ದೇಶ ಬೇರೆ, ಸರ್ಕಾರ ಬೇರೆ | ಸೆಕ್ಶನ್ 124ಎ ಏನು ಹೇಳುತ್ತದೆ..?
ದೇಶದ ಸರ್ವೋಚ್ಛ ನ್ಯಾಯಾಲಯ ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ರಿಟಿಷ್ ಆಡಳಿತದ ಕಾಲದಲ್ಲಿ ಜಾರಿಯಾಗಿದ್ದ ‘ದೇಶದ್ರೋಹ ಕಾಯ್ದೆ’ಗೆ ಇತ್ತೀಚೆಗೆ ತಡೆ ನೀಡಿರುವುದು, ದೇಶದ ಜನರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಹೆಚ್ಚಾಗುವಂತೆ ಮಾಡಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ದೇಶ ಬೇರೆ, ಸರ್ಕಾರ ಬೇರೆ. ಸರ್ಕಾರ ದೇಶ ಆಗುವುದಕ್ಕೆ ಸಾಧ್ಯವಿಲ್ಲ. ಸರ್ಕಾರವನ್ನು ಪ್ರಶ್ನಿಸುವುದು ದೇಶದ್ರೋಹವಾಗುವುದಕ್ಕೆ ಸಾಧ್ಯವಿಲ್ಲ. ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳುಗೆಡುವುದಕ್ಕೆ ಪ್ರಯತ್ನಿಸಿದರೇ, ಹಿಂಸೆ ಮತ್ತು ಕಾನೂನುಬಾಹಿರ ಮಾರ್ಗ ಬಳಸಿದರೇ, ಸರ್ಕಾರದ ವಿರುದ್ಧ ಅಸಮಾಧಾನವನ್ನು ಹಿಂಸಾತ್ಮಕವಾಗಿ ಅಥವಾ ಅತಿರಂಜಕಗೊಳಿಸಿ ಪ್ರಚೋದಿಸುವ ಯತ್ನ ಮಾಡಿದರೇ ಮಾತ್ರ ಅದನ್ನು ದೇಶದ್ರೋಹ ಎಂದು ಪರಿಗಣಿಸುವುದಕ್ಕೆ ಸಾಧ್ಯ. ಸದ್ಯ, ಸರ್ಕಾರದ ವೈಫಲ್ಯವನ್ನು ಪ್ರಶ್ನಿಸುವುದನ್ನೇ ದೇಶದ್ರೋಹ ಎಂದು ಬಿಂಬಿಸುವ ವಾತಾವರಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಮತ್ತು ಕಾಯ್ದೆಯನ್ನು ಆಡಳಿತ ಸರ್ಕಾರಗಳು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಎಡಿರ‍್ಸ್ ಗಿಲ್ಡ್ ಆಫ್ ಇಂಡಿಯಾ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಹಾಗೂ ಮತ್ತಿತರರು ಸುಪ್ರೀಂಇಂದಿರಾಗಾಂಧಿಸಿದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡು ಚರ್ಚೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ ರಮಣ ಮತ್ತು ನ್ಯಾಯಪೀಠ ದೇಶದಾದ್ಯಂತ ಬಾಕಿಯಿರುವ ಎಲ್ಲಾ ದೇಶದ್ರೋಹ ಕೇಸು, ಮೇಲ್ಮನವಿ ಹಾಗೂ ವಿಚಾರಣೆಗಳಿಗೆ ತಡೆ ನೀಡಿದ್ದಲ್ಲದೇ, ಹೊಸದಾಗಿ ದೇಶದ್ರೋಹ ಕಾಯ್ದೆಯಡಿ ಎಫ್‌ಐಆರ್ ದಾಖಲಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ದೇಶದ್ರೋಹ ಕಾಯ್ದೆ ಬ್ರಿಟೀಷ್ ಕಾಲದಲ್ಲಿ ಜಾರಿಗೆ ತಂದದ್ದಾದರೂ, ಸ್ವತಂತ್ರ ಭಾರತದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಈ ಕಾಯ್ದೆಯನ್ನು ನಿಸ್ಸಂಶಯವಾಗಿ ದುರ್ಬಳಕೆ ಮಾಡಿಕೊಂಡಿವೆ. ಹಾಗಾಗಿ ಈ ಕಾಯ್ದೆಯ ಬಗ್ಗೆ ಟೀಕೆ ಟಿಪ್ಪಣಿಗಳು ಹಲವು ದಶಕಗಳಿಂದಲೇ ಕೇಳಿಬರುತ್ತಲಿದ್ದು, ಸದ್ಯ ಈ ಕಾಯ್ದೆ ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಹಿಂಸ್ಮಾತ್ಮಕ ವಿಧಾನಗಳ ಮೂಲಕ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುವುದು ಮಾತ್ರವಲ್ಲದೇ, ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಯತ್ನಿಸುವುದನ್ನು ಮಾತ್ರ ದೇಶದ್ರೋಹವೆಂದು ಕಾಯ್ದೆ ವಾಖ್ಯಾನಿಸಿದೆ ಆದರೇ, ಈವರೆಗೆ ದೇಶದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಈ ಕಾಯ್ದೆಯನ್ನು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿದ್ದವರ ಮಣಿಸಲು ಬಳಸಿಕೊಂಡಿವೆ ಎನ್ನುವುದು ವಾಸ್ತವ ಸತ್ಯ.
ಸೆಕ್ಶನ್ 124ಎ ಏನು ಹೇಳುತ್ತದೆ..? : ಸೆಕ್ಶನ್ 124ಎ ಹೇಳುವ ಪ್ರಕಾರ, ಪ್ರಜಾಸತ್ತಾತ್ಮಕವಾಗಿ ರಚನೆಯಾದ ಸರ್ಕಾರದ ವಿರುದ್ಧ ಯಾರು ಹಿಂಸಾತ್ಮಕವಾಗಿ ಪ್ರತಿಭಟನೆ ಮಾಡುವುದು, ಸರ್ಕಾರದ ವಿರುದ್ಧವಾಗಿ ಮಾತಿನ ಮೂಲಕ, ಬರವಣಿಗೆಯ ಮೂಲಕ, ಸಂಕೇತ ಅಥವಾ ಚಿಹ್ನೆಗಳ ಮೂಲಕ ಅತರಂಜಕಗೊಳಿಸಿ ಒತ್ತಾಯಪೂರ್ವಕವಾಗಿ ಅಸಮಾಧಾನ ಮೂಡಿಸುವುದನ್ನು ದೇಶದ್ರೋಹ ಎಂದು ಪರಿಗಣಿಸಲಾಗುತ್ತದೆ. ಉತ್ತೇಜನೆ ಅಥವಾ ಅಸಮಾಧಾನವನ್ನು ಪ್ರಚೋದಿಸಲು ಯಾವುದೇ ರೀತಿಯಲ್ಲಿ ಪ್ರಯತ್ನಿಸದೇ, ಕಾನೂನುಬದ್ಧವಾಗಿ ಸರ್ಕಾರದ ಬಗ್ಗೆ ವ್ಯಕ್ತಪಡಿಸುವ ಅಸಾಮಾಧಾನಗಳು ದೇಶದ್ರೋಹ ಎಂದು ಪರಿಗಣಿಸಲಾಗುವುದಿಲ್ಲ.
ಸ್ವಾತಂತ್ರ್ಯ ನಂತರದ ಭಾರತದಲ್ಲಿ ದೇಶದ್ರೋಹ ಕಾಯ್ದೆ ಹಲವಾರು ವಿಮರ್ಶೆ, ಟೀಕೆಗೆ ಒಳಗಾಯಿತು. ೧೯೫೧ರಲ್ಲಿ ಭಾರತ ಸಂವಿಧಾನದ ಮೊದಲ ತಿದ್ದುಪಡಿಯ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿ ಜವಹರಲಾಲ್ ನೆಹರು ಈ ಕಾಯ್ದೆಯನ್ನು ತೆಗೆದು ಹಾಕುವ ವಿಚಾರ ಪ್ರಸ್ತಾಪಿಸಿದರಾರೂ, ಏನೂ ಆಗಿರಲಿಲ್ಲ. ಇನ್ನು. ೨೦೧೯ರ ಸಾರ್ವತ್ರಿಕ ಚುನಾವಣೆಯ ಸಂದರ್ಬದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ೧೨೪ಎ ಅನ್ನು ರದ್ದುಗೊಳಿಸುವುದಾಗಿ ಪ್ರಸ್ತಾಪಿಸಿತ್ತು, ಆದರೇ, ೨೦೦೪-೨೦೧೪ರ ತನಕ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ ಅಧಿಕಾರದಲ್ಲಿದ್ದಾಗ ಈ ಸಂಬಂಧ ಯಾವುದೇ ವಿಚಾರ ಹೊರತೆಗೆಯಲೇ ಇಲ್ಲ. ಪ್ರಜಾಪ್ರಭುತ್ವದಂತಹ ರಾಷ್ಟ್ರದ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಕೆ ಈ ಕಾಯ್ದೆ ಅಡ್ಡಿಮಾಡುತ್ತದೆ ಎಂದು ಒಂದೆಡೆ ವಾದವಾದರೇ, ದೇಶದ ಸಮಗ್ರತೆ ಹಾಗೂ ಭದ್ರತೆಯ ವಿಚಾರ ಬಂದಾಗ ಇಂತಹ ಕಾಯ್ದೆ ಅಗತ್ಯ ಎಂಬವರ ವಾದ ಮತ್ತೊಂದೆಡೆ. ಈವೆರಡು ಅಭಿಪ್ರಾಯಗಳ ಸಮತೋಲನ ಕಾಪಾಡುವ ಕೆಲಸ ಸದ್ಯಕ್ಕೆ ಸುಪ್ರೀಂ ಕೋರ್ಟ್ ಮಾಡಿದೆ ಎನ್ನುವುದು ಇಲ್ಲಿ ಗಮನಾರ್ಹ.
ಬಹಳ ಪ್ರಮುಖವಾಗಿ, ದೇಶದಾದ್ಯಂತ ಮೋದಿ ಸರ್ಕಾರ ತರಲು ಹೊರಟಿದ್ದ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ದ ನಡೆದ ಪ್ರತಿಭಟನೆಯ ವರದಿ ಮಾಡಿದ ಹಿರಿಯ ಪತ್ರಕರ್ತರ ವಿರುದ್ಧವೂ ಈ ದೇಶದ್ರೋಹ ಕಾಯ್ದೆಯನ್ನು ಬಿಜೆಪಿ ಸರ್ಕಾರ ಬಳಸಿಕೊಂಡಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಈ ವಿಚಾರವನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಬಲವಾಗಿ ಖಂಡಿಸಿತ್ತು. ಸಮಾಜದ ಮುಖವಾಣಿಯಾಗಿ ಕಾರ್ಯನಿರ್ವಹಿಸುವ ಪತ್ರಕರ್ತರ ವಿರುದ್ಧವೇ ಈ ಕಾಯ್ದೆಯನ್ನು ಈ ದೇಶದ ಆಡಳಿತ ಪಕ್ಷ ಬಳಿಸಿಕೊಂಡಿದೆ ಎಂದಾದರೇ, ಸಾಮಾನ್ಯರ ಗತಿ ಏನು..? ಹಾಗಾಗಿಯೇ, ಎಡಿರ‍್ಸ್ ಗಿಲ್ಡ್ ಆಫ್ ಇಂಡಿಯಾ ಹಾಗೂ ಐಡಬ್ಲ್ಯೂಪಿಸಿ (ಭಾರತೀಯ ಮಹಿಳಾ ಪ್ರೆಸ್ ಕಾರ್ಪ್ಸ್) ಈ ಕಾಯ್ದೆಯನ್ನು “ಕಠಿಣ ಕಾಯ್ದೆ” ಎಂದು ಕರೆದಿದ್ದಲ್ಲದೇ, ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ.
ವಿದ್ಯಾರ್ಥಿಗಳನ್ನು ಒಳಗೊಂಡು ವಿಮರ್ಶಕರು, ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು, ಪೊಲೀಸರು, ರಾಜಕೀಯ ನಾಯಕರು, ವಕೀಲರು, ಪತ್ರಕರ್ತರು ಮುಂತಾದವರು ದೇಶದ್ರೋಹ ಕಾಯ್ದೆಯ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿರುವುದು ಮಾತ್ರವಲ್ಲದೇ ಕಾಯ್ದೆಯನ್ನು ರದ್ದು ಮಾಡಿಸಬೇಕು ಅಥವಾ ತಿದ್ದುಪಡಿಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ. ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ಒಳಗೊಂಡ ನ್ಯಾಯಪೀಠ ಕೂಡ ಸರ್ಕಾರವನ್ನು ಮರುಪರಿಶೀಲಿಸುವಂತೆ ಕೇಳಿ ಸದ್ಯ ತಡೆಹಿಡಿದು ವಿಚಾರಣೆಯನ್ನು ಜುಲೈ ೩ನೇ ವಾರಕ್ಕೆ ಮುಂದೂಡಿದೆ. ಹಾಗಾದರೇ, ಒಂದು ವೇಳೆ ದೇಶದ್ರೋಹ ಕಾಯ್ದೆ ಭಾರತದಲ್ಲಿ ರದ್ದಾದರೇ, ಅದಕ್ಕೆ ಸರಿಹೊಂದುವ ಬೇರೆ ಯಾವುದೇ ಕಾಯ್ದೆಗಳಿಲ್ಲವೇ..? ಖಂಡಿತ ಇವೆ. ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ, ಸಾರ್ವಜನಿಕ ಸುರಕ್ಷತಾ ಕಾಯ್ದೆ, ರಾಷ್ಟ್ರೀಯ ಭದ್ರತಾ ಕಾಯ್ದೆಗಳು ಸೇರಿ ಮುಂತಾದ ಕಾಯೆಗಳು ಇವೆ ಎನ್ನುವುದು ಗಮನಾರ್ಹ.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ)ಕಾಯ್ದೆ : ಈ ಕಾಯ್ದೆಯು ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡುವ ಸಂಘಟನೆಗಳನ್ನು ತಡೆಗಟ್ಟುವ ಕಾನೂನಾಗಿದೆ. ಸಮಗ್ರತೆ ಹಾಗೂ ಸಾರ್ವಭೌಮತೆಗೆ ವಿರುದ್ಧವಾದ ಚಟುವಟಿಕೆಗಳನ್ನು ನಿರ್ಬಂಧಿಸುವುದಕ್ಕಾಗಿಯೇ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ೨೦೧೯ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ ಯ (ಯುಎಪಿಎ ೨೦೧೯) ಕಾನೂನಿಗೆ ವಿರುದ್ಧ/ವಾದ ನಡೆದುಕೊಳ್ಳುವವರನ್ನು/ಚಟುವಟಿಕೆಗಳನ್ನು ಭಯೋತ್ಪಾದಕರೆಂದು/ಭಯೋತ್ಪಾದಕ ಚಟುವಟಿಕೆಗಳೆಂದು ಪರಿಗಣಿಸಬಹುದಾಗಿದೆ. ಯುಎಪಿಎ ಕಾಯ್ದೆಯನ್ನು ಭಯೋತ್ಪಾದನಾ ವಿರೋಧಿ ಕಾಯ್ದೆ ಎಂದು ಕೂಡ ಕರೆಯಲಾಗುತ್ತದೆ.
ಇನ್ನು, ಯುಎಪಿಎ ಕಾಯ್ದೆಯ ಪ್ರಕಾರ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡ, ಅಥವಾ ಭಯೋತ್ಪಾದನೆಗಾಗಿ ತಯಾರಿ, ಭಯೋತ್ಪಾದನೆಯನ್ನು ಉತ್ತೇಜಿಸುವ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುವುದಕ್ಕೆ ಈ ಕಾಯ್ದೆಗೆ ಅಧಿಕಾರ ಇದೆ.
ರಾಷ್ಟ್ರೀಯ ಭದ್ರತಾ ಕಾಯ್ದೆ : ೧೯೮೦ರಲ್ಲಿ ಇಂದಿರಾಗಾಂಧಿ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದಾಗ ಸುಮಾರು ೧೮ ಸೆಕ್ಶನ್‌ಗಳುಳ್ಳ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಭಾರತದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆ, ವಿದೇಶಗಳೊಂದಿಗಿನ ಭಾರತದ ಸಂಬಂಧಗಳ ನಿರ್ವಹಣೆಯ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು.
ಹೌದು, ಈ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಅನೇಕ ಕಾಯ್ದೆಗಳಿವೆ. ಅಂತಹುದರಲ್ಲಿ ಮಹಾತ್ಮಗಾಂಧಿ ಅವರಂತಹ ಸ್ವಾತಂತ್ರದ ಹೆಗ್ಗುರುತುಗಳ ಧ್ವನಿಯನ್ನೇ ಅಡಗಿಸಲು ಅಥವಾ ಸತ್ಯವನ್ನು ಅಡಗಿಸಲು ಬ್ರಿಟೀಷ್ ಸರ್ಕಾರ ಬಳಸಿಕೊಂಡ ದೇಶದ್ರೋಹದಂತಹ ಕಾಯ್ದೆಯನ್ನೇಕೆ ಈ ದೇಶದ ಸರ್ಕಾರ ರದ್ದುಗೊಳಿಸುತ್ತಿಲ್ಲ. ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನ ಇಲ್ಲಿನ ನಾಗರಿಕರಿಗೆ ಅಭಿವ್ಯಕ್ತಿಯ ಸ್ವಾತಂತ್ರ್ಯ ನೀಡಿದೆ. ಸರ್ಕಾರದ ಕಾರ್ಯಚಟುವಟಿಕೆಗಳನ್ನು, ವೈಫಲ್ಯವನ್ನು ಪ್ರಶ್ನಿಸುವುದನ್ನೇ ದೇಶದ್ರೋಹವೆಂದು ಸರ್ಕಾರದ ಪರವಾದ ಸಂಘಟನೆಗಳು, ಪರವಾದಿಗಳು ಬಿಂಬಿಸುವಂತಹ ಭಯೋತ್ಪಾದಕ ವಾತಾವರಣ ಸೃಷ್ಟಿಗೆ ಪರೋಕ್ಷವಾಗಿ ಸರ್ಕಾರಗಳೇ ಕಾರಣವಾದವು. ಸತ್ಯವನ್ನು ಅಡಗಿಸುವ ಪ್ರಯತ್ನವನ್ನು ಈ ಕಾಯ್ದೆಯನ್ನು ಬಳಸಿಕೊಂಡು ಈವರೆಗೆ ದೇಶದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ದುರ್ಬಳಕೆ ಮಾಡಿಕೊಂಡವು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಂವಿಧಾನ ಈ ದೇಶದ ನಾಗರಿಕರಿಗೆ ನೀಡಿದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದ ತನ್ನ ಪರವಾದ ಸಂಘಟನೆಗಳ ವಿರುದ್ಧ ಎಂದೂ ಯಾವ ಸರ್ಕಾರವೂ ಸರ್ಕಾರ ದೇಶದ್ರೋಹದ ಪ್ರಕರಣಗಳನ್ನು ದಾಖಲು ಮಾಡಿಲ್ಲ. ತನ್ನ ಆಡಳಿತದ ವೈಫಲ್ಯವನ್ನು ಪ್ರಶ್ನಿಸಿದವರ ಮೇಲೆ, ವರದಿ ಮಾಡಿದವರ ಮೇಲೆ ದೇಶದ್ರೋಹದಂತಹ ಕಾಯ್ದೆಯನ್ನು ಬಳಸಿಕೊಂಡು ಜಾಮೀನುರಹಿತ ಅಪರಾಧವೆಂದು ಘೊಷಿಸಿದವು. ತನಗೆ ಲಾಭ ತಂದುಕೊಡುವ ಸೆನ್ಸೇಷನಲೈಸ್ಡ್ ಧರ್ಮ ರಾಜಕೀಯ ಸಂಘರ್ಷಗಳು, ಘಟನೆಗಳು ಸರ್ಕಾರಗಳಿಗೆ ಎಂದೂ ದೇಶದ್ರೋಹವೆಂದು ಕಾಣಿಸಲೇ ಇಲ್ಲ. ಅವುಗಳ ಚೆಂದ ಕಾಣುತ್ತಲೇ ತನ್ನ ಆಡಳಿತ ಮುಂದುವರಿಸಿದ್ದು ಈ ದೇಶದ ದುರಂತವೇ ಸರಿ.
ಒಟ್ಟಿನಲ್ಲಿ, ಈ ದೇಶದಲ್ಲಿ ವಾಸ್ತವಾಂಶವನ್ನು ಮರೆಮಾಚಲಾಗದು ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ದೇಶದ ನಾಗರಿಕರಿಗೆ ಸಂವಿಧಾನ ನೀಡಿದ ಹಕ್ಕುಗಳು ಹಾಗೂ ಸಮಗ್ರತೆಯ ಸಮತೋಲನಕ್ಕೆ ಧ್ವನಿ ಸೇರಿಸುವುದರ ಮೂಲಕ ಸುಪ್ರೀಂ ಕೋರ್ಟ್ ದೇಶದ್ರೋಹ ಕಾಯ್ದೆಗಳಿಗೆ ಸದ್ಯ ತಡೆ ಹಿಡಿದಿರುವುದು ಸ್ವಾಗತಾರ್ಹ ಬೆಳವಣಿಗೆ ಎನ್ನುವುದರಲ್ಲಿ ಸಂಶಯವಿಲ್ಲ.
-ಶ್ರೀರಾಜ್ ವಕ್ವಾಡಿ

No comments:
Post a Comment