ಏನಾದ್ರು ಮಾತಾಡು, ಅಲ್ಪ ಸ್ವಲ್ಪ ನಿರಾಳವಾದೀತು. ಸುಮ್ಮನೆ ಆರ್ತಕ್ಕೆ ಪಾಲಾಗಬೇಡ. ಏರುವುದು, ಗೆಲ್ಲುವುದು, ಸೋಲುವುದು, ಬಾಗುವುದು, ಇಳಿಯುವುದು, ಕುಗ್ಗುವುದು, ಕರಗುವುದು, ಬದುಕು ಅಂದ ಮೇಲೆ ಸಹಜ.
ಪ್ರೀತಿ ದೂರವಾಗುವುದಿಲ್ಲ. ಕಾಣದಿರುವಷ್ಟಂತೂ ಆಗೋದೇ ಇಲ್ಲ. ಅಷ್ಟು ಸಂದೇಹವಿದೆಯಾ..? ಕೇಳಿಕೋ ನಿನ್ನನ್ನೇ ನೀನು. ಉತ್ತರ ಸಿಗಲ್ಲ ಅಂದ್ರೇ, ಏನೋ ತಪ್ಪು ನಿನ್ನಲ್ಲೇ ಆಗಿದೆ ಅಂತರ್ಥ, ಗೊಂದಲ ಉಂಟಾಗುತ್ತಿದ್ದರೇ, ಸರಿಪಡಿಸಿಕೊಳ್ಳಬಹುದು ಅಂತರ್ಥ. ಉತ್ತರ ಸಿಕ್ಕೀತು ಅಂದರೇ ಪ್ರೀತಿ ಇನ್ನೂ ಇದೆ ಅಂತರ್ಥ. ನೋವು ಅತ್ಯಲ್ಪ ಕ್ಷಣಗಳಿಗಷ್ಟೇ. ಪ್ರತಿಕೂಲ ಪರಿಸ್ಥಿತಿಗಳನ್ನು ಅನುಕೂಲ ಪರಿಸ್ಥಿತಿಗಳಾಗಿ ಬದಲಾಯಿಸಿಕೊಳ್ಳುವುದೆಂದರೇ, ಮೊದಲು ನಿನ್ನನ್ನೇ ನೀನು ಪ್ರೀತಿಸುವುದು.
ಕ್ರೋಧಕ್ಕೆ, ಆಕ್ರೋಶಕ್ಕೆ, ದುಃಖಗಳಿಗೆ ಸಹೃದ್ಭಾವಗಳು ಬಲಿಯಾಗದಿರಲಿ.
‘ಆಲ್ ದಿ ವೆರಿ ಬೆಸ್ಟ್’
ನೀನು ಮತ್ತೆ ಸರಿಹೊಂದುತ್ತಿರುವ ವಿಷಯ ತಿಳಿಯಿತು. ಇದು ನಿನ್ನೊಲವಿನ ಪುಟಗಳ ಮುಂದಿನ ಅಧ್ಯಾಯ. ಅತ್ಯಂತ ಆತ್ಮಬಲ, ಪರಿಶುದ್ಧ ಆಲೋಚನೆ, ಧೈರ್ಯಗಳಿಂದ ಆರಂಭಿಸು. ಆರಂಭಕ್ಕೊಂದು ಯಶಸ್ಸಿನ ಸಂಕಲ್ಪವಿರಲಿ. ವೇಗಕ್ಕೆ ತುಡಿತವಿರಲಿ, ಅಂತ್ಯಕ್ಕೆ ಇನ್ನೂ ಚಿಗುರುವ ಉತ್ಸಾಹವಿರಲಿ.
‘ಎಸ್, ದಿಸ್ ಈಸ್ ಯುವರ್ ಟೈಮ್’
ಒಂದಿಷ್ಟು ನೆನಪುಗಳನ್ನು ಅಳಿಸಿಹಾಕಲೇ ಬೇಕು. ನಿನ್ನೊಳಗಿನ ದೈತ್ಯ ಶಕ್ತಿಯನ್ನು ಹೊರತರಲೇ ಬೇಕು.
ಪ್ಲೀಸ್. ‘ಕಾಲಕ್ಕೆ ಕಾಯುವಷ್ಟು ಕಾಲವಿಲ್ಲವಂತೆ.’
ನೀನು, ನಿನ್ನೊಂದಿಗಾದರೂ ಮಾತಾಡು. ನಿನ್ನೊಳಗಿನ ಸಂವಾದಕ್ಕೆ ನಿಗೂಹನ ಬೇಡ. ಇನ್ನೆಲ್ಲವೂ ನಿನ್ನದೇ.
ನನ್ನ ಆನಂದ ನಯನಸಲಿಲಕ್ಕೆ ಅವಕಾಶ ಮಾಡಿಕೊಡು.
ಹೌದು, ನಾನೀಗ ನಿನ್ನ ಪಾಲಿನವನಲ್ಲ. ಆದರೇ, ನನ್ನ ಪಾಲು ನಿನ್ನಲ್ಲಿಲ್ಲ ಅಂತ ನಿನಗೂ ಹೇಳುವುದಕ್ಕೆ ಸಾಧ್ಯವಿಲ್ಲ...!
‘ಕಾಲಾತೀತ’ ಅಷ್ಟೇ.
ಅದೇನೇ ಇರಲಿ, ನಿನ್ನ ಹೊಸ ಅಧ್ಯಾಯದಲ್ಲಿ ಸಂತಸಗಳೇ ಬಹುಪಾಲು ಪಡೆಯಲಿ.
‘ನೀನೆಂದರೇ, ಎಲ್ಲವನ್ನು ಎದುರಿಸುವ ಕ್ಷಮತೆ’
ಸ್ವಾರಿ... ಒನ್ಸ್ ಅಗೈನ್ ‘ಆಲ್ ದಿ ವೆರಿ ಬೆಸ್ಟ್.’
-ಶ್ರೀರಾಜ್ ವಕ್ವಾಡಿ

No comments:
Post a Comment