Wednesday, June 29, 2022

‘ಸೂಪರ್ ಸಿಎಂ’ ತಂದಿಟ್ಟ ‘ಮಹಾ’ಆಪತ್ತು..!


ಬಂಡಾಯದ ಬಾವುಟ ಹಿಡಿದು ಸಂಭ್ರಮಿಸಿದವರು ಮುಂದೆ ಅರ್ಧದಾರಿಯ ಬಡತನ ಎದುರಿಸಲು ತಯಾರಿದ್ದಾರೆಯೇ..?!  

ಶಿವಸೇನೆ ಅತೃಪ್ತ ನಾಯಕರ ಬಂಡೆದ್ದಿರುವ ಕಾರಣದಿಂದಾಗಿ ‘ಮಹಾ ವಿಕಾಸ ಅಘಾಡಿ ಸರ್ಕಾರ ಪತನಗೊಂಡಿದೆ. ಕೇವಲ ಎರಡುವರೆ ವರ್ಷಗಳಲ್ಲೇ ಸರ್ಕಾರ ಉರುಳಿದೆ. ಯಾವ ರಾಜ್ಯವನ್ನು ಬೇಕಾದರೂ ಗಮನಿಸಿ, ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದವರು ಎಲ್ಲೂ ಯಶಸ್ವಿ ಆಡಳಿತವನ್ನು ನಡೆಸಿಲ್ಲ (ಕೇರಳವನ್ನು ಹೊರತಾಗಿ). ಮಹಾರಾಷ್ಟ್ರ ಬಹುತೇಕ ಈವರೆಗೆ ಕಂಡುಕೊಂಡುಬಂದಿದ್ದು ಮೈತ್ರಿ ಆಡಳಿತವನ್ನು. ಮೈತ್ರಿ ಜಗಳದಿಂದ, ಪೂರ್ಣ ಬಹುಮತದ ಕೊರತೆಯಿಂದಾಗಿ ಮಹಾರಾಷ್ಟ್ರ ಒಂದೆರಡು ಬಾರಿ ರಾಷ್ಟ್ರಪತಿ ಆಡಳಿತವನ್ನೂ ಕಂಡಿದೆ ಎನ್ನುವುದು ಇಲ್ಲಿ ಗಮನಾರ್ಹ. ಪಕ್ಕಾ ಉಗ್ರ ಹಿಂದುತ್ವದ ಸಿದ್ಧಾಂತದೊಂದಿಗೆ ರಾಜಕೀಯ ಪ್ರವೇಶ ಮಾಡಿದ ಶಿವಸೇನೆ, ಕಳೆದ ವಿಧಾನಸಭಾ ಚುನಾವಣೆವರೆಗೂ ತನ್ನ ಸಿದ್ಧಾಂತವನ್ನು ಬಿಟ್ಟುಕೊಟ್ಟಿಲ್ಲ. ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿಯೂ ತನ್ನ ಪಟ್ಟು ಮುಂದೆ ಇಟ್ಟೇ ಮುಂದಿನ ಯೋಚನೆ ಮಾಡುತ್ತಿತ್ತು. ಆದರೇ, 2018ರ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಪರಿಣಾಮವಾಗಿ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಅಧಿಕಾರದ ದಾಹದಿಂದಾಗಿ ಎನ್‌ಡಿಎಯೇತರ ರಾಜಕೀಯ ಪಕ್ಷಗಳು ಮೈತ್ರಿಯನ್ನು ರಚಿಸಿದವು. 106 ಕ್ಷೇತ್ರಗಳಲ್ಲಿ ಜಯಗಳಿಸಿದ ಬಿಜೆಪಿ ಎದುರು ಉದ್ಧವ್ ಠಾಕ್ರೆ, ಮುಂಖ್ಯಮಂತ್ರಿ ಹುದ್ದೆ ಕೊಡುವುದಿಲ್ಲ ಎಂಬ ಕಾರಣಕ್ಕೆ  ತೊಡೆ ತಟ್ಟಿ ನಿಂತರು, ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ಮೂಲಕ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು. ಕಳೆದೆರಡು ವರ್ಷಗಳಿಂದ ಎಲ್ಲವೂ ಸರಿಯೇ ಇತ್ತು, ಎಲ್ಲವೂ ಸಸೂತ್ರವಾಗಿಯೇ ನಡೆಯುತ್ತಿದೆ ಎನ್ನುವಷ್ಟರಲ್ಲಿ ಸರ್ಕಾರ ಉರುಳಿದೆ. ಉದ್ಧವ್‌ಗೆ ಈಗ ತಟ್ಟಿದ ತೊಡೆ ಕೊಯ್ದುಕೊಂಡಂತಾಗಿದೆ.  

ಅಧಿಕಾರದ ದಾಹದಿಂದಾಗಿ ಮೈತ್ರಿ ಮಾಡಿಕೊಂಡ ಸರ್ಕಾರಗಳೆಲ್ಲದರ ಸ್ಥಿತಿ ಹೀಗೆ ಆಗಿ ಹೋಗಿವೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಗೆ ಈ ಸ್ಥಿತಿ ಬಂದಿರುವುದು ಹಿಂದುತ್ವದೊಂದಿಗೆ ಮಾಡಿಕೊಂಡ ರಾಜಿಯಿಂದಾಗಿ. ಈ ಮೂಲಕ ತಂದೆ ಹಾಕಿಕೊಟ್ಟ ದಾರಿಯಲ್ಲಿ ನಡೆಯದೇ, ‘ದಾರಿ ತಪ್ಪಿದ ಮಗ’ನಾಗಿ ಬಿಟ್ಟರು ಉದ್ಧವ್. ತಂದೆ ಬಾಳ ಸಾಹೇಬ್ ಠಾಕ್ರೆ ಎಂದೂ ರಾಜಕೀಯದ ಮುಖ್ಯ ಹುದ್ದೆಯಲ್ಲಿ ಇರಬೇಕೆಂದು ಬಯಕೆ ಹೊಂದಿದವರಲ್ಲವಂತೆ. ಅವರದ್ದು ಹಿಂದುತ್ವವೇ ಉಸಿರಾಗಿತ್ತಂತೆ. ಅಪ್ಪಟ ಹಿಂದುತ್ವವಾದಿ.  ಹಿಂದುತ್ವದ ವಿಚಾರದಲ್ಲಿ ತೋರು ಬೆರಳ ತುದಿಯಲ್ಲೇ ಎಲ್ಲವನ್ನು ನಿಭಾಯಿಸಬಲ್ಲ ಎಲ್ಲಾ ಠೀವಿ, ಗತ್ತು ಅವರಿಗಿತ್ತಂತೆ. ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳು ಭಯೋತ್ಪಾದಕ ದಾಳಿ ನಡೆಸಿದಾಗೆಲ್ಲಾ ಠಾಕ್ರೆ ಹುಲಿಯಂತೆ ಘರ್ಜಿಸುತ್ತಿದ್ದರಂತೆ. ಅಗಲ ಹಣೆ, ಕೊರಳಲ್ಲಿ ರುದ್ರಾಕ್ಷಿ ಹಾರ, ಬೆಳ್ಳಿ ಕೂದಲುಗಳ ಗಡ್ಡ, ಶುಭ್ರ ಬಿಳಿ ವಸ್ತ್ರ, ಕಪ್ಪು ಕಣ್ಣಡಕ, ಕೇಸರಿ ಹೆಗಲುವಲ್ಲಿ, ಮುಖದಲ್ಲಿ ಹಿಂದುತ್ವದ ಗಂಭೀರ ಛಾಯೆಯ ಠಾಕ್ರೆ ಬರುತ್ತಾರೆ, ಮಾತನಾಡುತ್ತಾರೆ ಎಂದರೇ ಶಿವಾಜಿ ಪಾರ್ಕ್ ಕಿಕ್ಕಿರಿದು ತುಂಬುತ್ತಿತ್ತಂತೆ, ಠಾಕ್ರೆ ಒಂದು ಆದೇಶ ನೀಡಿದರೇ ಇಡಿ ಮುಂಬೈ ಮಹಾನಗರ ಸ್ತಭ್ದವಾಗುತ್ತಿತ್ತಂತೆ. ಮುಂಬೈನ ಇತಿಹಾಸ ಇಂತಹ ಪ್ರಭಾವಶಾಲಿ ಜನನಾಯಕನನ್ನು ನೋಡಿಯೇ ಇಲ್ಲವಂತೆ, ಈ ಗತ್ತು ಗಾಂಭರ‍್ಯ ಬಾಳ ಸಾಹೇಬ್ ಠಾಕ್ರೆ ಕೊನೆ ಉಸಿರೆಳೆದ ನವೆಂಬರ್ 17 2012ರ  ತನಕವೂ ಎಳ್ಳಷ್ಟು ಮಾಸದೆ ಇತ್ತೆನ್ನುವುದು ಸಾಹೇಬ್ ಅವರ ರಾಜಿ ಇಲ್ಲದ  ಸಿದ್ಧಾಂತವನ್ನು ಒಪ್ಪುವವರು ಆಡುವ ಮಾತುಗಳು. ಬಾಳ ಸಾಹೇಬ್ ಠಾಕ್ರೆ ಕಾಲದ ನಂತರ ಶಿವಸೇನೆಯ ಉತ್ತರಾಧಿಕಾರಿಯಾಗಿ ಉದ್ಧವ್ ಠಾಕ್ರೆ ಮುಂದಾಳತ್ವವನ್ನು ವಹಿಸಿಕೊಂಡರು, ಶಿವಸೇನೆಯ ಮುಖವಾಣಿ ಸಾಮ್ನಾದ ಪ್ರಧಾನ ಸಂಪಾದಕರಾದರು. ಎಲ್ಲವೂ ಸರಿಯೇ ಇತ್ತು, ಈ ನಡುವೆ ಮುಖ್ಯಮಂತ್ರಿಯಾಗುವ ಮೋಹ ಉದ್ಧವ್ ಠಾಕ್ರೆಗೆ ಅಂಟಿಕೊಂಡಿತು. ಮರಾಠ ಹಿತರಕ್ಷಣೆಯ ಜೊತೆಗೆ ಹಿಂದುತ್ವದ ಖಡಕ್ ಸಿದ್ಧಾಂತದೊಂದಿಗೆ ಶಿವಸೇನೆಯನ್ನು ಕಟ್ಟಿದ ಬಾಳಠಾಕ್ರೆ, ಆಗಿನ ಪ್ರಭಾವಿ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಜಿನ್ನಾ ಸಮಾಧಿಗೆ ಹೋಗಿ ಬಂದರು ಎಂಬ ಒಂದೇ ಒಂದು ಕಾರಣದಿಂದಾಗಿ ಬಿಜೆಪಿ ಮೇಲಿನ ವಿಶ್ವಾಸವನ್ನು ಕಳೆದುಕೊಂಡರು. ಅಂತಹ ಬಾಳಠಾಕ್ರೆ ಕಟ್ಟಿದ ಶಿವಸೇನೆಯನ್ನು ಉದ್ಧವ್ ಠಾಕ್ರೆ ಅಧಿಕಾರದ ಆಸೆಗೆ ನಿಜಕ್ಕೂ ಬಲಿ ಕೊಟ್ಟರೇ..? ಎನ್ನುವ ಪ್ರಶ್ನೆ ಕಾಡುತ್ತಿದೆ. 

ಕರ್ನಾಟಕದ 2018ರ ಸ್ಥಿತಿ ನೆನಪಿಸುತ್ತದೆ : ಮಹಾರಾಷ್ಟದಲ್ಲಿ 2019ರಲ್ಲಿ 106 ಸೀಟುಗಳನ್ನು ಬಿಜೆಪಿ ಪಡೆದುಕೊಂಡರೂ ಸ್ಪಷ್ಟ ಬಹುಮತವಿಲ್ಲದೇ, ಅಧಿಕಾರ ಮಾಡುವುದಕ್ಕೆ ಸಾಧ್ಯವಾಗದೇ ಉಳಿಯಿತು. ಕರ್ನಾಟಕದಲ್ಲಿಯೂ 2018ರಲ್ಲಿ ಬಿಜೆಪಿ 105 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿತ್ತು, ಆದರೇ, ಸರ್ಕಾರ ರಚನೆಗೆ 113 ಸ್ಥಾನಗಳು ಬೇಕಾಗಿತ್ತು. ಬಹುಮತವಿಲ್ಲದೇ ಇದ್ದರೂ, ಆಗ ವಿಶ್ವಾಸಮತವನ್ನೂ ಯಾಚಿಸದೇ ಬಿ. ಎಸ್ ಯಡಿಯೂರಪ್ಪ ನಾವು ಸರ್ಕಾರ ರಚಿಸಿಯೇ ರಚಿಸುತ್ತೇವೆ ಎಂದು ‘ಏಕ್ ದಿನ್ ಕಾ ಸಿಎಂ’ ಆಗಿ ಬೆಂಬಲವಿಲ್ಲದೆ ರಾಜಿನಾಮೆ ಬಿಸಾಕಿ ಹೊರನಡೆದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದಿತ್ತು. ಕೇವಲ 13 ತಿಂಗಳ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉರುಳಿಸುವಲ್ಲಿ ಪಕ್ಷದ ಅತೃಪ್ತ ಶಾಸಕರು ಯಶಸ್ವಿಯಾದರು. ಅನರ್ಹತೆಯ ಅಸ್ತç ಬಿಟ್ಟರೂ ಏನೂ ಪ್ರಯೋಜನವಾಗಿಲ್ಲ. ಕರ್ನಾಟಕದ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಶಾಸಕ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪಥನಗೊಳಿಸಿ ಬಿಜೆಪಿಗೆ ಸೇರುವ ಉದ್ದೇಶದಿಂದ 15 ಶಾಸಕರು ರಾಜೀನಾಮೆ ನೀಡಲು ಹೊರಟಾಗ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸದೇ ಪಕ್ಷಾಂತರ ಮಾಡಿದಕ್ಕೆ ಅನರ್ಹರೆಂದು ಘೋಷಿಸಿದರು. ಸುಪ್ರೀಂ ಕೋರ್ಟ್ ನ ಮೆಟ್ಟಿಲ ತನಕವೂ ಈ ಪ್ರಕರಣ ಹೋಯಿತು. ಸುಪ್ರೀಂ ಕೋರ್ಟ್ ನ ತೀರ್ಪಿನ ವಿರುದ್ಧವಾಗಿ ಒಂದಿಷ್ಟು ಚರ್ಚೆಗಳೂ ಆಯಿತು. ಬಂಡಾಯ ಎದ್ದು ತನ್ನೆಡೆಗೆ ಬಂದ ಶಾಸಕರನ್ನು ಕಡೆಗಣಿಸಿದೆ ಎಂದು ಕೂಡ 15 ಶಾಸಕರು ಒಟ್ಟಾಗಿ ಬಿಜೆಪಿ ವಿರುದ್ಧ ತಿರುಗಿಬಿದ್ದರು, ಉಪಚುನಾವಣೆಯಲ್ಲಿ 15 ಶಾಸಕರಿಗೆ ಬಿಜೆಪಿ ಮಣೆ ಹಾಕಿತು. 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಪಡೆದುಕೊಂಡಿತು. ಕಾಂಗ್ರೆಸ್ 2 ಸ್ಥಾನಗಳನ್ನಷ್ಟೇ ಉಳಿಸಿಕೊಳ್ಳುವಲ್ಲಿ ಶಕ್ತವಾಯಿತು, ಜೆಡಿಎಸ್ ತನ್ನ ಭದ್ರಕೋಟೆಯಲ್ಲೇ ಸೋತು ಸುಣ್ಣವಾಗಿ ಕಾಂಗ್ರೆಸ್‌ನೊಂದಿಗಿನ ಮೈತ್ರಿ ಬಗ್ಗೆ ಪಶ್ಚಾತ್ತಾಪ ಪಟ್ಟುಕೊಂಡಿತು. ಈ ಫಲಿತಾಂಶದ ಪರಿಣಾಮ ಬಿಜೆಪಿಯ ಯಡಿಯೂರಪ್ಪ ನೇತೃತ್ವದ ಸರ್ಕಾರದ ಉಳಿವಿನ ಬಗ್ಗೆ ಇದ್ದ ಆತಂಕ ದೂರವಾಯಿತು. 105 ಇದ್ದ ಬಿಜೆಪಿ ಸಂಖ್ಯಾ ಬಲ 117ಕ್ಕೆ ಏರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಆಪರೇಷನ್ ಕಮಲ ಸಕ್ಸಸ್ ಆಗಿತ್ತು.  ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಬಂಡೆದ್ದ ಶಾಸಕರ ವಿರುದ್ಧ ‘ಅನರ್ಹತೆ’ ಅಸ್ತ್ರ ಬಳಸುವುದಕ್ಕೆ ಮುಂದಾಗಿದೆಯಾದರೂ ಸುಪ್ರೀಂ ತಡೆಹಿಡಿಯಿತು, ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ಸೂಚಿಸಿದರು, ಶಿಂಧೆ ಸೇನೆಗೆ ಬಲ ಬಂದಂತಾಯಿತು.  ಇನ್ನು, ಕರ್ನಾಟಕದ ಪರಿಸ್ಥಿತಿ ಮಹಾರಾಷ್ಟ್ರದಲ್ಲಿಯೂ ಆಗಲಿದೆಯೇ ಎಂಬ ಒಂದು ಕುತೂಹಲದ ಪ್ರಶ್ನೆ ಎಳುವ ಮುನ್ನವೇ, ವಿಶ್ವಾಸಮತ ಯಾಚನೆಗೂ ಮುನ್ನವೇ ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ನೇತೃತ್ವದ ಹೊಸ ಸರ್ಕಾರ  ರಚನೆಗೆ ಸುಲಭ ದಾರಿ ಮಾಡಿಕೊಟ್ಟಿದ್ದಾರೆ.

‘ಸೂಪರ್ ಸಿಎಂ’ ತಂದಿಟ್ಟ ಬಿಕ್ಕಟ್ಟು : ‘ನೆಪೋಟಿಸಂ’ನನ್ನು ರಾಜಕೀಯದಲ್ಲಿ ತರುವುದಕ್ಕೆ ಹೋರಟವರು ಅನುಭವಿಸಿದ್ದು ಉದ್ಧವ್ ಠಾಕ್ರೆ ರಾಜಕೀಯದಲ್ಲಿ ಎದುರಿಸಿದ್ದನ್ನೆ ಎನ್ನುವುದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ. ಅದು ಕಾಂಗ್ರೆಸ್ ಗಾಂಧಿ ಕುಟುಂಬದ ಆದಿಯಾಗಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೂಡ ಈ ‘ಪ್ರಿತ್ರಾರ್ಜಿತ’ ಸಮಸ್ಯೆಯನ್ನು ಎದುರಿಸಿ ಹೊರಗೆ ನಡೆದವರು. ಒಂದು ಸಿದ್ಧಾಂತದ ಆಧಾರದಲ್ಲಿ ರಾಜಕೀಯದ ಪ್ರವೇಶ ಮಾಡಿದ ಕಾಂಗ್ರೆಸ್ ಅಂತೂ ಈ ವಿಷಯದಲ್ಲಿ ದೊಡ್ಡ ಮಟ್ಟದ ವಿರೋಧವನ್ನೇ ಅನುಭವಿಸಿತ್ತು. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿಯ ಅತೃಪ್ತ ನಾಯಕರು ಬಂಡೆದ್ದಿದ್ದು ಸಿದ್ಧಾಂತಕ್ಕಿಂತ ಮಿಗಿಲಾಗಿ ಉದ್ಧವ್ ಠಾಕ್ರೆ ಮಗ ಮಹಾರಾಷ್ಟ್ರದಲ್ಲಿ ‘ಸೂಪರ್ ಸಿಎಂ’ ಆಗುತ್ತಿದ್ದಾರೆ ಎಂಬ ಕಾರಣಕ್ಕೆ. ಒಂದು ಸಿದ್ಧಾಂತವನ್ನು ಒಪ್ಪಿಕೊಂಡು ಬಂದ ನಾಯಕರು ಯಾರೂ ಈ ಬೆಳವಣಿಗೆಯನ್ನು ಒಪ್ಪಿದವರಲ್ಲ. ಅಧಿಕಾರವನ್ನೇ ನೋಡುವವರು ಬಾಯಿ ಮುಚ್ಚಿ ಕುಳಿತುಕೊಂಡು ಪ್ರಧಾನ ಹುದ್ದೆಯಲ್ಲಿರುವವರಿಗೆ ವಿದೇಯರಾಗಿರುತ್ತಾರಷ್ಟೇ. ಇದು ಕಾಂಗ್ರೆಸ್‌ನಲ್ಲಿಯೂ ಅಷ್ಟೇ, ಕರ್ನಾಟಕ ಬಿಜೆಪಿಯಲ್ಲಿಯೂ ಹೌದು. ಕಾಂಗ್ರೆಸ್ ಇದೇ ಕಾರಣಕ್ಕೆ ಜಿ23 ಬಣದ ವಿರೋಧವನ್ನು ಎದುರಿಸಬೇಕಾಯಿತು. ಇದೇ ಕಾರಣಕ್ಕೆ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಸೇರಿ ಹಲವು ಹಿರಿಯ, ಕಿರಿಯ ಪ್ರಭಾವಿ ಮುಖಗಳು ಪರೋಕ್ಷವಾಗಿ ಬಂಡೆದ್ದು ರಾಜೀನಾಮೆ ಬಿಸಾಕಿ ಹೊರನಡೆದರು. ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಆಡಳಿತದಲ್ಲಿ ಕೂಡ ಅವರ ಮಗ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ, ವೈ ವಿಜಯೇಂದ್ರ ಅವರಿಗೆ ‘ಸೂಪರ್ ಸಿಎಂ’ ಎಂಬ ಆರೋಪವನ್ನು ಪಕ್ಷದ ಅತೃಪ್ತ ಗುಂಪು ಹೊರಿಸಿತ್ತು, ಕಳೆದ ವರ್ಷ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ನಡೆಯುವುದಕ್ಕೆ ಈ ‘ಸೂಪರ್ ಸಿಎಂ’ ಕೂಡ ಒಂದು ಕಾರಣ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈಗ ಮಹಾರಾಷ್ಟದಲ್ಲಿಯೂ ಉದ್ಧವ್ ಠಾಕ್ರೆ ಎದುರಿಸಿದ್ದು ಇದೇ ಆರೋಪ. ತಮ್ಮ ಮಗ ಆದಿತ್ಯ ಠಾಕ್ರೆ ಸಚಿವರಾದರೂ, ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸಬೇಕೆಂಬ ಪ್ರಯತ್ನದಲ್ಲಿದ್ದರು ಮತ್ತು ಪಕ್ಷದ ಹಿರಿಯರು ಏನಾದರು ಕೆಲಸವಿದ್ದರೇ ಆದಿತ್ಯ ಠಾಕ್ರೆ ಎದುರು ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇತ್ತಂತೆ. ಸರ್ಕಾರದ ಎಲ್ಲಾ ಸಚಿವಾಲಯಗಳ ಫೈಲ್ ಮುಖ್ಯಮಂತ್ರಿಯವರೆಗೆ ಹೋಗುತ್ತಿದ್ದದ್ದು, ಆದಿತ್ಯ ಠಾಕ್ರೆ ಟೀಮ್ ಪರಿಶೀಲಿಸಿದ ನಂತರವೇ ಎಂಬ ಗಂಭೀರ ಆರೋಪವೂ ಇತ್ತು. ಹಾಗಾಗಿ ಈ ಅತೃಪ್ತ ಬಳಗ ಬಿಜೆಪಿಯೊಂದಿಗೆ ಕೈ ಜೋಡಿಸುವುದಕ್ಕೆ ಮುಂದಾಗಿದ್ದು ಎಂದೇ ಹೇಳಲಾಗುತ್ತಿದೆ. ಉದ್ಧವ್ ಠಾಕ್ರೆಯವರ ರಾಜಕೀಯದ ವರ್ಚಸ್ಸಿಗೆ ಧಕ್ಕೆ ತಂದಿದ್ದು ಮಹಾ ವಿಕಾಸ್ ಅಘಾಡಿ ಒಂದಾದರೇ, ಮತ್ತೊಂದು ಈ ‘ಸೂಪರ್ ಸಿಎಂ’ ಎನ್ನುವುದು ಸ್ಪಷ್ಟ. 

ಒಟ್ಟಿನಲ್ಲಿ, ಬಿಜೆಪಿ ತನ್ನ ಸೋ ಕಾಲ್ಡ್ ‘ಆಪರೇಷನ್ ಕಮಲ’ದ ಹೆಸರಿನಲ್ಲಿ ಒಡೆದು ಆಳುವ ಪರಂಪರೆಯನ್ನು ಮುಂದುವರಿಸಿದೆ. ಬಿಜೆಪಿಗೆ  2024ರ ಚುನಾವಣೆ ಮುಖ್ಯ. ಈಗ ಏಕನಾಥ್ ಶಿಂಧೆ ಏನೋ ‘ಹು ಸರಿ’ ಎಂದಿರಬಹುದು. ಆದರೇ, ತಮ್ಮದೇ ನಿಜವಾದ ಶಿವಸೇನೆ ಎಂದು ಹೇಳಿಕೊಳ್ಳುತ್ತಿರುವ, ಬಂಡಾಯದ ಬಾವುಟ ಹಿಡಿ ಹಿಡಿದು ಮೈತ್ರಿ ಸರ್ಕಾರವನ್ನು ಉರುಳಿಸಿ ಸಂಭ್ರಮಿಸಿರುವ ಶಿಂಧೆ ಪಡೆ ಮುಂದೆ ಅರ್ಧದಾರಿಯ ಬಡತನ ಎದರಿಸಲು ತಯಾರಾಗಿದೆಯೇ ಎನ್ನುವುದು ಇಲ್ಲಿ ಮುಖ್ಯ. 

-ಶ್ರೀರಾಜ್ ವಕ್ವಾಡಿ    


Thursday, June 23, 2022

ಇನ್ಮುಂದೆ ‘ದ್ರೌಪದಿ’ ಪ್ರತಾಪ.. !?

( Photo : Internet)
ಒಡಿಶಾ ಚುನಾವಣೆಗೆ ಕಾಂಗ್ರೆಸ್‌ಗಿದು ಪರೋಕ್ಷ ಪಂಥಾಹ್ವಾನ ..? | ಮೈಂಡ್ ಡೈವರ್ಟಿಂಗ್ ಸ್ಟ್ರ್ಯಾಟಜಿ..! 

ಎಲ್ಲಾ ರಾಜಕೀಯ ಊಹೆಗಳನ್ನು ಮೀರಿ ಬರುವ ಅಚ್ಚರಿ, ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುವುದು ಮತ್ತೆ ಸಾಬೀತಾಗಿದೆ. ಹೌದು, ದೇಶದ ಪ್ರಥಮ ಪ್ರಜೆಯ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಷ್ಟ್ರಪತಿ ಚುನಾವಣೆಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಆಡಳಿತ ಪಕ್ಷ ಬಿಜೆಪಿ ಈ ಬಾರಿಯೂ ಅಚ್ಚರಿಯ ವ್ಯಕ್ತಿತ್ವವನ್ನೇ ಕಣಕ್ಕಿಳಿಸಿದೆ. ರಾಜಕೀಯ ವಲಯದಲ್ಲಿದ್ದ ನಿರೀಕ್ಷೆ ಹಾಗೂ ಊಹೆಗೂ ಮೀರಿ ಕೊನೆಯ ಕ್ಷಣದಲ್ಲಿ ಅಚ್ಚರಿಯ ಆಯ್ಕೆಯಾಗುವುದಿದ್ದರೇ, ಅದು ಬಿಜೆಪಿಯಂತಹ ಪಕ್ಷದಲ್ಲಿ ಮಾತ್ರ ಎಂಬವುದು ಕಳೆದ ರಾಷ್ಟ್ರಪತಿ‌ ಚುನಾವಣೆಯಲ್ಲಿಯೂ ಆಗಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್, ಕೇಂದ್ರ ಸಚಿವ ಮುಖ್ತಾರ್ ನಖ್ವಿ, ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಜೊತೆಗೆ ದ್ರೌಪದಿ ಮುರ್ಮು, ಜುವಾಲ್ ಓರಂ ಅವರುಗಳ ಹೆಸರು ಈ ರಾಷ್ಟçಪತಿ ಅಭ್ಯರ್ಥಿ ಹುದ್ದೆಯ ಸಂಭಾವ್ಯರ ಪಟ್ಟಿಯಲ್ಲಿ ಕೇಳಿಬಂದಿದ್ದರೂ, ಕಳೆದೆರಡು ವಾರಗಳ ಹಿಂದೆ ಈ ಭಾರಿ ಬಿಜೆಪಿ ‘ಮುಸ್ಲಿಂ’ ನಾಯಕನೋರ್ವನಿಗೆ ಮಣೆ ಹಾಕುವುದು ಪಕ್ಕಾ ಎಂದೇ ವಿಶ್ಲೇಷಣೆಗಳು ನಡೆದಿದ್ದವು. ಅದರಲ್ಲೂ ಕೇರಳದ ರಾಜ್ಯಪಾಲ ಆರೀಫ್‌ಗೆ ಅದೃಷ್ಟ ಖುಲಾಯಿಸುತ್ತದೆ ಎಂದೇ ಹೇಳಲಾಗಿತ್ತು. ಆದರೇ, ಈ ಎಲ್ಲಾ ಚರ್ಚೆಗಳು ಬದಲಾಗಿ ಜಾರ್ಖಾಂಡ್‌ನ ರಾಜ್ಯಪಾಲೆಯಾಗಿದ್ದ, ಒಡಿಶಾ ಮೂಲದ ಸಂತಾಲ್ ಎಂಬ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡುವುದರೊಂದಿಗೆ ರಾಜಕೀಯ ವಲಯದ ಊಹೆಗಳನ್ನು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸುಳ್ಳಾಗಿಸಿದೆ.  

ಕಳೆದ ಎಂಟು ವರ್ಷಗಳಿಂದ ದೊಡ್ಡ ರಾಜಕೀಯ ವಿರೋಧಗಳ ನಡುವೆಯೂ ಈಗಾಗಲೇ ನಡೆದ ಕೆಲವು ರಾಜ್ಯಗಳ ವಿಧಾನ ಸಭಾ ಚುನಾವಣೆಗಳಲ್ಲಿ ಬಹುಪಾಲನ್ನು ಬಿಜೆಪಿ ಕಬಳಿಸಿಕೊಂಡಿದೆ ಎಂದರೇ, ಬಿಜೆಪಿ ಸ್ಥಳೀಯ ಮಟ್ಟದಿಂದಲೇ ತನ್ನ ಘಟಕಗಳನ್ನು ಭದ್ರಪಡಿಸಿಕೊಂಡಿದ್ದೇ ಕಾರಣ. ರಾಜಕೀಯ ವಲಯದಲ್ಲಿನ ದೊಡ್ಡ ವಿರೋಧದ ಅಲೆಯ ನಡುವೆಯೂ ಬಿಜೆಪಿ ಜನಪ್ರಿಯತೆ ಉಳಿಸಿಕೊಂಡು ಬಂದಿದೆ ಎಂದರೇ, ಅದಕ್ಕೆ ಕಾರಣ ಬಿಜೆಪಿ ರೂಪಿಸಿದ ‘ಪಾಲಿಟಿಕಲ್ ಸ್ಟ್ರ್ಯಾಟಜಿ’. ಈ ಭಾರಿಯ ರಾಷ್ಟ್ರಪತಿ ಅಭ್ಯರ್ಥಿ ಸ್ಥಾನದ ಅಚ್ಚರಿಯ ಆಯ್ಕೆಯೂ ಕೂಡ ಅದೇ ಪಾಲಿಟಿಕಲ್ ಸ್ಟ್ರ್ಯಾಟಜಿಜಿಯ ಒಂದು ಭಾಗ ಎನ್ನುವುದನ್ನು ಇಲ್ಲಿ ಮರೆಯುವಂತಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಮತ್ತೆ ಲೋಕಸಭಾ ಚುನಾವಣೆ ಬರಲಿದೆ. ಈಗ ಬಿಜೆಪಿಗೆ ಜನರ ‘ಮೈಂಡ್ ಡೈವರ್ಟ್’ ಮಾಡುವ ತುರ್ತು ಅಗತ್ಯವಿದೆ. ಆ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಬುಡಕಟ್ಟು ಜನಾಂಗದ ನಾಯಕಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದೆ ಎಂದು ಸ್ಪಷ್ಟವಾಗಿ ಕಾಣಿಸುತ್ತಿದೆ. 

೨೦೧೭ರಲ್ಲಿಯೂ ದೊಡ್ಡ ಪ್ರಮಾಣದ ವಿರೋಧವನ್ನು ಎದುರಿಸಿತ್ತು ಬಿಜೆಪಿ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಹಣದುಬ್ಬರ, ನಿರುದ್ಯೋಗ ಸಮಸ್ಯೆಗಳ ವಿರುದ್ಧ ಇಡೀ ದೇಶದ ಜನ ತಿರುಗಿ ಬಿದ್ದಿದ್ದರು. ವಿರೋಧ ಪಕ್ಷಗಳಂತೂ ಆಡಳಿತ ಪಕ್ಷ ಬಿಜೆಪಿಯನ್ನು ಬೆಂಬಿಡದೆ ಕಾಡಿದ್ದವು. ಆ ಸಂದರ್ಭದಲ್ಲಿ ಬಿಜೆಪಿಗೆ ಜನರ ‘ಮೈಂಡ್ ಡೈವರ್ಟ್’ ಮಾಡುವ ಅಗತ್ಯತೆ ಇತ್ತು. ಅಯೋಧ್ಯೆ ಶ್ರೀರಾಮ ಮಂದಿರ ವಿಚಾರವನ್ನು ಮುನ್ನೆಲೆಗೆ ತಂದಿತ್ತು, ರಾಷ್ಟ್ರಪತಿ ಹುದ್ದೆಗೆ ಅಚ್ಚರಿಯ ದಲಿತ ನಾಯಕ ರಾಮನಾಥ್ ಕೋವಿಂದ್‌ರನ್ನು ಆಯ್ಕೆ ಮಾಡುವುದರ ಮೂಲಕ ರಾಜಕೀಯ ರಣತಂತ್ರ ಹೆಣೆದಿತ್ತು. ಈ ಎರಡು ವಿಷಯಗಳೊಂದಿಗೆ ಸ್ವಲ್ಪ ಮಟ್ಟಿಗೆ ಆಡಳಿತದ ವಿರೋಧಿಗಳ ಬಾಯಿ ಮುಚ್ಚಿಸಿತ್ತು. ಜನರನ್ನು ಧಾರ್ಮಿಕ ವಿಚಾರಲ್ಲಿ ಮನ ಸೆಳೆಯುವುದರ ಮುಖೇನ ಅಭಿಪ್ರಾಯವನ್ನು ಬದಲಾಯಿಸುವುದರಲ್ಲಿಯೂ ಯಶಸ್ವಿಯಾಗಿತ್ತು, ಪ್ರಣವ್ ಮುಖರ್ಜಿ ಅವರ ಅವಧಿ ಮುಕ್ತಾಯಗೊಂಡಾಗ ದೇಶದ ಪ್ರಥಮ ಪ್ರಜೆಯ ಚುನಾವಣೆಗೆ ಎಲ್ಲಿಯೂ ಸದ್ದಿಲ್ಲದ, ಸುದ್ದಿಯಲ್ಲಿಲ್ಲದ ದಲಿತ ನಾಯಕ ರಾಮನಾಥ್ ಕೋವಿಂದ್ ಅವರಿಗೆ ಮಣೆ ಹಾಕಿ ತಮ್ಮದು ಜಾತ್ಯಾತೀತ ಪಕ್ಷ ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲಿಯೂ ಯಶಸ್ವಿಯಾಯಿತು. ಅದಾದ ಮೇಲೆ ನಡೆದ ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಯಾವ ರೀತಿ ಬಿಜೆಪಿ ಸರ್ಕಾರ ಟ್ರೀಟ್ ಮಾಡಿತ್ತು ಎನ್ನುವುದು ನಿಮಗೆ ತಿಳಿದಿದೆ. ಆದರೂ ಒಂದಿಷ್ಟು ವಿವರಿಸದೇ ಇರುವುದಕ್ಕೆ ಸಾಧ್ಯವೇ ಇಲ್ಲ. ಪ್ರಕರಣದ ಸಾಕ್ಷ್ಯ ನಾಶ ಮಾಡುವುದಕ್ಕೆ ಪ್ರಯತ್ನಿಸಿದ ಬಿಜೆಪಿ ಸರ್ಕಾರದ ವಿರುದ್ಧ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಯಿತು. ವರದಿ ಮಾಡಲು ಹೋದ ಮಾಧ್ಯಮಗಳನ್ನು ಪೋಲಿಸರಿಂದ ತಡೆಯಲಾಯಿತು. ಅದರಲ್ಲೂ ಎಬಿಪಿ ನ್ಯೂಸ್‌ನ ವರದಿಗಾರ್ತಿ ಪ್ರತಿಮಾ ಮಿಶ್ರಾ, ತನ್ನನ್ನು ಎಳೆದಾಡಿ ತಡೆಯುತ್ತಿದ್ದ ಆಡಳಿತ ಪಕ್ಷದ ತೊಟ್ಟಿಲ ಕೂಸುಗಳಂತೆ ವರ್ತಿಸುತ್ತಿದ್ದ ಪೊಲೀಸರ ವಿರುದ್ಧ ಅಕ್ಷರಶಃ ತೊಡೆತಟ್ಟಿ, ಅಲ್ಲೇ ಕುಳಿತು ವರದಿ ಮಾಡಿದಳು, ಇಂಡಿಯಾ ಟುಡೆ ವರದಿಗಾರ್ತಿ ತನುಶ್ರೀ ಪಾಂಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಸರ್ಕಾರ ಹತ್ರಾಸ್ ಅತ್ಯಚಾರ ಪ್ರಕರಣದಲ್ಲಿ ಕೊಲೆಯಾದ ದಲಿತ ಯುವತಿಯ ಕುಟುಂಬಕ್ಕೆ ಒತ್ತಡ ಹೇರುತ್ತಿದೆ ಎಂಬ ವರದಿಯನ್ನು ಸಾಕ್ಷಿ ಸಮೇತ ಬಿತ್ತರಿಸುವುದಕ್ಕೆ ಪ್ರಯತ್ನಿಸಿದಾಗ ಅದಕ್ಕೂ ತಡೆಯುವುದಕ್ಕೆ ಪ್ರಯತ್ನಿಸಲಾಯಿತು. ಇಲ್ಲೇ ಗೊತ್ತಾಗುವುದಿಲ್ಲವೇ ರಾಜಕೀಯದ ಜಾತ್ಯಾತೀತ ನಿಲುವು..? ರಾಷ್ಟ್ರಪತಿ ಹುದ್ದೆಗೋ, ಮುಖ್ಯಮಂತ್ರಿ ಸ್ಥಾನಕ್ಕೋ ಅಥವಾ ರಾಜಕೀಯದ ಮೇಲ್ಪಂಕ್ತಿಯ ಹುದ್ದೆಗಳಿಗೋ ಕೆಳವರ್ಗಗಳ ನಾಯಕರಿಗೆ ಮಣೆ ಹಾಕಿದರಷ್ಟೇ ಜಾತ್ಯಾತೀತವೇ..? ಉಳಿದ ವಿಚಾರದಲ್ಲಿಯೂ ಆ ಧೋರಣೆ ಬೇಡವೇ..? ಬಿಟ್ಬಿಡಿ, ಶೋಷಿತ ವರ್ಗಗಳ ಪರವಾಗಿ ಹೋರಾಡುವವರನ್ನು ಈ ಪಕ್ಷ ದೇಶದ್ರೋಹಿಗಳು ಎಂದೂ ಬಿಂಬಿಸಿದ್ದಿದೆ. ರಾಜಕೀಯ, ಅಧಿಕಾರ ಅಂತಂದಾಗ ಏನನ್ನು ಮಾಡುವುದಕ್ಕೂ ಬಿಜೆಪಿ ಸಿದ್ಧ ಎನ್ನುವುದಕ್ಕೆ ಇದೊಂದೇ ಸಾಕ್ಷಿ ಸಾಕಲ್ಲವೇ..? ಅದೇನೇ ಇರಲಿ, ದಲಿತ ಸಮುದಾಯದಿಂದ ಕೋವಿಂದ್ ಈ ದೇಶದ ಪ್ರಥಮ ಪ್ರಜೆಯಾದರು, ಅವಧಿಯೂ ಯಶಸ್ವಿಯಾಗಿ ಮುಗಿಸುವ ಹಂತದಲ್ಲಿದ್ದಾರೆ. ಇವೆಲ್ಲಾ ರಾಜಕೀಯ ತಂತ್ರಗಾರಿಕೆ ಎನ್ನುವುದನ್ನು ಸಾಮಾನ್ಯ ಜನವರ್ಗ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಅಷ್ಟೇ. ಬಿಜೆಪಿ ಮಾತ್ರವಂತಲ್ಲ, ಉಳಿದ ಪಕ್ಷಗಳು ಕೂಡ ಇದಕ್ಕೆ ಹೊರತಾಗಿಲ್ಲ. 

ಈ ಭಾರಿಯೂ ಆಡಳಿತ ಬಿಜೆಪಿ ಸರ್ಕಾರ ಮತ್ತೆ ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗ, ಪೌರತ್ವ ಕಾಯ್ದೆ, ಧರ್ಮ ರಾಜಕೀಯ ಮುಂತಾದ ವಿಚಾರಗಳ ಕಾರಣಗಳಿಂದಾಗಿ ಭಾರಿ ದೊಡ್ಡ ಮಟ್ಟದ ವಿರೋಧ ಅಲೆಯನ್ನು ಎದುರಿಸುತ್ತಿದೆ. ಅದನ್ನು ಡೈವರ್ಟ್ ಮಾಡುವುದೇ ಬಿಜೆಪಿಗೆ ಈಗ ಸದ್ಯಕ್ಕಿರುವ ಪರಮ ಗುರಿ ಎಂದೇ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.  ಆ ಭಾಗವಾಗಿಯೇ, ಇದೇ ಮೊಟ್ಟ ಮೊದಲ ಭಾರಿಗೆ ತನ್ನ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರನ್ನು ಕಣಕ್ಕಿಳಿಸಿದೆ ಎಂದೇ ಹೇಳಲಾಗುತ್ತಿದೆ. ಇನ್ನು, ಸಾಮಾಜಿಕ ವಲಯದಲ್ಲಿ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ರಾಜಕೀಯ ಚರ್ಚೆಗಳಾಗುತ್ತಿವೆ. ‘ಮಾವೋವಾದಿಗಳು ಬುಡಕಟ್ಟು ಜನಾಂಗದವರಿಂದ ‘ಗನ್’ ಸಂಸ್ಕೃತಿಯನ್ನು ಬೆಳೆಸಲು ಪ್ರಚೋದನೆ ನೀಡುವವರಾದರೇ, ರಾಷ್ಟ್ರೀಯವಾದಿಗಳು ಅದೇ ಬುಡಕಟ್ಟು ಜನಾಂಗದ ಮಹಿಳೆಗೆ ಸಂವಿಧಾನದ ಪರಮೋಚ್ಛ ಅಧಿಕಾರ ನೀಡಿ ವ್ಯವಸ್ಥೆಯ ಸುಧಾರಣೆಗೆ ಪ್ರೇರಣೆ ಕೊಡುವವರು’ ಎಂಬ ಎನ್‌ಡಿಎ ಪರವಾದ ಧ್ವನಿ ಎದ್ದಿದೆ. ಈ ಎಲ್ಲದಕ್ಕಿಂತ ಮಿಗಿಲಾಗಿ ಬಿಜೆಪಿ ಆದಿವಾಸಿ ಮತಗಳ ಮೇಲೆ ಕಣ್ಣಿಟ್ಟಿದೆ ಎನ್ನುವುದು ಇಲ್ಲಿ ಬಹಳ ಸ್ಪಷ್ಟ. ಮಹಾರಾಷ್ಟ್ರ, ಒಡಿಶಾ, ಜಾರ್ಖಾಂಡ್, ಛತ್ತೀಸ್‌ಗಢ ಹಾಗೂ ಈಶಾನ್ಯ- ಮೊದಲಾದ ರಾಜ್ಯಗಳಲ್ಲಿ ಉಳಿದ ರಾಜ್ಯಗಳಿಗಿಂತ ಹೆಚ್ಚಾಗಿ ಆದಿವಾಸಿ ಮತಗಳಿರುವುದರಿಂದ ಆ ಮತಗಳನ್ನು ಸೆಳೆಯುವುದಕ್ಕೆ ದ್ರೌಪದಿ ಮುರ್ಮು ಎಂಬ ಆದಿವಾಸಿ ಜನಾಂಗದ ಪ್ರಭಾವಿ ಮಹಿಳೆಯೋರ್ವರರನ್ನು ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ಆಯ್ಕೆ ಮಾಡಿ ರಾಜಕೀಯ ತಂತ್ರ ಹೆಣೆದಿದೆ ಎಂಬುವುದು ಅಕ್ಷರಶಃ ಸತ್ಯ.  

ಇನ್ನು, ವಿರೋಧ ಪಕ್ಷಗಳ ಒಕ್ಕೂಟದ ಅಭ್ಯರ್ಥಿ ಸ್ಥಾನಕ್ಕೂ ಈ ಭಾರಿ ಅಚ್ಚರಿಯ ಆಯ್ಕೆಯೇ ಆಗಿದೆ. ಈ ಹಿಂದೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರ ಹೆಸರುಗಳು ಸಂಭಾವ್ಯರ ಪಟ್ಟಿಯಲ್ಲಿದ್ದಿತ್ತು, ಆದರೇ, ಕೊನೆಯ ಕ್ಷಣದಲ್ಲಿ ಮಾಜಿ ಐಎಎಸ್ ಅಧಿಕಾರಿ, ಮಾಜಿ ಕೇಂದ್ರ ಸಚಿವ ಯಶವಂತ ಸಿಹ್ನಾ ಅವರನ್ನು ಆಯ್ಕೆ ಮಾಡಿದೆ. 

ಬಹುಮತಕ್ಕೆ ಬೇಕಾಗುವ ಬಹುತೇಕ ಮತಗಳು(೪೮.೦೬%) ಬಿಜೆಪಿಯಲ್ಲಿದ್ದು, (ಕಾಂಗ್ರೆಸ್ ೨೪.೧೯% ಮತಗಳು ಹಾಗೂ ಇತರೆ ಪಕ್ಷಗಳು ೨೭.೧೫% ಮತಗಳನ್ನು ಹೊಂದಿವೆ) ಈ ಭಾರಿಯ ರಾಷ್ಟ್ರಪತಿ ಸ್ಥಾನಕ್ಕೆ ಅವಿರೋಧ ಆಯ್ಕೆ ಆಗುವುದು ಬೇಡ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ಸಿಹ್ನಾ ಅವರನ್ನು ಕಣಕ್ಕಿಳಿಸಿದೆ. ಹಾಗಾಗಿ ಇದೊಂದು ಔಪಚಾರಿಕ ಚುನಾವಣೆಯಾಗಲಿದ್ದು, ದ್ರೌಪದಿ ರಾಷ್ಟ್ರಪತಿ ಹುದ್ದೆ ಅಲಂಕರಿಸುವುದು ಬಹುತೇಕ ನಿಶ್ಚಿತ ಎನ್ನುವುದು ಸ್ಪಷ್ಟ. ದ್ರೌಪದಿ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರೇ, ಈ ದೇಶದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿ (೨೦೦೭ರಲ್ಲಿ ಈ ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಮಹಾರಾಷ್ಟ್ರದ ಜಲಗಾಂ ಬಳಿಯ ನಾಡ್‌ಗಾಂ ಎಂಬ ಹಳ್ಳಿಯ ಒಂದು ಸಾಹುಕಾರ ಪರಿವಾರದ ಪ್ರತಿಭಾ ಕುಮಾರಿ ಪಾಟೀಲ್ {ಅಂದಿನ ರಾಜಸ್ಥಾನದ ರಾಜ್ಯಪಾಲೆ} ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು ಎನ್ನುವುದು ಇಲ್ಲಿ ಗಮನಾರ್ಹ) ಹಾಗೂ ಈ ದೇಶದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿಯಾಗಲಿದ್ದಾರೆ. 

ಒಟ್ಟಿನಲ್ಲಿ, ಬುಡಕಟ್ಟು ಜನಾಂಗದ ಒಂದು ದೊಡ್ಡ ರಾಜ್ಯವೇ ಎಂದು ಕರೆಸಿಕೊಂಡ ದೇಶದ ಆಗ್ನೇಯ ತೀರದ ಒಡಿಶಾದ ಬಿಜೆಪಿಯ ಪ್ರಮುಖ ನಾಯಕಿಯಾಗಿರುವ, ಆದಿವಾಸಿ ಜನಾಂಗದ ಪ್ರಭಾವಿ ಮುಖವಾಗಿರುವ ದ್ರೌಪದಿ ಮುರ್ಮು ಅವರನ್ನು ಮೋದಿ ನೇತೃತ್ವದ ಸರ್ಕಾರ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುವುದರ ಮುಖೇನ ಕಾಂಗ್ರೆಸ್‌ಗೆ ಒಡಿಶಾದ ಮುಂದಿನ ಚುನಾವಣೆಯ ‘ಕಳಿಂಗ ಯುದ್ಧ’ಕ್ಕೆ ಈಗಾಗಲೇ ಪರೋಕ್ಷವಾಗಿ ಪಂಥಾಹ್ವಾನ ನೀಡಿದೆ ಎನ್ನುವುದು ಸ್ಪಷ್ಟ.  

-ಶ್ರೀರಾಜ್ ವಕ್ವಾಡಿ           


Thursday, June 16, 2022

ಹೀಗಾಗದಿದ್ದಿದ್ದರೇ... ಹೀಗಾಗುತ್ತಿರಲಿಲ್ಲ..!

ಸಮಿತಿಯ ಮಾಜಿ ಅಧ್ಯಕ್ಷರಾದ್ಮೇಲೆ ಸರ್ಕಾರದ ಬುಡಕ್ಕಿಟ್ರೇ ಚಕ್ರತೀರ್ಥ..?

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಮ್ಮ ರೋಗಗ್ರಸ್ತ ಬುದ್ಧಿಯ ಪ್ರಯೋಗದಿಂದಾಗಿ ರಾಜ್ಯದ ಜನರೆದುರು ರಾಜ್ಯ ಸರ್ಕಾರ ಕ್ಷಮೆ ಕೇಳುವಂತೆ ಹಗಲಿರುಳು ಶ್ರಮಿಸಿದ್ದಾರೆ. ಸರ್ಕಾರದ ಯಾವುದೇ ಅಧಿಕೃತ ಆದೇಶವಿಲ್ಲದೇ ತಮಗೆ ಮನಬಂದಂತೆ ಪಠ್ಯಗಳನ್ನು ಪರಿಷ್ಕರಿಸಿ ಶಿಕ್ಷಣ ಇಲಾಖೆಯ ಬೊಕ್ಕಸಕ್ಕೂ ನಷ್ಟವಾಗುವಂತೆ ಮಾಡುವಲ್ಲಿ ಭಗೀರಥ ಪ್ರಯತ್ನ ಮಾಡಿದ್ದಾರೆ. ಇಂತಹುದೆಲ್ಲಾ ಆಗಬಹುದಾದದರೇ, ಅದು ಕೇವಲ ರೋಹಿತ್ ಚಕ್ರತೀರ್ಥ ಅಂತವರಿಂದಲೇ ಮಾತ್ರ ಎನ್ನುವುದು ಮತ್ತೆ ಸಾಬೀತಾಗಿದೆ. 

ವರದಿ ಸಲ್ಲಿಸಿ ಎಂದರೇ, ಒಂದು ಹೆಜ್ಜೆ ಮುಂದೆ ಹೋಗಿ ಪಠ್ಯವನ್ನೇ ಬದಲಾಯಿಸಿ ಬಿಟ್ಟಿದ್ದಾರೆ ಸಮಿತಿಯ ಮಾಜಿ ಅಧ್ಯಕ್ಷರು. ಅಷ್ಟಕ್ಕೂ ಸಮಿತಿಯಲ್ಲಿನ ಮೇಲ್ಜಾತಿಯವರಿಂದಲೇ, ಈ ವಿವಾದ ಸೃಷ್ಟಿಯಾಗಿದೆ ಎಂಬ ಆರೋಪಗಳು, ನಖಶಿಖಾಂತ ಕೋಪ ಶೈಕ್ಷಣಿಕ ವಲಯದಲ್ಲಿ ಸೃಷ್ಟಿಯಾಗಿದೆ. ರಾಜ್ಯದ ಆಡಳಿತ ಸರ್ಕಾರ ಬಿಜೆಪಿಗೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಶಿಕ್ಷಣ ತಜ್ಞರನ್ನು ಹೊರತಾಗಿ ಬಲ ಪಂಥದವರೇ ಬೇಕಾಗಿತ್ತು ಎಂದಾಗಿದ್ದರೇ ಬೇರೆ ಯಾವ ಬಲ ಪಂಥದವರನ್ನು ಹುಡುಕುವುದಕ್ಕೆ ಸಾಧ್ಯವಾಗದಷ್ಟು ಬಿಜೆಪಿ ಸರ್ಕಾರಕ್ಕೆ ಬೌದ್ಧಿಕ ಬಡತನ ಬಂದಿದೆಯೇ ಎಂಬ ಅಸಹನೀಯ ಪ್ರಶ್ನೆಯೊಂದು ಮೂಡುತ್ತಿದೆ. ಇದಂತೂ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕಳೆದ ಎರಡು ಮೂರು ವರ್ಷಗಳಿಂದ ನಿರಂತರವಾಗಿ ಶೈಕ್ಷಣಿಕ ವಿಚಾರದಲ್ಲಿ ವಿವಾದಕ್ಕೆ ಒಳಗಾಗಿದ್ದ ಬಿಜೆಪಿ ಸರ್ಕಾರ, ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ‘ಔಟ್ ಆಫ್ ಔಟ್’ ಫಲಿತಾಂಶದ ವಿಚಾರದಲ್ಲಿ ನಗೆಪಾಟಲಿಗೀಡಾಗಿತ್ತು, ಈಗ ಆ ಸಾಲಿಗೆ ಪಠ್ಯ ಪರಿಷ್ಕರಣೆ ವಿವಾದ ಸೇರಿಕೊಂಡಿದೆ. 

ಈ ಪರಿಷ್ಕರಣೆ ಕೆಲವರಿಗೆ ಸರಿಯೇ ಎಂದೆನಿಸರಬಹುದು ಮತ್ತು ಒಂದಿಷ್ಟು ಮಂದಿಗೆ ಅಪರಿಮಿತ ಸಿಟ್ಟು ಬಂದಿರಬಹುದು. ಅದಕ್ಕೂ ಮೀರಿದ್ದನ್ನು ಅರ್ಥೈಸಿಕೊಳ್ಳಬೇಕಾದದ್ದು ಇಲ್ಲಿ ಮುಖ್ಯ. ನಾಡಗೀತೆಗೆ ಅವಮಾನಿಸಿದವನೊಬ್ಬನಿಗೆ ಮಕ್ಕಳ ಭವಿಷ್ಯ ರೂಪಿಸುವ ಪವಿತ್ರ ಕೆಲಸದ ಜವಾಬ್ದಾರಿಯನ್ನು ಸರ್ಕಾರ ನೀಡಿದ್ದೇ ದೊಡ್ಡ ದುರಂತ. ಇದು ಅಕ್ಷರ ಸಂಸ್ಕೃತಿಗೆ ಮಾಡಿದ ವ್ಯಭಿವಾರವಲ್ಲದೇ ಮತ್ತೇನು..? ಈ ಹಿಂದಿದ್ದ ಪಠ್ಯ ಪುಸ್ತಕಗಳಿಗೆ ಯಾವುದೇ ಪರಿಷ್ಕರಿಸುವ ಅಗತ್ಯ ಬೇಕಾಗಿರಲಿಲ್ಲ. ಸರಿಯೇ ಇತ್ತು. ಅಂತಹುದರಲ್ಲಿ ಇಂತಹ ಒಬ್ಬ ವಿಕೃತ ಸಂತೋಷಿಯೊಬ್ಬನ ನೇತೃತ್ವದದ ಸಮಿತಿಗೆ ಪರಿಷ್ಕರಿಸುವ ಜವಾಬ್ದಾರಿ ಕೊಟ್ಟ ಸರ್ಕಾರದ ಬಗ್ಗೆ ಯೋಚಿಸಿದರೇ, ಇದು ಸರ್ಕಾರ ತನ್ನ ರಾಜಕೀಯ ಸಿದ್ಧಾಂತವನ್ನು ಎಳೆಯ ವಯಸ್ಸಿನಲ್ಲಿಯೇ ಮಕ್ಕಳ ಮೇಲೆ ಹೇರುವ ಪ್ರಯತ್ನ ಮಾಡಿದೆ ಎಂದೇ ಕಾಣಿಸುತ್ತದೆ. ಅದೇನೇ ಆದರೂ, ಇದು ಸರ್ಕಾರದ ಆತ್ಮಸಾಕ್ಷಿಗೆ ಒಳಪೆಟ್ಟು ನೀಡದೇ ಇದ್ದಿತೆ..?  

ಸರ್ಕಾರದ ಮೌಖಿಕ ಆದೇಶವೇ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣವಾಗಿದೆ ಎನ್ನುವುದು ಇಲ್ಲಿ ಗಮನಾರ್ಹ. ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಸಮಿತಿ ಮಾಡಿದ ಅವಾಂತರಗಳಿಂದಾಗಿ, ಪರಿಷ್ಕರಣೆಯ ವಿವಾದ ಬಗೆಹರಿಸುವ ದೃಷ್ಟಿಯಿಂದ ಹಾಗೂ ವಿವಾದಗಳಿಂದ ಪಾರಾಗುವ ಪರಮ ಉದ್ದೇಶದಿಂದ ಬಟರ್ ಹಚ್ಚುವ ಪ್ರಯತ್ನ ಮಾಡಬೇಕಾದ ಸ್ಥಿತಿ ಸರ್ಕಾರಕ್ಕೆ ಬಂದಿರುವುದು ನಿಜಕ್ಕೂ ಹಾಸ್ಯಾಸ್ಪದ. ಒಬ್ಬ ಅನರ್ಹ ವ್ಯಕ್ತಿಗೆ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟ ಕಾರಣದಿಂದಾಗಿ ಇಂದು ಸರ್ಕಾರವೇ ಬೆಲೆತೆರಬೇಕಾದ ಸ್ಥಿತಿ ಬಂದೊದಗಿತು. ಏನೋ ಹೊಸದು ಮಾಡುವುದಕ್ಕೆ ಹೋಗಿ ಬಾಲ ಸುಟ್ಟುಕೊಂಡ ಹಾಗಾಯ್ತಿದು ಕಥೆ. 

ಈ ಹಿಂದೆ ಎಂದೂ ಆಗಿರದ ಈ ಪಠ್ಯ ಪರಿಷ್ಕರಣೆ ಸಂಬಂಧಿಸಿ ಹುಟ್ಟಿಕೊಂಡಿರುವ ಎಲ್ಲಾ ವಿವಾದಗಳನ್ನು ತೆರೆಮರೆಗೆ ಸರಿಸುವ ಪ್ರಯತ್ನದಲ್ಲಿ ಸಮಿತಿಯನ್ನು ಸರ್ಕಾರ ವಿಸರ್ಜಿಸಿದ್ದಲ್ಲದೇ, ಪರಿಷ್ಕರಣೆ ಸರಿಯಾಗಿಲ್ಲ ಎಂದು ವಿರೋಧಾಭಿಪ್ರಾಯ ವ್ಯಕ್ತ ಪಡಿಸಿದ ಶಿಕ್ಷಣ ತಜ್ಞರ, ನಾಡಿನ ಹಿರಿಯ ಸಾಹಿತಿಗಳ ಎದರು ಅಕ್ಷರಶಃ ಮಂಡಿವೂರಿ ಕುಳಿತು ಬಿಟ್ಟಿತು ಎಂಬಂತೆಯೇ ‘ಪರಿಷ್ಕರಣೆಯಲ್ಲಿ ತಪ್ಪಾಗಿದೆ ಸರಿಪಡಿಸಿಕೊಳ್ಳುತ್ತೇವೆ’ ಎಂದು ಬಿಡ್ತು.

ಮಾತ್ರವಲ್ಲದೇ, ಈಗಿನ ರೋಹಿತ್ ಚಕ್ರತೀರ್ಥ ಸಮಿತಿ, ಹಿಂದಿನ ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಸಮಿತಿ ಹಾಗೂ ಅದಕ್ಕೂ ಹಿಂದಿನ ಮಡಂಬಡಿತ್ತಾಯ ಸಮಿತಿ ಪರಿಷ್ಕರಿಸಿರುವ ಮೂರು ಪ್ರತ್ಯೇಕ ಪಠ್ಯ ಕ್ರಮಗಳನ್ನು ಸಾರ್ವಜನಿಕರಿಗಾಗಿ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿ, ಸಾರ್ವಜನಿಕರ ಆಕ್ಷೇಪಣೆಗಳನ್ನು ಆಹ್ವಾನಿಸಲು ಮುಂದಾಗಿದೆ. ಇಷ್ಟಾಗಿಯೂ ಚಕ್ರತೀರ್ಥನನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಈ ನಾಡಿನ ಕೆಲವು ಸೋ ಕಾಲ್ಡ್ ಸಾಹಿತಿಗಳು, ಚಿಂತಕರು ಮಾಡಿದರು. ಮಾತ್ರವಲ್ಲದೇ, ಸಮಾಜದ ಮುಖವಾಣಿಯಾಗಿ ಇರಬೇಕಾದ ಒಂದು ಕನ್ನಡ ದಿನಪತ್ರಿಕೆ, ಒಂದು ದೃಶ್ಯ ಮಾಧ್ಯಮ ನಿರಂತರವಾಗಿ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕದ ಪರವಾಗಿದೆ ಎಂಬಂತೆಯೇ ವರ್ತಿಸಿದವು. ಮಾನವತಾವಾದಿ, ರಾಷ್ಟ್ರಕವಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ದೇಶಕಂಡ ಶ್ರೇಷ್ಠಮಾನ್ಯ ಕವಿ, ಸಾಹಿತಿ ಕುವೆಂಪು ಅವರನ್ನು, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್, ಕ್ರಾಂತಿಯೋಗಿ, ಮಹಾಮಾನವತಾವಾದಿ ಬಸವಣ್ಣ ಅವರನ್ನು ಪಠ್ಯದಲ್ಲಿ ಕಡೆಗಣಿಸಿದ್ದನ್ನು ಪ್ರಶ್ನಿಸಿದವರನ್ನು ರಾಷ್ಟ್ರ ವಿರೋಧಿಗಳು ಎಂಬ ಪಟ್ಟ ಕಟ್ಟಿ ಟೀಕೆ ಮಾಡುವುದರೊಂದಿಗೆ ಇದೇ ಸರಿ ಎಂದು ಸಮರ್ಥಿಸಿಕೊಳ್ಳುವಷ್ಟರ ಮಟ್ಟಿಗೆ ಒಂದು ಸಿದ್ಧಾಂತ ಪ್ರಭಾವ ಬೀರಿದೆ ಎಂದರೇ ಅದು ಒಳ್ಳೆಯದು ಅಲ್ಲ ಎಂದೇ ಅರ್ಥೈಸಿಕೊಳ್ಳಬೇಕಾಗಿದೆ. 

ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಹಿಂದಿನ ಸಮಿತಿಯಿಂದ ಪರಿಷ್ಕರಿಸಲ್ಪಟ್ಟ ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ, ಕೋಮಿನ ಕಕ್ಕಸು ತುಂಬಿಕೊಂಡಿದ್ದ ಸೋ ಕಾಲ್ಡ್ ಚಿಂತಕ ರೋಹಿತ್ ಚಕ್ರತೀರ್ಥ ಸಮಿತಿ ‘ಕರ್ನಾಟಕ ಏಕೀಕರಣಮತ್ತು ಗಡಿ ವಿವಾದಗಳು’ ಎಂಬ ಪಾಠದಲ್ಲಿದ್ದ ಕುವೆಂಪು, ಹುಯಿಲಗೋಲ ನಾರಾಯಣ ರಾಯರು, ಆಲೂರು ವೆಂಕಟರಾಯರ ಫೋಟೋವನ್ನು ಪರಿಷ್ಕರಣೆಯ ವೇಳೆ ಸ್ಥಳಾವಕಾಶವಿದ್ದರೂ ತೆಗೆದು ಹಾಕಿದೆ. ಮಾತ್ರವಲ್ಲದೇ ಒಂಬತ್ತನೆಯ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿದ್ದ ಡಾ. ಬಿ ಆರ್. ಅಂಬೇಡ್ಕರ್ ‘ಸಂವಿಧಾನ ಶಿಲ್ಪಿ’ ಪಠ್ಯಾಂಶವನ್ನು, ಆರನೇ ತರಗತಿ ಪಠ್ಯದಲ್ಲಿದ್ದ ಚನ್ನಣ್ಣ ವಾಲೀಕಾರ್ ಅವರ ‘ನೀ ಹೋದ ಮರುದಿನ’, ಏಳನೆಯ ತರಗತಿಯ ಸಮಾಜ ವಿಜ್ಞಾನದಲ್ಲಿದ್ದ ಅಂಬೇಡ್ಕರ್ ಅವರ ಪೋಷಕರ ಮಾಹಿತಿ, ಹುಟ್ಟಿದ ದಿನಾಂಕ, ಜನ್ಮಸ್ಥಳದ ಮಾಹಿತಿ, ೧೯೨೭ರಲ್ಲಿ ಸಾರ್ವಜನಿಕ ಕುಡಿಯುವ ನೀರಿಗಾಗಿ ಮಾಡಿದ ‘ಮಹಾದ್ ಸತ್ಯಾಗ್ರಹ’, ಹತ್ತನೇ ತರಗತಿಯ ಸಮಾಜ ವಿಜ್ಞಾನದಲ್ಲಿದ್ದ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರಲು ಕಾರಣಗಳನ್ನು ಕೈಬಿಡಲಾಗಿತ್ತು. ಹೀಗಿರುವಾಗಲೂ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಹಾಗೂ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಪಠ್ಯ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿದ್ದರು ಎಂದರೇ ಅದು ಅವರ ಬುದ್ಧಿ ಎಂತದ್ದು ಎನ್ನುವುದನ್ನು ಸೂಚಿಸುತ್ತದೆ. ಸದ್ಯ, ೯ನೇ ತರಗತಿಯ ಸಮಾಜ ವಿಜ್ಞಾನದ ‘ನಮ್ಮ ಸಂವಿಧಾನ’ ಪತ್ಯೇಕವಾಗಿ ಮುದ್ರಿಸಿ ಶಾಲೆಗಳಿಗೆ ಪೂರೈಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದಲ್ಲದೇ, ವಿವಾದಿತ ಇತಿಹಾಸ ಪಠ್ಯದ ಬದಲಾವಣೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿರುವುದು, ಬರಗೂರು ಸಮಿತಿಯಲ್ಲಿ ರಚಿಸಿದ್ದ ಬಸವಣ್ಣ ಅವರ ಪಠ್ಯ ಮಂದುವರಿಕೆಗೆ ಸರ್ಕಾರ ಮುಂದಾಗಿದೆ ಎನ್ನುವುದು ಕೊಂಚ ಸಮಾಧಾನಕರ ವಿಷಯ. 

ಇನ್ನು, ಸಮಿತಿ ವಿಸರ್ಜನೆಯ ಬಳಿಕ ಪಠ್ಯ ಪರಿಷ್ಕರಣಾ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಸಂಶೋಧಕನಿಗೆ ಸತ್ಯವೇ ಮುಖ್ಯವಾಗುತ್ತದೆ ಆದರೇ, ರಾಜಕೀಯ ಪಕ್ಷ ಅಥವಾ ಸರ್ಕಾರಕ್ಕೆ ಮತಗಳು ಮುಖ್ಯವಾಗುತ್ತದೆ. ಸತ್ಯ ಹಾಗೂ ಮತಗಳಲ್ಲಿ ಸಂಶೋಧಕ ಮೊದಲನೆಯದ್ದನ್ನು ಆರಿಸಿದರೇ, ರಾಜಕೀಯ ಶಕ್ತಿ ಎರಡನೆಯದ್ದನ್ನು ಆರಿಸಿಕೊಳ್ಳುತ್ತದೆ ಎಂದು ಸರ್ಕಾರದ ಮೇಲಿನ ಅಸಾಮಾಧನ ವ್ಯಕ್ತ ಪಡಿಸುತ್ತಾ ಪರೋಕ್ಷವಾಗಿ ‘ಬಿಜೆಪಿ ಸರ್ಕಾರದ ಬುಡಕ್ಕೆ ಇಟ್ರು’. ಆದರೇ, ಅದ್ಯಾವ ಅರ್ಥದಲ್ಲಿ ತಮ್ಮನ್ನು ತಾವು ಸಂಶೋಧಕನೆಂದು ಹೇಳಿಕೊಂಡರೋ ಗೊತ್ತಿಲ್ಲ. ಸಂಶೋಧಕ ಪಾಲಿಸಬೇಕಾದ ಯಾವುದೇ ಒಂದೇ ಒಂದು ಜವಾಬ್ದಾರಿಯನ್ನು ಪರಿಷ್ಕರಣೆಯಲ್ಲಿ ಚಕ್ರತೀರ್ಥ ಪಾಲಿಸಿಲ್ಲ. 

ಏನಿದಕ್ಕೆಲ್ಲಾ ಕಾರಣ..? : ಬಿಜೆಪಿ ಸರ್ಕಾರದ ಆರಂಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್, ೨೦೨೦ರ ಡಿಸೆಂಬರ್‌ನಲ್ಲಿ ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ-೨ರಲ್ಲಿದ್ದ ‘ಹೊಸಧರ್ಮಗಳು ಏಕೆ ಉದಯಿಸದವು’ ಎಂಬ ಶೀರ್ಷಿಕೆಯಡಿಯಲ್ಲಿದ್ದ ಕೆಲವು ಅಂಶಗಳನ್ನು ಹಾಗೂ ೧ರಿಂದ ೧೦ನೇ ತರಗತಿಯ ಸಮಾಜ ವಿಜ್ಞಾನ ವಿಷಯಗಳಲ್ಲಿ ಇದ್ದ ಸೂಕ್ಷ/ಸಂಕೀರ್ಣ ವಿಷಯಗಳನ್ನು ಪರಿಶೀಲಿಸಿ ವರದಿ ನೀಡುವುದಕ್ಕೆ ಸಮಿತು ರಚಿಸಲು ಸೂಚಿಸಲಾಗಿತ್ತು. ಇದನ್ನು ಆಧರಿಸಿ ೨೦೨೧ರ ಸಂಪ್ಟೆಂಬರ್‌ನಲ್ಲಿ ಹೊರಡಿಸಿದ ಆದೇಶದಲ್ಲಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ. ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಆದೇಶಿಸಲಾಗಿತ್ತು. ಸರ್ಕಾರದ ನಿಯಮಗಳ ಪ್ರಕಾರ ವರದಿ ಸಲ್ಲಿಸಿದ ಬಳಿಕವೇ ಪರಿಷ್ಕರಣೆ ಅಗತ್ಯವಿದ್ದಲ್ಲಿ ವಿಷಯ ತಜ್ಞರ ಸಮಿತಿ ಅಥವಾ ಚಕ್ರತೀರ್ಥ ಸಮಿತಿಗೆ ಪರಿಷ್ಕರಣೆ ಮಾಡುವ ಬಗ್ಗೆ ಆದೇಶ ಹೊರಡಿಸಬೇಕಿತ್ತು. ಆದರೇ, ಅದು ಯಾವ ಪ್ರಕ್ರಿಯೆಗಳು ಆಗದೇ ಪರಿಷ್ಕರಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಇದು ಹೀಗಾಗದಿದ್ದಿದ್ದರೇ, ಇಷ್ಟೆಲ್ಲಾ ಅವಾಂತರವಾಗುತ್ತಿರಲಿಲ್ಲ.

ಒಟ್ಟಿನಲ್ಲಿ, ಅಸಮರ್ಥ, ಅನರ್ಹನೊಬ್ಬನ ಅಧ್ಯಕ್ಷತೆಯಲ್ಲಿ ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿದ್ದ ಇತಿಹಾಸ ಬದಲಾಯಿಸುವುದಕ್ಕೆ ಹೋಗಿ, ಮಾನವತಾವಾದವನ್ನೇ ಬಿಟ್ಟು ತನ್ನ ರಾಜಕೀಯ ಸಿದ್ಧಾಂತವನ್ನೇ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಅಳವಡಿಸಲು ಹೋಗಿ ಮತ್ತೊಂದು ಹೊಲಸನ್ನು ಬಿಜೆಪಿ ಸರ್ಕಾರ ಅಂಟಿಸಿಕೊಂಡಿದೆ ಎನ್ನುವುದಂತೂ ಸತ್ಯ. ಸದ್ಯ, ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಪಠ್ಯ ಪರಿಷ್ಕರಣೆಯ ಸಂದರ್ಭದಲ್ಲಾದ ಲೋಪಗಳನ್ನು ಸರಿಪಡಿಸುವ ಕೆಲಸ ಆರಂಭಿಸಿದ್ದು, ಮುಂದೇನೆಲ್ಲಾ ಆಗುತ್ತದೆ ಎಂದು ಕಾದು ನೋಡಬೇಕಿದೆ.  

-ಶ್ರೀರಾಜ್ ವಕ್ವಾಡಿ 


Wednesday, June 8, 2022

ಕಾಂಗ್ರೆಸ್ ರಾಜೀನಾಮೆ ಪರ್ವ

ಮತ ತಂದುಕೊಡುವ ತನ್ನ ಪ್ರಭಾವಿ ಮುಖಗಳನ್ನೇ ಕಳೆದುಕೊಂಡ ಕಾಂಗ್ರೆಸ್..! 

ದಿನ ಕಳೆದಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತನ್ನ ಬಲ ಕಳೆದುಕೊಳ್ಳುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವ್ಯಾಹತವಾಗಿ ಸೋಲು ಅನುಭವಿಸುತ್ತಿರುವ ಕಾಂಗ್ರೆಸ್ ಮತ್ತೆ ಅಷ್ಟು ಸುಲಭದಲ್ಲಿ ಫಿನಿಕ್ಸ್ ಹಕ್ಕಿಯಂತೆ ಪುಟಿದೆದ್ದು ಬಂದು ಈ ದೇಶದಲ್ಲಿ ಅಚ್ಚರಿ ಮೂಡಿಸುತ್ತದೆ ಎಂಬ ಯಾವ ಸಣ್ಣ ನಿರೀಕ್ಷೆಯನ್ನು ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗದ ರಾಜಕೀಯ ವಾತಾವರಣದಲ್ಲಿ ಈ ದೇಶದ ಜನರಿದ್ದಾರೆ. ಚುನಾವಣಾ ಸೋಲು, ಪಕ್ಷದ ಆಂತರಿಕ ಜಗಳ, ನಾಯಕತ್ವ, ಪ್ರಬಲ ರಾಜಕೀಯ ತಂತ್ರಗಾರಿಕೆಯ ಕೊರತೆ, ಹಿರಿಯ ಹಾಗೂ ಅನುಭವಿ, ಪ್ರಭಾವಿ ನಾಯಕರ ರಾಜೀನಾಮೆ ಪರ್ವ ನಿಜಕ್ಕೂ ಕಾಂಗ್ರೆಸ್‌ಗೆ ಎಂದೂ ಊಹಿಸಿಕೊಳ್ಳಲಾಗದಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದಂತೂ ಸತ್ಯ. 

ಮಹಾತ್ಮ ಗಾಂಧೀಜಿಯವರ ಸರ್ವೋದಯದ ತತ್ವವನ್ನು ತನ್ನೊಂದಿಗೆ ಸೇರಿಸಿಕೊಂಡಿದೆ ಎನ್ನುವ ಪಕ್ಷ ನಿಜಕ್ಕೂ ಗಾಂಧಿ ತತ್ವ ಪಾಲಿಸಿದೆಯೇ ಅಥವಾ ಈ ದೇಶದ ಜನ ಗಾಂಧಿಯನ್ನು ಮರೆತಿದ್ದಾರೆಯೇ..? ಗಾಂಧಿ ತತ್ವವನ್ನು ಕಾಂಗ್ರೆಸ್ ರಾಜಕೀಯಕ್ಕಷ್ಟೇ ಬಳಸಿಕೊಂಡಿತೇ..? ಜನಪರ ತತ್ವ ತಮ್ಮದು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ಗೆ ಈ ರೀತಿಯ ಹೀನಾಯ ಸೋಲು ಮೇಲಿಂದ ಮೇಲೆ ಎದುರಾಗುತ್ತಿರುವುದಾದರೂ ಯಾಕೆ..? ಸುಮಾರು ನಾಲ್ಕೈದು ದಶಕಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್‌ನ ಮೇಲಿನ ಪ್ರೀತಿ ಜನರಲ್ಲಿ ಕಡಿಮೆಯಾಗಿದ್ದು ಯಾಕೆ..? ರಾಜಕೀಯದ ಹೊಸ ಅಲೆಗೆ ಸಿಲುಕಿ ಕಾಂಗ್ರೆಸ್‌ಗೆ ಈ ಸ್ಥಿತಿ ಉಂಟಾಯಿತೆ..? ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಕಾಂಗ್ರೆಸ್ ಸೋಲಿಗೆ ಕಾರಣವೆ..? ಎಂಬೆಲ್ಲಾ ಪುಂಖಾನುಪುಂಖವಾದ ಪ್ರಶ್ನೆಗಳು ಸದ್ಯ, ‘ಕಾಂಗ್ರೆಸ್’ ಎಂದಾಕ್ಷಣ ಮೂಡುತ್ತಿವೆ. ಇಂತೆಲ್ಲಾ ಪ್ರಶ್ನೆಗಳು ನಿಮ್ಮನ್ನೂ ಕಾಡುತ್ತಿರಬಹುದು ಕಾಂಗ್ರೆಸ್ ಹಿರಿಯ ನಾಯಕರ ಅಸಮಾಧಾನ ಪಾರಂಪರಿಕ ಗಾಂಧಿ ಕುಟುಂಬದ ನಡುವಿನ ಮುಸುಕಿನ ಭಿನ್ನ ಧ್ವನಿ ಬೂದಿ ಮುಚ್ಚಿದ ಕೆಂಡವೇ ಎಂಬಂತೆ ಇರುವುದು ಪರಮ ಸತ್ಯ. ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದು ಹೇಳಿಕೊಳ್ಳುವ ಪಕ್ಷದಲ್ಲಿಯೇ ಸ್ವತಂತ್ರ ಧ್ವನಿಗೆ ಅವಕಾಶವೇ ಇಲ್ಲ ಎಂದು ಹೊರಬಂದವರ ಸಂಖ್ಯೆ ದೊಡ್ಡದಿದೆ. 

ಕಾಂಗ್ರೆಸ್‌ನ ರೆಬಲ್ ವಾಯ್ಸ್ ಪಾರಂಪರಿಕ ಗಾಂಧಿ ಕುಟುಂಬದ ವಿರುದ್ಧ ತಿರುಗಿ ಬಿದ್ದು ಗೊಂದಲ ಸೃಷ್ಟಿಯಾಗಿದ್ದು ಬಟಾಬಯಲಾಯ್ತು. ಸೋ ಕಾಲ್ಡ್ ಜಿ23 ಪಡೆ ಇತ್ತೀಚಿಗಿನ ಕೆಲವು ವರ್ಷಗಳಲ್ಲಿ ಪದೇ ಪದೆ ಗಾಂಧಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದು ಹಾಗೂ ಸಮರ್ಥ ನಾಯಕತ್ವದಲ್ಲಿನ ಗೊಂದಲವೇ ಕಾಂಗ್ರೆಸ್‌ನಲ್ಲಿ ಪ್ರಮುಖ ಪ್ರಭಾವಿ ನಾಯಕರ ರಾಜಕೀಯ ಪರ್ವಕ್ಕೆ ನಾಂದಿ ಹಾಡಿದ್ದು. ಇತ್ತೀಚೆಗೆ ರಾಜೀನಾಮೆ ನೀಡಿದ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್, ಮಾಜಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಖರ್, ಗುಜರಾತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾರ್ದಿಕ್ ಪಟೇಲ್, ಮಾಜಿ ಎಂಪಿ ಸುಸ್ಮೀತಾ ದೇವ್, ಮಾಜಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್, ಜ್ಯೋತಿರಾದಿತ್ಯ ಸಿಂದಿಯಾ, ಕಾಂಗ್ರೆಸ್‌ನ ಸ್ಟಾರ್ ಫೇಸ್ ಎಂದೇ ಗುರುತಿಸಿಕೊಂಡಿದ್ದ ಖುಶ್ಬು ಸುಂದರ್, ಪ್ರಭಾವಿ ಮುಖ ಎಂದೇ ಗುರುತಿಸಿಕೊಂಡಿದ್ದ ಪ್ರಿಯಾಂಕ ಚತುರ್ವೇದಿ, ಅಸ್ಸಾಂ ಕಾಂಗ್ರೆಸ್‌ನ ಪ್ರಭಾವಿ ನಾಯಕ ಎಂದೇ ಗುರುತಿಸಿಕೊಂಡಿದ್ದ ಹಿಮಂತ್ ಬಿಸ್ವಾ ಶರ್ಮಾ, ಮಾಜಿ ಕೇಂದ್ರ ಸಚಿವ ಆರ್.ಪಿಎನ್ ಸಿಂಗ್, ಉತ್ತರಪ್ರದೇಶದ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ರಿಟಾ ಬಹುಗುಣ ಜೋಶಿ ಅವರ ರಾಜೀನಾಮೆಯ ಪಂಕ್ತಿ  ಕಾಂಗ್ರೆಸ್‌ಗಂತೂ ಬಹಳ ದೊಡ್ಡ ಮಟ್ಟದಲ್ಲೇ ಸಂಕಷ್ಟಕ್ಕೆ ಎದುರಾಗುವಂತೆ ಮಾಡಿದೆ. ಹೌದು, ಬಿಜೆಪಿಯನ್ನು ಸೋಲಿಸಲೇ ಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್‌ಗೆ ಇದು ದೊಡ್ಡ ಮರ್ಮಾಘಾತವೇ ಸರಿ. 

ಕಪಿಲ್ ಸಿಬಲ್ ಎಂಬ ಕಾಂಗ್ರೆಸ್‌ನ ಹಿರಿಯ ಭಿನ್ನ ಧ್ವನಿ : ಕಾಂಗ್ರೆಸ್‌ನ ಪಾರಂಪರಿಕ ಗಾಂಧಿ ಕುಟುಂಬದ ನಾಯಕತ್ವವನ್ನು ಟೀಕಿಸುತ್ತಲೇ ಬಂದಿರುವ ಸಿಬಲ್, ಜಿ೨೩ ಪಡೆಯಲ್ಲಿ ಪ್ರಮುಖರೆಂದು ಗುರುತಿಸಿಕೊಂಡವರು. ಕಳೆದ ಬಾರಿ ಪಂಜಾಬ್ ಕಾಂಗ್ರೆಸ್‌ನಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ಕುರಿತು ಸಿಬಲ್, ಗಾಂಧಿ ಕುಟುಂಬ ಹಾಗೂ ನಾಯಕತ್ವದ ವಿರುದ್ಧವಾಗಿ ನಡೆಸಿದ ಬಹಿರಂಗ ಹೇಳಿಕೆಯ ಬೆನ್ನಿಗೆ ಸಿಬಲ್ ಮನೆ ಮೇಲೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಆಪ್ತರೆಂದು ಹೇಳಲ್ಪಟ್ಟವರಿಂದ ನಡೆದ ದಾಳಿ ಕಾಂಗ್ರೆಸ್‌ಗೆ ಅಳಿಸಲಾಗದ ಕಪ್ಪು ಚುಕ್ಕಿಯಾಗಿತ್ತು. ಈ ಹಿನ್ನಲೆಯಲ್ಲಿ ಸಿಬಲ್ ತಮ್ಮ ನಿಲುವನ್ನು ಪುನರುಚ್ಛರಿಸಿದ್ದರು. ‘ನಮ್ಮದು ಜಿ23 ಹೊರತಾಗಿ ಜಿ ಹುಜೂರ್ 23 ನಾಯಕರಲ್ಲ’ ಎಂದು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ಮಾಡಿದ್ದರು. ಇನ್ನು, 2021ರ ತಮ್ಮ ಜನ್ಮದಿನಾಚರಣೆಯದು ಕರೆದಿದ್ದ ಔತಣಕೂಟಕ್ಕೆ ಗಾಂಧಿ ಕುಟುಂಬಕ್ಕೆ ಆಹ್ವಾನವೇ ಇದ್ದಿರಲಿಲ್ಲ. ಯುಪಿಎಯೇತರ ನಾಯಕರಾದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಟಿಎಂಸಿ ಸಂಸದ ಡೆರೆಕ್ ಓಬ್ರಿಯಾನ್ ಸೇರಿ ಪ್ರಮುಖ ರಾಜಕೀಯ ನಾಯಕರು ಔತಣಕೂಟದಲ್ಲಿ ಭಾಗಿಯಾಗಿದ್ದಲ್ಲದೇ, ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವದ ಬಗ್ಗೆ ಹಾಗೂ ರಾಜಕೀಯ ಕಾರ್ಯತಂತ್ರಗಳ ಬಗ್ಗೆಯೂ ಚರ್ಚೆಯಾಗಿತ್ತು. ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಬಿಟ್ಟು ಬೇರೆಲ್ಲೂ ಹೋಗುವವರು ನಾವಲ್ಲ ಎಂದು ಹೇಳಿದ್ದ ಸಿಬಲ್ ಈಗ ಬಣ್ಣ ಬದಲಾಯಿಸಿಕೊಂಡಿದ್ದಾರೆ ಎನ್ನುವುದು ಸತ್ಯ. 

ಕೇಸರಿ ಪಾಳಯವನ್ನು ಒಪ್ಪಿಕೊಂಡ ಸುನಿಲ್ ಜಖರ್ : ಪಂಜಾಬ್ ಕಾಂಗ್ರೆಸ್‌ನಲ್ಲಿ ಉಂಟಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಹಿಂದೆಯೇ ಇದ್ದು ಲಾಭಕ್ಕೆ ಟವೆಲ್ ಹಾಕಿ ಕೂತ ಪಂಜಾಬ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸುನಿಲ್ ಜಖರ್. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಿದ್ದಾಗ ಸಿಎಂ ಸ್ಥಾನದ ರೇಸ್‌ನಲ್ಲಿದ್ದವರಲ್ಲಿ ಇವರೂ ಒಬ್ಬರು. ಆದರೇ, ಕೊನೆಗೆ ಚರಣ್‌ಜಿತ್ ಸಂಗ್ ಚೆನ್ನಿ ಅವರನ್ನು ಸಿಎಂ ಮಾಡುವುದರ ಮೂಲಕ ದೊಡ್ಡ ಅಚ್ಚರಿಯೇ ಉಂಟಾಗಿತ್ತು. ಚೆನ್ನಿ ವಿರುದ್ಧ ನಿರಂತರ ಟೀಕೆ ಮಾಡಿದವರಲ್ಲಿ ಜಖರ್ ಒಬ್ಬರು. ಪಕ್ಷ ವಿರೋಧಿ ಚಟುವಟಿಕೆಯ ಆರೋಪದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಿತ್ತು. ಇದರ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಕೇಸರಿ ಪಾಳಯಕ್ಕೆ ಸೇರಿಕೊಂಡರು. ಅಮರಿಂದರ್ ಸಿಂಗ್ ಪಕ್ಷತೊರೆದು ಹೊಸ ಪಕ್ಷ ಕಟ್ಟಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರಾದರೂ ಪಂಜಾಬ್‌ನಲ್ಲಿ ಏನೂ ಪ್ರಯೋಜನಕ್ಕೆ ಬಂದಿಲ್ಲ. ಸ್ವತಃ ಕ್ಯಾಪ್ಟನ್ ಪಟಿಯಾಲದಲ್ಲಿ ಹೀನಾಯವಾಗಿ ಸೋತರು. ಆದರೂ, ಕ್ಯಾಪ್ಟನ್ ರಾಜೀನಾಮೆ ಕಾಂಗ್ರೆಸ್‌ಗೆ ಪಂಜಾಬ್‌ನಲ್ಲಿ ದೊಡ್ಡ ನಷ್ಟವೇ ಹೌದು. 

ಜ್ಯೋತಿರಾದಿತ್ಯ ಸಿಂಧಿಯಾ, ಹಾರ್ದಿಕ್ ಪಟೇಲ್ ಎಂಬ ಯುವಶಕ್ತಿ : ಈ ಹಿಂದೆ ಅಂದರೇ, 10 ಮಾರ್ಚ್ ೨೦೨೦ರಂದು ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರ ಮೇಲಿದ್ದ ಅಸಮಾಧಾನ ಉಲ್ಲೇಖಿಸಿ ಕಾಂಗ್ರೆಸ್ ತೊರೆದರು. ಕಾಂಗ್ರೆಸ್ ‘ಪಕ್ಷ ವಿರೋಧಿ ಚಟುವಟಿಕೆ’ಗೆ ಉಚ್ಛಾಟಿಸಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು. ಸಿಂಧಿಯಾ ರಾಜೀನಾಮೆಯ ಬೆನ್ನಿಗೆ ಅವರ ಆಪ್ತ ಬಳಗದಲ್ಲಿದ್ದ ಕೆಲವು ಶಾಸಕರು ಕೂಡ ರಾಜೀನಾಮೆ ನೀಡಿದರು. ಈ ಕಾರಣದಿಂದಾಗಿ ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿ ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆ ನೀಡುವಂತಾಯಿತು. ಕಾಂಗ್ರೆಸ್ ಸರ್ಕಾರ ಪಥನಗೊಂಡಿತು. ಮಧ್ಯಪ್ರದೇಶ ಬಿಜೆಪಿಯ ಪಾಲಾಯಿತು. ಬಿಜೆಪಿ ಸೇರಿದ ಕೆಲವೇ ಕೆಲವು ತಿಂಗಳುಗಳಲ್ಲಿ ಸಿಂಧಿಯಾ ನಾಗರಿಕ ವಿಮಾನಯಾನ ಸಚಿವರಾಗಿ ಅಧಿಕಾರ ವಹಿಸಿಕೊಂಡರು. 

ಇನ್ನು, ಗುಜರಾತ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾರ್ದಿಕ್ ಪಟೇಲ್ ಕಾಂಗ್ರೆಸ್‌ಗೆ ಒಂದು ಭರವಸೆಯ ಯುವ ನಾಯಕರಾಗಿದ್ದರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಹಾರ್ದಿಕ್ ಹಿಂದುಳಿದ ವರ್ಗದಿಂದ ಬಂದವರು. ಹುದ್ದೆ ಇದ್ದರೂ ಕೆಲಸವಿಲ್ಲ ಎಂದೇ ಹೈಕಮಾಂಡ್‌ನನ್ನು ದೂಷಿಸುತ್ತಿದ್ದ ಪಟೇಲ್, ರಾಜೀನಾಮೆ ಪತ್ರದಲ್ಲಿ, ಪಕ್ಷ ಹಾಗೂ ಗುಜರಾತ್ ಬಗ್ಗೆ ಚರ್ಚಿಸಲು ರಾಹುಲ್ ಗಾಂಧಿ ಭೇಟಿಯಾದಾಗ ಅವರು ಮೊಬೈಲ್‌ನಲ್ಲಿ ಮುಳುಗಿದ್ದರು ಎಂದು ನೇರಾನೇರವಾಗಿ ಆರೋಪಿಸಿದ್ದರು. ಇದು ಕಾಂಗ್ರೆಸ್ ಯುವ ನಾಯಕರನ್ನು ಕಂಡುಕೊಂಡ ರೀತಿಯನ್ನು ತಿಳಿಸುತ್ತದೆ. ಕಾಂಗ್ರೆಸ್‌ಗೆ ನಿಜಕ್ಕೂ ಗುಜರಾತ್‌ನಲ್ಲಿ ಒಬ್ಬ ಯುವ ಮುಂದಾಳು ಅಗತ್ಯವಿತ್ತು. ಆದರೇ, ಹಾರ್ದಿಕ್ ಇತ್ತೀಚೆಗೆ ಬಿಜೆಪಿಗೆ ಸೇರಿದರು. ಕೆಲವೇ ಕೆಲವು ತಿಂಗಳುಗಳಲ್ಲಿ ಎಲ್ಲದಕ್ಕೂ ಅಂಬಾನಿ, ಅದಾನಿಯನ್ನು ಟೀಕಿಸಬಾರದು ಎಂದು ಸಿದ್ಧಾಂತ ಬದಲಾಯಿಸಿಕೊಂಡು ತಮ್ಮ ಮಾಜಿ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವಷ್ಟು ಬೆಳೆದರು. 

ಇನ್ನು, ಸುಮಾರು 32 ವರ್ಷಗಳ ಕಾಲ ಕಾಂಗ್ರೆಸ್‌ನೊಂದಿಗೆ ಇದ್ದ ಸಿಂಗ್, ಕಾಂಗ್ರೆಸ್ ಈ ಹಿಂದೆ ಇದ್ದ ಹಾಗೆ ಇಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿ ಕಳೆದ ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಕೇಸರಿ ಪಾಳಯವನ್ನು ಒಪ್ಪಿ ಕಾಂಗ್ರೆಸ್‌ಗೆ ಗುಡ್ ಬಾಯ್ ಹೇಳಿದರು. ಹಿಂದಿನ ವರ್ಷ ಉತ್ತರ ಪ್ರದೇಶ ಕಾಂಗ್ರೆಸ್‌ನ ಮತ್ತೊಬ್ಬ ಪ್ರಭಾವಿ ನಾಯಕರಾಗಿದ್ದ ಜಿತಿನ್ ಪ್ರಸಾದ್ ಕೂಡ ರಾಜೀನಾಮೆ ನೀಡಿದ್ದರು. ಉಭಯ ನಾಯಕರು ಕೇಂದ್ರದ ರಾಜ್ಯ ಖಾತೆ ಸಚಿವಸ್ಥಾನವನ್ನು ಮುನ್ನಡೆಸಿದ ಅನುಭವವುಳ್ಳವರಾಗಿದ್ದರು.   

ಕಾಂಗ್ರೆಸ್‌ನೊಂದಿಗೆ 4 ದಶಕಗಳನ್ನು ಕಳೆದ ಮಾಜಿ ಕೇಂದ್ರ ಸಚಿವ ಅಶ್ವನಿ ಕುಮಾರ್, ರಿಪುನ್ ಬೋರಾ ಕೂಡ ಕಳೆದ ಐದು ತಿಂಗಳುಗಳಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಾಯಕರ ಪೈಕಿಯಲ್ಲಿರುವವರು. ಕಾಂಗ್ರೆಸ್‌ಗೆ ಈವರೆಗೆ ರಾಜೀನಾಮೆ ನೀಡಿದ ಎಲ್ಲರದ್ದೂ ಒಂದೇ ಅಭಿಪ್ರಾಯವಾಗಿದೆ ಎನ್ನುವುದು ಇಲ್ಲಿ ಗಮನಾರ್ಹ. ಕಾಂಗ್ರೆಸ್ ನಾಯಕರ ಒಳಜಗಳ, ರಾಜೀನಾಮೆ ರಾಜಕೀಯ ಬಿಕ್ಕಟ್ಟು ಇನ್ನೊಂದು ಪಕ್ಷಕ್ಕೆ ಅಧಿಕಾರ ಹಿಡಿಯುವಂತೆ ಪರೋಕ್ಷವಾಗಿ ಸಹಾಯ ಮಾಡಿತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಕೆಲವು ರಾಜ್ಯಗಳಲ್ಲಂತೂ ತನ್ನ ಪ್ರಮುಖ ಪ್ರಭಾವಿ ಮುಖಗಳನ್ನೇ ಕಳೆದುಕೊಂಡಿದೆ. ಭವಿಷ್ಯದಲ್ಲಿ ಕಾಂಗ್ರೆಸ್ ನಿರೀಕ್ಷಿತ ಕುಸಿದತ್ತ ಸಾಗುವುದು ಮಾತ್ರ ಕಾಣಿಸುತ್ತಿದೆ. ಹೀಗಿರುವಾಗ ಕಾಂಗ್ರೆಸ್ ಪುನಶ್ಚೇತನಕ್ಕೆ ಕನಸು ಕಾಣುತ್ತಿದೆ ಎನ್ನುವುದು ಸದ್ಯದ ಅಚ್ಚರಿ. 

-ಶ್ರೀರಾಜ್ ವಕ್ವಾಡಿ   


Thursday, June 2, 2022

ಕೇರಳದಲ್ಲಿ ಕೇಜ್ರಿವಾಲ್ ಎಂಬ ಔಟ್‌ಸೈಡರ್‌ನ ಪ್ರಾಥಮಿಕ ಹೆಜ್ಜೆ

ಕೇರಳದ ಸಾಂಪ್ರದಾಯಿಕ ರಾಜಕಾರಣವನ್ನು ಬದಲಾಯಿಸುತ್ತಾರೆಯೇ ಕೇಜ್ರಿವಾಲ್..?

ರಾಜಕೀಯ ಬೇರೆ, ರಾಜಕೀಯ ಆಟ ಬೇರೆ, ರಾಜಕೀಯ ಸಿದ್ಧಾಂತ ಬೇರೆ, ರಾಜಕೀಯ ಸ್ವರೂಪ ಬೇರೆ. ರಾಜಕೀಯ ಗೊತ್ತಿದ್ದವನಿಗೆ, ರಾಜಕೀಯದ ಎಲ್ಲಾ ಆಯಾಮ ಗೊತ್ತಿದ್ದವನಿಗೂ ರಾಜಕೀಯದಲ್ಲಿ ಒಮ್ಮೊಮ್ಮೆ ಏನೂ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೇ, ರಾಜಕೀಯ ಆಟ ಗೊತ್ತಿದ್ದವ ಇಡೀ ದೇಶವನ್ನೇ ಆಳಬಲ್ಲ ಎಂಬ ಮಾತು ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಸರ್ವಸಮ್ಮತವಾದವಾದ ಮಾತೆಂದೇ ಹೇಳಬಹುದು. 

ಒಂದು ರಾಜಕೀಯ ಪಕ್ಷ, ಅದು ಒಂದು ಪ್ರಾದೇಶಿಕ ಪಕ್ಷವಾಗಿರಲಿ/ರಾಜ್ಯ ಪಕ್ಷವಾಗಿರಲಿ ಅಥವಾ ರಾಷ್ಟ್ರೀಯ ಪಕ್ಷವಾಗಿರಲಿ. ಅದು ರಾಜ್ಯವೊಂದರಲ್ಲಿ ಅಧಿಕಾರಕ್ಕೆ ಬರಬೇಕೆಂದಾದರೇ ಆ ರಾಜ್ಯದಲ್ಲಿ ಆ ಪಕ್ಷದ ಹೆಜ್ಜೆ ಗಟ್ಟಿ ಇರಲೇಬೇಕು. ಹೌದು ದೆಹಲಿ, ಪಂಜಾಬ್ ನಂತರ ಈಗ ಅರವಿಂದ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕೇರಳಕ್ಕೆ ಕಾಲಿಟ್ಟಿದೆ. ಕೇರಳ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಹೇಳಿಕೇಳಿ ಮತ್ತೆ ಯಾವುದೇ ರಾಷ್ಟ್ರೀಯ ಪಕ್ಷಗಳು ಕೇರಳಕ್ಕೆ ಕಾಲಿಟ್ಟರೂ ಕೇರಳ ರಾಜಕೀಯದಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ಪಾರ್ಟಿಗಳದ್ದೇ ಪ್ರಾಧಾನ್ಯತೆ ಇಂದಿಗೂ ಉಳಿಸಿಕೊಂಡು ಬಂದಿರುವಾಗ ಇನ್ನು ಹೊಸದಾಗಿ ಔಟ್ ಸೈಡರ್ ಅರವಿಂದ ಕೇಜ್ರಿವಾಲ್ ಕೇರಳದಲ್ಲಿ ಯಾವ ಹೊಸ ಭಾಷ್ಯದ ಕನಸು ಕಾಣುತ್ತಿದ್ದಾರೆ ಎಂಬ ಪ್ರಶ್ನೆಯೂ ಕೂಡ ಎದ್ದಿದೆ. ಆದರೇ, ರಾಷ್ಟçರಾಜಧಾನಿ ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ಉದಾಹಣೆ ಮುಂದಿಟ್ಟರೇ, ಯಾವುದೂ ಸಾಧ್ಯವಿಲ್ಲ ಎಂದು ಹೇಳುವುದಕ್ಕಾಗುವುದಿಲ್ಲ. ಅದೇನೆ ಇರಲಿ ಇತ್ತೀಚೆಗಷ್ಟೇ ದೇವರ ನಾಡು ಕೇರಳಕ್ಕೆ ಕಾಲಿಟ್ಟ ಆಪ್ ಬಗ್ಗೆ ಭಾರಿ ಕುತೂಹಲ ಮೂಡಿದೆ. 

ಹೌದು, ಆಮ್ ಆದ್ಮಿ ಪಕ್ಷ ತನ್ನ ರೆಕ್ಕೆಯನ್ನು ದಕ್ಷಿಣ ಭಾರತದ ಕೇರಳದಲ್ಲಿ ಚಾಚುವತ್ತ ಗಮನ ಹರಿಸಿದ್ದು,  ಕಿಟೆಕ್ಸ್ ಗ್ರೂಪ್‌ನ ಟ್ವೆಂಟಿ20 ಜೊತೆಗೆ ಮೈತ್ರಿ ಮಾಡಿಕೊಳ್ಳುವುದರೊಂದಿಗೆ ಕೇರಳ ರಾಜಕೀಯಕ್ಕೆ ಕಾಲಿಟ್ಟಿದೆ. ಅರವಿಂದ ಕೇಜ್ರಿವಾಲ್ ಕೇರಳದಲ್ಲಿ ಸಾಂಪ್ರದಾಯಿಕ ರಾಜಕೀಯಕ್ಕೆ ಫುಲ್ ಸ್ಟಾಪ್ ಇಡುವ ಶಪಥ ಮಾಡಿದ್ದು, ಮುಂಬರುವ ವರ್ಷಗಳ ಕೇರಳ ರಾಜಕೀಯ ಬೆಳವಣಿಗೆಯತ್ತ ಚಿತ್ತ ಹರಿಸುವಂತಾಗಿದೆ. 

ಕೇರಳ ಕಂಡು ಬಂದ ರಾಜಕೀಯ ಹೆಜ್ಜೆಗಳು : ಎಡ ಪಂಥೀಯ ಹಾಗೂ ಮಧ್ಯ ಎಡ ಗುಂಪುಗಳತ್ತ ಕೇರಳ ಜನರ ಸಾಮಾಜಿಕ ರಾಜಕೀಯ ನಡವಳಿಕೆ ಇದೆ. ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ ಹಾಗೂ ಮಾರ್ಕ್ಸ್ವಾದಿ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳು ರಾಜ್ಯದಾದ್ಯಂತ ಪ್ರಬಲವಾಗಿ ಬೇರೂರಿವೆ. ಪ್ರಜಾಸತ್ತಾತ್ಮಕವಾಗಿ ಕಮ್ಯುನಿಷ್ಟ್ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತಂದ ಏಕೈಕ ಏಷ್ಯಾದ ರಾಜ್ಯವೆಂದರೇ ಅದು ಕೇರಳ. ಕಾಂಗ್ರೆಸ್ ರಾಜಕೀಯ ಕೇರಳದಲ್ಲಿ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ ಚುಣಾವಣಾ ಮೈತ್ರಿಯಲ್ಲಿ ರಾಜಕೀಯ ನಡೆಸುತ್ತದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್‌ನ ನೇತೃತ್ವದಲ್ಲಿ ಪಾಲುದಾರಿಕೆಯನ್ನು ಹೊಂದಿದ ಪಕ್ಷ. ಕಮ್ಯುನಿಷ್ಟ್ನೊಂದಿಗೆ ಮೈತ್ರಿಯಲ್ಲಿದ್ದ ಮುಸ್ಲೀಂ ಲೀಗ್ ಪಕ್ಷ ತನ್ನ ಬಣ್ಣ ಬದಲಾಯಿಸಿಕೊಂಡು ಕಾಂಗ್ರೆಸ್‌ನದಿಗೆ ಮೈತ್ರಿ ಮಾಡಿಕೊಂಡಿತು. ಇನ್ನು, ಕೇರಳದಲ್ಲಿ ಜನ ಬಲಪಂಥೀಯ ರಾಜಕಾರಣಕ್ಕೆ ಅವಕಾಶವೇ ಕೊಟ್ಟಿಲ್ಲ. ೨೦೧೬ರ ಚುನಾವಣೆಯಲ್ಲಿ ಒಂದು ವಿಧಾನಸಭೆಯಲ್ಲಿ ಸ್ಥಾನಪಡೆದಿದ್ದು ಬಿಟ್ಟರೇ ಮತ್ತೆಲ್ಲೂ ತನ್ನ ಪ್ರಾಬಲ್ಯ ಬೀರುವುದಕ್ಕೆ ಸಾಧ್ಯವಾಗಿಲ್ಲ.  

ಇನ್ನು, ಉತ್ತರ ಕೇರಳ, ಅದರಲ್ಲೂ ಬಹಳ ಪ್ರಮುಖವಾಗಿ ಕಣ್ಣೂರು ಹಾಗೂ ಪಾಲಕ್ಕಾಡ್ ಜಿಲ್ಲೆಗಳನ್ನು ಕಮ್ಯುನಿಷ್ಟ್ ಹೃದಯಭೂಮಿ ಎಂದೇ ಕರೆಯಲಾಗುತ್ತದೆ. ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ ಕೊಲ್ಲಂ ಹಾಗೂ ಆಲಪುಳ್ಳಂ ಪ್ರದೇಶಗಳಲ್ಲಿ ಗೆಲುವು ಸಾಧಿಸಿದ್ದರೂ ಕೂಡ ಎಡ ಪಂಥೀಯ ಪಕ್ಷಗಳ ಪ್ರಾಬಲ್ಯವಿರುವ ಪ್ರದೇಶವೆಂದೇ ಪರಿಗಣಿಸಲಾಗುತ್ತದೆ. ಕಮ್ಯುನಿಷ್ಟ್ ಮಾರ್ಕ್ಸ್ವಾದಿ ಪಕ್ಷ, ಜನಾಧಿಪತಿಯ ಸಂರಕ್ಷಣಾ ಸಮಿತಿ ಹಾಗೂ ರೆವಲ್ಯೂಷನರಿ ಮಾರ್ಕ್ಸ್ವಾದಿ ಪಾರ್ಟಿ ಆಫ್ ಇಂಡಿಯಾದಂತಹ ಕೆಲವು ಪಕ್ಷಗಳು ಕೇರಳದಾದ್ಯಂತ ಎಡಪಂಥೀಯ ರಾಜಕೀಯದ ನೆರಳನ್ನು ಬಿತ್ತಿದರೇ, ಮಧ್ಯೆ ಕೇರಳದಲ್ಲಿ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ ಹಾಗೂ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್‌ನ ಕೆಲವು ಬಣಗಳನ್ನು ಹೊಂದಿರುವ ಕೇರಳ ಕಾಂಗ್ರೆಸ್ ತನ್ನ ಪ್ರಬಲ ಪ್ರಭಾವವನ್ನು ಹೊಂದಿವೆ. ಮಾತ್ರವಲ್ಲದೇ ಕೇರಳ ಕಾಂಗ್ರೆಸ್ ಬಣಗಳನ್ನು ಮಧ್ಯ ತಿರುವಾಂಕೂರ್‌ನ ಕೊಟ್ಟಾಯಂ, ಇಡುಕ್ಕಿ, ಪತ್ತನಂತಿಟ್ಟ ಹಾಗೂ ಮುವಾಟ್ಟುಪುಳ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಿರಿಯನ್ ಕ್ರಿಶ್ಚಿಯನ್ ಸಮುದಾಯ ಪೊರೆಯುತ್ತಿದೆ. ಬಿಜೆಪಿಯಂತೂ ನಾಮಕವಸ್ಥೆಗಿದ್ದಂತಿದ್ದು, ಕೇರಳದ ಯಾವ ಪ್ರದೇಶದಲ್ಲಿಯೂ ತನ್ನ ಪ್ರಭಾವವನ್ನು ಹೊಂದಿಕೊಳ್ಳುವುದಕ್ಕೆ ಸಾದ್ಯವಾಗಿಲ್ಲ. ಅಂದರೇ, ಕಮುನ್ಯಿಷ್ಟ್ ಹಾಗೂ ಎಡ ಪಂಥೀಯ ರಾಜಕೀಯವನ್ನು ಹೊರತಾಗಿ ಈವರೆಗೆ ಬೇರೆ ಯಾವುದೇ ಪಕ್ಷವನ್ನು ಕೇರಳದ ಜನ ಒಪ್ಪಲಿಲ್ಲ ಎನ್ನುವುದು ಇದರ ಅರ್ಥ. ಹಾಗಿರುವಾಗ ಆಮ್ ಆದ್ಮಿ ಪಕ್ಷಕ್ಕೆ ಕೇರಳದಂತಹ ಎಡ ಹಾಗೂ ಕಮ್ಯುನಿಷ್ಟ್ ಮೈಂಡ್ ಸೆಟ್‌ನಲ್ಲಿರುವ ಜನರನ್ನು ಕೇವಲ ಭ್ರಷ್ಟಾಚಾರ ವಿರೋಧಿ ನಿಲುವಿನಿಂದಷ್ಟೇ ಸೆಳೆಯುವುದಕ್ಕೆ ಸಾಧ್ಯವಿದೆಯೇ ಎಂಬುವುದು ಇಲ್ಲಿ ಯಕ್ಷ ಪ್ರಶ್ನೆ. 

೧೯೮೦ ರಿಂದ ೨೦೨೧ರವರೆಗೆ ಒಂದು ಅವಧಿ ಯುಡಿಎಫ್‌ಗೆ ಇನ್ನೊಂದು ಅವಧಿ ಎಲ್‌ಡಿಎಫ್ ಗೆ ಎಂಬಂತೆ ಕೇರಳ ಆಡಳಿತ ಕಂಡಿದೆ. ಕಳೆದಬಾರಿ ಮರು ಅಧಿಕಾರ ಹಿಡಿದ ಎಲ್‌ಡಿಎಫ್‌ಗೆ ಸದ್ಯ ಕೇರಳದಲ್ಲಿ ವಿರೋಧಿ ಅಲೆ ಎದ್ದಿದ್ದು, ಈ ವಿರೋಧವನ್ನು ಆಮ್ ಆದ್ಮಿ ಪಕ್ಷ ಟೇಕ್ ಓವರ್ ಮಾಡಿಕೊಳ್ಳುವಷ್ಟರ ಮಟ್ಟಿಗೆ ಇನ್ನು ನಾಲ್ಕು ಐದು ವರ್ಷಗಳಲ್ಲಿ ಬೆಳೆದು ನಿಲ್ಲುವುದಕ್ಕೆ ಸಾಧ್ಯವಿದೆಯೇ..? ಅಷ್ಟು ಬೆಳೆದು ನಿಲ್ಲಬೇಕಾದರೇ ಯುಡಿಎಫ್‌ನನ್ನು ಮೊದಲು ರಾಜಕೀಯವಾಗಿ ಸೋಲಿಸುವುದರೊಂದಿಗೆ ಜನರ ಮನಸ್ಸಿನಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಬೇಕಿದೆ. ಅಷ್ಟೆಲ್ಲಾ ಮಾಡುವುದಕ್ಕೆ ಕೇರಳದಂತಹ ರಾಜ್ಯದಲ್ಲಿ ಆಪ್‌ಗೆ ಸಾಧ್ಯವಿದೆಯೇ..? ಎಂಬೆಲ್ಲಾ ಪ್ರಶ್ನೆಗಳು ಕೇರಳ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಲ್ಲಿವೆ. 

ಟ್ವೆಂಟಿ2೦ ಏನು..? ಆಪ್ ಮೈತ್ರಿ ಸೂತ್ರವೇನು..? :  ಟ್ವೆಂಟಿ2೦ ಕೇರಳದಲ್ಲಿ ತಲೆ ಎತ್ತುತ್ತಿರುವ ಒಂದು ಪ್ರಾದೇಶಿಕ ಪಕ್ಷ. ಸೋಶಿಯಲ್ ರೆಸ್ಪಾನ್ಸಿಬಿಲಿಟಿಯೇ ತನ್ನು ಮುಖ್ಯ ದ್ಯೇಯವೆಂದು ಕೇರಳ ರಾಜಕೀಯ ಕಣಕ್ಕಿಳಿದ ಪಕ್ಷ, ಕಿಟೆಕ್ಸ್ ಗ್ರೂಪ್ ಎಂಬ ಜಗತ್ತಿನ ಪ್ರಮುಖ ಗಾರ್ಮೆಂಟ್ ಕಂಪೆನಿಯ ಪ್ರಾಯೋಜಕತ್ವದೊಂದಿಗೆ ರಾಜಕೀಯ ಪ್ರವೇಶ ಕಂಡಿದೆ. ವಿಶ್ವದ ಎರಡನೇ ಅತಿ ದೊಡ್ಡ ಮಕ್ಕಳ ಉಡುಪುಗಳ ಉತ್ಪಾದನಾ ಸಂಸ್ಥೆಯಾದ ಕಿಟೆಕ್ಸ್ ಗ್ರೂಪ್ ಪರೋಕ್ಷವಾಗಿ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿಗಾಗಿಯೇ ಟ್ವೇಂಟಿ2೦ ಪಕ್ಷವನ್ನು ರಾಜಕೀಯದ ಕಣಕ್ಕಿಳಿಸಿದೆ. ಸುಮಾರು ೧೯೬೦ರ ದಶಕದಿಂದ ಮಾರುಕಟ್ಟೆಯಲ್ಲಿರುವ ಸಂಸ್ಥೆಯಾಗಿರುವುದರಿಂದ ಹಾಗೂ ವಿಶ್ವದ ಪ್ರಮುಖ ಗಾರ್ಮೆಂಟ್ ಕಂಪೆನಿಗಳ ಪೈಕಿಯಲ್ಲಿ ಅಗ್ರಪಂಕ್ತಿಯಲ್ಲಿರುವ ಸಂಸ್ಥೆಯಾಗಿರುವುದರಿಂದ ಪಕ್ಷಕ್ಕೆ ಆರ್ಥಿಕ ವಿಚಾರದಲ್ಲಿ ಯಾವುದೇ ಸಮಸ್ಯೆಯಾಗಲಿಕ್ಕಿಲ್ಲ ಎಂದೇ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇನ್ನು, ಕಿಟೆಕ್ಸ್ ಗ್ರೂಪ್ ಪ್ರಾಯೋಜಕತ್ವದ ಟ್ವೆಂಟಿ೨೦ ರಾಜಕೀಯ ಪಕ್ಷದೊಂದಿಗೆ ಆಮ್ ಆದ್ಮಿ ಪಕ್ಷ ಮೈತ್ರಿ ಮಾಡಿಕೊಂಡಿದೆ. ಸದ್ಯ ಕೇರಳದಲ್ಲಿ ಎಲ್‌ಡಿಎಫ್ (ಲೆಪ್ಟ್ ಡೆಮಾಕ್ರೆಟಿಕ್ ಫಂಡ್), ಯುಡಿಎಫ್ (ಯುನೈಟೆಡ್ ಡೆಮಾಕ್ರೆಟಿಕ್ ಫಂಡ್), ಎನ್‌ಡಿಎ (ನ್ಯಾಷನಲ್ ಡೆಮಾಕ್ರೆಟಿಕ್ ಅಲೈಯನ್ಸ್), ಕೇಜ್ರಿವಾಲ್ ನೇತೃತ್ವದ ಪೀಪಲ್ ವೆಲ್‌ಫೆರ್ ಅಲೈಯನ್ಸ್ (ಆಮ್ ಆದ್ಮಿ ಪಕ್ಷ ಹಾಗೂ ಟ್ವೆಂಟಿ2೦ ಮೈತ್ರಿ) ಸೇರಿ ಒಟ್ಟು ನಾಲ್ಕು ಮೈತ್ರಿ ರಾಜಕೀಯ ಪಕ್ಷಗಳಾದಂತಾಗಿದೆ.  

ಕೇರಳಕ್ಕೆ ಕೇಜ್ರೀವಾಲ್ ಎಂಬ ಹೊಸ ರಾಜಕೀಯ : ಹೌದು, ಕೇರಳದಂತಹ ರಾಜ್ಯಕ್ಕೆ ಕೇಜ್ರಿವಾಲ್ ರಾಜಕೀಯ ಹೊಸತನದ್ದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಡೀ ದೇಶಕ್ಕೆ ಅರವಿಂದ್ ಕೇಜ್ರಿವಾಲ್ ಯಾರು ಎಂದು ಗೊತ್ತಾಗಿದ್ದೇ ರಾಷ್ಟ್ರ ರಾಜಧಾನಿಯ ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ೨೦೧೦ರಲ್ಲಿ ನಡೆದ ಆಂದೋಲನದಲ್ಲಿ. ಆಗ ಕೇಜ್ರಿವಾಲ್ ಮಾತು ಕೇಳುವುದಕ್ಕೆ ಬಂದ ಒಟ್ಟು ಜನ ಸಂಖ್ಯೆ ಎರಡಂಕಿ ದಾಟಿರಲಿಲ್ಲ. ಅದಾದ ಬಳಿಕ ಕೇಜ್ರಿವಾಲ್ ಸೃಷ್ಟಿಸಿದ್ದು ಇತಿಹಾಸ. ರಾಷ್ಟ್ರ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಸೋಲಿಸಿ ರಾಷ್ಟ್ರ ರಾಜಕಾರಣದ ಭೂಪಟವನ್ನು ಆಮೂಲಾಗ್ರವಾಗಿ ಬದಲಾಯಿಸುವ ಮುನ್ಸೂಚನೆ ಎಂಬಂತೆ ೨೦೧೫ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ೭೦ ಸದಸ್ಯ ಬಲದ ವಿಧಾನಸಭೆಯಲ್ಲಿ ಬರೋಬ್ಬರಿ ೬೭ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವುದರ ಮುಖೇನ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಆಮ್ ಆದ್ಮಿ ಬಹುಮತ ಪಡೆದುಕೊಂಡಿತು. ಅರವಿಂದ ಕೇಜ್ರೀವಾಲ್ ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮತ್ತೆ ೨೦೨೦ರಲ್ಲಿಯೂ ೭೦ ವಿಧಾನಸಭಾ ಸ್ಥಾನಗಳಲ್ಲಿ ೬೨ ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು ಆಪ್. ಕೇಜ್ರಿವಾಲ್ ಮತ್ತೆ ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ದೆಹಲಿಯಲ್ಲಿ ಜಾರಿಗೆ ತಂದ ಉತ್ತಮ ಶಿಕ್ಷಣ ನೀತಿ, ಉಚಿತ ನೀರು ಸರಬರಾಜು, ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಭ್ರಷ್ಟಾಚಾರ ಮುಕ್ತ ರಾಜಕಾರಣವೇ ಆಪ್ ಗೆಲುವಿಗೆ ಕಾರಣವೆಂದು ವಿಶ್ಲೇಷಿಸಲಾಗಿದೆ. ಇತ್ತೀಚೆಗೆ ಪಂಜಾಬ್‌ನಂತಹ ದೊಡ್ಡ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರ ಮುಖೇನ ಅಲ್ಲಿ ಕಾಂಗ್ರೆಸ್, ಅಕಾಲಿದಳ, ಬಿಜೆಪಿಯನ್ನು ಗುಡಿಸಿಬಿಟ್ಟಿದ್ದಾರೆ. ಈಗ ಕೇರಳದತ್ತ ಕೇಜ್ರಿವಾಲ್ ಮುಖಮಾಡಿದ್ದು, ಮಾತ್ರವಲ್ಲದೇ ಈಗಾಗಲೇ ತ್ರಿಕ್ಕಾಕ್ಕರ ವಿಧಾನಸಭೆಯ ಶಾಸಕರ ಸಾವಿನಿಂದಾಗಿ ತೆರವುಗೊಂಡಿದ್ದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಸದ್ಯ, ಕೇರಳದಲ್ಲಿ ಹಾಲಿ ಎಲ್‌ಡಿಎಫ್ ಸರ್ಕಾರ ಹಣದುಬ್ಬರದಂತಹ ಸಮಸ್ಯೆಯ ಜೊತೆಗೆ ಕೆರೈಲು ಹಗರಣದಂತಹ ಆರೋಪಗಳನ್ನು ಎದುರಿಸುತ್ತಿದ್ದು, ಕೇಜ್ರಿವಾಲ್ ಆರ್ಥಿಕ ರಾಷ್ಟ್ರೀಯತೆ, ಸೆಕ್ಯುಲರಿಸಂ, ರಾಷ್ಟ್ರೀಯತೆ, ದೇಶಭಕ್ತಿ, ಮಾನವತಾವಾದಂತಹ ಅಜೆಂಡಾದೊಂದಿಗೆ ಎಲ್‌ಡಿಎಫ್ ಸರ್ಕಾರದ ವಿರುದ್ಧ ಹೇಗೆ ಸ್ಟ್ರಾಟೆಜಿ  ಬಳಸುತ್ತಾರೆ ಎನ್ನುವುದು ಇಲ್ಲಿ ಸದ್ಯದ ಕುತೂಹಲ. ಒಂದಿಷ್ಟು ವರ್ಷಗಳ ನಂತರ ಕೇರಳದ ಸಾಂಪ್ರದಾಯಿಕ ರಾಜಕೀಯ ಬದಲಾಯಿಸಿ ಆಪ್ ಕೇರಳದ ಅಧಿಕಾರ ಹಿಡಿಬಹುದು ಎಂಬ ಮಾತನ್ನೂ ಕೂಡ ತಳ್ಳಿ ಹಾಕುವಂತಿಲ್ಲ ಎನ್ನುವುದಕ್ಕೆ ಪಂಜಾಬ್ ಫಲಿತಾಂಶವೇ ಸಾಕ್ಷಿ. 

-ಶ್ರೀರಾಜ್ ವಕ್ವಾಡಿ      

             


Wednesday, May 25, 2022

ಜನಾಂಗೀಯ ದ್ವೇಷದ ಕರಿನೆರಳು ಬಿತ್ತಿದ ರಾಜಪಕ್ಸೆ


 ಹೈಪರ್ ರಾಷ್ಟ್ರೀಯವಾದಿ ರಾಜಪಕ್ಸೆ, ಅಲ್ಪಸಂಖ್ಯಾತ ತಮಿಳರ ಹತ್ಯೆಗೆ ವ್ಯವಸ್ಥಿತ ಸಂಚು ರೂಪಿಸಿದ್ದ..!

ಸರ್ವಾಧಿಕಾರದ ಕರಿನೆರಳನ್ನು ಒಪ್ಪುವ ದೇಶ ಅಧಪತನಗೊಳ್ಳುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ಆರ್ಥಿಕ ಬಿಕ್ಕಟ್ಟು ಕಂಡು ಸೊರಗಿದ ಶ್ರೀಲಂಕಾವೇ ಸಾಕ್ಷಿ. ಸುಮಾರು ಐದು ದಶಕಗಳ ನಂತರ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಅಡಿಯಲ್ಲಿ ತತ್ತರಿಸುತ್ತಿದೆ. ಗೋಡೆಗೆ ಹಚ್ಚಿದ ಹೊಸ ಬಣ್ಣವನ್ನೇ ಅಭಿವೃದ್ಧಿ ಎಂದು ನಂಬಿದ ಜನ ಬೀದಿ ಬೀದಿಗಳಲ್ಲಿ ಪರದಾಡುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಇಷ್ಟರ ಮಟ್ಟಿಗೆ ಹದಗೆಟ್ಟಿರುವುದಕ್ಕೆ ಮುಖ್ಯ ಕಾರಣವೇ ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಷೆ ಎಂದೇ ಹೇಳಲಾಗುತ್ತಿದೆ. ಶ್ರೀಲಂಕಾ ದೇಶಕಂಡ ಅತ್ಯಂತ ಕೆಟ್ಟ ಪ್ರಧಾನಮಂತ್ರಿ ಎಂಬ ಪಟ್ಟಕ್ಕೆ ರಾಜಪಕ್ಸೆ ಸೇರ್ಪಡೆಗೊಂಡಿದ್ದಾರೆ. 

ಪ್ರಚಾರದ ಹುಚ್ಚಿನಿಂದಲೇ ಪ್ರಧಾನಮಂತ್ರಿ ಸ್ಥಾನಕ್ಕೇರಿದ ಮಹಿಂದಾ ರಾಜಪಕ್ಸೆ ಆರಂಭದಿಂದಾದಿಯಾಗಿ ತಳೆದಿದ್ದು ಸರ್ವಾಧಿಕಾರ ಧೋರಣೆ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ. ದೇಶದ ಜನರಿಗೆ ಸುಳ್ಳು ಭರವಸೆ ನೀಡುತ್ತಲೇ ಅಭಿವೃದ್ಧಿ ಹೆಸರಿನಲ್ಲಿ ನಂಬಿಸಿದ. ಶ್ರೀಲಂಕಾ ದೇಶ ಇಂದು ಅತ್ಯಂತ ಕೆಟ್ಟ ಸ್ಥಿತಿಗೆ ಬರುವುದಕ್ಕೆ ನೇರಾನೇರ ಕಾರಣವೇ ರಾಜಪಕ್ಸೆ. ಹೈಪರ್ ಶ್ರೀಲಂಕಾ ರಾಷ್ಟ್ರೀಯವಾದಿ ಹೆಸರಿನಲ್ಲಿ ಆಡಳಿತ ನಡೆಸಿದ ಮಹಿಂದಾ ಮಾಡಿದ್ದು ಜನರನ್ನು ಉದ್ರಿಕ್ತಗೊಳಿಸಿದ್ದು ಅಷ್ಟೇ. ಹೌದು ಸರ್ವಾಧಿಕಾರ, ಜನಾಂಗೀಯವಾದ, ಭಾಷಾವಾದ, ಕೋಮುವಾದದ ವಿಚಾರವಾಗಿ ಶ್ರೀಲಂಕಾ ಇಡೀ ಜಗತ್ತಿಗೆ ದೊಡ್ಡ ಪಾಠವನ್ನೇ ನೀಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 

ರಾಷ್ಟ್ರೀಯವಾದ ಬೇರೆ, ಆಕ್ರಮಣಕಾರಿ ರಾಷ್ಟ್ರೀಯವಾದ ಬೇರೆ. ಶ್ರೀಲಂಕಾದಲ್ಲಿ ತನಗೆ ಪರ್ಯಾಯವೇ ಇಲ್ಲ ಎಂಬ ಭ್ರಮೆಯಲ್ಲಿಯೇ ಆಡಳಿತ ನಡೆಸಿದ ರಾಜಪಕ್ಸೆ ತನ್ನ ಮಾತುಗಳಲ್ಲಿ, ಧರ್ಮ, ಜನಾಂಗ, ಭಾಷೆಯ ವಾದದ ಮಾತನಾಡಿ ಜನರನ್ನು ಭ್ರಮೆಯಲ್ಲಿಯೇ ತೇಲಿಸಿ ದೇಶದ ಅಷ್ಟೂ ಆರ್ಥಿಕ ವ್ಯವಸ್ಥೆಯೇ ತನ್ನ ಕುಟುಂಬದ ಕೈಯಡಿಗೆ ಬರುವಷ್ಟರ ಮಟ್ಟಿಗೆ ಮಾಡಿಕೊಂಡಿದ್ದ ಎಂದರೇ ಆಶ್ಚರ್ಯಪಡಬೇಕಾಗಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಮಹಿಂದಾ ನಡೆಸಿದ್ದು ಸರ್ವಾಧಿಕಾರ. ಶ್ರೀಲಂಕಾದಲ್ಲಿನ ಸಿಂಹಳಿಯರ ಓಲೈಕೆಗಾಗಿ ತಮಿಳು ಅಲ್ಪಸಂಖ್ಯಾತರನ್ನು ಹೊರಗೋಡಿಸುವ ಭರವಸೆ ಹುಟ್ಟಿಸಿ, ಜನಾಂಗೀಯ ದ್ವೇಷ ಹುಟ್ಟಿಸಿ ಅಧಿಕಾರವನ್ನು ಕೇಂದ್ರೀಕರಿಸಿಕೊಂಡು ದೇಶದ ಜನರನ್ನು ಮಹಿಂದಾ ನಯವಂಚನೆಗೆ ಸಿಲುಕಿಸಿದ್ದು ಅಲ್ಲಿನ ಜನರಿಗೆ ಗೊತ್ತೆಯಾಗಲಿಲ್ಲ. ಮಹಿಂದಾ ಹೂಡಿದ ವ್ಯವಸ್ಥಿತ ಹುನ್ನಾರಗಳಲ್ಲಿ ಇದೂ ಒಂದು ಎನ್ನುವುದರಲ್ಲಿ ಸಂಶಯವೇ ಇಲ್ಲ. ತಮಿಳರ ವಿರುದ್ಧ ಆಕ್ರಮಣಕಾರಿ ವಾತಾವರಣ ಸೃಷ್ಟಿಯಾಗುವ ಹಾಗೆ ಮಾಡಿದ್ದೇ ಇದೇ ರಾಜಪಕ್ಸೆ. ಸಿಂಹಳಿಯ ಬುದ್ದಿಸಂ ಅನ್ನು ಮೇಲೆತ್ತಿ ಕಟ್ಟುವುದರಿಂದಲೇ ಜೀವನ ಪರ್ಯಂತ ಅಧಿಕಾರದಲ್ಲಿ ಇರಬಹುದು ಎಂದು ಕನಸು ಕಂಡ ಮಹಿಂದಾ ಅಲ್ಲಿನ ಜನರೇ ತನ್ನ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಊಹಿಸಿಕೊಂಡಿರಲಿಕ್ಕಿಲ್ಲ. 

ಹೇಳಿಕೇಳಿ ವಸಾಹುತುಶಾಹಿ ಯುಗದಲ್ಲಿ ಊಳಿಗಮಾನ್ಯ ಹುದ್ದೆಗಳನ್ನು ಹೊಂದಿದ್ದ ಕುಟುಂಬದ ಹಿನ್ನೆಲೆಯಿಂದ ಬಂದ ರಾಜಪಕ್ಸೆ, ತನ್ನ ಆಡಳಿತದಲ್ಲಿಯೂ ವಸಾಹುತುಶಾಹಿ ಧೋರಣೆಯನ್ನು ತರುವುದಕ್ಕೆ ಪ್ರಯತ್ನಿಸುತ್ತಿರುವುದನ್ನು ಅಲ್ಲಿನ ಜನರು ತಮ್ಮ ಒಳಿತಿಗಾಗಿಯೇ ಮಾಡುತ್ತಿರುವುದೆಂದು ನಂಬಿ ಮೋಸ ಹೋದರು. ನಿರಂತರ ಬೆಲೆ ಏರಿಕೆ, ಹಣದುಬ್ಬರವಾಗುತ್ತಿದ್ದಾಗಲು ಅಲ್ಲಿನ ಬಹುಸಂಖ್ಯಾತ ಸಿಂಹಳಿಯರು ಇದು ದೇಶದ ಒಳಿತಿಗಾಗಿಯೇ ಆಗುತ್ತಿದೆ ಎಂದು ಕುರುಡಾಗಿ ನಂಬಿದರು. ಯಾಕೆಂದರೇ, ಅಲ್ಲಿನ ಮಹಿಂದಾ ರಾಜಪಕ್ಸೆ ಸರ್ಕಾರ ಜನಾಂಗೀಯ ಆಧಾರಿತವಾಗಿ ರಾಷ್ಟ್ರೀಯವಾದದ ಚಿಂತನೆಯನ್ನು ಅಲ್ಲಿನ ಜನರ ತಲೆಯೊಳಗೆ ಬಲವಂತವಾಗಿ ತುರುಕಿಸಿತ್ತು. ಮತ್ತದರ ಚೆಂದ ಕಾಣುವುದಕ್ಕೆ ಆರಂಭ ಮಾಡಿತ್ತು. ದೇಶದಲ್ಲಿ ಜಿಡಿಪಿ ಸರ್ವನಾಶವಾಗುತ್ತಿರುವಾಗಲೂ ರಾಜಪಕ್ಸೆ ಸರ್ಕಾರ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದೇ ಸುಳ್ಳು ಹೇಳಿ ನಂಬಿಸಿತು. ದೇಶದ ಪ್ರತಿಶತ ಬಹುತೇಕ ಎಪ್ಪತ್ತರಷ್ಟು ಆರ್ಥಿಕ ವ್ಯವಸ್ಥೆಯನ್ನೇ ತನ್ನ ಕುಟುಂಬದ ಪಾದದಡಿಯಲ್ಲಿರುವಂತೆ ಮಾಡಿಕೊಂಡ ರಾಜಪಕ್ಸೆಗೆ ದೇಶ ಸರ್ವನಾಶವಾಗುವವರೆಗೂ ಅಲ್ಲಿನ ಒಬ್ಬನಿಗೂ ಸರ್ವಾಧಿಕಾರದ ರೋಗವಿದೆ ಎನ್ನುವುದನ್ನು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಅಂತಹ ಕ್ರಿಮಿನಲ್ ಮೈಂಡ್ ಬಳಸಿದ್ದ ಎನ್ನುವುದಿದರರ್ಥ. ದೇಶಕ್ಕೆ ವಿಶ್ವಬ್ಯಾಂಕ್‌ನಿಂದ ಸಾಲದ ಹೊರೆ ಹೊರೆಸಿದ, ಪ್ರಧಾನ ಮಂತ್ರಿ ಗದ್ದುಗೆಗೆ ನೆತ್ತರ ಕಲೆಗಳನ್ನು ಅಂಟಿಸಿದ. ಇಡೀ ಶ್ರೀಲಂಕಾವನ್ನೇ ಅಷ್ಟು ಸುಲಭವಾಗಿ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗದಿರುವಷ್ಟರ ಮಟ್ಟಿಗೆ ಪಾತಾಳಕ್ಕೆ ತಳ್ಳಿದ. ಇನ್ನು, ಮಹಿಂದಾ ರಾಜಪಕ್ಸೆಯ ಕೋಮುವಾದವನ್ನು, ಸರ್ಕಾರವನ್ನು ಪ್ರಶ್ನಿಸಿದವರು ಶ್ರೀಲಂಕಾದಲ್ಲಿ ಬೀದಿ ಹೆಣಗಳಾದರು. ಸತ್ಯ ಹೇಳಲು ಪ್ರಯತ್ನಿಸಿದ ಅಲ್ಲಿನ ಮಾಧ್ಯಮಗಳ ಹಾಗೂ ಪತ್ರಕರ್ತರ ಧ್ವನಿ ಅಡಗಿಸಲಾಯಿತು. 

ಏನಿದರ ಹಿಂದಿನ ಕಥೆ : ೧೯೫೬ರಲ್ಲಿ ಶ್ರೀಲಂಕಾ ಕೋಮುವಾದಿ ಸರ್ಕಾರ ಸಿಂಹಳವನ್ನು ಶ್ರೀಲಂಕಾದ ಅಧಿಕೃತ ಭಾಷೆ ಎಂದು ಘೋಷಿಸಿದ್ದೇ ಅಲ್ಲಿ ಜನಾಂಗೀಯ ದ್ವೇಷಕ್ಕೆ ನಾಂದಿಯಾಯಿತು. ಸಿಂಹಳಿಯರು ತಮಿಳರನ್ನು ಅತ್ಯಂತ ಕೀಳಾಗಿ ನೋಡುವುದಕ್ಕೆ ಆರಂಭಿಸಿದರು. ಜನಾಂಗೀಯ ದ್ವೇಷವೊಂದೇ ಕಾರಣಕ್ಕಾಗಿ ನೂರಾರು ತಮಿಳರನ್ನು ಬೀದಿ ಬೀದಿಗಳಲ್ಲಿ ಧಾರುಣವಾಗಿ ಕೊಂದರು. ಆರ್ಥಿಕ ಹಾಗೂ ಶಿಕ್ಷಣದಿಂದ ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳರನ್ನು ವಂಚಿತರಾಗುವಂತೆ ಕಂಡುಕೊಂಡರು. ಇಲ್ಲಿಂದ ಆಚೆಗೆ ಶ್ರೀಲಂಕಾ ಈ ಜನಾಂಗೀಯ ದ್ವೇಷದಲ್ಲಿ ಕಂಡಿದ್ದು ರಕ್ತ ಚರಿತ್ರೆ. ಸುಮಾರು ೧೯೫೮ರಿಂದಲೇ ಶ್ರೀಲಂಕಾದಲ್ಲಿ ಇದ್ದ ತಮಿಳರ ವಿರುದ್ಧದ ವಾತಾವರಣಕ್ಕೆ ಈ ರಾಜಪಕ್ಸೆ ಎಂಬ ಕೋಮುವಾದಿ ೨೦೦೮ರಲ್ಲಿ ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳರ ಮೇಲೆ ಯುದ್ಧ ಸಾರಿಯೇ ಬಿಟ್ಟ. ಇದು ರಾಜಪಕ್ಸೆ ಹೂಡಿದ ಮತ್ತೊಂದು ವ್ಯವಸ್ಥಿತ ಜನಾಂಗೀಯ ಹತ್ಯೆ. ರಾಜಪಕ್ಸೆಯ ನೀಡಿದ ಆದೇಶದ ಮೇರೆಗೆ ಸಿಂಹಳಿಯ ಸೈನಿಕರು ತಮಿಳು ಮಹಿಳೆಯರನ್ನು ಬೀದಿ ಬೀದಿಗಳಲ್ಲಿ ನಗ್ನಗೊಳಿಸಿ ಅತ್ಯಾಚಾರವೆಸಗಿದರು. ಕಂಡಕಂಡಲ್ಲಿ ತಮಿಳರನ್ನು ಗುಂಡಿಕ್ಕಿ ಕೊಂದರು. ಇಡೀ ಶ್ರೀಲಂಕಾವೇ ತಮಿಳರ ರಕ್ತದೋಕುಳಿಯಲ್ಲಿ ಮುಳುಗಿತ್ತು. ಶ್ರೀಲಂಕಾದಲ್ಲಿ ತಮಿಳರನ್ನು ನಿರ್ನಾಮ ಮಾಡುವುದೇ ರಾಜಪಕ್ಸೆಯ ಉದ್ದೇಶ ಎನ್ನುವುದು ಇಲ್ಲಿಯೇ ಸ್ಪಷ್ಟವಾಗಿತ್ತು. ಈ ಜನಾಂಗೀಯ ದ್ವೇಷ ಹುಟ್ಟಿಸುವ ಬದಲಾಗಿ ಎಲ್ಲಾ ಜನಾಂಗದವರನ್ನು ಒಟ್ಟುಗೂಡಿಸಿ ದೇಶದ ಸುಧಾರಣೆಯತ್ತ ಚಿಂತಿಸಿದ್ದಿದ್ದರೇ, ಇವತ್ತು ಶ್ರೀಲಂಕಾಗೆ ಈ ಸ್ಥಿತಿ ಬರುತ್ತಿರಲಿಲ್ಲ. ಕೋಮುವಾದಿಯೊಬ್ಬನಿಂದ ಸಮಾನತೆಯನ್ನು ನಿರೀಕ್ಷಿಸುವುದಕ್ಕೆ ಹೇಗೆ ಸಾಧ್ಯವಿದೆ ಹೇಳಿ. ಶ್ರೀಲಂಕಾ ರಾಷ್ಟ್ರೀಯವಾದಿ ಸಿಂಹಳಿ ಬುದ್ಧಿಷ್ಟರಿಗೆ ಮಾತ್ರ ಸೇರಿದ್ದು ಎಂದು ತನ್ನ ಆಡಳಿತದುದ್ದಕ್ಕೂ ಹೇಳುತ್ತಲೇ ಇದ್ದ ರಾಜಪಕ್ಸೆಗೆ ಅಪಾರವಾದ ಜನಬಲ ದೊರಕಿತು. ರಾಜಕೀಯ ಆಟಕ್ಕೆ ಬೇಕಾಗಿ ಸಿಂಹಳಿ ಬುದ್ಧಿಷ್ಟರ ಮನವೋಲೈಕೆಯ ಉದ್ದೇಶದಿಂದ ಲಂಕೆಯಲ್ಲಿದ್ದ ಹಿಂದೂ ದೇವಾಲಯಗಳನ್ನು ದ್ವಂಸಗೊಳಿಸಿ ಬೌದ್ಧ ಸ್ತೂಪಗಳನ್ನು ಕಟ್ಟಿಸಿ ಮೆರೆದ. ತನಗೆ ಬೇಕಾದ ಹಾಗೆ ಸರ್ಕಾರದ ನೀತಿ ನಿಯಮಗಳನ್ನು, ಕಾನೂನುಗಳನ್ನು ರೂಪಿಸಿಕೊಂಡ. ತನ್ನ ನ್ಯೂನ್ಯತೆಗಳನ್ನ ಬರೆಯುವ ಪತ್ರಕರ್ತರ ಅಡ್ರೆಸ್ ಇಲ್ಲದ ಹಾಗೆ ಮಾಡಿದ. ಅವ್ಯಾಹತವಾಗಿ ಜನಾಂಗೀಯ ದ್ವೇಷ ಅತಿರಂಜಕತೆಯಲ್ಲಿಯೇ ಇರುವ ಹಾಗೆ ನೋಡಿಕೊಂಡ. ಇನ್ನು, ತಾನಿರುವವರಗೆ ತನ್ನ ಪರವಾಗಿ ಸಿಂಹಳಿಯ ಬುದ್ದಿಷ್ಟರು ಜೊತೆಗಿರುತ್ತಾರೆ ಎಂಬ ಭ್ರಮೆ ಆತನಲ್ಲಿ ಹೆಚ್ಚಾಗ ತೊಡಗಿತು. ತಾನು ಏನೇ ಹೇಳಿದರು ಒಪ್ಪುತ್ತಾರೆಂದು ಸಂವಿಧಾನವನ್ನೇ ಬದಲಾಯಿಸಿದ. ಪ್ರಚಾರದ ಹುಚ್ಚಿನಲ್ಲಿ ತೇಲಿದ. ದೇಶದ ಆಮದುಗಳನ್ನು ಲೂಟಿ ಹೊಡೆದ. ತನ್ನ ಸರ್ಕಾರದಲ್ಲಿ ತನ್ನ ಕುಟುಂಬದ ನಾಲ್ಕು ತಲೆಮಾರಿನವರನ್ನು ಸೇರಿಸಿಕೊಳ್ಳುವಷ್ಟರಮಟ್ಟಿಗೆ ಮುಂದುವರಿದ ಎಂದರೇ ಶ್ರೀಲಂಕಾ ಜನರು ಮೋಸ ಹೋಗಿದ್ದಲ್ಲದೇ ಮತ್ತೇನು..? 

ರಾಷ್ಟ್ರೀಯವಾದ, ಆರ್ಥಿಕ ಅಭಿವೃದ್ಧಿ, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಕಂತೆ ಕಂತೆ ಸುಳ್ಳು ಬೊಗಳಿ ಅಧಿಕಾರಕ್ಕೆ ಬಂದ ರಾಜಪಕ್ಸೆ ಪ್ರೇರೇಪಿಸಿದ್ದು ಎಂತದ್ದು ಎನ್ನುವುದು ‘ನೋ ಫೈರ್ ಜ್ಹೋನ್’ ಸಾಕ್ಷö್ಯ ಚಿತ್ರ ಗಮನಿಸಿದರೇ ತಿಳಿಯುವುದಕ್ಕೆ ಸಾಧ್ಯ. ಶ್ರೀಲಂಕಾ ಎಷ್ಟರ ಮಟ್ಟಿಗೆ ಆರ್ಥಿಕ ದಿವಾಳಿಯಾಗಿದೆ ಎಂದರೇ ಅಲ್ಲಿನ ಸರ್ಕಾರಿ ನೌಕರರಿಗೆ ಸಂಬಳ ನೀಡುವುದಕ್ಕೆ ಸಾಧ್ಯವಾಗದಷ್ಟು. ಆರ್ಥಿಕ ಭೀಕರತೆಯನ್ನು ಅನುಭವಿಸುತ್ತಿರುವ ಶ್ರೀಲಂಕಾದ ಜನ ಇಂದು ಹೊತ್ತಿನ ಆಹಾರಕ್ಕೆ ಪರದಾಡುತ್ತಿದ್ದಾರೆ. ಉದ್ಯೋಗಕ್ಕೆ ಒದ್ದಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಊಹಿಸಿಕೊಳ್ಳಲಾರದಷ್ಟರಮಟ್ಟಿಗಿನ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ದೂರದೃಷ್ಟಿಯಿಲ್ಲದ ಸರ್ಕಾರ ಮಾಡಿದ ವಿದೇಶಿ ಸಾಲದಿಂದ ಶ್ರೀಲಂಕಾದ ಜನ ಬೀದಿಗೆ ಬಿದ್ದಿದ್ದಾರೆ. ಶ್ರೀಲಂಕಾದ ಕರೆನ್ಸಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಸರ್ಕಾರದ ವಿರುದ್ಧ ತಿರುಗಿ ಬಿದ್ದ ಅಲ್ಲಿನ ಜನರನ್ನು ಮೃಗೀಯ ಧೋರಣೆಯಿಂದ ಉಸಿರು ನಿಲ್ಲಿಸಲಾಗಿದೆ. ಶ್ರೀಲಂಕಾದ ರಾಜಕೀಯದಲ್ಲಿ ತಮಿಳರ ರಕ್ತದ ವಾಸನೆಯಿದೆ. ರಾಜಪಕ್ಸೆ ಕುಟುಂಬದ ಕೋಮು ಅಫೀಮು ಅಂಟಿದೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ರಾಷ್ಟ್ರೀಯವಾದ, ಜನಾಂಗೀಯವಾದ, ಧರ್ಮಾಧಾರಿತ ನಿಲುವು, ಕೋಮುವಾದ, ಬಹುಪಕ್ಷಪಾತ ಯಾವುದೂ ಕೆಲಸ ಮಾಡುವುದಿಲ್ಲವೆಂದು ತಿಳಿದು ನರಿ ಬುದ್ಧಿಯಿಂದ ರಾಜಪಕ್ಸೆ ಎಲ್ಲೋ ಅಡಗಿ ಕುಳಿತ. ಸದ್ಯ, ರನೆಲ್ ವಿಕ್ರಮಸಿಂಘೆ ದೇಶದ ಹೊಣೆ ಹೊತ್ತಿದ್ದು, ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಅತೀವ ಕುತೂಹಲವಿದೆ. 

ಕೋಮುವಾದಿ, ಸರ್ವಾಧಿಕಾರಿ ಧೋರಣೆಯುಳ್ಳ ಒಬ್ಬನ ದೂರದೃಷ್ಟಿಯಿಲ್ಲದ, ಅಶಿಸ್ತಿನ ಆಡಳಿತದಲ್ಲಿ ಶ್ರೀಲಂಕಾ ಎಂಬ ಒಂದು ದೇಶ ಈ ಸ್ಥಿತಿಗೆ ತಲುಪಿದೆ ಎಂದರೇ ಇದು ಭಾರತಕ್ಕೂ ಸೇರಿ ಇಡೀ ಜಗತ್ತಿಗೆ ಒಂದು ಪಾಠ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಸರ್ವಾಧಿಕಾರ ಧೋರಣೆ ಕಂಡ ಎಲ್ಲಾ ದೇಶಗಳು ಅನುಭವಿಸಿದ್ದು ಇದೇ ಎನ್ನುವುದು ಇಲ್ಲಿ ಗಮನಾರ್ಹ. ದ್ವೀಪ ರಾಷ್ಟçದಲ್ಲಿ ಎದ್ದ ಸಾರ್ವಜನಿಕರ ಕೋಪವಂತೂ ಸದ್ಯಕಂತೂ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ನಂಬಿಕೆ ದ್ರೋಹ ಮಾಡಿದವನ ವಿರುದ್ಧ ಲಂಕೆಯ ಜನರ ಕೋಪ ತಾರಕಕ್ಕೇರಿದೆ. ಇನ್ನು, ಲಂಕೆಯ ಮುಂದಿನ ಕೆಲವು ತಿಂಗಳು ಅತ್ಯಂತ ಭೀಕರವಾಗಿರಲಿದೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ಈ ನಡುವೆ ಹೇಗೆ ಲಂಕೆ ಈ ಸ್ಥಿತಿಯಿಂದ ಹೊರಬರಲಿದೆ ಎಂಬುವುದೇ ಸದ್ಯದ ಅಚ್ಚರಿ.     

-ಶ್ರೀರಾಜ್ ವಕ್ವಾಡಿ             


Thursday, May 19, 2022

ದೇಶದ್ರೋಹ ಕಾಯ್ದೆ ದುರ್ಬಳಕೆಗೆ ಫುಲ್ ಸ್ಟಾಪ್..!

ದೇಶ ಬೇರೆ, ಸರ್ಕಾರ ಬೇರೆ | ಸೆಕ್ಶನ್ 124ಎ ಏನು ಹೇಳುತ್ತದೆ..?

ದೇಶದ ಸರ್ವೋಚ್ಛ ನ್ಯಾಯಾಲಯ ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ರಿಟಿಷ್ ಆಡಳಿತದ ಕಾಲದಲ್ಲಿ ಜಾರಿಯಾಗಿದ್ದ ‘ದೇಶದ್ರೋಹ ಕಾಯ್ದೆ’ಗೆ ಇತ್ತೀಚೆಗೆ ತಡೆ ನೀಡಿರುವುದು, ದೇಶದ ಜನರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಹೆಚ್ಚಾಗುವಂತೆ ಮಾಡಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ದೇಶ ಬೇರೆ, ಸರ್ಕಾರ ಬೇರೆ. ಸರ್ಕಾರ ದೇಶ ಆಗುವುದಕ್ಕೆ ಸಾಧ್ಯವಿಲ್ಲ. ಸರ್ಕಾರವನ್ನು ಪ್ರಶ್ನಿಸುವುದು ದೇಶದ್ರೋಹವಾಗುವುದಕ್ಕೆ ಸಾಧ್ಯವಿಲ್ಲ. ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳುಗೆಡುವುದಕ್ಕೆ ಪ್ರಯತ್ನಿಸಿದರೇ, ಹಿಂಸೆ ಮತ್ತು ಕಾನೂನುಬಾಹಿರ ಮಾರ್ಗ ಬಳಸಿದರೇ, ಸರ್ಕಾರದ ವಿರುದ್ಧ ಅಸಮಾಧಾನವನ್ನು ಹಿಂಸಾತ್ಮಕವಾಗಿ ಅಥವಾ ಅತಿರಂಜಕಗೊಳಿಸಿ ಪ್ರಚೋದಿಸುವ ಯತ್ನ ಮಾಡಿದರೇ ಮಾತ್ರ ಅದನ್ನು ದೇಶದ್ರೋಹ ಎಂದು ಪರಿಗಣಿಸುವುದಕ್ಕೆ ಸಾಧ್ಯ. ಸದ್ಯ, ಸರ್ಕಾರದ ವೈಫಲ್ಯವನ್ನು ಪ್ರಶ್ನಿಸುವುದನ್ನೇ ದೇಶದ್ರೋಹ ಎಂದು ಬಿಂಬಿಸುವ ವಾತಾವರಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಮತ್ತು ಕಾಯ್ದೆಯನ್ನು ಆಡಳಿತ ಸರ್ಕಾರಗಳು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಎಡಿರ‍್ಸ್ ಗಿಲ್ಡ್ ಆಫ್ ಇಂಡಿಯಾ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಹಾಗೂ ಮತ್ತಿತರರು ಸುಪ್ರೀಂಇಂದಿರಾಗಾಂಧಿಸಿದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡು ಚರ್ಚೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ ರಮಣ ಮತ್ತು ನ್ಯಾಯಪೀಠ ದೇಶದಾದ್ಯಂತ ಬಾಕಿಯಿರುವ ಎಲ್ಲಾ ದೇಶದ್ರೋಹ ಕೇಸು, ಮೇಲ್ಮನವಿ ಹಾಗೂ ವಿಚಾರಣೆಗಳಿಗೆ ತಡೆ ನೀಡಿದ್ದಲ್ಲದೇ, ಹೊಸದಾಗಿ ದೇಶದ್ರೋಹ ಕಾಯ್ದೆಯಡಿ ಎಫ್‌ಐಆರ್ ದಾಖಲಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. 

ದೇಶದ್ರೋಹ ಕಾಯ್ದೆ ಬ್ರಿಟೀಷ್ ಕಾಲದಲ್ಲಿ ಜಾರಿಗೆ ತಂದದ್ದಾದರೂ, ಸ್ವತಂತ್ರ ಭಾರತದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಈ ಕಾಯ್ದೆಯನ್ನು ನಿಸ್ಸಂಶಯವಾಗಿ ದುರ್ಬಳಕೆ ಮಾಡಿಕೊಂಡಿವೆ. ಹಾಗಾಗಿ ಈ ಕಾಯ್ದೆಯ ಬಗ್ಗೆ ಟೀಕೆ ಟಿಪ್ಪಣಿಗಳು ಹಲವು ದಶಕಗಳಿಂದಲೇ ಕೇಳಿಬರುತ್ತಲಿದ್ದು, ಸದ್ಯ ಈ ಕಾಯ್ದೆ ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಹಿಂಸ್ಮಾತ್ಮಕ ವಿಧಾನಗಳ ಮೂಲಕ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುವುದು ಮಾತ್ರವಲ್ಲದೇ, ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಯತ್ನಿಸುವುದನ್ನು ಮಾತ್ರ ದೇಶದ್ರೋಹವೆಂದು ಕಾಯ್ದೆ ವಾಖ್ಯಾನಿಸಿದೆ ಆದರೇ, ಈವರೆಗೆ ದೇಶದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಈ ಕಾಯ್ದೆಯನ್ನು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿದ್ದವರ ಮಣಿಸಲು ಬಳಸಿಕೊಂಡಿವೆ ಎನ್ನುವುದು ವಾಸ್ತವ ಸತ್ಯ. 

ಸೆಕ್ಶನ್ 124ಎ ಏನು ಹೇಳುತ್ತದೆ..?  : ಸೆಕ್ಶನ್ 124ಎ ಹೇಳುವ ಪ್ರಕಾರ, ಪ್ರಜಾಸತ್ತಾತ್ಮಕವಾಗಿ ರಚನೆಯಾದ ಸರ್ಕಾರದ ವಿರುದ್ಧ ಯಾರು ಹಿಂಸಾತ್ಮಕವಾಗಿ ಪ್ರತಿಭಟನೆ ಮಾಡುವುದು, ಸರ್ಕಾರದ ವಿರುದ್ಧವಾಗಿ ಮಾತಿನ ಮೂಲಕ, ಬರವಣಿಗೆಯ ಮೂಲಕ, ಸಂಕೇತ ಅಥವಾ ಚಿಹ್ನೆಗಳ ಮೂಲಕ ಅತರಂಜಕಗೊಳಿಸಿ ಒತ್ತಾಯಪೂರ್ವಕವಾಗಿ ಅಸಮಾಧಾನ ಮೂಡಿಸುವುದನ್ನು ದೇಶದ್ರೋಹ ಎಂದು ಪರಿಗಣಿಸಲಾಗುತ್ತದೆ. ಉತ್ತೇಜನೆ ಅಥವಾ ಅಸಮಾಧಾನವನ್ನು ಪ್ರಚೋದಿಸಲು ಯಾವುದೇ ರೀತಿಯಲ್ಲಿ ಪ್ರಯತ್ನಿಸದೇ, ಕಾನೂನುಬದ್ಧವಾಗಿ ಸರ್ಕಾರದ ಬಗ್ಗೆ ವ್ಯಕ್ತಪಡಿಸುವ ಅಸಾಮಾಧಾನಗಳು ದೇಶದ್ರೋಹ ಎಂದು ಪರಿಗಣಿಸಲಾಗುವುದಿಲ್ಲ. 

ಸ್ವಾತಂತ್ರ್ಯ ನಂತರದ ಭಾರತದಲ್ಲಿ ದೇಶದ್ರೋಹ ಕಾಯ್ದೆ ಹಲವಾರು ವಿಮರ್ಶೆ, ಟೀಕೆಗೆ ಒಳಗಾಯಿತು. ೧೯೫೧ರಲ್ಲಿ ಭಾರತ ಸಂವಿಧಾನದ ಮೊದಲ ತಿದ್ದುಪಡಿಯ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿ ಜವಹರಲಾಲ್ ನೆಹರು ಈ ಕಾಯ್ದೆಯನ್ನು ತೆಗೆದು ಹಾಕುವ ವಿಚಾರ ಪ್ರಸ್ತಾಪಿಸಿದರಾರೂ, ಏನೂ ಆಗಿರಲಿಲ್ಲ. ಇನ್ನು. ೨೦೧೯ರ ಸಾರ್ವತ್ರಿಕ ಚುನಾವಣೆಯ ಸಂದರ್ಬದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ೧೨೪ಎ ಅನ್ನು ರದ್ದುಗೊಳಿಸುವುದಾಗಿ ಪ್ರಸ್ತಾಪಿಸಿತ್ತು, ಆದರೇ, ೨೦೦೪-೨೦೧೪ರ ತನಕ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ ಅಧಿಕಾರದಲ್ಲಿದ್ದಾಗ ಈ ಸಂಬಂಧ ಯಾವುದೇ ವಿಚಾರ ಹೊರತೆಗೆಯಲೇ ಇಲ್ಲ. ಪ್ರಜಾಪ್ರಭುತ್ವದಂತಹ ರಾಷ್ಟ್ರದ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಕೆ ಈ ಕಾಯ್ದೆ ಅಡ್ಡಿಮಾಡುತ್ತದೆ ಎಂದು ಒಂದೆಡೆ ವಾದವಾದರೇ, ದೇಶದ ಸಮಗ್ರತೆ ಹಾಗೂ ಭದ್ರತೆಯ ವಿಚಾರ ಬಂದಾಗ ಇಂತಹ ಕಾಯ್ದೆ ಅಗತ್ಯ ಎಂಬವರ ವಾದ ಮತ್ತೊಂದೆಡೆ. ಈವೆರಡು ಅಭಿಪ್ರಾಯಗಳ ಸಮತೋಲನ ಕಾಪಾಡುವ ಕೆಲಸ ಸದ್ಯಕ್ಕೆ ಸುಪ್ರೀಂ ಕೋರ್ಟ್ ಮಾಡಿದೆ ಎನ್ನುವುದು ಇಲ್ಲಿ ಗಮನಾರ್ಹ. 

ಬಹಳ ಪ್ರಮುಖವಾಗಿ, ದೇಶದಾದ್ಯಂತ ಮೋದಿ ಸರ್ಕಾರ ತರಲು ಹೊರಟಿದ್ದ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ದ ನಡೆದ ಪ್ರತಿಭಟನೆಯ ವರದಿ ಮಾಡಿದ ಹಿರಿಯ ಪತ್ರಕರ್ತರ ವಿರುದ್ಧವೂ ಈ ದೇಶದ್ರೋಹ ಕಾಯ್ದೆಯನ್ನು ಬಿಜೆಪಿ ಸರ್ಕಾರ ಬಳಸಿಕೊಂಡಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಈ ವಿಚಾರವನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಬಲವಾಗಿ ಖಂಡಿಸಿತ್ತು. ಸಮಾಜದ ಮುಖವಾಣಿಯಾಗಿ ಕಾರ್ಯನಿರ್ವಹಿಸುವ ಪತ್ರಕರ್ತರ ವಿರುದ್ಧವೇ ಈ ಕಾಯ್ದೆಯನ್ನು ಈ ದೇಶದ ಆಡಳಿತ ಪಕ್ಷ ಬಳಿಸಿಕೊಂಡಿದೆ ಎಂದಾದರೇ, ಸಾಮಾನ್ಯರ ಗತಿ ಏನು..? ಹಾಗಾಗಿಯೇ, ಎಡಿರ‍್ಸ್ ಗಿಲ್ಡ್ ಆಫ್ ಇಂಡಿಯಾ ಹಾಗೂ ಐಡಬ್ಲ್ಯೂಪಿಸಿ (ಭಾರತೀಯ ಮಹಿಳಾ ಪ್ರೆಸ್ ಕಾರ್ಪ್ಸ್) ಈ ಕಾಯ್ದೆಯನ್ನು “ಕಠಿಣ ಕಾಯ್ದೆ” ಎಂದು ಕರೆದಿದ್ದಲ್ಲದೇ, ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ.  

ವಿದ್ಯಾರ್ಥಿಗಳನ್ನು ಒಳಗೊಂಡು ವಿಮರ್ಶಕರು, ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು, ಪೊಲೀಸರು, ರಾಜಕೀಯ ನಾಯಕರು, ವಕೀಲರು, ಪತ್ರಕರ್ತರು ಮುಂತಾದವರು ದೇಶದ್ರೋಹ ಕಾಯ್ದೆಯ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿರುವುದು ಮಾತ್ರವಲ್ಲದೇ ಕಾಯ್ದೆಯನ್ನು ರದ್ದು ಮಾಡಿಸಬೇಕು ಅಥವಾ ತಿದ್ದುಪಡಿಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ. ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ಒಳಗೊಂಡ ನ್ಯಾಯಪೀಠ ಕೂಡ ಸರ್ಕಾರವನ್ನು ಮರುಪರಿಶೀಲಿಸುವಂತೆ ಕೇಳಿ ಸದ್ಯ ತಡೆಹಿಡಿದು ವಿಚಾರಣೆಯನ್ನು ಜುಲೈ ೩ನೇ ವಾರಕ್ಕೆ ಮುಂದೂಡಿದೆ. ಹಾಗಾದರೇ, ಒಂದು ವೇಳೆ ದೇಶದ್ರೋಹ ಕಾಯ್ದೆ ಭಾರತದಲ್ಲಿ ರದ್ದಾದರೇ, ಅದಕ್ಕೆ ಸರಿಹೊಂದುವ ಬೇರೆ ಯಾವುದೇ ಕಾಯ್ದೆಗಳಿಲ್ಲವೇ..? ಖಂಡಿತ ಇವೆ. ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ, ಸಾರ್ವಜನಿಕ ಸುರಕ್ಷತಾ ಕಾಯ್ದೆ, ರಾಷ್ಟ್ರೀಯ ಭದ್ರತಾ ಕಾಯ್ದೆಗಳು ಸೇರಿ ಮುಂತಾದ ಕಾಯೆಗಳು ಇವೆ ಎನ್ನುವುದು ಗಮನಾರ್ಹ. 

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ)ಕಾಯ್ದೆ : ಈ ಕಾಯ್ದೆಯು ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡುವ ಸಂಘಟನೆಗಳನ್ನು ತಡೆಗಟ್ಟುವ ಕಾನೂನಾಗಿದೆ. ಸಮಗ್ರತೆ ಹಾಗೂ ಸಾರ್ವಭೌಮತೆಗೆ ವಿರುದ್ಧವಾದ ಚಟುವಟಿಕೆಗಳನ್ನು ನಿರ್ಬಂಧಿಸುವುದಕ್ಕಾಗಿಯೇ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ೨೦೧೯ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ ಯ (ಯುಎಪಿಎ ೨೦೧೯) ಕಾನೂನಿಗೆ ವಿರುದ್ಧ/ವಾದ ನಡೆದುಕೊಳ್ಳುವವರನ್ನು/ಚಟುವಟಿಕೆಗಳನ್ನು ಭಯೋತ್ಪಾದಕರೆಂದು/ಭಯೋತ್ಪಾದಕ ಚಟುವಟಿಕೆಗಳೆಂದು ಪರಿಗಣಿಸಬಹುದಾಗಿದೆ. ಯುಎಪಿಎ ಕಾಯ್ದೆಯನ್ನು ಭಯೋತ್ಪಾದನಾ ವಿರೋಧಿ ಕಾಯ್ದೆ ಎಂದು ಕೂಡ ಕರೆಯಲಾಗುತ್ತದೆ. 

ಇನ್ನು, ಯುಎಪಿಎ ಕಾಯ್ದೆಯ ಪ್ರಕಾರ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡ, ಅಥವಾ ಭಯೋತ್ಪಾದನೆಗಾಗಿ ತಯಾರಿ, ಭಯೋತ್ಪಾದನೆಯನ್ನು ಉತ್ತೇಜಿಸುವ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುವುದಕ್ಕೆ ಈ ಕಾಯ್ದೆಗೆ ಅಧಿಕಾರ ಇದೆ.  

ರಾಷ್ಟ್ರೀಯ ಭದ್ರತಾ ಕಾಯ್ದೆ : ೧೯೮೦ರಲ್ಲಿ ಇಂದಿರಾಗಾಂಧಿ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದಾಗ ಸುಮಾರು ೧೮ ಸೆಕ್ಶನ್‌ಗಳುಳ್ಳ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಭಾರತದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆ, ವಿದೇಶಗಳೊಂದಿಗಿನ ಭಾರತದ ಸಂಬಂಧಗಳ ನಿರ್ವಹಣೆಯ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು.  

ಹೌದು, ಈ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಅನೇಕ ಕಾಯ್ದೆಗಳಿವೆ. ಅಂತಹುದರಲ್ಲಿ ಮಹಾತ್ಮಗಾಂಧಿ ಅವರಂತಹ ಸ್ವಾತಂತ್ರದ ಹೆಗ್ಗುರುತುಗಳ ಧ್ವನಿಯನ್ನೇ ಅಡಗಿಸಲು ಅಥವಾ ಸತ್ಯವನ್ನು ಅಡಗಿಸಲು ಬ್ರಿಟೀಷ್ ಸರ್ಕಾರ ಬಳಸಿಕೊಂಡ ದೇಶದ್ರೋಹದಂತಹ ಕಾಯ್ದೆಯನ್ನೇಕೆ ಈ ದೇಶದ ಸರ್ಕಾರ ರದ್ದುಗೊಳಿಸುತ್ತಿಲ್ಲ. ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನ ಇಲ್ಲಿನ ನಾಗರಿಕರಿಗೆ ಅಭಿವ್ಯಕ್ತಿಯ ಸ್ವಾತಂತ್ರ್ಯ ನೀಡಿದೆ. ಸರ್ಕಾರದ ಕಾರ್ಯಚಟುವಟಿಕೆಗಳನ್ನು, ವೈಫಲ್ಯವನ್ನು ಪ್ರಶ್ನಿಸುವುದನ್ನೇ ದೇಶದ್ರೋಹವೆಂದು ಸರ್ಕಾರದ ಪರವಾದ ಸಂಘಟನೆಗಳು, ಪರವಾದಿಗಳು ಬಿಂಬಿಸುವಂತಹ ಭಯೋತ್ಪಾದಕ ವಾತಾವರಣ ಸೃಷ್ಟಿಗೆ ಪರೋಕ್ಷವಾಗಿ ಸರ್ಕಾರಗಳೇ ಕಾರಣವಾದವು. ಸತ್ಯವನ್ನು ಅಡಗಿಸುವ ಪ್ರಯತ್ನವನ್ನು ಈ ಕಾಯ್ದೆಯನ್ನು ಬಳಸಿಕೊಂಡು ಈವರೆಗೆ ದೇಶದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ದುರ್ಬಳಕೆ ಮಾಡಿಕೊಂಡವು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಂವಿಧಾನ ಈ ದೇಶದ ನಾಗರಿಕರಿಗೆ ನೀಡಿದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದ ತನ್ನ ಪರವಾದ ಸಂಘಟನೆಗಳ ವಿರುದ್ಧ ಎಂದೂ ಯಾವ ಸರ್ಕಾರವೂ ಸರ್ಕಾರ ದೇಶದ್ರೋಹದ ಪ್ರಕರಣಗಳನ್ನು ದಾಖಲು ಮಾಡಿಲ್ಲ. ತನ್ನ ಆಡಳಿತದ ವೈಫಲ್ಯವನ್ನು ಪ್ರಶ್ನಿಸಿದವರ ಮೇಲೆ, ವರದಿ ಮಾಡಿದವರ ಮೇಲೆ ದೇಶದ್ರೋಹದಂತಹ ಕಾಯ್ದೆಯನ್ನು ಬಳಸಿಕೊಂಡು ಜಾಮೀನುರಹಿತ ಅಪರಾಧವೆಂದು ಘೊಷಿಸಿದವು. ತನಗೆ ಲಾಭ ತಂದುಕೊಡುವ ಸೆನ್ಸೇಷನಲೈಸ್ಡ್ ಧರ್ಮ ರಾಜಕೀಯ ಸಂಘರ್ಷಗಳು, ಘಟನೆಗಳು ಸರ್ಕಾರಗಳಿಗೆ ಎಂದೂ ದೇಶದ್ರೋಹವೆಂದು ಕಾಣಿಸಲೇ ಇಲ್ಲ. ಅವುಗಳ ಚೆಂದ ಕಾಣುತ್ತಲೇ ತನ್ನ ಆಡಳಿತ ಮುಂದುವರಿಸಿದ್ದು ಈ ದೇಶದ ದುರಂತವೇ ಸರಿ. 

ಒಟ್ಟಿನಲ್ಲಿ, ಈ ದೇಶದಲ್ಲಿ ವಾಸ್ತವಾಂಶವನ್ನು ಮರೆಮಾಚಲಾಗದು ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ದೇಶದ ನಾಗರಿಕರಿಗೆ ಸಂವಿಧಾನ ನೀಡಿದ ಹಕ್ಕುಗಳು ಹಾಗೂ ಸಮಗ್ರತೆಯ ಸಮತೋಲನಕ್ಕೆ ಧ್ವನಿ ಸೇರಿಸುವುದರ ಮೂಲಕ ಸುಪ್ರೀಂ ಕೋರ್ಟ್ ದೇಶದ್ರೋಹ ಕಾಯ್ದೆಗಳಿಗೆ ಸದ್ಯ ತಡೆ ಹಿಡಿದಿರುವುದು ಸ್ವಾಗತಾರ್ಹ ಬೆಳವಣಿಗೆ ಎನ್ನುವುದರಲ್ಲಿ ಸಂಶಯವಿಲ್ಲ.

-ಶ್ರೀರಾಜ್ ವಕ್ವಾಡಿ  


Thursday, May 12, 2022

ವಿವಾದ ಸೃಷ್ಟಿಸಿದ್ದ ‘ಪೌರತ್ವ’ ಮತ್ತೆ ಮುನ್ನೆಲೆಗೆ..!

(ಸಾಂದರ್ಭಿಕ ಚಿತ್ರ)

ಸಿಎಎ ವಿವಾದಕ್ಕೆ ಕಾರಣವೇನು..? | ‘ಪೌರತ್ವ’ ಮತ್ತೆ ಬಿಜೆಪಿಯ ೨೦೨೪ರ ಪ್ರಣಾಳಿಕೆಗೆ..?

ಕಳೆದ ಎರಡು ಮೂರು ವರ್ಷಗಳ ಹಿಂದೆ ಇಡೀ ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ವಿವಾದಕ್ಕೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಈಗ ಮತ್ತೆ ಸದ್ದು ಮಾಡುತ್ತಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಸಿಎಎ ಕಾಯ್ದೆಯ ವಿಚಾರ ಮತ್ತೆ ಮೇಲೆತ್ತಿದ್ದು, ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. 

ಮುಸ್ಲೀಮರನ್ನು ಉದ್ದೇಶಪೂರ್ವಕವಾಗಿ ಧರ್ಮಾಧಾರಿತವಾಗಿ ಈ ದೇಶದಲ್ಲಿ ನಿರ್ಲಕ್ಷ್ಯಕ್ಕೆ  ಒಳಪಡಿಸುವ ಅಥವಾ ಹೊರಹಾಕುವ ಬಿಜೆಪಿಯ ಪೂರ್ವಯೋಜಿತ ಷಡ್ಯಂತ್ರವಿದು ಎಂದು ಈ ದೇಶದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ಈ ತಿದ್ದುಪಡಿ ಕಾಯ್ದೆ, ಕೋವಿಡ್‌ನ ಕಾರಣದಿಂದಾಗಿ ನೆನೆಗುದಿಗೆ ಬಿದ್ದಿತ್ತು. ಸಿಎಎ ಜೊತೆಗೆ ಎನ್ ಆರ್ ಸಿ ಯೋಜನೆಯನ್ನೂ ಕೂಡ ಧರ್ಮಾಧಾರಿತವಾಗಿ ತಂದು ಧಾರ್ಮಿಕ ತಾರತಮ್ಯ ಮಾಡುವ ಸಂಚು ಎನ್ನುವುದು ಈ ಕಾಯ್ದೆಯ ವಿರುದ್ಧ ನಿಂತವರ ವಾದವಾಗಿತ್ತು. ಆದರೇ, ಸರ್ಕಾರ ಹಾಗೂ ಕಾಯ್ದೆಯ ಪರವಾಗಿ ನಿಂತವರು ಈ ಕಾಯ್ದೆಯನ್ನು ಸಮರ್ಥಿಸಿಕೊಂಡೇ ಬಂದಿದ್ದು, ಮೂರು ಮುಸ್ಲೀಂ ಬಹುಸಂಖ್ಯಾತ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ತುಳಿತಕ್ಕೆ ಒಳಗಾದ ಅಲ್ಲಿಯ ಅಲ್ಪಸಂಖ್ಯಾತರಿಗಷ್ಟೇ (ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಹಾಗೂ ಕ್ರೈಸ್ತ) ಭಾರತೀಯ ಪೌರತ್ವ ನೀಡಲಾಗುತ್ತದೆ. ಅಕ್ರಮವಾಗಿ ವಲಸೆ ಬಂದಿರುವ ಮುಸ್ಲೀಮರಿಗಷ್ಟೇ ಸಮಸ್ಯೆ ಆಗುತ್ತದೆ. ಭಾರತೀಯ ಮೂಲ ಮುಸ್ಲೀಮರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲವೆಂದು ಇಂದಿಗೂ ಸಮರ್ಥಿಸಿಕೊಳ್ಳುತ್ತಿದ್ದಾರೆ. 

ಈ ಕಾಯ್ದೆಯ ತಿದ್ದುಪಡಿಯ ವಿಚಾರ ಮುನ್ನೆಲೆಗೆ ಬಂದಾಗ ಇಡೀ ದೇಶದಾದ್ಯಂತ ಕಾಯ್ದೆಯ ವಿರುದ್ಧ ದೊಡ್ಡ ಪ್ರತಿಭಟನೆಗಳು ನಡೆದವು, ಕೆಲವಡೆದೆ ಅದು ಧಾರ್ಮಿಕ ಹೊಯ್ದಾಟಕ್ಕೂ ಕಾರಣವಾಯಿತು. ಮಾತ್ರವಲ್ಲದೇ ಈ ಹೊಯ್ದಾಟವನ್ನು ಕೆಲವರು ‘ದೇಶವನ್ನು ರಕ್ಷಿಸುವ ಮತ್ತೊಂದು ಸ್ವಾತಂತ್ರ್ಯ ಹೋರಾಟ’ ಎಂದು ಬಿಂಬಿಸಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಸುವ ಕೆಲಸವನ್ನೂ ಮಾಡಿದರು. ಇನ್ನು, ಈ ಸಂಘರ್ಷದ ಬಗ್ಗೆ ಕೇಂದ್ರ ಸರ್ಕಾರವಂತೂ ತನಗೆ ಸಂಬಂಧವೇ ಇಲ್ಲ ಎಂಬ ಧೋರಣೆ ತೋರಿಸಿ ಬಾಯಿ ಮುಚ್ಚಿ ಚೆಂದ ಕಂಡಿದ್ದು ಬಿಟ್ಟರೇ, ತಿಳಿ ಹೇಳುವ ಕೆಲಸವನ್ನೂ ಮಾಡದೇ ಇರುವುದು ದುರಂತವೇ ಸರಿ. 

ಅಷ್ಟಕ್ಕೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ ೩೭೦ ರದ್ದು, ಅಯೋಧ್ಯೆ ರಾಮ ಮಂದಿರ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಇತ್ಯಾದಿಗಳು ಜನ ಪರವೋ, ವಿರೋಧವೋ ಗೊತ್ತಿಲ್ಲ ಆದರೇ, ಬಿಜೆಪಿ ಸರ್ಕಾರದ ಚುನಾವಣಾ ಅಜೆಂಡಾ ಆಗಿ ಬಳಸಿಕೊಳ್ಳುತ್ತಿರುವುದಂತೂ ಸತ್ಯ. ಸಾಮಾನ್ಯವಾಗಿ ಅಧಿಕಾರದಲ್ಲಿರುವ ಸರ್ಕಾರ ತನಗೆ ಲಾಭವಾಗುವುದನ್ನೇ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದು ರಾಜಕೀಯದಲ್ಲಿ ಸಾಮಾನ್ಯ. ಈವರೆಗೆ ಆಡಳಿತ ಮಾಡಿದ ಎಲ್ಲಾ ಸರ್ಕಾರಗಳು ಅದನ್ನೇ ಮಾಡಿದ್ದು, ಅದರಿಂದ ಮೋದಿ ಸರ್ಕಾರ ಹೊರತಾಗಿಲ್ಲ. ಇನ್ನು, ವಿಚಾರಗಳನ್ನು ಅತಿರಂಜಕಗೊಳಿಸಿ ಚೆಂದ ಕಾಣುವುದನ್ನು ಈಗಿನ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ವಿಶೇಷವಾಗಿ ಹೇಳಿಕೊಡಬೇಕೆಂದಿಲ್ಲ. ಯಾವುದೇ ಯೋಜನೆಗಳನ್ನು ಜಾರಿಗೆ ತರುವಾಗ ಅದಕ್ಕೆ ಬೇಕಾದ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದಿರುವುದೇ ಬಿಜೆಪಿಯಲ್ಲಿನ ದೊಡ್ಡ ಸಮಸ್ಯೆ. ಅದಕ್ಕಾಗಿ ಬಿಜೆಪಿ ಯಾವುದೇ ವಿಷಯ ಮುನ್ನೆಲೆಗೆ ತಂದಾಗ ಒಂದಿಷ್ಟು ಗೊಂದಲಗಳು ಸೃಷ್ಟಿಯಾಗುತ್ತವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆ ೨೦೧೯ರ ವಿಷಯದಲ್ಲಿ ಇದೇ ಆಗಿದ್ದು. 

ಎಲ್ಲಿ ವಿವಾದಕ್ಕೆ ಕಾರಣವಾಗಿದ್ದು..? : ಭಾರತಕ್ಕೆ ವಾಮ ಮಾರ್ಗದ ಮೂಲಕ ಅಥವಾ ಅಕ್ರಮವಾಗಿ ವಲಸೆ ಬಂದವರಿಗೆ ಈ ದೇಶದಲ್ಲಿ ಪೌರತ್ವ ನೀಡುವುದಕ್ಕೆ ಪೌರತ್ವ ಕಾಯ್ದೆ ೧೯೫೫ ಹಾಗೂ ವಿದೇಶಿಗರ ಕಾಯ್ದೆ ಹಾಗೂ ಪಾಸ್‌ಪೋರ್ಟ್ ಕಾಯ್ದೆಗಳು ನಿರ್ಬಂಧಗಳನ್ನು ಹಾಕಿವೆ. ಆದರೇ, ಮೋದಿ ನೇತೃತ್ವದ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ೨೦೧೯ರಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿAದ ಅಕ್ರಮವಾಗಿ ವಲಸೆ ಬಂದ ಮುಸ್ಲೀಮರನ್ನು ಹೊರತುಪಡಿಸಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಹಾಗೂ ಕ್ರೈಸ್ತ ಧರ್ಮಗಳ ಅಲ್ಪಸಂಖ್ಯಾತರು ೬ ವರ್ಷ ವಾಸವಿದ್ದರೇ ಪೌರತ್ವ ನೀಡುವ ವಿಚಾರವನ್ನು ಪ್ರಸ್ತಾಪಿಸಿರುವುದೇ ದೇಶದಲ್ಲಿ ಇದನ್ನು ಧಾರ್ಮಿಕ ತಾರತಮ್ಯ ಎಂದು ಬಿಂಬಿಸಿ ದೊಡ್ಡ ಮಟ್ಟದ ಹೋರಾಟ, ಪ್ರತಿಭಟನೆಗಳು ನಡೆಯುವುದಕ್ಕೆ ಕಾರಣ ಎನ್ನುವುದು ಸ್ಪಷ್ಟ.   

ನೆರೆ ರಾಷ್ಟçಗಳಿಂದ ಧಾರ್ಮಿಕವಾಗಿ ಶೋಷಣೆಗೆ ಒಳಗಾಗಿ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದ ಅಲ್ಪಸಂಖ್ಯಾತರಿಗಷ್ಟೇ ಪೌರತ್ವ ನೀಡುವುದಾಗಿ, ಹಾಗೂ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದ ಮುಸ್ಲೀಮರು ಆ ದೇಶದಲ್ಲಿ ಅಲ್ಪಸಂಖ್ಯಾತರಲ್ಲ ಎಂದು ಮೋದಿ ಸರ್ಕಾರ ವಾದಿಸುತ್ತಿರುವುದು ಪ್ರಗತಿಪರ ಚಿಂತಕರನ್ನು ಕೆರಳಿಸಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ಮೋದಿ ವಿರೋಧಿಗಳನ್ನು ಈ ತಿದ್ದುಪಡಿ ಕೆರಳಿಸಿದ್ದು ಯಾಕೆ..?  : ೧೯೫೫ರಲ್ಲಿ ಜವಹರಲಾಲ್ ನೆಹರು ಈ ದೇಶದ ಪ್ರಧಾನಿಯಾಗಿದ್ದಾಗ, ಈ ದೇಶದಿಂದ ದೇಶ ವಿಭಜನೆಯ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಇತರೆ ನೆರೆ ರಾಷ್ಟçಗಳಿಗೆ ಗುಳೆ ಹೋಗಿ, ಅಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದ ಭಾರತ ದೇಶದ ಮೂಲವಾಸಿಗರಿಗೆ ಮತ್ತೆ ಈ ನೆಲದಲ್ಲಿ ನೆಲೆ ಕಲ್ಪಿಸುವ ಉದ್ದೇಶದಿಂದ ಮತ್ತು ಈ ದೇಶದ ಪೌರತ್ವ ನೀಡುವ ಸದುದ್ದೇಶದಿಂದ ಅಂದಿನ ಕೇಂದ್ರ ಸರ್ಕಾರ (ನೆಹರು ನೇತೃತ್ವದ ಸರ್ಕಾರ) ಭಾರತೀಯ ಪೌರತ್ವ ಕಾಯ್ದೆ ಜಾರಿಗೆ ತಂದಿತ್ತು. ಸುಮಾರು ಆರು ದಶಕಗಳಿಂದ ಈ ದೇಶದಲ್ಲಿ ಇದೇ ಕಾಯ್ದೆ ಜಾರಿಯಲ್ಲಿತ್ತು. ನೆಹರು ಸರ್ಕಾರ ಜಾರಿಗೆ ತಂದ ಈ ಕಾಯ್ದೆಯ ಅನ್ವಯ ನೆರೆಹೊರೆ ರಾಷ್ಟçಗಳಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಅಕ್ರಮವಾಗಿ ಈ ದೇಶದಲ್ಲಿ ಸುಮಾರು ೧೨ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ನೆಲೆ ನಿಂತ ಸಿಖ್, ಹಿಂದೂ, ಕ್ರೆöÊಸ್ತ, ಪಾರ್ಸಿ, ಬೌದ್ಧ, ಜೈನ ಹಾಗೂ ಮುಸ್ಲೀಂ ಅಥವಾ ಯಹೂದಿಗಳು ಕಾನೂನು ಅನುಸಾರವಾಗಿ ಸೂಕ್ತ ದಾಖಲೆಗಳಿದ್ದರೇ ಭಾರತ ದೇಶದ ಪೌರತ್ವ ನೀಡಲಾಗುತ್ತಿತ್ತು. ಮಾತ್ರವಲ್ಲದೇ, ೧೯೫೫ರಲ್ಲಿ ಜಾರಿಗೆ ಬಂದ ಈ ಕಾಯ್ದೆ ಹೇಳುವ ಪ್ರಕಾರ, ವಿದೇಶಿ ಪ್ರಜೆಯೊಬ್ಬ ಭಾರತ ದೇಶದಲ್ಲಿದ್ದು, ದೇಶದ ಸರ್ಕಾರದಲ್ಲಿ ಸುಮಾರು ಒಂದು ವರ್ಷ ಸೇವೆ ಸಲ್ಲಿಸಿರುವುದರೊಂದಿಗೆ ಹಲವು ಕಾನೂನುಬದ್ಧ ಷರತ್ತುಗಳಿಗೆ ಬದ್ಧರಾಗಿದ್ದರೇ ಈ ದೇಶದ ಪೌರತ್ವ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವ ಅವಕಾಶವನ್ನೂ ಕೂಡ ನೀಡಿತ್ತು. ಮತ್ತು ಅರ್ಜಿ ಸಲ್ಲಿಸುವ ಹಿಂದಿನ ೧೪ ವರ್ಷಗಳಲ್ಲಿ ಸುಮಾರು ಹನ್ನೊಂದು ವರ್ಷಗಳ ಕಾಲ ಈ ದೇಶದಲ್ಲಿ ವಾಸವಿರುವುದನ್ನು ಆ ವಿದೇಶಿ ಪ್ರಜೆ ದೃಢಪಡಿಸಭೇಕಾಗಿರುವುದು ಅನಿವಾರ್ಯವಾಗಿತ್ತು. ಆದರೇ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಾಡಿದ ತಿದ್ದುಪಡಿಯಲ್ಲಿ ಕೆಲವು ಬದಲಾವಣೆ ಮಾಡಿರುವುದು ಮತ್ತು ಅಕ್ರಮವಾಗಿ ವಲಸೆ ಬಂದ ಮುಸ್ಲೀಮರಿಗೆ ಪೌರತ್ವ ನೀಡುವ ವಿಷಯವನ್ನು ತೆಗೆದು ಹಾಕಿರುವುದು ಚರ್ಚೆಗೆ ಕಾರಣವಾಗಿತ್ತು. 

೨೦೧೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಅನುಷ್ಠಾನಗೊಳಿಸುವುದಾಗಿ ಹೇಳಿತ್ತು. ೨೦೧೪ರಲ್ಲಿ ಮೋದಿ ನೇತೃತ್ವದ ಸರ್ಕಾರ ಕೇಂದ್ರದ ಅಧಿಕಾರ ಹಿಡಿದ ಎರಡು ವರ್ಷಗಳ ನಂತರ ಅಂದರೇ, ೨೦೧೬ರ ಜುಲೈ ೧೯ ರಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮಂಡನೆ ಮಾಡಿತ್ತು, ಮಾತ್ರವಲ್ಲದೇ ಅದೇ ವರ್ಷವೇ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಗಿತ್ತು. ಇನ್ನು, ಸಂಸದೀಯ ಸಮಿತಿ ೨೦೧೯ರ ಜನವರಿಯಲ್ಲಿ ತನ್ನ ವರದಿಯನ್ನು ನೀಡಿತ್ತು. ಮತ್ತು ಲೋಕಸಭೆಯಲ್ಲಿಯೂ ಕೂಡ ಮಸೂದೆ ಮಂಡನೆಯಾಗಿ ಪಾಸ್ ಆಗಿತ್ತು. ಆದರೇ, ರಾಜ್ಯ ಸಭೆಯಲ್ಲಿ ಮಂಡನೆಯಾಗಿರಲಿಲ್ಲ. ಸರ್ಕಾರದ ಅವಧಿ ಮುಗಿದ ಕಾರಣದಿಂದಾಗಿ ಮಸೂದೆಯೂ ರದ್ದಾಗಿತ್ತು. ೨೦೧೯ರಲ್ಲಿ ಮತ್ತೆ ಮೋದಿ ನೇತೃತ್ವದ ಸರ್ಕಾರ ಮತ್ತೆ ಕೇಂದ್ರದ ಅಧಿಕಾರ ಹಿಡಿದ ಮೇಲೆ ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು, ಆದರೇ ರಾಜ್ಯಸಭೆಯಲ್ಲಿ ಅಂಗೀಕಾರವಾಗಿಲ್ಲ. ತದನಂತರ ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಮಸೂದೆ ಒಂದು ರೀತಿಯಲ್ಲಿ ನೆನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕಾಯ್ದೆಯ ವಿಚಾರವನ್ನು ಮೇಲಕ್ಕೆತ್ತಿದ್ದು, ೨೦೨೪ರ ಲೋಕಸಭಾ ಚುನಾವಣಾ ಪೂರ್ವವಾಗಿ ಜಾರಿಗೆ ತರುವ ಎಲ್ಲಾ ಲಕ್ಷಣಗಳು ಕಾಣಿಸತ್ತಿವೆ. 

ಇನ್ನು, ಈಗಾಗಲೇ ಈ ಕಾಯ್ದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮೂರು ಬಾರಿ ಹಾಗೂ ಬಿಜೆಪಿ ಸರ್ಕಾರ ಇದ್ದಾಗ ಎರಡು ಬಾರಿ ಸೇರಿ ಒಟ್ಟು ಐದು ಬಾರಿ ತಿದ್ದುಪಡಿಯಾಗಿದ್ದು, ಕಾಂಗ್ರೆಸ್, ಟಿಎಂಸಿ ಸೇರಿ ಹಲವು ಪಕ್ಷಗಳು ಇದನ್ನು ‘ಭಾರತದಂತಹ ಜಾತ್ಯಾತೀತ ರಾಷ್ಟçದಲ್ಲಿ ಧರ್ಮಾಧಾರಿತ ರಾಜಕೀಯ ಮಾಡುವುದಕ್ಕೆ ಬಿಜೆಪಿ ಪ್ರಯತ್ನಿಸುತ್ತಿದ್ದು, ಸಂವಿಧಾನ ಕೊಡಮಾಡಿರುವ ೧೪ನೇ ವಿಧಿ ಅಥವಾ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಜಾತಿ, ಧರ್ಮಗಳ ಆಧಾರದ ಮೇಲೆ ದೇಶದ ಪೌರತ್ವ ನೀಡುವುದು ಈ ದೇಶದ ಕಾನೂನಿಗೆ ವಿರುದ್ಧವಾದದ್ದು’ ಎಂದು ಬಲವಾಗಿ ವಿರೋಧಿಸುತ್ತಿರುವುದರ ನಡುವೆಯೂ ಮೋದಿ ನೇತೃತ್ವದ ಸರ್ಕಾರ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಪಟ್ಟು ಹಿಡಿದಿದೆ. ಆದರೇ, ರಾಜ್ಯಸಭೆಯಲ್ಲಿ ಇಷ್ಟೆಲ್ಲಾ ಬಾರಿ ವಿರೋಧದ ನಡುವೆಯೂ ಪಾಸ್ ಆಗಲಿದೆಯೇ ಎಂಬ ಪ್ರಶ್ನೆಯೊಂದು ಈ ತನ್ಮಧ್ಯೆ ಎದ್ದಿದೆ. 

-ಶ್ರೀರಾಜ್ ವಕ್ವಾಡಿ