Thursday, July 16, 2026

2028 Poll : ಒಕ್ಕಲಿಗ V/S ಲಿಂಗಾಯತ | Untold Story Secret



ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೇ, 2028ರ ವಿಧಾನಸಭಾ ಚುನಾವಣೆಗೆ ಒಕ್ಕಲಿಗ ವರ್ಸಸ್ ಲಿಂಗಾಯತ ರಾಜಕಾರಣಕ್ಕೆ ಮುನ್ನುಡಿ ಬರೆದ ಹಾಗಿದೆ. ಬಿಡದಿ ಟೌನ್ ಶಿಪ್ ವಿಚಾರವನ್ನು ಹೆಚ್ ಡಿ ದೇವೇಗೌಡ ಕುಟುಂಬ ಮತ್ತು ಸಿಎಂ ಡಿ.ಕೆ ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡರೆ, ಇತ್ತ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಗೊಂದಲ ಇನ್ನೂ ಮುಗಿದಿಲ್ಲ. ಬಿ ವೈ ವಿಜಯೇಂದ್ರ ತಮ್ಮ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು, ಹೈಕಮಾಂಡ್ ಗೆ ತಮ್ಮ ಶಕ್ತಿ ಸಾಮರ್ಥ್ಯ ತೋರಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ‌. ಬಿಜೆಪಿಯಲ್ಲೂ ಒಕ್ಕಲಿಗ, ಲಿಂಗಾಯಯ ಸಂಘರ್ಷ ಇದೆ.

ಕರ್ನಾಟಕದ ರಾಜಕಾರಣ ಯಾವಾಗಲೂ ಸಾಮಾಜಿಕ ನ್ಯಾಯದ ಮುಖವಾಡದ ಅಡಿಯಲ್ಲಿ ಪ್ರಬಲ ಸಮುದಾಯಗಳ ಹಿತಾಸಕ್ತಿ ಕಾಯುವ ನೆಲೆಯಾಗಿಯೇ ಗುರುತಿಸಿಕೊಂಡಿದೆ. ಈ ಹಿಂದಿನಿಂದಲೂ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳೇ ಚುನಾವಣೆಯಲ್ಲಿ ನಿರ್ಣಾಯಕ ಎನ್ನಿಸಿವೆ. ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದವರ ಪಟ್ಟಿಯನ್ನು ಗಮನಿಸಿದರೆ, ಅಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದವರೇ ಹೆಚ್ಚಿನ ಪಾಲು ಪಡೆದಿದ್ದಾರೆ. ಹಿಂದುಳಿದ ವರ್ಗವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಮುಖ್ಯಮಂತ್ರಿಗಳಾಗಿದ್ದಾರೆ. ಕೆಲವು ಅವಧಿಗಳಿಗೆ ಮಾತ್ರ ಕರ್ನಾಟಕದಲ್ಲಿ ಅಹಿಂದ ವರ್ಗದ ಮತಗಳು ನಿರ್ಣಾಯಕ ಎನ್ನಿಸಿವೆ. 

ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, 2028ರ ವಿಧಾನಸಭಾ ಚುನಾವಣೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಬಂಡವಾಳಶಾಹಿ ಮತ್ತು ಪ್ರಬಲ ಜಾತಿಗಳ ಹಿತಾಸಕ್ತಿ ಹೇಗೆ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಬಿಡದಿ ಟೌನ್‌ಶಿಪ್ ವಿವಾದ ಮತ್ತು ಬಿಜೆಪಿಯ ಆಂತರಿಕ ನಾಯಕತ್ವದ ಸಂಘರ್ಷಗಳು ಕೇವಲ ಅಭಿವೃದ್ಧಿ ಅಥವಾ ಆಡಳಿತದ ಪ್ರಶ್ನೆಗಳಲ್ಲ; ಅವು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ನಡುವಿನ ಸಾಂಪ್ರದಾಯಿಕ 'ಹೆಜೆಮನಿ' ಅಥವಾ ಅಧಿಪತ್ಯ ಸಾಧಿಸುವ ಹೊಸ ರಾಜಕೀಯ ಸಂಘರ್ಷವಾಗಿದೆ. 

ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಹೆಸರಿನಲ್ಲಿ ಬಿಡದಿ ಸುತ್ತಮುತ್ತಲಿನ ಸಾವಿರಾರು ಎಕರೆಗೂ ಹೆಚ್ಚು ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಿರುವ ಸರ್ಕಾರದ ನಡೆ, ನವ ಉದಾರೀಕರಣದ ನೀತಿಗಳ ಮುಂದುವರಿದ ಭಾಗ. ಆದರೆ, ಇದರ ಹಿಂದಿರುವ ರಾಜಕೀಯ ಆಯಾಮ ಒಕ್ಕಲಿಗ ಸಮುದಾಯದ ಮೇಲಿನ ಹಿಡಿತಕ್ಕೆ ಸಂಬಂಧಿಸಿದ್ದು ಎನ್ನುವುದು ಇಲ್ಲಿ ಮುಖ್ಯಾಂಶ. 

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮುನ್ನಡೆಸಲು ಮತ್ತು ಒಕ್ಕಲಿಗ ಸಮುದಾಯದ ಏಕೈಕ ನಾಯಕರಾಗಿ ಹೊರಹೊಮ್ಮಲು ಡಿಕೆಶಿ ಇಟ್ಟಿರುವ ದಾಳ ಇದು. ಅದಕ್ಕೆ ಪ್ರತಿತಂತ್ರವಾಗಿ ದಶಕಗಳಿಂದ ಈ ಭಾಗದ ಒಕ್ಕಲಿಗ ಮತಬ್ಯಾಂಕ್ ಅನ್ನು ತನ್ನ ಆಸ್ತಿಯನ್ನಾಗಿ ಮಾಡಿಕೊಂಡಿರುವ ಹೆಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬಕ್ಕೆ ಇದು ಅಸ್ತಿತ್ವದ ಪ್ರಶ್ನೆ. ರೈತರ ಭೂಮಿ ಉಳಿಸುವ 'ಸತ್ಯಾಗ್ರಹ'ದ ಹೆಸರಿನಲ್ಲಿ ಗೌಡರ ಕುಟುಂಬ ಬೀದಿಗಿಳಿಯುತ್ತಿರುವುದು ಕೇವಲ ರೈತಪರ ಕಾಳಜಿಯಿಂದಲ್ಲ; ಬದಲಿಗೆ ತಮ್ಮ ಒಕ್ಕಲಿಗ ಕೋಟೆಯನ್ನು ಡಿ.ಕೆ. ಶಿವಕುಮಾರ್ ಧೂಳೀಪಟ ಮಾಡದಂತೆ ತಡೆಯುವ ಅನಿವಾರ್ಯತೆಯಿಂದ. ಈ ಮುಖಾಮುಖಿ 2028ರ ಒಕ್ಕಲಿಗ ನಾಯಕತ್ವದ ಅಂತಿಮ ಸಮರಕ್ಕೆ ವೇದಿಕೆ ಸಿದ್ಧಪಡಿಸುತ್ತಿದೆ.

ಇನ್ನು, ಬಿಜೆಪಿಯಲ್ಲಿ ಲಿಂಗಾಯತ ವರ್ಸಸ್ ಒಕ್ಕಲಿಗ ಸಂಘರ್ಷ ಮತ್ತು ವಿಜಯೇಂದ್ರ ಅಸ್ತಿತ್ವದ ಹೋರಾಟವೂ ಕಡಿಮೆ ಏನಿಲ್ಲ. ಹಿಂದುತ್ವದ ಕಾರ್ಡ್ ಬಳಸಿದರೂ ಕರ್ನಾಟಕದಲ್ಲಿ ಜಾತಿ ಸಮೀಕರಣವನ್ನು ಮೀರಿ ಬೆಳೆಯಲು ಸಾಧ್ಯವಾಗದ ಬಿಜೆಪಿ ಆಂತರಿಕ ಕಚ್ಚಾಟದ ತುತ್ತತುದಿಯಲ್ಲಿದೆ. ಬಿ.ಎಸ್. ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವ ಬಿ.ವೈ. ವಿಜಯೇಂದ್ರ ಅವರಿಗೆ ತಂದೆಯ ಕಾಲದ ನಂತರ, ಲಿಂಗಾಯತ ಸಮುದಾಯದಲ್ಲಿ ರಾಜಕೀಯ ರಂಗದಲ್ಲಿ ಸರ್ವೋಚ್ಚ ನಾಯಕನಾಗಿ ಬೆಳೆಯಬೇಕು ಎನ್ನುವುದು ದೊಡ್ಡ ಕನಸು. 

ಬಿಜೆಪಿಯ ಒಳಗೇ ಇರುವ ಒಂದು ಬಣ ವಿಜಯೇಂದ್ರ ಅವರ ಲಿಂಗಾಯತ ನಾಯಕತ್ವದ ವಿರುದ್ಧ ಮತ್ತು ಮತ್ತೊಂದು ಒಕ್ಕಲಿಗ ಮೂಲದ ನಾಯಕರ ಬಣ ತನ್ನದೇ ಆದ ಪ್ರಭಾವ ಬೀರಲು ಆಂತರಿಕ ಕದನ ನಡೆಸುತ್ತಿವೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ಲಿಂಗಾಯತ ನಾಯಕರ ಬಂಡಾಯ ಮತ್ತು ಆರ್. ಅಶೋಕ್, ಸಿ.ಟಿ ರವಿ ಅವರಂತಹ ಒಕ್ಕಲಿಗ ನಾಯಕರ ಪಕ್ಷದೊಳಗಿನ ಪ್ರಬಲ ಜಾತಿಗಳ ಹಗ್ಗಜಗ್ಗಾಟವೇನೂ ಕಡಿಮೆ ಇಲ್ಲ. ವಿಜಯೇಂದ್ರ ಅವರು ಹೈಕಮಾಂಡ್‌ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಒದ್ದಾಡುತ್ತಿದ್ದರೆ, ಪಕ್ಷದೊಳಗಿನ ಒಕ್ಕಲಿಗ-ಲಿಂಗಾಯತ ಸಂಘರ್ಷವು 2028ರ ಹೊತ್ತಿಗೆ ಬಿಜೆಪಿಯನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತದೆ ಎಂಬುದು ಕುತೂಹಲಕಾರಿಯಾಗಿದೆ. 

ಬಿ.ವೈ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ನಡೆಸುತ್ತಿದ್ದರೂ, ಪಕ್ಷದೊಳಗೇ ಅವರಿಗೆ ನಾಯಕತ್ವದ ಮಾನ್ಯತೆ ಸಿಗುತ್ತಿಲ್ಲ. ಬಿಜೆಪಿಯ ಒಕ್ಕಲಿಗ ನಾಯಕರಾದ ಆರ್. ಅಶೋಕ್ ಮತ್ತು ಇತರರು ವಿಜಯೇಂದ್ರ ಅವರ ಹಿಡಿತವನ್ನು ಸಡಿಲಗೊಳಿಸಲು ಕಾಯುತ್ತಿದ್ದಾರೆ. ಹೈಕಮಾಂಡ್ ಎದುರು ವಿಜಯೇಂದ್ರ ತಮ್ಮ ಶಕ್ತಿ ಪ್ರದರ್ಶಿಸಲು ಮಾಡುತ್ತಿರುವ ಪ್ರಯತ್ನಗಳು ಲಿಂಗಾಯತ ವರ್ಸಸ್ ಒಕ್ಕಲಿಗ ಆಂತರಿಕ ಧ್ರುವೀಕರಣವನ್ನು ಇನ್ನಷ್ಟು ತೀವ್ರಗೊಳಿಸಿದೆ. ಹಿಂದುತ್ವದ ಸಿದ್ಧಾಂತದ ಅಡಿಯಲ್ಲಿ ಮುಚ್ಚಿಹೋಗಿದ್ದ ಜಾತಿ ಹಿತಾಸಕ್ತಿಗಳು ಈಗ ನಾಯಕತ್ವದ ಪ್ರಶ್ನೆ ಬಂದಾಗ ತಲೆಯೆತ್ತಿ ನಿಂತಿವೆ. 

ಯಡಿಯೂರಪ್ಪ ಅವರ ಕುಟುಂಬ ರಾಜಕಾರಣವನ್ನು ಕೊನೆಗಾಣಿಸಿ, ಹಿಂದುತ್ವದ ಸಿದ್ಧಾಂತಕ್ಕೆ ಸಂಪೂರ್ಣವಾಗಿ ಶರಣಾಗುವ ಹೊಸ ನಾಯಕತ್ವವನ್ನು ತರಲು ಬಿಜೆಪಿ ಹೈಕಮಾಂಡ್‌ನ ಒಂದು ಬಣ ಬಯಸುತ್ತಿದೆ. ಆದರೆ, ಕರ್ನಾಟಕದಲ್ಲಿ 'ಲಿಂಗಾಯತ ನಾಯಕತ್ವ'ವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ವಿಜಯೇಂದ್ರ ಅವರಿಗೆ ಗೊತ್ತು. ಮತ್ತು ಈ ಕಟು ಸತ್ಯ ಬಿಜೆಪಿಯ ಹೈಕಮಾಂಡ್‌ ಗೂ ಗೊತ್ತು. ಹಾಗಾಗಿ ಗೊಂದಲದಲ್ಲೇ ಬಿಜೆಪಿ ಹೈಕಮಾಂಡ್‌ ಇದೆ. 

2028ರ ಹೊತ್ತಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸಾಮಾಜಿಕ ನ್ಯಾಯದ 'ಅಹಿಂದ' ಚೌಕಟ್ಟನ್ನು ಬದಿಗೊತ್ತಿ, ಕೇವಲ ಒಕ್ಕಲಿಗ-ಲಿಂಗಾಯತ ಸಮುದಾಯಗಳ ಬಲಪ್ರದರ್ಶನದ ವೇದಿಕೆಯನ್ನಾಗಿ ರಾಜ್ಯವನ್ನು ಬಳಸಿಕೊಳ್ಳಲು ಮುಂದಾಗಿವೆ. ಇಬ್ಬರು ಪ್ರಬಲ ಸಮುದಾಯಗಳ ನಾಯಕರ ನಡುವಿನ ಈ ಪ್ರತಿಷ್ಠೆಯ ಜಗಳದಲ್ಲಿ, ದಲಿತರು, ಹಿಂದುಳಿದ ವರ್ಗಗಳು ಮತ್ತು ಶ್ರಮಿಕರ ನೈಜ ಸಾಮಾಜಿಕ-ಆರ್ಥಿಕ ಉನ್ನತಿಯ ಚರ್ಚೆಗಳು ಸಂಪೂರ್ಣವಾಗಿ ಹಳ್ಳ ಹಿಡಿಯುತ್ತಿವೆ.

ಇನ್ನು, ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ ನೇತೃತ್ವದ 'ಅಹಿಂದ' (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ರಾಜಕಾರಣವು ಪ್ರಬಲ ಜಾತಿಗಳಾದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ದಶಕಗಳಿಂದ ಪರ್ಯಾಯ ಸವಾಲನ್ನು ಒಡ್ಡುತ್ತಾ ಬಂದಿದೆ. ಆದರೆ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಪ್ರಬಲ ಜಾತಿಗಳ ಓಲೈಕೆಗೆ ಹೆಚ್ಚು ಒತ್ತು ನೀಡುತ್ತಿರುವುದು ಕಳವಳಕಾರಿ ಸಂಗತಿ. ಅಧಿಕಾರವನ್ನು ಕೇವಲ ಎರಡು ಪ್ರಬಲ ಜಾತಿಗಳ ನಡುವೆ ಹಂಚಿಕೊಳ್ಳುವ ಈ ಶಕ್ತಿ ರಾಜಕಾರಣದಲ್ಲಿ ಶೋಷಿತ ಸಮುದಾಯಗಳ ನೈಜ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳು ಗೌಣವಾಗುತ್ತಿವೆ.

ಒಟ್ಟಾರೆಯಾಗಿ, 2028ರ ವಿಧಾನಸಭಾ ಚುನಾವಣೆಯು ಅಭಿವೃದ್ಧಿ, ಉದ್ಯೋಗ ಅಥವಾ ಸಾಮಾಜಿಕ ಸಮಾನತೆಯ ಆಧಾರದ ಮೇಲೆ ನಡೆಯುವ ಸಾಧ್ಯತೆಗಳಿಗಿಂತ, ಒಕ್ಕಲಿಗ ವರ್ಸಸ್ ಲಿಂಗಾಯತ ನಾಯಕತ್ವದ ನಡುವಿನ ಪ್ರತಿಷ್ಠೆಯ ಕದನವಾಗಿ ಮಾರ್ಪಡುತ್ತಿದೆ. ಬಿಡದಿ ಟೌನ್‌ಶಿಪ್ ವಿವಾದ ಇರಲಿ ಅಥವಾ ಬಿಜೆಪಿಯ ನಾಯಕತ್ವದ ಗೊಂದಲವಿರಲಿ, ಎಲ್ಲವೂ ಕೇವಲ ಜಾತಿ ಕೋಟೆಗಳನ್ನು ಭದ್ರಪಡಿಸಿಕೊಳ್ಳುವ ರಾಜಕೀಯ ಮೇಲಾಟದ ದಾಳಗಳಷ್ಟೇ. ರಾಜಕೀಯ ಪಕ್ಷಗಳು ತಮ್ಮ ಪ್ರಭಾವ ವಿಸ್ತರಿಸಲು ಜಾತಿ ಕಾರ್ಡ್ ಬಳಸುತ್ತಿರುವ ಈ ಹೊತ್ತಿನಲ್ಲಿ, ಜನಸಾಮಾನ್ಯರ ಮತ್ತು ದುಡಿಯುವ ವರ್ಗದ ನೈಜ ಪ್ರಶ್ನೆಗಳು ಮೂಲೆಗುಂಪಾಗುತ್ತಿರುವುದು ಇಂದಿನ ಕರ್ನಾಟಕ ರಾಜಕಾರಣದ ವಿಷಾದನೀಯ ವಾಸ್ತವ ಎನ್ನುವುದರಲ್ಲಿ ಏನೂ ಅನುಮಾನವಿಲ್ಲ. 

- ಶ್ರೀರಾಜ್‌ ವಕ್ವಾಡಿ 

Wednesday, July 15, 2026

'"ಬಿಡದಿ"ಲ್ಲಾ ! 'ಕಪ್ಪ' ನೀಡಲು ಡಿಕೆಶಿ ಕಸರತ್ತು!? ಹಿರಿಗೌಡರ ಬಾಂಬ್ !



ದೇವೆಗೌಡರು ಬಿಡದಿ ರೈತರ ಪರವಾಗಿ, ಕಾಂಗ್ರೆಸ್ ಸರ್ಕಾರದ ನಿಲುವಿನ ವಿರುದ್ಧ ನಿಂತಿರುವುದು ಏನೋ ಸರಿ. ಆದರೇ, ಟೌನ್ ಶಿಪ್ ಹಿಂದೆ ಮುಖ್ಯಮಂತ್ರಿ ಬದಲಾವಣೆಯ ರಾಜಕೀಯ ಇದ್ದು, ಅದೇ ಕಾರಣಕ್ಕಾಗಿ ಸಿದ್ದರಾಮಯ್ಯ ಅವರನ್ನು ಇಳಿಸಿ ಹೈಕಮಾಂಡ್ ಒಡ್ಡಿರುವ ಆಮೀಷಗಳನ್ನು ಡಿಕೆ ಶಿವಕುಮಾರ್ ಈಡೇರಿಸಲು ಮುಂದಾಗಿದ್ದಾರೆ, ಹೈಕಮಾಂಡ್ ಆಮಿಷಗಳನ್ನು ಪೂರೈಸಲು ರೈತರ ಭೂಮಿಗೆ ಕೈ ಹಾಕಿದ್ದಾರೆ ಎಂದು ಹೇಳಿರುವುದರ ಹಿಂದೆ ರಾಜಕೀಯ ದುರುದ್ದೇಶ ಇದೆಯಾ? ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಪ್ರಾಬಲ್ಯ ರಾಜಕಾರಣದ ಕಸರತ್ತು ಇದೆಯೇ!? 

ಮಾಜಿ ಪ್ರಧಾನಿ ದೇವೆಗೌಡರು ನದಿ ನೀರು ಹಂಚಿಕೆ ವಿಷಯಕ್ಕೆ‌ ಸಂಬಂಧಿಸಿದಂತೆ ಮತ್ತು ರೈತರ ಪರ ಎಂದಿಗೂ ನಿಂತಿದ್ದಾರೆ. ಈ ಇಳಿವಯಸ್ಸಿನಲ್ಲೂ ಬೀದಿಗಿಳಿದು ಹೋರಾಟ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಇವೆಲ್ಲವೂ ನಿಜಕ್ಕೂ ಶ್ಲಾಘನೀಯ.

ಕರ್ನಾಟಕ ರಾಜಕಾರಣದ ನರನಾಡಿಗಳನ್ನು ಬಲ್ಲವರಿಗೆ ಹೆಚ್.ಡಿ. ದೇವೇಗೌಡರ ಯಾವುದೇ ಹೋರಾಟ ಕೇವಲ ತತ್ಕಾಲದ ವಿಷಯಕ್ಕೆ ಸೀಮಿತವಾಗಿರುವುದಿಲ್ಲ ಎಂಬುದು ಸ್ಪಷ್ಟ. ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಯ ವಿರುದ್ಧ ರೈತರ ಪರವಾಗಿ ಅವರು ಹೋರಾಟಕ್ಕೆ ಇಳಿಯುವುದು ಮೇಲ್ನೋಟಕ್ಕೆ ಭೂಮಿ ಕಳೆದುಕೊಳ್ಳುವ ಬಡವರ ಪರವಾದ ನಿಲುವಾಗಿ ಎಂದು ಕಂಡರೂ, ಅದರ ಆಳದಲ್ಲಿ ಕಾಂಗ್ರೆಸ್ ಆಡಳಿತದ ಒಳಗಿನ ಬಿರುಕುಗಳನ್ನು ಬಳಸಿಕೊಳ್ಳುವ ಮತ್ತು ಹಳೆ ಮೈಸೂರು ಭಾಗದ ಒಕ್ಕಲಿಗ ರಾಜಕಾರಣದ ಹಿಡಿತವನ್ನು ಮರುಸ್ಥಾಪಿಸುವ ಸ್ಪಷ್ಟ ರಾಜಕೀಯ ಕಾರ್ಯತಂತ್ರ ಅಡಗಿದೆ.  ಇಲ್ಲಿ ರೈತ ಹಿತರಕ್ಷಣೆಯ ಜೊತೆಜೊತೆಗೇ ಬಂಡವಾಳಶಾಹಿ ಹಿತಾಸಕ್ತಿ ಹಾಗೂ ಜಾತಿ ಸಮೀಕರಣದ ದಾಳಗಳು ಏಕಕಾಲಕ್ಕೆ ಕೆಲಸ ಮಾಡುತ್ತಿರುವುದು ಗೋಚರಿಸುತ್ತದೆ.

ದೇವೇಗೌಡರು ಬಿಡದಿ ಯೋಜನೆಯನ್ನು ನೇರವಾಗಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಗಿಟ್ಟಿಸಿಕೊಂಡಿರುವುದು ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಬೇಕಾದ 'ಕಪ್ಪ'ಕ್ಕೆ ಲಿಂಕ್ ಮಾಡಿರುವುದು ಅತ್ಯಂತ ವ್ಯವಸ್ಥಿತ ರಾಜಕೀಯ ನಡೆ ಎಂದು ಕಾಣಿಸುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಹಗ್ಗಜಗ್ಗಾಟ ಜಗಜ್ಜಾಹೀರಾಗಿ ಹೇಗೋ ಅಧಿಕಾರ ಹಂಚಿಕೆ ಆಗಿದೆ. ಮುಖ್ಯಮಂತ್ರಿಯನ್ನಾಗಿ ಮಾಡಲು "ಹೈಕಮಾಂಡ್ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಶಿವಕುಮಾರ್ ರೈತರ ಭೂಮಿಗೆ ಕೈ ಹಾಕಿದ್ದಾರೆ" ಎನ್ನುವ ಮೂಲಕ ಗೌಡರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಲು ಯತ್ನಿಸಿದ್ದಾರೆ.

ಸಿದ್ದರಾಮಯ್ಯ ಅವರ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಮತಬ್ಯಾಂಕ್ ಮತ್ತು ಡಿ.ಕೆ. ಶಿವಕುಮಾರ್ ಅವರ ಒಕ್ಕಲಿಗ ನಾಯಕತ್ವದ ನಡುವೆ ಈಗಾಗಲೇ ಇರುವ ಕಂದಕವನ್ನು ಇದು ಮತ್ತಷ್ಟು ದೊಡ್ಡದು ಮಾಡುತ್ತದೆ. ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯನ್ನು ಅವೆಲ್ಲಾ ಹೇಗೋ ಆಗಿ ಮುಗಿದ ಬಳಿಕವೂ ಜೀವಂತವಾಗಿಡುವ ಮೂಲಕ ಸರ್ಕಾರದಲ್ಲಿ ಅಸ್ಥಿರತೆಯ ಭಾವನೆ ಸೃಷ್ಟಿಸುವುದು ಇದರ ಉದ್ದೇಶ ಎಂದು ಕಾಣಿಸುತ್ತಿದೆ.

ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಗೆ ಮತ್ತು ರಿಯಲ್ ಎಸ್ಟೇಟ್ ದಂಧೆಗೆ ಸರ್ಕಾರ ಭೂಮಿ ನೀಡುತ್ತಿದೆ ಎಂಬ ಆರೋಪಕ್ಕೆ ರಾಜಕೀಯ ಬಣ್ಣ ಬಳಿಯುವ ಮೂಲಕ, ಕಾಂಗ್ರೆಸ್ ಸರ್ಕಾರವನ್ನು 'ರೈತ ವಿರೋಧಿ' ಹಾಗೂ 'ಭ್ರಷ್ಟ' ಎಂದು ಬಿಂಬಿಸುವುದು ಜೆಡಿಎಸ್-ಬಿಜೆಪಿ ಮೈತ್ರಿಯ ಸದ್ಯದ ಅಜೆಂಡಾ ಆಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ‌.

ಆದರೆ, ಇಲ್ಲಿರುವ ರಾಜಕೀಯ ದುರುದ್ದೇಶವೇನೆಂದರೆ, ಯೋಜನೆ ಜಾರಿಗೆ ತರುತ್ತಿರುವುದು ಇಡೀ ಸಚಿವ ಸಂಪುಟ ಮತ್ತು ಸರ್ಕಾರ ಒಟ್ಟಾಗಿ. ಆದರೆ ದೇವೇಗೌಡರು ಗುರಿ ಮಾಡುತ್ತಿರುವುದು ಕೇವಲ ಡಿ.ಕೆ. ಶಿವಕುಮಾರ್ ಅವರನ್ನು ಮಾತ್ರ. ಇದು ಕೇವಲ ರೈತಪರ ಕಾಳಜಿಯಾಗಿದ್ದರೆ ಇಡೀ ಸರ್ಕಾರದ ನೀತಿಯನ್ನು ಪ್ರಶ್ನಿಸಬೇಕಿತ್ತೇ ಹೊರತು, ವ್ಯಕ್ತಿಗತ ರಾಜಕೀಯ ಆಮಿಷಗಳ ಆರೋಪಕ್ಕೆ ಸೀಮಿತವಾಗುತ್ತಿರಲಿಲ್ಲ.

ಹಳೆ ಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯದ ಕಸರತ್ತು ಇದೆ ಹಿಂದೆ ಅಡಗಿದೆಯಾ ? ಗಮನಿಸುತ್ತಾ ಹೋಗೋಣ, ಈ ಇಡೀ ಸಂಘರ್ಷದ ಅತಿ ದೊಡ್ಡ ಆಯಾಮವಿರುವುದು ಹಳೆ ಮೈಸೂರು ಭಾಗದ ಒಕ್ಕಲಿಗ ನಾಯಕತ್ವದ ಮೇಲಿನ ಹತೋಟಿಯಲ್ಲಿ. ಜೆಡಿಎಸ್ ಅಸ್ತಿತ್ವದ ಪ್ರಶ್ನೆಯೂ ಅಡಗಿದೆ. ಸಾಂಪ್ರದಾಯಿಕವಾಗಿ ಹಳೆ ಮೈಸೂರು ಭಾಗ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ವಿಶೇಷವಾಗಿ ಡಿ.ಕೆ. ಶಿವಕುಮಾರ್ ಅವರ ಒಕ್ಕಲಿಗ ಮುಖದ ನಾಯಕತ್ವದಿಂದಾಗಿ, ಈ ಭಾಗದಲ್ಲಿ ಜೆಡಿಎಸ್ ದೊಡ್ಡ ಹಿನ್ನಡೆ ಅನುಭವಿಸಿತು. ಕಳೆದುಹೋದ ಈ ರಾಜಕೀಯ ನೆಲೆಯನ್ನು ಮರಳಿ ಪಡೆಯಲು ಜೆಡಿಎಸ್‌ಗೆ ಈಗ ಬಲವಾದ ಅಸ್ತ್ರ ಬೇಕಿದೆ. ಒಕ್ಕಲಿಗ ಸಮುದಾಯದ ಸರ್ವೋಚ್ಚ ನಾಯಕ ಯಾರು? ದೇವೇಗೌಡರ ಕುಟುಂಬವೋ ಅಥವಾ ಡಿ.ಕೆ. ಶಿವಕುಮಾರ್ ಅವರೋ? ಈ ಪ್ರಶ್ನೆಗೆ ಉತ್ತರಿಸುವ ಕಸರತ್ತು ಬಿಡದಿ ಹೋರಾಟದಲ್ಲಿ ಕಾಣುತ್ತಿದೆ. ಬಿಡದಿ ಮತ್ತು ರಾಮನಗರ ಭಾಗ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರ ಪ್ರಭಾವದ ವಲಯ. ಅದೇ ಕ್ಷೇತ್ರದಲ್ಲಿ ರೈತರನ್ನು ಸಂಘಟಿಸಿ ಡಿ.ಕೆ. ಸಹೋದರರನ್ನು 'ರೈತರ ಭೂಮಿ ಕಸಿಯುವವರು' ಎಂದು ಚಿತ್ರಿಸಿದರೆ, ಸಮುದಾಯದ ಒಲವು ಮತ್ತೆ ಗೌಡರ ಕುಟುಂಬದ ಕಡೆಗೆ ತಿರುಗುತ್ತದೆ ಎಂಬ ಲೆಕ್ಕಾಚಾರ ಇದೆ ಅಂತ ಕಾಣಿಸುತ್ತಿದೆ.

ಒಟ್ಟಿನಲ್ಲಿ, ಇಲ್ಲಿ ಎರಡೂ ಕಡೆಯ ನಾಯಕರ ನಡೆಗಳು ಜನಪರತೆಯಿಂದ ದೂರವಿವೆ. ಒಂದು ಕಡೆ, ಕಾಂಗ್ರೆಸ್ ಸರ್ಕಾರ 'ಸ್ಮಾರ್ಟ್ ಸಿಟಿ' ಮತ್ತು 'ಟೌನ್‌ಶಿಪ್' ಹೆಸರಿನಲ್ಲಿ ನವ-ಉದಾರವಾದಿ ನೀತಿಗಳನ್ನು ಜಾರಿಗೊಳಿಸುತ್ತಾ, ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಬಂಡವಾಳಶಾಹಿಗಳಿಗೆ ಮುಕ್ತಗೊಳಿಸಲು ಹೊರಟಿದೆ ಎಂಬ ಆರೋಪವಿದೆ. ಒಂದು ವೇಳೆ ಇದೇ ನಿಜವಾದರೇ ನಿಜಕ್ಕೂ ಖಂಡನೀಯ.

ಮತ್ತೊಂದು ಕಡೆ, ವಿರೋಧ ಪಕ್ಷದಲ್ಲಿರುವ ಜೆಡಿಎಸ್ ಮತ್ತು ದೇವೇಗೌಡರು, ಬಿಜೆಪಿ ಈ ನವ-ಉದಾರವಾದಿ ನೀತಿಗಳ ವಿರುದ್ಧ ಅಥವಾ ಭೂಸ್ವಾಧೀನ ಕಾಯ್ದೆಯ ಮೂಲ ಸ್ವರೂಪದ ರಕ್ಷಣೆಗಾಗಿ ಸೌದ್ಧಾಂತಿಕ ಹೋರಾಟ ಮಾಡುತ್ತಿಲ್ಲ. ಬದಲಿಗೆ, ರೈತರ ಆಕ್ರೋಶವನ್ನು ತಮಗೆ ಬೇಕಾದ ಹಾಗೆ ಬಳಸಿಕೊಂಡು, ತಮ್ಮ ಜಾತಿ ರಾಜಕಾರಣದ ನೆಲೆಗಟ್ಟನ್ನು ಗಟ್ಟಿಗೊಳಿಸಲು ಬಳಸಿಕೊಳ್ಳುತ್ತಿದ್ದಾರೆ.

ಹೀಗಾಗಿ, ಬಿಡದಿ ರೈತರ ಹೋರಾಟ ನ್ಯಾಯಸಮ್ಮತವಾಗಿದ್ದರೂ, ಅದರ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ದೇವೇಗೌಡರು,‌ಕುಮಾರಸ್ವಾಮಿ ಆಡುತ್ತಿರುವ ಆಟ ಮಾತ್ರ ಪಕ್ಕಾ ರಾಜಕೀಯ ದುರುದ್ದೇಶದಿಂದ ಕೂಡಿದ ಒಕ್ಕಲಿಗ ಪ್ರಾಬಲ್ಯದ ಕಸರತ್ತೇ ಆಗಿದೆ ಎಂಬಂತೆ ಸ್ಪಷ್ಟವಾಗಿ ಕಾಣಿಸುತ್ತಿದೆ.

ರಾಜ್ಯ ರಾಜಕಾರಣದ ಈ ಚದುರಂಗದಾಟದಲ್ಲಿ ಕೃಷಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತ ಕೇವಲ ದಾಳವಾಗುತ್ತಿದ್ದಾನೆಯೇ ವಿನಃ, ಎರಡೂ ಕಡೆಯ ನಾಯಕರಿಗೆ ರೈತನ ನಿಜವಾದ ಆರ್ಥಿಕ ಭದ್ರತೆಯ ಬಗ್ಗೆ ಪ್ರಾಮಾಣಿಕ ಕಾಳಜಿ ಇದ್ದಂತೆ ಕಾಣುತ್ತಿಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ. 


- ಶ್ರೀರಾಜ್‌ ವಕ್ವಾಡಿ 

Tuesday, July 14, 2026

ಬೊಕ್ಕಸದ ಬಿಕ್ಕಟ್ಟು : ಬರ ಘೋಷಣೆ ಮಾಡಲು ವಿಳಂಬ ಯಾಕೆ!?

 

ರಾಜ್ಯದಲ್ಲಿ ಮುಂಗಾರು ಕೈಕೊಟ್ಟು, ಭೀಕರ ಬರಗಾಲದ ಸ್ಪಷ್ಟ ಛಾಯೆ ಕಾಣಿಸುತ್ತಿದ್ದರೂ ರಾಜ್ಯ ಸರ್ಕಾರ ಅಧಿಕೃತವಾಗಿ ಬರ ಘೋಷಣೆ ಮಾಡಲು ಹಿಂಜರಿಯುತ್ತಿರುವುದು ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿಯವರಿಗೆ ಪತ್ರ ಬರೆದು ಕೇಂದ್ರ ಅಧ್ಯಯನ ತಂಡವನ್ನು ಕಳುಹಿಸುವಂತೆ ಕೋರಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 ರಾಜ್ಯದ ಮಲೆನಾಡು, ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ರಾಜ್ಯದ 31 ಜಿಲ್ಲೆಗಳಲ್ಲಿ 18 ಜಿಲ್ಲೆಗಳು ಅಂದರೆ ಸುಮಾರು 141 ತಾಲ್ಲೂಕುಗಳು ತೀವ್ರ ಮಳೆ ಕೊರತೆ ಎದುರಿಸುತ್ತಿವೆ. ಪ್ರದೇಶಗಳಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಸಾಮಾನ್ಯಕ್ಕಿಂತ ಸುಮಾರು ಶೇಕಡಾ 34 ರಷ್ಟು ಮಳೆ ಕೊರತೆಯಾಗಿದೆ. ಉತ್ತರ ಒಳನಾಡು ಪ್ರದೇಶಗಳಾದ ಬೀದರ್, ರಾಯಚೂರು, ವಿಜಯಪುರ, ಕಲಬುರಗಿ ಪ್ರದೇಶಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಳೆ ಕೊರತೆಯಾಗಿದೆ. ದಕ್ಷಿಣ ಒಳನಾಡು ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗಗಳಲ್ಲಿಯೂ ಮಳೆ ಇಲ್ಲವೇ ಇಲ್ಲ. ಕರಾವಳಿ ಪ್ರದೇಶಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 30 ರಷ್ಟು ಮಳೆ ಕೊರತೆಯಾಗಿದೆ. ಬಿಜೆಪಿ ನಾಯಕರು ರಾಜ್ಯ ಸರ್ಕಾರಕ್ಕೆ ಬರ ಘೋಷಣೆ ಮಾಡುವಂತೆ ಒತ್ತಾಯಿಸುತ್ತಿವೆ.

ರಾಜ್ಯ ಸರ್ಕಾರಗಳು ಬರ ಘೋಷಣೆ ಮಾಡಲು ಇಂದಿಗೂ ಕೇಂದ್ರ ಸರ್ಕಾರ ರೂಪಿಸಿರುವ ಕಠಿಣ ಮತ್ತು ಅವೈಜ್ಞಾನಿಕಬರ ಕೈಪಿಡಿಅವಲಂಬಿಸಬೇಕಾಗಿದೆ. ಕೇಂದ್ರ ಸರ್ಕಾರದ ಹೊಸ ಬರ ಕೈಪಿಡಿಯ ಪ್ರಕಾರ, ಕೇವಲ ಮಳೆ ಕೊರತೆಯ ಆಧಾರದ ಮೇಲೆ ಬರ ಘೋಷಿಸುವಂತಿಲ್ಲ. ಮಳೆ ಕೊರತೆಯ ಜೊತೆಗೆ ಉಪಗ್ರಹ ಆಧಾರಿತ ಬೆಳೆ ಚಿತ್ರಣ, ತೇವಾಂಶದ ಕೊರತೆ, ಮತ್ತು ಅಂತರ್ಜಲ ಮಟ್ಟವನ್ನು ಪರಿಶೀಲಿಸಬೇಕಾಗುತ್ತದೆ. ನಿಯಮಗಳ ಪ್ರಕಾರ ಜೂನ್ ಮತ್ತು ಜುಲೈ ತಿಂಗಳ ಮಳೆ ಕೊರತೆ, ಬಿತ್ತನೆ ಪ್ರಮಾಣ ಹಾಗೂ ತೇವಾಂಶದ ಕೊರತೆಯನ್ನು ಸುದೀರ್ಘಾವಧಿಗೆ ಮೌಲ್ಯೀಕರಿಸಿದ ನಂತರವಷ್ಟೇ ಅಧಿಕೃತ ಬರ ಘೋಷಣೆ ಸಾಧ್ಯವಾಗುತ್ತದೆ. ಕಾನೂನು, ನಿಯಮಗಳ ಚೌಕಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ನಡೆದುಕೊಳ್ಳುತ್ತಿದೆಯೇನೋ ಸರಿ, ಆದರೇ ತಾನು ಮಾಡಬೇಕಿರುವುದನ್ನು ಮರೆತಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಬರ ಘೋಷಣೆ ಮಾಡುವುದಕ್ಕೆ ತಾಂತ್ರಿಕ ವಿಳಂಬ ಕೇವಲ ನಿಯಮಗಳ ಆಟವಲ್ಲ; ಬದಲಿಗೆ ತಕ್ಷಣದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಆಡಳಿತ ಶಾಹಿಯ ತಂತ್ರವಾಗಿದೆ. ರಾಜ್ಯ ಸರ್ಕಾರವೇ ಸ್ವತಃ ಮುಂಚೂಣಿಗೆ ಬಂದು ತುರ್ತು ಬರ ಪರಿಸ್ಥಿತಿ ಘೋಷಿಸಿದರೆ, ತಕ್ಷಣವೇ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾದ ನೈತಿಕ ಮತ್ತು ಆರ್ಥಿಕ ಜವಾಬ್ದಾರಿ ಅದರ ಹೆಗಲಿಗೇರುತ್ತದೆ. ಇದನ್ನು ತಪ್ಪಿಸಲು ಮತ್ತು ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಕೇಂದ್ರದ ಮೇಲೆ ತಳ್ಳಲು ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ.

ರಾಜ್ಯದ ಬೊಕ್ಕಸದಲ್ಲಿ ಬರ ಪರಿಹಾರ ನೀಡಲು ಹಣವಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ಆಡಳಿತದ ಆದ್ಯತೆಗಳಲ್ಲಿದೆ. ಪ್ರಸ್ತುತ ಸರ್ಕಾರವು ಜನಪ್ರಿಯ ಗ್ಯಾರಂಟಿ ಯೋಜನೆಗಳಿಗೆ ದೊಡ್ಡ ಮಟ್ಟದ ಬಜೆಟ್ ಮೀಸಲಿಟ್ಟಿರುವುದು ನಿಜವಾದರೂ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಉತ್ಪಾದನಾ ವಲಯಗಳಿಗೆ ಸಿಗಬೇಕಾದ ಸಾಂಸ್ಥಿಕ ಬಲ ಕುಸಿದಿದೆ. ಬಂಡವಾಳಶಾಹಿ ಆರ್ಥಿಕ ಮಾದರಿಯು ಕೇವಲ ಮತಬ್ಯಾಂಕ್ ರಾಜಕಾರಣದ ತುರ್ತು ಯೋಜನೆಗಳಿಗೆ ಒತ್ತು ನೀಡುತ್ತದೆಯೇ ಹೊರತು, ಇಂತಹ ನೈಸರ್ಗಿಕ ವಿಕೋಪಗಳ ಎದುರು ಶ್ರಮಿಕ ವರ್ಗಕ್ಕೆ ಭದ್ರತೆ ನೀಡುವತುರ್ತು ನಿಧಿಯನ್ನು ಕ್ರೋಡೀಕರಿಸಲು ವಿಫಲವಾಗಿದೆ. ರಾಜ್ಯದ ಬೊಕ್ಕಸದ ಆರ್ಥಿಕ ನಿರ್ವಹಣೆಯು ದೂರದೃಷ್ಟಿಯ ಕೊರತೆಯಿಂದ ಕೂಡಿದ್ದು, ಬಿಕ್ಕಟ್ಟಿನ ಸಮಯದಲ್ಲಿ ಕಾರ್ಪೊರೇಟ್ ತೆರಿಗೆಗಳ ಮೇಲಾಗಲಿ ಅಥವಾ ಬದಲಿ ಸಂಪನ್ಮೂಲ ಕ್ರೋಡೀಕರಣದ ಮೇಲಾಗಲಿ ಸರ್ಕಾರ ಗಮನ ಹರಿಸುತ್ತಿಲ್ಲ ಎನ್ನುವುದು ಸ್ಪಷ್ಟವಾಯ್ತಲ್ವೆ !?

ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆದಿರುವುದರ ಹಿಂದೆ ಒಕ್ಕೂಟ ವ್ಯವಸ್ಥೆಯೊಳಗಿನ ರಾಜಕೀಯ ಮೇಲಾಟವೂ ಇದೆ. ಕಳೆದೆರಡು ವರ್ಷಗಳ ಇತಿಹಾಸವನ್ನು ಗಮನಿಸಿದರೆ, ಎನ್.ಡಿ.ಆರ್.ಎಫ್ (NDRF) ಅಡಿಯಲ್ಲಿ ಕರ್ನಾಟಕಕ್ಕೆ ಸಿಗಬೇಕಾದ ಬರ ಪರಿಹಾರದ ನ್ಯಾಯಸಮ್ಮತ ಪಾಲನ್ನು ಪಡೆಯಲು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ಬಂದಿತ್ತು. ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ತಕ್ಷಣವೇ ಅನುದಾನ ಬಿಡುಗಡೆ ಮಾಡದೆ ಸತಾಯಿಸುತ್ತದೆ ಎಂಬ ವಾಸ್ತವವನ್ನು ಮುಂದಿಟ್ಟುಕೊಂಡು, ರಾಜ್ಯ ಸರ್ಕಾರವು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದೆ. ಕೇಂದ್ರ ಸರ್ಕಾರವು ರಾಜ್ಯಗಳ ತೆರಿಗೆ ಪಾಲನ್ನು ವಾಪಸ್ ನೀಡುವಲ್ಲಿ ತೋರುವ ತಾರತಮ್ಯ ನೀತಿಯು ಗ್ರಾಮೀಣ ಭಾಗದ ಕೃಷಿ ಕಾರ್ಮಿಕರನ್ನು ಮತ್ತು ಸಣ್ಣ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ.

ಬರಗಾಲ ಎದುರಾದಾಗ ಸರ್ಕಾರಗಳು ಕೇವಲ ಭೂಮಾಲೀಕ ರೈತರ ಬೆಳೆ ನಷ್ಟದ ಬಗ್ಗೆ ಮಾತನಾಡುತ್ತವೆಯೇ ಹೊರತು, ಕೃಷಿಯನ್ನೇ ನಂಬಿದ ಭೂ ರಹಿತ ದಲಿತ, ಹಿಂದುಳಿದ ಕೃಷಿ ಕಾರ್ಮಿಕರ ಮತ್ತು ವಲಸೆ ಕಾರ್ಮಿಕರ ಬದುಕಿನ ಬಗ್ಗೆ ಯೋಚಿಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ (MGNREGA) ಯೋಜನೆಗೆ ಹಣ ಬಿಡುಗಡೆಯಾಗುತ್ತಿಲ್ಲ, ಕೂಲಿ ಬಾಕಿ ಉಳಿದಿದೆ. ಬಗ್ಗೆಯೂ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸಿದಂತೆ ಕಾಣಿಸುತ್ತಿಲ್ಲ. ಕೇವಲ ಪತ್ರ ಬರೆಯುವುದನ್ನು ನಿಲ್ಲಿಸಿ, ತಕ್ಷಣವೇ ತನ್ನದೇ ಆದ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಹಾರ ಮಾರ್ಗ ಕಂಡುಕೊಳ್ಳುವುದು ಮತ್ತು ಸಾಲ ಮನ್ನಾದಂತಹ ಜನಪರ ಕ್ರಮಗಳಿಗೆ ಮುಂದಾಗಬೇಕಿದೆ. ಭರವಸೆಯನ್ನೇನೋ ಸಿಎಂ ಡಿಕೆಶಿ ಕೊಟ್ಟಿದ್ದಾರೆ ಸರಿ. ಅದು ಭರವಸೆ ಮಾತ್ರವಾಗಿ ಉಳಿಯಬಾರದು ಅಲ್ವಾ !?

ಒಟ್ಟಿನಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ರಾಜಕೀಯ ಹಗ್ಗಜಗ್ಗಾಟದಲ್ಲಿ ಬಲಿಯಾಗುತ್ತಿರುವುದು ಕೃಷಿ ನಂಬಿದ ಶ್ರಮಿಕ ವರ್ಗ. ರಾಜ್ಯ ಸರ್ಕಾರವು ಕೇಂದ್ರದ ನೆರವಿಗಾಗಿ ಕಾಯುವ ನೆಪದಲ್ಲಿ ಕಾಲಹರಣ ಮಾಡದೆ, ತಕ್ಷಣವೇ ರಾಜ್ಯಮಟ್ಟದಲ್ಲೇ ಬರ ಪರಿಸ್ಥಿತಿಯನ್ನು ಎದುರಿಸಲು ಸಮರೋಪಾದಿಯ ಯೋಜನೆಗಳನ್ನು ರೂಪಿಸಬೇಕಾಗಿದೆ. ಇಲ್ಲದಿದ್ದರೆ ಇದು ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ಆಡಳಿತ ನಡೆಸುವ ಪಕ್ಷಗಳ ಸಾಂಪ್ರದಾಯಿಕ ಜವಾಬ್ದಾರಿ ರಹಿತ ನಡವಳಿಕೆಯಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

- ಶ್ರೀರಾಜ್‌ ವಕ್ವಾಡಿ

Monday, July 13, 2026

ಬಿಡದಿ ಬಿಡಲ್ಲ! : ಸದ್ಯದಲ್ಲೇ ಕಾಂಗ್ರೆಸ್ ಗೂ ಪೊರಕೆ ಸೇವೆ!?



ಬಿಡದಿಯಲ್ಲಿ  ಉದ್ದೇಶಿತ ಸ್ಮಾರ್ಟ್ ಸಿಟಿ/ಟೌನ್‌ಶಿಪ್ ಯೋಜನೆಗಾಗಿ ಕೃಷಿ ಭೂಮಿ ಸಮೀಕ್ಷೆ ನಡೆಸಲು ಬಂದ ಅಧಿಕಾರಿಗಳಿಗೆ ಸ್ಥಳೀಯ ರೈತ ಮಹಿಳೆಯರು ಪೊರಕೆ ಹಿಡಿದು ಪ್ರತಿರೋಧ ಒಡ್ಡಿರುವ ಘಟನೆ, ಕೇವಲ ಒಂದು ಪ್ರಾದೇಶಿಕ ಕಾನೂನು ಸುವ್ಯವಸ್ಥೆಯ ಸಮಸ್ಯೆಯಲ್ಲ. ಇದು ಸದ್ಯದ ರಾಜ್ಯ ಕಾಂಗ್ರೆಸ್ ಸರ್ಕಾರದ ಕಾರ್ಪೊರೇಟ್ ಪರ ಒಲವು ಮತ್ತು ಪ್ರಭುತ್ವ ರಾಜಕಾರಣದ ದಮನಕಾರಿ ನೀತಿಗಳಿಗೆ ಹಿಡಿದ ಕನ್ನಡಿ ಎನ್ನುವುದರಲ್ಲಿ ಏನೂ ಅನುಮಾನವಿಲ್ಲ‌. 

ಚುನಾವಣಾ ಸಂದರ್ಭದಲ್ಲಿ ‘ಗ್ಯಾರಂಟಿ’ಗಳ ಮೂಲಕ ಶೋಷಿತರು, ರೈತರು ಮತ್ತು ಮಹಿಳೆಯರ ಪರ ಎಂದು ಬಿಂಬಿಸಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಅಧಿಕಾರ ಹಿಡಿದ ಬಳಿಕ ಜಾಗತಿಕ ಬಂಡವಾಳಶಾಹಿ ಮತ್ತು ರಿಯಲ್ ಎಸ್ಟೇಟ್ ಲಾಬಿಗೆ ಮಣಿಯುತ್ತಿರುವುದು ಇಲ್ಲಿ ಸ್ಪಷ್ಟ. ರೈತರ ಇಚ್ಛೆಗೆ ವಿರುದ್ಧವಾಗಿ, ಅವರ ಜೀವನೋಪಾಯವಾಗಿರುವ ಕೃಷಿ ಭೂಮಿಯನ್ನು ಕಿತ್ತುಕೊಂಡು ಟೌನ್‌ಶಿಪ್‌ಗಳನ್ನು ನಿರ್ಮಿಸಲು ಹೊರಟಿರುವುದು ಸರ್ಕಾರದ ಒಳಗಿರುವ ನವ-ಉದಾರೀಕರಣದ ಅಜೆಂಡಾವನ್ನು ಬಹಿರಂಗಪಡಿಸಿದೆ. ಭೂಮಿ ಎಂಬುದು ರೈತನಿಗೆ ಕೇವಲ ಆಸ್ತಿಯಲ್ಲ, ಅದು ಅವನ ಅಸ್ತಿತ್ವ ಮತ್ತು ಸ್ವಾಭಿಮಾನದ ಸಂಕೇತ. ಪ್ರಭುತ್ವವು ತನ್ನ ಪೊಲೀಸ್ ಬಲ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಬಳಸಿ ರೈತರ ಧ್ವನಿಯನ್ನು ಅಮುಕಲು ನೋಡಿದಾಗ, ಶ್ರಮಜೀವಿ ವರ್ಗವು ತನ್ನದೇ ಆದ ಶೈಲಿಯಲ್ಲಿ ಪ್ರತಿರೋಧ ಒಡ್ಡುತ್ತದೆ ಎಂಬುದಕ್ಕೆ ಈ ‘ಪೊರಕೆ ಏಟಿನ’ ಎಚ್ಚರಿಕೆ ಸಾಕ್ಷಿ. ಇದು ಪ್ರಭುತ್ವದ ದರ್ಪದ ವಿರುದ್ಧ ಕೆಳವರ್ಗದ ಜನರ ಆಕ್ರೋಶದ ಸ್ಫೋಟ.

ಯಾವುದೇ ಒಂದು ಬೃಹತ್ ಯೋಜನೆ ಜಾರಿಗೆ ಬರುವ ಮುನ್ನ ಅಲ್ಲಿನ ಸ್ಥಳೀಯ ಗ್ರಾಮ ಸಭೆಗಳ, ರೈತರ ಮುಕ್ತ ಸಮ್ಮತಿ ಪಡೆಯುವುದು ಪ್ರಜಾಪ್ರಭುತ್ವದ ಕನಿಷ್ಠ ಸೌಜನ್ಯ. ಆದರೆ, ಸರ್ಕಾರವು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಸರ್ವೇ ಕಾರ್ಯಕ್ಕೆ ಮುಂದಾಗಿರುವುದು ಅದರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಸಮಾಜವಾದಿ ಮತ್ತು ಜನಪರ ತತ್ವಗಳ ಮಾತಾಡುವ ನಾಯಕರು ಅಧಿಕಾರದಲ್ಲಿದ್ದೂ ಈ ರೀತಿಯ ಶೋಷಣೆ ನಡೆಯುತ್ತಿರುವುದು ದುರಂತ. 

ಬಿಡದಿಯ ರೈತ ಮಹಿಳೆಯರ ಈ ಪ್ರತಿಭಟನೆ ಕೇವಲ ಭೂಮಿ ಉಳಿಸಿಕೊಳ್ಳುವ ಹೋರಾಟವಲ್ಲ; ಇದು ಪ್ರಭುತ್ವ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ಅಪವಿತ್ರ ಮೈತ್ರಿಯ ವಿರುದ್ಧದ ಜನಸಾಮಾನ್ಯರ ದಂಗೆ. ರಾಜ್ಯ ಸರ್ಕಾರ ಈಗಲಾದರೂ ತನ್ನ ಪ್ರಭುತ್ವ ರಾಜಕಾರಣದ ಹಠಮಾರಿ ಧೋರಣೆಯನ್ನು ಬಿಟ್ಟು, ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಬೇಕಿದೆ. ಇಲ್ಲದಿದ್ದರೆ, ಈ ಪ್ರತಿರೋಧದ ಕಿಡಿ ಇಡೀ ರಾಜ್ಯದಾದ್ಯಂತ ವಿಸ್ತರಿಸುವುದರಲ್ಲಿ ಸಂಶಯವಿಲ್ಲ. 

ಗಮನಿಸಿ, ಅಧಿಕಾರಿಗಳು  ಸರ್ಕಾರದ ಆದೇಶವನ್ನು ಪಾಲಿಸುತ್ತಾರೆ. ಸರ್ವೇ ಮಾಡುವುದಕ್ಕೆ ಬಂದ ಅಧಿಕಾರಿಗಳ ಮೇಲೆ ರೈತ ಮಹಿಳೆಯರು ಪೊರಕೆ ಎತ್ತಿರುವುದು ಕೇವಲ ಅಲ್ಲಿಗೆ ಬಂದ ಅಧಿಕಾರಿಗಳ ಮೇಲಿನ ಸಿಟ್ಟಲ್ಲ, ಬದಲಿಗೆ ಆ ಅಧಿಕಾರಿಗಳನ್ನು ನಿಯಂತ್ರಿಸುವ, ಯೋಜನೆಗೆ ಹಸಿರು ನಿಶಾನೆ ತೋರಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಸಂಪುಟದ ಧೋರಣೆಯ ವಿರುದ್ಧದ ಆಕ್ರೋಶ. ಅಧಿಕಾರ ಕೇಂದ್ರದಿಂದ ಹೊರಬೀಳುವ ಬಲವಂತದ ತೀರ್ಮಾನಗಳಿಗೆ ಕೆಳಮಟ್ಟದಲ್ಲಿ ಜನಸಾಮಾನ್ಯರು ನೀಡಿದ ನೇರ ಪ್ರತ್ಯುತ್ತರ ಇದಾಗಿದೆ.

ಮುಖ್ಯಮಂತ್ರಿ ಡಿಕೆಶಿ ನೇತೃತ್ವದ ಸರ್ಕಾರ ನಗರೀಕರಣವನ್ನೇ ನೈಜ ಅಭಿವೃದ್ಧಿ ಎಂದು ನಂಬಿರುವುದು ಈ ಬಿಕ್ಕಟ್ಟಿಗೆ ಮೂಲ ಕಾರಣ. ಕೃಷಿ ಭೂಮಿಯನ್ನು ನಾಶಪಡಿಸಿ ನಿರ್ಮಿಸುವ ಟೌನ್‌ಶಿಪ್‌ಗಳು ಶ್ರೀಮಂತ ವರ್ಗದ ರಿಯಲ್ ಎಸ್ಟೇಟ್ ದಂಧೆಗೆ ಆಸರೆಯಾಗುತ್ತವೆಯೇ ಹೊರತು, ಅನ್ನ ಕೊಡುವ ರೈತನ ಬದುಕನ್ನು ಹಸನು ಮಾಡುವುದಿಲ್ಲ ಎಂಬ ಸತ್ಯವನ್ನು ಸರ್ಕಾರ ಗ್ರಹಿಸುತ್ತಿಲ್ಲ. ಪ್ರಭುತ್ವದ ಈ ಹಠಮಾರಿ ಧೋರಣೆಯೇ ಜನರ ದಂಗೆಗೆ ಪ್ರೇರಣೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಷ್ಟೆಲ್ಲಾ ವಿರೋಧ ವ್ಯಕ್ತವಾಗುತ್ತಿರುವಾಗ ರಾಜ್ಯ ಸರ್ಕಾರ ತನ್ನ ಪ್ರತಿಷ್ಠೆಯ ರಾಜಕಾರಣವನ್ನು ಬದಿಗಿಟ್ಟು, ಇನ್ನಾದರೂ ರೈತರ ಪರವಾಗಿ ನಿಲ್ಲಬೇಕಿದೆ. ಇಲ್ಲವಾದಲ್ಲಿ ಕಾಂಗ್ರೆಸ್ ಅವರೆ... ಪೊರಕೆ ಏಟಿನ ಪಾಠ ನಿಮಗೂ ಆಗುವುದರಲ್ಲಿ ಸಂಶಯವೇ ಇಲ್ಲ. 

-ಶ್ರೀರಾಜ್ ವಕ್ವಾಡಿ

ಅಕ್ರಮ ನುಸುಳುವಿಕೆಗೆ “ಇವರೇ” ಕಾರಣ!? ಗೃಹ ಇಲಾಖೆಯ ವೈಫಲ್ಯ ಮುಚ್ಚಿಡಲು ಕುತಂತ್ರ!?


ಭಾರತದ ರಾಜಕೀಯ ಭಾಷಣಗಳಲ್ಲಿ "ಬಾಂಗ್ಲಾ ವಲಸಿಗರು" ಎಂಬ ಪದ ಕೇವಲ ಗಡಿ ಬಿಕ್ಕಟ್ಟಿನ ವಿಷಯವಾಗಿ ಉಳಿದಿಲ್ಲ; ಅದೊಂದು ವ್ಯವಸ್ಥಿತ ರಾಜಕೀಯ ಧ್ರುವೀಕರಣದ ಮತ್ತು ಜನಸಾಮಾನ್ಯರನ್ನು ವಿಭಜಿಸುವ ಅಸ್ತ್ರವಾಗಿ ಮಾರ್ಪಟ್ಟಿದೆ. ಮಾನವೀಯ ಸಂವೇದನೆ ಹಾಗೂ ಸಾಂವಿಧಾನಿಕ ಚೌಕಟ್ಟಿನಿಂದ ದೂರ ಸರಿದು, ಕೇವಲ ಚುನಾವಣಾ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಈ ವಿಷಯವನ್ನು ಚರ್ಚಿಸುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕವಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ವಲಸೆ ಎಂಬುದು ಜಾಗತಿಕ ವಿದ್ಯಮಾನ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವಲಸೆಗೆ ಐತಿಹಾಸಿಕ, ಭೌಗೋಳಿಕ ಮತ್ತು ಆರ್ಥಿಕ ಕಾರಣಗಳಿವೆ. 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಲಕ್ಷಾಂತರ ನಿರಾಶ್ರಿತರು ಪ್ರಾಣಭಯದಿಂದ ಭಾರತಕ್ಕೆ ಬಂದರು. ಅಂದು ಭಾರತ ಮಾನವೀಯ ನೆಲೆಗಟ್ಟಿನಲ್ಲಿ ಅವರಿಗೆ ಆಶ್ರಯ ನೀಡಿತು. ಬಾಂಗ್ಲಾದೇಶದ ಭೀಕರ ಬಡತನ, ಉದ್ಯೋಗಾವಕಾಶಗಳ ಕೊರತೆ ಮತ್ತು ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಅಲ್ಲಿನ ಕೃಷಿಕರು ಹಾಗೂ ಬಡ ಕಾರ್ಮಿಕರು ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ. ಇವರಲ್ಲಿ ಬಹುತೇಕರು ದಿನಗೂಲಿ ನೌಕರರು ಮತ್ತು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.  ಇವರನ್ನು ಕೇವಲ "ಅಕ್ರಮ ನುಸುಳುಕೋರರು" ಎಂದು ಕ್ರಿಮಿನಲೈಸ್ ಮಾಡುವ ಬದಲು, ಜಾಗತಿಕ ವಲಸೆ ನೀತಿ ಹಾಗೂ ಮಾನವ ಹಕ್ಕುಗಳ ಚೌಕಟ್ಟಿನಲ್ಲಿ ನೋಡಬೇಕಾದ ಅಗತ್ಯವಿದೆ.

ಹಾಗಾದರೇ, ಅಕ್ರಮ ನುಸುಳುವಿಕೆಗೆ ಯಾರು ಹೊಣೆ? ಗಮನಿಸ್ತಾ ಹೋಗೋಣ, ಗಡಿ ದಾಟುವ ಪ್ರಕ್ರಿಯೆಗೆ ಕಾರಣಗಳೇನು ಎನ್ನುವುದನ್ನು ಕೂಡ ತಿಳಿಯುವುದಕ್ಕೆ ಪ್ರಯತ್ನಿಸೋಣ. ಭಾರತ-ಬಾಂಗ್ಲಾದೇಶ ಗಡಿಯು ನದಿಗಳು, ಕಡಿದಾದ ಬೆಟ್ಟಗಳು ಮತ್ತು ದಟ್ಟವಾದ ಕಾಡುಗಳಿಂದ ಕೂಡಿದ್ದು, ಸಂಪೂರ್ಣವಾಗಿ ಬೇಲಿ ಹಾಕುವುದು ಸವಾಲಿನ ಕೆಲಸವಾಗಿದೆ. ಇನ್ನು, ಇಡೀ ದಕ್ಷಿಣ ಏಷ್ಯಾದಲ್ಲಿ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಯಾವುದೇ ದ್ವಿಪಕ್ಷೀಯ ಒಪ್ಪಂದಗಳಿಲ್ಲದಿರುವುದು ಅನಧಿಕೃತ ಸಂಚಾರಕ್ಕೆ ದಾರಿ ಮಾಡಿಕೊಟ್ಟಿದೆ. ವಲಸೆಯನ್ನು ಶಾಶ್ವತವಾಗಿ ತಡೆಗಟ್ಟುವ ಬದಲು, ರಾಜಕೀಯ ಪಕ್ಷಗಳು ಇದನ್ನು ಪರಸ್ಪರ ಕೆಸರೆರಚಾಟಕ್ಕೆ ಮತ್ತು ಮತಗಳ ಧ್ರುವೀಕರಣಕ್ಕೆ ಬಳಸಿಕೊಳ್ಳುತ್ತಿವೆ.

ಕೇಂದ್ರ ಗೃಹ ಇಲಾಖೆಯ ಪಾತ್ರ ಮತ್ತು ವೈಫಲ್ಯಗಳೇನು ? ಭಾರತದ ಗಡಿ ಭದ್ರತೆ ಮತ್ತು ರಕ್ಷಣೆ ಸಂಪೂರ್ಣವಾಗಿ ಕೇಂದ್ರ ಗೃಹ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಗಡಿಯನ್ನು ಕಾಯುವ ಬಿ.ಎಸ್.ಎಫ್  ನೇರವಾಗಿ ಗೃಹ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಒಂದು ವೇಳೆ ಗಡಿ ದಾಟಿ ಯಾರಾದರೂ ಒಳಗೆ ಬಂದಿದ್ದರೆ, ಅದು ಗೃಹ ಇಲಾಖೆಯ ಗಡಿ ಕಾವಲು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಕೇಂದ್ರ ಸರ್ಕಾರ ಗಡಿ ರಕ್ಷಣೆಯಲ್ಲಿನ ತನ್ನದೇ ಲೋಪದೋಷಗಳನ್ನು ಮುಚ್ಚಿಡಲು, ರಾಜ್ಯ ಸರ್ಕಾರಗಳ ಮೇಲೆ ಗೂಬೆ ಕೂರಿಸುವ ರಾಜಕೀಯ ತಂತ್ರವನ್ನು ಅನುಸರಿಸುತ್ತಲೇ ಬಂದಿದೆ. ಈ ಹಿಂದೆ ಬಿಹಾರ, ಪಶ್ಚಿಮ ಬಂಗಾಳದಂತಹ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳ ಮೇಲೆ ಮತ್ತು ಈಗ ಕರ್ನಾಟಕದ ಮೇಲೂ ಅದೇ ಆರೋಪವಿದೆ. ಇನ್ನು, ಸಿಎಎ (CAA) ಮತ್ತು ಎನ್ ಆರ್‌ ಸಿ (NRC)ಯಂತಹ ಪ್ರಕ್ರಿಯೆಗಳ ಮೂಲಕ ವಲಸೆಯ ಹೆಸರಿನಲ್ಲಿ ದೇಶದ ಒಳಗಿರುವ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದಲಿತ, ಬಡ ಜನರಲ್ಲಿ ಅಭದ್ರತೆಯ ಭಾವನೆ ಮೂಡಿಸಲು ಗೃಹ ಇಲಾಖೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಬಲವಾದ ಆರೋಪಗಳು ಕೂಡ ಇವೆ. ಈಗ ಅದರ ಮುಂದುವರಿದ ಭಾಗ ಎನ್ನುವಂತೆ ಪೌರತ್ವ, ನಿವಾಸಿ ಪ್ರಮಾಣ ಪತ್ರ, ಇತ್ತೀಚೆಗೆ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆಯ ಸುತ್ತ ವಾದ ವಿವಾದಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. 

SIR ಉದ್ದೇಶ ಮತ್ತು ವಿಪರ್ಯಾಸವನ್ನು ನಾವು ಗಮನಿಸಬೇಕಿದೆ. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ನೆಪದಲ್ಲಿ ಜಾರಿಗೆ ತಂದಿರುವ ಈ ಪ್ರಕ್ರಿಯೆ, ವಾಸ್ತವದಲ್ಲಿ ನಿರ್ದಿಷ್ಟ ಸಮುದಾಯಗಳ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಳಕೆಯಾಗುತ್ತಿದೆ ಎಂಬ ಆತಂಕ ಸೃಷ್ಟಿಯಾಗಿದೆ. ಪಶ್ಚಿಮ ಬಂಗಾಳ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಲಕ್ಷಾಂತರ ಮತದಾರರನ್ನು ಸೂಕ್ತ ವಿಚಾರಣೆ ಇಲ್ಲದೆ ಪಟ್ಟಿಯಿಂದ ಕೈಬಿಡಲಾಗಿದೆ. ಈ 'SIR' ಪ್ರಕ್ರಿಯೆ ಮೂಲಕ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಲಾಗುತ್ತಿದೆ ಹಾಗೂ ಮತದಾರರ ಪಟ್ಟಿಯಿಂದ ಹೊರದಬ್ಬಲು ಪಾರದರ್ಶಕವಲ್ಲದ ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ಇತ್ತೀಚೆಗೆ ವಿಶ್ವಸಂಸ್ಥೆಯ ಹಕ್ಕುಗಳ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.  


ದೇಶದಿಂದ ಹೊರಹಾಕುವ ಅಥವಾ ಪೌರತ್ವವನ್ನು ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ. ಅದು ಕೇವಲ ಮತದಾರರ ಪಟ್ಟಿಯನ್ನು ನಿರ್ವಹಿಸುವ ಸಂಸ್ಥೆ. ಆದರೆ ಆಯೋಗ ತನ್ನ ಸಾಂವಿಧಾನಿಕ ತಟಸ್ಥತೆಯನ್ನು ಬದಿಗಿಟ್ಟು, ಆಡಳಿತ ಪಕ್ಷದ ರಾಜಕೀಯ ಅಜೆಂಡಾ ಜಾರಿಗೆ ತರಲು ನೆರವಾಗುತ್ತಿದೆ ಎಂಬ ಆರೋಪಗಳನ್ನು ಬಹಳ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಮಾಡುತ್ತಿವೆ. 

ಹಾಗಾದರೇ, ಅಕ್ರಮ ನುಸುಳುಕೋರರನ್ನೇ ಮತಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂದರೇ, ಆ ಅಕ್ರಮ ನುಸುಳುಕೋರರು ದೇಶದ ಒಳಗೆ ಬಾರದಂತೆ ತಡೆಗಟ್ಟುವ ಜವಾಬ್ದಾರಿ ಯಾರದ್ದು? ಕೇಂದ್ರ ಸರ್ಕಾರದ ಪ್ರಮುಖ ಜವಾಬ್ದಾರಿ ಏನು ? ಅಂತರರಾಷ್ಟ್ರೀಯ ಗಡಿಯನ್ನು ರಕ್ಷಿಸುವುದು ಮತ್ತು ದೇಶದ ಭದ್ರತೆಯನ್ನು ಕಾಯ್ದುಕೊಳ್ಳುವುದು ಸಂವಿಧಾನದ ಪ್ರಕಾರ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕರ್ತವ್ಯ ಮತ್ತು ಹೊಣೆ. ಸಹಕಾರ ಮತ್ತು ದ್ವಿಪಕ್ಷೀಯ ರಾಜತಾಂತ್ರಿಕತೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಸಿಕೊಳ್ಳಬೇಕಾಗಿರುವುದು ಕೇಂದ್ರದ ಜವಾಬ್ದಾರಿ. ಈಗಿನ ಸರ್ಕಾರ ಮಾತ್ರವಂತಲ್ಲ, ಈ ಹಿಂದಿನ ಕೇಂದ್ರ ಸರ್ಕಾರಗಳು ಉಭಯ ದೇಶಗಳ ನಡುವೆ ಸಹಕರಾ ಮತ್ತು ದ್ವಿಪಕ್ಷೀಯ ರಾಜತಾಂತ್ರಿಕತೆ ಮಾಡಿಲ್ಲ ಎನ್ನುವುದು ಕೂಡ ಈ ಸಮಸ್ಯೆಗೆ ಕಾರಣ ಎನ್ನುವುದು ಇಲ್ಲಿ ಮುಖ್ಯಾಂಶ. ಬಾಂಗ್ಲಾದೇಶ ಸರ್ಕಾರದೊಂದಿಗೆ ಸೌಹಾರ್ದಯುತ ಮಾತುಕತೆಯ ನಡೆಸಿ, ಕೆಲಸಕ್ಕಾಗಿ ಬರುವ ವಲಸಿಗರಿಗೆ ತಾತ್ಕಾಲಿಕ 'ವರ್ಕ್ ಪರ್ಮಿಟ್' ನೀಡುವಂತಹ ಪ್ರಾಯೋಗಿಕ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು.

ಮಾನವೀಯ ನೆಲೆಗಟ್ಟಿನ ಪರಿಹಾರವನ್ನಾದರೂ ಮಾಡಿಕೊಳ್ಳಬಹುದು. ದೇಶದ ಒಳಗಿರುವ ಬಡ ಕಾರ್ಮಿಕರನ್ನು ಶಂಕಿತ ಬಾಂಗ್ಲಾದೇಶೀಯರೆಂದು ಬಿಂಬಿಸಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ನಿಜವಾದ ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಸೂಕ್ತ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸಬೇಕೇ ಹೊರತು ಚುನಾವಣಾ ಆಯೋಗವನ್ನು ಬಳಸಿಕೊಂಡು ಪ್ರಜಾಪ್ರಭುತ್ವದ ಮೂಲ ಹಕ್ಕಾದ ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು.

ಗಡಿ ಕಾಯುವಲ್ಲಿ ಮತ್ತು ಅಕ್ರಮ ವಲಸೆಯನ್ನು ತಡೆಗಟ್ಟುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಆದರೆ, ಕೇಂದ್ರ ಸಚಿವರುಗಳು ತಮ್ಮ ಭಾಷಣಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು "ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧದ ಕಾರ್ಯಾಚರಣೆ" ಎಂದು ಬಿಂಬಿಸುತ್ತಿದ್ದಾರೆ. ಸ್ವಾಯತ್ತ ಸಂಸ್ಥೆಯಾಗಬೇಕಿದ್ದ ಚುನಾವಣಾ ಆಯೋಗವು ಆಡಳಿತ ಪಕ್ಷದ ರಾಜಕೀಯ ಅಜೆಂಡಾಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ರೀತಿಯ ರಾಜಕೀಯ ಪ್ರಚಾರಗಳು ಮತ್ತು ಗಡಿ ಭಾಗದಲ್ಲಿ ಸೃಷ್ಟಿಸಲಾಗಿರುವ ಭೀತಿಯ ವಾತಾವರಣವು ನೆರೆಯ ಬಾಂಗ್ಲಾದೇಶದೊಂದಿಗಿನ ಭಾರತದ ರಾಜತಾಂತ್ರಿಕ ಸಂಬಂಧಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

ಒಟ್ಟಿನಲ್ಲಿ, ವಲಸೆ ಬಿಕ್ಕಟ್ಟನ್ನು ಧರ್ಮದ ಕನ್ನಡಕದಿಂದ ನೋಡದೆ, ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಬೇಕಿದೆ. ಗಡಿ ಭದ್ರತೆಯಲ್ಲಿನ ವೈಫಲ್ಯಕ್ಕೆ ಕೇಂದ್ರ ಸರ್ಕಾರ ಉತ್ತರದಾಯಿಯಾಗಬೇಕೇ ಹೊರತು, ಮತದಾರರ ಪಟ್ಟಿಯ ಪರಿಷ್ಕರಣೆ ಎಂಬ ಆಡಳಿತಾತ್ಮಕ ಪ್ರಕ್ರಿಯೆಯನ್ನು ಬಳಸಿಕೊಂಡು ದೇಶದ ಶೋಷಿತ ವರ್ಗಗಳ ಹಕ್ಕುಗಳ ಹರಣ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎನಿಸಿಕೊಳ್ಳುತ್ತದೆ.

- ಶ್ರೀರಾಜ್‌ ವಕ್ವಾಡಿ 

Sunday, July 12, 2026

ಮೈತ್ರಿ ಒಳಗೊಳಗೇ ಕಮಲ ಪಾಳಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ JDS



ಕರ್ನಾಟಕದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೇಲ್ನೋಟಕ್ಕೆ ಕಾಣುವ ಬಿಜೆಪಿ-ಜೆಡಿಎಸ್ ದೋಸ್ತಿ ಕೇವಲ ಅಧಿಕಾರ ಹಿಡಿಯುವ ತಾತ್ಕಾಲಿಕ ತಂತ್ರವೇ ಹೊರತು ದೀರ್ಘಕಾಲದ ಸಿದ್ಧಾಂತವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಳೇ ಮೈಸೂರು ಭಾಗದಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಬಿಜೆಪಿ ಸದ್ಯಕ್ಕೆ ಪ್ರಾದೇಶಿಕ ಪಕ್ಷದ ಹೆಗಲ ಮೇಲೆ ಕೈಹಾಕಿದೆಯಾದರೂ, ಈ ಮೈತ್ರಿ ಒಳಗೊಳಗೇ ಕಮಲ ಪಾಳಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.


ಒಂದು ಕಾಲದಲ್ಲಿ "ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ಹೋಗುತ್ತೇನೆ" ಎಂದು ಬಹಿರಂಗವಾಗಿ ಗುಡುಗಿದ್ದ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ಇಂದು ಅದೇ ಮೋದಿಯವರ ಶರಣು ಹೋಗಿರುವುದು ಪ್ರಾದೇಶಿಕ ಪಕ್ಷ ಎದುರಿಸುತ್ತಿರುವ ಅಸ್ತಿತ್ವದ ಸಂಕಟಕ್ಕೆ ಹಿಡಿದ ಕನ್ನಡಿ. ಮಾತ್ರವಲ್ಲದೇ, ಆರ್ ಎಸ್ ಎಸ್ ಬಗ್ಗೆಯೂ ಇದೇ ದೇವೇಗೌಡರು, ಕುಮಾರಸ್ವಾಮಿ ಬಾಯಿಗೆ ಬಂದ ಹಾಗೆ ಮಾತಾಡಿದ್ದರು. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಮತ್ತು ಆರ್ ಎಸ್ ಎಸ್ ಈ ಎಲ್ಲ ಹಳೇ ಹೇಳಿಕೆಗಳನ್ನು ಮರೆತಿಲ್ಲ. ದೇವೇಗೌಡರ ಕುಟುಂಬ ರಾಜಕಾರಣಕ್ಕೆ ರಾಜತಾಂತ್ರಿಕವಾಗಿಯೇ ಪಾಠ ಕಲಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ. 

ರಾಜ್ಯ ರಾಜಕಾರಣದ ಇತ್ತೀಚಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜೆಡಿಎಸ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ತಂತ್ರಗಳಿಗೆ ಬಿಜೆಪಿ ಒಳಗೊಳಗೇ ಪ್ರತಿ-ತಂತ್ರಗಳನ್ನು ಹೆಣೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೇಲ್ನೋಟಕ್ಕೆ ಮೈತ್ರಿ ಗಟ್ಟಿಯಾಗಿದೆ ಎಂದು ಬಿಂಬಿಸಲಾಗುತ್ತಿದ್ದರೂ, ತೆರೆಮರೆಯಲ್ಲಿ ಕಮಲ ಪಾಳಯವು ಕುಮಾರಣ್ಣನ ರಾಜಕೀಯ ಆಟಕ್ಕೆ ಸೂಕ್ತ ಪಾಠ ಕಲಿಸಲು ಮತ್ತು ಅವರ ಪ್ರಭಾವವನ್ನು ನಿಯಂತ್ರಿಸಲು ವ್ಯವಸ್ಥಿತ ಕಾರ್ಯತಂತ್ರ ರೂಪಿಸುತ್ತಿದೆ.

ಜೆಡಿಎಸ್‌ನ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದಲ್ಲಿ ಅಂದರೇ, ಮಂಡ್ಯ, ಹಾಸನ, ಮೈಸೂರು, ತುಮಕೂರು ಭಾಗಗಳಲ್ಲಿ ತಾನು ಸ್ವತಂತ್ರವಾಗಿ ಬೆಳೆಯಬೇಕೆಂಬುದು ಬಿಜೆಪಿಯ ದೀರ್ಘಕಾಲದ ಕನಸು. ಮೈತ್ರಿಯ ನೆಪದಲ್ಲಿ ಜೆಡಿಎಸ್‌ಗೆ ಸಂಪೂರ್ಣ ಕ್ಷೇತ್ರ ಬಿಟ್ಟುಕೊಟ್ಟರೆ ತನ್ನ ಅಸ್ತಿತ್ವಕ್ಕೇ ಧಕ್ಕೆ ಬರುತ್ತದೆ ಎಂಬುದನ್ನು ಅರಿತಿರುವ ಬಿಜೆಪಿ, ಈಗ ಆ ಭಾಗದ ತನ್ನದೇ ಆದ ಸ್ಥಳೀಯ ನಾಯಕರನ್ನು ಹುಟ್ಟುಹಾಕಲು ಮತ್ತು ಸಂಘಟನೆಯನ್ನು ಬಲಪಡಿಸಲು ಮುಂದಾಗಿದೆ. ಇದು ಕುಮಾರಸ್ವಾಮಿ ಅವರ ಪ್ರಾದೇಶಿಕ ಹಿಡಿತ ಸಡಿಲಗೊಳಿಸುವ ಮೊದಲ ಹೆಜ್ಜೆ.

ಇನ್ನು, ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬಹುಮತ ಪಡೆದರೂ, ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ಸುತಾರಾಂ ಸಿದ್ಧವಿಲ್ಲ. ಈ ಹಿಂದೆ 20-20 ತಿಂಗಳ ಅಧಿಕಾರ ಹಂಚಿಕೆಯ ಸೂತ್ರದಲ್ಲಿ ಬಿಜೆಪಿಗೆ ಕೈಕೊಟ್ಟ ಇತಿಹಾಸ ಕುಮಾರಸ್ವಾಮಿ ಅವರಿಗಿದೆ. ಇಂತಹ ನಂಬಿಕಸ್ಥರಲ್ಲದ ಪ್ರಾದೇಶಿಕ ನಾಯಕರ ಹೆಗಲ ಮೇಲೆ ಅಧಿಕಾರ ಕೂರಿಸಲು ಬಿಜೆಪಿ ಈ ಬಾರಿ ಸಿದ್ಧವಿಲ್ಲ. ಸ್ವಂತ ಬಲದ ಮೇಲೆ ದಕ್ಷಿಣ ಭಾರತದಲ್ಲಿ ಹೆಜ್ಜೆ ಗುರುತು ಮೂಡಿಸಬೇಕೆಂಬ ಹಂಬಲದಲ್ಲಿರುವ ಬಿಜೆಪಿ, ಜೆಡಿಎಸ್‌ನ ಬಾಲಂಗೋಚಿಯಾಗಿ ಉಳಿಯಲು ಬಯಸುತ್ತಿಲ್ಲ. 

ರಾಜ್ಯದಲ್ಲಿ ಬಿಜೆಪಿಗೆ ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಮೈತ್ರಿಗಿಂತ ಏಕಾಂಗಿ ಸ್ಪರ್ಧೆಯೇ ದೀರ್ಘಾವಧಿಯಲ್ಲಿ ಲಾಭದಾಯಕ. ಜೆಡಿಎಸ್ ಜೊತೆ ಕೈಜೋಡಿಸುವುದರಿಂದ ಬಿಜೆಪಿಯ ಸಾಂಪ್ರದಾಯಿಕ ಮತದಾರರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಜೆಡಿಎಸ್‌ನ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದ ಬಿಜೆಪಿ, ಈಗ ಅವರದ್ದೇ ಕುಟುಂಬವನ್ನು ಬೆಂಬಲಿಸುವುದು ಪಕ್ಷದ ಸಿದ್ಧಾಂತಕ್ಕೆ ಹೊಡೆತ ನೀಡುತ್ತದೆ. 

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ಸ್ವತಂತ್ರ ನಾಯಕರು ಬೆಳೆಯಲು ಜೆಡಿಎಸ್ ಮೈತ್ರಿ ದೊಡ್ಡ ತಡೆಯಾಗಿದೆ. ಮೈತ್ರಿ ಧರ್ಮದ ಹೆಸರಿನಲ್ಲಿ ಜೆಡಿಎಸ್‌ಗೆ ಕ್ಷೇತ್ರಗಳನ್ನು ಬಿಟ್ಟುಕೊಡುವುದರಿಂದ ಆ ಭಾಗದಲ್ಲಿ ಕಮಲ ಪಾಳಯದ ಸ್ಥಳೀಯ ಸಂಘಟನೆ ಸಂಪೂರ್ಣವಾಗಿ ಬಲಿಹೋಗುತ್ತದೆ. ಜಾತ್ಯತೀತ ತತ್ವದ ಮಾತನಾಡುತ್ತಾ ಅವಕಾಶವಾದಿ ರಾಜಕಾರಣ ಮಾಡುವ ಜೆಡಿಎಸ್‌ನೊಂದಿಗೆ ಸದಾ ಹೊಂದಾಣಿಕೆ ಮಾಡಿಕೊಳ್ಳುವುದು ಬಿಜೆಪಿಯ ರಾಷ್ಟ್ರೀಯ ಇಮೇಜ್‌ಗೆ ಧಕ್ಕೆ ತರುತ್ತದೆ. 

ದೇವೇಗೌಡರ ಕುಟುಂಬ ರಾಜಕಾರಣ ಮತ್ತು ಪ್ರಾದೇಶಿಕ ಅಸ್ತಿತ್ವದ ಉಳಿವಿಗಾಗಿ ಮೈತ್ರಿಯನ್ನು ದಾಳವಾಗಿ ಬಳಸಿಕೊಳ್ಳಲು ಜೆಡಿಎಸ್ ಯತ್ನಿಸುತ್ತಿದೆ. ಆದರೆ, ಪ್ರಾದೇಶಿಕ ಪಕ್ಷಗಳನ್ನು ಹಂತಹಂತವಾಗಿ ನುಂಗಿ ನೀರು ಕುಡಿಯುವ ಬಿಜೆಪಿಯ ರಾಷ್ಟ್ರೀಯ ಕಾರ್ಯತಂತ್ರದ ಮುಂದೆ ಜೆಡಿಎಸ್‌ನ ಆಟ ಬಹಳ ದಿನ ನಡೆಯುವುದಿಲ್ಲ. 2028ರ ವೇಳೆಗೆ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡು, ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ಹೆಜ್ಜೆ ಇಡುವುದು ಪಕ್ಷದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅನಿವಾರ್ಯ ಮತ್ತು ಒಳಿತು.

-ಶ್ರೀರಾಜ್ ವಕ್ವಾಡಿ

Saturday, July 11, 2026

ರಾಜ್ಯ ಕಾಂಗ್ರೆಸ್ : ಸೈದ್ಧಾಂತಿಕ ಬದ್ಧತೆ ವರ್ಸಸ್ ಪ್ರಾಯೋಗಿಕ ರಾಜಕಾರಣ!


ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯಕ್ಕೆ ಸಮಿತಿ ರಚನೆ. ಬಿ.ಕೆ ಹರಿಪ್ರಸಾದ್ ಮತ್ತು ಡಿ.ಕೆ ಶಿವಕುಮಾರ್ ನಡುವಿನ ಭಿನ್ನಮತ ಇರುವುದು ಜಗತ್ತಿಗೆ ತಿಳಿದಿರುವ ವಿಷಯ. ಇತ್ತೀಚೆಗೆ ಅರಮನೆ ಮೈದಾನದಲ್ಲಿ ನಡೆದಿರುವ ಕಾಂಗ್ರೆಸ್‌ ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ನ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರ ಮುಂದೆಯೇ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯಕ್ಕೆ ಸಮಿತಿ ರಚನೆ ಮತ್ತು ಅನುಷ್ಠಾನ ಸಮಿತಿ ರಚನೆ ಮಾಡಬೇಕು ಅಂತ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್‌ ಹೇಳಿದ್ರು. ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷದಿಂದ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ಸಮಿತಿಯೇ ಮುಖ್ಯವಾಗಬೇಕು ಎನ್ನುವ ಉದ್ದೇಶವೇ ? ಕ್ರೆಡಿಟ್ ವಾರ್ ತಪ್ಪಿಸಲು ಈ ತಂತ್ರ ಹೆಣೆದರೆ!?

ಡಿಕೆ ಮತ್ತು ಬಿಕೆ ನಡುವೆ ಶೀತನ ಸಮರ ಇರುವುದು ಜಗತ್ತಿಗೆ ಗೊತ್ತಿರುವ ವಿಷಯ. ಡಿಕೆಶಿ ಅವರ ಪ್ರಾಯೋಗಿಕ ರಾಜಕಾರಣ, ಹೀರೋಯಿಸಂ ಅವೆಲ್ಲಾ ಬಿ.ಕೆ ಹರಿಪ್ರಸಾದ್‌ ಅವರಿಗೆ ಹಿಡಿಸುವುದಿಲ್ಲ. ಸರ್ಕಾರ ಅಥವಾ ಪಕ್ಷದಿಂದ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ಈ ಸಮಿತಿಯೇ ಮುಖ್ಯವಾಗಿರಬೇಕು, ಯಾವೊಬ್ಬ ನಾಯಕನೂ ಕ್ರೆಡಿಟ್‌ ತೆಗೆದುಕೊಳ್ಳಬಾರದು ಎನ್ನುವುದು ಇದರ ಉದ್ದೇಶ ಎನ್ನುವುದು ಸ್ಪಷ್ಟ. 

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸರ್ಕಾರ ಮತ್ತು ಸಂಘಟನೆಯ ನಡುವೆ ಸಮನ್ವಯ ಸಾಧಿಸಲು ಸಮಿತಿಯೊಂದನ್ನು ರಚಿಸಿರುವುದು ಕೇವಲ ಆಡಳಿತಾತ್ಮಕ ತೀರ್ಮಾನವಲ್ಲ; ಇದು ಪಕ್ಷದ ಒಳಗಿನ ತೀವ್ರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ನಾಯಕತ್ವದ ಪೈಪೋಟಿಯನ್ನು ನಿಭಾಯಿಸಲು ಹೂಡಿರುವ ರಾಜಕೀಯ ತಂತ್ರಗಾರಿಕೆ. ವಿಶೇಷವಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಮತ್ತು ಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ಜಗಜ್ಜಾಹೀರಾಗಿರುವ ಹಿನ್ನೆಲೆಯಲ್ಲಿ, ಈ ಸಮಿತಿಯ ರಚನೆ ಹಲವು ರಾಜಕೀಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜನಪರ ಯೋಜನೆಗಳು ಮತ್ತು ಸರ್ಕಾರದ ಪ್ರಮುಖ ನೀತಿಗಳ ಯಶಸ್ಸಿನ ಹೆಗ್ಗಳಿಕೆಯನ್ನು ಅಥವಾ ಕ್ರೆಡಿಟ್ ಯಾರು ‌ತೆಗೆದುಕೊಳ್ಳಬೇಕು ಎಂಬುದರ ಸುತ್ತಲೇ ಸದ್ಯದ ಆಂತರಿಕ ರಾಜಕೀಯ ಸುತ್ತುತ್ತಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಮತ್ತು ಕಾಂಗ್ರೆಸ್‌ ಪಕ್ಷದ ಪ್ರಭಾವಿಯಾಗಿ ಇಡೀ ಆಡಳಿತದ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದ್ದರೆ, ಬಿ.ಕೆ. ಹರಿಪ್ರಸಾದ್ ಅವರಂತಹ ಸೈದ್ಧಾಂತಿಕ ನಿಷ್ಠಾವಂತರು ಇದನ್ನು ‘ವ್ಯಕ್ತಿ ಕೇಂದ್ರಿತ’ ರಾಜಕಾರಣ ಎಂದು ಭಾವಿಸ್ತಾರೆ. 

ಈ ಸಮಿತಿಯ ಮುಖ್ಯ ಉದ್ದೇಶವೇ ಯಾವುದೇ ಒಂದು ಬಣ ಅಥವಾ ವ್ಯಕ್ತಿ ಸರ್ಕಾರದ ಸಾಧನೆಗಳ ಸಂಪೂರ್ಣ ಮೈಲೇಜ್ ಪಡೆಯುವುದನ್ನು ತಡೆಯುವುದು. ಪಕ್ಷ ಮತ್ತು ಸರ್ಕಾರದ ತೀರ್ಮಾನಗಳಿಗೆ ಜಂಟಿ ಹೊಣೆಗಾರಿಕೆ ತರುವ ಮೂಲಕ, ‘ಕ್ರೆಡಿಟ್ ವಾರ್’ ಅನ್ನು ತಣ್ಣಗಾಗಿಸಲು ರೂಪಿಸಿರುವ ಪಕ್ಕಾ ತಂತ್ರದ ಭಾಗದಂತಿದೆ. ಬಿ.ಕೆ ಹರಿಪ್ರಸಾದ್‌ ಕೂಡ ಈ ಸಮಿತಿಯ ಬಗ್ಗೆ ಉಲ್ಲೇಖಿಸಿದ್ದರು, ಬಿ.ಕೆ ಕೂಡ ಉಲ್ಲೇಖಿಸಿದ್ದಾರೆ. ಇದು, ಕ್ರೆಡಿಟ್‌ ಇಬ್ಬರಿಗೂ ಬೇಡ, ಸಮಿತಿಗೆ ಹೋಗಲಿ ಎಂಬ ಉದ್ದೇಶ ಅಂತ ಕಾಣಿಸ್ತಿದೆ.  

ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ತೆಗೆದುಕೊಳ್ಳುವ ಪ್ರತಿಯೊಂದು ಪ್ರಮುಖ ನಿರ್ಧಾರಕ್ಕೂ ಈ ಸಮಿತಿಯೇ ದಿಕ್ಸೂಚಿಯಾಗಬೇಕು ಎನ್ನುವ ಒತ್ತಾಯದ ಹಿಂದೆ ಆಂತರಿಕ ಪ್ರಜಾಪ್ರಭುತ್ವದ ರಕ್ಷಣೆಯ ಹಕ್ಕೊತ್ತಾಯವಿದೆ. ಬಿ.ಕೆ. ಹರಿಪ್ರಸಾದ್ ಅವರ ಸಾರ್ವಜನಿಕ ಅಸಮಾಧಾನಗಳು ಕೇವಲ ವೈಯಕ್ತಿಕ ಮುನಿಸಲ್ಲ; ಬದಲಿಗೆ ಆಡಳಿತದಲ್ಲಿ ತಳಮಟ್ಟದ ಕಾರ್ಯಕರ್ತರ ಮತ್ತು ಸೋಷಿಯಲಿಸ್ಟ್ ಚಿಂತನೆಗಳ ನಿರ್ಲಕ್ಷ್ಯದ ವಿರುದ್ಧದ ಧ್ವನಿ ಎಂಬುದು ಇಲ್ಲಿ ಮುಖ್ಯಾಂಶ. ಆಡಳಿತ ಕೇವಲ ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ಅಥವಾ ಕೆಲವೇ ಪ್ರಭಾವಿ ನಾಯಕರ ಇಚ್ಛೆಯಂತೆ ನಡೆಯಬಾರದು, ಅದಕ್ಕೆ ಪಕ್ಷದ ಪ್ರಣಾಳಿಕೆ ಮತ್ತು ಸೈದ್ಧಾಂತಿಕ ಚೌಕಟ್ಟಿನ ಲಗಾಮು ಇರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಸಮಿತಿಯನ್ನು ‘ಫಿಲ್ಟರ್’ ಆಗಿ ಬಳಸಲು ಹಿರಿಯ ನಾಯಕರ ಒಂದು ಬಣ ಆಶಿಸುತ್ತಿದೆ. ಅದಕ್ಕೆ ಸಿಎಂ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್‌ ಅಂತಹ ನಾಯಕರು ಮುಂದೆ ನಿಂತಿದ್ದಾರೆ ಅಂತ ಕಾಣಿಸ್ತಿದೆ. 

ಸೈದ್ಧಾಂತಿಕ ಬದ್ಧತೆ ವರ್ಸಸ್ ಪ್ರಾಯೋಗಿಕ ರಾಜಕಾರಣದ ಗುದ್ದಾಟವೂ ಮುಖ್ಯವಾಗಿ ಕಾಣಿಸ್ತಿದೆ. ಬಿ.ಕೆ. ಹರಿಪ್ರಸಾದ್ ದಶಕಗಳಿಂದ ಕಾಂಗ್ರೆಸ್‌ನ ಜಾತ್ಯತೀತ ಮತ್ತು ಸಮಾಜವಾದಿ ಸಿದ್ಧಾಂತವನ್ನು ಗಟ್ಟಿಯಾಗಿ ಪ್ರತಿಪಾದಿಸಿಕೊಂಡು ಬಂದವರು. ಮತ್ತೊಂದೆಡೆ, ಡಿ.ಕೆ. ಶಿವಕುಮಾರ್ ಸಂಘಟನಾ ಶಕ್ತಿ ಮತ್ತು ಸಂಪನ್ಮೂಲ ಕ್ರೋಡೀಕರಣದ ಮೂಲಕ ಪ್ರಾಯೋಗಿಕ ಯಶಸ್ಸು ತಂದುಕೊಡುವ ನಾಯಕ. ಇವರಿಬ್ಬರ ನಡುವಿನ ಭಿನ್ನಮತವು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಘರ್ಷಣೆಯಲ್ಲ; ಇದು ಪಕ್ಷದ ಸೈದ್ಧಾಂತಿಕ ಶುದ್ಧತೆ, ಬದ್ಧತೆ ಮತ್ತು ಚುನಾವಣಾ ರಾಜಕಾರಣದ ಪ್ರಾಯೋಗಿಕತೆಯ ನಡುವಿನ ಸಂಘರ್ಷ. ಸರ್ಕಾರಗಳು ಕೇವಲ ಅಧಿಕಾರ ಉಳಿಸಿಕೊಳ್ಳುವ ಕಸರತ್ತಿನಲ್ಲಿ ಮುಳುಗಿದಾಗ ಸಿದ್ಧಾಂತಗಳು ಮೂಲೆಗುಂಪಾಗುತ್ತವೆ. ಈ ಸಮಿತಿ ಹರಿಪ್ರಸಾದ್ ಅವರಂತಹ ನಾಯಕರ ಸೈದ್ಧಾಂತಿಕ ಆಕ್ಷೇಪಗಳಿಗೆ ಸಾಂಸ್ಥಿಕ ವೇದಿಕೆಯನ್ನು ಒದಗಿಸುವ ಮೂಲಕ ಪಕ್ಷದ ಒಳಗೆ ಸಮತೋಲನ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಾಗ್ತದೆ ಅಂತ ಕಾಣಿಸ್ತದೆ. ಒಟ್ಟಿನಲ್ಲಿ, ಈ ಸಮಿತಿ ಕೇವಲ ಭಿನ್ನಮತ ಶಮನದ ‘ತಾತ್ಕಾಲಿಕ ಮದ್ದು’. ಇದು ಪಕ್ಷದ ನಿರ್ಧಾರಗಳನ್ನು ನಿಯಂತ್ರಿಸುವ ನಿಜವಾದ ಅಧಿಕಾರ ಕೇಂದ್ರವಾಗುತ್ತದೆಯೇ ಅಥವಾ ನಾಯಕರ ಮುನಿಸು ತಣಿಸಲು ಸೃಷ್ಟಿಸಿದ ಕಾಗದದ ಹುಲಿಯಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಈ ಸಮಿತಿ ತೆಗೆದುಕೊಳ್ಳುವ ತೀರ್ಮಾನಗಳ ಮೇಲೆ ನಿರ್ಧಾರವಾಗುತ್ತದೆ. ಆದರೆ, ಸದ್ಯಕ್ಕಂತೂ ಇದು ಕ್ರೆಡಿಟ್ ವಾರ್ ತಪ್ಪಿಸಲು ಮತ್ತು ಅಧಿಕಾರದ ಹಂಚಿಕೆಯನ್ನು ಸಮಬಲಗೊಳಿಸಲು ಹೂಡಿರುವ ಚಾಣಾಕ್ಷ ರಾಜಕೀಯ ದಾಳ ಎಂಬುದರಲ್ಲಿ ಅನುಮಾನವಿಲ್ಲ. 

- ಶ್ರೀರಾಜ್‌ ವಕ್ವಾಡಿ

ಬಂಡವಾಳಶಾಹಿ ಧೋರಣೆಯ ಸರ್ಕಾರದಲ್ಲಿ ಉತ್ತರದಾಯಿತ್ವವನ್ನು ನಿರೀಕ್ಷಿಸಬಹುದೇ?"


ದೆಹಲಿಯ ಜಂತರ್ ಮಂತರ್ ನಲ್ಲಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಯಶಸ್ಸು ಸಿಗುತ್ತಾ!? ಈ ದೇಶದ ಬಹುಪಾಲು ಜನಸಿಜೆಪಿ ಪ್ರತಿಭಟನೆಗೆ ಅನುಮಾನದ ಮುಳನ್ನು ನೆಟ್ಟು ನೋಡಿದರು, ಸಿಜೆಪಿಯ ಪ್ರತಿಭಟನಾಕಾರರನ್ನು ಭಯೋತ್ಪಾದಕರು ಅಂದ್ರು, ದೇಶದ್ರೋಹಿಗಳು ಅಂದ್ರು, ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಿರಂತರ ಮಾಡಲಾಯ್ತು, ಆದರೂ ಪ್ರತಿಭಟನೆ ನಿಲ್ಲಲಿಲ್ಲ. ಈಗ ಸಂಸತ್ ಚಲೋಗೆ ಮುಂದಾಗಿದ್ದಾರೆ ಸಿಜೆಪಿಯ ಪ್ರತಿಭಟನಾಕಾರರು. ಅವರ ಜೊತೆಗೆ ಕಳೆದ ಹತ್ತಾರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನುಮ್ ವಾಂಗ್ಚುಕ್ ಕೂಡ ಜೊತೆಗಿದ್ದಾರೆ.

ದೇಶದ ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾರ್ಕೋಚ್ ಜನತಾ ಪಾರ್ಟಿ (CJP) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಮತ್ತು ಜುಲೈ 20ರ 'ಸಂಸತ್ ಚಲೋ' ಕರೆ, ದೇಶದಲ್ಲಿ ಬೆಳೆಯುತ್ತಿರುವ ಜನಾಕ್ರೋಶಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ್ದಾರೆನ್ನಲಾದ ಹಲ್ಲೆಗಳು, ಈ ವ್ಯವಸ್ಥೆಯು ಜನಸಾಮಾನ್ಯರ ಧ್ವನಿಯನ್ನು ಹತ್ತಿಕ್ಕಲು ಬಳಸುತ್ತಿರುವ ದಮನಕಾರಿ ನೀತಿಯನ್ನು ಎತ್ತಿ ತೋರಿಸುತ್ತದೆ.

ಭಾರತದ ಶೈಕ್ಷಣಿಕ ವಲಯದಲ್ಲಿ ಎದ್ದಿರುವ ಬಿಕ್ಕಟ್ಟುಗಳು ಮತ್ತು ವ್ಯವಸ್ಥಿತ ವಿಫಲತೆಗಳ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾರ್ಕೋಚ್ ಜನತಾ ಪಾರ್ಟಿ ಹಮ್ಮಿಕೊಂಡಿರುವ ಹೋರಾಟ ತಾರ್ಕಿಕ ಹಂತವನ್ನು ತಲುಪಬಹುದಾ ? ಜುಲೈ 20ರ 'ಸಂಸತ್ ಚಲೋ' ಚಳವಳಿಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ಇಜೆಪಿಯ ಹೋರಾಟಗಾರರ ಮೇಲೆ ಪೊಲೀಸರು ನಡೆಸಿದ್ದಾರೆ ಎನ್ನುವ ಹಲ್ಲೆಗಳು ಪ್ರಭುತ್ವದ ದಬ್ಬಾಳಿಕೆಯನ್ನು ಸಾಬೀತುಪಡಿಸುತ್ತಿವೆ. ಈ ಹೊತ್ತಿನಲ್ಲಿ, "ಭಾರತದಲ್ಲಿ ಚಳವಳಿಗಳು ಗೆಲ್ಲುವ ಕಾಲಘಟ್ಟವಿದೆಯೇ?" ಮತ್ತು "ಬಂಡವಾಳಶಾಹಿ ಧೋರಣೆಯ ಸರ್ಕಾರದಲ್ಲಿ ಉತ್ತರದಾಯಿತ್ವವನ್ನು ನಿರೀಕ್ಷಿಸಬಹುದೇ?" ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. 

ಪ್ರತಿಭಟನಾಕಾರರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಲ್ಲ. ಇದು ಬಂಡವಾಳಶಾಹಿ ಹಿತಾಸಕ್ತಿಗಳನ್ನು ಕಾಯುವ ಸರ್ಕಾರವು, ತನ್ನ ವಿಫಲತೆಗಳನ್ನು ಮುಚ್ಚಿಹಾಕಲು ಬಳಸುವ ದಮನಕಾರಿ ತಂತ್ರ. ಯುವಜನರ, ವಿದ್ಯಾರ್ಥಿಗಳ ಮತ್ತು ಕಾರ್ಮಿಕರ ಧ್ವನಿಯನ್ನು ಹತ್ತಿಕ್ಕುವ ಮೂಲಕ ಸಾರ್ವಜನಿಕ ವಲಯ ತಮ್ಮನ್ನು ಪ್ರಶ್ನಿಸದಂತೆ ಮಾಡುವುದು ಈ ಪ್ರಭುತ್ವದ ತಂತ್ರ. 

ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಸಂಪತ್ತನ್ನು ಕಾರ್ಪೊರೇಟ್ ಶಕ್ತಿಗಳಿಗೆ ಧಾರೆ ಎರೆಯುತ್ತಿರುವ ಈ ವ್ಯವಸ್ಥೆಯಲ್ಲಿ, ಮಂತ್ರಿಗಳ ಅಥವಾ ಪ್ರಧಾನಿಯ ರಾಜೀನಾಮೆಯನ್ನು ಕೇವಲ ನೈತಿಕತೆಯ ಆಧಾರದ ಮೇಲೆ ನಿರೀಕ್ಷಿಸುವುದು ಭ್ರಮೆ ಅಷ್ಟೇ. ಕಾರ್ಪೊರೇಟ್ ಪರ ಸರ್ಕಾರಗಳಿಗೆ ಜನರ ಕಲ್ಯಾಣಕ್ಕಿಂತ ಉದ್ಯಮಿಗಳ ಹಿತಾಸಕ್ತಿಯೇ ಮುಖ್ಯವಾಗಿರುತ್ತದೆ. ಹೀಗಾಗಿ, ಕೇವಲ ಮನವಿಗಳ ಮೂಲಕ ಅಥವಾ ಸಾಂಪ್ರದಾಯಿಕ ರಾಜಕೀಯ ಒತ್ತಡಗಳ ಮೂಲಕ ಈ ಸರ್ಕಾರದಿಂದ ಉತ್ತರದಾಯಿತ್ವವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. 

ಇತಿಹಾಸದುದ್ದಕ್ಕೂ ಬಂಡವಾಳಶಾಹಿ ಮತ್ತು ದಬ್ಬಾಳಿಕೆ ನಡೆಸುವ ಸರ್ಕಾರಗಳು ತಮ್ಮಷ್ಟಕ್ಕೆ ತಾವೇ ಬದಲಾಗಿಲ್ಲ ಅಥವಾ ಮಣಿದಿಲ್ಲ. ಈ ಹಿಂದೆ ದೇಶದಲ್ಲಿ ವರ್ಷಾನುಗಟ್ಟಲೆ ನಡೆದ ಐತಿಹಾಸಿಕ ರೈತ ಹೋರಾಟವೇ ಇದಕ್ಕೆ ಸಾಕ್ಷಿ. ಕಾರ್ಪೊರೇಟ್ ಧೋರಣೆಯ ಇದೇ ಸರ್ಕಾರ ಮೂರು ವಿವಾದಿತ  ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿದ್ದು ಸತತ, ಸಂಘಟಿತ ಚಳವಳಿಯ ಶಕ್ತಿ.

ಹಾಗಾಗಿ, ಇಂದಿನ ಕಾಲಘಟ್ಟವು ಚಳವಳಿಗಳಿಗೆ ಹಿನ್ನಡೆಯ ಕಾಲಘಟ್ಟವಲ್ಲ, ಬದಲಿಗೆ ಮತ್ತಷ್ಟು ತೀಕ್ಷ್ಣವಾದ ಹೋರಾಟದ ಅಗತ್ಯವಿರುವ ಕಾಲಘಟ್ಟ. ಕಾರ್ಕೋಚ್ ಜನತಾ ಪಾರ್ಟಿಯ 'ಸಂಸತ್ ಚಲೋ' ಕೇವಲ ಒಂದು ಸಚಿವರ ರಾಜೀನಾಮೆಗೆ ಸೀಮಿತವಾಗದೆ, ಶಿಕ್ಷಣದ ವ್ಯಾಪಾರೀಕರಣ ಮತ್ತು ಪ್ರಭುತ್ವದ ಜನವಿರೋಧಿ ನೀತಿಗಳ ವಿರುದ್ಧದ ಸಮರವಾಗಬೇಕಿದೆ. ಮತ್ತು ಈ ಹೋರಾಟವನ್ನು ಬೆಂಬಲಿಸುವವರು ಪಕ್ಷ, ಜಾತಿ, ಮತ್ತೊಂದು ಮಗದೊಂದು ನೋಡದೇ ಕೈ ಜೋಡಿಸಬೇಕಿದೆ. 

ಒಂದು ವೇಳೆ ಈ ಸಿಜೆಪಿಯ ಹೋರಾಟಕ್ಕೆ ಮಣಿದು ಸಚಿವರ ರಾಜೀನಾಮೆ ಕೇವಲ ಒಂದು ಸಾಂಕೇತಿಕ ಗೆಲುವಾಗಬಹುದು ಅಷ್ಟೇ. ಜುಲೈ 20ರ ಸಂಸತ್ ಚಲೋ ಯಶಸ್ವಿಯಾಗಬೇಕಾದರೆ, ಅದು ಕೇವಲ ಒಂದು ಪಕ್ಷದ ಹೋರಾಟವಾಗಿ ಉಳಿಯದೆ, ದಮನಿತರ ಒಕ್ಕೂಟ ಧ್ವನಿಯಾಗಿ ರೂಪಾಂತರಗೊಳ್ಳಬೇಕು. ಪ್ರಭುತ್ವದ ಲಾಠಿ ಮತ್ತು ದೌರ್ಜನ್ಯಗಳಿಗೆ ಹೆದರದೆ ಬೀದಿಗಿಳಿಯುವ ಜನಶಕ್ತಿಯೇ ಅಂತಿಮವಾಗಿ ಬಂಡವಾಳಶಾಹಿ ಅಧಿಪತ್ಯವನ್ನು ಮಂಡಿಯೂರುವಂತೆ ಮಾಡುತ್ತದೆ ಎನ್ನುವುದಲ್ಲಿ ಏನೂ ಅನುಮಾನವಿಲ್ಲ‌.

-ಶ್ರೀರಾಜ್ ವಕ್ವಾಡಿ