Thursday, March 23, 2023

2023 : ಲೋಕಲ್‌ ವರ್ಸಸ್‌ ನ್ಯಾಷನಲ್‌ ಫೈಟ್‌



(ಸಾಂದರ್ಭಿಕ ಚಿತ್ರ) 

ಬಿಜೆಪಿಗೆ ಅನಿವಾರ್ಯ । ಕಾಂಗ್ರೆಸ್‌ ಗೆದ್ದರೇ, 'ಜೋಡೋ'ಗೆ ಜೈಕಾರ ..!

ಮೂರು ಈಶಾನ್ಯ ರಾಜ್ಯಗಳ ವಿಧಾನ ಸಭಾ ಚುನಾವಣೆಯ ನಂತರ ಈಗ ಎಲ್ಲರ ಚಿತ್ತ ಕರ್ನಾಟಕ ವಿಧಾನಸಭಾ ಚುನಾವಣೆಯತ್ತ ನೆಟ್ಟಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಆದ/ಆಗುತ್ತಿರುವ ರಾಜಕೀಯ ಬೆಳವಣಿಗೆಗಳ ಕಾರಣದಿಂದಾಗಿ ಈ ಬಾರಿಯ ವಿಧಾನಸಭಾ ಚುನಾವಣೆ ದೇಶ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ ೫.೦೪ ರಷ್ಟಿರುವ ಕರ್ನಾಟಕವು ಲೋಕಸಭೆಗೆ ೨೮ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಅತಿ ಹೆಚ್ಚು ಲೋಕಸಭಾ ಸಂಸದರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯವು ಏಳನೇ ಸ್ಥಾನದಲ್ಲಿರುವುದರಿಂದ  [(ಉತ್ತರ ಪ್ರದೇಶ (೮೦), ಮಹಾರಾಷ್ಟ್ರ (೪೮), ಪಶ್ಚಿಮ ಬಂಗಾಳ (೪೨), ಬಿಹಾರ (೪೦), ತಮಿಳು ನಾಡು (೩೯), ಮಧ್ಯ ಪ್ರದೇಶ (೨೯)] ಕೇಂದ್ರ ಸರ್ಕಾರಕ್ಕೆ ರಾಜ್ಯದ ವಿಧಾನ ಸಭಾ ಚುನಾವಣೆಯು ಅತ್ಯಂತ ಮುಖ್ಯವೂ ಕೂಡ ಹೌದು. 

ಒಂದೆಡೆ ವಿವಿಧ ಯೋಜನೆಗಳ ಉದ್ಘಾಟನೆಯ ನೆಪದಲ್ಲಿ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ವಿರೋಧ ಪಕ್ಷಗಳ ವಿರುದ್ಧ ಮಾತನಾಡಿ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಚುನಾವಣೆಯ ಹಾದಿಯಲ್ಲಿ ರಾಜ್ಯ ಬಿಜೆಪಿ ಸಂಪೂರ್ಣವಾಗಿ ಕೇಂದ್ರ ನಾಯಕರ ಮೊರೆ ಹೋದಂತೆ ಕಾಣುತ್ತಿದೆ. ಇನ್ನೊಂದೆಡೆ, ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ ಇನ್ನೂ ತನ್ನ ರಾಷ್ಟ್ರೀಯ ನಾಯಕತ್ವವನ್ನು ವ್ಯಾಪಕವಾಗಿ ಟ್ಯಾಪ್ ಮಾಡಿದಂತೆ ಕಾಣುತ್ತಿಲ್ಲ. ಯಶಸ್ವಿ ಭಾರತ್ ಜೋಡೋ ಯಾತ್ರೆಯ ಹೊರತಾಗಿಯೂ, ರಾಹುಲ್ ಗಾಂಧಿ, ಒಂದೆರಡು ಪತ್ರಿಕಾ ಗೋಷ್ಠಿಗಳನ್ನು ಮಾಡಿದ್ದನ್ನು ಹೊರತಾಗಿ ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿಲ್ಲ, ಚುನಾವಣೆಯ ಬಗ್ಗೆಯೂ ಮಾತನಾಡಿಲ್ಲ. ಪ್ರಿಯಾಂಕ ಗಾಂಧಿ ಬಂದು ಕಾಂಗ್ರೆಸ್‌ ನ ಈ ಬಾರಿಯ ಗ್ಯಾರಂಟಿಗಳಲ್ಲಿ ಒಂದಾದ ʼಗೃಹಲಕ್ಷ್ಮಿʼಯನ್ನು ಘೋಷಿಸಿಇ ಹೋಗಿದ್ದು ಬಿಟ್ಟರೇ, ರಾಷ್ಟ್ರ ನಾಯಕರ ಸಾರ್ವಜನಿಕ ಸಭೆ ಕಾಂಗ್ರೆಸ್‌ ನಿಂದ ಆಗಿಲ್ಲ. ಈಗ ರಾಹುಲ್‌ ಗಾಂಧಿ, ಖರ್ಗೆ ಅಲ್ಲೋ ಇಲ್ಲೋ ಎಲ್ಲೋ ಎಂಬಂತೆ ನಿಧಾನಕ್ಕೆ ರಾಜ್ಯಕ್ಕೆ ಚುನಾವಣಾ ಉದ್ದೇಶದಿಂದ ಕಾಲಿಟ್ಟಿದ್ದು, ಯಾವ ರೀತಿಯಲ್ಲಿ ಇವರು ರಾಜ್ಯದ ಜನರನ್ನು ಪ್ರಭಾವಿಸಲಿದ್ದಾರೆ ನೋಡಬೇಕು. ಮತ್ತೊಂದೆಡೆ ಜೆಡಿಎಸ್‌ ಎಂದಿನಂತೆ ತನ್ನ ಬಲ ಇರುವ ಕಡೆಯಲ್ಲಿ ಮಾತ್ರ ಚುನಾವಣಾ ಪ್ರಚಾರದ ಬಿರುಸಿನಲ್ಲಿದೆ. ಹೈಕಮಾಂಡ್‌ ಕೂಡ ಜೆಡಿಎಸ್‌ ಗೆ ಇಲ್ಲೇ ಇದೆ. ಹಿರಿಗೌಡರು ದೈಹಿಕವಾಗಿ ಸುಸ್ತಾಗಿದ್ದಾರೆ. ಕಿರಿಗೌಡ್ರು ದಂಪತಿಗಳು, ಮಗ ನಿಖಿಲ್ ಅಲ್ಲಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೆಚ್ಚಾಗಿ ಒಕ್ಕಲಿಗ ಮತ ಕ್ಷೇತ್ರಗಳನ್ನು ಕೇಂದ್ರವಾಗಿಟ್ಟು ಕಾರ್ಯ ನಿರ್ವಹಿಸುತ್ತಿದೆ. ಇನ್ನು, ಜೆಡಿಎಸ್‌ ನಲ್ಲಿ ಈ ಬಾರಿ ಒಂದಿಷ್ಟು ಆಂತರಿಕ ಒಡಕುಗಳು ಕಾಣಿಸಿಕೊಂಡಂತಿರುವುದು ರಾಜಕೀಯದ ಕುತೂಹಲಕ್ಕೆ ಕಾರಣವಾಗಿದೆ. 

ಇನ್ನು, ಬಿಜೆಪಿ ಮೇಲೆ ಮತದಾರರ ಒಲವು ಕಡಿಮೆಯಾಗಿದೆ. ರಾಜ್ಯ  ಬಿಜೆಪಿಯ ಕೆಲವು ನಾಯಕರ ಹರಕು ಬಾಯಿ, ಗಲಾಟೆ ಎಬ್ಬಿಸುವ ರಾಜಕಾರಣ, ಭ್ರಷ್ಟಾಚಾರ, ದುರಾಡಳಿತದಿಂದ ಜನ ಬೇಸತ್ತಿದ್ದಾರೆ.   ರಾಜ್ಯ  ಬಿಜೆಪಿಯ ಬಗ್ಗೆ ಕೇಂದ್ರ ನಾಯಕತ್ವಕ್ಕೆ ಬೇಸರವಿದ್ದರೂ ತೋರಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ರಾಜ್ಯದ ಕೆಲವು ನಾಯಕರ ಅಸಮಾಧಾನ, ಅಲ್ಲಲ್ಲಿ ರಾಜೀನಾಮೆ ಎಲ್ಲವೂ ಬಿಜೆಪಿಗೆ ಒಳಗೊಳಗೆ ಹತಾಶೆ ಮೂಡಿಸಿದೆ. ಇನ್ನು, ರಾಜ್ಯದಲ್ಲಿ ಬಿಜೆಪಿ ಎಂದಿಗೂ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಥವಾ ಬೇರೆ ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ರಚಿಸಿದೆ. ಈ ಪ್ರವೃತ್ತಿಯನ್ನು ಮುರಿಯಬೇಕಾದರೆ ಒಕ್ಕಲಿಗ ಮತ ಕ್ಷೇತ್ರಗಳಲ್ಲಿ ಬಿಜೆಪಿ ಗಟ್ಟಿಯಾಗಿ ಹೆಜ್ಜೆ ಊರಬೇಕಿದೆ. ಒಕ್ಕಲಿಗ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರನ್ನು ಸೆಳೆಯುವ ಮೂಲಕ ಈ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆಯಾದರೂ.  ಎಸ್‌ ಎಂ ಕೃಷ್ಣ ಅವರ ತವರು ಜಿಲ್ಲೆ ಮಂಡ್ಯದಲ್ಲಿ ಬಿಜೆಪಿಗೆ ಹಿತ ಕಾಣುತ್ತಿಲ್ಲ. ಇತ್ತೀಚೆಗೆ ಸುಮಲತಾ ಅಂಬರೀಶ್‌ ಬಿಜೆಪಿಗೆ ಬೆಂಬಲ ಸೂಚಿಸಿದರಾದರೂ ಮಂಡ್ಯದಲ್ಲಿ ಬಿಜೆಪಿಗೆ ಧೈರ್ಯ ಮೂಡಿದಂತೆ ಕಾಣಿಸುತ್ತಿಲ್ಲ.  ಮಂಡ್ಯದ ಜವಾಬ್ದಾರಿ ಹೊರುವುದಕ್ಕೆ ಯಾವ ರಾಜ್ಯ ಬಿಜೆಪಿ ನಾಯಕರು ಮನಸ್ಸು ಮಾಡುತ್ತಿಲ್ಲ ಎನ್ನುವುದು ಮತ್ತೊಂದು ತಲೆಬಿಸಿ. 

ಪದೇ ಪದೇ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುವ ಮೋದಿ, ಶಾ ಪ್ರತಿ ಕ್ಷೇತ್ರದಲ್ಲಿಯೂ ಹೊಸ ಮುಖಗಳನ್ನು ಗುರುತಿಸುವತ್ತ ಚಿತ್ತ ಹರಿಸಿದಂತೆ ಕಾಣುತ್ತಿದೆ. ಗುಜರಾತ್‌ ಚುನಾವಣೆಗಾಗಿ ಹೆಣೆದ ತಂತ್ರವನ್ನು ಇಲ್ಲಿ ಬಿಜೆಪಿ ಪ್ರಯೋಗಿಸಲಿದೆಯೇ ಎಂಬ ಪ್ರಶ್ನೆಯೊಂದು ಎದ್ದಿದೆ.  ರಾಜ್ಯದಲ್ಲಿ ಹೊಸ ಮುಖಗಳನ್ನು, ಕೆಲಸ ಮಾಡುವ, ಹೊಸ ಚಾರ್ಮ್‌ ಇರುವ ನಾಯಕರನ್ನು ಗುರುತಿಸಿ ರಾಜ್ಯ ನಾಯಕರ ಅಡಿಯಲ್ಲಿ ತಂದು ಮುಂದಿನ ಚುನಾವಣೆಗೆ ಬಳಸಿಕೊಳ್ಳಬಹುದೆಂಬ ಉದ್ದೇಶ ಮೋದಿ, ಶಾ ಅವರದ್ದು ಎಂಬ ಚರ್ಚೆ ರಾಜಕೀಯದಲ್ಲಿ ನಡೆಯುತ್ತಿದೆ. ಗುಜರಾತ್‌ ಗೂ ಕರ್ನಾಟಕ ರಾಜಕೀಯಕ್ಕೂ ಹಲವು ವ್ಯತ್ಯಾಸಗಳಿವೆ. ಇಂದಿಗಲ್ಲದಿದ್ದರೂ ಮುಂದೆ ಬೇಕಾಗುತ್ತದೆ ಎಂಬ ನಿಟ್ಟಿನಲ್ಲಿ ಸಣ್ಣದೊಂದು ದೃಷ್ಟಿ ಹಾಯಿಸಿದಂತಿದೆ. ರಾಜ್ಯದಲ್ಲಿ ಮೋದಿ, ಶಾ ಹೆಣೆಯುತ್ತಿರುವ ಈ ತಂತ್ರವು ಹೊಸದೇನಲ್ಲ. ಇಂದಿರಾಗಾಂಧಿಯವರು ಅಧಿಕಾರದ ಉತ್ತುಂಗದಲ್ಲಿದ್ದಾಗ ಯಾರನ್ನು ಬೇಕಾದರೂ ಕಣಕ್ಕಿಳಿಸಿ ಅವರನ್ನು ಗೆಲ್ಲಿಸಬಹುದಾಗಿತ್ತು ಎಂಬ ರಾಜಕೀಯ ವಾತಾವರಣ ಇದ್ದಾಗ ಈ ತಂತ್ರವನ್ನು ಮೊದಲು ಕಾಂಗ್ರೆಸ್‌ ಕಾರ್ಯರೂಪಕ್ಕೆ ತಂದು ಪ್ರಯೋಗಿಸಿ ಯಶಸ್ಸು ಕಂಡಿತ್ತು. ಆದರೇ, ರಾಜೀವ್ ಗಾಂಧಿ ರಾಜ್ಯ ನಾಯಕತ್ವವನ್ನು ಬೈಪಾಸ್ ಮಾಡದೆ, ಅವಮಾನಿಸುವ ಮೂಲಕ ಈ ಪ್ರಕ್ರಿಯಗೆ ಒಂದು ಹಂತದಲ್ಲಿ ಉಲ್ಟಾ ನಡೆದುಕೊಂಡರು. ಲಿಂಗಾಯತ ನಾಯಕ ವೀರೇಂದ್ರ ಪಾಟೀಲ್ ಅವರಿಗೆ ರಾಜೀವ್ ಗಾಂಧಿ ಮಾಡಿದ್ದರೆನ್ನಲಾದ ಅವಮಾನದಿಂದ ಕಾಂಗ್ರೆಸ್ ಇನ್ನೂ ಚೇತರಿಸಿಕೊಂಡಿಲ್ಲ. ಕಾಂಗ್ರೆಸ್‌ ಸ್ಥಳೀಯವಾಗಿ ನಾಯಕರನ್ನು ಅಷ್ಟಾಗಿ ಬೆಳೆಸಲೇ ಇಲ್ಲ ಎನ್ನುವುದಕ್ಕೆ ಇದೊಂದೇ ಸಾಕ್ಷಿ ಸಾಕು. ಈಗ ಕಾಂಗ್ರೆಸ್‌ ಈ ಹಿಂದೆ ಎಲ್ಲಿ ಎಡವಿತ್ತೋ ಅಲ್ಲಿ ಬಿಜೆಪಿ ಲಾಭ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ ಮತ್ತು ಸ್ಥಳೀಯ ನಾಯಕರನ್ನು ಗುರುತಿಸಿ ಯಶಸ್ವಿಯಾಗುತ್ತಿದೆ. 

ರಾಜ್ಯದ ಜನತೆ ಎಂದೂ ಒಂದೇ ಪಕ್ಷವನ್ನು ಮತ್ತೆ ಮತ್ತೆ ಅಧಿಕಾರಕ್ಕಾಗಿ ಆರಿಸಿಲ್ಲ. ಇತ್ತೀಚೆಗಿನ ವರ್ಷಗಳಲ್ಲಿ ಅತಂತ್ರವೇ ಹೆಚ್ಚು. ಇನ್ನು, ಬಿಜೆಪಿ ಇದುವರೆಗೆ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದಿಲ್ಲ. ಬಿಜೆಪಿ ಅಧಿಕಾರ ಮಾಡಿದ್ದಿದ್ದರೇ ಅದು ಆಪರೇಷನ್‌ ಕಮಲದ ಪರಿಣಾಮದಿಂದಾಗಿ, ಇಲ್ಲವೇ ಮೈತ್ರಿಯಿಂದಾಗಿ. ಸದ್ಯ ಕೇಂದ್ರದಲ್ಲಿಯೂ ಬಿಜೆಪಿ, ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಹಾಗಾಗಿ ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇ ಬೇಕು ಎಂಬ ಪಣ ತೊಟ್ಟಿದೆ ಬಿಜೆಪಿ. ಇತ್ತ ಕಾಂಗ್ರೆಸ್‌ ಹೈಕಮಾಂಡ್‌ ಗೆ ಹೊಸ ನೇತೃತ್ವ ಸಿಕ್ಕಿದೆ. ಎಐಸಿಸಿ ಅಧ್ಯಕ್ಷತೆ ಕರ್ನಾಟದ ಮಲ್ಲಿಕಾರ್ಜುನ ಖರ್ಗೆ ಅವರ ಕೈಯಲ್ಲಿದ್ದು, ಖರ್ಗೆ ಅವರಿಗೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ಹೇಗಾದರೂ ಮಾಡಿ ತರಲೇ ಬೇಕು ಎಂಬ ಒತ್ತಡವೂ ಕೂಡ ಇದೆ. ಹಾಗಾಗಿಯೇ ಸೀಟ್‌ ಹಂಚಿಕೆಯಲ್ಲಿ ಖರ್ಗೆ ಅಳೆದು ತೂಗಿದ್ದಾರೆ. ರಾಜ್ಯದಲ್ಲಿ ಇಂದಿಗೂ ಇರುವ ಮೋದಿ ಹವಾದ ಎದುರು ಖರ್ಗೆ ಯಾವ ರೀತಿಯ ರಣತಂತ್ರಕ್ಕೆ ರಾಜ್ಯ ನಾಯಕರಿಗೆ ನಿರ್ದೇಶಿಸಿದ್ದಾರೆ/ನಿರ್ದೇಶಿಸಲಿದ್ದಾರೆ ಎನ್ನುವುದು ಕುತೂಹಲ. ಇನ್ನೇನು ಕೆಲ ದಿನಗಳಲ್ಲಿ ಬರಲಿರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್‌ ಗೆದ್ದರೇ, ನಿಸ್ಸಂಶಯವಾಗಿ ರಾಹುಲ್‌ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಜೈಕಾರ ಸಮರ್ಪತಗೊಳ್ಳುತ್ತದೆ. ಸೋತರೇ, ಅದರ ಸಂಪೂರ್ಣ ಹೊಣೆಗಾರಿಕೆ ಮಲ್ಲಿಕಾರ್ಜುನ್‌ ಖರ್ಗೆ ತಲೆಗೆ ಕಟ್ಟುವುದರಲ್ಲಿ ಅನುಮಾನವೇ ಇಲ್ಲ. ಇದು ಸ್ವತಃ ಖರ್ಗೆ ಅವರಿಗೆ ಗೊತ್ತಿಲ್ಲ ಎಂದಲ್ಲ. ಆ ಅಸಹಾಯಕತೆಗೆ ಖರ್ಗೆ ಮುಖಾಮುಖಿಯಾಗಲೇ ಬೇಕಿದೆ. ಇತ್ತ ಜೆಡಿಎಸ್‌ ಅಂತೂ ಸ್ವಂತವಾಗಿ ಅಧಿಕಾರಕ್ಕೆ ಬರುವುದಕ್ಕೆ ಸದ್ಯಕ್ಕಂತೂ ಸಾಧ್ಯವೇ ಇಲ್ಲ. ಅತಂತ್ರವಾದರೇ, ಮತ್ತೆ ಕುಮಾರಸ್ವಾಮಿಯವರಿಗೆ ಮತ್ತೊಂದು ಅವಕಾಶ ಸಿಗಬಹುದು ಹೊರತು ಮತ್ತೇನೂ ಜೆಡಿಎಸ್‌ ನಿಂದ ಆಗುವುದಕ್ಕೆ ಸಾಧ್ಯವಿಲ್ಲ. ಆದರೇ, ಜೆಡಿಎಸ್‌ ಪ್ರಾಬಲ್ಯವಿರುವ ಕಡೆ ಒಂದೆರಡು ಸೀಟ್‌ ಜಾಸ್ತಿ ಬರಬಹುದೇನೋ ಅಷ್ಟೇ.  ಇದನ್ನೂ ಮೀರಿ ಆಶ್ಚರ್ಯಕರ ಬೆಳವಣಿಗೆ ಈ ಚುನಾವಣೆಯಲ್ಲಿ ಜೆಡಿಎಸ್‌ ನಿಂದ ಆಗುತ್ತದೆ ಎನ್ನುವುದು ದೂರದ ಮಾತು. 

ಇನ್ನು, ಬಿಜೆಪಿ ಕಳೆದ ವಿಧಾನ ಸಭಾ ಚುನಾವಣೆಯನ್ನು ಸಿದ್ದರಾಮಯ್ಯ ವರ್ಸಸ್‌ ಮೋದಿ ಎಂಬಂತೆ ಬಿಂಬಿಸಿ ಕಣಕ್ಕಿಳಿದಿತ್ತು. ಈ ಬಾರಿಯ ಚುನಾವಣೆಯನ್ನು ಮೋದಿ ವರ್ಸಸ್‌ ರಾಹುಲ್‌ ಗಾಂಧಿ ಎಂದು ಬಿಂಬಿಸುವ ಪ್ರಯತ್ನದಲ್ಲಿದೆ. ಇತ್ತ ಕಾಂಗ್ರೆಸ್‌ ಪದೇ ಪದೇ ಮೋದಿ, ಶಾ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಕಾರಣದಿಂದಾಗಿ ಈ ಬಾರಿಯ ಚುನಾವಣೆಯನ್ನು ಲೋಕಲ್‌ ವರ್ಸಸ್‌ ನ್ಯಾಷನಲ್‌ ಎಲೆಕ್ಷನ್‌ ಎಂದು ಹೇಳುತ್ತಿರುವುದು ಕುತೂಹಲ ಮೂಡಿಸಿದೆ. ಈ ಎರಡೂ ಬದಿಗಳ ರಾಜಕೀಯ ತಂತ್ರಗಾರಿಕೆಗಳ ನಡುವೆ ಪ್ರಸ್ತುತ ಚುನಾವಣಾ ಕಣದಲ್ಲಿ ಯಾವ ನಿರೂಪಣೆ ಗೆಲ್ಲುತ್ತದೆ ಎನ್ನುವುದು ಕಾದು ನೋಡಬೇಕಿದೆ.

-ಶ್ರೀರಾಜ್‌ ವಕ್ವಾಡಿ  


Thursday, March 16, 2023

ಆಡಳಿತ ಪಕ್ಷ ಸೇರಿ ಯಾವ ಪಕ್ಷಕ್ಕೂ ಬಹುಮತದ ದಾರಿ ಸುಲಭವಿಲ್ಲ.!

ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ ಆಗಿ ಬದಲಾದ ʼಆಪರೇಷನ್‌ ಕಮಲʼ .!

ಚುನಾವಣೆಗೆ ಇನ್ನೇನು ಕೆಲ ದಿನಗಳು ಬಾಕಿ ಇವೆ. ರಾಜಕೀಯ ಪಕ್ಷಗಳು ಕಣ ರಾಜಕಾರಣಕ್ಕೆ ತಯಾರಿಯಲ್ಲಿವೆ. ಕೇಂದ್ರದ ಆಡಳಿತದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಹಾಗೂ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಆಡಳಿತದಲ್ಲಿರುವುದರಿಂದ ಸಹಜವಾಗಿ ಚುನಾವಣಾ ವಿಚಾರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ತಿತ್ವದಲ್ಲಿರುವ ಏಕೈಕ ರಾಜ್ಯವಾಗಿರುವುದರಿಂದ ಕೂಡ ರಾಜ್ಯ ವಿಧಾನ ಸಭಾ ಚುನಾವಣೆ, ಕೇಂದ್ರ ಬಿಜೆಪಿ ಪಾಲಿಗೆ ಇದು ಮಹತ್ತರವಾದದ್ದು ಎನ್ನುವುದು ಇಲ್ಲಿ ಗಮನಾರ್ಹ. 

ರಾಜ್ಯದ ಕಳೆದ ನಾಲ್ಕು ದಶಕಗಳ ರಾಜಕೀಯ ಇತಿಹಾಸವನ್ನು ಗಮನಿಸುವುದಾದರೇ, ರಾಜ್ಯದ ಮತದಾರ ಒಂದೇ ಪಕ್ಷವನ್ನು ಪದೇ ಪದೇ ಆಯ್ಕೆ ಮಾಡಿದ ಉದಾಹರಣೆ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿಲ್ಲ ಮತ್ತು ಲೋಕಸಭಾ ಚುನಾವಣೆಯಲ್ಲಿಯೂ ಇಲ್ಲ. ಇಲ್ಲಿನ ಮತದಾರ ಸತತವಾಗಿ ಒಂದೇ ಪಕ್ಷಕ್ಕೆ ಬಹುಮತವನ್ನು ನೀಡಿಲ್ಲ ಎನ್ನುವ ಕಾರಣಕ್ಕೆ ರಾಜ್ಯ ಯಾವ ಪಕ್ಷದ ಭದ್ರ ಕೋಟೆಯೂ ಅಲ್ಲ. ಹಾಗಾಗಿ ಲೋಕಸಭೆ ಚುನಾವಣೆಯೂ ಸಮೀಪದಲ್ಲಿರುವುದರಿಂದ ಕೇಂದ್ರದ ಆಡಳಿತ ಪಕ್ಷ ಬಿಜೆಪಿಗೂ ಹಾಗೂ ರಾಜ್ಯದ ಆಡಳಿತ ಪಕ್ಷ ಬಿಜೆಪಿಗೂ ಈ ವಿಧಾನ ಸಭಾ ಚುನಾವಣೆ ಒಂದು ಹಂತದಲ್ಲಿ ನಿರ್ಣಾಯಕ ಚುನಾವಣೆಯಾಗಿರಲಿದೆ. 

ನಿಸ್ಸಂಶಯವಾಗಿ ಆಡಳಿತ ಪಕ್ಷ ಬಿಜೆಪಿ ರಾಜ್ಯವನ್ನು ಉಳಿಸಿಕೊಳ್ಳುವ ಸತತ ಪ್ರಯತ್ನದಲ್ಲಿದೆ. ಇನ್ನೊಂದೆಡೆ ಭ್ರಷ್ಟಾಚಾರ, ಹಗರಣ, ದುರಾಡಳಿತ, ಲೈಂಗಿಕ ಹಗರಣ, ಹಣದುಬ್ಬರ, ಬೆಲೆ ಏರಿಕೆ ಇತ್ಯಾದಿ ವಿಚಾರಗಳಿಂದ ಆಡಳಿತ ಪಕ್ಷದ ಮೇಲೆ ಜನರಲ್ಲಿನ ವಿಶ್ವಾಸ ಕಡಿಮೆಯಾಗಿದ್ದು, ವಿರೋಧ ಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈ ಲಾಭವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಹುರುಪಿನಲ್ಲಿವೆ. ಆಡಳಿತ ಪಕ್ಷ ಹೇಗಾದರೂ ಮಾಡಿ ಬಹುಮತದೊಂದಿಗೆ ಈ ಬಾರಿಯ ಚುನಾವಣೆಯಲ್ಲಾದರೂ ಅಧಿಕಾರಕ್ಕೇರಬೇಕೆಂಬ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುತ್ತಿವೆ.  

ಅಷ್ಟಾಗಿಯೂ, ಬಹಳ ಪ್ರಮುಖ ವಿಚಾರವೇನೆಂದರೇ, ಇದುವರೆಗೆ ರಾಜ್ಯದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ ಉದಾಹರಣೆಯೇ ಇಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿಯೂ ಇದು ಬಿಜೆಪಿಯಿಂದ ಸಾಧ್ಯವಾಗಿಲ್ಲ. ಇದುವರೆಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೇ, ಅದು ಆಪರೇಷನ್‌ ಕಮಲದ ಮೂಲಕವೇ ಎನ್ನುವುದು ಕೂಡ ಉಲ್ಲೇಖಾರ್ಹ. ವಾಸ್ತವವಾಗಿ ʼಆಪರೇಷನ್‌ ಕಮಲʼ ಈಗ ಬಿಜೆಪಿ ಬಹುಮತ ಗಳಿಸುವಲ್ಲಿ ವಿಫಲವಾದಲ್ಲಿ ಎಲ್ಲಾ ಕಡೆಗಳಲ್ಲಿ ಅದರ ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ ಆಗಿ ಬದಲಾಗಿದೆ. ಈ ತಂತ್ರ ಮೊದಲು ಪ್ರಯೋಗವಾಗಿದ್ದೇ ಕರ್ನಾಟಕದಲ್ಲಿ ಇಲ್ಲಿ ಉಲ್ಲೇಖೀಸಲೇ ಬೇಕಾದ ವಿಷಯ. 

ಬಿಜೆಪಿ ಕಳೆದ ಬಾರಿಗಿಂತಲೂ ಈ ಬಾರಿ ದೊಡ್ಡ ಮಟ್ಟದ ಆಡಳಿತ ವಿರೋಧಿ ಅಲೆಯನ್ನು ಅನುಭವಿಸುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ೧೯೮೦-೮೩ ರ ಅವಧಿಯ ಗುಂಡೂರಾವ್‌  ನೇತೃತ್ವಕದ ಕಾಂಗ್ರೆಸ್‌ ಸರ್ಕಾರ ಒಂದಿಷ್ಟು ಆಡಳಿತ ವಿರೋಧವನ್ನು ಅನುಭವಿಸಿದ್ದನ್ನು ಹೊರತಾಗಿ ಇಷ್ಟರ ಮಟ್ಟಿಗೆ ಆಡಳಿತ ವಿರೋಧಿ ಅಲೆಯನ್ನು ಅನುಭವಿಸಿದ್ದು ಇದೇ ಸರ್ಕಾರ. ೨೦೧೯ರಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರವನ್ನು ರಚಿಸಲಾಯಿತು. ಸರಿ ಸುಮಾರು ಮೂರುವರೆ ವರ್ಷಗಳಿಂದ ಈ ರಾಜ್ಯದ ಜನ ಈ ಸರ್ಕಾರವನ್ನು ಗಮನಿಸಿದ್ದಾರೆ. “ಏನ್‌ ಮಾಡಿದ್ರು ಜನ ಒಪ್ಕೊಳ್ತಾರೆ” ಎಂಬ ವಾತಾವರಣ ಈಗ ಬದಲಾಗಿದೆ. ಅತಿರೇಖದ ಭ್ರಷ್ಟಾಚಾರ, ವ್ಯಾಪಕವಾದ ದ್ವೇಷ ಪ್ರಚಾರ, ಕೋಮು ಹಿಂಸಾಚಾರ, ಕಾನೂನು ಅಮರ್ಥತೆ, ದರ್ಬಲ ಆಡಳಿತ, ಹಗರಣ ಎಲ್ಲವೂ ಆಡಳಿತ ಪಕ್ಷದ ಟ್ರೇಡ್‌ ಮಾರ್ಕ್‌ ಎಂಬಂತಾಗಿರುವುದು ಸತ್ಯ. 

ಹಗರಣಗಳ ಆಡಳತ ಆಡಳಿತ ನಡೆಸಿದ ಸರ್ಕಾರ : ಬಿಜೆಪಿ ಸರ್ಕಾರ ಈ ಅವಧಿಯಲ್ಲಿ ಗಳಿಸಿದ ಹೊಸ ಹೆಸರು ೪೦% ಸರ್ಕಾರ. ಸರ್ಕಾರಿ ಹುದ್ದೆಗಳ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ಗುತ್ತಿಗೆಗಳಲ್ಲಿ, ಕಾರ್ಪೋರೇಟ್‌ ಸ್ನೇಹಿ ಇತ್ಯಾದಿಗಳಲ್ಲಿ ಈ ಸರ್ಕಾರದ ಅವಧಿಯಲ್ಲಿ ತುಸು ಹೆಚ್ಚೇ ಇತ್ತು. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಬಹಿರಂಗವಾಗಿಯೇ ಬಿಜೆಪಿ ಸರ್ಕಾರವನ್ನು ೪೦% ಸರ್ಕಾರ ಎಂದು ಕರೆದಿದ್ದನ್ನು ಈ ರಾಜ್ಯದ ಜನ ನೋಡಿದ್ದಾರೆ. ಮಾತ್ರವಲ್ಲದೇ ಇನ್ಫೋಸಿಸ್‌ ನ ಮಾಜಿ ಸಿಎಫ್‌ಓ ಮೋಹನ್‌ ದಾಸ್‌ ಪೈ ಈ ಸರ್ಕಾರವನ್ನು ಕರ್ನಾಟಕ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂದು ಸಾರ್ವಜನಿಕವಾಗಿ ಹೇಳಿರುವುದನ್ನು ಕೂಡ ಈ ರಾಜ್ಯದ ಜನ ಕಂಡಿದ್ದಾರೆ. ಈ ಅವಧಿಯಲ್ಲಿ ನಡೆದ ಸರಣಿ ಭ್ರಷ್ಟಾಚಾರ ಪ್ರಕರಣಗಳು ಬಿಜೆಪಿ ಸರ್ಕಾರಕ್ಕೆ ೪೦% ಸರ್ಕಾರವೆಂಬ ಹಣೆಪಟ್ಟಿ ತಂದುಕೊಟ್ಟಿದೆ.  

ಪಿ ಎಸ್ ಐ (ಪೊಲೀಸ್ ಸಬ್ ಇನ್ಸ್‌ ಪೆಕ್ಟರ್) ಅಪ ಮಾರ್ಗದ ನೇಮಕಾತಿ ಪ್ರಕರಣ ಈ ಸರ್ಕಾರದ ದೊಡ್ಡ ಭ್ರಷ್ಟಾಚಾರಗಳಲ್ಲೊಂದು. ಇದು ಕರ್ನಾಟಕ ಪೊಲೀಸ್ ನೇಮಕಾತಿ ಸೆಲ್ ಕಳೆದ ವರ್ಷ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ೫೪೫  ಸಬ್ ಇನ್ಸ್‌ ಪೆಕ್ಟರ್‌ ಗಳ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆಯನ್ನು ನಡೆಸುತ್ತಿದೆ. ಹಗರಣದ ಮಾಸ್ಟರ್ ಮೈಂಡ್ ಆಗಿದ್ದ ಹಿರಿಯ ಪೊಲೀಸ್ ಅಧಿಕಾರಿ ಎಡಿಜಿಪಿ  ಅವರನ್ನು ಬಂಧಿಸಿದ್ದನ್ನು ಈ ರಾಜ್ಯದ ಜನ ನೋಡಿದ್ದಾರೆ. ಲಂಚ ನೀಡಿದ ಅಭ್ಯರ್ಥಿಗಳ ಓ ಎಂ ಆರ್ ಶೀಟ್‌ ಗಳಲ್ಲಿ ಸರಿಯಾದ ಉತ್ತರಗಳನ್ನು ಈ ಪ್ರಕರಣಗಳಲ್ಲಿ ಶಾಮೀಲಾದವರು ಬರೆಯುವುದನ್ನು ಕೂಡ  ಈ ಪ್ರಕರಣ ಒಳಗೊಂಡಿತ್ತು ಎಂಬುವುದು ಇಲ್ಲಿ ಉಲ್ಲೇಖಾರ್ಹ. ಇದುವರೆಗೆ ಒಟ್ಟು ಬಂಧಿತರ ಸಂಖ್ಯೆ ೧೦೦ ದಾಟಿದೆ (ಪೊಲೀಸ್ ಅಧಿಕಾರಿಗಳು, ಅಭ್ಯರ್ಥಿಗಳು, ಮಧ್ಯವರ್ತಿಗಳು). ಎಷ್ಟರ ಮಟ್ಟಿಗೆ ಎಂದರೇ, ಒಂದು ನೇಮಕಾತಿಗೆ ಬರೋಬ್ಬರಿ ೮೫ ಲಕ್ಷದವರೆಗೆ ಲಂಚ ಸ್ವೀಕರಿಸಿದ್ದು ಈ ರಾಜ್ಯದ ಮುಂದೆ ಬಟಾಬಯಲಾಯಿತು.  ರಾಜಕೀಯದ ಕೃಪಾಶೀರ್ವಾದ ಅಥವಾ ಸಹಕಾರವಿಲ್ಲದೆ ಇಂತಹ ದೊಡ್ಡ ಹಗರಣ ನಡೆಯಲು ಸಾಧ್ಯವಿಲ್ಲ. ಆದರೆ, ಈ ನಿಟ್ಟಿನಲ್ಲಿ ಯಾವುದೇ ತನಿಖೆ ನಡೆದಿಲ್ಲ. ಹಗರಣಗಳ ಸರಣಿ - ಬಿಟ್‌ಕಾಯಿನ್ ಹಗರಣ, ಕೋವಿಡ್ ಹಗರಣ, ಮಾರ್ಕ್ಸ್ ಕಾರ್ಡ್ ಹಗರಣ, ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣೆಗಳ ಸಂಘ (ಆರ್‌ ಯು ಪಿ ಎಸ್‌ ಎ = ರೂಪ್ಸಾ), ಬಿಡಿಎ ಹಗರಣ ಮತ್ತು ಶಿಕ್ಷಣ ಇಲಾಖೆಯಲ್ಲಿನ ಹಗರಣವನ್ನು ಬಹಿರಂಗಗೊಂಡಿವೆ. ಇತ್ತೀಚೆಗಿನ  ಶಾಸಕ ಮಾಡಾಳ್‌ ವಿರೂಪಾಕ್ಷಪ್ಪನ ಮಗ ಲಂಚ ಸ್ವೀಕಾರ ಮಾಡಿದ್ದು ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದ್ದು ಈಗ ಲೋಕಾಯುಕ್ತ ವಿಚಾರಣೆಯಲ್ಲಿದೆ. ಇಷ್ಟೆಲ್ಲಾ ಆಗಿಯೂ ಸರ್ಕಾರ ತನ್ನನ್ನು ತಾನು ಸಮರ್ಥಿಸಿಕೊಳಳುವುದರ ಜೊತೆಗೆ ವಿರೋಧ ಪಕ್ಷದ ಬಗ್ಗೆ ಸುಳ್ಳು ಹಬ್ಬಿಸುವುದನ್ನು ಬಿಟ್ಟಿಲ್ಲ. ಇನ್ನೂ ಜನ ಮೂರ್ಖರೇ ಎಂಬ ಭ್ರಮೆಯಲ್ಲಿಯೇ ಸರ್ಕಾರ ಇದ್ದರೇ, ಅದಕ್ಕಿಂತ ದೊಡ್ಡ ಹಾಸ್ಯ ಪ್ರಸಂಗ ಮತ್ತೊಂದಿರಲಿಕ್ಕಿಲ್ಲ. ಒಟ್ಟಿನಲ್ಲಿ ಹೊಸ ಹಗರಣವಿಲ್ಲದೆ ಸರಿಯಾಗಿ ಒಂದು ವಾರವನ್ನೂ ಈ ಸರ್ಕಾರ ಕಳೆದಿಲ್ಲ.

ಜನರು ಮೂರ್ಖರು ಎಂದುಕೊಳ್ಳುವುದೇ ದೊಡ್ಡ ಮೂರ್ಖತನ :  ಕರ್ನಾಟಕ ಬಿಜೆಪಿ ಮೋದಿ ಹವಾದಲ್ಲಿಯೇ ಈ ಭಾರಿಯ ಚುನಾವಣೆಯನ್ನೂ ಕೂಡ ಗೆದ್ದು ಬಿಡಬಹುದು ಎಂಬ ಭ್ರಮೆಯಲ್ಲಿಯೇ ಇರಬೇಕು. ಅದಕ್ಕಾಗಿಯೇ ಎಂದೂ ಇಲ್ಲದಂತೆ ಪದೇ ಪದೇ ಮೋದಿಯನ್ನು ಚುನಾವಣೆಯ ಈ ಹೊಸ್ತಿಲಲ್ಲಿ ಕರೆಸುತ್ತಿರುವುದು. ಒಂದಿಷ್ಟು ರೋಬೋ ಆಡಿಯನ್ಸ್‌ ಗಳನ್ನು ಸೇರಿಸಬಹುದು, ಮೋದಿ ಬಂದ ಕಾರು ಮುಚ್ಚಿ ಹೋಗುವಷ್ಟು ಹೂ ಚೆಲ್ಲಿ ಸ್ವಾಗತಿಸಬಹುದು, ಮೋದಿ ಇಲ್ಲಿ ಬಂದು ಕನ್ನಡದಲ್ಲಿ ಮಾತಾಡಬಹುದು, ಮೋದಿ ಬಂದ ಕಾರನ್ನು ಹೂವಿನಿಂದ ಮುಚ್ಚುವಷ್ಟರ ಮಟ್ಟಿಗೆ ಹೂಮಳೆ ಸುರಿಸಿದ್ದನ್ನು ವಿಶುವಲ್‌ ಎಫೆಕ್ಟ್‌, ಬ್ಯಾಗ್‌ ಗ್ರೌಂಡ್‌ ಎಫೆಕ್ಟ್‌ ಮೂಲಕ ಎಡಿಟ್‌ ಮಾಡಿ ಸೋಶಿಯಲ್‌ ಮೀಡಿಯಾಗಳಲ್ಲಿ ಬೂಸ್ಟ್‌ ಮಾಡಿ ಮನಬಂದಂತೆ ಹಬ್ಬಿಸಬಹುದು ಆದರೇ, ಜನರನ್ನು ಗೆಲ್ಲುವುದಕ್ಕೆ ಜನಸ್ನೇಹಿ ಕಾರ್ಯಗಳಿಲ್ಲದೇ ಇವು ಯಾವುದೂ ಕೂಡ ಕೆಲಸ ಮಾಡುವುದಿಲ್ಲ. ಸೋಶಿಯಲ್‌ ಮೀಡಿಯಾಗಳ ಮೂಲಕ ಈ ಹಿಂದೆ ಜನರ ತಲೆಗೆ ಸುಳ್ಳನ್ನು ಕಂಪ್ಯೂಟ್‌ ಮಾಡಿದರೇ ಆಯ್ತು ಒಂದು ಚುನಾವಣೆಯನ್ನೇ ಗೆಲ್ಲಬಹುದು ಅಂದುಕೊಂಡರೇ ಅದಕ್ಕಿಂತ ದೊಡ್ಡ ದಡ್ಡತನವಿಲ್ಲ. ಇದನ್ನು ಹೊರತಾಗಿ ಹೊಸ ನಾಟಕೀಯ ತಂತ್ರಗಳನ್ನು ರೂಪಿಸದ ಹೊರತು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಕೆಲವು ಮಾಧ್ಯಮಗಳು ಎಷ್ಟೋ ಚುನಾವಣೆಗಳಲ್ಲಿ ಒಂದು ರಾಜಕೀಯ ಪಕ್ಷವನ್ನು ಸೋಲಿಸುವಲ್ಲಿ, ಇನ್ನೊಂದು ಪಕ್ಷವನ್ನು ಗೆಲ್ಲಿಸುವಲ್ಲಿ ಕೆಲಸ ಮಾಡಿದ್ದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳುಗಳನ್ನು ಹಬ್ಬಿಸುವುದರ ಮುಖೇನ ಸತ್ಯವನ್ನು ಸುಳ್ಳಾಗಿ ಮತ್ತು ಸುಳ್ಳನ್ನು ಸತ್ಯವನ್ನಾಗಿ ಮಾಡಬಹುದು ಎಂಬ ಕನಸಲ್ಲಿಯೇ ರಾಜಕೀಯ ಮಾಡುತ್ತಿದ್ದರೇ, ಅದು ನನಸಾಗುವುದಕ್ಕೆ ಸಾಧ್ಯವಿಲ್ಲ. ಜನರು ಬುದ್ಧಿವಂತರು, ಜನ ಈ ರಾಜಕೀಯದಿಂದ ಬೇಸತ್ತಿದ್ದಾರೆ. ಈ ಚುನಾವಣೆಯ ಗೆಲುವು ಅಷ್ಟು ಸುಲಭವಿಲ್ಲ. ಜನರಿಗೆ ಹೊಸತನ ಬೇಕಿದೆ. ಈ ಗಲಾಟೆ ಗದ್ದಲ ದೊಂಬಿ ರಾಜಕಾರಣದಿಂದ ಜನ ಸುಸ್ತಾಗಿದ್ದಾರೆ ಎನ್ನುವುದಂತೂ ಸತ್ಯ. ಇನ್ನು ಯಾವ ಪಕ್ಷಕ್ಕೂ ಬಹುಮತದ ದಾರಿ ಸುಲಭವಿಲ್ಲ ಎನ್ನುವುದು ಸ್ಪಷ್ಟ. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸಾಧ್ಯ. ಏನೆಲ್ಲಾ ಆಗುತ್ತದೆ ಎಂದು  ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ  


Thursday, March 9, 2023

ಮ್ಯಾಚ್‌ ವಿನ್ನರ್‌ ಇಲ್ಲದ ಬಿಜೆಪಿ ಮತ್ತು ಬಹುಮತದ ಕನಸು !

ಆಪರೇಷನ್‌ ಕಮಲದ ಮೂಲಕವೇ ಅಧಿಕಾರಕ್ಕೇರಿದ ಬಿಜೆಪಿ ಸಾಗಿ ಬಂದ ದಾರಿ .!  

ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಹೆಗ್ಗಳಿಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪರಿಗೆ ಸಲ್ಲುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವಿಷಯವನ್ನು ಸ್ವತಃ ಬಿಜೆಪಿ ಮರೆತರೂ, ರಾಜ್ಯದ ಜನ ಮರೆಯುವುದಕ್ಕೆ ಸಾಧ್ಯವಿಲ್ಲ. ಯಡಿಯೂರಪ್ಪ ತಮ್ಮ ರಾಜಕೀಯದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದರೂ, ಉಳಿದವರಂತೆ ಗಲಾಟೆ ಎಬ್ಬಿಸುವ/ಸಿದ ರಾಜಕಾರಣಿ ಅಲ್ಲ.  ಯಡಿಯೂರಪ್ಪ ಅವರ ರಾಜಕೀಯ ಜೀವನವನ್ನು ಅರ್ಥೈಸಿಕೊಂಡವರಿಗೆ ಅವರೊಬ್ಬ ಛಲವಾದಿ, ವಿಶಿಷ್ಟ ಕುತೂಹಲ ಗಣಿಯ ರಾಜಕರಾಣಿ ಎಂಬುವುದು ಅರ್ಥವಾಗುತ್ತದೆ. ಮೈತ್ರಿಯೋ, ವಾಮ ಮಾರ್ಗವೋ ಅಥವಾ ರಾಜಕೀಯ ವ್ಯಾಪಾರವೋ ಅದು ರಾಜಕೀಯದ ಎರಡನೇ ಹಂತದ ಚರ್ಚೆ. ಹೇಳ ಹೆಸರಿಲ್ಲದ ಪಕ್ಷವನ್ನು ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ತನ್ನ ಸಮುದಾಯದ ಪ್ರಬಲ ಬೆಂಬಲದೊಂದಿಗೆ, ಹೋರಾಟದೊಂದಿಗೆ ಅಧಿಕಾರಕ್ಕೆ ತಂದಿದ್ದಕ್ಕೆ ಸಿದ್ಧಾಂತವನ್ನು ಮೀರಿ ಮೆಚ್ಚಲೇ ಬೇಕು. 

ಸದ್ಯ ಚುನಾವಣಾ ರಾಜಕೀಯದಿಂದ ಹೊರಗುಳಿಯಲಿರುವ ಯಡಿಯೂರಪ್ಪ ಮುಂದಿನ ವಿಧಾನ ಸಭಾ ಚುನಾವಣೆಗೆ ಹೇಗೆ ಕಣದಿಂದ ಹೊರಗುಳಿದು ಪ್ರಭಾವ ಬೀರಲಿದ್ದಾರೆ ಎನ್ನುವುದು ರಾಜ್ಯ ರಾಜಕಾರಣದ ಕುತೂಹಲ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಿದ ನಂತರ ಬಿಜೆಪಿ ಲಿಂಗಾಯತ ಮತಗಳಿಗೆ ಹೆದರಿದ್ದಂತೂ ಅಕ್ಷರಶಃ ಸತ್ಯ. ಹಾಗಾಗಿಯೇ ಮತ್ತೆ ಮತ್ತೆ ಯಡಿಯೂರಪ್ಪರನ್ನು ಎಂದೂ ಇಲ್ಲದಂತೆ ಚುನಾವಣೆಗಾಗಿ ಯುಗ ಪುರುಷನಂತೆ ಮೋದಿ ಸೇರಿ ಎಲ್ಲರೂ ಹೊಗಳುತ್ತಿರುವುದು, ಲಿಂಗಾಯತ ದಾಳವನ್ನು ಪ್ರಯೋಗಿಸುತ್ತಿರುವುದು ಬಿಜೆಪಿಯ ಅಸಹಾಯಕೆತಯನ್ನು ಎತ್ತಿ ತೋರಿಸುತ್ತಿದೆ. ಇನ್ನು, ಸ್ವತಃ ಲಿಂಗಾಯತ ಸಮುದಾಯದಿಂದ ಬಂದ ಒಬ್ಬ ನಾಯಕನನ್ನು ಅತ್ಯಂತ ಕೀಳು ಮಟ್ಟದಲ್ಲಿ ಅವಮಾನಿಸಿ ಮುಖ್ಯಮಂತ್ರಿ ಸ್ಥಾನದಿಂದ ಏಕಾಏಕಿ ಕೆಳಗಿಸಿದ ಬಿಜೆಪಿ ಹೈಕಮಾಂಡ್‌ ಕರ್ನಾಟಕದ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಈಗ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ ರಾಜಕೀಯ ಜೀವನ ಮುಗಿಸಿದ್ದು ಕಾಂಗ್ರೆಸ್‌ ಎಂದು ಹೇಳುವ ಮೂಲಕ ಮತ್ತೆ ಮತ್ತೆ ಚುನಾವಣಾ ಫಲಿತಾಂಶದ ನಿರ್ಣಾಯಕ ಸಮುದಾಯ ಎಂದೇ ಕರೆಸಿಕೊಳ್ಳುವ ಲಿಂಗಾಯತ ಮತಗಳನ್ನು ಓಲೈಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿರುವುದನ್ನು ಗಮನಿಸಿದರೇ, ಇದೊಂದು ಬಿಜೆಪಿ ವಿರಚಿತ ರಾಜಕೀಯದ ಹೊಸ ಹಾಸ್ಯ ಪ್ರಸಂಗವೇ ಎಂಬಂತೆ ಕಾಣಿಸುತ್ತಿದೆ. ಇದು ಬಿಜೆಪಿಗೆ ಯಡಿಯೂರಪ್ಪರ ರಾಜಕೀಯದ ಇರುವಿಕೆಯ ಮಹತ್ವವನ್ನು ತಡವಾಗಿಯಾದರೂ  ತೋರಿಸಿಕೊಟ್ಟಂತಿದೆ ಎಂಬುವುದು ಪದಶಃ ಸತ್ಯ.  

೨೦೦೬ರಲ್ಲಿ ಅಚ್ಚರಿ ಮೂಡಿಸಿದ್ದರು ಯಡಿಯೂರಪ್ಪ.. ! :  ಅದು ೨೦೦೪ರ ವಿಧಾನಸಭಾ ಚುನಾವಣೆಯ ಸಂದರ್ಭ. ಅಂದು ಆಡಳಿತದಲ್ಲಿದ್ದ ಪಕ್ಷದ ಮೇಲೆ ಜನರ ಒಲವಿರಲಿಲ್ಲ. ವಿರೋಧ ಪಕ್ಷ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿತ್ತು. ಅಂದು ಯಡಿಯೂರಪ್ಪ ಹಾಗೂ ದಿವಂಗತ ಅನಂತ ಕುಮಾರ್‌ ಜೋಡಿ ರಾಜ್ಯದಲ್ಲಿ ಕಮಲ ಅರಳಿಸುವ ಕನಸು ಕಂಡಿದ್ದರು. ಬಿಜೆಪಿ ಅಧಿಕಾರ ಹಿಡಿಯುತ್ತದೆ ಎಂಬ ಮಾತುಗಳೇ ರಾಜಕೀಯ ಪಡಸಾಲೆಯಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದ್ದವು. ಆದರೇ, ಜೆಡಿಎಸ್‌ ಅಂದು ಗಳಿಸಿದ್ದ ೫೮ ಕ್ಷೇತ್ರಗಳು ಯಡಿಯೂರಪ್ಪ, ಅನಂತಕುಮಾರ್‌ ಜೋಡಿ ಕನಸನ್ನು ಭಗ್ನ ಗೊಳಿಸಿತ್ತು. ಬಿಜೆಪಿ ೭೯ ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಕಾಂಗ್ರೆಸ್‌ ೬೫ ಸ್ಥಾನಕ್ಕಿಳಿದು ತೀವ್ರ ಮುಖಭಂಗಕ್ಕೊಳಗಾಯ್ತು. ಫಲಿತಾಂಶದಲ್ಲಿ ದೊಡ್ಡ ಪಕ್ಷವೆಂದು ಬಿಜೆಪಿ ಹೊರಹೊಮ್ಮಿದರೂ ಕೂಡ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಯಡಿಯೂರಪ್ಪರ ತಂಡವನ್ನು ವಿರೋಧಪಕ್ಷದಲ್ಲಿ ಕುಳ್ಳಿರಿಸಿತ್ತು. ದೇವೇಗೌಡರ ಕೃಪಾಶೀರ್ವಾದದ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನ ಧರಂಸಿಂಗ್‌ ಆಯ್ಕೆಯಾದರು. ಯಡಿಯೂರಪ್ಪ ಸುಮ್ಮನಾಗಲಿಲ್ಲ. ಕುಮಾರ ಸ್ವಾಮಿಯರನ್ನು ಮೈಂಡ್‌ ವಾಶ್‌ ಮಾಡಿ, ಹಿರಿಗೌಡರಿಗಿಂತ ನಿಮ್ಮ ಮಾತಿಗೆ ಶಾಸಕರು ತಲೆತೂಗಬಲ್ಲರು ಎಂದು ತಿಳಿಸಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಮುರಿಯುವಲ್ಲಿ ಯಡಿಯೂರಪ್ಪ ತಂತ್ರಗಾರಿಕೆ ಹೂಡಿದ್ದರು. ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಕುಮಾರಸ್ವಾಮಿಯವರನ್ನು ಮನವೊಲಿಸಿ, ಯಾವ ಗೌಡರ ಪಕ್ಷ ಬಿಜೆಪಿಯನ್ನು ಕೋಮುವಾದಿ ಪಕ್ಷವೆಂದು ತೆಗಳುತ್ತಿತ್ತೋ ಅದೇ ಪಕ್ಷದೊಂದಿಗೆ ಮೈತ್ರಿ ಕುದಿರಿಸಿದ್ದರು ಯಡಿಯೂರಪ್ಪ. ಆ ಮೂಲಕ ಬಿಜೆಪಿಯನ್ನು ಮೊಟ್ಟ ಮೊದಲ ಭಾರಿಗೆ ಅಧಿಕಾರದ ಸ್ಥಾನದಲ್ಲಿ ಕೂರಿಸಿದ್ದರು. 

ಧರಂ ಸಿಂಗ್‌ ನೇತೃತ್ವದ ಸರ್ಕಾರ ಪತನವಾಯ್ತು. ಕುಮಾರ ಸ್ವಾಮಿಯೊಂದಿಗೆ ಬಂದ ಜೆಡಿಎಸ್‌ ನ ೪೬ ಶಾಸಕರು ಹಾಗೂ ಬಿಜೆಪಿಯ ೭೯ ಶಾಸಕರು ಸೇರಿ ಬಿಜೆಪಿ ಜೆಡಿಎಸ್‌ ಮೈತ್ರಿಗೆ ಕುಮಾರ ಸ್ವಾಮಿ, ಯಡಿಯೂರಪ್ಪ ಕಾರಣರಾದರು. ೨೦ : ೨೦ ಸರ್ಕಾರದಲ್ಲಿ ಕುಮಾರ ಸ್ವಾಮಿ ಮುಖ್ಯಮಂತ್ರಿಯಾದರೇ, ಯಡಿಯೂರಪ್ಪ ಹಣಕಾಸು ಖಾತೆಯೊಂದಿಗೆ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದರು. ನಂತರ ಮೈತ್ರಿಯ ಒಪ್ಪಂದದಂತೆ ೧೨.೧೧.೨೦೦೭ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಮೂಲಕ ದಕ್ಷಿಣ ಭಾರತದಲ್ಲಿಯೇ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದರು.  ಜೆಡಿಎಸ್‌ ಬಿಜೆಪಿ ಮೈತ್ರಿ ನೋಡಿ ಇಡೀ ದೇಶದ ರಾಜಕೀಯ ವಲಯವೇ ಅಚ್ಚರಿಗೊಳಗಾಯ್ತು. ಇನ್ನು, ಈವರೆಗೆ ಸಾಮಾನ್ಯ ಒಬ್ಬ ಹೋರಾಟದ ಹಿನ್ನೆಲೆಯಿಂದ ಬಂದ ನಾಯಕ ಎಂದು ಬಿಂಬಿತಗೊಂಡಿದ್ದ ಯಡಿಯೂರಪ್ಪ, ಈ ರಾಜಕೀಯ ಕ್ರಾಂತಿಯಿಂದ ದೇಶಮಟ್ಟದಲ್ಲಿ ಒಬ್ಬ ರಾಜಕೀಯ ಚಾಣಾಕ್ಷನಾಗಿ ಗುರುತಿಸಿಕೊಂಡರು. ಅಲ್ಲಿಂದ ದಕ್ಷಿಣ ಭಾರತದಲ್ಲಿ, ಅದರಲ್ಲೂ ಪ್ರಮುಖವಾಗಿ ಕರ್ನಾಟಕದಲ್ಲಿ ಬಿಜೆಪಿ ಹೆಸರು ಹೆಚ್ಚು ಜನಜನಿತವಾಗುವುದಕ್ಕೆ ಪ್ರಾರಂಭವಾಯಿತು. 

೨೦೦೮ : ರಾಜ್ಯ ರಾಜಕಾರಣದ ಬದಲಾದ ದೆಸೆ :  ೨೦೦೬ರ ಹೋರಾಟ ಅನೇಕ ಏರಿಳಿತವನ್ನು ಕಾಣುವಂತೆ ಮಾಡಿತು. ೨೦೦೮ರ ವಿಧಾನ ಸಭಾ ಚುನಾವಣೆಯಲ್ಲಿಯೂ ಗೆಲ್ಲುವ ನಿರೀಕ್ಷೆಯಲ್ಲಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ, ೧೧೦ ಸ್ಥಾನಗಳನ್ನು ಗೆದ್ದು ಕೇವಲ ಮೂರು ಸ್ಥಾನಗಳ ಕೊರತೆಯಿಂದ ಅಧಿಕಾರದಿಂದ ದೂರ ಉಳಿಯುವಂತಾಯಿತು. ಮತ್ತೆ ಸುಮ್ಮನಾಗದ ಯಡಿಯೂರಪ್ಪ ಪಕ್ಷೇತರ ಶಾಸಕರನ್ನು, ಕಾಂಗ್ರೆಸ್‌ ಜೆಡಿಎಸ್‌ ಶಾಸಕರ ಮನಸೆಳೆದು ಆಪರೇಷನ್‌ ಕಮಲ ಮಾಡಿದ್ರು, ೧೬ ಉಪಚುನಾವಣೆಯಲ್ಲಿ ತನ್ನನ್ನು ನಂಬಿ ಬಂದವರನ್ನು ಗೆಲ್ಲಿಸಿದರು. ಈ ಮೂಲಕ ಉಪ ಚುನಾವಣೆಯಲ್ಲೂ ಗೆಲುವು ತಂದುಕೊಡುವ ಚಾಣಾಕ್ಷನಾಗಿ ಗುರುತಿಸಿಕೊಂಡರು. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಗಳಾದರು. 

ಇನ್ನು, ಯಡಿಯೂರಪ್ಪ ಹಾಗೂ ಬಿಜೆಪಿ ಆಡಳಿತದ ಮೇಲೆ ಸಾರ್ವಜನಿಕ ವಲಯದಿಂದ ಕಟುಟೀಕೆ ಕೇಳಲಾರಂಭಿಸಿತ್ತು. ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ, ಲೈಂಗಿಕ ಹಗರಣ ಮೊದಲಾದ ಆರೋಪಗಳಿಂದ ಬಿಜೆಪಿಯ ವರ್ಚಸ್ಸು ನೆಲಕಚ್ಚಿತ್ತು. ೨೦೦೮ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಹೆಮ್ಮೆ ಪಟ್ಟಿದ್ದ ಬಿಜೆಪಿ ರಾಷ್ಟ್ರೀಯ ನಾಯಕರು, ಕರ್ನಾಟಕದ ಹೆಸರು ಹೇಳಿದರೇ, ಉದಾಸೀನದಂತೆ ನೋಡುವಂತಹ ವಾತಾವರಣ ಸೃಷ್ಟಿ ಆಯ್ತು. 

ಮೂರು ಮುಖ್ಯಮಂತ್ರಿಗಳ ಸರ್ಕಾರ :  ಬಿಜೆಪಿ ಸರ್ಕಾರದ ಆರಂಭದಲ್ಲಿ ಮೂರು ವರ್ಷ ಎರಡು ತಿಂಗಳು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಆರೋಪ ಹೊತ್ತು ೩೧. ೦೭. ೨೦೧೧ರಲ್ಲಿ ರಾಜೀನಾಮೆ ನೀಡಿ, ಸೆರೆಮನೆಗೆ ಹೋಗುವಂತಾಯಿತು. ಬಳಿಕ ಮುಖ್ಯಮಂತ್ರಿಯಾದ ಡಿ. ವಿ. ಸದಾನಂದ ಗೌಡ ೧೧ ತಿಂಗಳು ೫ ದಿನ ಆಡಳಿತ ನಡೆಸಿ ಜಗದೀಶ್ ಶೆಟ್ಟರ್‌ ಗೆ ಜಾಗ  ಬಿಟ್ಟುಕೊಟ್ಟರು. ಇದು ಬಿಜೆಪಿ ಮೇಲೆ ಸಾರ್ವಜನಿಕ ವಲಯದಲ್ಲಿ ಸಿಟ್ಟೆಬ್ಬಿಸಿತ್ತು.     

ಈ ಸ್ಥಿತಿ ರಾಜ್ಯ ರಾಜಕಾರಣದಲ್ಲಿ ಮೊದಲಾದದ್ದಲ್ಲ ಎನ್ನುವುದು ಗಮನಾರ್ಹ. ೧೯೮೯ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೂಡ ಒಳಜಗಳ ಹಾಗೂ ಹಗರಣಗಳಿಂದ ಮೂರು ಮುಖ್ಯಮಂತ್ರಿಗಳನ್ನು ಕಂಡಿತ್ತು. ೧೯೮೯ರಲ್ಲಿ ವೀರೇಂದ್ರ ಪಾಟೀಲ ಸರಕಾರ ರಚಿಸಿದರು. ಹನ್ನೊಂದು ತಿಂಗಳಿಗೇ ಅವರನ್ನು ಬದಲಾಯಿಸಿ ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾದರು. ಉತ್ತಮವಾಗಿಯೇ ಆಡಳಿತ ನಡೆಸುತ್ತಿದ್ದ ಪಾಟೀಲರನ್ನು ಕೆಳಗಿಳಿಸಲು ಆನಾರೋಗ್ಯ ನೆಪ ಮಾಡಲಾಗಿತ್ತು ಎಂಬ ಚರ್ಚೆಗಳಾಗಿತ್ತು. ನಂತರ ಮುಖ್ಯಮಂತ್ರಿಯಾದ ಬಂಗಾರಪ್ಪನವರು ಕ್ಲಾಸಿಕ್ ಕಂಪ್ಯೂಟರ್ ಹಗರಣದಿಂದಾಗಿ ಎರಡು ವರ್ಷದಲ್ಲಿ ಅಧಿಕಾರ ಕಳೆದುಕೊಂಡರು. ಮುಖ್ಯಮಂತ್ರಿ ಸ್ಥಾನಕ್ಕೆ ವೀರಪ್ಪ ಮೊಯ್ಲಿ ಅವರನ್ನು ಆಯ್ಕೆ ಮಾಡಲಾಗಿತ್ತು ಎನ್ನುವುದು ಇಲ್ಲಿ ಗಮನಾರ್ಹ. 

ಇನ್ನು, ೨೦೧೩ ರಲ್ಲಿ ಬಿಜೆಪಿಯೊಂದಿಗಿನ ಭಿನ್ನಮತದಿಂದಾಗಿ ಯಡಿಯೂರಪ್ಪ ಕೆಜೆಪಿ ಕಟ್ಟಿದ್ರು. ಈ ಕಾರಣದಿಂದಾಗಿ ಬಿಜೆಪಿ ೪೦ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ೧೨೨ ಶಾಸಕರ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಸರ್ಕಾರದಲ್ಲಿನ  ಹಗರಣ, ಪಕ್ಷ ತೊರೆದ ಯಡಿಯೂರಪ್ಪರ ನಿರ್ಧಾರ ಬಿಜೆಪಿಗೆ ಮರ್ಮಾಘಾತವನ್ನೇ ನೀಡಿತ್ತು. ೨೦೧೮ರಲ್ಲಿ ಬಿಜೆಪಿ ೧೦೪ ಸ್ಥಾನಗಳು ಗಳಿಸಿದ್ದರೂ ೨೦೦೪ ರ ರಾಜಕೀಯ ಮತ್ತೆ ಮರುಕಳಿಸಿತ್ತು. ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಯ್ತು. ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಬಿಜೆಪಿ ಹೈಕಮಾಂಡ್‌ ರಾಜ್ಯದಲ್ಲಿ ಅಧಿಕಾರದ ಆಸೆ ಬಿಟ್ಟು ಕೂತಿತ್ತು. ಯಡಿಯೂರಪ್ಪ ಸೋಲೊಪ್ಪಲಿಲ್ಲ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ೨೮ ಲೋಕಸಭಾ ಕ್ಷೇತ್ರದಲ್ಲಿ ೨೫ ಸ್ಥಾನ ಬಿಜೆಪಿ ಗೆಲ್ಲುವಂತೆ ಮಾಡುವಲ್ಲಿ ಯಡಿಯೂರಪ್ಪ ಪಾತ್ರ ದೊಡ್ದದು. ಮೋದಿ ಹವಾ ಯಡಿಯೂರಪ್ಪರ ಮರ್ಯಾದೆ ಉಳಿಸಿತ್ತು. ಹೈಕಮಾಂಡ್‌ ಗೆ ಯಡಿಯೂರಪ್ಪರ ಮೇಲೆ ಹೊಸ ಭರವಸೆ ಹುಟ್ಟಿತು. ಯಡಿಯೂರಪ್ಪ ಕೇಳಿದ್ದಕ್ಕೆಲಾ ಅಸ್ತು ಎಂದಿತು. ೨೦೧೯ರ ಜುಲೈ ೨೬ರಂದು ಯಡಿಯೂರಪ್ಪ ಮತ್ತೆ ಅಚ್ಚರಿ ಹುಟ್ಟಿಸಿದ್ದರು ಕಾಂಗ್ರೆಸ್‌ ಜೆಡಿಎಸ್‌ ಸರ್ಕಾರದ ೧೭ ಶಾಸಕರನ್ನು ಓಲೈಸಿ ಮೈತ್ರಿ ತೊರೆಯುವಂತೆ ಮಾಡಿದರು. ಉಪಚುನಾವಣೆಯಲ್ಲಿ ೧೫ ಶಾಸಕರನ್ನು ಗೆಲ್ಲಿಸಿ ಸರ್ಕಾರ ರಚಿಸಿ ತನ್ನನ್ನ ನಂಬಿ ಬಂದ ೧೧ ಮಂದಿ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಿದರು. 

ಇದಾದ ಮೇಲೆ ನಡೆದ ರಾಜಕೀಯ ಹೈಡ್ರಾಮ ಗೊತ್ತಿರುವ ವಿಷಯ. ಯಡಿಯೂರಪ್ಪ ಪದತ್ಯಾಗ, ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಚ್ಚರಿಯ ಆಯ್ಕೆ, ಮತ್ತೆ ಭ್ರಷ್ಟಾಚಾರ, ಹಗರಣ, ಲೈಂಗಿಕ ಆರೋಪ. ಇಷ್ಟಾಗಿಯೂ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂಬ ಭರವಸೆಯಲ್ಲಿದೆ. ಇತ್ತ ಯಡಿಯೂರಪ್ಪ ಚುನಾವಣಾ ಕಣದಲ್ಲಿಲ್ಲ. ಬಿಜೆಪಿಯಲ್ಲಿ ಬಾಯಿ ತೆರೆದರೇ, ಗಲಾಟೆ ಎಬ್ಬಿಸುವ ಹರಕು ಬಾಯಿಯ ನಾಯಕರುಗಳಿದ್ದಾರೆ ಹೊರತಾಗಿ ಯಡಿಯೂರಪ್ಪರಂತೆ ಮೈತ್ರಿ ಕುದುರಿಸುವ ಚಾಣಾಕ್ಷತನ ಇರುವವರೂ ಇಲ್ಲ. ಇನ್ನು, ಈಗಾಗಲೇ, ಯಡಿಯೂರಪ್ಪ ಚುನಾವಣಾ ಕಣದಲ್ಲಿರುವಾಗಲೇ  ಬಿಜೆಪಿಗೆ ಬಹುಮತ ಬಂದಿಲ್ಲ. ಇನ್ನು ಬಂದೀತೇ..? ಎಂಬ ಚರ್ಚೆಯೂ ರಾಜಕೀಯ ಪಡಸಾಲೆಯಲ್ಲಿ ಎದ್ದಿದ್ದು, ಅಧಿಕಾರಕ್ಕಾಗಿ ಬಿಜೆಪಿ ಏನು ರಾಜಕೀಯ ಮಾಡಲಿದೆ ಎನ್ನುವುದು ಸದ್ಯದ ಕುತೂಹಲ. 

-ಶ್ರೀರಾಜ್‌ ವಕ್ವಾಡಿ  

 


Monday, March 6, 2023

19.20.21 : ಬದುಕುಳಿಯುವುದಕ್ಕೆ ಪ್ರಯತ್ನಿಸುವ ಉಸಿರನ್ನು ಹೊಸಕುವ ಕಥೆ

“19.20.21” ಸಿನೆಮಾ, ಈ ಸಮಾಜದ ವ್ಯವಸ್ಥೆಯ ಭಂಜನೆ, ನೆತ್ತರು, ಮೌನ, ಅಸಹಾಯಕತೆ, ಅಧಿಕಾರ ದರ್ಪ, ಆರೋಪ, ಅನ್ಯಾಯಗಳ ರಾಕ್ಷಸೀಯತೆ, ಗದ್ಗದಿತ ಧ್ವನಿ, ನೈರಾಶ್ಯದ ನಡುವಿನ ಆಶಾವಾದವನ್ನು ಈ ಸಮಾಜದ ಮುಖಕ್ಕೆ ರಾಚುವಂತೆ ತೋರಿಸಿದೆ. 

ಸಂವಿಧಾನದ ಅಡಿಯಲ್ಲಿ ಸ್ವಾತಂತ್ರ್ಯ ಸ್ವೀಕಾರದ ದೊಡ್ಡ ಭ್ರಮೆಯಲ್ಲಿಯೇ ಈ ಸಮಾಜದ ಘಾತುಕ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಂದಾಗಿದ್ದೇವೆ. ಸಮಾಜ ಮಾಡಿಕೊಳ್ಳಲೇ ಬೇಕಾದ ಒಂದು ಗಂಭೀರ ಆತ್ಮಾವಲೋಕಕ್ಕೆ ಈ ಸಿನೆಮಾ ದೂಡುತ್ತದೆ. ಕಥೆಯನ್ನು ದೃಶ್ಯ ರೂಪಕ್ಕೆ ತರುವ ಹೊತ್ತಿಗೆ ಕೆಲವೆಡೆ ಸಿನೆಮಾ ತಂಡ ಒಂದಿಷ್ಟು ತುಸು ಹೆಚ್ಚೇ ವೈಭವೀಕರಿಸಿರಬಹುದು ಎಂದು ನೋಡುಗರಿಗೆ ಅನ್ನಿಸಿದರೂ ಕೂಡ ಈ ಸಮಾಜ ಶೋಷಿತ ವರ್ಗಗಳ ಧ್ವನಿ ಅಡಗಿಸುವ ಪ್ರಯತ್ನದಲ್ಲಿಯೇ ಇಂದಿಗೂ ಇದೆ ಎನ್ನುವುದನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತಿಲ್ಲ. 

ಶೋಷಿತ ಮಲೆಕುಡಿಯ ಸಮುದಾಯ ಒಂದೆಡೆಯಾದರೇ, ಇನ್ನೊಂದೆಡೆ ಆ ನೋವಿಗೆ ಧ್ವನಿಯಾಗುವ ಪಾತ್ರಗಳು ಚಿತ್ರದುದ್ದಕ್ಕೂ ಈ ಸಮಾಜದ ಬಗ್ಗೆ ಚಿಂತನೆಗೊಡ್ಡುತ್ತವೆ. ಈ ಸಮುದಾಯದ ನತದೃಷ್ಟ ಬದುಕಿನ ಸಂಕಷ್ಟ ಪುಟಗಳಿಗೆ ಈ ಸಿನೆಮಾ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದೆ. ಸಿನೆಮಾದ ಮೊದಲರ್ಧದಲ್ಲಿ ನಕ್ಸಲ್‌ ನಿಗ್ರಹ ದಳದವರು ಈ ಅಮಾಯಕ ಜನಾಂಗದವರ ಮೇಲೆ ಕಾನೂನು ಹೇರುವ ಧೋರಣೆ, ನೀಡುವ ಅಮಾನುಷ ಹಿಂಸೆ, ಅಧಿಕಾರ ವರ್ಗದವರು ನುಂಗುಬಾಕತನ, ವಾಸ್ತವದ ಅಸಹಾಯಕತೆ, ಬದುಕಿ ಉಳಿಯುವುದಕ್ಕೆ ಪ್ರಯತ್ನಿಸುವ ಇಂತಹ ಬುಡಕಟ್ಟು ಜನಾಂಗಗಳ ಉಸಿರನ್ನು ಹೊಸಕಿ ಹಾಕುವ ಕಾನೂನಿನ, ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯತೆ ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆಗಳ ಬಗೆಗೆ ಹಾಗೂ ಆದಿವಾಸಿಗಳ ಬಗ್ಗೆ ನಮ್ಮ ಈವರೆಗಿನ ತಿಳುವಳಿಕೆಯನ್ನು ತಿರುಗಿ ನೋಡುವಂತೆ ಮಾಡುತ್ತದೆ.   

ಈ ನೆಲದ ಕೆಲವು ಕಾನೂನುಗಳು ಅರಣ್ಯವಾಸಿಗಳ ಹಕ್ಕುಗಳನ್ನೇ ಅಪಾಯಕ್ಕೀಡು ಮಾಡಿವೆ, ಅರಣ್ಯವಾಸಿಗಳನ್ನು ಅವರ ಪಾರಂಪರಿಕ ಜೀವನ ಪದ್ಧತಿ ಹಾಗೂ ತಲೆತಲೆಮಾರುಗಳಿಂದ ಬದುಕಿ ಬಂದಿರುವ ವಾಸಸ್ಥಾನಗಳಿಂದ ಒಕ್ಕಲೆಬ್ಬಿಸುವ ಆದೇಶಗಳು ನೂರಾರು ಕುಟುಂಬಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿರುವುದನ್ನು ಈ ದೇಶದ ಉದ್ದಗಲಕ್ಕೂ ಕಂಡಿದ್ದೇವೆ. ಇಂತಹ ಜನಾಂಗಗಳ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಜೀವನಪೂರ್ತಿ ಸಂಕಷ್ಟದಲ್ಲಿಯೇ ಬದುಕುವ ಹಾಗೆ ಈ ವ್ಯವಸ್ಥೆಯ ಅಧಿಕಾರಿ ವರ್ಗ ಮಾಡಿದೆ ಎನ್ನುವುದನ್ನು ಕೂಡ ಈ ಸಿನೆಮಾ ಮಾರ್ಮಿಕವಾಗಿ ತೋರಿಸಿಕೊಟ್ಟಿದೆ.  

ಸಿನೆಮಾ ಪರಿಣಾಮಕಾರಿಯಾಗಿ ಮೂಡಿಬಂದಿದೆ. ದೀರ್ಘ ಮೌನ ಹಾಗೂ ಸೂಕ್ಷ್ಮ ಸಂವೇದನೆಗೆ ಒಳಪಡಿಸುವ ಈ ಸಿನೆಮಾ ಇಂತಹ ಕೆಳಸ್ತರದಲ್ಲಿರುವ ಸಮುದಾಯಗಳ ಬಗ್ಗೆ ಒಂದು ಗಂಭೀರ ಚಿಂತನೆಯತ್ತ ಚಿತ್ತ ಹರಿಸುತ್ತದೆ. ಸ್ಥಳೀಯ ರಾಜಕೀಯ ಹಾಗೂ ನಕ್ಸಲ್‌ ರಾಜಕೀಯಗಳ ನಡುವಿನ ಸಂಘರ್ಷದಲ್ಲಿ ಸಿಲುಕುವ ಒಂದು ಅಮಾಯಕ ಸಮುದಾಯ ಹಾಗೂ ಅದು ಕಾಣುವ ಹಿಂಸೆ ನಿಜಕ್ಕೂ ಅಸಹನೀಯ. ದ್ವಿತಿಯಾರ್ಧದಲ್ಲಿ ಕೈಗೆ ಕೊಳ ಹಾಕಿ ಮಂಜುವಿನಿಂದ ಪರೀಕ್ಷೆ ಬರೆಸುವ ದೃಶ್ಯದಿಂದ ಹಿಡಿದು, ಸತ್ಯವನ್ನು ಸುಳ್ಳು ಮಾಡುವುದಕ್ಕೆ ಪೋಲಿಸರು ಹೆಣೆಯುವ ತಂತ್ರ, ಕಾನೂನಿನ ತಡೆ, ಕಾನೂನಿನ ಹೋರಾಟ ಸೇರಿ ಬಹುತೇಕ ಎಲ್ಲಾ ದೃಶ್ಯಗಳೂ ಎದೆಯೊಳಗೆ ಕಿಚ್ಚೆಬ್ಬಿಸುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ವಕೀಲ ಸುರೇಶ್‌ ಹೆಗ್ಡೆಯ(ಬಾಲಾಜಿ ಮನೋಹರ್)  ವೃತ್ತಿನಿಷ್ಠೆ, ಪತ್ರಕರ್ತ ವಿಜಯ್‌ ನ (ವೆಂಕಟೇಶ್‌ ಪ್ರಸಾದ್)  ಸಾಮಾಜಿಕ ಜವಾಬ್ದಾರಿ, ಸಾಮಾಜಿಕ ಹೋರಾಟಗಾರ ರಫೀಯ (ರಾಜೇಶ್‌ ನಟರಂಗ) ಸ್ಥಿತಪ್ರಜ್ಞೆಯೊಳಗೆ ನೋಡುಗನೊಬ್ಬ ಒಂದಾಗುವಂತೆ ಮಾಡುತ್ತದೆ. ಪಾತ್ರಧಾರಿಗಳು ಹಾಗೂ ಸತ್ಯ ಘಟನೆಯ ಈ ಮೂರು ಪಾತ್ರಗಳು ಕೂಡ ಇಂತಹ ಅವ್ಯವಸ್ಥೆಯ ಸಮಾಜದೊಳಗೆ ಅಚ್ಚರಿಯೊಂದಿಗೆ ಮನಸ್ಸಿನಲ್ಲಿ ಎಚ್ಚರದ ಪ್ರಜ್ಞೆಯಾಗಿ ಉಳಿದು ಬಿಡುತ್ತಾರೆ. ಕಥಾನಾಯಕ ಮಂಜು (ಶೃಂಗ ಬಿ.ವಿ), ನಾಯಕನ ತಂದೆ (ಮಹಾದೇವ್ ಹಡಪದ), ರತ್ನಮ್ಮ (ಎಂ ಡಿ. ಪಲ್ಲವಿ) ಪಾತ್ರಗಳು ತಮಗಿರುವ ಮಿತಿಯೊಳಗೆ ಜೀವ ತುಂಬಿಸಿಕೊಂಡಿವೆ.  

ಕನ್ನಡ ಸಿನೆಮಾ ರಂಗದಲ್ಲಿ ಇಂತಹ ಪ್ರಯೋಗಗಳು ಇತ್ತೀಚೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಆಶಾದಾಯಕ. ಕಥೆಯನ್ನು ದೃಶ್ಯರೂಪಕ್ಕೆ ತರುವುದು ಅಷ್ಟು ಸುಲಭವಲ್ಲ. ಈ ನೈಜ ಘಟನಾಧಾರಿತ ಸಿನೆಮಾದ ಮೂಲಕ ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿರುವ ಇಂತಹ ಅದೆಷ್ಟೋ ಸಮುದಾಯಗಳ ಕೆಟ್ಟ ಸ್ಥಿತಿಯ ಬಗ್ಗೆ ಸಮಾಜಕ್ಕೆ ನೆನಪಿಸಿಕೊಡುವಂತೆ ನಿರ್ದೇಶಕ ಮಂಸೋರೆ ಮತ್ತು ಟೀಂ ಮಾಡಿದೆ. ಸಮಾಜ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ.  ಗಂಭೀರ ಮನಸ್ಥಿತಿಯ ಪ್ರತಿರೂಪವಾಗಿ ಮೂಡಿಬಂದ ಈ ಕಥಾವಸ್ತು ಎಲ್ಲಿಯೂ ನೋಡುಗನ ಕುತೂಹಲವನ್ನು ಅಲುಗಾಡಿಸುವುದಿಲ್ಲ. ಇನ್ನು, ಟೀಕೆಗೆ ಅವಕಾಶ ಕೊಡದೇ ಈ ಸಿನೆಮಾ ಆತ್ಮಾವಲೋಕನಕ್ಕೆ ದೊಡ್ಡ ಅವಕಾಶ ಮಾಡಿಕೊಡುತ್ತದೆ ಎನ್ನುವುದು ಗರಿಷ್ಠೀಕರಣವಲ್ಲ. 

-ಶ್ರೀರಾಜ್‌ ವಕ್ವಾಡಿ 


Wednesday, March 1, 2023

ಕಾಂಗ್ರೆಸ್ ನೇತೃತ್ವದ ಚುನಾವಣಾ ಮೈತ್ರಿ ಒಂದು ಮರೀಚಿಕೆ ?


ಅಧಿಕಾರದಲ್ಲಿ ಹೆಚ್ಚು ಪಾಲು ನೀಡುವವರತ್ತ ಪ್ರಾದೇಶಿಕ ಪಕ್ಷಗಳ ಚಿತ್ತ !

೨೦೨೪ ರ ಲೊಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದು, ಬಿಜೆಪಿ ವಿರುದ್ಧ ದಿನದಿಂದ ದಿನಕ್ಕೆ ಮಹಾ ಒಕ್ಕೂಟದ ಕೂಗು ಪ್ರಬಲವಾಗುತ್ತಿದೆ. ಕೆಲವು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಿಗಾಗಿ ಕಾಂಗ್ರೆಸ್ ಪಕ್ಷದ ಮುಂದಾಳತ್ವಕ್ಕೆ ಕಾಯುತ್ತಿದ್ದರೇ, ಇನ್ನು ಕೆಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೇಸೇತರ ಮುಂದಾಳತ್ವವನ್ನು ಬಯಸುತ್ತಿವೆ ಎನ್ನುವುದು ಸದ್ಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿರುವ ವಿಷಯ. 

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಗೆ ಕೆಲವು ಪ್ರಮುಖ ರಾಜಕೀಯ ಪಕ್ಷಗಳು ಒಲ್ಲೆ ಎಂದಿದ್ದವು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಕಳೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ, ಹಲವು ರಾಜಕೀಯ ಬೃಹನ್ನಾಟಕಗಳಾದ ಮೇಲೆ ತೃಣಮೂಲ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಬಿಜೆಪಿ ವಿರುದ್ಧ ಒಗ್ಗೂಡುವ ರಾಜಕೀಯ ಬಣದ ಮುಂದಾಳು ಎಂದು ಬಿಂಬಿಸಲಾಗಿತ್ತು, ಅದಾಗ್ಯೂ ಹಲವು ಬಾರಿಯ ರಾಷ್ಟ್ರ ರಾಜಧಾನಿಯ ಭೇಟಿ, ಹೈ ಲೆವೆಲ್ ಮೀಟಿಂಗ್ ಗಳ ನಂತರ ಆ ವಿಚಾರ ದೂರ ಸರಿಯಿತು. ಕಾಂಗ್ರೆಸ್ ತಾನೇ ಮುಂದಾಳತ್ವ ವಹಿಸಿಕೊಳ್ಳುವುದಾಗಿ ಹಠ ಹಿಡಿಯಿತು. ತೃಣ ಮೂಲ ಕಾಂಗ್ರೆಸ್ ಸೇರಿ ಹಲವು ರಾಜಕೀಯ ಪಕ್ಷಗಳ ಅಭಿಪ್ರಾಯ ಭಿನ್ನವಾಗಿತ್ತು. 

ಇದೇ ರೀತಿ ಬಿಹಾರದಲ್ಲಿ ಬಿಜೆಪಿ ವಿರುದ್ಧ ಜಯ ಸಾಧಿಸಿ ಆರ್ ಜೆ ಡಿ ಜೊತೆಗೆ ಮೈತ್ರಿ ಮಾಡಿ ಸರ್ಕಾರ ರಚಿಸಿದಾಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬಿಜೆಪಿ ವಿರೋಧಿ ರಾಜಕೀಯ ಮೈತ್ರಿಗೆ ನೇತಾರ ಎಂದು ಬಿಂಬಿಸಲಾಯಿತು. ನಿತೀಶ್ ಕುಮಾರ್ ಕಾಂಗ್ರೆಸ್ ತೀರ್ಮಾನಕ್ಕೆ ಕಾದು ಕುಳಿತರಾದರೂ, ಕಾಂಗ್ರೆಸ್ ಈ ಬಗ್ಗೆ ಹೆಚ್ಚು ಮನಸ್ಸು ಮಾಡಲಿಲ್ಲ. ಈ ವಿಚಾರವೂ ದೂರ ಸರಿಯಿತು. 

ಕಾಂಗ್ರೆಸ್ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಸ್ಪರ್ಧಿಸಲು ಹೆಣೆದ ದೊಡ್ಡ ಪಬ್ಲಿಕ್ ಈವೆಂಟ್ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದ ಉದ್ದಗಲಕ್ಕೂ ಸರಿಸುಮಾರು ೪೧೦೦ ಕಿಲೋ ಮೀಟರ್ ಸಾಗಿತ್ತು. ಕಾಂಗ್ರೆಸ್ ದೊಡ್ಡ ಮಟ್ಟಿಗೆ ರಾಜಕೀಯವಾಗಿ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಿತ್ತು. ಮೇಲ್ನೋಟಕ್ಕೆ ಯಾತ್ರೆ ಸಾಗಿದಲ್ಲೆಲ್ಲಾ ಜನರ ಅಭೂತಪೂರ್ವ ಬೆಂಬಲ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ದೊರಕಿತ್ತಾದರೂ ರಾಹುಲ್ ಹಾಗೂ ಕಾಂಗ್ರೆಸ್ ನ ನಿಜ ಉದ್ದೇಶ ಅಷ್ಟಾಗಿ ಫಲಿಸಲಿಲ್ಲ. ರಾಹುಲ್ ಗಾಂಧಿ ಇಡೀ ದೇಶದ ರಾಜಕೀಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ತಮ್ಮ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಂಡರು ಮತ್ತು ಧ್ವನಿ ಕಳೆದುಕೊಂಡ ವರ್ಗಕ್ಕೆ ಧ್ವನಿಯಾಗುವ ಪ್ರಯತ್ನ ಮಾಡಿದರು. ಆದರೇ, ಕಾಂಗ್ರೆಸ್ ನ ಈ ಪಬ್ಲಿಕ್ ಈವೆಂಟ್ ಭಾರತದುದ್ದಕ್ಕೂ ಪ್ರಾದೇಶಿಕ ಪಕ್ಷಗಳನ್ನು ಓಲೈಸುವಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ ಎನ್ನುವುದು ಅಷ್ಟೇ ಸತ್ಯ. ಕಾಶ್ಮೀರದ ಕೆಲವು ಪ್ರಮುಖ ನಾಯಕರು ಹಾಗೂ ತಮಿಳುನಾಡಿನ ಮಕ್ಕಳ್ ನೀಧಿ ಮೈಯಂ ಪಕ್ಷದ ಕಮಲ್ ಹಾಸನ್ ಸೇರಿ ಕೆಲವು ಪ್ರಮುಖರನ್ನು ಹೊರತಾಗಿ ಇತರೆ ರಾಜಕೀಯ ಪಕ್ಷಗಳ ಪ್ರಭಾವಿ ನಾಯಕರಿಗೆ ರಾಹುಲ್ ಖುದ್ದಾಗಿ ಆಹ್ವಾನ ಇತ್ತಿದ್ದರೂ ಕೂಡ, ಮತ್ಯಾರು ರಾಹುಲ್ ಗಾಂಧಿಗೆ ಯಾತ್ರೆಯಲ್ಲಿ ಬೆಂಬಲ ಸೂಚಿಸಿಲ್ಲ. ಇದು ರಾಹುಲ್ ಗಾಂಧಿ ಒಂದು ರೀತಿಯಲ್ಲಿ ಮುಖಭಂಗವಾಯ್ತು. 

ಹಾಗಾದರೇ ಈ ವಿರೋಧ ಪಕ್ಷಗಳ ಮೈತ್ರಿ ಒಂದು ಮರೀಚಿಕೆಯೇ ? ಅಥವಾ ಮೋದಿಯನ್ನು ರಾಜಕೀಯವಾಗಿ ಮಣಿಸುವ ಘನ ಉದ್ದೇಶದಿಂದ ವಿರೋಧ ಪಕ್ಷಗಳು ರಹಸ್ಯವಾಗಿ ಮೈತ್ರಿ ರೂಪು ಪಡೆಯುತ್ತಿವೆಯೇ ಎನ್ನುವುದು ೨೦೨೪ರ ಲೋಕಸಭಾ ಚುನಾವಣೆಯ ಮುಂದಿರುವ ಕುತೂಹಲಕಾರಿ ಪ್ರಶ್ನೆ. ಒಂದು ವೇಳೆ ರಾಜಕೀಯವಾಗಿ ಬಿಜೆಪಿಯನ್ನು ಶತಾಯಗತಾಯ ಸೋಲಿಸುವ ಉದ್ದೇಶದಿಂದ ವಿರೋಧ ಪಕ್ಷಗಳು ಒಂದಾದರೇ, ಬಹುಶಃ ರಾಜಕೀಯದ ಇತಿಹಾಸದಲ್ಲೊಂದು ದಿನ ಒಂದು ರಾಷ್ಟ್ರೀಯ ಪಕ್ಷದ ವಿರುದ್ಧವಾಗಿ ವಿರೋಧ ಪಕ್ಷಗಳು ಒಂದಾದದ್ದನ್ನು ಈ ದೇಶ ಅಚ್ಚರಿಯಾಗಿ ಕಾಣಬಹುದು. ಇನ್ನು, ಈ ಹಿಂದೆಯೂ ದೇಶದ ಇತಿಹಾಸದಲ್ಲಿ ಒಂದು ರಾಜಕೀಯ ಸಿದ್ಧಾಂತದ ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡಿದ್ದು ಇದೆ (೧೯೬೭. ೧೯೭೭, ೧೯೮೯ರಲ್ಲಿ ವಿರೋಧ ಪಕ್ಷಗಳು ಸೇರಿಕೊಂಡು ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಉರುಳಿಸುವುದಕ್ಕೆ ಬೇಕಾದ ಎಲ್ಲಾ ತಂತ್ರಗಳನ್ನು ಹೂಡಿದ್ದವು) ಆದರೂ, ಈ ಮಟ್ಟಿಗೆ ಆಡಳಿತ ವಿರುದ್ಧಕ್ಕಾಗಿ ಹುಟ್ಟಿಕೊಂಡ ಮೈತ್ರಿ ಇಲ್ಲ. ಅಂದಿನ ಸನ್ನಿವೇಶಕ್ಕೂ ಇಂದಿನ ಸನ್ನಿವೇಶಕ್ಕೂ ವ್ಯತ್ಯಾಸಗಳಿವೆ ಎನ್ನುವುದು ಗಮನಾರ್ಹ. ಹಾಗಾಗಿ ದೇಶ ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳ ನಡುವೆ ರಾಜಕೀಯ ಅಸ್ಥಿರತೆ ಇರುವ ಸಂದರ್ಭದಲ್ಲಿ ಮೈತ್ರಿ ಆದರೇ ಮತ್ತು ಗೆದ್ದರೇ, ಈ ದೇಶದ ಇತಿಹಾಸದಲ್ಲಿ ಒಂದು ರಾಜಕೀಯ ಅಚ್ಚರಿಯಾಗಬಹುದು. 

ಒಂದಿಷ್ಟು ಹಿಂದಕ್ಕೆ ಹೋಗೋಣ, ೧೯೬೭ರಲ್ಲಿ ಕಾಂಗ್ರೆಸ್ ಅಜೇಯ ಏಂದು ಭಾವಿಸಿದ್ದಾಗ, ವಿರೋಧ ಪಕ್ಷಗಳ ಮೈತ್ರಿ ಅಸಾಧ್ಯವಾದದ್ದನ್ನು ಮಾಡಿ ತೋರಿಸಿತ್ತು, ಅಂದು ವಿರೋಧ ಪಕ್ಷಗಳು ಒಂಬತ್ತು ರಾಜ್ಯಗಳಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ನನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ೧೯೭೭ರಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋತಿತು. ೧೯೮೯ರಲ್ಲಿ ಲೋಕಸಭೆಯಲ್ಲಿ ೪೦೦ಕ್ಕೂ ಹೆಚ್ಚು ಸಂಸದೀಯ ಸ್ಥಾನಗಳನ್ನು ಹೊಂದಿದ್ದ ಸರ್ಕಾರವು ಬೋಫೋರ್ಸ್ ಹಗರಣದ ಕಾರಣದಿಂದ ಹೀನಾಯ ಸೋಲು ಅನುಭವಿಸಿತ್ತು. 

ಇಂದು ಕಾಂಗ್ರೆಸ್ ಚಕ್ರಾಧಿಪತ್ಯದಲ್ಲಿದ್ದ ದೇಶವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಭಾರತ ರಾಜಕೀಯವಾಗಿ, ಸಾಮಾಜಿಕವಾಗಿ, ಸೈದ್ಧಾಂತಿಕವಾಗಿ ಬದಲಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯದ ಮೂಲ ಮಾದರಿಯು ಟೆಕ್ನೋನಿಕ್ ಶಿಫ್ಟ್ ಅನ್ನು ಕಂಡುಕೊಂಡಿದೆ. ಒಂದೆಡೆ ಆಡಳಿತ ವ್ಯವಸ್ಥೆ ಪೂರ್ತಿ ಸೈದ್ಧಾಂತಿಕವಾದಾಗ, ಇನ್ನೊಂದೆಡೆ ವಿರೋಧ ಬಣ ಅದರ ಸಿದ್ಧಾಂತವನ್ನು ಕಿತ್ತೆಸೆಯುವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಬೆಳೆದಿದೆ. ಬಿಜೆಪಿ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿಕೊಳ್ಳುವ ಪಕ್ಷಗಳು ಭಿನ್ನಾಭಿಪ್ರಾಯಗಳಿಂದ ಕೂಡಿದೆ. ಬಹುತೇಕ ಪ್ರಾದೇಶಿಕ ವಿರೋಧಿ ರಾಜಕೀಯ ಪಕ್ಷಗಳ ನಾಯಕರಿಗೆ ರಾಷ್ಟ್ರೀಯ ದೃಷ್ಟಿಕೋನ ಇಲ್ಲ, ಹಿಂದಿನ ಪ್ರಮುಖ ಮೂರು ರಾಜಕೀಯ ಸ್ಟ್ರೀಮ್ ಗಳು - ಜನಸಂಘ ಮತ್ತು ನಂತರ ಬಿಜೆಪಿ, ಸಮಾಜವಾದಿ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ಬದಲಾಯಿಸಲು ಹೋರಾಡುತ್ತಿದ್ದವು. ಭಾರತದ ಬಗ್ಗೆ ಅವು ಸ್ಪಷ್ಟವಾದ ಸೈದ್ಧಾಂತಿಕ ತಿಳುವಳಿಕೆಯನ್ನು ಹೊಂದಿದ್ದವು. ರಾಜಕೀಯ ಸಿದ್ಧಾಂತಗಳಲ್ಲಿ ಸ್ಪಷ್ಟ ದೃಷ್ಟಿ ಇತ್ತು. ಭಾರತದ ಭವಿಷ್ಯಕ್ಕಾಗಿ ಅವರ ದೃಷ್ಟಿಕೋನಗಳಲ್ಲಿ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಎಲ್ಲಾ ಪಕ್ಷಗಳು ಮತ್ತು ಅವರ ನಾಯಕರು ಕಾಂಗ್ರೆಸ್ ಪಕ್ಷವನ್ನು ಮಣಿಸಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಬೇಕು ಎಂಬ ಸಾಮಾನ್ಯ ನಿಲುವನ್ನು ಹೊಂದಿದ್ದರು. ಆ ಒಮ್ಮತ ಇಂದು ಕಾಣೆಯಾಗಿದೆ. ಈಗ ಮೈತ್ರಿಗೆ ತಯಾರಾಗುತ್ತಿರುವ ಯಾವ ಪಕ್ಷಗಳಿಗೂ ತಮ್ಮ ಕನಸಿನ ಭಾರತದ ಬಗ್ಗೆ ಸ್ಪಷ್ಟ ಕಲ್ಪನೆಯೇ ಇಲ್ಲ. ಅಧಿಕಾರವನ್ನು ವಶಪಡಿಸಿಕೊಳ್ಳುವುದು ಮತ್ತು ಸರ್ಕಾರಗಳನ್ನು ರಚಿಸುವುದು ಅವರ ಪ್ರಾಥಮಿಕ ಗುರಿಯಾಗಿದೆ.  

ಇನ್ನು ಮುಲಾಯಂ ಸಿಂಗ್ ಯಾದವ್ (ಸಮಾಜವಾದಿ ಪಕ್ಷ), ಲಾಲೂ ಪ್ರಸಾದ್ ಯಾದವ್ (ರಾಷ್ಟ್ರೀಯ ಜನತಾ ದಳ), ಬಾಳಾ ಸಾಹೇಬ್ ಠಾಕ್ರೆ (ಶಿವಸೇನೆ), ವೈ ಎಸ್ ರಾಜಶೇಖರ್ ರೆಡ್ಡಿ (ಕಾಂಗ್ರೆಸ್ ಪಕ್ಷ. ಮಗ ವೈ ಎಸ್ ಜಗನ್ಮೋಹನ್ ರೆಡ್ಡಿ ಈಗ ವೈ ಎಸ್ ಆರ್ ಕಾಂಗ್ರೆಸ್ ಪಾರ್ಟಿಯ ಮುಖ್ಯಮಂತ್ರಿ) ಬಿಜು ಪಟ್ನಾಯಕ್ (ಜನತಾ ದಳ), ಎಂ ಕೆ ಕರುಣಾನಿಧಿ (ಡಿಎಂ.ಕೆ), ಶಿಬು ಸೋರೆನ್ (ಜಾರ್ಖಾಂಡ್ ಮುಕ್ತಿ ಮೋರ್ಚಾ), ದೇವೇ ಗೌಡ (ಜೆಡಿಎಸ್ ), ಫಾರೂಖ್ ಅಬ್ದುಲ್ಲಾ (ಜಮ್ಮು & ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ), ಮುಫ್ತಿ ಮೊಹಮ್ಮದ್ ಸಯ್ಯದ್ (ಜಮ್ಮು & ಕಾಶ್ಮೀರ ಪೀಪಲ್ಸ್ ಡೆಮೊಕ್ರೆಟಿಕ್ ಪಾರ್ಟಿ) ಇವರೆಲ್ಲಾ ಈ ದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಂದಲೇ ರಾಜಕೀಯ ಧೀಮಂತರೆನ್ನಿಸಿಕೊಂಡವರು. ಒಂದು ಥರದಲ್ಲಿ ಐಡಿಯಾಲಜಿ ಇವರ ಬಲವಲ್ಲ, ಪ್ರಾದೇಶಿಕ ಅಧಿಕಾರವೇ ಪ್ರೇರಕ ಶಕ್ತಿ. ಇವರದ್ದು ಮತ್ತಿವರ ಮಕ್ಕಳ ಭವಿಷ್ಯವನ್ನು ಅಧಿಕಾರ ಮತ್ತು ಕನ್ವಿಕ್ಷನ್ ಅವರ ರಾಜಕೀಯ ವ್ಯಾಖ್ಯಾನಿಸುವುದರಿಂದ ತಮ್ಮೊಂದಿಗೆ ಅಧಿಕಾರದ ಮೈತ್ರಿ ಮಾಡಿಕೊಳ್ಳಬಹುದಾದ ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಿದ್ಧರಿರುವವರು. ಇವರ ದೃಷ್ಟಿಯಲ್ಲಿ ಮೋದಿ ಹಾಗೂ ರಾಹುಲ್ ಗಾಂಧಿ ಇಬ್ಬರೂ ಒಂದೇ. ಅಧಿಕಾರದಲ್ಲಿ ಹೆಚ್ಚಿನ ಪಾಲುದಾರಿಕೆ ನೀಡುವವರು ಅವರ ಮೈತ್ರಿಯಾಗುತ್ತಾರೆ.  

ಇನ್ನು, ಮಾಯಾವತಿ ಮೋದಿ ಸರ್ಕಾರದ ಬಗ್ಗೆ ಮೃದು ಧೋರಣೆ ಇದೆ ಎಂಬ ವದಂತಿಗಳಿವೆ. ಮೋದಿ ವಿರುದ್ಧ ಹಗೆತನ ಮೆರೆದಿದ್ದ ಮಮತಾ ಬ್ಯಾನರ್ಜಿ ನಿಲುವು ಅಸ್ಪಷ್ಟ. ನವೀನ್ ಪಟ್ನಾಯಕ್ ಒಡಿಶಾದಲ್ಲಿ ಸಂತೋಷವಾಗಿದ್ದಾರೆ, ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿಗೆ ಮೋದಿ ಬಗ್ಗೆ ಮೃದು ಧೊರಣೆ ಇದೆ. ಕೇಜ್ರಿವಾಲ್ ಅವರು ತಮ್ಮ ರಾಜ್ಯಗಳಲ್ಲಿ ಅಸ್ತಿತವದಲ್ಲಿರಬೇಕಾದರೇ, ಬಿಜೆಪಿ ವಿರುದ್ಧ ಹೋರಾಡಬೇಕು. ಆದರೆ ಭವಿಷ್ಯದಲ್ಲಿ ರಾಜಿಗೆ ತೆರೆದ ಬಾಗಿಲು ಅನ್ನಿಸುತ್ತದೆ. ಕರ್ನಾಟಕದಲ್ಲಿ  ಕುಮಾರಸ್ವಾಮಿ ಮತ್ತು ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಈ ಹಿಂದೆ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡಿದ್ದಾರೆ. ಶರದ್ ಪವಾರ್ ೨೦೧೪ ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವನ್ನು ಉಳಿಸಲು ಸಹಾಯ ಮಾಡಿದರು. ಮೆಹಬೂಬಾ ಮುಫ್ತಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದರು.  

ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಕುತೂಹಲ ಕೆರಳಿಸಿದೆ. ಆದರೆ ಕೆಲವು ರಾಜ್ಯಗಳಲ್ಲಿ ಕೆಲವು ಸ್ಥಾನಗಳನ್ನು ಹೊರತುಪಡಿಸಿ, ಬಿಜೆಪಿ ವಿರುದ್ಧ ಏಕಾಂಗಿಯಾಗಿ ಗಣನೀಯವಾದ ಬದಲಾವಣೆ ತರಲಿದೆ ಎಂಬ ಸ್ಥಿತಿಯಲ್ಲಿಲ್ಲ. ಕಾಂಗ್ರೆಸ್ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಫೆಡರಲಿಸಂ ಬಗ್ಗೆ ಮಾತನಾಡುತ್ತದೆ, ಆದರೆ ಈ ವಿಷಯಗಳ ಬಗ್ಗೆ ಸಿದ್ಧಾಂತಗಳಲ್ಲಿ ಸ್ಪಷ್ಟತೆಯ ಕೊರತೆ ಕಾಂಗ್ರೆಸ್ ನಲ್ಲಿ ಎದ್ದು ಕಾಣುತ್ತದೆ. 

ಒಟ್ಟಿನಲ್ಲಿ, ವಿರೋಧ ಪಕ್ಷಗಳ ಮೈತ್ರಿಯ ವಿಷಯ ಜಟಿಲವಾದಂತಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಗೆ ಪ್ರಾದೇಶಿಕ ಪಕ್ಷಗಳ ನಿಲುವೇನು ?, ಬಿಜೆಪಿಯ ಅಸ್ತ್ರವೇನು..? ರಾಜಕೀಯ ಪಾಲುದಾರಿಕೆಯ ಗುಟ್ಟೇನು? ಮುಂದಿನ ಲೋಕಸಭಾ ಚುನಾವಣೆಯೊಳಗಾಗಿ ರಾಜಕೀಯದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದು ಸದ್ಯದ ಕುತೂಹಲ.  

-ಶ್ರೀರಾಜ್ ವಕ್ವಾಡಿ 


 


Wednesday, February 22, 2023

ನೈತಿಕ ಸೈಬರ್ ಟೂಲ್ ಗಿರಿಯಲ್ಲಿ ಕೇಂದ್ರ ಸರ್ಕಾರ ಭಾಗಿ !?!


 (ಸಾಂದರ್ಭಿಕ ಚಿತ್ರ)

ಸುಳ್ಸುದ್ದಿಗಳನ್ನು ಹಬ್ಬುವ ಟೀಮ್ ಜಾರ್ಜ್ ಜತೆಗೆ ಕೇಂದ್ರ ಸರ್ಕಾರಕ್ಕೆ ಸಂಬಂಧ..? 

ಕೇಂದ್ರ ಸರ್ಕಾರದ ವಿರುದ್ಧ ಇಸ್ರೇಲ್ ಮೂಲದ ಪೆಗಾಸಸ್ ಬೇಹುಗಾರಿಕೆ ಉಪಕರಣಗಳನ್ನು ಬಳಸಿದ ಆರೋಪ ಮಾಡಿದ ಅಂತರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಈಗ ಮತ್ತೊಂದು ತನಿಖಾ ವರದಿಯೊಂದನ್ನು ಹೊರಗೆ ಹಾಕಿದ್ದು, ಇಸ್ರೇಲ್ ನ ಮಿಲಿಟರಿ ಏಜೆನ್ಸಿಗಳ ತಂಡ ಟೀಮ್ ಜಾರ್ಜ್ ಅಮೆರಿಕಾ, ಬ್ರಿಟನ್, ಕೆನಡಾ, ಜರ್ಮನಿ, ಸ್ವಿಜರ್ ಲ್ಯಾಂಡ್, ಮೆಕ್ಸಿಕೋ, ಸೆನೆಗಲ್ ಸೇರಿ ಭಾರತ ಹಾಗೂ ಯುಎಇಗಳಲ್ಲಿ ನಕಲಿ ಸಾಮಾಜಿಕ ಜಾಲತಾಣಗಳ ಮೂಲಕ ಚುನಾವಣಾ ಪ್ರಚಾರಾಂದೋಲನಗಳಲ್ಲಿ ಭಾಗಿಯಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದು, ಮಾತ್ರವಲ್ಲದೇ ಜಗತ್ತಿನ ಸುಮಾರು ಮೂವತ್ತು ದೇಶಗಳಲ್ಲಿ ಚುನಾವಣಾ ಫಲಿತಾಂಶವನ್ನೇ ತಿರುಚುವಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸಿದೆ ಎಂಬ ವಿಷಯ ಈಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆತಂಕಕ್ಕೆ ಒಳಪಡಿಸಿದೆ. 

ಚುನಾವಣೆಯನ್ನೇ ತಿರುಚುವಷ್ಟರ ಮಟ್ಟಿಗೆ ಫೆಸ್ ಬುಕ್ ಆದಿಯಾಗಿ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದ ನಕಲಿ ಸುದ್ಧಿಗಳನ್ನು ಪಾಪ್-ಅಪ್ ಮಾಡುವುದರ ಮೂಲಕ ಅದನ್ನೇ ಬಳಕೆದಾರ ನಂಬುವಂತೆ ಮಾಡಿ, ಸಾಮಾಜಿಕ ಬುದ್ದಿಯನ್ನು ನಿಷ್ಕ್ರಿಯಗೊಳಿಸುವ ಹಾಗೂ ಹಾದಿ ತಪ್ಪಿಸುವ ಸಾಲು ಸಾಲು ಸುಳ್ಳು ಮಾಹಿತಿಗಳನ್ನು ವ್ಯವಸ್ಥಿತವಾಗಿ ಹಬ್ಬಿಸಿ ಪ್ರತಿಪಕ್ಷಗಳ ವಿರುದ್ಧ ವಿರೋಧಾಭಿಪ್ರಾಯವನ್ನು ಹುಟ್ಟಿಸುವುದು ಈ ಏಜೆನ್ಸಿಗಳ ಕಾರ್ಯ ವೈಖರಿ. ಈ ಟೀಂ ಜಾರ್ಜ್ ಎಂಬ ಬೇಹುಗಾರಿಕೆ ಸಂಸ್ಥೆಯನ್ನು ಮುನ್ನಡೆಸುತ್ತಿರುವುದು ಇಸ್ರೇಲ್ ನ ತಾಲ್ ಹನಾನ್ ಎಂಬ ೫೦ ವರ್ಷದ ಮಾಜಿ ಮಿಲಿಟರಿ ಅಧಿಕಾರಿ. ಜಾರ್ಜ್ ಎಂಬ ಸುಳ್ಳು ಹೆಸರಿನೊಂದಿಗೆ ಆತ ಈ ಬೇಹುಗಾರಿಕೆ ಕೆಲಸ ಮಾಡುತ್ತಾನೆ. ಇನ್ನು, ಈ ಜಾಗತಿಕ ಮಟ್ಟದಲ್ಲಿ ಹೊರಗೆ ಬಿದ್ದ ಆಘಾತಕಾರಿ ವರದಿಯೊಂದನ್ನು ಮುಂದಿಟ್ಟುಕೊಂಡು ಈಗ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧವೂ ಕಾಂಗ್ರೆಸ್ ಆರೋಪ ಮಾಡಿದ್ದು, ಇಂತಹ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ತೀರಾ ಹಗುರವಾಗಿ ಅಲ್ಲಗಳೆಯುವಂತಿಲ್ಲ. ಕಳೆದೆರಡು ವರ್ಷಗಳ ಹಿಂದೆ ಇದೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫೋನ್ ಕದ್ದಾಲಿಕೆಯ ಪೆಗಾಸಸ್ ಸೈಬರ್ ಟೂಲ್ ನನ್ನು ವಿರೋಧ ಪಕ್ಷದ ಪ್ರಮುಖ ಪ್ರಭಾವಿ ನಾಯಕರನ್ನೂ ಒಳಗೊಂಡು, ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು, ಪತ್ರಕರ್ತರ ಮೇಲೆ ಪ್ರಯೋಗಿಸಿದ್ದು ಈ ದೇಶ ಕಂಡಿದೆ. ಅಷ್ಟಾಗಿಯೂ ಮೋದಿ ಇಸ್ರೇಲ್ ಸರ್ಕಾರದೊಂದಿಗೆ ಕೆಲವು ವರ್ಷಗಳಿಂದ ರಾಜತಾಂತ್ರಿಕ ಕಾರ್ಯತಂತ್ರಗಳಲ್ಲಿಯೂ ಒಳ್ಳೆಯ ಸಂಬಂಧ ಹೊಂದಿದೆ ಎನ್ನುವ ಆರೋಪ ಕೇಳಿ ಬಂದಿದ್ದು ಕೂಡ ಇಲ್ಲಿ ಉಲ್ಲೇಖಾರ್ಹ. 

ಟೀಮ್ ಜಾರ್ಜ್ ನೀಡುವ ಸೇವೆಗಳು ಹೇಗಿವೆ ? :  ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಹಾರೆಟ್ಸ್ ನ್ಯೂಸ್ ವರದಿಯ ಪ್ರಕಾರ, ಟೀಮ್ ಜಾರ್ಜ್ ತನ್ನ ಕ್ಲೈಂಟ್ ಗೆ ನೀಡುವ ಸೇವೆಗಳನ್ನು ಗಮನಿಸಿದರೇ ಆಶ್ಚರ್ಯವಾಗುತ್ತದೆ. ಮೆಸೆಜಿಂಗ್ ಅಪ್ಲಿಕೇಶನ್ ಗಳನ್ನು, ಈಮೇಲ್ ಖಾತೆಗಳನ್ನು ಹ್ಯಾಕ್ ಮಾಡುವುದು, ಕಾಂಪ್ರಮೈಸ್ಡ್ ಅಕೌಂಟ್ ಗಳಲ್ಲಿ ಮೆಟಿರಿಯಲ್ ಗಳನ್ನು ಪ್ಲ್ಯಾಂಟ್ ಮಾಡುವುದು, ಮಾಹಿತಿಗಳನ್ನು ಗೂಢಚರ್ಯೆಯ ಮೂಲಕ ಹ್ಯಾಕ್ ಮಾಡಿ ಸುಳ್ಳು ಮಾಹಿತಿಗಳನ್ನು ಲೀಕ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಅಕೌಂಟ್ ಗಳನ್ನು ಮ್ಯಾನುಪಲೇಟ್ ಮಾಡುವುದು, ಮತದಾರರನ್ನು ನಿಗ್ರಹಿಸುವುದು ಹಾಗೂ ಚುನಾವಣೆಗೆ ಅಡ್ಡಿ ಮಾಡುವುದು ಟೀಮ್ ಜಾರ್ಜ್ ತನ್ನ ಕ್ಲೈಂಟ್ ಗಾಗಿ ಮಾಡುತ್ತದೆ ಎಂದರೇ ನೀವು ನಂಬಲೇ ಬೇಕು. ಈ ಎಲ್ಲಾ ಟೂಲ್ ಗಳು ರಾಜಕೀಯ ಪ್ರತಿರೋಧವನ್ನು ಅಡ್ಡಿಪಡಿಸುವುದು ಅಥವಾ ರಾಜಕೀಯ ವೈರಿಯನ್ನು ಸೋಲಿಸಲು ಬಳಸುವ ಸಾಧನಗಳು.  

ಜಗತ್ತಿನ ಸುಮಾರು ೩೩ ದೇಶ ಮಟ್ಟದ ಚುನಾವಣೆಗಳಲ್ಲಿ ಮಧ್ಯಪ್ರವೇಶಿಸಿದ ಟೀಮ್ ಜಾರ್ಜ್ ರಾಜಕೀಯ ಕುತಂತ್ರದ ಪರವಾಗಿ ಕೆಲಸ ಮಾಡಿದೆ. ಅವುಗಳಲ್ಲಿ ಸುಮಾರು ೨೭ ಚುನಾವಣೆಗಳಲ್ಲಿ ಟೀಮ್ ಯಶಸ್ವಿಯಾಗಿದೆ ಎಂದು  ಅಂತರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ತನ್ನ ತನಿಖಾ ವರದಿಯಲ್ಲಿ ಹೇಳಿದೆ. ಮಾತ್ರವಲ್ಲದೇ, ತನ್ನ ಗ್ರಾಹಕರನ್ನು ಮೆಚ್ಚಿಸುವುದಕ್ಕೆ ಬೇಕಾಗಿ ಕೀನ್ಯಾ ಹಾಗೂ ಮೊಜಾಂಬಿಕ್ ನಲ್ಲಿನ ಕ್ಯಾಬಿನೇಟ್ ಮಿನಿಸ್ಟರ್ ಗಳ ಜೀಮೇಲ್ ಖಾತೆಗಳು, ಟೆಲಿಗ್ರಾಂ ಖಾತೆಗಳ ಸಂವಹನಗಳನ್ನು ಹ್ಯಾಕ್ ಮಾಡಿರುವ ಹಾಗೂ ಆಫ್ರಿಕನ್ ಮೂಲದ ಪ್ರಭಾವಿ ವ್ಯಕ್ತಿಯೊಬ್ಬರ ಪತ್ರವ್ಯವಹಾರಗಳನ್ನು ಹ್ಯಾಕ್ ಮಾಡಿರುವ ವಿಚಾರವನ್ನು ಒಳಗೊಂಡು ಹಲವು ವಿಚಾರಗಳು ತನ್ನ ಗ್ರಾಹಕರಿಗೆ ಹೇಳಿರುವುದು ಕೂಡ ವರದಿಯಲ್ಲಿ ಬಹಿರಂಗಗೊಳಿಸಲಾಗಿದೆ.  

ಜಗತ್ತು ಬೆಚ್ಚಿ ಬೀಳಿಸುವ ಸೈಬರ್ ಅಟ್ಯಾಕ್ ಗಳಲ್ಲಿ ಭಾಗಿ : ಹೌದು, ೨೦೧೪ರ ಕ್ಯಾಟಲಾನ್ ಸ್ವಾತಂತ್ರ್ಯದ ಕುರಿತಾದ ಜನಾಭಿಪ್ರಾಯವನ್ನು ಹಾಳುಗೆಡವಲು ಉದ್ದೇಶಿಸಿರುವ ಕುಖ್ಯಾತ ಸೈಬರ್ ಅಟ್ಯಾಕ್ ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಇದೇ ಟೀಮ್ ಜಾರ್ಜ್ ಸಂಸ್ಥೆ. ಲೈಂಗಿಕ ಅಪರಾಧದ ವಿಚಾರಕ್ಕೆ ಸಂಬಂಧಸಿದಂತೆ ಕೆನಡಾದ ಫ್ಯಾಶನ್ ಕ್ಷೇತ್ರದ ಉದ್ಯಮಿ ಪೀಟರ್ ನೈಗಾರ್ಡ್ ಅವರನ್ನು ಬಂಧಿಸುವಲ್ಲಿ ಕಾರ್ಯತಂತ್ರ ಮಾಡಿದ್ದಕ್ಕಾಗಿ ಗ್ರಾಹಕರು ಸಂಸ್ಥೆಗೆ ನೀಡಿದ ಮೊತ್ತದ ಬಗ್ಗೆ ಸಂಸ್ಥೆ ಹೆಮ್ಮೆ ಪಟ್ಟುಕೊಳ್ಳುತ್ತದೆ. ೨೦೧೫ರಲ್ಲಿ ನೈಜೀರಿಯಾದ ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷದ ಫೋನ್ ಕರೆಗಳ ಕದ್ದಾಲಿಕೆ ಮಾಡಿ ಚುನಾವಣಾ ಪ್ರಚಾರಕ್ಕೆ ಅಲ್ಲಿನ ಆಡಳಿತ ಪಕ್ಷದ ಪರವಾಗಿ ಕಾರ್ಯತಂತ್ರ ಹೆಣೆದಿದ್ದು, ಕುಖ್ಯಾತ ಯುಕೆ ಪಾಲಿಟಿಕಲ್ ಕನ್ಸಲ್ಟಿಂಗ್ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕ್ ನೊಂದಿಗೆ ಕೆಲಸ ಮಾಡಿದ್ದು ತನಿಖೆಯಲ್ಲಿ ಹೊರಬಂತು. ೨೦೧೯ರ ಇಂಡೋನೇಷ್ಯಾದ ಕೇಂದ್ರ ಚುನಾವಣಾ ಸಮಿತಿಯ ವಿರುದ್ಧ ಸೈಬರ್ ಅಟ್ಯಾಕ್, ೨೦೨೨ರ ಕೀನ್ಯಾ ಚುನಾವಣೆಯಲ್ಲಿ ಪ್ರಭಾವಿ ಐವರು ರಾಜಕೀಯ ಮುಖಂಡರ ಖಾತೆಗಳನ್ನು ಹ್ಯಾಕ್ ಮಾಡಿ, ಚುನಾವಣಾ ಫಲಿತಾಂಶವನ್ನೇ ತಿರುಚಿದ್ದು, ಹೀಗೆ ಒಂದಲ್ಲ ಎರಡಲ್ಲ ೩೩ ದೇಶಗಳ ಹಲವು ರಾಜಕೀಯ ಅಭಿಯಾನಗಳಲ್ಲಿ ಈ ಸಂಸ್ಥೆ ತನ್ನ ಗೂಢಚರ್ಯೆಯನ್ನು ನಡೆಸಿದೆ. ಕ್ಲೈಂಟ್ ನ ಟಾರ್ಗೇಟ್ ವ್ಯಕ್ತಿಯ ಸಾಮಾಜಿಕ ಜಾಲತಾಣಗಳ ಮೇಲೆ ಸೈಬರ್ ಅಟ್ಯಾಕ್ ಮಾಡುವುದರ ಮೂಲಕ ಈಮೇಲ್, ಡಾಕ್ಯುಮೆಂಟ್ ಗಳನ್ನು ಸೋರಿಕೆ ಮಾಡುವುದನ್ನು ಒಳಗೊಂಡಿರುವ ಹ್ಯಾಕ್ & ಲೀಕ್ ಕಾರ್ಯಾಚರಣೆಯಿಂದ ರಾಜಕೀಯ ವರ್ಚಸ್ಸನ್ನೇ ಹಾಳುಗೆಡುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ ಎನ್ನುವುದು ಇಲ್ಲಿ ಗಮನಾರ್ಹ.  

ಆರ್ಮಿ ಆಫ್ ಅವತಾರ್ : ಟೀಮ್ ಜಾರ್ಜ್ ತನ್ನ ಕ್ಲೈಂಟ್ ಗಳಿಗೆ ನೀಡುವ ಸೇವೆಗಳಲ್ಲಿ ಪ್ರಮುಖವಾದದ್ದಿದು.  ತನ್ನ ಗ್ರಾಹಕರು ಹಿಂದೆಂದೂ ನೋಡಿರದ ತಂತ್ರಾಂಶದ ಪ್ರಸ್ತುತಿಯನ್ನು ಈ ಸೇವೆಯ ಮೂಲಕ ನೀಡುತ್ತದೆ. ಈ ಟೂಲ್ ನ ಮೂಲಕ ನಕಲಿ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ರಚಿಸಿ ಸುಳ್ಳು ವದಂತಿಗಳನ್ನು ಹಬ್ಬಿಸುವುದಲ್ಲದೇ, ವಿರೋಧಿಗಳ ಮಾನನಷ್ಟ ಮತ್ತು ಕ್ಲೈಂಟ್ ನ ಪರ ಪ್ರಚಾರ, ಗ್ರಾಹಕ ಏನು ಕೇಳುತ್ತಾನೋ  ಆ ಸೇವೆಯನ್ನು ಟೀಮ್ ಜಾರ್ಜ್ ಈ ಮೂಲಕ ಮಾಡಿಕೊಡುತ್ತದೆ. 

ಆಕ್ಟಿವ್ ಇಂಟೆಲಿಜೆನ್ಸ್ ಹೇಗೆ ಕೆಲಸ ಮಾಡುತ್ತದೆ ? : ಹ್ಯಾಕ್ ಮಾಡಲಾದ ಖಾತೆಯ ,ಮೂಲಕ ಸಂದೇಶಗಳನ್ನು ಕಳುಹಿಸುವುದರ ಮೂಲಕ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಜಿಮೇಲ್ ಖಾತೆಯ ಹ್ಯಾಕಿಂಗ್ ಲೋಕಲ್ ಸೆಲ್ಯುಲರ್ ಪ್ರೋವೈಡರ್ ನ ಸಹಕಾರದಿಂದ ಹಾಗೂ ಒಂದು ಸಣ್ಣ ಡಿವೈಸ್ ನನ್ನು ಇನ್ಸ್ಟಾಲ್ ಮಾಡುವುದರ ಮೂಲಕ ಟಾರ್ಗೇಟ್ ಖಾತೆಯನ್ನು ತಲುಪಲಾಗುತ್ತದೆ. ಗೂಗಲ್ ಸೇರಿದಂತೆ ಅನೇಕ ಆನ್ ಲೈನ್ ಸರ್ವರ್ ಗಳ ಪಾಸ್ ವರ್ಡ್ ಬದಲಾಯಿಸುವ ವಿಧಾನವು ಐಡೆಂಟಿಟಿ ವೆರಿಫಿಕೇಶನ್  ಟೆಕ್ಸ್ಟ್ ಮೆಸೇಜ್ ಮೂಲಕ ಕಳುಹಿಸುವುದರ ಮೂಲಕ ಮಾಡಲಾಗುತ್ತದೆ. ಆ ಮೆಸೇಜ್ ಗಳನ್ನು ಹೈಜಾಕ್ ಮಾಡುವುದರ ಮೂಲಕ ಹ್ಯಾಕರ್ ಗಳಿಗೆ ಟಾರ್ಗೇಟಡ್ ಖಾತೆಗಳಿಗೆ ಒಳ ನುಸುಲು ಅನುವು ಮಾಡಿಕೊಡುತ್ತದೆ.

ಇನ್ನು, ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಐಟಿ ಘಟಕಗಳ ಸಂಪರ್ಕದೊಂದಿಗೆ ಕಾರ್ಯ ನಿರ್ವಹಿಸುವ ಇಂತಹ ಬೇಹುಗಾರಿಕಾ ಸಂಸ್ಥೆಗಳು , ರಾಜಕೀಯ ಪ್ರೊಪಗಂಡಾಗಳನ್ನು ಮೆರೆಸುತ್ತದೆ. ಸುಳ್ಳನ್ನು ವೈಭವೀಕರಿಸಿ ಸತ್ಯವನ್ನು ಪಾತಾಳಕ್ಕೆ ನೂಕುತ್ತವೆ.  ರಾಜಕೀಯದ ಧ್ರುವೀಕರಣದ ವಿಷಯಗಳು ದೇಶದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಸ್ಥಿತಿಗಳನ್ನು ಹದಗೆಡಿಸುತ್ತವೆ.

ಪೆಗಾಸಸ್ ಗೂಢಚರ್ಯಕ್ಕೆ ಛೀಮಾರಿ ಹಾಕಿತ್ತು ಸುಪ್ರೀಂ : ೨೦೨೧ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಬೆಂಬಿಡದೆ ಕಾಡಿದ ಸಮಸ್ಯೆಗಳಲ್ಲಿ ಪೆಗಾಸಸ್ ಕೂಡ ಒಂದು. ದೇಶದ ಪ್ರಮುಖ ಪ್ರಭಾವಿ ರಾಜಕಾರಣಿಗಳು, ಪತ್ರಕರ್ತರು, ನ್ಯಾಯಾಧೀಶರು ಸೇರಿ ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿಯ ದೂರವಾಣಿ ಕದ್ದಾಲಿಕೆಯ ಮೂಲಕ ಬೇಹುಗಾರಿಕೆ ನಡೆಸಿತ್ತು ಎಂಬ ಆರೋಪ ಕೇಂದ್ರ ಸರ್ಕಾರದ ಮೇಲೆ ಕೇಳಿ ಬಂದಿತ್ತು. ಸರ್ಕಾರೇತರ ಸಂಸ್ಥೆಗಳಿಗೆ ಪೆಗಾಸಸ್ ಸ್ಪೈವೇರ್ ಮಾರಾಟಕ್ಕೆ ಇಸ್ರೇಲ್ ಸರ್ಕಾರದ ಅನುಮತಿ ಇಲ್ಲ. ಇನ್ನು, ಸರ್ಕಾರದ ಅನುಮತಿ ಇಲ್ಲದೇ ಈ ಸ್ಪೈವೇರ್ ನನ್ನು ರಫ್ತು ಮಾಡುವುದಿಲ್ಲ. ಎನ್ನುವಲ್ಲಿಗೆ ಸರ್ಕಾರದ ಅನಮತಿಯ ಮೇಲೆಯೇ ಪೆಗಾಸಸ್ ಪ್ರಯೋಗ ಮಾಡಲಾಗಿತ್ತು ಎನ್ನುವುದು ಸ್ಪಷ್ಟ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆಗಿತ್ತು. ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ಗೂಢಚರ್ಯೆಯಂತಹ ಬೇಹುಗಾರಿಕೆ ಮಾಡುವುದಕ್ಕೆ ಅವಕಾಶವಿಲ್ಲ. ವೈಯಕ್ತಿಕ ಗೌಪ್ಯತೆಯನ್ನು ಉಲ್ಲಂಘಿಸಿ ಒಬ್ಬ ವ್ಯಕ್ತಿಯ ಮೇಲೆ ಗೂಢಚರ್ಯೆ ಮಾಡುವುದಕ್ಕೆ ಸಾಧ್ಯವಿಲ್ಲ. ಭದ್ರತೆಯ ನೆಪ ಹೇಳಿ ಸರ್ಕಾರ ಸುಮ್ಮನೆ ಕೂರುವುದಕ್ಕೆ ಸಾಧ್ಯವಿಲ್ಲ. ಎಂದು ಸರ್ಕಾರದ ವಿರುದ್ಧ  ಸುಪ್ರೀಂ ಕೋರ್ಟ್ (ಅಂದು ಎನ್. ವಿ ರಮಣ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು) ಛೀಮಾರಿ ಹಾಕಿದ್ದನ್ನು ಈ ದೇಶ ಕಂಡಿತ್ತು. ತನಿಖೆಗಾಗಿ ತಜ್ಞರ ಸಮಿತಿಯನ್ನೂ ರಚಿಸಲಾಗಿತ್ತು. ಆದರೇ, ಕಳೆದ ಆಗಸ್ಟ್ ೨೫ ೨೦೨೨ರಲ್ಲಿ ತನಿಖಾ ಸಮಿತಿ ನೀಡಿದ ವರಿದಿಯ ಅನ್ವಯ, ೨೯ ಫೋನ್ ಗಳನ್ನು ಪರಿಶೀಲಿಸಲಾಗಿದೆ ಮತ್ತು ಐದರಲ್ಲಿ ಒಂದರಲ್ಲಿ ಮಾಲ್ವೇರ್ ಕಂಡುಬಂದಿರುವುದು ಹೊರತಾಗಿ ಕೇಂದ್ರ ಸರ್ಕಾರ ಪೆಗಾಸಸ್ ಸ್ಪೈವೇರ್ ಬಳಸಿ ಗೂಢಚರ್ಯೆ ಮಾಡಿದೆ ಎಂಬುವುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂಬ ತನಿಖಾ ತೀರ್ಪು ನೀಡಿತ್ತು.  

ಈಗ ವಿದೇಶಿ ಮಿಲಿಟರಿ ಏಜನ್ಸಿಗಳಿಂದ ನರೇಂದ್ರ  ಪ್ರಧಾನಿ ಮೋದಿ ಚುನಾವಣೆಗಳ ಮೇಲೆ ಪ್ರಭಾವ ಬೀರಿ ಗೆಲ್ಲುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಮತ್ತೆ ಕೇಂದ್ರ ಸರ್ಕಾರ  ನೈತಿಕ ಸೈಬರ್ ಟೂಲ್ ಗಿರಿಯಲ್ಲಿ ಭಾಗಿಯಾಗಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಇನ್ನು, ಎಂದಿನಂತೆ ಕೇಂದ್ರ ಬಿಜೆಪಿ ಸರ್ಕಾರ ಮೌನವಹಿಸಿದ್ದು, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕು. 

-ಶ್ರೀರಾಜ್ ವಕ್ವಾಡಿ 


Wednesday, February 15, 2023

ಸಿಟ್ಟಿಗೆ ತುಪ್ಪ ಸುರಿದು ಕೋಪಾಗ್ನಿ ಜ್ವಲಿಸಿಕೊಂಡಿದ್ರು ಬಿ ಎಸ್ ವೈ !


 ಚುನಾವಣಾ ಕಣದಿಂದ ದೂರಕ್ಕುಳಿಯುವ ಯಡಿಯೂರಪ್ಪ ಮತ್ತು ಬಿಜೆಪಿ !

ಯಡಿಯೂರಪ್ಪ ಹೋರಾಟದ ಹಿನ್ನೆಲೆಯಿಂದ ಬಂದವರು, ಆರ್ ಎಸ್ ಎಸ್ ನ ನಿಜ ಶಿಸ್ತು ಅವರಲ್ಲಿದೆ. ರಾಜ್ಯ ಬಿಜೆಪಿಯ ಪಾಲಿಗೆ ಜೀವ ತುಂಬಿಸಿದ ನಾಯಕ. ಸಿಟ್ಟು, ಅವಸರದ ನಿರ್ಧಾರ, ಏಕ್ ದಿನ್ ಕಾ ಮುಖ್ಯಮಂತ್ರಿ, ಭ್ರಷ್ಟಾಚಾರದ ಮೇಲೆ ಸೆರೆಮನೆ ವಾಸ ಹೊರತು ಪಡಿಸಿದರೇ, ಯಡಿಯೂರಪ್ಪ ಕರ್ನಾಟಕ ಬಿಜೆಪಿಗೆ ಮಹತ್ತರ ಪಾತ್ರ. ಸದ್ಯದ ರಾಜಕಾರಣಿಗಳ ಪಟ್ಟಿಯಲ್ಲಿ ಯಡಿಯೂರಪ್ಪ ಹಿರಿಯ ಹಾಗೂ ಅನುಭವಿ ರಾಜಕಾರಣಿ. ಸುಮಾರು ಐವತ್ತು ವರ್ಷಗಳ ಸುದೀರ್ಘ ರಾಜಕೀಯ ಅನುಭವವಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಇದೇ ಮೊಟ್ಟಮೊದಲ ಬಾರಿಗೆ  ಚುನಾವಣಾ ಕಣಕ್ಕೆ ಇಳಿಯದಿರುವ ನಿರ್ಧಾರ ಮಾಡಿದ್ದಾರೆ. 

ಕಳೆದ ಎರಡು ವರ್ಷಗಳ ಹಿಂದೆ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದರಲ್ಲಿ ಬಿಜೆಪಿ ಹೈಕಮಾಂಡ್ ಸೃಷ್ಟಿಸಿದ ರಾಜಕೀಯ ಹೈಡ್ರಾಮ ದೇಶದ ರಾಜಕಾರಣವನ್ನೇ ಕರ್ನಾಟಕ ರಾಜಕಾರಣದತ್ತ ತಿರುಗಿ ನೋಡುವಂತೆ ಮಾಡಿತ್ತು. ಅದಾದ ಮೇಲೆ ನಡೆದ ಬಿಜೆಪಿಯ ಸಾಲು ಸಾಲು ಬೃಹನ್ನಾಟಕವನ್ನು ಈ ರಾಜ್ಯದ ಜನ ಕಂಡು ಕಣ್ತುಂಬಿಸಿಕೊಂಡಿದ್ದಾರೆ.  ಯಡಿಯೂರಪ್ಪ ತುಂಬಾ ಭಾವುಕರಾಗಿಯೇ ಪದತ್ಯಾಗ ಮಾಡಿದರು. ಕರ್ನಾಟಕ ಬಿಜೆಪಿಯ ದೆಸೆ ಬದಲಾಯಿಸಿದ ಒಬ್ಬ ರಾಜಕಾರಣಿಯ ರಾಜಕೀಯ ಬದುಕಿನಲ್ಲಿ ಎಂದೂ, ಯಾರೂ ಊಹಿಸಿರದಂತೆ ನಡೆದ ಘಟನೆಯದು. ಯಡಿಯೂರಪ್ಪ  ರಾಜಕೀಯದ ಜೀವನದಲ್ಲಿ ಅಂತದ್ದೊಂದು ದಿನ ಎದುರಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ. ಆ ಒಂದು ಬೆಳವಣಿಗೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಅನೇಕ ಬದಲಾವಣೆಗೆ ಸಾಕ್ಷಿಯಾಯಿತು. 

ಮಂಡ್ಯ ಜಿಲ್ಲೆಯ ಬೂಕನಕೆರೆಯಿಂದ ಮಲೆನಾಡಿನ ಶಿಕಾರಿಪುರಕ್ಕೆ ಆರ್ಎಸ್ಎಸ್ ಭದ್ರ ಪಡಿಸಬೇಕು ಎಂಬ ಮಹದಾಸೆಯಿಂದ ಬಂದ ಯಡಿಯೂರಪ್ಪರ ನಡೆ ರಾಜ್ಯ ರಾಜಕಾರಣದಲ್ಲಿ ಅನೇಕ ಬದಲಾವಣೆ ತರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಯಡಿಯೂರಪ್ಪ ಬೂಕನಕೆರೆಯಿಂದ ಶಿಕಾರಿಪುರಕ್ಕೆ ಪಡೆದ ಪ್ರವೇಶ ರಾಜಕಾರಣಕ್ಕೆ ಮಹತ್ವದ ಬಾಗಿಲು ತೆರೆದುಕೊಟ್ಟಿತ್ತು. ಯಡಿಯೂರಪ್ಪ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುವುದಕ್ಕೆ ಮಲೆನಾಡು ಸೀಮೆ ಶಿಕಾರಿಪುರ ಮಹತ್ವದ ಬೆಂಬಲ ನೀಡಿತ್ತು ಎನ್ನುವುದು ಉಲ್ಲೇಖಾರ್ಹ. ಇಂತಹ ಒಬ್ಬ ರಾಜಕಾರಣಿ ಈಗ ಚುನಾವಣೆಯಿಂದ ದೂರ ಉಳಿಯುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಕಳೆದ ವರ್ಷ ಶೀಕಾರಿಪುರದಿಂದ ನಾನು ಸ್ಪರ್ಧಿಸುವುದಿಲ್ಲ, ನನ್ನ ಮಗನಿಗೆ ಬೆಂಬಲಿಸಿ ಎಂದು ಕೇಳಿಕೊಂಡ ಯಡಿಯೂರಪ್ಪರ ಘೋಷಣೆ ರಾಜಕೀಐ ಪಡಸಾಲೆಯಲ್ಲಿ ಚರ್ಚೆಗೆ ಕಾರಣವಾಗಿತ್ತು. 

ಶಾಕ್ ಮೇಲೆ ಶಾಕ್ ಕೊಟ್ಟ ಬಿ ಎಸ್ ವೈ : ಸೇರೆಮನೆ ಪೂರೈಸಿ ಬಂದಾಗ ಸ್ವಪಕ್ಷದ ವರ್ತನೆ ಬಿಎಸ್ ವೈ ಶಾಕ್ ಆಗಿತ್ತು, ಮಾತ್ರವಲ್ಲದೇ, ಸಿಟ್ಟು, ಸೆಡವು, ಕೋಪ, ತಾಪ, ದ್ವೇಷ, ಅಸೂಯೆಗಳಿಗೆ ತುಪ್ಪ ಸುರಿದು ಪ್ರಜ್ವಲಿಸಿಕೊಂಡಂತಾಗಿತ್ತು.  ಸ್ವಲ್ಪ ಹಿಂದಕ್ಕೆ ಹೋಗಿ ಗಮನಿಸೋಣ,  ೨೦೧೧ರ ಜುಲೈ ತಿಂಗಳ ೩೧ನೇ ತಾರೀಕನ್ನು ನೆನಪಿಸಿಕೊಳ್ಳಬೇಕು (ಭ್ರಷ್ಟಾಚಾರದ ಆರೋಪದ ಮೇಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ), ೨೦೧೨ರ ಜನವರಿ ೩೧ನೇ ತಾರೀಕನ್ನು ಈ ರಾಜ್ಯ ನೆನಪಿಸಿಕೊಳ್ಳಬೇಕು (ಸ್ವಪಕ್ಷದಿಂದಲೇ ಅವಮಾನ, ಶಾಸಕ ಸ್ಥಾನ, ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ), ೨೦೧೨ರ ಡಿಸೆಂಬರ್ ೯ನೇ ತಾರೀಕನ್ನು ನೆನಪಿಸಿಕೊಳ್ಳಬೇಕು (ಕೆಜೆಪಿ ಎಂಬ ನೂತನ ರಾಜಕೀಯ ಪಕ್ಷ ಸ್ಥಾಪನೆ) ೨೦೧೩ರ ವಿಧಾನ ಸಭಾ ಚುನಾವಣೆಯ ಫಲಿತಾಂಶವನ್ನು ಗಮನಿಸಬೇಕು. ಕೆಜೆಪಿ ಪಕ್ಷದಿಂದ ಶಿಕಾರಿಪುರದಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು. ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದ ಯಡಿಯೂರಪ್ಪರ ನಡೆಯಿಂದ ೧೧೦ ಶಾಸಕರ ಬೆಂಬಲ ಹೊಂದಿದ್ದ ಬಿಜೆಪಿ ಕೇವಲ ೪೦ಕ್ಕೆ ಕುಸಿಯುವಂತೆ ಆಯ್ತು. ಕೆಜೆಪಿ ಶೇ. ೧೦ರಷ್ಟು ಮತಗಳಿಸಿ ೮ ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಇದರ ಪರಿಣಾಮವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರೋಬ್ಬರಿ ೧೨೨ ಶಾಸಕರ ಬಹುಮತಗಳೊಂದಿಗೆ ರಾಜ್ಯದ ಅಧಿಕಾಋ ಹಿಡಿಯುವುದಕ್ಕೆ ಕಾರಣವಾಯಿತು.  ಪರೋಕ್ಷವಾಗಿ ಬಿಜೆಪಿ ಸೋಲಿಗೆ ಬಿ ಎಸ್ ವೈ ಕಾರಣರಾದರು,  ಯಡಿಯೂರಪ್ಪರಿಲ್ಲದ ಬಿಜೆಪಿ ತೀವ್ರ ಮುಖಭಂಗಕ್ಕೊಳಗಾಯ್ತು. ಇದು ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಕೊಟ್ಟ ಶಾಕ್, ಇದು ಅಂದಿನ ಬಿಜೆಪಿಯ ಹೈಕಮಾಂಡ್ಗೂ ತಾನು ಏನೆಂಬುವುದನ್ನು ತೋರಿಸಿಕೊಟ್ಟಿದ್ದೂ ಹೌದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇದು ಯಡಿಯೂರಪ್ಪ ರಾಜ್ಯ ರಾಜಕಾರಣಲ್ಲಿ ಕೊಟ್ಟ ಶಾಕ್. ಬಿ ಎಸ್ ವೈ ಬಿಜೆಪಿ ಕಣದಲ್ಲಿಲ್ಲದ ಪರಿಣಾಮ ಬಿಜೆಪಿ ನೆಲ ಮುಕ್ಕಿದ್ದು ಈ ರಾಜ್ಯ ಕಂಡಿದೆ.  ಆಮೇಲೆ ೨೦೧೩ರ ನವೆಂಬರ್ ನಲ್ಲಿ ಕೆಜೆಪಿಯಿಂದ ಮತ್ತೆ ಮರಳಿ ಬಿಜೆಪಿಗೆ ಬಂದಿದ್ದು, ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನ ಆಡಿದ್ದೆಲ್ಲವೂ ರಾಜಕೀಯ ಭವಿಷ್ಯಕ್ಕೆ ಬಿಡಿ, ಅದು ಎರಡನೇ ಹಂತದ ಚರ್ಚೆ. ಆದರೇ, ಇದು ಕೂಡ ಒಂದು ರೀತಿಯಲ್ಲಿ ಶಾಕ್ ಆಗಿತ್ತು. 

ಎಲ್ಲವೂ ಮಗ ವಿಜಯೇಂದ್ರನಿಗೋಸ್ಕರ ..! : ಈಗ ರಾಜ್ಯ ವಿಧಾನಸಭಾ ಕಣದಲ್ಲಿ ಬಿಎಸ್ವೈ ಇಲ್ಲ. ಇದು ಕೂಡ ಬಿಜೆಪಿಗೆ ಶಾಕ್. ವಂಶರಾಜಕಾರಣವನ್ನು ಮುಕ್ತಿಗೊಳಿಸಬೇಕು ಎಂಬ ನಿಲುವು ಹೊಂದಿರುವ ಹೈಕಮಾಂಡ್, ತಮ್ಮ ಮಗ ವಿಜಯೇಂದ್ರ ಅವರಿಗೆ ಸ್ಥಾನಮಾನ ಕೊಡಿಸುವ ದೃಷ್ಟಿಯಲ್ಲಿ ಒತ್ತಡ ಹೇರಿದ್ದರು, ತಮ್ಮ  ಜಾತಿ ಸ್ವಾಮೀಜಿಗಳ ಬೆಂಬಲದಿಂದ ಲಿಂಗಾಯತ ಸಮುದಾಯಲ್ಲಿ ತಾನು ಬಿಟ್ಟರೇ, ಮತ್ಯಾರೂ ಲಿಂಗಾಯತ ಸಮಾಜದಲ್ಲಿ ʼಸಮುದಾಯದ ನಾಯಕʼ ಎಂದು ಗುರುತಿಸಿಕೊಂಡವರಿಲ್ಲ ಎಂದು ತೋರಿಸಿದ್ದು, ಲಿಂಗಾಯತ ಸಮುದಾಯವೇ ಇಲ್ಲಿ ನಿರ್ಣಾಯಕ ಎಂಬಂತೆ ತೋರಿಸಿದ್ದೆಲ್ಲವೂ ಹೈಕಮಾಂಡ್ಗೆ ಒಳಗಿಂದೊಳಗೆ ಸಿಟ್ಟಿತ್ತು. ಅದಕ್ಕಾಗಿಯೇ ಬಲವಂತವಾಗಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಎನ್ನುವ ಮಾತುಗಳ್ಯಾವುವು ಸುಳ್ಳಲ್ಲ. ಆದರೂ ಯಡಿಯೂರಪ್ಪ ಇರುವವರೆಗೆ ಬಿಜೆಪಿಗೆ ಯಡಿಯೂರಪ್ಪರೇ ಆಧಾರ. ಹಾಗಾಗಿಯೇ, ಬಿಜೆಪಿಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ಆಯ್ಕೆ ಮಾಡಿದ್ದು, ಬಿಎಸ್ ವೈಗೆ ಮನಸಾರೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಂಡಿರುವುದು ಮಗನ ರಾಜಕೀಯ ಭವಿಷ್ಯಕ್ಕಾಗಿ ಮತ್ತು ತನ್ನ ರಾಜಕೀಯ ಇತಿಹಾಸದಲ್ಲಿ ರಾಷ್ಟ್ರಮಟ್ಟದ ರಾಜಕಾರಣದ ಒಂದು ಪುಟವಿರಲಿ ಎಂಬುವುದಕ್ಕೆ ಅಷ್ಟೇ ಹೊರತು, ಯಡಿಯೂಪ್ಪರಿಗೆ ರಾಷ್ಟ್ರ ರಾಜಕಾರಣದಲ್ಲಿ ಅಷ್ಟಾಗಿ ಹೋಲ್ಡ್ ಇಲ್ಲ ಎನ್ನುವುದು ಸ್ವತಃ ಅವರಿಗೂ ಗೊತ್ತಿದೆ. ಮತ್ತೆ ಹೈಕಮಾಂಡ್ ಗೆ  ಯಡಿಯೂರಪ್ಪ ಮಾಧ್ಯಮಗಳ ಮುಂದೆ, ವೇದಿಕೆ ಮೇಲೆ ವಿಧಯತೆ ತೋರಿಸುವುದೆಲ್ಲಾ ಬರೀ ನಾಟಕವಷ್ಟೇ. ಇನ್ನು, ಬಿಎಸ್ವೈ ಅವರ ಇತ್ತೀಚೆಗಿನ ಎಲ್ಲಾ ನಡೆಯೂ  ಮಗ ವಿಜಯೇಂದ್ರರಿಗಾಗಿಯೇ ಎಂಬ ಅಭಿಪ್ರಾಯ ಸೃಷ್ಟಿಯಾಗಿದೆ. 

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಮಗನಿಗೆ ಏನಾದರೂ ರಾಜ್ಯದಲ್ಲಿ ಏನಾದರೂ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು, ೨೦೧೮ರಲ್ಲಿ ವಿಜಯೇಂದ್ರರಿಗೆ ವರುಣಾ ಕ್ಷೇತ್ರದ ಟಿಕೇಟ್ ಕೊಡಿಸುವ ಪ್ರಯತ್ನ ಬಿಎಸ್ ವೈ ಮಾಡಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆಯೂ ಪ್ರಯತ್ನಿಸಿದ್ದರು. ಅದು ಯಾವುದೂ ಸಾಕಾರಗೊಳ್ಳಲಿಲ್ಲ. ವಿಧಾನ ಪರಿಷತ್ ಚುನಾವಣೆಗೆ ಅಂತಿಮ ಹಂತದವರೆಗೂ ಸಂಭಾವ್ಯರ ಪಟ್ಟಿಯಲ್ಲಿ ವಿಜಯೇಂದ್ರ ಹೆಸರಿತ್ತು, ಆದಾಗ್ಯೂ ಕೊನೆಗೆ ಎಲ್ಲವೂ ಬದಲಾಯಿತು. ಸ್ವತಃ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಡ್ತೇನೆ ಎಂಬ ಶಾಕಿಂಗ್ ನ್ಯೂಸ್ ಕೊಟ್ಟರು. ಸದ್ಯ, ಬಿಎಸ್ ವೈ ತಲೆಯಲ್ಲಿರುವುದು ಮಗನಿಗೊಂದು ಗಟ್ಟಿ ಅಡಿಪಾಯ ಹಾಕಿಕೊಡುವ ಪ್ರಯತ್ನದಲ್ಲಿದ್ದಾರೆ. ಇದೆ ಅವರ ಪರಮ ಗುರಿಯೂ ಕೂಡ ಹೌದು ಎನ್ನುವುದರಲ್ಲಿ ಅನುಮಾನವಿಲ್ಲ. 

ಶಿಕಾರಿಪುರದಲ್ಲಿ ವಿಜಯೇಂದ್ರಗೆ ವರ್ಚಸ್ಸಿದೆಯೇ ? : ೧೯೮೩ ರಲ್ಲಿ ಶಿಕಾರಿಪುರ ವಿಧಾನಸಭೆ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷ ನಿರ್ಧರಿಸಿತು. ಆರ್ ಎಸ್ ಎಸ್ ಹೋರಾಟದಿಂದ ಬಂದ ಯಡಿಯೂರಪ್ಪ ಅವರನ್ನು ನಿಲ್ಲಿಸಲಾಯಿತು. ಆಗ ಶಿಕಾರಿಪುರದಿಂದ ಕಾಂಗ್ರೆಸ್ ನ ಪರವಾಗಿ ನಿಲ್ಲುತ್ತಿದ್ದ ಯಂಕಟಪ್ಪ ಸತತವಾಗಿ ಗೆಲ್ಲುತ್ತಿದ್ದರು. ಯಂಕಟಪ್ಪ ಎದುರು ಯಡಿಯೂರಪ್ಪ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದೇ ಆ ಸಂದರ್ಭದಲ್ಲಿ ಚರ್ಚೆ ಆಗಿತ್ತು. ಆದರೇ, ಫಲಿತಾಂಶ ಎಲ್ಲಾ ರಾಜಕೀಯ ಚರ್ಚೆಯನ್ನು ಸುಳ್ಳಾಗಿಸಿತ್ತು. ರಾಜ್ಯದ ಗಮನ ಕೂಡ ಶಿಕಾರಿಪುರದತ್ತ ಗಮನ ಸೆಳೆಯಿತು. ಅಲ್ಲಿಂದ ಸತತವಾಗಿ ಗೆಲ್ಲುತ್ತಲೇ ಬಂದರು, ಯಡಿಯೂರಪ್ಪರ ಜೈತ್ರಯಾತ್ರೆ ಪ್ರಾರಂಭ ಕೊನೆ ಕಾಣದಂತಾಗುತ್ತದೆ ಎಂದು ಯಾರೂ ಊಹಿಸಿಕೊಂಡಿರಲಿಲ್ಲ. ಅಲ್ಲಿಂದ ರಾಜಕೀಯಕ್ಕೆ ಪ್ರವೇಶ ಪಡೆದ ಬಿಎಸ್ವೈ ಒಂದು ಬಾರಿ ಸೋತಿದ್ದು ಬಿಟ್ಟರೇ ಮತ್ತೆಲ್ಲವೂ ಜಯ. ಅಲ್ಲಿಂದ ರಾಜ್ಯ ಬಿಜೆಪಿ ಮೊಳಕೆಯೊಡೆಯುವುದಕ್ಕೆ ಆರಂಭವಾಗಿದ್ದು, ನಿಧಾನಕ್ಕೆ ಬಿಜೆಪಿ ರಾಜ್ಯಾದ್ಯಂತ ವಿಸ್ತರಣೆ ಆಗುವುದಕ್ಕೆ ಮೂಲ ಕಾರಣವೇ ಯಡಿಯೂರಪ್ಪ. ಆದರೇ, ಅದೇ ಪಕ್ಷ ಯಡಿಯೂಪ್ಪರನ್ನು ರಾಜ್ಯ ರಾಜಕಾರಣದಿಂದ ದೂರ ಇರುವ ಹಾಗೆ ಮಾಡಿದೆ. ಈ ಬಾರಿ ಚುನಾವಣೆಯಲ್ಲಿಯೂ ಯಡಿಯೂರಪ್ಪ ಸ್ಪರ್ಧಿಸುತ್ತಿಲ್ಲ. ಮಗ ವಿಜಯೇಂದ್ರ ಶಿಕಾರಿಪುರದಿಂದ ಹೊರಗೆ ಇದ್ದಿದ್ದೇ ಹೆಚ್ಚು. ಗೆದ್ದರೇ, ತಂದೆ ಉಳಿಸಿಕೊಂಡ ವಿಶ್ವಾಸದ ಮೇಲೆ ಗೆಲ್ಲಬೇಕಷ್ಟೇ. ಇಲ್ಲವಾದ್ರೇ, ಕಾಂಗ್ರೆಸ್ ವಶ ಆಗಬಹುದು ಎಂದೇ ಹೇಳಲಾಗುತ್ತಿದೆ. ಕಳೆದ ಬಾರಿ ಸುಮಾರು ೩೫,೦೦೦ ಮತಗಳ ಅಂತರದಿಂದ ಸೋತ ಕಾಂಗ್ರೆಸ್ ಗೆ, ಈ ಬಾರಿ ಯಡಿಯೂರಪ್ಪ ಕಣದಿಂದ ಹೊರಗುಳಿದಿರುವುದು ಲಾಭದ ನಿರೀಕ್ಷೆಯಲ್ಲಿ ಇದೆ. ಗೆಲ್ಲುವುದಕ್ಕೆ ಸಾಧ್ಯವಾಗದಿದ್ದರೇ, ಯಡಿಯೂರಪ್ಪ ಸ್ಥಾನಕ್ಕೆ ಮಗನೇ ಬರುವುದಾದರೇ, ಕಾಂಗ್ರೆಸ್ ಒಂದಿಷ್ಟು ಬಿಜೆಪಿ ಮತ ಸೆಳೆದುಕೊಳ್ಳಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ.  

ಇನ್ನು, ಯಡಿಯೂರಪ್ಪರಿಗೆ ಸಮನಾಧ ಸಮುದಾಯದ ನಾಯಕ ಬಿಜೆಪಿಯಲ್ಲಿಯೂ ಇಲ್ಲ, ಕಾಂಗ್ರೆಸ್ ನಲ್ಲಿಯೂ ಇಲ್ಲ. ಯಡಿಯೂರಪ್ಪ ಈಗ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಚುಕ್ಕಾಣಿ ಹಿಡಿಯುವಂತೆ ಶ್ರಮಿಸುತ್ತೇನೆ ಎಂದು ಹೇಳ್ತಿದ್ದಾರೆ. ಆದರೇ, ಇವೆಲ್ಲವೂ ಮಗ ವಿಜಯೇಂದ್ರರ ಭವಿಷ್ಯಕ್ಕಾಗಿ ಎನ್ನುವುದು ಯಡಿಯೂರಪ್ಪ ರಾಜಕೀಯ ನಡೆ ಸತ್ಯ.  ಯಡಿಯೂರಪ್ಪ ತನ್ನ ಸಮುದಾಯವನ್ನು ಯಾವ ಕ್ಷಣದಲ್ಲಿ ಬೇಕಾದರೂ ಯಾವ ಕಡಗೆ ಬೇಕಾದರೂ ತಿರುಗಿಸಬಲ್ಲರು. ಅಂತಹ ಹೋಲ್ಡ್ ಯಡಿಯೂರಪ್ಪ ಸಮುದಾಯದ ಮೇಲೆ ಇಟ್ಟುಕೊಂಡಿದ್ದಾರೆ. ಮಗನಿಗೆ ಅವಕಾಶ ಸಿಗದೇ ಇದ್ದರೇ ಮತ್ತೆ ಯಡಿಯೂರಪ್ಪರಲ್ಲಿನ ಕೋಪಾಗ್ನಿ ಮತ್ತೆ ಬುಗ್ಗೆ ಏಳುವುದು ಪದಶಃ ಸತ್ಯ. 

ಒಟ್ಟಿನಲ್ಲಿ, ರಾಜಕೀಯ ಪ್ರವೇಶ ಪಡೆದ ಮೇಲೆ ಇದೆ ಮೋಟ್ಟ ಮೊದಲ ಬಾರಿಗೆ ಚುನಾವಣಾ ಕಣದಿಂದ ಹೊರಗುಳಿದಿರುವುದು ಬಿಜೆಪಿಗೂ ಒಂದು ಸಂಕಟದ ಸ್ಥಿತಿ. ಪರೋಕ್ಷ ಬೆಂಬಲವಿದ್ದರೂ ಇದು ಚುನಾವಣೆ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುವುದು ಸದ್ಯದ ಕುತೂಹಲ.  

-ಶ್ರೀರಾಜ್ ವಕ್ವಾಡಿ


Sunday, February 5, 2023

ರಾಜಕೀಯ ಸೈದ್ಧಾಂತಿಕ ಬಜೆಟ್ - 2023

ಸಾಮಾನ್ಯ ವರ್ಗದವರ ಕೊರಗನ್ನು ಸರ್ಕಾರದ ಅಂಕಿಅಂಶಗಳು ಹೇಳಿದ್ದುಂಟೆ..?

ಕೇಂದ್ರ ಸರ್ಕಾರ ಅತ್ಯಂತ ಜಾಣತನ ಈ ಬಜೆಟ್ ನಲ್ಲಿ ತೋರಿಸಿದೆ. ಅದು ಕೇಂದ್ರ ಸರ್ಕಾರಕ್ಕೆ ಈ ಚುನಾವಣೆಯ ಹೊಸ್ತಿನಲ್ಲಿ ತುರ್ತು ಕೂಡ ಇದ್ದಿತ್ತು. ಇದೊಂದು ಅಪ್ಪಟ ರಾಜಕೀಯ ಸೈದ್ಧಾಂತಿಕ ಬಜೆಟ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಮುಂದಿನ ಚುನಾವಣಾ ನೀತಿಗೆ ಅನುಗುಣವಾಗಿ ಬಜೆಟ್ ಮಂಡಿಸಿದೆ. ನಿರೀಕ್ಷೆಯಂತೆ ಈ ಬಾರಿಯ ಬಜೆಟ್ ನಲ್ಲಿಯೂ ಕೇಂದ್ರ ಸರ್ಕಾರ ಕಾರ್ಪೋರೇಟಿಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಆರ್ಥಿಕ ಪ್ರಜ್ಞೆಯಿಲ್ಲದಂತೆ ಬಜೆಟ್ ಮಂಡಿಸಿದ ಸರ್ಕಾರ ಸಾಮಾನ್ಯ ಜನರಿಗೆ ಕೊನೆಗೂ ಏನನ್ನೂ ಕೊಡುವುದಿಲ್ಲ ಎನ್ನುವುದನ್ನು ಮತ್ತೆ ಸಾಬೀತು ಮಾಡಿದೆ. 

ಉದ್ಯೋಗ ಸೃಷ್ಟಿ ವಿಚಾರದಲ್ಲಿ ತನ್ನ ಹಳೆಯ ಧೋರಣೆಯನ್ನೇ ಬಿಜೆಪಿ ಈ ಬಾರಿಯೂ ತೋರಿಸಿದೆ. ಇಂದು ನಾವು ಎದುರಿಸುತ್ತಿರುವ ದೊಡ್ಡ ಆರ್ಥಿಕ ಸವಾಲೆಂದರೇ, ಕುಂಠಿತ ಆರ್ಥಿಕ ಅಭಿವೃದ್ಧಿ, ಹಣದುಬ್ಬರ, ನಿರುದ್ಯೋಗ, ಸಾಲದ ಹೊರೆ. ಆದರೇ, ಕೇಂದ್ರದ ಬಜೆಟ್ ಇವುಗಳಲ್ಲಿ ಯಾವುದಕ್ಕೂ ಗಮನ ನೀಡಿಲ್ಲ. ಸಾಮಾನ್ಯ ಜನರ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುವುದನ್ನು ಸರ್ಕಾರ ನೀಡುವ ಸೋ ಕಾಲ್ಡ್ ಅಂಕಿಅಂಶಗಳು ಹೇಳುವುದಿಲ್ಲ. ಎಲ್ಲಿಯವರೆಗೆಂದರೇ, ದೇಶದ ಸಾಮನ್ಯ ಜನರನ್ನು ಕೆಲವು ವರ್ಷಗಳಿಂದ ಹಿಂಡಿ ಹಿಪ್ಪೆ ಹಾಕುತ್ತಿರುವ ʼಹಣದುಬ್ಬರʼ ಹಾಗೂ ʼಬೆಲೆ ಏರಿಕೆʼ ಎಂಬ ಪದಗಳನ್ನು ಬಜೆಟ್ ನಲ್ಲಿ ವಿತ್ತ ಸಚಿವೆ ಒಮ್ಮೆಯೂ ಉಲ್ಲೇಖಿಸಿಲ್ಲ. 

ಜಿಡಿಪಿಯ ಶೇಕಡಾ ೫.೯ರಷ್ಟು ವಿತ್ತೀಯ ಕೊರತೆ ಇರುವ ಬಜೆಟ್ ಮಂಡಿಸುವಾಗ ೨೦೦೩ರ ಹಣಕಾಸಿನ ಜವಾಬ್ದಾರಿ ಹಾಗೂ ಬಜೆಟ್ ನಿರ್ವಹಣಾ ಕಾಯ್ದೆಯಿಂದ ಕಡ್ಡಾಯಗೊಳಿಸಿದ ಶೇಕಡಾ ೩ರ ಮಿತಿಯನ್ನು ಸರ್ಕಾರ ಉಲ್ಲಂಘಿಸಿ, ಮತ್ತೆ ಸಾಲ ಮಾಡಿ ಈ ದೇಶದ ಮೇಲೆ ಹೊರೆ ಹೇರುವಂತಷ್ಟೇ ಎನ್ನುವುದು ಕೂಡ ಇಲ್ಲಿ ಉಲ್ಲೇಖಾರ್ಹ.

ಕ್ಯಾಪಿಟಲ್ ಎಕ್ಸಪೆಂಡಿಚರ್ ಜಿಡಿಪಿಯ ಶೇಕಡಾ ೩.೩ರಷ್ಟು, ಅಂದರೇ, ಶೆಕಡಾ ೩೭ರಷ್ಟು ಹೆಚ್ಚು, ಸುಮಾರು ೧೦ ಲಕ್ಷ ಕೋಟಿಯಷ್ಟು. ಈ ಹೂಡಿಕೆಯ ಬಹುಪಾಲು ರೈಲ್ವೇಗೆ ಹೋಗುತ್ತದೆ ( ೨.೪೦ ಲಕ್ಷ ಕೋಟಿ ಬಂಡವಾಳದ ಬೆಂಬಲವನ್ನು ಪಡೆಯುತ್ತದೆ), ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು (೧.೬೨ ಲಕ್ಷ ಕೋಟಿ), ಫ್ರಧಾನ ಮಂತ್ರಿ ಆವಾಸ್ ಯೋಜನೆ (೭೯,೦೦೦ ಕೋಟಿ)ಗೆ ಸಲ್ಲುತ್ತವೆ. ಅಂದರೇ, ಕೇಂದ್ರ ಬಜೆಟ್ ನಲ್ಲಿ ಬಂಡವಾಳ ಹೂಡಿಕೆಗೆ ಇಪ್ಪತ್ತು ವರ್ಷಗಳಲ್ಲೇ ಇದೇ ಪ್ರಥಮ ಬಾರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಕೊಟ್ಟಿದೆ. ಇದು ಕಾರ್ಪೋರೇಟ್ ಸ್ನೇಹಿ ಅಲ್ಲದೇ ಮತ್ತೇನು..? ಈ ರೀತಿಯಲ್ಲಿ ಖಾಸಗಿಯರನ್ನು ಕರೆದು ಕೊಡುವುದಕ್ಕೆ ತಯಾರಾಗಿರುವ ರೈಲ್ವೇ, ಹೆದ್ದಾರಿ, ಕೃಷಿ, ಲಾಜೆಸ್ಟಿಕ್ ಗಳೀಘೇ ಸರ್ಕಾರ ಯಾಕೆ ಹೂಡಿಕೆ ಮಾಡಬೇಕು..? ಇದೇ ಸರ್ಕಾರ ಅಲ್ಲವೇ, ವ್ಯವಹಾರದ ನಿರ್ವಹಣೆ ಮಾಡುವುದು ಸರ್ಕಾರದ ಕೆಲಸವಲ್ಲ ಎಂದು ಹೇಳಿದ್ದು..? 

ಇನ್ನು, ಈ ಹಣಕಾಸು ವರ್ಷದಲ್ಲಿ ಘೋಷಿಸಲಾದ ವೈಯಕ್ತಿಕ ತೆರಿಗೆ ದರ ಪರಿಷ್ಕರಣೆಗಳ (ಹೊಸ ತೆರಿಗೆ ಪದ್ಧತಿಯ ಪ್ರಕಾರ)  ಪರಿಣಾಮ ಹೇಗಿರಲಿದೆ ಎನ್ನುವುದು ಕುತೂಹಲವಾಗಿದೆ. ಮತ್ತು ಉದ್ಯೋಗ ಸೃಷ್ಟಿಯ ಬಿಕ್ಕಟ್ಟಿನ ಬಗ್ಗೆ ಅಸಡ್ಡೆ ಧೋರಣೆ ತೋರಿಸಿದ್ದು ಪ್ರಮುಖವಾಗಿ ಕಂಡು ಬಂದಿದೆ. 

ಹೊಸ ತೆರಿಗೆ ಪದ್ಧತಿಯಲ್ಲಿ ಮಾಡಿದ ಪರಿಷ್ಕರಣೆಗಳ ಆಧಾರದಲ್ಲಿ ಮಧ್ಯಮ ವರ್ಗಕ್ಕೆ ಇದು ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ. ಉದಾಹರಣೆಗೆ ವರ್ಷಕ್ಕೆ ೯,೦೦,೦೦೦ ರೂ. ತನಕ ದುಡಿಯುವವರಿಗೆ ತೆರಿಗೆ ಹೊರೆ ಇಳಿಕೆ ಮಾಡಲಾಗಿದೆ. ಈ ಹಿಂದಿನ ತೆರಿಗೆ ಸ್ಲ್ಯಾಬ್ ಗೆ ಹೋಲಿಸಿದರೇ, ಹೊಸ ತೆರಿಗೆ ಸ್ಲ್ಯಾಬ್ ನಲ್ಲಿ ೧೫,೦೦೦ ರೂ. ವರೆಗೆ ಉಳಿತಾಯ ಮಾಡಬಹುದಾಗಿದೆ. ವರ್ಷಕ್ಕೆ ಏಳು ಲಕ್ಷದವರೆಗೆ ದುಡಿಯುವವರಿಗೆ ತೆರಿಗೆ ವಿನಾಯತಿ ಮಾಡಲಾಗಿದೆ. ಈ ಹೊಸ ಕ್ರಮಗಳು ಎರಡು ಕಾರಣಗಳಿಗಾಗಿ ಅತ್ಯಂತ ಅಗತ್ಯವಾಗಿತ್ತು. ಹಣದುಬ್ಬರ (ಆಹಾರ, ದಿನ ಬಳಕೆಯ ವಸ್ತುಗಳು, ಇಂಧನಗಳ ಮೇಲೆ ಅವ್ಯಾಹತವಾಗಿ ಹೆಚ್ಚಾದ ಖರ್ಚು  ವೆಚ್ಚ) ಹಾಗೂ ಮಧ್ಯಮ ವರ್ಗದಲ್ಲಿ ಕೋವಿಡ್ ನಂತರದಲ್ಲಿ ಸೃಷ್ಟಿಯಾದ ಕಡಿಮೆ ಆದಾಯ.  ಕಡಿಮೆ ಗಳಿಕೆಯ ಮೇಲೆ ಹೆಚ್ಚಿನ ತೆರಿಗೆ ದರವನ್ನು ಪಾವತಿಸುವ ಸ್ಲ್ಯಾಬ್ ಬಗ್ಗೆ ಅಸಮಾಧನದಲ್ಲಿದ್ದ ಮಧ್ಯಮ ವರ್ಗವನ್ನು ಸಮಾಧಾನ ಪಡಿಸುವ ತಂತ್ರವೂ ಈ ವಿಷಯದಲ್ಲಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹೀಗೆ ತೆರಿಗೆ ವಿನಾಯತಿ ಎಲ್ಲವೂ ಕೂಡ ಒಂದು ಥರದಲ್ಲಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವುದಕ್ಕೆ ಮಾಡಲಾದ ಯೋಜನೆ ಎಂಬಂತೆ ಕಾಣಿಸುತ್ತಿರುವುದು ಅಷ್ಟೇ ಅಲ್ಲದೇ, ಕಾರ್ಪೋರೇಟ್ ಸ್ನೇಹಿ ಅಂತೆ ಕಾಣಿಸುತ್ತಿದೆ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ಇನ್ನು, ಕೋವಿಡ್ ಸೋಂಕಿನ ಹೊಡೆತ ಭಾಗಶಃ ಅಂತ್ಯಗೊಂಡ ಮೇಲೆ ಕೇಂದ್ರ ಬಜೆಟ್ ಮಂಡನೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆದಾಯ ತೆರಿಗೆ ಇಲಾಖೆ ೬.೫ ಕೋಟಿ ರಿಟರ್ನ್ಸ್ ಸಂಸ್ಕರಿಸಿದೆ ಎಂದು ಉಲ್ಲೇಖಿಸಿದ್ದಾರೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ರಾಜ್ಯ ಸಭೆಯ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ೨೦೧೯-೨೦ ನೇ ಸಾಲಿನಲ್ಲಿ ೮.೨೨ಕೋಟಿ ಭಾರತೀಯರು ಆದಾಯ ತೆರಿಗೆ ಪಾವತಿದಾರರು ಎಂದು ಹೇಳಿದ್ದರು. ಅಂದು ಸಚಿವರು ಹೇಳಿರುವುದಕ್ಕೂ ಹಾಗೂ ಬಜೆಟ್ ನಲ್ಲಿ ಹೇಳಿರುವುದನ್ನು ಗಮನಿಸುವುದಾದರೇ, ಕೇವಲ ಎರಡು ವರ್ಷಗಳ ಅಂತರದಲ್ಲಿ ಸುಮಾರು ಎರಡು ಕೋಟಿಯಷ್ಟು  ಮಧ್ಯಮ ವರ್ಗದವರು ಬಡತನ ರೇಖೆಗೆ ಇಳಿದಿದ್ದಾರೆ ಎನ್ನುವುದನ್ನು ಸ್ವತಃ ಸರ್ಕಾರವೇ ದೇಶದ ಮುಂದೆ ಶರಣಾಗಿ ಒಪ್ಪಿಕೊಂಡಂತಾಯಿತು.  

ಉದ್ಯೋಗ ಸೃಷ್ಟಿ, ಭದ್ರತೆಯ ಬಗ್ಗೆ ನಿರ್ಲಕ್ಷಿಸಿದ ಬಜೆಟ್ :  ಸಾಮಾಜಿಕ ವಲಯದ ಅನೇಕ ಖರ್ಚು ವೆಚ್ಚಗಳನ್ನು ಹೊರತುಪಡಿಸಿ, ಕೇಂದ್ರದ ಈ  ಬಜೆಟ್ ಈ ಸಾರ್ವಜನಿಕ ವಲಯವನ್ನು ತೀವ್ರವಾಗಿ ನಿರಾಶೆಗೊಳಿಸಿದೆ. ದೇಶದಾದ್ಯಂತ ಆವರಿಸಿರುವ ನಿರುದ್ಯೋಗದ ಬಿಕ್ಕಟ್ಟಿನ ಬಗ್ಗೆ ಸ್ವಲ್ಪವೂ ಕಣ್ಣೆತ್ತಿ ನೋಡುವ ಪ್ರಯತ್ನವನ್ನು ಈ ಬಜೆಟ್ ಮಾಡಿಲ್ಲ. ಕಳೆದ ನಾಲ್ಕೈದು ಬಜೆಟ್ ನಲ್ಲಿ ಮಾಡಿದಂತೆಯೇ ಭಾರತದಾದ್ಯಂತ ಮುಗಿಯದ ಸಮಸ್ಯೆಯಂತೆ ಭಾದಿಸುತ್ತಿರುವ ನಿರುದ್ಯೋಗ ಸಮಸ್ಯೆಯ ಬಗ್ಗೆ ಈ ಬಾರಿಯೂ ಸಂಪೂರ್ಣ ವಿಫಲರಾದರು. ಅಂತರಾಷ್ಟ್ರೀಯ ಪ್ರಭಾವಕ್ಕಾಗಿ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸುವುದರ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತು ಹೊರತಾಗಿ ಮತ್ತೇನಿಲ್ಲ. ನರೇಗಾ ಉದ್ಯೋಘ ಖಾತ್ರಿ ಯೋಜನೆಗೆ ಮೀಸಲಿಟ್ಟ ಅಥವಾ ಘೋಷಿಸಿದ ೬೦,೦೦೦ ಕೋಟಿಯನ್ನು ಹಿಂದಿನ ಬಜೆಟ್ ಗಳಿಗೆ ಹೋಲಿಸಿದರೇ ಈ ವರ್ಷ ಕಡಿಮೆಯಾಗಿದೆ. ಇದು ದೇಶದಲ್ಲಿ ಉದ್ಯೋಗವಕಾಶವನ್ನು ಸೃಷ್ಟಿಸುವಲ್ಲಿ ಮೋದಿ ಸರ್ಕಾರ ತೋರಿದ ಅಸಡ್ಡೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ಡಿಸೆಂಬರ್ ನಲ್ಲಿ ಮುಂಬೈ ಮೂಲದ ಸಂಸ್ಥೆ ನೀಡಿದ ವರದಿಯ ಪ್ರಕಾರ, ನಗರ ನಿರುದ್ಯೋಗ ಪ್ರಮಾಣ ಶೇಕಡಾ ೮.೯ಕ್ಕೆ ಹೆಚ್ಚಳವಾಗಿತ್ತು. ಗ್ರಾಮೀಣ ನಿರುದ್ಯೋಗ ಪ್ರಮಾಣ ಶೇಕಡಾ. ೭.೫೫ಕ್ಕೆ ತಲುಪಿತ್ತು ಎನ್ನುವುದು ಇಲ್ಲಿ ಗಮನಾರ್ಹ. 

ಕೃಷಿ ಖಾಸಗೀಕರಣದತ್ತ ಪ್ಲ್ಯಾನ್ : ಆಹಾರ ಸಬ್ಸಿಡಿಯನ್ನು ೯೦,೦೦೦ ಕೋಟಿಗೆ ಕಡಿತಗೊಳಿಸಲಾಗಿದೆ. ಗ್ಲೋಬಲ್ ಹಂಗರ್ ಇಂಡೆಕ್ಸ್ ಹೇಳುವ ಪ್ರಕಾರ ಭಾರತ ೧೨೧ ದೇಶಗಳ ಫೈಕಿ ೧೦೭ನೇ ಸ್ಥಾನದಲ್ಲಿದೆ. ದೇಶದ ಬಹುಪಾಲು ಜನರಿಗೆ ಪೌಷ್ಟಿಕ ಆಹಾರ ದೊರಕುತ್ತಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ. ಪಿಎಂ ಫೋಷಣ್ ವೆಚ್ಚವನ್ನೂ ಕೂಡ ಕಡಿತಗೊಳಿಸಲಾಗಿದೆ. ಆಹಾರ ಸಬ್ಸಿಡಿಯ ಮೇಲಿನ ಕಡಿತವು ಇದು ರೈತರ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಕೇಂದ್ರದ ಬಜೆಟ್ ರೈತರನ್ನು ಚಿಂತೆಗೀಡು ಮಾಡಿದೆ. ರಸಗೊಬ್ಬರದ  ಮೇಲಿನ ಸಬ್ಸಿಡಿಯನ್ನೂ ಕೂಡ ಕಡಿತಗೊಳಿಸಲಾಗಿದೆ. 

ಕೃಷಿ ಕಾರ್ಪೋರೇಟಿಕರಣದತ್ತ ಸರ್ಕಾರ ಹಾದಿ ಸುಲಭ ಮಾಡಿಕೊಟ್ಟಂತೆ ಕಾಣುತ್ತದೆ. ಪಶುಸಂಗೋಪನೆ, ಕೃಷಿ, ಡೈರಿ, ಮೀನುಗಾರಿಕೆಗಳಿಗೆ ಸುಮಾರು ೨೦ ಲಕ್ಷ ಕೋಟಿ ರೂ.ಗಳಷ್ಟು ಸಾಲ ಸೌಲಭ್ಯ. ಸಹಕಾರಿ ಇಲಾಖೆಗಳ ಸಹಕಾರದಿಂದ ದಾಸ್ತಾನು ಮಾರಾಟ ಸವಲತ್ತು, ಕೃಷಿ ತಂತ್ರಜ್ಞಾನಗಳಿಗೆ ಬೆಂಬಲ ಇತ್ಯಾದಿಗಳು ಕೃಷಿ ಕ್ಷೇತ್ರವನ್ನು ಕಾರ್ಪೋರೇಟಿಕರಣದತ್ತ ಕೊಂಡೊಯ್ಯುವ ಯೋಜನೆ ಎಂದು ಕಾಣಿಸುತ್ತದೆ. 

ರಾಷ್ಟ್ರೀಯ ಯೋಜನೆಯಾಗಿ ಬದಲಾದ ಭದ್ರ ಮೇಲ್ದಂಡೆ :  ರಾಜ್ಯ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ರಾಜ್ಯದಲ್ಲಿಯೇ ಮಹತ್ವ  ಪಡೆದಿರುವ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮೇಲ್ದರ್ಜೆಗೆ ಏರಿಸಿ, ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಬರೋಬ್ಬರಿ ೫,೩೦೦ ಕೋಟಿ ಮೀಸಲಿಟ್ಟು, ಚುನಾವಣಾ ಲೆಕ್ಕಾಚಾರ ಮಾಡಿದೆ ಎಂಬ ಚರ್ಚೆ ಹುಟ್ಟಿಕೊಂಡಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಮುಂದಿಟ್ಟುಕೊಂಡು ಮಧ್ಯ ಕರ್ನಾಟಕದ ಕ್ಷೇತ್ರಗಳನ್ನು ತನ್ನತ್ತ ಸೆಳೆದುಕೊಳ್ಳುವ ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮಧ್ಯ ಕರ್ನಾಟಕ ಜಿಲ್ಲೆಗಳಲ್ಲಿ ಒಂದು ಸುತ್ತಿನ ಪ್ರವಾಸ ನಡೆಸಿದ್ದು, ಈ ಯೋಜನೆಯೊಂದಿಗೆ ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗಾ, ತುಮಕೂರು ಭಾಗಗಳಲ್ಲಿ ಕೊನೆಯ ಹಂತದ ಚುನಾವಣಾ ತಂತ್ರ ರೂಪಿಸುವುದು ಬಿಜೆಪಿಯ ಲೆಕ್ಕಾಚಾರ.

-ಶ್ರೀರಾಜ್ ವಕ್ವಾಡಿ