( Photo : Internet)
ಒಡಿಶಾ ಚುನಾವಣೆಗೆ ಕಾಂಗ್ರೆಸ್‌ಗಿದು ಪರೋಕ್ಷ ಪಂಥಾಹ್ವಾನ ..? | ಮೈಂಡ್ ಡೈವರ್ಟಿಂಗ್ ಸ್ಟ್ರ್ಯಾಟಜಿ..!
ಎಲ್ಲಾ ರಾಜಕೀಯ ಊಹೆಗಳನ್ನು ಮೀರಿ ಬರುವ ಅಚ್ಚರಿ, ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುವುದು ಮತ್ತೆ ಸಾಬೀತಾಗಿದೆ. ಹೌದು, ದೇಶದ ಪ್ರಥಮ ಪ್ರಜೆಯ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಷ್ಟ್ರಪತಿ ಚುನಾವಣೆಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಆಡಳಿತ ಪಕ್ಷ ಬಿಜೆಪಿ ಈ ಬಾರಿಯೂ ಅಚ್ಚರಿಯ ವ್ಯಕ್ತಿತ್ವವನ್ನೇ ಕಣಕ್ಕಿಳಿಸಿದೆ. ರಾಜಕೀಯ ವಲಯದಲ್ಲಿದ್ದ ನಿರೀಕ್ಷೆ ಹಾಗೂ ಊಹೆಗೂ ಮೀರಿ ಕೊನೆಯ ಕ್ಷಣದಲ್ಲಿ ಅಚ್ಚರಿಯ ಆಯ್ಕೆಯಾಗುವುದಿದ್ದರೇ, ಅದು ಬಿಜೆಪಿಯಂತಹ ಪಕ್ಷದಲ್ಲಿ ಮಾತ್ರ ಎಂಬವುದು ಕಳೆದ ರಾಷ್ಟ್ರಪತಿ ಚುನಾವಣೆಯಲ್ಲಿಯೂ ಆಗಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್, ಕೇಂದ್ರ ಸಚಿವ ಮುಖ್ತಾರ್ ನಖ್ವಿ, ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಜೊತೆಗೆ ದ್ರೌಪದಿ ಮುರ್ಮು, ಜುವಾಲ್ ಓರಂ ಅವರುಗಳ ಹೆಸರು ಈ ರಾಷ್ಟçಪತಿ ಅಭ್ಯರ್ಥಿ ಹುದ್ದೆಯ ಸಂಭಾವ್ಯರ ಪಟ್ಟಿಯಲ್ಲಿ ಕೇಳಿಬಂದಿದ್ದರೂ, ಕಳೆದೆರಡು ವಾರಗಳ ಹಿಂದೆ ಈ ಭಾರಿ ಬಿಜೆಪಿ ‘ಮುಸ್ಲಿಂ’ ನಾಯಕನೋರ್ವನಿಗೆ ಮಣೆ ಹಾಕುವುದು ಪಕ್ಕಾ ಎಂದೇ ವಿಶ್ಲೇಷಣೆಗಳು ನಡೆದಿದ್ದವು. ಅದರಲ್ಲೂ ಕೇರಳದ ರಾಜ್ಯಪಾಲ ಆರೀಫ್‌ಗೆ ಅದೃಷ್ಟ ಖುಲಾಯಿಸುತ್ತದೆ ಎಂದೇ ಹೇಳಲಾಗಿತ್ತು. ಆದರೇ, ಈ ಎಲ್ಲಾ ಚರ್ಚೆಗಳು ಬದಲಾಗಿ ಜಾರ್ಖಾಂಡ್‌ನ ರಾಜ್ಯಪಾಲೆಯಾಗಿದ್ದ, ಒಡಿಶಾ ಮೂಲದ ಸಂತಾಲ್ ಎಂಬ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡುವುದರೊಂದಿಗೆ ರಾಜಕೀಯ ವಲಯದ ಊಹೆಗಳನ್ನು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸುಳ್ಳಾಗಿಸಿದೆ.
ಕಳೆದ ಎಂಟು ವರ್ಷಗಳಿಂದ ದೊಡ್ಡ ರಾಜಕೀಯ ವಿರೋಧಗಳ ನಡುವೆಯೂ ಈಗಾಗಲೇ ನಡೆದ ಕೆಲವು ರಾಜ್ಯಗಳ ವಿಧಾನ ಸಭಾ ಚುನಾವಣೆಗಳಲ್ಲಿ ಬಹುಪಾಲನ್ನು ಬಿಜೆಪಿ ಕಬಳಿಸಿಕೊಂಡಿದೆ ಎಂದರೇ, ಬಿಜೆಪಿ ಸ್ಥಳೀಯ ಮಟ್ಟದಿಂದಲೇ ತನ್ನ ಘಟಕಗಳನ್ನು ಭದ್ರಪಡಿಸಿಕೊಂಡಿದ್ದೇ ಕಾರಣ. ರಾಜಕೀಯ ವಲಯದಲ್ಲಿನ ದೊಡ್ಡ ವಿರೋಧದ ಅಲೆಯ ನಡುವೆಯೂ ಬಿಜೆಪಿ ಜನಪ್ರಿಯತೆ ಉಳಿಸಿಕೊಂಡು ಬಂದಿದೆ ಎಂದರೇ, ಅದಕ್ಕೆ ಕಾರಣ ಬಿಜೆಪಿ ರೂಪಿಸಿದ ‘ಪಾಲಿಟಿಕಲ್ ಸ್ಟ್ರ್ಯಾಟಜಿ’. ಈ ಭಾರಿಯ ರಾಷ್ಟ್ರಪತಿ ಅಭ್ಯರ್ಥಿ ಸ್ಥಾನದ ಅಚ್ಚರಿಯ ಆಯ್ಕೆಯೂ ಕೂಡ ಅದೇ ಪಾಲಿಟಿಕಲ್ ಸ್ಟ್ರ್ಯಾಟಜಿಜಿಯ ಒಂದು ಭಾಗ ಎನ್ನುವುದನ್ನು ಇಲ್ಲಿ ಮರೆಯುವಂತಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಮತ್ತೆ ಲೋಕಸಭಾ ಚುನಾವಣೆ ಬರಲಿದೆ. ಈಗ ಬಿಜೆಪಿಗೆ ಜನರ ‘ಮೈಂಡ್ ಡೈವರ್ಟ್’ ಮಾಡುವ ತುರ್ತು ಅಗತ್ಯವಿದೆ. ಆ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಬುಡಕಟ್ಟು ಜನಾಂಗದ ನಾಯಕಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದೆ ಎಂದು ಸ್ಪಷ್ಟವಾಗಿ ಕಾಣಿಸುತ್ತಿದೆ.
೨೦೧೭ರಲ್ಲಿಯೂ ದೊಡ್ಡ ಪ್ರಮಾಣದ ವಿರೋಧವನ್ನು ಎದುರಿಸಿತ್ತು ಬಿಜೆಪಿ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಹಣದುಬ್ಬರ, ನಿರುದ್ಯೋಗ ಸಮಸ್ಯೆಗಳ ವಿರುದ್ಧ ಇಡೀ ದೇಶದ ಜನ ತಿರುಗಿ ಬಿದ್ದಿದ್ದರು. ವಿರೋಧ ಪಕ್ಷಗಳಂತೂ ಆಡಳಿತ ಪಕ್ಷ ಬಿಜೆಪಿಯನ್ನು ಬೆಂಬಿಡದೆ ಕಾಡಿದ್ದವು. ಆ ಸಂದರ್ಭದಲ್ಲಿ ಬಿಜೆಪಿಗೆ ಜನರ ‘ಮೈಂಡ್ ಡೈವರ್ಟ್’ ಮಾಡುವ ಅಗತ್ಯತೆ ಇತ್ತು. ಅಯೋಧ್ಯೆ ಶ್ರೀರಾಮ ಮಂದಿರ ವಿಚಾರವನ್ನು ಮುನ್ನೆಲೆಗೆ ತಂದಿತ್ತು, ರಾಷ್ಟ್ರಪತಿ ಹುದ್ದೆಗೆ ಅಚ್ಚರಿಯ ದಲಿತ ನಾಯಕ ರಾಮನಾಥ್ ಕೋವಿಂದ್‌ರನ್ನು ಆಯ್ಕೆ ಮಾಡುವುದರ ಮೂಲಕ ರಾಜಕೀಯ ರಣತಂತ್ರ ಹೆಣೆದಿತ್ತು. ಈ ಎರಡು ವಿಷಯಗಳೊಂದಿಗೆ ಸ್ವಲ್ಪ ಮಟ್ಟಿಗೆ ಆಡಳಿತದ ವಿರೋಧಿಗಳ ಬಾಯಿ ಮುಚ್ಚಿಸಿತ್ತು. ಜನರನ್ನು ಧಾರ್ಮಿಕ ವಿಚಾರಲ್ಲಿ ಮನ ಸೆಳೆಯುವುದರ ಮುಖೇನ ಅಭಿಪ್ರಾಯವನ್ನು ಬದಲಾಯಿಸುವುದರಲ್ಲಿಯೂ ಯಶಸ್ವಿಯಾಗಿತ್ತು, ಪ್ರಣವ್ ಮುಖರ್ಜಿ ಅವರ ಅವಧಿ ಮುಕ್ತಾಯಗೊಂಡಾಗ ದೇಶದ ಪ್ರಥಮ ಪ್ರಜೆಯ ಚುನಾವಣೆಗೆ ಎಲ್ಲಿಯೂ ಸದ್ದಿಲ್ಲದ, ಸುದ್ದಿಯಲ್ಲಿಲ್ಲದ ದಲಿತ ನಾಯಕ ರಾಮನಾಥ್ ಕೋವಿಂದ್ ಅವರಿಗೆ ಮಣೆ ಹಾಕಿ ತಮ್ಮದು ಜಾತ್ಯಾತೀತ ಪಕ್ಷ ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲಿಯೂ ಯಶಸ್ವಿಯಾಯಿತು. ಅದಾದ ಮೇಲೆ ನಡೆದ ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಯಾವ ರೀತಿ ಬಿಜೆಪಿ ಸರ್ಕಾರ ಟ್ರೀಟ್ ಮಾಡಿತ್ತು ಎನ್ನುವುದು ನಿಮಗೆ ತಿಳಿದಿದೆ. ಆದರೂ ಒಂದಿಷ್ಟು ವಿವರಿಸದೇ ಇರುವುದಕ್ಕೆ ಸಾಧ್ಯವೇ ಇಲ್ಲ. ಪ್ರಕರಣದ ಸಾಕ್ಷ್ಯ ನಾಶ ಮಾಡುವುದಕ್ಕೆ ಪ್ರಯತ್ನಿಸಿದ ಬಿಜೆಪಿ ಸರ್ಕಾರದ ವಿರುದ್ಧ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಯಿತು. ವರದಿ ಮಾಡಲು ಹೋದ ಮಾಧ್ಯಮಗಳನ್ನು ಪೋಲಿಸರಿಂದ ತಡೆಯಲಾಯಿತು. ಅದರಲ್ಲೂ ಎಬಿಪಿ ನ್ಯೂಸ್‌ನ ವರದಿಗಾರ್ತಿ ಪ್ರತಿಮಾ ಮಿಶ್ರಾ, ತನ್ನನ್ನು ಎಳೆದಾಡಿ ತಡೆಯುತ್ತಿದ್ದ ಆಡಳಿತ ಪಕ್ಷದ ತೊಟ್ಟಿಲ ಕೂಸುಗಳಂತೆ ವರ್ತಿಸುತ್ತಿದ್ದ ಪೊಲೀಸರ ವಿರುದ್ಧ ಅಕ್ಷರಶಃ ತೊಡೆತಟ್ಟಿ, ಅಲ್ಲೇ ಕುಳಿತು ವರದಿ ಮಾಡಿದಳು, ಇಂಡಿಯಾ ಟುಡೆ ವರದಿಗಾರ್ತಿ ತನುಶ್ರೀ ಪಾಂಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಸರ್ಕಾರ ಹತ್ರಾಸ್ ಅತ್ಯಚಾರ ಪ್ರಕರಣದಲ್ಲಿ ಕೊಲೆಯಾದ ದಲಿತ ಯುವತಿಯ ಕುಟುಂಬಕ್ಕೆ ಒತ್ತಡ ಹೇರುತ್ತಿದೆ ಎಂಬ ವರದಿಯನ್ನು ಸಾಕ್ಷಿ ಸಮೇತ ಬಿತ್ತರಿಸುವುದಕ್ಕೆ ಪ್ರಯತ್ನಿಸಿದಾಗ ಅದಕ್ಕೂ ತಡೆಯುವುದಕ್ಕೆ ಪ್ರಯತ್ನಿಸಲಾಯಿತು. ಇಲ್ಲೇ ಗೊತ್ತಾಗುವುದಿಲ್ಲವೇ ರಾಜಕೀಯದ ಜಾತ್ಯಾತೀತ ನಿಲುವು..? ರಾಷ್ಟ್ರಪತಿ ಹುದ್ದೆಗೋ, ಮುಖ್ಯಮಂತ್ರಿ ಸ್ಥಾನಕ್ಕೋ ಅಥವಾ ರಾಜಕೀಯದ ಮೇಲ್ಪಂಕ್ತಿಯ ಹುದ್ದೆಗಳಿಗೋ ಕೆಳವರ್ಗಗಳ ನಾಯಕರಿಗೆ ಮಣೆ ಹಾಕಿದರಷ್ಟೇ ಜಾತ್ಯಾತೀತವೇ..? ಉಳಿದ ವಿಚಾರದಲ್ಲಿಯೂ ಆ ಧೋರಣೆ ಬೇಡವೇ..? ಬಿಟ್ಬಿಡಿ, ಶೋಷಿತ ವರ್ಗಗಳ ಪರವಾಗಿ ಹೋರಾಡುವವರನ್ನು ಈ ಪಕ್ಷ ದೇಶದ್ರೋಹಿಗಳು ಎಂದೂ ಬಿಂಬಿಸಿದ್ದಿದೆ. ರಾಜಕೀಯ, ಅಧಿಕಾರ ಅಂತಂದಾಗ ಏನನ್ನು ಮಾಡುವುದಕ್ಕೂ ಬಿಜೆಪಿ ಸಿದ್ಧ ಎನ್ನುವುದಕ್ಕೆ ಇದೊಂದೇ ಸಾಕ್ಷಿ ಸಾಕಲ್ಲವೇ..? ಅದೇನೇ ಇರಲಿ, ದಲಿತ ಸಮುದಾಯದಿಂದ ಕೋವಿಂದ್ ಈ ದೇಶದ ಪ್ರಥಮ ಪ್ರಜೆಯಾದರು, ಅವಧಿಯೂ ಯಶಸ್ವಿಯಾಗಿ ಮುಗಿಸುವ ಹಂತದಲ್ಲಿದ್ದಾರೆ. ಇವೆಲ್ಲಾ ರಾಜಕೀಯ ತಂತ್ರಗಾರಿಕೆ ಎನ್ನುವುದನ್ನು ಸಾಮಾನ್ಯ ಜನವರ್ಗ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಅಷ್ಟೇ. ಬಿಜೆಪಿ ಮಾತ್ರವಂತಲ್ಲ, ಉಳಿದ ಪಕ್ಷಗಳು ಕೂಡ ಇದಕ್ಕೆ ಹೊರತಾಗಿಲ್ಲ.
ಈ ಭಾರಿಯೂ ಆಡಳಿತ ಬಿಜೆಪಿ ಸರ್ಕಾರ ಮತ್ತೆ ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗ, ಪೌರತ್ವ ಕಾಯ್ದೆ, ಧರ್ಮ ರಾಜಕೀಯ ಮುಂತಾದ ವಿಚಾರಗಳ ಕಾರಣಗಳಿಂದಾಗಿ ಭಾರಿ ದೊಡ್ಡ ಮಟ್ಟದ ವಿರೋಧ ಅಲೆಯನ್ನು ಎದುರಿಸುತ್ತಿದೆ. ಅದನ್ನು ಡೈವರ್ಟ್ ಮಾಡುವುದೇ ಬಿಜೆಪಿಗೆ ಈಗ ಸದ್ಯಕ್ಕಿರುವ ಪರಮ ಗುರಿ ಎಂದೇ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಆ ಭಾಗವಾಗಿಯೇ, ಇದೇ ಮೊಟ್ಟ ಮೊದಲ ಭಾರಿಗೆ ತನ್ನ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರನ್ನು ಕಣಕ್ಕಿಳಿಸಿದೆ ಎಂದೇ ಹೇಳಲಾಗುತ್ತಿದೆ. ಇನ್ನು, ಸಾಮಾಜಿಕ ವಲಯದಲ್ಲಿ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ರಾಜಕೀಯ ಚರ್ಚೆಗಳಾಗುತ್ತಿವೆ. ‘ಮಾವೋವಾದಿಗಳು ಬುಡಕಟ್ಟು ಜನಾಂಗದವರಿಂದ ‘ಗನ್’ ಸಂಸ್ಕೃತಿಯನ್ನು ಬೆಳೆಸಲು ಪ್ರಚೋದನೆ ನೀಡುವವರಾದರೇ, ರಾಷ್ಟ್ರೀಯವಾದಿಗಳು ಅದೇ ಬುಡಕಟ್ಟು ಜನಾಂಗದ ಮಹಿಳೆಗೆ ಸಂವಿಧಾನದ ಪರಮೋಚ್ಛ ಅಧಿಕಾರ ನೀಡಿ ವ್ಯವಸ್ಥೆಯ ಸುಧಾರಣೆಗೆ ಪ್ರೇರಣೆ ಕೊಡುವವರು’ ಎಂಬ ಎನ್‌ಡಿಎ ಪರವಾದ ಧ್ವನಿ ಎದ್ದಿದೆ. ಈ ಎಲ್ಲದಕ್ಕಿಂತ ಮಿಗಿಲಾಗಿ ಬಿಜೆಪಿ ಆದಿವಾಸಿ ಮತಗಳ ಮೇಲೆ ಕಣ್ಣಿಟ್ಟಿದೆ ಎನ್ನುವುದು ಇಲ್ಲಿ ಬಹಳ ಸ್ಪಷ್ಟ. ಮಹಾರಾಷ್ಟ್ರ, ಒಡಿಶಾ, ಜಾರ್ಖಾಂಡ್, ಛತ್ತೀಸ್‌ಗಢ ಹಾಗೂ ಈಶಾನ್ಯ- ಮೊದಲಾದ ರಾಜ್ಯಗಳಲ್ಲಿ ಉಳಿದ ರಾಜ್ಯಗಳಿಗಿಂತ ಹೆಚ್ಚಾಗಿ ಆದಿವಾಸಿ ಮತಗಳಿರುವುದರಿಂದ ಆ ಮತಗಳನ್ನು ಸೆಳೆಯುವುದಕ್ಕೆ ದ್ರೌಪದಿ ಮುರ್ಮು ಎಂಬ ಆದಿವಾಸಿ ಜನಾಂಗದ ಪ್ರಭಾವಿ ಮಹಿಳೆಯೋರ್ವರರನ್ನು ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ಆಯ್ಕೆ ಮಾಡಿ ರಾಜಕೀಯ ತಂತ್ರ ಹೆಣೆದಿದೆ ಎಂಬುವುದು ಅಕ್ಷರಶಃ ಸತ್ಯ.
ಇನ್ನು, ವಿರೋಧ ಪಕ್ಷಗಳ ಒಕ್ಕೂಟದ ಅಭ್ಯರ್ಥಿ ಸ್ಥಾನಕ್ಕೂ ಈ ಭಾರಿ ಅಚ್ಚರಿಯ ಆಯ್ಕೆಯೇ ಆಗಿದೆ. ಈ ಹಿಂದೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರ ಹೆಸರುಗಳು ಸಂಭಾವ್ಯರ ಪಟ್ಟಿಯಲ್ಲಿದ್ದಿತ್ತು, ಆದರೇ, ಕೊನೆಯ ಕ್ಷಣದಲ್ಲಿ ಮಾಜಿ ಐಎಎಸ್ ಅಧಿಕಾರಿ, ಮಾಜಿ ಕೇಂದ್ರ ಸಚಿವ ಯಶವಂತ ಸಿಹ್ನಾ ಅವರನ್ನು ಆಯ್ಕೆ ಮಾಡಿದೆ.
ಬಹುಮತಕ್ಕೆ ಬೇಕಾಗುವ ಬಹುತೇಕ ಮತಗಳು(೪೮.೦೬%) ಬಿಜೆಪಿಯಲ್ಲಿದ್ದು, (ಕಾಂಗ್ರೆಸ್ ೨೪.೧೯% ಮತಗಳು ಹಾಗೂ ಇತರೆ ಪಕ್ಷಗಳು ೨೭.೧೫% ಮತಗಳನ್ನು ಹೊಂದಿವೆ) ಈ ಭಾರಿಯ ರಾಷ್ಟ್ರಪತಿ ಸ್ಥಾನಕ್ಕೆ ಅವಿರೋಧ ಆಯ್ಕೆ ಆಗುವುದು ಬೇಡ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ಸಿಹ್ನಾ ಅವರನ್ನು ಕಣಕ್ಕಿಳಿಸಿದೆ. ಹಾಗಾಗಿ ಇದೊಂದು ಔಪಚಾರಿಕ ಚುನಾವಣೆಯಾಗಲಿದ್ದು, ದ್ರೌಪದಿ ರಾಷ್ಟ್ರಪತಿ ಹುದ್ದೆ ಅಲಂಕರಿಸುವುದು ಬಹುತೇಕ ನಿಶ್ಚಿತ ಎನ್ನುವುದು ಸ್ಪಷ್ಟ. ದ್ರೌಪದಿ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರೇ, ಈ ದೇಶದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿ (೨೦೦೭ರಲ್ಲಿ ಈ ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಮಹಾರಾಷ್ಟ್ರದ ಜಲಗಾಂ ಬಳಿಯ ನಾಡ್‌ಗಾಂ ಎಂಬ ಹಳ್ಳಿಯ ಒಂದು ಸಾಹುಕಾರ ಪರಿವಾರದ ಪ್ರತಿಭಾ ಕುಮಾರಿ ಪಾಟೀಲ್ {ಅಂದಿನ ರಾಜಸ್ಥಾನದ ರಾಜ್ಯಪಾಲೆ} ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು ಎನ್ನುವುದು ಇಲ್ಲಿ ಗಮನಾರ್ಹ) ಹಾಗೂ ಈ ದೇಶದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿಯಾಗಲಿದ್ದಾರೆ.
ಒಟ್ಟಿನಲ್ಲಿ, ಬುಡಕಟ್ಟು ಜನಾಂಗದ ಒಂದು ದೊಡ್ಡ ರಾಜ್ಯವೇ ಎಂದು ಕರೆಸಿಕೊಂಡ ದೇಶದ ಆಗ್ನೇಯ ತೀರದ ಒಡಿಶಾದ ಬಿಜೆಪಿಯ ಪ್ರಮುಖ ನಾಯಕಿಯಾಗಿರುವ, ಆದಿವಾಸಿ ಜನಾಂಗದ ಪ್ರಭಾವಿ ಮುಖವಾಗಿರುವ ದ್ರೌಪದಿ ಮುರ್ಮು ಅವರನ್ನು ಮೋದಿ ನೇತೃತ್ವದ ಸರ್ಕಾರ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುವುದರ ಮುಖೇನ ಕಾಂಗ್ರೆಸ್‌ಗೆ ಒಡಿಶಾದ ಮುಂದಿನ ಚುನಾವಣೆಯ ‘ಕಳಿಂಗ ಯುದ್ಧ’ಕ್ಕೆ ಈಗಾಗಲೇ ಪರೋಕ್ಷವಾಗಿ ಪಂಥಾಹ್ವಾನ ನೀಡಿದೆ ಎನ್ನುವುದು ಸ್ಪಷ್ಟ.
-ಶ್ರೀರಾಜ್ ವಕ್ವಾಡಿ

No comments:
Post a Comment