ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯಕ್ಕೆ ಸಮಿತಿ ರಚನೆ. ಬಿ.ಕೆ ಹರಿಪ್ರಸಾದ್ ಮತ್ತು ಡಿ.ಕೆ ಶಿವಕುಮಾರ್ ನಡುವಿನ ಭಿನ್ನಮತ ಇರುವುದು ಜಗತ್ತಿಗೆ ತಿಳಿದಿರುವ ವಿಷಯ. ಇತ್ತೀಚೆಗೆ ಅರಮನೆ ಮೈದಾನದಲ್ಲಿ ನಡೆದಿರುವ ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮುಂದೆಯೇ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯಕ್ಕೆ ಸಮಿತಿ ರಚನೆ ಮತ್ತು ಅನುಷ್ಠಾನ ಸಮಿತಿ ರಚನೆ ಮಾಡಬೇಕು ಅಂತ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದ್ರು. ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷದಿಂದ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ಸಮಿತಿಯೇ ಮುಖ್ಯವಾಗಬೇಕು ಎನ್ನುವ ಉದ್ದೇಶವೇ ? ಕ್ರೆಡಿಟ್ ವಾರ್ ತಪ್ಪಿಸಲು ಈ ತಂತ್ರ ಹೆಣೆದರೆ!?
ಡಿಕೆ ಮತ್ತು ಬಿಕೆ ನಡುವೆ ಶೀತನ ಸಮರ ಇರುವುದು ಜಗತ್ತಿಗೆ ಗೊತ್ತಿರುವ ವಿಷಯ. ಡಿಕೆಶಿ ಅವರ ಪ್ರಾಯೋಗಿಕ ರಾಜಕಾರಣ, ಹೀರೋಯಿಸಂ ಅವೆಲ್ಲಾ ಬಿ.ಕೆ ಹರಿಪ್ರಸಾದ್ ಅವರಿಗೆ ಹಿಡಿಸುವುದಿಲ್ಲ. ಸರ್ಕಾರ ಅಥವಾ ಪಕ್ಷದಿಂದ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ಈ ಸಮಿತಿಯೇ ಮುಖ್ಯವಾಗಿರಬೇಕು, ಯಾವೊಬ್ಬ ನಾಯಕನೂ ಕ್ರೆಡಿಟ್ ತೆಗೆದುಕೊಳ್ಳಬಾರದು ಎನ್ನುವುದು ಇದರ ಉದ್ದೇಶ ಎನ್ನುವುದು ಸ್ಪಷ್ಟ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಸರ್ಕಾರ ಮತ್ತು ಸಂಘಟನೆಯ ನಡುವೆ ಸಮನ್ವಯ ಸಾಧಿಸಲು ಸಮಿತಿಯೊಂದನ್ನು ರಚಿಸಿರುವುದು ಕೇವಲ ಆಡಳಿತಾತ್ಮಕ ತೀರ್ಮಾನವಲ್ಲ; ಇದು ಪಕ್ಷದ ಒಳಗಿನ ತೀವ್ರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ನಾಯಕತ್ವದ ಪೈಪೋಟಿಯನ್ನು ನಿಭಾಯಿಸಲು ಹೂಡಿರುವ ರಾಜಕೀಯ ತಂತ್ರಗಾರಿಕೆ. ವಿಶೇಷವಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಮತ್ತು ಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ಜಗಜ್ಜಾಹೀರಾಗಿರುವ ಹಿನ್ನೆಲೆಯಲ್ಲಿ, ಈ ಸಮಿತಿಯ ರಚನೆ ಹಲವು ರಾಜಕೀಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜನಪರ ಯೋಜನೆಗಳು ಮತ್ತು ಸರ್ಕಾರದ ಪ್ರಮುಖ ನೀತಿಗಳ ಯಶಸ್ಸಿನ ಹೆಗ್ಗಳಿಕೆಯನ್ನು ಅಥವಾ ಕ್ರೆಡಿಟ್ ಯಾರು ತೆಗೆದುಕೊಳ್ಳಬೇಕು ಎಂಬುದರ ಸುತ್ತಲೇ ಸದ್ಯದ ಆಂತರಿಕ ರಾಜಕೀಯ ಸುತ್ತುತ್ತಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಮತ್ತು ಕಾಂಗ್ರೆಸ್ ಪಕ್ಷದ ಪ್ರಭಾವಿಯಾಗಿ ಇಡೀ ಆಡಳಿತದ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದ್ದರೆ, ಬಿ.ಕೆ. ಹರಿಪ್ರಸಾದ್ ಅವರಂತಹ ಸೈದ್ಧಾಂತಿಕ ನಿಷ್ಠಾವಂತರು ಇದನ್ನು ‘ವ್ಯಕ್ತಿ ಕೇಂದ್ರಿತ’ ರಾಜಕಾರಣ ಎಂದು ಭಾವಿಸ್ತಾರೆ.
ಈ ಸಮಿತಿಯ ಮುಖ್ಯ ಉದ್ದೇಶವೇ ಯಾವುದೇ ಒಂದು ಬಣ ಅಥವಾ ವ್ಯಕ್ತಿ ಸರ್ಕಾರದ ಸಾಧನೆಗಳ ಸಂಪೂರ್ಣ ಮೈಲೇಜ್ ಪಡೆಯುವುದನ್ನು ತಡೆಯುವುದು. ಪಕ್ಷ ಮತ್ತು ಸರ್ಕಾರದ ತೀರ್ಮಾನಗಳಿಗೆ ಜಂಟಿ ಹೊಣೆಗಾರಿಕೆ ತರುವ ಮೂಲಕ, ‘ಕ್ರೆಡಿಟ್ ವಾರ್’ ಅನ್ನು ತಣ್ಣಗಾಗಿಸಲು ರೂಪಿಸಿರುವ ಪಕ್ಕಾ ತಂತ್ರದ ಭಾಗದಂತಿದೆ. ಬಿ.ಕೆ ಹರಿಪ್ರಸಾದ್ ಕೂಡ ಈ ಸಮಿತಿಯ ಬಗ್ಗೆ ಉಲ್ಲೇಖಿಸಿದ್ದರು, ಬಿ.ಕೆ ಕೂಡ ಉಲ್ಲೇಖಿಸಿದ್ದಾರೆ. ಇದು, ಕ್ರೆಡಿಟ್ ಇಬ್ಬರಿಗೂ ಬೇಡ, ಸಮಿತಿಗೆ ಹೋಗಲಿ ಎಂಬ ಉದ್ದೇಶ ಅಂತ ಕಾಣಿಸ್ತಿದೆ.
ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ತೆಗೆದುಕೊಳ್ಳುವ ಪ್ರತಿಯೊಂದು ಪ್ರಮುಖ ನಿರ್ಧಾರಕ್ಕೂ ಈ ಸಮಿತಿಯೇ ದಿಕ್ಸೂಚಿಯಾಗಬೇಕು ಎನ್ನುವ ಒತ್ತಾಯದ ಹಿಂದೆ ಆಂತರಿಕ ಪ್ರಜಾಪ್ರಭುತ್ವದ ರಕ್ಷಣೆಯ ಹಕ್ಕೊತ್ತಾಯವಿದೆ. ಬಿ.ಕೆ. ಹರಿಪ್ರಸಾದ್ ಅವರ ಸಾರ್ವಜನಿಕ ಅಸಮಾಧಾನಗಳು ಕೇವಲ ವೈಯಕ್ತಿಕ ಮುನಿಸಲ್ಲ; ಬದಲಿಗೆ ಆಡಳಿತದಲ್ಲಿ ತಳಮಟ್ಟದ ಕಾರ್ಯಕರ್ತರ ಮತ್ತು ಸೋಷಿಯಲಿಸ್ಟ್ ಚಿಂತನೆಗಳ ನಿರ್ಲಕ್ಷ್ಯದ ವಿರುದ್ಧದ ಧ್ವನಿ ಎಂಬುದು ಇಲ್ಲಿ ಮುಖ್ಯಾಂಶ. ಆಡಳಿತ ಕೇವಲ ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ಅಥವಾ ಕೆಲವೇ ಪ್ರಭಾವಿ ನಾಯಕರ ಇಚ್ಛೆಯಂತೆ ನಡೆಯಬಾರದು, ಅದಕ್ಕೆ ಪಕ್ಷದ ಪ್ರಣಾಳಿಕೆ ಮತ್ತು ಸೈದ್ಧಾಂತಿಕ ಚೌಕಟ್ಟಿನ ಲಗಾಮು ಇರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಸಮಿತಿಯನ್ನು ‘ಫಿಲ್ಟರ್’ ಆಗಿ ಬಳಸಲು ಹಿರಿಯ ನಾಯಕರ ಒಂದು ಬಣ ಆಶಿಸುತ್ತಿದೆ. ಅದಕ್ಕೆ ಸಿಎಂ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್ ಅಂತಹ ನಾಯಕರು ಮುಂದೆ ನಿಂತಿದ್ದಾರೆ ಅಂತ ಕಾಣಿಸ್ತಿದೆ.
ಸೈದ್ಧಾಂತಿಕ ಬದ್ಧತೆ ವರ್ಸಸ್ ಪ್ರಾಯೋಗಿಕ ರಾಜಕಾರಣದ ಗುದ್ದಾಟವೂ ಮುಖ್ಯವಾಗಿ ಕಾಣಿಸ್ತಿದೆ. ಬಿ.ಕೆ. ಹರಿಪ್ರಸಾದ್ ದಶಕಗಳಿಂದ ಕಾಂಗ್ರೆಸ್‌ನ ಜಾತ್ಯತೀತ ಮತ್ತು ಸಮಾಜವಾದಿ ಸಿದ್ಧಾಂತವನ್ನು ಗಟ್ಟಿಯಾಗಿ ಪ್ರತಿಪಾದಿಸಿಕೊಂಡು ಬಂದವರು. ಮತ್ತೊಂದೆಡೆ, ಡಿ.ಕೆ. ಶಿವಕುಮಾರ್ ಸಂಘಟನಾ ಶಕ್ತಿ ಮತ್ತು ಸಂಪನ್ಮೂಲ ಕ್ರೋಡೀಕರಣದ ಮೂಲಕ ಪ್ರಾಯೋಗಿಕ ಯಶಸ್ಸು ತಂದುಕೊಡುವ ನಾಯಕ. ಇವರಿಬ್ಬರ ನಡುವಿನ ಭಿನ್ನಮತವು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಘರ್ಷಣೆಯಲ್ಲ; ಇದು ಪಕ್ಷದ ಸೈದ್ಧಾಂತಿಕ ಶುದ್ಧತೆ, ಬದ್ಧತೆ ಮತ್ತು ಚುನಾವಣಾ ರಾಜಕಾರಣದ ಪ್ರಾಯೋಗಿಕತೆಯ ನಡುವಿನ ಸಂಘರ್ಷ. ಸರ್ಕಾರಗಳು ಕೇವಲ ಅಧಿಕಾರ ಉಳಿಸಿಕೊಳ್ಳುವ ಕಸರತ್ತಿನಲ್ಲಿ ಮುಳುಗಿದಾಗ ಸಿದ್ಧಾಂತಗಳು ಮೂಲೆಗುಂಪಾಗುತ್ತವೆ. ಈ ಸಮಿತಿ ಹರಿಪ್ರಸಾದ್ ಅವರಂತಹ ನಾಯಕರ ಸೈದ್ಧಾಂತಿಕ ಆಕ್ಷೇಪಗಳಿಗೆ ಸಾಂಸ್ಥಿಕ ವೇದಿಕೆಯನ್ನು ಒದಗಿಸುವ ಮೂಲಕ ಪಕ್ಷದ ಒಳಗೆ ಸಮತೋಲನ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಾಗ್ತದೆ ಅಂತ ಕಾಣಿಸ್ತದೆ. ಒಟ್ಟಿನಲ್ಲಿ, ಈ ಸಮಿತಿ ಕೇವಲ ಭಿನ್ನಮತ ಶಮನದ ‘ತಾತ್ಕಾಲಿಕ ಮದ್ದು’. ಇದು ಪಕ್ಷದ ನಿರ್ಧಾರಗಳನ್ನು ನಿಯಂತ್ರಿಸುವ ನಿಜವಾದ ಅಧಿಕಾರ ಕೇಂದ್ರವಾಗುತ್ತದೆಯೇ ಅಥವಾ ನಾಯಕರ ಮುನಿಸು ತಣಿಸಲು ಸೃಷ್ಟಿಸಿದ ಕಾಗದದ ಹುಲಿಯಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಈ ಸಮಿತಿ ತೆಗೆದುಕೊಳ್ಳುವ ತೀರ್ಮಾನಗಳ ಮೇಲೆ ನಿರ್ಧಾರವಾಗುತ್ತದೆ. ಆದರೆ, ಸದ್ಯಕ್ಕಂತೂ ಇದು ಕ್ರೆಡಿಟ್ ವಾರ್ ತಪ್ಪಿಸಲು ಮತ್ತು ಅಧಿಕಾರದ ಹಂಚಿಕೆಯನ್ನು ಸಮಬಲಗೊಳಿಸಲು ಹೂಡಿರುವ ಚಾಣಾಕ್ಷ ರಾಜಕೀಯ ದಾಳ ಎಂಬುದರಲ್ಲಿ ಅನುಮಾನವಿಲ್ಲ.
- ಶ್ರೀರಾಜ್ ವಕ್ವಾಡಿ

No comments:
Post a Comment