ಲಾಕ್ಡೌನ್‌ಯಿಂದಾಗಿ ಸಾಮಾಜಿಕ ವ್ಯವಸ್ಥೆಯೇ ಡೋಲಾಯಮಾನವಾಗಿದೆ. ಜನರ ಮಾನಸಿಕ ಸ್ವಾಸ್ಥ್ಯ ಕಳೆದುಹೋಗುತ್ತಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಮಂದಿ ಮನರಂಜನೆಯತ್ತ ಮುಖ ಮಾಡುತ್ತಿದ್ದಾರೆ. ಕಥೆ, ಕಾದಂಬರಿ ಪುಸ್ತಕಗಳನ್ನು ಓದುವುದು, ನೃತ್ಯ ಮಾಡುವುದು, ಹಾಡುವುದು, ಸಿನೆಮಾ ನೋಡುವುದು ಹೀಗೆ ಮುಂತಾದ ಅನೇಕ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಇನ್ನೊಂದಿಷ್ಟು ಮಂದಿ ರಾಮಾಯಣ, ಮಹಾಭಾರತದಂತಹ ಪುರಾಣ ಕಥೆಗಳ ಪುನರಾವಲೋಕನ ಹೀಗೆ ಹಲವರು ಹಲವಾರು ರೀತಿಯಲ್ಲಿ ಲಾಕ್ಡೌನ್‌ನ್ನು ಕಳೆಯುತ್ತಿದ್ದಾರೆ. ಆದರೇ ಇಲ್ಲೊಂದು ಬಳಗವಿದೆ. ಲಾಕ್ಡೌನ್‌ನ್ನು ಬಹಳ ಅರ್ಥಗರ್ಭಿತವಾಗಿ ಕಳೆಯುತ್ತಿದೆ ಎಂದರೇ ತಪ್ಪಿಲ್ಲ.
ತಾಳಮದ್ದಲೆ ನಿಮಗೆ ಗೊತ್ತಿದೆ. ಅದು ಯಕ್ಷಗಾನದ ಒಂದು ರೂಪಕ. ಯಕ್ಷಗಾನದ ಈ ಪ್ರಸ್ತುತಿಗೆ ‘ಬೈಟಾಕು’, ‘ಯಕ್ಷಗಾನ ಕೂಟ’ ಎಂದು ಕೂಡ ಹೇಳಲಾಗುತ್ತದೆ. ಮೂಲತಃ ತಾಳಮದ್ದಲೆ ಹವ್ಯಾಸಿ ಕಲೆ. ಇಲ್ಲಿ ವಿಶೇಷವಾದ ಯಾವ ರಂಗ ಸಜ್ಜಿಕೆಯೂ ಇರುವುದಿಲ್ಲ. ಭಾಗವತ ಪ್ರಸಂಗದ ಪದ್ಯಗಳನ್ನು ಹಾಡುತ್ತಾನೆ. ಅದಕ್ಕೆ ತಕ್ಕಂತೆ ಅರ್ಥಧಾರಿ ವಿವರಿಸುತ್ತಾನೆ. ಹೀಗೆ ಪಾತ್ರಗಳ ನಡುವೆ ಅರ್ಥ ಹೇಳುವುದರೊಂದಿಗೆ ವಾದ ವಿವಾದಗಳು ನಡೆಯುತ್ತದೆ. ತಾಳಮದ್ದಲೆಯಲ್ಲಿ ಅರ್ಥಧಾರಿಯ ಭಾಷಾ ಪಾಂಡಿತ್ಯವೂ ಕೂಡ ಮುಖ್ಯ ಪಾತ್ರ ಕಂಡುಕೊಳ್ಳುತ್ತದೆ. ಹೀಗೆ ತಾಳಮದ್ದಲೆಯ ಪ್ರಸ್ತುತಿ ಪ್ರಸಂಗದುದ್ದಕ್ಕೂ ಮಾತಿಗೆ ಮಾತು, ಸವಾಲ್‌ಗೆ ಜವಾಬ್ ಎಂಬಂತೆ ನಡೆಯುತ್ತದೆ.
ಹೌದು, ಅಂತಹದ್ದೊಂದು ಮಜಬೂತಾದ ಯಕ್ಷಗಾನದ ಸಹೋದರ ಪ್ರಸ್ತುತಿ ತಾಳಮದ್ದಲೆಗೆ ಇಲ್ಲೊಂದು ಬಳಗ ತಾಂತ್ರಿಕ ಸ್ಪರ್ಶವನ್ನು ನೀಡಿದೆ. ಆನ್‌ಲೈನ್‌ನಲ್ಲಿ ತಾಳಮದ್ದಲೆ ಮಾಡುವ ಮೂಲಕ ಮನರಂಜನೆಯ ಜೊತೆಗೆ ಯಕ್ಷಗಾನದ ಪರಂಪರೆಯನ್ನು ಉಳಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ಕುಂದಾಪುರ ತಾಲೂಕಿನ ಸಿದ್ದಾಪುರದ ಯಕ್ಷ ನುಡಿಸಿರಿ ಬಳಗ ಎಂಬ ವಾಟ್ಸ್ಯಾಪ್ ಗ್ರೂಪ್ ಮಾಡುತ್ತಿದೆ. ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಮಾಡುವ ಯಕ್ಷಗಾನ ತಾಳಮದ್ದಲೆಯ ನೂತನ ಪ್ರಯೋಗವೊಂದಕ್ಕೆ ಈಗ ಜನಪ್ರೀತಿಯೂ ದೊರಕುತ್ತಿದೆ.
ಈ ಯಕ್ಷ ನುಡಿಸಿರಿ ಬಳಗದ ಮತ್ತೊಂದು ವಿಶೇಷ ಅಂದರೇ, ಇಲ್ಲಿನ ಯಾವೊಬ್ಬ ಸದಸ್ಯನು ಕೂಡ ವೃತ್ತಿಪರ ಯಕ್ಷಗಾನ ಕಲಾವಿದನಲ್ಲ, ಅರ್ಥಧಾರಿಯೂ ಅಲ್ಲ. ಯಕ್ಷಗಾನದ ಬಗ್ಗೆ ಅಪರಿಮಿತ ಆಸಕ್ತಿ ಮತ್ತು ಗೌರವವನ್ನಿಟ್ಟುಕೊಂಡು ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಹವ್ಯಾಸಿ ಯಕ್ಷಗಾನ ಕಲಾವಿದರು. ಹೆಚ್ಚಾಗಿ ವೈದ್ಯಕೀಯ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಸಂಶೋಧನಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರೇ ಈ ಬಳಗದಲ್ಲಿ ಪಾಲ್ಪಡೆದವರು. ಸುಮಾರು 70 ಮಂದಿ ಈ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಇದ್ದಾರೆ. 15 ಮಂದಿ ಅರ್ಥಗಾರಿಕೆಯಲ್ಲಿ ಭಾಗಿಯಾಗಿದ್ದಾರೆ. ನಿತ್ಯ ಬೇರೆ ಬೇರೆ ಯಕ್ಷಗಾನದ ಪ್ರಸಂಗಗಳ ಆಯ್ದ ಭಾಗಗಳನ್ನು ಪ್ರಸ್ತುತ ಪಡಿಸಲಾಗುತ್ತದೆ. ಒಟ್ಟಿನಲ್ಲಿ, ಸಾಂಪ್ರದಾಯಿಕ ಯಕ್ಷಗಾನದ ರೂಪಕ ತಾಳಮದ್ದಲೆಗೆ ಆನ್‌ಲೈನ್ ಸ್ಪರ್ಶ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಸಿದ್ದಾಪುರದ ಯಕ್ಷ ನುಡಿಸಿರಿ ಬಳಗ ಕೈ ಹಾಕಿ ಯಶಸ್ವಿಯಾಗಿದೆ.
ಹೇಗೆ ಆನ್‌ಲೈನ್ ತಾಳಮದ್ದಲೆ..?
ರಾಮಾಯಣ ಮತ್ತು ಮಹಾಭಾರತದ ಯಕ್ಷಗಾನ ಪ್ರಸಂಗಗಳ ಒಂದೊಂದು ಪಾತ್ರವನ್ನು ಮತ್ತು ಅದಕ್ಕೆ ಸಂಬಂಧಿಸಿದ ಪದ್ಯವನ್ನು ಬಳಗದ ಹವ್ಯಾಸಿ ಅರ್ಥಧಾರಿಗಳಿಗೆ ಹಿಂದಿನ ದಿನವೇ ಯಕ್ಷ ನುಡಿಸಿರಿ ಬಳಗ ಗ್ರೂಪ್ ಮೂಲಕವೇ ಸೂಚಿಸಿ ಕಳುಹಿಸಲಾಗುತ್ತದೆ. ಪಾತ್ರಧಾರಿ ಅರ್ಥವನ್ನು ಎಂಟರಿಂದ ಹತ್ತು ನಿಮಿಷಗಳಲ್ಲಿ ವಾಯ್ಸ್ ರೆಕಾರ್ಡಿಂಗ್ ಮಾಡಿ ಯಕ್ಷ ನುಡಿಸಿರ ಬಳಗ ವಾಟ್ಸ್ಯಾಪ್ ಗ್ರೂಪ್‌ನ ಅಡ್ಮಿನ್ ನಂಬರ್‌ಗೆ ಕಳುಹಿಸಬೇಕು. ಅಡ್ಮಿನ್ ಅದನ್ನು ಯಾವ ಪಾತ್ರ, ಸಂದರ್ಭಗಳ ಸಂಕ್ಷಿಪ್ತ ವಿವರಗಳನ್ನು ಮತ್ತು ಅರ್ಥಧಾರಿಗಳ ಕಿರುಪರಿಚಯದೊಂದಿಗೆ ಗ್ರೂಪ್‌ಗೆ ಶೇರ್ ಮಾಡುವುದಕ್ಕೆ ಒಂದು ಸಮಯ ಸೂಚಿಸಿರುತ್ತಾರೆ. ಆ ಸಂದರ್ಭದಲ್ಲಿ ಗ್ರೂಪಿನ ಯಾವ ಸದಸ್ಯರ ಇತರೆ ಮೆಸೆಜ್ ಬಾರದಿರುವಂತೆ ನೋಡಿಕೊಂಡು ಆ ಅರ್ಥಗಾರಿಕೆಯನ್ನು ಶೇರ್ ಮಾಡಲಾಗುತ್ತದೆ. ಎಲ್ಲವೂ ಸೇರುವಾಗ ನೇರವಾಗಿ ತಾಳಮದ್ದಲೆ ನೋಡಿದ ಹಾಗೆಯೇ ಅನುಭಕ್ಕೆ ಬರುತ್ತದೆ.
ಬರಲಿದೆ ಆನ್‌ಲೈನ್ ತಾಳಮದ್ದಲೆ ಅರ್ಥಗಾರಿಕೆಗಳ ಫುಲ್ ವರ್ಶನ್..!
ತಾಳಮದ್ದಲೆಯನ್ನೂ ಹೀಗೂ ಕೂಡ ಮಾಡಬಹುದು ಎಂಬುದನ್ನು ಯಕ್ಷ ನುಡಿಸಿರಿ ಬಳಗ ಮಾಡಿ ತೋರಿಸಿದೆ. ಈಗಾಗಲೇ ‘ವಾಲಿ ಮೋಕ್ಷ’, ‘ರಾಮ ನಿರ್ಯಾಣ’ದಂತಹ ಪ್ರಸಂಗಗಳ ಕೆಲವು ಭಾಗಗಳನ್ನು ಆನ್‌ಲೈನ್‌ನಲ್ಲಿ ಇತಿಮಿತಿಯೊಳಗೆ ಪ್ರಯೋಗ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಾಯ್ಸ್ ರೇಕಾರ್ಡ್ ರೂಪದಲ್ಲಿರುವ ಅರ್ಥಗಾರಿಕೆಗಳನ್ನು ಕ್ರೋಢಿಕರಿಸಿ ಸಂಪೂರ್ಣ ಪ್ರಸಂಗವನ್ನಾಗಿ ದಾಖಲೀಕರಣ ಮಾಡುವ ಯೋಜನೆಯಿದೆ ಎನ್ನುತ್ತಾರೆ ಯಕ್ಷ ನುಡಿಸಿರಿ ಬಳಗ ಸಿದ್ದಾಪುರದ ಸಂಚಾಲಕರಾದ ಡಾ. ಜಗದೀಶ್.
ಗಾನ ವೈಭವವೂ ಉಂಟು..!
ಬಡಗು ತಿಟ್ಟಿನ ಯಕ್ಷಗಾನದ ಭಾಗವತುರುಗಳಾದ ಪ್ರಸಾದ್ ಮೊಗೆಬೆಟ್ಟು, ಗಣೇಶ್ ಹೆಬ್ರಿಯವರನ್ನೊಳಗೊಂಡು ತಂಡದ ಕೆಲವು ಹವ್ಯಾಸಿ ಭಾಗವತರುಗಳೊಡಗೂಡಿ ಭಾಮಿನಿ ಯಕ್ಷಗಾನ ಪದ್ಯಗಳ ಹಾಡುಗಾರಿಕೆಯ ಪ್ರಯೋಗವನ್ನು ಈ ಹಿಂದೆ ಇದೇ ವಾಟ್ಸ್ಯಾಪ್ ಗ್ರೂಪ್‌ನ ಮೂಲಕ ಆನ್‌ಲೈನ್‌ನಲ್ಲಿಯೇ ಮಾಡಿ ತೋರಿಸಿದೆ.
ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ..!
ಸಿದ್ಧಾಪುರ ವ್ಯಾಪ್ತಿಗೆ ಒಳಗೊಳ್ಳುವ 4ನೇ ತರಗತಿಯಿಂದ 9ನೇ ತರಗತಿಯೊಳಗಿನ ಮಕ್ಕಳಿಗೆ 5 ವರ್ಷಗಳಿಂದ, ವರ್ಷವೊಂದಕ್ಕೆ ಸುಮಾರು ನೂರು ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ ನೀಡುತ್ತಾ ಬಂದಿದೆ. ಮಾತ್ರವಲ್ಲದೇ, ತರಬೇತಿಯಾದ ಮೇಲೆ ಮಕ್ಕಳಿಂದಲೇ ಯಕ್ಷಗಾನ ಪ್ರದರ್ಶನ ಮಾಡಿಸುತ್ತಾ, ಮಕ್ಕಳಿಗೆ ಯಕ್ಷಗಾನದ ಬಗ್ಗೆ ಆಸಕ್ತಿ ಹುಟ್ಟಿಸುತ್ತಿದೆ ಯಕ್ಷ ನುಡಿಸಿರಿ ಬಳಗ ಸಿದ್ದಾಪುರ.
ಪ್ರತಿ ವರ್ಷ ರಾಜ್ಯೋತ್ಸವದ ದಿನ ತಾಳಮದ್ದಲೆಯ ಪ್ರಸ್ತುತಿ..!
ಯಕ್ಷಗಾನದ ತಾಳಮದ್ದಲೆಯ ರೂಪಕ ಎನ್ನುವುದು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡುತ್ತಿರುವ ಕಲೆ. ಹಾಗಾಗಿ ಪ್ರತಿ ಕನ್ನಡ ರಾಜ್ಯೋತ್ಸವದ ದಿನದಂದು ತಾಳಮದ್ದಲೆಯ ಪ್ರದರ್ಶನ ನಡೆಸತ್ತೇವೆ ಎನ್ನುತ್ತದೆ ಈ ಬಳಗ. ಸುಮಾರು ಎಂಟು ವರ್ಷಗಳಿಂದ ಕನ್ನಡ ರಾಜ್ಯೋತ್ಸವದ ದಿನದಂದು ಪ್ರಸಿದ್ಧ ಅರ್ಥಧಾರಿಗಳ ಕೂಡುವಿಕೆಯೊಂದಿಗೆ ಯಕ್ಷ ನುಡಿಸಿರಿ ಬಳಗ ತಾಳ ಮದ್ದಲೆಯ ಪ್ರದರ್ಶನ ನೀಡುತ್ತಿದೆ.
ಸಂಕಷ್ಟದಲ್ಲಿರುವವರಿಗೆ ಸಹಾಯ..!
ತೀರಾ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಯಕ್ಷಗಾನ ಕಲಾವಿದರಿಗೆ ಆರ್ಥಿಕ ನೆರವು ನೀಡುವುದನ್ನೂ ಕೂಡ ಈ ಬಳಗ ಮಾಡಿಕೊಂಡು ಬಂದಿದೆ. ಕಮಲಶಿಲೆ ಮೇಳದ ರವೀಂದ್ರ ಶೃಂಗೇರಿ ಎಂಬ ಕಲಾವಿದರು ಮೃತರಾದಾಗ, ಅವರ ಕುಟುಂಬಕ್ಕೆ ಇದೇ ಯಕ್ಷ ನುಡಿಸಿರಿ ಬಳಗ ಸಿದ್ದಾಪುರದ ನೇತೃತ್ವದಲ್ಲಿ ಸುಮಾರು ಮೂರು ಲಕ್ಷದ ಎಪ್ಪತ್ತು ಸಾವಿರದ ದೊಡ್ಡ ಮೊತ್ತದ ಧನ ಸಹಾಯ ನೀಡಿದೆ ಎನ್ನುವುದು ಈ ಬಳಗದ ಹೆಚ್ಚುಗಾರಿಕೆ.
-------------------------
-ಶ್ರೀರಾಜ್ ವಕ್ವಾಡಿ