Wednesday, December 14, 2022

ರಾಜಕೀಯದಲ್ಲಿ ಗೆಲ್ಲುತ್ತಿರುವ ಡಬಲ್ ಥಿಂಕ್ ಥಿಯರಿ

(ಸಾಂದರ್ಭಿಕ ಚಿತ್ರ)

ಪ್ರಧಾನಿ ಬಾಯಿಂದಲೇ ಬಂದ 'ಸುಳ್ಳು ಭರವಸೆ ನೀಡಿ ಅಧಿಕಾರ ಪಡೆದವರ ಮಾತು ಕೇಳಬೇಡಿ'

ಭಾರತವು ಸುಳ್ಳಿನ ರಾಜಕೀಯದ ದವಡೆಯಲ್ಲಿ ನಲುಗುತ್ತಿದೆ. ಯಾರು ಸುಳ್ಳಿನ ಭರವಸೆ ನೀಡಿ ಅಧಿಕಾರ ಹಿಡಿದರೋ ಅವರೇ ಇಂದು 'ಸುಳ್ಳು ಭರವಸೆ ನೀಡಿ ಅಧಿಕಾರ ಪಡೆದವರ ಮಾತು ಕೇಳಬೇಡಿ' ಎಂದು ಹೇಳುತ್ತಿರುವುದು ನಿಜಕ್ಕೂ ನಗೆಪಾಟಲಿಗೆ ಈಡಾಗುತ್ತಿದೆ.

ಸುಳ್ಳನ್ನು ಸತ್ಯ ಮಾಡುವುದಕ್ಕೆ, ಸತ್ಯವನ್ನು ಸುಳ್ಳು ಮಾಡುವುದಕ್ಕೆ ಇರುವ ಏಕೈಕ ಮಾಧ್ಯಮವೆಂದರೇ ಅದು ರಾಜಕೀಯ. ರಾಜಕೀಯ ನಡೆಸುವ ಸುಳ್ಳಿನ ಅಲೆಯನ್ನು ಕೇವಲ ಸತ್ಯ ಪರಿಶೀಲನೆಯಿಂದ ಸೋಲಿಸುವುದಕ್ಕೆ ಖಂಡಿತ ಸಾಧ್ಯವಿಲ್ಲ. ಸಾಮೂಹಿತ ಬುದ್ಧಿಯನ್ನು ಅಥವಾ 'ಮಾಸ್ ಬ್ರೈನ್'ನನ್ನು ಸುಳ್ಳಿನ ಹೇರಿಕೆಯಲ್ಲಿ ಮಂದಗೊಳಿಸಿದ ರಾಜಕೀಯ ದೇಶ ಕಂಡ ದೊಡ್ಡ ದುರಂತಗಳಲ್ಲೊಂದು.

 ದೇಶದಲ್ಲಿ ಮೋದಿ ಸರ್ಕಾರ ಬಳಸಿಕೊಂಡಿದ್ದು 'ಡಬಲ್ ಥಿಂಕ್' ಥಿಯರಿ. ಸಾಮಾಜಿಕ ಅನ್ಯಾಯದ ಗಹನ ತಿಳಿವಳಿಕೆ, ಸರ್ವಾಧಿಕಾರ ನಾಯಕತ್ವ ಗಾಢ ವಿರೋಧಿ ಜಾರ್ಜ್ಆರ್ವೆಲ್ಥೀಯರಿಯ ಪ್ರಕಾರ, 'ಅತ್ಯಂತ ಧಮನಕಾರಿ, ಸರ್ವಾಧಿಕಾರಿಯ ಶೇಡ್ ಇರುವ ನಾಯತ್ವದ ಆಡಳಿತ ಸುಳ್ಳನ್ನು ವೈಭವೀಕರಿಸಿ, ಸತ್ಯವನ್ನು ಪಾತಾಳಕ್ಕೆ ತಳ್ಳುತ್ತವೆ'. 'ಜನರು ಸುಳ್ಳನ್ನೇ ಸತ್ಯವೆಂದು ಕುರುಡಾಗಿ ನಂಬುತ್ತಾರೆ' 'ಪ್ರಜಾಪ್ರಭುತ್ವದ ಸ್ವಾತಂತ್ರ್ಯವನ್ನು ಗುಲಾಮಗಿರಿಯನ್ನಾಗಿ ಪರಿವರ್ತಿಸಲು ಪರಿಣಾಮಕಾರಿಯಾಗಿ ಶ್ರಮಿಸುತ್ತಾರೆ'. ಹೌದು, ಸದ್ಯಕ್ಕೆ ಭಾರತದಲ್ಲಿ ಇದೇ ಪರಿಸ್ಥಿತಿಯನ್ನು ದೇಶದ ನಾಗರಿಕರು ಹಂತ ಹಂತವಾಗಿ ಕಾಣುತ್ತಿದ್ದಾರೆ ಎನ್ನುವುದು ಸ್ಪಷ್ಟ.

ಇವೆಲ್ಲವನ್ನೂ ನೀರೆರೆದು ಪೋಷಿಸುತ್ತಿರುವುದು ದೇಶದ ಅತ್ಯಂತ ದುರ್ಬಲ ವಿರೋಧ ಪಕ್ಷ, ಆಡಳಿತ ಪಕ್ಷದ ಮುಖವಾಣಿಯಂತೆ ಕಾರ್ಯ ನಿರ್ವಹಿಸುತ್ತಿರುವ  ಮಾಧ್ಯಮ(ಆಡಳಿತ ಪಕ್ಷಗಳ ಮಡಿಲ ಕೂಸುಗಳಂತಿರುವ ಮಾಧ್ಯಮಗಳು) , ಸಾಮಾಜಿಕ ಮಾಧ್ಯಮದ ಸುಳ್ಳಿನ ಕಾರ್ಖಾನೆಗಳು, ರಾಜಕೀಯ ನಾಯಕರ ವ್ಯಕ್ತಿತ್ವ ಆರಾಧನೆ, ಮತದಾರರ ಕುರುಡು ನಂಬಿಕೆಗಳು ದೇಶದ ರಾಜಕಾರಣವನ್ನು ಹದಗೆಡಿಸುವ ಪ್ರಮುಖಾಂಶಗಳು. ಇಲ್ಲಿ ನಡೆಯುತ್ತಿರುವುದು ಅಧಿಕಾರದ ಸರಳ ಸುಳ್ಳುಗಳ ಪ್ರತಿಪಾದನೆ. ಯಾರು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಾರೆ ಮತ್ತು ಅವರ ಸುಳ್ಳುಗಳು ಸಿಲುಕಿಕೊಳ್ಳದಂತೆ  ಯಾರು ಹಿಂದೆ ಸರಿಯುತ್ತಾರೆ ಎಂಬ ಸ್ಪರ್ಧೆಯಾಗಿ ದೇಶದ ರಾಜಕೀಯ ಮಾರ್ಪಟ್ಟಿದೆ.

ಇದೊಂದು ವಿಚಾರವನ್ನು ಸ್ಪಷ್ಟವಾಗಿ ಗಮನಿಸಿ, 2016 ರಲ್ಲಿ, ಕ್ರಿಸ್ಟೋಫರ್ ಪಾಲ್ ಮತ್ತು ಮಿರಿಯಮ್ ಮ್ಯಾಥ್ಯೂಸ್ ಅವರು  ರಾಷ್ಟ್ರೀಯ ಭದ್ರತೆಯ ಮೂಲ ಗಹನವನ್ನು ಹೊಂದಿರುವ ರೀಸರ್ಚ್ ಅಂಡ್ ಡೆವೆಲಪ್ಮೆಂಟ್ ಕಾರ್ಪೊರೇಷನ್ ಎಂಬ ಅಮೇರಿಕನ್ ಥಿಂಕ್-ಟ್ಯಾಂಕ್ ಗೆ ಬರೆದ ಪತ್ರದಲ್ಲಿ, ರಷ್ಯಾದಲ್ಲಿ ವ್ಲಾಡಿಮಿರ್ ಪುಟಿನ್ ಸರ್ಕಾರವು ಬಳಸಿದ ಪ್ರಚಾರ ತಂತ್ರಗಳನ್ನು ವಿಶ್ಲೇಷಿಸಿದ್ದಾರೆ. ಅವರು ಅದನ್ನು "ಸುಳ್ಳಿನ ಫೈರ್ ಹೌಸ್" ಎಂದು ಕರೆದರು ರಷ್ಯಾದ ಮಾದರಿಯು ನಿಮ್ಮನ್ನು ಸುಳ್ಳನ್ನು ನಂಬುವಂತೆ ಮಾಡುವುದು ಅಷ್ಟೇ ಅಲ್ಲ - ಸುಳ್ಳು ಸಾಮಾನ್ಯವಾಗಿ ಸುಳ್ಳಾಗಿರುತ್ತದೆ, ಅದನ್ನು ನಂಬಲು ನೀವು ಮೂರ್ಖರಾಗುತ್ತೀರಿ. "ಮನರಂಜಿಸುವುದು, ಗೊಂದಲಗೊಳಿಸುವುದು ಮತ್ತು ಅಶಕ್ತರಾಗಿಸಿ ಮುಳುಗಿಸುವುದು" ಇಂತಹ ರಾಜಕೀಯ ಉದ್ದೇಶಗಳು ನಮ್ಮ ದೇಶದಲ್ಲೂ ಇದೆ ಎನ್ನುವುದು ಆಘಾತಕಾರಿ. ಮೋದಿ ರಷ್ಯಾದೊಂದಿಗೆ ಬೆಳಸಿಕೊಂಡ ಸ್ನೇಹ ಸಂಬಂಧದ ಹಿಂದೆ ಉದ್ದೇಶವೂ ಇರಬಹುದು ಎನ್ನುವುದನ್ನು ಹೇಗೆ ಅಲ್ಲಗೆಳೆಯುವುದಕ್ಕೆ ಸಾಧ್ಯ..?

'ಮೋದಿ ಭಾರತಕ್ಕೆ ದೇವರ ಕೊಡುಗೆ!' ಎಂದು ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿ ಹುದ್ದೆಗೆ ಏರುವ ಮುನ್ನ ಘೋಷಿಸಿದ್ದರು. ಮತ್ತು ಬಿಜೆಪಿ ಪರವಾಗಿರುವ ಸೋ ಕಾಲ್ಡ್ ರಾಜಕೀಯ ವಿಶ್ಲೇಷಕರು ಇದನ್ನೇ ಹೇಳಿ ತಮ್ಮ ಜನ್ಮ ಪಾವನವಾಯಿತು ಎಂಬಂತೆ ವರ್ತಿಸುತ್ತಾರೆ ಎನ್ನುವುದು ದೇಶ ಕಂಡ ಪರಮ ಸತ್ಯ. ಇರಲಿ ಬಿಡಿ, ಇವೆಲ್ಲವನ್ನೂ ನಿಜವೆಂದೇ ಭಾವಿಸೋಣ, ನೋಟು ಅಮಾನ್ಯೀಕರಣದಂತಹ ರಾಜಕೀಯದ ಮಹಾಕಾವ್ಯ ಇಡೀ ದೇಶವನ್ನೇ ಸಾಮಾಜಿಕ, ಆರ್ಥಿಕ ಹೊಡೆತವನ್ನು ಇದೇ 'ದೇವರು' ಕೊಟ್ಟ ವರವೆಂದು ಏಕೆ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೇ, ಮೋದಿ ನಾಯಕತ್ವ ಇಡೀ ದೇಶವನ್ನು ಸ್ವತಂತ್ರವಾಗಿ ಯೋಚಿಸುವ ಬುದ್ಧಿ ಶಕ್ತಿಯನ್ನು ಸಾಮಾಜಿಕ ಜಾಲತಾಣಗಳ ವಿಶ್ವವಿದ್ಯಾಲಯಗಳ ಮೂಲಕ ರೋಬೋ ಪಾಲಿಟಿಕ್ಸ್ ತಂತ್ರ ಪ್ರಯೋಗಿಸಿ ಕಿತ್ತೊಗೆದಿದೆ.

 2019ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜಕೀಯ ಪ್ರಚಾರ ಸಭೆಯಲ್ಲಿ ಮೋದಿ ಮಾತನಾಡುತ್ತಾ, "ನಿಮ್ಮ ಚೌಕಿದಾರ್ ಕರ್ತವ್ಯದಲ್ಲಿದ್ದಾಗ ದೇಶದ ಮೇಲೆ ಒಂದೇ ಒಂದು ಭಯೋತ್ಪಾದಕ ದಾಳಿ ನಡೆದಿದೆಯೇ?" ಎಂದು ಕೇಳಿದ್ದರು.  ಅವರು ಪ್ರಶ್ನೆಯನ್ನು ಕೇಳಿದ್ದು ಇದೇ ಮೊದಲಲ್ಲ. ಆದರೇ, ಇದು ಅಪಹಾಸ್ಯಕ್ಕೆ ಈಡಾಗಿತ್ತು ಎನ್ನುವುದಕ್ಕೆ ಇಲ್ಲಿ ಉಲ್ಲೇಖಿಲಾಗುತ್ತಿದೆ.  ಪಠಾಣ್ಕೋಟ್, ಗುರುದಾಸ್ಪುರ, ಅಮರನಾಥ ಯಾತ್ರೆ, ಉರಿ, ಪುಲ್ವಾಮಾ ಮುಂತಾದೆಡೆ ನಡೆದ ದಾಳಿಗಳು ಭಯೋತ್ಪಾದಕರ ದಾಳಿಯಲ್ಲ ಎಂದು ಪರಿಗಣಿಸಿದರೇ ಇಲ್ಲಿ ಯಾವುದೇ ಅಭ್ಯಂತರವಿಲ್ಲ. ಆದರೇ, ಇವೆಲ್ಲವೂ ಭಯೋತ್ಪಾದಕ ದಾಳಿ ಎಂದು ಪರಿಗಣನೆಗೆ ಒಳಗಾಗಿರುವುದರಿಂದ , ಮೋದಿ ಪ್ರಶ್ನೆಯನ್ನು ಮತ್ತೆ ನೆನಪಿಸುತ್ತದೆ. ನಿಮ್ಮ ಗಮನಕ್ಕೆ, ಕೇಂದ್ರ ಸರ್ಕಾರ ನೀಡಿರುವ ಅಂಕಿಅಂಶಗಳು ಹೇಳಿಕೆಯನ್ನು ಅಲ್ಲಗಳೆಯುತ್ತವೆ. ಡಿಸೆಂಬರ್ 19, 2018 ರಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರ ಲಿಖಿತ ಹೇಳಿಕೆಯ ಪ್ರಕಾರ , ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 872 ಭಯೋತ್ಪಾದಕ ದಾಳಿಗಳು, ಈಶಾನ್ಯದಲ್ಲಿ 1366 ಭಯೋತ್ಪಾದನಾ ಕೃತ್ಯಗಳು ಮತ್ತು 3045 ಭಯೋತ್ಪಾದನಾ ಕೃತ್ಯಗಳು ನಕ್ಸಲೀಯರನ್ನು ಒಳಗೊಂಡಿವೆ ಎನ್ನುವುದನ್ನು ಹೇಳುತ್ತವೆ. ಗಮನಿಸಿ ಒಬ್ಬ ಸಾಮಾನ್ಯ ನಾಗರಿಕನಾಗಿ ಯೋಚಿಸಿ‌, ರಾಜಕೀಯ ಭಾಷಣಗಳಲ್ಲಿ ಎಷ್ಟು ಸುಳ್ಳುಗಳನ್ನು ಹರಡಲಾಗುತ್ತದೆ ಮತ್ತು ನೀವೆಷ್ಟು ಮೂರ್ಖರಾಗಿ ಅದನ್ನು ನಂಬುತ್ತೀರಿ ಎಂದು.  ವಾಸ್ತವವಾಗಿ, ಬಿಜೆಪಿ ಐಟಿ ಸೆಲ್ನಿಂದ ಅನೇಕ ಪೋಸ್ಟ್ಗಳು ಮತ್ತು ವೀಡಿಯೊಗಳಲ್ಲಿಯೂ ಇಂತಹ ಸುಳ್ಳಿನ ಸಾಲುಗಳನ್ನೇ ಹರಡಿ ದೇಶದ ನಾಗರಿಕರನ್ನು ತಮ್ಮ ರಾಜಕೀಯಕ್ಕಾಗಿ ಬುದ್ಧಿ ಹೀನರನ್ನಾಗಿ ಬಳಸಿಕೊಂಡಿದೆ. ಅಷ್ಟೇಕೆ, ಸುಳ್ಳುಗಳು ಮತ್ತು ಅರ್ಧ-ಸತ್ಯಗಳನ್ನು ಕಲ್ಪಿಸುವ ಮತ್ತು ಪ್ರಸಾರ ಮಾಡುವ ಇಂತಹ ರಾಷ್ಟ್ರೀಯ ಪಕ್ಷಗಳ ಐಟಿ ಸೆಲ್ ಗಳ ದುಷ್ಕ್ರತ್ಯಗಳನ್ನು ಅನೇಕ ತನಿಖಾ ವರದಿಗಳು ಬಯಲಿಗೆಳೆದಿದ್ದು ಕೂಡ ಇದೆ ಎನ್ನುವುದು ಇಲ್ಲಿ ಗಮನಾರ್ಹ.

ಮೋದಿ ಹೇಳಿದ ಸುಳ್ಳುಗಳ ಬಗ್ಗೆ ಮತ್ತಷ್ಟು ಉದಾಹರಣೆಗಳನ್ನು ಮತ್ತು ಮೋದಿ ಜನರಿಗೆ ವಂಚಿಸಿರುವ ಬಗ್ಗೆ ಮತ್ತಷ್ಟು ಹೇಳಬಹುದು ಆದರೇ, ಮತ್ತೆ ಮತ್ತೆ ಹೇಳಿದರೇ ಅದು ವಾಕರಿಕೆ ಬರುವಷ್ಟಾಗಬಹುದು. ಇಂತಹ ಒಬ್ಬ ಮಾಸ್ ಲೀಡರ್, ಗೌರವಾನ್ವಿತ ರಾಜಕೀಯ ವರ್ಚಸ್ಸನ್ನು ಹೊಂದಿರುವ ವ್ಯಕ್ತಿ ತನ್ನ ರಾಜಕೀಯಕ್ಕೋಸ್ಕರ ಇಷ್ಟೆಲ್ಲಾ ಸುಳ್ಳು ಹೇಳುವ ಅಗತ್ಯ ಏಕಿದೆ..? ರಾಷ್ಟ್ರೀಯವಾದಿ ಪುರುಷತ್ವದ ಸರ್ಟಿಫಿಕೇಟ್ ಪಡೆಯುವುದಕ್ಕೆ ಮೋದಿ ಹೇಳಿದ್ದೆಲ್ಲವನ್ನೂ ಮತ್ತು ಮಾಡಿದ್ದೆಲ್ಲವನ್ನು ಪರಮ ಸತ್ಯ ಎಂದು ಹೇಳುವ ದರ್ದೇನಿದೆ..?

ಸುಳ್ಳುಗಳನ್ನು ಹೇರಲು ರಾಜಕೀಯ ಪಕ್ಷಗಳು ಬಳಸಿಕೊಂಡ ಮಾಧ್ಯಮ ಸಾಮಾಜಿಕ ಜಾಲತಾಣ. ಇಲ್ಲಿ ವೈರಲ್ ಪಟ್ಟ ಧರಿಸಿದ ಎಲ್ಲವೂ ಶ್ರೇಷ್ಠ ಎಂದು ಬಿಂಬಿಸುವ ವಾತಾವರಣ ಸೃಷ್ಟಿಯಾಗಿದೆ. ಹ್ಯಾಶ್ಟ್ಯಾಗ್ಗಳು, ಮೀಮ್ಗಳು ಮತ್ತು ಭಾವನಾತ್ಮಕವಾಗಿ ಬಳಕೆದಾರರ ಬುದ್ದಿಗೆ ಕಂಪ್ಯೂಟ್ ಮಾಡಲು ಯೋಗ್ಯವಾಗುವಂತೆ ಸೃಷ್ಟಿ ಮಾಡಿದ ವೀಡಿಯೊಗಳು, ಪೋಸ್ಟ್ ಗಳು ಸಿದ್ಧವಾಗುತ್ತವೆ. ಘೋಷಣೆ ಮಾಡಿದ ಕ್ಷಣದಲ್ಲಿ, ಸಾಮಾಜಿಕ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳೆರಡೂ   ಅದನ್ನು ಬೆಂಬಲಿಸುವ ಸಂದೇಶಗಳೊಂದಿಗೆ ಮತದಾರ ಪ್ರಭುಗಳ ಮೇಲೆ ಬಾಂಬ್ ಹಾಕಲು ಪ್ರಾರಂಭಿಸುತ್ತವೆ. ಇನ್ನು,  ದೃಢೀಕರಣ ಪಕ್ಷಪಾತ, ಮಾಹಿತಿಯ ಮಿತಿಮೀರಿದ, ಭಾವನಾತ್ಮಕ ಬೆದರಿಕೆ, ವಿಶ್ವಾಸಾರ್ಹ ಸ್ನೇಹಿತರಿಂದ ಸಂದೇಶವನ್ನು ಹಂಚಿಕೊಂಡಾಗ ಅದನ್ನು ನಂಬುವ ಇಚ್ಛೆ, ಇತ್ಯಾದಿಗಳು ರೀತಿಯ ರಾಜಕೀಯದ ಪ್ರಚಾರದ ಪಡಸಾಲೆಯ ಟೂಲ್ ಕಿಟ್ ಗಳಾಗಿ ಸುಳ್ಳಿನ ಸಾಮ್ರಾಜ್ಯವನ್ನೇ ರಚಿಸಿದೆ.

ಈಗ ಮತ್ತೆ ಚುನಾವಣಾ ಬಿಸಿ. ಮತ್ತೆ ಸುಳ್ಳಿನ ಕಾರ್ಖಾನೆಗಳ ಕಾರ್ಯಾರಂಭವಾಗಲಿದೆ. ಅಲ್ಲಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ಹೆಸರಿನಲ್ಲಿ ರಾಜಕೀಯ ಪ್ರಚಾರ ಸಭೆಗಳು ಆರಂಭವಾಗಿವೆ. ಸ್ವತಃ ಸುಳ್ಳಿನ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ, 'ಸುಳ್ಳು ಭರವಸೆ ನೀಡಿ ಅಧಿಕಾರ ಪಡೆದವರ ಮಾತು ಕೇಳಬೇಡಿ' ಎಂದು ಹೇಳುತ್ತಿರುವುದು ಮೋದಿ ವಿರಚಿತ ಮತ್ತೊಂದು ಹಾಸ್ಯ ಪ್ರಸಂಗ.

ವಿರೋಧ ಪಕ್ಷಗಳು ಹೇಗೆ ಬಲಗೊಳ್ಳಬೇಕು ? : ದುರ್ಬಲ ವಿರೋಧವೇ ದೇಶದಲ್ಲಿ ಇಷ್ಟರ ಮಟ್ಟಿಗೆ ಸುಳ್ಳು ಹರಡುವುದಕ್ಕೆ ಸಾಧ್ಯ ಮಾಡಿಕೊಟ್ಟಿದ್ದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಿರ್ದಿಷ್ಟ ವಿಷಯದ ಕುರಿತು ಸುಳ್ಳು ಮಾಹಿತಿಯನ್ನು ಪ್ರಸ್ತುತಪಡಿಸುವಲ್ಲಿ ಸುಲಭ ಮಾರ್ಗವನ್ನು ತೋರಿಸಿ ಕೊಟ್ಟಿದ್ದೇ ದೇಶದ ಅಸಾಮರ್ಥ್ಯ ವಿರೋಧ ಪಕ್ಷಗಳು. ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಸುಳ್ಳು ಮೊದಲ ಸ್ಥಾನವನ್ನು ಪಡೆದುಕೊಂಡಿತು. ವಿರೋಧ ಪಕ್ಷ ಸುಳ್ಳನ್ನು ಮಣಿಸುವುದಕ್ಕೆ ಸೋಮಾರಿತನ ತೋರಿಸಿದ್ದು ಕೂಡ ದೇಶದ ಸಾಮಾಜಿಕ ಸ್ವಾಸ್ಥ್ಯ ಹದಗೆಡುವುದಕ್ಕೆ ಒಂದು ಕಾರಣ ಎಂದರೇ ತಪ್ಪಿಲ್ಲ. ಸುಳ್ಳನ್ನೇ ಜಗತ್ತು ಸತ್ಯವೆಂದು ನಂಬಿರುವ ಕಾಲಘಟ್ಟದಲ್ಲಿ ಸತ್ಯ ಪರಿಶೀಲನೆ ಮಾಡುವುದೆಂದರೇ, ಕೋವಿಡ್ 19 ಗೆ ಪ್ಯಾರಸಿಟಮಲ್ ಗುಳಿಗೆ ತೆಗೆದುಕೊಂಡ ಹಾಗೆ. ಪ್ರಪಂಚದಾದ್ಯಂತ, ಸುಳ್ಳಿನ ಬೆಂಕಿ-ಹೊದಿಕೆಯು ಅಭಿವೃದ್ಧಿ ರಹಿತ ರಾಜಕಾರಣದ ಪ್ರಬಲ ಪ್ರಚಾರ ಸಾಧನವಾಗುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವುದಕ್ಕೆ ಮುಂದಾಗದಿದ್ದರೇ ದೇಶದ ಸ್ಥಿತಿ ಮುಂದೆ ಚಿಂತಾಜನಕವಿದೆ. ಕೇವಲ ಸತ್ಯ ಪರಿಶೀಲನೆಯಿಂದ ಆಟ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಇದು ಸುಳ್ಳು ಎಂದು ಸಾರ್ವಜನಿಕ ಅಭಿಪ್ರಾಯ ಮೂಡಿಸಬೇಕಿದೆ. ಸುಳ್ಳಿನ ಸಾಲುಗಳೆ ಸತ್ಯ ದಾಳಿ ಮಾಡಬೇಕಿದೆ. ವಿಷಯವನ್ನು ಪ್ರಸ್ತಾಪಿಸಲು, ಪ್ರಥಮ ಅಭಿಪ್ರಾಯ ಕೊನೆಯದ್ದಾಗುವುದಕ್ಕೆ ಬಿಡದಂತೆ ನೋಡಿಕೊಳ್ಳವ ತುರ್ತಿದೆ.

ಒಟ್ಟಿನಲ್ಲಿ, ರಾಜಕೀಯದ 'ಧ್ರುವೀಕರಣದ ಕಾನ್ಸೆಪ್ಟ್ ಗಳು' ದೇಶದ ಸಾಮಾಜಿಕ ಸ್ಥಿತಿಯನ್ನು ಹದಗೆಡಿಸಿವೆ. ಇಷ್ಟೆಲ್ಲಾ ಆದ ಮೇಲೂ ದೇಶ ಮತ್ತೆ ಸುಳ್ಳನ್ನು ಹೇಳಿದವರನ್ನೇ ಅಧಿಕಾರಕ್ಕೆ ಆರಿಸುತ್ತದೋ ಅಥವಾ ಬದಲಾವಣೆ ಬಯಸುತ್ತದೋ ಎನ್ನುವುದರ ಬಗ್ಗೆ ಅಚ್ಚರಿ ಇದೆ.

-ಶ್ರೀರಾಜ್ ವಕ್ವಾಡಿ

Wednesday, December 7, 2022

ಪಟೇಲರ ಸಾಮ್ರಾಜ್ಯದಲ್ಲಿ ಗೆದ್ದ ರಾಜಕೀಯ ಆಟ

(ಸಾಂದರ್ಭಿಕ ಚಿತ್ರ) 

ಸರ್ದಾರ್ ‘ಏಕತಾ ಪ್ರತಿಮೆ’ಯ ಹಿಂದೆ ಮರೆಯಾಗಿ ಉಳಿದ ಮೋದಿ ಜಾತಿ ಲೆಕ್ಕಾಚಾರ..!   

ಜಾತಿ ಲೆಕ್ಕಾಚಾರವನ್ನು ಬಿಟ್ಟು ಯಾವ ರಾಜಕೀಯವೂ ನಡೆಯುವುದಿಲ್ಲವೆಂಬುವುದು ಲೋಕಸತ್ಯ. ಚುನಾವಣೆ ಬಂದಾಗ ತನ್ನ ಪಾರುಪತ್ಯದೊಳಗಿರುವ ಎಲ್ಲಾ ಜಾತಿ ಸಮುದಾಯಗಳನ್ನು ಓಲೈಸುವ ದೃಷ್ಟಿಯಲ್ಲಿ ಯೋಜನೆಗಳನ್ನು, ಅನುದಾನಗಳನ್ನು ಬಿಡುಗಡೆ ಮಾಡುವುದು ಅಥವಾ ಭರವಸೆ ನೀಡುವುದು ರಾಜಕೀಯ ಪಕ್ಷಗಳ ಸಾಮಾನ್ಯ ಗುಣಲಕ್ಷಣ. ಜಾತಿ ಲೆಕ್ಕಾಚಾರದಲ್ಲೇ ಬದುಕುವ ರಾಜಕೀಯದ ಒಳಸುತ್ತಿನ ಆಟ ಸಾಮಾನ್ಯವಾಗಿ ಅಧಿಕಾರವಧಿಯ ಒಳ್ಳೆಯ ಕೆಲಸವೇ ಎಂದು ಬಿಂಬಿತವಾಗುವುದು ರಾಜಕೀಯದ ಗುಟ್ಟು. ಸದ್ಯ ಗುಜರಾತ್‌ನಲ್ಲಿ ಚುನಾವಣೆ ನಡೆದಿದ್ದು, ರಾಷ್ಟ್ರೀಯ ಪಕ್ಷಗಳಾದ ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಕೂಡ ಜಾತಿ ಲೆಕ್ಕಾಚಾರದ ಮೂಲಕವೇ ಚುಣಾವಣೆ ಮುಗಿಸಿವೆ. 

ಪಟೇಲ್ ಸಮುದಾಯ ಗುಜರಾತ್‌ನ ಪ್ರಬಲ ಸಮುದಾಯ. ಈ ಸಮುದಾಯವನ್ನು ಓಲೈಸಿಕೊಳ್ಳುವುದು ಗುಜರಾತ್ ರಾಜಕೀಯದ ಪರಮ ಅಸ್ತ್ರ. ಗುಜರಾತ್‌ನಲ್ಲಿ ಪಟೇಲ್ ಸಮುಧಾಯ ಚುನಾವಣೆಯ ನಿರ್ಣಾಯಕ ಸಮುದಾಯ. ಪಟೇಲ್ ಮತದಾರರ ಬಾಹುಳ್ಯವಿರುವ ಗುಜರಾತ್‌ನಲ್ಲಿ ಅದೇ ಸಮುದಾಯದ ಅಭ್ಯರ್ಥಿಗಳನ್ನೇ ಹೆಚ್ಚಾಗಿ ಕಣಕ್ಕಿಳಿಸಿ ಅಧಿಕಾರ ಅನುಭವಿಸಿದ್ದು ಗುಜರಾತ್‌ನ ರಾಜಕೀಯ ಇತಿಹಾಸ ಹೇಳುತ್ತದೆ. ಈ ಬಾರಿಯ ಚುನಾವಣೆಯೂ ಅದರಂತೆಯೇ ಮುಗಿದಿದೆ. 

ಆಶ್ಚರ್ಯವೆನ್ನಿಸಿದರೂ ಕೂಡ ಪ್ರಸ್ತುತ ಗುಜರಾತ್‌ನ ರಾಜಕೀಯದಲ್ಲಿ ಶೇಕಡಾ ೨೫ ರಷ್ಟು ಶಾಸಕರು ಹಾಗೂ ಸಂಸದರು ಇದೇ ಸಮುದಾಯದವರು ಎನ್ನುವುದು ಇಲ್ಲಿ ಗಮನಾರ್ಹ. ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಬಲರಾಗಿರುವ ಈ ಸಮುದಾಯವನ್ನೇ ರಾಜಕೀಯ ಪಕ್ಷಗಳು ಇಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಸದಾ ಬಳಸಿಕೊಳ್ಳುತ್ತವೆ ಎನ್ನುವುದ ಗುಜರಾತ್ ರಾಜಕೀಯದ ಸತ್ಯ.  

ಗುಜರಾತ್‌ನ ಪಾಟಿದಾರ ಸಮುದಾಯವನ್ನು ವಿಶ್ವದಾದ್ಯಂತ ಪಟೇಲರು ಎಂದು ಕರೆಯಲಾಗುತ್ತದೆ. ಕೃಷಿ ಮೂಲ ಸಂಸ್ಕೃತಿಯಿಂದ ಬಂದ ಈ ಸಮುದಾಯ ಮೂಲತಃ ಪಂಜಾಬ್‌ನವರು. ಪಂಜಾಬ್‌ನಲ್ಲಿ ಗೆದ್ದು ಬೀಗಿದ ನಂತರ ಆಮ್ ಆದ್ಮಿ ಪಕ್ಷ ಗುಜರಾತ್‌ನತ್ತ ಕಣ್ಣಿಟ್ಟಿದ್ದು ಈ ಕಾರಣಕ್ಕೂ ಹೌದು. ಸುಲ್ತಾನರ ಕಾಲಘಟ್ಟದಲ್ಲಿ ಕೃಷಿ ಮಾಡುವ ಸಲುವಾಗಿ ಪಂಜಾಬ್‌ನಿಂದ ಈ ಸಮುದಾಯದವರನ್ನು ಇಲ್ಲಿಗೆ ಕರೆತಂದು ಹಳ್ಳಿಹಳ್ಳಿಗಳನ್ನೇ ಕೃಷಿ ಗುತ್ತಿಗೆಗೆ ನೀಡಲಾಯಿತು ಎನ್ನುವುದು ಗುಜರಾತ್‌ನ ಐತಿಹಾಸಿಕ ಸತ್ಯ.

ಪಟೇಲರಿಲ್ಲದೇ ಗುಜರಾತ್‌ನಲ್ಲಿ ಯಾವುದೂ ಯಶಸ್ವಿಯಾಗುವುದಕ್ಕೆ ಖಂಡಿತ ಸಾಧ್ಯವಿಲ್ಲ. ಕೆಲವು ದಶಕಗಳಿಂದ ರಾಜಕೀಯದಲ್ಲಿರುವ ಪಟೇಲ್ ಸಮುದಾಯ ಗುಜರಾತ್‌ನಲ್ಲಿ ಸುಮಾರು ೧೪ ಶೇಕಡಾದಷ್ಟು ಮಂದಿ ಇದ್ದಾರೆ. ಪಟೇಲ ಸಮುದಾಯವನ್ನು ಕಡೆಗಣಿಸಿದ ಪಕ್ಷ ಅಧಿಕಾರ ಕಳೆದುಕೊಂಡ ಉದಾಹರಣೆಯೂ ಗುಜರಾತ್‌ನಲ್ಲಿ ಇದೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಚುನಾವಣೆ ವಿಚಾರದಲ್ಲಿ ಹೇಗೆ ನಿರ್ಣಾಯಕ ಪಾತ್ರ ವಹಿಸುತ್ತದೆಯೋ ಹಾಗೆಯೇ ಗುಜರಾತ್‌ನಲ್ಲಿ ಪಾಟೀದಾರ ಸಮುದಾಯ ಅಥವಾ ಈ ಪಟೇಲ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ. ಪಟೇಲ್ ಸಮುದಾಯವನ್ನು ನಿರ್ಲಕ್ಷಿಸಿದ ಕಾಂಗ್ರೆಸ್, ಸುಮಾರು ಇಪ್ಪತ್ತೇಳು ವರ್ಷಗಳಿಂದ ಅಧಿಕಾರದಿಂದ ಹೊರಗೆ ಉಳಿದಿರುವುದು ಈ ಸಮುದಾಯದ ಪ್ರಾಬಲ್ಯವನ್ನು ತಿಳಿಸುತ್ತದೆ. 

ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಗುಜರಾತ್‌ನಲ್ಲಿ ಪಟೇಲ್ ಸಮುದಾಯವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡ ಬಿಜೆಪಿ, ಪ್ರತಿ ಚುನಾವಣೆಯಲ್ಲಿ ಸರಿಸುಮಾರು ಎಂಬತ್ತರಿಂದ ಎಂಬತ್ತೈದು ಶೇಕಡಾದಷ್ಟು ಪಟೇಲ್ ಸಮುದಾಯದ ಮತಗಳನ್ನು ತನ್ನದಾಗಿಸಿಕೊಳ್ಳುತ್ತದೆ ಎನ್ನುವುದು ಇಲ್ಲಿನ ರಾಜಕೀಯ. ಕರ್ನಾಟಕದಲ್ಲಿ ಹೇಗೆ ಲಿಂಗಾಯತ ಸಮುದಾಯ ಬಿಜೆಪಿಯನ್ನು ಚುನಾವಣೆಯಲ್ಲಿ ಪೊರೆಯುತ್ತದೆಯೋ ಹಾಗೆಯೇ ಗುಜರಾತ್‌ನಲ್ಲಿ ಬಿಜೆಪಿಯನ್ನು ಪೊರೆಯುತ್ತಿರುವುದು ಪಟೇಲ್ ಸಮುದಾಯ. 

ಪ್ರಸ್ತುತ ವಿಧಾನಸಭೆಯ ಒಟ್ಟು ೧೮೨ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ೪೪ ಮಂದಿ ಪಾಟೀದಾರ ಅಥವಾ ಪಟೇಲ್ ಸಮುದಾಯದವರು. ಗುಜರಾತ್‌ನ ಬರೋಬ್ಬರಿ ೮೩ ವಿಧಾಸಭಾ ಕ್ಷೇತ್ರಗಳ ತೀರ್ಪನ್ನು ಇದೇ ಸಮುದಾಯ ನಿರ್ಧರಿಸುತ್ತವೆ ಎನ್ನುವುದು ಇದರ ರಾಜಕೀಯ ಗುಟ್ಟು. ಈ ೮೩ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ಶೇಕಡಾ ೩೫ಕ್ಕೂ ಹೆಚ್ಚು ಈ ಸಮುದಾಯದವರಿದ್ದಾರೆ. ಇವರ ಮತಗಳು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀಳುತ್ತವೆ.

ಇದೇ ಸಮುದಾಯದಿಂದ ರಾಜಕೀಯ ಪ್ರವೇಶಿಸಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದವರ ಪಟ್ಟಿ ಗುಜರಾತ್‌ನಲ್ಲಿ ದೊಡ್ಡದಿದೆ. ಈ ಸಮುದಾಯ ಮತ್ತು ರಾಜಕೀಯದ ನಂಟಿನ ಇತಿಹಾಸವನ್ನು ಗಮನಿಸುವುದಾದರೇ, ಗುಜರಾತ್‌ನಲ್ಲಿ ಒಟ್ಟು ಎಂಟು ಸಾರ್ತಿ ಐದು ಮಂದಿ ಪಾಟೀದಾರ್ ಸಮುದಾಯದ ರಾಜಕೀಯ ನಾಯಕರು ಇಲ್ಲಿ ಮುಖ್ಯಮಂತ್ರಿಗಳಾಗಿ ಆಳ್ವಿಕೆ ನಡೆಸಿದ್ದಾರೆ. (ಚಿಮ್‌ನಾಭಾಯ್ ಪಟೇಲ್(ಕಾಂಗ್ರೆಸ್) , ಬಾಬುಭಾಯ್ ಪಟೇಲ್(ಜನತಾ ಮೋರ್ಚಾ, ಜನತಾ ಪಾರ್ಟಿ). ಕೇಶುಭಾಯ್ ಪಟೇಲ್(ಬಿಜೆಪಿ), ಆನಂದಿಬೇನ್ ಪಟೇಲ್ (ಬಿಜೆಪಿ), ಭೂಪೇಂದ್ರಭಾಯ್ ಪಟೇಲ್ (ಬಿಜೆಪಿ)ತಮ್ಮ ರಾಜಕೀಯ ಹಾಗೂ ಸಮುದಾಯದ ಬಲದ ಮೇಲೆ ಮುಖ್ಯಮಂತ್ರಿಗಳಾದವರು). 

ಮಧ್ಯ ಗುಜರಾತ್(ಲೇಯುವಾ ಪಟೇಲರು ಹೆಚ್ಚಿರುವ ಪ್ರದೇಶ) ಹಾಗೂ ಸೌರಾಷ್ಟ್ರ(ಕಡ್ವಾ ಪಟೇಲರ ಬಾಹುಳ್ಯವಿರುವ ಪ್ರದೇಶ) ಭಾಗಗಳಲ್ಲಿ ಹೆಚ್ಚಿರುವ ಈ ಸಮುಧಾಯ ರಾಜಕೀಯ ಹಾಗೂ ಸಂಘಟನೆ, ಚಳುವಳಿ ವಿಚಾರದಲ್ಲಿ ತಮ್ಮದೇ ಆದಂತಹ ಪ್ರಭಾವವನ್ನು ಹೊಂದಿದ್ದಾರೆ. ಗುಜರಾತ್‌ನ ಒಟ್ಟು ೬೦.೪ ಮಿಲಿಯನ್ ಜನಸಂಖ್ಯೆಯಲ್ಲಿ ಸುಮಾರು ಒಂದು ಕೋಟಿ ಹತ್ತು ಲಕ್ಷದಷ್ಟು ಮಂದಿ ಈ ಸಮುದಾಯದವರಿದ್ದಾರೆ (ಸುಮಾರು ಒಟ್ಟು ಜನಸಂಖ್ಯೆಯ ೧೪ ಶೇಕಡಾದಷ್ಟು ಜನ. ಸುಮಾರು ಶೇಕಡಾ ೬೦ರಷ್ಟು ಲೆಯುವಾ ಪಟೇಲ್ ಹಾಗೂ ಸುಮಾರು ಶೇಕಡಾ ೪೦ರಷ್ಟು ಕಡ್ವಾ ಪಟೇಲ್). 

ಪಟೇಲ್ ಸಮುದಾಯದ ಯುವಶಕ್ತಿಯನ್ನು ಕಳೆದುಕೊಂಡ ಕಾಂಗ್ರೆಸ್ : ಎರಡು-ಮೂರು ದಶಕಗಳ ಕಾಲದಿಂದ ಗುಜರಾತ್‌ನನ್ನು ಆಳ್ವಿಕೆ ಮಾಡಿದ ಬಿಜೆಪಿ ಎದರು ಕಾಂಗ್ರೆಸ್ ಹೇಳಹೆಸರಿಲ್ಲದಂತಾಗಿತ್ತು. ೨೦೧೭ರಲ್ಲಿ ಹಾರ್ದಿಕ ಪಟೇಲ್ ಕಾಂಗ್ರೆಸ್‌ನಲ್ಲಿ ಇದ್ದಾಗ ಪಾಟೀದಾರ್ ಚಳುವಳಿಯ ನೇತೃತ್ವ ವಹಿಸಿದ್ದರು. ಅಷ್ಟಾಗಿಯೂ ಗುಜರಾತ್‌ನ ಪಟೇಲರು ಬಿಜೆಪಿಯನ್ನು ಬಿಟ್ಟುಕೊಟ್ಟಿಲ್ಲ. ಆದರೂ ದಕ್ಷಿಣ ಗುಜರಾತ್ ಹಾಗೂ ಸೌರಾಷ್ಟ್ರದ ಕೆಲವಡೆ ಪಟೇಲರು ಅಕ್ಷರಶಃ ಕಾಂಗ್ರೆಸ್‌ನನ್ನು ಬೆಂಬಲಿಸಿದ್ದರು ಎನ್ನುವುದು ಸತ್ಯ. ಹೌದು, ಕಳೆದ ಬಾರಿಯ ಗುಜರಾತ್‌ನ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಸುದ್ದಿಯಲ್ಲಿದ್ದ ಒಂದೇ ಒಂದು ಹೆಸರು ಹಾರ್ದಿಕ್ ಪಟೇಲ್. ರಾಜ್ಯಾದ್ಯಂತ ಪಟೇಲ್ ಸಮುದಾಯವನ್ನು ಒಗ್ಗೂಡಿಸಿದ ಹಾರ್ದಿಕ್ ಎಂಬ ಯುವ ನಾಯಕ ಗುಜರಾತ್‌ನಲ್ಲಿ ಒಂದು ಹಂತದಲ್ಲಿ ಬಿಜೆಪಿಯ ನಿದ್ದೆಗೆಡಿಸಿದ್ದ. ಈ ಯುವಕನ ಸಾಮರ್ಥ್ಯ ಅರಿತ ಕಾಂಗ್ರೆಸ್, ತನ್ನೊಳಗೆ ಸೇರಿಸಿಕೊಂಡಿತ್ತು. ಕಾಂಗ್ರೆಸ್‌ಗೆ ಇದರಿಂದ ಒಂದಿಷ್ಟು ಲಾಭವೂ ಆಗಿತ್ತು. ಆದರೇ, ಈಗ ಹಾರ್ದಿಕ ಕಾಂಗ್ರೆಸ್‌ನೊAದಿಗಿನ ಆಂತರಿಕ ವೈಮನಸ್ಸಿನ ಕಾರಣದಿಂದಾಗಿ ಬಿಜೆಪಿ ಸೇರಿಕೊಂಡಿದ್ದಾರೆ. ಇತ್ತ ಸೌರಾಷ್ಟ್ರ ಭಾಗದ ಪ್ರಭಾವಿ ಉದ್ಯಮಿ ಹಾಗೂ ಶ್ರೀ ಖೋಡಾಲ್ದಾಮ್ ಟ್ರಸ್ಟ್‌ನ ಅಧ್ಯಕ್ಷ ನರೇಶ್ ಪಟೇಲ್ ಕೂಡ ತಣ್ಣಗಾಗಿದ್ದು, ಕಾಂಗ್ರೆಸ್ ಪಾಲಿಗೆ ದೊಡ್ಡ ನಷ್ಟವೇ ಆಗಿದೆ ಎಂದರೇ ತಪ್ಪಿಲ್ಲ. 

ಸರ್ಧಾರ್ ಏಕತಾ ಪ್ರತಿಮೆ ಮೋದಿ ಮಾಸ್ಟರ್ ಪ್ಲ್ಯಾನ್ :  ಪಟೇಲ್ ಸಮುದಾಯವನ್ನು ಓಲೈಸುವ ಕೆಲಸವನ್ನು ಮೋದಿ ಹಾಗೂ ಬಿಜೆಪಿ ಸರ್ಕಾರ ಮಾಡಿಕೊಂಡು ಬಂದಿದೆ. ಕಾಂಗ್ರೆಸ್‌ಗೆ ಟಕ್ಕರ್ ನೀಡುವ ಹಾಗೆ ಆದರ್ಶ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರ ಕಂಡ ಶ್ರೇಷ್ಟ ರಾಜಕಾರಣಿ ಎಂದೆಲ್ಲಾ ಸರ್ಧಾರ್ ವಲಭಭಾಯ್ ಪಟೇಲ್‌ರನ್ನು ರಾಜಕೀಯವಾಗಿ ವೈಭವೀಕರಿಸಿ, ನರ್ಮದಾ ನದಿಯ ಅಣೆಕಟ್ಟಿನ ಎದುರಾಗಿ ೨.೫ ಕೀಲೋಮೀಟರ್ ದೂರದ ಸಾಧು ಬೆಟ್ ಎಂಬ ದ್ವೀಪದಲ್ಲಿ ‘ಏಕತಾ ಪ್ರತಿಮೆ’ ಎಂಬ ಹೆಸರಿನಲ್ಲಿ ಒಬ್ಬ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕನೊಬ್ಬನ (ಮಹಾತ್ಮ ಗಾಂಧಿ ಹೊರತಾಗಿ) ೧೮೨ ಮೀಟರ್(ತಳಪಾಯ ೨೪೦ ಮೀಟರ್ ಎತ್ತರ) ಎತ್ತರದ ವಿಶ್ವದ ಅತೀ ಎತ್ತರದ ಉಕ್ಕು, ಬಲವರ್ದಿತ ಕಾಂಕ್ರೀಟ್, ಕಂಚಿನ ಲೇಪದ ಮೂರ್ತಿ ನಿಲ್ಲಿಸಿರುವ ಹಿಂದೆ ಮೋದಿ ಗುಜರಾತ್‌ನಲ್ಲಿ ಜಾತಿ ಲೆಕ್ಕಾಚಾರ ಮಾಡಿದ್ದರು. ಮೂಲತಃ ಸರ್ಧಾರ್ ವಲ್ಲಭಭಾಯ್ ಪಟೇಲ್ ಪಾಟೀದಾರ/ಪಟೇಲ್ ಸಮುದಾಯಕ್ಕೆ ಸೇರಿದವರು. ಸರ್ಧಾರ್ ಪಟೇಲ್ ಮೇಲೆ ಅಪಾರ ಗೌರವ ಇಟ್ಟುಕೊಂಡಿರುವ ಗುಜರಾತ್‌ನ ಪಾಟೀದಾರ್ ಸಮುದಾಯವನ್ನು ತನ್ನ ತೆಕ್ಕೆಯೊಳಗೆ ಇಟ್ಟುಕೊಳ್ಳುವುದಕ್ಕೆ ಮೋದಿ ೨೦೧೩ರಲ್ಲಿ ಹೆಣೆದ ಮಾಸ್ಟರ್ ಪ್ಲ್ಯಾನ್ ಇದು. ತಾನಿಲ್ಲದೆಯೂ ಗುಜರಾತ್‌ನಲ್ಲಿ ಬಿಜೆಪಿ ಮೇಲೆ ಪಟೇಲ್ ಸಮುದಾಯ ನಂಬಿಕೆ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಈ ರಾಜಕೀಯ ತಂತ್ರಗಾರಿಕೆ ಹೂಡಿದ್ದರು. ಇಲ್ಲದಿದ್ದರೇ, ಎಲ್ಲಿ ರಾಷ್ಟçದೊಳಗಿನ ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಸರ್ಧಾರ್ ಪಟೇಲ್ ? ಎಲ್ಲಿ ಮೋದಿ..? ವ್ಯಕ್ತಿತ್ವದಲ್ಲೂ, ರಾಜಕೀಯದಲ್ಲೂ, ಸಿದ್ಧಾಂತದಲ್ಲೂ ಸರ್ಧಾರ್ ಹತ್ತಿರಕ್ಕೂ ಮೋದಿಗೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕನೊಬ್ಬನ ಏಕತಾ ಮೂರ್ತಿ ಗುಜರಾತ್‌ನಲ್ಲಿ ಬಿಜೆಪಿಗೆ ಮತ್ತಷ್ಟು ರಾಜಕೀಯ ಮೈಜೇಜ್ ತಂದುಕೊಟ್ಟಿತ್ತು ಎಂದರೇ ತಪ್ಪಿಲ್ಲ. ಮತ್ತೇನೂ ಅಲ್ಲ. ಗುಜರಾತ್‌ನಲ್ಲಿ ಸರ್ಧಾರ ಪಟೇಲ್‌ರನ್ನು ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸುವುದಕ್ಕಾದರೂ ಬಳಸಿಕೊಳ್ಳುವಲ್ಲಿ ಒಂದಿಷ್ಟು ಚಿಂತಿಸಬಹುದಿತ್ತು, ಆದರೇ ಕಾಂಗ್ರೆಸ್, ತನ್ನದೇ ರಾಜಕೀಯ ಸೋರ್ಸ್ ನನ್ನು ತನ್ನ ಎದುರಾಳಿ ಪಕ್ಷಕ್ಕೆ ಅನಾಯಾಸ ಗ್ರಾಸವಾಗಿ ಬಿಟ್ಟುಕೊಡುವಷ್ಟು ಬೌದ್ಧಿಕ ಬಡಸ್ಥಿಕೆ ಹೊಂದಿತ್ತು ಎನ್ನುವುದು ಇಲ್ಲಿನ ವಿಷಯ. ಮೋದಿ ಚಾಣಾಕ್ಷತನದಿಂದ ಪಟೇಲ್ ಸಮುದಾಯದ ಅಪ್ರತಿಮ ನಾಯಕ ಸರ್ಧಾರ್ ಏಕತಾ ಪ್ರತಿಮೆಯನ್ನು ಗಗನಕ್ಕೇರಿಸಿ ಗುಜರಾತ್‌ನಲ್ಲಿ ಮಾತ್ರವಲ್ಲ, ದೇಶದಾದ್ಯಂತ ತನ್ನ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಂಡರು. ಮೋದಿ ಪಟೇಲ್ ಸಮುದಾಯವನ್ನು ಬಿಜೆಪಿ ತೆಕ್ಕೆಯೊಳಗೆ ಇಟ್ಟುಕೊಳ್ಳುವ ಸಲುವಾಗಿ ನಿರ್ಮಿಸಿದ ಏಕತಾ ಪ್ರತಿಮೆಯನ್ನು ಇಡೀ ದೇಶ, ಪ್ರಧಾನಿ ಮೋದಿ ಭಾರತೀಯ ಪ್ರವಾಸೋದ್ಯಮಕ್ಕೆ ಎಂದೂ ಎಲ್ಲೂ ಇಲ್ಲದ ಮಹತ್ವದ್ದನ್ನು ನೀಡಿದ್ರು ಎಂದು ಕುರುಡಾಗಿ ನಂಬಿರುವುದು ಈ ದೇಶದ ದುರಂತಗಳಲ್ಲೊಂದು.      

-ಶ್ರೀರಾಜ್ ವಕ್ವಾಡಿ 

Monday, December 5, 2022

ದ.ಕ ಪಾರುಪತ್ಯಕ್ಕೆ ಉಭಯ ಪಕ್ಷಗಳ ಕಸರತ್ತು.!

(ಸಾಂದರ್ಭಿಕ ಚಿತ್ರ)
 ಕೋಮುಸೂಕ್ಷ್ಮ ಉತ್ತರ ಕ್ಷೇತ್ರ ಯಾರಿಗೆ ? | ಬಿಜೆಪಿಯ ಇಬ್ಬರು ಹಾಲಿ ಶಾಸಕರಿಗೆ ಟಿಕೇಟ್ ಡೌಟ್ ?

‘ಮಾಸ್ ಬ್ರೈನ್’ ಸಿದ್ಧಾಂತ ಎಷ್ಟರ ಮಟ್ಟಿಗೆ ರಾಜಕೀಯದಲ್ಲಿ ಪರಿಣಾಮ ಬೀರುತ್ತದೆ ಎಂದರೇ ಅದಕ್ಕೆ ದಕ್ಷಿಣ ಕನ್ನಡದ ಎಂಟು ವಿಧಾನಸಭಾ ಕ್ಷೇತ್ರಗಳೇ ಸಾಕ್ಷಿ. ೨೦೧೩ರಲ್ಲಿ ಏಳು ಕಾಂಗ್ರೆಸ್(ಮಂಗಳೂರು(ಉಳ್ಳಾಲ), ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಬೆಳ್ತಂಗಡಿ) ಒಂದು ಬಿಜೆಪಿ(ಸುಳ್ಯ) ಪಾಲಾಗಿದ್ದ ದಕ್ಷಿಣ ಕನ್ನಡದ ವಿಧಾನಸಭಾ ಕ್ಷೇತ್ರಗಳು, ೨೦೧೮ರಲ್ಲಿ ಅದಲು ಬದಲಾಗಿ ಹೋಯಿತು. ಏಳು (ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಬೆಳ್ತಂಗಡಿ, ಸುಳ್ಯ) ಬಿಜೆಪಿಗೆ ಹಾಗೂ ಒಂದು(ಮಂಗಳೂರು(ಉಳ್ಳಾಲ)) ಕಾಂಗ್ರೆಸ್ ಪಾಲಾಯಿತು. 

ಈಗ ಮತ್ತೊಂದು ಸುತ್ತಿನ ವಿಧಾನಸಭಾ ಚುನಾವಣೆ ಬಂದಿದೆ. ಉಭಯ ಪಕ್ಷಗಳ  ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ. ಆರ್‌ಎಸ್‌ಎಸ್ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಂತರ ಬಿಜೆಪಿ ಮೇಲೆ ಸಣ್ಣ ಅಸಮಾಧಾನ ಹಿಂದೂ ಕಾರ್ಯಕರ್ತರಲ್ಲಿ ಇದೆ. ಇದು ಕಾಂಗ್ರೆಸ್‌ಗೆ ವರದಾನವಾಗಲಿದೆ ಎನ್ನುವುದು ಅಪ್ಪಟ ಸುಳ್ಳು. ಆದರೇ, ಈ ಬಾರಿಯ ಚುನಾವಣೆಯಲ್ಲಿ ಒಂದಿಷ್ಟು ವ್ಯತ್ಯಾಸಗಳು ಆಗಲಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. 

ಖಾದರ್‌ಗೆ ಮತ್ತೆ ಮಂಗಳೂರು ವಿಧಾನಸಭಾ ಕ್ಷೇತ್ರ : ಯು. ಟಿ. ಖಾದರ್ ಜಾತಿ, ಧರ್ಮ ಮೀರಿ ಬೆಳೆದ ರಾಜಕಾರಣಿ. ಪಕ್ಷ ಸಮಸ್ಯೆಯಲ್ಲಿದ್ದಾಗ ಎಂದಿಗೂ ಹಿಂದೆ ಸರಿದವರಲ್ಲ. ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಸದಾ ಮುಂದಿರುವ ಖಾದರ್, ಕ್ಷೇತ್ರಕ್ಕೆ ಸಂಬಂಧಸಿದ ಬಹುತೇಕ ಎಲ್ಲಾ ಕೆಲಸಗಳನ್ನು ಮಾಡಿಕೊಡುವಲ್ಲಿ ಯಶಸ್ವಿಯಾದ ಶಾಸಕ. ಮಸ್ಲೀಂ ಮತಗಳ ಬಾಹುಳ್ಯವಿರುವ ಕ್ಷೇತ್ರವಾದರೂ ಹಿಂದೂ, ಕ್ರಿಶ್ಚಿಯನ್ ಮತಗಳಿಲ್ಲದೇ ಖಾದರ್ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಸರ್ವಧರ್ಮಿಯರಲ್ಲಿ ನಂಬಿಕೆ ಉಳಿಸಿಕೊಂಡು ಕಾರ್ಯ ನಿರ್ವಹಿಸಿದ ಖಾದರ್‌ಗೆ ತಂದೆ ಹಾಜಿ ಯು ಟಿ ಫರೀದ್(ಕಾಂಗ್ರೆಸ್‌ನಿಂದ ಪ್ರತಿನಿಧಿಸಿ ನಾಲ್ಕು ಬಾರಿ ಜಯಗಳಿಸಿ ಶಾಸಕರಾಗಿದ್ದರು) ಗಳಿಸಿಕೊಟ್ಟ ವಿಶ್ವಾಸವೂ ಕ್ಷೇತ್ರದಲ್ಲಿ ಜೊತೆಗಿದೆ. ತಂದೆಯ ಉತ್ತರಾಧಿಕಾರಿಯಾದ ಮೇಲೆ ಸತತವಾಗಿ ಈ ಕ್ಷೇತ್ರದಲ್ಲಿ ಗೆಲ್ಲುತ್ತಿರುವ ಖಾದರ್‌ಗೆ ಈ ಬಾರಿಯೂ ಗೆಲ್ಲುವ ವಿಶ್ವಾಸವಿದೆ. ೨೦೧೮ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತುಂಬೆಲ್ಲಾ ಬಿಜೆಪಿ ಆವರಿಸಿದ್ದರೂ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಸಾದ್ಯವಾಗಿರಲಿಲ್ಲ. ಅಷ್ಟರ ಮಟ್ಟಿಗೆ ಖಾದರ್ ಜನರನ್ನು ಹಿಡಿದಿಟ್ಟುಕೊಂಡಿದ್ದಾರೆ ಎನ್ನುವುದು ಇದರ ಅರ್ಥ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಸದ್ಯಕ್ಕಂತೂ ಖಾದರ್ ಪರ್ಯಾಯ ಅಭ್ಯರ್ಥಿ ಯಾರಿಲ್ಲ. ಟಿಕೇಟ್ ಮತ್ತೆ ಖಾದರ್ ಪಾಲಾಗುವುದರಲ್ಲಿ ಅನುಮಾನವಿಲ್ಲ.

ಇನ್ನು, ಖಾದರ್ ಖದರ್ ಮಣಿಸುವುದಕ್ಕೆ ಈ ಕ್ಷೇತ್ರದಲ್ಲಿ ಬಿಜೆಪಿ ಕಸರತ್ತು ನಡೆಸುತ್ತಿದೆ. ಕಳೆದ ಬಾರಿ ಖಾದರ್‌ಗೆ ಸವಾಲೊಡ್ಡಿ ಸ್ಪರ್ಧಿಸಿ ಸೋಲನುಭವಿಸಿದ್ದ ಬಿಜೆಪಿಯ ಸಂತೋಷ್ ಶೆಟ್ಟಿ ಬೊಳಿಯಾರ್ ಈ ಬಾರಿಯೂ ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ. ಇವರನ್ನು ಹೊರತಾಗಿ, ಮಂಗಳೂರು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚಂದ್ರಹಾಸ ಪಂಡಿತ್, ವಿಶ್ವ ಹಿಂದೂ ಪರಿಷತ್‌ನ ಮುಖಂಡ ಶರಣ್ ಪಂಪವೆಲ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್ ಕುಂಪಲ್ ಬಿಜೆಪಿಯಿಂದ ಆಕಾಂಕ್ಷಿಗಳಾಗಿದ್ದಾರೆ. ಆದರೇ, ಕಳೆದ ಬಾರಿ ಸೋಲು ಕಂಡಿದ್ದ ಸಂತೋಷ್‌ಗೆ ಮತ್ತೊಂದು ಚಾನ್ಸ್ ನೀಡಲಿದೆಯೇ ಅಥವಾ ಬೇರೆಯವರನ್ನು ಕಣಕ್ಕಿಳಿಸಲಿದೆಯೇ ಎನ್ನುವುದು ಕುತೂಹಲ. 

ಮಂಗಳೂರು ದಕ್ಷಿಣಕ್ಕೆ ಯಾರು ? :  ಈ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ್ದು ೧೯೮೩ರಲ್ಲಿ. ಇದಕ್ಕೂ ಮೊದಲು ಈ ಕ್ಷೇತ್ರ ಕಾಂಗ್ರೆಸ್ ವಶದಲ್ಲಿತ್ತು. ೧೯೮೩ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ವಿ. ಧನಂಜಯ್ ಕುಮಾರ್ ಜಯಗಳಿಸಿದ್ದರು. ಅದಾದ ಮೇಲೆ ೧೯೮೫,೧೯೮೯ರಲ್ಲಿ ಕಾಂಗ್ರೆಸ್‌ಗೆ ಈ ಕ್ಷೇತ್ರ ಒಲಿದಿತ್ತು, ಮತ್ತೆ ೧೯೯೪ ರಿಂದ ೨೦೦೮ರವರೆಗೆ ಬಿಜೆಪಿಯಿಂದ ಕಣಕ್ಕಿಳಿದಿದ್ದ ಎನ್. ಯೋಗೀಶ್ ಭಟ್ ಶಾಸಕರಾಗಿ ಕೆಲಸ ಮಾಡಿದ್ದರು. ೨೦೧೩ರಲ್ಲಿ ಈ ಕ್ಷೇತ್ರ ಮತ್ತೆ ಕಾಂಗ್ರೆಸ್ ವಶವಾಗಿತ್ತು. ಆದರೇ, ೨೦೧೮ರಲ್ಲಿ ಮತ್ತೆ ಈ ಕ್ಷೇತ್ರ ಬಿಜೆಪಿಗೆ ಒಲಿದಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ. ವೇದವ್ಯಾಸ್ ಕಾಮತ್, ಕಾಂಗ್ರೆಸ್‌ನ ಮಾಜಿ ಶಾಸಕ ಜೆ. ಆರ್ ಲೋಬೋ ವಿರುದ್ಧ ಜಯಗಳಿಸಿದ್ದರು. ಈ ಬಾರಿ ಬಿಜೆಪಿಯಿಂದ ಯಾವುದೇ ಬದಲಾವಣೆ ಕಾಣಿಸುತ್ತಿಲ್ಲ. ಬಿಜೆಪಿಯಿಂದ ಗೌಡ ಸಾರಸ್ವತ ಬ್ರಾಹ್ಮಣರಿಗೆ ಮೀಸಲಿಟ್ಟ ಕ್ಷೇತ್ರವಿದು. ಹಾಗಾಗಿ ಜಿಎಸ್‌ಬಿ ಮತಗಳ ಪ್ರಾಬಲ್ಯವಿರುವ ಈ ಕ್ಷೇತ್ರದ ಬಿಜೆಪಿ ಟಿಕೇಟ್ ಮತ್ತೆ ಹಾಲಿ ಶಾಸಕ ವೇದವ್ಯಾಸ್ ಕಾಮತ್ ಪಾಲಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. 

ಇನ್ನು, ಕಾಂಗ್ರೆಸ್‌ನಲ್ಲಿ ಎರಡು ಕ್ಷೇತ್ರಗಳನ್ನು ಕ್ರಿಶ್ಚಿಯನ್ ಅಭ್ಯರ್ಥಿಗಳಿಗೆಂದು ಮೀಸಲಿಡಲಾಗುತ್ತದೆ. ಅದರಲ್ಲಿ ಈ ಕ್ಷೇತ್ರ ಕೂಡ ಒಂದು. ಸಹಜವೆಂಬಂತೆ ಮಾಜಿ ಶಾಸಕ ಜೆ. ಆರ್ ಲೋಬೋ ಕಾಂಗ್ರೆಸ್‌ನಿಂದ ಇಲ್ಲಿನ ಟಿಕೇಟ್ ಆಕಾಂಕ್ಷಿ. ಕೆಪಿಸಿಸಿ ಉಪಾಧ್ಯಕ್ಷ, ಕಾಂಗ್ರೆಸ್‌ನ ಹಿರಿಯ ನಾಯಕ ಐವನ್ ಡಿಸೋಜಾ ಕೂಡ ಇಲ್ಲಿನ ಟಿಕೇಟ್ ಆಕಾಂಕ್ಷಿ. ಜಿಎಸ್‌ಬಿ ಮತಗಳನ್ನು ಬಿಟ್ಟರೇ ಹೆಚ್ಚು ಕ್ರಿಶ್ಚಿಯನ್ ಮತಗಳೇ ಇರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಇಬ್ಬರಲ್ಲೇ ಒಬ್ಬರಿಗೆ ಟಿಕೇಟ್ ನೀಡುವುದು ನಿಶ್ಚಿತ. 

ಕೋಮುಸೂಕ್ಷ್ಮ ಉತ್ತರ ಕ್ಷೇತ್ರ :  ಪೋಲೀಸ್ ಫೈಲ್‌ನಲ್ಲಿ ಕೋಮುಸೂಕ್ಷ್ಮ ಪ್ರದೇಶವೆಂದು ದಾಖಲಾಗಿರುವ ಮಂಗಳೂರು ಉತ್ತರ ಕ್ಷೇತ್ರ(ಸುರತ್ಕಲ್), ಆರ್‌ಎಸ್‌ಎಸ್ ಹಾಗೂ ಪಿಎಫ್‌ಐ ಧರ್ಮ ಸಂಘರ್ಷಗಳನ್ನೇ ಸದಾ ಕಂಡುಕೊಂಡು ಬಂದಿದೆ. ಪಿಎಫ್‌ಐಯನ್ನು ಈಗ ಕೇಂದ್ರ ಸರ್ಕಾರ ನಿಷೇಧಿಸಿದ್ದರೂ ಈ ಕ್ಷೇತ್ರದಲ್ಲಿ ಅದು ಬೂದಿ ಮುಚ್ಚಿದ ಕೆಂಡ. ಮತೀಯ ಧ್ರುವೀಕರಣದಲ್ಲೇ ಮುಳುಗಿರುವ ಈ ಕ್ಷೇತ್ರ ಧರ್ಮ ಸಂಘರ್ಷಗಳಿಗೆ ಸದಾ ಸುದ್ದಿಯಾಗುತ್ತಲೇ ಇರುತ್ತದೆ. ಸದ್ಯ ಬಿಜೆಪಿಯ ಡಾ. ಭರತ್ ಶೆಟ್ಟಿ ಇಲ್ಲಿನ ಶಾಸಕ. ೨೦೨೩ರಲ್ಲಿಯೂ ಭರತ್ ಶೆಟ್ರನ್ನೇ ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆಯೇ ಹೆಚ್ಚು. ೨೦೧೮ರಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದು ಜಯಗಳಿಸಿದ್ದ ಭರತ್, ಮೂಲತಃ ಯುವ ಜನತಾದಳದವರು. ಆಮೇಲೆ ನಳಿನ್ ಕುಮಾರ್ ಕೃಪಾಶೀರ್ವಾದದಿಂದ ಬಿಜೆಪಿಗೆ ಸೇರಿದರು. ಎ.ಜೆ ದಂತ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಡಾ. ಭರತ್ ಶೆಟ್ಟಿ, ಶಾಸಕರಾಗುವ ಮೊದಲು ಒಂದಿಷ್ಟು ವಿವಾದಗಳನ್ನು ಹೊಂದಿದ್ದರು ಎಂಬುವುದು ಜನಜನಿತ. ೨೦೧೮ಕ್ಕೂ ಮೊದಲು(೨೦೦೪-೨೦೧೨)ಇಲ್ಲಿ ಕೃಷ್ಣ ಪಾಲೆಮಾರ್ ಎರಡು ಅವಧಿಗೆ ಶಾಸಕರಾಗಿ, ಸಚಿವಸ್ಥಾನಕ್ಕೆ ಏರಿದ್ದರು. ಕಲಾಪದ ಸಂದರ್ಭದಲ್ಲಿ ಅಶ್ಲೀಲ ವೀಡಿಯೋ ನೋಡುತ್ತಿರುವಾಗ ಕ್ಯಾಮೆರಾ ಕಣ್ಣಿಗೆ  ಸಿಕ್ಕಿಬಿದ್ದ ಪಾಲೆಮಾರ್, ೨೦೧೨ರ ಫೆಬ್ರವರಿಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಕ್ಷೇತ್ರದಿಂದ ೨೦೧೩ರಲ್ಲಿ ಕಾಂಗ್ರೆಸ್‌ನ ಮೊಯ್ದಿನ್ ಬಾವಾ ಶಾಸಕರಾಗುವುದಕ್ಕೆ ಇದು ಕೂಡ ಒಂದು ಕಾರಣವಾಗಿತ್ತು ಎನ್ನುವುದು ಗಮನಾರ್ಹ. ಆದರೇ, ೨೦೧೮ರಲ್ಲಿ ಕರಾವಳಿ ಕರ್ನಾಟಕದಲ್ಲಿ ನಡೆದಿದ್ದ ಧರ್ಮ ಸಂಘರ್ಷ ಬಿಜೆಪಿಗೆ ರಾಜಕೀಯ ಮೈಲೇಜ್ ಕೊಟ್ಟಿತ್ತು, ಬಿಜೆಪಿಯಿಂದ ಕಣಕ್ಕಿಳಿದಿದ್ದ ಭರತ್ ಶೆಟ್ಟಿ ಶಾಸಕರಾದರು. 

ಬಿಜೆಪಿಯಿಂದ ಯಾವುದೇ ಬದಲಾವಣೆ ಇಲ್ಲ ಎಂದೇ ಹೇಳಲಾಗುತ್ತಿದೆ. ಆದರೇ, ಕಾಂಗ್ರೆಸ್‌ನಲ್ಲಿ ಹೊಸ ಆಕಾಂಕ್ಷಿ ಹುಟ್ಟಿಕೊಂಡಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಇನಾಯತ್ ಅಲಿ ಕೂಡ ಈ ಕ್ಷೇತ್ರದಿಂದ ಚುನಾವಣೆಗೆ ಇಳಿಯುವ ಉಮೆದುವಾರಿಕೆ ತೋರಿಸಿದ್ದಾರೆಂಬ ಸುದ್ದಿ ಇದ್ದು, ಕಾಂಗ್ರೆಸ್‌ನ ಟಿಕೇಟ್ ಈ ಕ್ಷೇತ್ರದಿಂದ ಯಾರಿಗೆ ಒಲಿಯಲಿದೆ ಎನ್ನುವುದು ಸದ್ಯದ ಕುತೂಹಲ. 

ಕೇಸರಿ ಪಾಳಯದ ಪುತ್ತೂರು :  ಪುತ್ತೂರು ಕೂಡ ಕೋಮುಸೂಕ್ಷ್ಮ ಪ್ರದೇಶಗಳಲ್ಲಿ ಒಂದು. ಡಿ. ವಿ ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದವರೆಗೆ ಕೊಂಡೊಯ್ದ ಕ್ಷೇತ್ರವಿದು. ೨೦೦೪ರಲ್ಲಿ ಡಿವಿಎಸ್ ಪಾರ್ಲಿಮೆಂಟ್ ತಲುಪಿದ ನಂತರ ಬಂಟ್ವಾಳದಿಂದ ಎರಡು ಬಾರಿ ನಿಂತು ಸೋತಿದ್ದ ಶಕುಂತಲಾ ಶೆಟ್ಟಿಯವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಕಾಂಗ್ರೆಸ್ ಹಾಗೂ ಹಿಂದುತ್ವದ ಸಂಘರ್ಷದಲ್ಲಿ ಶಕುಂತಲಾ ಗೆಲುವಿನ ನಗೆ ಬೀರಿದ್ದರು. ೨೦೦೮ರಲ್ಲಿ ಟಿಕೇಟ್ ಶಕುಂತಲಾ ಅವರ ಕೈ ತಪ್ಪಿತ್ತು. ಪಕ್ಷದೊಳಗಿನ ಭಿನ್ನಮತದಿಂದಾಗಿ ಶಕುಂತಲಾ ಬಣ್ಣ ಬದಲಾಯಿಸಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ೨೦೧೩ರಲ್ಲಿ ಶಕುಂತಲಾ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಸಂಜೀವ ಮಠಂದೂರು ವಿರುದ್ಧ ಭಾರಿ ಅಂತರದ ಗೆಲುವು ಸಾಧಿಸಿದ್ದು ಪುತ್ತೂರು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿತ್ತು. ೨೦೧೮ರಲ್ಲಿ ಇದೇ ಪ್ರತಿಸ್ಪರ್ಧಿಗಳ ಅದೃಷ್ಟ ಬದಲಾಯ್ತು. ಬಿಜೆಪಿಯ ಮಠಂದೂರು ಶಾಸಕರಾದರು. ಈಗ ಮತ್ತೆ ಸಂಜೀವ ಮಠಂದೂರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೇ, ಮಠಂದೂರು ವಿರುದ್ಧ ಪಕ್ಷದ ಒಳಗೆಯೇ ಭಿನ್ನಾಭಿಪ್ರಾಯವಿದೆ. ಹಾಗಾಗಿ ಬಿಜೆಪಿ ಟಿಕೇಟ್ ಯಾರ ಪಾಲಿಗಾಗುತ್ತದೆ ಎನ್ನುವುದು ಇಲ್ಲಿ ಕುತೂಹಲ. ಸಂಜೀವ ಮಠಂದೂರು ಸೇರಿ, ಡಿವಿಎಸ್ ಆಪ್ತ ಅಶೋಕ್ ರೈ, ಹಿಂದೂ ಸಂಘಟನೆಯ ಅರುಣ್ ಕುಮಾರ್ ಪುತ್ತಿಲ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. 

ಇನ್ನು, ಕಾಂಗ್ರೆಸ್ ಮತ್ತೆ ಶಕುಂತಲಾ ಶೆಟ್ಟಿಯವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದಲ್ಲಿಯೂ ಸ್ಪರ್ಧಿಸಿ ಗೆದ್ದ ಶಕುಂತಲಾ ಶೆಟ್ಟಿ ಪುತ್ತೂರಿನಲ್ಲಿ ಕಾಂಗ್ರೆಸ್‌ನ ಭರವಸೆಯ ಗೆಲ್ಲುವ ಕುದುರೆ. ಅವರಲ್ಲದಿದ್ದರೇ, ಬ್ಲಾಕ್ ಕಾಂಗ್ರೆಸ್‌ನ ಸುದೀರ್ಘ ಕಾಲದ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿಯವರ ಪಾಲಿಗಾಗಬಹುದು ಎಂಬ ಮಾತಿದೆ. 

ಬಂಟ್ವಾಳದಲ್ಲಿ ಹಾಲಿ ಶಾಸಕನಿಗೆ ಬಿಜೆಪಿ ಟಿಕೇಟ್ ಡೌಟ್ :  ಬಂಟ್ವಾಳದ ಹಾಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಮುಂದಿನ ಚುನಾವಣೆಗೆ ಬಿಜೆಪಿಯಿಂದ ಟಿಕೇಟ್ ಸಿಗುವುದು ಡೌಟ್ ಎಂದೇ ಹೇಳಲಾಗುತ್ತಿದೆ. ಸಂಘಪರಿವಾರದ ಮೂಲದವರಲ್ಲದ ನಾಯ್ಕ್ ಬಂಟ್ವಾಳದಲ್ಲಿ ನಡೆದ ಕೋಮು ಸಂಘರ್ಷಗಳಿಗೆ ಎಂದೂ ಉಗ್ರವಾಗಿ ಪ್ರತಿಕ್ರಿಯಿಸಿದವರಲ್ಲ, ಹಿಂದೂ ಕಾರ್ಯಕರ್ತರ ಪರವಾಗಿ ನಿಂತವರಲ್ಲ ಎಂಬ ಅಸಮಾಧಾನದ ಮಾತಿದೆ. ಹಾಗಾಗಿ ಟಿಕೇಟ್ ಹಾಲಿ ಶಾಸಕನ ಕೈ ತಪ್ಪುವ ಸಾಧ್ಯತೆ ಇದೆ ಎಂಬ ಚರ್ಚೆ ಬಂಟ್ವಾಳದಲ್ಲಿದೆ. ಬಂಟ್ವಾಳದಲ್ಲಿ ಹಿಂದೂ ಸಂಘಟನೆಗಳ ಪವರ್ ಜೋರಾಗಿ ಇದ್ದರೂ ಕೂಡ ಕಾಂಗ್ರೆಸ್‌ನ ಗಟ್ಟಿ ನೆಲವಿದು. ೧೯೭೨ರಲ್ಲಿ ಸಿಪಿಐನಿಂದ ಬಿವಿ ಕಕ್ಕಿಲಾಯ ಜಯ ಸಾಧಿಸಿದರು, ೧೯೭೮ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಗೆದ್ದರು, ೧೯೮೩ರಲ್ಲಿ ಗೆಲುವು ಬಿಜೆಪಿಯ ಪಾಲಾಯಿತು (ಎನ್ ಶಿವರಾವ್), ೧೯೮೫ರಲ್ಲಿ ಕಣಕ್ಕಿಳಿದ ಕಾಂಗ್ರೆಸ್‌ನ ರಮಾನಾಥ್ ರೈ ಸತತ ನಾಲ್ಕು ಚುನಾವಣೆಯಲ್ಲಿ ಗೆದ್ದು ಬೀಗಿದರು. ೨೦೦೪ರಲ್ಲಿ ಮುಗ್ಗರಿಸಿದ ಕಾಂಗ್ರೆಸ್, ೨೦೦೮, ೨೦೧೩ರಲ್ಲಿ ರೈ ಮೂಲಕ ಮತ್ತೆ ಜಯದ ನಗೆ ಬೀರಿತು. ಆದರೇ, ೨೦೧೮ರಲ್ಲಿ ಗೆಲುವು ಬಿಜೆಪಿಯ ರಾಜೇಶ್ ನಾಯ್ಕ್ ಪಾಲಾಯಿತು. 

ಬಂಟ್ ಸಮುದಾಯದ ಹೈವೋಲ್ಟೇಜ್ ರಾಜಕೀಯ ಕಣವಾಗಿರುವ ಬಂಟ್ವಾಳದಲ್ಲಿ ಬಂಟ್ ಅಭ್ಯರ್ಥಿಗಳು ಗೆದ್ದಿದ್ದೇ ಹೆಚ್ಚು. ಈ ಬಾರಿಯೂ ಜಾತಿ ಆಧಾರದಲ್ಲಿಯೇ ಉಭಯ ಪಕ್ಷಗಳು ತಂತ್ರ ಹೆಣೆಯುತ್ತಿವೆ. ಕಾಂಗ್ರೆಸ್‌ನಿಂದ ಆರು ಬಾರಿ ಶಾಸಕರಾದ ರಮಾನಾಥ್ ರೈ ಅವರಿಗೆ ಪಕ್ಷದಲ್ಲಿ ಪ್ರತಿಸ್ಪರ್ಧಿ ಯಾರಿಲ್ಲ. ಹಾಗಾಗಿ ಬಂಟ್ವಾಳದಲ್ಲಿ ರೈ ಚುನಾವಣೆಗೆ ಸ್ಪರ್ಧಿಸುವವರೆಗೆ ಕಾಂಗ್ರೆಸ್‌ನ ಟಿಕೇಟ್ ಪಕ್ಕಾ. ಇನ್ನು, ಬಿಜೆಪಿಯಲ್ಲಿ ಈ ಬಾರಿ ಟಿಕೇಟ್ ಬೇರೆಯವರ ಪಾಲಾಗುವ ಸಾಧ್ಯತೆ ಇದ್ದು, ರಾಜೇಶ್ ನಾಯ್ಕ್ ಅಲ್ಲದಿದ್ದರೇ, ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ, ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್‌ಗೆ ಟಿಕೇಟ್ ಲಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೇ, ಬಂಟರ ಸಂಘದ ಪದಾಧಿಕಾರಿ ವಿವೇಕ್ ಶೆಟ್ಟಿಗೆ ಸಂಸದ ನಳೀನ್ ಕುಮಾರ್ ಕಟೀಲ್ ಟಿಕೇಟ್ ಕೊಡಿಸುವ ಸರ್ವ ಪ್ರಯತ್ನದಲ್ಲಿದ್ದಾರೆಂಬ ಮಾತಿದೆ. 

ಮೂಡುಬಿದಿರೆ, ಬೆಳ್ತಂಗಡಿ, ಸುಳ್ಯ :  ಸುಮಾರು ಹತ್ತೊಂಬತ್ತು ವರ್ಷಗಳ ಕಾಲ ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಮೂಡುಬಿದಿರೆ ಕಾಂಗ್ರೆಸ್‌ನ ಭದ್ರಕೋಟೆ. ಬಿಜೆಪಿ ಇಲ್ಲಿ ಗೆದ್ದಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ. ಜನಪ್ರಿಯ ನಾಯಕ ದಿ. ಅಮರನಾಥ್ ಶೆಟ್ಟಿ ೨ ಬಾರಿ ಜನತಾ ಪಾರ್ಟಿ, ಒಂದು ಬಾರಿ ಜನತಾದಳದಿಂದ ಗೆದ್ದಿದ್ದನ್ನು ಹೊರತುಪಡಿಸಿದರೇ, ೧೯೯೯ ರಿಂದ ೨೦೧೮ರವರೆಗೆ ಸತತ ಐದು ಬಾರಿ ಗೆದ್ದ ಕಾಂಗ್ರೆಸ್‌ನ ಅಭಯ್‌ಚಂದ್ರ ಜೈನ್ ಶಾಸಕರಾಗಿ, ಸಚಿವ ಸ್ಥಾನಕ್ಕೇರಿದ್ದರು. ಸದ್ಯ ಜೈನ್ ಚುನಾವಣೆಗೆ ಸ್ಪರ್ಧಿಸುವ ಮೂಡ್‌ನಲ್ಲಿಲ್ಲ. ಟಿಕೇಟ್‌ನನ್ನು ಯುವ ನಾಯಕ ಮಿಥುನ್ ರೈಗೆ ಕೊಡಿ ಎಂದು ಸೂಚಿಸಿದ್ದಾರೆ. ಈ ಬಾರಿ ಕಾಂಗ್ರೆಸ್‌ನ ಮೂಡುಬಿದಿರೆ-ಮೂಲ್ಕಿ ವಿಧಾನಸಭಾ ಕ್ಷೇತ್ರದ ಟಿಕೇಟ್ ಮಿಥುನ್ ರೈ ಪಾಲಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಇನ್ನು ಹಾಲಿ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಅವರ ಮೇಲೆ ಪಕ್ಷದ ಒಳಗೆಯೇ ಭಿನ್ನಾಭಿಪ್ರಾಯವಿದೆ. ಬಿಜೆಪಿ ಕಾರ್ಯಕರ್ತರನ್ನು ಕೋಟ್ಯಾನ್ ನಿರ್ಲಕ್ಷ್ಯ ಧೋರಣೆಯಿಂದ ನೋಡುತ್ತಿದ್ದಾರೆ ಎಂಬ ಅಸಮಾಧಾನವಿದೆ. ಒಂದು ವೇಳೆ ಕೋಟ್ಯಾನ್ ಅದೃಷ್ಟ ಕೈಕೊಟ್ಟರೇ, ಟಿಕೇಟ್ ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಪಾಲಾಗಲಿದೆ ಎಂದು ಹೇಳಲಾಗುತ್ತಿದೆ. 

ಇನ್ನು, ಚಿಕ್ಕಮಗಳೂರು ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಬೆಳ್ತಂಗಡಿ, ಇತ್ತೀಚೆಗೆ ಕೋಮು ಸೂಕ್ಷ್ಮ ಪ್ರದೇಶವಾಗಿ ರೂಪುಗೊಳ್ಳುತ್ತಿದೆ. ಸುತ್ತ ಮುತ್ತಲಿನ ತಾಲೂಕುಗಳಲ್ಲಿ ಆವರಿಸಿರುವ ಕೋಮು ಸಂಘರ್ಷಗಳು ಇಲ್ಲಿಗೂ ಹರಡಿದೆ. ಹಾಲಿ ಶಾಸಕ ಹರೀಶ್ ಪೂಂಜ ಖಟ್ಟರ್ ಹಿಂದುತ್ವವಾದಿ ಕೂಡ ಹೌದು. ಇದು ಬಿಜೆಪಿಯ ಭದ್ರಕೋಟೆಯೇನಲ್ಲ. ೨೦೦೮, ೨೦೧೩ರಲ್ಲಿ ಕಾಂಗ್ರೆಸ್‌ನಿಂದ ವಸಂತ್ ಬಂಗೇರ ಶಾಸಕರಾಗಿ ಆಯ್ಕೆಯಾಗಿದ್ದರು, ಆದರೇ ೨೦೧೮ರಲ್ಲಿ ಗೆಲುವು ಬಿಜೆಪಿಯ ಹರೀಶ್ ಪೂಂಜ ಅವರ ಪಾಲಗೆ ಒಲಿದಿತ್ತು. ಬಿಜೆಪಿಯಿಂದ ಯಾವುದೇ ಬದಲಾವಣೆಯಿಲ್ಲದೇ ಈ ಬಾರಿಯೂ ಟಿಕೇಟ್ ಹರೀಶ್ ಪೂಂಜ ಪಾಲಿಗೆ ಒಲಿಯುವುದು ನಿಶ್ಚಿತ. ಆದರೇ, ಕಾಂಗ್ರೆಸ್ ಇಲ್ಲಿ ಮನೆಯೊಂದು ಮೂರು ಬಾಗಿಲಂತಾಗಿದೆ. ಮಾಜಿ ಶಾಸಕ ವಸಂತ್ ಬಂಗೇರ ಅವರದ್ದು ಒಂದು ಬಣವಾದರೇ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರದ್ದು ಮತ್ತೊಂದು ಬಣ, ಇತ್ತ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹರಿಪ್ರಸಾದ್ ಅವರ ಸಹೋದರ ಬಿ.ಕೆ ಶಿವರಾಂ ಪುತ್ರ ರಕ್ಷಿತ್ ಶಿವರಾಂ ರದ್ದು ಇನ್ನೊಂದು ಬಣ. ಈ ಮೂವರು ಇಲ್ಲಿ ಟಿಕೇಟ್ ಆಕಾಂಕ್ಷಿಗಳು. ಬಣ ರಾಜಕೀಯ ಬಿಟ್ಟರೇ, ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ ಎನ್ನುವುದು ಸ್ಥಳೀಯ ರಾಜಕೀಯ ವಲಯದ ಮಾತು. 

೨೦೧೩ರಲ್ಲಿ ಬಿಜೆಪಿ ಪಾಲಿಗೆ ಒಲಿದಿದ್ದ ಏಕೈಕ ಕರಾವಳಿಯ ವಿಧಾನಸಭಾ ಕ್ಷೇತ್ರವೆಂದರೆ ಸುಳ್ಯ. ೧೯೬೫ರಲ್ಲಿ ತಾಲೂಕಾಗಿ ರೂಪುಗೊಂಡ ಸುಳ್ಯ, ರಾಜ್ಯದ ಏಕೈಕ ದಲಿತ ಮೀಸಲು ವಿಧಾನಸಭಾ ಕ್ಷೇತ್ರ. ೧೯೭೨ರಿಂದಲೂ ಪರಿಶಿಷ್ಠ ಪಂಗಡವರಿಗೆ ಮಾತ್ರ ಸ್ಪರ್ಧೆ ಇಲ್ಲಿ ಕಂಡು ಬರುತ್ತದೆ. ೧೯೮೫-೧೯೮೯ರಲ್ಲಿ ಕಾಂಗ್ರೆಸ್ ಗೆಲುವು ಕಂಡಿದ್ದರೂ ಕೂಡ, ೧೯೯೪ ರಿಂದ ೨೦೧೮ರವರೆಗೆ ಸತತ ೬ ಅವಧಿ ಹಾಲಿ ಶಾಸಕ, ಸಚಿವ ಎಸ್ ಅಂಗಾರ ಅವರಿಂದ ಬಿಜೆಪಿಯ ಪಾಲಾಗಿತ್ತು ಸುಳ್ಯ. ಈ ಬಾರಿಯ ಚುನಾವಣೆಯಲ್ಲೂ ಅಂಗಾರ ಅವರಿಗೆ ಟಿಕೇಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆಯಾದರೂ, ಬಿಜೆಪಿಯೊಳಗೆ, ಸಂಘ ಪರಿವಾರದವರಿಗೆ ಅಂಗಾರ ಅವರ ಮೇಲೆ ಸಮಾಧಾನವಿಲ್ಲ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಶಾಸಕರು ಒಂದು ಯೋಜನೆಯನ್ನು ಮಾಡಿಲ್ಲ ಎಂಬ ಕ್ಷೇತ್ರದ ಜನರ ಅಸಮಾಧಾನದ ಧ್ವನಿಯೂ ಇದೆ. ಅಂಗಾರ ಅವರಗೆ ಟಿಕೇಟ್ ಕೈತಪ್ಪುವ ಲಕ್ಷಣ ಕಾಣಿಸುತ್ತಿಲ್ಲವಾದರೂ ಅಸಮಾಧಾನವಿರುವುದು ಸತ್ಯ. ಇನ್ನು, ಬಿಜೆಪಿಯಿಂದ ಅಂಗಾರ ಹೊರತುಪಡಿಸಿದರೇ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಡಾ. ರಘು ಅಂಗಾರ ವಿರುಧ್ಧ ಸ್ಪರ್ಧಿಸುತ್ತಿದ್ದರು, ಸತತ ನಾಲ್ಕು ಬಾರಿ ಸೋಲು ಅನುಭವಿಸಿದ ರಘು, ಈ ಬಾರಿ ಚುನಾವಣೆಯ ಮೂಡ್‌ನಲ್ಲಿಲ್ಲ. ರಘು ಸ್ಪರ್ಧಿಸುವುದಕ್ಕೆ ಹಿಂದೇಟು ಹಾಕುತ್ತಿರುವುದರಿಂದಾಗಿ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್. ಎಮ್ ನಂದಕುಮಾರ್ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ.

ಒಟ್ಟಿನಲ್ಲಿ, ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರಗಳನ್ನು ಮತ್ತೆ ತನ್ನ ಪಾರುಪತ್ಯದೊಳಗೆ ಹಾಕಿಕೊಳ್ಳಲು ಉಭಯ ಪಕ್ಷಗಳು ಅಸಮಾಧಾನದ ಹೊಳೆಯಲ್ಲಿ ಹೆಣಗಾಡುತ್ತಿದ್ದು, ಈ ಬಾರಿ ಮತದಾರ ಯಾರ ಪಾಲಿಗೆ ಒಲಿಯಲಿದ್ದಾನೆ ಎನ್ನುವುದನ್ನು ಕಾದು ನೋಡಬೇಕಿದೆ. 

-ಶ್ರೀರಾಜ್ ವಕ್ವಾಡಿ  

                     


Wednesday, November 30, 2022

ಉಡುಪಿ ಚಕ್ರಾಧಿಪತ್ಯಕ್ಕೆ ಹೆಣಗಾಟ




 ಎಲೆಕ್ಶನ್ ಮೂಡ್‌ನಲ್ಲಿಲ್ಲ ಹಾಲಾಡಿ ! | ಉಡುಪಿಯಲ್ಲಿ ಭಟ್ರ ಅದೃಷ್ಟ ಕೈಕೊಟ್ರೆ ಶೆಟ್ರಿಗೆ ಟಿಕೆಟ್.!

ಉಡುಪಿ ಜಿಲ್ಲೆ, ಜಿಲ್ಲೆಯಾಗಿ ರಜತ ಮಹೋತ್ಸವ ಆಚರಿಸಿದ ನಂತರ ಇದೇ ಮೊಟ್ಟ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಹುರಿಗೊಳ್ಳುತ್ತಿದೆ. ಈ ಬಾರಿ ಒಂದಿಷ್ಟು ರಾಜಕೀಯ ಕುತೂಹಲಕ್ಕೆ ಉಡುಪಿ ಜಿಲ್ಲೆ ಕಾರಣವಾಗ್ತಿದ್ದು, ಜನ ಯಾರ ಕಡೆಗೆ ಒಲವು ತೋರಿಸುತ್ತಾರೆ ಎಂದು ನೋಡಬೇಕಿದೆ. ೨೦೧೮ರ ವಿಧಾನ ಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಒಡಲಲ್ಲಿರುವ ಐದಕ್ಕೆ ಐದು ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ಬಿಜೆಪಿ ಮೇಲೆ ಸಾಮಾನ್ಯವಾಗಿಯೇ ಈ ಬಾರಿ ಒಂದಿಷ್ಟು ನಿರೀಕ್ಷೆಗಳು ಹೆಚ್ಚಿವೆ ಎನ್ನುವುದು ಇಲ್ಲಿ ಗಮನಾರ್ಹ. 

ಭಟ್ರ ಅದೃಷ್ಟ ಕೈಕೊಟ್ರೆ ಶೆಟ್ರಿಗೆ ..? : ೧೯೭೨ರಲ್ಲಿ ಭಾರತೀಯ ಜನಸಂಘದಿಂದ ಕಣಕ್ಕಿಳಿದಿದ್ದ ದಿವಂಗತ ವಿ.ಎಸ್ ಆಚಾರ್ಯ ಹಾಗೂ ಕಾಂಗ್ರೆಸ್‌ನ ಮನೋರಮಾ ಮಧ್ವರಾಜ್ ನಡುವೆ ಚುನಾವಣಾ ಜಿದ್ದಾಜಿದ್ದಿ ನಡೆದಿತ್ತು. ಮನೋರಮಾ ಗೆಲುವಿನ ನಗೆ ಬೀರಿದ್ದರು. ೧೯೭೮ರಲ್ಲೂ ಮನೋರಮಾ ಪಾಲಿಗೆ ಅದೃಷ್ಟ ಒಲಿಯಿತು. ಆದರೇ, ೧೯೮೩ರಲ್ಲಿ ಲೆಕ್ಕಾಚಾರ ಬದಲಾಗಿ ಬಿಜೆಪಿಯಿಂದ ವಿ.ಎಸ್ ಆಚಾರ್ಯ ಗೆದ್ದರು. ಮತ್ತೆ ೧೯೮೫, ೧೯೮೯ರಲ್ಲಿ ಮನೋರಮಾ ಪಾಲಿಗೆ ಉಡುಪಿ ಒಲವು ತೋರಿಸಿದ್ದು ಉಡುಪಿಯ ರಾಜಕೀಯದ ಅಚ್ಚರಿಯ ಬೆಳವಣಿಗೆ. ೧೯೯೪, ೧೯೯೯ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಯು. ಆರ್. ಸಭಾಪತಿ, ಬಿಜೆಪಿಯ ಸುಧಾಕರ್ ಶೆಟ್ಟಿ ವಿರುದ್ಧ ಗೆದ್ದರು. ೨೦೦೪ರಲ್ಲಿ ಮನೋರಮಾ ಬಣ್ಣ ಬದಲಾಯಿಸಿ ಬಿಜೆಪಿಯಿಂದ ಲೋಕಸಭೆಗೆ ಪ್ರವೇಶ ಪಡೆದರು. ೨೦೦೪ರಲ್ಲಿ ಬಿಜೆಪಿಯ ರಘುಪತಿ ಭಟ್‌ಗೆ ಉಡುಪಿ ವಿಧಾನಸಭಾ ಕ್ಷೇತ್ರ ಒಲಿಯಿತು. ೨೦೦೮ರಲ್ಲಿ ಮತ್ತೆ ಮನೋರಮಾ ಕಾಂಗ್ರೆಸ್‌ಗೆ ಮರಳಿ, ಮಗ ಪ್ರಮೋದ್ ಮಧ್ವರಾಜ್ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸಿದರಾದರೂ ರಘುಪತಿ ಭಟ್ ವಿರುದ್ಧ ಪ್ರಮೋದ್ ಸೋಲನುಭವಿಸಿದರು. ೨೦೧೩ರ ಚುನಾವಣೆಯ ಸಂದರ್ಭದಲ್ಲಿ ರಘುಪತಿ ಭಟ್ ಅವರ ಅನೈತಿಕ ಸಂಬಂಧ ಭಾರಿ ಸದ್ದು ಮಾಡಿದ್ದ ಕಾರಣ, ರಘುಪತಿ ಭಟ್ ಬದಲಾಗಿ ಬಿ. ಸುಧಾಕರ್ ಶೆಟ್ಟಿ ಅವರನ್ನು ಕಣಕ್ಕಿಳಿಸಿದ್ದು ಬಿಜೆಪಿಗೆ ವರ್ಕೌಟ್ ಆಗಿಲ್ಲ. ಗೆಲುವು ಪ್ರಮೋದ್ ಕಡೆಗೆ ಒಲಿಯಿತು. ೨೦೧೮ರಲ್ಲಿ ಮೋದಿ ಹವಾದೊಂದಿಗೆ ಪರೇಶ್ ಮೇಸ್ತ ಹತ್ಯೆ ಪ್ರಕರಣ ಮತ್ತೆ ಬಿಜೆಪಿಗೆ ರಾಜಕೀಯ ಮೈಲೇಜ್ ತಂದುಕೊಡ್ತು, ಮತ್ತೆ ಉಡುಪಿ ಬಿಜೆಪಿ ತೆಕ್ಕೆಗಾಯ್ತು. ಈಗ ಮತ್ತೆ ಬಿಜೆಪಿಗೆ ಉಡುಪಿ ಒಲಿಯುವುದು ಬಹುತೇಕ ಪಕ್ಕಾ ಎಂದೇ ಕಾಣಿಸುತ್ತಿದೆ. ಕಳದೆ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ ಇತ್ತೀಚೆಗಷ್ಟೆ ತಮ್ಮ ಬಣ್ಣ ಬದಲಾಯಿಸಿಕೊಂಡಿದ್ದು, ಸದ್ಯಕ್ಕೆ ಉಡುಪಿ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಮಾಸ್ ಲೀಡರ್ ಯಾರೂ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ೨೦೨೩ರ ಚುನಾವಣೆ ಬಿಜೆಪಿಗೆ ಸುಲಭ ಗ್ರಾಸವಾಗಲಿದೆ. ಹಾಲಿ ಶಾಸಕ ರಘುಪತಿ ಭಟ್ ಒಂದಿಷ್ಟು ಜನಪರ ಕಾಳಜಿ ವಹಿಸಿ, ಕಳೆದ ಅವಧಿಗಿಂತ ಈ ಅವಧಿಯಲ್ಲಿ ಹೆಚ್ಚಿನ ಕೆಲಸ ಮಾಡಿರುವುದರಿಂದ ದೊಡ್ಡಮಟ್ಟದ ವಿರೋಧವೇನು ಉಡುಪಿಯಲ್ಲಿ ಇಲ್ಲ. ಭಟ್ರನ್ನು ಬದಲಾಯಿಸುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಇನ್ನು ಒಂದು ವೇಳೆ ಭಟ್ರನ್ನು ಬದಲಾಯಿಸುವ ನಿರ್ಧಾರಕ್ಕೆ ಬಿಜೆಪಿ ಬಂದರೇ, ಉಡುಪಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನ ಶೆಟ್ರ ಪಾಲಾಗಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಉದಯ್ ಕುಮಾರ್ ಶೆಟ್ಟಿ ಅಭ್ಯರ್ಥಿ ಸ್ಥಾನದ ರೇಸ್‌ನಲ್ಲಿ ಇದ್ದಾರೆ. ಉದಯ್ ಕುಮಾರ್ ಶೆಟ್ಟಿ ಉಡುಪಿ ಬಿಜೆಪಿ ಪಾಳಯದಲ್ಲಿನ ಅಗ್ರ ಪಂಕ್ತಿಯ ನಾಯಕರಲ್ಲಿ ಒಬ್ಬರು, ಹಾಗಾಗಿ ಭಟ್ರ ಅದೃಷ್ಟ ಕೈಕೊಟ್ಟರೇ ಶೆಟ್ರಿಗೆ ಒಲಿಯಬಹುದು ಎಂಬ ಮಾತಿದೆ. ಉಳಿದಂತೆ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಕೂಡ ಈ ಅಭ್ಯರ್ಥಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಆದರೇ ಇವರ‍್ಯಾರಿಗೂ ಅಭ್ಯರ್ಥಿ ಸ್ಥಾನ ಒಲಿಯುವ ಲಕ್ಷಣಗಳು ಈ ಬಾರಿ ಕಾಣಿಸುತ್ತಿಲ್ಲ. 

ಇನ್ನು, ಉಡುಪಿ ಕಾಂಗ್ರೆಸ್ ಸದ್ಯಕ್ಕೆ ಕಂಗಾಲಾದಂತೆ ಕಾಣಿಸುತ್ತಿದ್ದು, ಒಂದು ಹಂತದಲ್ಲಿ ಪರೋಕ್ಷವಾಗಿ ಉಡುಪಿ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಬಿಜೆಪಿಗೆ ಬಿಟ್ಟುಕೊಟ್ಟಂತೆ ಕಾಣಿಸುತ್ತಿದೆ. ಮಾಜಿ ಶಾಸಕ, ಸಚಿವ ಪ್ರಮೋದ್ ಮಧ್ವರಾಜ್ ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿಕೊಂಡಿದ್ದಾರೆ. ಪ್ರಮೋದ್ ಕಾಂಗ್ರೆಸ್‌ನಲ್ಲಿ ಇದ್ದಿದ್ದರೇ, ಪ್ರಶ್ನಾತೀತವಾಗಿ ಕಾಂಗ್ರೆಸ್ ಅಭ್ಯರ್ಥಿ ಸ್ಥಾನ ಪ್ರಮೋದ್‌ಗೆ ಒಲಿಯುತ್ತಿತ್ತು. ಆದರೇ, ಪ್ರಮೋದ್ ಅವರಿಂದ ತೆರವುಗೊಂಡ ಸ್ಥಾನಕ್ಕೆ ಸದ್ಯ ಉಡುಪಿ ಕಾಂಗ್ರೆಸ್‌ನ ಪ್ರಮುಖ ನಾಯಕರುಗಳಾದ ಉದ್ಯಮಿ ಪ್ರಸಾದ್ ಕಾಂಚನ್, ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ರಮೇಶ್ ಕಾಂಚನ್, ಹಿರಿಯ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ, ಹಿರಿಯ ನಾಯಕ, ಮಾಜಿ ಶಾಸಕ ಯು. ಆರ್ ಸಭಾಪತಿ, ಕಾಂಗ್ರೆಸ್‌ನ ಸಿದ್ಧಾಂತಕ್ಕೆ ಬದ್ಧರಾಗಿರುವ, ಕಾಂಗ್ರೆಸ್ ತೊರೆದು ಕೆಆರ್‌ಎಸ್‌ಗೆ ಹೋಗಿ ಮತ್ತೆ ಮರಳಿ ಕಾಂಗ್ರೆಸ್‌ಗೆ ಹಿಂತಿರುಗಿದ ಅಮೃತ್ ಶೆಣೈ, ಭುಜಂಗ ಶೆಟ್ಟಿ ಕಾಂಗ್ರೆಸ್‌ನ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಕಾಪು ಕುತೂಹಲ ? : ಉಡುಪಿಯ ಕಾಪು ವಿಧಾನಸಭಾ ಕ್ಷೇತ್ರ ಈ ಬಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಶಾಸಕ ಲಾಲಾಜಿ ಆರ್. ಮೆಂಡನ್ ಮೇಲೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕನಾಟಕ ಸರ್ಕಾರದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮತ್ತೆ ಶಾಸಕ ಸ್ಥಾನ ಅಲಂಕರಿಸುವ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಸೊರಕೆ ಬಿಟ್ಟರೇ ಬೇರೆ ಯಾರೂ ಆಕಾಂಕ್ಷಿಗಳ ಪಟ್ಟಿಯಲ್ಲಿಲ್ಲ. ಆದರೇ, ಇತ್ತೀಚೆಗಷ್ಟೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಪ್ರಮೋದ್ ಮಧ್ವರಾಜ್ ಒಂದು ವೇಳೆ ಕಾಪುವಿಂದ ಸ್ಪರ್ಧೆಗಿಳಿದರೇ, ಚುನಾವಣಾ ಕಣ ತಾರಕಕ್ಕೆ ಏರುವ ಎಲ್ಲಾ ಲಕ್ಷಣಗಳಿವೆ. ಯಾಕಂದ್ರೆ ವೈಯಕ್ತಿಕವಾಗಿ, ರಾಜಕೀಯವಾಗಿ ಸೊರಕೆಗೂ, ಮಧ್ವರಾಜ್‌ಗೂ ಅಷ್ಟಕ್ಕಷ್ಟೇ. ಆದರೇ, ಉಡುಪಿಯಲ್ಲಿ ಇದ್ದಷ್ಟು ಜನಪ್ರಿಯತೆ ಪ್ರಮೋದ್‌ಗೆ ಕಾಪುವಿನಲ್ಲಿ ಇಲ್ಲ ಎನ್ನುವುದು ಇಲ್ಲಿ ಗಮನಾರ್ಹ. ಇನ್ನು, ಲಾಲಾಜಿಯವರನ್ನು ಕಿತ್ತೊಗೆದರೇ, ಬಿಜೆಪಿಯಿಂದ ಕಳೆದ ಕೆಲವು ವರ್ಷಗಳಿಂದ ಅಭ್ಯರ್ಥಿ ಸ್ಥಾನಕ್ಕೆ ಕಣ್ಣಿಟ್ಟಿರುವ ಹಿಂದೂ ಮುಖಂಡ ಯಶಪಾಲ್ ಸುವರ್ಣ ಅವರ ಪಾಲಿಗೆ ಅಭ್ಯರ್ಥಿ ಸ್ಥಾನ ಒಲಿಯುವ ಸಾಧ್ಯತೆಯೇ ಹೆಚ್ಚು. ಆದರೂ, ಕಾಪುವಿನಲ್ಲಿ ಸೊರಕೆಯನ್ನು ಎದುರಿಸಲು ಮಾಜಿ ಕೈ ನಾಯಕನನ್ನು ಕಣಕ್ಕಿಳಿಸಬಹುದೇ ಎಂಬ ವಿಚಾರವನ್ನು ಅಲ್ಲಗಳೆಯುವಂತಿಲ್ಲ. ಮೊಗವೀರ ಹಾಗೂ ಬಿಲ್ಲವ ಮತಗಳು ಹೆಚ್ಚಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ರಾಜಕೀಯ ಲೆಕ್ಕಾಚಾರದ ಬಗ್ಗೆ ಬಾರಿ ಕುತೂಹಲ ಮೂಡಿಸಿದೆ. ಸೊರಕೆ ಬಿಟ್ಟರೇ, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬೇರೆ ಯಾವ ಆಕಾಂಕ್ಷಿಗಳಿಲ್ಲ. ಆದರೇ, ಬಿಜೆಪಿಯಿಂದ ಯಶಪಾಲ್ ಸುವರ್ಣ ಬಿಟ್ಟರೇ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ ಆಕಾಂಕ್ಷಿಗಳಾಗಿದ್ದಾರೆ. 

ವಸಂತ್ ಸಾಲ್ಯಾನ್ ಅವರ ಕಾಂಗ್ರೆಸ್‌ನ ಸುದೀರ್ಘ ಆಡಳಿತ ಕಂಡ ಕಾಪು ವಿಧಾನ ಸಭಾಕ್ಷೇತ್ರದಲ್ಲಿ ಬಿಜೆಪಿ ಮೊದಲ ಬಾರಿ ಬಾವುಟ ಹಾರಿಸಿದ್ದು ೨೦೦೪ರಲ್ಲಿ. ೨೦೦೮ರಲ್ಲಿ ಮತ್ತೆ ಬಿಜೆಪಿಗೆ ಕಾಪು ಒಲಿಯಿತು. ೨೦೧೩ರಲ್ಲಿ ಕಾಂಗ್ರೆಸ್ ಸೀಟ್‌ನನ್ನು ಪುತ್ತೂರಿನಿಂದ ಬಂದ ಅನುಭವಿ ವಿನಯಕುಮಾರ್ ಸೊರಕೆಗೆ ನೀಡಲಾಯಿತು. ಸಾಲ್ಯಾನ್ ಬಂಡೆದ್ದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರೂ, ಏನು ಪ್ರಯೋಜನವಾಗಿಲ್ಲ. ಸೊರಕೆ ಗೆದ್ದರು. ೨೦೧೮ರಲ್ಲಿಯೂ ಮತ್ತೆ ಸೊರಕೆ ಗೆದ್ದೇ ಗೆಲ್ಲುತ್ತಾರೆ ಎಂಬ ವಾತಾವರಣ ಇದ್ದಿತ್ತಾದರೂ ಚುನಾವಣೆಯ ಹೊಸ್ತಿಲಲ್ಲಿ ನಡೆದ ಕೋಮುಗಲಭೆ ಬಿಜೆಪಿಯನ್ನು ಗೆಲುವಿನ ದಡ ಮುಟ್ಟಿಸಿದೆ ಎಂಬ ಮಾತಿದೆ. ಈಗ ಮತ್ತೆ ಚುನಾವಣೆ ರಂಗೇರಿದ್ದು, ಕಾಪು ಕುತೂಹಲ ಮೂಡಿಸಿದೆ. 

ಕಾರ್ಕಳದ ರಾಜಕೀಯ ಸ್ಥಿತಿ : ೧೯೬೭ರಲ್ಲಿ ಒಮ್ಮೆ ಬಿಜೆಪಿ(ಭಾರತೀಯ ಜನಸಂಘ) ಗೆದ್ದಿದ್ದನ್ನು ಹೊರತು ಪಡಿಸಿದರೇ, ಮತ್ತೆ ೧೯೭೨ ರಿಂದ ೧೯೯೪ ರವರೆಗೆ ಕಾರ್ಕಳ-ಹೆಬ್ರಿ ವಿಧಾನಸಭಾ ಕ್ಷೇತ್ರವನ್ನು ಆಳಿದ್ದು ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೋಯ್ಲಿ. ೧೯೯೯ರಲ್ಲಿ ಮೊಯ್ಲಿ ದೆಹಲಿ ರಾಜಕಾರಣದತ್ತ ತೆರಳಿದ ಕಾರಣದಿಂದಾಗಿ ಮೊಯ್ಲಿ ಇಲ್ಲಿಂದ ಸ್ಪರ್ಧಿಸಿಲ್ಲ. ಎಚ್. ಗೋಪಾಲ ಭಂಡಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಆದರೇ, ೨೦೦೪ರಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕಾರ್ಕಳ ಯುವ ರಾಜಕಾರಣಿ ಬಿಜೆಪಿಯ ಸುನೀಲ್ ಕುಮಾರ್‌ಗೆ ಒಲಿಯಿತು. ಆಗ ಸುನಿಲ್ ದತ್ತಪೀಠದ ವಿವಾದದಿಂದ ಟ್ರೆಂಡ್‌ನಲ್ಲಿದ್ದರು. ೨೦೦೮ರಲ್ಲಿ ಗೋಪಾಲ್ ಭಂಡಾರಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾದರು. ಆದರೇ, ೨೦೧೩ರಲ್ಲಿ ಅಚ್ಚರಿ ಎಂಬಂತೆ, ಇಡೀ ಉಡುಪಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತು ಕೈಚೆಲ್ಲಿ ಕೂತಿದ್ದಾಗ ಬಿಜೆಪಿಯಿಂದ ಗೆದ್ದ ಏಕೈಕ ಶಾಸಕ ಸುನೀಲ್ ಕುಮಾರ್ ಎನ್ನುವುದು ಗಮನಾರ್ಹ. ಮತ್ತೆ ೨೦೧೮ರಲ್ಲಿ ಸುನೀಲ್ ಗೋಪಾಲ್ ಭಂಡಾರಿ ವಿರುದ್ಧ ಬರೋಬ್ಬರಿ ೪೨ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದರು. ಈ ಚುನಾವಣೆಯ ಸಂದರ್ಭದಲ್ಲಿ ಹೊನ್ನಾವರದಲ್ಲಿ ನಡೆದ ಪರೇಶ್ ಮೆಸ್ತಾ ಕೊಲೆ ಪ್ರಕರಣ ಹಾಗೂ ಸುರತ್ಕಲ್‌ನಲ್ಲಿ ನಡೆದ ಮರಾಠ ಯುವಕ ದೀಪಕ್ ರಾವ್ ಕೊಲೆ ಪ್ರಕರಣಗಳು ಬಿಜೆಪಿಗೆ ರಾಜಕೀಯ ಮೈಲೇಜ್ ಕೊಟ್ಟಿತ್ತು ಎನ್ನುವುದು ರಾಜಕೀಯ ಪಡಸಾಲೆಯ ಮಾತು. 

ಇನ್ನು, ಬಿಜೆಪಿಯಿಂದ ಸುನೀಲ್ ಕುಮಾರ್ ಬಿಟ್ಟರೇ ಬೇರೆ ಯಾವ ಆಕಾಂಕ್ಷಿಗಳಿಲ್ಲ. ಆದರೇ, ಕಾಂಗ್ರೆಸ್‌ನಲ್ಲಿ ಭಂಡಾರಿಯವರಿಂದ ತೆರವುಗೊಂಡ ಸ್ಥಾನಕ್ಕೆ ವೀರಪ್ಪ ಮೊಯ್ಲಿ ಮಗ ಹರ್ಷ ಮೊಯ್ಲಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಶುಭದ್ ರಾವ್ ಸೇರಿ ಸುರೇಂದ್ರ ಶೆಟ್ಟಿ (ಮೊಯ್ಲಿ ಆಪ್ತ) ಕಾಂಗ್ರೆಸ್ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಗಳು. 

ಕುಂದಾಪುರಕ್ಕೆ ಮತ್ತೆ ಹಾಲಾಡಿ ? : ೧೯೮೩ರಿಂದ ೧೯೯೯ರವರೆಗೆ ಕಾಂಗ್ರೆಸ್‌ನ ಪ್ರತಾಪ್‌ಚಂದ್ರ ಶೆಟ್ಟಿ ಗೆಲುವು ಸಾಧಿಸಿದ್ದರು. ಸತತ ನಾಲ್ಕು ಬಾರಿ ಗೆದ್ದಿದ್ದ ಪ್ರತಾಪ್‌ಚಂದ್ರ ಶೆಟ್ಟಿ ೧೯೯೯ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಚುನಾವಣೆಯ ಕಣಕ್ಕಿಳಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಸೋಲನುಭವಿಸಿದರು. ೨೦೦೪ರಲ್ಲಿ ಹಾಲಾಡಿ ತಮ್ಮ ಮತಗಳ ಅಂತರವನ್ನು ೨೦,೦೦೦ ಗಡಿ ದಾಟಿಸಿ ಮತ್ತೆ ಗೆದ್ದರು. ೨೦೦೮ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದ ಪ್ರಭಾವಿ ರಾಜಕಾರಣಿ ಜಯಪ್ರಕಾಶ್ ಶೆಟ್ಟಿಯವರನ್ನೂ ಭಾರಿ ಮತಗಳ ಅಂತರದಿಂದ ಹಾಲಾಡಿ ಸೋಲಿಸಿದರು. 

೨೦೧೨ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಹಾಲಾಡಿಗೆ ಸಚಿವ ಸ್ಥಾನ ನೀಡುವುದಾಗಿ ಕರೆಸಿಕೊಂಡು ಅಂತಿಮ ಹಂತದಲ್ಲಿ ಹಾಲಾಡಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷವನ್ನು ತೊರೆದಿದ್ದೆಲ್ಲವೂ ಕುಂದಾಪುರ ರಾಜಕೀಯದ ದೊಡ್ಡ ಇತಿಹಾಸ. ೨೦೧೩ರಲ್ಲಿ ಸ್ವತಂತ್ರವಾಗಿ ಕಣಕ್ಕಿಳಿದಿದ್ದ ಹಾಲಾಡಿ ರಾಷ್ಟ್ರೀಯ ಪಕ್ಷಗಳನ್ನು ಸುಮಾರು ೪೦ ಸಾವಿರ ಮತಗಳ ಅಂತರದಿಂದ ನೆಲಕಚ್ಚಿಸಿದರು. ಇದು ಹಾಲಾಡಿ ಮೇಲೆ ಜನ ಇಟ್ಟ ಪ್ರೀತಿಯನ್ನು ರಾಜ್ಯ ಬಿಜೆಪಿಗೆ ತಿಳಿಸಿತ್ತು. ೨೦೧೮ರಲ್ಲಿ ಮತ್ತೆ ಬಿಜೆಪಿಗೆ ಮರಳಿದ ಹಾಲಾಡಿ, ಮತ್ತೆ ಭರ್ಜರಿ ಗೆಲುವು ಸಾಧಿಸಿ ಶಾಸಕರಾದರು. 

ಈಗ ಮತ್ತೆ ಚುನಾವಣಾ ಅಖಾಡ ಸಿದ್ಧವಾಗಿದೆ. ಮತ್ತೆ ಬಿಜೆಪಿಯಿಂದ ಹಾಲಾಡಿಗೆ ಟಿಕೆಟ್ ಸಿಗುವುದು ಖಚಿತ. ಆದರೇ, ಹಾಲಾಡಿ ಮನಸ್ಸು ಮಾಡುತ್ತಿಲ್ಲ ಎಂಬ ಒಂದು ಮಾತು ಕೂಡ ಕುಂದಾಪುರ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಹಾಲಾಡಿ ಅಲ್ಲದಿದ್ದರೇ, ಎ.ಜಿ ಕೊಡ್ಗಿ ಅವರ ಪುತ್ರ ಕಿರಣ್ ಕೊಡ್ಗಿ ಅವರಿಗೆ ಬಿಜೆಪಿ ಮಣೆ ಹಾಕಬಹುದು ಎಂಬ ಮಾತಿದೆ. ಮಾತ್ರವಲ್ಲದೇ ಹಾಲಾಡಿ ಅಲ್ಲದಿದ್ರೆ, ಹಾಲಾಡಿ ತಮ್ಮ ಉತ್ತರಾಧಿಕಾರಿಯ ಹೆಸರು ಹೇಳ್ತಾರೆ, ಅವರೇ ಕುಂದಾಪುರದ ಬಿಜೆಪಿ ಅಭ್ಯರ್ಥಿಯಾಗಿರಲಿದ್ದಾರೆ ಎಂಬ ಮಾತು ಕೂಡ ಕುಂದಾಪುರ ರಾಜಕೀಯ ವಲಯದಲ್ಲಿ ಗುಸುಗುಸು ಚರ್ಚೆ ಎದ್ದಿದೆ. 

ಇನ್ನು, ಕಾಂಗ್ರೆಸ್ ಕಳೆದ ಬಾರಿ ಎಲ್ಲಿಂದಲೋ ರಾಕೇಶ್ ಮಲ್ಲಿಯನ್ನು ಕರೆತಂದು ಮುಖಭಂಗಕ್ಕೆ ಒಳಗಾಗಿದ್ದು ಸಾಕೆನ್ನಿಸಿ ಈ ಭಾರಿ ಸ್ಥಳಿಯ ನಾಯಕರಿಗೆ ಮಣೆ ಹಾಕುವ ಯೋಚನೆಯಲ್ಲಿದೆ. ೨೦೧೩ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಲ್ಯಾಡಿ ಶಿವರಾಮ ಶೆಟ್ಟಿ,  ಕಿಶನ್ ಹೆಗ್ಡೆ ಕೊಳ್ಕೆಬೈಲು ಇಲ್ಲದಿದ್ದರೇ, ಮೊಳವಳ್ಳಿ ದಿನೇಶ್ ಹೆಗ್ಡೆ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಬಂಟ್ಸ್ ಮತಗಳು ಹೆಚ್ಚಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಉಭಯ ಪಕ್ಷಗಳ ತಂತ್ರಗಾರಿಕೆ ಏನೆಂಬುವುದು ಕುತೂಹಲ. 

ಬೈಂದೂರಿಗೆ ಶೆಟ್ರಾ..? ಪೂಜಾರ್ರಾ..? : ಉಡುಪಿಯಿಂದ ಸುಮಾರು ಎಪ್ಪತ್ತು ಕೀ.ಮೀ ದೂರವಿರುವ ವಿಧಾನಸಭಾ ಕ್ಷೇತ್ರ ಬೈಂದೂರು. ೧೯೮೫, ೧೯೮೯ರಲ್ಲಿ ಕಾಂಗ್ರೆಸ್‌ನ ಜಿ.ಎಸ್ ಆಚಾರ್ ಗೆಲುವು ಸಾಧಿಸಿದ್ದರು. ೧೯೯೪ರಲ್ಲಿ ಬಿಜೆಪಿಯ ಐಎಂ ಜಯರಾಮ್ ಶೆಟ್ಟಿ ಗೆಲುವು ಕಂಡಿದ್ದರು. ೧೯೯೮ರಲ್ಲಿ ಉಡುಪಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದ ಗೋಪಾಲ ಪೂಜಾರಿ ಅವರು ಅದೇ ವರ್ಷ ನಡೆದಿದ್ದ ಚುನಾನವಣೆಯಲ್ಲಿ ಗೆದ್ದಿದ್ದರು. ೧೯೯೯, ೨೦೦೪ರಲ್ಲಿಯೂ ಪೂಜಾರಿಯವರು ಗೆದ್ದಿದ್ದರು, ಆದರೇ, ೨೦೦೮ರಲ್ಲಿ ಬಿಜೆಪಿಯ ಲಕ್ಷ್ಮೀನಾರಾಯಣ ಅವರ ವಿರುದ್ಧ ಸೋಲು ಕಂಡರು. ೨೦೧೩ರಲ್ಲಿ ಬಿಜೆಪಿಯ ಸುಕುಮಾರ್ ಶೆಟ್ಟಿಯವರ ವಿರುದ್ಧ ಸುಮಾರು ೩೦ ಸಾವಿರ ಮತಗಳ ಅಂತರದಿಂದ ಗೆದ್ದು ಮತ್ತೆ ಬೈಂದೂರು ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಪೂಜಾರಿಯವರು ತಂದುಕೊಟ್ಟರು. ಆದರೇ, ೨೦೧೮ರಲ್ಲಿ ಅದಲು ಬದಲಾಗಿ, ಗೆಲುವು ಸುಕುಮಾರ್ ಶೆಟ್ಟಿಯವರ ಪಾಲಿಗೆ ಅದೃಷ್ಟ ಒಲಿಯಿತು. ಪರೇಶ್ ಮೇಸ್ತಾ ಹತ್ಯೆ ಪ್ರಕರಣದಿಂದಾದ ಹಿಂದೂ ಮತ ಧ್ರುವೀಕರಣ ಹಾಗೂ ಮೋದಿ ಹವಾದಿಂದಾಗಿ ಸುಕುಮಾರ್ ಶೆಟ್ಟಿ ಗೆಲುವು ಅನುಭವಿಸಿದರು ಎಂಬುವುದು ಬೈಂದೂರು ರಾಜಕೀಯ ವಲಯದ ಮಾತು. ಈಗ ಮತ್ತೆ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿ ಸುಕುಮಾರ್ ಶೆಟ್ಟಿ ಅವರಿಗೆ ಟಿಕೇಟ್ ನೀಡುವುದರ ಬಗ್ಗೆ ಒಂದಿಷ್ಟ ಚರ್ಚೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಹಾಗಾಗಿ ಉದ್ಯಮಿ, ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಬಿಜೆಪಿ ಟಿಕೇಟ್ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿ ಗೋಪಾಲ್ ಪೂಜಾರಿಯವರಿಗೆ ಟಿಕೆಟ್ ಪಕ್ಕಾ ಎಂದು ಹೇಳಲಾಗುತ್ತಿದ್ದರೂ ಕೂಡ, ಡಿಕೆಶಿ ಆಪ್ತ ಬಳಗದಲ್ಲಿ ಓರ್ವರಾದ, ಗುತ್ತಿಗೆದಾರ ಯುಬಿ ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕರೂ ಆಶ್ಚರ್ಯವೇನಿಲ್ಲ ಎಂಬ ಮಾತು ಕೂಡ ಕೇಳಿ ಬರುತ್ತಿದೆ. 

ಒಟ್ಟಿನಲ್ಲಿ, ಮುಂದಿನ ವಿಧಾನಸಭಾ ಚುನಾವಣೆಗಾಗಿ ಉಡುಪಿ ಜಿಲ್ಲೆಯಲ್ಲಿ ಬೂತ್ ಮಟ್ಟದ ತಂತ್ರ ಆರಂಭವಾಗಿದೆ. ಉಡುಪಿ ವಿಧಾನಸಭೆಯ ಒಟ್ಟು ಐದೂ ಕ್ಷೇತ್ರಗಳು ಈ ಬಾರಿ ಹಲವು ಕಾರಣಗಳಿಗೆ ಕುತೂಹಲ ಹೆಚ್ಚಿಸಿದ್ದು, ಹಲವು ಬದಲಾವಣೆಗೆ ೨೦೨೩ರ ಚುನಾವಣೆಗೆ ಸಾಕ್ಷಿಯಾಗಲಿದೆಯೇ ಎಂದು ಕಾದು ನೋಡಬೇಕಿದೆ.

-ಶ್ರೀರಾಜ್ ವಕ್ವಾಡಿ 

       


Wednesday, November 16, 2022

ರಾಜೀವ್ ಹಂತಕರಿಗೆ ‘ಸುಪ್ರೀಂ’ ವರ

ಪಕ್ಕದ ದೇಶದ ಸಮಸ್ಯೆಯೊಂದು ದೇಶದ ಪ್ರಧಾನಿ ಹತ್ಯೆ ಪ್ರಕರಣಕ್ಕೆ ಕಾರಣವಾದ ಹಿಂದಿನ ಕಥೆ..!

ವೈಮಾನಿಕ ವೃತ್ತಿಯಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದ ಭಾರತದ ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಅವರ ಹಿರಿಯ ಮಗ ರಾಜೀವ್ ಗಾಂಧಿ, ಗಾಂಧಿ ಕುಟುಂಬದ ಮತ್ತು ಇಂಧಿರಾ ಗಾಂಧಿ ಅವರ ಉತ್ತರಾಧಿಕಾರಿಯಾದ ಸಂದರ್ಭದಲ್ಲಿ ಕಾಂಗ್ರೆಸ್ ಪಾಳಯದಲ್ಲಿಯೇ “ಅಯ್ಯೋ... ರಾಜಕೀಯ ಕಾರ್ಯಕ್ಕೆ ಬಾರದವ” ಎಂಬ ಮಾತು ಕೇಳಿ ಬಂದಿತ್ತು. ಇದೇ ರಾಜೀವ್ ಗಾಂಧಿ ರಾಜಕೀಯದಲ್ಲಿನ ಹೊಸತನ ನೋಡಿ ಅಂದಿನ ಭಾರತ, ಇಂತವನೊಬ್ಬ ಯುವ ನಾಯಕ ಈ ದೇಶಕ್ಕೆ ಬೇಕು ಎಂದು ಕೊಂಡಾಡಿದ್ದೂ ಕೂಡ ಇದೆ. ಪ್ರಧಾನಿಯಾದ ಸಂದರ್ಭದಲ್ಲಿ ರಾಜೀವ್ ಗಾಂಧಿಗೆ ಸುಮಾರು ನಲವತ್ತರ ವಯಸ್ಸು, ಕಾಂಗ್ರೆಸ್ ಕಂಡುಕೊಂಡು ಬಂದ ರಾಜಕೀಯದ ಕೌಟುಂಬಿಕ ನೀತಿ ನಿಯಮಗಳಿಂದ ತುಸು ಆಚೆಯೇ ಉಳಿದಿದ್ದ ರಾಜೀವ್, ರಾಜಕೀಯದ ಸ್ಥಿತಿ ಗತಿಗಳನ್ನು ಬದಲಿಸಬಲ್ಲ ಒಬ್ಬ ಯುವ ನಾಯಕ ಎಂದು ಈ ದೇಶದಿಂದ ಗುರುತಿಸಿಕೊಂಡಿದ್ದರು ಎನ್ನುವುದು ಕೂಡ ಗಮನಾರ್ಹ. ಇಂತಹ ಒಬ್ಬ ತಾತ್ವಿಕ ನೆಲೆಯಲ್ಲಿ ನಿಂತು ಯೋಚಿಸಿದ್ದ ಕೆಲವೇ ಕೆಲವು ಪ್ರಧಾನಿಗಳಲ್ಲಿ ಒಬ್ಬರಾಗಿದ್ದ ರಾಜೀವ್, ಗಾಂಧಿ ಕುಟುಂಬದ ಕೃಪಾ ಪೋಷಣೆ, ಇಂದಿರಾ ಉತ್ತರಾಧಿಕಾರಿ ಎಂಬ ಪಟ್ಟಕ್ಕೂ ಮೀರಿ ಬೆಳೆದಿದ್ದರಿಂದಲೇ ಇರಬೇಕು ೧೯೯೧ನೇಯ ಮೇ ತಿಂಗಳ ೨೧ನೇ ತಾರೀಕಿನಂದು ಸುಂದರ ಕಾಯದ ರಾಜೀವ್ ಗಾಂಧಿ ಛಿದ್ರ ಛಿದ್ರವಾಗಿ ಹೆಣವಾಗಿ ಹೋದರು. 

ಹೌದು ಪಕ್ಕದ ದೇಶದಲ್ಲಿ ಅಂದು ತಾರಕಕ್ಕೇ ಏರಿದ್ದ ತಮಿಳು ಉಗ್ರರ ಹಾಗೂ ಶ್ರೀಲಂಕಾ ಪ್ರಜೆಗಳ ನಡುವಿನ ವೈಚಾರಿಕ ಯುದ್ಧವನ್ನು ಸರಿಪಡಿಸುವುದಕ್ಕೆ ಬೇಕಾಗಿ ಕೈಗೊಂಡ ಕ್ರಮವೇ ಈ ದೇಶದ ಪ್ರಧಾನಿಯೊಬ್ಬನನ್ನು ಕಳೆದುಕೊಂಡ ಪ್ರಕರಣವಿದು. ಅದು ಲೋಕಸಭಾ ಚುನಾವಣೆಯ ಪೀಕ್ ಟೈಮ್. ರಾಜೀವ್ ಗಾಂಧಿ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಸಂದರ್ಭ. ಆಂಧ್ರಪ್ರದೇಶದಲ್ಲಿ ಚುನಾವಣೆ ಮುಗಿಸಿ ತಮಿಳು ನಾಡಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ರಾಜೀವ್ ಗಾಂಧಿ ಛಿದ್ರ ಛಿದ್ರವಾಗಿ ಹೆಣವಾಗಿ ಹಿಂತಿರುಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅದೊಂದು ಧಾರುಣ ಹತ್ಯೆ. ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾದ ರಾಜೀವ್ ಗಾಂಧಿ, ಅಂದಿನ ಕಾಲಕ್ಕೆ ಅಗತ್ಯವಾಗಿ ಬೇಕಾಗಿದ್ದ ಒಬ್ಬ ಯಶಸ್ವಿ ಯುವ ನಾಯಕನಾಗಿ ಆಡಳಿತ ನಡೆಸಬಲ್ಲ ಎಲ್ಲಾ ಸಾಮಥ್ಯ ಹೊಂದಿದ್ದರು. ಕರಾರುವಕ್ಕಾಗಿ ಪೂರ್ವ ಯೋಜಿತವಾಗಿ ಮಾಡಲಾದ ಹತ್ಯೆ ಪ್ರಕರಣದಿಂದಾಗಿ ಇಡೀ ಪ್ರಪಂಚ ಬೆಚ್ಚಿ ಬಿದ್ದಿತ್ತು.

೧೯೯೧ರಲ್ಲಿ ರಾಜೀವ್ ಗಾಂಧಿ ಆತ್ಮಹತ್ಯಾ ಸ್ಪೋಟಿಸಿ ಹತ್ಯೆಗೈದ ಪ್ರಕರಣದಲ್ಲಿ ಕಳೆದ ಮೂರು ದಶಕಗಳಿಂದ ಜೈಲಿನಲ್ಲಿದ್ದ ಆರು ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಲು ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ಏಳು ಮಂದಿ ಅಪರಾಧಿಗಳ ಪೈಕಿ ಕಳೆದ ಮೇ ನಲ್ಲಿ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿ ಆದೇಶಿಸಿತ್ತು. ಈಗ ಎಲ್ಲಾ ಅಪರಾಧಿಗಳನ್ನು ಬಿಡುಗಡೆಗೆ ಆದೇಶ ಮಾಡಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ರಾಜೀವ್ ಗಾಂಧಿ ಹತ್ಯೆ ಪ್ರಕರನದಲ್ಲಿ ಭಾಗಿಯಾಗಿದ್ದ ಅಪರಾಧಿಗಳಿಗೆ ಕ್ಷಮೆ ನೀಡುವುದರಲ್ಲಿ ಏನಿದೆ ಎಂದು ಹಿಂದೊಮ್ಮೆ ಸೋನಿಯಾ ಗಾಂಧಿ ಕೇಳಿದ್ದರು, ಇನ್ನು ಸ್ವತಃ ತಂದೆಯ ಕೊಲೆಯ ಅಪರಾಧಿಗಳನ್ನು ಮಗ ರಾಹುಲ್ ಗಾಂಧಿ, ಮಗಳು ಪ್ರಿಯಾಂಕ ಗಾಂಧಿ ಭೇಟಿ ಮಾಡಿ ನಾವು ಕ್ಷಮೆ ನೀಡುತ್ತೇವೆ ಎಂದಿದ್ದರು, ಅಷ್ಟಾಗಿಯೂ ಕಾಂಗ್ರೆಸ್ ಅದು ಅವರ ವೈಯಕ್ತಿಕ ಅಭಿಪ್ರಾಯ, ಸುಪ್ರೀಂ ಕೋರ್ಟ್‌ನ  ಈ ಆದೇಶ ದುರದೃಷ್ಟಕರ ಎಂದು ವಾದಿಸಿದೆ. ಸಿಬಿಐ ಈ ಏಳು ಮಂದಿಯನ್ನು ರಾಜೀವ್ ಗಾಂಧಿ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಹಂತಕರು ಎಂದು ಹೇಳಿತ್ತು. ೧೯೯೯ರಲ್ಲಿ ಸಾಕ್ಷ್ಯಾಧಾರಗಳ  ಆಧಾರದ ಕೊರತೆಯಿಂದಾಗಿ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಿಲಾಗಿತ್ತು ಎನ್ನುವುದು ಇಲ್ಲಿ ಗಮನಾರ್ಹ.  

ತಾಯಿ ಮಗನ ಹತ್ಯಗೆ ಸಾಮ್ಯತೆ ಏನು ಗೊತ್ತಾ ? :  ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ನಿಮಗೆ ಗೊತ್ತಿರಬಹುದು. ಸಿಖ್‌ರಿಗಾಗಿ ಪ್ರತ್ಯೇಕ ಖಲಿಸ್ತಾನ ರಾಷ್ಟçದ ಬೇಡಿಕೆ ಇಟ್ಟು ಪಂಜಾಬಿನಲ್ಲಿರುವ ಸ್ವರ್ಣ ಮಂದಿರವನ್ನು ಕೆಲವು ಮತಾಂಧ ಉಗ್ರರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದರು. ಸ್ವರ್ಣ ಮಂದಿರದೊಳಗೆ ಅಡಗಿ ಕುಳಿರು ಸರ್ಕಾರದ ವಿರುದ್ಧ ಬ್ಲಾö್ಯಕ್ ಮೇಲ್ ಮಾಡಿವುದೇ ಈ ಖಲಿಸ್ತಾನಿ ಉಗ್ರರ ಪರಮ ಉದ್ದೇಶವಾಗಿತ್ತು. ಖಲಿಸ್ತಾನಿಗಳ ಧೋರಣೆಗೆ ಒಪ್ಪದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶವನ್ನು ಒಡೆಯುವ ಹುನ್ನಾರಕ್ಕೆ ಸುತಾರಂ ಒಪ್ಪಿಗೆ ಇಲ್ಲವೆಂದು ಪಟ್ಟಿಗೆ ಬಿದ್ದು, ಸೇನೆಯನ್ನು ಸ್ವರ್ಣ ಮಂದಿರದ ಕಾರ್ಯಾಚರಣೆಗೆ ಕಳುಹಿಸಿಕೊಟ್ಟರು, ಈ ಕಾರ್ಯಾಚರಣೆಯೇ ಆಪರೇಷನ್ ಬ್ಲೂ ಸ್ಟಾರ್. ಅಂದು ಖಲಿಸ್ತಾನಿಗಳ ಪ್ರತ್ಯೇಕ ಸಕಾರದ ಬೇಡಿಕೆ ತೀವ್ರ ಸ್ವರೂಪಕ್ಕೆ ತಿರುಗಿತ್ತು. ಅಂದು ಅಕ್ಷರಶಃ ಪಂಜಾಬ್‌ನಲ್ಲಿ ತುರ್ತು ಪರಿಸ್ಥಿತಿಯ ವಾತಾವರಣ ಸೃಷ್ಟಿಯಾಗಿತ್ತು. ಒಂದು ವಾರಗಳ ಸತತ ಕರ್ಫ್ಯೂ ಹೇರಿ ಮಾಡಲಾದ ಕಾರ್ಯಾಚರಣೆಯ ನಂತರ ಅಮೃತ್‌ಸರದಲ್ಲಿರುವ ಸ್ವರ್ಣ ಮಂದಿರವನ್ನು ಸೇನೆ ವಶ ಪಡಿಸಿಕೊಳ್ಳುವುದರೊಂದಿಗೆ ಕಾರ್ಯಾಚರಣೆ ಮುಕ್ತಾಯವಾಯಿತು. ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಸುಮಾರು ೮೦ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಲ್ಲದೇ ಬರೋಬ್ಬರಿ ೧೫೯೨ ಮಂದಿ ಮೃತರಾದರು. ಇದೇ ಕಾರ್ಯಾಚರಣೆಯಲ್ಲಿಯೇ ಖಲಿಸ್ತಾನದ ಪ್ರತ್ಯೇಕ ಸರ್ಕಾರದ ಬೇಡಿಕೆಯ ರುವಾರಿಯಾಗಿದ್ದ ಬಿಂದ್ರಾನ್ ವಾಲೆ ಕೂಡ ಹತನಾದ. ಈ ಹತ್ಯೆಯ ಹಗೆ ಎಂಬಂತೆ ಕೇವಲ ನಾಲ್ಕು ತಿಂಗಳಲ್ಲಿ ಇಂದಿರಾ ಗಾಂಧಿ ಅವರದ್ದೇ ಸಿಖ್ ಭದ್ರತಾ ಸಿಬ್ಬಂದಿಗಳಿಂದ ಹತ್ಯೆಗೊಳಗಾದರು. ಅಷ್ಟೇ ಅಲ್ಲ ಇಂದಿರಾ ಹತ್ಯೆ ಪ್ರಕರಣದ ನಂತರ ಸಿಖ್ ನರಮೇಧವೇ ನಡೆಯಿತು. ಸುಮಾರು ೩೦೦೦ಕ್ಕೂ ಹೆಚ್ಚು ಸಿಖ್ ಜನರು ಮೃತರಾದರು. 

ಇನ್ನು, ರಾಜೀವ್ ಗಾಂಧಿ ಹತ್ಯೆ ಪ್ರಕರಣವನ್ನು ಗಮನಿಸುವುದಾದರೇ, ಶ್ರೀಲಂಕಾದಲ್ಲಿ ತಮಿಳು ಜನರಿಗಾಗಿ ಒಂದು ಪ್ರತ್ಯೇಕ ದೇಶ ಸ್ಥಾಪನೆಯ ಪ್ರಮುಖ ಗುರಿ ಹೊಂದಿದ್ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಇಳಮ್ ಎಂಬ ಹೆಸರಿನ ಉಗ್ರಗಾಮಿ ಸಂಘಟನೆ ಶ್ರೀಲಂಕಾ ಸೇನೆಯೊಂದಿಗೆ ಕದನದಲ್ಲಿ ತೊಡಗಿಕೊಂಡಿತ್ತು. ಅನೇಕ ವಿಧ್ವಂಸಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎಲ್‌ಟಿಟಿಇ, ಶ್ರೀಲಂಕಾದಲ್ಲಿ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ, ಸಮಾನತೆಯ ಗುರಿಯೊಂದಿಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಲ್ಲದೇ, ‘ತಮಿಳು ಇಳಂ’ ಎಂಬ ಪ್ರತ್ಯೇಕ ದೇಶ ಕಟ್ಟುವ ಆಸೆ ಹೊಂದಿತ್ತು. ಸತತವಾಗಿ ಶ್ರೀಲಂಕಾ ಸೇನೆಯ ಮೇಲೆ ಭಯೋತ್ಪಾಧಕ ದಾಳಿ ನಡೆಸುತ್ತಿದ್ದ ಎಲ್‌ಟಿಟಿಇ ಸಂಘಟನೆಯನ್ನು ನಿಗ್ರಹಿಸಲು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಶ್ರೀಲಂಕಾ ಸರ್ಕಾರದ ಪರವಾಗಿ ಭಾರತೀಯ ಹೆಚ್ಚುವರಿ ಸೇನೆಯನ್ನು ಕಳುಹಿಸಿಕೊಟ್ಟಿದ್ದರು. ಭಾರತೀಯ ಸೇನೆಯ ಮೇಲೂ ಕೂಡ ಎಲ್‌ಟಿಟಿಇ ಕದನ ಸಾರಿಸಿತ್ತು. ರಾಜೀವ್ ಗಾಂಧಿ ಮೇಲೆ ಎಲ್‌ಟಿಟಿಇ ಹಗೆ ಸಾಧಿಸುವ ಸಲುವಾಗಿ ಕರಾರುವಕ್ಕಾಗಿ ರಾಜೀವ್ ಹತ್ಯೆಗೆ ಸಂಚು ರೂಪಿಸಿತ್ತು. ಅದು ಲೋಕಸಭಾ ಚುನಾವಣೆಯ ಸಂದರ್ಭ, ರಾಜೀವ್ ಚುನಾವಣಾ ಪ್ರಚಾರದಲ್ಲಿ ಇದ್ದಾಗ, ಎಲ್‌ಟಿಟಿಇ ಜಾಫ್ನಾ ಹಾಗೂ ಚೆನೈನ ನಡುವೆ ಗುಪ್ತ ಸಂದೇಶಗಳ ವಿನಿಮಯ ಮಾಡಿಕೊಂಡಿತ್ತು ಎನ್ನುವುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. 

ಇಂದಿರಾ ಗಾಂಧಿ ಹತ್ಯೆ ಪ್ರಕರಣಕ್ಕೆ ಕಾರಣವಾಗಿದ್ದು ಖಲಿಸ್ತಾನಿಗಳ ಪ್ರತ್ಯೇಕ ರಾಷ್ಟ್ರದ ಹೋರಾಟ, ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಕೂಡ ಇಂತಹದ್ದೇ ಪ್ರತ್ಯೇಕ ರಾಷ್ಟçದ ಹೋರಾಟವೇ ಕಾರಣ. ಇಂದಿರಾ ಗಾಂಧಿ ಪ್ರಕರಣ ದೇಶದ್ದೇ ಸಮಸ್ಯೆಯಾದರೇ, ರಾಜೀವ್ ಗಾಂಧಿ ಹತ್ಯೆಗೆ ಕಾರಣವಾದದ್ದು ಪಕ್ಕದ ದೇಶದ ಸಮಸ್ಯೆ ಎನ್ನುವುದು ಇಲ್ಲಿ ಗಮನಾರ್ಹ. 

ಡಿಎಂಕೆಯನ್ನು ಕೆಳಗಿಸಿ ಕೇಂದ್ರಾಡಳಿತ ಹೇರಿಕೆ :  ರಾಜೀವ್ ಗಾಂಧಿ ಶ್ರೀಲಂಕಾ ಪರವಾಗಿರುವುದಕ್ಕಾಗಿ ಕೋಪಗೊಂಡ  ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳೈ ಪ್ರಭಾಕರನ್ ರಾಜೀವ್ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದ. ತಮಿಳುನಾಡಿನ ಮೂಲಕ ಎಲ್ಲಾ ಗುಪ್ತ ಮಾಹಿತಿಗಳ ಸಮಾಲೋಚನೆಗಳನ್ನು ಪ್ರಭಾಕರನ್ ಸಂಗ್ರಹಿಸುತ್ತಿದ್ದ. ಲೋಕಸಭಾ ಚುನಾವಣೆಯ ಪ್ರಚಾರ ಸಭೆಯನ್ನು ಟಾರ್ಗೆಟ್ ಇಟ್ಟುಕೊಂಡು, ಪ್ರಭಾಕರನ್ ಹತ್ಯೆಯ ಜವಾಬ್ದಾರಿಯನ್ನು ಶಿವರಾಸನ್ ಎಂಬ ಹಂತಕನಿಗೆ ವಹಿಸಿದ್ದ. ಎಲ್‌ಟಿಟಿಇ ಹಂತಕರನ್ನು ಶ್ರೀಲಂಕಾದಿಂದ ನಿರಾಶ್ರಿತರ ಸೋಗಿನಲ್ಲಿ ಪ್ರಭಾಕರನ್ ರಾಜೀವ್ ಗಾಂಧಿ ಹತ್ಯೆಗೂ ಒಂದು ವರ್ಷದ ಮೊದಲೇ ಹಡಗಿನಲ್ಲಿ ತಮಿಳುನಾಡಿಗೆ ಕಳುಹಿಸಿದ್ದ. ಒಂದು ವರ್ಷದ ನಿರಂತರ ಯೋಜನೆಯೊಂದಿಗೆ ರಾಜೀವ್ ಗಾಂಧಿ ಹತ್ಯೆ ಮಾಡಲಾಗಿತ್ತು. ಎಲ್‌ಟಿಟಿಇಯ ಈ ಗುಪ್ತ ಚಟುವಟಿಕಗಳನ್ನು ಮಟ್ಟ ಹಾಕುವಲ್ಲಿ ವಿಫಲವಾಗಿದ್ದ ತಮಿಳುನಾಡಿನ ಅಂದಿನ ಡಿಎಂಕೆ ಸರ್ಕಾರವನ್ನು ತೆಗೆದುಹಾಕಿ ಕೇಂದ್ರಾಡಳಿತ ಸರ್ಕಾರವನ್ನು ಹೇರಲಾಗಿತ್ತು. 

ಒಟ್ಟಿನಲ್ಲಿ, ಹಂತಕರಿಗೆ ಬಿಡುಗಡೆ ಭಾಗ್ಯ ನೀಡಿರುವುದು ಎಷ್ಟು ಯೋಗ್ಯ ? ಮಾತ್ರವಲ್ಲದೇ, ಪ್ರಸಕ್ತವಾಗಿ ಒಟ್ಟು ೩೨ ದೇಶಗಳಲ್ಲಿ ಎಲ್‌ಟಿಟಿಇ ಯನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಲಾಗಿದ್ದ ಸಂದರ್ಭದಲ್ಲಿಯೂ ಕೂಡ, ತಾವು ಒಬ್ಬ ದೇಶದ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪಾಲುದಾರಿಕೆಯನ್ನು ಹೊಂದಿದ್ದೆವು ಎಂದು ವಿಚಾರಣೆಯ ವೇಳೆ ಹೇಳಿಕೊಂಡಿದ್ದ ಅಪರಾಧಿಗಳನ್ನು ಕೂಡ ಈಗ ಬಂಧಮುಕ್ತಗೊಳಿಸಿದ್ದು, ಸಾಕ್ಷ್ಯಾಧಾರದ ಕೊರತೆಯೆಂದು ಹೇಳುತ್ತಿರುವುದು, ಈ ದೇಶಕಂಡ ಒಬ್ಬ ಪ್ರಧಾನಿಯೊಬ್ಬನ ಹತ್ಯೆಯಲ್ಲಿ ತೊಡಗಿಸಿಕೊಂಡಿರುವವರನ್ನು ಹೀಗೆ ದೇಶದ ಸವೋಚ್ಛ ನ್ಯಾಯಾಲಯವೇ ಬಿಡುಗಡೆಗೆ ಆದೇಶ ಹೊರಡಿಸಿರುವುದರ ಮೂಲಕ ಯಾವ ಸಂದೇಶ ನೀಡಿದೆ ಎನ್ನುವುದು ಇಲ್ಲಿ ಪ್ರಮುಖ ಪ್ರಶ್ನೆಯಾಗಿಯೇ ಉಳಿದಿದೆ.

-ಶ್ರೀರಾಜ್ ವಕ್ವಾಡಿ     


Thursday, November 10, 2022

ಕನ್ನುಗೋಲು ವರ್ಸಸ್ ವಾರಾಹಿ ಅನಾಲಿಟಿಕ್ಸ್ ಪ್ರೈವೇಟ್ ಲಿಮಿಟೆಡ್

ಸಿದ್ದು ವಿರುದ್ಧ ಮೀಸಲಾತಿ ಅಸ್ತ್ರ | ‘ಪಾಲಿಟಿಕಲ್ ಸ್ಟ್ರ್ಯಾಟೆಜಿಸ್ಟ್’ ಟ್ರೆಂಡಿಂಗ್ ಫೀಲ್ಡ್..!

ರಾಜಕೀಯದ ಕಿತ್ತಾಟದಲ್ಲಿ ಇಂದು ಸಾಮಾಜಿಕ ವಲಯ ಅತ್ಯಂತ ಸುಸ್ತು ಹಾಗೂ ಒತ್ತಡಕ್ಕೆ ಒಳಗಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ರಾಜಕೀಯದ ವಿದ್ರೋಹದ ಕುತಂತ್ರಗಳು ಸಾಮಾಜಿಕ ಮನಸ್ಥಿತಿಗಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವುದರ ಮೂಲಕ ಅಭಿವೃದ್ಧಿಯ ಹೆಸರಿನಲ್ಲಿ ಉಂಡು ತೇಗಿದ್ದು ಈ ಸಮಾಜಕ್ಕೆ ಗೊತ್ತಿರುವ ವಿಷಯ. ಪ್ರಜಾಸತ್ತತೆಯನ್ನು ಉಳಿಸಬೇಕಾಗಿರುವ ಜನರಿಂದಲೇ ಆಯ್ಕೆಯಾದ ರಾಜಕೀಯ ಪಕ್ಷಗಳು ಅಧಿಕಾರದ ಹೆಸರಿನಲ್ಲಿ ಸುಳ್ಳು, ವಂಚನೆಗಳಲ್ಲಿ ತೊಡಗಿಕೊಂಡು ಮತ್ತೆ ಮತ್ತೆ ಜನರಲ್ಲಿ ಓಟಿಗಾಗಿ ಅಂಗಲಾಚುವುದು ಈ ದೇಶ ಕಾಣುತ್ತಿರುವ ಅತ್ಯಂತ ಕೆಟ್ಟ ಸ್ಥಿತಿ. 

ಜನ ಹಾಗೂ ಸಮಾಜದ ಆಸ್ತೆಯುಳ್ಳ ರಾಜಕೀಯ ಪಕ್ಷಕ್ಕೆ ಜನರ ಮುಂದೆ ಬಂದು ಅಂಗಲಾಚುವ ಅಗತ್ಯ ಎಂದಿಗೂ ಎದುರಾಗಲಾಗದು. ಅಧಿಕಾರದ ಜೊತೆಯಲ್ಲಿ ಅಭಿವೃದ್ಧಿ ಇದ್ದರೇ ಎಂದಿಗೂ ಕಣ ಪರೀಕ್ಷೆ ಮಾಡುವ ಪರಿಸ್ಥಿತಿ ಎಂದಿಗೂ ಎದುರಾಗಲಾರದು ಎನ್ನುವುದು ಈ ದೇಶ ಕಂಡುಕೊಂಡು ಬಂದ ರಾಜಕೀಯದ ಪಾಠ. ರಾಜಕೀಯದ ಭವಿಷ್ಯದ ಬಗ್ಗೆ ಭಯ ಉಳ್ಳವ ಮಾತ್ರ ‘ಪಾಲಿಟಿಕಲ್ ಸ್ಟ್ರ್ಯಾಟೆಜಿ’ಯತ್ತ ತನ್ನ ಚಿತ್ತ ಹರಿಸುತ್ತಾನೆ, ಇದು ರಾಜಕೀಯದಲ್ಲಿ ಸಹಜ ಮತ್ತು ಸಾಮಾನ್ಯ. ರಾಜಕೀಯವನ್ನು ಮೊದಲೆಲ್ಲಾ ಅಭಿವೃದ್ಧಿ ಕಾರ್ಯಗಳು ಮುನ್ನಡೆಸುತ್ತಿದ್ದವು. ಆದರೇ, ಈಗ ಪಾಲಿಟಿಕಲ್ ಸ್ಟ್ರ್ಯಾಟಜಿಗಳು ನಡೆಸುತ್ತವೆ. ಆ ಪ್ರವೃತ್ತಿಗೆ ಇತ್ತೀಚೆಗಿನ ರಾಜಕೀಯದಲ್ಲಿ ರಾಜಕೀಯ ಪಕ್ಷದ ಹಣೆ ಬರಹ ತಿದ್ದುವುದಕ್ಕಾಗಿಯೇ ಸೋ ಕಾಲ್ಡ್ ರಾಜಕೀಯ ತಂತ್ರ ಹೂಡುವ ಸಂಸ್ಥೆಗಳು ಹುಟ್ಟಿಕೊಂಡಿವೆ. ಆ ಸಂಸ್ಥೆಗಳು ನಿಲ್ಲಿ ಎಂದಾಗ ನಿಲ್ಲುವುದು, ಕೂತುಕೊಳ್ಳಿ ಎಂದಾಗ ಕೂತುಕೊಳ್ಳುವುದು ಈಗಿನ ರಾಜಕೀಯ ನಾಯಕರ ಅಭ್ಯಾಸವಾಗಿ ಬಿಟ್ಟಿದೆ. 

ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಚಕ್ರಾಧಿಪತ್ಯದ ಆಗು ಹೋಗುಗಳ ಲೆಕ್ಕಾಚಾರದಲ್ಲಿ ತೊಡಗಿಕೊಂಡಿವೆ. ಈ ಬಾರಿ ರಾಜ್ಯದ ವಿಧಾನ ಸಭಾ ಚುನಾವಣೆ ಹಲವು ಕುತೂಹಲಕ್ಕೆ ಕಾರಣವಾಗುತ್ತಿದೆ. ಒಂದೆಡೆ ವಿವಾದದ ಸೋ ಕಾಲ್ಡ್ ಕಾಮನ್ ಮ್ಯಾನ್ ಬಸವರಾಜ್ ಬೊಮ್ಮಾಯಿ ನೇತೃತ್ವ ಒಂದಡೆಯಾದರೇ, ಬಿಜೆಪಿಗೆ ಮತ್ತೊಂದು ಬಲವಾಗಿರುವುದು ಚುನಾವಣಾ ಎಕ್ಸ್ಪರ್ಟ್ ಎಂದೇ ಕರೆಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬಿಜೆಪಿಯ ಸಂಸದೀಯ ಮಂಡಳಿಯ ಅಧಿಕಾರ ಹೊಂದಿದ್ದು ಮಾತ್ರವಲ್ಲದೇ, ವಿವಿಧ ಚುನಾವಣೆಗಳ ಟಿಕೆಟ್ ತಿರ್ಮಾನ ಮಾಡುವ ಸಮಿತಿಗೆ ಪ್ರಮೋಷನ್ ಹೊಂದಿರುವುದು ರಾಜ್ಯ ಬಿಜೆಪಿಯಲ್ಲಿ ಯಾವ ಬದಲಾವಣೆ ತರಲಿದೆ ಎನ್ನುವುದರ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ರಾಹುಲ್ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಮುಗಿಸಿ ರಾಜ್ಯದ ಒಂದಿಷ್ಟು ಭಾಗದಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ ಪಡೆದಿರುವುದು ಕಾಂಗ್ರೆಸ್ ಪಾಳಯದಲ್ಲಿ ಹೊಸ ಹುರುಪು ಕಾಣಿಸುತ್ತಿದೆ. ಇನ್ನು, ಮತ್ತೆ ಸಿದ್ದರಾಮಯ್ಯ ಚುನಾವಣೆಯ ವಿಚಾರದಲ್ಲಿ ಪಿಕ್‌ಅಪ್ ಆಗಿದ್ದು, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತ, ಗಾಂಧಿಯೇತರ ಮಲ್ಲಿಕಾರ್ಜುನ್ ಖರ್ಗೆ ಅದು ಕೂಡ ಕರ್ನಾಟಕದಿಂದ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ಏರಿದ್ದು, ರಾಜ್ಯ ವಿಧಾನಸಭಾ ಚುನಾವಣಾ ವಿಚಾರಕ್ಕೆ ಸಂಬಂಧಿಸಿದಂತೆ ಖರ್ಗೆ ನಿಲುವು ಹೇಗಿರಲಿದೆ ಎನ್ನುವುದರ ಬಗ್ಗೆಯೂ ಹೆಚ್ಚು ಕುತೂಹಲವಿದೆ. ಈ ನಡುವೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಳೆಯ ಮಿತ್ರರಿಗೆಲ್ಲಾ ವೈಯಕ್ತಿಕ ಆಹ್ವಾನ ನೀಡುತ್ತಿರುವುದು ಕಾಂಗ್ರೆಸ್ ಅಸಹಾಯಕೆತಯೋ ಅಥವಾ ಡಿಕೆಶಿ ಅಸಾಹಯಕತೆಯೋ ಎನ್ನುವುದು ಗೊತ್ತಾಗುತ್ತಿಲ್ಲ. 

ಕೆಲವು ತಿಂಗಳುಗಳಿಂದ ಸತತವಾಗಿ ಹಿಂದುಳಿದ ವರ್ಗಗಳ ಓಲೈಕೆಯ ತಂತ್ರ ಹೂಡುತ್ತಿದ್ದ ಬಿಜೆಪಿ ಕೊನೆಗೂ ಮೀಸಲಾತಿ ಹೆಚ್ಚಿಸಲು ನಿರ್ಧರಿಸಿದೆ. ಸತತ ನಾಲ್ಕು ದಶಕಗಳಿಂದ ಕೇಳಿ ಬರುತ್ತಿದ್ದ ಮೀಸಲಾತಿ ಹೆಚ್ಚಳದ ಕೂಗಿಗೆ, ಇಲ್ಲಿಯವರೆಗೆ ರಾಜ್ಯವನ್ನು ಆಳಿದ ಯಾವ ರಾಜಕೀಯ ಪಕ್ಷಗಳು ಕೂಡ ಭರವಸೆ ಪೂರೈಸಿರಲಿಲ್ಲ. ಸದ್ಯ, ಆಡಳಿತ ಪಕ್ಷ ಬಿಜೆಪಿ, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಭರವಸೆ ಈಡೆರಿಸುವ ನಿಟ್ಟಿನಲ್ಲಿ ಯಥಾವತ್ತಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಆಯೋಗದ ವರದಿಯನ್ನು ಮಂಡಿಸುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ. ಇಲ್ಲದ ಅಭಿವೃದ್ಧಿ, ನೇಮಕಾತಿ ಹಗರಣಗಳು, ೪೦ ಪರ್ಸಂಟೇಜ್ ಕಮಿಷನ್, ಪೆಸಿಎಂ ಭ್ರಷ್ಟಾಚಾರ ಇತ್ಯಾದಿ ವಿವಾದಗಳಿಂದ ಮುಳುಗಿದ್ದ ಬಿಜೆಪಿ, ಮೀಸಲಾತಿ ಹೆಚ್ಚಳದ ನಿರ್ಧಾರದಿಂದಾಗಿ ಶೋಷಿತ ವರ್ಗದವರ ಪರವಾಗಿದೆ ಎಂದು ಅನಾಯಾಸವಾಗಿ ಬಿಂಬಿಸಿಕೊಂಡಂತಾಗಿದೆ. ಭಾರತ್ ಜೋಡೋ ಯಾತ್ರೆಯ ಮೂಲಕ ಜನ ಬೆಂಬಲ ಗಳಿಸುತ್ತಿದ್ದ ಕಾಂಗ್ರೆಸ್‌ಗೆ ಬಿಜೆಪಿ ಬಿಟ್ಟ ಈ ಮೀಸಲಾತಿ ಅಸ್ತ್ರ ರಾಜಕೀಯದಲ್ಲಿ ಹೊಸ ತಿರುವು ಪಡೆದುಕೊಂಡಿರುವುದು ಸತ್ಯ. 

ಸಿದ್ದು ವಿರುದ್ಧ ಬಿಜೆಪಿ ಮೀಸಲಾತಿ ಅಸ್ತ್ರ ? :  ಬಿ. ಶ್ರೀಮಾಲು ಸೇರಿ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರು ಎಂದು ಗುರುತಿಸಿಕೊಂಡಿರುವ ಗೋವಿಂದ ಕಾರಜೋಳ ಅವರನ್ನು ಸೇರಿ ಒಟ್ಟು ಹನ್ನೊಂದು ಮಂದಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ ಒಳಪಡಿಸಿಕೊಂಡಿದೆ. ಇಡೀ ರಾಜ್ಯದಾದ್ಯಂತ ಒಟ್ಟು ಹಿಂದುಳಿದ ವರ್ಗಗಳ ನಾಯಕ ಎಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರ ವಿರುದ್ಧವಾಗಿಯೇ ಈ ಮೀಸಲಾತಿ ಅಸ್ತ್ರ ಬಿಟ್ಟದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.  ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಸೀಮಿತ ಮಾತ್ರವಲ್ಲದೇ ರಾಜಕೀಯದ ಮಾಸ್ ಲೀಡರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಸಿದ್ದರಾಮಯ್ಯ ಅವರಿಗೆ ದೊರಕಿದ ಬೆಂಬಲಕ್ಕೆ ಬಿಜೆಪಿ ಪಾಳಯದಲ್ಲಿ ಆತಂಕ ಸೃಷ್ಟಿಯಾಗಿರುವುದರಲ್ಲಿ ಸಂಶಯವೇ ಇಲ್ಲ. ಒಬ್ಬ ವಿರೋಧ ಪಕ್ಷದ ನಾಯಕನಿಗೂ ಇಂತಹದ್ದೊಂದು ಬೃಹತ್ ಜನ ಬೆಂಬಲ ದೊರಕಿರುವುದು ಬಿಜೆಪಿ ರಾಜಕೀಯದಲ್ಲಿ ಸಹಜ ಆತಂಕಕ್ಕೆ ಕಾರಣವಾಗಿದ್ದು, ಅದೇ ಕಾರಣಕ್ಕೆ ಬಿಜೆಪಿ ಸರಿಯಾದ ಸಮಯಕ್ಕೆ ಮೀಸಲಾತಿ ಅಸ್ತ್ರ ಉಪಯೋಗಿಸಿದೆ ಎಂದೇ ಕಾಣಿಸುತ್ತಿದೆ. ಇನ್ನು, ಹಿಂದುಳಿದ ವರ್ಗದಿಂದ ಯುವ ನಾಯಕರನ್ನು ಮುಂಚೂಣಿಗೆ ತಂದು ರಾಜಕೀಯ ಲೆಕ್ಕಾಚಾರದಲ್ಲಿ ಇರುವ ಬಿಜೆಪಿ ಸುನೀಲ್ ಕುಮಾರ್ ಅವರನ್ನು ಮುಂಪಕ್ತಿಗೆ ತರುವ ಪ್ರಯತ್ನದಲ್ಲಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೇ, ಈ ಸ್ಟ್ರ್ಯಾಟೆಜಿ ವರ್ಕೌಟ್ ಆಗಲಿದೆಯೇ ಎಂಬುವುದು ಯಕ್ಷ ಪ್ರಶ್ನೆ. 

ಕನ್ನುಗೋಲು ವರ್ಸಸ್ ವಾರಾಹಿ : ಈ ಹಿಂದೆ ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹಾಗೂ ಅಮಿತ್ ಶಾ ಜೊತೆಗಿದ್ದು ಬಿಜೆಪಿ ಪರವಾಗಿ ರಾಜಕೀಯ ತಂತ್ರಗಾರಿಕೆ ಹೆಣೆದಿದ್ದ ಆಂದ್ರಪ್ರದೇಶ ಮೂಲದ ಸುನಿಲ್ ಕನ್ನುಗೋಲು ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದರೇ, ಇತ್ತ ಬಿಜೆಪಿ ಪರವಾಗಿ ವಾರಾಹಿ ಅನಾಲಿಟಿಕ್ಸ್ ಪ್ರೆöÊವೇಟ್ ಲಿಮಿಟೆಡ್ ರಾಜಕೀಯ ವ್ಯೂಹ ರಚಿಸುವುದಕ್ಕೆ ಮುಂದಾಗಿದೆ. ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಪರವಾಗಿ ಹಲವಾರು ಕ್ಯಾಂಪೆನ್‌ಗಳಲ್ಲಿ ತನ್ನ ತಂತ್ರ ಹೂಡಿದ್ದ ವಾರಾಹಿ ಸಂಸ್ಥೆ ಕರ್ನಾಟಕ್ಕೆ ಕಾಲಿಟ್ಟಿದ್ದು ಈಗಷ್ಟೇ. ಹಾಗೆ ನೋಡುವುದಾದರೇ ಕಾಂಗ್ರೆಸ ಹೈಕಮಾಂಡ್ ಕಳೆದ ಮೇ ತಿಂಗಳಿನಲ್ಲೇ ಸುನೀಲ್ ಕನ್ನುಗೋಲು ಮತ್ತು ಅವರ ತಂಡದವರನ್ನು ರಾಜ್ಯಕ್ಕೆ ಕಳುಹಿಸಿತ್ತು.  ಆ ಲೆಕ್ಕದಲ್ಲಿ ನೋಡುವಿದಾದರೇ, ವಾರಾಹಿ ಸಂಸ್ಥೆಗಿಂತ ಹೆಚ್ಚಾಗಿ ಸುನೀಲ್ ತಂಡಕ್ಕೆ ರಾಜ್ಯದ ಬಗ್ಗೆ ಹೆಚ್ಚು ಅರಿವಿದೆ. ಸುನೀಲ್ ರಾಜ್ಯಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಮೊದಲು ಕಾಂಗ್ರೆಸ್‌ಗೆ ಸೂಚನೆ ನೀಡಿದ್ದೇ ದಲಿತ ಹಾಗೂ ಮುಸ್ಲೀಂ ಮತಗಳು ವಿಮುಖವಾಗದಂತೆ ನೋಡಿಕೊಳ್ಳಿ ಎಂದು.  ಮುಸ್ಲೀಂ ಕೇಂದ್ರಿತ ಪ್ರದೇಶಗಳಲ್ಲಿ ಎಸ್‌ಡಿಪಿಐ ಅಂತಹ ಇತರೆ ಮುಸ್ಲೀಂ ಲೀಗ್‌ಗಳು ಕಾಂಗ್ರೆಸ್ ಪರವಾಗಿದ್ದ ಮತಗಳನ್ನು ಓಲೈಸುವ ಕಾರ್ಯತಂತ್ರದಲ್ಲಿದ್ದು, ಯಾವುದೇ ಕಾರಣಕ್ಕೂ ಮುಸ್ಲಿಂ ಮತಗಳು ಕಾಂಗ್ರೆಸ್‌ನಿಂದ ವಿಮುಖವಾಗದಂತೆ ನೋಡಿಕೊಳ್ಳಬೇಕಾಗಿರುವುದು ಹಾಗೂ ಕಾಂಗ್ರೆಸ್ ಮೇಲಿದ್ದ ವಿಶ್ವಾಸ ಕಳೆದುಕೊಳ್ಳುತ್ತಿರುವ ದಲಿತ ಕೆಲವು ಜಾತಿಗಳ ಮತಗಳು ಬಿಜೆಪಿಯತ್ತ ವಾಲದಂತೆ ನೋಡಿಕೊಳ್ಳಬೇಕಿರುವುದು ಅಗತ್ಯವೆಂದು ಹೇಳಿದ್ದರು. ಆದರೇ, ಬಿಜೆಪಿಯ ಮೀಸಲಾತಿಯ ಅಸ್ತç ಕಾಂಗ್ರೆಸ್‌ನ ಯೋಜನೆಯನ್ನು ಕಕ್ಕಾಬಿಕ್ಕಿಯಾಗಿಸಿರುವುದು ಸದ್ಯದ ಕುತೂಹಲದ ರಾಜಕೀಯ. ವಾರಾಹಿ ಸಂಸ್ಥೆ ಈಗಷ್ಟೇ ಪ್ರತ್ಯಕ್ಷವಾಗಿ ಬಿಜೆಪಿ ಪರವಾಗಿ ಕಾರ್ಯ ಆರಂಭಿಸಿದ್ದು, ಬಿಜೆಪಿಗೆ ಆಗಿರುವ ಡ್ಯಾಮೇಜ್ ಎಲ್ಲವನ್ನೂ ಸರಿಪಡಿಸುವಲ್ಲಿ ತಂತ್ರ ಹೆಣೆಯ ಬೇಕಾಗಿದೆ. ಇತ್ತ ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಚುನಾವಣಾ ಸಲುವಾಗಿ ವಾರ್ ರೂಂ ಸೃಷ್ಟಿ ಮಾಡಿಕೊಂಡಿದ್ದಾರೆ. ಇತ್ತ ಸಿದ್ದರಾಮಯ್ಯ ಕಣ ಲೆಕ್ಕಾಚ್ಚಾರಕ್ಕೆ ಇಳಿದಿದ್ದರೇ, ಕೆಪಿಸಿಸಿ ಅಧ್ಯಕ್ಷ ಡಿಸೈನ್ ಬಾಕ್ಸ್ ಎಂಬ ರಾಜಕೀಯ ತಂತ್ರಜ್ಙ ಪಡೆಯೊಂದಿಗೆ ವೈಯಕ್ತಿಕ ಇಮೆಜ್ ವೃದ್ಧಿಸಿಕೊಳ್ಳುತ್ತಿದ್ದಾರೆ. ಪ್ರಭಾವಿ ನಾಯಕರ ಚುನಾವಣೆಯ ಸ್ವ ತಯಾರಿ ಒಂದೆಡೆಯಾದರೇ, ಪಕ್ಷಕ್ಕಾಗಿ ದುಡಿಯುವ ತಂತ್ರಜ್ಞ ಪಡೆಗಳು ಇನ್ನೊಂದೆಡೆಯಂತಾಗಿದೆ. ಒಟ್ಟಾರೆಯಾಗಿ ‘ಪಾಲಿಟಿಕಲ್ ಸ್ಟ್ರ್ಯಾಟೆಜಿಸ್ಟ್’ ಟ್ರೆಂಡಿಂಗ್ ಫೀಲ್ಡ್ ನಂತಾಗಿ  ಚುನಾವಣೆ ಒಂದು ರೀತಿಯಲ್ಲಿ ದೊಡ್ಡ ಉದ್ಯಮವೇ ಆದಂತಿದೆ. 

-ಶ್ರೀರಾಜ್ ವಕ್ವಾಡಿ 

  


Thursday, November 3, 2022

ಸುಳ್ಳನ್ನು ಹರಡಿದವರೇ ಸುಳ್ಳಿಗೆ ಅಂಕುಶ ಅಗತ್ಯವೆನ್ನುವ ಹಾಸ್ಯ ಪ್ರಸಂಗ

ಅಧಿಕಾರದ ದಡ ತಲುಪಿಸಿದ ವೆಬ್‌ಸೈಟ್ ಬೋಟ್ಸ್ ಗಳು | ಸುಳ್ಳು ಸುದ್ದಿಗಳ ಪಾಪ್‌ಅಪ್ ಸ್ಟೋರಿ 

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ಗಳಿಗೆ ಇದ್ದ ನಿರ್ಬಂಧಗಳನ್ನು ಮತ್ತೆ ಕೇಂದ್ರ ಸರ್ಕಾರ ಬಿಗಿಗೊಳಿಸಿದ್ದು ನಿಜಕ್ಕೂ ಸ್ವಾಗತಾರ್ಹ. ಆದರೇ, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಷಪೂರಕ ಮಾಹಿತಿಗಳನ್ನು ಹಬ್ಬಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸಿದವರ ವಿರುದ್ಧ ಸರ್ಕಾರ ಎಂತಹ ಕಠಿಣ ಕ್ರಮ ತೆಗೆದುಕೊಂಡಿದೆ ಎನ್ನುವುದು ಇಲ್ಲಿ ಗಮನಾರ್ಹ.  

ಭಾರತದ ರಾಷ್ಟ್ರೀಯ ಜೀವನದ ವಿರುದ್ಧ ಸಾಮಾಜಿಕ ಜಾಲತಾಣಗಳು ಹಬ್ಬಿಸಿದ ಸುಳ್ಳು ಸುದ್ದಿಗಳು, ಆಕ್ಷೇಪಾರ್ಹ ಮಾಹಿತಿಗಳಿಂದಾಗಿ ಭಾರತದಂತಹ ದೇಶದ ‘ರಾಷ್ಟ್ರೀಯ ಜೀವನ ಎನ್ನುವುದು ಆ ಸುಳ್ಳು ಸುದ್ದಿಗಳಿಂದಲೇ ಉಸಿರಾಡುವ ರಾಷ್ಟ್ರೀಯ ಜೀವನ ಎಂಬಂತಾಗಿರುವುದು ಈ ದೇಶದ ದುರಂತ ಸ್ಥಿತಿ’. ಈ ಪ್ರಪಚಂದಾದ್ಯಂತ ಕೋಟ್ಯಾಂತರ ಮಂದಿಯ ಜೀವನದ ಒಳಗಣ-ಹೊರಗಣಗಳೆಲ್ಲವನ್ನೂ ಒಂದೆಡೆ ಮಾಹಿತಿ ಕೂಡಿಡುವ ಸಾಮಾಜಿಕ ಜಾಲತಾಣಗಳು ವಿಷ ಬೀಜ ಬಿತ್ತಿದ್ದು ಅಷ್ಟಿಷ್ಟಲ್ಲ. ವ್ಯಕ್ತಿಯೊಬ್ಬನ ಖಾಸಗಿ ಆಸಕ್ತಿಗಳ ಬಗ್ಗೆಯೂ ಮಾಹಿತಿ ಪಡೆದು ತನ್ನೊಳಗೆ ಕೂಡಿಟ್ಟುಕೊಂಡಿರುವ ಸಾಮಾಜಿಕ ಮಾಧ್ಯಮಗಳು ಅಲ್ಗೋರಿಥಂಗಳಿಂದ ವ್ಯವಸ್ಥಿತವಾಗಿ ಸೆಳೆದುಕೊಂಡು ಆತನನ್ನು ಸಾಮಾಜಿಕ ಪ್ರಭಾವಕ್ಕೆ ಒಳಪಡಿಸಿವೆ. ಬಳಕೆದಾರನನ್ನು ಅದರಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗದೆ ಇರುವಂತೆ ಮಾಡಿದ್ದಲ್ಲದೇ, ಪೂರ್ವಾಗ್ರಹಗಳನ್ನು ಬಲವಂತವಾಗಿ ಬಳಕೆದಾರನೊಬ್ಬನ ಮಸ್ತಕಕ್ಕೆ ತುಂಬಿಸಿವೆ ಅಥವಾ ತುರುಕಿಸಿವೆ. ಅಷ್ಟೇಕೆ..? ಸಾಮಾಜಿಕ ಜಾಲತಾಣಗಳನ್ನು ಬಳಸುವವನೊಬ್ಬ ಎಂದೂ ಸತ್ಯ ಯಾವುದು, ಸುಳ್ಳು ಯಾವುದು ಎನ್ನುವ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವಂತೆ ಮಾಡಿ ಆತನ ಸ್ವತಂತ್ರ ಬುದ್ಧಮತ್ತೆಯನ್ನು ತನ್ನ ಆಕರ್ಷಕ ಸೆಳೆತಗಳಿಗೆ ಒಳಪಡಿಸಿ ಕೆಲವು ದೇಶಗಳಲ್ಲಿ ಒಂದು ರಾಜಕೀಯ ಪಕ್ಷ ಅಧಿಕಾರದ ದಡ ತಲುಪುವರೆಗೆ ಈ ಸಾಮಾಜಿಕ ಜಾಲತಾಣಗಳು ಕೃಪಾ ಪೋಷಣೆ ಮಾಡಿವೆ ಎನ್ನುವುದು ನಮ್ಮ ಮುಂದಿರುವ ಗಂಭೀರ ಸತ್ಯ. ಅಂತಹ ದೇಶಗಳ ಪಟ್ಟಿಗೆ ನಮ್ಮ ಭಾರತವೂ ಸೇರಿದೆ. ಅದನ್ನು ಪ್ರತ್ಯೇಕಿಸಿ ಹೇಳಬೇಕೆಂದೇನೂ ಇಲ್ಲ. 

ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಅರಿವು ಇದ್ದೂ ಕೂಡ ಈ ದೇಶ ತನ್ನ ರಾಜಕೀಯ ಶಕ್ತಿಯ ಪಾರಮ್ಯದಡಿಯಲ್ಲಿ ಮುಂದುವರಿಯಬೇಕು ಎಂಬ ಮೂಲ ಉದ್ದೇಶದಿಂದಾಗಿಯೇ ಸಂವಿದಾನವನ್ನು, ನೀತಿ ನಿಯಮಗಳನ್ನು, ಕಾನೂನುಗಳನ್ನು ಅದಕ್ಕೆ ಅನುಕೂಲವಾಗುವ ಹಾಗೆ ರಚಿಸುವಲ್ಲಿಯೂ, ರಾಜಕೀಯ ಚಟುವಟಿಕೆಗಳಲ್ಲಿಯೂ ಈ ದೇಶದಲ್ಲಿ ಒಂದು ರಾಜಕೀಯ ಪಕ್ಷ ತನ್ನ ಬೆವರು ಸುರಿಸಿ ಕೆಲಸ ಮಾಡಿದೆ ಎನ್ನುವುದು ಈ ದೇಶದ ನಾಗರಿಕರು ಕಂಡಿದ್ದಾರೆ ಎನ್ನುವುದಕ್ಕೆ ಈ ದೇಶ ಕಂಡುಕೊಂಡು ಬಂದ ರಾಜಕೀಯ ಇತಿಹಾಸಗಳೇ ಸಾಕ್ಷಿ. ರಾಷ್ಟ್ರೀಯತೆಯ ಮುಖವಾಡದಲ್ಲಿ ತನ್ನ ಪಾರಮ್ಯವನ್ನು ರಕ್ಷಿಸಿ ಪೋಷಿಸುವ ಈ ‘ಸ್ಟ್ರ್ಯಾಟಜಿ ರಾಜಕಾರಣ’ ತನಗೆ ಬೇಕಾಗುವ ಹಾಗೆ ಈ ದೇಶದ ವ್ಯವಸ್ಥೆಗಳನ್ನು ತಿದ್ದಿಕೊಂಡು ಎನ್ನುವುದಕ್ಕೆ ಈ ದೇಶ ಕಂಡುಕೊಂಡು ಬಂದ ಮೂಲ ‘ರಾಷ್ಟ್ರೀಯ ಜೀವನವನ್ನು’ ಬಲವಾಗಿ ವಿರೋಧಿಸಿದ್ದು ಇದೇ ರಾಜಕೀಯ ಶಕ್ತಿ. 

ಆ ರಾಜಕೀಯ ಶಕ್ತಿಗೆ ಭಾರತದ ಅಧಿಕಾರದ ಗದ್ದುಗೆ ತನಗೆ ಸಿಗಬಹುದೆಂಬ ನಿರೀಕ್ಷೆಯನ್ನು ಹೆಚ್ಚಿಸಿದ್ದೇ ಈ ಸಾಮಾಜಿಕ ಜಾಲತಾಣಗಳು. ತನ್ನ ವಿರೋಧಿ ಬಣಗಳ ವಿರುದ್ಧ ಸುಳ್ಳು ಹಬ್ಬಿಸುವುದಕ್ಕೆ ಸಾಮಾಜಿಕ ಜಾಲತಾಣಗಳನ್ನೇ ‘ಪಾಲಿಟಿಕಲ್ ಟೂಲ್‌ಕಿಟ್’ಗಳಾಗಿ ಬಳಸಿಕೊಂಡಿತ್ತು. ಇಂದು ಏನಾಗುತ್ತಿದೆ..? ಸುಳ್ಳುಗಳು ಸಮಾಜವನ್ನು ಆಳುತ್ತಿವೆ. ಇದಕ್ಕೆ ಈ ದೇಶದ ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಜಾಲತಾಣಗಳ ಕೊಡುಗೆ ಅಪಾರವಾಗಿದೆ. ಸುಳ್ಳುಗಳೇ ರಾಜಕೀಯ ಕ್ಷೇತ್ರದ ನಾಯಕರನ್ನು ಹೀರೋಗಳನ್ನಾಗಿ ಮಾಡುತ್ತಿವೆ. ಸ್ವಾಸ್ಥ್ಯ ಸಮಾಜ ನಿರ್ಮಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಏರುವ ಬಿಜೆಪಿ, ಕಾಂಗ್ರೆಸ್ ಹಾಗೂ ಇನ್ನಿತರ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳು ಬಿತ್ತುವ ದುರ್ಬೀಜವನ್ನೇ ನಂಬಿಕೊಂಡು ಅಧಿಕಾರ ನಡೆಸುತ್ತವೆ. ಸರ್ಕಾರದಿಂದ ನಿರ್ಬಂಧಕ್ಕೆ ಒಳಗಾಗುವ ಸಾಮಾಜಿಕ ಜಾಲತಾಣಗಳ ಅಕೌಂಟ್‌ಗಳು ಮರುದಿನ ಮತ್ತೆ ಅದೇ ಛಾಳಿ ಮುಂದುವರಿಸುತ್ತವೆ. ಕೇಂದ್ರದಲ್ಲಿರುವುದು ಬಿಜೆಪಿ ಸರ್ಕಾರವೇ ಹೊರತು ಕಾಂಗ್ರೆಸ್ ಅಲ್ಲ ಎಂದು ಹೇಳಿದ ರಾಜಕೀಯ ನಾಯಕರು ಕೂಡ ಈ ಸುಳ್ಳು ಬಿತ್ತುವ ಕೆಲಸದಲ್ಲಿ ಪಾಲುದಾರರಾದವರೇ. ಇನ್ನು, ಸುಳ್ಳು ಸುದ್ದಿಗಳನ್ನು ಹರಡಿಸುವ ಫೇಕ್ ವೆಬ್‌ಸೈಟ್‌ಗಳನ್ನು ತನ್ನ ಲಾಭಕ್ಕಾಗಿ ದುಡಿಸಿಕೊಂಡಿದ್ದ, ಸದಾ ಪೋಷಿಸುತ್ತಾ ಬಂದಿದ್ದ ಬಿಜೆಪಿ ಈಗ ಈ ಸೋ ಕಾಲ್ಡ್ ಕಾನೂನು ಬಿಗಿಕ್ರಮಕ್ಕೆ ಮುಂದಾಗಿರುವುದು ಅಪಹಾಸ್ಯಕ್ಕೆ ಈಡಾಗುತ್ತಿದೆ. ಸರ್ಕಾರದ ಪರವಾಗಿರುವ ಎಲ್ಲಾ ವಿಚಾರಗಳು (ಅದು ವಾಸ್ತವವಾಗಿ ಶುದ್ಧ ಸುಳ್ಳಾಗಿದ್ದರೂ ಕೂಡ) ಸತ್ಯವೆಂದು, ಸರ್ಕಾರದ ವಿರುದ್ಧವಾಗಿರುವ (ಅದು ವಾಸ್ತವವಾಗಿ ಶುದ್ಧ ಸತ್ಯವಾಗಿದ್ದರೂ ಕೂಡ) ಅದನ್ನು ಮಿಥ್ಯವೆಂದು ಬಿಂಬಿಸುವ ವಾತಾವರಣ ಈ ಸಾಮಾಜಿಕ ಜಾಲತಾಣಗಳ ಕಾರಣಗಳಿಂದಾಗಿಯೇ ಸೃಷ್ಟಿಯಾಗಿರುವುದು ವಿಪರ್ಯಾಸ. 

ಬೋಟ್ಸ್ ಹಾಗೂ ನಕಲಿ ಸುದ್ದಿಗಳು :  ಸಾಮಾಜಿಕ ಜಾಲತಾಣಗಳನ್ನು ಬಳಸುವ ಶತಕೋಟಿ ಬಳಕೇದಾರರ ನಡುವೇ ನಕಲಿ ಸುದ್ದಿಗಳನ್ನು ಪ್ರಚಾರ ಮಾಡುವ ಮತ್ತು ಹೆಚ್ಚು ಜನರನ್ನು ತಲುಪುವ ಹಾಗೆ ಮಾಡುವ ರೋಬೋಟ್ ವೆಬ್‌ಸೈಟ್‌ಗಳು (ಬೋಟ್ಸ್) ಕೂಡ ಇವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.  ಇವು ಸಾಮಾಜಿಕ ಜಾಲತಾಣಗಳ ಮುಖೇನ ನಕಲಿ ಸುದ್ದಿಗಳು ಹಾಗೂ ಆಕ್ಷೇಪಾರ್ಹ ಸುದ್ದಿಗಳನ್ನು ಪಾಪ್‌ಅಪ್ ಮಾಡಿಸಿ ಅವು ಹೆಚ್ಚು ಜನರಿಗೆ ತಲುಪಿಸುವಂತೆ ಮಾಡುತ್ತವೆ. ಒಂದು ವಿದೇಶಿ ಸಂಸ್ಥೆ ಈ ವಿಚಾರವಾಗಿ ೨೦೧೭ರಲ್ಲಿ ಜಾಗತಿಕವಾಗಿ ನಡೆಸಿದ ಅಧ್ಯಯನದ ಪ್ರಕಾರ, ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಟ್ವೀಟರ್ ಇತ್ಯಾದಿ ಜಾಲತಾಣಗಲ್ಲಿ ಪ್ರತಿಶತ ೨೨.೨% (ಟ್ವೀಟರ್ ನಲ್ಲಿ ಸುಮಾರು ೮.೫%, ಫೇಸ್‌ಬುಕ್‌ನಲ್ಲಿ ೫.೫%, ಇನ್‌ಸ್ಟಾಗ್ರಾಮ್‌ನಲ್ಲಿ ೮.೨%) ರಷ್ಟು ಬೋಟ್ಸ್ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳು ದ್ವೇಷಕಾರುವ ಸುದ್ದಿಗಳನ್ನು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಹರಡುವಂತೆ ಉತ್ತೇಜಿಸುತ್ತವಂತೆ. ಈ ಬೋಟ್ಸ್ಗಳು ಕಂಪ್ಯೂಟರ್ ಅಲ್ಗಾರಿಥಂ ಗಳಾಗಿವೆ. ಇವು ಸ್ವಾಯತ್ತವಾಗಿ ಹಾಗೂ ಪುನರಾವರ್ತಿತವಾಗಿ ಆನ್‌ಲೈನ್ ಸಾಮಾಜಿಕ ನೆಟ್‌ವರ್ಕ್ ಸೈಟ್‌ಗಳ ಮೂಲಕ ಕಾರ್ಯ ನಿರ್ವಹಿಸುತ್ತವೆ. ಕೃತಕ ಬುದ್ಧಿಮತ್ತೆಯ ಮೂಲಕ ಕಾರ್ಯನಿರ್ವಹಿಸುವ ಈ ಬೋಟ್ಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ವರ್ತನೆಯನ್ನು ಗಮನಿಸಿ, ಬಳಕೆದಾರರನ ಇಂಟ್ರೆಸ್ಟಿಂಗ್‌ಗಳನ್ನು ಗಮನಿಸಿ ಇಂತಹ ಆಕ್ಷೇಪಾರ್ಹ ಪೋಸ್ಟ್ಗಳೊಂದಿಗೆ ಸಂವಹನಕ್ಕೆ ಒಳಗಾಗುವ ಹಾಗೆ ಪಾಪ್‌ಅಪ್ ಸ್ಟೋರಿಗಳನ್ನು ಬಳಕೆದಾರರನಿಗೆ ಪೂರೈಸುದರ ಮುಖೆನ ಬಳಕೆದಾರರನನ್ನೂ ಕೂಡ ಕೃತಕ ಬುದ್ಧಿಮತ್ತನನ್ನಾಗಿ ಮಾಡುತ್ತವೆ. ಇವು ಸಂಪೂರ್ಣ ಕಂಪ್ಯೂಟರಿಂಗ್ ಪ್ರೋಗ್ರಾಂಗಳ ಮೂಲಕ ಕಾರ್ಯನಿರ್ವಹಿಸುವುದರಿಂದಾಗಿ ಒಬ್ಬ ಸಾಮಾನ್ಯ ಬಳಕೆದಾರನಿಗೆ ಇದರ ಬಗ್ಗೆ ಅರಿವೇ ಆಗುವುದಿಲ್ಲ. ಈ ಬೋಟ್ಸ್ ತಂತ್ರಜ್ಞಾನಗಳನ್ನು ಬಳಸಿಕೊಂಡೇ ಕೆಲವು ದೇಶಗಳಲ್ಲಿ ಕೆಲವು ಸರ್ಕಾರಗಳು ಅಧಿಕಾರ ಅನುಭವಿಸಿವೆಯೇ ಎನ್ನುವುದನ್ನು ಖಂಡಿತ ಅಲ್ಲಗಳೆಯುವಂತಿಲ್ಲ. ಇಂದಿಗೂ ಇಂತಹ ಅನೇಕ ಬೋಟ್ಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಯಕದಂತೆ ಕಾರ್ಯನಿರ್ವಹಿಸುತ್ತಿವೆ. ಅಂತಹ ಮಾಯಕ ಜಾಲಗಳನ್ನು ಮೊದಲು ಸರ್ಕಾರ ನಿರ್ಬಂಧಿಸಬೇಕಿದೆ.  

ಈ ಬೋಟ್ಸ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ? :  ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಕ್ಯೂರೆಟೆಡ್ ಅಲ್ಲದ ಮಾಹಿತಿಗಳನ್ನು ಸರ್ಚ್ ಮಾಡಿ ಹರಡಿಸುವ ಕೆಲಸವನ್ನು ಮಾಡುತ್ತವೆ. ಟ್ರೆಂಡಿಂಗ್ ಪೋಸ್ಟ್ಗಳನ್ನು ಹಾಗೂ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಕ್ಯೂರೆಟೆಡ್ ಅಲ್ಲದ ಮಾಹಿತಿಗಳನ್ನು ಬಳಕೆದಾರರಿಗೆ ತಲುಪಿಸಿ ಆ ನಕಲಿ ಮಾಹಿತಿಯ ಮೇಲೆ ಬಳಕೆದಾರನಲ್ಲಿ ಒಂದು ಅಭಿಪ್ರಾಯ ಮೂಡಿಸುವಂತೆ ಮಾಡುತ್ತವೆ. ಸರಾಸರಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಫೇಸ್‌ಬುಕ್‌ನಲ್ಲಿ, ಟ್ವೀಟರ್‌ನಲ್ಲಿ ರೀಟ್ವೀಟ್‌ಗಳು, ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳನ್ನು ಕುರುಡರಾಗಿ ಆಗಿ ನಂಬಿ ಅವುಗಳನ್ನು ಅನುಸರಿಸುತ್ತಾರೆ. ಹೆಚ್ಚಿನ ಸಂಖ್ಯೆಯ ಲೈಕ್ಸ್, ರೀಟ್ವೀಟ್, ಕಾಮೇಂಟ್ಸ್ ಗಳ ಮೂಲಕವೇ ಸುದ್ದಿಗಳನ್ನು ನಿರ್ಧರಿಸುವ ಮನೋಧೋರಣೆ ಈ ಸಾಮಾಜಿಕ ಜಾಲತಾಣಗಳ ಬಳಕೆದಾರರಲ್ಲಿ ಸಾಮಾನ್ಯವಾಗಿ ಇದೆ. ಆದರೇ, ಹೆಚ್ಚಿನ ನಕಲಿ ಸುದ್ದಿಗಳ ಹಿಂದೆ ಇಂತಹ ಮಾಯಕ ಬೋಟ್ಸ್ ಗಳ ಕಾರ್ಯ ಇವೆ ಎನ್ನುವುದು ಗೊತ್ತೇ ಇರುವುದಿಲ್ಲ. ಇಂತಹ ‘ನಂಬಲರ್ಹ ಮನಸ್ಥಿತಿ’ಯನ್ನು ಬಲವಂತವಾಗಿ ಸೃಷ್ಟಿಸುವುದು ಈ ಬೋಟ್ಸ್ ಗಳು ಎನ್ನುವುದು ಇಲ್ಲಿ ಗಮನಾರ್ಹ. ಮನುಷ್ಯ ಬುದ್ಧಿವಂತರಿದ್ದಾನೆ, ಆದರೇ ಅತಿಯಾದ ಕೃತಕ ಬುದ್ಧಿಜಾಲಗಳಿಗೆ ಮನುಷ್ಯ ಬಲಿಯಾಗಿರುವುದರಿಂದಾಗಿ ಮತ್ತು ಭಾವುಕ ಜೀವಿಯಾಗಿರುದರಿಂದ ಪ್ರಭಾವಕ್ಕೊಳಗಾಗಿ ಸ್ವಂತ ಬುದ್ಧಿಯನ್ನು ಬಳಸಿ ಪರಿಶೀಲಿಸಿದೇ ಇಂತಹ ನಕಲಿ ಸುದ್ದಿಗಳನ್ನು ಹರಡುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತಾನೆ ಎನ್ನುವುದು ವಿಪರ್ಯಾಸದ ಸಂಗತಿ. 

ಅಷ್ಟೇಕೇ, ರಾಜಕೀಯ ಪಕ್ಷಗಳೇ ತನ್ನ ರಾಜಕೀಯ ಲಾಭಕ್ಕಾಗಿ ಐಟಿ ಸೆಲ್‌ಗಳನ್ನು ಸುಳ್ಳು ಮಾಹಿತಿ ಸೃಷ್ಟಿಸುವ ಖಾರ್ಕಾನೆಗಳಾಗಿ ಮಾಡಿಕೊಂಡಿರುವುದನ್ನು ಈ ದೇಶ ಕಂಡಿದೆ. ಇನ್ನು, ಬಿಜೆಪಿ ಡಿಜಿಟಲ್ ಮಾದ್ಯಮಗಳೊಂದಿಗೆ ಐಟಿ ಸೆಲ್‌ಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡಿದೆ ಎಂದರೇ, ಅದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಟೆಕ್ ಫಾಗ್ ಎಂಬ್ ಅಪ್ಲಿಕೇಶನ್ ಬಳಸಿ ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ದ್ವೇಷವನ್ನು ಹರಡುವುದಕ್ಕೆ ಯತ್ನಿಸಿತ್ತು, ಮಾತ್ರವಲ್ಲದೇ ತನ್ನ ರಾಜಕೀಯ ವಿರೋಧಿಯನ್ನು ಮಣಿಸಲು ಬಳಸಿಕೊಂಡಿತ್ತು ಎಂಬ ತನಿಖಾ ವರದಿಯನ್ನು ರಾಷ್ಟ್ರೀಯ ಸುದ್ದಿ ಸಂಸ್ಥೆ ‘ದಿ ವೈರ್ ಡಾಟ್ ಇನ್’ ಕೊಟ್ಟಿರುವುದು ಮುಂದೆ ಇರುವಾಗಲೇ ಬಿಜೆಪಿ ಈಗ ಸುಳ್ಳು ಸುದ್ದಿಗಳಿಗೆ ಅಂಕುಶ ಅಗತ್ಯ, ಒಂದು ಸಣ್ಣ ಸುಳ್ಳು ಸುದ್ದಿಯೂ ಕೂಡ ದೇಶದಲ್ಲಿ ಬಿರುಗಾಳಿಯನ್ನು ಸೃಷ್ಟಿಸಬಲ್ಲದು, ಹಾಗಾಗಿ ಏನನ್ನಾದರೂ ಫಾರ್ವರ್ಡ್ ಮಾಡುವ ಮೊದಲು ಯೋಚಿಸಲು ಹಾಗೂ ನಂಬುವ ಮೊದಲು ಪರಿಶೀಲಿಸಲು ಜನರಿಗೆ ಶಿಕ್ಷಣ ನೀಡಬೇಕೆನ್ನುತ್ತಿರುವುದು ಹಾಸ್ಯಾಸ್ಪದವಲ್ಲದೇ ಮತ್ತೇನು ? 

-ಶ್ರೀರಾಜ್ ವಕ್ವಾಡಿ  


Tuesday, November 1, 2022

ಗಂಧದಗುಡಿ ಎಂಬ ವಾವ್ಹ್..!


ಅಪ್ಪು ಸಿನೆಮಾ ರಂಗದ ಆಸ್ತಿ ಅಂತ ಯಾಕೆ ಜನ ಹೇಳ್ತಾರೆ, ಸಿನೆಮಾ ರ0ಗ ಕೊಂಡಾಡುತ್ತೆ ಎನ್ನುವುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಬೇಕು ಅಂತಾದರೇ, "ಗಂಧದಗುಡಿ" ಎಂಬ ಡಾಕ್ಯುಫೀಚರ್ ನೋಡಲೇಬೇಕು. 

ಕಳೆದ ವರ್ಷ ಈ ಹೊತ್ತಿಗೆ ಬೆಂಗಳೂರಿನ ಹಾರೋಹಳ್ಳಿಯ ಸಿದ್ದಾಪುರ ಎನ್ನುವ ಚಿಕ್ಕ ಹಳ್ಳಿಯಲ್ಲಿನ ನನ್ನ ಮಾವನ ಮನೆಯಲ್ಲಿ ಇದ್ದಿದ್ದೆ. ಕನಸಿನ ಬೆನ್ನೇರಿ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಬದುಕು ಸವೆಸಿದ್ದೆ. ಏನೋ ಸಣ್ಣ ಪುಟ್ಟ ಆಸಕ್ತಿಯ ಕೆಲಸಗಳನ್ನು ಮಾಡಿಕೋಳ್ಳುತ್ತಾ ಮನೆಯಲ್ಲೇ ದಿನಪೂರ್ತಿ ನೋವಿನಲ್ಲೇ ಕಳೆಯುತ್ತಿದ್ದ ನನಗೆ ಮತ್ತಷ್ಟು ದುಃಖ ನೀಡಿದ್ದು ಪುನೀತ್ ರಾಜ್ ಕುಮಾರ್ ಅವರ ಸಾವು. ಆ ದಿನ ಲ್ಯಾಪ್ ಟಾಪ್ ನಲ್ಲಿ ಒಂದು ರಾಜಕೀಯ ವಿಮರ್ಶೆ ಬರೆಯುತ್ತಿದ್ದೆ. ಆ ಹೊತ್ತಿಗೆ ಪುನೀತ್ ಅಸ್ತಂಗತ ಎಂಬ ನಂಬಲು ಅಸಾಧ್ಯವಾದ ಸುದ್ದಿ ಕೇಳಿ ಬಂತು. ನಿಜಕ್ಕೂ ದುಃಖ ತಾಳುವುದಕ್ಕೆ ಸಾಧ್ಯವಾಗಿರಲಿಲ್ಲ. ಒಂದಿಷ್ಟು ದಿನಗಳ ಕಾಲ ಆ ಬೇಸರ ಕಡಿಮೆಯಾಗಿರಲೇ ಇಲ್ಲ. ಇಂದಿಗೂ ಕೂಡ. ಏನೇ ಇರಲಿ. ಅಪ್ಪು ಅವರ ಸಾವಿಗೂ ಒಂದಿಷ್ಟು ದಿನಗಳ ಮುಂಚೆ ಇಂತಹದ್ದೊಂದು ಕೆಲಸದಲ್ಲಿ ಅಪ್ಪು ತೊಡಗಿಕೊಂಡಿದ್ದಾರೆ ಎಂಬ ಸುದ್ದಿ ಇದ್ದಿತ್ತು, ಮೊದಲಿನಿಂದಲೂ ಕಲಾತ್ಮಕ ಸಿನೆಮಾ, ಇಂತಹ ಡಾಕ್ಯುಮೆಂಟರಿ ಸಿನೆಮಾ, ಡಾಕ್ಯುಫೀಚರ್ ಗಳ ಬಗ್ಗೆ ತುಸು ಹೆಚ್ಚೇ ಆಸಕ್ತನಾಗಿದ್ದ ನನಗೆ ಈ 'ಗಂಧದಗುಡಿ'ಯ ಬಗ್ಗೆ ಹೆಚ್ಚೇಕೆ ಆಸಕ್ತಿ ಇದ್ದಿದ್ದು ಕೇಳಿದರೇ ಅದೊಂದು ವೈಲ್ಡ್ ಡಾಕ್ಯುಫೀಚರ್ ಎಂಬ ಕಾರಣಕ್ಕೆ ಮತ್ತು ಅಪ್ಪು ಹಾಗೂ ಅಮೋಘವರ್ಷ ಇದ್ದಾರೆ ಎನ್ನುವುದಕ್ಕೆ‌. ಆದರೇ, ಆಗ ಮತ್ತು ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲಿ ಇದು ಹೀಗೆ ಅದ್ಭುತವಾಗಿ ಥೀಯೆಟರ್ ನಲ್ಲಿ ಒಂದು ಅಮೋಘವಾದ ದೃಶ್ಯಕಾವ್ಯದ ಅನುಭವ ನೀಡುತ್ತದೆ ಎಂದು ಅಂದುಕೊಂಡಿರಲಿಲ್ಲ‌. ಅಮೋಘ ವರ್ಷ ನಿರ್ದೇಶಿಸಿರುವ ಕಾರಣಕ್ಕೆ ಇದು ಮತ್ತೊಂದು 'ವೈಲ್ಡ್ ಕರ್ನಾಟಕ'( Wild Karnataka) ಆಗಿರಬಹುದು ಎಂದುಕೊಂಡಿದ್ದೆ. ಆದರೇ, ಹೀಗೆ ವೈಲ್ಡ್ ಕಲ್ಚರ್ ನೊಂದಿಗೆ, ಇಷ್ಟೊಂದು ಭಾವನೆಗಳೊಂದಿಗೆ, ಕಾಳಜಿಯೊಂದಿಗೆ, ಆಸ್ತೆಯೊಂದಿಗೆ, ಜವಾಬ್ದಾರಿಯೊಂದಿಗೆ, ಆ ವೈಲ್ಡ್ ಲೈಫ್ ನೊಂದಿಗೆ ಬೆಸೆದ ಕಾಣದ ಕಥೆಗಳೊಂದಿಗೆ ಮುದ ನೀಡುವ, ಜವಾಬ್ದಾರಿ  ಹೆಚ್ಚಿಸುವ ಕಂಟೆಂಟ್ ಆಗಿ ಬರುತ್ತದೆ ಎಂದುಕೊಂಡಿರಲಿಲ್ಲ. ಆದರೇ,  ನೋಡುವಾಗ, ನೋಡಿದಾಗ ಅನ್ನಿಸಿದೊಂದೇ "ವಾವ್ಹ್"...!

ಅಪ್ಪು ಡಾ. ರಾಜ್ ಕುಮಾರ್ ಮಗ ಎಂಬ ಕಾರಣಕ್ಕೆ ಅಥವಾ ಸಿನೆಮಾ ನಟ ಆಗಿರುವುದಕ್ಕೆ ಅಷ್ಟೇ ಹೀರೋ ಆಗಿದ್ದಲ್ಲ. ಇಂತಹದ್ದೊಂದು ಕೌತುಕದ ಕಣ್ಣು, ತುಡಿತ ಇರುವ ಕಾರಣಕ್ಕೂ ಹೌದು. 

ಕರ್ನಾಟಕದ ಉದ್ದಕ್ಕೂ ಇರುವ ಸಮೃದ್ಧ ಸಂಪತ್ತನ್ನು ಪರಿಚಯಿಸುವ ಪ್ರಯತ್ನವಿದು.  ನಾಗರಹೊಳೆ, ಬಿ ಆರ್ ಟಿ ಟೈಗರ್‌ ರಿಸರ್ವ್‌, ಡೆಕ್ಕನ್‌, ಮಲೆನಾಡು, ನೇತ್ರಾಣಿ, ಶಿವನ ಸಮುದ್ರ, ಜೋಗ, ಕರಾವಳಿ, ಕಾಳಿ ನದಿ ಕಣಿವೆ, ಆಳ ಸಮುದ್ರ ಹೀಗೆ ಕರ್ನಾಟಕದ ಉದ್ದಕ್ಕೂ ಇರುವ ಜೀವ ವೈವಿಧ್ಯಗಳನ್ನು ಇಷ್ಟು ಅದ್ಭುತವಾಗಿ ತೋರಿಸುವುದಕ್ಕೆ ಸಾಧ್ಯವಾಗಿದ್ದು ಅಮೋಘ ವರ್ಷ ಎಂಬ ಅಸಮಾನ್ಯ ವೈಲ್ಡ್ ಲೈಫ್ ಫೋಟೋಗ್ರಾಫರ್, ಫಿಲ್ಮ ಮೇಕರ್ ಹಾಗೂ ಪಿ ಆರ್ ಕೆ  ಪ್ರೊಡಕ್ಷನ್ಸ್ ಇರುವ ಕಾರಣದಿಂದಾಗಿ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ತನ್ನ ಜೀವನದ ಕೊನೆಯ ಕಾಲಘಟ್ಟದಲ್ಲಿ ಮತ್ತೆ ಮಗುವಾಗುತ್ತಾ ಹೋಗಿ ನಿಜ ಜೀವನದ ಬದುಕು ಕಲಿಸಿದ ಅಪ್ಪು ನಿಜಕ್ಕೂ ಈ 'ಗಂಧದಗುಡಿ'ಯಲ್ಲಿ ಹೃದಯವನ್ನು ಭಾರವಾಗಿಸಿ ಬಿಡುತ್ತಾರೆ. ಇನ್ನು, ಅಮೋಘವರ್ಷ ಎಂತಹ ಒಬ್ಬ ಪ್ರತಿಭೆ. ನಿಜಕ್ಕೂ ಗ್ರೇಟ್. ಅವರು ಒಬ್ಬ ಕೇವಲ ವೈಲ್ಡ್ ಲೈಫ್ ಫೋಟೋಗ್ರಾಫರ್ ಮಾತ್ರವಲ್ಲ ಅವರೊಬ್ಬ ಪರಿಸರವತಜ್ಞ ಎನ್ನುವುದನ್ನು ಈ ಮೂಲಕ ಸಾಬೀತು ಮಾಡಿದ್ದಾರೆ. 

ನಮ್ಮದೇ ಕಾಡಿದು, ನಮ್ಮದೇ ಪರಿಸರವಿದು ಅದರಲ್ಲಿನ ಮೌನವನ್ನು ಧ್ವನಿಸುವ ಪ್ರಯತ್ನವಿದು. ಅದರ ದಿವ್ಯ ಗರ್ಭವನ್ನು ದರ್ಶಿಸುವ ಕಾವ್ಯವಿದು.   ಮತ್ತೆ ಈ 'ಗಂಧದಗುಡಿ'ಯ ಮೂಲಕ ಅಪ್ಪು ಸಮಾಜಕ್ಕೆ ಕನ್ನಡಿ ಹಿಡಿದು ತೋರಿಸಿರುವಾಗ ನಮ್ಮೊಂದಿಗೆ ಅಪ್ಪು ಇಲ್ಲವಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳುವುದಕ್ಕೆ ನಿಜಕ್ಕೂ ಕಷ್ಟವಾಗುತ್ತೆ. 

ಅಪ್ಪಟ ಡಾ. ರಾಜ್ ಕುಮಾರ್ ಅವರ ಅಭಿಮಾನಿಯಾದ ನನಗೆ,  ಅಮೋಘ್ ಕಾಡಿನ ಬಗ್ಗೆ ಅಪ್ಪುಗೆ ತಿಳಿಹೇಳುವಾಗ ಪ್ರತಿಕ್ರಿಯೆಯಾಗಿ ಅಪ್ಪು ಪದೆ ಪದೆ ಹೇಳುತ್ತಿದ್ದ 'ಹಾಹ್ಹಾ...' ಮತ್ತು ಕಾಳಿ ನದಿಯ ದಡದಲ್ಲಿ  'ಥ್ಯಾಂಕ್ಸ್ ಟು ಕಾಳಿ' ಎಂದು ಹೇಳುವಾಗ ರಾಜ್ ಕುಮಾರ್ ನೆನಪಾಗಿದ್ದು ಸುಳ್ಳಲ್ಲ. ಮತ್ತು  ಈ 'ಕರ್ನಾಟಕ ರತ್ನ'ರು (ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್) ನಮ್ಮೂರಿಗೆ ಬಂದಾಗ ನಾನಿನ್ನೂ ಚಿಕ್ಕ ವಯಸ್ಸಲ್ಲಿದ್ದೆ ಆಗಲೇ ಇವರೀರ್ವನ್ನು ಕಣ್ಮ್ತುಂಬಿಕೊಂಡಿದ್ದೆ ಎನ್ನುವುದೇ ಒಂಥರಾ ಖುಷಿ. 

ಒಟ್ಟಿನಲ್ಲಿ ಈ 'ಗಂಧದಗುಡಿ' ಎಂಬ ದೃಶ್ಯಕಾವ್ಯದ ಮೂಲಕ ಅಪ್ಪು ಕಂಡ ಕನಸು ಈ ಸಮೃದ್ಧ ಕರ್ನಾಟಕದ, ಪರಿಸರದ ಸಂರಕ್ಷಣೆ.  ಅವರ ಎಲ್ಲಾ ಅಭಿಮಾನಿಗಳ ಬಯಕೆ ಇದೇ ಆಗಿರುವುದರಲ್ಲಿ ಸಂಶಯವಿಲ್ಲ‌. 'ಗಂಧದಗುಡಿ' ನೋಡಿ  ಕಡಿಮೆಯೆಂದ್ರೂ ಒಂದು ಹತ್ತು ಪುಸ್ತಕ ಓದಿದ ಅನುಭವ ಆಗದೆ ಇರದು. 

-ಶ್ರೀರಾಜ್ ವಕ್ವಾಡಿ