ಬಿಸಿಲು ತಲೆ ಸುಡುತ್ತಿದೆ. 11.7 ಕೋಟಿ ಭಾರತೀಯರ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಬೀರಿದೆ. ಹವಾಮಾನ ಬದಲಾವಣೆ ಇನ್ನು ಭವಿಷ್ಯದ ಎಚ್ಚರಿಕೆಯಲ್ಲ; ಅದು ಭಾರತದ ಕೋಟ್ಯಂತರ ಜನರ ದೈನಂದಿನ ಬದುಕಿನ ಮೇಲೆ ಬಿದ್ದಿರುವ ಹವಾಮಾನದ ಬಿಕ್ಕಟ್ಟು. ಚರ್ಚೆ ಮಾಡ್ಬೇಕಿದೆ.
‘ಕ್ಲೈಮೇಟ್ ಸೆಂಟ್ರಲ್’ನ ಹೊಸ ವಿಶ್ಲೇಷಣೆ, ಭಾರತದ ಅಭಿವೃದ್ಧಿ ಮಾದರಿ, ನಗರೀಕರಣ, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. 2026ರ ಜೂನ್‌ನಿಂದ ಆಗಸ್ಟ್‌ವರೆಗೆ ಭಾರತದಲ್ಲಿ ಸುಮಾರು 11.7 ಕೋಟಿ ಜನರು ಕನಿಷ್ಠ 30 ದಿನಗಳ ಕಾಲ ಹವಾಮಾನ ಬದಲಾವಣೆಯಿಂದ ಹೆಚ್ಚಾಗಿ ಸಂಭವಿಸುವ ಅಪಾಯಕಾರಿ ಬಿಸಿಲಿಗೆ ಒಳಗಾಗಿದ್ದಾರೆ. ಜಗತ್ತಿನ ಯಾವುದೇ ದೇಶಕ್ಕಿಂತ ಈ ಪ್ರಮಾಣ ಭಾರತದಲ್ಲೇ ಹೆಚ್ಚಾಗಿದೆ. ಚೀನಾದಲ್ಲಿ ಸುಮಾರು 9.4 ಕೋಟಿ ಹಾಗೂ ಇಂಡೋನೇಷ್ಯಾದಲ್ಲಿ 8.3 ಕೋಟಿ ಜನರು ಇದೇ ರೀತಿಯ ಅಪಾಯಕ್ಕೆ ಒಳಗಾಗಿದ್ದಾರೆ. ಜಾಗತಿಕವಾಗಿ 150 ಕೋಟಿಗೂ ಹೆಚ್ಚು ಜನರು ಕನಿಷ್ಠ ಒಂದು ತಿಂಗಳ ಕಾಲ ಹವಾಮಾನ ಬದಲಾವಣೆಯಿಂದ ಅಪಾಯಕಾರಿ ಬಿಸಿಲನ್ನು ಎದುರಿಸಿದ್ದಾರೆ. ಇದು ಕೇವಲ ತಾಪಮಾನ ಏರಿಕೆಯ ಅಂಕಿ-ಅಂಶವಲ್ಲ. ಯಾರು ಬಿಸಿಲಿನಲ್ಲಿ ಕೆಲಸ ಮಾಡುತ್ತಾರೆ, ಯಾರ ಮನೆಯಲ್ಲಿ ಕೂಲಿಂಗ್ದ ಸಿಸ್ಟಮ್ ಸೌಲಭ್ಯವಿದೆ, ಯಾರಿಗೆ ಶುದ್ಧ ನೀರು ಸಿಗುತ್ತದೆ, ಯಾರಿಗೆ ಶೀಘ್ರದಲ್ಲೇ ಆಸ್ಪತ್ರೆಯ ಸೌಲಭ್ಯ ಒದಗುತ್ತಿದೆ ಎಂಬ ಪ್ರಶ್ನೆಗಳೂ ಇಲ್ಲಿದೆ. ನೋಡಿ, ಕಚೇರಿಯ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು 40 ಡಿಗ್ರಿ ತಾಪಮಾನವನ್ನು ಅನುಭವಿಸುವ ವ್ಯಕ್ತಿ ಮತ್ತು ನಿರ್ಮಾಣ ಕಾಮಗಾರಿ, ರಸ್ತೆ ನಿರ್ಮಾಣ, ಕೃಷಿ ಅಥವಾ ಸರಕು ಸಾಗಣೆ ಕೆಲಸದಲ್ಲಿ ಗಂಟೆಗಟ್ಟಲೆ ಬಿಸಿಲಿನಲ್ಲಿ ದುಡಿಯುವ ಕಾರ್ಮಿಕ—ಇವರಿಬ್ಬರಿಗೂ ಒಂದೇ ತಾಪಮಾನ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ.
ಹವಾಮಾನ ಬದಲಾವಣೆ ಒಂದು ಸಾಮಾಜಿಕ ಅಸಮಾನತೆಯನ್ನು ವಿಸ್ತರಿಸುವ ಶಕ್ತಿಯೂ ಆಗಿಯೂ ಪರಿವರ್ತನೆಯಾಗುತ್ತಿದೆ. ಆದಾಯ ಕಡಿಮೆ ಇರುವ ಕುಟುಂಬಗಳಿಗೆ ಉತ್ತಮ ಗಾಳಿ ಆಡುವ ಮನೆ, ಪರಿಣಾಮಕಾರಿ ಕೂಲಿಂಗ್ ವ್ಯವಸ್ಥೆ, ನಿರಂತರ ವಿದ್ಯುತ್, ಸಾಕಷ್ಟು ಕುಡಿಯುವ ನೀರು ಮತ್ತು ಖಾಸಗಿ ಆರೋಗ್ಯ ಸೇವೆ ಸುಲಭವಾಗಿ ಲಭ್ಯವಾಗುವುದಿಲ್ಲ. ಹೀಗಾಗಿ ಬಿಸಿಲಿನ ಹೊಡೆತ ದೇಹದ ಮೇಲೆ ಬೀಳುವುದರ ಜೊತೆಗೆ ಮನೆಯ ಆರ್ಥಿಕತೆಯ ಮೇಲೂ ಬೀಳುತ್ತದೆ. ಒಬ್ಬ ದಿನಗೂಲಿ ಕಾರ್ಮಿಕ ತೀವ್ರ ಬಿಸಿಲಿನಿಂದ ಕೆಲಸದ ಅವಧಿಯನ್ನು ಕಡಿಮೆ ಮಾಡಿದರೆ ಆದಾಯ ಕಡಿಮೆಯಾಗುತ್ತದೆ. ಕೆಲಸ ಮುಂದುವರಿಸಿದರೆ ಆರೋಗ್ಯದ ಅಪಾಯ ಹೆಚ್ಚುತ್ತದೆ. ಅಂದರೆ ಬಡ ಕುಟುಂಬದ ಮುಂದೆ ‘ಆರೋಗ್ಯವೇ ಅಥವಾ ಆದಾಯವೇ?’ ಎಂಬ ಅಸಹಜ ಆಯ್ಕೆ ಎದುರಾಗುತ್ತದೆ. ಇನ್ನು, 0.7 ಡಿಗ್ರಿ ಎನ್ನುವುದು ಸಣ್ಣ ಸಂಖ್ಯೆಯ ಅಂಕಿಅಂಶ ಅಲ್ಲ. 2026ರ ಜೂನ್–ಆಗಸ್ಟ್ ಅವಧಿಯಲ್ಲಿ ಭಾರತದ ಸರಾಸರಿ ತಾಪಮಾನವು 1991–2020ರ ಸರಾಸರಿಗಿಂತ 0.7 ಡಿಗ್ರಿ ಸೆಲ್ಸಿಯಸ್ ಹೆಚ್ಚಿತ್ತು. ಇದೇ ಸಂದರ್ಭದಲ್ಲಿ ಸರಾಸರಿ ಭಾರತೀಯನಿಗೆ ಸುಮಾರು 39 ದಿನಗಳ ಕಾಲ ತಾಪಮಾನದಲ್ಲಿ ಹವಾಮಾನ ಬದಲಾವಣೆಯ ಬಲವಾದ ಪ್ರಭಾವ ಕಂಡುಬಂದಿದೆ ಎಂದು ವಿಶ್ಲೇಷಣೆ ಹೇಳುತ್ತದೆ. 0.7 ಡಿಗ್ರಿ’ ಎನ್ನುವುದು ಒಂದು ಸಣ್ಣ ಅಂಕಿ ಅಂಶದಂತೆ ಕಾಣಬಹುದು. ಆದರೆ ಇಡೀ ದೇಶದ ಸರಾಸರಿ ತಾಪಮಾನದಲ್ಲಿ ಇಂತಹ ಏರಿಕೆ ಎಂದರೆ ತೀವ್ರ ಬಿಸಿಲಿನ ಘಟನೆಗಳು ಹೆಚ್ಚು ಸಂಭವಿಸುವ ಸಾಧ್ಯತೆ, ದೀರ್ಘಾವಧಿಯ ಉಷ್ಣ ಒತ್ತಡ ಮತ್ತು ಆರೋಗ್ಯದ ಮೇಲಿನ ಹೆಚ್ಚುವರಿ ಹೊರೆ ಎನ್ನುವುದು ಇಲ್ಲಿ ಮುಖ್ಯಾಂಶ. ಇದಕ್ಕೆ ಮತ್ತೊಂದು ವೈಜ್ಞಾನಿಕ ಅಧ್ಯಯನವೂ ಹಿನ್ನೆಲೆಯನ್ನು ನೀಡುತ್ತದೆ. 1981ರಿಂದ 2020ರವರೆಗೆ ಭಾರತದ ಬೇಸಿಗೆಯ ಗರಿಷ್ಠ ತಾಪಮಾನ ಸರಾಸರಿ ಸುಮಾರು 1 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ದು, ಅದಕ್ಕೆ ಜಾಗತಿಕ ತಾಪಮಾನ ಏರಿಕೆ ಪ್ರಮುಖ ಕಾರಣವಾಗಿದೆ ಎಂದು 2026ರಲ್ಲಿ ಪ್ರಕಟವಾದ Scientific Reports ಅಧ್ಯಯನ ಹೇಳಿದೆ. ಇದೇ ಸಂದರ್ಭದಲ್ಲಿ ತೀವ್ರ ಬಿಸಿಗಾಳಿಯ ಹಾಟ್‌ಸ್ಪಾಟ್‌ಗಳ ವ್ಯಾಪ್ತಿಯೂ ಗಣನೀಯವಾಗಿ ವಿಸ್ತರಿಸಿದೆ ಎಂದು ಅಧ್ಯಯನ ಕಂಡುಕೊಂಡಿದೆ.
ಇನ್ನು, ಕ್ಲೈಮೇಟ್ ಸೆಂಟ್ರಲ್ ವಿಶ್ಲೇಷಣೆಯಲ್ಲಿನ ನಗರಗಳ ಅಂಕಿ-ಅಂಶಗಳು ವಿಶೇಷವಾಗಿ ಗಮನಾರ್ಹ. ಶ್ರೀನಗರದಲ್ಲಿ 53 ಅಪಾಯಕಾರಿ ಬಿಸಿಲಿನ ದಿನಗಳು, ಚೆನ್ನೈನಲ್ಲಿ 40, ರಾಜಕೋಟ್ ಮತ್ತು ಅಮೃತಸರದಲ್ಲಿ ತಲಾ 29, ಲಖನೌನಲ್ಲಿ 27 ದಿನಗಳು ದಾಖಲಾಗಿವೆ. ಚೆನ್ನೈನಲ್ಲಿ 40 ಅಪಾಯಕಾರಿ ಬಿಸಿಲಿನ ದಿನಗಳ ಪೈಕಿ 30 ದಿನಗಳು ಹವಾಮಾನ ಬದಲಾವಣೆಯಿಂದ ಹೆಚ್ಚಾಗಿ ಸಂಭವಿಸುವಂತಾಗಿದ್ದವು. ಶ್ರೀನಗರದಲ್ಲಿಯೂ 53 ಅಪಾಯಕಾರಿ ದಿನಗಳಲ್ಲಿ 29 ದಿನಗಳಿಗೆ ಹವಾಮಾನ ಬದಲಾವಣೆಯ ಬಲವಾದ ಕೊಡುಗೆ ಕಂಡುಬಂದಿದೆ.
ಇನ್ನು, ಈ ಬಿಸಿಲಿನ ತಾಪಮಾನ ಎಂದರೆ ಕೇವಲ ರಾಜಸ್ಥಾನ, ಗುಜರಾತ್ ಅಥವಾ ಉತ್ತರ ಭಾರತದ ಬಿಸಿಲು ಹೆಚ್ಚಿರುವ ಪ್ರದೇಶಗಳ ಸಮಸ್ಯೆಯಲ್ಲ. ಹಿಮಾಲಯದ ಕಣಿವೆಗಳಲ್ಲೂ, ಕರಾವಳಿ ಪ್ರದೇಶಗಳಲ್ಲೂ, ದಕ್ಷಿಣ ಭಾರತದ ನಗರಗಳಲ್ಲೂ ಉಷ್ಣ ಒತ್ತಡದ ಸ್ವರೂಪ ಬದಲಾಗುತ್ತಿದೆ. ಹವಾಮಾನ ಬದಲಾವಣೆಯ ಪರಿಣಾಮ ಎಲ್ಲೆಡೆ ಒಂದೇ ರೀತಿಯಲ್ಲಿ ಕಾಣಿಸುವುದಿಲ್ಲ. ಎಲ್ಲೋ ತಾಪಮಾನ ಹೆಚ್ಚಾಗುತ್ತದೆ; ಎಲ್ಲೋ ಆರ್ದ್ರತೆ ಸಮಸ್ಯೆಯನ್ನು ಗಂಭೀರಗೊಳಿಸುತ್ತದೆ; ಮತ್ತೊಂದೆಡೆ ಮಳೆ ಮತ್ತು ತಾಪಮಾನ ಎರಡರ ಅಸ್ಥಿರತೆ ಜನಜೀವನವನ್ನು ಕಂಗೆಡಿಸುತ್ತದೆ. ಬಹಳ ಪ್ರಮಖವಾಗಿ ವಾಣಿಜ್ಯ ನಗರಿ, ಮುಂಬೈ ಕುರಿತು ಬಂದಿರುವ ಅಂಕಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ. ಜೂನ್–ಆಗಸ್ಟ್ ಅವಧಿಯಲ್ಲಿ86 ದಿನಗಳಲ್ಲಿ ತಾಪಮಾನಕ್ಕೆ ಹವಾಮಾನ ಬದಲಾವಣೆಯ ಬಲವಾದ ಪ್ರಭಾವ ಕಂಡುಬಂದಿದೆ. ಮುಂಬೈನಲ್ಲಿ 24 ದಿನಗಳು ‘ರಿಸ್ಕಿ ಹೀಟ್’ ಮಿತಿಯನ್ನು ತಲುಪಿದ್ದರೆ, ಅವುಗಳಲ್ಲಿ ನಾಲ್ಕು ದಿನಗಳನ್ನು ಮಾತ್ರ ಹವಾಮಾನ ಬದಲಾವಣೆಯಿಂದ ಹೆಚ್ಚಾಗಿ ಸಂಭವಿಸುವ ಅಪಾಯಕಾರಿ ಬಿಸಿಲಿನ ದಿನಗಳೆಂದು ಗುರುತಿಸಲಾಗಿದೆ. ಅಂದರೆ ಹವಾಮಾನ ಬದಲಾವಣೆಯ ಪ್ರಭಾವ ಮತ್ತು ಅಪಾಯಕಾರಿ ಬಿಸಿಲಿನ ದಿನ ಎಂದರೇ ಒಂದೇ ಅರ್ಥವಲ್ಲ. Climate Shift Index (CSI) ಸ್ಥಳೀಯವಾಗಿ ಸಾಮಾನ್ಯವಾಗಿದ್ದ ತಾಪಮಾನಕ್ಕೆ ಹೋಲಿಸಿದರೆ ನಿರ್ದಿಷ್ಟ ದಿನದ ತಾಪಮಾನ ಹವಾಮಾನ ಬದಲಾವಣೆಯಿಂದ ಎಷ್ಟು ಹೆಚ್ಚು ಸಂಭವನೀಯವಾಗಿದೆ ಎಂಬುದನ್ನು ಅಳೆಯುತ್ತದೆ. ‘ರಿಸ್ಕಿ ಹೀಟ್’ಗೆ ಸ್ಥಳೀಯ 1991–2020 ಅವಧಿಯ ತಾಪಮಾನ ವಿತರಣೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚಿನ ತಾಪಮಾನವನ್ನು ಮಾನದಂಡವಾಗಿ ಬಳಸಲಾಗಿದೆ. ತೀವ್ರ ಉಷ್ಣತೆ ಸಾರ್ವಜನಿಕ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ. ದೇಹದ ಉಷ್ಣ ನಿಯಂತ್ರಣ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚುತ್ತದೆ. ನೀರಿನ ಕೊರತೆ, ಉಷ್ಣಾಂಶ, ಹೃದಯ ಮತ್ತು ಉಸಿರಾಟ ಸಂಬಂಧಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ವೃದ್ಧರು, ಮಕ್ಕಳು, ಹೊರಾಂಗಣದಲ್ಲಿ ದುಡಿಯುವವರು ಮತ್ತು ಈಗಾಗಲೇ ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚು ಅಪಾಯದಲ್ಲಿರುತ್ತಾರೆ. ಭಾರತೀಯ ಹವಾಮಾನ ಇಲಾಖೆ ಕೂಡ 2026ರ ಜೂನ್‌ಗಾಗಿ ಹಲವು ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣತೆಯ ಸಾಧ್ಯತೆಯನ್ನು ಮುಂಚಿತವಾಗಿ ಸೂಚಿಸಿತ್ತು ಮತ್ತು ಬಿಸಿಗಾಳಿಯ ಪರಿಸ್ಥಿತಿಗಳು ಸಾರ್ವಜನಿಕ ಆರೋಗ್ಯ, ನೀರಿನ ಲಭ್ಯತೆ, ವಿದ್ಯುತ್ ಬಳಕೆ ಹಾಗೂ ಅಗತ್ಯ ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿತ್ತು.
ರಾಜ್ಯ ಸರ್ಕಾರಗಳು ಕೂಲಿಂಗ್ ಕೇಂದ್ರಗಳು, ಸುರಕ್ಷಿತ ಕುಡಿಯುವ ನೀರು, ಆರೋಗ್ಯ ಮೇಲ್ವಿಚಾರಣೆ ಮತ್ತು ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಸಿದ್ಧವಾಗಿಡಬೇಕೆಂದು ಸೂಚಿಸಲಾಗಿತ್ತು. ಆದರೆ ಬಿಸಿಲಿನ ವಿರುದ್ಧದ ಹೋರಾಟವನ್ನು ಕೇವಲ ‘ಹೀಟ್‌ವೇವ್ ಅಲರ್ಟ್’ಗೆ ಸೀಮಿತಗೊಳಿಸುವುದು ಸಾಕಾಗುವುದಿಲ್ಲ. ನೀರು, ವಿದ್ಯುತ್ ಮತ್ತು ನಗರ ಯೋಜನೆ—ಮೂರನ್ನೂ ಒಟ್ಟಿಗೆ ನೋಡಬೇಕು. ತಾಪಮಾನ ಏರಿದಂತೆ ಕೂಲಿಂಗ್ ಯಂತ್ರಗಳ ಬಳಕೆ ಹೆಚ್ಚುತ್ತದೆ. ವಿದ್ಯುತ್ ಬೇಡಿಕೆ ಹೆಚ್ಚುತ್ತದೆ. ನೀರಿನ ಬಳಕೆ ಹೆಚ್ಚುತ್ತದೆ. ಆದರೆ ನಗರಗಳ ಮೂಲಸೌಕರ್ಯ ಆ ಹೆಚ್ಚುವರಿ ಒತ್ತಡವನ್ನು ತಡೆದುಕೊಳ್ಳಲು ಸಿದ್ಧವಾಗಿಲ್ಲದಿದ್ದರೆ ಬಿಸಿಲಿನ ಸಮಸ್ಯೆ ಮತ್ತಷ್ಟು ಸಂಕೀರ್ಣವಾಗುತ್ತದೆ. ಅತಿಯಾದ ಕಾಂಕ್ರೀಟ್, ಮರಗಳ ಕಡಿತ, ಜಲಮೂಲಗಳ ನಾಶ, ಕಡಿಮೆಯಾಗುತ್ತಿರುವ ತೆರೆದ ಜಾಗ, ದಟ್ಟ ಕಟ್ಟಡಗಳು ಮತ್ತು ಅಸಮರ್ಪಕ ನಗರ ಯೋಜನೆ—ಇವೆಲ್ಲವೂ ನಗರಗಳ ಸ್ಥಳೀಯ ಉಷ್ಣತೆಯನ್ನು ಹೆಚ್ಚಿಸಬಲ್ಲ ಅಂಶಗಳು. ಆದ್ದರಿಂದ ‘ಬಿಸಿಲು ಹೆಚ್ಚಾಗಿದೆ’ ಎಂದು ಹೇಳುವುದಕ್ಕಿಂತ ‘ನಮ್ಮ ನಗರಗಳನ್ನು ಹೇಗೆ ಕಟ್ಟಲಾಗಿದೆ?’ ಎಂಬ ಪ್ರಶ್ನೆ ಹೆಚ್ಚು ಮುಖ್ಯ. ನಗರಾಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು, ಕೆರೆ-ಕಾಲುವೆಗಳನ್ನು ಮುಚ್ಚಿ, ಕಾಂಕ್ರೀಟ್ ವಿಸ್ತರಿಸಿ, ಸಾರ್ವಜನಿಕ ತೆರೆದ ಜಾಗಗಳನ್ನು ಕುಗ್ಗಿಸುತ್ತಾ ಹೋದರೆ ಹವಾಮಾನ ಬದಲಾವಣೆಯ ಪರಿಣಾಮವನ್ನು ನಗರಗಳು ಇನ್ನಷ್ಟು ತೀವ್ರವಾಗಿ ಅನುಭವಿಸಬೇಕಾಗುತ್ತದೆ. ಕೃಷಿಗೂ ಇದು ಎಚ್ಚರಿಕೆಯ ಗಂಟೆ. ಭಾರತದ ಆರ್ಥಿಕತೆಯಲ್ಲಿ ಮಳೆಯಷ್ಟೇ ತಾಪಮಾನಕ್ಕೂ ಮಹತ್ವವಿದೆ. 2026ರ ಮುಂಗಾರು ಮಳೆಯ ವಿತರಣೆಯಲ್ಲಿಯೂ ಅಸಮಾನತೆ ಕಂಡುಬಂದಿದೆ; ಸೆಪ್ಟೆಂಬರ್ ಮಧ್ಯಭಾಗದವರೆಗೆ ದೇಶದ ಒಟ್ಟು ಮುಂಗಾರು ಮಳೆ ದೀರ್ಘಾವಧಿ ಸರಾಸರಿಗಿಂತ ಸುಮಾರು 14.7% ಕಡಿಮೆಯಾಗಿತ್ತು ಎಂದು ವರದಿಯಾಗಿದೆ. ಹೆಚ್ಚಿನ ತಾಪಮಾನ ಮತ್ತು ಅಸ್ಥಿರ ಮಳೆ ಒಂದೇ ಸಮಯದಲ್ಲಿ ಎದುರಾದಾಗ ಕೃಷಿಯ ಮೇಲಿನ ಅಪಾಯ ದ್ವಿಗುಣಗೊಳ್ಳುತ್ತದೆ. ಮಣ್ಣಿನ ತೇವಾಂಶ ಕಡಿಮೆಯಾಗಬಹುದು, ನೀರಾವರಿ ಬೇಡಿಕೆ ಹೆಚ್ಚಬಹುದು, ಬೆಳೆಗಳ ಬೆಳವಣಿಗೆಗೆ ಧಕ್ಕೆಯಾಗಬಹುದು. ಸಣ್ಣ ಮತ್ತು ಅಂಚಿನ ರೈತರಿಗೆ ಈ ಆಘಾತವನ್ನು ಎದುರಿಸುವ ಸಾಮರ್ಥ್ಯವೂ ಸೀಮಿತ. ಹೀಗಾಗಿ ಹವಾಮಾನ ನೀತಿಯನ್ನು ಕೃಷಿ ನೀತಿಯಿಂದ ಬೇರ್ಪಡಿಸಿ ನೋಡುವುದು ಸಾಧ್ಯವಿಲ್ಲ. ಪರಿಹಾರವೆಂದರೆ ಕೇವಲ ಹವಾನಿಯಂತ್ರಣವಲ್ಲ. ಬಿಸಿಲು ಹೆಚ್ಚಾದಾಗ ಪ್ರತಿಯೊಂದು ಮನೆಗೂ ಏರ್ ಕಂಡಿಷನರ್ ಕೊಡುವುದು ಪರಿಹಾರವಲ್ಲ.
ಅದು ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸುವ ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸಬಹುದು. ಅಗತ್ಯವಾದುದು ಸಾರ್ವಜನಿಕ ಮೂಲಸೌಕರ್ಯದ ಪರಿವರ್ತನೆ. * ಪ್ರತಿ ನಗರದಲ್ಲೂ ವೈಜ್ಞಾನಿಕ Heat Action Plan ಜಾರಿಯಾಗಬೇಕು. ಕಾರ್ಮಿಕರ ಕೆಲಸದ ಸಮಯವನ್ನು ತೀವ್ರ ಬಿಸಿಲಿನ ಅವಧಿಗೆ ಅನುಗುಣವಾಗಿ ಮರುಹೊಂದಿಸಬೇಕು. * ನಿರ್ಮಾಣ ಮತ್ತು ರಸ್ತೆ ಕಾರ್ಮಿಕರಿಗೆ ನೆರಳು, ಕುಡಿಯುವ ನೀರು ಮತ್ತು ವಿಶ್ರಾಂತಿ ಸೌಲಭ್ಯ ಕಡ್ಡಾಯವಾಗಬೇಕು. * ಸರ್ಕಾರಿ ಆಸ್ಪತ್ರೆಗಳಲ್ಲಿ ಉಷ್ಣ ಸಂಬಂಧಿ ಕಾಯಿಲೆಗಳಿಗೆ ತುರ್ತು ಚಿಕಿತ್ಸಾ ವ್ಯವಸ್ಥೆ ಬಲಪಡಿಸಬೇಕು. * ನಗರಗಳಲ್ಲಿ ಮರಗಳ ಹೊದಿಕೆ, ಕೆರೆಗಳು, ಉದ್ಯಾನಗಳು ಮತ್ತು ತೆರೆದ ಸಾರ್ವಜನಿಕ ಜಾಗಗಳನ್ನು ರಕ್ಷಿಸಬೇಕು. * ಶಾಲೆಗಳು, ಅಂಗನವಾಡಿಗಳು ಮತ್ತು ವೃದ್ಧರ ಆರೈಕೆ ಕೇಂದ್ರಗಳಿಗೆ ಸ್ಥಳೀಯ ಹವಾಮಾನ ಆಧಾರಿತ ಸುರಕ್ಷತಾ ಕ್ರಮ ರೂಪಿಸಬೇಕು * ಕಡಿಮೆ ಆದಾಯದ ಕುಟುಂಬಗಳಿಗೆ ವಿದ್ಯುತ್ ಮತ್ತು ಕುಡಿಯುವ ನೀರಿನ ಭದ್ರತೆ ಖಚಿತಪಡಿಸಬೇಕು. * ನಗರ ಯೋಜನೆಯಲ್ಲಿ ‘ಹೀಟ್ ರಿಸ್ಕ್’ ಅನ್ನು ಮೂಲಭೂತ ಮಾನದಂಡವನ್ನಾಗಿ ಮಾಡಬೇಕು. ಇವೆಲ್ಲವೂ ಹವಾಮಾನ ಬದಲಾವಣೆಯನ್ನು ತಡೆಯುವ ಜಾಗತಿಕ ಪ್ರಯತ್ನಗಳ ಜೊತೆಗೆ ನಡೆಯಬೇಕು. ಇನ್ನು, ಇದು ಪ್ರಕೃತಿಯ ಸಮಸ್ಯೆಯಷ್ಟೇ ಅಲ್ಲ; ಸರ್ಕಾರಗಳ ನೀತಿಯ ಸಮಸ್ಯೆಯೂ ಹೌದು. ಹವಾಮಾನ ಬದಲಾವಣೆ ಪ್ರಕೃತಿಯಲ್ಲಿ ಸಂಭವಿಸುವ ಬದಲಾವಣೆ. ಆದರೆ ಅದರ ಹೊಡೆತ ಯಾರ ಮೇಲೆ ಎಷ್ಟು ಬೀಳುತ್ತದೆ ಎನ್ನುವುದು ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಿಂದ ನಿರ್ಧರಿತವಾಗುತ್ತದೆ. ಒಬ್ಬ ಶ್ರೀಮಂತ ಕುಟುಂಬ ಹೆಚ್ಚುವರಿ ವಿದ್ಯುತ್ ಬಳಸಿ ತಂಪಾಗಿರಬಹುದು. ಆದರೆ ಬಿಸಿಲಿನಲ್ಲಿ ರಸ್ತೆ ನಿರ್ಮಿಸುವ ಕಾರ್ಮಿಕನಿಗೆ ಆ ಆಯ್ಕೆ ಇರುವುದಿಲ್ಲ. ಒಂದು ದೊಡ್ಡ ಸಂಸ್ಥೆ ಉತ್ಪಾದನಾ ನಷ್ಟವನ್ನು ವಿಮೆಯಿಂದ ನಿರ್ವಹಿಸಬಹುದು; ಸಣ್ಣ ರೈತನಿಗೆ ಒಂದು ಬೆಳೆ ನಷ್ಟವೇ ಸಾಲದ ಬಲೆಯನ್ನು ಗಂಭೀರಗೊಳಿಸಬಹುದು.
ಹೀಗಾಗಿ ಹವಾಮಾನ ನ್ಯಾಯದ ಪ್ರಶ್ನೆ ಎಂದರೆ ಕೇವಲ ‘ಭೂಮಿ ಬಿಸಿಯಾಗುತ್ತಿದೆ’ ಎಂಬ ಪ್ರಶ್ನೆಯಲ್ಲ. ಯಾರ ಬದುಕು ಹೆಚ್ಚು ಬಿಸಿಯಾಗುತ್ತಿದೆ? ಯಾರ ಆದಾಯ ಕಡಿಮೆಯಾಗುತ್ತಿದೆ? ಯಾರಿಗೆ ನೀರು ಸಿಗುತ್ತಿಲ್ಲ? ಯಾರ ಆರೋಗ್ಯದ ಮೇಲೆ ಹೊರೆ ಬೀಳುತ್ತಿದೆ? ಮತ್ತು ಈ ಅಪಾಯವನ್ನು ಎದುರಿಸಲು ಸಾರ್ವಜನಿಕ ವ್ಯವಸ್ಥೆ ಎಷ್ಟು ಸಿದ್ಧವಾಗಿದೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕದೆ ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡುವುದು ಅಂಕಿ-ಅಂಶಗಳ ಪುನರಾವರ್ತನೆಯಷ್ಟೇ. 11.7 ಕೋಟಿ ಒಂದು ವರದಿಯ ಸಂಖ್ಯೆ ಮಾತ್ರವಲ್ಲ. ಅದು ಭಾರತದ ಅಭಿವೃದ್ಧಿಯ ದಿಕ್ಕಿನ ಬಗ್ಗೆ ಬಂದಿರುವ ಎಚ್ಚರಿಕೆ ಎನ್ನುವುದುನ್ನೂ ಅರ್ಥ ಮಾಡಿಕೊಳ್ಳಬೇಕಿದೆ.
- ಶ್ರೀರಾಜ್ ವಕ್ವಾಡಿ
Saturday, September 19, 2026
ಬಿಸಿಲು ತಲೆ ಸುಡುತ್ತಿದೆ : ‘ಕ್ಲೈಮೇಟ್ ಸೆಂಟ್ರಲ್’ನ ಹೊಸ ವಿಶ್ಲೇಷಣೆ
Subscribe to:
Post Comments (Atom)
No comments:
Post a Comment