“19.20.21” ಸಿನೆಮಾ, ಈ ಸಮಾಜದ ವ್ಯವಸ್ಥೆಯ ಭಂಜನೆ, ನೆತ್ತರು, ಮೌನ, ಅಸಹಾಯಕತೆ, ಅಧಿಕಾರ ದರ್ಪ, ಆರೋಪ, ಅನ್ಯಾಯಗಳ ರಾಕ್ಷಸೀಯತೆ, ಗದ್ಗದಿತ ಧ್ವನಿ, ನೈರಾಶ್ಯದ ನಡುವಿನ ಆಶಾವಾದವನ್ನು ಈ ಸಮಾಜದ ಮುಖಕ್ಕೆ ರಾಚುವಂತೆ ತೋರಿಸಿದೆ.
ಸಂವಿಧಾನದ ಅಡಿಯಲ್ಲಿ ಸ್ವಾತಂತ್ರ್ಯ ಸ್ವೀಕಾರದ ದೊಡ್ಡ ಭ್ರಮೆಯಲ್ಲಿಯೇ ಈ ಸಮಾಜದ ಘಾತುಕ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಂದಾಗಿದ್ದೇವೆ. ಸಮಾಜ ಮಾಡಿಕೊಳ್ಳಲೇ ಬೇಕಾದ ಒಂದು ಗಂಭೀರ ಆತ್ಮಾವಲೋಕಕ್ಕೆ ಈ ಸಿನೆಮಾ ದೂಡುತ್ತದೆ. ಕಥೆಯನ್ನು ದೃಶ್ಯ ರೂಪಕ್ಕೆ ತರುವ ಹೊತ್ತಿಗೆ ಕೆಲವೆಡೆ ಸಿನೆಮಾ ತಂಡ ಒಂದಿಷ್ಟು ತುಸು ಹೆಚ್ಚೇ ವೈಭವೀಕರಿಸಿರಬಹುದು ಎಂದು ನೋಡುಗರಿಗೆ ಅನ್ನಿಸಿದರೂ ಕೂಡ ಈ ಸಮಾಜ ಶೋಷಿತ ವರ್ಗಗಳ ಧ್ವನಿ ಅಡಗಿಸುವ ಪ್ರಯತ್ನದಲ್ಲಿಯೇ ಇಂದಿಗೂ ಇದೆ ಎನ್ನುವುದನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತಿಲ್ಲ.
ಶೋಷಿತ ಮಲೆಕುಡಿಯ ಸಮುದಾಯ ಒಂದೆಡೆಯಾದರೇ, ಇನ್ನೊಂದೆಡೆ ಆ ನೋವಿಗೆ ಧ್ವನಿಯಾಗುವ ಪಾತ್ರಗಳು ಚಿತ್ರದುದ್ದಕ್ಕೂ ಈ ಸಮಾಜದ ಬಗ್ಗೆ ಚಿಂತನೆಗೊಡ್ಡುತ್ತವೆ. ಈ ಸಮುದಾಯದ ನತದೃಷ್ಟ ಬದುಕಿನ ಸಂಕಷ್ಟ ಪುಟಗಳಿಗೆ ಈ ಸಿನೆಮಾ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದೆ. ಸಿನೆಮಾದ ಮೊದಲರ್ಧದಲ್ಲಿ ನಕ್ಸಲ್ ನಿಗ್ರಹ ದಳದವರು ಈ ಅಮಾಯಕ ಜನಾಂಗದವರ ಮೇಲೆ ಕಾನೂನು ಹೇರುವ ಧೋರಣೆ, ನೀಡುವ ಅಮಾನುಷ ಹಿಂಸೆ, ಅಧಿಕಾರ ವರ್ಗದವರು ನುಂಗುಬಾಕತನ, ವಾಸ್ತವದ ಅಸಹಾಯಕತೆ, ಬದುಕಿ ಉಳಿಯುವುದಕ್ಕೆ ಪ್ರಯತ್ನಿಸುವ ಇಂತಹ ಬುಡಕಟ್ಟು ಜನಾಂಗಗಳ ಉಸಿರನ್ನು ಹೊಸಕಿ ಹಾಕುವ ಕಾನೂನಿನ, ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯತೆ ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆಗಳ ಬಗೆಗೆ ಹಾಗೂ ಆದಿವಾಸಿಗಳ ಬಗ್ಗೆ ನಮ್ಮ ಈವರೆಗಿನ ತಿಳುವಳಿಕೆಯನ್ನು ತಿರುಗಿ ನೋಡುವಂತೆ ಮಾಡುತ್ತದೆ.
ಈ ನೆಲದ ಕೆಲವು ಕಾನೂನುಗಳು ಅರಣ್ಯವಾಸಿಗಳ ಹಕ್ಕುಗಳನ್ನೇ ಅಪಾಯಕ್ಕೀಡು ಮಾಡಿವೆ, ಅರಣ್ಯವಾಸಿಗಳನ್ನು ಅವರ ಪಾರಂಪರಿಕ ಜೀವನ ಪದ್ಧತಿ ಹಾಗೂ ತಲೆತಲೆಮಾರುಗಳಿಂದ ಬದುಕಿ ಬಂದಿರುವ ವಾಸಸ್ಥಾನಗಳಿಂದ ಒಕ್ಕಲೆಬ್ಬಿಸುವ ಆದೇಶಗಳು ನೂರಾರು ಕುಟುಂಬಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿರುವುದನ್ನು ಈ ದೇಶದ ಉದ್ದಗಲಕ್ಕೂ ಕಂಡಿದ್ದೇವೆ. ಇಂತಹ ಜನಾಂಗಗಳ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಜೀವನಪೂರ್ತಿ ಸಂಕಷ್ಟದಲ್ಲಿಯೇ ಬದುಕುವ ಹಾಗೆ ಈ ವ್ಯವಸ್ಥೆಯ ಅಧಿಕಾರಿ ವರ್ಗ ಮಾಡಿದೆ ಎನ್ನುವುದನ್ನು ಕೂಡ ಈ ಸಿನೆಮಾ ಮಾರ್ಮಿಕವಾಗಿ ತೋರಿಸಿಕೊಟ್ಟಿದೆ.
ಸಿನೆಮಾ ಪರಿಣಾಮಕಾರಿಯಾಗಿ ಮೂಡಿಬಂದಿದೆ. ದೀರ್ಘ ಮೌನ ಹಾಗೂ ಸೂಕ್ಷ್ಮ ಸಂವೇದನೆಗೆ ಒಳಪಡಿಸುವ ಈ ಸಿನೆಮಾ ಇಂತಹ ಕೆಳಸ್ತರದಲ್ಲಿರುವ ಸಮುದಾಯಗಳ ಬಗ್ಗೆ ಒಂದು ಗಂಭೀರ ಚಿಂತನೆಯತ್ತ ಚಿತ್ತ ಹರಿಸುತ್ತದೆ. ಸ್ಥಳೀಯ ರಾಜಕೀಯ ಹಾಗೂ ನಕ್ಸಲ್ ರಾಜಕೀಯಗಳ ನಡುವಿನ ಸಂಘರ್ಷದಲ್ಲಿ ಸಿಲುಕುವ ಒಂದು ಅಮಾಯಕ ಸಮುದಾಯ ಹಾಗೂ ಅದು ಕಾಣುವ ಹಿಂಸೆ ನಿಜಕ್ಕೂ ಅಸಹನೀಯ. ದ್ವಿತಿಯಾರ್ಧದಲ್ಲಿ ಕೈಗೆ ಕೊಳ ಹಾಕಿ ಮಂಜುವಿನಿಂದ ಪರೀಕ್ಷೆ ಬರೆಸುವ ದೃಶ್ಯದಿಂದ ಹಿಡಿದು, ಸತ್ಯವನ್ನು ಸುಳ್ಳು ಮಾಡುವುದಕ್ಕೆ ಪೋಲಿಸರು ಹೆಣೆಯುವ ತಂತ್ರ, ಕಾನೂನಿನ ತಡೆ, ಕಾನೂನಿನ ಹೋರಾಟ ಸೇರಿ ಬಹುತೇಕ ಎಲ್ಲಾ ದೃಶ್ಯಗಳೂ ಎದೆಯೊಳಗೆ ಕಿಚ್ಚೆಬ್ಬಿಸುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ವಕೀಲ ಸುರೇಶ್ ಹೆಗ್ಡೆಯ(ಬಾಲಾಜಿ ಮನೋಹರ್) ವೃತ್ತಿನಿಷ್ಠೆ, ಪತ್ರಕರ್ತ ವಿಜಯ್ ನ (ವೆಂಕಟೇಶ್ ಪ್ರಸಾದ್) ಸಾಮಾಜಿಕ ಜವಾಬ್ದಾರಿ, ಸಾಮಾಜಿಕ ಹೋರಾಟಗಾರ ರಫೀಯ (ರಾಜೇಶ್ ನಟರಂಗ) ಸ್ಥಿತಪ್ರಜ್ಞೆಯೊಳಗೆ ನೋಡುಗನೊಬ್ಬ ಒಂದಾಗುವಂತೆ ಮಾಡುತ್ತದೆ. ಪಾತ್ರಧಾರಿಗಳು ಹಾಗೂ ಸತ್ಯ ಘಟನೆಯ ಈ ಮೂರು ಪಾತ್ರಗಳು ಕೂಡ ಇಂತಹ ಅವ್ಯವಸ್ಥೆಯ ಸಮಾಜದೊಳಗೆ ಅಚ್ಚರಿಯೊಂದಿಗೆ ಮನಸ್ಸಿನಲ್ಲಿ ಎಚ್ಚರದ ಪ್ರಜ್ಞೆಯಾಗಿ ಉಳಿದು ಬಿಡುತ್ತಾರೆ. ಕಥಾನಾಯಕ ಮಂಜು (ಶೃಂಗ ಬಿ.ವಿ), ನಾಯಕನ ತಂದೆ (ಮಹಾದೇವ್ ಹಡಪದ), ರತ್ನಮ್ಮ (ಎಂ ಡಿ. ಪಲ್ಲವಿ) ಪಾತ್ರಗಳು ತಮಗಿರುವ ಮಿತಿಯೊಳಗೆ ಜೀವ ತುಂಬಿಸಿಕೊಂಡಿವೆ.
ಕನ್ನಡ ಸಿನೆಮಾ ರಂಗದಲ್ಲಿ ಇಂತಹ ಪ್ರಯೋಗಗಳು ಇತ್ತೀಚೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಆಶಾದಾಯಕ. ಕಥೆಯನ್ನು ದೃಶ್ಯರೂಪಕ್ಕೆ ತರುವುದು ಅಷ್ಟು ಸುಲಭವಲ್ಲ. ಈ ನೈಜ ಘಟನಾಧಾರಿತ ಸಿನೆಮಾದ ಮೂಲಕ ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿರುವ ಇಂತಹ ಅದೆಷ್ಟೋ ಸಮುದಾಯಗಳ ಕೆಟ್ಟ ಸ್ಥಿತಿಯ ಬಗ್ಗೆ ಸಮಾಜಕ್ಕೆ ನೆನಪಿಸಿಕೊಡುವಂತೆ ನಿರ್ದೇಶಕ ಮಂಸೋರೆ ಮತ್ತು ಟೀಂ ಮಾಡಿದೆ. ಸಮಾಜ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ. ಗಂಭೀರ ಮನಸ್ಥಿತಿಯ ಪ್ರತಿರೂಪವಾಗಿ ಮೂಡಿಬಂದ ಈ ಕಥಾವಸ್ತು ಎಲ್ಲಿಯೂ ನೋಡುಗನ ಕುತೂಹಲವನ್ನು ಅಲುಗಾಡಿಸುವುದಿಲ್ಲ. ಇನ್ನು, ಟೀಕೆಗೆ ಅವಕಾಶ ಕೊಡದೇ ಈ ಸಿನೆಮಾ ಆತ್ಮಾವಲೋಕನಕ್ಕೆ ದೊಡ್ಡ ಅವಕಾಶ ಮಾಡಿಕೊಡುತ್ತದೆ ಎನ್ನುವುದು ಗರಿಷ್ಠೀಕರಣವಲ್ಲ.
-ಶ್ರೀರಾಜ್ ವಕ್ವಾಡಿ

No comments:
Post a Comment