ಕೇರಳದ ಸಾಂಪ್ರದಾಯಿಕ ರಾಜಕಾರಣವನ್ನು ಬದಲಾಯಿಸುತ್ತಾರೆಯೇ ಕೇಜ್ರಿವಾಲ್..?
ರಾಜಕೀಯ ಬೇರೆ, ರಾಜಕೀಯ ಆಟ ಬೇರೆ, ರಾಜಕೀಯ ಸಿದ್ಧಾಂತ ಬೇರೆ, ರಾಜಕೀಯ ಸ್ವರೂಪ ಬೇರೆ. ರಾಜಕೀಯ ಗೊತ್ತಿದ್ದವನಿಗೆ, ರಾಜಕೀಯದ ಎಲ್ಲಾ ಆಯಾಮ ಗೊತ್ತಿದ್ದವನಿಗೂ ರಾಜಕೀಯದಲ್ಲಿ ಒಮ್ಮೊಮ್ಮೆ ಏನೂ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೇ, ರಾಜಕೀಯ ಆಟ ಗೊತ್ತಿದ್ದವ ಇಡೀ ದೇಶವನ್ನೇ ಆಳಬಲ್ಲ ಎಂಬ ಮಾತು ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಸರ್ವಸಮ್ಮತವಾದವಾದ ಮಾತೆಂದೇ ಹೇಳಬಹುದು.
ಒಂದು ರಾಜಕೀಯ ಪಕ್ಷ, ಅದು ಒಂದು ಪ್ರಾದೇಶಿಕ ಪಕ್ಷವಾಗಿರಲಿ/ರಾಜ್ಯ ಪಕ್ಷವಾಗಿರಲಿ ಅಥವಾ ರಾಷ್ಟ್ರೀಯ ಪಕ್ಷವಾಗಿರಲಿ. ಅದು ರಾಜ್ಯವೊಂದರಲ್ಲಿ ಅಧಿಕಾರಕ್ಕೆ ಬರಬೇಕೆಂದಾದರೇ ಆ ರಾಜ್ಯದಲ್ಲಿ ಆ ಪಕ್ಷದ ಹೆಜ್ಜೆ ಗಟ್ಟಿ ಇರಲೇಬೇಕು. ಹೌದು ದೆಹಲಿ, ಪಂಜಾಬ್ ನಂತರ ಈಗ ಅರವಿಂದ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕೇರಳಕ್ಕೆ ಕಾಲಿಟ್ಟಿದೆ. ಕೇರಳ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಹೇಳಿಕೇಳಿ ಮತ್ತೆ ಯಾವುದೇ ರಾಷ್ಟ್ರೀಯ ಪಕ್ಷಗಳು ಕೇರಳಕ್ಕೆ ಕಾಲಿಟ್ಟರೂ ಕೇರಳ ರಾಜಕೀಯದಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ಪಾರ್ಟಿಗಳದ್ದೇ ಪ್ರಾಧಾನ್ಯತೆ ಇಂದಿಗೂ ಉಳಿಸಿಕೊಂಡು ಬಂದಿರುವಾಗ ಇನ್ನು ಹೊಸದಾಗಿ ಔಟ್ ಸೈಡರ್ ಅರವಿಂದ ಕೇಜ್ರಿವಾಲ್ ಕೇರಳದಲ್ಲಿ ಯಾವ ಹೊಸ ಭಾಷ್ಯದ ಕನಸು ಕಾಣುತ್ತಿದ್ದಾರೆ ಎಂಬ ಪ್ರಶ್ನೆಯೂ ಕೂಡ ಎದ್ದಿದೆ. ಆದರೇ, ರಾಷ್ಟçರಾಜಧಾನಿ ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ಉದಾಹಣೆ ಮುಂದಿಟ್ಟರೇ, ಯಾವುದೂ ಸಾಧ್ಯವಿಲ್ಲ ಎಂದು ಹೇಳುವುದಕ್ಕಾಗುವುದಿಲ್ಲ. ಅದೇನೆ ಇರಲಿ ಇತ್ತೀಚೆಗಷ್ಟೇ ದೇವರ ನಾಡು ಕೇರಳಕ್ಕೆ ಕಾಲಿಟ್ಟ ಆಪ್ ಬಗ್ಗೆ ಭಾರಿ ಕುತೂಹಲ ಮೂಡಿದೆ.
ಹೌದು, ಆಮ್ ಆದ್ಮಿ ಪಕ್ಷ ತನ್ನ ರೆಕ್ಕೆಯನ್ನು ದಕ್ಷಿಣ ಭಾರತದ ಕೇರಳದಲ್ಲಿ ಚಾಚುವತ್ತ ಗಮನ ಹರಿಸಿದ್ದು, ಕಿಟೆಕ್ಸ್ ಗ್ರೂಪ್‌ನ ಟ್ವೆಂಟಿ20 ಜೊತೆಗೆ ಮೈತ್ರಿ ಮಾಡಿಕೊಳ್ಳುವುದರೊಂದಿಗೆ ಕೇರಳ ರಾಜಕೀಯಕ್ಕೆ ಕಾಲಿಟ್ಟಿದೆ. ಅರವಿಂದ ಕೇಜ್ರಿವಾಲ್ ಕೇರಳದಲ್ಲಿ ಸಾಂಪ್ರದಾಯಿಕ ರಾಜಕೀಯಕ್ಕೆ ಫುಲ್ ಸ್ಟಾಪ್ ಇಡುವ ಶಪಥ ಮಾಡಿದ್ದು, ಮುಂಬರುವ ವರ್ಷಗಳ ಕೇರಳ ರಾಜಕೀಯ ಬೆಳವಣಿಗೆಯತ್ತ ಚಿತ್ತ ಹರಿಸುವಂತಾಗಿದೆ.
ಕೇರಳ ಕಂಡು ಬಂದ ರಾಜಕೀಯ ಹೆಜ್ಜೆಗಳು : ಎಡ ಪಂಥೀಯ ಹಾಗೂ ಮಧ್ಯ ಎಡ ಗುಂಪುಗಳತ್ತ ಕೇರಳ ಜನರ ಸಾಮಾಜಿಕ ರಾಜಕೀಯ ನಡವಳಿಕೆ ಇದೆ. ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ ಹಾಗೂ ಮಾರ್ಕ್ಸ್ವಾದಿ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳು ರಾಜ್ಯದಾದ್ಯಂತ ಪ್ರಬಲವಾಗಿ ಬೇರೂರಿವೆ. ಪ್ರಜಾಸತ್ತಾತ್ಮಕವಾಗಿ ಕಮ್ಯುನಿಷ್ಟ್ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತಂದ ಏಕೈಕ ಏಷ್ಯಾದ ರಾಜ್ಯವೆಂದರೇ ಅದು ಕೇರಳ. ಕಾಂಗ್ರೆಸ್ ರಾಜಕೀಯ ಕೇರಳದಲ್ಲಿ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ ಚುಣಾವಣಾ ಮೈತ್ರಿಯಲ್ಲಿ ರಾಜಕೀಯ ನಡೆಸುತ್ತದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್‌ನ ನೇತೃತ್ವದಲ್ಲಿ ಪಾಲುದಾರಿಕೆಯನ್ನು ಹೊಂದಿದ ಪಕ್ಷ. ಕಮ್ಯುನಿಷ್ಟ್ನೊಂದಿಗೆ ಮೈತ್ರಿಯಲ್ಲಿದ್ದ ಮುಸ್ಲೀಂ ಲೀಗ್ ಪಕ್ಷ ತನ್ನ ಬಣ್ಣ ಬದಲಾಯಿಸಿಕೊಂಡು ಕಾಂಗ್ರೆಸ್‌ನದಿಗೆ ಮೈತ್ರಿ ಮಾಡಿಕೊಂಡಿತು. ಇನ್ನು, ಕೇರಳದಲ್ಲಿ ಜನ ಬಲಪಂಥೀಯ ರಾಜಕಾರಣಕ್ಕೆ ಅವಕಾಶವೇ ಕೊಟ್ಟಿಲ್ಲ. ೨೦೧೬ರ ಚುನಾವಣೆಯಲ್ಲಿ ಒಂದು ವಿಧಾನಸಭೆಯಲ್ಲಿ ಸ್ಥಾನಪಡೆದಿದ್ದು ಬಿಟ್ಟರೇ ಮತ್ತೆಲ್ಲೂ ತನ್ನ ಪ್ರಾಬಲ್ಯ ಬೀರುವುದಕ್ಕೆ ಸಾಧ್ಯವಾಗಿಲ್ಲ.
ಇನ್ನು, ಉತ್ತರ ಕೇರಳ, ಅದರಲ್ಲೂ ಬಹಳ ಪ್ರಮುಖವಾಗಿ ಕಣ್ಣೂರು ಹಾಗೂ ಪಾಲಕ್ಕಾಡ್ ಜಿಲ್ಲೆಗಳನ್ನು ಕಮ್ಯುನಿಷ್ಟ್ ಹೃದಯಭೂಮಿ ಎಂದೇ ಕರೆಯಲಾಗುತ್ತದೆ. ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ ಕೊಲ್ಲಂ ಹಾಗೂ ಆಲಪುಳ್ಳಂ ಪ್ರದೇಶಗಳಲ್ಲಿ ಗೆಲುವು ಸಾಧಿಸಿದ್ದರೂ ಕೂಡ ಎಡ ಪಂಥೀಯ ಪಕ್ಷಗಳ ಪ್ರಾಬಲ್ಯವಿರುವ ಪ್ರದೇಶವೆಂದೇ ಪರಿಗಣಿಸಲಾಗುತ್ತದೆ. ಕಮ್ಯುನಿಷ್ಟ್ ಮಾರ್ಕ್ಸ್ವಾದಿ ಪಕ್ಷ, ಜನಾಧಿಪತಿಯ ಸಂರಕ್ಷಣಾ ಸಮಿತಿ ಹಾಗೂ ರೆವಲ್ಯೂಷನರಿ ಮಾರ್ಕ್ಸ್ವಾದಿ ಪಾರ್ಟಿ ಆಫ್ ಇಂಡಿಯಾದಂತಹ ಕೆಲವು ಪಕ್ಷಗಳು ಕೇರಳದಾದ್ಯಂತ ಎಡಪಂಥೀಯ ರಾಜಕೀಯದ ನೆರಳನ್ನು ಬಿತ್ತಿದರೇ, ಮಧ್ಯೆ ಕೇರಳದಲ್ಲಿ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ ಹಾಗೂ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್‌ನ ಕೆಲವು ಬಣಗಳನ್ನು ಹೊಂದಿರುವ ಕೇರಳ ಕಾಂಗ್ರೆಸ್ ತನ್ನ ಪ್ರಬಲ ಪ್ರಭಾವವನ್ನು ಹೊಂದಿವೆ. ಮಾತ್ರವಲ್ಲದೇ ಕೇರಳ ಕಾಂಗ್ರೆಸ್ ಬಣಗಳನ್ನು ಮಧ್ಯ ತಿರುವಾಂಕೂರ್‌ನ ಕೊಟ್ಟಾಯಂ, ಇಡುಕ್ಕಿ, ಪತ್ತನಂತಿಟ್ಟ ಹಾಗೂ ಮುವಾಟ್ಟುಪುಳ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಿರಿಯನ್ ಕ್ರಿಶ್ಚಿಯನ್ ಸಮುದಾಯ ಪೊರೆಯುತ್ತಿದೆ. ಬಿಜೆಪಿಯಂತೂ ನಾಮಕವಸ್ಥೆಗಿದ್ದಂತಿದ್ದು, ಕೇರಳದ ಯಾವ ಪ್ರದೇಶದಲ್ಲಿಯೂ ತನ್ನ ಪ್ರಭಾವವನ್ನು ಹೊಂದಿಕೊಳ್ಳುವುದಕ್ಕೆ ಸಾದ್ಯವಾಗಿಲ್ಲ. ಅಂದರೇ, ಕಮುನ್ಯಿಷ್ಟ್ ಹಾಗೂ ಎಡ ಪಂಥೀಯ ರಾಜಕೀಯವನ್ನು ಹೊರತಾಗಿ ಈವರೆಗೆ ಬೇರೆ ಯಾವುದೇ ಪಕ್ಷವನ್ನು ಕೇರಳದ ಜನ ಒಪ್ಪಲಿಲ್ಲ ಎನ್ನುವುದು ಇದರ ಅರ್ಥ. ಹಾಗಿರುವಾಗ ಆಮ್ ಆದ್ಮಿ ಪಕ್ಷಕ್ಕೆ ಕೇರಳದಂತಹ ಎಡ ಹಾಗೂ ಕಮ್ಯುನಿಷ್ಟ್ ಮೈಂಡ್ ಸೆಟ್‌ನಲ್ಲಿರುವ ಜನರನ್ನು ಕೇವಲ ಭ್ರಷ್ಟಾಚಾರ ವಿರೋಧಿ ನಿಲುವಿನಿಂದಷ್ಟೇ ಸೆಳೆಯುವುದಕ್ಕೆ ಸಾಧ್ಯವಿದೆಯೇ ಎಂಬುವುದು ಇಲ್ಲಿ ಯಕ್ಷ ಪ್ರಶ್ನೆ.
೧೯೮೦ ರಿಂದ ೨೦೨೧ರವರೆಗೆ ಒಂದು ಅವಧಿ ಯುಡಿಎಫ್‌ಗೆ ಇನ್ನೊಂದು ಅವಧಿ ಎಲ್‌ಡಿಎಫ್ ಗೆ ಎಂಬಂತೆ ಕೇರಳ ಆಡಳಿತ ಕಂಡಿದೆ. ಕಳೆದಬಾರಿ ಮರು ಅಧಿಕಾರ ಹಿಡಿದ ಎಲ್‌ಡಿಎಫ್‌ಗೆ ಸದ್ಯ ಕೇರಳದಲ್ಲಿ ವಿರೋಧಿ ಅಲೆ ಎದ್ದಿದ್ದು, ಈ ವಿರೋಧವನ್ನು ಆಮ್ ಆದ್ಮಿ ಪಕ್ಷ ಟೇಕ್ ಓವರ್ ಮಾಡಿಕೊಳ್ಳುವಷ್ಟರ ಮಟ್ಟಿಗೆ ಇನ್ನು ನಾಲ್ಕು ಐದು ವರ್ಷಗಳಲ್ಲಿ ಬೆಳೆದು ನಿಲ್ಲುವುದಕ್ಕೆ ಸಾಧ್ಯವಿದೆಯೇ..? ಅಷ್ಟು ಬೆಳೆದು ನಿಲ್ಲಬೇಕಾದರೇ ಯುಡಿಎಫ್‌ನನ್ನು ಮೊದಲು ರಾಜಕೀಯವಾಗಿ ಸೋಲಿಸುವುದರೊಂದಿಗೆ ಜನರ ಮನಸ್ಸಿನಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಬೇಕಿದೆ. ಅಷ್ಟೆಲ್ಲಾ ಮಾಡುವುದಕ್ಕೆ ಕೇರಳದಂತಹ ರಾಜ್ಯದಲ್ಲಿ ಆಪ್‌ಗೆ ಸಾಧ್ಯವಿದೆಯೇ..? ಎಂಬೆಲ್ಲಾ ಪ್ರಶ್ನೆಗಳು ಕೇರಳ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಲ್ಲಿವೆ.
ಟ್ವೆಂಟಿ2೦ ಏನು..? ಆಪ್ ಮೈತ್ರಿ ಸೂತ್ರವೇನು..? : ಟ್ವೆಂಟಿ2೦ ಕೇರಳದಲ್ಲಿ ತಲೆ ಎತ್ತುತ್ತಿರುವ ಒಂದು ಪ್ರಾದೇಶಿಕ ಪಕ್ಷ. ಸೋಶಿಯಲ್ ರೆಸ್ಪಾನ್ಸಿಬಿಲಿಟಿಯೇ ತನ್ನು ಮುಖ್ಯ ದ್ಯೇಯವೆಂದು ಕೇರಳ ರಾಜಕೀಯ ಕಣಕ್ಕಿಳಿದ ಪಕ್ಷ, ಕಿಟೆಕ್ಸ್ ಗ್ರೂಪ್ ಎಂಬ ಜಗತ್ತಿನ ಪ್ರಮುಖ ಗಾರ್ಮೆಂಟ್ ಕಂಪೆನಿಯ ಪ್ರಾಯೋಜಕತ್ವದೊಂದಿಗೆ ರಾಜಕೀಯ ಪ್ರವೇಶ ಕಂಡಿದೆ. ವಿಶ್ವದ ಎರಡನೇ ಅತಿ ದೊಡ್ಡ ಮಕ್ಕಳ ಉಡುಪುಗಳ ಉತ್ಪಾದನಾ ಸಂಸ್ಥೆಯಾದ ಕಿಟೆಕ್ಸ್ ಗ್ರೂಪ್ ಪರೋಕ್ಷವಾಗಿ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿಗಾಗಿಯೇ ಟ್ವೇಂಟಿ2೦ ಪಕ್ಷವನ್ನು ರಾಜಕೀಯದ ಕಣಕ್ಕಿಳಿಸಿದೆ. ಸುಮಾರು ೧೯೬೦ರ ದಶಕದಿಂದ ಮಾರುಕಟ್ಟೆಯಲ್ಲಿರುವ ಸಂಸ್ಥೆಯಾಗಿರುವುದರಿಂದ ಹಾಗೂ ವಿಶ್ವದ ಪ್ರಮುಖ ಗಾರ್ಮೆಂಟ್ ಕಂಪೆನಿಗಳ ಪೈಕಿಯಲ್ಲಿ ಅಗ್ರಪಂಕ್ತಿಯಲ್ಲಿರುವ ಸಂಸ್ಥೆಯಾಗಿರುವುದರಿಂದ ಪಕ್ಷಕ್ಕೆ ಆರ್ಥಿಕ ವಿಚಾರದಲ್ಲಿ ಯಾವುದೇ ಸಮಸ್ಯೆಯಾಗಲಿಕ್ಕಿಲ್ಲ ಎಂದೇ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇನ್ನು, ಕಿಟೆಕ್ಸ್ ಗ್ರೂಪ್ ಪ್ರಾಯೋಜಕತ್ವದ ಟ್ವೆಂಟಿ೨೦ ರಾಜಕೀಯ ಪಕ್ಷದೊಂದಿಗೆ ಆಮ್ ಆದ್ಮಿ ಪಕ್ಷ ಮೈತ್ರಿ ಮಾಡಿಕೊಂಡಿದೆ. ಸದ್ಯ ಕೇರಳದಲ್ಲಿ ಎಲ್‌ಡಿಎಫ್ (ಲೆಪ್ಟ್ ಡೆಮಾಕ್ರೆಟಿಕ್ ಫಂಡ್), ಯುಡಿಎಫ್ (ಯುನೈಟೆಡ್ ಡೆಮಾಕ್ರೆಟಿಕ್ ಫಂಡ್), ಎನ್‌ಡಿಎ (ನ್ಯಾಷನಲ್ ಡೆಮಾಕ್ರೆಟಿಕ್ ಅಲೈಯನ್ಸ್), ಕೇಜ್ರಿವಾಲ್ ನೇತೃತ್ವದ ಪೀಪಲ್ ವೆಲ್‌ಫೆರ್ ಅಲೈಯನ್ಸ್ (ಆಮ್ ಆದ್ಮಿ ಪಕ್ಷ ಹಾಗೂ ಟ್ವೆಂಟಿ2೦ ಮೈತ್ರಿ) ಸೇರಿ ಒಟ್ಟು ನಾಲ್ಕು ಮೈತ್ರಿ ರಾಜಕೀಯ ಪಕ್ಷಗಳಾದಂತಾಗಿದೆ.
ಕೇರಳಕ್ಕೆ ಕೇಜ್ರೀವಾಲ್ ಎಂಬ ಹೊಸ ರಾಜಕೀಯ : ಹೌದು, ಕೇರಳದಂತಹ ರಾಜ್ಯಕ್ಕೆ ಕೇಜ್ರಿವಾಲ್ ರಾಜಕೀಯ ಹೊಸತನದ್ದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಡೀ ದೇಶಕ್ಕೆ ಅರವಿಂದ್ ಕೇಜ್ರಿವಾಲ್ ಯಾರು ಎಂದು ಗೊತ್ತಾಗಿದ್ದೇ ರಾಷ್ಟ್ರ ರಾಜಧಾನಿಯ ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ೨೦೧೦ರಲ್ಲಿ ನಡೆದ ಆಂದೋಲನದಲ್ಲಿ. ಆಗ ಕೇಜ್ರಿವಾಲ್ ಮಾತು ಕೇಳುವುದಕ್ಕೆ ಬಂದ ಒಟ್ಟು ಜನ ಸಂಖ್ಯೆ ಎರಡಂಕಿ ದಾಟಿರಲಿಲ್ಲ. ಅದಾದ ಬಳಿಕ ಕೇಜ್ರಿವಾಲ್ ಸೃಷ್ಟಿಸಿದ್ದು ಇತಿಹಾಸ. ರಾಷ್ಟ್ರ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಸೋಲಿಸಿ ರಾಷ್ಟ್ರ ರಾಜಕಾರಣದ ಭೂಪಟವನ್ನು ಆಮೂಲಾಗ್ರವಾಗಿ ಬದಲಾಯಿಸುವ ಮುನ್ಸೂಚನೆ ಎಂಬಂತೆ ೨೦೧೫ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ೭೦ ಸದಸ್ಯ ಬಲದ ವಿಧಾನಸಭೆಯಲ್ಲಿ ಬರೋಬ್ಬರಿ ೬೭ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವುದರ ಮುಖೇನ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಆಮ್ ಆದ್ಮಿ ಬಹುಮತ ಪಡೆದುಕೊಂಡಿತು. ಅರವಿಂದ ಕೇಜ್ರೀವಾಲ್ ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮತ್ತೆ ೨೦೨೦ರಲ್ಲಿಯೂ ೭೦ ವಿಧಾನಸಭಾ ಸ್ಥಾನಗಳಲ್ಲಿ ೬೨ ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು ಆಪ್. ಕೇಜ್ರಿವಾಲ್ ಮತ್ತೆ ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ದೆಹಲಿಯಲ್ಲಿ ಜಾರಿಗೆ ತಂದ ಉತ್ತಮ ಶಿಕ್ಷಣ ನೀತಿ, ಉಚಿತ ನೀರು ಸರಬರಾಜು, ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಭ್ರಷ್ಟಾಚಾರ ಮುಕ್ತ ರಾಜಕಾರಣವೇ ಆಪ್ ಗೆಲುವಿಗೆ ಕಾರಣವೆಂದು ವಿಶ್ಲೇಷಿಸಲಾಗಿದೆ. ಇತ್ತೀಚೆಗೆ ಪಂಜಾಬ್‌ನಂತಹ ದೊಡ್ಡ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರ ಮುಖೇನ ಅಲ್ಲಿ ಕಾಂಗ್ರೆಸ್, ಅಕಾಲಿದಳ, ಬಿಜೆಪಿಯನ್ನು ಗುಡಿಸಿಬಿಟ್ಟಿದ್ದಾರೆ. ಈಗ ಕೇರಳದತ್ತ ಕೇಜ್ರಿವಾಲ್ ಮುಖಮಾಡಿದ್ದು, ಮಾತ್ರವಲ್ಲದೇ ಈಗಾಗಲೇ ತ್ರಿಕ್ಕಾಕ್ಕರ ವಿಧಾನಸಭೆಯ ಶಾಸಕರ ಸಾವಿನಿಂದಾಗಿ ತೆರವುಗೊಂಡಿದ್ದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಸದ್ಯ, ಕೇರಳದಲ್ಲಿ ಹಾಲಿ ಎಲ್‌ಡಿಎಫ್ ಸರ್ಕಾರ ಹಣದುಬ್ಬರದಂತಹ ಸಮಸ್ಯೆಯ ಜೊತೆಗೆ ಕೆರೈಲು ಹಗರಣದಂತಹ ಆರೋಪಗಳನ್ನು ಎದುರಿಸುತ್ತಿದ್ದು, ಕೇಜ್ರಿವಾಲ್ ಆರ್ಥಿಕ ರಾಷ್ಟ್ರೀಯತೆ, ಸೆಕ್ಯುಲರಿಸಂ, ರಾಷ್ಟ್ರೀಯತೆ, ದೇಶಭಕ್ತಿ, ಮಾನವತಾವಾದಂತಹ ಅಜೆಂಡಾದೊಂದಿಗೆ ಎಲ್‌ಡಿಎಫ್ ಸರ್ಕಾರದ ವಿರುದ್ಧ ಹೇಗೆ ಸ್ಟ್ರಾಟೆಜಿ ಬಳಸುತ್ತಾರೆ ಎನ್ನುವುದು ಇಲ್ಲಿ ಸದ್ಯದ ಕುತೂಹಲ. ಒಂದಿಷ್ಟು ವರ್ಷಗಳ ನಂತರ ಕೇರಳದ ಸಾಂಪ್ರದಾಯಿಕ ರಾಜಕೀಯ ಬದಲಾಯಿಸಿ ಆಪ್ ಕೇರಳದ ಅಧಿಕಾರ ಹಿಡಿಬಹುದು ಎಂಬ ಮಾತನ್ನೂ ಕೂಡ ತಳ್ಳಿ ಹಾಕುವಂತಿಲ್ಲ ಎನ್ನುವುದಕ್ಕೆ ಪಂಜಾಬ್ ಫಲಿತಾಂಶವೇ ಸಾಕ್ಷಿ.
-ಶ್ರೀರಾಜ್ ವಕ್ವಾಡಿ

No comments:
Post a Comment