ಕರ್ನಾಟಕದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೇಲ್ನೋಟಕ್ಕೆ ಕಾಣುವ ಬಿಜೆಪಿ-ಜೆಡಿಎಸ್ ದೋಸ್ತಿ ಕೇವಲ ಅಧಿಕಾರ ಹಿಡಿಯುವ ತಾತ್ಕಾಲಿಕ ತಂತ್ರವೇ ಹೊರತು ದೀರ್ಘಕಾಲದ ಸಿದ್ಧಾಂತವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಳೇ ಮೈಸೂರು ಭಾಗದಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಬಿಜೆಪಿ ಸದ್ಯಕ್ಕೆ ಪ್ರಾದೇಶಿಕ ಪಕ್ಷದ ಹೆಗಲ ಮೇಲೆ ಕೈಹಾಕಿದೆಯಾದರೂ, ಈ ಮೈತ್ರಿ ಒಳಗೊಳಗೇ ಕಮಲ ಪಾಳಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಒಂದು ಕಾಲದಲ್ಲಿ "ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ಹೋಗುತ್ತೇನೆ" ಎಂದು ಬಹಿರಂಗವಾಗಿ ಗುಡುಗಿದ್ದ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ಇಂದು ಅದೇ ಮೋದಿಯವರ ಶರಣು ಹೋಗಿರುವುದು ಪ್ರಾದೇಶಿಕ ಪಕ್ಷ ಎದುರಿಸುತ್ತಿರುವ ಅಸ್ತಿತ್ವದ ಸಂಕಟಕ್ಕೆ ಹಿಡಿದ ಕನ್ನಡಿ. ಮಾತ್ರವಲ್ಲದೇ, ಆರ್ ಎಸ್ ಎಸ್ ಬಗ್ಗೆಯೂ ಇದೇ ದೇವೇಗೌಡರು, ಕುಮಾರಸ್ವಾಮಿ ಬಾಯಿಗೆ ಬಂದ ಹಾಗೆ ಮಾತಾಡಿದ್ದರು. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಮತ್ತು ಆರ್ ಎಸ್ ಎಸ್ ಈ ಎಲ್ಲ ಹಳೇ ಹೇಳಿಕೆಗಳನ್ನು ಮರೆತಿಲ್ಲ. ದೇವೇಗೌಡರ ಕುಟುಂಬ ರಾಜಕಾರಣಕ್ಕೆ ರಾಜತಾಂತ್ರಿಕವಾಗಿಯೇ ಪಾಠ ಕಲಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ.
ರಾಜ್ಯ ರಾಜಕಾರಣದ ಇತ್ತೀಚಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜೆಡಿಎಸ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ತಂತ್ರಗಳಿಗೆ ಬಿಜೆಪಿ ಒಳಗೊಳಗೇ ಪ್ರತಿ-ತಂತ್ರಗಳನ್ನು ಹೆಣೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೇಲ್ನೋಟಕ್ಕೆ ಮೈತ್ರಿ ಗಟ್ಟಿಯಾಗಿದೆ ಎಂದು ಬಿಂಬಿಸಲಾಗುತ್ತಿದ್ದರೂ, ತೆರೆಮರೆಯಲ್ಲಿ ಕಮಲ ಪಾಳಯವು ಕುಮಾರಣ್ಣನ ರಾಜಕೀಯ ಆಟಕ್ಕೆ ಸೂಕ್ತ ಪಾಠ ಕಲಿಸಲು ಮತ್ತು ಅವರ ಪ್ರಭಾವವನ್ನು ನಿಯಂತ್ರಿಸಲು ವ್ಯವಸ್ಥಿತ ಕಾರ್ಯತಂತ್ರ ರೂಪಿಸುತ್ತಿದೆ.
ಜೆಡಿಎಸ್‌ನ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದಲ್ಲಿ ಅಂದರೇ, ಮಂಡ್ಯ, ಹಾಸನ, ಮೈಸೂರು, ತುಮಕೂರು ಭಾಗಗಳಲ್ಲಿ ತಾನು ಸ್ವತಂತ್ರವಾಗಿ ಬೆಳೆಯಬೇಕೆಂಬುದು ಬಿಜೆಪಿಯ ದೀರ್ಘಕಾಲದ ಕನಸು. ಮೈತ್ರಿಯ ನೆಪದಲ್ಲಿ ಜೆಡಿಎಸ್‌ಗೆ ಸಂಪೂರ್ಣ ಕ್ಷೇತ್ರ ಬಿಟ್ಟುಕೊಟ್ಟರೆ ತನ್ನ ಅಸ್ತಿತ್ವಕ್ಕೇ ಧಕ್ಕೆ ಬರುತ್ತದೆ ಎಂಬುದನ್ನು ಅರಿತಿರುವ ಬಿಜೆಪಿ, ಈಗ ಆ ಭಾಗದ ತನ್ನದೇ ಆದ ಸ್ಥಳೀಯ ನಾಯಕರನ್ನು ಹುಟ್ಟುಹಾಕಲು ಮತ್ತು ಸಂಘಟನೆಯನ್ನು ಬಲಪಡಿಸಲು ಮುಂದಾಗಿದೆ. ಇದು ಕುಮಾರಸ್ವಾಮಿ ಅವರ ಪ್ರಾದೇಶಿಕ ಹಿಡಿತ ಸಡಿಲಗೊಳಿಸುವ ಮೊದಲ ಹೆಜ್ಜೆ.
ಇನ್ನು, ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬಹುಮತ ಪಡೆದರೂ, ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ಸುತಾರಾಂ ಸಿದ್ಧವಿಲ್ಲ. ಈ ಹಿಂದೆ 20-20 ತಿಂಗಳ ಅಧಿಕಾರ ಹಂಚಿಕೆಯ ಸೂತ್ರದಲ್ಲಿ ಬಿಜೆಪಿಗೆ ಕೈಕೊಟ್ಟ ಇತಿಹಾಸ ಕುಮಾರಸ್ವಾಮಿ ಅವರಿಗಿದೆ. ಇಂತಹ ನಂಬಿಕಸ್ಥರಲ್ಲದ ಪ್ರಾದೇಶಿಕ ನಾಯಕರ ಹೆಗಲ ಮೇಲೆ ಅಧಿಕಾರ ಕೂರಿಸಲು ಬಿಜೆಪಿ ಈ ಬಾರಿ ಸಿದ್ಧವಿಲ್ಲ. ಸ್ವಂತ ಬಲದ ಮೇಲೆ ದಕ್ಷಿಣ ಭಾರತದಲ್ಲಿ ಹೆಜ್ಜೆ ಗುರುತು ಮೂಡಿಸಬೇಕೆಂಬ ಹಂಬಲದಲ್ಲಿರುವ ಬಿಜೆಪಿ, ಜೆಡಿಎಸ್‌ನ ಬಾಲಂಗೋಚಿಯಾಗಿ ಉಳಿಯಲು ಬಯಸುತ್ತಿಲ್ಲ.
ರಾಜ್ಯದಲ್ಲಿ ಬಿಜೆಪಿಗೆ ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಮೈತ್ರಿಗಿಂತ ಏಕಾಂಗಿ ಸ್ಪರ್ಧೆಯೇ ದೀರ್ಘಾವಧಿಯಲ್ಲಿ ಲಾಭದಾಯಕ. ಜೆಡಿಎಸ್ ಜೊತೆ ಕೈಜೋಡಿಸುವುದರಿಂದ ಬಿಜೆಪಿಯ ಸಾಂಪ್ರದಾಯಿಕ ಮತದಾರರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಜೆಡಿಎಸ್‌ನ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದ ಬಿಜೆಪಿ, ಈಗ ಅವರದ್ದೇ ಕುಟುಂಬವನ್ನು ಬೆಂಬಲಿಸುವುದು ಪಕ್ಷದ ಸಿದ್ಧಾಂತಕ್ಕೆ ಹೊಡೆತ ನೀಡುತ್ತದೆ.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ಸ್ವತಂತ್ರ ನಾಯಕರು ಬೆಳೆಯಲು ಜೆಡಿಎಸ್ ಮೈತ್ರಿ ದೊಡ್ಡ ತಡೆಯಾಗಿದೆ. ಮೈತ್ರಿ ಧರ್ಮದ ಹೆಸರಿನಲ್ಲಿ ಜೆಡಿಎಸ್‌ಗೆ ಕ್ಷೇತ್ರಗಳನ್ನು ಬಿಟ್ಟುಕೊಡುವುದರಿಂದ ಆ ಭಾಗದಲ್ಲಿ ಕಮಲ ಪಾಳಯದ ಸ್ಥಳೀಯ ಸಂಘಟನೆ ಸಂಪೂರ್ಣವಾಗಿ ಬಲಿಹೋಗುತ್ತದೆ. ಜಾತ್ಯತೀತ ತತ್ವದ ಮಾತನಾಡುತ್ತಾ ಅವಕಾಶವಾದಿ ರಾಜಕಾರಣ ಮಾಡುವ ಜೆಡಿಎಸ್‌ನೊಂದಿಗೆ ಸದಾ ಹೊಂದಾಣಿಕೆ ಮಾಡಿಕೊಳ್ಳುವುದು ಬಿಜೆಪಿಯ ರಾಷ್ಟ್ರೀಯ ಇಮೇಜ್‌ಗೆ ಧಕ್ಕೆ ತರುತ್ತದೆ.
ದೇವೇಗೌಡರ ಕುಟುಂಬ ರಾಜಕಾರಣ ಮತ್ತು ಪ್ರಾದೇಶಿಕ ಅಸ್ತಿತ್ವದ ಉಳಿವಿಗಾಗಿ ಮೈತ್ರಿಯನ್ನು ದಾಳವಾಗಿ ಬಳಸಿಕೊಳ್ಳಲು ಜೆಡಿಎಸ್ ಯತ್ನಿಸುತ್ತಿದೆ. ಆದರೆ, ಪ್ರಾದೇಶಿಕ ಪಕ್ಷಗಳನ್ನು ಹಂತಹಂತವಾಗಿ ನುಂಗಿ ನೀರು ಕುಡಿಯುವ ಬಿಜೆಪಿಯ ರಾಷ್ಟ್ರೀಯ ಕಾರ್ಯತಂತ್ರದ ಮುಂದೆ ಜೆಡಿಎಸ್‌ನ ಆಟ ಬಹಳ ದಿನ ನಡೆಯುವುದಿಲ್ಲ. 2028ರ ವೇಳೆಗೆ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡು, ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ಹೆಜ್ಜೆ ಇಡುವುದು ಪಕ್ಷದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅನಿವಾರ್ಯ ಮತ್ತು ಒಳಿತು.
-ಶ್ರೀರಾಜ್ ವಕ್ವಾಡಿ

No comments:
Post a Comment