ಅದೆಲ್ಲಿಗೋ ಗುಳೇ ಹೊರಟಿದೆ ಬದುಕು.
ಧಗ್ಗೆಂದು ಎದ್ದ ಬೆಂಕಿ ಕೆನ್ನಾಲಿಗೆಗಳಿಗೆ ಸಿಲುಕಿ ಕರಗಿಯಾದ ಮೇಲೆ ಹುಟ್ಟುವ ಜೀವನದ ಅಗತ್ಯಕ್ಕೆ ಧ್ವನಿಯಾಗಿ ಇರುವ ಭಾವವೊಂದರ ಕುರಿತಂಥದ್ದಿದು. ನೀವೇನೂ ಕಣ್ಣುಬಿಸಬೇಕಂತಿಲ್ಲ. ನಡೆಯುವುದೆಲ್ಲಾ ನಡೆದು ಹೋಗುತ್ತವೆ ಬಿಡಿ. ಆದರೇ, ಕಾಣಬೇಕಾದದ್ದೆಂದಿಗೂ ಕಾಣುವುದಿಲ್ಲವಲ್ಲಾ.. ಎನ್ನುವುದೊಂದೇ ದುಃಖದ ಅಗ್ರಸಾಲಿನ ಬಿಂದು.
ಕಥೆ, ಕಾದಂಬರಿ, ಕಾವ್ಯ, ಹಾಡು, ಚಿತ್ರ, ಸಿನೆಮಾಗಳ ಸಾಧ್ಯತೆಗಳಲ್ಲ ಬದುಕು. ಅದರಾಚೆಗೆ ಅದೇನೋ ಘನಗಂಭೀರ ದಿವ್ಯ ನೀರವತೆಗೆ ತಲೆಯಾನಿಸಿ ಕುಳಿತ ನಿಸ್ತೇಜ ಹೊಳಪು ಅಷ್ಟೇ.
ಇಲ್ಲಿ ಎಲ್ಲದಕ್ಕೂ ಅಲ್ಲಲ್ಲೇ ಮಣ್ಣಾಗುವ ಭಾಗ್ಯ...!
ಅದೆಷ್ಟು, ಬದುಕಿನ್ನೂ ರೈಲ್ವೆ ಸ್ಟೇಶನ್‌ನ ಅದ್ಯಾವುದೋ ಎಡ ಮೂಲೆಯನ್ನೋ, ಬಲ ಮೂಲೆಯನ್ನೋ ಆವರಿಸಿಕೊಂಡಿಲ್ಲ..? ಅದೆಷ್ಟು ಜೀವ ಬಸ್ ಸ್ಟ್ಯಾಂಡ್‌ಗಳ ಧೂಳು ಮಣ್ಣುಗಳಲ್ಲೇ ಹೊರಳಾಡಿಕೊಂಡಿಲ್ಲ..? ಅದೆಷ್ಟು ಭಾರಗಳನ್ನು ಹೊತ್ತ ಜೀವನ ಊಹಿಸಲಾರದ ತಿರುವುಗಳನ್ನು ನಿರೀಕ್ಷಿಸುತ್ತಲೇ ಸಾಗುತ್ತಿಲ್ಲ..?
ಹ್ಹು.. ಈಗ ನೀವು ಹೇಳಿ.
ಬದುಕೆಂದರೇ ಏನು..?!
ಗೊತ್ತಿಲ್ವಾ..?
‘ಹೊಲಿಯುವುದು, ಹರಿದುದ್ದಕ್ಕೂ ಮತ್ತೆ ಮತ್ತೆ ಹೊಲಿಯುವುದು. ಕಪ್ಪೋ, ಬಿಳುಪೋ ನೂಲು ಖಾಲಿಯಾಗುವವರೆಗೆ ಹೊಲಿಯುವುದು.’.
“ಅಷ್ಟೇ.”
ಹೊಲಿಗೆ ಬಿಚ್ಚಿಕೊಳ್ಳುತ್ತಾ ಹೋದಂತೆ, ಅದು ಹೇಳಿಕೊಳ್ಳುವ ಕಥೆಗೆ ಕಿವಿಯಾಗುವುದಕ್ಕೂ ಜೀವನ ಮುಂದಾಗುವುದಿಲ್ಲ. ಘರ್ಷಣೆಗಳ ನಡುವೆ ಬೆಂದು ಕರಗಿಸಿ, ಕಲಕಿಸಿ ಅಲ್ಲೆಲ್ಲೋ ದಾರಿ ಮಧ್ಯದಲ್ಲೇ ಗೊತ್ತೇ ಆಗದಂತೆ ಜೋಳಿಗೆಯಲ್ಲಿದ್ದ ರೊಟ್ಟಿಗಳಿಗೆ ರಕ್ತ ಅಂಟಿಸಿ ಬಿಡುತ್ತದೆ ಬದುಕು.
ಕಾದು ನೋಡಬೇಕು. ಧ್ವನಿಯಾಗುವರೇ, ಹೆಣವಾದ ಮೇಲಾದರೂ ಎಂದು. ಆಗದಿದ್ದರೇ, ನನ್ನಂಥ, ನಿಮ್ಮಂಥವರೆಲ್ಲಾ ನಡೆವ ಹಾದಿಯಲ್ಲೇ, ಮತ್ತೆ ಮುಂದೆಲ್ಲೂ ಹೋಗಲಾರದಂತೆ ಮಲಗಿ ಬಿಡಬೇಕಷ್ಟೇ.
ನಾನು ನಡೆಯುತ್ತಿದ್ದೇನೆ. ನೀವೂ ಕೂಡ. ಇಲ್ಲ ಅಂತ ಹೇಳ್ಬೇಡಿ..! ಉರಿ ಏಳುವ ದಾರಿಯಲ್ಲಿ ಒಡೆದ ಪಾದಗಳಿಂದ ರಕ್ತದಚ್ಚುಗಳನ್ನು ಮೆತ್ತುತ್ತಾ ಬರಿಗಾಲಲ್ಲಿ ನಡೆಯುವುದು ಯಾರಿಗೆ ಕಾಣುತ್ತದೆ ಹೇಳಿ..?
ಅಲ್ಲಿಲ್ಲವೆಂದು ಇಲ್ಲಿಗೆ, ಇಲ್ಲಿಲ್ಲವೆಂದು ಅಲ್ಲಿಗೆ, ಎಲ್ಲೂ ಇಲ್ಲವೆಂದು ಅದೆಲ್ಲೋ ಕಣ್ಣಿಗೆ ಕಾಣದ ತುತ್ತ ತುದಿಗೆ.
ಬದುಕೆಂದರೇ... ಎಲ್ಲೆಲ್ಲಿಂದಲೋ ಎಲ್ಲೆಲ್ಲಿಗೋ..!
-ಶ್ರೀರಾಜ್ ವಕ್ವಾಡಿ
(📱 : 8762723716)


No comments:
Post a Comment