ದೇವೆಗೌಡರು ಬಿಡದಿ ರೈತರ ಪರವಾಗಿ, ಕಾಂಗ್ರೆಸ್ ಸರ್ಕಾರದ ನಿಲುವಿನ ವಿರುದ್ಧ ನಿಂತಿರುವುದು ಏನೋ ಸರಿ. ಆದರೇ, ಟೌನ್ ಶಿಪ್ ಹಿಂದೆ ಮುಖ್ಯಮಂತ್ರಿ ಬದಲಾವಣೆಯ ರಾಜಕೀಯ ಇದ್ದು, ಅದೇ ಕಾರಣಕ್ಕಾಗಿ ಸಿದ್ದರಾಮಯ್ಯ ಅವರನ್ನು ಇಳಿಸಿ ಹೈಕಮಾಂಡ್ ಒಡ್ಡಿರುವ ಆಮೀಷಗಳನ್ನು ಡಿಕೆ ಶಿವಕುಮಾರ್ ಈಡೇರಿಸಲು ಮುಂದಾಗಿದ್ದಾರೆ, ಹೈಕಮಾಂಡ್ ಆಮಿಷಗಳನ್ನು ಪೂರೈಸಲು ರೈತರ ಭೂಮಿಗೆ ಕೈ ಹಾಕಿದ್ದಾರೆ ಎಂದು ಹೇಳಿರುವುದರ ಹಿಂದೆ ರಾಜಕೀಯ ದುರುದ್ದೇಶ ಇದೆಯಾ? ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಪ್ರಾಬಲ್ಯ ರಾಜಕಾರಣದ ಕಸರತ್ತು ಇದೆಯೇ!?
ಮಾಜಿ ಪ್ರಧಾನಿ ದೇವೆಗೌಡರು ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ರೈತರ ಪರ ಎಂದಿಗೂ ನಿಂತಿದ್ದಾರೆ. ಈ ಇಳಿವಯಸ್ಸಿನಲ್ಲೂ ಬೀದಿಗಿಳಿದು ಹೋರಾಟ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಇವೆಲ್ಲವೂ ನಿಜಕ್ಕೂ ಶ್ಲಾಘನೀಯ.
ಕರ್ನಾಟಕ ರಾಜಕಾರಣದ ನರನಾಡಿಗಳನ್ನು ಬಲ್ಲವರಿಗೆ ಹೆಚ್.ಡಿ. ದೇವೇಗೌಡರ ಯಾವುದೇ ಹೋರಾಟ ಕೇವಲ ತತ್ಕಾಲದ ವಿಷಯಕ್ಕೆ ಸೀಮಿತವಾಗಿರುವುದಿಲ್ಲ ಎಂಬುದು ಸ್ಪಷ್ಟ. ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಯ ವಿರುದ್ಧ ರೈತರ ಪರವಾಗಿ ಅವರು ಹೋರಾಟಕ್ಕೆ ಇಳಿಯುವುದು ಮೇಲ್ನೋಟಕ್ಕೆ ಭೂಮಿ ಕಳೆದುಕೊಳ್ಳುವ ಬಡವರ ಪರವಾದ ನಿಲುವಾಗಿ ಎಂದು ಕಂಡರೂ, ಅದರ ಆಳದಲ್ಲಿ ಕಾಂಗ್ರೆಸ್ ಆಡಳಿತದ ಒಳಗಿನ ಬಿರುಕುಗಳನ್ನು ಬಳಸಿಕೊಳ್ಳುವ ಮತ್ತು ಹಳೆ ಮೈಸೂರು ಭಾಗದ ಒಕ್ಕಲಿಗ ರಾಜಕಾರಣದ ಹಿಡಿತವನ್ನು ಮರುಸ್ಥಾಪಿಸುವ ಸ್ಪಷ್ಟ ರಾಜಕೀಯ ಕಾರ್ಯತಂತ್ರ ಅಡಗಿದೆ. ಇಲ್ಲಿ ರೈತ ಹಿತರಕ್ಷಣೆಯ ಜೊತೆಜೊತೆಗೇ ಬಂಡವಾಳಶಾಹಿ ಹಿತಾಸಕ್ತಿ ಹಾಗೂ ಜಾತಿ ಸಮೀಕರಣದ ದಾಳಗಳು ಏಕಕಾಲಕ್ಕೆ ಕೆಲಸ ಮಾಡುತ್ತಿರುವುದು ಗೋಚರಿಸುತ್ತದೆ.
ದೇವೇಗೌಡರು ಬಿಡದಿ ಯೋಜನೆಯನ್ನು ನೇರವಾಗಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಗಿಟ್ಟಿಸಿಕೊಂಡಿರುವುದು ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಬೇಕಾದ 'ಕಪ್ಪ'ಕ್ಕೆ ಲಿಂಕ್ ಮಾಡಿರುವುದು ಅತ್ಯಂತ ವ್ಯವಸ್ಥಿತ ರಾಜಕೀಯ ನಡೆ ಎಂದು ಕಾಣಿಸುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಹಗ್ಗಜಗ್ಗಾಟ ಜಗಜ್ಜಾಹೀರಾಗಿ ಹೇಗೋ ಅಧಿಕಾರ ಹಂಚಿಕೆ ಆಗಿದೆ. ಮುಖ್ಯಮಂತ್ರಿಯನ್ನಾಗಿ ಮಾಡಲು "ಹೈಕಮಾಂಡ್ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಶಿವಕುಮಾರ್ ರೈತರ ಭೂಮಿಗೆ ಕೈ ಹಾಕಿದ್ದಾರೆ" ಎನ್ನುವ ಮೂಲಕ ಗೌಡರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಲು ಯತ್ನಿಸಿದ್ದಾರೆ.
ಸಿದ್ದರಾಮಯ್ಯ ಅವರ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಮತಬ್ಯಾಂಕ್ ಮತ್ತು ಡಿ.ಕೆ. ಶಿವಕುಮಾರ್ ಅವರ ಒಕ್ಕಲಿಗ ನಾಯಕತ್ವದ ನಡುವೆ ಈಗಾಗಲೇ ಇರುವ ಕಂದಕವನ್ನು ಇದು ಮತ್ತಷ್ಟು ದೊಡ್ಡದು ಮಾಡುತ್ತದೆ. ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯನ್ನು ಅವೆಲ್ಲಾ ಹೇಗೋ ಆಗಿ ಮುಗಿದ ಬಳಿಕವೂ ಜೀವಂತವಾಗಿಡುವ ಮೂಲಕ ಸರ್ಕಾರದಲ್ಲಿ ಅಸ್ಥಿರತೆಯ ಭಾವನೆ ಸೃಷ್ಟಿಸುವುದು ಇದರ ಉದ್ದೇಶ ಎಂದು ಕಾಣಿಸುತ್ತಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಗೆ ಮತ್ತು ರಿಯಲ್ ಎಸ್ಟೇಟ್ ದಂಧೆಗೆ ಸರ್ಕಾರ ಭೂಮಿ ನೀಡುತ್ತಿದೆ ಎಂಬ ಆರೋಪಕ್ಕೆ ರಾಜಕೀಯ ಬಣ್ಣ ಬಳಿಯುವ ಮೂಲಕ, ಕಾಂಗ್ರೆಸ್ ಸರ್ಕಾರವನ್ನು 'ರೈತ ವಿರೋಧಿ' ಹಾಗೂ 'ಭ್ರಷ್ಟ' ಎಂದು ಬಿಂಬಿಸುವುದು ಜೆಡಿಎಸ್-ಬಿಜೆಪಿ ಮೈತ್ರಿಯ ಸದ್ಯದ ಅಜೆಂಡಾ ಆಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಆದರೆ, ಇಲ್ಲಿರುವ ರಾಜಕೀಯ ದುರುದ್ದೇಶವೇನೆಂದರೆ, ಯೋಜನೆ ಜಾರಿಗೆ ತರುತ್ತಿರುವುದು ಇಡೀ ಸಚಿವ ಸಂಪುಟ ಮತ್ತು ಸರ್ಕಾರ ಒಟ್ಟಾಗಿ. ಆದರೆ ದೇವೇಗೌಡರು ಗುರಿ ಮಾಡುತ್ತಿರುವುದು ಕೇವಲ ಡಿ.ಕೆ. ಶಿವಕುಮಾರ್ ಅವರನ್ನು ಮಾತ್ರ. ಇದು ಕೇವಲ ರೈತಪರ ಕಾಳಜಿಯಾಗಿದ್ದರೆ ಇಡೀ ಸರ್ಕಾರದ ನೀತಿಯನ್ನು ಪ್ರಶ್ನಿಸಬೇಕಿತ್ತೇ ಹೊರತು, ವ್ಯಕ್ತಿಗತ ರಾಜಕೀಯ ಆಮಿಷಗಳ ಆರೋಪಕ್ಕೆ ಸೀಮಿತವಾಗುತ್ತಿರಲಿಲ್ಲ.
ಹಳೆ ಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯದ ಕಸರತ್ತು ಇದೆ ಹಿಂದೆ ಅಡಗಿದೆಯಾ ? ಗಮನಿಸುತ್ತಾ ಹೋಗೋಣ, ಈ ಇಡೀ ಸಂಘರ್ಷದ ಅತಿ ದೊಡ್ಡ ಆಯಾಮವಿರುವುದು ಹಳೆ ಮೈಸೂರು ಭಾಗದ ಒಕ್ಕಲಿಗ ನಾಯಕತ್ವದ ಮೇಲಿನ ಹತೋಟಿಯಲ್ಲಿ. ಜೆಡಿಎಸ್ ಅಸ್ತಿತ್ವದ ಪ್ರಶ್ನೆಯೂ ಅಡಗಿದೆ. ಸಾಂಪ್ರದಾಯಿಕವಾಗಿ ಹಳೆ ಮೈಸೂರು ಭಾಗ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ವಿಶೇಷವಾಗಿ ಡಿ.ಕೆ. ಶಿವಕುಮಾರ್ ಅವರ ಒಕ್ಕಲಿಗ ಮುಖದ ನಾಯಕತ್ವದಿಂದಾಗಿ, ಈ ಭಾಗದಲ್ಲಿ ಜೆಡಿಎಸ್ ದೊಡ್ಡ ಹಿನ್ನಡೆ ಅನುಭವಿಸಿತು. ಕಳೆದುಹೋದ ಈ ರಾಜಕೀಯ ನೆಲೆಯನ್ನು ಮರಳಿ ಪಡೆಯಲು ಜೆಡಿಎಸ್‌ಗೆ ಈಗ ಬಲವಾದ ಅಸ್ತ್ರ ಬೇಕಿದೆ. ಒಕ್ಕಲಿಗ ಸಮುದಾಯದ ಸರ್ವೋಚ್ಚ ನಾಯಕ ಯಾರು? ದೇವೇಗೌಡರ ಕುಟುಂಬವೋ ಅಥವಾ ಡಿ.ಕೆ. ಶಿವಕುಮಾರ್ ಅವರೋ? ಈ ಪ್ರಶ್ನೆಗೆ ಉತ್ತರಿಸುವ ಕಸರತ್ತು ಬಿಡದಿ ಹೋರಾಟದಲ್ಲಿ ಕಾಣುತ್ತಿದೆ. ಬಿಡದಿ ಮತ್ತು ರಾಮನಗರ ಭಾಗ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರ ಪ್ರಭಾವದ ವಲಯ. ಅದೇ ಕ್ಷೇತ್ರದಲ್ಲಿ ರೈತರನ್ನು ಸಂಘಟಿಸಿ ಡಿ.ಕೆ. ಸಹೋದರರನ್ನು 'ರೈತರ ಭೂಮಿ ಕಸಿಯುವವರು' ಎಂದು ಚಿತ್ರಿಸಿದರೆ, ಸಮುದಾಯದ ಒಲವು ಮತ್ತೆ ಗೌಡರ ಕುಟುಂಬದ ಕಡೆಗೆ ತಿರುಗುತ್ತದೆ ಎಂಬ ಲೆಕ್ಕಾಚಾರ ಇದೆ ಅಂತ ಕಾಣಿಸುತ್ತಿದೆ.
ಒಟ್ಟಿನಲ್ಲಿ, ಇಲ್ಲಿ ಎರಡೂ ಕಡೆಯ ನಾಯಕರ ನಡೆಗಳು ಜನಪರತೆಯಿಂದ ದೂರವಿವೆ. ಒಂದು ಕಡೆ, ಕಾಂಗ್ರೆಸ್ ಸರ್ಕಾರ 'ಸ್ಮಾರ್ಟ್ ಸಿಟಿ' ಮತ್ತು 'ಟೌನ್‌ಶಿಪ್' ಹೆಸರಿನಲ್ಲಿ ನವ-ಉದಾರವಾದಿ ನೀತಿಗಳನ್ನು ಜಾರಿಗೊಳಿಸುತ್ತಾ, ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಬಂಡವಾಳಶಾಹಿಗಳಿಗೆ ಮುಕ್ತಗೊಳಿಸಲು ಹೊರಟಿದೆ ಎಂಬ ಆರೋಪವಿದೆ. ಒಂದು ವೇಳೆ ಇದೇ ನಿಜವಾದರೇ ನಿಜಕ್ಕೂ ಖಂಡನೀಯ.
ಮತ್ತೊಂದು ಕಡೆ, ವಿರೋಧ ಪಕ್ಷದಲ್ಲಿರುವ ಜೆಡಿಎಸ್ ಮತ್ತು ದೇವೇಗೌಡರು, ಬಿಜೆಪಿ ಈ ನವ-ಉದಾರವಾದಿ ನೀತಿಗಳ ವಿರುದ್ಧ ಅಥವಾ ಭೂಸ್ವಾಧೀನ ಕಾಯ್ದೆಯ ಮೂಲ ಸ್ವರೂಪದ ರಕ್ಷಣೆಗಾಗಿ ಸೌದ್ಧಾಂತಿಕ ಹೋರಾಟ ಮಾಡುತ್ತಿಲ್ಲ. ಬದಲಿಗೆ, ರೈತರ ಆಕ್ರೋಶವನ್ನು ತಮಗೆ ಬೇಕಾದ ಹಾಗೆ ಬಳಸಿಕೊಂಡು, ತಮ್ಮ ಜಾತಿ ರಾಜಕಾರಣದ ನೆಲೆಗಟ್ಟನ್ನು ಗಟ್ಟಿಗೊಳಿಸಲು ಬಳಸಿಕೊಳ್ಳುತ್ತಿದ್ದಾರೆ.
ಹೀಗಾಗಿ, ಬಿಡದಿ ರೈತರ ಹೋರಾಟ ನ್ಯಾಯಸಮ್ಮತವಾಗಿದ್ದರೂ, ಅದರ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ದೇವೇಗೌಡರು,ಕುಮಾರಸ್ವಾಮಿ ಆಡುತ್ತಿರುವ ಆಟ ಮಾತ್ರ ಪಕ್ಕಾ ರಾಜಕೀಯ ದುರುದ್ದೇಶದಿಂದ ಕೂಡಿದ ಒಕ್ಕಲಿಗ ಪ್ರಾಬಲ್ಯದ ಕಸರತ್ತೇ ಆಗಿದೆ ಎಂಬಂತೆ ಸ್ಪಷ್ಟವಾಗಿ ಕಾಣಿಸುತ್ತಿದೆ.
ರಾಜ್ಯ ರಾಜಕಾರಣದ ಈ ಚದುರಂಗದಾಟದಲ್ಲಿ ಕೃಷಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತ ಕೇವಲ ದಾಳವಾಗುತ್ತಿದ್ದಾನೆಯೇ ವಿನಃ, ಎರಡೂ ಕಡೆಯ ನಾಯಕರಿಗೆ ರೈತನ ನಿಜವಾದ ಆರ್ಥಿಕ ಭದ್ರತೆಯ ಬಗ್ಗೆ ಪ್ರಾಮಾಣಿಕ ಕಾಳಜಿ ಇದ್ದಂತೆ ಕಾಣುತ್ತಿಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ.
- ಶ್ರೀರಾಜ್ ವಕ್ವಾಡಿ

No comments:
Post a Comment