ಸಮಿತಿಯ ಮಾಜಿ ಅಧ್ಯಕ್ಷರಾದ್ಮೇಲೆ ಸರ್ಕಾರದ ಬುಡಕ್ಕಿಟ್ರೇ ಚಕ್ರತೀರ್ಥ..?
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಮ್ಮ ರೋಗಗ್ರಸ್ತ ಬುದ್ಧಿಯ ಪ್ರಯೋಗದಿಂದಾಗಿ ರಾಜ್ಯದ ಜನರೆದುರು ರಾಜ್ಯ ಸರ್ಕಾರ ಕ್ಷಮೆ ಕೇಳುವಂತೆ ಹಗಲಿರುಳು ಶ್ರಮಿಸಿದ್ದಾರೆ. ಸರ್ಕಾರದ ಯಾವುದೇ ಅಧಿಕೃತ ಆದೇಶವಿಲ್ಲದೇ ತಮಗೆ ಮನಬಂದಂತೆ ಪಠ್ಯಗಳನ್ನು ಪರಿಷ್ಕರಿಸಿ ಶಿಕ್ಷಣ ಇಲಾಖೆಯ ಬೊಕ್ಕಸಕ್ಕೂ ನಷ್ಟವಾಗುವಂತೆ ಮಾಡುವಲ್ಲಿ ಭಗೀರಥ ಪ್ರಯತ್ನ ಮಾಡಿದ್ದಾರೆ. ಇಂತಹುದೆಲ್ಲಾ ಆಗಬಹುದಾದದರೇ, ಅದು ಕೇವಲ ರೋಹಿತ್ ಚಕ್ರತೀರ್ಥ ಅಂತವರಿಂದಲೇ ಮಾತ್ರ ಎನ್ನುವುದು ಮತ್ತೆ ಸಾಬೀತಾಗಿದೆ.
ವರದಿ ಸಲ್ಲಿಸಿ ಎಂದರೇ, ಒಂದು ಹೆಜ್ಜೆ ಮುಂದೆ ಹೋಗಿ ಪಠ್ಯವನ್ನೇ ಬದಲಾಯಿಸಿ ಬಿಟ್ಟಿದ್ದಾರೆ ಸಮಿತಿಯ ಮಾಜಿ ಅಧ್ಯಕ್ಷರು. ಅಷ್ಟಕ್ಕೂ ಸಮಿತಿಯಲ್ಲಿನ ಮೇಲ್ಜಾತಿಯವರಿಂದಲೇ, ಈ ವಿವಾದ ಸೃಷ್ಟಿಯಾಗಿದೆ ಎಂಬ ಆರೋಪಗಳು, ನಖಶಿಖಾಂತ ಕೋಪ ಶೈಕ್ಷಣಿಕ ವಲಯದಲ್ಲಿ ಸೃಷ್ಟಿಯಾಗಿದೆ. ರಾಜ್ಯದ ಆಡಳಿತ ಸರ್ಕಾರ ಬಿಜೆಪಿಗೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಶಿಕ್ಷಣ ತಜ್ಞರನ್ನು ಹೊರತಾಗಿ ಬಲ ಪಂಥದವರೇ ಬೇಕಾಗಿತ್ತು ಎಂದಾಗಿದ್ದರೇ ಬೇರೆ ಯಾವ ಬಲ ಪಂಥದವರನ್ನು ಹುಡುಕುವುದಕ್ಕೆ ಸಾಧ್ಯವಾಗದಷ್ಟು ಬಿಜೆಪಿ ಸರ್ಕಾರಕ್ಕೆ ಬೌದ್ಧಿಕ ಬಡತನ ಬಂದಿದೆಯೇ ಎಂಬ ಅಸಹನೀಯ ಪ್ರಶ್ನೆಯೊಂದು ಮೂಡುತ್ತಿದೆ. ಇದಂತೂ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕಳೆದ ಎರಡು ಮೂರು ವರ್ಷಗಳಿಂದ ನಿರಂತರವಾಗಿ ಶೈಕ್ಷಣಿಕ ವಿಚಾರದಲ್ಲಿ ವಿವಾದಕ್ಕೆ ಒಳಗಾಗಿದ್ದ ಬಿಜೆಪಿ ಸರ್ಕಾರ, ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ‘ಔಟ್ ಆಫ್ ಔಟ್’ ಫಲಿತಾಂಶದ ವಿಚಾರದಲ್ಲಿ ನಗೆಪಾಟಲಿಗೀಡಾಗಿತ್ತು, ಈಗ ಆ ಸಾಲಿಗೆ ಪಠ್ಯ ಪರಿಷ್ಕರಣೆ ವಿವಾದ ಸೇರಿಕೊಂಡಿದೆ.
ಈ ಪರಿಷ್ಕರಣೆ ಕೆಲವರಿಗೆ ಸರಿಯೇ ಎಂದೆನಿಸರಬಹುದು ಮತ್ತು ಒಂದಿಷ್ಟು ಮಂದಿಗೆ ಅಪರಿಮಿತ ಸಿಟ್ಟು ಬಂದಿರಬಹುದು. ಅದಕ್ಕೂ ಮೀರಿದ್ದನ್ನು ಅರ್ಥೈಸಿಕೊಳ್ಳಬೇಕಾದದ್ದು ಇಲ್ಲಿ ಮುಖ್ಯ. ನಾಡಗೀತೆಗೆ ಅವಮಾನಿಸಿದವನೊಬ್ಬನಿಗೆ ಮಕ್ಕಳ ಭವಿಷ್ಯ ರೂಪಿಸುವ ಪವಿತ್ರ ಕೆಲಸದ ಜವಾಬ್ದಾರಿಯನ್ನು ಸರ್ಕಾರ ನೀಡಿದ್ದೇ ದೊಡ್ಡ ದುರಂತ. ಇದು ಅಕ್ಷರ ಸಂಸ್ಕೃತಿಗೆ ಮಾಡಿದ ವ್ಯಭಿವಾರವಲ್ಲದೇ ಮತ್ತೇನು..? ಈ ಹಿಂದಿದ್ದ ಪಠ್ಯ ಪುಸ್ತಕಗಳಿಗೆ ಯಾವುದೇ ಪರಿಷ್ಕರಿಸುವ ಅಗತ್ಯ ಬೇಕಾಗಿರಲಿಲ್ಲ. ಸರಿಯೇ ಇತ್ತು. ಅಂತಹುದರಲ್ಲಿ ಇಂತಹ ಒಬ್ಬ ವಿಕೃತ ಸಂತೋಷಿಯೊಬ್ಬನ ನೇತೃತ್ವದದ ಸಮಿತಿಗೆ ಪರಿಷ್ಕರಿಸುವ ಜವಾಬ್ದಾರಿ ಕೊಟ್ಟ ಸರ್ಕಾರದ ಬಗ್ಗೆ ಯೋಚಿಸಿದರೇ, ಇದು ಸರ್ಕಾರ ತನ್ನ ರಾಜಕೀಯ ಸಿದ್ಧಾಂತವನ್ನು ಎಳೆಯ ವಯಸ್ಸಿನಲ್ಲಿಯೇ ಮಕ್ಕಳ ಮೇಲೆ ಹೇರುವ ಪ್ರಯತ್ನ ಮಾಡಿದೆ ಎಂದೇ ಕಾಣಿಸುತ್ತದೆ. ಅದೇನೇ ಆದರೂ, ಇದು ಸರ್ಕಾರದ ಆತ್ಮಸಾಕ್ಷಿಗೆ ಒಳಪೆಟ್ಟು ನೀಡದೇ ಇದ್ದಿತೆ..?
ಸರ್ಕಾರದ ಮೌಖಿಕ ಆದೇಶವೇ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣವಾಗಿದೆ ಎನ್ನುವುದು ಇಲ್ಲಿ ಗಮನಾರ್ಹ. ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಸಮಿತಿ ಮಾಡಿದ ಅವಾಂತರಗಳಿಂದಾಗಿ, ಪರಿಷ್ಕರಣೆಯ ವಿವಾದ ಬಗೆಹರಿಸುವ ದೃಷ್ಟಿಯಿಂದ ಹಾಗೂ ವಿವಾದಗಳಿಂದ ಪಾರಾಗುವ ಪರಮ ಉದ್ದೇಶದಿಂದ ಬಟರ್ ಹಚ್ಚುವ ಪ್ರಯತ್ನ ಮಾಡಬೇಕಾದ ಸ್ಥಿತಿ ಸರ್ಕಾರಕ್ಕೆ ಬಂದಿರುವುದು ನಿಜಕ್ಕೂ ಹಾಸ್ಯಾಸ್ಪದ. ಒಬ್ಬ ಅನರ್ಹ ವ್ಯಕ್ತಿಗೆ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟ ಕಾರಣದಿಂದಾಗಿ ಇಂದು ಸರ್ಕಾರವೇ ಬೆಲೆತೆರಬೇಕಾದ ಸ್ಥಿತಿ ಬಂದೊದಗಿತು. ಏನೋ ಹೊಸದು ಮಾಡುವುದಕ್ಕೆ ಹೋಗಿ ಬಾಲ ಸುಟ್ಟುಕೊಂಡ ಹಾಗಾಯ್ತಿದು ಕಥೆ.
ಈ ಹಿಂದೆ ಎಂದೂ ಆಗಿರದ ಈ ಪಠ್ಯ ಪರಿಷ್ಕರಣೆ ಸಂಬಂಧಿಸಿ ಹುಟ್ಟಿಕೊಂಡಿರುವ ಎಲ್ಲಾ ವಿವಾದಗಳನ್ನು ತೆರೆಮರೆಗೆ ಸರಿಸುವ ಪ್ರಯತ್ನದಲ್ಲಿ ಸಮಿತಿಯನ್ನು ಸರ್ಕಾರ ವಿಸರ್ಜಿಸಿದ್ದಲ್ಲದೇ, ಪರಿಷ್ಕರಣೆ ಸರಿಯಾಗಿಲ್ಲ ಎಂದು ವಿರೋಧಾಭಿಪ್ರಾಯ ವ್ಯಕ್ತ ಪಡಿಸಿದ ಶಿಕ್ಷಣ ತಜ್ಞರ, ನಾಡಿನ ಹಿರಿಯ ಸಾಹಿತಿಗಳ ಎದರು ಅಕ್ಷರಶಃ ಮಂಡಿವೂರಿ ಕುಳಿತು ಬಿಟ್ಟಿತು ಎಂಬಂತೆಯೇ ‘ಪರಿಷ್ಕರಣೆಯಲ್ಲಿ ತಪ್ಪಾಗಿದೆ ಸರಿಪಡಿಸಿಕೊಳ್ಳುತ್ತೇವೆ’ ಎಂದು ಬಿಡ್ತು.
ಮಾತ್ರವಲ್ಲದೇ, ಈಗಿನ ರೋಹಿತ್ ಚಕ್ರತೀರ್ಥ ಸಮಿತಿ, ಹಿಂದಿನ ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಸಮಿತಿ ಹಾಗೂ ಅದಕ್ಕೂ ಹಿಂದಿನ ಮಡಂಬಡಿತ್ತಾಯ ಸಮಿತಿ ಪರಿಷ್ಕರಿಸಿರುವ ಮೂರು ಪ್ರತ್ಯೇಕ ಪಠ್ಯ ಕ್ರಮಗಳನ್ನು ಸಾರ್ವಜನಿಕರಿಗಾಗಿ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿ, ಸಾರ್ವಜನಿಕರ ಆಕ್ಷೇಪಣೆಗಳನ್ನು ಆಹ್ವಾನಿಸಲು ಮುಂದಾಗಿದೆ. ಇಷ್ಟಾಗಿಯೂ ಚಕ್ರತೀರ್ಥನನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಈ ನಾಡಿನ ಕೆಲವು ಸೋ ಕಾಲ್ಡ್ ಸಾಹಿತಿಗಳು, ಚಿಂತಕರು ಮಾಡಿದರು. ಮಾತ್ರವಲ್ಲದೇ, ಸಮಾಜದ ಮುಖವಾಣಿಯಾಗಿ ಇರಬೇಕಾದ ಒಂದು ಕನ್ನಡ ದಿನಪತ್ರಿಕೆ, ಒಂದು ದೃಶ್ಯ ಮಾಧ್ಯಮ ನಿರಂತರವಾಗಿ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕದ ಪರವಾಗಿದೆ ಎಂಬಂತೆಯೇ ವರ್ತಿಸಿದವು. ಮಾನವತಾವಾದಿ, ರಾಷ್ಟ್ರಕವಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ದೇಶಕಂಡ ಶ್ರೇಷ್ಠಮಾನ್ಯ ಕವಿ, ಸಾಹಿತಿ ಕುವೆಂಪು ಅವರನ್ನು, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್, ಕ್ರಾಂತಿಯೋಗಿ, ಮಹಾಮಾನವತಾವಾದಿ ಬಸವಣ್ಣ ಅವರನ್ನು ಪಠ್ಯದಲ್ಲಿ ಕಡೆಗಣಿಸಿದ್ದನ್ನು ಪ್ರಶ್ನಿಸಿದವರನ್ನು ರಾಷ್ಟ್ರ ವಿರೋಧಿಗಳು ಎಂಬ ಪಟ್ಟ ಕಟ್ಟಿ ಟೀಕೆ ಮಾಡುವುದರೊಂದಿಗೆ ಇದೇ ಸರಿ ಎಂದು ಸಮರ್ಥಿಸಿಕೊಳ್ಳುವಷ್ಟರ ಮಟ್ಟಿಗೆ ಒಂದು ಸಿದ್ಧಾಂತ ಪ್ರಭಾವ ಬೀರಿದೆ ಎಂದರೇ ಅದು ಒಳ್ಳೆಯದು ಅಲ್ಲ ಎಂದೇ ಅರ್ಥೈಸಿಕೊಳ್ಳಬೇಕಾಗಿದೆ.
ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಹಿಂದಿನ ಸಮಿತಿಯಿಂದ ಪರಿಷ್ಕರಿಸಲ್ಪಟ್ಟ ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ, ಕೋಮಿನ ಕಕ್ಕಸು ತುಂಬಿಕೊಂಡಿದ್ದ ಸೋ ಕಾಲ್ಡ್ ಚಿಂತಕ ರೋಹಿತ್ ಚಕ್ರತೀರ್ಥ ಸಮಿತಿ ‘ಕರ್ನಾಟಕ ಏಕೀಕರಣಮತ್ತು ಗಡಿ ವಿವಾದಗಳು’ ಎಂಬ ಪಾಠದಲ್ಲಿದ್ದ ಕುವೆಂಪು, ಹುಯಿಲಗೋಲ ನಾರಾಯಣ ರಾಯರು, ಆಲೂರು ವೆಂಕಟರಾಯರ ಫೋಟೋವನ್ನು ಪರಿಷ್ಕರಣೆಯ ವೇಳೆ ಸ್ಥಳಾವಕಾಶವಿದ್ದರೂ ತೆಗೆದು ಹಾಕಿದೆ. ಮಾತ್ರವಲ್ಲದೇ ಒಂಬತ್ತನೆಯ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿದ್ದ ಡಾ. ಬಿ ಆರ್. ಅಂಬೇಡ್ಕರ್ ‘ಸಂವಿಧಾನ ಶಿಲ್ಪಿ’ ಪಠ್ಯಾಂಶವನ್ನು, ಆರನೇ ತರಗತಿ ಪಠ್ಯದಲ್ಲಿದ್ದ ಚನ್ನಣ್ಣ ವಾಲೀಕಾರ್ ಅವರ ‘ನೀ ಹೋದ ಮರುದಿನ’, ಏಳನೆಯ ತರಗತಿಯ ಸಮಾಜ ವಿಜ್ಞಾನದಲ್ಲಿದ್ದ ಅಂಬೇಡ್ಕರ್ ಅವರ ಪೋಷಕರ ಮಾಹಿತಿ, ಹುಟ್ಟಿದ ದಿನಾಂಕ, ಜನ್ಮಸ್ಥಳದ ಮಾಹಿತಿ, ೧೯೨೭ರಲ್ಲಿ ಸಾರ್ವಜನಿಕ ಕುಡಿಯುವ ನೀರಿಗಾಗಿ ಮಾಡಿದ ‘ಮಹಾದ್ ಸತ್ಯಾಗ್ರಹ’, ಹತ್ತನೇ ತರಗತಿಯ ಸಮಾಜ ವಿಜ್ಞಾನದಲ್ಲಿದ್ದ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರಲು ಕಾರಣಗಳನ್ನು ಕೈಬಿಡಲಾಗಿತ್ತು. ಹೀಗಿರುವಾಗಲೂ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಹಾಗೂ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಪಠ್ಯ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿದ್ದರು ಎಂದರೇ ಅದು ಅವರ ಬುದ್ಧಿ ಎಂತದ್ದು ಎನ್ನುವುದನ್ನು ಸೂಚಿಸುತ್ತದೆ. ಸದ್ಯ, ೯ನೇ ತರಗತಿಯ ಸಮಾಜ ವಿಜ್ಞಾನದ ‘ನಮ್ಮ ಸಂವಿಧಾನ’ ಪತ್ಯೇಕವಾಗಿ ಮುದ್ರಿಸಿ ಶಾಲೆಗಳಿಗೆ ಪೂರೈಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದಲ್ಲದೇ, ವಿವಾದಿತ ಇತಿಹಾಸ ಪಠ್ಯದ ಬದಲಾವಣೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿರುವುದು, ಬರಗೂರು ಸಮಿತಿಯಲ್ಲಿ ರಚಿಸಿದ್ದ ಬಸವಣ್ಣ ಅವರ ಪಠ್ಯ ಮಂದುವರಿಕೆಗೆ ಸರ್ಕಾರ ಮುಂದಾಗಿದೆ ಎನ್ನುವುದು ಕೊಂಚ ಸಮಾಧಾನಕರ ವಿಷಯ.
ಇನ್ನು, ಸಮಿತಿ ವಿಸರ್ಜನೆಯ ಬಳಿಕ ಪಠ್ಯ ಪರಿಷ್ಕರಣಾ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಸಂಶೋಧಕನಿಗೆ ಸತ್ಯವೇ ಮುಖ್ಯವಾಗುತ್ತದೆ ಆದರೇ, ರಾಜಕೀಯ ಪಕ್ಷ ಅಥವಾ ಸರ್ಕಾರಕ್ಕೆ ಮತಗಳು ಮುಖ್ಯವಾಗುತ್ತದೆ. ಸತ್ಯ ಹಾಗೂ ಮತಗಳಲ್ಲಿ ಸಂಶೋಧಕ ಮೊದಲನೆಯದ್ದನ್ನು ಆರಿಸಿದರೇ, ರಾಜಕೀಯ ಶಕ್ತಿ ಎರಡನೆಯದ್ದನ್ನು ಆರಿಸಿಕೊಳ್ಳುತ್ತದೆ ಎಂದು ಸರ್ಕಾರದ ಮೇಲಿನ ಅಸಾಮಾಧನ ವ್ಯಕ್ತ ಪಡಿಸುತ್ತಾ ಪರೋಕ್ಷವಾಗಿ ‘ಬಿಜೆಪಿ ಸರ್ಕಾರದ ಬುಡಕ್ಕೆ ಇಟ್ರು’. ಆದರೇ, ಅದ್ಯಾವ ಅರ್ಥದಲ್ಲಿ ತಮ್ಮನ್ನು ತಾವು ಸಂಶೋಧಕನೆಂದು ಹೇಳಿಕೊಂಡರೋ ಗೊತ್ತಿಲ್ಲ. ಸಂಶೋಧಕ ಪಾಲಿಸಬೇಕಾದ ಯಾವುದೇ ಒಂದೇ ಒಂದು ಜವಾಬ್ದಾರಿಯನ್ನು ಪರಿಷ್ಕರಣೆಯಲ್ಲಿ ಚಕ್ರತೀರ್ಥ ಪಾಲಿಸಿಲ್ಲ.
ಏನಿದಕ್ಕೆಲ್ಲಾ ಕಾರಣ..? : ಬಿಜೆಪಿ ಸರ್ಕಾರದ ಆರಂಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್, ೨೦೨೦ರ ಡಿಸೆಂಬರ್‌ನಲ್ಲಿ ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ-೨ರಲ್ಲಿದ್ದ ‘ಹೊಸಧರ್ಮಗಳು ಏಕೆ ಉದಯಿಸದವು’ ಎಂಬ ಶೀರ್ಷಿಕೆಯಡಿಯಲ್ಲಿದ್ದ ಕೆಲವು ಅಂಶಗಳನ್ನು ಹಾಗೂ ೧ರಿಂದ ೧೦ನೇ ತರಗತಿಯ ಸಮಾಜ ವಿಜ್ಞಾನ ವಿಷಯಗಳಲ್ಲಿ ಇದ್ದ ಸೂಕ್ಷ/ಸಂಕೀರ್ಣ ವಿಷಯಗಳನ್ನು ಪರಿಶೀಲಿಸಿ ವರದಿ ನೀಡುವುದಕ್ಕೆ ಸಮಿತು ರಚಿಸಲು ಸೂಚಿಸಲಾಗಿತ್ತು. ಇದನ್ನು ಆಧರಿಸಿ ೨೦೨೧ರ ಸಂಪ್ಟೆಂಬರ್‌ನಲ್ಲಿ ಹೊರಡಿಸಿದ ಆದೇಶದಲ್ಲಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ. ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಆದೇಶಿಸಲಾಗಿತ್ತು. ಸರ್ಕಾರದ ನಿಯಮಗಳ ಪ್ರಕಾರ ವರದಿ ಸಲ್ಲಿಸಿದ ಬಳಿಕವೇ ಪರಿಷ್ಕರಣೆ ಅಗತ್ಯವಿದ್ದಲ್ಲಿ ವಿಷಯ ತಜ್ಞರ ಸಮಿತಿ ಅಥವಾ ಚಕ್ರತೀರ್ಥ ಸಮಿತಿಗೆ ಪರಿಷ್ಕರಣೆ ಮಾಡುವ ಬಗ್ಗೆ ಆದೇಶ ಹೊರಡಿಸಬೇಕಿತ್ತು. ಆದರೇ, ಅದು ಯಾವ ಪ್ರಕ್ರಿಯೆಗಳು ಆಗದೇ ಪರಿಷ್ಕರಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಇದು ಹೀಗಾಗದಿದ್ದಿದ್ದರೇ, ಇಷ್ಟೆಲ್ಲಾ ಅವಾಂತರವಾಗುತ್ತಿರಲಿಲ್ಲ.
ಒಟ್ಟಿನಲ್ಲಿ, ಅಸಮರ್ಥ, ಅನರ್ಹನೊಬ್ಬನ ಅಧ್ಯಕ್ಷತೆಯಲ್ಲಿ ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿದ್ದ ಇತಿಹಾಸ ಬದಲಾಯಿಸುವುದಕ್ಕೆ ಹೋಗಿ, ಮಾನವತಾವಾದವನ್ನೇ ಬಿಟ್ಟು ತನ್ನ ರಾಜಕೀಯ ಸಿದ್ಧಾಂತವನ್ನೇ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಅಳವಡಿಸಲು ಹೋಗಿ ಮತ್ತೊಂದು ಹೊಲಸನ್ನು ಬಿಜೆಪಿ ಸರ್ಕಾರ ಅಂಟಿಸಿಕೊಂಡಿದೆ ಎನ್ನುವುದಂತೂ ಸತ್ಯ. ಸದ್ಯ, ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಪಠ್ಯ ಪರಿಷ್ಕರಣೆಯ ಸಂದರ್ಭದಲ್ಲಾದ ಲೋಪಗಳನ್ನು ಸರಿಪಡಿಸುವ ಕೆಲಸ ಆರಂಭಿಸಿದ್ದು, ಮುಂದೇನೆಲ್ಲಾ ಆಗುತ್ತದೆ ಎಂದು ಕಾದು ನೋಡಬೇಕಿದೆ.
-ಶ್ರೀರಾಜ್ ವಕ್ವಾಡಿ

No comments:
Post a Comment