Friday, May 8, 2020

ನಿಗಿ ಮೌನ..!



ಎಲ್ಲವೂ ಬಲವಂತವಾಗಿ ಕಾಡುತ್ತಿತ್ತು. ಹೊರಟೆ. ಅದೇ ಏಕಾಂತದಲ್ಲಿ. ಬದುಕಿಗೋ, ಏಕಾಂತದಲ್ಲಿ ನೆನಪುಗಳನ್ನು ಹೊತ್ತು ಸಾಗುವುದು ಖಯಾಲಿ.

ಅದೊಂದು ಸಣ್ಣ ಇಂಟರ್‌ವಲ್..!

ಗಾಡಿಯ ಗಾಲಿ ತಿರುಗುತ್ತಲೇ ಇತ್ತು. ನಾನೋ ಮೌನವನ್ನು ಅತ್ಯಂತ ಖುಷಿಯಿಂದ ಗ್ರಹಿಸಿ ಸವಿಯುವ ರಾತ್ರಿ ಬೆಳಕಿನ ಬೀದಿ ದೀಪ. ಹೊರಟಿದ್ದು ಎಲ್ಲಿಗಂತ ಇನ್ನೂ ಅಸ್ಪಷ್ಟ. ದಾರಿಯೂ ಅದರದ್ದೇ, ಬಯಕೆಯೂ ಅದರದ್ದೇ. ನನ್ನನ್ನು ಇದುವರೆಗೆ ಉಳಿಸಿಕೊಂಡು ಬಂದ ಕಣ್ಣಿನಾಚೆಗಿರುವ ಭರವಸೆಯೊಂದು ಈಗ ಅದೇನೋ ವಿಚಿತ್ರ ಧ್ವನಿ ಮಾಡಿ ಹೇಳುತ್ತಿದೆ...

ಏನು ಗೊತ್ತಾ..?

‘ಎಲ್ಲವೂ ಮುಳುಗಿ ಹೋಗುತ್ತದೆ.’ ‘ಎಲ್ಲವೂ ಇಲ್ಲದಾಗುತ್ತದೆ.’ ‘ನೀನೇ ಮುರಿದು ಹೋಗುವ ವಿಸ್ಮಯ ದೃಶ್ಯವನ್ನು ನೀನೇ ನಿನ್ನ ಸ್ವಂತ ಕಣ್ಣುಗಳಿಂದ ಕಾಣುವೆ.’

…!

ಮನಸ್ಸಿಗೆ ಮೆಲ್ಲ ಹೇಳಿದೆ. ‘ಅಂತಹದ್ದೊಂದು ಸೌಭಾಗ್ಯ ನನಗೊಲಿಯುವುದಾದರೆ ಒಲಿದು ಬಿಡಲಿ..!’ ಅಂತ. ಬದುಕೆಂದರೇ, ಎಷ್ಟು ಮುಗಿದರೂ ಹೊಳೆದು ಹೊಳೆದು  ಉಳಿದು ಬಿಡುವ ಭಾವ.

ಚಕ್ರ ಹುಗಿದು ಮಣ್ಣಿನೊಳಗಿಳಿದಿದ್ದರೂ ಮುಂದೆ ಸಾಗುವ ಧೈರ್ಯ ಕುಂದಲಿಲ್ಲ. ಮತ್ತೆ ಹೊರಟಿದ್ದು ಅದೇ ಗೊತ್ತಿಲ್ಲದ ಅಂತ್ಯಕ್ಕೆ. ಹಾಗೆ ನೋಡುವುದಾದರೇ, ಮುಕ್ತವಾಗಿ ತೀರಕ್ಕೆ ಬಿಟ್ಟು ಬಿಡುವ ಸೋಜಿಗವೇ ಬದುಕು.

ಮತ್ತೆ ಬಂದಿದೆ ಇಂಟರ್‌ವಲ್..!

ನೀವು ಏನನ್ನೂ ಇಲ್ಲ ಎನ್ನಬಾರದು. ಏನೋ ಗೊತ್ತಿಲ್ಲ ಮುಂದೆ ಹೋಗುತ್ತಿದ್ದೇನೆ. ನಿಮಗೆ ತೊಂದರೆ ಕೊಡಲಾರೆ. ನಿಮ್ಮೆದುರಿಗೆ ನಿಲ್ಲುವ ಸ್ಥಿತಿ ಬಂದರೇ, ಇಲ್ಲ ಎನ್ನಬೇಡಿ..! ಮಾತಾಡಿಸಿಯಾದರೂ ಕಳುಹಿಸಿ. ಮತ್ತೊಂದು ಇಂಟರ್‌ವಲ್ ಬರುವ ತನಕ ಈ ಅಧ್ಯಾಯ ಮುಂದುವರಿಯುತ್ತದೋ ಇಲ್ಲವೋ...

ಮತ್ತೆ ಹೊರಟಿದೆ. ಹಿಂದೆಷ್ಟು ಭಾರವಿತ್ತೋ, ಅಷ್ಟೇ ಭಾರ ಹೊತ್ತು, ಕಾಣದೂರಿಗೆ. ಜೊತೆಗೆ ಕಾಲವೊಂದಿದೆ. ಅದು ನನ್ನ ಪಾಲಿಗೊಲಿಯುತ್ತದೆಂಬ ನಂಬಿಕೆಯಿಲ್ಲ. ಅದು ನಿಷ್ಕರುಣಿ ಧಣಿವಾರಿಸಿಕೊಳ್ಳುವುದಕ್ಕೂ ಬಿಡುವುದಿಲ್ಲ..!

ಬದುಕೆಂದರೇ, ನಿಗಿ ಮೌನ..!
-ಶ್ರೀರಾಜ್ ವಕ್ವಾಡಿ

No comments:

Post a Comment