿಯೂ ಕಾಣಿಸಿದ್ದಾರೆ. ವಕ್ವಾಡಿಯ ಪಕ್ಕದೂರು ಅಸೋಡಿನ ನಂದಿಕೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ನಡೆದ ʼಸೂಜಿ ಪ್ರಕರಣʼ ಮತ್ತದರ ಸುತ್ತ ನಡೆದ ಕೋಮು ಸಂಘರ್ಷದ ಎಳೆ ಹಿಡಿದು ಸತೀಶ್‌ ಶೆಟ್ಟಿಯವರು ಈ ಕಾದಂಬರಿಯನ್ನು ಹೆಣೆದಿದ್ದಾರೆ. ಮಾತಾಡಿದ್ದಕ್ಕೆ, ಬರೆದಿದ್ದಕ್ಕೆಲ್ಲದಕ್ಕೂ ಹಣೆಪಟ್ಟಿ ಹಚ್ಚುವ ಕಾಲದಲ್ಲಿ ಇಂತಹದ್ದೊಂದು ಕಾದಂಬರಿಯನ್ನು ಬರೆದಿರುವುದು ಮೆಚ್ಚಲೇ ಬೇಕಾದ ಸಂಗತಿ. 

ಚಂದ್ರಹಾಸ ಎನ್ನುವ ಪಾತ್ರದಲ್ಲಿ ಕಂಡ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ ಇಲ್ಲಿ ಅಚ್ಚರಿಯ ವಿಷಯ. ರಾಮಕೃಷ್ಣ ಹೆಗ್ಡೆ ಅವರ “ಹೆಸರು” ಅಧಿಕಾರದಿಂದ ಮಾತ್ರ ಸೃಷ್ಟಿಯಾಗಲಿಲ್ಲ. ಆಡಳಿತದ ಬಗ್ಗೆ ಅವರ ವಿಭಿನ್ನ ದೃಷ್ಟಿಕೋನ, ಗ್ರಾಮೀಣ ಸ್ವರಾಜ್ಯದ ಕಲ್ಪನೆ ಮತ್ತು ರಾಜಕೀಯ ಶೈಲಿಯೇ ಅವರ ಹೆಸರನ್ನು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವಿಶಿಷ್ಟವಾಗಿ ಸೃಷ್ಟಿಸಿದೆ. ಟೆಲಿಫೋನ್ ಟ್ಯಾಪಿಂಗ್ ವಿವಾದ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆಗಳು ಅವರ ನಾಯಕತ್ವಕ್ಕೆ ಸವಾಲು ತಂದವು. ಆದರೂ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹೆಗ್ಡೆ ಅವರ ಹೆಸರು ವಿಕೇಂದ್ರೀಕರಣ, ಪಂಚಾಯತ್ ರಾಜ್ ಮತ್ತು ಆಡಳಿತ ಸುಧಾರಣೆಗಳೊಂದಿಗೆ ಗಟ್ಟಿಯಾಗಿ ಜೋಡಿಸಿಕೊಂಡಿದೆ. ಅಂತಹದ್ದೊಂದು ವ್ಯಕ್ತಿತ್ವ ಮತ್ತು ಅವರ ಆಡಳಿತಾವಧಿಯ ಕಲ್ಪನೆ, ಸವಾಲು, ರಾಜಕೀಯ ನೈತಿಕತೆಯನ್ನು ಇಲ್ಲಿ ಒಂದು ಪಾತ್ರದ ಮೂಲಕ ಇಳಿಸಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಮಾತ್ರವಲ್ಲ, ಅದು ಆ ಕಾಲದ ಕನ್ನಡಿಯಾಗಿಯೂ ಇಲ್ಲಿ ಕಾಣಿಸುತ್ತದೆ, ಹೊಸ ತಲೆಮಾರಿಗೆ ಪರಿಚಯದ ಪ್ರಯತ್ನವಾಗಿಯೂ ಇಲ್ಲಿ ಕಾಣಿಸುತ್ತದೆ. ಮುಂದುವರಿದು ರಾಜಕೀಯದಲ್ಲಿ ಸಮಾಜವಾದವನ್ನು ಪಾಲಿಸಿದ ಅನೇಕ ಮುಖ್ಯಮಂತ್ರಿಗಳು, ರಾಜಕಾರಣಿಗಳ ವ್ಯಕ್ತಿತ್ವಗಳೂ ಇಲ್ಲಿ ಅಲ್ಲಲ್ಲಿ ಕಾಣಿಸುತ್ತದೆ. 

ಇನ್ನು, ರಾಜಕೀಯವೆಂದರೆ ಅಧಿಕಾರದ ಆಟ, ಪಿತೂರಿ, ಅಕ್ರಮ, ಭ್ರಷ್ಟಾಚಾರ ಮತ್ತು ಸ್ವಾರ್ಥದ ಸಂಘರ್ಷ ಎನ್ನುವ ಕಲ್ಪನೆ ಇಂದು ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿದೆ. ಆದರೆ ರಾಜಕೀಯದ ಈ ಕತ್ತಲೆಯ ಮುಖದಾಚೆಯೂ ಮೌಲ್ಯ, ಪ್ರಾಮಾಣಿಕತೆ, ಮಾನವೀಯತೆ ಮತ್ತು ಸಾರ್ವಜನಿಕ ಬದುಕಿನ ಬದ್ಧತೆಗೆ ಜಾಗವಿದೆ ಎಂಬ ಆಶಾವಾದವನ್ನು ಕಟ್ಟಿಕೊಡುವ ಪ್ರಯತ್ನವೇ ‘ಸುಳಿʼ  ಕೃತಿಯ ಪ್ರಮುಖ ವೈಶಿಷ್ಟ್ಯ. ರಾಜಕೀಯವನ್ನು ಕೇವಲ ಅಧಿಕಾರದ ಚದುರಂಗವಾಗಿ ನೋಡದೆ, ಮನುಷ್ಯನ ನೈತಿಕ ಸಂಘರ್ಷಗಳ ಮೂಲಕ ನೋಡುವುದು ಕೃತಿಗೆ ಒಂದು ವಿಭಿನ್ನ ಆಯಾಮವನ್ನು ನೀಡುತ್ತದೆ.


ಕೃತಿಯ ಕೇಂದ್ರದಲ್ಲಿರುವ ಚಂದ್ರಹಾಸನ ಸುತ್ತ ರೂಪುಗೊಳ್ಳುವ ಪಾತ್ರಗಳೆಲ್ಲವೂ ರಾಜಕೀಯ ವ್ಯವಸ್ಥೆಯ ವಿವಿಧ ಮುಖಗಳನ್ನು ಪ್ರತಿನಿಧಿಸುತ್ತವೆ. ಇವರು ಸಂಪೂರ್ಣವಾಗಿ ಒಳ್ಳೆಯವರು ಅಥವಾ ಕೆಟ್ಟವರು ಎಂಬ ಸರಳ ವರ್ಗೀಕರಣಕ್ಕೆ ಒಳಪಡುವುದಿಲ್ಲ. ಅವರೊಳಗಿನ ದೌರ್ಬಲ್ಯ, ಸ್ವಾರ್ಥ, ಅಧಿಕಾರದ ಆಸೆ, ಪಾಪಪ್ರಜ್ಞೆ, ಸಂಬಂಧಗಳ ಸಂಕೀರ್ಣತೆ ಮತ್ತು ಮಾನವೀಯ ತುಡಿತಗಳು ಅವರನ್ನು ಜೀವಂತ ಪಾತ್ರಗಳನ್ನಾಗಿ ಮಾಡುತ್ತವೆ. ಇದೇ ಕಾರಣಕ್ಕೆ ಕೃತಿಯ ರಾಜಕೀಯ ಲೋಕ ಕೇವಲ ಕಾಲ್ಪನಿಕವಾಗಿ ಉಳಿಯದೆ, ಓದುಗನಿಗೆ ಪರಿಚಿತವಾಗಿರುವ ವಾಸ್ತವದ ಪ್ರತಿಬಿಂಬದಂತೆ ಕಾಣುತ್ತದೆ.

ʼಸುಳಿʼಯ ಪ್ರಮುಖ ಶಕ್ತಿ ಅದರ ನೈತಿಕ ರಾಜಕೀಯದ ಪ್ರಶ್ನೆ. ರಾಜಕೀಯದಲ್ಲಿ ಮಾನವೀಯತೆ ಉಳಿಸಿಕೊಂಡವನು ಸೋಲುತ್ತಾನೆ, ಕುತಂತ್ರ ಮತ್ತು ರಾಜಕೀಯ ಲೆಕ್ಕಾಚಾರ ಬಲ್ಲವನೇ ಗೆಲ್ಲುತ್ತಾನೆ ಎಂಬ ಸಾಮಾನ್ಯ ನಂಬಿಕೆಯನ್ನು ಕೃತಿ ಸವಾಲೆಸೆದು ಪ್ರಶ್ನಿಸುತ್ತದೆ. ಅಧರ್ಮದ ದಾರಿಯಲ್ಲಿ ಸಾಗುವ ವ್ಯಕ್ತಿಯೊಳಗೂ ಒಂದು ಹಂತದಲ್ಲಿ ಪಾಪಪ್ರಜ್ಞೆ ಅಥವಾ ಆತ್ಮಸಾಕ್ಷಿಯ ʼಕಾಟʼ ಆರಂಭವಾಗುತ್ತದೆ ಎಂಬ ನಂಬಿಕೆಯನ್ನು ಲೇಖಕರು ಕೃತಿಯೊಳಗೆ ಅಂತರ್ಗರ್ಭಿಸಿ ಓದುಗರ ಮುಂದಿಟ್ಟಿದ್ದಾರೆ. ಹೀಗಾಗಿ ಇದು ರಾಜಕೀಯದ ಕರಾಳತೆಯನ್ನು ಮಾತ್ರ ದಾಖಲಿಸುವ ಕೃತಿ ಅಲ್ಲ, ಆ ಕರಾಳತೆಯ ನಡುವೆಯೂ ಮೌಲ್ಯಗಳು ಸಂಪೂರ್ಣವಾಗಿ ಸತ್ತಿಲ್ಲ ಎಂಬ ಭರವಸೆಯನ್ನೂ ನೀಡುವ ಕೃತಿ. ಮೌಲ್ಯಗಳಿಗೆ ಬೆಲೆ ಇದೆಯೇ ಎನ್ನುವುದು ಎರಡನೇ ಪ್ರಶ್ನೆ. ಮೌಲ್ಯಗಳಿಂದಲೇ ಬದುಕಬೇಕು ಎನ್ನುವ ಸದಾಶಯ ತುಂಬಿಕೊಂಡಿರುವ ಕೃತಿ ಇದು ಎನ್ನುವುದು ಇಲ್ಲಿ ಹೆಚ್ಚು ಸೂಕ್ತ. 

ಕೃತಿಯ ಮತ್ತೊಂದು ಗಮನಾರ್ಹ ಅಂಶವೆಂದರೆ ಹಿಂದಿನ ರಾಜಕೀಯ ಮತ್ತು ವರ್ತಮಾನದ ರಾಜಕೀಯದ ನಡುವಿನ ಹೋಲಿಕೆ. ದಶಕಗಳ ಹಿಂದೆ ಸಾರ್ವಜನಿಕ ಜೀವನದಲ್ಲಿದ್ದ ಮೌಲ್ಯಾಧಾರಿತ ರಾಜಕೀಯ, ವೈಯಕ್ತಿಕ ಪ್ರಾಮಾಣಿಕತೆ ಮತ್ತು ಜನರ ಮೇಲಿನ ಹೊಣೆಗಾರಿಕೆಯ ನೆನಪುಗಳು ಇಂದಿನ ರಾಜಕೀಯದೊಂದಿಗೆ ಹೋಲಿಸಿದಾಗ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಅಧಿಕಾರಕ್ಕಾಗಿ ಮೌಲ್ಯಗಳನ್ನು ಬದಿಗೊತ್ತುವ ಇಂದಿನ ರಾಜಕೀಯ ಸಂಸ್ಕೃತಿಯ ಎದುರು ಹಿಂದಿನ ತಲೆಮಾರಿನ ಕೆಲವು ನಾಯಕರ ಬದುಕು ಒಂದು ಪರ್ಯಾಯ ರಾಜಕೀಯ ಮಾದರಿಯಾಗಿ ಕೃತಿಯಲ್ಲಿ ಕಾಣಿಸುತ್ತದೆ. ಆದರೆ ಇಲ್ಲಿ ಹಿಂದಿನ ಕಾಲವನ್ನು ಸಂಪೂರ್ಣವಾಗಿ ಆದರ್ಶಗೊಳಿಸುವ ಪ್ರಯತ್ನವೂ ಕೆಲವಡೆ ಕಾಣಿಸಿದೆ. ಹಳೆಯ ರಾಜಕೀಯದಲ್ಲೂ ಮಿತಿಗಳು, ಸಂಘರ್ಷಗಳು ಮತ್ತು ಅಧಿಕಾರದ ಲೆಕ್ಕಾಚಾರಗಳಿದ್ದವು ಎಂಬ ವಾಸ್ತವವನ್ನು ಓದುಗ ತನ್ನ ವಿವೇಚನೆಯಿಂದ ಗಮನಿಸಬೇಕಾಗುತ್ತದೆ. ಆ ವಿವೇಚನೆಯನ್ನು ಓದುಗರಿಗೆ ಬಿಟ್ಟಿದ್ದು ಎನ್ನುವುದನ್ನು ಕೃತಿಕಾರರು ಇಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ಈ ಅಂಶವೇ ಕೃತಿಯನ್ನು ರಾಜಕೀಯ ಭಾವನಾತ್ಮಕ ಸಂಗತಿಯ ಬದಲಿಗೆ ಚರ್ಚೆಗೆ ಅರ್ಹವಾದ ರಾಜಕೀಯ ಕೃತಿಯನ್ನಾಗಿ ಮಾಡುತ್ತದೆ.

ನೈಜ ರಾಜಕೀಯ ಇತಿಹಾಸ ಮತ್ತು ಕಾಲ್ಪನಿಕ ಕಥನದ ಸಮ್ಮಿಶ್ರಣ ‘ಸುಳಿ’ಯ ಮತ್ತೊಂದು ಪ್ರಮುಖ ವೈಶಿಷ್ಟ್ಯ. ರಾಜ್ಯದ ರಾಜಕೀಯವನ್ನು ರೂಪಿಸಿದ ವಿವಿಧ ಪಕ್ಷಗಳ ನಾಯಕರು ಹಾಗೂ ರಾಜಕೀಯ ಘಟನೆಗಳ ನೆರಳು ಕಥೆಯೊಳಗೆ ಪ್ರವೇಶಿಸುವುದರಿಂದ ಕೃತಿಗೆ ರಾಜಕೀಯ ಘಟನೆಗಳ ಐತಿಹಾಸಿಕ ಹಿನ್ನೆಲೆ ದೊರೆಯುತ್ತದೆ. ಅದೇ ಸಂದರ್ಭದಲ್ಲಿ ಕಾಲ್ಪನಿಕ ಪಾತ್ರಗಳು ಆ ಇತಿಹಾಸದೊಂದಿಗೆ ಬೆರೆತಾಗ ಕಥನಕ್ಕೆ ನಾಟಕೀಯತೆಯೂ ಕಾಣಿಸುತ್ತದೆ. ಅವು ಈ ಕಥೆ ಬೆಳೆಯುವುದಕ್ಕೆ ಕೃತಿಕಾರರು ಮಾಡಿದ್ದಾರೆ ಎನ್ನುವುದನ್ನು ಹೊರತಾಗಿ ಬೇರೇನೂ ಇಲ್ಲ. ಆದರೆ ಇಂತಹ ಜೋಡಣೆಯ ಸಂದರ್ಭದಲ್ಲಿ ಒಂದು ಸವಾಲೂ ಇದೆ. ನೈಜ ವ್ಯಕ್ತಿಗಳು ಮತ್ತು ಕಾಲ್ಪನಿಕ ಪಾತ್ರಗಳ ನಡುವಿನ ಗಡಿ ಕೆಲವೊಮ್ಮೆ ಅಸ್ಪಷ್ಟವಾದರೆ, ಓದುಗನಿಗೆ ಕಥೆಯ ವಾಸ್ತವಿಕತೆ ಮತ್ತು ಲೇಖಕರ ಕಲ್ಪನೆಯ ವ್ಯಾಪ್ತಿಯನ್ನು ಪ್ರತ್ಯೇಕಿಸುವುದು ಕಷ್ಟವಾಗಬಹುದು. ಈ ಸೂಕ್ಷ್ಮತೆಯನ್ನು ಅರಿತು ಓದಿದಾಗ ಮಾತ್ರ ಕೃತಿಯ ಉದ್ದೇಶ ಇನ್ನಷ್ಟು ಸ್ಪಷ್ಟವಾಗುತ್ತದೆ.

ಬೆಳಕ್ವಾಡಿ, ಕುಂದಾಪುರ, ಹುಬ್ಬಳ್ಳಿ ಮತ್ತು ಬೆಂಗಳೂರು ಕೃತಿಯ ವಸ್ತುವಿನ ವಿಸ್ತಾರಕ್ಕೆ ಕೇವಲ ಹಿನ್ನೆಲೆಗಳಲ್ಲ, ಅವು ಕಥೆಯ ವಾತಾವರಣವನ್ನು ರೂಪಿಸುವ ಜೀವಂತ ಅಂಶಗಳು. ಅಲ್ಲಿನ ಸಾಮಾಜಿಕ ಪರಿಸರ, ಸ್ಥಳೀಯ ಸಂಸ್ಕೃತಿ, ನಂಬಿಕೆಗಳು, ಆಚರಣೆಗಳು ಮತ್ತು ಜನಜೀವನದ ಸೊಗಡು ಕಥೆಗೆ ಪ್ರಾದೇಶಿಕ ನೆಲೆಯನ್ನು ನೀಡುತ್ತವೆ. ವಿಶೇಷವಾಗಿ ವಿಭಿನ್ನ ಪ್ರದೇಶಗಳ ಬದುಕಿನ ವೈವಿಧ್ಯವನ್ನು ರಾಜಕೀಯ ಕಥನದೊಂದಿಗೆ ಬೆಸೆದಿರುವುದು ಕೃತಿಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.

ಆದರೆ ‘ಸುಳಿ’ಯನ್ನು ಸಂಪೂರ್ಣವಾಗಿ ರಾಜಕೀಯದ ವಾಸ್ತವಚಿತ್ರ ಎಂದು ಪರಿಗಣಿಸುವುದಕ್ಕಿಂತ ರಾಜಕೀಯದ ಮೂಲಕ ಮನುಷ್ಯನನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಎಂದು ನೋಡುವುದು ಹೆಚ್ಚು ಸೂಕ್ತ. ಯಾಕೆಂದರೆ ಕೃತಿಯ ಮೂಲ ಸಂಘರ್ಷ ಅಧಿಕಾರ ಮತ್ತು ವಿರೋಧದ ನಡುವಿನ ಸಂಘರ್ಷ ಮಾತ್ರವಲ್ಲ, ಮನುಷ್ಯನೊಳಗಿನ ಮೌಲ್ಯ ಮತ್ತು ಸ್ವಾರ್ಥದ ನಡುವಿನ ಸಂಘರ್ಷವೂ ಹೌದು. ಇದೇ ಕಾರಣದಿಂದ ಪಾತ್ರಗಳ ಪಾಪಪ್ರಜ್ಞೆ, ಅವರ ಬದಲಾವಣೆಯ ಸಾಧ್ಯತೆ ಮತ್ತು ಮಾನವೀಯತೆಯ ಹುಡುಕಾಟಗಳು ಕಥೆಗೆ ಭಾವನಾತ್ಮಕ ಆಳವನ್ನು ನೀಡಿವೆ.

ಒಟ್ಟಿನಲ್ಲಿ, ‘ಸುಳಿ’ ರಾಜಕೀಯವನ್ನು ಬಿಳಿ ಕಪ್ಪು ಬಣ್ಣಗಳಲ್ಲಿ ಚಿತ್ರಿಸುವ ಪ್ರಯತ್ನವನ್ನಷ್ಟೇ ಮಾಡದೇ, ರಾಜಕೀಯ ವ್ಯವಸ್ಥೆಯೊಳಗಿನ ಕತ್ತಲೆ, ಅಧಿಕಾರದ ಹಸಿವು ಮತ್ತು ಪಿತೂರಿಗಳನ್ನು ತೋರಿಸುತ್ತಲೇ ಅದರೊಳಗೆ ಉಳಿದಿರುವ ಮೌಲ್ಯಗಳ ಬೆಳಕನ್ನು ತೋರಿಸಿದೆ. ಹಿಂದಿನ ರಾಜಕೀಯದ ಮೌಲ್ಯಗಳನ್ನು ನೆನಪಿಸಿಕೊಳ್ಳುವಂತೆ ಮಾಡುವುದರ ಜೊತೆಗೆ, ಇಂದಿನ ರಾಜಕೀಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಪ್ರಶ್ನೆಯನ್ನೂ ಓದುಗರ ಮುಂದಿಟ್ಟಿದೆ. ಈ ಕೃತಿಯ ದೊಡ್ಡ ಸಾಧನೆ ಎಂದರೆ “ರಾಜಕೀಯ ಕೆಟ್ಟದ್ದೇ” ಎಂಬ ನಿರಾಶಾವಾದದ ನಿರ್ಣಯಕ್ಕೆ ಬದಲಾಗಿ, “ಕೆಟ್ಟ ರಾಜಕೀಯದ ನಡುವೆಯೂ ಒಳ್ಳೆಯ ರಾಜಕೀಯ ಸಾಧ್ಯವೇ?” ಎಂಬ ಪ್ರಶ್ನೆಯನ್ನು ಎತ್ತಿದೆ. ಅದರ ಉತ್ತರವನ್ನು ಲೇಖಕರು ಉಪದೇಶದ ರೂಪದಲ್ಲಿ ನೀಡುವುದಿಲ್ಲ, ಪಾತ್ರಗಳ ಬದುಕು, ಅವರ ತಪ್ಪುಗಳು, ಸಂಘರ್ಷಗಳು ಮತ್ತು ಪಾಪಪ್ರಜ್ಞೆಗಳ ಮೂಲಕ ಓದುಗರೇ ಕಂಡುಕೊಳ್ಳುವಂತೆ ಮಾಡಿದ್ದಾರೆ. ಆ ಕಾರಣಕ್ಕೆ ‘ಸುಳಿ’ಯನ್ನು ಕೇವಲ ರಾಜಕೀಯ ಕಾದಂಬರಿಯಾಗಿ ಓದುವುದು ಅದರ ವ್ಯಾಪ್ತಿಯನ್ನು ಸೀಮಿತಗೊಳಿಸುವಂತಾಗುತ್ತದೆ. ಇದು ಅಧಿಕಾರದ ಸುಳಿಯಲ್ಲಿ ಸಿಲುಕಿದ ಮನುಷ್ಯನ ನೈತಿಕ ಹುಡುಕಾಟದ ಕತೆ, ರಾಜಕೀಯದ ಅಧಃಪತನದ ದಾಖಲೆಯ ಜೊತೆಗೆ ಮಾನವೀಯತೆಯ ಸಾಧ್ಯತೆಯ ಮೇಲಿನ ಆಶಾವಾದದ ಕೃತಿಯೂ ಹೌದು. 

- ಶ್ರೀರಾಜ್‌ ವಕ್ವಾಡಿ 


ಅಕ್ಷರದಿಂದ ಯಕ್ಷರಂಗದವರೆಗೆ: ರಂಗದ ಬೆಳಕಿನಲ್ಲಿ ಅರಳಿದ ‘ಯಕ್ಷ ತಾರಾ’ ಶಶಾಂಕ್

ಕೆಲವು ಪ್ರತಿಭೆಗಳು ತಮ್ಮ ಕ್ಷೇತ್ರದಲ್ಲಿ ಮಾತ್ರ ಬೆಳಗುವುದಿಲ್ಲ; ಅವು ತಾವು ಹೆಜ್ಜೆಯಿಡುವ ಪ್ರತಿಯೊಂದು ಕ್ಷೇತ್ರಕ್ಕೂ ತನ್ನದೇ ಆದ ಬೆಳಕನ್ನು ನೀಡುತ್ತವೆ. ಜ್ಞಾನವನ್ನು ಬೋಧಿಸುವ ಅಧ್ಯಾಪಕನಾಗಿ, ಭಾವನೆಗಳಿಗೆ ಜೀವ ತುಂಬುವ ಕಲಾವಿದನಾಗಿ, ಪರಂಪರಾಗತ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಯಕ್ಷಗಾನ ಸಾಧಕನಾಗಿ ಬೆಳೆದಿರುವ ಶಶಾಂಕ್ ಪಟೇಲ್ ಕೆ.ಜಿ. ಅಂತಹ ಅಪರೂಪದ ಬಹುಮುಖ 'ಪ್ರಭಾಪ್ರತಿಭೆ'. ಯಕ್ಷರಂಗದವನ್ನು ಒಪ್ಪಿ ಅಪ್ಪಿಕೊಂಡ ಅವರ ಯಾನ ಕೇವಲ ಒಬ್ಬ ಕಲಾವಿದನ ಬೆಳವಣಿಗೆಯ ಕಥೆಯಲ್ಲ; ಅದು ಪ್ರತಿಭೆ, ಪರಿಶ್ರಮ, ಪರಂಪರೆ ಮತ್ತು ಬದ್ಧತೆಗಳು ಒಂದಾಗಿ ರೂಪಿಸಿದ ಒಂದು ಅರ್ಥಪೂರ್ಣ ಕಲಾಯಾನ.

ಅಧ್ಯಾಪನದ ಜವಾಬ್ದಾರಿಯೊಂದಿಗೆ ಯಕ್ಷಗಾನದ ಕಲಾಸೇವೆಯನ್ನು ಸಮಾನ ಉತ್ಸಾಹದಿಂದ ಮುನ್ನಡೆಸುತ್ತಿರುವ ಪಟೇಲರು, ಅಕ್ಷರಲೋಕದಿಂದ ಯಕ್ಷರಂಗದವರೆಗೆ ತನ್ನದೇ ಆದ ಹೆಜ್ಜೆಗುರುತು ಮೂಡಿಸಿರುವ ಕಲಾವಿದ.

ಕುಂದಾಪುರದ ಪ್ರತಿಷ್ಠಿತ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕರಾಗಿರುವ ಶಶಾಂಕ್ ಪಟೇಲ್ ಅವರ ವ್ಯಕ್ತಿತ್ವದಲ್ಲಿ ಅಧ್ಯಾಪಕನ ಶಿಸ್ತು, ಸಾಹಿತ್ಯಾಸಕ್ತನ ಸೂಕ್ಷ್ಮತೆ ಮತ್ತು ಕಲಾವಿದನ ಸೃಜನಶೀಲತೆ ಮೂರೂ ಸುಂದರವಾಗಿ ಮಿಳಿತಗೊಂಡಿವೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ವಿದ್ಯಾರ್ಥಿಗಳಿಗೆ ಪಾಠ ಹೇಳುವುದಷ್ಟೇ ಅಲ್ಲ, ಕಲೆಯ ಮೂಲಕ ಬದುಕನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯನ್ನೂ ಬೆಳೆಸುವ ಪ್ರಯತ್ನದ ಹಾದಿಯಲ್ಲಿ ಯಶಸ್ಸು ಕಂಡಿದ್ದಾರೆ. 

ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಕೆಳಮನೆಯ ದಿ. ನಾರಾಯಣ ಕೆ.ಜಿ. ಹಾಗೂ ಶ್ರೀಮತಿ ಗೀತಾ ನಾರಾಯಣ ದಂಪತಿಯ ಪುತ್ರರಾಗಿ 14 ಏಪ್ರಿಲ್ 1986ರಂದು ಜನಿಸಿದ ಶಶಾಂಕ್ ಪಟೇಲ್ ಅವರ ಕಲಾಯಾನದ ಬೇರುಗಳು ಕುಟುಂಬದ ನೆಲದಲ್ಲಿಯೇ ಆಳವಾಗಿ ಬೇರೂರಿವೆ. ಮನೆಯದ್ದೇ ಆದ ‘ಸಾಕೇತ ಕಲಾವಿದರು (ರಿ.), ಕೆಳಮನೆ’ ತಂಡದ ಕಲಾ ವಾತಾವರಣವೇ ಅವರೊಳಗಿನ ಕಲಾವಿದನಿಗೆ ಮೊದಲ ಸ್ಪೂರ್ತಿ. ಬಾಲ್ಯ-ಯೌವನದ ಆ ಸಾಂಸ್ಕೃತಿಕ ಪರಿಸರ, ಮುಂದೆ ಅವರನ್ನು ಯಕ್ಷರಂಗದತ್ತ ಕರೆತಂದಿದೆ.

ಯಕ್ಷಗಾನವೆಂಬುದು ಕೇವಲ ವೇಷಭೂಷಣ, ಹೆಜ್ಜೆಗಾರಿಕೆ ಮತ್ತು ಮಾತುಗಾರಿಕೆಯ ಸಂಗಮವಲ್ಲ. ಅದು ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ಸಂಪ್ರದಾಯ ಮತ್ತು ತಾತ್ವಿಕ ಚಿಂತನೆಯ ಸಾರ್ಥಕ ಸಮನ್ವಯ. ಈ ಕಲೆಯ ಆಳವನ್ನು ಅರಿತುಕೊಂಡ ಶಶಾಂಕ್ ಪಟೇಲ್, ಸಂಜೀವ ಸುವರ್ಣ ಬನ್ನಂಜೆ ಹಾಗೂ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಂತಹ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕರಗತ ಮಾಡಿಕೊಂಡರು. ಗುರುಗಳ ಅನುಭವವನ್ನು ತನ್ನ ಅಧ್ಯಯನಶೀಲ ಮನಸ್ಸಿನೊಂದಿಗೆ ಬೆಸೆದುಕೊಂಡು, ರಂಗದ ಮೇಲೆ ತನ್ನದೇ ಆದ ಅಭಿನಯಶೈಲಿಯನ್ನು ರೂಪಿಸಿಕೊಂಡರು.

ಯಕ್ಷರಂಗದಲ್ಲಿ ಅವರ ಪ್ರತಿಭೆಯ ಮತ್ತೊಂದು ವಿಶೇಷತೆ ಎಂದರೆ ಪಾತ್ರಗಳ ವೈವಿಧ್ಯ. ಅರ್ಜುನ, ಭೀಮ, ರಾವಣ, ಕೌರವ, ರಾಮ, ಹನುಮಂತ, ಕೀಚಕ, ಕೃಷ್ಣ ಮುಂತಾದ ವೈವಿಧ್ಯಮಯ ಪೌರಾಣಿಕ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ. ಶೌರ್ಯ, ರೌದ್ರ, ಕರುಣೆ, ವಾತ್ಸಲ್ಯ, ಭಕ್ತಿ, ಪ್ರೇಮ ಭಿನ್ನ ಭಾವಲೋಕಗಳನ್ನು ಹೊತ್ತ ಪಾತ್ರಗಳನ್ನು ಸಹಜವಾಗಿ ಕಟ್ಟಿಕೊಡುವ ಸಾಮರ್ಥ್ಯ ಅವರ ಅಭಿನಯದ ಪ್ರಮುಖ ಶಕ್ತಿ.

ಅವರ ಮನಸ್ಸಿಗೆ ಹತ್ತಿರವಾದ ಪ್ರಸಂಗಗಳಲ್ಲಿಯೂ ಅವರ ಕಲಾಭಿರುಚಿಯ ವೈವಿಧ್ಯ ಕಾಣುತ್ತದೆ. 'ಗದಾಯುದ್ಧ’, ‘ಕೃಷ್ಣಾರ್ಜುನ ಕಾಳಗ’, ‘ಕಾರ್ತವೀರ್ಯಾರ್ಜುನ’, ‘ಮಾರುತಿ ಪ್ರತಾಪ’ ಹಾಗೂ ‘ಲವಕುಶರ ಕಾಳಗ’ ಮೊದಲಾದ ಪ್ರಸಂಗಗಳು ಅವರ ಅಚ್ಚುಮೆಚ್ಚಿನವು. ಯುದ್ಧ, ವೀರತ್ವ, ಧರ್ಮಸಂಕಟ, ಭಕ್ತಿ ಮತ್ತು ಮಾನವೀಯ ಭಾವನೆಗಳ ಸಂಕೀರ್ಣತೆಯನ್ನು ಒಳಗೊಂಡ ಈ ಪ್ರಸಂಗಗಳು ಅವರ ಅಭಿನಯದ ವ್ಯಾಪ್ತಿ ವಿಸ್ತಾರಕ್ಕೂ ಸೂಕ್ತ ವೇದಿಕೆಯಾಗಿ ಅವಕಾಶ ಕೊಟ್ಟು, ಅವರ ಸಾಮರ್ಥ್ಯವನ್ನು ಯಕ್ಷಪ್ರಿಯರ ಮುಂದೆ ಸಾಬೀತು ಪಡಿಸಿವೆ. 

ಪ್ರತಿಷ್ಠಿತ ಡೇರೆ‌ ಮೇಳಗಳಾದ  ಸಾಲಿಗ್ರಾಮ, ಪೆರ್ಡೂರು ಹಾಗೂ ಅಮೃತೇಶ್ವರಿ, ಹಾಲಾಡಿ, ನೀಲಾವರ ಮೇಳಗಳಲ್ಲಿ, ಅತಿಥಿ ಕಲಾವಿದರಾಗಿ ನಡೆಸಿದ ತಿರುಗಾಟಗಳು ಅವರ ಯಕ್ಷಾನುಭವವನ್ನು ಮತ್ತಷ್ಟು ವಿಸ್ತರಿಸಿವೆ. ಪ್ರತಿಯೊಂದು ಮೇಳವೂ ಅವರಿಗೆ ಹೊಸ ಅನುಭವ, ಹೊಸ ಪಾತ್ರ, ಹೊಸ ಸವಾಲು ಮತ್ತು ಹೊಸ ಕಲಿಕೆಯ ಅವಕಾಶವನ್ನು ನೀಡಿವೆ. ಹೀಗಾಗಿ ಅವರ ಯಕ್ಷಗಾನ ಪಯಣ ಕೇವಲ ರಂಗದ ಮೇಲಿನ ಪ್ರದರ್ಶನಗಳ ಸರಣಿಯಾಗದೆ, ನಿರಂತರ ಕಲಿಕೆ ಮತ್ತು ಆತ್ಮಶೋಧನೆಯ ಪಯಣವಾಗಿದೆ.

ಪಟೇಲರ ಈ ಕಲಾಸಾಧನೆಗೆ ದೊರೆತ ಗೌರವಗಳು ಅವರ ಪರಿಶ್ರಮಕ್ಕೆ ಸಾಕ್ಷಿ. 2017ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಉದಯೋನ್ಮುಖ ಯಕ್ಷ ಪ್ರತಿಭೆ’ ಪುರಸ್ಕಾರ ಅವರಿಗೆ ಲಭಿಸಿದೆ. 2019ರಲ್ಲಿ ‘ಯಕ್ಷ ತಾರಾ ಶಶಾಂಕ’ ಎಂಬ ಬಿರುದಿನೊಂದಿಗೆ ಸಮ್ಮಾನಿಸಲ್ಪಟ್ಟಿರುವುದು ಅವರ ಕಲಾಪ್ರತಿಭೆಗೆ ದೊರೆತ ಮತ್ತೊಂದು ಮಹತ್ವದ ಮಾನ್ಯತೆ. ‘ಸ್ವರ್ಣ ನೂಪುರ ಯಕ್ಷ ಸಾಧಕ ಪ್ರಶಸ್ತಿ–2026’ ಅವರ ಯಕ್ಷಗಾನ ಸಾಧನೆಯ ಕಿರೀಟಕ್ಕೆ ಮತ್ತೊಂದು ಮೌಲ್ಯಯುತ ಗರಿಯನ್ನು ಸೇರಿಸಿದೆ. ಈ ಪ್ರಶಸ್ತಿಗಳು ಕೇವಲ ಒಬ್ಬ ಕಲಾವಿದನಿಗೆ ಸಂದ ಗೌರವವಲ್ಲ, ಯುವಜನತೆಯನ್ನು ಯಕ್ಷಗಾನದತ್ತ ಸೆಳೆಯುತ್ತಿರುವ ಕಲಾಸಾಧಕನಿಗೆ ದೊರೆತ ಮಾನ್ಯತೆಗಳೂ ಹೌದು.

ಯಕ್ಷಗಾನದ ಜೊತೆಗೆ ಅವರ ಕಲಾಪ್ರಯೋಗದ ವ್ಯಾಪ್ತಿ ಸಿನಿಮಾ ಕ್ಷೇತ್ರಕ್ಕೂ ವಿಸ್ತರಿಸಿದೆ. ‘ಮಾಡರ್ನ್ ಮಹಾಭಾರತ’ ಎಂಬ ಕನ್ನಡ ಸಿನಿಮಾದಲ್ಲಿಯೂ ಅಭಿನಯಿಸಿರುವ ಅವರು, ರಂಗಭೂಮಿಯಿಂದ ಬೆಳೆದ ಕಲಾವಿದನೊಬ್ಬ ವಿಭಿನ್ನ ಮಾಧ್ಯಮಗಳಲ್ಲಿಯೂ ತನ್ನ ಪ್ರತಿಭೆಯನ್ನು ಹೇಗೆ ವಿಸ್ತರಿಸಿಕೊಳ್ಳಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.

ಅವರ ಕಲಾಸೇವೆಯ ಮತ್ತೊಂದು ಪ್ರಮುಖ ಮಜಲೆಂದರೆ ‘ಆವರ್ತ ಯಕ್ಷ-ವೇದಿಕೆ’. ಕಾಲೇಜಿನ ಈ ವೇದಿಕೆಯ ಸಕ್ರಿಯ ಸಂಘಟಕರಾಗಿ, ನಿರ್ದೇಶಕರಾಗಿ, ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಯಕ್ಷಗಾನ ಕೇವಲ ಹಿರಿಯರ ಕಲೆಯಲ್ಲ, ಯುವಜನರ ಕಲ್ಪನೆ, ಸೃಜನಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೂ ಅದು ಶಕ್ತಿಯುತ ಮಾಧ್ಯಮ ಎಂಬ ನಂಬಿಕೆಯನ್ನು ಅವರು ಕಾರ್ಯರೂಪಕ್ಕೆ ತರುತ್ತಿದ್ದಾರೆ.

ಇನ್ನು, ರಂಗ ಪ್ರವೇಶಿಸುವ ಮುನ್ನ ಪ್ರಸಂಗದ ಆಳವಾದ ಅಧ್ಯಯನ, ಹಿರಿಯ ಕಲಾವಿದರ ಸಲಹೆ ಮತ್ತು ಚೌಕಿ ಚರ್ಚೆಗೆ ಅವರು ನೀಡುವ ಮಹತ್ವ, ಅವರ ಕಲೆಯ ಹಿಂದಿರುವ ಗಂಭೀರ ಅಧ್ಯಯನಶೀಲತೆಯನ್ನು ತೋರಿಸುತ್ತದೆ. ವೇಷ ಧರಿಸುವುದಕ್ಕೂ ಮುನ್ನ ಪಾತ್ರವನ್ನು ಅರಿಯಬೇಕು, ಪಾತ್ರವನ್ನು ನಿರ್ವಹಿಸುವುದಕ್ಕೂ ಮುನ್ನ ಅದರ ಮನಸ್ಸನ್ನು ಪ್ರವೇಶಿಸಬೇಕು ಎಂಬ ಕಲಾವಿದನ ಬದ್ಧತೆ ಅವರಲ್ಲಿ ಕಾಣುತ್ತದೆ. ಇದೇ ಕಾರಣಕ್ಕೆ ಅವರ ಅಭಿನಯ ಕೇವಲ ಪ್ರದರ್ಶನವಾಗಿ ಉಳಿಯದೆ, ಪಾತ್ರದ ಅಂತರಂಗವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನವಾಗುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ ಯುವಜನತೆ ಯಕ್ಷಗಾನದತ್ತ ಮತ್ತೆ ಆಸಕ್ತಿ ತೋರುತ್ತಿರುವುದು ಸಂತಸದ ಸಂಗತಿ. ಯಕ್ಷಗಾನ ಕರಾವಳಿಯ ಸಾಂಸ್ಕೃತಿಕ ಗಡಿಗಳನ್ನು ದಾಟಿ ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಳ್ಳುತ್ತಿರುವ ಬೆಳವಣಿಗೆಯನ್ನೂ ಅವರು ಆಶಾವಾದದಿಂದ ನೋಡುತ್ತಾರೆ. ಪರಂಪರೆಯ ಜೊತೆಗೆ ಈ ಕಾಲದ ಅಗತ್ಯಕ್ಕೆ ಬೇಕಾಗುವ ಹಾಗೆ, ಹೊಸ ತಲೆಮಾರಿಗೆ ಅದನ್ನು ಅರ್ಥವಾಗುವ ರೀತಿಯಲ್ಲಿ ಪರಿಚಯಿಸುವುದು ಇಂದಿನ ಕಲಾವಿದರ ಜವಾಬ್ದಾರಿ ಎಂಬ ಚಿಂತನೆ ಅವರ ಕಾರ್ಯದಲ್ಲಿ ಪ್ರತಿಫಲಿಸುತ್ತದೆ. ಅದು ಅವರ ಹೆಚ್ಚುಗಾರಿಕೆಯೂ ಹೌದು. 

ಒಬ್ಬ ಅಧ್ಯಾಪಕನಾಗಿ ಜ್ಞಾನವನ್ನು ಹಂಚಿಕೊಳ್ಳುತ್ತಾ, ಒಬ್ಬ ಕಲಾವಿದನಾಗಿ ಭಾವನೆಗಳನ್ನು ಹಂಚಿಕೊಳ್ಳುತ್ತಾ ಸಾಗುತ್ತಿರುವ ಶಶಾಂಕ್ ಪಟೇಲ್ ಕೆ.ಜಿ. ಅವರ ಪಯಣ ನಿಜಕ್ಕೂ ಅಕ್ಷರದಿಂದ ಅಭಿನಯದವರೆಗೆ, ತರಗತಿಯಿಂದ ಚೌಕಿಯವರೆಗೆ, ಯಕ್ಷರಂಗದವರೆಗೆ ವಿಸ್ತರಿಸಿರುವ ವಿಶಿಷ್ಟ ಕಲಾಯಾನ.

ಅವರ ಸಾಧನೆಯ ಅರ್ಥ ಕೇವಲ ಪಡೆದ ಪ್ರಶಸ್ತಿಗಳ ಸಂಖ್ಯೆಯಲ್ಲಿ ಇಲ್ಲ. ಕಲೆಯನ್ನು ಕಲಿತು, ಕಲೆಯನ್ನು ಬದುಕಿ, ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಬದ್ಧತೆಯಲ್ಲಿದೆ. ‘ಉದಯೋನ್ಮುಖ ಪ್ರತಿಭೆ’ಯಾಗಿ ಆರಂಭವಾದ ಪಯಣ ‘ಯಕ್ಷ ತಾರಾ’ ಬಿರುದಿನ ಮೂಲಕ ಹೊಳೆಯುತ್ತಾ, ‘ಸ್ವರ್ಣ ನೂಪುರ ಯಕ್ಷ ಸಾಧಕ’ ಗೌರವದವರೆಗೆ ತಲುಪಿದೆ. ನಿಜವಾದ ಕಲಾವಿದನಿಗೆ ಪ್ರತಿಯೊಂದು ಹೊಸ ಪಾತ್ರವೂ ಒಂದು ಹೊಸ ಜನ್ಮ, ಪ್ರತಿಯೊಂದು ರಂಗವೂ ಒಂದು ಹೊಸ ಪಾಠ, ಪ್ರತಿಯೊಂದು ಚಪ್ಪಾಳೆಯೂ ಮತ್ತಷ್ಟು ಹೊಣೆಗಾರಿಕೆಯ ನೆನಪು. ಆ ಸ್ಪಷ್ಟ ಅರಿವು ಅವರಿಗಿದೆ. 

ಶಶಾಂಕ್ ಪಟೇಲರದ್ದು, ಅಕ್ಷರಗಳ ನಡುವೆ ಅರಳಿದ ಪ್ರತಿಭೆ, ರಂಗದ ಮೇಲೆ ರೂಪುಗೊಂಡ ವ್ಯಕ್ತಿತ್ವ,

ಯಕ್ಷಗಾನದ ಬೆಳಕಿನಲ್ಲಿ ಮತ್ತಷ್ಟು ಪ್ರಖರವಾಗುತ್ತಿರುವ ಸಾಧನೆ. ಪರಂಪರೆಯ ಮಣ್ಣಿನಲ್ಲಿ ಬೇರುಬಿಟ್ಟು, ಆಧುನಿಕತೆಯ ಆಕಾಶದತ್ತ ರೆಕ್ಕೆ ಚಾಚುತ್ತಿರುವ ಈ ಕಲಾಸಾಧಕನ ಹೆಜ್ಜೆಗಳು ಇನ್ನಷ್ಟು ದೂರ ಸಾಗಲಿ, ಯಕ್ಷರಂಗದ ನಾದದಲ್ಲಿ ಅವರ ಕಲಾಪ್ರತಿಭೆಯ ಪ್ರತಿಧ್ವನಿ ಇನ್ನಷ್ಟು ಕಾಲ ಮೊಳಗಲಿ.

- ಶ್ರೀರಾಜ್‌ ವಕ್ವಾಡಿ 

Belonging: A Journey of Love : ಪುಸ್ತಕ ಇನ್ನೂ ಬಂದಿಲ್ಲ; ಆದರೆ ಅಧಿಕಾರದ ಆತಂಕ ಈಗಾಗಲೇ ಹೊರಬಂದಿದೆಯೇ?

ಒಂದು ಪುಸ್ತಕ ಇನ್ನೂ ಭಾರತೀಯ ಓದುಗರ ಕೈಗೆ ಬಂದಿಲ್ಲ. ಅದರ ಸಂಪೂರ್ಣ ಪಠ್ಯ ಸಾರ್ವಜನಿಕವಾಗಿಲ್ಲ. ಯಾವ ಪುಟದಲ್ಲಿ ಯಾವ ವಾಕ್ಯವಿದೆ ಎಂಬುದೂ ಬಹುತೇಕರಿಗೆ ಗೊತ್ತಿಲ್ಲ. ಆದರೂ ಆ ಪುಸ್ತಕ ಈಗಾಗಲೇ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಇದು ಕೇವಲ ಒಂದು ಪುಸ್ತಕದ ಪ್ರಕಟಣೆ ಮುಂದೂಡಿಕೆಯ ಕಥೆಯೇ? ಅಥವಾ ಅಧಿಕಾರಕ್ಕೆ ಅಸಹಜವಾಗಿರುವ ರಾಜಕೀಯ ನೆನಪುಗಳು ಮತ್ತು ಪ್ರಶ್ನೆಗಳನ್ನು ಸಾರ್ವಜನಿಕ ವಲಯಕ್ಕೆ ಬರದಂತೆ ತಡೆಯುವ ಮನೋಭಾವದ ಮತ್ತೊಂದು ಉದಾಹರಣೆಯೇ?

ಕಾಂಗ್ರೆಸ್ ನ ಸರ್ವೋಚ್ಚ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘Belonging: A Journey of Love’ ಕುರಿತ ವಿವಾದ ಈಗ ಇದೇ ಪ್ರಶ್ನೆಯನ್ನು ಎತ್ತಿದೆ. ಅಮೆರಿಕದ Alfred A. Knopf ಪ್ರಕಟಣಾ ಸಂಸ್ಥೆ ಪುಸ್ತಕವನ್ನು ನವೆಂಬರ್ 10, 2026ರಂದು ಜಾಗತಿಕವಾಗಿ ಪ್ರಕಟಿಸಲು ಸಿದ್ಧವಾಗಿದೆ. ಪ್ರಕಾಶಕರ ಅಧಿಕೃತ ಮಾಹಿತಿಯ ಪ್ರಕಾರ ಪುಸ್ತಕ 544 ಪುಟಗಳದ್ದಾಗಿದ್ದು, ವೈಯಕ್ತಿಕ ಬದುಕಿನ ಜೊತೆಗೆ ಭಾರತದ ರಾಜಕೀಯ-ಸಾಮಾಜಿಕ ಪಯಣವನ್ನೂ ಒಳಗೊಂಡಿದೆ. ಆದರೆ ಭಾರತದಲ್ಲಿ ಪ್ರಕಟಣೆಯ ಹಂತಕ್ಕೆ ಬಂದಾಗ ಪರಿಸ್ಥಿತಿ ಬೇರೆಯಾಗಿದೆ. ವಿವಾದದ ಕೇಂದ್ರದಲ್ಲಿ ಮೂರು ವಿಷಯಗಳಿವೆ. Penguin Random House India ಜೊತೆಗಿನ ಮಾತುಕತೆಯಲ್ಲಿ ಕೆಲವು ರಾಜಕೀಯ ಭಾಗಗಳ ಬಗ್ಗೆ ಸಂಪಾದಕೀಯ ಬದಲಾವಣೆ ಅಥವಾ ತೆಗೆದುಹಾಕುವಿಕೆ ಕುರಿತು ಚರ್ಚೆ ನಡೆದಿತ್ತು. ಕಾಂಗ್ರೆಸ್ ನಾಯಕರ ಆರೋಪದ ಪ್ರಕಾರ ಪ್ರಮುಖವಾಗಿ ನರೇಂದ್ರ ಮೋದಿ, RSS ಮತ್ತು ಚೀನಾ-ಭಾರತ ಗಡಿ ವಿವಾದಕ್ಕೆ ಸಂಬಂಧಿಸಿದ ಭಾಗಗಳು ಚರ್ಚೆಯ ಕೇಂದ್ರದಲ್ಲಿದ್ದವು. ಕೆಲವು ವರದಿಗಳು ಮೋದಿ ಅವರೊಂದಿಗೆ ಸೋನಿಯಾ ಗಾಂಧಿಯವರ ಭೇಟಿಗಳು, ಅವರ ರಾಜಕೀಯ ಮೌಲ್ಯಮಾಪನಗಳು ಹಾಗೂ ಚೀನಾ ಗಡಿ ವಿಚಾರಗಳನ್ನೂ ಉಲ್ಲೇಖಿಸುತ್ತವೆ.  ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಬೇಕು.

ಸರ್ಕಾರ ನೇರವಾಗಿ ಪ್ರಕಾಶಕರಿಗೆ ಒತ್ತಡ ಹೇರಿದೆ ಎಂಬುದು ಸಾಬೀತಾದ ಸಂಗತಿಯಲ್ಲ. ಅದು ಕಾಂಗ್ರೆಸ್ ನಾಯಕರು ಮಾಡಿರುವ ಆರೋಪ. Penguin Random House India ಕೂಡ, ಸೋನಿಯಾ ಗಾಂಧಿಯವರು ಸಂಪಾದಕೀಯ ಬದಲಾವಣೆಗಳನ್ನು ಒಪ್ಪದ ಕಾರಣ ತಾವು ಪುಸ್ತಕ ಪ್ರಕಟಣೆಯಿಂದ ಹಿಂದೆ ಸರಿದಿದ್ದೇವೆ ಎಂಬ ವರದಿಗಳು ನಿಖರವಾಗಿಲ್ಲ ಎಂದು ಹೇಳಿದೆ. ಸಂಸ್ಥೆಯ ಪ್ರಕಾರ, ತಾವು ಭಾರತದಲ್ಲಿ ಈ ಪುಸ್ತಕದ ಪ್ರಕಾಶಕರೇ ಅಲ್ಲ. ಆದರೆ ಇಲ್ಲಿಯೇ ಇನ್ನೊಂದು ಗಂಭೀರ ಪ್ರಶ್ನೆ ಹುಟ್ಟುತ್ತದೆ. ಒಂದೇ ಪುಸ್ತಕವನ್ನು ಜಾಗತಿಕವಾಗಿ ಅದರ ಮೂಲ ರೂಪದಲ್ಲಿ ಪ್ರಕಟಿಸಲು ಸಿದ್ಧವಾಗಿರುವ ಪ್ರಕಾಶನ ಸಮೂಹದ ಭಾರತೀಯ ಘಟಕಕ್ಕೆ ಮಾತ್ರ ಕೆಲವು ರಾಜಕೀಯ ಭಾಗಗಳು ಏಕೆ ಅಸಹಜವಾಗಿ ಕಾಣಿಸಿಕೊಂಡವು? ಈ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಫ್ಯಾಕ್ಟ್ ಚೆಕ್’ ಎಂಬ ಹೆಸರಿನಲ್ಲಿ ಎಷ್ಟು ಸಂಪಾದನೆ?ಯಾಗಿದೆ. ಪ್ರಕಾಶಕರ ಪಾಲಿಗೆ ಫ್ಯಾಕ್ಟ್‌ ಚೆಕ್, ಕಾನೂನು ಅಪಾಯ, ಮಾನಹಾನಿ ಮತ್ತು ಸಂಪಾದಕೀಯ ಹೊಣೆಗಾರಿಕೆಗಳು ಸಹಜವಾದ ವಿಚಾರಗಳು. ಯಾವುದೇ ಪ್ರಕಾಶಕ ಒಂದು ರಾಜಕೀಯ ನಾಯಕರ ಆತ್ಮಕಥೆಯನ್ನು ಪರಿಶೀಲಿಸಬಹುದು. ಆದರೆ ‘ಪರಿಶೀಲನೆ’  ಅಥವಾ ಫ್ಯಾಕ್ಟ್‌ ಚೆಕ್ ಮತ್ತು ‘ರಾಜಕೀಯವಾಗಿ ಅಸಹಜವಾಗಿರುವ ಭಾಗವನ್ನು ತೆಗೆದುಹಾಕುವುದು’ ಎರಡೂ ಒಂದೇ ಸಂಗತಿಯಲ್ಲ. ಒಂದು ಹೇಳಿಕೆ ತಪ್ಪಾಗಿದ್ದರೆ — ತಿದ್ದುಪಡಿ ಮಾಡಬಹುದು.

ಒಂದು ಅಂಕಿಅಂಶ ತಪ್ಪಿದ್ದರೆ — ಸರಿಪಡಿಸಬಹುದು. ಒಂದು ಆರೋಪಕ್ಕೆ ಮೂಲವಿಲ್ಲದಿದ್ದರೆ — ಲೇಖಕರಿಂದ ಸ್ಪಷ್ಟೀಕರಣ ಕೇಳಬಹುದು. ಆದರೆ ಲೇಖಕರ ವೈಯಕ್ತಿಕ ಅನುಭವ, ರಾಜಕೀಯ ಮೌಲ್ಯಮಾಪನ ಅಥವಾ ಸಮಕಾಲೀನ ಸರ್ಕಾರದ ನೀತಿಗಳ ಕುರಿತು ಅವರ ಅಭಿಪ್ರಾಯವೇ ಸಮಸ್ಯೆಯಾಗುತ್ತಿದ್ದರೆ, ಅದು ಸಂಪಾದಕೀಯ ಪ್ರಶ್ನೆಯನ್ನು ಮೀರಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಾಗುತ್ತದೆ. ಇದೇ ಕಾರಣಕ್ಕೆ ಈ ವಿವಾದವನ್ನು ಕೇವಲ ‘ಪ್ರಕಾಶಕ-ಲೇಖಕರ ನಡುವಿನ ಒಪ್ಪಂದದ ಸಮಸ್ಯೆ’ ಎಂದು ಮುಗಿಸುವುದು ಸರಿಯಲ್ಲ. ಇನ್ನು, ಪುಸ್ತಕವನ್ನು ಓದುವ ಮುನ್ನವೇ ಅದರ ಬಗ್ಗೆ ಭಯ ಏಕೆ? ಈ ಪ್ರಕರಣದ ಅತ್ಯಂತ ಕುತೂಹಲಕಾರಿ ಅಂಶ ಇದೇ ಆಗಿದೆ. ಪುಸ್ತಕ ಇನ್ನೂ ಭಾರತದಲ್ಲಿ ಪ್ರಕಟವಾಗಿಲ್ಲ. ಸಂಪೂರ್ಣ ಪಠ್ಯವೂ ಸಾರ್ವಜನಿಕವಾಗಿಲ್ಲ. ಆದರೂ ಅದರಲ್ಲಿರುವ ಕೆಲವು ವಿಚಾರಗಳು ರಾಜಕೀಯ ಚರ್ಚೆಯ ಕೇಂದ್ರವಾಗಿವೆ. ಹಾಗಾದರೆ ಪ್ರಶ್ನೆ ಏನೆಂದ್ರೇ,  ಪುಸ್ತಕದೊಳಗೆ ನಿಜವಾಗಿ ಏನಿದೆ ಎಂಬುದಕ್ಕಿಂತ, ಅದರಲ್ಲಿ ಏನಿರಬಹುದು ಎಂಬ ಭಯವೇ ರಾಜಕೀಯವಾಗಿ ದೊಡ್ಡದಾಗಿದೆಯೇ? ಸೋನಿಯಾ ಗಾಂಧಿ ಭಾರತೀಯ ರಾಜಕೀಯದಲ್ಲಿ ದಶಕಗಳ ಕಾಲ ಪ್ರಮುಖ ಪಾತ್ರವಹಿಸಿದ ವ್ಯಕ್ತಿ. ಪ್ರಧಾನಮಂತ್ರಿಗಳ ಜೊತೆಗಿನ ಅವರ ಸಂವಹನ, ಕಾಂಗ್ರೆಸ್ ಅಧ್ಯಕ್ಷೆಯಾಗಿ ಅವರ ಅನುಭವ, ಯುಪಿಎ ಅವಧಿಯ ರಾಜಕೀಯ ನಿರ್ಧಾರಗಳು, ನರೇಂದ್ರ ಮೋದಿ ಅವರೊಂದಿಗೆ ನಡೆದ ರಾಜಕೀಯ ಮುಖಾಮುಖಿಗಳು, ಚೀನಾ-ಭಾರತ ಸಂಬಂಧಗಳ ಕುರಿತ ಅವರ ದೃಷ್ಟಿಕೋನ — ಇವೆಲ್ಲವೂ ಸಮಕಾಲೀನ ಭಾರತದ ರಾಜಕೀಯ ಇತಿಹಾಸದ ಭಾಗ. ಅದನ್ನು ಅವರು ಹೇಗೆ ನೆನಪಿಸಿಕೊಂಡಿದ್ದಾರೆ ಎಂಬುದನ್ನು ಓದುಗರಿಗೆ ತಿಳಿಯುವ ಅವಕಾಶ ಇರಬೇಕು.

ಓದುಗರು ಅದನ್ನು ನಂಬಬೇಕೆಂದೇನೂ ಇಲ್ಲ. ವಿರೋಧಿಸಬಹುದು. ಖಂಡಿಸಬಹುದು. ತಪ್ಪೆಂದು ಸಾಬೀತುಪಡಿಸಬಹುದು. ಆದರೆ ಓದುವ ಅವಕಾಶವೇ ಇಲ್ಲದಂತೆ ಮಾಡುವ ಪ್ರಯತ್ನ ಪ್ರಜಾಪ್ರಭುತ್ವಕ್ಕೆ ಆರೋಗ್ಯಕರವಲ್ಲ. ಇನ್ನು, ಇದು, ನರವಣೆ ಪ್ರಕರಣದ ಪ್ರಶ್ನೆಯನ್ನು ನೆನಪಿಸುತ್ತದೆ.  ಇತ್ತೀಚಿನ ಮತ್ತೊಂದು ಬೆಳವಣಿಗೆಯಾದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ *Four Stars of Destiny* ಆತ್ಮಕಥೆಯ ವಿವಾದವೂ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ. Penguin Random House India ಆ ಪುಸ್ತಕದ ವಿಶೇಷ ಪ್ರಕಟಣಾ ಹಕ್ಕುಗಳನ್ನು ಹೊಂದಿದ್ದರೂ, 2026ರ ಫೆಬ್ರವರಿಯಲ್ಲಿ ಪುಸ್ತಕ ಅಧಿಕೃತವಾಗಿ ಪ್ರಕಟವಾಗಿಲ್ಲ ಎಂದು ಸ್ಪಷ್ಟಪಡಿಸಿತು. ಆದರೂ ಅದರ ಮುದ್ರಿತ ಪ್ರತಿಯೊಂದು, ಡಿಜಿಟಲ್ ಆವೃತ್ತಿಯೊಂದರ ಸೋರಿಕೆಯೊಂದೂ ರಾಜಕೀಯ ವಿವಾದಕ್ಕೆ ಕಾರಣವಾಯಿತು. ದೆಹಲಿ ಪೊಲೀಸರು ಕೂಡ ಪುಸ್ತಕದ ಅನಧಿಕೃತ ಪ್ರಸರಣದ ಕುರಿತು ತನಿಖೆ ನಡೆಸಿದರು. ಆ ಪುಸ್ತಕದಲ್ಲಿ 2020ರ ಭಾರತ-ಚೀನಾ ಗಡಿ ಬಿಕ್ಕಟ್ಟು ಸೇರಿದಂತೆ ಸೂಕ್ಷ್ಮ ರಾಷ್ಟ್ರೀಯ ಭದ್ರತಾ ವಿಚಾರಗಳ ಕುರಿತು ವಿವರಗಳಿದ್ದವು ಎಂದು ವರದಿಯಾಗಿತ್ತು. ಇಲ್ಲಿ ಕೂಡ ಗಮನಿಸಬೇಕಾದ ಅಂಶವೆಂದರೆ — ಸಂಪೂರ್ಣ ಪುಸ್ತಕ ಸಾರ್ವಜನಿಕವಾಗಿ ಪ್ರಕಟವಾಗುವುದಕ್ಕೂ ಮುನ್ನವೇ ಅದರ ಕೆಲವು ಭಾಗಗಳು ರಾಜಕೀಯ ಚರ್ಚೆಯ ಕೇಂದ್ರವಾಗಿದ್ದವು. ಇದು ಕಾಕತಾಳೀಯವಾಗಿರಬಹುದು. ಆದರೆ ಎರಡೂ ಪ್ರಕರಣಗಳು ಒಟ್ಟಿಗೆ ಬಂದಾಗ ಒಂದು ದೊಡ್ಡ ಪ್ರಶ್ನೆ ಎದುರಾಗುತ್ತದೆ.  ಭಾರತದಲ್ಲಿ ಅಧಿಕಾರಕ್ಕೆ ಅಸಹಜವಾಗಿರುವ ಪುಸ್ತಕಗಳಿಗೆ ಪ್ರಕಾಶನದ ಹಾದಿ ಏಕೆ ಹೆಚ್ಚು ಕಠಿಣವಾಗುತ್ತಿದೆ? ಪ್ರಜಾಪ್ರಭುತ್ವದಲ್ಲಿ ‘ಅನುಕೂಲಕರ ಸತ್ಯ’ ಮಾತ್ರ ಇರಬೇಕೇ? ಆಡಳಿತದಲ್ಲಿರುವ ಯಾವುದೇ ಸರ್ಕಾರಕ್ಕೂ ಟೀಕೆ ಇಷ್ಟವಾಗುವುದಿಲ್ಲ. ಅದು ಸಹಜ. ಆದರೆ ಪ್ರಜಾಪ್ರಭುತ್ವದ ಸೌಂದರ್ಯವೇನೆಂದರೆ ಸರ್ಕಾರಕ್ಕೆ ಇಷ್ಟವಾಗದ ಮಾತುಗಳೂ ಸಾರ್ವಜನಿಕವಾಗಿ ಕೇಳಿಸಿಕೊಳ್ಳಬೇಕು.

ನರೇಂದ್ರ ಮೋದಿ ಅವರ ಬಗ್ಗೆ ಸೋನಿಯಾ ಗಾಂಧಿಯವರಿಗೆ ನಕಾರಾತ್ಮಕ ಅಭಿಪ್ರಾಯವಿದ್ದರೆ, ಅದು ಅವರ ರಾಜಕೀಯ ದೃಷ್ಟಿಕೋನ. ಅದನ್ನು ಓದುಗರು ಒಪ್ಪಬೇಕೆಂದಿಲ್ಲ. RSS ಕುರಿತು ಅವರು ಟೀಕಿಸಿದ್ದರೆ, RSS ಅದಕ್ಕೆ ಉತ್ತರಿಸಬಹುದು. ಚೀನಾ ಗಡಿ ವಿಚಾರದಲ್ಲಿ ಅವರು ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದರೆ, ಸರ್ಕಾರ ತನ್ನ ದಾಖಲೆಗಳನ್ನು ಮುಂದಿಟ್ಟು ಪ್ರತಿವಾದಿಸಬಹುದು. ಪ್ರಜಾಪ್ರಭುತ್ವದಲ್ಲಿ ಪ್ರತಿವಾದಕ್ಕೆ ಉತ್ತರ ಪ್ರತಿವಾದವಾಗಬೇಕು; ಮೌನಕ್ಕೆ ಒತ್ತಡವಾಗಬಾರದು. ಇದು ಕಾಂಗ್ರೆಸ್‌ಗೆ ಮಾತ್ರ ಅನ್ವಯಿಸುವ ತತ್ವವಲ್ಲ. ಬಿಜೆಪಿ, ಎಡಪಂಥ, ಪ್ರಾದೇಶಿಕ ಪಕ್ಷಗಳು — ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ನೋಡಿ,  ಇದು ಸೋನಿಯಾ ಗಾಂಧಿಯವರ ಪುಸ್ತಕದ ಪ್ರಶ್ನೆ ಮಾತ್ರವಲ್ಲ. ಈ ವಿವಾದದ ನಿಜವಾದ ಅರ್ಥವನ್ನು ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ ವಿರುದ್ಧದ ರಾಜಕೀಯ ದೃಷ್ಟಿಕೋನದಿಂದ ಮಾತ್ರ ಅಳೆಯಬಾರದು. ಇದು ಭಾರತದ ಪ್ರಕಾಶನ ಸ್ವಾತಂತ್ರ್ಯದ ಪ್ರಶ್ನೆ. ಇಂದು ಒಬ್ಬ ಕಾಂಗ್ರೆಸ್ ನಾಯಕಿಯ ಆತ್ಮಕಥೆಯ ಒಂದು ಭಾಗದ ಬಗ್ಗೆ ಆಕ್ಷೇಪ ಬರುತ್ತದೆ. ನಾಳೆ ಒಬ್ಬ ಮಾಜಿ ಸೇನಾ ಮುಖ್ಯಸ್ಥನ ನೆನಪುಗಳ ಬಗ್ಗೆ ಆಕ್ಷೇಪ ಬರಬಹುದು. ಮತ್ತೊಂದು ದಿನ ಒಬ್ಬ ಪತ್ರಕರ್ತ, ಇತಿಹಾಸಕಾರ, ಸಂಶೋಧಕ ಅಥವಾ ಲೇಖಕ ಸರ್ಕಾರದ ನೀತಿಯನ್ನು ಪ್ರಶ್ನಿಸುವ ಪುಸ್ತಕ ಬರೆಯಬಹುದು. ಪ್ರತಿಯೊಂದು ಬಾರಿ ‘ಸೂಕ್ಷ್ಮ ವಿಚಾರ’, ‘ರಾಷ್ಟ್ರೀಯ ಹಿತ’, ‘ಫ್ಯಾಕ್ಟ್ ಚೆಕ್’, ‘ಕಾನೂನು ಅಪಾಯ’ ಎಂಬ ಪದಗಳ ಹಿಂದೆ ರಾಜಕೀಯ ಅಸಹಜತೆಯನ್ನು ಮರೆಮಾಡಲು ಆರಂಭಿಸಿದರೆ, ಅಂತಿಮವಾಗಿ ನಷ್ಟವಾಗುವುದು ಪುಸ್ತಕಕ್ಕೆ ಅಲ್ಲ — ಸಾರ್ವಜನಿಕ ಸ್ಮೃತಿಗೆ. ಆಳುವವರನ್ನು ಇತಿಹಾಸ ಬರೆಯುವುದಿಲ್ಲ; ಇತಿಹಾಸವನ್ನು ದಾಖಲಿಸುವವರೂ ಬೇಕು. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಪ್ರಧಾನಮಂತ್ರಿಗಳು ಬದಲಾಗುತ್ತಾರೆ. ಪಕ್ಷಗಳು ಅಧಿಕಾರಕ್ಕೆ ಬರುತ್ತವೆ, ಅಧಿಕಾರ ಕಳೆದುಕೊಳ್ಳುತ್ತವೆ. ಆದರೆ ಆ ಕಾಲದ ರಾಜಕೀಯ ಘಟನೆಗಳನ್ನು ದಾಖಲಿಸುವ ಆತ್ಮಕಥೆಗಳು, ಪತ್ರಗಳು, ದಿನಚರಿಗಳು, ಸಂದರ್ಶನಗಳು ಮತ್ತು ಪುಸ್ತಕಗಳೇ ಭವಿಷ್ಯದ ಇತಿಹಾಸಕಾರರಿಗೆ ಮೂಲ ದಾಖಲೆಗಳಾಗುತ್ತವೆ. ಅಂತಹ ದಾಖಲೆಗಳಲ್ಲಿ ತಪ್ಪುಗಳಿದ್ದರೆ — ಇತಿಹಾಸಕಾರರು ಪ್ರಶ್ನಿಸಲಿ. ಸುಳ್ಳಿದ್ದರೆ — ದಾಖಲೆಗಳ ಮೂಲಕ ಖಂಡಿಸಲಿ. ಏಕಪಕ್ಷೀಯ ದೃಷ್ಟಿಕೋನವಿದ್ದರೆ — ಮತ್ತೊಂದು ದೃಷ್ಟಿಕೋನ ಪ್ರಕಟವಾಗಲಿ.

ಆದರೆ ಯಾವುದೇ ಪುಸ್ತಕದಲ್ಲಿ ಏನಿದೆ ಎಂಬುದನ್ನು ಓದುಗರೇ ತೀರ್ಮಾನಿಸುವ ಮುನ್ನವೇ ಅದನ್ನು ಮೃದುಗೊಳಿಸುವ ಅಥವಾ ರಾಜಕೀಯವಾಗಿ ಅನುಕೂಲಕರವಾಗಿಸುವ ಪ್ರಯತ್ನ ನಡೆದರೆ, ಅದು ಕೇವಲ ಒಬ್ಬ ಲೇಖಕಿಯ ಧ್ವನಿಯನ್ನು ನಿಯಂತ್ರಿಸುವ ವಿಚಾರವಾಗುವುದಿಲ್ಲ. ಅದು ಸಮಾಜದ ಸಾಮೂಹಿಕ ನೆನಪಿನ ಮೇಲಿನ ಹಸ್ತಕ್ಷೇಪವಾಗುತ್ತದೆ. ಹೀಗಾಗಿ ‘Belonging: A Journey of Love’ವಿವಾದದ ಅಂತಿಮ ಪ್ರಶ್ನೆ ಸೋನಿಯಾ ಗಾಂಧಿ ಏನು ಬರೆದಿದ್ದಾರೆ ಎಂಬುದಲ್ಲ. ಅವರು ಬರೆದದ್ದನ್ನು ಭಾರತೀಯ ಓದುಗರು ಸಂಪೂರ್ಣವಾಗಿ ಓದಿ, ನಂತರ ತೀರ್ಪು ನೀಡುವ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳ್ಳುತ್ತೇವೆಯೇ? ಅದೇ ನಿಜವಾದ ಪರೀಕ್ಷೆ. ಪುಸ್ತಕವನ್ನು ಪ್ರಕಟಿಸಬೇಕೋ ಬೇಡವೋ ಎಂಬುದಕ್ಕಿಂತ ದೊಡ್ಡ ಪ್ರಶ್ನೆ ಇದು: ಅಧಿಕಾರಕ್ಕೆ ಅಸಹಜವಾದ ಸತ್ಯವನ್ನು ಓದುಗರಿಂದ ದೂರವಿಡುವ ಹಕ್ಕು ಯಾರಿಗಿದೆ? ಪ್ರಜಾಪ್ರಭುತ್ವದಲ್ಲಿ ಉತ್ತರ ಒಂದೇ ಇರಬೇಕು — ಓದುಗರಿಗೆ ಸತ್ಯವನ್ನು ಓದುವ ಹಕ್ಕಿದೆ; ಅಧಿಕಾರಕ್ಕೆ ಅದಕ್ಕೆ ಉತ್ತರಿಸುವ ಹೊಣೆ ಇದೆ.

- ಶ್ರೀರಾಜ್‌ ವಕ್ವಾಡಿ 

ಭಾಗವತರ ಮಾತನ್ನು ಬಿಜೆಪಿ ಒಪ್ಪುತ್ತಾ !? ಬಿಜೆಪಿಯ ಧರ್ಮ ರಾಜಕಾರಣಕ್ಕೆ 'ಸಂಘ'ದ ಅಂಕುಶ !?

ಭಾರತದಲ್ಲಿ ಮುಸ್ಲಿಮರೇ ಇರಬಾರದು’ ಎನ್ನುವವರು ಹಿಂದೂವಲ್ಲ: ಭಾಗವತ್ ಮಾತಿನ ರಾಜಕೀಯ ಸಂದೇಶವೇನು? ಭಾರತದ ರಾಜಕೀಯದಲ್ಲಿ ‘ಹಿಂದುತ್ವ’ ಎಂಬ ಪದವನ್ನು ಬಹಳಷ್ಟು ಬಾರಿ ಮುಸ್ಲಿಂ ವಿರೋಧಿ ರಾಜಕಾರಣದೊಂದಿಗೆ ಸಮೀಕರಿಸಲಾಗುತ್ತದೆ. ಚುನಾವಣಾ ಭಾಷಣಗಳಿಂದ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿನ ರಾಜಕೀಯ ಪ್ರಚಾರದವರೆಗೆ, ಸಾಕಷ್ಟಿವೆ. ಆದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿಕದಲ್ಲಿ ನೀಡಿರುವ ಹೇಳಿಕೆ ರಾಜಕೀಯ ಚರ್ಚೆಗೆ ಹೊಸ ಪ್ರಶ್ನೆಗಳನ್ನು ಎತ್ತಿದೆ.

“ಭಾರತದಲ್ಲಿ ವಾಸಿಸುವ ಹಕ್ಕು ಎಲ್ಲ ಸಮುದಾಯದವರಿಗೂ ಇದೆ. ಮುಸ್ಲಿಮರು ಭಾರತದಲ್ಲಿ ಇರಬಾರದು ಎಂದು ಭಾವಿಸುವವರು ಹಿಂದೂವಲ್ಲ ಎಂಬ ಭಾಗವತ್ ಅವರ ಮಾತು, ಕೇವಲ ಒಂದು ಹೇಳಿಕೆಯಾಗಿ ನೋಡಿದರೆ ಅದರ ರಾಜಕೀಯ ಮಹತ್ವ ಕಡಿಮೆಯಾಗಬಹುದು. ಆದರೆ ಬಿಜೆಪಿಯ ರಾಜಕೀಯ ಭಾಷೆ ಮತ್ತು ಆರ್‌ಎಸ್‌ಎಸ್‌ನ ವೈಚಾರಿಕ ನಿಲುವಿನ ನಡುವಿನ ಸಂಬಂಧವನ್ನು ಗಮನಿಸಿದಾಗ, ಈ ಹೇಳಿಕೆಯನ್ನು ಗಂಭೀರವಾಗಿ ಚರ್ಚಿಸಬೇಕಾದ ಅಗತ್ಯವಿದೆ. ಭಾರತ ಕೇವಲ ಬಹುಸಂಖ್ಯಾತರ ದೇಶವಲ್ಲ. ಹಲವು ಧರ್ಮಗಳು, ಭಾಷೆಗಳು, ಜಾತಿಗಳು, ಸಂಸ್ಕೃತಿಗಳು ಮತ್ತು ಪರಂಪರೆಗಳು ಒಟ್ಟಾಗಿ ರೂಪಿಸಿರುವ ನಾಗರಿಕತೆ. ಈ ವೈವಿಧ್ಯತೆಯೇ ಭಾರತದ ವಿಶಿಷ್ಟತೆ. ಹೀಗಾಗಿ ‘ಒಂದು ಧರ್ಮದ ಭಾರತ’ ಎಂಬ ಕಲ್ಪನೆಗಿಂತ ‘ವೈವಿಧ್ಯತೆಯೊಳಗಿನ ಏಕತೆ’ ಎಂಬ ಪರಿಕಲ್ಪನೆ ಭಾರತೀಯ ಸಮಾಜದ ವಾಸ್ತವಿಕತೆಗೆ ಹೆಚ್ಚು ಹತ್ತಿರ. ಭಾಗವತ್ ಅವರ ಮಾತಿನಲ್ಲೂ ಇದೇ ಅಂಶ ಸ್ಪಷ್ಟವಾಗುತ್ತದೆ. “ನಾನು, ನನ್ನದು” ಎನ್ನುವ ಮನಸ್ಥಿತಿಯ ಬದಲು “ನಾವು, ನಮ್ಮದು” ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂಬ ಅವರ ಸಂದೇಶ, ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಎಂಬ ರಾಜಕೀಯ ವಿಭಜನೆಯಾಚೆಗೆ ಸಮಾಜವನ್ನು ನೋಡುವ ಪ್ರಯತ್ನವಾಗಿ ಕಾಣುತ್ತದೆ.ಹಾಗಾದರೆ ಬಿಜೆಪಿಯ ರಾಜಕೀಯಕ್ಕೆ ಈ ಸಂದೇಶ ಯಾಕೆ ಮುಖ್ಯ?ನೋಡಿ, ಇಲ್ಲಿಯೇ ಮೂಲ ಪ್ರಶ್ನೆ ಎದುರಾಗುತ್ತದೆ. ಆರ್‌ಎಸ್‌ಎಸ್ ಬಿಜೆಪಿಯ ಮಾತೃಸಂಸ್ಥೆ. ಬಿಜೆಪಿಯ ಅನೇಕ ಪ್ರಮುಖ ನಾಯಕರು ತಮ್ಮ ರಾಜಕೀಯ ಪಯಣವನ್ನು ಸಂಘದ ಶಾಖೆಗಳಿಂದಲೇ ಆರಂಭಿಸಿದ್ದಾರೆ.

ಸಂಘದ ವೈಚಾರಿಕ ಪ್ರಭಾವ ಬಿಜೆಪಿಯ ಮೇಲೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೀಗಿರುವಾಗ ಸಂಘದ ಮುಖ್ಯಸ್ಥರೇ ಮುಸ್ಲಿಮರು ಭಾರತದಲ್ಲಿ ಇರಬಾರದು ಎನ್ನುವ ಬಿತ್ತಿದ ಮನೋಭಾವವನ್ನು ತಿರಸ್ಕರಿಸಿದಾಗ, ಆ ಸಂದೇಶ ಬಿಜೆಪಿಯ ರಾಜಕೀಯ ಭಾಷೆಯಲ್ಲೂ ಪ್ರತಿಫಲಿಸಬೇಕಲ್ಲವೇ?ಚುನಾವಣೆ ಬಂದಾಗ ಮುಸ್ಲಿಂ ಸಮುದಾಯವನ್ನು ರಾಜಕೀಯವಾಗಿ ‘ಇತರ’ರನ್ನಾಗಿ ಚಿತ್ರಿಸುವ ಪ್ರಯತ್ನಗಳು ನಡೆಯುತ್ತಿದ್ದರೆ, ಧಾರ್ಮಿಕ ಧ್ರುವೀಕರಣದ ಮೂಲಕ ಮತಗಳನ್ನು ಕ್ರೋಢೀಕರಿಸುವ ಭಾಷೆ ಕೇಳಿಬರುತ್ತಿದ್ದರೆ, ಭಾಗವತ್ ಅವರ ಈ ಮಾತುಗಳು ಆ ರಾಜಕೀಯಕ್ಕೆ ಒಂದು ಆತ್ಮಪರಿಶೀಲನೆಯ ಅವಕಾಶವನ್ನು ನೀಡುತ್ತವೆ. ಸಂಘದ ಮುಖ್ಯಸ್ಥರ ಮಾತು ಸಂಘದೊಳಗೇ ಉಳಿಯಬೇಕೇ? ಅಥವಾ ಬಿಜೆಪಿಯ ರಾಜಕೀಯದಲ್ಲೂ ಅದರ ಪ್ರತಿಫಲನ ಕಾಣಬೇಕೇ?

ಇದು ಇಂದು ಕೇಳಬೇಕಾದ ಪ್ರಮುಖ ಪ್ರಶ್ನೆ.‘ಹಿಂದೂ ರಾಷ್ಟ್ರ’ದ ಅರ್ಥವೇನು?ಭಾಗವತ್ ಅವರ ಹೇಳಿಕೆಯಲ್ಲಿ ಮತ್ತೊಂದು ಪ್ರಮುಖ ಅಂಶವಿದೆ.ಭಾರತವನ್ನು ಸಂಪೂರ್ಣವಾಗಿ ಹಿಂದೂ ರಾಷ್ಟ್ರವನ್ನಾಗಿ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು?” ಎಂದು ಮುಸ್ಲಿಂ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ, “ದೇಶದಲ್ಲಿ ಮುಸ್ಲಿಂ ಇರಬಾರದು ಎನಮದು ಭಾವಿಸಿದರೆ ಆತ ಹಿಂದೂವಲ್ಲ” ಎಂದು ಭಾಗವತ್ ಪ್ರತಿಕ್ರಿಯಿಸಿದ್ದಾರೆ.

ಈ ಮಾತು ‘ಹಿಂದೂ ರಾಷ್ಟ್ರ’ ಎಂಬ ಪರಿಕಲ್ಪನೆಯನ್ನೇ ಹೊಸ ಚರ್ಚೆಗೆ ಎಳೆಯುತ್ತದೆ.

ಒಂದು ದೇಶವನ್ನು ಹಿಂದೂ ರಾಷ್ಟ್ರ ಎಂದು ಪರಿಗಣಿಸುವುದೆಂದರೆ ಅಲ್ಲಿ ಮುಸ್ಲಿಮರಿಗೆ, ಕ್ರೈಸ್ತರಿಗೆ ಅಥವಾ ಇತರ ಸಮುದಾಯಗಳಿಗೆ ಎರಡನೇ ದರ್ಜೆಯ ಸ್ಥಾನವಿರಬೇಕೆಂದರ್ಥವೇ?ಅಥವಾ ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿಯೂ ಭಾರತೀಯರೆಲ್ಲರಿಗೂ ಸಮಾನ ಸ್ಥಾನವಿದೆ ಎಂಬ ಸಂಘದ ವ್ಯಾಖ್ಯಾನವೇ ಮುಖ್ಯವೇ?

ಭಾಗವತ್ ಅವರ ಈ ಮಾತುಗಳನ್ನು ನೋಡಿದರೆ, ಕನಿಷ್ಠ ಅವರ ಸಾರ್ವಜನಿಕ ವ್ಯಾಖ್ಯಾನದಲ್ಲಿ ಎರಡನೆಯ ಅರ್ಥಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಗೋಚರಿಸುತ್ತದೆ.ಆದರೆ ಈ ವಿಚಾರವನ್ನು ಕೇವಲ ಹೇಳಿಕೆಯ ಮಟ್ಟದಲ್ಲಿ ಬಿಟ್ಟುಬಿಡಲು ಸಾಧ್ಯವಿಲ್ಲ. ಅದು ಸಾಮಾಜಿಕ ಮತ್ತು ರಾಜಕೀಯ ನಡವಳಿಕೆಯಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದೇ ನಿಜವಾದ ಪರೀಕ್ಷೆ. ಗಮನಿಸಿ, 

ಮುಸ್ಲಿಮರ ವಿರುದ್ಧದ ರಾಜಕೀಯಕ್ಕೆ ಸಂಘವೇ ಕಡಿವಾಣ ಹಾಕಬೇಕೇ?ಭಾರತೀಯ ರಾಜಕೀಯದಲ್ಲಿ ಮುಸ್ಲಿಂ ಸಮುದಾಯದ ಕುರಿತು ಭಯ, ಅನುಮಾನ ಮತ್ತು ಧ್ರುವೀಕರಣದ ಭಾಷೆ ಹೊಸದಲ್ಲ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮ, ಚುನಾವಣಾ ಪ್ರಚಾರ ಮತ್ತು ರಾಜಕೀಯ ಚರ್ಚೆಗಳಲ್ಲಿ ಈ ಭಾಷೆ ಹೆಚ್ಚು ಪ್ರಬಲವಾಗಿ ಕಾಣಿಸಿಕೊಂಡಿದೆ ಎಂಬ ಟೀಕೆಗಳಿವೆ.ಇಂತಹ ಸಂದರ್ಭದಲ್ಲಿ ಸಂಘದ ಮುಖ್ಯಸ್ಥರ ಹೇಳಿಕೆ ಒಂದು ರಾಜಕೀಯ ಸಂದೇಶವನ್ನು ನೀಡುತ್ತದೆ. ಹಿಂದುತ್ವ ಎಂದರೆ ಮುಸ್ಲಿಂ ವಿರೋಧವಲ್ಲ. ಹಿಂದುತ್ವ ಎಂದರೆ ಭಾರತೀಯ ಸಮಾಜದ ಎಲ್ಲ ಸಮುದಾಯಗಳನ್ನೂ ಒಳಗೊಂಡ ಒಂದು ಸಾಂಸ್ಕೃತಿಕ ಪರಿಕಲ್ಪನೆ ಎಂಬುದೇ ಸಂಘದ ನಿಲುವಾದರೆ, ಅದನ್ನು ರಾಜಕೀಯ ಕ್ಷೇತ್ರದಲ್ಲೂ ಸ್ಪಷ್ಟವಾಗಿ ಜಾರಿಗೊಳಿಸುವ ಹೊಣೆ ಸಂಘದ ಮೇಲಿದೆ.

ಬಿಜೆಪಿಯು ಕೂಡ ಇದೇ ಪರೀಕ್ಷೆಯನ್ನು ಎದುರಿಸಬೇಕಾಗಿದೆ.

ಮುಸ್ಲಿಂ ಸಮುದಾಯದ ಬಗ್ಗೆ ಅನುಮಾನ ಮೂಡಿಸುವ ಭಾಷೆ ಬಳಸುವ ರಾಜಕಾರಣಿಗಳಿಗೆ ಪಕ್ಷದೊಳಗಿಂದಲೇ ತಡೆ ಸಿಗುತ್ತದೆಯೇ? ಚುನಾವಣಾ ಲಾಭಕ್ಕಾಗಿ ಧಾರ್ಮಿಕ ಧ್ರುವೀಕರಣವನ್ನು ಬಳಸುವ ಪ್ರವೃತ್ತಿಗೆ ಪಕ್ಷ ಕಡಿವಾಣ ಹಾಕುತ್ತದೆಯೇ? ಅಲ್ಪಸಂಖ್ಯಾತರ ನಾಗರಿಕ ಹಕ್ಕುಗಳ ಬಗ್ಗೆ ಸಮಾನ ನಿಲುವು ವ್ಯಕ್ತವಾಗುತ್ತದೆಯೇ?

ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಅಥವಾ ಸಂಘದ್ದು ದೇಶದಲ್ಲೊಂದು, ವಿದೇಶದಲ್ಲೊಂದು ಸಿದ್ಧಾಂತವೇ ಎನ್ನುವುದನ್ನಾದರೂ ತಿಳಿಸಬೇಕಿದೆ. ಇನ್ನು, ಒಂದು ಹೇಳಿಕೆಯಿಂದ ರಾಜಕೀಯ ಬದಲಾಗುವುದಿಲ್ಲ.ಆದರೆ ಇಲ್ಲಿ ಮತ್ತೊಂದು ಎಚ್ಚರಿಕೆಯೂ ಅಗತ್ಯ.ಮೋಹನ್ ಭಾಗವತ್ ಅವರ ಒಂದು ಹೇಳಿಕೆಯನ್ನು ಆಧರಿಸಿ ಸಂಘ ಅಥವಾ ಬಿಜೆಪಿಯ ಸಂಪೂರ್ಣ ರಾಜಕೀಯವನ್ನು ‘ಸಮಾಜಮುಖಿ’ ಎಂದು ಘೋಷಿಸುವುದಕ್ಕರ ಆಗುವುದಿಲ್ಲವೋ, ಅದೇ ರೀತಿ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದೂ ಸರಿಯಲ್ಲ.

ರಾಜಕೀಯದಲ್ಲಿ ಮಾತಿಗಿಂತ ನಡೆ ಮುಖ್ಯ.ಮುಸ್ಲಿಮರಿಗೂ ಭಾರತದಲ್ಲಿ ಸಮಾನ ಹಕ್ಕಿದೆ ಎಂದು ಹೇಳುವುದು ಒಂದು ಸಂಗತಿ. ಆ ಸಮಾನತೆಯ ಭಾವನೆ ಸಮಾಜದ ಪ್ರತಿಯೊಂದು ಹಂತದಲ್ಲೂ ಪ್ರತಿಫಲಿಸುವಂತೆ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಪ್ರೇರೇಪಿಸುವುದು ಮತ್ತೊಂದು ಸಂಗತಿ.ಭಾಗವತ್ ಅವರ ಹೇಳಿಕೆಯ ನಿಜವಾದ ಮೌಲ್ಯ, ಮುಂದಿನ ದಿನಗಳಲ್ಲಿ ಸಂಘ ಮತ್ತು ಬಿಜೆಪಿಯ ರಾಜಕೀಯ ಭಾಷೆಯಲ್ಲಿ ಅದು ಎಷ್ಟು ಪ್ರಮಾಣದಲ್ಲಿ ಪ್ರತಿಫಲಿಸುತ್ತದೆ ಎಂಬುದರಿಂದ ನಿರ್ಧಾರವಾಗಲಿದೆ. ಇಮ್ನು, ಹಿಂದುತ್ವದ ರಾಜಕೀಯವನ್ನು ಟೀಕಿಸುವುದು ಪ್ರಜಾಪ್ರಭುತ್ವದಲ್ಲಿ ಸಹಜ ಮತ್ತು ಅಗತ್ಯ. ಆದರೆ ಸಂಘದ ಮುಖ್ಯಸ್ಥರು ಮುಸ್ಲಿಮರನ್ನು ಭಾರತದಿಂದ ಹೊರಗಿಡುವ ಮನೋಭಾವವನ್ನು ತಿರಸ್ಕರಿಸಿದಾಗ, ಅದನ್ನೂ ಪ್ರಾಮಾಣಿಕವಾಗಿ ವರದಿ ಮಾಡುವ ಧೈರ್ಯ ಇರಬೇಕಲ್ಲವೇ? ಸಂಘದ ಪ್ರತಿಯೊಂದು ಹೇಳಿಕೆಯಲ್ಲೂ ‘ಮುಸ್ಲಿಂ ವಿರೋಧ’ ಹುಡುಕುವುದು ಎಷ್ಟು ತಪ್ಪೋ, ಅದೇ ರೀತಿ ಸಂಘದ ಯಾವುದೇ ಹೇಳಿಕೆಯನ್ನು ಪ್ರಶ್ನಿಸದೆ ಸ್ವೀಕರಿಸುವುದೂ ಅಷ್ಟೇ ತಪ್ಪು. ಮಾಧ್ಯಮದ ಕೆಲಸ ಒಂದು ಪಕ್ಷದ ಪರ ಅಥವಾ ವಿರುದ್ಧ ನಿಲ್ಲುವುದಲ್ಲ. ರಾಜಕೀಯ ಸಂಘಟನೆಗಳ ಮಾತು ಮತ್ತು ನಡೆ ನಡುವಿನ ಅಂತರವನ್ನು ಜನರ ಮುಂದೆ ಇಡುವುದೇ ಮಾಧ್ಯಮದ ನಿಜವಾದ ಜವಾಬ್ದಾರಿ.

ಭಾಗವತ್ ಅವರ ಈ ಮಾತುಗಳನ್ನು ಬಿಜೆಪಿಯ ಮೇಲೆ ಒತ್ತಡ ಹೇರುವ ರಾಜಕೀಯ ಪ್ರಶ್ನೆಯನ್ನಾಗಿ ಮಾಡುವುದು ಅಗತ್ಯ. ಏಕೆಂದರೆ ಸಂಘದ ಮುಖ್ಯಸ್ಥರು ‘ಮುಸ್ಲಿಮರು ಭಾರತದಲ್ಲಿ ಇರಬಾರದು’ ಎನ್ನುವ ಮನೋಭಾವವನ್ನು ಹಿಂದುತ್ವದ ಭಾಗವಲ್ಲ ಎಂದು ಹೇಳುತ್ತಿದ್ದರೆ, ಅದೇ ಸಂಘದ ರಾಜಕೀಯ ಪ್ರಭಾವವಿರುವ ಪಕ್ಷದ ನಾಯಕರೂ ಅದೇ ನಿಲುವನ್ನು ತಮ್ಮ ರಾಜಕೀಯ ಭಾಷೆಯಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸಬೇಕಾಗಿದೆ. ಇನ್ನಾದರೂ, ಪಾಠ ಕಲಿಯುತ್ತದೆಯೇ ಬಿಜೆಪಿ?

ಕೊನೆಗೆ ಉಳಿಯುವುದು ಈ ಒಂದೇ ಪ್ರಶ್ನೆ.“ಮುಸ್ಲಿಮರೇ ಭಾರತದಲ್ಲಿ ಇರಬಾರದು ಎಂದು ಭಾವಿಸುವವರು ಹಿಂದೂವಲ್ಲಎನ್ನುವ ಮಾತು ಕೇವಲ ಅಮೆರಿಕದ ವೇದಿಕೆಯಲ್ಲಿ ಮೊಳಗಿದ ಒಂದು ಹೇಳಿಕೆಯಾಗಿ ಉಳಿಯುತ್ತದೆಯೇ? ಅಥವಾ ಭಾರತದ ರಾಜಕೀಯದಲ್ಲೂ ಅದರ ಪರಿಣಾಮ ಕಾಣಿಸಿಕೊಳ್ಳುತ್ತದೆಯೇ?

ಬಿಜೆಪಿಯು ಈ ಮಾತನ್ನು ಗಂಭೀರವಾಗಿ ಪರಿಗಣಿಸಿದರೆ, ಅದರ ರಾಜಕೀಯ ಭಾಷೆಯಲ್ಲಿ ಒಂದು ಮಹತ್ವದ ಬದಲಾವಣೆಗೆ ಇದು ಆರಂಭವಾಗಬಹುದು. ಹಿಂದುತ್ವವನ್ನು ಮುಸ್ಲಿಂ ವಿರೋಧಿ ರಾಜಕಾರಣದಿಂದ ಬೇರ್ಪಡಿಸುವ ಪ್ರಯತ್ನವನ್ನು ಸಂಘ ನಿಜವಾಗಿಯೂ ಮಾಡುತ್ತಿದ್ದರೆ, ಆ ಪ್ರಯತ್ನದ ಮೊದಲ ಹೆಜ್ಜೆ ಮುಸ್ಲಿಮರನ್ನು ರಾಜಕೀಯ ‘ವಿರೋಧಿ ಸಮುದಾಯ’ವಾಗಿ ನೋಡುವ ಪ್ರವೃತ್ತಿಯನ್ನು ತಿರಸ್ಕರಿಸುವುದಾಗಿರಬೇಕು. ಭಾರತದಲ್ಲಿ ಯಾರೂ ‘ಅತಿಥಿ’ಯಲ್ಲ. ಈ ನೆಲದಲ್ಲಿ ಹುಟ್ಟಿ, ಬೆಳೆದು, ಬದುಕುತ್ತಿರುವ ಪ್ರತಿಯೊಬ್ಬರೂ ಈ ದೇಶದ ನಾಗರಿಕರು.ಆದ್ದರಿಂದ ಪ್ರಶ್ನೆ ಕೇವಲ “ಭಾಗವತ್ ಏನು ಹೇಳಿದರು?”ಎನ್ನುವುದಲ್ಲ.“ಅವರ ಮಾತನ್ನು ಬಿಜೆಪಿಯ ರಾಜಕೀಯ ಎಷ್ಟು ದಿನಗಳಲ್ಲಿ ತನ್ನ ನಡವಳಿಕೆಯಲ್ಲಿ ತೋರಿಸಲಿದ ? ಎನ್ನುವುದಾಗಿದೆ. ಕಾದು ನೋಡೋಣ.

- ಶ್ರೀರಾಜ್‌ ವಕ್ವಾಡಿ 

ಕಸ್ತೂರಿ ರಂಗನ್‌ ವರದಿ : Cultural landscape & Natural landscape

ಪಶ್ಚಿಮ ಘಟ್ಟದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಕೇಂದ್ರ ಸರ್ಕಾರ 2026ರ ಜುಲೈ 27ರಂದು ಪಶ್ಚಿಮ ಘಟ್ಟದ 56,825.7 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಉದ್ದೇಶದೊಂದಿಗೆ ಏಳನೇ ಕರಡು ಅಧಿಸೂಚನೆ ಹೊರಡಿಸಿದೆ. ಹಿಂದಿನ ಆರು ಕರಡು ಅಧಿಸೂಚನೆಗಳು ಅಂತಿಮ ಅಧಿಸೂಚನೆಯಾಗಿ ರೂಪುಗೊಳ್ಳದೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಹೊಸ ಕರಡು ಬಂದಿದೆ. ಕರ್ನಾಟಕದ ಪಾಲಿಗೆ 20,668 ಚದರ ಕಿಲೋಮೀಟರ್ ಪ್ರದೇಶ, 10 ಜಿಲ್ಲೆಗಳು ಮತ್ತು 1,449 ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತವೆ. ಹಾಗಾದ್ರೆ ESA ಅನುಷ್ಠಾನದಿಂದ ಕೃಷಿಕರ ಬದುಕಿಗೆ ಸಮಸ್ಯೆಯೇ!? ಕಸ್ತೂರಿ ರಂಗನ್‌ ವರದಿ ಅನುಷ್ಠಾನ ಆಗುತ್ತಾ!?

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸುವ ರಾಜ್ಯದ ನಿಲುವನ್ನು ಪುನರುಚ್ಚರಿಸಿರುವ ಸರ್ಕಾರ, ಈ ವಿಚಾರದಲ್ಲಿ ಕೇಂದ್ರದೊಂದಿಗೆ ಕಾನೂನು ಮತ್ತು ರಾಜಕೀಯ ಹೋರಾಟ ನಡೆಸುವುದಾಗಿ ಹೇಳಿದೆ. ಒಂದು ದಿನದ ವಿಶೇಷ ಅಧಿವೇಶನ ಕರೆದು ಪಕ್ಷಾತೀತ ಚರ್ಚೆ ನಡೆಸುವ ಮುಖ್ಯಮಂತ್ರಿಯ ಹೇಳಿಕೆಯೂ ಇದೇ ಸಂದರ್ಭದಲ್ಲಿ ಬಂದಿದೆ. ಆದರೆ ಇಲ್ಲಿ ಒಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ: ಕರ್ನಾಟಕ ಕಸ್ತೂರಿರಂಗನ್ ವರದಿಯನ್ನು ಏಕೆ ವಿರೋಧಿಸುತ್ತಿದೆ? ಮತ್ತು ಅದಕ್ಕಿಂತ ದೊಡ್ಡ ಪ್ರಶ್ನೆ ಏನೆಂದರೇ, ಪಶ್ಚಿಮ ಘಟ್ಟವನ್ನು ರಕ್ಷಿಸುವ ಜವಾಬ್ದಾರಿ ಯಾರದ್ದು? ಕೇಂದ್ರದ್ದೇ? ರಾಜ್ಯದ್ದೇ? ಅಲ್ಲಿನ ಜನರದ್ದೇ? ಅಥವಾ ಎಲ್ಲರದ್ದೂ? ಮಾಧವ ಗಾಡ್ಗಿಲ್‌ ವರದಿಯಿಂದ ಕಸ್ತೂರಿ ರಂಗನ್‌  ವರದಿಯವವರೆಗೆ  ವಿವಾದದ ಬೇರು ಹಬ್ಬಿದೆ.  ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಯ ಕುರಿತು ಚರ್ಚೆ ಇಂದಿನದಲ್ಲ. 2011ರಲ್ಲಿ ಮಾಧವ ಗಾಡ್ಗಿಲ್ ನೇತೃತ್ವದ Western Ghats Ecology Expert Panel ವರದಿ ನೀಡಿತ್ತು.

 ಗಾಡ್ಗಿಲ್ ಸಮಿತಿ ಪಶ್ಚಿಮ ಘಟ್ಟದ ಬಹುಪಾಲು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ, ಅದನ್ನು ವಿವಿಧ ಪರಿಸರ ಸಂವೇದನಾಶೀಲ ವಲಯಗಳಾಗಿ ವಿಭಜಿಸಿ, ಸ್ಥಳೀಯ ಸಮುದಾಯಗಳಿಗೆ ಹೆಚ್ಚಿನ ನಿರ್ಧಾರಾಧಿಕಾರ ನೀಡಬೇಕು ಎಂದು ಪ್ರತಿಪಾದಿಸಿತ್ತು. ಆ ವರದಿ ಅಭಿವೃದ್ಧಿ ಯೋಜನೆಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುತ್ತದೆ ಎಂಬ ಕಾರಣಕ್ಕೆ ರಾಜ್ಯಗಳು ಮತ್ತು ಅಭಿವೃದ್ಧಿ ಪರ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಅದಾದ ನಂತರ ಕಸ್ತೂರಿರಂಗನ್ ನೇತೃತ್ವದ ಹೈ-ಲೆವೆಲ್ ವರ್ಕಿಂಗ್ ಗ್ರೂಪ್ ರಚಿಸಲಾಯಿತು. ಅದು ಗಾಡ್ಗಿಲ್ ವರದಿಗಿಂತ ಭಿನ್ನವಾದ ವಿಧಾನವನ್ನು ಅನುಸರಿಸಿತು. ಪಶ್ಚಿಮ ಘಟ್ಟದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಮಾನವ ವಸತಿ, ಕೃಷಿ, ತೋಟಗಾರಿಕೆ ಇರುವ ಪ್ರದೇಶಗಳನ್ನು ‘cultural landscape’ ಎಂದು ಮತ್ತು ಹೆಚ್ಚಿನ ನೈಸರ್ಗಿಕ ಮಹತ್ವ ಹೊಂದಿರುವ ಪ್ರದೇಶಗಳನ್ನು ‘natural landscape’ ಎಂದು ಗುರುತಿಸಿತು. ಸುಮಾರು 37 ಪ್ರತಿಶತ ಅಥವಾ 60,000 ಚದರ ಕಿಲೋಮೀಟರ್ ಪ್ರದೇಶವನ್ನು ESA ವ್ಯಾಪ್ತಿಗೆ ತರಲು ಶಿಫಾರಸು ಮಾಡಿತು. ಅಂದರೆ ಕಸ್ತೂರಿರಂಗನ್ ವರದಿ ಗಾಡ್ಗಿಲ್ ವರದಿಗಿಂತಲೂ ‘ಸೌಮ್ಯ’ವಾದ ಮಾದರಿಯಾಗಿದೆ ಎಂಬ ವಾದಕ್ಕೆ ಆಧಾರವಿದೆ. ಹಾಗಿದ್ದರೆ ಕರ್ನಾಟಕಕ್ಕೆ ಅದರ ಮೇಲೂ ಏಕೆ ಅಸಮಾಧಾನ? ಸಮಸ್ಯೆ ವರದಿಯಲ್ಲೇ ಇದೆಯೇ, ಅದರ ಅನುಷ್ಠಾನದ ವಿಧಾನದಲ್ಲೇ ಇದೆಯೇ? ಕರ್ನಾಟಕ ಸರ್ಕಾರದ ಆತಂಕವನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಪಶ್ಚಿಮ ಘಟ್ಟದಲ್ಲಿ ಕೃಷಿ, ಕಾಫಿ, ಅಡಿಕೆ, ಏಲಕ್ಕಿ, ಮೆಣಸು, ತೆಂಗು, ಬಾಳೆ ಸೇರಿದಂತೆ ಹಲವು ಕೃಷಿ–ತೋಟಗಾರಿಕಾ ಚಟುವಟಿಕೆಗಳು ಜನರ ಜೀವನೋಪಾಯದ ಭಾಗವಾಗಿವೆ. ಸಾವಿರಾರು ಕುಟುಂಬಗಳು ಪೀಳಿಗೆಗಳಿಂದ ಅಲ್ಲಿ ವಾಸಿಸುತ್ತಿವೆ. ಹೊಸ ನಿಯಮ ಬಂದಾಗ ‘ESA’ ಎಂಬ ಪದವೇ ಜನರಲ್ಲಿ ಭಯ ಹುಟ್ಟಿಸುತ್ತದೆ. ಆದರೆ ಇಲ್ಲಿ ಒಂದು ಪ್ರಮುಖ ರಾಜಕೀಯ ಗೊಂದಲವನ್ನು ನಿವಾರಿಸಬೇಕಿದೆ. ESA ಘೋಷಣೆ ಎಂದರೆ ಜನರನ್ನು ಅಲ್ಲಿಂದ ಒಕ್ಕಲೆಬ್ಬಿಸುವುದು ಎಂದಲ್ಲ. 

ಪ್ರಸ್ತುತ ಕರಡು ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳನ್ನು ಸಾಮಾನ್ಯವಾಗಿ ನಿಷೇಧಿಸುವುದಿಲ್ಲ. ಬದಲಾಗಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ, ಕೆಲವು ಕೈಗಾರಿಕಾ ಚಟುವಟಿಕೆಗಳು, ಉಷ್ಣ ವಿದ್ಯುತ್ ಯೋಜನೆಗಳು ಮತ್ತು ದೊಡ್ಡ ಪ್ರಮಾಣದ ನಿರ್ಮಾಣ–ಟೌನ್‌ಶಿಪ್ ಚಟುವಟಿಕೆಗಳ ಮೇಲೆ ನಿರ್ಬಂಧ ಅಥವಾ ನಿಯಂತ್ರಣ ವಿಧಿಸುವ ಉದ್ದೇಶ ಹೊಂದಿದೆ. ಹೀಗಾಗಿ ‘ESA ಬಂದರೆ ರೈತರೆಲ್ಲ ಬೀದಿಗೆ ಬರುತ್ತಾರೆ’ ಎಂಬ ಸರಳ ರಾಜಕೀಯ ಪ್ರಚಾರವೂ ತಪ್ಪು. ಅದೇ ರೀತಿ ‘ESA ಬಂದರೆ ರೈತರ ಬದುಕಿಗೆ ಯಾವುದೇ ತೊಂದರೆಯೇ ಇಲ್ಲ’ ಎನ್ನುವುದೂ ಸರಿಯಾದ ವಾದವಲ್ಲ. ಯಾಕೆಂದರೆ ಭೂ ಬಳಕೆ, ರಸ್ತೆ, ಪ್ರವಾಸೋದ್ಯಮ, ಕಟ್ಟಡ ನಿರ್ಮಾಣ, ಸಣ್ಣ ಕೈಗಾರಿಕೆ, ಮೂಲಸೌಕರ್ಯ, ಗ್ರಾಮೀಣ ವಸತಿ ವಿಸ್ತರಣೆ ಮುಂತಾದ ಪ್ರಶ್ನೆಗಳು ಮುಂದಿನ ಹಂತದಲ್ಲಿ ಸ್ಥಳೀಯ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೊಂದಿವೆ. ಹೀಗಾಗಿ ನಿಜವಾದ ಚರ್ಚೆ ‘ESA ಬೇಕೋ ಬೇಡವೋ?’ ಎಂಬುದಲ್ಲ. ನಿಜವಾದ ಪ್ರಶ್ನೆ ಏನೆಂದರೇ,  ‘ಯಾವ ಪ್ರದೇಶ ESA ಆಗಬೇಕು? ಯಾವ ಚಟುವಟಿಕೆಗೆ ಎಷ್ಟು ನಿಯಂತ್ರಣ? ನಿರ್ಧಾರ ತೆಗೆದುಕೊಳ್ಳುವವರು ಯಾರು? ಸ್ಥಳೀಯ ಜನರ ಹಕ್ಕುಗಳೇನು?’ ಪರಿಸರವನ್ನು ವಿರೋಧಿಸುವ ಅಭಿವೃದ್ಧಿ ಯಾರಿಗಾಗಿ? ಇಲ್ಲಿ ಎಡರಂಗದ ದೃಷ್ಟಿಕೋನದಿಂದ ಅತ್ಯಂತ ಮುಖ್ಯವಾದ ಪ್ರಶ್ನೆ ಎದ್ದು ಬರುತ್ತದೆ. ಅಭಿವೃದ್ಧಿ ಎಂದರೆ ಏನು? ಒಂದು ಬೆಟ್ಟವನ್ನು ಕಡಿದು ರಸ್ತೆ ಮಾಡುವುದು ಅಭಿವೃದ್ಧಿಯೇ? ಅರಣ್ಯವನ್ನು ತೆರವುಗೊಳಿಸಿ ರೆಸಾರ್ಟ್ ಕಟ್ಟುವುದು ಅಭಿವೃದ್ಧಿಯೇ? ಗಣಿಗಾರಿಕೆ ಮೂಲಕ ಬೆಟ್ಟವನ್ನು ಖಾಲಿ ಮಾಡುವುದು ಅಭಿವೃದ್ಧಿಯೇ? ನದಿಯ ಮೂಲ ಪ್ರದೇಶವನ್ನು ದುರ್ಬಲಗೊಳಿಸಿ ಯೋಜನೆಗಳನ್ನು ರೂಪಿಸುವುದು ಅಭಿವೃದ್ಧಿಯೇ? ಅಥವಾ ಅಲ್ಲಿನ ಜನರ ಜೀವನಮಟ್ಟ ಸುಧಾರಿಸುವುದು, ಕೃಷಿಗೆ ಮಾರುಕಟ್ಟೆ ಕಲ್ಪಿಸುವುದು, ಸಾರ್ವಜನಿಕ ಆರೋಗ್ಯ–ಶಿಕ್ಷಣ ವ್ಯವಸ್ಥೆ ಬಲಪಡಿಸುವುದು, ಪರಿಸರವನ್ನು ಉಳಿಸುವುದು ಮತ್ತು ಮುಂದಿನ ಪೀಳಿಗೆಗೂ ಸಂಪನ್ಮೂಲ ಉಳಿಸುವುದೇ ನಿಜವಾದ ಅಭಿವೃದ್ಧಿಯೇ? ಈ ಪ್ರಶ್ನೆಯನ್ನು ಕೇಳದೆ ಕಸ್ತೂರಿರಂಗನ್ ವರದಿಯನ್ನು ಕೇವಲ ‘ರೈತ ವಿರೋಧಿ’ ಎಂದು ಕರೆಯುವುದು ಪರಿಸರ ರಾಜಕೀಯವನ್ನು ಅತ್ಯಂತ ಸರಳೀಕರಿಸುವುದು. ಯಾಕೆಂದರೆ ಪಶ್ಚಿಮ ಘಟ್ಟದ ಪರಿಸರ ನಾಶದ ಹೊರೆ ಕೇವಲ ಅಲ್ಲಿನ ಜನರ ಮೇಲೆಯೇ ಬೀಳುವುದಿಲ್ಲ. ಪಶ್ಚಿಮ ಘಟ್ಟ ನಾಶವಾದರೆ ಅದರ ಬೆಲೆ ಇಡೀ ಕರ್ನಾಟಕ ಮತ್ತು ದಕ್ಷಿಣ ಭಾರತದ ಜನರು ಕಟ್ಟಬೇಕಾಗುತ್ತದೆ.ನೀರಿನ ಭದ್ರತೆ, ನದಿಗಳ ಹರಿವು, ಮಣ್ಣಿನ ಸಂರಕ್ಷಣೆ, ಜೀವವೈವಿಧ್ಯ, ಮಳೆ ಮಾದರಿ, ಪ್ರವಾಹ ಮತ್ತು ಭೂಕುಸಿತದ ಅಪಾಯ—ಇವೆಲ್ಲವೂ ಪಶ್ಚಿಮ ಘಟ್ಟದ ಆರೋಗ್ಯದೊಂದಿಗೆ ಸಂಬಂಧ ಹೊಂದಿವೆ.

ರಾಜ್ಯಸಭೆಯ ಸಮಿತಿಯೂ ಹಿಂದೆ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ವಿಳಂಬವಾಗುತ್ತಿರುವ ಸಂದರ್ಭದಲ್ಲಿ ಗಣಿಗಾರಿಕೆ, ಅರಣ್ಯ ನಾಶ ಮತ್ತು ದೊಡ್ಡ ಪ್ರಮಾಣದ ನಿರ್ಮಾಣ ಚಟುವಟಿಕೆಗಳು ಪಶ್ಚಿಮ ಘಟ್ಟದ ಪರಿಸರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಎಚ್ಚರಿಸಿತ್ತು.  ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರನ್ನೇ ಬಲಿಪಶು ಮಾಡಬಹುದೇ? ಇಲ್ಲ.  ಪಶ್ಚಿಮ ಘಟ್ಟವನ್ನು ಉಳಿಸುವ ಹೆಸರಿನಲ್ಲಿ ಪೀಳಿಗೆಗಳಿಂದ ಅಲ್ಲಿ ಬದುಕುತ್ತಿರುವ ರೈತನನ್ನು ಅಪರಾಧಿಯನ್ನಾಗಿ ಮಾಡಲಾಗದು. ಪರಿಸರ ನಾಶಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುವ ಗಣಿಗಾರಿಕೆ, ಅಕ್ರಮ ಭೂ ಪರಿವರ್ತನೆ, ಅತಿದೊಡ್ಡ ನಿರ್ಮಾಣ ಯೋಜನೆಗಳು ಮತ್ತು ನಿಯಂತ್ರಣರಹಿತ ಪ್ರವಾಸೋದ್ಯಮವನ್ನು ಪ್ರಶ್ನಿಸದೆ, ಸಣ್ಣ ರೈತನ ಕೃಷಿಯನ್ನೇ ಪರಿಸರದ ಮುಖ್ಯ ಶತ್ರುವೆಂದು ಬಿಂಬಿಸುವುದು ಸಾಮಾಜಿಕ ನ್ಯಾಯವಲ್ಲ. ಪರಿಸರ ಸಂರಕ್ಷಣೆಯ ಮೊದಲ ಬಲಿಯಾಗಬೇಕಾದವರು ದುರ್ಬಲರು ಅಲ್ಲ; ಪರಿಸರವನ್ನು ವ್ಯಾಪಾರೀಕರಣದ ಸರಕಾಗಿ ನೋಡುವ ದೊಡ್ಡ ಬಂಡವಾಳದ ಮಾದರಿಯಾಗಬೇಕು. ಇದೇ ಸಂದರ್ಭದಲ್ಲಿ ಸ್ಥಳೀಯ ಸಮುದಾಯಗಳಿಗೆ ನಿರ್ಧಾರ ಪ್ರಕ್ರಿಯೆಯಲ್ಲಿ ನಿಜವಾದ ಸ್ಥಾನ ನೀಡುವುದು ಅತ್ಯಗತ್ಯ. ಗಾಡ್ಗಿಲ್ ವರದಿಯ ಪ್ರಮುಖ ಬಲಗಳಲ್ಲಿ ಒಂದಾಗಿದ್ದ ಸ್ಥಳೀಯ ಆಡಳಿತ ಮತ್ತು ಗ್ರಾಮಸಭೆಗಳ ಪಾತ್ರದ ಪ್ರಶ್ನೆ ಇಲ್ಲಿಯೂ ಪ್ರಸ್ತುತವಾಗುತ್ತದೆ. ಗಮನಿಸಿ, ಕೇಂದ್ರ–ರಾಜ್ಯ ಸಂಘರ್ಷದ ಮತ್ತೊಂದು ಮುಖ. ಕರ್ನಾಟಕ ಸರ್ಕಾರದ ವಿರೋಧದಲ್ಲಿ ಕೇವಲ ಪರಿಸರದ ಪ್ರಶ್ನೆಯಿಲ್ಲ. ಇಲ್ಲಿ ಕೇಂದ್ರ–ರಾಜ್ಯ ಸಂಬಂಧದ ಪ್ರಶ್ನೆಯೂ ಇದೆ. ಪಶ್ಚಿಮ ಘಟ್ಟ ಆರು ರಾಜ್ಯಗಳಲ್ಲಿ ಹರಡಿಕೊಂಡಿದೆ. ಕೇಂದ್ರ ಸರ್ಕಾರ ಒಂದೇ ಮಾದರಿಯ ನಿಯಮವನ್ನು ಎಲ್ಲ ರಾಜ್ಯಗಳಿಗೂ ಅನ್ವಯಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಪಶ್ಚಿಮ ಘಟ್ಟದ ಪ್ರತಿಯೊಂದು ಭಾಗವೂ ಒಂದೇ ರೀತಿಯಲ್ಲ. ಕೊಡಗಿನ ಕಾಫಿ ತೋಟ, ಉತ್ತರ ಕನ್ನಡದ ಅರಣ್ಯ ಪ್ರದೇಶ, ಚಿಕ್ಕಮಗಳೂರಿನ ಬೆಟ್ಟ ಪ್ರದೇಶ, ಉಡುಪಿಯ ಕರಾವಳಿ–ಘಟ್ಟ ಸಂಕ್ರಮಣ ಪ್ರದೇಶ—ಇವುಗಳ ಪರಿಸರ ಮತ್ತು ಸಾಮಾಜಿಕ ಸ್ವರೂಪ ಒಂದೇ ಅಲ್ಲ. ಹೀಗಿರುವಾಗ ದೆಹಲಿಯಲ್ಲಿ ಕುಳಿತು ಒಂದೇ ನಕ್ಷೆ ಎಳೆದು ನಿಯಮ ರೂಪಿಸುವುದಕ್ಕಿಂತ ಸ್ಥಳೀಯ ಭೌಗೋಳಿಕತೆ, ಜಲವಿಜ್ಞಾನ, ಭೂಮಿಯ ಬಳಕೆ, ಜನಸಂಖ್ಯೆ, ಕೃಷಿ ಮಾದರಿ ಮತ್ತು ಪರಿಸರ ಅಪಾಯಗಳನ್ನು ಆಧರಿಸಿದ ಸೂಕ್ಷ್ಮ ವಲಯೀಕರಣ ಅಗತ್ಯ. ಕರ್ನಾಟಕದ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯೂ ಇತ್ತೀಚೆಗೆ ಕೇಂದ್ರದ ಕರಡಿನ ಬಗ್ಗೆ ಭೌಗೋಳಿಕ ಸ್ಥಿರತೆ, ಜಲವಿಜ್ಞಾನ, ಮಣ್ಣಿನ ಗುಣ, ಇಳಿಜಾರು ಅಪಾಯ ಮತ್ತು ನದಿ ಮೂಲ ಪ್ರದೇಶಗಳನ್ನು ಹೆಚ್ಚು ವೈಜ್ಞಾನಿಕವಾಗಿ ಪರಿಗಣಿಸಬೇಕು ಎಂದು ಆಕ್ಷೇಪಿಸಿದೆ. ಈ ಆಕ್ಷೇಪಣೆಗಳನ್ನು ರಾಜಕೀಯ ಹಠವೆಂದು ತಳ್ಳಿಹಾಕುವುದೂ ಸರಿಯಲ್ಲ. ಹಾಗಾದರೆ ಸರ್ಕಾರದ ವಿರೋಧದ ಹಿಂದೆ ರಾಜಕೀಯವೂ ಇದೆಯೇ? ಖಂಡಿತವಾಗಿಯೂ ಈ ಪ್ರಶ್ನೆಯನ್ನು ಕೇಳಬೇಕು. ಯಾಕೆಂದರೆ ಪಶ್ಚಿಮ ಘಟ್ಟದ ‘ಅಭಿವೃದ್ಧಿ’ ಎನ್ನುವ ಪದದ ಹಿಂದೆ ಕೇವಲ ರೈತನಿಲ್ಲ. ಅಲ್ಲಿ ಪ್ರವಾಸೋದ್ಯಮ ಉದ್ಯಮವಿದೆ. ರಿಯಲ್ ಎಸ್ಟೇಟ್ ಇದೆ.

ಕಾಫಿ ಮತ್ತು ತೋಟಗಾರಿಕೆ ಆರ್ಥಿಕತೆ ಇದೆ. ಮೂಲಸೌಕರ್ಯ ಯೋಜನೆಗಳಿವೆ. ಗಣಿಗಾರಿಕೆ ಮತ್ತು ನಿರ್ಮಾಣದ ಆಸಕ್ತಿಗಳಿವೆ. ಆದ್ದರಿಂದ ಸರ್ಕಾರ ‘ರೈತರ ಬದುಕು’ ಎಂಬ ಹೆಸರಿನಲ್ಲಿ ಯಾವ ಅಭಿವೃದ್ಧಿ ಮಾದರಿಯನ್ನು ರಕ್ಷಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ರೈತನ ಹೊಲವನ್ನು ರಕ್ಷಿಸುವುದೇ ಸರ್ಕಾರದ ಉದ್ದೇಶವಾಗಿದ್ದರೆ ಅದನ್ನು ಸ್ವಾಗತಿಸಬೇಕು. ಆದರೆ ಅದೇ ಹೆಸರಿನಲ್ಲಿ ದೊಡ್ಡ ಪ್ರವಾಸೋದ್ಯಮ ಯೋಜನೆಗಳು, ರಿಯಲ್ ಎಸ್ಟೇಟ್ ವಿಸ್ತರಣೆ ಮತ್ತು ಪರಿಸರಕ್ಕೆ ಹಾನಿಕಾರಕ ಯೋಜನೆಗಳಿಗೆ ಬಾಗಿಲು ತೆರೆದಿಡುವಂತಾಗಬಾರದು. ಇದು ಸರ್ಕಾರಕ್ಕೆ ಕೇಳಬೇಕಾದ ಪ್ರಮುಖ ಪ್ರಶ್ನೆ. ‘ಜನರ ಬದುಕು’ ಮತ್ತು ‘ಪರಿಸರ’ವನ್ನು ಮುಖಾಮುಖಿ ನಿಲ್ಲಿಸುವ ರಾಜಕೀಯ ನಿಲ್ಲಬೇಕು. ನೋಡಿ, ಕಸ್ತೂರಿರಂಗನ್ ವರದಿಯ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಎರಡು ಅತಿರೇಕದ ನಿಲುವುಗಳು ಗೋಚರಿಸುತ್ತವೆ. ಒಂದು ಕಡೆ: “ವರದಿ ಜಾರಿಯಾದರೆ ರೈತರ ಬದುಕು ನಾಶವಾಗುತ್ತದೆ” ಎನ್ನುವುದು, ಮತ್ತೊಂದು ಕಡೆ: “ಪರಿಸರ ಉಳಿಸಲು ಯಾವುದೇ ಅಭಿವೃದ್ಧಿ ಬೇಡ.” ಎನ್ನುವುದು ಎರಡೂ ಅರ್ಧಸತ್ಯಗಳು. ನಿಜವಾದ ಪರಿಹಾರ ಮೂರನೇ ದಾರಿಯಲ್ಲಿದೆ. ಜನಕೇಂದ್ರಿತ ಪರಿಸರ ಅಭಿವೃದ್ಧಿ.ಅಂದರೆ— * ಸಣ್ಣ ಮತ್ತು ಮಧ್ಯಮ ರೈತರ ಕೃಷಿಗೆ ರಕ್ಷಣೆ; * ಸ್ಥಳೀಯ ಜನರ ಭೂಹಕ್ಕುಗಳಿಗೆ ಭದ್ರತೆ; * ಗ್ರಾಮಸಭೆಗಳ ಪಾತ್ರ; * ಗಣಿಗಾರಿಕೆ ಮತ್ತು ಅಕ್ರಮ ಕಲ್ಲುಗಣಿಗಾರಿಕೆಯ ಮೇಲೆ ಕಠಿಣ ನಿಯಂತ್ರಣ; * ದೊಡ್ಡ ನಿರ್ಮಾಣ ಯೋಜನೆಗಳಿಗೆ ಪರಿಸರದ ಹೊರೆ ಸಾಮರ್ಥ್ಯ ಅಧ್ಯಯನ; * ಪ್ರವಾಸೋದ್ಯಮಕ್ಕೆ ಮಿತಿ; * ನದಿ ಮೂಲ ಮತ್ತು ಜಲಾನಯನ ಪ್ರದೇಶಗಳ ರಕ್ಷಣೆ; * ಭೂಕುಸಿತ ಅಪಾಯದ ಪ್ರದೇಶಗಳಿಗೆ ವೈಜ್ಞಾನಿಕ ವಲಯೀಕರಣ; * ಪರಿಸರ ಸಂರಕ್ಷಣೆಗೆ ಸ್ಥಳೀಯ ಜನರಿಗೆ ಆರ್ಥಿಕ ಪ್ರೋತ್ಸಾಹ; * ಅರಣ್ಯಾಧಾರಿತ ಸಮುದಾಯಗಳ ಜೀವನೋಪಾಯಕ್ಕೆ ಮೌಲ್ಯವರ್ಧಿತ ಮಾರುಕಟ್ಟೆ; * ಮತ್ತು ನಿರ್ಧಾರ ಪ್ರಕ್ರಿಯೆಯಲ್ಲಿ ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆ. ಗಮನಿಸಿ, ಕಸ್ತೂರಿರಂಗನ್ ಸಮಿತಿಯೂ ಪರಿಸರ ಸಂರಕ್ಷಣೆಯೊಂದಿಗೆ ‘green growth’, ಸುಸ್ಥಿರ ಕೃಷಿ, ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಪ್ರಯೋಜನ ಮತ್ತು ಪರಿಸರ ಸೇವೆಗಳ ಮೌಲ್ಯೀಕರಣದಂತಹ ಕ್ರಮಗಳನ್ನು ಶಿಫಾರಸು ಮಾಡಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ.  ಇನ್ನು, ಅಧಿವೇಶನ: ರಾಜಕೀಯ ಪ್ರದರ್ಶನವಾಗಬಾರದು.

ಮುಖ್ಯಮಂತ್ರಿ ಒಂದು ದಿನದ ವಿಶೇಷ ಅಧಿವೇಶನದ ಮಾತು ಹೇಳಿದ್ದಾರೆ. ಇದು ಸ್ವಾಗತಾರ್ಹ. ಆದರೆ ವಿಶೇಷ ಅಧಿವೇಶನ ಕೇವಲ ಕೇಂದ್ರದ ವಿರುದ್ಧ ರಾಜಕೀಯ ನಿರ್ಣಯ ಕೈಗೊಳ್ಳುವ ವೇದಿಕೆಯಾಗಬಾರದು. ಅಲ್ಲಿ ಪಶ್ಚಿಮ ಘಟ್ಟದ ಬಗ್ಗೆ ಎಲ್ಲಾ ಪಕ್ಷಗಳ ಸದಸ್ಯರು, ಪರಿಸರ ವಿಜ್ಞಾನಿಗಳು, ರೈತ ಸಂಘಟನೆಗಳು, ಆದಿವಾಸಿ ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ತಜ್ಞರ ಅಭಿಪ್ರಾಯಗಳನ್ನು ದಾಖಲಿಸುವ ವ್ಯವಸ್ಥೆ ಇರಬೇಕು. ಸರ್ಕಾರ ತನ್ನ ನಿಲುವನ್ನು ಜನರ ಮುಂದೆ ಇಡಬೇಕು. ಅದೇ ರೀತಿ ಕೇಂದ್ರ ಸರ್ಕಾರವೂ ರಾಜ್ಯದ ಆಕ್ಷೇಪಣೆಗಳನ್ನು ಕೇವಲ ‘ಅಭಿವೃದ್ಧಿ ವಿರೋಧಿ ರಾಜಕೀಯ’ ಎಂದು ತಳ್ಳಿಹಾಕಬಾರದು. ಪಶ್ಚಿಮ ಘಟ್ಟ ಯಾರದ್ದು? ಈ ಪ್ರಶ್ನೆಗೆ ಸರಳ ಉತ್ತರ ಇಲ್ಲ. ಪಶ್ಚಿಮ ಘಟ್ಟ ಅಲ್ಲಿನ ರೈತನದ್ದೂ ಹೌದು. ಅರಣ್ಯಾಧಾರಿತ ಸಮುದಾಯಗಳದ್ದೂ ಹೌದು. ಕರ್ನಾಟಕದ ಜನರದ್ದೂ ಹೌದು. ದಕ್ಷಿಣ ಭಾರತದ ಕೋಟ್ಯಂತರ ಜನರ ನೀರಿನ ಭದ್ರತೆಯ ಭಾಗವೂ ಹೌದು. ಅದೇ ಸಮಯದಲ್ಲಿ ಅದು ಅಪರೂಪದ ಜೀವವೈವಿಧ್ಯದ ಸಾರ್ವಜನಿಕ ಸಂಪತ್ತೂ ಹೌದು. ಆದ್ದರಿಂದ ಅದರ ಭವಿಷ್ಯವನ್ನು ಕೇವಲ ಸರ್ಕಾರಗಳು, ಅಧಿಕಾರಿಗಳು ಅಥವಾ ರಾಜಕೀಯ ಪಕ್ಷಗಳು ನಿರ್ಧರಿಸಲು ಸಾಧ್ಯವಿಲ್ಲ. ಜನರನ್ನು ಹೊರಗಿಟ್ಟು ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಪರಿಸರವನ್ನು ಹೊರಗಿಟ್ಟು ಜನರ ಅಭಿವೃದ್ಧಿಯೂ ಸಾಧ್ಯವಿಲ್ಲ.  ಇದೇ ಕಸ್ತೂರಿರಂಗನ್ ವಿವಾದದ ನಿಜವಾದ ಪಾಠ. ಒಟ್ಟಿನಲ್ಲಿ, ಕರ್ನಾಟಕ ಸರ್ಕಾರ ಕಸ್ತೂರಿರಂಗನ್ ವರದಿಯನ್ನು ವಿರೋಧಿಸುತ್ತಿರುವುದು ಕೇವಲ ಕೇಂದ್ರದ ವಿರುದ್ಧದ ರಾಜಕೀಯ ಸಂಘರ್ಷವಾಗಿ ಉಳಿದರೆ ಅದರ ಅರ್ಥ ಸೀಮಿತವಾಗುತ್ತದೆ. ಅದೇ ರೀತಿ ಕೇಂದ್ರ ಸರ್ಕಾರವೂ ESA ಘೋಷಣೆಯನ್ನು ಕೇವಲ ಅಧಿಸೂಚನೆ ಹೊರಡಿಸುವ ಆಡಳಿತಾತ್ಮಕ ಪ್ರಕ್ರಿಯೆಯಾಗಿ ನೋಡಿದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ. ಪಶ್ಚಿಮ ಘಟ್ಟವನ್ನು ಉಳಿಸಬೇಕಾದರೆ ಮೊದಲು ಅದರ ಮೇಲೆ ನಡೆಯುತ್ತಿರುವ ಅಭಿವೃದ್ಧಿಯ ಮಾದರಿಯನ್ನೇ ಪ್ರಶ್ನಿಸಬೇಕು. ರೈತನಿಗೆ ಪರಿಸರ ಶತ್ರುವಿನ ಪಟ್ಟ ನೀಡದೆ, ಪರಿಸರ ಸಂರಕ್ಷಣೆಯ ಪಾಲುದಾರನನ್ನಾಗಿ ಮಾಡಬೇಕು. ಅರಣ್ಯವನ್ನು ರಕ್ಷಿಸುವ ಸಮುದಾಯಕ್ಕೆ ರಕ್ಷಣೆ ನೀಡಬೇಕು. ಗಣಿಗಾರಿಕೆ ಮತ್ತು ಅತಿಯಾದ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು.

ಪ್ರವಾಸೋದ್ಯಮವನ್ನು ನಿಯಂತ್ರಿಸಬೇಕು. ಮತ್ತು ಕೇಂದ್ರ–ರಾಜ್ಯ–ಸ್ಥಳೀಯ ಸಂಸ್ಥೆಗಳ ನಡುವೆ ಅಧಿಕಾರ ಹಂಚಿಕೆಯ ಹೊಸ ಮಾದರಿಯನ್ನು ರೂಪಿಸಬೇಕು. ಪಶ್ಚಿಮ ಘಟ್ಟ ಉಳಿಯಬೇಕಾದರೆ ಕೇವಲ ಕಸ್ತೂರಿರಂಗನ್ ವರದಿಯೂ ಸಾಕಾಗುವುದಿಲ್ಲ; ವರದಿಯನ್ನು ತಿರಸ್ಕರಿಸುವ ರಾಜಕೀಯವೂ ಸಾಕಾಗುವುದಿಲ್ಲ. ಅಗತ್ಯವಿರುವುದು— ಪರಿಸರ ನ್ಯಾಯ + ಸಾಮಾಜಿಕ ನ್ಯಾಯ + ಸ್ಥಳೀಯ ಪ್ರಜಾಪ್ರಭುತ್ವ + ವೈಜ್ಞಾನಿಕ ಯೋಜನೆ.  ಈ ನಾಲ್ಕು ಸ್ತಂಭಗಳ ಮೇಲೆ ಮಾತ್ರ ಪಶ್ಚಿಮ ಘಟ್ಟದ ಭವಿಷ್ಯವನ್ನು ಕಟ್ಟಬಹುದು. ಇಲ್ಲದಿದ್ದರೆ ‘ಅಭಿವೃದ್ಧಿ’ ಎಂಬ ಹೆಸರಿನಲ್ಲಿ ಪಶ್ಚಿಮ ಘಟ್ಟವನ್ನು ಕಳೆದುಕೊಳ್ಳುತ್ತೇವೆ; ‘ಪರಿಸರ ಸಂರಕ್ಷಣೆ’ ಎಂಬ ಹೆಸರಿನಲ್ಲಿ ಅಲ್ಲಿನ ಜನರ ಬದುಕನ್ನು ಕಳೆದುಕೊಳ್ಳುತ್ತೇವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

- ಶ್ರೀರಾಜ್‌ ವಕ್ವಾಡಿ 

ಮಳೆ ಕೈಕೊಟ್ಟಿದೆ. ಹೊಲದಲ್ಲಿ ಬೆಳೆ ನಿಂತಿದ್ದರೂ ರೈತನ ಮನಸ್ಸಿನಲ್ಲಿ ಆತಂಕ. ಸರ್ಕಾರದ 635 ಕೋಟಿ ರೂ.

ಮಳೆ ಕೈಕೊಟ್ಟಿದೆ. ಹೊಲದಲ್ಲಿ ಬೆಳೆ ನಿಂತಿದ್ದರೂ ರೈತನ ಮನಸ್ಸಿನಲ್ಲಿ ಆತಂಕ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದು ಮಹತ್ವದ ಆಡಳಿತಾತ್ಮಕ ಕ್ರಮ. ಅದರ̧ಲ್ಲೂ ಬರ ಪರಿಸ್ಥಿತಿ ನಿಭಾಯಿಸಲು ₹635 ಕೋಟಿ ವೆಚ್ಚ ಮಾಡುತ್ತಿರುವುದಾಗಿ ಸರ್ಕಾರ ಹೇಳಿರುವುದು, ಸಂಕಷ್ಟವನ್ನು ಕೇವಲ ಘೋಷಣೆಯ ಮಟ್ಟದಲ್ಲಿ ಬಿಡದೆ ಪರಿಹಾರ ಕಾರ್ಯಗಳಿಗೆ ಸಂಪನ್ಮೂಲ ಒದಗಿಸುತ್ತಿರುವುದನ್ನು ಸೂಚಿಸುತ್ತದೆ.

ಜೂನ್ 1ರಿಂದ ಆಗಸ್ಟ್ 21ರವರೆಗೆ 29 ಜಿಲ್ಲೆಗಳಲ್ಲಿ ಮಳೆ ಕೊರತೆ ದಾಖಲಾಗಿದೆ. 176 ತಾಲೂಕುಗಳು ಮಳೆ ಕೊರತೆ ಹಾಗೂ 15 ತಾಲೂಕುಗಳು ತೀವ್ರ ಮಳೆ ಕೊರತೆಯಲ್ಲಿವೆ. ಈ ಹಿನ್ನೆಲೆಯಲ್ಲಿ 89 ತಾಲೂಕುಗಳನ್ನು ತೀವ್ರ ಹಾಗೂ 12 ತಾಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ಗುರುತಿಸಲಾಗಿದೆ. ಅಂಕಿ-ಅಂಶಗಳೇ ಈ ವರ್ಷದ ಕೃಷಿ ಸಂಕಷ್ಟದ ಗಂಭೀರತೆಯನ್ನು ಹೇಳುತ್ತಿವೆ. ಆದರೆ ಬರ ಘೋಷಣೆಯೇ ಪರಿಹಾರವಲ್ಲ; ಅದು ಪರಿಹಾರದ ಆರಂಭ. ₹635 ಕೋಟಿ ವೆಚ್ಚವಾಗುತ್ತಿದೆ ಎನ್ನುವುದಕ್ಕಿಂತ ಆ ಹಣ ಯಾರಿಗೆ ತಲುಪುತ್ತದೆ?, ಯಾವ ರೂಪದಲ್ಲಿ ತಲುಪುತ್ತದೆ? ಮತ್ತು ಎಷ್ಟು ವೇಗವಾಗಿ ತಲುಪುತ್ತದೆ ಎಂಬುದೇ ಮುಖ್ಯ. ಬೆಳೆ ನಷ್ಟ ಅನುಭವಿಸಿದ ರೈತನ ಖಾತೆಗೆ ಪರಿಹಾರ ತಲುಪುತ್ತದೆಯೇ? ಜಾನುವಾರುಗಳಿಗೆ ಮೇವು ಸಿಗುತ್ತದೆಯೇ? ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆಯೇ? ಮುಂದಿನ ಬಿತ್ತನೆಗೆ ರೈತನಿಗೆ ಅಗತ್ಯ ನೆರವು ದೊರೆಯುತ್ತದೆಯೇ? ಇವೇ ಸರ್ಕಾರದ ಕಾರ್ಯಕ್ಷಮತೆಯನ್ನು ಅಳೆಯುವ ಮಾನದಂಡಗಳಾಗಬೇಕು. 

ಜೂನ್ 1ರಿಂದ ಆಗಸ್ಟ್ 26ರವರೆಗೆ ಕರ್ನಾಟಕದಲ್ಲಿ ಸಾಮಾನ್ಯವಾಗಿ 666 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿ ಕೇವಲ 465 ಮಿ.ಮೀ. ಮಳೆಯಾಗಿದ್ದು, ಶೇ.30ರಷ್ಟು ಕೊರತೆ ದಾಖಲಾಗಿದೆ. 29 ಜಿಲ್ಲೆಗಳ 190 ತಾಲೂಕುಗಳು ಮಳೆ ಕೊರತೆಯಿಂದ ಬಳಲುತ್ತಿವೆ. 134 ತಾಲೂಕುಗಳಲ್ಲಿ ಸತತ ಮೂರು ವಾರಕ್ಕೂ ಹೆಚ್ಚು ಅವಧಿಯ ಒಣಹವೆ ದಾಖಲಾಗಿದ್ದು, ಬರ ನಿರ್ಣಯದ ‘ಟ್ರಿಗರ್-1’ ಮಾನದಂಡದಡಿ ಅವುಗಳನ್ನು ಪರಿಶೀಲಿಸಲಾಗಿದೆ. ಈ ಪರಿಶೀಲನೆ ಮತ್ತು ಸ್ಥಳಮಟ್ಟದ ‘ಗ್ರೌಂಡ್ ಟ್ರೂಥಿಂಗ್’ ಬಳಿಕ 101 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ. ಈ ಪೈಕಿ 89 ತಾಲೂಕುಗಳಲ್ಲಿ ತೀವ್ರ ಬರದ ಪರಿಸ್ಥಿತಿ ಹಾಗೂ 12 ತಾಲೂಕುಗಳಲ್ಲಿ ಸಾಧಾರಣ ಬರದ ಪರಿಸ್ಥಿತಿ ಇದೆ ಎಂದು ವರದಿಯಾಗಿದೆ. ಇನ್ನೂ 32 ತಾಲೂಕುಗಳ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಅಂದರೆ ಬರದ ವ್ಯಾಪ್ತಿ ಇಷ್ಟಕ್ಕೇ ಸೀಮಿತವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಮಳೆಯ ಕೊರತೆ ಎಂದರೆ ಕೇವಲ ಒಂದು ಹಂಗಾಮಿನ ಬೆಳೆ ನಷ್ಟವಲ್ಲ. ಅದರ ಪರಿಣಾಮ ಇಡೀ ಗ್ರಾಮೀಣ ಆರ್ಥಿಕತೆಯ ಮೇಲೆ ಬೀಳುತ್ತದೆ. ಬಿತ್ತನೆ ಮಾಡಿದ ರೈತನಿಗೆ ಮೊದಲು ಬೀಜ, ಗೊಬ್ಬರ, ಕೃಷಿ ಕಾರ್ಮಿಕರ ವೆಚ್ಚ, ವಿದ್ಯುತ್ ಅಥವಾ ನೀರಾವರಿ ವೆಚ್ಚ ಸೇರಿದಂತೆ ಹಲವು ಖರ್ಚುಗಳು ಎದುರಾಗುತ್ತವೆ.

ಬೆಳೆ ಕೈಕೊಟ್ಟರೆ ಈ ಹೂಡಿಕೆಗೆ ಪ್ರತಿಫಲ ಸಿಗುವುದಿಲ್ಲ. ಮುಂದಿನ ಹಂಗಾಮಿಗೆ ಹಣ ಹೊಂದಿಸುವುದೂ ಕಷ್ಟವಾಗುತ್ತದೆ. ಇದರ ಜೊತೆಗೆ ಜಾನುವಾರುಗಳಿಗೆ ಮೇವು, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು, ಅಂತರ್ಜಲದ ಲಭ್ಯತೆ ಹಾಗೂ ಜಲಾಶಯಗಳ ನೀರಿನ ಸಂಗ್ರಹದ ಮೇಲೂ ಬರದ ಪರಿಣಾಮ ಬೀಳುತ್ತಿದೆ. ಕೆಲವು ಪ್ರದೇಶಗಳಲ್ಲಿ ಟ್ಯಾಂಕರ್‌ಗಳು ಮತ್ತು ಖಾಸಗಿ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಪೂರೈಸುವ ಅಗತ್ಯ ಎದುರಾಗಿದೆ. ಇದರ ನಡುವೆ ಕೇಂದ್ರದ ಬರ ಮಾನದಂಡಗಳ ಬಗ್ಗೆಯೂ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.  ಇದು ಕೇವಲ ಕೇಂದ್ರ–ರಾಜ್ಯ ರಾಜಕೀಯ ಸಂಘರ್ಷವಾಗಿ ಉಳಿಯಬಾರದು. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಲ್ಲಿ ಬರವನ್ನು ಅಳೆಯುವ ಮಾನದಂಡಗಳೇ ಬದಲಾಗಬೇಕೇ ಎಂಬ ಗಂಭೀರ ಚರ್ಚೆ ನಡೆಯಬೇಕಿದೆ. ಮಳೆಯ ಒಟ್ಟು ಪ್ರಮಾಣ ಮಾತ್ರವಲ್ಲದೆ, ಮಳೆಯ ಹಂಚಿಕೆ, ಬಿತ್ತನೆಯ ನಂತರದ ಮಳೆ ವಿರಾಮ, ಮಣ್ಣಿನ ತೇವಾಂಶ ಮತ್ತು ಬೆಳೆಗಳ ವಾಸ್ತವ ಸ್ಥಿತಿಯನ್ನೂ ಪರಿಗಣಿಸುವ ಅಗತ್ಯವಿದೆ. ರಾಜ್ಯ ಸರ್ಕಾರ ಬರ ನಿರ್ವಹಣೆಗೆ ತನ್ನ ಸಂಪನ್ಮೂಲಗಳನ್ನು ಬಳಸುತ್ತಿದ್ದರೂ, ಇಂತಹ ದೊಡ್ಡ ಪ್ರಮಾಣದ ಸಂಕಷ್ಟವನ್ನು ರಾಜ್ಯದ ಸಂಪನ್ಮೂಲಗಳಿಂದ ಮಾತ್ರ ನಿಭಾಯಿಸುವುದು ಕಷ್ಟ. ಕೇಂದ್ರದ ಬರ ಪರಿಹಾರ ಮಾನದಂಡಗಳ ಕುರಿತೂ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಅವುಗಳನ್ನು ಪರಿಷ್ಕರಿಸುವಂತೆ ಒತ್ತಾಯಿಸಿದೆ. ಹೀಗಾಗಿ ಮುಂದಿನ ಹಂತದಲ್ಲಿ ಕೇಂದ್ರದಿಂದ ಹೆಚ್ಚುವರಿ ನೆರವು ಪಡೆಯುವ ಪ್ರಯತ್ನವೂ ನಿರ್ಣಾಯಕವಾಗಲಿದೆ. ಇನ್ನು, ಪ್ರತಿ ವಾರ ಪರಿಸ್ಥಿತಿಯನ್ನು ಪರಿಶೀಲಿಸುವುದಾಗಿ ಸರ್ಕಾರ ಹೇಳಿರುವುದು ಸ್ವಾಗತಾರ್ಹ.

ಅಗತ್ಯವಿದ್ದಲ್ಲಿ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದೂ ಅಗತ್ಯ. ಆದರೆ ಈ ಪ್ರಕ್ರಿಯೆ ರಾಜಕೀಯ ಘೋಷಣೆಗಳಿಗಿಂತ ವೈಜ್ಞಾನಿಕ ಮಾಹಿತಿ ಮತ್ತು ರೈತರ ನೈಜ ಅನುಭವದ ಮೇಲೆ ಆಧಾರಿತವಾಗಬೇಕು. ಗಮನಿಸಿ, ₹635 ಕೋಟಿ ವೆಚ್ಚ, 101 ತಾಲೂಕುಗಳ ಬರ ಘೋಷಣೆ ಮತ್ತು ಬೆಳೆ ನಷ್ಟ ಸಮೀಕ್ಷೆ—ಇವೆಲ್ಲವೂ ಸರ್ಕಾರದ ಬದ್ಧತೆಯ ಸೂಚಕಗಳಾಗಬಹುದು. ಆದರೆ ಅಂತಿಮವಾಗಿ ರೈತನ ಬದುಕಿನಲ್ಲಿ ಬದಲಾವಣೆ ಕಾಣಿಸಿದಾಗ ಮಾತ್ರ ಅವುಗಳ ಅರ್ಥ ಸಾರ್ಥಕವಾಗುತ್ತದೆ. ಬರವನ್ನು ಘೋಷಿಸುವುದು ಸರ್ಕಾರದ ಕರ್ತವ್ಯದ ಅಂತ್ಯವಲ್ಲ; ರೈತನನ್ನು ಸಂಕಷ್ಟದಿಂದ ಪಾರು ಮಾಡುವುದು ಅದರ ನಿಜವಾದ ಪರೀಕ್ಷೆ.  ಒಟ್ಟಿನಲ್ಲಿ, ಈ ವರ್ಷದ ಪರಿಸ್ಥಿತಿ ಸಂಕಷ್ಟದ ಪಾಠವನ್ನು ಹೇಳಿದೆ. ಮುಂಗಾರು ವಿಫಲವಾದಾಗ ಮಾತ್ರ ತುರ್ತು ಕ್ರಮ ಕೈಗೊಳ್ಳುವ ಬದಲು, ನೀರಿನ ಸಂರಕ್ಷಣೆ, ಅಂತರ್ಜಲ ಮರುಪೂರಣ, ಕೆರೆ-ಕಟ್ಟೆಗಳ ಪುನಶ್ಚೇತನ, ಕಡಿಮೆ ನೀರು ಬಳಕೆಯ ಬೆಳೆಗಳಿಗೆ ಪ್ರೋತ್ಸಾಹ ಮತ್ತು ಹವಾಮಾನ ಆಧಾರಿತ ಕೃಷಿ ಯೋಜನೆಗಳನ್ನು ದೀರ್ಘಕಾಲಿಕವಾಗಿ ಜಾರಿಗೆ ತರಬೇಕಾಗಿದೆ. ಸರ್ಕಾರ ಈ ಬಗ್ಗೆಯೂ ಗಮನ ಹರಿಸಬೇಕಿದೆ. ಇಲ್ಲವಾದರೆ ಪ್ರತಿವರ್ಷ ಮಳೆ ಕಡಿಮೆಯಾದಾಗ ‘ಬರ ಘೋಷಣೆ–ಪರಿಹಾರ–ಟ್ಯಾಂಕರ್’ ಎಂಬ ಚಕ್ರ ಪುನರಾವರ್ತನೆಯಾಗುತ್ತಲೇ ಇರುತ್ತದೆ. 

- ಶ್ರೀರಾಜ್‌ ವಕ್ವಾಡಿ 

ನೇಪಾಳದ ದುರಂತದ ಹಿಂದೆ ಪ್ರಕೃತಿಯಷ್ಟೇ ಅಲ್ಲ, ಮನುಷ್ಯನ ಅಭಿವೃದ್ಧಿ ಮಾದರಿಯೂ ಇದೆ.

ಹಿಮ ಕರಗುವುದು ಎಂದರೆ ಕೇವಲ ಹಿಮದ ಕರಗುವಿಕೆಯಲ್ಲ. ಅದು ಪರ್ವತದ ಸ್ಥಿರತೆ ಕರಗುತ್ತಿರುವ ಸೂಚನೆ. 2026ರ ಆಗಸ್ಟ್ 26. ನೇಪಾಳ–ಟಿಬೆಟ್ ಗಡಿಯ ಹಿಮಾಲಯ ಪ್ರದೇಶಕ್ಕೆ ಈ ದಿನ ಮತ್ತೊಂದು ಕರಾಳ ಅಧ್ಯಾಯ ಬರೆದ ದಿನ. ರಸುವಾ ಜಿಲ್ಲೆ ಸೇರಿದಂತೆ ಭೋಟೆ ಕೋಶಿ–ತ್ರಿಶೂಲಿ ನದಿ ಕಣಿವೆಯಲ್ಲಿ ಸಂಭವಿಸಿದ ಆಕಸ್ಮಿಕ ಪ್ರವಾಹ, ಹಿಮ–ಬಂಡೆ ಕುಸಿತ ಮತ್ತು ಕೆಸರು ತುಂಬಿದ ನೀರಿನ ರಭಸ ನೂರಾರು ಜೀವಗಳನ್ನು ಬಲಿ, ಸಾವಿರಾರು ಮಂದಿಯ ನಾಪತ್ತೆ. ಇದು ಹಿಮ ಪವರ್ತಗಳ ಎಚ್ಚರಿಕೆಯ ಗಂಟೆ! 

 ನೇಪಾಳ ಅತ್ಯಂತ ಭೀಕರತೆಯನ್ನು ಕಂಡಿದೆ.   ಇತ್ತೀಚಿನ ವರದಿಗಳ ಪ್ರಕಾರ ಸಾವಿನ ಸಂಖ್ಯೆ 400ಕ್ಕೆ ಏರಿಕೆಯಾಗಿದೆ, ಸುಮಾರು 1,468ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅವರಲ್ಲಿ ನೂರಾರು ಭಾರತೀಯರೂ ಸೇರಿದ್ದಾರೆ. ಇದು ಕೇವಲ ಒಂದು ಪ್ರವಾಹವಲ್ಲ. ಇದು ಬದಲಾಗುತ್ತಿರುವ ಹಿಮಾಲಯದ ಎಚ್ಚರಿಕೆಯ ಗಂಟೆ. ಹಿಮಾಲಯವನ್ನು ನಾವು ಬಹುಕಾಲದಿಂದ ‘ಭೂಮಿಯ ಮೂರನೇ ಧ್ರುವ’ ಎಂದು ನೋಡಿದ್ದೇವೆ. ಏಷ್ಯಾದ ಬಹುತೇಕ ಪ್ರಮುಖ ನದಿಗಳಿಗೆ ನೀರು ನೀಡುವ ಈ ಪರ್ವತ ಶ್ರೇಣಿ ಇಂದು ಹವಾಮಾನ ಬದಲಾವಣೆಯ ಅತ್ಯಂತ ಸೂಕ್ಷ್ಮ ವಲಯವಾಗಿ ಪರಿಣಮಿಸಿದೆ. ಹಿಮನದಿಗಳು ಕುಗ್ಗುತ್ತಿವೆ. ಪರ್ಮಾಫ್ರಾಸ್ಟ್ ಕರಗುತ್ತಿದೆ. ಪರ್ವತ ಇಳಿಜಾರುಗಳು ಅಸ್ಥಿರವಾಗುತ್ತಿವೆ. ಹಿಮನದಿಗಳ ಅಂಚಿನಲ್ಲಿ ಹೊಸ ಸರೋವರಗಳು ರೂಪುಗೊಳ್ಳುತ್ತಿವೆ. ಇವೆಲ್ಲವೂ ಒಟ್ಟಾಗಿ ಸೇರಿದಾಗ, ಒಂದು ಸಣ್ಣ ಭೌಗೋಳಿಕ ಘಟನೆ ಕೂಡ ಕ್ಷಣಾರ್ಧದಲ್ಲಿ ಭೀಕರ ಮಾನವೀಯ ದುರಂತವಾಗಿ ಬದಲಾಗಬಹುದು. ‘ಭೂಕಂಪ’ ಕಾರಣವಲ್ಲ, ಪರಿಣಾಮವೂ ಆಗಿರಬಹುದು! ಆಗಸ್ಟ್ 26ರ ಬೆಳಗ್ಗೆ ಸಂಭವಿಸಿದ ಘಟನೆಯ ಬಗ್ಗೆ ಗೊಂದಲವಿತ್ತು. ಮೊದಲಿಗೆ ಭೂಕಂಪವೇ ಪ್ರವಾಹಕ್ಕೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು.

 ಆದರೆ ನಂತರದ ಭೂವೈಜ್ಞಾನಿಕ ಮತ್ತು ಉಪಗ್ರಹ ವಿಶ್ಲೇಷಣೆಗಳು ಬೇರೆಯದ್ದೇ ಚಿತ್ರವನ್ನು, ಮಾಹಿತಿಯನ್ನು ನೀಡಿವೆ. ಹಿಮ–ಬಂಡೆಗಳ ಭಾರಿ ಕುಸಿತ ಲ್ಹೆಂಡೆ ಖೋಲಾ ನದಿಗೆ ಅಪ್ಪಳಿಸಿತು. ಬೃಹತ್ ಪ್ರಮಾಣದ ಹಿಮ, ಬಂಡೆ, ಮಣ್ಣು ಮತ್ತು ನೀರು ಕಿರಿದಾದ ಕಣಿವೆಯಲ್ಲಿ ನದಿಯ ಹರಿವನ್ನು ಹೆಚ್ಚಿಸಿವೆ. ತಾತ್ಕಾಲಿಕವಾಗಿ ನಿರ್ಮಾಣವಾದ ಈ ನೈಸರ್ಗಿಕ ‘ಅಣೆಕಟ್ಟು’ ಒಡೆದಾಗ, ಸಂಗ್ರಹವಾಗಿದ್ದ ನೀರು ಮತ್ತು ಅವಶೇಷಗಳು ಭೀಕರ ವೇಗದಲ್ಲಿ ಕೆಳಕ್ಕೆ ಧಾವಿಸಿದವು. ಇದೇ ಪ್ರವಾಹ ಭೋಟೆ ಕೋಶಿ ಮತ್ತು ನಂತರ ತ್ರಿಶೂಲಿ ನದಿಗೆ ಹರಿಯಿತು. ಅಂದರೆ ಇಲ್ಲಿ ಒಂದು ಪ್ರಮುಖ ಪಾಠವಿದೆ,  ನೋಡಿ, ಪ್ರಕೃತಿಯ ಒಂದು ಘಟನೆ ಮತ್ತೊಂದು ಘಟನೆಗೆ ಕಾರಣವಾಗುತ್ತದೆ. ಹಿಮನದಿ ಕುಸಿತ → ಬಂಡೆ ಕುಸಿತ → ನದಿ ತಡೆ → ತಾತ್ಕಾಲಿಕ ಸರೋವರ → ಅಣೆಕಟ್ಟು ಒಡೆತ → ಕೆಸರಿನ ಪ್ರವಾಹ → ನದಿಯ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆ. ಇದು ‘ಒಂದು ಅಪಾಯ’ವಲ್ಲ. ಇದು ಅಪಾಯಗಳ ಸರಪಳಿ. ಹಾಗಾದರೆ ಹಿಮಾಲಯದಲ್ಲಿ ಇಂತಹ ಅಪಾಯಗಳು ಏಕೆ ಹೆಚ್ಚುತ್ತಿವೆ? ಉತ್ತರವನ್ನು ಕೇವಲ ‘ಹಿಮ ಕರಗುತ್ತಿದೆ’ ಎಂಬ ಒಂದು ವಾಕ್ಯದಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಜಾಗತಿಕ ತಾಪಮಾನ ಏರಿಕೆಯಿಂದ ಹಿಮಾಲಯದ ಹಿಮನದಿಗಳ ಸ್ವರೂಪವೇ ಬದಲಾಗುತ್ತಿದೆ.

ಹಿಮನದಿಗಳು ಹಿಂದೆ ಸರಿಯುತ್ತಿವೆ. ಕೆಲವು ಕಡೆ ಹಿಮದ ಕೆಳಗಿನ ಬಂಡೆಗಳ ಮೇಲಿನ ಹಿಡಿತ ದುರ್ಬಲವಾಗುತ್ತಿದೆ. ಪರ್ಮಾಫ್ರಾಸ್ಟ್—ಅಂದರೆ ವರ್ಷಗಳ ಕಾಲ ಗಟ್ಟಿಯಾಗಿ ಹೆಪ್ಪುಗಟ್ಟಿರುವ ಮಣ್ಣು ಮತ್ತು ಕಲ್ಲು—ಕರಗಿದಾಗ ಪರ್ವತದ ಇಳಿಜಾರುಗಳ ಸ್ಥಿರತೆ ಕುಸಿಯಬಹುದು. ಹೀಗಾಗಿ ಸಮಸ್ಯೆ ಕೇವಲ ‘ನೀರಿನ ಪ್ರಮಾಣದ್ದಲ್ಲ. ಪರ್ವತವೇ ಅಸ್ಥಿರವಾಗುತ್ತಿದೆ. ಹಿಂದೆ ನಿಧಾನವಾಗಿ ನಡೆಯುತ್ತಿದ್ದ ಬದಲಾವಣೆಗಳು ಇಂದು ವೇಗವಾಗಿ ನಡೆಯುತ್ತಿವೆ. ಹಿಂದೂ ಕುಶ್–ಹಿಮಾಲಯ ಪ್ರದೇಶದ ಹಿಮನದಿಗಳು 2011–2020ರ ಅವಧಿಯಲ್ಲಿ ಹಿಂದಿನ ದಶಕಕ್ಕಿಂತ ಸುಮಾರು 65 ಪ್ರತಿಶತ ವೇಗವಾಗಿ ಹಿಮ ಕಳೆದುಕೊಂಡಿವೆ ಎಂದು ವರದಿಯಾಗಿದೆ. ನೇಪಾಳದ ಹಿಮನದಿಗಳು ಕಳೆದ ಸುಮಾರು ಮೂರು ದಶಕಗಳಲ್ಲಿ ತಮ್ಮ ಹಿಮದ ಪ್ರಮಾಣದ ಸುಮಾರು ಮೂರನೇ ಒಂದು ಭಾಗವನ್ನು ಕಳೆದುಕೊಂಡಿವೆ ಎಂದು ವಿಶ್ವಸಂಸ್ಥೆಯ ವರದಿಗಳನ್ನು ಆಧರಿಸಿದ ವಿಶ್ಲೇಷಣೆಗಳು ಹೇಳುತ್ತವೆ. ಹೀಗಾಗಿ ಆಗಸ್ಟ್ 26ರ ದುರಂತವನ್ನು ಕೇವಲ ಒಂದು ದಿನದ ಹವಾಮಾನ ಘಟನೆಯಾಗಿ ನೋಡುವುದು ಅಪಾಯಕಾರಿ ಸರಳೀಕರಣ. ಹಿಮನದಿ ಸರೋವರಗಳು: ಪರ್ವತದ ಮೇಲಿನ ‘ಟೈಮ್ ಬಾಂಬ್’ಹಿಮನದಿಗಳು ಕರಗಿದಾಗ ನೀರು ಎಲ್ಲಿಗೆ ಹೋಗುತ್ತದೆ? ಹಿಮನದಿಯ ಅಂಚಿನಲ್ಲಿ ಅಥವಾ ಅದರ ಕೆಳಭಾಗದಲ್ಲಿ ನೀರು ಸಂಗ್ರಹವಾಗುತ್ತದೆ. ಕೆಲವೊಮ್ಮೆ ದೊಡ್ಡ ಹಿಮನದಿ ಸರೋವರಗಳು ರೂಪುಗೊಳ್ಳುತ್ತವೆ. ಅವುಗಳ ನೈಸರ್ಗಿಕ ಕಟ್ಟೆ ಹಿಮ, ಮಣ್ಣು ಅಥವಾ ಬಂಡೆಗಳಿಂದ ನಿರ್ಮಿತವಾಗಿರಬಹುದು. ಅದು ಶಾಶ್ವತ ಅಣೆಕಟ್ಟು ಅಲ್ಲ. ಒಂದು ಭೂಕುಸಿತ. ಒಂದು ಹಿಮಬಂಡೆ ಕುಸಿತ.

ಒಂದು ಹೆಚ್ಚುವರಿ ನೀರಿನ ಒತ್ತಡ. ಅಥವಾ ಮತ್ತೊಂದು ಹಿಮನದಿ ಪ್ರವಾಹ. ಇವುಗಳಲ್ಲಿ ಯಾವುದಾದರೂ ಸಂಭವಿಸಿದರೆ ಸರೋವರದ ನೈಸರ್ಗಿಕ ಕಟ್ಟೆ ಒಡೆದು Glacial Lake Outburst Flood ಸಂಭವಿಸಬಹುದು. ಒಮ್ಮೆ ಈ ನೀರು ಕೆಳಕ್ಕೆ ಹೊರಟರೆ, ಅದು ಕೇವಲ ನೀರಲ್ಲ. ದಾರಿಯಲ್ಲಿರುವ ಬಂಡೆ, ಮಣ್ಣು, ಮರ, ಕಟ್ಟಡ, ವಾಹನ—ಎಲ್ಲವನ್ನೂ ತನ್ನೊಂದಿಗೆ ಎಳೆದುಕೊಂಡು ಹೋಗುತ್ತದೆ. ಅದಕ್ಕಾಗಿಯೇ ಇಂತಹ ಪ್ರವಾಹ ಸಾಮಾನ್ಯ ಪ್ರವಾಹಕ್ಕಿಂತ ಅನೇಕ ಪಟ್ಟು ವಿನಾಶಕಾರಿ. ಆದರೆ ಇಲ್ಲಿ ಇನ್ನೊಂದು ಪ್ರಶ್ನೆ ಕೇಳಲೇಬೇಕು: ಮನುಷ್ಯ ಎಲ್ಲಿದ್ದಾನೆ? ಪ್ರಕೃತಿ ತನ್ನ ನಿಯಮದಂತೆ ನಡೆಯುತ್ತದೆ. ಆದರೆ ಮನುಷ್ಯ ತನ್ನ ಅಭಿವೃದ್ಧಿ ಯೋಜನೆಗಳನ್ನು ಎಲ್ಲಿ ನಿರ್ಮಿಸುತ್ತಾನೆ? ನದಿಯ ದಡದಲ್ಲಿ. ಕಣಿವೆಯೊಳಗೆ. ಹಿಮಾಲಯದ ದುರ್ಬಲ ಇಳಿಜಾರುಗಳಲ್ಲಿ. ಭೂಕುಸಿತ ಸಾಧ್ಯತೆಯ ಪ್ರದೇಶಗಳಲ್ಲಿ. ಜಲವಿದ್ಯುತ್ ಯೋಜನೆಗಳು, ರಸ್ತೆಗಳು, ಸೇತುವೆಗಳು, ಪ್ರವಾಸೋದ್ಯಮ ಮೂಲಸೌಕರ್ಯ, ಗಡಿ ವ್ಯಾಪಾರ ಕೇಂದ್ರಗಳು, ವಸತಿ ಪ್ರದೇಶಗಳು—ಹಿಮಾಲಯದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿಯೇ ಮಾನವ ಚಟುವಟಿಕೆಗಳು ವೇಗವಾಗಿ ಹೆಚ್ಚುತ್ತಿವೆ. ನೇಪಾಳದ ಈ ದುರಂತದಲ್ಲಿಯೂ ರಸ್ತೆಗಳು, ಸೇತುವೆಗಳು, ವಿದ್ಯುತ್ ಯೋಜನೆಗಳು ಮತ್ತು ಗಡಿ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ.  ಹೀಗಾಗಿ ಪ್ರಶ್ನೆ ‘ಪ್ರಕೃತಿ ಯಾಕೆ ಕೋಪಗೊಂಡಿತು?’ ಎಂಬುದಲ್ಲ. ಪ್ರಕೃತಿಯ ಅಪಾಯ ಗೊತ್ತಿದ್ದರೂ ನಾವು ಅಪಾಯದ ಜಾಗದಲ್ಲೇ ಅಭಿವೃದ್ಧಿಯನ್ನು ಯಾಕೆ ಕೇಂದ್ರೀಕರಿಸುತ್ತಿದ್ದೇವೆ? ಎಂಬುದೇ ನಿಜವಾದ ಪ್ರಶ್ನೆ. ಹಿಮಾಲಯದಲ್ಲಿ ಅಭಿವೃದ್ಧಿ ಬೇಕೇ ಬೇಡವೇ? ಖಂಡಿತ ಬೇಕು. ಹಿಮಾಲಯದ ಜನರಿಗೆ ರಸ್ತೆ ಬೇಕು. ವಿದ್ಯುತ್ ಬೇಕು. ಆಸ್ಪತ್ರೆ ಬೇಕು. ಶಾಲೆ ಬೇಕು.

ಉದ್ಯೋಗ ಬೇಕು. ಸಂಪರ್ಕ ವ್ಯವಸ್ಥೆ ಬೇಕು. ಆದರೆ ಪ್ರಶ್ನೆ ಅಭಿವೃದ್ಧಿಯ ವಿರುದ್ಧವಲ್ಲ. ಯಾವ ಅಭಿವೃದ್ಧಿ? ಎಲ್ಲಿ ಅಭಿವೃದ್ಧಿ? ಯಾರಿಗಾಗಿ ಅಭಿವೃದ್ಧಿ? ಯಾವ ಪರಿಸರದ ಮೇಲೆ ಅಭಿವೃದ್ಧಿ? ಎನ್ನುವುದಾಗಿದೆ. ಗಮನಿಸಿ, ಒಂದು ಸೇತುವೆ ಕಟ್ಟಿದರೆ ಅದು ಕೇವಲ ಸೇತುವೆಯಲ್ಲ. ಅದರ ಸುತ್ತ ರಸ್ತೆ ಬರುತ್ತದೆ. ರಸ್ತೆ ಬಂದರೆ ವಸತಿ ಬರುತ್ತದೆ. ಪ್ರವಾಸೋದ್ಯಮ ಬರುತ್ತದೆ. ವ್ಯಾಪಾರ ಬರುತ್ತದೆ. ವಿದ್ಯುತ್ ಯೋಜನೆಗಳು ಬರುತ್ತವೆ. ಆದರೆ ಆ ಪ್ರದೇಶದ ಭೂವೈಜ್ಞಾನಿಕ ಸಾಮರ್ಥ್ಯವನ್ನು ಲೆಕ್ಕಿಸದೆ ಈ ಬೆಳವಣಿಗೆ ನಡೆದರೆ, ಒಂದು ದಿನ ಪ್ರಕೃತಿಯ ಲೆಕ್ಕಾಚಾರವೇ ಎಲ್ಲವನ್ನೂ ಅಳಿಸಿಹಾಕಬಹುದು. ಒಂದು ಮಿಲಿಯನ್‌ ಡಾಲರ್‌ ಪ್ರಶ್ನೆ ಏನೆಂದರೇ, ಮುನ್ನೆಚ್ಚರಿಕಾ ವ್ಯವಸ್ಥೆ ಎಲ್ಲಿ? ಇಂತಹ ದುರಂತಗಳಲ್ಲಿ ಈ ಒಂದು ಪ್ರಶ್ನೆ ಅತ್ಯಂತ ಮುಖ್ಯ.  ಹಿಮಾಲಯದ ನದಿಗಳಲ್ಲಿ ಸ್ವಯಂಚಾಲಿತ ನೀರಿನ ಮಟ್ಟ ಮಾಪಕಗಳು, ಉಪಗ್ರಹ ನಿಗಾ ವ್ಯವಸ್ಥೆ, ಹಿಮನದಿ ಸರೋವರಗಳ ನಿರಂತರ ಮೇಲ್ವಿಚಾರಣೆ, ರಿಯಲ್-ಟೈಮ್ ಡೇಟಾ ಹಂಚಿಕೆ ಮತ್ತು ಸ್ಥಳೀಯ ಜನರಿಗೆ ತಕ್ಷಣ ತಲುಪುವ ಎಚ್ಚರಿಕಾ ವ್ಯವಸ್ಥೆಗಳು ಅತ್ಯಗತ್ಯ. ಯಾಕೆಂದರೆ ಇಲ್ಲಿ ಗಂಟೆಗಳ ಮುನ್ನೆಚ್ಚರಿಕೆಯೇ ಸಾಕಾಗುವುದಿಲ್ಲ. ಕೆಲವೊಮ್ಮೆ ನಿಮಿಷಗಳ ಮುನ್ನೆಚ್ಚರಿಕೆಯೇ ಜೀವ ಉಳಿಸಬಹುದು. ನೇಪಾಳದ ಈ ದುರಂತ ಹಿಮಾಲಯದಲ್ಲಿ ಮುನ್ನೆಚ್ಚರಿಕಾ ವ್ಯವಸ್ಥೆ ಮತ್ತು ಗಡಿ ದಾಟುವ ನದಿ ಅಪಾಯ ನಿರ್ವಹಣೆಯ ಅಗತ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.  ಇನ್ನು, ಇದು ನೇಪಾಳದ ಸಮಸ್ಯೆಯಷ್ಟೇ ಅಲ್ಲ.

ಹಿಮಾಲಯಕ್ಕೆ ರಾಜಕೀಯ ಗಡಿಗಳಿವೆ. ಆದರೆ ನದಿಗಳಿಗೆ ಗಡಿಗಳಿಲ್ಲ. ನೇಪಾಳದಲ್ಲಿ ಹುಟ್ಟುವ ಅಥವಾ ಹರಿಯುವ ನದಿ ಭಾರತಕ್ಕೆ ಬರುತ್ತದೆ. ಟಿಬೆಟ್‌ನಲ್ಲಿ ಸಂಭವಿಸುವ ಹಿಮನದಿ ಕುಸಿತದ ಪರಿಣಾಮ ನೇಪಾಳಕ್ಕೆ ತಲುಪಬಹುದು. ನೇಪಾಳದ ಪ್ರವಾಹದ ಪರಿಣಾಮ ಭಾರತದಲ್ಲಿನ ಗಂಗಾ ನದಿ ವ್ಯವಸ್ಥೆಯ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಹಿಮಾಲಯದ ವಿಪತ್ತು ನಿರ್ವಹಣೆ ಮೂರು ದೇಶಗಳ ಅಂದ್ರೆ ಭಾರತ, ನೇಪಾಳ ಮತ್ತು ಚೀನ ದೇಶಗಳ ಸಹಕಾರವನ್ನು ಬೇಡುತ್ತದೆ. ಡೇಟಾ ಹಂಚಿಕೊಳ್ಳದ ಗಡಿ ರಾಜಕೀಯಕ್ಕಿಂತ, ಜೀವ ಉಳಿಸುವ ಹವಾಮಾನ ಮತ್ತು ಜಲವಿಜ್ಞಾನ ಮಾಹಿತಿಯ ಮುಕ್ತ ಹಂಚಿಕೆ ಹೆಚ್ಚು ಮುಖ್ಯ.  ‘ನೈಸರ್ಗಿಕ ವಿಕೋಪ’ ಎಂದು ಹೇಳಿ ಕೈತೊಳೆದುಕೊಳ್ಳುವುದು ಸುಲಭ. ಪ್ರತಿ ಬಾರಿ ಪ್ರವಾಹ ಬಂದಾಗ— ‘ಅತಿವೃಷ್ಟಿ’. ಭೂಕುಸಿತವಾದಾಗ—ಪ್ರಕೃತಿಯ ವಿಕೋಪ’. ಹಿಮನದಿ ಕುಸಿದಾಗ— ‘ದುರದೃಷ್ಟಕರ ಘಟನೆ’. ಎಂದು ಹೇಳಿ ಮುಗಿಸಬಹುದು. ಆದರೆ ಇದು ಸಮಸ್ಯೆಯ ಅರ್ಧ ಸತ್ಯ ಮಾತ್ರ. ಹವಾಮಾನ ಬದಲಾವಣೆ ಇಂತಹ ಅಪಾಯಗಳ ಹಿನ್ನೆಲೆಯನ್ನು ಬದಲಿಸುತ್ತಿದೆ. ಅದೇ ಸಮಯದಲ್ಲಿ ಅಸುರಕ್ಷಿತ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ ವಸತಿ, ಮೂಲಸೌಕರ್ಯ ಮತ್ತು ಯೋಜನೆಗಳು ಅಪಾಯ ಎದುರಾದಾಗ ನಷ್ಟದ ಪ್ರಮಾಣವನ್ನು ಹೆಚ್ಚಿಸುತ್ತಿವೆ. ಹೀಗಾಗಿ ವಿಪತ್ತು ಪ್ರಕೃತಿಯಿಂದ ಬಂದಿರಬಹುದು; ಆದರೆ ಅದರ ಮಾನವೀಯ ಬೆಲೆ ಬಹುಮಟ್ಟಿಗೆ ನಮ್ಮ ನೀತಿಗಳಿಂದ ನಿರ್ಧಾರವಾಗುತ್ತದೆ.  ಹಿಮಾಲಯದ ಬಗ್ಗೆ ನಮ್ಮ ಅಭಿವೃದ್ಧಿ ಕಲ್ಪನೆಯನ್ನು ಬದಲಿಸಬೇಕಾದ ಸಮಯ ಇದು. ನೇಪಾಳದ ದುರಂತವನ್ನು ಕೇವಲ ಒಂದು ದೇಶದ ದುರಂತವಾಗಿ ನೋಡಬಾರದು. ಇದು ಉತ್ತರಾಖಂಡಕ್ಕೆ ಎಚ್ಚರಿಕೆ. ಇದು ಹಿಮಾಚಲಕ್ಕೆ ಎಚ್ಚರಿಕೆ.

ಇದು ಸಿಕ್ಕಿಂಗೆ ಎಚ್ಚರಿಕೆ. ಇದು ಅರುಣಾಚಲಕ್ಕೆ ಎಚ್ಚರಿಕೆ. ಇದು ಜಮ್ಮು–ಕಾಶ್ಮೀರ ಮತ್ತು ಲಡಾಖ್‌ಗೆ ಎಚ್ಚರಿಕೆ. ಹಿಮಾಲಯದ ಪ್ರತಿಯೊಂದು ಕಣಿವೆಗೂ ಒಂದೇ ಅಭಿವೃದ್ಧಿ ಮಾದರಿಯನ್ನು ಹೇರಲು ಸಾಧ್ಯವಿಲ್ಲ. ಕೆಲವು ಪ್ರದೇಶಗಳಲ್ಲಿ ದೊಡ್ಡ ಜಲವಿದ್ಯುತ್ ಯೋಜನೆಗಳಿಗಿಂತ ಪರಿಸರದ ಸಾಮರ್ಥ್ಯಕ್ಕೆ ಅನುಗುಣವಾದ ಸಣ್ಣ ಯೋಜನೆಗಳು ಬೇಕಾಗಬಹುದು. ಕೆಲವು ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ ಬದಲಾಗಿ ಸುರಕ್ಷಿತ ಪರ್ಯಾಯ ಮಾರ್ಗ ಬೇಕಾಗಬಹುದು. ಕೆಲವು ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಮಿತಿ ವಿಧಿಸಬೇಕಾಗಬಹುದು. ಪರ್ವತವನ್ನು ಗೆಲ್ಲುವ ಅಭಿವೃದ್ಧಿಯ ಬದಲು, ಪರ್ವತದೊಂದಿಗೆ ಬದುಕುವ ಅಭಿವೃದ್ಧಿ ಬೇಕಾಗಿದೆ. ಕೊನೆಯ ಪ್ರಶ್ನೆ. ನೇಪಾಳದ ರಸುವಾದಲ್ಲಿ ನೀರು ಹರಿದುಹೋಗಿದೆ. ಆದರೆ ಪ್ರಶ್ನೆಗಳು ಉಳಿದಿವೆ. ಹಿಮಾಲಯ ಇನ್ನೆಷ್ಟು ಎಚ್ಚರಿಕೆ ನೀಡಬೇಕು? ಇನ್ನೆಷ್ಟು ಹಳ್ಳಿಗಳು ಕೊಚ್ಚಿಹೋಗಬೇಕು? ಇನ್ನೆಷ್ಟು ಸೇತುವೆಗಳು ಮುರಿಯಬೇಕು? ಇನ್ನೆಷ್ಟು ಕುಟುಂಬಗಳು ತಮ್ಮವರನ್ನು ಹುಡುಕಬೇಕು? ಇನ್ನು ಮುಂದಾದರೂ ನಾವು ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ? ಪ್ರಕೃತಿಯ ವಿರುದ್ಧ ಹೋರಾಡಲು ಮನುಷ್ಯನಿಗೆ ಸಾಧ್ಯವಿಲ್ಲ. ಆದರೆ ಪ್ರಕೃತಿಯ ಎಚ್ಚರಿಕೆಯನ್ನು ಅರ್ಥಮಾಡಿಕೊಂಡು ತನ್ನ ಅಭಿವೃದ್ಧಿಯ ದಿಕ್ಕನ್ನು ಬದಲಿಸಿಕೊಳ್ಳಲು ಸಾಧ್ಯವಿದೆ. ನೇಪಾಳದ ಆಗಸ್ಟ್ 26ರ ದುರಂತ  ಅತ್ಯಂತ ದೊಡ್ಡ ಪಾಠ ಕಲಿಸಿದೆ.  ಹಿಮಾಲಯ ಕರಗುತ್ತಿರುವುದು ಕೇವಲ ಹಿಮವಲ್ಲ. ಅದರೊಂದಿಗೆ ನಮ್ಮ ಸುರಕ್ಷತೆಯ ಭರವಸೆಯೂ ಕರಗುತ್ತಿದೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದುರಂತದ ದಿನವನ್ನು ಪ್ರಕೃತಿ ನಿರ್ಧರಿಸುತ್ತದೆ—ಆದರೆ ಅದರ ಹೊಣೆಗಾರಿಕೆಯಿಂದ ಮನುಷ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 


̲ ಶ್ರೀರಾಜ್‌ ವಕ್ವಾಡಿ 

Wednesday, August 26, 2026

ಮುಂಗಾರು ಕೈಕೊಟ್ಟಾಗಲೂ ಕೇಂದ್ರದ ನೆರವಿನ ನಿರೀಕ್ಷೆ: ಕರ್ನಾಟಕದ ರೈತರ ಸಂಕಷ್ಟಕ್ಕೆ ರಾಜಕೀಯ ಉತ್ತರ ಯಾವುದು?

ಮುಂಗಾರು ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಕರ್ನಾಟಕದ ರೈತನ ಪಾಲಿಗೆ ಈ ಮುಂಗಾರು ಈ ಬಾರಿ ನೋವು ನೀಡಿದೆ. ಮಳೆ ಕೊರತೆ ಎಂದರೆ ಕೇವಲ ಹವಾಮಾನದ ವೈಪರೀತ್ಯವಲ್ಲ. ಅದರ ಹಿಂದೆ ಬಿತ್ತನೆಯಾಗದ ಹೊಲಗಳಿವೆ, ಮೊಳಕೆಯೊಡೆದು ಒಣಗಿದ ಬೆಳೆಗಳಿವೆ, ಸಾಲ ತೀರಿಸಲಾಗದೆ ಕಂಗಾಲಾಗಿರುವ ರೈತರಿದ್ದಾರೆ. ಹೀಗಾಗಿ ಮಳೆಯ ಕೊರತೆಯನ್ನು ಕೇವಲ ‘ಪ್ರಕೃತಿ ವಿಕೋಪ’ ಎಂದು ನೋಡಿದರೆ ಅದರ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪಶ್ಚಿಮ ಘಟ್ಟದ ಕೆಲವು ಭಾಗಗಳನ್ನು ಹೊರತುಪಡಿಸಿದರೆ ರಾಜ್ಯದ ಅನೇಕ ಕಡೆ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲ. ಉತ್ತರ ಕರ್ನಾಟಕದಲ್ಲಿ ಅಲ್ಪಸ್ವಲ್ಪ ಮಳೆಗೆ ಶೇಂಗಾ, ಸಜ್ಜೆ, ಹೈಬ್ರಿಡ್ ಜೋಳ ಸೇರಿದಂತೆ ಬೆಳೆ ಬಿತ್ತಿದರೂ, ದಕ್ಷಿಣ ಕರ್ನಾಟಕದ ಹಲವು ಪ್ರದೇಶಗಳಲ್ಲಿ ರಾಗಿ ಸೇರಿದಂತೆ ಬೆಳೆಗಳು ನೀರಿನ ಕೊರತೆಯಿಂದ ಕಮರಿ ಹೋಗಿವೆ. ಕೆಲವು ಅಂದಾಜುಗಳ ಪ್ರಕಾರ ಸುಮಾರು ಶೇ.30ರಷ್ಟು ಕೃಷಿ ಜಮೀನುಗಳಲ್ಲಿ ಬಿತ್ತನೆಯೇ ಆಗಿಲ್ಲ ಎನ್ನುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. 

ಬರಪೀಡಿತ ಪ್ರದೇಶ ಘೋಷಣೆಗೆ ಸರ್ಕಾರಗಳು ನಿಗದಿತ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಬೆಳೆ ನಷ್ಟ, ಮಳೆ ಕೊರತೆ, ಬಿತ್ತನೆ ಪ್ರಮಾಣ, ಜಲಮೂಲಗಳ ಸ್ಥಿತಿ, ಕೃಷಿ ಚಟುವಟಿಕೆಯ ಮೇಲೆ ಉಂಟಾದ ಪರಿಣಾಮ ಸೇರಿದಂತೆ ಹಲವು ಅಂಶಗಳನ್ನು ವೈಜ್ಞಾನಿಕವಾಗಿ ದಾಖಲಿಸಬೇಕಾಗುತ್ತದೆ. ಆದರೆ ಇಲ್ಲಿ ಒಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ: ರೈತನ ಹೊಲದಲ್ಲಿ ಬೆಳೆ ನಾಶವಾದ ನಂತರವೂ ಆ ನಷ್ಟವನ್ನು ಸಾಬೀತುಪಡಿಸಲು ಮತ್ತೊಂದು ಆಡಳಿತಾತ್ಮಕ ಪರೀಕ್ಷೆ ಏಕೆ? ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ. ಕರ್ನಾಟಕದ ಬರ ಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಅವಧಿಯನ್ನು ವಿಸ್ತರಿಸಿ ಕೇಂದ್ರ ಸರಕಾರವು ಆದೇಶ ಹೊರಡಿಸಿದೆ.

ಇದಕ್ಕೆ ಮೊದಲು ಕರ್ನಾಟಕ ಸರಕಾರವು ಅವಧಿ ವಿಸ್ತರಣೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ. ಇನ್ನು, ಮೋಡ ಬಿತ್ತನೆಯ ಬಗ್ಗೆಯೂ ಸರ್ಕಾರ ಚಿಂತಿಸುತ್ತಿದೆ. ಆದರೇ ಮೋಡ ಬಿತ್ತನೆ ಮಾಡಿದರೇ, ಕೆಲವೊಮ್ಮೆ ಅತಿವೃಷಿಯೂ ಆಗಬಹುದು, ಕೆಲವೊಮ್ಮೆ ಅನಾವೃಷ್ಟಿಯೂ ಆಗಬಹುದು ಎನ್ನುವ ಹವಾಮಾನ ತಜ್ಞರ ಅಭಿಪ್ರಾಯವನ್ನು ತಳ್ಳಿ ಹಾಕುವಂತಿಲ್ಲ. ಗಮನಿಸಿ, ಬರದ ಪರಿಣಾಮ ಕಣ್ಣಿಗೆ ಕಾಣುತ್ತಿದ್ದರೂ, ಪರಿಹಾರ ಪಡೆಯಲು ಅಂಕಿ-ಅಂಶಗಳ ಭಾಷೆಯಲ್ಲಿ ಅದನ್ನು ಸಾಬೀತುಪಡಿಸಬೇಕಾದ ಪರಿಸ್ಥಿತಿ ರೈತನ ಸಂಕಷ್ಟವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಈ ಬಾರಿ ಜಿಲ್ಲಾವಾರು, ಬೆಳೆವಾರು ಮತ್ತು ತಾಲ್ಲೂಕುವಾರು ಸಮಗ್ರ ವೈಜ್ಞಾನಿಕ ಸಮೀಕ್ಷೆ ನಡೆಸಿ, ಯಾವುದೇ ಅನುಮಾನಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಕೇಂದ್ರದ ಮುಂದೆ ವಾಸ್ತವಾಂಶಗಳನ್ನು ಇಡಬೇಕು. ಕರ್ನಾಟಕದ ರೈತರು ಕೇಳುತ್ತಿರುವುದು ಯಾರದ್ದೋ ವೈಯಕ್ತಿಕ ಪ್ರಶ್ನೆಯಲ್ಲ. ಪ್ರಕೃತಿ ವಿಕೋಪದಿಂದ ಕೃಷಿ ಆರ್ಥಿಕತೆ ಕುಸಿದಾಗ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರದಿಂದ ಜನರನ್ನು ಸಂಕಷ್ಟದಿಂದ ಹೊರತರಬೇಕಾದದ್ದು ಒಕ್ಕೂಟ ವ್ಯವಸ್ಥೆಯ ಮೂಲಭೂತ ಹೊಣೆಗಾರಿಕೆ.

ಹೀಗಾಗಿ ಕೇಂದ್ರದ ನೆರವನ್ನು ಪಡೆಯಲು ರಾಜ್ಯ ಸರ್ಕಾರ ರಾಜಕೀಯವಾಗಿ ದುರ್ಬಲವಾಗಬೇಕಾದ ಅಗತ್ಯವಿಲ್ಲ. ಅದೇ ಸಮಯದಲ್ಲಿ ಕೇಂದ್ರದೊಂದಿಗೆ ಸಂಘರ್ಷವನ್ನೇ ರಾಜಕೀಯ ತಂತ್ರವನ್ನಾಗಿ ಮಾಡಿಕೊಂಡರೂ ರೈತನ ಹೊಟ್ಟೆ ತುಂಬುವುದಿಲ್ಲ. ಕರ್ನಾಟಕಕ್ಕೆ ಬೇಕಿರುವುದು ಘೋಷಣೆಗಳ ರಾಜಕಾರಣವಲ್ಲ; ದಾಖಲೆ, ವೈಜ್ಞಾನಿಕ ಅಧ್ಯಯನ ಮತ್ತು ನಿರಂತರ ಒತ್ತಡದ ಮೂಲಕ ಪರಿಹಾರವನ್ನು ಖಚಿತಪಡಿಸುವ ರಾಜಕೀಯ. ಎರಡು ವರ್ಷಗಳ ಹಿಂದೆ ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸಿದಾಗ, ರಾಜ್ಯ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ₹18,171.44 ಕೋಟಿ ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ನೆರವು ವಿಳಂಬವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ ರಾಜಕೀಯ ಹಾಗೂ ಕಾನೂನು ಸಂಘರ್ಷವೂ ಉಂಟಾಗಿತ್ತು. ಕೊನೆಗೆ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಆ ಘಟನೆ ಕರ್ನಾಟಕದ ಒಕ್ಕೂಟ ವ್ಯವಸ್ಥೆಯೊಳಗಿನ ಸಂಬಂಧಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿತ್ತು. ರಾಜ್ಯ ಸರ್ಕಾರಗಳು ಬದಲಾಗಬಹುದು. ಮುಖ್ಯಮಂತ್ರಿಗಳು ಬದಲಾಗಬಹುದು. ಆದರೆ ರೈತನ ಸಮಸ್ಯೆ ಬದಲಾಗುವುದಿಲ್ಲ. ಅದಕ್ಕಾಗಿಯೇ ಹಿಂದಿನ ಅನುಭವದಿಂದ ಪಾಠ ಕಲಿಯುವುದು ಮುಖ್ಯ. ಈ ಬಾರಿ ಮತ್ತೆ ಮನವಿ ಸಲ್ಲಿಸಿ ಮೌನವಾಗಿರುವುದರಿಂದ ಪ್ರಯೋಜನವಿಲ್ಲ.

ಕೇಂದ್ರದ ಪ್ರತಿಕ್ರಿಯೆ ವಿಳಂಬವಾದರೆ ರಾಜ್ಯ ಸರ್ಕಾರ ತನ್ನ ಹಕ್ಕಿಗಾಗಿ ರಾಜಕೀಯ, ಆಡಳಿತಾತ್ಮಕ ಮತ್ತು ಅಗತ್ಯವಿದ್ದರೆ ಕಾನೂನು ಮಾರ್ಗಗಳನ್ನೂ ಬಳಸಬೇಕು. ಇನ್ನು, ಡಿ.ಕೆ. ಶಿವಕುಮಾರ್ ಅವರ ‘ಮೃದು ಧೋರಣೆ’ ಸಾಕೇ?ಮ  ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರದ ನಿಲುವು ಕುತೂಹಲ ಮೂಡಿಸುತ್ತದೆ. ಕೇಂದ್ರದೊಂದಿಗೆ ನೇರ ಸಂಘರ್ಷಕ್ಕಿಳಿಯದೆ, ಸಹಕಾರದ ಮೂಲಕ ನೆರವು ಪಡೆಯುವ ಪ್ರಯತ್ನ ರಾಜಕೀಯವಾಗಿ ತಪ್ಪೇನಲ್ಲ. ಆದರೆ ಪ್ರಶ್ನೆ ಇರುವುದು ಬೇರೆಡೆ. ಸೌಜನ್ಯ ರಾಜಕಾರಣ ರೈತನಿಗೆ ಪರಿಹಾರ ತಂದುಕೊಡುತ್ತದೆಯೇ? ಕೇಂದ್ರದೊಂದಿಗೆ ಉತ್ತಮ ಸಂಬಂಧ ಇರುವುದು ಒಂದು ವಿಚಾರ. ರಾಜ್ಯದ ಹಕ್ಕುಗಳನ್ನು ಬಲವಾಗಿ ಪ್ರತಿಪಾದಿಸುವುದು ಮತ್ತೊಂದು ವಿಚಾರ. ಎರಡೂ ಪರಸ್ಪರ ವಿರುದ್ಧವಾಗಬೇಕಿಲ್ಲ. ಕೇಂದ್ರ ಸರ್ಕಾರ ನೆರವು ನೀಡಿದರೆ ಅದನ್ನು ಸ್ವಾಗತಿಸಬೇಕು. ನೆರವು ನೀಡಲು ವಿಳಂಬ ಮಾಡಿದರೆ ಕಾರಣ ಕೇಳಬೇಕು. ಕಡಿಮೆ ನೆರವು ನೀಡಿದರೆ ಅದರ ಮಾನದಂಡಗಳನ್ನು ಪ್ರಶ್ನಿಸಬೇಕು. ಅಗತ್ಯವಿದ್ದರೆ ಎಲ್ಲ ಪಕ್ಷಗಳ ಸಂಸದರನ್ನು ಒಟ್ಟುಗೂಡಿಸಿ ಕೇಂದ್ರದ ಮೇಲೆ ಒತ್ತಡ ತರಬೇಕು. ರೈತನ ಬದುಕು ಯಾವುದೇ ಪಕ್ಷದ ‘ಇಮೇಜ್ ಮ್ಯಾನೇಜ್‌ಮೆಂಟ್’ಗಿಂತ ದೊಡ್ಡದು. ನೋಡಿ, ಸಂಕಷ್ಟದ ಹೊತ್ತಿನಲ್ಲಿ ರಾಜಕೀಯಕ್ಕಿಂತ ರೈತ ಮುಖ್ಯ. ಬರ ಬಂದಾಗ ಒಂದು ವಿಚಿತ್ರ ರಾಜಕೀಯ ಆರಂಭವಾಗುತ್ತದೆ. ಆಡಳಿತ ಪಕ್ಷ ಕೇಂದ್ರವನ್ನು ದೂಷಿಸುತ್ತದೆ. ಕೇಂದ್ರ ರಾಜ್ಯದ ವೈಫಲ್ಯಗಳನ್ನು ಎತ್ತಿ ತೋರಿಸುತ್ತದೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತವೆ.

ಆರೋಪ-ಪ್ರತ್ಯಾರೋಪಗಳು ನಡೆಯುತ್ತವೆ . ಆದರೆ ಈ ಎಲ್ಲದರ ನಡುವೆ ರೈತ ಮಾತ್ರ ತನ್ನ ಹೊಲದ ಮುಂದೆ ನಿಂತಿರುತ್ತಾನೆ. ಅವನಿಗೆ ರಾಜಕೀಯ ವಾದ ಬೇಡ. ಬಿತ್ತನೆ ನಷ್ಟಕ್ಕೆ ಪರಿಹಾರ ಬೇಕು. ಬೆಳೆ ನಷ್ಟಕ್ಕೆ ಪರಿಹಾರ ಬೇಕು. ಸಾಲದ ಒತ್ತಡದಿಂದ ರಕ್ಷಣೆ ಬೇಕು. ಮುಂದಿನ ಹಂಗಾಮಿಗೆ ಬೀಜ, ರಸಗೊಬ್ಬರ ಮತ್ತು ನೀರಿನ ಭರವಸೆ ಬೇಕು. ಆದ್ದರಿಂದ ಬರ ಪರಿಹಾರವನ್ನು ಕೇವಲ ಒಂದು ಬಾರಿಯ ಹಣಕಾಸು ಪ್ಯಾಕೇಜ್ ಆಗಿ ನೋಡಬಾರದು. ಕೃಷಿ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ದೀರ್ಘಕಾಲೀನ ಯೋಜನೆಯಾಗಬೇಕು. ಕರ್ನಾಟಕದ ಪಾಲು ಏನು? ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವು ದೇಶದ ಆರ್ಥಿಕತೆಗೆ ತನ್ನದೇ ಆದ ಮಹತ್ವದ ಕೊಡುಗೆ ನೀಡುತ್ತದೆ. ತೆರಿಗೆ ಸಂಗ್ರಹ, ಕೈಗಾರಿಕೆ, ಸೇವಾ ವಲಯ, ಕೃಷಿ—ಎಲ್ಲ ಕ್ಷೇತ್ರಗಳಲ್ಲೂ ರಾಜ್ಯದ ಪಾತ್ರ ದೊಡ್ಡದು. ಹೀಗಿರುವಾಗ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕರ್ನಾಟಕ ತನ್ನ ಪಾಲಿನ ನೆರವನ್ನು ಕೇಳುವುದು ‘ವಿಶೇಷ ಸವಲತ್ತು’ ಕೇಳಿದಂತಲ್ಲ. ಇದು ಪ್ರಶ್ನೆ ಕೇವಲ ಒಂದು ರಾಜ್ಯದದ್ದೂ ಅಲ್ಲ. ದೇಶದ ಯಾವುದೇ ರಾಜ್ಯ ಬರ, ಪ್ರವಾಹ, ಚಂಡಮಾರುತ ಅಥವಾ ಇನ್ನಾವುದೇ ಪ್ರಕೃತಿ ವಿಕೋಪಕ್ಕೆ ಸಿಲುಕಿದಾಗ ಕೇಂದ್ರದ ಪ್ರತಿಕ್ರಿಯೆ ಪಕ್ಷಾತೀತವಾಗಿರಬೇಕು. ಸರ್ಕಾರದ ಬಣ್ಣ ಬದಲಾಗಬಹುದು; ಆದರೆ ವಿಪತ್ತಿನ ಬಣ್ಣ ಒಂದೇ. ಈಗ ಬೇಕಿರುವುದು ಸ್ಪಷ್ಟ ಕಾರ್ಯಯೋಜನೆ. ರಾಜ್ಯ ಸರ್ಕಾರ ಈಗಲೇ ಕೆಲವು ಕ್ರಮಗಳನ್ನು ವೇಗಗೊಳಿಸಬೇಕಾಗಿದೆ. ಮೊದಲನೆಯದಾಗಿ, ಜಿಲ್ಲಾವಾರು ನೈಜ ಬೆಳೆ ನಷ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಎರಡನೆಯದಾಗಿ, ಬಿತ್ತನೆಯಾಗದ ಪ್ರದೇಶಗಳನ್ನೂ ನಷ್ಟದ ಲೆಕ್ಕಾಚಾರದಲ್ಲಿ ಸಮರ್ಪಕವಾಗಿ ದಾಖಲಿಸಬೇಕು. ಮೂರನೆಯದಾಗಿ, ಕೇಂದ್ರಕ್ಕೆ ಸಲ್ಲಿಸುವ ವರದಿ ಕೇವಲ ಆಡಳಿತಾತ್ಮಕ ದಾಖಲೆ ಆಗದೆ, ರೈತರ ನೈಜ ಪರಿಸ್ಥಿತಿಯನ್ನು ಪ್ರತಿಬಿಂಬಿಸುವಂತಿರಬೇಕು. ನಾಲ್ಕನೆಯದಾಗಿ, ಕೇಂದ್ರದ ನೆರವು ವಿಳಂಬವಾದರೆ ಸಂಸದರು, ರೈತ ಸಂಘಟನೆಗಳು ಮತ್ತು ಎಲ್ಲಾ ಪಕ್ಷಗಳ ಸಹಕಾರದೊಂದಿಗೆ ಒತ್ತಡ ನಿರ್ಮಿಸಬೇಕು. ಐದನೆಯದಾಗಿ, ಪರಿಹಾರದ ಜೊತೆಗೆ ಮುಂದಿನ ಹಂಗಾಮಿಗೆ ರೈತರನ್ನು ಸಿದ್ಧಗೊಳಿಸುವ ಪುನಶ್ಚೇತನ ಕಾರ್ಯಕ್ರಮ ರೂಪಿಸಬೇಕು. ಶೇ.33 ಬೆಳೆ ನಷ್ಟವೇ? ಶೇ.50 ನಷ್ಟವೇ? ಬರದ ಮಾನದಂಡ ಪೂರೈಸಿದೆಯೇ? ವರದಿ ಸರಿಯಾಗಿದೆಯೇ? ಇವೆಲ್ಲವೂ ಆಡಳಿತಾತ್ಮಕವಾಗಿ ಅಗತ್ಯವಾದ ಪ್ರಶ್ನೆಗಳು.

ಇನ್ನು, “ನನ್ನ ಹೊಲದಲ್ಲಿ ಬೆಳೆ ಇಲ್ಲ. ನನ್ನ ಸಾಲ ಹೇಗೆ ತೀರಿಸಲಿ?” ಎನ್ನುವ ರೈತನ ಈ ಪ್ರಶ್ನೆಗೆ ಕೇಂದ್ರವೂ ಉತ್ತರಿಸಬೇಕು. ರಾಜ್ಯವೂ ಉತ್ತರಿಸಬೇಕು. ಕರ್ನಾಟಕದ ರೈತನ ಸಂಕಷ್ಟವನ್ನು ಕೇಂದ್ರ-ರಾಜ್ಯ ರಾಜಕೀಯದ ಪೈಪೋಟಿಯಲ್ಲಿ ಕಳೆದುಹೋಗಲು ಬಿಡಬಾರದು. ಕೇಂದ್ರ ಸರ್ಕಾರ ನೆರವು ನೀಡುವುದು ತನ್ನ ಕರ್ತವ್ಯವೆಂದು ಪರಿಗಣಿಸಬೇಕು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

- ಶ್ರೀರಾಜ್‌ ವಕ್ವಾಡಿ