(ಸಾಂದರ್ಭಿಕ ಚಿತ್ರ)
ಕೋಮುಸೂಕ್ಷ್ಮ ಉತ್ತರ ಕ್ಷೇತ್ರ ಯಾರಿಗೆ ? | ಬಿಜೆಪಿಯ ಇಬ್ಬರು ಹಾಲಿ ಶಾಸಕರಿಗೆ ಟಿಕೇಟ್ ಡೌಟ್ ?
‘ಮಾಸ್ ಬ್ರೈನ್’ ಸಿದ್ಧಾಂತ ಎಷ್ಟರ ಮಟ್ಟಿಗೆ ರಾಜಕೀಯದಲ್ಲಿ ಪರಿಣಾಮ ಬೀರುತ್ತದೆ ಎಂದರೇ ಅದಕ್ಕೆ ದಕ್ಷಿಣ ಕನ್ನಡದ ಎಂಟು ವಿಧಾನಸಭಾ ಕ್ಷೇತ್ರಗಳೇ ಸಾಕ್ಷಿ. ೨೦೧೩ರಲ್ಲಿ ಏಳು ಕಾಂಗ್ರೆಸ್(ಮಂಗಳೂರು(ಉಳ್ಳಾಲ), ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಬೆಳ್ತಂಗಡಿ) ಒಂದು ಬಿಜೆಪಿ(ಸುಳ್ಯ) ಪಾಲಾಗಿದ್ದ ದಕ್ಷಿಣ ಕನ್ನಡದ ವಿಧಾನಸಭಾ ಕ್ಷೇತ್ರಗಳು, ೨೦೧೮ರಲ್ಲಿ ಅದಲು ಬದಲಾಗಿ ಹೋಯಿತು. ಏಳು (ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಬೆಳ್ತಂಗಡಿ, ಸುಳ್ಯ) ಬಿಜೆಪಿಗೆ ಹಾಗೂ ಒಂದು(ಮಂಗಳೂರು(ಉಳ್ಳಾಲ)) ಕಾಂಗ್ರೆಸ್ ಪಾಲಾಯಿತು.
ಈಗ ಮತ್ತೊಂದು ಸುತ್ತಿನ ವಿಧಾನಸಭಾ ಚುನಾವಣೆ ಬಂದಿದೆ. ಉಭಯ ಪಕ್ಷಗಳ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ. ಆರ್‌ಎಸ್‌ಎಸ್ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಂತರ ಬಿಜೆಪಿ ಮೇಲೆ ಸಣ್ಣ ಅಸಮಾಧಾನ ಹಿಂದೂ ಕಾರ್ಯಕರ್ತರಲ್ಲಿ ಇದೆ. ಇದು ಕಾಂಗ್ರೆಸ್‌ಗೆ ವರದಾನವಾಗಲಿದೆ ಎನ್ನುವುದು ಅಪ್ಪಟ ಸುಳ್ಳು. ಆದರೇ, ಈ ಬಾರಿಯ ಚುನಾವಣೆಯಲ್ಲಿ ಒಂದಿಷ್ಟು ವ್ಯತ್ಯಾಸಗಳು ಆಗಲಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಖಾದರ್‌ಗೆ ಮತ್ತೆ ಮಂಗಳೂರು ವಿಧಾನಸಭಾ ಕ್ಷೇತ್ರ : ಯು. ಟಿ. ಖಾದರ್ ಜಾತಿ, ಧರ್ಮ ಮೀರಿ ಬೆಳೆದ ರಾಜಕಾರಣಿ. ಪಕ್ಷ ಸಮಸ್ಯೆಯಲ್ಲಿದ್ದಾಗ ಎಂದಿಗೂ ಹಿಂದೆ ಸರಿದವರಲ್ಲ. ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಸದಾ ಮುಂದಿರುವ ಖಾದರ್, ಕ್ಷೇತ್ರಕ್ಕೆ ಸಂಬಂಧಸಿದ ಬಹುತೇಕ ಎಲ್ಲಾ ಕೆಲಸಗಳನ್ನು ಮಾಡಿಕೊಡುವಲ್ಲಿ ಯಶಸ್ವಿಯಾದ ಶಾಸಕ. ಮಸ್ಲೀಂ ಮತಗಳ ಬಾಹುಳ್ಯವಿರುವ ಕ್ಷೇತ್ರವಾದರೂ ಹಿಂದೂ, ಕ್ರಿಶ್ಚಿಯನ್ ಮತಗಳಿಲ್ಲದೇ ಖಾದರ್ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಸರ್ವಧರ್ಮಿಯರಲ್ಲಿ ನಂಬಿಕೆ ಉಳಿಸಿಕೊಂಡು ಕಾರ್ಯ ನಿರ್ವಹಿಸಿದ ಖಾದರ್‌ಗೆ ತಂದೆ ಹಾಜಿ ಯು ಟಿ ಫರೀದ್(ಕಾಂಗ್ರೆಸ್‌ನಿಂದ ಪ್ರತಿನಿಧಿಸಿ ನಾಲ್ಕು ಬಾರಿ ಜಯಗಳಿಸಿ ಶಾಸಕರಾಗಿದ್ದರು) ಗಳಿಸಿಕೊಟ್ಟ ವಿಶ್ವಾಸವೂ ಕ್ಷೇತ್ರದಲ್ಲಿ ಜೊತೆಗಿದೆ. ತಂದೆಯ ಉತ್ತರಾಧಿಕಾರಿಯಾದ ಮೇಲೆ ಸತತವಾಗಿ ಈ ಕ್ಷೇತ್ರದಲ್ಲಿ ಗೆಲ್ಲುತ್ತಿರುವ ಖಾದರ್‌ಗೆ ಈ ಬಾರಿಯೂ ಗೆಲ್ಲುವ ವಿಶ್ವಾಸವಿದೆ. ೨೦೧೮ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತುಂಬೆಲ್ಲಾ ಬಿಜೆಪಿ ಆವರಿಸಿದ್ದರೂ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಸಾದ್ಯವಾಗಿರಲಿಲ್ಲ. ಅಷ್ಟರ ಮಟ್ಟಿಗೆ ಖಾದರ್ ಜನರನ್ನು ಹಿಡಿದಿಟ್ಟುಕೊಂಡಿದ್ದಾರೆ ಎನ್ನುವುದು ಇದರ ಅರ್ಥ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಸದ್ಯಕ್ಕಂತೂ ಖಾದರ್ ಪರ್ಯಾಯ ಅಭ್ಯರ್ಥಿ ಯಾರಿಲ್ಲ. ಟಿಕೇಟ್ ಮತ್ತೆ ಖಾದರ್ ಪಾಲಾಗುವುದರಲ್ಲಿ ಅನುಮಾನವಿಲ್ಲ.
ಇನ್ನು, ಖಾದರ್ ಖದರ್ ಮಣಿಸುವುದಕ್ಕೆ ಈ ಕ್ಷೇತ್ರದಲ್ಲಿ ಬಿಜೆಪಿ ಕಸರತ್ತು ನಡೆಸುತ್ತಿದೆ. ಕಳೆದ ಬಾರಿ ಖಾದರ್‌ಗೆ ಸವಾಲೊಡ್ಡಿ ಸ್ಪರ್ಧಿಸಿ ಸೋಲನುಭವಿಸಿದ್ದ ಬಿಜೆಪಿಯ ಸಂತೋಷ್ ಶೆಟ್ಟಿ ಬೊಳಿಯಾರ್ ಈ ಬಾರಿಯೂ ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ. ಇವರನ್ನು ಹೊರತಾಗಿ, ಮಂಗಳೂರು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚಂದ್ರಹಾಸ ಪಂಡಿತ್, ವಿಶ್ವ ಹಿಂದೂ ಪರಿಷತ್‌ನ ಮುಖಂಡ ಶರಣ್ ಪಂಪವೆಲ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್ ಕುಂಪಲ್ ಬಿಜೆಪಿಯಿಂದ ಆಕಾಂಕ್ಷಿಗಳಾಗಿದ್ದಾರೆ. ಆದರೇ, ಕಳೆದ ಬಾರಿ ಸೋಲು ಕಂಡಿದ್ದ ಸಂತೋಷ್‌ಗೆ ಮತ್ತೊಂದು ಚಾನ್ಸ್ ನೀಡಲಿದೆಯೇ ಅಥವಾ ಬೇರೆಯವರನ್ನು ಕಣಕ್ಕಿಳಿಸಲಿದೆಯೇ ಎನ್ನುವುದು ಕುತೂಹಲ.
ಮಂಗಳೂರು ದಕ್ಷಿಣಕ್ಕೆ ಯಾರು ? : ಈ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ್ದು ೧೯೮೩ರಲ್ಲಿ. ಇದಕ್ಕೂ ಮೊದಲು ಈ ಕ್ಷೇತ್ರ ಕಾಂಗ್ರೆಸ್ ವಶದಲ್ಲಿತ್ತು. ೧೯೮೩ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ವಿ. ಧನಂಜಯ್ ಕುಮಾರ್ ಜಯಗಳಿಸಿದ್ದರು. ಅದಾದ ಮೇಲೆ ೧೯೮೫,೧೯೮೯ರಲ್ಲಿ ಕಾಂಗ್ರೆಸ್‌ಗೆ ಈ ಕ್ಷೇತ್ರ ಒಲಿದಿತ್ತು, ಮತ್ತೆ ೧೯೯೪ ರಿಂದ ೨೦೦೮ರವರೆಗೆ ಬಿಜೆಪಿಯಿಂದ ಕಣಕ್ಕಿಳಿದಿದ್ದ ಎನ್. ಯೋಗೀಶ್ ಭಟ್ ಶಾಸಕರಾಗಿ ಕೆಲಸ ಮಾಡಿದ್ದರು. ೨೦೧೩ರಲ್ಲಿ ಈ ಕ್ಷೇತ್ರ ಮತ್ತೆ ಕಾಂಗ್ರೆಸ್ ವಶವಾಗಿತ್ತು. ಆದರೇ, ೨೦೧೮ರಲ್ಲಿ ಮತ್ತೆ ಈ ಕ್ಷೇತ್ರ ಬಿಜೆಪಿಗೆ ಒಲಿದಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ. ವೇದವ್ಯಾಸ್ ಕಾಮತ್, ಕಾಂಗ್ರೆಸ್‌ನ ಮಾಜಿ ಶಾಸಕ ಜೆ. ಆರ್ ಲೋಬೋ ವಿರುದ್ಧ ಜಯಗಳಿಸಿದ್ದರು. ಈ ಬಾರಿ ಬಿಜೆಪಿಯಿಂದ ಯಾವುದೇ ಬದಲಾವಣೆ ಕಾಣಿಸುತ್ತಿಲ್ಲ. ಬಿಜೆಪಿಯಿಂದ ಗೌಡ ಸಾರಸ್ವತ ಬ್ರಾಹ್ಮಣರಿಗೆ ಮೀಸಲಿಟ್ಟ ಕ್ಷೇತ್ರವಿದು. ಹಾಗಾಗಿ ಜಿಎಸ್‌ಬಿ ಮತಗಳ ಪ್ರಾಬಲ್ಯವಿರುವ ಈ ಕ್ಷೇತ್ರದ ಬಿಜೆಪಿ ಟಿಕೇಟ್ ಮತ್ತೆ ಹಾಲಿ ಶಾಸಕ ವೇದವ್ಯಾಸ್ ಕಾಮತ್ ಪಾಲಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಇನ್ನು, ಕಾಂಗ್ರೆಸ್‌ನಲ್ಲಿ ಎರಡು ಕ್ಷೇತ್ರಗಳನ್ನು ಕ್ರಿಶ್ಚಿಯನ್ ಅಭ್ಯರ್ಥಿಗಳಿಗೆಂದು ಮೀಸಲಿಡಲಾಗುತ್ತದೆ. ಅದರಲ್ಲಿ ಈ ಕ್ಷೇತ್ರ ಕೂಡ ಒಂದು. ಸಹಜವೆಂಬಂತೆ ಮಾಜಿ ಶಾಸಕ ಜೆ. ಆರ್ ಲೋಬೋ ಕಾಂಗ್ರೆಸ್‌ನಿಂದ ಇಲ್ಲಿನ ಟಿಕೇಟ್ ಆಕಾಂಕ್ಷಿ. ಕೆಪಿಸಿಸಿ ಉಪಾಧ್ಯಕ್ಷ, ಕಾಂಗ್ರೆಸ್‌ನ ಹಿರಿಯ ನಾಯಕ ಐವನ್ ಡಿಸೋಜಾ ಕೂಡ ಇಲ್ಲಿನ ಟಿಕೇಟ್ ಆಕಾಂಕ್ಷಿ. ಜಿಎಸ್‌ಬಿ ಮತಗಳನ್ನು ಬಿಟ್ಟರೇ ಹೆಚ್ಚು ಕ್ರಿಶ್ಚಿಯನ್ ಮತಗಳೇ ಇರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಇಬ್ಬರಲ್ಲೇ ಒಬ್ಬರಿಗೆ ಟಿಕೇಟ್ ನೀಡುವುದು ನಿಶ್ಚಿತ.
ಕೋಮುಸೂಕ್ಷ್ಮ ಉತ್ತರ ಕ್ಷೇತ್ರ : ಪೋಲೀಸ್ ಫೈಲ್‌ನಲ್ಲಿ ಕೋಮುಸೂಕ್ಷ್ಮ ಪ್ರದೇಶವೆಂದು ದಾಖಲಾಗಿರುವ ಮಂಗಳೂರು ಉತ್ತರ ಕ್ಷೇತ್ರ(ಸುರತ್ಕಲ್), ಆರ್‌ಎಸ್‌ಎಸ್ ಹಾಗೂ ಪಿಎಫ್‌ಐ ಧರ್ಮ ಸಂಘರ್ಷಗಳನ್ನೇ ಸದಾ ಕಂಡುಕೊಂಡು ಬಂದಿದೆ. ಪಿಎಫ್‌ಐಯನ್ನು ಈಗ ಕೇಂದ್ರ ಸರ್ಕಾರ ನಿಷೇಧಿಸಿದ್ದರೂ ಈ ಕ್ಷೇತ್ರದಲ್ಲಿ ಅದು ಬೂದಿ ಮುಚ್ಚಿದ ಕೆಂಡ. ಮತೀಯ ಧ್ರುವೀಕರಣದಲ್ಲೇ ಮುಳುಗಿರುವ ಈ ಕ್ಷೇತ್ರ ಧರ್ಮ ಸಂಘರ್ಷಗಳಿಗೆ ಸದಾ ಸುದ್ದಿಯಾಗುತ್ತಲೇ ಇರುತ್ತದೆ. ಸದ್ಯ ಬಿಜೆಪಿಯ ಡಾ. ಭರತ್ ಶೆಟ್ಟಿ ಇಲ್ಲಿನ ಶಾಸಕ. ೨೦೨೩ರಲ್ಲಿಯೂ ಭರತ್ ಶೆಟ್ರನ್ನೇ ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆಯೇ ಹೆಚ್ಚು. ೨೦೧೮ರಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದು ಜಯಗಳಿಸಿದ್ದ ಭರತ್, ಮೂಲತಃ ಯುವ ಜನತಾದಳದವರು. ಆಮೇಲೆ ನಳಿನ್ ಕುಮಾರ್ ಕೃಪಾಶೀರ್ವಾದದಿಂದ ಬಿಜೆಪಿಗೆ ಸೇರಿದರು. ಎ.ಜೆ ದಂತ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಡಾ. ಭರತ್ ಶೆಟ್ಟಿ, ಶಾಸಕರಾಗುವ ಮೊದಲು ಒಂದಿಷ್ಟು ವಿವಾದಗಳನ್ನು ಹೊಂದಿದ್ದರು ಎಂಬುವುದು ಜನಜನಿತ. ೨೦೧೮ಕ್ಕೂ ಮೊದಲು(೨೦೦೪-೨೦೧೨)ಇಲ್ಲಿ ಕೃಷ್ಣ ಪಾಲೆಮಾರ್ ಎರಡು ಅವಧಿಗೆ ಶಾಸಕರಾಗಿ, ಸಚಿವಸ್ಥಾನಕ್ಕೆ ಏರಿದ್ದರು. ಕಲಾಪದ ಸಂದರ್ಭದಲ್ಲಿ ಅಶ್ಲೀಲ ವೀಡಿಯೋ ನೋಡುತ್ತಿರುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಪಾಲೆಮಾರ್, ೨೦೧೨ರ ಫೆಬ್ರವರಿಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಕ್ಷೇತ್ರದಿಂದ ೨೦೧೩ರಲ್ಲಿ ಕಾಂಗ್ರೆಸ್‌ನ ಮೊಯ್ದಿನ್ ಬಾವಾ ಶಾಸಕರಾಗುವುದಕ್ಕೆ ಇದು ಕೂಡ ಒಂದು ಕಾರಣವಾಗಿತ್ತು ಎನ್ನುವುದು ಗಮನಾರ್ಹ. ಆದರೇ, ೨೦೧೮ರಲ್ಲಿ ಕರಾವಳಿ ಕರ್ನಾಟಕದಲ್ಲಿ ನಡೆದಿದ್ದ ಧರ್ಮ ಸಂಘರ್ಷ ಬಿಜೆಪಿಗೆ ರಾಜಕೀಯ ಮೈಲೇಜ್ ಕೊಟ್ಟಿತ್ತು, ಬಿಜೆಪಿಯಿಂದ ಕಣಕ್ಕಿಳಿದಿದ್ದ ಭರತ್ ಶೆಟ್ಟಿ ಶಾಸಕರಾದರು.
ಬಿಜೆಪಿಯಿಂದ ಯಾವುದೇ ಬದಲಾವಣೆ ಇಲ್ಲ ಎಂದೇ ಹೇಳಲಾಗುತ್ತಿದೆ. ಆದರೇ, ಕಾಂಗ್ರೆಸ್‌ನಲ್ಲಿ ಹೊಸ ಆಕಾಂಕ್ಷಿ ಹುಟ್ಟಿಕೊಂಡಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಇನಾಯತ್ ಅಲಿ ಕೂಡ ಈ ಕ್ಷೇತ್ರದಿಂದ ಚುನಾವಣೆಗೆ ಇಳಿಯುವ ಉಮೆದುವಾರಿಕೆ ತೋರಿಸಿದ್ದಾರೆಂಬ ಸುದ್ದಿ ಇದ್ದು, ಕಾಂಗ್ರೆಸ್‌ನ ಟಿಕೇಟ್ ಈ ಕ್ಷೇತ್ರದಿಂದ ಯಾರಿಗೆ ಒಲಿಯಲಿದೆ ಎನ್ನುವುದು ಸದ್ಯದ ಕುತೂಹಲ.
ಕೇಸರಿ ಪಾಳಯದ ಪುತ್ತೂರು : ಪುತ್ತೂರು ಕೂಡ ಕೋಮುಸೂಕ್ಷ್ಮ ಪ್ರದೇಶಗಳಲ್ಲಿ ಒಂದು. ಡಿ. ವಿ ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದವರೆಗೆ ಕೊಂಡೊಯ್ದ ಕ್ಷೇತ್ರವಿದು. ೨೦೦೪ರಲ್ಲಿ ಡಿವಿಎಸ್ ಪಾರ್ಲಿಮೆಂಟ್ ತಲುಪಿದ ನಂತರ ಬಂಟ್ವಾಳದಿಂದ ಎರಡು ಬಾರಿ ನಿಂತು ಸೋತಿದ್ದ ಶಕುಂತಲಾ ಶೆಟ್ಟಿಯವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಕಾಂಗ್ರೆಸ್ ಹಾಗೂ ಹಿಂದುತ್ವದ ಸಂಘರ್ಷದಲ್ಲಿ ಶಕುಂತಲಾ ಗೆಲುವಿನ ನಗೆ ಬೀರಿದ್ದರು. ೨೦೦೮ರಲ್ಲಿ ಟಿಕೇಟ್ ಶಕುಂತಲಾ ಅವರ ಕೈ ತಪ್ಪಿತ್ತು. ಪಕ್ಷದೊಳಗಿನ ಭಿನ್ನಮತದಿಂದಾಗಿ ಶಕುಂತಲಾ ಬಣ್ಣ ಬದಲಾಯಿಸಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ೨೦೧೩ರಲ್ಲಿ ಶಕುಂತಲಾ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಸಂಜೀವ ಮಠಂದೂರು ವಿರುದ್ಧ ಭಾರಿ ಅಂತರದ ಗೆಲುವು ಸಾಧಿಸಿದ್ದು ಪುತ್ತೂರು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿತ್ತು. ೨೦೧೮ರಲ್ಲಿ ಇದೇ ಪ್ರತಿಸ್ಪರ್ಧಿಗಳ ಅದೃಷ್ಟ ಬದಲಾಯ್ತು. ಬಿಜೆಪಿಯ ಮಠಂದೂರು ಶಾಸಕರಾದರು. ಈಗ ಮತ್ತೆ ಸಂಜೀವ ಮಠಂದೂರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೇ, ಮಠಂದೂರು ವಿರುದ್ಧ ಪಕ್ಷದ ಒಳಗೆಯೇ ಭಿನ್ನಾಭಿಪ್ರಾಯವಿದೆ. ಹಾಗಾಗಿ ಬಿಜೆಪಿ ಟಿಕೇಟ್ ಯಾರ ಪಾಲಿಗಾಗುತ್ತದೆ ಎನ್ನುವುದು ಇಲ್ಲಿ ಕುತೂಹಲ. ಸಂಜೀವ ಮಠಂದೂರು ಸೇರಿ, ಡಿವಿಎಸ್ ಆಪ್ತ ಅಶೋಕ್ ರೈ, ಹಿಂದೂ ಸಂಘಟನೆಯ ಅರುಣ್ ಕುಮಾರ್ ಪುತ್ತಿಲ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ಇನ್ನು, ಕಾಂಗ್ರೆಸ್ ಮತ್ತೆ ಶಕುಂತಲಾ ಶೆಟ್ಟಿಯವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದಲ್ಲಿಯೂ ಸ್ಪರ್ಧಿಸಿ ಗೆದ್ದ ಶಕುಂತಲಾ ಶೆಟ್ಟಿ ಪುತ್ತೂರಿನಲ್ಲಿ ಕಾಂಗ್ರೆಸ್‌ನ ಭರವಸೆಯ ಗೆಲ್ಲುವ ಕುದುರೆ. ಅವರಲ್ಲದಿದ್ದರೇ, ಬ್ಲಾಕ್ ಕಾಂಗ್ರೆಸ್‌ನ ಸುದೀರ್ಘ ಕಾಲದ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿಯವರ ಪಾಲಿಗಾಗಬಹುದು ಎಂಬ ಮಾತಿದೆ.
ಬಂಟ್ವಾಳದಲ್ಲಿ ಹಾಲಿ ಶಾಸಕನಿಗೆ ಬಿಜೆಪಿ ಟಿಕೇಟ್ ಡೌಟ್ : ಬಂಟ್ವಾಳದ ಹಾಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಮುಂದಿನ ಚುನಾವಣೆಗೆ ಬಿಜೆಪಿಯಿಂದ ಟಿಕೇಟ್ ಸಿಗುವುದು ಡೌಟ್ ಎಂದೇ ಹೇಳಲಾಗುತ್ತಿದೆ. ಸಂಘಪರಿವಾರದ ಮೂಲದವರಲ್ಲದ ನಾಯ್ಕ್ ಬಂಟ್ವಾಳದಲ್ಲಿ ನಡೆದ ಕೋಮು ಸಂಘರ್ಷಗಳಿಗೆ ಎಂದೂ ಉಗ್ರವಾಗಿ ಪ್ರತಿಕ್ರಿಯಿಸಿದವರಲ್ಲ, ಹಿಂದೂ ಕಾರ್ಯಕರ್ತರ ಪರವಾಗಿ ನಿಂತವರಲ್ಲ ಎಂಬ ಅಸಮಾಧಾನದ ಮಾತಿದೆ. ಹಾಗಾಗಿ ಟಿಕೇಟ್ ಹಾಲಿ ಶಾಸಕನ ಕೈ ತಪ್ಪುವ ಸಾಧ್ಯತೆ ಇದೆ ಎಂಬ ಚರ್ಚೆ ಬಂಟ್ವಾಳದಲ್ಲಿದೆ. ಬಂಟ್ವಾಳದಲ್ಲಿ ಹಿಂದೂ ಸಂಘಟನೆಗಳ ಪವರ್ ಜೋರಾಗಿ ಇದ್ದರೂ ಕೂಡ ಕಾಂಗ್ರೆಸ್‌ನ ಗಟ್ಟಿ ನೆಲವಿದು. ೧೯೭೨ರಲ್ಲಿ ಸಿಪಿಐನಿಂದ ಬಿವಿ ಕಕ್ಕಿಲಾಯ ಜಯ ಸಾಧಿಸಿದರು, ೧೯೭೮ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಗೆದ್ದರು, ೧೯೮೩ರಲ್ಲಿ ಗೆಲುವು ಬಿಜೆಪಿಯ ಪಾಲಾಯಿತು (ಎನ್ ಶಿವರಾವ್), ೧೯೮೫ರಲ್ಲಿ ಕಣಕ್ಕಿಳಿದ ಕಾಂಗ್ರೆಸ್‌ನ ರಮಾನಾಥ್ ರೈ ಸತತ ನಾಲ್ಕು ಚುನಾವಣೆಯಲ್ಲಿ ಗೆದ್ದು ಬೀಗಿದರು. ೨೦೦೪ರಲ್ಲಿ ಮುಗ್ಗರಿಸಿದ ಕಾಂಗ್ರೆಸ್, ೨೦೦೮, ೨೦೧೩ರಲ್ಲಿ ರೈ ಮೂಲಕ ಮತ್ತೆ ಜಯದ ನಗೆ ಬೀರಿತು. ಆದರೇ, ೨೦೧೮ರಲ್ಲಿ ಗೆಲುವು ಬಿಜೆಪಿಯ ರಾಜೇಶ್ ನಾಯ್ಕ್ ಪಾಲಾಯಿತು.
ಬಂಟ್ ಸಮುದಾಯದ ಹೈವೋಲ್ಟೇಜ್ ರಾಜಕೀಯ ಕಣವಾಗಿರುವ ಬಂಟ್ವಾಳದಲ್ಲಿ ಬಂಟ್ ಅಭ್ಯರ್ಥಿಗಳು ಗೆದ್ದಿದ್ದೇ ಹೆಚ್ಚು. ಈ ಬಾರಿಯೂ ಜಾತಿ ಆಧಾರದಲ್ಲಿಯೇ ಉಭಯ ಪಕ್ಷಗಳು ತಂತ್ರ ಹೆಣೆಯುತ್ತಿವೆ. ಕಾಂಗ್ರೆಸ್‌ನಿಂದ ಆರು ಬಾರಿ ಶಾಸಕರಾದ ರಮಾನಾಥ್ ರೈ ಅವರಿಗೆ ಪಕ್ಷದಲ್ಲಿ ಪ್ರತಿಸ್ಪರ್ಧಿ ಯಾರಿಲ್ಲ. ಹಾಗಾಗಿ ಬಂಟ್ವಾಳದಲ್ಲಿ ರೈ ಚುನಾವಣೆಗೆ ಸ್ಪರ್ಧಿಸುವವರೆಗೆ ಕಾಂಗ್ರೆಸ್‌ನ ಟಿಕೇಟ್ ಪಕ್ಕಾ. ಇನ್ನು, ಬಿಜೆಪಿಯಲ್ಲಿ ಈ ಬಾರಿ ಟಿಕೇಟ್ ಬೇರೆಯವರ ಪಾಲಾಗುವ ಸಾಧ್ಯತೆ ಇದ್ದು, ರಾಜೇಶ್ ನಾಯ್ಕ್ ಅಲ್ಲದಿದ್ದರೇ, ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ, ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್‌ಗೆ ಟಿಕೇಟ್ ಲಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೇ, ಬಂಟರ ಸಂಘದ ಪದಾಧಿಕಾರಿ ವಿವೇಕ್ ಶೆಟ್ಟಿಗೆ ಸಂಸದ ನಳೀನ್ ಕುಮಾರ್ ಕಟೀಲ್ ಟಿಕೇಟ್ ಕೊಡಿಸುವ ಸರ್ವ ಪ್ರಯತ್ನದಲ್ಲಿದ್ದಾರೆಂಬ ಮಾತಿದೆ.
ಮೂಡುಬಿದಿರೆ, ಬೆಳ್ತಂಗಡಿ, ಸುಳ್ಯ : ಸುಮಾರು ಹತ್ತೊಂಬತ್ತು ವರ್ಷಗಳ ಕಾಲ ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಮೂಡುಬಿದಿರೆ ಕಾಂಗ್ರೆಸ್‌ನ ಭದ್ರಕೋಟೆ. ಬಿಜೆಪಿ ಇಲ್ಲಿ ಗೆದ್ದಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ. ಜನಪ್ರಿಯ ನಾಯಕ ದಿ. ಅಮರನಾಥ್ ಶೆಟ್ಟಿ ೨ ಬಾರಿ ಜನತಾ ಪಾರ್ಟಿ, ಒಂದು ಬಾರಿ ಜನತಾದಳದಿಂದ ಗೆದ್ದಿದ್ದನ್ನು ಹೊರತುಪಡಿಸಿದರೇ, ೧೯೯೯ ರಿಂದ ೨೦೧೮ರವರೆಗೆ ಸತತ ಐದು ಬಾರಿ ಗೆದ್ದ ಕಾಂಗ್ರೆಸ್‌ನ ಅಭಯ್‌ಚಂದ್ರ ಜೈನ್ ಶಾಸಕರಾಗಿ, ಸಚಿವ ಸ್ಥಾನಕ್ಕೇರಿದ್ದರು. ಸದ್ಯ ಜೈನ್ ಚುನಾವಣೆಗೆ ಸ್ಪರ್ಧಿಸುವ ಮೂಡ್‌ನಲ್ಲಿಲ್ಲ. ಟಿಕೇಟ್‌ನನ್ನು ಯುವ ನಾಯಕ ಮಿಥುನ್ ರೈಗೆ ಕೊಡಿ ಎಂದು ಸೂಚಿಸಿದ್ದಾರೆ. ಈ ಬಾರಿ ಕಾಂಗ್ರೆಸ್‌ನ ಮೂಡುಬಿದಿರೆ-ಮೂಲ್ಕಿ ವಿಧಾನಸಭಾ ಕ್ಷೇತ್ರದ ಟಿಕೇಟ್ ಮಿಥುನ್ ರೈ ಪಾಲಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಇನ್ನು ಹಾಲಿ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಅವರ ಮೇಲೆ ಪಕ್ಷದ ಒಳಗೆಯೇ ಭಿನ್ನಾಭಿಪ್ರಾಯವಿದೆ. ಬಿಜೆಪಿ ಕಾರ್ಯಕರ್ತರನ್ನು ಕೋಟ್ಯಾನ್ ನಿರ್ಲಕ್ಷ್ಯ ಧೋರಣೆಯಿಂದ ನೋಡುತ್ತಿದ್ದಾರೆ ಎಂಬ ಅಸಮಾಧಾನವಿದೆ. ಒಂದು ವೇಳೆ ಕೋಟ್ಯಾನ್ ಅದೃಷ್ಟ ಕೈಕೊಟ್ಟರೇ, ಟಿಕೇಟ್ ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಪಾಲಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು, ಚಿಕ್ಕಮಗಳೂರು ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಬೆಳ್ತಂಗಡಿ, ಇತ್ತೀಚೆಗೆ ಕೋಮು ಸೂಕ್ಷ್ಮ ಪ್ರದೇಶವಾಗಿ ರೂಪುಗೊಳ್ಳುತ್ತಿದೆ. ಸುತ್ತ ಮುತ್ತಲಿನ ತಾಲೂಕುಗಳಲ್ಲಿ ಆವರಿಸಿರುವ ಕೋಮು ಸಂಘರ್ಷಗಳು ಇಲ್ಲಿಗೂ ಹರಡಿದೆ. ಹಾಲಿ ಶಾಸಕ ಹರೀಶ್ ಪೂಂಜ ಖಟ್ಟರ್ ಹಿಂದುತ್ವವಾದಿ ಕೂಡ ಹೌದು. ಇದು ಬಿಜೆಪಿಯ ಭದ್ರಕೋಟೆಯೇನಲ್ಲ. ೨೦೦೮, ೨೦೧೩ರಲ್ಲಿ ಕಾಂಗ್ರೆಸ್‌ನಿಂದ ವಸಂತ್ ಬಂಗೇರ ಶಾಸಕರಾಗಿ ಆಯ್ಕೆಯಾಗಿದ್ದರು, ಆದರೇ ೨೦೧೮ರಲ್ಲಿ ಗೆಲುವು ಬಿಜೆಪಿಯ ಹರೀಶ್ ಪೂಂಜ ಅವರ ಪಾಲಗೆ ಒಲಿದಿತ್ತು. ಬಿಜೆಪಿಯಿಂದ ಯಾವುದೇ ಬದಲಾವಣೆಯಿಲ್ಲದೇ ಈ ಬಾರಿಯೂ ಟಿಕೇಟ್ ಹರೀಶ್ ಪೂಂಜ ಪಾಲಿಗೆ ಒಲಿಯುವುದು ನಿಶ್ಚಿತ. ಆದರೇ, ಕಾಂಗ್ರೆಸ್ ಇಲ್ಲಿ ಮನೆಯೊಂದು ಮೂರು ಬಾಗಿಲಂತಾಗಿದೆ. ಮಾಜಿ ಶಾಸಕ ವಸಂತ್ ಬಂಗೇರ ಅವರದ್ದು ಒಂದು ಬಣವಾದರೇ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರದ್ದು ಮತ್ತೊಂದು ಬಣ, ಇತ್ತ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹರಿಪ್ರಸಾದ್ ಅವರ ಸಹೋದರ ಬಿ.ಕೆ ಶಿವರಾಂ ಪುತ್ರ ರಕ್ಷಿತ್ ಶಿವರಾಂ ರದ್ದು ಇನ್ನೊಂದು ಬಣ. ಈ ಮೂವರು ಇಲ್ಲಿ ಟಿಕೇಟ್ ಆಕಾಂಕ್ಷಿಗಳು. ಬಣ ರಾಜಕೀಯ ಬಿಟ್ಟರೇ, ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ ಎನ್ನುವುದು ಸ್ಥಳೀಯ ರಾಜಕೀಯ ವಲಯದ ಮಾತು.
೨೦೧೩ರಲ್ಲಿ ಬಿಜೆಪಿ ಪಾಲಿಗೆ ಒಲಿದಿದ್ದ ಏಕೈಕ ಕರಾವಳಿಯ ವಿಧಾನಸಭಾ ಕ್ಷೇತ್ರವೆಂದರೆ ಸುಳ್ಯ. ೧೯೬೫ರಲ್ಲಿ ತಾಲೂಕಾಗಿ ರೂಪುಗೊಂಡ ಸುಳ್ಯ, ರಾಜ್ಯದ ಏಕೈಕ ದಲಿತ ಮೀಸಲು ವಿಧಾನಸಭಾ ಕ್ಷೇತ್ರ. ೧೯೭೨ರಿಂದಲೂ ಪರಿಶಿಷ್ಠ ಪಂಗಡವರಿಗೆ ಮಾತ್ರ ಸ್ಪರ್ಧೆ ಇಲ್ಲಿ ಕಂಡು ಬರುತ್ತದೆ. ೧೯೮೫-೧೯೮೯ರಲ್ಲಿ ಕಾಂಗ್ರೆಸ್ ಗೆಲುವು ಕಂಡಿದ್ದರೂ ಕೂಡ, ೧೯೯೪ ರಿಂದ ೨೦೧೮ರವರೆಗೆ ಸತತ ೬ ಅವಧಿ ಹಾಲಿ ಶಾಸಕ, ಸಚಿವ ಎಸ್ ಅಂಗಾರ ಅವರಿಂದ ಬಿಜೆಪಿಯ ಪಾಲಾಗಿತ್ತು ಸುಳ್ಯ. ಈ ಬಾರಿಯ ಚುನಾವಣೆಯಲ್ಲೂ ಅಂಗಾರ ಅವರಿಗೆ ಟಿಕೇಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆಯಾದರೂ, ಬಿಜೆಪಿಯೊಳಗೆ, ಸಂಘ ಪರಿವಾರದವರಿಗೆ ಅಂಗಾರ ಅವರ ಮೇಲೆ ಸಮಾಧಾನವಿಲ್ಲ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಶಾಸಕರು ಒಂದು ಯೋಜನೆಯನ್ನು ಮಾಡಿಲ್ಲ ಎಂಬ ಕ್ಷೇತ್ರದ ಜನರ ಅಸಮಾಧಾನದ ಧ್ವನಿಯೂ ಇದೆ. ಅಂಗಾರ ಅವರಗೆ ಟಿಕೇಟ್ ಕೈತಪ್ಪುವ ಲಕ್ಷಣ ಕಾಣಿಸುತ್ತಿಲ್ಲವಾದರೂ ಅಸಮಾಧಾನವಿರುವುದು ಸತ್ಯ. ಇನ್ನು, ಬಿಜೆಪಿಯಿಂದ ಅಂಗಾರ ಹೊರತುಪಡಿಸಿದರೇ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಡಾ. ರಘು ಅಂಗಾರ ವಿರುಧ್ಧ ಸ್ಪರ್ಧಿಸುತ್ತಿದ್ದರು, ಸತತ ನಾಲ್ಕು ಬಾರಿ ಸೋಲು ಅನುಭವಿಸಿದ ರಘು, ಈ ಬಾರಿ ಚುನಾವಣೆಯ ಮೂಡ್‌ನಲ್ಲಿಲ್ಲ. ರಘು ಸ್ಪರ್ಧಿಸುವುದಕ್ಕೆ ಹಿಂದೇಟು ಹಾಕುತ್ತಿರುವುದರಿಂದಾಗಿ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್. ಎಮ್ ನಂದಕುಮಾರ್ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ.
ಒಟ್ಟಿನಲ್ಲಿ, ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರಗಳನ್ನು ಮತ್ತೆ ತನ್ನ ಪಾರುಪತ್ಯದೊಳಗೆ ಹಾಕಿಕೊಳ್ಳಲು ಉಭಯ ಪಕ್ಷಗಳು ಅಸಮಾಧಾನದ ಹೊಳೆಯಲ್ಲಿ ಹೆಣಗಾಡುತ್ತಿದ್ದು, ಈ ಬಾರಿ ಮತದಾರ ಯಾರ ಪಾಲಿಗೆ ಒಲಿಯಲಿದ್ದಾನೆ ಎನ್ನುವುದನ್ನು ಕಾದು ನೋಡಬೇಕಿದೆ.
-ಶ್ರೀರಾಜ್ ವಕ್ವಾಡಿ

No comments:
Post a Comment