Thursday, May 7, 2020

ಭೋಪಾಲ್ ಅನಿಲ ದುರಂತ ನೆನಪಿಸಿದ ‘ವಿಷಾ’ಖಪಟ್ಟಣ..!


( ಎಲ್ ಜಿ ಪಾಲಿಮಾರ್ ಇಂಡಸ್ಟ್ರಿ )

ಎಲ್ಲವೂ ಸರಿಯಾಗಿಯೇ ಇತ್ತು. ಇದ್ದಕ್ಕಿಂದ್ದಂತೆ ಮಾರಣ ಯಜ್ಙ ಆರಂಭವಾಗಿ ಬಿಟ್ಟಿತ್ತು. 1984ರ ಡಿಸೆಂಬರ್ 2 ರ ರಾತ್ರಿ ‘ಸೆವಿನ್’ ಎಂದು ಹೇಳಲಾಗುವ ಪೆಸ್ಟಿಸೈಡ್ ಕಾರ್ಬಾರಿಲ್ ತಯಾರು ಮಾಡುವ ಯೂನಿಯನ್ ಕಾರ್ಬೈಡ್  ಕಾರ್ಖಾನೆಯ ಹೊಗೆ ವಾತಕ ಚಿಮುಣಿಯ ಸ್ವಚ್ಛಗೊಳಿಸುವ ಕಾರ್ಯ ನಡೆಯಿತು. ಪರಿಣಾಮವಾಗಿ  ಅಪಾರ ಪ್ರಮಾಣದಲ್ಲಿ ಮಿಥೈಲ್ ಶೇಕರಣಾ ತೊಟ್ಟಿಯ ಒಳಗಡೆ ನೀರು ಸೇರಿಕೊಂಡಿದ್ದೇ ತಡ, ವಿಷವಾತಕ ವಾತಾವರಣ ತನ್ನ ಕದ ತೆರೆದುಕೊಂಡಿತು. ಕಾರ್ಖಾನೆಯೊಳಗಿನ ಅಪಾಯ ಸೂಚಿಸುವ ಸೈರನ್ ಕೂಗಿಕೊಂಡಿತು. ಅಷ್ಟೊತ್ತಿಗಾಗಲೇ, ಜೀವ ರಕ್ಷಣೆಗಾಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೆಲ್ಲಾ ಹೊರಗಡೆ ಓಡೋಡಿ ಬಂದರು.

ಹೌದು, ನೀವಂದುಕೊಂಡತೆ ಇದು ಭೋಪಾಲ್ ನ ಕಥೆಯೇ. ಡಿಸೆಂಬರ್ 2ರ ತಡರಾತ್ರಿಯೇ, ವಿಷವಾಯು ಸೇವನೆಯ ಆರಂಭದ ಲಕ್ಷಣಗಳಾದ ಕೆಮ್ಮು, ಜ್ವರ, ವಾಕರಿಕೆ, ಉಸಿರಾಟದ ತೊಂದರೆ, ಕಣ್ಣುರಿ ಎಲ್ಲವೂ ಅಲ್ಲಿನ ಸುತ್ತಮುತ್ತಲಿನ ಜನರಲ್ಲಿ ಪ್ರಾರಂಭವಾಯಿತು.



ಅನಿಲ ದುರಂತ ನಡೆದ ಸುತ್ತಮುತ್ತಲಿನ 6 ಕಿಲೋಮೀಟರ್‌ನ ತನಕ ಭಾರಿ ಪ್ರಮಾಣದಲ್ಲಿ ಈ ವಿಷವಾಯು ಹಬ್ಬಿ ಬಿಟ್ಟಿತ್ತು. ನಿಮಗೆ ಆಶ್ಚರ್ಯ ಅನ್ನಿಸಬಹುದು.  ನಂತರದಲ್ಲಿ ಇದು ಘಟನೆ ನಡೆದ ಸ್ಥಳದಿಂದ 50 ಕಿಲೋ ಮೀಟರ್ ದೂರದಲ್ಲಿದ್ದ ಜನರಿಗೂ ಪರಿಣಾಮ ಬೀರಿತು.

ದುರಂತ ನಡೆದ ತಕ್ಷಣ ಸುಮಾರು 2259 ಮಂದಿ ಅಲ್ಲಲ್ಲೇ ಅಸ್ವಸ್ಥರಾಗಿ ಶವವಾದರು. ಇನ್ನು ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತರಾದರು. ಶ್ವಾಸನಾಳದ ಉರಿಯಿಂದಾಗಿ ಹೇಳದೇ ಕೇಳದೇ ಅದೆಷ್ಟೋ ಜನರು ಪ್ರಾಣತೆತ್ತರು, ಸಾವಿರಾರು ಜಾನುವಾರುಗಳನ್ನೊಳಗೊಂಡು ಸಾಕು ಪ್ರಾಣಿಗಳು, ಬೀಡಾಡಿ ಪ್ರಾಣಿಗಳು ಒದ್ದಾಡಿ ಪ್ರಾಣ ಬಿಟ್ಟವು. ಇನ್ನು, ದುರಂತ ನಡೆದ ಎರಡು ವಾರದೊಳಗೆ ಬರೋಬ್ಬರಿ ಎಂಟು ಸಾವಿರ ಮಂದಿ ಜೀವ ಬಿಟ್ಟರು ಎಂದು ಭೋಪಾಲ್ ಅನಿಲ ದುರಂತದ ಇತಿಹಾಸ ಹೇಳುತ್ತದೆ.


( ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಿಸಿದ ಚಿತ್ರ )

ಇಂತಹದ್ದೊಂದು ದೊಡ್ಡ ದುರಂತಕ್ಕೆ ಕಾರಣವಾದ ಕಂಪೆನಿಯ ಮಾಲೀಕ ಅಮೇರಿಕಾ ಮೂಲದ ವಾರೆನ್ ಆ್ಯಂಡರ್‌ಸನ್ ಎಂಬಾತನನ್ನು ಅಂದಿನ ಸರ್ಕಾರವೇ ಬಚಾವಾಗಲು ಸಹಕರಿಸಿತು.

ಮಧ್ಯಪ್ರದೇಶದ ಪೋಲಿಸರು ಈತನನ್ನು ಬಂಧಿಸಿದ್ದರೂ ಕೂಡ ಆತ ತನ್ನ ಪ್ರಭಾವದಲ್ಲಿ ಜಾಮೀನಿನೊಂದಿಗೆ ಹೊರಬಂದ. ಕಾರ್ಪೋರೇಟ್ ಉದ್ಯಮಿಗಳು ಸರಕಾರದ ಮೇಲೆ ಯಾವ ರೀತಿಯ ಹಿಡಿತ ಹೊಂದಿದ್ದಾರೆ ಎನ್ನುವುದಕ್ಕೆ ಇದೊಂದೆ ಉದಾಹರಣೆ ಸಾಕು.

ಮತ್ತೆ ನಡೆದಿದ್ದೆಲ್ಲವೂ ಕೋರ್ಟು, ಕಚೇರಿ, ಬಂಧನ, ರಾಜಕೀಯಗಳೆಂಬ ಬೃಹನ್ನಾಟಕ..!

ಇಂದಿಗೂ, ಬೋಪಾಲ್‌ನ ಅನಿಲ ದುರಂತದ ದುರಂತ ಹೆಜ್ಜೆಗಳ ಅಚ್ಚಿವೆ. ಈ ದುರಂತಕ್ಕೆ ಒಳಗಾದ ಸುಮಾರು ಐದು ಮುಕ್ಕಾಲು ಲಕ್ಷಕ್ಕಿಂತಲೂ ಹೆಚ್ಚು ಸಂತ್ರಸ್ತರು ಇದುವರೆಗೂ ಪೂರ್ಣ ಪ್ರಮಾಣದ ಪರಿಹಾರ ಪಡೆಯದೇ ಬಲಿಪಶುಗಳಾಗಿದ್ದಾರೆ ಎನ್ನುವುದು ವಿಷಾದನೀಯ.

ಅಂತಹ ದುರಂತದ ಆಳವನ್ನು ನೆನಪಿಸುವ ಘಟನೆಯೊಂದು ಆಂಧ್ರದ ವಿಶಾಖಪಟ್ಟಣಂ ನಲ್ಲಿ ನಡೆದುಹೋಗಿದೆ. ಎಲ್‌ಜಿ ಪಾಲಿಮಾರ್ ಇಂಡಸ್ಟ್ರಿಯಿಂದ ಹೊರ ಉಗುಳಿದ ಸ್ಟೆರೇನ್ ಗ್ಯಾಸ್‌ನ ಪರಿಣಾಮದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಸುಮಾರು 5000 ಮಂದಿ ಈ ಪರಿಣಾಮಕ್ಕೆ ಒಳಗಾಗಿದ್ದಾರೆ. 10 ಮಂದಿ ಮೃತರಾಗಿದ್ದಾರೆ. ಸುಮಾರು 800 ಜನರು ಆಸ್ಪತ್ರೆಗೆ ದಾಖಲಾಗಿ ಸಾವು ಬದುಕಿನ ಹೋರಾಟದಲ್ಲಿದ್ದಾರೆ. ಆಸ್ಪತ್ರೆಗೆ ಸಾಗುವ ದಾರಿಯಲ್ಲಿ ಅಸ್ವಸ್ಥರಾಗುತ್ತಿರು ದೃಶ್ಯಗಳು ಕಣ್ಣಿಗೊತ್ತಿಕೊಂಡಿವೆ.


(ವಿಶಾಖಪಟ್ಟಣಂ)


ಇನ್ನು, ಜಾನುವಾರುಗಳು ಸೇರಿದಂತೆ ಬೀಡಾಡಿ ಪ್ರಾಣಿಗಳು ರಸ್ತೆಗಳ ಬದಿಗಳಲ್ಲಿ ನೊರೆ ಕಾರಿ ವಿಲವಿಲ ಸಾಯುತ್ತಿರುವ ದೃಶ್ಯ ಎದೆಗೆ ಚೂರಿ ಇರಿದಂತಾಗುತ್ತಿದೆ. ಎಲ್ಲವೂ ಎಂದಿನಂತೆ ಸರಿಯಾಗಿತ್ತು. ಆ ಸ್ಟೆರೇನ್ ಟ್ಯಾಂಕ್ ಗ್ಯಾಸ್ ವಾಕರಿಕೆ ಮಾಡಬಾರದಿತ್ತು. ಕೋವೀಡ್ 19  ನಿಂದಾಗಿ ತತ್ತರಿಸಿ ಹೋಗಿದ್ದ ಆಂಧ್ರಕ್ಕೆ ಈಗ ಗಾಯದ ಮೇಲೆ ಬಿಸಿ ಕೆಂಡದಲ್ಲಿ ಕಾಯಿಸಿದ ಕಬ್ಬಿಣದಿಂದ ಬರೆ ಎಳೆದಂತಾಗಿದೆ.


(ವಿಷಾನಿಲಕ್ಕೆ ನೊರೆಕಾರಿ ಅಸುನೀಗಿದ ಜಾನುವಾರು)



‘ನಮಗೇನು ಗೊತ್ತಿಲ್ಲ, ಇದ್ದಕ್ಕಿಂದಂತೆ ಕೆಟ್ಟ ವಾಸನೆ ನಿಧಾನವಾಗಿ ಬರಲಾರಂಭಿಸಿತು. ಅಡುಗೆ ಗ್ಯಾಸ್ ಲೀಕ್ ಆಗಿರಬಹುದೆಂದು ಪರೀಕ್ಷಿಸಿ ನೋಡಿದೆವು. ಆದರೇ, ಅದಲ್ಲ. ಸ್ವಲ್ಪ ಹೊತ್ತಿನಲ್ಲಿ ವಿಷಾನಿಲ ಎಂದು ತಿಳಿಯಿತು. ನಮ್ಮ ರಕ್ಷಣೆ ನಾವು ಮಾಡಿಕೊಂಡೆವು. ಜಾನುವಾರುಗಳು, ಸಾಕು ನಾಯಿಗಳು ಇದ್ದಲ್ಲೇ ಬಾಯಿಯಿಂದ ನೋರೆಕಾರಿ ಸಾಯುತ್ತಿವೆ. ಮಕ್ಕಳು, ವಯಸ್ಸಿಗೆ ಬಂದವರೆಲ್ಲಾ ಕಷ್ಟಪಡುತ್ತಿದ್ದಾರೆ’ ಎಂದು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ದುಃಖದ ಧ್ವನಿಯಲ್ಲೇ ತಮ್ಮ ಅನುಭವ ವ್ಯಕ್ತಪಡಿಸುತ್ತಾರೆ ವಿಶಾಖಪಟ್ಟಣದ ಘೋರ ಅನಿಲ ದುರಂತ ನಡೆದ ಸ್ಥಳದಿಂದ ಕೇವಲ 3 ಕೀಲೋಮೀಟರ್ ದೂರದಲ್ಲಿ ವಾಸವಿರುವ ಅಕ್ರಮ್. 



(ವಿಷಾನಿಲದಿಂದ ಅಸ್ವಸ್ಥಗೊಂಡ ಬಾಲಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳು)


ಕಾಣದ ವಿಷಾನಿಲ ಮಾನವರನ್ನು ಬಲಿ ತೆಹೆದುಕೊಳ್ಳಲಾರಂಭಿಸದೆ. ಇದು ಆರಂಭವಷ್ಟೇ. ಇದ್ದ ಸ್ಥಳದಲ್ಲೇ ಬಿದ್ದು ಸಾಯುವ ಘೋರ ದೃಶ್ಯ ಸಾಮಾನ್ಯವಾಗಿದೆ. ವಿಶಾಖಪಟ್ಟಣ ‘ವಿಷಾ’ಖಪಟ್ಟಣವಾಗಿ ಸಂಪೂರ್ಣವಾಗಿ ಬದಲಾಗಿದೆ. ಭೋಪಾಲ್ ದುರಂತದಿಂದ ಪಾಠ ಕಲಿಯಲಿಲ್ಲ. ಚರಿತ್ರೆಯ ಪಾಠ ಭಾರತಕ್ಕೆ ಬಲು ದೂರವೇ ಅನ್ನಿಸುತ್ತಿದೆ. ಚರಿತ್ರೆಯಿಂದ ಭಾರತ ಪಾಠ ಕಲಿತಿದ್ದು ತುಂಬಾ ವಿರಳ. ಇಲ್ಲಿ ಎಲ್ಲವೂ ಉಚಿತ. ಸಾಯುವುದು ಕೂಡ.

 ‘ವಿಜ್ಞಾನ ವಿಶೇಷವಾದ ಜ್ಙಾನವೇ ಇರಬಹುದು, ಆದರೇ, ಹಿತ ನೀಡುವ ಜ್ಙಾನವಲ್ಲ...!’

ಇಲ್ಲಿ, ಎಂದಿಗೂ ಕೂಡ ದಾರಿಯಲ್ಲೇ ಸಾವು..!
-ಶ್ರೀರಾಜ್ ವಕ್ವಾಡಿ

1 comment:

  1. ನಿಮ್ಮ ಎಲ್ಲಾ ಬರಹಗಳು ತುಂಬಾ ಚೆನ್ನಾಗಿದೆ. ಸೂಪರ್

    ReplyDelete