ರಾಜ್ಯದಲ್ಲಿ
ಮುಂಗಾರು ಕೈಕೊಟ್ಟು, ಭೀಕರ ಬರಗಾಲದ ಸ್ಪಷ್ಟ
ಛಾಯೆ ಕಾಣಿಸುತ್ತಿದ್ದರೂ ರಾಜ್ಯ ಸರ್ಕಾರ ಅಧಿಕೃತವಾಗಿ ಬರ ಘೋಷಣೆ ಮಾಡಲು
ಹಿಂಜರಿಯುತ್ತಿರುವುದು ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಅವರು ಪ್ರಧಾನಿಯವರಿಗೆ ಪತ್ರ ಬರೆದು ಕೇಂದ್ರ
ಅಧ್ಯಯನ ತಂಡವನ್ನು ಕಳುಹಿಸುವಂತೆ ಕೋರಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ಸರ್ಕಾರಗಳು ಬರ ಘೋಷಣೆ ಮಾಡಲು ಇಂದಿಗೂ ಕೇಂದ್ರ ಸರ್ಕಾರ ರೂಪಿಸಿರುವ ಕಠಿಣ ಮತ್ತು ಅವೈಜ್ಞಾನಿಕ ‘ಬರ ಕೈಪಿಡಿ’ ಅವಲಂಬಿಸಬೇಕಾಗಿದೆ. ಕೇಂದ್ರ ಸರ್ಕಾರದ ಹೊಸ ಬರ ಕೈಪಿಡಿಯ ಪ್ರಕಾರ, ಕೇವಲ ಮಳೆ ಕೊರತೆಯ ಆಧಾರದ ಮೇಲೆ ಬರ ಘೋಷಿಸುವಂತಿಲ್ಲ. ಮಳೆ ಕೊರತೆಯ ಜೊತೆಗೆ ಉಪಗ್ರಹ ಆಧಾರಿತ ಬೆಳೆ ಚಿತ್ರಣ, ತೇವಾಂಶದ ಕೊರತೆ, ಮತ್ತು ಅಂತರ್ಜಲ ಮಟ್ಟವನ್ನು ಪರಿಶೀಲಿಸಬೇಕಾಗುತ್ತದೆ. ಈ ನಿಯಮಗಳ ಪ್ರಕಾರ ಜೂನ್ ಮತ್ತು ಜುಲೈ ತಿಂಗಳ ಮಳೆ ಕೊರತೆ, ಬಿತ್ತನೆ ಪ್ರಮಾಣ ಹಾಗೂ ತೇವಾಂಶದ ಕೊರತೆಯನ್ನು ಸುದೀರ್ಘಾವಧಿಗೆ ಮೌಲ್ಯೀಕರಿಸಿದ ನಂತರವಷ್ಟೇ ಅಧಿಕೃತ ಬರ ಘೋಷಣೆ ಸಾಧ್ಯವಾಗುತ್ತದೆ. ಈ ಕಾನೂನು, ನಿಯಮಗಳ ಚೌಕಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ನಡೆದುಕೊಳ್ಳುತ್ತಿದೆಯೇನೋ ಸರಿ, ಆದರೇ ತಾನು ಮಾಡಬೇಕಿರುವುದನ್ನು ಮರೆತಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಬರ ಘೋಷಣೆ ಮಾಡುವುದಕ್ಕೆ ಈ ತಾಂತ್ರಿಕ ವಿಳಂಬ ಕೇವಲ ನಿಯಮಗಳ ಆಟವಲ್ಲ; ಬದಲಿಗೆ ತಕ್ಷಣದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಆಡಳಿತ ಶಾಹಿಯ ತಂತ್ರವಾಗಿದೆ. ರಾಜ್ಯ ಸರ್ಕಾರವೇ ಸ್ವತಃ ಮುಂಚೂಣಿಗೆ ಬಂದು ತುರ್ತು ಬರ ಪರಿಸ್ಥಿತಿ ಘೋಷಿಸಿದರೆ, ತಕ್ಷಣವೇ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾದ ನೈತಿಕ ಮತ್ತು ಆರ್ಥಿಕ ಜವಾಬ್ದಾರಿ ಅದರ ಹೆಗಲಿಗೇರುತ್ತದೆ. ಇದನ್ನು ತಪ್ಪಿಸಲು ಮತ್ತು ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಕೇಂದ್ರದ ಮೇಲೆ ತಳ್ಳಲು ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ.
ರಾಜ್ಯದ ಬೊಕ್ಕಸದಲ್ಲಿ ಬರ ಪರಿಹಾರ ನೀಡಲು ಹಣವಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ಆಡಳಿತದ ಆದ್ಯತೆಗಳಲ್ಲಿದೆ. ಪ್ರಸ್ತುತ ಸರ್ಕಾರವು ಜನಪ್ರಿಯ ಗ್ಯಾರಂಟಿ ಯೋಜನೆಗಳಿಗೆ ದೊಡ್ಡ ಮಟ್ಟದ ಬಜೆಟ್ ಮೀಸಲಿಟ್ಟಿರುವುದು ನಿಜವಾದರೂ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಉತ್ಪಾದನಾ ವಲಯಗಳಿಗೆ ಸಿಗಬೇಕಾದ ಸಾಂಸ್ಥಿಕ ಬಲ ಕುಸಿದಿದೆ. ಬಂಡವಾಳಶಾಹಿ ಆರ್ಥಿಕ ಮಾದರಿಯು ಕೇವಲ ಮತಬ್ಯಾಂಕ್ ರಾಜಕಾರಣದ ತುರ್ತು ಯೋಜನೆಗಳಿಗೆ ಒತ್ತು ನೀಡುತ್ತದೆಯೇ ಹೊರತು, ಇಂತಹ ನೈಸರ್ಗಿಕ ವಿಕೋಪಗಳ ಎದುರು ಶ್ರಮಿಕ ವರ್ಗಕ್ಕೆ ಭದ್ರತೆ ನೀಡುವ ‘ತುರ್ತು ನಿಧಿ’ಯನ್ನು ಕ್ರೋಡೀಕರಿಸಲು ವಿಫಲವಾಗಿದೆ. ರಾಜ್ಯದ ಬೊಕ್ಕಸದ ಆರ್ಥಿಕ ನಿರ್ವಹಣೆಯು ದೂರದೃಷ್ಟಿಯ ಕೊರತೆಯಿಂದ ಕೂಡಿದ್ದು, ಬಿಕ್ಕಟ್ಟಿನ ಸಮಯದಲ್ಲಿ ಕಾರ್ಪೊರೇಟ್ ತೆರಿಗೆಗಳ ಮೇಲಾಗಲಿ ಅಥವಾ ಬದಲಿ ಸಂಪನ್ಮೂಲ ಕ್ರೋಡೀಕರಣದ ಮೇಲಾಗಲಿ ಸರ್ಕಾರ ಗಮನ ಹರಿಸುತ್ತಿಲ್ಲ ಎನ್ನುವುದು ಸ್ಪಷ್ಟವಾಯ್ತಲ್ವೆ !?
ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆದಿರುವುದರ ಹಿಂದೆ ಒಕ್ಕೂಟ ವ್ಯವಸ್ಥೆಯೊಳಗಿನ ರಾಜಕೀಯ ಮೇಲಾಟವೂ ಇದೆ. ಕಳೆದೆರಡು ವರ್ಷಗಳ ಇತಿಹಾಸವನ್ನು ಗಮನಿಸಿದರೆ, ಎನ್.ಡಿ.ಆರ್.ಎಫ್ (NDRF) ಅಡಿಯಲ್ಲಿ ಕರ್ನಾಟಕಕ್ಕೆ ಸಿಗಬೇಕಾದ ಬರ ಪರಿಹಾರದ ನ್ಯಾಯಸಮ್ಮತ ಪಾಲನ್ನು ಪಡೆಯಲು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ತಕ್ಷಣವೇ ಅನುದಾನ ಬಿಡುಗಡೆ ಮಾಡದೆ ಸತಾಯಿಸುತ್ತದೆ ಎಂಬ ವಾಸ್ತವವನ್ನು ಮುಂದಿಟ್ಟುಕೊಂಡು, ರಾಜ್ಯ ಸರ್ಕಾರವು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದೆ. ಕೇಂದ್ರ ಸರ್ಕಾರವು ರಾಜ್ಯಗಳ ತೆರಿಗೆ ಪಾಲನ್ನು ವಾಪಸ್ ನೀಡುವಲ್ಲಿ ತೋರುವ ತಾರತಮ್ಯ ನೀತಿಯು ಗ್ರಾಮೀಣ ಭಾಗದ ಕೃಷಿ ಕಾರ್ಮಿಕರನ್ನು ಮತ್ತು ಸಣ್ಣ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ.
ಬರಗಾಲ ಎದುರಾದಾಗ ಸರ್ಕಾರಗಳು ಕೇವಲ ಭೂಮಾಲೀಕ ರೈತರ ಬೆಳೆ ನಷ್ಟದ ಬಗ್ಗೆ ಮಾತನಾಡುತ್ತವೆಯೇ ಹೊರತು, ಕೃಷಿಯನ್ನೇ ನಂಬಿದ ಭೂ ರಹಿತ ದಲಿತ, ಹಿಂದುಳಿದ ಕೃಷಿ ಕಾರ್ಮಿಕರ ಮತ್ತು ವಲಸೆ ಕಾರ್ಮಿಕರ ಬದುಕಿನ ಬಗ್ಗೆ ಯೋಚಿಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ (MGNREGA) ಯೋಜನೆಗೆ ಹಣ ಬಿಡುಗಡೆಯಾಗುತ್ತಿಲ್ಲ, ಕೂಲಿ ಬಾಕಿ ಉಳಿದಿದೆ. ಈ ಬಗ್ಗೆಯೂ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸಿದಂತೆ ಕಾಣಿಸುತ್ತಿಲ್ಲ. ಕೇವಲ ಪತ್ರ ಬರೆಯುವುದನ್ನು ನಿಲ್ಲಿಸಿ, ತಕ್ಷಣವೇ ತನ್ನದೇ ಆದ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಹಾರ ಮಾರ್ಗ ಕಂಡುಕೊಳ್ಳುವುದು ಮತ್ತು ಸಾಲ ಮನ್ನಾದಂತಹ ಜನಪರ ಕ್ರಮಗಳಿಗೆ ಮುಂದಾಗಬೇಕಿದೆ. ಭರವಸೆಯನ್ನೇನೋ ಸಿಎಂ ಡಿಕೆಶಿ ಕೊಟ್ಟಿದ್ದಾರೆ ಸರಿ. ಅದು ಭರವಸೆ ಮಾತ್ರವಾಗಿ ಉಳಿಯಬಾರದು ಅಲ್ವಾ !?
ಒಟ್ಟಿನಲ್ಲಿ,
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಈ ರಾಜಕೀಯ ಹಗ್ಗಜಗ್ಗಾಟದಲ್ಲಿ
ಬಲಿಯಾಗುತ್ತಿರುವುದು ಕೃಷಿ ನಂಬಿದ ಶ್ರಮಿಕ
ವರ್ಗ. ರಾಜ್ಯ ಸರ್ಕಾರವು ಕೇಂದ್ರದ ನೆರವಿಗಾಗಿ ಕಾಯುವ ನೆಪದಲ್ಲಿ ಕಾಲಹರಣ ಮಾಡದೆ, ತಕ್ಷಣವೇ ರಾಜ್ಯಮಟ್ಟದಲ್ಲೇ ಬರ ಪರಿಸ್ಥಿತಿಯನ್ನು ಎದುರಿಸಲು
ಸಮರೋಪಾದಿಯ ಯೋಜನೆಗಳನ್ನು ರೂಪಿಸಬೇಕಾಗಿದೆ. ಇಲ್ಲದಿದ್ದರೆ ಇದು ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ
ಆಡಳಿತ ನಡೆಸುವ ಪಕ್ಷಗಳ ಸಾಂಪ್ರದಾಯಿಕ ಜವಾಬ್ದಾರಿ ರಹಿತ ನಡವಳಿಕೆಯಾಗಿ ಇತಿಹಾಸದಲ್ಲಿ
ದಾಖಲಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
- ಶ್ರೀರಾಜ್ ವಕ್ವಾಡಿ

No comments:
Post a Comment