ಪ್ರಜಾಸೇವೆ ಇಲಾಖೆ, ಜನರ ಬಳಿಗೆ ಸರ್ಕಾರವೋ, ಸರ್ಕಾರದ ಬಳಿಗೆ ಜನರೋ? ಸೆಪ್ಟೆಂಬರ್ 5ರಿಂದ ರಾಜ್ಯದಲ್ಲಿ ‘ಪ್ರಜಾಸೇವೆ ಇಲಾಖೆ’ ಆರಂಭವಾಗಲಿದೆ ಎಂಬ ಘೋಷಣೆ, ಮೇಲ್ನೋಟಕ್ಕೆ ಜನರ ಸಮಸ್ಯೆಗಳನ್ನು ಸರ್ಕಾರದ ಬಾಗಿಲಿಗೆ ತಂದು ನಿಲ್ಲಿಸುವ ಬದಲು ಸರ್ಕಾರವೇ ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನದಂತೆ ಕಾಣುತ್ತದೆ. ಜಿಲ್ಲಾ ಸಚಿವರು ತಿಂಗಳಿಗೆ ಎರಡು ದಿನ ಜನರ ಸಮಸ್ಯೆಗಳನ್ನು ಆಲಿಸಬೇಕು, ಶಾಸಕರು ತಿಂಗಳಿಗೆ ನಾಲ್ಕು ದಿನ ಪಂಚಾಯಿತಿ ಮಟ್ಟದಲ್ಲಿ ಜನರೊಂದಿಗೆ ಸಂವಾದ ನಡೆಸಬೇಕು, ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು ಎಂಬ ಉದ್ದೇಶ ನಿಸ್ಸಂದೇಹವಾಗಿ ಸ್ವಾಗತಾರ್ಹ. ಆದರೆ, ಜನಸೇವೆ ಎಂಬ ಹೆಸರಿನ ಯೋಜನೆ ನಿಜಕ್ಕೂ ಜನರ ಅಧಿಕಾರವನ್ನು ಹೆಚ್ಚಿಸುತ್ತದೆಯೇ? ಅಥವಾ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ರಾಜಕೀಯಗೊಳಿಸುವ ಮತ್ತೊಂದು ವೇದಿಕೆಯಾಗುತ್ತದೆಯೇ?ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯ.
ನೋಡಿ, ಜನರ ಸಮಸ್ಯೆಗಳನ್ನು ಆಲಿಸುವುದಕ್ಕೆ ಸಭೆಗಳನ್ನು ನಡೆಸುವುದು ಮಾತ್ರ ಸಾಕಾಗುವುದಿಲ್ಲ. ಸಮಸ್ಯೆಗಳನ್ನು ದಾಖಲಿಸುವುದು, ಅವುಗಳಿಗೆ ಕಾಲಮಿತಿ ನಿಗದಿಪಡಿಸುವುದು, ಪರಿಹಾರವಾಗದಿದ್ದರೆ ಕಾರಣವನ್ನು ಸಾರ್ವಜನಿಕಗೊಳಿಸುವುದು ಮತ್ತು ಅಧಿಕಾರಿಗಳ ಹೊಣೆಗಾರಿಕೆಯನ್ನು ಖಚಿತಪಡಿಸುವ ವ್ಯವಸ್ಥೆಯೂ ಬೇಕು. ಇಲ್ಲದಿದ್ದರೆ ‘ಜನತಾ ದರ್ಬಾರ್’ಗಳು ಜನರ ಅಸಮಾಧಾನವನ್ನು ತಾತ್ಕಾಲಿಕವಾಗಿ ತಣಿಸುವ ರಾಜಕೀಯ ಕಾರ್ಯಕ್ರಮಗಳಾಗಿ ಮಾತ್ರ ಉಳಿಯುವ ಅಪಾಯವಿದೆ. ಶಾಸಕರು ಜನರ ಬಳಿಗೆ ಹೋಗುವುದು ಒಳ್ಳೆಯದು; ಆದರೆ ಅಧಿಕಾರ ಯಾರ ಕೈಯಲ್ಲಿರುಯತ್ತದೆ ? ಶಾಸಕರು ತಿಂಗಳಿಗೆ ನಾಲ್ಕು ದಿನ ಪಂಚಾಯಿತಿ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂಬ ಪ್ರಸ್ತಾಪ ವಿಕೇಂದ್ರೀಕರಣದ ದೃಷ್ಟಿಯಿಂದ ಮಹತ್ವದ್ದಾಗಿದೆ. ಆದರೆ ಶಾಸಕರು ಹೋಗದಿದ್ದರೆ ಅಧಿಕಾರಿಗಳು ಜನರ ಬಳಿಗೆ ಹೋಗಬೇಕು ಎಂಬ ಅಂಶ ಇನ್ನೂ ಮುಖ್ಯ. ಇಲ್ಲಿ ಒಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ. ಜನರ ಸಮಸ್ಯೆ ಪರಿಹಾರವಾಗಬೇಕಾದದ್ದು ಶಾಸಕರ ಶಿಫಾರಸಿನಿಂದಲೋ, ಅಥವಾ ಕಾನೂನುಬದ್ಧ ಆಡಳಿತಾತ್ಮಕ ಪ್ರಕ್ರಿಯೆಯ ಮೂಲಕವೋ? ಜನರಿಗೆ ಸೇವೆ ಪಡೆಯಲು ರಾಜಕೀಯ ಪ್ರತಿನಿಧಿಯ ಶಿಫಾರಸು ಅಗತ್ಯವಾಗುವ ಪರಿಸ್ಥಿತಿ ನಿರ್ಮಾಣವಾದರೆ, ಅದು ಪ್ರಜಾಸತ್ತಾತ್ಮಕ ಆಡಳಿತದ ಬಲವರ್ಧನೆ ಅಲ್ಲ; ಬದಲಾಗಿ ಅಧಿಕಾರದ ಮಧ್ಯವರ್ತಿ ವ್ಯವಸ್ಥೆಯನ್ನು ಬಲಪಡಿಸುವ ದುರಂತವಾಗಬಹುದು. ಆದ್ದರಿಂದ ಪ್ರಜಾಸೇವೆ ಇಲಾಖೆಯ ಯಶಸ್ಸಿನ ಮಾನದಂಡ, ಎಷ್ಟು ಜನ ಶಾಸಕರನ್ನು ಭೇಟಿ ಮಾಡಿದರು ಎಂಬುದಲ್ಲ. ಎಷ್ಟು ಜನರು ಯಾವುದೇ ರಾಜಕೀಯ ಶಿಫಾರಸಿಲ್ಲದೆ ತಮ್ಮ ಹಕ್ಕಿನ ಸೇವೆಯನ್ನು ಪಡೆದುಕೊಂಡರು ಎಂಬುದಾಗಬೇಕು. ಇನ್ನು, ನಿವೇಶನದ ಬಗ್ಗೆ ಸಭೆಯಲ್ಲಿ ಸಿಎಂ ಡಿಕೆಶಿ ಪ್ರಸ್ತಾಪಿಸಿದ್ದಾರೆ. ಆ ನಿವೇಶನ ನಿಜವಾದ ಬಡವನಿಗೆ ಸಿಗುತ್ತದೆಯೇ? ನಿವೇಶನ ರಹಿತರಿಗೆ ನಿವೇಶನ ನೀಡಲು ವಿಶೇಷ ಕಾರ್ಯಕ್ರಮ ರೂಪಿಸಿರುವುದು ಸ್ವಾಗತಾರ್ಹ. ಆದರೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುವಾಗ ಸೂಕ್ತ ದಾಖಲೆಗಳನ್ನು ಕಡ್ಡಾಯಗೊಳಿಸುವುದು ಮತ್ತು ಈಗಾಗಲೇ ನಿವೇಶನ ಹೊಂದಿರುವವರು ಮತ್ತೆ ಅರ್ಜಿ ಸಲ್ಲಿಸದಂತೆ ತಡೆಯುವುದು ಅತ್ಯಗತ್ಯ. ಇಲ್ಲಿ ಸರ್ಕಾರ ಎಚ್ಚರಿಕೆ ವಹಿಸಬೇಕಾದ ಮತ್ತೊಂದು ಸಂಗತಿಯಿದೆ. ಗ್ರಾಮೀಣ ಪ್ರದೇಶದ ಭೂರಹಿತರು, ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಹಾಗೂ ದಾಖಲೆ ವ್ಯವಸ್ಥೆಯಿಂದ ಹೊರಗುಳಿದ ಕುಟುಂಬಗಳಿಗೆ ದಾಖಲೆಗಳ ಕೊರತೆಯೇ ದೊಡ್ಡ ಅಡೆತಡೆಯಾಗಿರಬಹುದು. ಹೀಗಾಗಿ ‘ದಾಖಲೆ ಇಲ್ಲ’ ಎಂಬ ಕಾರಣಕ್ಕೆ ಅರ್ಹ ಬಡವರನ್ನು ಹೊರಗಿಡದೆ, ದಾಖಲೆ ಪರಿಶೀಲನೆಗೆ ನೆರವಾಗುವ ವ್ಯವಸ್ಥೆಯನ್ನೂ ಸರ್ಕಾರ ನಿರ್ಮಿಸಬೇಕು. ಇಲ್ಲದಿದ್ದರೆ ನಿವೇಶನ ಯೋಜನೆ ನಿಜವಾದ ನಿವೇಶನ ರಹಿತರಿಗಿಂತ ದಾಖಲೆಗಳನ್ನು ಸರಿಯಾಗಿ ಹೊಂದಿರುವವರಿಗೆ ಹೆಚ್ಚು ಅನುಕೂಲ ಮಾಡುವ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಬಹುದು.
ಗೃಹಜ್ಯೋತಿ, ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆ ಎಂದರೆ ಏನು? ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳನ್ನು ಮರುಪರಿಶೀಲಿಸಬೇಕು ಎಂಬ ಸಿಎಂ ಡಿಕೆಶಿ ಅವರ ಪ್ರಸ್ತಾಪವೂ ಗಮನಾರ್ಹ. ಆದರೆ ‘ಮರುಪರಿಶೀಲನೆ’ ಎಂಬ ಪದಕ್ಕೆ ಸ್ಪಷ್ಟವಾದ ಅರ್ಥ ಬೇಕಾಗಿದೆ. ಅದು ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಗಳ ಸೋರಿಕೆಯನ್ನು ತಡೆಯುವುದೇ? ಅಥವಾ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನವೇ? ಫಲಾನುಭವಿಗಳ ದೂರವಾಣಿ ಸಂಖ್ಯೆಯನ್ನೇ ಬಳಸುವುದು, ಮೂರನೇ ವ್ಯಕ್ತಿಯ ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಜೋಡಣೆಗೆ ಅವಕಾಶ ನೀಡದಿರುವುದು ಪಾರದರ್ಶಕತೆಯ ದೃಷ್ಟಿಯಿಂದ ಅಗತ್ಯವಾಗಬಹುದು. ಆದರೆ ಡಿಜಿಟಲ್ ವ್ಯವಸ್ಥೆಯಿಂದ ಹೊರಗುಳಿದಿರುವ ಬಡ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲದಿದ್ದರೆ, ತಂತ್ರಜ್ಞಾನವೇ ಈ ಸಮಾಜ ಕಲ್ಯಾಣದ ಹೆಸರಿನಲ್ಲಿ ನೀಡುತ್ತಿರುವ ಕಾಂಗ್ರೆಸ್ ಗ್ಯಾರಂಟಿಗಳ ಬಾಗಿಲಿಗೆ ಬೀಗ ಹಾಕಬಹುದು. ಆದ್ದರಿಂದ ಡಿಜಿಟಲ್ ಪರಿಶೀಲನೆಯ ಜೊತೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಹಾಯ ಕೇಂದ್ರಗಳು, ಆಫ್‌ಲೈನ್ ಪರಿಶೀಲನೆ ಮತ್ತು ದೂರು ಪರಿಹಾರ ವ್ಯವಸ್ಥೆಯೂ ಇರಬೇಕು. ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಬಗ್ಗೆಯೂ ಕೂಡ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ. ಇದು ಜನರ ಸಮಿತಿಯೋ, ಪಕ್ಷದ ಸಮಿತಿಯೋ? ಎನ್ನುವ ಪ್ರಶ್ನೆಯನ್ನು ಮುನ್ನೆಲೆಗೆ ತರಿಸಿದೆ. ಪಂಚಾಯಿತಿ ಮಟ್ಟದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸುವ ಪ್ರಸ್ತಾಪವೇ ಅತ್ಯಂತ ಸೂಕ್ಷ್ಮವಾದ ಅಂಶ. ಶಾಸಕರು ಸಮಿತಿ ರಚಿಸಬೇಕು; ರಚಿಸದಿದ್ದರೆ ಸರ್ಕಾರವೇ ಸಮಿತಿ ರಚಿಸುತ್ತದೆ ಎಂಬ ನಿಲುವು ಆಡಳಿತಾತ್ಮಕ ದೃಷ್ಟಿಯಿಂದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಲು ಸಮಿತಿ ಬೇಕು. ಆದರೆ ಆ ಸಮಿತಿಯ ಸದಸ್ಯರು ರಾಜಕೀಯವಾಗಿ ಆಯ್ಕೆಯಾದವರಾಗಿದ್ದರೆ, ಅದು ಜನರ ಮೇಲ್ವಿಚಾರಣಾ ಸಮಿತಿಯಾಗುತ್ತದೆಯೇ ಅಥವಾ ಆಡಳಿತ ಪಕ್ಷದ ಸ್ಥಳೀಯ ವಿಸ್ತರಣೆಯಾಗುತ್ತದೆಯೇ? ಇದು ಕೇವಲ ಈ ಸರ್ಕಾರಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಇದೇ ಪ್ರಶ್ನೆ ಅನ್ವಯಿಸುತ್ತದೆ. ಪ್ರಜಾಸೇವೆ ಎಂದರೆ ಅಧಿಕಾರದಲ್ಲಿರುವ ಪಕ್ಷದ ಕಾರ್ಯಕರ್ತರಿಗೆ ಮತ್ತೊಂದು ಅಧಿಕೃತ ವೇದಿಕೆ ಸೃಷ್ಟಿಸುವುದಲ್ಲ. ಬದಲಾಗಿ ಗ್ರಾಮಸಭೆ, ಪಂಚಾಯಿತಿ, ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳಿಗೆ ನಿಜವಾದ ಮೇಲ್ವಿಚಾರಣಾ ಅವಕಾಶ ನೀಡುವ ವ್ಯವಸ್ಥೆಯಾಗಬೇಕು. ಇನ್ನು, ʼಪ್ರಜಾಸೇವೆ’ ಎಂಬ ಹೆಸರಿಗಿಂತ ಅದರ ಸ್ವರೂಪ ಮುಖ್ಯ.
ಒಂದು ಇಲಾಖೆಗೆ ‘ಪ್ರಜಾಸೇವೆ’ ಎಂದು ಹೆಸರಿಟ್ಟ ಮಾತ್ರಕ್ಕೆ ಅದು ಪ್ರಜಾಪರ ಇಲಾಖೆಯಾಗುವುದಿಲ್ಲ. ಅದರ ಕಾರ್ಯವಿಧಾನವೇ ಅದನ್ನು ನಿರ್ಧರಿಸುತ್ತದೆ. ಜನರು ಅಧಿಕಾರಿಗಳನ್ನು ಭೇಟಿ ಮಾಡಲು ಎಷ್ಟು ದಿನ ಕಾಯಬೇಕು? ದೂರು ದಾಖಲಾದ ನಂತರ ಎಷ್ಟು ದಿನದಲ್ಲಿ ಪರಿಹಾರವಾಗಬೇಕು? ಪರಿಹಾರವಾಗದಿದ್ದರೆ ಯಾರನ್ನು ಹೊಣೆಗಾರರನ್ನಾಗಿಸಬೇಕು ? ಯೋಜನೆಯ ಫಲಾನುಭವಿಗಳ ಆಯ್ಕೆ ಹೇಗೆ ನಡೆಯಬೇಕು? ರಾಜಕೀಯ ಶಿಫಾರಸಿಗೆ ಎಷ್ಟು ಅವಕಾಶವಿದೆ? ದೂರು ನೀಡಿದ ವ್ಯಕ್ತಿಗೆ ತನ್ನ ಅರ್ಜಿಯ ಸ್ಥಿತಿ ತಿಳಿಯುವ ವ್ಯವಸ್ಥೆ ಇದೆಯೇ?ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಮೇಲ್ಮನವಿ ವ್ಯವಸ್ಥೆ ಇದೆಯೇ? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಾಗ ಮಾತ್ರ ಪ್ರಜಾಸೇವೆ ಇಲಾಖೆ ಅರ್ಥಪೂರ್ಣವಾಗುತ್ತದೆ. “ಪ್ರಜಾಸೇವೆ ಇಲಾಖೆ ಪ್ರಜಾಸೇವೆಗಾಗಿಯೇ ಆಗಲಿ; ಪ್ರಭುತ್ವದ ಹಿತಾಸಕ್ತಿ ಕಾಯುವ ಇಲಾಖೆ ಆಗದಿರಲಿ.” ಈ ಎಚ್ಚರಿಕೆ ಇಂದಿನ ಸರ್ಕಾರಕ್ಕೆ ಮಾತ್ರವಲ್ಲ, ನಾಳೆ ಅಂದರೇ, ಮುಂದೆ ಅಧಿಕಾರಕ್ಕೆ ಬರುವ ಪ್ರತಿಯೊಂದು ಸರ್ಕಾರಕ್ಕೂ ಅನ್ವಯಿಸುತ್ತದೆ. ಜನರ ಸಮಸ್ಯೆಗಳನ್ನು ಕೇಳುವ ವೇದಿಕೆಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ. ಆದರೆ ಅದೇ ವೇದಿಕೆಗಳು ರಾಜಕೀಯ ನಿಷ್ಠೆ, ಶಿಫಾರಸು ಮತ್ತು ಅಧಿಕಾರದ ಮಧ್ಯವರ್ತಿತನಕ್ಕೆ ದಾರಿ ಮಾಡಿಕೊಟ್ಟರೆ ಅವು ಜನಸೇವೆಯ ಬದಲು ಪ್ರಭುತ್ವದ ವಿಸ್ತರಣಾ ಸಾಧನಗಳಾಗಿ ಬದಲಾಗುತ್ತವೆ. ಹೀಗಾಗಿ ಪ್ರಜಾಸೇವೆ ಇಲಾಖೆಯ ನಿಜವಾದ ಪರೀಕ್ಷೆ ಸೆಪ್ಟೆಂಬರ್ 5ರಂದು ಉದ್ಘಾಟನೆಯಾಗುವ ದಿನ ನಡೆಯುವುದಿಲ್ಲ.
ಒಬ್ಬ ಬಡ ಕುಟುಂಬದ ಅರ್ಜಿ ಯಾವುದೇ ರಾಜಕೀಯ ಶಿಫಾರಸಿಲ್ಲದೆ ಪರಿಹಾರವಾದ ದಿನ, ನಿವೇಶನ ರಹಿತನಿಗೆ ನಿಜವಾಗಿ ನಿವೇಶನ ಸಿಕ್ಕ ದಿನ, ಗೃಹಲಕ್ಷ್ಮಿಯ ಹಣ ಮಧ್ಯವರ್ತಿಯಿಲ್ಲದೆ ಫಲಾನುಭವಿಯ ಖಾತೆಗೆ ಸೇರಿದ ದಿನ, ಮತ್ತು ಒಬ್ಬ ಸಾಮಾನ್ಯ ನಾಗರಿಕನು ಅಧಿಕಾರದ ಮುಂದೆ ತಲೆಬಾಗದೆ ತನ್ನ ಹಕ್ಕನ್ನು ಪಡೆದುಕೊಂಡ ದಿನ—ಅಂದು ಪ್ರಜಾಸೇವೆ ಇಲಾಖೆ ನಿಜವಾಗಿ ಜನರ ಇಲಾಖೆಯಾಗಿದೆ ಎಂದು ಹೇಳಬಹುದು. ಅಲ್ಲಿಯವರೆಗೆ, ಈ ಹೊಸ ವ್ಯವಸ್ಥೆಯನ್ನು ಸ್ವಾಗತಿಸುವುದರ ಜೊತೆಗೆ ಅದರ ಮೇಲೂ ಜನರ ಕಣ್ಣಿರಬೇಕು. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಜನರ ಬಳಿಗೆ ಬರುವುದು ಮುಖ್ಯ; ಆದರೆ ಅದಕ್ಕಿಂತ ಮುಖ್ಯವಾಗಿ, ಜನರೇ ಸರ್ಕಾರದ ಮೇಲೆ ನಿಗಾ ಇಡುವ ಅಧಿಕಾರವನ್ನು ಕಳೆದುಕೊಳ್ಳಬಾರದು ಎನ್ನುವುದು ಇಲ್ಲಿ ಮುಖ್ಯಾಂಶ.
- ಶ್ರೀರಾಜ್ ವಕ್ವಾಡಿ
Friday, September 4, 2026
ಪ್ರಜಾಸೇವೆ ಇಲಾಖೆ, ಜನರ ಬಳಿಗೆ ಸರ್ಕಾರವೋ, ಸರ್ಕಾರದ ಬಳಿಗೆ ಜನರೋ?
Subscribe to:
Post Comments (Atom)
No comments:
Post a Comment