ಯುವಜನರ ಅಸಮಾಧಾನಕ್ಕೆ ಫಡ್ನವೀಸ್ ಉತ್ತರವೇ? ಆರ್‌ಎಸ್‌ಎಸ್‌ನ ‘ಯುವ ತಂತ್ರ’ದ ಹಿಂದೆ ಅಡಗಿರುವ ರಾಜಕೀಯ ಲೆಕ್ಕಾಚಾರವೇನು? ಭಾರತೀಯ ರಾಜಕೀಯದಲ್ಲಿ ಒಂದು ವಿಚಿತ್ರ ಬೆಳವಣಿಗೆ ನಡೆಯುತ್ತಿದೆ. ಯುವಜನರ ಮತ ಬೇಕು. ಯುವಜನರ ಬೆಂಬಲ ಬೇಕು. ಸಾಮಾಜಿಕ ಮಾಧ್ಯಮದಲ್ಲಿ ಯುವಜನರ ಭಾಷೆಯಲ್ಲಿ ಮಾತನಾಡಬೇಕು. ಆದರೆ ಅಧಿಕಾರದ ಕೇಂದ್ರಗಳಲ್ಲಿ ಮಾತ್ರ ಹಳೆಯ ಮುಖಗಳ ಪ್ರಾಬಲ್ಯ ಮುಂದುವರಿಯಬೇಕು. ಈ ವೈರುಧ್ಯ ಈಗ ಬಿಜೆಪಿಯ ಮುಂದೆಯೇ ದೊಡ್ಡ ರಾಜಕೀಯ ಪ್ರಶ್ನೆಯಾಗಿ ನಿಂತಿದೆ. ಇದು ಆರ್ ಎಸ್ ಎಸ್ ವರ್ಸಸ್ ಮೋದಿ ಬಿಜೆಪಿ ಆಗ್ತಿದ್ಯಾ ?
ದೇಶದಾದ್ಯಂತ ಉದ್ಯೋಗ, ಶಿಕ್ಷಣ, ಪರೀಕ್ಷಾ ಅಕ್ರಮ, ನಿರುದ್ಯೋಗ ಮತ್ತು ರಾಜಕೀಯ ಪ್ರತಿನಿಧಿತ್ವದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಜೆನ್-ಝೀ ಯುವಕರ ಅಸಮಾಧಾನ ಬೀದಿಗೆ ಬಂದಿರುವುದು ಈ ಬದಲಾವಣೆಯ ಪ್ರಮುಖ ಸೂಚನೆ. ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ವಿಡಂಬನಾತ್ಮಕ ಆನ್‌ಲೈನ್ ಚಳವಳಿ ಅಥವಾ ಚಳವಳಿ ಕೆಲವೇ ವಾರಗಳಲ್ಲಿ ದೊಡ್ಡ ಯುವಜನ ಚಳವಳಿಯಾಗಿ ರೂಪುಗೊಂಡಿದ್ದು, ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೂ ಎಚ್ಚರಿಕೆಯ ಗಂಟೆ ಬಾರಿಸಿದ್ದು, ಕೇಂದ್ರದ ಶಿಕ್ಷಣ ಸಚಿವರ ರಾಜೀನಾಮೆಗೆ ಪ್ರಮುಖ ಪಾತ್ರವಹಿಸಿದ್ದೆಲ್ಲವೂ ಭಾರತೀಯ ರಾಜಕೀಯ ವಲಯದಲ್ಲಿ ನಿಜಕ್ಕೂ ಅಚ್ಚರಿಯ ಸಂಗತಿ. ಇದು ಕೇವಲ ಒಂದು ಸಾಮಾಜಿಕ ಮಾಧ್ಯಮದ ಟ್ರೆಂಡ್ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ದೆಹಲಿಯಲ್ಲಿ ಸಾವಿರಾರು ಯುವಜನರು ಬೀದಿಗಿಳಿದಿರುವುದು, ಶಿಕ್ಷಣ ಮತ್ತು ಉದ್ಯೋಗದಂತಹ ನೇರ ಬದುಕಿನ ಪ್ರಶ್ನೆಗಳನ್ನು ರಾಜಕೀಯದ ಕೇಂದ್ರಕ್ಕೆ ತರುತ್ತಿರುವುದು, ಯುವಜನರ ಅಸಮಾಧಾನಕ್ಕೆ ಹೊಸ ರೂಪ ಸಿಕ್ಕಿರುವುದನ್ನು ಸೂಚಿಸುತ್ತದೆ. ಈಗ ಎಲ್ಲಾ ರಾಜಕೀಯ ಪಕ್ಷಗಳು ಯುವಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಕೂಡ ರಾಷ್ಟ್ರೀಯ ಮಟ್ಟದಲ್ಲಿ ಹೊಸ ಬದಲಾವಣೆಗೆ ಮುನ್ನುಡಿ ಬರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಉಪಪ್ರಧಾನಿ ಸ್ಥಾನಕ್ಕೆ ತರಬೇಕು ಎಂಬ ಆರ್‌ಎಸ್‌ಎಸ್‌ನ ಆಸಕ್ತಿ ಕುರಿತು ವರದಿಗಳು ಹೊರಬಂದಿವೆ.RSS ಮೋದಿ ಬಗ್ಗೆ ಮುನಿಸಿಕೊಂಡಿರುವುದು ಜಗಜ್ಜಾಹೀರು. ಮೋಹನ್ ಭಾಗವತ್ ಮತ್ತು ಮೋದಿ ನಡುವೆ ಇಂದಿಗೂ ಶೀತಲ ಸಮರ ಇದೆ. ಮೋದಿ ಆರ್ ಎಸ್ ಎಸ್ ಸಿದ್ಧಾಂತಕ್ಕೂ ಮೀರಿ ಬೆಳೆಯುತ್ತಿರುವುದು, ಮೋದಿ ತಮ್ಮದೇ ಒಂದು ಬಿಜೆಪಿಯ ಬಣವನ್ನು ಸೃಷ್ಟಿಸಿಕೊಂಡಿರುವುದು ಸ್ವತಃ ಆರ್ ಎಸ್ ಎಸ್ ಪಕ್ಷಕ್ಕೂ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿಯೇ ಇವೆಲ್ಲಾ ಜಾಣ ತಂತ್ರ ಎಂದೇ ಕಾಣಿಸುತ್ತಿದೆ. ಆದರೇ, ಬಿಜೆಪಿ ಅಥವಾ ಕೇಂದ್ರ ಸರ್ಕಾರದಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಹೀಗಾಗಿ ಇದನ್ನು ಅಂತಿಮ ನಿರ್ಧಾರವೆಂದು ನೋಡುವುದಕ್ಕಿಂತ, ಬಿಜೆಪಿಯ ಭವಿಷ್ಯದ ನಾಯಕತ್ವದ ಕುರಿತು ನಡೆಯುತ್ತಿರುವ ಒಳರಾಜಕೀಯ ಚರ್ಚೆಯ ಭಾಗವಾಗಿ ನೋಡುವುದು ಸೂಕ್ತ. ಆದರೆ ಈ ಚರ್ಚೆಯೇ ಮಹತ್ವದ್ದು. ಯಾಕೆಂದರೆ ಫಡ್ನವೀಸ್ ಕೇವಲ ಮಹಾರಾಷ್ಟ್ರದ ನಾಯಕನಲ್ಲ. ನಾಗಪುರದ ರಾಜಕೀಯ ಹಿನ್ನೆಲೆಯಿಂದ ಬಂದಿರುವ ಅವರು ಆರ್‌ಎಸ್‌ಎಸ್‌ಗೆ ಪರಿಚಿತ ಮುಖ. ಮಹಾರಾಷ್ಟ್ರದಂತಹ ರಾಜಕೀಯವಾಗಿ ಅತ್ಯಂತ ಮಹತ್ವದ ರಾಜ್ಯದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಅವರ ಪಾತ್ರವೂ ನಿರ್ಣಾಯಕವಾಗಿದೆ. ಆದ್ದರಿಂದ ಫಡ್ನವೀಸ್‌ರನ್ನು ಕೇಂದ್ರದ ದೊಡ್ಡ ಪಾತ್ರಕ್ಕೆ ತರುವ ಚರ್ಚೆ ಇದ್ದರೆ, ಅದರ ಅರ್ಥ ಕೇವಲ ಒಬ್ಬ ವ್ಯಕ್ತಿಯ ಪದೋನ್ನತಿ ಎಂದಲ್ಲ. ಅದು ಬಿಜೆಪಿಯ ಮುಂದಿನ ಪೀಳಿಗೆಯ ನಾಯಕತ್ವದ ಪುನರ್‌ವಿನ್ಯಾಸದ ಪ್ರಯತ್ನವಾಗಿರಬಹುದು. ಆದರೆ ಯುವಜನರ ಸಮಸ್ಯೆ ಫಡ್ನವೀಸ್ ಅವರ ಸ್ಥಾನಮಾನದಿಂದ ಪರಿಹಾರವಾಗುತ್ತದೆಯೇ? ಇಲ್ಲಿಯೇ ಮೂಲ ಪ್ರಶ್ನೆ ಇದೆ. ಯುವಜನರು ರಾಜಕೀಯದಲ್ಲಿ ಸ್ಥಾನ ಕೇಳುತ್ತಿದ್ದಾರೆ ಎಂದರೆ, ಅವರಿಗೆ ಮತ್ತೊಬ್ಬ ‘ಯುವ ಮುಖ’ವನ್ನು ತೋರಿಸುವುದಷ್ಟೇ ಸಾಕಾಗುವುದಿಲ್ಲ. ಅವರಿಗೆ ಉದ್ಯೋಗ ಬೇಕು. ಗುಣಮಟ್ಟದ ಶಿಕ್ಷಣ ಬೇಕು. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬೇಕು.
ಸರ್ಕಾರಿ ನೇಮಕಾತಿಯಲ್ಲಿ ನ್ಯಾಯ ಬೇಕು.ಪ್ರತಿಭಟನೆಗೆ ಅವಕಾಶ ಬೇಕು. ಮತ್ತು ಮುಖ್ಯವಾಗಿ, ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ತಮ್ಮ ಧ್ವನಿ ಬೇಕು. ಕಾಕ್ರೋಚ್ ಚಳವಳಿಯ ಬೆಳವಣಿಗೆಯ ಹಿಂದಿನ ಅಸಮಾಧಾನವೂ ಇದೇ. ಉದ್ಯೋಗದ ಕೊರತೆ, ಪರೀಕ್ಷಾ ಅಕ್ರಮಗಳು ಮತ್ತು ಶಿಕ್ಷಣ ವ್ಯವಸ್ಥೆಯ ಮೇಲಿನ ಅವಿಶ್ವಾಸ ಯುವಜನರನ್ನು ಸಾಂಪ್ರದಾಯಿಕ ಪಕ್ಷಗಳ ಹೊರಗಿನ ರಾಜಕೀಯ ಅಭಿವ್ಯಕ್ತಿಯತ್ತ ತಳ್ಳಿವೆ. ಹೀಗಿರುವಾಗ, ಒಬ್ಬ ಯುವ ನಾಯಕನನ್ನು ಉನ್ನತ ಸ್ಥಾನಕ್ಕೆ ತರುವುದೇ ‘ಯುವ ರಾಜಕೀಯ’ದ ಪರ್ಯಾಯ ಎಂದು ಬಿಜೆಪಿ ಭಾವಿಸಿದರೆ, ಅದು ಸಮಸ್ಯೆಯ ಮೇಲ್ಮೈಯನ್ನು ಮಾತ್ರ ಮುಟ್ಟಿದಂತಾಗುತ್ತದೆ. ಆರ್‌ಎಸ್‌ಎಸ್‌ಗೆ ಎದುರಾಗಿರುವ ದೊಡ್ಡ ಸವಾಲು. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಂಬಂಧವನ್ನು ಕೇವಲ ಚುನಾವಣಾ ಯಂತ್ರದ ಸಂಬಂಧವಾಗಿ ನೋಡಲು ಸಾಧ್ಯವಿಲ್ಲ. ಸಂಘದ ದೃಷ್ಟಿಯಲ್ಲಿ ದೀರ್ಘಕಾಲೀನ ರಾಜಕೀಯ-ಸಾಮಾಜಿಕ ಪ್ರಭಾವವೇ ಮುಖ್ಯ. ಆದರೆ ಯುವಜನರ ಹೊಸ ರಾಜಕೀಯ ಭಾಷೆ ಸಾಂಪ್ರದಾಯಿಕ ಸಂಘಟನೆಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಯುವಕರು ಪಕ್ಷದ ಕಚೇರಿಗಳಲ್ಲಿ ಕುಳಿತು ರಾಜಕೀಯ ಕಲಿಯುವುದಕ್ಕಿಂತ, Instagram, YouTube, X ಮತ್ತು WhatsApp ಮೂಲಕ ರಾಜಕೀಯ ಚರ್ಚೆ ನಡೆಸುತ್ತಾರೆ. ಅವರು ಒಬ್ಬ ನಾಯಕನನ್ನು ದೇವರಂತೆ ನೋಡುವುದಿಲ್ಲ. ಪ್ರಶ್ನಿಸುತ್ತಾರೆ. ಮೀಮ್ ಮಾಡುತ್ತಾರೆ. ವಿರೋಧಿಸುತ್ತಾರೆ. ಅಗತ್ಯವಿದ್ದರೆ ತಮ್ಮದೇ ರಾಜಕೀಯ ವೇದಿಕೆಯನ್ನು ನಿರ್ಮಿಸುತ್ತಾರೆ. ಇದಕ್ಕಾಗಿಯೇ CJPಯಂತಹ ಚಳವಳಿಗಳು ಬಿಜೆಪಿಗೆ ಮಾತ್ರವಲ್ಲ, ಕಾಂಗ್ರೆಸ್ ಸೇರಿದಂತೆ ಎಲ್ಲ ಸಾಂಪ್ರದಾಯಿಕ ಪಕ್ಷಗಳಿಗೂ ಎಚ್ಚರಿಕೆ. ಈ ಚಳವಳಿ ದೀರ್ಘಕಾಲ ಉಳಿಯುತ್ತದೆಯೇ ಎಂಬುದು ಬೇರೆ ಪ್ರಶ್ನೆ. ಆದರೆ ಅದು ಎತ್ತಿದ ಪ್ರಶ್ನೆಗಳನ್ನು ನಿರ್ಲಕ್ಷಿಸುವುದು ಕಷ್ಟ.
ಇನ್ನು, ರಾಹುಲ್ ಗಾಂಧಿ ಈ ಅವಕಾಶವನ್ನು ಬಳಸಿಕೊಳ್ಳಲಿದ್ದಾರೆಯೇ? ಇದೇ ಸಮಯದಲ್ಲಿ ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ತನ್ನ ಸಂಘಟನೆಯನ್ನು ಪುನರ್‌ವಿನ್ಯಾಸಗೊಳಿಸುವ ಪ್ರಯತ್ನದಲ್ಲಿದೆ. ನಾಸಿಕ್‌ನಲ್ಲಿ ಮಹಾರಾಷ್ಟ್ರದ ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಘಟಕಗಳ ಅಧ್ಯಕ್ಷರಿಗಾಗಿ ಹತ್ತು ದಿನಗಳ ವಸತಿ ತರಬೇತಿ ಶಿಬಿರ ಆಯೋಜಿಸಲಾಗಿದೆ. ರಾಹುಲ್ ಗಾಂಧಿ ಅದರ ಸಮಾರೋಪದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದು ಸಾಮಾನ್ಯ ಸಂಘಟನಾ ತರಬೇತಿ ಮಾತ್ರವಾಗಿದ್ದರೆ ಅದರ ರಾಜಕೀಯ ಮಹತ್ವ ಕಡಿಮೆ. ಆದರೆ ಕಾಂಗ್ರೆಸ್ ಈ ಶಿಬಿರವನ್ನು ಯುವಜನರ ಪ್ರಶ್ನೆಗಳು, ಸಂವಿಧಾನ, ಸಾಮಾಜಿಕ ನ್ಯಾಯ, ನಿರುದ್ಯೋಗ ಮತ್ತು ಬಿಜೆಪಿಯ ಸೈದ್ಧಾಂತಿಕ ಪ್ರಭಾವವನ್ನು ಎದುರಿಸುವ ರಾಜಕೀಯ ತರಬೇತಿಯೊಂದಿಗೆ ಜೋಡಿಸಿದರೆ, ಮಹಾರಾಷ್ಟ್ರದಲ್ಲಿ ಹೊಸ ರಾಜಕೀಯ ಸಮೀಕರಣಕ್ಕೆ ಅದು ಕಾರಣವಾಗಬಹುದು. ಆದರೆ ಇಲ್ಲಿಯೂ ಕಾಂಗ್ರೆಸ್ ತನ್ನ ಹಳೆಯ ಸಮಸ್ಯೆಯಿಂದ ಹೊರಬರಬೇಕು. ಯುವಜನರನ್ನು ಕೇವಲ ಚುನಾವಣಾ ಪ್ರಚಾರದ ‘ಫೇಸ್’ಗಳಾಗಿ ಬಳಸುವುದೇ? ಅಥವಾ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಿಗೂ ತರುತ್ತದೆಯೇ? ಈ ಪ್ರಶ್ನೆಗೆ ಕಾಂಗ್ರೆಸ್ ಕೂಡ ಉತ್ತರಿಸಬೇಕಿದೆ. ಫಡ್ನವೀಸ್‌ರನ್ನು ಉಪಪ್ರಧಾನಿ ಮಾಡಲಾಗುತ್ತದೆಯೇ ಇಲ್ಲವೇ ಎಂಬುದು ಈಗಿನ ರಾಜಕೀಯ ಕುತೂಹಲ. ಆದರೆ ಅದಕ್ಕಿಂತ ದೊಡ್ಡ ಪ್ರಶ್ನೆ ಬೇರೆ ಇದೆ. ಬಿಜೆಪಿ ತನ್ನ ನಾಯಕತ್ವದಲ್ಲಿ ಯುವ ಮುಖಗಳನ್ನು ಹೆಚ್ಚಿಸಿದರೂ, ಯುವಜನರ ಮೂಲಭೂತ ಅಸಮಾಧಾನವನ್ನು ಹೇಗೆ ಪರಿಹರಿಸಲಿದೆ? ಯಾಕೆಂದರೆ ಯುವಜನರ ರಾಜಕೀಯ ಅಸಮಾಧಾನವನ್ನು ಕೇವಲ ನಾಯಕತ್ವ ಬದಲಾವಣೆ ಮೂಲಕ ಶಮನಗೊಳಿಸಲು ಸಾಧ್ಯವಿಲ್ಲ. ಒಬ್ಬ ನಿರುದ್ಯೋಗಿ ಯುವಕನಿಗೆ ಹೊಸ ಉಪಪ್ರಧಾನಿ ಮುಖಕ್ಕಿಂತ ಉದ್ಯೋಗ ಮುಖ್ಯ. ಪರೀಕ್ಷೆ ಬರೆಯುವ ವಿದ್ಯಾರ್ಥಿಗೆ ಭಾಷಣಕ್ಕಿಂತ ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಮುಖ್ಯ. ಪ್ರತಿಭಟಿಸುವ ಯುವಜನರಿಗೆ ಭರವಸೆಗಿಂತ ಅಭಿವ್ಯಕ್ತಿಯ ಹಕ್ಕು ಮುಖ್ಯ. ಇದು ಬಿಜೆಪಿಗೆ ಮಾತ್ರವಲ್ಲ, ಕಾಂಗ್ರೆಸ್ ಮತ್ತು ಇತರ ಎಲ್ಲ ಪಕ್ಷಗಳಿಗೂ ಅನ್ವಯಿಸುವ ಸತ್ಯ. 2029ರ ಮುನ್ನ ನಡೆಯುತ್ತಿರುವ ದೊಡ್ಡ ಪರೀಕ್ಷೆ. ಈ ಬೆಳವಣಿಗೆಗಳನ್ನು 2029ರ ಚುನಾವಣೆಯ ಹಿನ್ನೆಲೆಯಲ್ಲಿಯೂ ನೋಡಬೇಕಾಗಿದೆ. ಬಿಜೆಪಿಗೆ ತನ್ನ ಮುಂದಿನ ಪೀಳಿಗೆಯ ನಾಯಕತ್ವವನ್ನು ಈಗಿನಿಂದಲೇ ರೂಪಿಸಬೇಕಿದೆ. ಆರ್‌ಎಸ್‌ಎಸ್‌ಗೆ ಪಕ್ಷದ ಮೇಲೆ ತನ್ನ ಸೈದ್ಧಾಂತಿಕ ಮತ್ತು ಸಂಘಟನಾ ಪ್ರಭಾವವನ್ನು ಮುಂದುವರಿಸಬೇಕಿದೆ. ಕಾಂಗ್ರೆಸ್ ಯುವಜನರ ಅಸಮಾಧಾನವನ್ನು ತನ್ನ ಪರವಾಗಿ ರಾಜಕೀಯವಾಗಿ ಪರಿವರ್ತಿಸಿಕೊಳ್ಳಬೇಕಿದೆ. ಹೀಗಾಗಿ ಫಡ್ನವೀಸ್‌ರಂತಹ ಮುಖಗಳ ಚರ್ಚೆ ಕೇವಲ ಒಂದು ಹುದ್ದೆಯ ಚರ್ಚೆಯಲ್ಲ. ಇದು ‘ಮೋದಿ ನಂತರ ಯಾರು?’ ಎನ್ನುವ ಪ್ರಶ್ನೆಗಿಂತಲೂ ದೊಡ್ಡದಾದ ‘ಮೋದಿ ನಂತರದ ಬಿಜೆಪಿ ಹೇಗಿರಬೇಕು?’ ಎಂಬ ಪ್ರಶ್ನೆಯ ಆರಂಭಿಕ ಅಧ್ಯಾಯ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಯುವಜನರ ಅಸಮಾಧಾನಕ್ಕೆ ಉತ್ತರವಾಗಿ ಮತ್ತೊಬ್ಬ ನಾಯಕನನ್ನು ಮೇಲಕ್ಕೆತ್ತುವುದರಿಂದ ಮಾತ್ರ ರಾಜಕೀಯ ಸಂಕಷ್ಟ ಪರಿಹಾರವಾಗುವುದಿಲ್ಲ.
ಯುವಜನರು ಈಗ ನಮ್ಮ ನಾಯಕರು ಯಾರು ಎಂದು ಮಾತ್ರ ಹುಡುಕುತ್ತಿಲ್ಲ. ತಮ್ಮ ಭವಿಷ್ಯವನ್ನು ಹುಡುಕುತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಉದ್ಯೋಗ, ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಪ್ರಜಾಸತ್ತಾತ್ಮಕ ಅವಕಾಶಗಳ ರೂಪದಲ್ಲಿ ಉತ್ತರ ಸಿಗದಿದ್ದರೆ, ಯಾವುದೇ ಪಕ್ಷದ ‘ಯುವ ತಂತ್ರ’ವೂ ಚುನಾವಣಾ ಘೋಷಣೆಯ ಮಟ್ಟದಲ್ಲೇ ಉಳಿಯುವ ಸಾಧ್ಯತೆಯಿದೆ. ಆದ್ದರಿಂದ ಫಡ್ನವೀಸ್ ಉಪಪ್ರಧಾನಿಯಾಗುತ್ತಾರೆಯೇ ಎಂಬುದಕ್ಕಿಂತ, ಭಾರತೀಯ ರಾಜಕೀಯದ ಅಧಿಕಾರದ ಮೇಜಿನ ಬಳಿ ಯುವಜನರಿಗೆ ನಿಜವಾಗಿ ಎಷ್ಟು ಜಾಗ ಸಿಗಲಿದೆ? ಎಂಬ ಪ್ರಶ್ನೆಯೇ ಹೆಚ್ಚು ಮಹತ್ವದ್ದು.
- ಶ್ರೀರಾಜ್ ವಕ್ವಾಡಿ
No comments:
Post a Comment