ದೆಹಲಿಯ ಜಂತರ್ ಮಂತರ್ ನಲ್ಲಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಯಶಸ್ಸು ಸಿಗುತ್ತಾ!? ಈ ದೇಶದ ಬಹುಪಾಲು ಜನಸಿಜೆಪಿ ಪ್ರತಿಭಟನೆಗೆ ಅನುಮಾನದ ಮುಳನ್ನು ನೆಟ್ಟು ನೋಡಿದರು, ಸಿಜೆಪಿಯ ಪ್ರತಿಭಟನಾಕಾರರನ್ನು ಭಯೋತ್ಪಾದಕರು ಅಂದ್ರು, ದೇಶದ್ರೋಹಿಗಳು ಅಂದ್ರು, ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಿರಂತರ ಮಾಡಲಾಯ್ತು, ಆದರೂ ಪ್ರತಿಭಟನೆ ನಿಲ್ಲಲಿಲ್ಲ. ಈಗ ಸಂಸತ್ ಚಲೋಗೆ ಮುಂದಾಗಿದ್ದಾರೆ ಸಿಜೆಪಿಯ ಪ್ರತಿಭಟನಾಕಾರರು. ಅವರ ಜೊತೆಗೆ ಕಳೆದ ಹತ್ತಾರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನುಮ್ ವಾಂಗ್ಚುಕ್ ಕೂಡ ಜೊತೆಗಿದ್ದಾರೆ.
ದೇಶದ ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾರ್ಕೋಚ್ ಜನತಾ ಪಾರ್ಟಿ (CJP) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಮತ್ತು ಜುಲೈ 20ರ 'ಸಂಸತ್ ಚಲೋ' ಕರೆ, ದೇಶದಲ್ಲಿ ಬೆಳೆಯುತ್ತಿರುವ ಜನಾಕ್ರೋಶಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ್ದಾರೆನ್ನಲಾದ ಹಲ್ಲೆಗಳು, ಈ ವ್ಯವಸ್ಥೆಯು ಜನಸಾಮಾನ್ಯರ ಧ್ವನಿಯನ್ನು ಹತ್ತಿಕ್ಕಲು ಬಳಸುತ್ತಿರುವ ದಮನಕಾರಿ ನೀತಿಯನ್ನು ಎತ್ತಿ ತೋರಿಸುತ್ತದೆ.
ಭಾರತದ ಶೈಕ್ಷಣಿಕ ವಲಯದಲ್ಲಿ ಎದ್ದಿರುವ ಬಿಕ್ಕಟ್ಟುಗಳು ಮತ್ತು ವ್ಯವಸ್ಥಿತ ವಿಫಲತೆಗಳ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾರ್ಕೋಚ್ ಜನತಾ ಪಾರ್ಟಿ ಹಮ್ಮಿಕೊಂಡಿರುವ ಹೋರಾಟ ತಾರ್ಕಿಕ ಹಂತವನ್ನು ತಲುಪಬಹುದಾ ? ಜುಲೈ 20ರ 'ಸಂಸತ್ ಚಲೋ' ಚಳವಳಿಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ಇಜೆಪಿಯ ಹೋರಾಟಗಾರರ ಮೇಲೆ ಪೊಲೀಸರು ನಡೆಸಿದ್ದಾರೆ ಎನ್ನುವ ಹಲ್ಲೆಗಳು ಪ್ರಭುತ್ವದ ದಬ್ಬಾಳಿಕೆಯನ್ನು ಸಾಬೀತುಪಡಿಸುತ್ತಿವೆ. ಈ ಹೊತ್ತಿನಲ್ಲಿ, "ಭಾರತದಲ್ಲಿ ಚಳವಳಿಗಳು ಗೆಲ್ಲುವ ಕಾಲಘಟ್ಟವಿದೆಯೇ?" ಮತ್ತು "ಬಂಡವಾಳಶಾಹಿ ಧೋರಣೆಯ ಸರ್ಕಾರದಲ್ಲಿ ಉತ್ತರದಾಯಿತ್ವವನ್ನು ನಿರೀಕ್ಷಿಸಬಹುದೇ?" ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ.
ಪ್ರತಿಭಟನಾಕಾರರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಲ್ಲ. ಇದು ಬಂಡವಾಳಶಾಹಿ ಹಿತಾಸಕ್ತಿಗಳನ್ನು ಕಾಯುವ ಸರ್ಕಾರವು, ತನ್ನ ವಿಫಲತೆಗಳನ್ನು ಮುಚ್ಚಿಹಾಕಲು ಬಳಸುವ ದಮನಕಾರಿ ತಂತ್ರ. ಯುವಜನರ, ವಿದ್ಯಾರ್ಥಿಗಳ ಮತ್ತು ಕಾರ್ಮಿಕರ ಧ್ವನಿಯನ್ನು ಹತ್ತಿಕ್ಕುವ ಮೂಲಕ ಸಾರ್ವಜನಿಕ ವಲಯ ತಮ್ಮನ್ನು ಪ್ರಶ್ನಿಸದಂತೆ ಮಾಡುವುದು ಈ ಪ್ರಭುತ್ವದ ತಂತ್ರ.
ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಸಂಪತ್ತನ್ನು ಕಾರ್ಪೊರೇಟ್ ಶಕ್ತಿಗಳಿಗೆ ಧಾರೆ ಎರೆಯುತ್ತಿರುವ ಈ ವ್ಯವಸ್ಥೆಯಲ್ಲಿ, ಮಂತ್ರಿಗಳ ಅಥವಾ ಪ್ರಧಾನಿಯ ರಾಜೀನಾಮೆಯನ್ನು ಕೇವಲ ನೈತಿಕತೆಯ ಆಧಾರದ ಮೇಲೆ ನಿರೀಕ್ಷಿಸುವುದು ಭ್ರಮೆ ಅಷ್ಟೇ. ಕಾರ್ಪೊರೇಟ್ ಪರ ಸರ್ಕಾರಗಳಿಗೆ ಜನರ ಕಲ್ಯಾಣಕ್ಕಿಂತ ಉದ್ಯಮಿಗಳ ಹಿತಾಸಕ್ತಿಯೇ ಮುಖ್ಯವಾಗಿರುತ್ತದೆ. ಹೀಗಾಗಿ, ಕೇವಲ ಮನವಿಗಳ ಮೂಲಕ ಅಥವಾ ಸಾಂಪ್ರದಾಯಿಕ ರಾಜಕೀಯ ಒತ್ತಡಗಳ ಮೂಲಕ ಈ ಸರ್ಕಾರದಿಂದ ಉತ್ತರದಾಯಿತ್ವವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಇತಿಹಾಸದುದ್ದಕ್ಕೂ ಬಂಡವಾಳಶಾಹಿ ಮತ್ತು ದಬ್ಬಾಳಿಕೆ ನಡೆಸುವ ಸರ್ಕಾರಗಳು ತಮ್ಮಷ್ಟಕ್ಕೆ ತಾವೇ ಬದಲಾಗಿಲ್ಲ ಅಥವಾ ಮಣಿದಿಲ್ಲ. ಈ ಹಿಂದೆ ದೇಶದಲ್ಲಿ ವರ್ಷಾನುಗಟ್ಟಲೆ ನಡೆದ ಐತಿಹಾಸಿಕ ರೈತ ಹೋರಾಟವೇ ಇದಕ್ಕೆ ಸಾಕ್ಷಿ. ಕಾರ್ಪೊರೇಟ್ ಧೋರಣೆಯ ಇದೇ ಸರ್ಕಾರ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿದ್ದು ಸತತ, ಸಂಘಟಿತ ಚಳವಳಿಯ ಶಕ್ತಿ.
ಹಾಗಾಗಿ, ಇಂದಿನ ಕಾಲಘಟ್ಟವು ಚಳವಳಿಗಳಿಗೆ ಹಿನ್ನಡೆಯ ಕಾಲಘಟ್ಟವಲ್ಲ, ಬದಲಿಗೆ ಮತ್ತಷ್ಟು ತೀಕ್ಷ್ಣವಾದ ಹೋರಾಟದ ಅಗತ್ಯವಿರುವ ಕಾಲಘಟ್ಟ. ಕಾರ್ಕೋಚ್ ಜನತಾ ಪಾರ್ಟಿಯ 'ಸಂಸತ್ ಚಲೋ' ಕೇವಲ ಒಂದು ಸಚಿವರ ರಾಜೀನಾಮೆಗೆ ಸೀಮಿತವಾಗದೆ, ಶಿಕ್ಷಣದ ವ್ಯಾಪಾರೀಕರಣ ಮತ್ತು ಪ್ರಭುತ್ವದ ಜನವಿರೋಧಿ ನೀತಿಗಳ ವಿರುದ್ಧದ ಸಮರವಾಗಬೇಕಿದೆ. ಮತ್ತು ಈ ಹೋರಾಟವನ್ನು ಬೆಂಬಲಿಸುವವರು ಪಕ್ಷ, ಜಾತಿ, ಮತ್ತೊಂದು ಮಗದೊಂದು ನೋಡದೇ ಕೈ ಜೋಡಿಸಬೇಕಿದೆ.
ಒಂದು ವೇಳೆ ಈ ಸಿಜೆಪಿಯ ಹೋರಾಟಕ್ಕೆ ಮಣಿದು ಸಚಿವರ ರಾಜೀನಾಮೆ ಕೇವಲ ಒಂದು ಸಾಂಕೇತಿಕ ಗೆಲುವಾಗಬಹುದು ಅಷ್ಟೇ. ಜುಲೈ 20ರ ಸಂಸತ್ ಚಲೋ ಯಶಸ್ವಿಯಾಗಬೇಕಾದರೆ, ಅದು ಕೇವಲ ಒಂದು ಪಕ್ಷದ ಹೋರಾಟವಾಗಿ ಉಳಿಯದೆ, ದಮನಿತರ ಒಕ್ಕೂಟ ಧ್ವನಿಯಾಗಿ ರೂಪಾಂತರಗೊಳ್ಳಬೇಕು. ಪ್ರಭುತ್ವದ ಲಾಠಿ ಮತ್ತು ದೌರ್ಜನ್ಯಗಳಿಗೆ ಹೆದರದೆ ಬೀದಿಗಿಳಿಯುವ ಜನಶಕ್ತಿಯೇ ಅಂತಿಮವಾಗಿ ಬಂಡವಾಳಶಾಹಿ ಅಧಿಪತ್ಯವನ್ನು ಮಂಡಿಯೂರುವಂತೆ ಮಾಡುತ್ತದೆ ಎನ್ನುವುದಲ್ಲಿ ಏನೂ ಅನುಮಾನವಿಲ್ಲ.
-ಶ್ರೀರಾಜ್ ವಕ್ವಾಡಿ

No comments:
Post a Comment