(ಸಾಂದರ್ಭಿಕ ಚಿತ್ರ)
ಸಿಎಎ ವಿವಾದಕ್ಕೆ ಕಾರಣವೇನು..? | ‘ಪೌರತ್ವ’ ಮತ್ತೆ ಬಿಜೆಪಿಯ ೨೦೨೪ರ ಪ್ರಣಾಳಿಕೆಗೆ..?
ಕಳೆದ ಎರಡು ಮೂರು ವರ್ಷಗಳ ಹಿಂದೆ ಇಡೀ ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ವಿವಾದಕ್ಕೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಈಗ ಮತ್ತೆ ಸದ್ದು ಮಾಡುತ್ತಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಸಿಎಎ ಕಾಯ್ದೆಯ ವಿಚಾರ ಮತ್ತೆ ಮೇಲೆತ್ತಿದ್ದು, ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ಮುಸ್ಲೀಮರನ್ನು ಉದ್ದೇಶಪೂರ್ವಕವಾಗಿ ಧರ್ಮಾಧಾರಿತವಾಗಿ ಈ ದೇಶದಲ್ಲಿ ನಿರ್ಲಕ್ಷ್ಯಕ್ಕೆ ಒಳಪಡಿಸುವ ಅಥವಾ ಹೊರಹಾಕುವ ಬಿಜೆಪಿಯ ಪೂರ್ವಯೋಜಿತ ಷಡ್ಯಂತ್ರವಿದು ಎಂದು ಈ ದೇಶದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ಈ ತಿದ್ದುಪಡಿ ಕಾಯ್ದೆ, ಕೋವಿಡ್‌ನ ಕಾರಣದಿಂದಾಗಿ ನೆನೆಗುದಿಗೆ ಬಿದ್ದಿತ್ತು. ಸಿಎಎ ಜೊತೆಗೆ ಎನ್ ಆರ್ ಸಿ ಯೋಜನೆಯನ್ನೂ ಕೂಡ ಧರ್ಮಾಧಾರಿತವಾಗಿ ತಂದು ಧಾರ್ಮಿಕ ತಾರತಮ್ಯ ಮಾಡುವ ಸಂಚು ಎನ್ನುವುದು ಈ ಕಾಯ್ದೆಯ ವಿರುದ್ಧ ನಿಂತವರ ವಾದವಾಗಿತ್ತು. ಆದರೇ, ಸರ್ಕಾರ ಹಾಗೂ ಕಾಯ್ದೆಯ ಪರವಾಗಿ ನಿಂತವರು ಈ ಕಾಯ್ದೆಯನ್ನು ಸಮರ್ಥಿಸಿಕೊಂಡೇ ಬಂದಿದ್ದು, ಮೂರು ಮುಸ್ಲೀಂ ಬಹುಸಂಖ್ಯಾತ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ತುಳಿತಕ್ಕೆ ಒಳಗಾದ ಅಲ್ಲಿಯ ಅಲ್ಪಸಂಖ್ಯಾತರಿಗಷ್ಟೇ (ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಹಾಗೂ ಕ್ರೈಸ್ತ) ಭಾರತೀಯ ಪೌರತ್ವ ನೀಡಲಾಗುತ್ತದೆ. ಅಕ್ರಮವಾಗಿ ವಲಸೆ ಬಂದಿರುವ ಮುಸ್ಲೀಮರಿಗಷ್ಟೇ ಸಮಸ್ಯೆ ಆಗುತ್ತದೆ. ಭಾರತೀಯ ಮೂಲ ಮುಸ್ಲೀಮರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲವೆಂದು ಇಂದಿಗೂ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಈ ಕಾಯ್ದೆಯ ತಿದ್ದುಪಡಿಯ ವಿಚಾರ ಮುನ್ನೆಲೆಗೆ ಬಂದಾಗ ಇಡೀ ದೇಶದಾದ್ಯಂತ ಕಾಯ್ದೆಯ ವಿರುದ್ಧ ದೊಡ್ಡ ಪ್ರತಿಭಟನೆಗಳು ನಡೆದವು, ಕೆಲವಡೆದೆ ಅದು ಧಾರ್ಮಿಕ ಹೊಯ್ದಾಟಕ್ಕೂ ಕಾರಣವಾಯಿತು. ಮಾತ್ರವಲ್ಲದೇ ಈ ಹೊಯ್ದಾಟವನ್ನು ಕೆಲವರು ‘ದೇಶವನ್ನು ರಕ್ಷಿಸುವ ಮತ್ತೊಂದು ಸ್ವಾತಂತ್ರ್ಯ ಹೋರಾಟ’ ಎಂದು ಬಿಂಬಿಸಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಸುವ ಕೆಲಸವನ್ನೂ ಮಾಡಿದರು. ಇನ್ನು, ಈ ಸಂಘರ್ಷದ ಬಗ್ಗೆ ಕೇಂದ್ರ ಸರ್ಕಾರವಂತೂ ತನಗೆ ಸಂಬಂಧವೇ ಇಲ್ಲ ಎಂಬ ಧೋರಣೆ ತೋರಿಸಿ ಬಾಯಿ ಮುಚ್ಚಿ ಚೆಂದ ಕಂಡಿದ್ದು ಬಿಟ್ಟರೇ, ತಿಳಿ ಹೇಳುವ ಕೆಲಸವನ್ನೂ ಮಾಡದೇ ಇರುವುದು ದುರಂತವೇ ಸರಿ.
ಅಷ್ಟಕ್ಕೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ ೩೭೦ ರದ್ದು, ಅಯೋಧ್ಯೆ ರಾಮ ಮಂದಿರ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಇತ್ಯಾದಿಗಳು ಜನ ಪರವೋ, ವಿರೋಧವೋ ಗೊತ್ತಿಲ್ಲ ಆದರೇ, ಬಿಜೆಪಿ ಸರ್ಕಾರದ ಚುನಾವಣಾ ಅಜೆಂಡಾ ಆಗಿ ಬಳಸಿಕೊಳ್ಳುತ್ತಿರುವುದಂತೂ ಸತ್ಯ. ಸಾಮಾನ್ಯವಾಗಿ ಅಧಿಕಾರದಲ್ಲಿರುವ ಸರ್ಕಾರ ತನಗೆ ಲಾಭವಾಗುವುದನ್ನೇ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದು ರಾಜಕೀಯದಲ್ಲಿ ಸಾಮಾನ್ಯ. ಈವರೆಗೆ ಆಡಳಿತ ಮಾಡಿದ ಎಲ್ಲಾ ಸರ್ಕಾರಗಳು ಅದನ್ನೇ ಮಾಡಿದ್ದು, ಅದರಿಂದ ಮೋದಿ ಸರ್ಕಾರ ಹೊರತಾಗಿಲ್ಲ. ಇನ್ನು, ವಿಚಾರಗಳನ್ನು ಅತಿರಂಜಕಗೊಳಿಸಿ ಚೆಂದ ಕಾಣುವುದನ್ನು ಈಗಿನ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ವಿಶೇಷವಾಗಿ ಹೇಳಿಕೊಡಬೇಕೆಂದಿಲ್ಲ. ಯಾವುದೇ ಯೋಜನೆಗಳನ್ನು ಜಾರಿಗೆ ತರುವಾಗ ಅದಕ್ಕೆ ಬೇಕಾದ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದಿರುವುದೇ ಬಿಜೆಪಿಯಲ್ಲಿನ ದೊಡ್ಡ ಸಮಸ್ಯೆ. ಅದಕ್ಕಾಗಿ ಬಿಜೆಪಿ ಯಾವುದೇ ವಿಷಯ ಮುನ್ನೆಲೆಗೆ ತಂದಾಗ ಒಂದಿಷ್ಟು ಗೊಂದಲಗಳು ಸೃಷ್ಟಿಯಾಗುತ್ತವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆ ೨೦೧೯ರ ವಿಷಯದಲ್ಲಿ ಇದೇ ಆಗಿದ್ದು.
ಎಲ್ಲಿ ವಿವಾದಕ್ಕೆ ಕಾರಣವಾಗಿದ್ದು..? : ಭಾರತಕ್ಕೆ ವಾಮ ಮಾರ್ಗದ ಮೂಲಕ ಅಥವಾ ಅಕ್ರಮವಾಗಿ ವಲಸೆ ಬಂದವರಿಗೆ ಈ ದೇಶದಲ್ಲಿ ಪೌರತ್ವ ನೀಡುವುದಕ್ಕೆ ಪೌರತ್ವ ಕಾಯ್ದೆ ೧೯೫೫ ಹಾಗೂ ವಿದೇಶಿಗರ ಕಾಯ್ದೆ ಹಾಗೂ ಪಾಸ್‌ಪೋರ್ಟ್ ಕಾಯ್ದೆಗಳು ನಿರ್ಬಂಧಗಳನ್ನು ಹಾಕಿವೆ. ಆದರೇ, ಮೋದಿ ನೇತೃತ್ವದ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ೨೦೧೯ರಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿAದ ಅಕ್ರಮವಾಗಿ ವಲಸೆ ಬಂದ ಮುಸ್ಲೀಮರನ್ನು ಹೊರತುಪಡಿಸಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಹಾಗೂ ಕ್ರೈಸ್ತ ಧರ್ಮಗಳ ಅಲ್ಪಸಂಖ್ಯಾತರು ೬ ವರ್ಷ ವಾಸವಿದ್ದರೇ ಪೌರತ್ವ ನೀಡುವ ವಿಚಾರವನ್ನು ಪ್ರಸ್ತಾಪಿಸಿರುವುದೇ ದೇಶದಲ್ಲಿ ಇದನ್ನು ಧಾರ್ಮಿಕ ತಾರತಮ್ಯ ಎಂದು ಬಿಂಬಿಸಿ ದೊಡ್ಡ ಮಟ್ಟದ ಹೋರಾಟ, ಪ್ರತಿಭಟನೆಗಳು ನಡೆಯುವುದಕ್ಕೆ ಕಾರಣ ಎನ್ನುವುದು ಸ್ಪಷ್ಟ.
ನೆರೆ ರಾಷ್ಟçಗಳಿಂದ ಧಾರ್ಮಿಕವಾಗಿ ಶೋಷಣೆಗೆ ಒಳಗಾಗಿ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದ ಅಲ್ಪಸಂಖ್ಯಾತರಿಗಷ್ಟೇ ಪೌರತ್ವ ನೀಡುವುದಾಗಿ, ಹಾಗೂ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದ ಮುಸ್ಲೀಮರು ಆ ದೇಶದಲ್ಲಿ ಅಲ್ಪಸಂಖ್ಯಾತರಲ್ಲ ಎಂದು ಮೋದಿ ಸರ್ಕಾರ ವಾದಿಸುತ್ತಿರುವುದು ಪ್ರಗತಿಪರ ಚಿಂತಕರನ್ನು ಕೆರಳಿಸಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.
ಮೋದಿ ವಿರೋಧಿಗಳನ್ನು ಈ ತಿದ್ದುಪಡಿ ಕೆರಳಿಸಿದ್ದು ಯಾಕೆ..? : ೧೯೫೫ರಲ್ಲಿ ಜವಹರಲಾಲ್ ನೆಹರು ಈ ದೇಶದ ಪ್ರಧಾನಿಯಾಗಿದ್ದಾಗ, ಈ ದೇಶದಿಂದ ದೇಶ ವಿಭಜನೆಯ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಇತರೆ ನೆರೆ ರಾಷ್ಟçಗಳಿಗೆ ಗುಳೆ ಹೋಗಿ, ಅಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದ ಭಾರತ ದೇಶದ ಮೂಲವಾಸಿಗರಿಗೆ ಮತ್ತೆ ಈ ನೆಲದಲ್ಲಿ ನೆಲೆ ಕಲ್ಪಿಸುವ ಉದ್ದೇಶದಿಂದ ಮತ್ತು ಈ ದೇಶದ ಪೌರತ್ವ ನೀಡುವ ಸದುದ್ದೇಶದಿಂದ ಅಂದಿನ ಕೇಂದ್ರ ಸರ್ಕಾರ (ನೆಹರು ನೇತೃತ್ವದ ಸರ್ಕಾರ) ಭಾರತೀಯ ಪೌರತ್ವ ಕಾಯ್ದೆ ಜಾರಿಗೆ ತಂದಿತ್ತು. ಸುಮಾರು ಆರು ದಶಕಗಳಿಂದ ಈ ದೇಶದಲ್ಲಿ ಇದೇ ಕಾಯ್ದೆ ಜಾರಿಯಲ್ಲಿತ್ತು. ನೆಹರು ಸರ್ಕಾರ ಜಾರಿಗೆ ತಂದ ಈ ಕಾಯ್ದೆಯ ಅನ್ವಯ ನೆರೆಹೊರೆ ರಾಷ್ಟçಗಳಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಅಕ್ರಮವಾಗಿ ಈ ದೇಶದಲ್ಲಿ ಸುಮಾರು ೧೨ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ನೆಲೆ ನಿಂತ ಸಿಖ್, ಹಿಂದೂ, ಕ್ರೆöÊಸ್ತ, ಪಾರ್ಸಿ, ಬೌದ್ಧ, ಜೈನ ಹಾಗೂ ಮುಸ್ಲೀಂ ಅಥವಾ ಯಹೂದಿಗಳು ಕಾನೂನು ಅನುಸಾರವಾಗಿ ಸೂಕ್ತ ದಾಖಲೆಗಳಿದ್ದರೇ ಭಾರತ ದೇಶದ ಪೌರತ್ವ ನೀಡಲಾಗುತ್ತಿತ್ತು. ಮಾತ್ರವಲ್ಲದೇ, ೧೯೫೫ರಲ್ಲಿ ಜಾರಿಗೆ ಬಂದ ಈ ಕಾಯ್ದೆ ಹೇಳುವ ಪ್ರಕಾರ, ವಿದೇಶಿ ಪ್ರಜೆಯೊಬ್ಬ ಭಾರತ ದೇಶದಲ್ಲಿದ್ದು, ದೇಶದ ಸರ್ಕಾರದಲ್ಲಿ ಸುಮಾರು ಒಂದು ವರ್ಷ ಸೇವೆ ಸಲ್ಲಿಸಿರುವುದರೊಂದಿಗೆ ಹಲವು ಕಾನೂನುಬದ್ಧ ಷರತ್ತುಗಳಿಗೆ ಬದ್ಧರಾಗಿದ್ದರೇ ಈ ದೇಶದ ಪೌರತ್ವ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವ ಅವಕಾಶವನ್ನೂ ಕೂಡ ನೀಡಿತ್ತು. ಮತ್ತು ಅರ್ಜಿ ಸಲ್ಲಿಸುವ ಹಿಂದಿನ ೧೪ ವರ್ಷಗಳಲ್ಲಿ ಸುಮಾರು ಹನ್ನೊಂದು ವರ್ಷಗಳ ಕಾಲ ಈ ದೇಶದಲ್ಲಿ ವಾಸವಿರುವುದನ್ನು ಆ ವಿದೇಶಿ ಪ್ರಜೆ ದೃಢಪಡಿಸಭೇಕಾಗಿರುವುದು ಅನಿವಾರ್ಯವಾಗಿತ್ತು. ಆದರೇ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಾಡಿದ ತಿದ್ದುಪಡಿಯಲ್ಲಿ ಕೆಲವು ಬದಲಾವಣೆ ಮಾಡಿರುವುದು ಮತ್ತು ಅಕ್ರಮವಾಗಿ ವಲಸೆ ಬಂದ ಮುಸ್ಲೀಮರಿಗೆ ಪೌರತ್ವ ನೀಡುವ ವಿಷಯವನ್ನು ತೆಗೆದು ಹಾಕಿರುವುದು ಚರ್ಚೆಗೆ ಕಾರಣವಾಗಿತ್ತು.
೨೦೧೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಅನುಷ್ಠಾನಗೊಳಿಸುವುದಾಗಿ ಹೇಳಿತ್ತು. ೨೦೧೪ರಲ್ಲಿ ಮೋದಿ ನೇತೃತ್ವದ ಸರ್ಕಾರ ಕೇಂದ್ರದ ಅಧಿಕಾರ ಹಿಡಿದ ಎರಡು ವರ್ಷಗಳ ನಂತರ ಅಂದರೇ, ೨೦೧೬ರ ಜುಲೈ ೧೯ ರಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮಂಡನೆ ಮಾಡಿತ್ತು, ಮಾತ್ರವಲ್ಲದೇ ಅದೇ ವರ್ಷವೇ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಗಿತ್ತು. ಇನ್ನು, ಸಂಸದೀಯ ಸಮಿತಿ ೨೦೧೯ರ ಜನವರಿಯಲ್ಲಿ ತನ್ನ ವರದಿಯನ್ನು ನೀಡಿತ್ತು. ಮತ್ತು ಲೋಕಸಭೆಯಲ್ಲಿಯೂ ಕೂಡ ಮಸೂದೆ ಮಂಡನೆಯಾಗಿ ಪಾಸ್ ಆಗಿತ್ತು. ಆದರೇ, ರಾಜ್ಯ ಸಭೆಯಲ್ಲಿ ಮಂಡನೆಯಾಗಿರಲಿಲ್ಲ. ಸರ್ಕಾರದ ಅವಧಿ ಮುಗಿದ ಕಾರಣದಿಂದಾಗಿ ಮಸೂದೆಯೂ ರದ್ದಾಗಿತ್ತು. ೨೦೧೯ರಲ್ಲಿ ಮತ್ತೆ ಮೋದಿ ನೇತೃತ್ವದ ಸರ್ಕಾರ ಮತ್ತೆ ಕೇಂದ್ರದ ಅಧಿಕಾರ ಹಿಡಿದ ಮೇಲೆ ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು, ಆದರೇ ರಾಜ್ಯಸಭೆಯಲ್ಲಿ ಅಂಗೀಕಾರವಾಗಿಲ್ಲ. ತದನಂತರ ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಮಸೂದೆ ಒಂದು ರೀತಿಯಲ್ಲಿ ನೆನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕಾಯ್ದೆಯ ವಿಚಾರವನ್ನು ಮೇಲಕ್ಕೆತ್ತಿದ್ದು, ೨೦೨೪ರ ಲೋಕಸಭಾ ಚುನಾವಣಾ ಪೂರ್ವವಾಗಿ ಜಾರಿಗೆ ತರುವ ಎಲ್ಲಾ ಲಕ್ಷಣಗಳು ಕಾಣಿಸತ್ತಿವೆ.
ಇನ್ನು, ಈಗಾಗಲೇ ಈ ಕಾಯ್ದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮೂರು ಬಾರಿ ಹಾಗೂ ಬಿಜೆಪಿ ಸರ್ಕಾರ ಇದ್ದಾಗ ಎರಡು ಬಾರಿ ಸೇರಿ ಒಟ್ಟು ಐದು ಬಾರಿ ತಿದ್ದುಪಡಿಯಾಗಿದ್ದು, ಕಾಂಗ್ರೆಸ್, ಟಿಎಂಸಿ ಸೇರಿ ಹಲವು ಪಕ್ಷಗಳು ಇದನ್ನು ‘ಭಾರತದಂತಹ ಜಾತ್ಯಾತೀತ ರಾಷ್ಟçದಲ್ಲಿ ಧರ್ಮಾಧಾರಿತ ರಾಜಕೀಯ ಮಾಡುವುದಕ್ಕೆ ಬಿಜೆಪಿ ಪ್ರಯತ್ನಿಸುತ್ತಿದ್ದು, ಸಂವಿಧಾನ ಕೊಡಮಾಡಿರುವ ೧೪ನೇ ವಿಧಿ ಅಥವಾ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಜಾತಿ, ಧರ್ಮಗಳ ಆಧಾರದ ಮೇಲೆ ದೇಶದ ಪೌರತ್ವ ನೀಡುವುದು ಈ ದೇಶದ ಕಾನೂನಿಗೆ ವಿರುದ್ಧವಾದದ್ದು’ ಎಂದು ಬಲವಾಗಿ ವಿರೋಧಿಸುತ್ತಿರುವುದರ ನಡುವೆಯೂ ಮೋದಿ ನೇತೃತ್ವದ ಸರ್ಕಾರ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಪಟ್ಟು ಹಿಡಿದಿದೆ. ಆದರೇ, ರಾಜ್ಯಸಭೆಯಲ್ಲಿ ಇಷ್ಟೆಲ್ಲಾ ಬಾರಿ ವಿರೋಧದ ನಡುವೆಯೂ ಪಾಸ್ ಆಗಲಿದೆಯೇ ಎಂಬ ಪ್ರಶ್ನೆಯೊಂದು ಈ ತನ್ಮಧ್ಯೆ ಎದ್ದಿದೆ.
-ಶ್ರೀರಾಜ್ ವಕ್ವಾಡಿ

No comments:
Post a Comment