ಕಸ್ತೂರಿ ರಂಗನ್ ವರದಿ: ವಿಶೇಷ ಅಧಿವೇಶನದಲ್ಲಿ ಚರ್ಚೆಯಾಗಬೇಕಿರುವುದು ‘ವರದಿ ವಿರೋಧ’ವಲ್ಲ, ಕರ್ನಾಟಕದ ಅಭಿವೃದ್ಧಿ ಮಾದರಿ . ಈಗಾಗಲೇ ಮಲೆನಾಡು ಭಾಗಗಳಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತವಾಗಿದೆ. ಆದರೇ, ಸರ್ಕಾರ ಏನು ಮಾಡಬೇಕು !? ಕರ್ನಾಟಕ ಸರ್ಕಾರ ವಿಶೇಷ ಅಧಿವೇಶನ ಕರೆದಿರುವ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿ ಮತ್ತೆ ರಾಜಕೀಯದ ಕೇಂದ್ರಬಿಂದುವಾಗಿದೆ. ಆದರೆ ಈ ಅಧಿವೇಶನ ಕೇವಲ “ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವುದಿಲ್ಲಎಂಬ ರಾಜಕೀಯ ಘೋಷಣೆಗೆ ಸೀಮಿತವಾದರೆ, ಅದು ಕರ್ನಾಟಕದ ಪಾಲಿಗೆ ಮತ್ತೊಂದು ಅವಕಾಶ ಕಳೆದುಕೊಂಡಂತಾಗುತ್ತದೆ.
ಪೂರ್ತಿ ನೋಡಿ, ಕನ್ಫ್ಯೂಸ್ ಆಗ್ಬೇಡಿ. ಯಾಕೆಂದರೆ ಕಸ್ತೂರಿ ರಂಗನ್ ವರದಿಯ ಪ್ರಶ್ನೆ ಕೇವಲ ಪರಿಸರದ ಪ್ರಶ್ನೆಯಲ್ಲ. ಅದು ಪಶ್ಚಿಮ ಘಟ್ಟವನ್ನು ಹೇಗೆ ಉಳಿಸಬೇಕು? ಅಲ್ಲಿನ ಜನರ ಬದುಕನ್ನು ಹೇಗೆ ರಕ್ಷಿಸಬೇಕು? ಅಭಿವೃದ್ಧಿಗೆ ಎಷ್ಟು ಅವಕಾಶ ನೀಡಬೇಕು? ಮತ್ತು ಪ್ರಕೃತಿಯ ಬೆಲೆಯನ್ನು ಯಾರು ಕಟ್ಟಬೇಕು? ಎಂಬ ಮೂಲಭೂತ ಪ್ರಶ್ನೆಯಾಗಿದೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ ಪಶ್ಚಿಮ ಘಟ್ಟದ ಸುಮಾರು 37% ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿತ್ತು. ಆ ಪ್ರದೇಶದಲ್ಲಿ ಪರಿಸರಕ್ಕೆ ಹೆಚ್ಚಿನ ಹಾನಿ ಉಂಟುಮಾಡುವ ಚಟುವಟಿಕೆಗಳ ಮೇಲೆ ನಿಯಂತ್ರಣ ಹಾಗೂ ಸುಸ್ಥಿರ ಅಭಿವೃದ್ಧಿಯ ಮಾದರಿಯನ್ನು ಶಿಫಾರಸು ಮಾಡಿತ್ತು. ಆದರೆ ವರ್ಷಗಳು ಕಳೆದರೂ ಕೇಂದ್ರದ ಅಧಿಸೂಚನೆ ಅಂತಿಮವಾಗಿಲ್ಲ. ರಾಜ್ಯಗಳು ESA ವ್ಯಾಪ್ತಿಯನ್ನು ಬದಲಾಯಿಸಬೇಕು ಎಂದು ನಿರಂತರವಾಗಿ ಒತ್ತಾಯಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. 2022ರ ಕರಡು ಅಧಿಸೂಚನೆಯಲ್ಲಿಯೂ ಆರು ರಾಜ್ಯಗಳಲ್ಲಿ ಒಟ್ಟು 56,825 ಚದರ ಕಿ.ಮೀ. ಪ್ರದೇಶವನ್ನು ESA ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ.
ಹಾಗಾದರೇ, ವಿಶೇಷ ಅಧಿವೇಶನದಲ್ಲಿ ನಿಜವಾದ ಚರ್ಚೆ ಏನಾಗಬೇಕು? ಮೊದಲನೆಯದಾಗಿ — “ವರದಿ ಬೇಕೋ ಬೇಡವೋ?” ಎಂಬ ಪ್ರಶ್ನೆಯನ್ನು ಮೀರಿ ಚರ್ಚೆಗೆ ಅವಕಾಶವಾಗಬೇಕಿದೆ. ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಒಂದು ರಾಜಕೀಯ ನಿಲುವಾಗಬಹುದು. ಆದರೆ ಪಶ್ಚಿಮ ಘಟ್ಟದ ಪರಿಸರ ಸಂಕಷ್ಟವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಅದೇ ರೀತಿ, ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದೇ ಪರಿಸರ ಸಂರಕ್ಷಣೆಯ ಏಕೈಕ ಮಾರ್ಗ ಎಂಬ ವಾದವೂ ಸಾಕಾಗುವುದಿಲ್ಲ. ಹೀಗಾಗಿ ಅಧಿವೇಶನದಲ್ಲಿ ಚರ್ಚೆಯಾಗಬೇಕಿರುವ ಅಂಶ ಏನೆಂದರೇ, “ಕರ್ನಾಟಕದ ವಾಸ್ತವಿಕತೆಗೆ ಹೊಂದುವಂತಹ ಪಶ್ಚಿಮ ಘಟ್ಟ ಸಂರಕ್ಷಣಾ ನೀತಿ ಯಾವುದು?” ಎನ್ನುವುದರ ಬಗ್ಗೆ ಆಳ ಅಗಲ ಚರ್ಚೆ ನಡೆಯಬೇಕಿದೆ. ಎರಡನೆಯದು — ಪರಿಸರ ಸಂರಕ್ಷಣೆ ಮತ್ತು ಜನರ ಬದುಕನ್ನು ಪರಸ್ಪರ ವಿರೋಧಿಗಳನ್ನಾಗಿ ಮಾಡಬಾರದು. ಪಶ್ಚಿಮ ಘಟ್ಟದಲ್ಲಿ ವಾಸಿಸುವ ರೈತರು, ಸಣ್ಣ ಕೃಷಿಕರು, ತೋಟಗಾರರು, ಗ್ರಾಮೀಣ ಸಮುದಾಯಗಳು ಮತ್ತು ಸ್ಥಳೀಯ ಆರ್ಥಿಕತೆಯ ಪ್ರಶ್ನೆಗಳನ್ನು ಕಡೆಗಣಿಸಿ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಆದರೆ ರೈತರ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ, ದೊಡ್ಡ ಪ್ರಮಾಣದ ರಿಯಲ್ ಎಸ್ಟೇಟ್, ಅತಿಯಾದ ಪ್ರವಾಸೋದ್ಯಮ ಅಥವಾ ಪರಿಸರ ನಾಶಕ್ಕೆ ಅವಕಾಶ ನೀಡುವುದೂ ಜನಪರ ರಾಜಕಾರಣವಲ್ಲ. ರೈತನ ರಕ್ಷಣೆ ಮತ್ತು ಮಲೆನಾಡಿನ ರಕ್ಷಣೆ—ಇವೆರಡೂ ಒಂದೇ ನೀತಿಯ ಎರಡು ಮುಖಗಳಾಗಬೇಕು. ಮೂರನೆಯದು — ಗ್ರಾಮೀಣ ಜನರಿಗೆ ಮತ್ತು ದೊಡ್ಡ ಯೋಜನೆಗೆ ಒಂದೇ ಕಾನೂನು ಅನ್ವಯಿಸಬಹುದೇ? ಇದು ಅತ್ಯಂತ ಗಂಭೀರವಾದ ಪ್ರಶ್ನೆ. ಒಂದು ಸಣ್ಣ ರೈತನ ಸಾಂಪ್ರದಾಯಿಕ ಕೃಷಿ ಚಟುವಟಿಕೆ ಮತ್ತು ಸಾವಿರಾರು ಎಕರೆ ಪ್ರದೇಶವನ್ನು ಪರಿವರ್ತಿಸುವ ವಾಣಿಜ್ಯ ಯೋಜನೆಯನ್ನು ಒಂದೇ ಪರಿಸರದ ಅಪಾಯದ ವರ್ಗದಲ್ಲಿ ನೋಡುವುದು ನ್ಯಾಯಸಮ್ಮತವೇ? ಅಭಿವೃದ್ಧಿಯ ಹೊರೆ ಸಣ್ಣ ರೈತನ ಮೇಲೆ ಮಾತ್ರ ಬೀಳಬಾರದು. ಯಾವ ಚಟುವಟಿಕೆ ಪರಿಸರಕ್ಕೆ ಎಷ್ಟು ಹಾನಿ ಮಾಡುತ್ತದೆ ಎಂಬುದರ ಆಧಾರದ ಮೇಲೆ ನಿಯಂತ್ರಣ ಇರಬೇಕು. ಜನರ ಜೀವನೋಪಾಯವನ್ನು ರಕ್ಷಿಸುವುದರ ಜೊತೆಗೆ ದೊಡ್ಡ ಪ್ರಮಾಣದ ಪರಿಸರ ಹಾನಿಗೆ ಕಟ್ಟುನಿಟ್ಟಿನ ಮಿತಿ ಇರಬೇಕು. ನಾಲ್ಕನೆಯದು — ಕರ್ನಾಟಕಕ್ಕೆ ತನ್ನದೇ ‘ESA ಮಾದರಿ’ ಬೇಕು.
ಕೇಂದ್ರದ ನಕ್ಷೆಯನ್ನು ಹಾಗೆಯೇ ಒಪ್ಪಿಕೊಳ್ಳುವುದು ಅಥವಾ ಸಂಪೂರ್ಣ ತಿರಸ್ಕರಿಸುವುದು—ಇವೆರಡೂ ಸುಲಭ ರಾಜಕೀಯ ಮಾರ್ಗಗಳು. ಆದರೆ ಕರ್ನಾಟಕ ಸರ್ಕಾರ ವೈಜ್ಞಾನಿಕವಾಗಿ ಮರುಮೌಲ್ಯಮಾಪನ ಮಾಡಿದ ತನ್ನದೇ ಭೌಗೋಳಿಕ ನಕ್ಷೆಯನ್ನು ಮುಂದಿಡಬೇಕು. ಗ್ರಾಮದ ಗಡಿ, ಭೂ ಬಳಕೆ, ಅರಣ್ಯ, ಜಲಮೂಲ, ಕೃಷಿ ಪ್ರದೇಶ, ಜನಸಾಂದ್ರತೆ, ವನ್ಯಜೀವಿ ಕಾರಿಡಾರ್, ಭೂಕುಸಿತದ ಅಪಾಯ—ಎಲ್ಲವನ್ನೂ ಒಟ್ಟಾಗಿ ಪರಿಗಣಿಸಿ ESA ಗಡಿಯನ್ನು ನಿರ್ಧರಿಸುವ ಕೆಲಸ ಆಗಬೇಕು. ಇದರಿಂದ “ಬೆಂಗಳೂರು ಕುಳಿತು ಪಶ್ಚಿಮ ಘಟ್ಟದ ಭವಿಷ್ಯ ನಿರ್ಧರಿಸುವುದು” ಎಂಬ ಆರೋಪಕ್ಕೂ ಉತ್ತರ ಸಿಗುತ್ತದೆ. ಐದನೆಯದು — ಪರಿಸರ ನಾಶದ ಆರ್ಥಿಕ ಹೊರೆ ಯಾರು ಹೊರುತ್ತಾರೆ? ಪಶ್ಚಿಮ ಘಟ್ಟ ಕೇವಲ ಮಲೆನಾಡಿನ ಜನರ ಆಸ್ತಿ ಅಲ್ಲ. ಅಲ್ಲಿನ ಕಾಡು ಮತ್ತು ಜಲಾನಯನ ಪ್ರದೇಶಗಳು ಕರ್ನಾಟಕದ ಕೃಷಿ, ನದಿಗಳು, ಕುಡಿಯುವ ನೀರು ಮತ್ತು ಹವಾಮಾನ ಸಮತೋಲನಕ್ಕೆ ಮಹತ್ವದ್ದಾಗಿವೆ. ಹೀಗಿರುವಾಗ ಪಶ್ಚಿಮ ಘಟ್ಟವನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅಲ್ಲಿನ ಗ್ರಾಮಸ್ಥರ ಮೇಲೇ ಹಾಕುವುದು ನ್ಯಾಯವೇ? ಪರಿಸರವನ್ನು ಉಳಿಸುವ ಗ್ರಾಮಕ್ಕೆ ಆರ್ಥಿಕ ಪರಿಹಾರ ಸಿಗಬೇಕಲ್ಲವೇ? ಕಸ್ತೂರಿ ರಂಗನ್ ವರದಿಯಲ್ಲಿಯೂ ಪರಿಸರ ಸೇವೆಗಳಿಗೆ ಸಂಬಂಧಿಸಿದ ಆರ್ಥಿಕ ವ್ಯವಸ್ಥೆ, ಹಸಿರು ಬೆಳವಣಿಗೆ, ಸುಸ್ಥಿರ ಕೃಷಿ ಮತ್ತು ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಲಾಭದಂತಹ ವಿಚಾರಗಳಿಗೆ ಒತ್ತು ನೀಡಲಾಗಿದೆ. ಹೀಗಾಗಿ ವಿಶೇಷ ಅಧಿವೇಶನದಲ್ಲಿ ಕರ್ನಾಟಕ ಸರ್ಕಾರ ಕೇಂದ್ರವನ್ನು ಕೇಳಬೇಕಾದ ಪ್ರಶ್ನೆ ಏನೆಂದ್ರೇ, “ಪಶ್ಚಿಮ ಘಟ್ಟವನ್ನು ನಾವು ಉಳಿಸಬೇಕೆಂದರೆ, ಅದಕ್ಕಾಗಿ ಅಲ್ಲಿನ ಜನರಿಗೆ ಕೇಂದ್ರ ಸರ್ಕಾರ ಯಾವ ಪರಿಹಾರ ನೀಡುವುದಕ್ಕೆ ತಯಾರದೆ? ಎನ್ನುವುದನ್ನು ಗಂಭೀರವಾಗಿ ಕೇಳಲೇ ಬೇಕಿದೆ. ಆರನೆಯದು — 2013ರ ವರದಿಯನ್ನು 2026ರ ವಾಸ್ತವಿಕತೆಯಲ್ಲಿ ಮರುಪರಿಶೀಲಿಸಬೇಕು. ಇದು ಅತ್ಯಂತ ಮುಖ್ಯ. ಕಸ್ತೂರಿ ರಂಗನ್ ವರದಿ ಬಂದದ್ದು 2013ರಲ್ಲಿ. ಇಂದು ಹವಾಮಾನ ಬದಲಾವಣೆ, ಅತಿವೃಷ್ಟಿ, ಬರ, ಭೂಕುಸಿತ, ಅರಣ್ಯನಾಶ, ನೀರಿನ ಬಿಕ್ಕಟ್ಟು, ಪ್ರವಾಸೋದ್ಯಮದ ಒತ್ತಡ—ಎಲ್ಲವೂ ಹೊಸ ಸ್ವರೂಪ ಪಡೆದಿವೆ. ಅದರರ್ಥ ವರದಿಯಲ್ಲಿ ಅಂದು ಏನು ಶಿಫಾರಸ್ಸು ಮಾಡಲಾಗಿತ್ತೋ ಹಾಗೆಯೇ ಜಾರಿಗೊಳಿಸಬೇಕು ಎಂದಲ್ಲ. 2013ರ ವರದಿಯನ್ನು 2026ರ ವೈಜ್ಞಾನಿಕ ಮಾಹಿತಿಯೊಂದಿಗೆ ಮರುಪರಿಶೀಲಿಸಬೇಕಿರುವುದು ಅನಿವಾರ್ಯದ ಸಂಗತಿ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ಯಾವ ಪ್ರದೇಶದಲ್ಲಿ ಅಪಾಯ ಹೆಚ್ಚಾಗಿದೆ ? ಯಾವ ಪ್ರದೇಶದಲ್ಲಿ ಕೃಷಿ ಮುಂದುವರಿಯಬಹುದು?ಎಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಪೂರ್ಣ ನಿರ್ಬಂಧ ಬೇಕು? ಎಲ್ಲಿ ನಿಯಂತ್ರಿತ ಪ್ರವಾಸೋದ್ಯಮ ಸಾಧ್ಯ? ಎಲ್ಲಿ ಗಣಿಗಾರಿಕೆಗೆ ಶಾಶ್ವತ ನಿಷೇಧ ಬೇಕು? ಈ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರ ಬೇಕು. ಏಳನೆಯದು — ರಾಜಕೀಯ ಪಕ್ಷಗಳು ತಮ್ಮ ದ್ವಂದ್ವ ನಿಲುವನ್ನು ಬಹಿರಂಗಪಡಿಸಬೇಕು.
ಕಸ್ತೂರಿ ರಂಗನ್ ವರದಿ ವಿಚಾರ ಬಂದಾಗ ಆಡಳಿತ ಪಕ್ಷವಾಗಿದ್ದಾಗ ಒಂದು ನಿಲುವು, ವಿರೋಧ ಪಕ್ಷದಲ್ಲಿದ್ದಾಗ ಮತ್ತೊಂದು ನಿಲುವು—ಇಂತಹ ರಾಜಕಾರಣದಿಂದ ಪಶ್ಚಿಮ ಘಟ್ಟ ಉಳಿಯುವುದಿಲ್ಲ. ವಿಶೇಷ ಅಧಿವೇಶನದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷ ಎರಡೂ ತಮ್ಮ ಸ್ಪಷ್ಟ, ಲಿಖಿತ, ದೀರ್ಘಕಾಲೀನ ನೀತಿಯನ್ನು ಮಂಡಿಸಬೇಕು. ಕೇವಲ “ವರದಿ ವಿರೋಧ”ದ ನಿರ್ಣಯ ಅಂಗೀಕರಿಸಿ ರಾಜಕೀಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಾರದು. ಕೊನೆಗೆ ಉಳಿಯುವ ದೊಡ್ಡ ಪ್ರಶ್ನೆ ಏನೆಂದರೇ, ಕಸ್ತೂರಿ ರಂಗನ್ ವರದಿ ಎಂದರೆ ಕೇವಲ ಒಂದು ವರದಿ ಅಲ್ಲ. ಅದು ಕರ್ನಾಟಕದ ಅಭಿವೃದ್ಧಿಯ ಬಗ್ಗೆ ನಮ್ಮ ರಾಜಕೀಯ ವ್ಯವಸ್ಥೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದರ ಪರೀಕ್ಷೆ. ಒಂದು ಕಡೆ ಪಶ್ಚಿಮ ಘಟ್ಟ ಉಳಿಯಬೇಕು. ಇನ್ನೊಂದು ಕಡೆ ಪಶ್ಚಿಮ ಘಟ್ಟದಲ್ಲಿ ಬದುಕುತ್ತಿರುವ ಜನರೂ ಉಳಿಯಬೇಕು. ಈ ಎರಡರಲ್ಲಿ ಒಂದನ್ನು ಆರಿಸುವುದು ಪರಿಹಾರವಲ್ಲ. ಪ್ರಕೃತಿಯನ್ನು ನಾಶಪಡಿಸಿ ಅಭಿವೃದ್ಧಿ ಸಾಧಿಸುವ ಮಾದರಿಯೂ ಬೇಡ; ಜನರನ್ನು ಸ್ಥಳಾಂತರಿಸಿ ಪರಿಸರ ಉಳಿಸುವ ಮಾದರಿಯೂ ಬೇಡ. ಕರ್ನಾಟಕಕ್ಕೆ ಬೇಕಿರುವುದು ಮೂರನೆಯ ದಾರಿ—ಜನಪರ ಪರಿಸರ ಸಂರಕ್ಷಣೆ. ಹೀಗಾಗಿ ವಿಶೇಷ ಅಧಿವೇಶನದ ನಿರ್ಣಯ ಕೇವಲ, ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ಎಂಬುದರಲ್ಲಷ್ಟೇ ಮುಗಿಯಬಾರದು. ಅದರ ಬದಲಾಗಿ, “ಕರ್ನಾಟಕದ ಪಶ್ಚಿಮ ಘಟ್ಟಕ್ಕೆ ವೈಜ್ಞಾನಿಕ, ಜನಪರ, ಸ್ಥಳೀಯ ವಾಸ್ತವಿಕತೆ ಆಧಾರಿತ ಹೊಸ ಸಂರಕ್ಷಣಾ ನೀತಿ ರೂಪಿಸಲಾಗುವುದು”ಎಂಬ ಸ್ಪಷ್ಟ ರಾಜಕೀಯ ಮತ್ತು ಆಡಳಿತಾತ್ಮಕ ಬದ್ಧತೆ ಹೊರಬರಬೇಕು. ಅದೇ ನಿಜವಾದ ಚರ್ಚೆ. ಅದೇ ಪಶ್ಚಿಮ ಘಟ್ಟಕ್ಕೂ, ಅಲ್ಲಿನ ಜನರಿಗೂ ನ್ಯಾಯ ಎನ್ನುವುದರಲ್ಲಿ ಅನುಮಾನವೇ ಇಲ್ಲ.
- ಶ್ರೀರಾಜ್ ವಕ್ವಾಡಿ
Friday, September 11, 2026
ಕಸ್ತೂರಿ ರಂಗನ್ ವರದಿ ವಿಶೇಷ ಅಧಿವೇಶನದಲ್ಲಿ ʼಜನಪರ ಪರಿಸರ ಸಂರಕ್ಷಣೆʼ ಚರ್ಚೆಯಾಗಲಿ!
Subscribe to:
Post Comments (Atom)
No comments:
Post a Comment