Tuesday, September 1, 2026

TVK V/S ಕಾಂಗ್ರೆಸ್ !? ವಿಜಯ್, ರಾಹುಲ್, "ಪ್ರಧಾನಿ"! ಪ್ರವೀಣ್ ಚಕ್ರವರ್ತಿ ಹೊಸ ಸೂತ್ರವೇನು !?

 ‘2029ರಲ್ಲಿ ವಿಜಯ್ ಪ್ರಧಾನಿ ಅಭ್ಯರ್ಥಿ ಚರ್ಚೆ, ತಮಿಳುನಾಡಿನ ಟಿವಿಕೆ ಮತ್ತು ಕಾಂಗ್ರೆಸ್ ಮೈತ್ರಿಯೊಳಗೆ ರಾಹುಲ್ ಗಾಂಧಿ ವರ್ಸಸ್ ವಿಜಯ್ ಸಮರ ಶುರುವಾಗಿದ್ಯಾ ಅಥವಾ ಅವರ ಬೆಂಬಲಿಗರ ನಡುವಿನ ಸಮರನಾ !? ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಜ್ಯಸಭಾ ಸದಸ್ಯ ಪ್ರವೀಣ್ ಚಕ್ರವರ್ತಿಗೆ ಎದುರಾಗಿರುವ ಸವಾಲೇನು? ಸರ್ಕಾರ ಉಳಿಸುವುದೋ, ಕಾಂಗ್ರೆಸ್‌ನ ರಾಷ್ಟ್ರೀಯ ನಿಲುವು ಉಳಿಸುವುದೋ? 


ತಮಿಳುನಾಡಿನ ರಾಜಕೀಯದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆ ಕೇವಲ ‘2029ರಲ್ಲಿ ವಿಜಯ್ ಪ್ರಧಾನಿ’ ಎಂಬ ಪೋಸ್ಟರ್‌ಗಳ ರಾಜಕೀಯವಲ್ಲ. ಅದು TVK–ಕಾಂಗ್ರೆಸ್ ಮೈತ್ರಿಯ ಭವಿಷ್ಯ, ರಾಹುಲ್ ಗಾಂಧಿಯ ರಾಷ್ಟ್ರೀಯ ನಾಯಕತ್ವ ಮತ್ತು ವಿಜಯ್ ಅವರ ಬೆಳೆಯುತ್ತಿರುವ ರಾಜಕೀಯ ಮಹತ್ವಾಕಾಂಕ್ಷೆಯ ನಡುವಿನ ಮೊದಲ ದೊಡ್ಡ ಸಂಘರ್ಷದ ಮುನ್ಸೂಚನೆಯಾಗಿದೆ.ಇತ್ತೀಚಿನ India Today-CVoter Mood of the Nation ಸಮೀಕ್ಷೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮುಂದಿನ ಪ್ರಧಾನಿಯಾಗಿ ಜನರ ಆಯ್ಕೆಯಲ್ಲಿ 9.2% ಬೆಂಬಲದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ನರೇಂದ್ರ ಮೋದಿ 48.7% ಮತ್ತು ರಾಹುಲ್ ಗಾಂಧಿ 27.1% ಬೆಂಬಲ ಪಡೆದಿದ್ದಾರೆ. ಸಮೀಕ್ಷೆಯಲ್ಲಿ ವಿಜಯ್ ಮೂರನೇ ಸ್ಥಾನ ಪಡೆದಿರುವುದು ಒಂದು ಸಂಗತಿ; ಅದನ್ನು 2029ರ ಪ್ರಧಾನಮಂತ್ರಿ ಹುದ್ದೆಯ ರಾಜಕೀಯ ಜನಾದೇಶವೆಂದು ಬಿಂಬಿಸುವುದಕ್ಕೆ ಸಾಧ್ಯವಿದೆಯಾ ಎನ್ನುವುದು ಮತ್ತೊಂದು ಸಂಗತಿ. ಆದರೆ TVK ಬೆಂಬಲಿಗರು ಈ ಸಮೀಕ್ಷೆಯ ಸಂಖ್ಯೆಯನ್ನು ರಾಜಕೀಯ ಘೋಷಣೆಯಾಗಿ ಪರಿವರ್ತಿಸಿದ್ದಾರೆ. ‘ಇಂದಿನ ಮುಖ್ಯಮಂತ್ರಿ, ನಾಳೆಯ ಪ್ರಧಾನಿ’ ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಪಕ್ಷದೊಳಗಿನ ಕೆಲವರು ದಕ್ಷಿಣ ಭಾರತದಿಂದ ಪ್ರಧಾನಮಂತ್ರಿ ಬರಬೇಕು ಎಂಬ ವಾದವನ್ನೂ ಮುಂದಿಟ್ಟಿದ್ದಾರೆ.

ಹೀಗಾಗಿ ಸಮೀಕ್ಷೆಯ ಒಂದು ಸಂಖ್ಯೆ ಈಗ ಮೈತ್ರಿಯೊಳಗಿನ ಅಧಿಕಾರದ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಕಾಂಗ್ರೆಸ್‌ನ ಅಸಮಾಧಾನ ಏಕೆ? ಕಾಂಗ್ರೆಸ್‌ಗೆ ಸಮಸ್ಯೆ ವಿಜಯ್ ಪ್ರಧಾನಿಯಾಗುವ ಸಾಧ್ಯತೆಯೊಂದಿಗೆ ಮಾತ್ರವಲ್ಲ. ಸಮಸ್ಯೆಯ ಮೂಲ ಪ್ರಶ್ನೆ, 2029ರಲ್ಲಿ ಬಿಜೆಪಿಯನ್ನು ಎದುರಿಸುವ ವಿರೋಧ ಪಕ್ಷಗಳ ರಾಷ್ಟ್ರೀಯ ನಾಯಕತ್ವ ಯಾರ ಕೈಯಲ್ಲಿರಬೇಕು? ಎನ್ನುವುದಾಗಿದೆ. ಕಾಂಗ್ರೆಸ್ ತನ್ನ ರಾಷ್ಟ್ರೀಯ ರಾಜಕೀಯದಲ್ಲಿ ರಾಹುಲ್ ಗಾಂಧಿಯನ್ನು ಪ್ರಮುಖ ಪ್ರಧಾನಿ ಅಭ್ಯರ್ಥಿಯಾಗಿ ಮುಂದಿಟ್ಟಿದೆ. ಇದೇ ಸಂದರ್ಭದಲ್ಲಿ TVKಯೊಳಗಿನಿಂದ ವಿಜಯ್ ಹೆಸರನ್ನು ಮುಂದಿಡುವುದು ಸಹಜವಾಗಿಯೇ ಕಾಂಗ್ರೆಸ್‌ಗೆ ಅಸಮಾಧಾನ ಉಂಟುಮಾಡುತ್ತದೆ. ಇದರ ತೀವ್ರತೆಯೇ ತಮಿಳುನಾಡು ಸಚಿವ ಎಸ್. ರಾಜೇಶ್ ಕುಮಾರ್ ಅವರ ಹೇಳಿಕೆಯಲ್ಲಿ ಕಾಣಿಸಿಕೊಂಡಿದೆ. 2029ರಲ್ಲಿ TVK ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬೆಂಬಲಿಸದಿದ್ದರೆ ತಾವು ಸೇರಿದಂತೆ ಕಾಂಗ್ರೆಸ್‌ನ ಇಬ್ಬರು ಸಚಿವರು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುವುದಾಗಿ ಅವರು ಎಚ್ಚರಿಸಿದ್ದಾರೆ. ಇದು ಸಾಮಾನ್ಯ ಮೈತ್ರಿ ಪಕ್ಷದ ಹೇಳಿಕೆಯಲ್ಲ. ಇದು ‘ರಾಜ್ಯ ಸರ್ಕಾರದಲ್ಲಿ ನಾವು ನಿಮ್ಮ ಜೊತೆ ಇದ್ದೇವೆ; ಆದರೆ ರಾಷ್ಟ್ರೀಯ ರಾಜಕೀಯದಲ್ಲಿ ನಮ್ಮ ನಾಯಕತ್ವದ ಹಕ್ಕನ್ನು ಪ್ರಶ್ನಿಸಬೇಡಿ’ಎಂಬ ಕಾಂಗ್ರೆಸ್‌ನ ಸಂದೇಶ. ವಿಜಯ್‌ಗೆ ಸಮೀಕ್ಷೆಯಲ್ಲಿ 9.2% ಮಂದಿ ಬೆಂಬಲಿಸಿದ್ದಾರೆ, ಆದರೆ 272 ಎಲ್ಲಿದೆ? ಇಲ್ಲಿ ಕಾಂಗ್ರೆಸ್ ಮುಂದಿಡಬಹುದಾದ ಅತ್ಯಂತ ಬಲವಾದ ರಾಜಕೀಯ ಪ್ರಶ್ನೆ ಇದೇ ಆಗಿದೆ.  ಸಮೀಕ್ಷೆಯಲ್ಲಿ 9.2% ಜನರು ವಿಜಯ್ ಅವರನ್ನು ಪ್ರಧಾನಿಯಾಗಿ ನೋಡಲು ಬಯಸಿದ್ದಾರೆ ಎಂಬುದು ಗಮನಾರ್ಹ.

 ಆದರೆ ಪ್ರಧಾನಿಯಾಗಲು ಜನಪ್ರಿಯತೆಯ ಶೇಕಡಾವಾರು ಮಾತ್ರ ಸಾಕಾಗುವುದಿಲ್ಲ. ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳ ಬೆಂಬಲ ಬೇಕಾಗುತ್ತದೆ. ಹೀಗಾಗಿ TVK ಎದುರಿನ ಪ್ರಶ್ನೆ ಏನೆಂದ್ರೇ, ತಮಿಳುನಾಡಿನ ಹೊರಗೆ ವಿಜಯ್ ಅವರ ರಾಜಕೀಯ ಸಂಘಟನೆ ಎಷ್ಟು ಬಲವಾಗಿದೆ!? ಅವರಿಗೆ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ದೊಡ್ಡ ರಾಜ್ಯಗಳಲ್ಲಿ ಸಂಘಟನಾ ನೆಲೆ ಇದೆಯೇ? 2029ರ ವೇಳೆಗೆ ಆ ನೆಲೆಯನ್ನು ನಿರ್ಮಿಸಲು ಅಥವಾ ವಿಸ್ತರಿಸುವುದಕ್ಕೆ ಸಾಧ್ಯವೇ? ಕಾಂಗ್ರೆಸ್‌ನಂತಹ ಹಳೆಯ ರಾಷ್ಟ್ರೀಯ ಪಕ್ಷವನ್ನು ಬದಿಗೊತ್ತಿ ರಾಷ್ಟ್ರೀಯ ಮೈತ್ರಿಯ ನಾಯಕತ್ವವನ್ನು ಪಡೆಯಲು TVKಗೆ ಬೇಕಾಗುವ ಸಂಸದೀಯ ಸಂಖ್ಯಾಬಲವನ್ನು ಯಾರು ತರುತ್ತಾರೆ? ಈ ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೆ ‘2029ರಲ್ಲಿ ವಿಜಯ್ ಪ್ರಧಾನಿ’ ಎನ್ನುವುದು ರಾಜಕೀಯ ಗುರಿಗಿಂತ ಹೆಚ್ಚು ಕ್ಯಾಡರ್‌ಗಳ ಮಹತ್ವಾಕಾಂಕ್ಷೆಯ ಘೋಷಣೆಯಾಗಿಯೇ ಉಳಿಯುತ್ತದೆ. ಆದರೆ ಕಾಂಗ್ರೆಸ್‌ಗೂ ಎಲ್ಲವೂ ಸುಲಭವಲ್ಲ. ಇದನ್ನು ಕೇವಲ ಕಾಂಗ್ರೆಸ್ ವಿಜಯ್ ಮೇಲೆ ಒತ್ತಡ ಹೇರುತ್ತಿದೆ ಎಂದು ನೋಡುವುದೂ ತಪ್ಪು. ಕಾಂಗ್ರೆಸ್ ಈಗ TVK ಸರ್ಕಾರದ ಭಾಗವಾಗಿದೆ. 2026ರ ವಿಧಾನಸಭಾ ಚುನಾವಣೆಯಲ್ಲಿ TVK 108 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್‌ನ ಐದು ಸ್ಥಾನಗಳ ಬೆಂಬಲವೂ ಸರ್ಕಾರ ರಚನೆಯಲ್ಲಿ ನಿರ್ಣಾಯಕವಾಗಿತ್ತು. VCK, CPI, CPI(M), IUML ಸೇರಿದಂತೆ ಇತರ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಸರ್ಕಾರ ಬಹುಮತದ ಗಡಿ ದಾಟಿತು. ಅಂದರೆ ಕಾಂಗ್ರೆಸ್‌ಗೆ ಒಂದು ವಿಚಿತ್ರ ರಾಜಕೀಯ ಪರಿಸ್ಥಿತಿ ಎದುರಾಗಿದೆ. ವಿಜಯ್ ಸರ್ಕಾರವನ್ನು ಉಳಿಸಬೇಕು. ವಿಜಯ್‌ನ ರಾಷ್ಟ್ರೀಯ ಮಹತ್ವಾಕಾಂಕ್ಷೆಯನ್ನು ನಿಯಂತ್ರಿಸಬೇಕು.

ಅದೇ ಸಮಯದಲ್ಲಿ ರಾಹುಲ್ ಗಾಂಧಿಯ ರಾಷ್ಟ್ರೀಯ ನಾಯಕತ್ವವನ್ನು ದುರ್ಬಲಗೊಳಿಸಬಾರದು. ಈ ಮೂರನ್ನೂ ಒಂದೇ ಸಮಯದಲ್ಲಿ ಸಾಧಿಸುವುದು ಸುಲಭವಲ್ಲ. ಇದೇ ಸಂದರ್ಭದಲ್ಲಿ ಪ್ರವೀಣ್ ಚಕ್ರವರ್ತಿಯ ಪಾತ್ರ ನಿರ್ಣಾಯಕ. ಈ ಸಂಪೂರ್ಣ ಮೈತ್ರಿ ಸಮೀಕರಣದಲ್ಲಿ ಪ್ರವೀಣ್ ಚಕ್ರವರ್ತಿ ಸಾಮಾನ್ಯ ಕಾಂಗ್ರೆಸ್ ನಾಯಕರಿಗಿಂತ ವಿಭಿನ್ನ ಸ್ಥಾನದಲ್ಲಿದ್ದಾರೆ. TVK–ಕಾಂಗ್ರೆಸ್ ಸರ್ಕಾರ ರೂಪುಗೊಳ್ಳುವ ಸಂದರ್ಭದಲ್ಲಿ ಅವರು ಮೈತ್ರಿಯ ಪ್ರಮುಖ ಕೊಂಡಿಯಾಗಿ ಕಾಣಿಸಿಕೊಂಡಿದ್ದರು. ಕಾಂಗ್ರೆಸ್ TVK ಸರ್ಕಾರದ ಭಾಗವಾಗುವ ರಾಜಕೀಯವನ್ನು ಸಮರ್ಥಿಸಿಕೊಂಡು, ತಮಿಳುನಾಡಿನಲ್ಲಿ ಹೊಸ ‘ಮೈತ್ರಿಯ ಪರ್ವ’ ಆರಂಭವಾಗಿದೆ ಎಂಬ ವಾದವನ್ನೂ ಅವರು ಮುಂದಿಟ್ಟಿದ್ದರು. ಇದಕ್ಕಿಂತ ಮುಖ್ಯವಾಗಿ, ವಿಜಯ್ ಸರ್ಕಾರದೊಂದಿಗೆ ಕಾಂಗ್ರೆಸ್‌ನ ರಾಜಕೀಯ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಕ್ರಿಯೆಯಲ್ಲಿ ಚಕ್ರವರ್ತಿ ಪ್ರಮುಖ ಸೇತುವೆಯಾಗಿ ಕಾಣಿಸಿಕೊಂಡಿದ್ದಾರೆ. TVKಯಿಂದ ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ದೊರೆತಾಗಲೂ ಈ ವೈಯಕ್ತಿಕ ರಾಜಕೀಯ ಹೆಚ್ಚು ಸ್ಪಷ್ಟವಾಗಿತ್ತು. ಹೀಗಾಗಿ ಈಗ ಎದುರಾಗಿರುವ ಬಿಕ್ಕಟ್ಟಿನಲ್ಲಿ ಅವರ ಮುಂದಿರುವ ಸವಾಲು ದೊಡ್ಡದು. ವಿಜಯ್ ಅವರನ್ನು ಎದುರಿಸಿ ಕಾಂಗ್ರೆಸ್‌ಗೆ ನಷ್ಟ ಮಾಡಬಾರದು.

ವಿಜಯ್‌ಗೆ ಸಂಪೂರ್ಣವಾಗಿ ಮಣಿದು ರಾಹುಲ್ ಗಾಂಧಿಯ ರಾಷ್ಟ್ರೀಯ ನಾಯಕತ್ವವನ್ನು ದುರ್ಬಲಗೊಳಿಸಬಾರದು. ಇವೆರಡರ ನಡುವೆ ಸಮತೋಲನ ಸಾಧಿಸಬೇಕಾಗಿದೆ. ಚಕ್ರವರ್ತಿಯ ಮೊದಲ ಕೆಲಸ: ‘ವಿಜಯ್ ವರ್ಸಸ್ ರಾಹುಲ್’ ಎನ್ನುವ ಸಂಘರ್ಷವನ್ನು ತಡೆಯುವುದು. ಪ್ರವೀಣ್ ಚಕ್ರವರ್ತಿ ರಾಜಕೀಯವಾಗಿ ಮಾಡಬೇಕಾದ ಮೊದಲ ಕೆಲಸ ಇದೇ. ವಿಜಯ್ ಅವರನ್ನು ನೇರವಾಗಿ ‘2029ರ ಪ್ರಧಾನಿ ಅಭ್ಯರ್ಥಿ ಅಲ್ಲ’ ಎಂದು ಘೋಷಿಸುವುದು TVKಯೊಳಗೆ ಪ್ರತಿರೋಧ ಹುಟ್ಟಿಸಬಹುದು. ಅದೇ ರೀತಿ ರಾಹುಲ್ ಗಾಂಧಿಯ ಹೆಸರನ್ನು ಕೈಬಿಟ್ಟು ವಿಜಯ್‌ಗೆ ಬೆಂಬಲ ನೀಡುವುದು ಕಾಂಗ್ರೆಸ್‌ನ ರಾಷ್ಟ್ರೀಯ ರಾಜಕೀಯಕ್ಕೆ ದೊಡ್ಡ ಹೊಡೆತ. ಆದ್ದರಿಂದ ಮೂರನೇ ದಾರಿ ಬೇಕಾಗುತ್ತದೆ. ಆ ದಾರಿಯನ್ನು ಹುಡುಕಿಕೊಳ್ಳಬೇಕಾಗಿದೆ. 2029ರ ಪ್ರಧಾನಿ ಅಭ್ಯರ್ಥಿಯ ಪ್ರಶ್ನೆಯನ್ನು ಈಗಲೇ ಅಂತಿಮಗೊಳಿಸದೆ, ರಾಜ್ಯದ ಮೈತ್ರಿಯನ್ನು ಮುಂದುವರಿಸಬೇಕಿದೆ. ಅಂದರೆ, ‘ಮೊದಲು ತಮಿಳುನಾಡಿನ ಸರ್ಕಾರವನ್ನು ಸ್ಥಿರಗೊಳಿಸೋಣ; 2029ರ ರಾಷ್ಟ್ರೀಯ ನಾಯಕತ್ವದ ಪ್ರಶ್ನೆಯನ್ನು ಚುನಾವಣೆಯ ಸಂದರ್ಭದ ಸಂಸದೀಯ ಸಂಖ್ಯಾಬಲ ಮತ್ತು ಮೈತ್ರಿ ಪಕ್ಷಗಳ ಒಪ್ಪಿಗೆಯ ಆಧಾರದ ಮೇಲೆ ನಿರ್ಧರಿಸೋಣ’ ಎಂಬ ಸೂತ್ರ. ಇದು ಎರಡೂ ಪಕ್ಷಗಳಿಗೂ ಅಸ್ತಿತ್ವ ಉಳಿಸುವ ಮಾರ್ಗ. VCK ಇಲ್ಲಿ ‘ಕಿಂಗ್‌ಮೇಕರ್’ ಆಗಬಹುದೇ?ಇನ್ನೊಂದು ಪ್ರಮುಖ ಅಂಶ VCK. VCK ಸರ್ಕಾರ ರಚನೆಯ ಸಂದರ್ಭದಲ್ಲಿ TVKಗೆ ಬೆಂಬಲ ನೀಡಿದರೂ, ತನ್ನ ಹಳೆಯ ಮೈತ್ರಿ ತೊರೆಯುವುದಿಲ್ಲ ಎಂದ ಹೇಳಿದೆ. ವರದಿಗಳ ಪ್ರಕಾರ VCK, TVK ಸರ್ಕಾರಕ್ಕೆ ಬೆಂಬಲ ನೀಡುತ್ತಲೇ ತನ್ನ ವಿಶಾಲ ರಾಜಕೀಯ ಸಂಬಂಧಗಳನ್ನು ಉಳಿಸಿಕೊಂಡಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೊರಬಂದರೆ VCK ಕೂಡ ತಕ್ಷಣವೇ ಸರ್ಕಾರ ಪತನಗೊಳಿಸುವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಒಂದು ವಿಷಯ ಖಚಿತ, TVKಗೆ ಕಾಂಗ್ರೆಸ್‌ನ ಐದು ಶಾಸಕರ ಬೆಂಬಲ ಕಳೆದುಹೋದರೆ, ಸರ್ಕಾರದ ಸ್ಥಿರತೆ ಇತರ ಬೆಂಬಲ ಪಕ್ಷಗಳ ನಿಲುವಿನ ಮೇಲೆ ಹೆಚ್ಚು ಅವಲಂಬಿತವಾಗುತ್ತದೆ. ಆಗ VCK, ಎಡಪಕ್ಷಗಳು ಮತ್ತು IUMLಗಳಂತಹ ಪಕ್ಷಗಳ ರಾಜಕೀಯ ತೂಕ ಹೆಚ್ಚಾಗುತ್ತದೆ. ಇದು ಪ್ರವೀಣ್ ಚಕ್ರವರ್ತಿಗೆ ಮತ್ತೊಂದು ಎಚ್ಚರಿಕೆ. ಇನ್ನು, ಡಿಎಂಕೆ ಏಕೆ ಸಂತೋಷದಲ್ಲಿದೆಯಾ !? ಈ ಬಿಕ್ಕಟ್ಟಿನ ರಾಜಕೀಯ ಲಾಭ ಯಾರಿಗೆ ಎಂಬ ಪ್ರಶ್ನೆಗೆ ಉತ್ತರ ಡಿಎಂಕೆ ಪಕ್ಷಕ್ಕೆ. ಡಿಎಂಕೆ ಈಗ ವಿರೋಧ ಪಕ್ಷದಲ್ಲಿದೆ. ಆದರೆ ಅದರ ಎದುರಿನ ಎರಡು ಶಕ್ತಿಗಳು—TVK ಮತ್ತು ಕಾಂಗ್ರೆಸ್—ಒಂದರ ವಿರುದ್ಧ ಮತ್ತೊಂದು ರಾಜಕೀಯವಾಗಿ ಮುಖಾಮುಖಿಯಾದರೆ, ಅದು ಡಿಎಂಕೆಗೆ ಉಸಿರಾಡಲು ಅವಕಾಶ ನೀಡುತ್ತದೆ. ಡಿಎಂಕೆ ನಾಯಕ ಆರ್.ಎಸ್. ಭಾರತಿಯವರು ‘ಕಲ್ಪನೆಗೆ ಮಿತಿಯಿಲ್ಲ’ ಎಂದು TVKಯ ಪ್ರಧಾನಿ ಕನಸನ್ನು ವ್ಯಂಗ್ಯವಾಡಿರುವುದು ಇದೇ ರಾಜಕೀಯ ಲೆಕ್ಕಾಚಾರದ ಭಾಗ.

ಡಿಎಂಕೆಗೆ ಬೇಕಾಗಿರುವುದು ವಿಜಯ್ ವಿರುದ್ಧ ಕಾಂಗ್ರೆಸ್ ನಿಲ್ಲುವುದು ಅಲ್ಲ;  ವಿಜಯ್–ಕಾಂಗ್ರೆಸ್ ಮೈತ್ರಿಯೊಳಗೆ ಶಾಶ್ವತ ಅನುಮಾನ ಹುಟ್ಟುವುದು. ಮತ್ತು ಅದು ಬೆಳೆಯುವುದು ಬೇಕಾಗಿದೆ. ಒಮ್ಮೆ ಮೈತ್ರಿಯೊಳಗೆ ‘2029ರಲ್ಲಿ ನಮ್ಮ ನಾಯಕ ಯಾರು?’ ಎಂಬ ಪ್ರಶ್ನೆ ಕೇಂದ್ರವಾಗಿಬಿಟ್ಟರೆ, ಆಡಳಿತ, ಅಭಿವೃದ್ಧಿ, ಬೆಲೆ ಏರಿಕೆ, ಉದ್ಯೋಗ, ಸಾಮಾಜಿಕ ನ್ಯಾಯದಂತಹ ಪ್ರಶ್ನೆಗಳು ಹಿಂಬದಿಗೆ ಸರಿಯುತ್ತವೆ. ಅದು ವಿರೋಧ ಪಕ್ಷಕ್ಕೆ ರಾಜಕೀಯ ಲಾಭ. ಇನ್ನು, ಈ ಬೆಳವಣಿಗೆಯನ್ನು ಕೇವಲ ‘ವಿಜಯ್ ಪ್ರಧಾನಿಯಾಗುತ್ತಾರಾ?’ ಎಂಬ ಸೆಲೆಬ್ರಿಟಿ ರಾಜಕೀಯದ ಪ್ರಶ್ನೆಯಾಗಿ ನೋಡುವುದು ತಪ್ಪು. ನಿಜವಾದ ಪ್ರಶ್ನೆ ಏನೆಂದರೆ, ತಮಿಳುನಾಡಿನಲ್ಲಿ ರೂಪುಗೊಂಡಿರುವ ಹೊಸ ಮೈತ್ರಿ ರಾಜಕೀಯವು ವ್ಯಕ್ತಿ ಕೇಂದ್ರಿತವಾಗುತ್ತದೆಯೇ ಅಥವಾ ನೀತಿ ಕೇಂದ್ರಿತವಾಗುತ್ತದೆಯೇ!? ವಿಜಯ್ ಅವರ ಜನಪ್ರಿಯತೆ ದೊಡ್ಡ ರಾಜಕೀಯ ಬಂಡವಾಳ. ಕಾಂಗ್ರೆಸ್‌ಗೆ ರಾಷ್ಟ್ರೀಯ ಸಂಘಟನೆ ಇದೆ. VCKಗೆ ಸಾಮಾಜಿಕ ನ್ಯಾಯದ ರಾಜಕೀಯ ನೆಲೆ ಇದೆ. ಎಡಪಕ್ಷಗಳಿಗೆ ಸಿದ್ಧಾಂತ ಮತ್ತು ಸಂಘಟನೆಯ ಪರಂಪರೆ ಇದೆ.‌ಈ ಎಲ್ಲ ಶಕ್ತಿಗಳನ್ನು ಒಟ್ಟಿಗೆ ಇಟ್ಟುಕೊಳ್ಳಲು ಸಾಧ್ಯವಾದರೆ TVK ಸರ್ಕಾರ ತನ್ನ ಐದು ವರ್ಷದ ಅವಧಿಯನ್ನು ಸ್ಥಿರವಾಗಿ ಪೂರೈಸಬಹುದು. ಆದರೆ ‘ನನ್ನ ನಾಯಕನೇ ಪ್ರಧಾನಿ’ ಎಂಬ ವೈಯಕ್ತಿಕ ಮಹತ್ವಾಕಾಂಕ್ಷೆ ಮೈತ್ರಿಯ ಸಾಮಾನ್ಯ ರಾಜಕೀಯ ಕಾರ್ಯಕ್ರಮಕ್ಕಿಂತ ಮೇಲುಗೈ ಪಡೆದರೆ, ಇದೇ ಮೈತ್ರಿ ತನ್ನ ಒಳಗಿನ ವಿರೋಧಾಭಾಸಗಳಿಂದ ದುರ್ಬಲವಾಗಬಹುದು. ಇಲ್ಲಿ, ಪ್ರವೀಣ್ ಚಕ್ರವರ್ತಿಯ ನಿಜವಾದ ಸವಾಲೇನು !?ಪ್ರವೀಣ್ ಚಕ್ರವರ್ತಿಯ ಮುಂದಿರುವುದು ಕೇವಲ ಒಂದು ರಾಜಕೀಯ ಬಿಕ್ಕಟ್ಟಿನ ಪರಿಹಾರವಲ್ಲ. ಅವರ ಮುಂದಿರುವ ಮೂರು ಹಂತದ ಪರೀಕ್ಷೆ ಏನೆಂದರೆ, ಮೊದಲನೆಯದು — ವಿಜಯ್ ಸರ್ಕಾರವನ್ನು ಉಳಿಸುವುದು.ಎರಡನೆಯದು — ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವದ ಹಕ್ಕನ್ನು ಕಾಪಾಡುವುದು. ಮೂರನೆಯದು — VCK, ಎಡಪಕ್ಷಗಳು ಮತ್ತು ಇತರ ದೋಸ್ತಿಗಳೊಂದಿಗೆ ಕನಿಷ್ಠ ಸಮನ್ವಯ ಕಾಪಾಡಿಕೊಳ್ಳುವುದಾಗಿದೆ. ಇದರಲ್ಲಿ ಯಾವುದಾದರೂ ಒಂದು ವಿಫಲವಾದರೂ ಪರಿಣಾಮ ತಮಿಳುನಾಡಿನ ಸರ್ಕಾರದ ಮೇಲೆ ಬೀಳುತ್ತದೆ.

ಆದ್ದರಿಂದ ಈಗ ಪ್ರವೀಣ್ ಚಕ್ರವರ್ತಿ ಮಾಡಬೇಕಾದ ರಾಜಕೀಯವೆಂದರೆ ವಿಜಯ್ ವಿರುದ್ಧ ಹೇಳಿಕೆ ನೀಡುವುದಲ್ಲ; ವಿಜಯ್ ಮತ್ತು ಕಾಂಗ್ರೆಸ್ ಎರಡೂ ಸೋಲದಂತಹ ರಾಜಕೀಯ ಸೂತ್ರವನ್ನು ರೂಪಿಸುವುದು. 2029ರ ಪ್ರಧಾನಿ ಯಾರು ಎಂಬುದನ್ನು 2026ರಲ್ಲೇ ನಿರ್ಧರಿಸಲು ಪ್ರಯತ್ನಿಸುವುದು ಎರಡೂ ಪಕ್ಷಗಳಿಗೆ ಅಪಾಯಕಾರಿ.

ಏಕೆಂದರೆ ರಾಜಕೀಯದಲ್ಲಿ ಪೋಸ್ಟರ್ ಹಾಕುವುದು ಸುಲಭ. 272 ಸಂಸದರನ್ನು ಒಗ್ಗೂಡಿಸುವುದು ಅಷ್ಟು ಸುಲಭವಲ್ಲ. ಮತ್ತು ತಮಿಳುನಾಡಿನಲ್ಲಿ ಐದು ವರ್ಷದ ಸರ್ಕಾರವನ್ನು ಉಳಿಸಿಕೊಳ್ಳುವುದು—ಅದಕ್ಕಿಂತಲೂ ಕಷ್ಟ. ಬಹುಶ, ಟಿವಿಕೆ, ಕಾಂಗ್ರೆಸ್ ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. 

- ಶ್ರೀರಾಜ್‌ ವಕ್ವಾಡಿ 

No comments:

Post a Comment