Wednesday, March 1, 2023

ಕಾಂಗ್ರೆಸ್ ನೇತೃತ್ವದ ಚುನಾವಣಾ ಮೈತ್ರಿ ಒಂದು ಮರೀಚಿಕೆ ?


ಅಧಿಕಾರದಲ್ಲಿ ಹೆಚ್ಚು ಪಾಲು ನೀಡುವವರತ್ತ ಪ್ರಾದೇಶಿಕ ಪಕ್ಷಗಳ ಚಿತ್ತ !

೨೦೨೪ ರ ಲೊಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದು, ಬಿಜೆಪಿ ವಿರುದ್ಧ ದಿನದಿಂದ ದಿನಕ್ಕೆ ಮಹಾ ಒಕ್ಕೂಟದ ಕೂಗು ಪ್ರಬಲವಾಗುತ್ತಿದೆ. ಕೆಲವು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಿಗಾಗಿ ಕಾಂಗ್ರೆಸ್ ಪಕ್ಷದ ಮುಂದಾಳತ್ವಕ್ಕೆ ಕಾಯುತ್ತಿದ್ದರೇ, ಇನ್ನು ಕೆಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೇಸೇತರ ಮುಂದಾಳತ್ವವನ್ನು ಬಯಸುತ್ತಿವೆ ಎನ್ನುವುದು ಸದ್ಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿರುವ ವಿಷಯ. 

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಗೆ ಕೆಲವು ಪ್ರಮುಖ ರಾಜಕೀಯ ಪಕ್ಷಗಳು ಒಲ್ಲೆ ಎಂದಿದ್ದವು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಕಳೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ, ಹಲವು ರಾಜಕೀಯ ಬೃಹನ್ನಾಟಕಗಳಾದ ಮೇಲೆ ತೃಣಮೂಲ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಬಿಜೆಪಿ ವಿರುದ್ಧ ಒಗ್ಗೂಡುವ ರಾಜಕೀಯ ಬಣದ ಮುಂದಾಳು ಎಂದು ಬಿಂಬಿಸಲಾಗಿತ್ತು, ಅದಾಗ್ಯೂ ಹಲವು ಬಾರಿಯ ರಾಷ್ಟ್ರ ರಾಜಧಾನಿಯ ಭೇಟಿ, ಹೈ ಲೆವೆಲ್ ಮೀಟಿಂಗ್ ಗಳ ನಂತರ ಆ ವಿಚಾರ ದೂರ ಸರಿಯಿತು. ಕಾಂಗ್ರೆಸ್ ತಾನೇ ಮುಂದಾಳತ್ವ ವಹಿಸಿಕೊಳ್ಳುವುದಾಗಿ ಹಠ ಹಿಡಿಯಿತು. ತೃಣ ಮೂಲ ಕಾಂಗ್ರೆಸ್ ಸೇರಿ ಹಲವು ರಾಜಕೀಯ ಪಕ್ಷಗಳ ಅಭಿಪ್ರಾಯ ಭಿನ್ನವಾಗಿತ್ತು. 

ಇದೇ ರೀತಿ ಬಿಹಾರದಲ್ಲಿ ಬಿಜೆಪಿ ವಿರುದ್ಧ ಜಯ ಸಾಧಿಸಿ ಆರ್ ಜೆ ಡಿ ಜೊತೆಗೆ ಮೈತ್ರಿ ಮಾಡಿ ಸರ್ಕಾರ ರಚಿಸಿದಾಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬಿಜೆಪಿ ವಿರೋಧಿ ರಾಜಕೀಯ ಮೈತ್ರಿಗೆ ನೇತಾರ ಎಂದು ಬಿಂಬಿಸಲಾಯಿತು. ನಿತೀಶ್ ಕುಮಾರ್ ಕಾಂಗ್ರೆಸ್ ತೀರ್ಮಾನಕ್ಕೆ ಕಾದು ಕುಳಿತರಾದರೂ, ಕಾಂಗ್ರೆಸ್ ಈ ಬಗ್ಗೆ ಹೆಚ್ಚು ಮನಸ್ಸು ಮಾಡಲಿಲ್ಲ. ಈ ವಿಚಾರವೂ ದೂರ ಸರಿಯಿತು. 

ಕಾಂಗ್ರೆಸ್ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಸ್ಪರ್ಧಿಸಲು ಹೆಣೆದ ದೊಡ್ಡ ಪಬ್ಲಿಕ್ ಈವೆಂಟ್ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದ ಉದ್ದಗಲಕ್ಕೂ ಸರಿಸುಮಾರು ೪೧೦೦ ಕಿಲೋ ಮೀಟರ್ ಸಾಗಿತ್ತು. ಕಾಂಗ್ರೆಸ್ ದೊಡ್ಡ ಮಟ್ಟಿಗೆ ರಾಜಕೀಯವಾಗಿ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಿತ್ತು. ಮೇಲ್ನೋಟಕ್ಕೆ ಯಾತ್ರೆ ಸಾಗಿದಲ್ಲೆಲ್ಲಾ ಜನರ ಅಭೂತಪೂರ್ವ ಬೆಂಬಲ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ದೊರಕಿತ್ತಾದರೂ ರಾಹುಲ್ ಹಾಗೂ ಕಾಂಗ್ರೆಸ್ ನ ನಿಜ ಉದ್ದೇಶ ಅಷ್ಟಾಗಿ ಫಲಿಸಲಿಲ್ಲ. ರಾಹುಲ್ ಗಾಂಧಿ ಇಡೀ ದೇಶದ ರಾಜಕೀಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ತಮ್ಮ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಂಡರು ಮತ್ತು ಧ್ವನಿ ಕಳೆದುಕೊಂಡ ವರ್ಗಕ್ಕೆ ಧ್ವನಿಯಾಗುವ ಪ್ರಯತ್ನ ಮಾಡಿದರು. ಆದರೇ, ಕಾಂಗ್ರೆಸ್ ನ ಈ ಪಬ್ಲಿಕ್ ಈವೆಂಟ್ ಭಾರತದುದ್ದಕ್ಕೂ ಪ್ರಾದೇಶಿಕ ಪಕ್ಷಗಳನ್ನು ಓಲೈಸುವಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ ಎನ್ನುವುದು ಅಷ್ಟೇ ಸತ್ಯ. ಕಾಶ್ಮೀರದ ಕೆಲವು ಪ್ರಮುಖ ನಾಯಕರು ಹಾಗೂ ತಮಿಳುನಾಡಿನ ಮಕ್ಕಳ್ ನೀಧಿ ಮೈಯಂ ಪಕ್ಷದ ಕಮಲ್ ಹಾಸನ್ ಸೇರಿ ಕೆಲವು ಪ್ರಮುಖರನ್ನು ಹೊರತಾಗಿ ಇತರೆ ರಾಜಕೀಯ ಪಕ್ಷಗಳ ಪ್ರಭಾವಿ ನಾಯಕರಿಗೆ ರಾಹುಲ್ ಖುದ್ದಾಗಿ ಆಹ್ವಾನ ಇತ್ತಿದ್ದರೂ ಕೂಡ, ಮತ್ಯಾರು ರಾಹುಲ್ ಗಾಂಧಿಗೆ ಯಾತ್ರೆಯಲ್ಲಿ ಬೆಂಬಲ ಸೂಚಿಸಿಲ್ಲ. ಇದು ರಾಹುಲ್ ಗಾಂಧಿ ಒಂದು ರೀತಿಯಲ್ಲಿ ಮುಖಭಂಗವಾಯ್ತು. 

ಹಾಗಾದರೇ ಈ ವಿರೋಧ ಪಕ್ಷಗಳ ಮೈತ್ರಿ ಒಂದು ಮರೀಚಿಕೆಯೇ ? ಅಥವಾ ಮೋದಿಯನ್ನು ರಾಜಕೀಯವಾಗಿ ಮಣಿಸುವ ಘನ ಉದ್ದೇಶದಿಂದ ವಿರೋಧ ಪಕ್ಷಗಳು ರಹಸ್ಯವಾಗಿ ಮೈತ್ರಿ ರೂಪು ಪಡೆಯುತ್ತಿವೆಯೇ ಎನ್ನುವುದು ೨೦೨೪ರ ಲೋಕಸಭಾ ಚುನಾವಣೆಯ ಮುಂದಿರುವ ಕುತೂಹಲಕಾರಿ ಪ್ರಶ್ನೆ. ಒಂದು ವೇಳೆ ರಾಜಕೀಯವಾಗಿ ಬಿಜೆಪಿಯನ್ನು ಶತಾಯಗತಾಯ ಸೋಲಿಸುವ ಉದ್ದೇಶದಿಂದ ವಿರೋಧ ಪಕ್ಷಗಳು ಒಂದಾದರೇ, ಬಹುಶಃ ರಾಜಕೀಯದ ಇತಿಹಾಸದಲ್ಲೊಂದು ದಿನ ಒಂದು ರಾಷ್ಟ್ರೀಯ ಪಕ್ಷದ ವಿರುದ್ಧವಾಗಿ ವಿರೋಧ ಪಕ್ಷಗಳು ಒಂದಾದದ್ದನ್ನು ಈ ದೇಶ ಅಚ್ಚರಿಯಾಗಿ ಕಾಣಬಹುದು. ಇನ್ನು, ಈ ಹಿಂದೆಯೂ ದೇಶದ ಇತಿಹಾಸದಲ್ಲಿ ಒಂದು ರಾಜಕೀಯ ಸಿದ್ಧಾಂತದ ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡಿದ್ದು ಇದೆ (೧೯೬೭. ೧೯೭೭, ೧೯೮೯ರಲ್ಲಿ ವಿರೋಧ ಪಕ್ಷಗಳು ಸೇರಿಕೊಂಡು ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಉರುಳಿಸುವುದಕ್ಕೆ ಬೇಕಾದ ಎಲ್ಲಾ ತಂತ್ರಗಳನ್ನು ಹೂಡಿದ್ದವು) ಆದರೂ, ಈ ಮಟ್ಟಿಗೆ ಆಡಳಿತ ವಿರುದ್ಧಕ್ಕಾಗಿ ಹುಟ್ಟಿಕೊಂಡ ಮೈತ್ರಿ ಇಲ್ಲ. ಅಂದಿನ ಸನ್ನಿವೇಶಕ್ಕೂ ಇಂದಿನ ಸನ್ನಿವೇಶಕ್ಕೂ ವ್ಯತ್ಯಾಸಗಳಿವೆ ಎನ್ನುವುದು ಗಮನಾರ್ಹ. ಹಾಗಾಗಿ ದೇಶ ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳ ನಡುವೆ ರಾಜಕೀಯ ಅಸ್ಥಿರತೆ ಇರುವ ಸಂದರ್ಭದಲ್ಲಿ ಮೈತ್ರಿ ಆದರೇ ಮತ್ತು ಗೆದ್ದರೇ, ಈ ದೇಶದ ಇತಿಹಾಸದಲ್ಲಿ ಒಂದು ರಾಜಕೀಯ ಅಚ್ಚರಿಯಾಗಬಹುದು. 

ಒಂದಿಷ್ಟು ಹಿಂದಕ್ಕೆ ಹೋಗೋಣ, ೧೯೬೭ರಲ್ಲಿ ಕಾಂಗ್ರೆಸ್ ಅಜೇಯ ಏಂದು ಭಾವಿಸಿದ್ದಾಗ, ವಿರೋಧ ಪಕ್ಷಗಳ ಮೈತ್ರಿ ಅಸಾಧ್ಯವಾದದ್ದನ್ನು ಮಾಡಿ ತೋರಿಸಿತ್ತು, ಅಂದು ವಿರೋಧ ಪಕ್ಷಗಳು ಒಂಬತ್ತು ರಾಜ್ಯಗಳಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ನನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ೧೯೭೭ರಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸೋತಿತು. ೧೯೮೯ರಲ್ಲಿ ಲೋಕಸಭೆಯಲ್ಲಿ ೪೦೦ಕ್ಕೂ ಹೆಚ್ಚು ಸಂಸದೀಯ ಸ್ಥಾನಗಳನ್ನು ಹೊಂದಿದ್ದ ಸರ್ಕಾರವು ಬೋಫೋರ್ಸ್ ಹಗರಣದ ಕಾರಣದಿಂದ ಹೀನಾಯ ಸೋಲು ಅನುಭವಿಸಿತ್ತು. 

ಇಂದು ಕಾಂಗ್ರೆಸ್ ಚಕ್ರಾಧಿಪತ್ಯದಲ್ಲಿದ್ದ ದೇಶವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಭಾರತ ರಾಜಕೀಯವಾಗಿ, ಸಾಮಾಜಿಕವಾಗಿ, ಸೈದ್ಧಾಂತಿಕವಾಗಿ ಬದಲಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯದ ಮೂಲ ಮಾದರಿಯು ಟೆಕ್ನೋನಿಕ್ ಶಿಫ್ಟ್ ಅನ್ನು ಕಂಡುಕೊಂಡಿದೆ. ಒಂದೆಡೆ ಆಡಳಿತ ವ್ಯವಸ್ಥೆ ಪೂರ್ತಿ ಸೈದ್ಧಾಂತಿಕವಾದಾಗ, ಇನ್ನೊಂದೆಡೆ ವಿರೋಧ ಬಣ ಅದರ ಸಿದ್ಧಾಂತವನ್ನು ಕಿತ್ತೆಸೆಯುವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಬೆಳೆದಿದೆ. ಬಿಜೆಪಿ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿಕೊಳ್ಳುವ ಪಕ್ಷಗಳು ಭಿನ್ನಾಭಿಪ್ರಾಯಗಳಿಂದ ಕೂಡಿದೆ. ಬಹುತೇಕ ಪ್ರಾದೇಶಿಕ ವಿರೋಧಿ ರಾಜಕೀಯ ಪಕ್ಷಗಳ ನಾಯಕರಿಗೆ ರಾಷ್ಟ್ರೀಯ ದೃಷ್ಟಿಕೋನ ಇಲ್ಲ, ಹಿಂದಿನ ಪ್ರಮುಖ ಮೂರು ರಾಜಕೀಯ ಸ್ಟ್ರೀಮ್ ಗಳು - ಜನಸಂಘ ಮತ್ತು ನಂತರ ಬಿಜೆಪಿ, ಸಮಾಜವಾದಿ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ಬದಲಾಯಿಸಲು ಹೋರಾಡುತ್ತಿದ್ದವು. ಭಾರತದ ಬಗ್ಗೆ ಅವು ಸ್ಪಷ್ಟವಾದ ಸೈದ್ಧಾಂತಿಕ ತಿಳುವಳಿಕೆಯನ್ನು ಹೊಂದಿದ್ದವು. ರಾಜಕೀಯ ಸಿದ್ಧಾಂತಗಳಲ್ಲಿ ಸ್ಪಷ್ಟ ದೃಷ್ಟಿ ಇತ್ತು. ಭಾರತದ ಭವಿಷ್ಯಕ್ಕಾಗಿ ಅವರ ದೃಷ್ಟಿಕೋನಗಳಲ್ಲಿ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಎಲ್ಲಾ ಪಕ್ಷಗಳು ಮತ್ತು ಅವರ ನಾಯಕರು ಕಾಂಗ್ರೆಸ್ ಪಕ್ಷವನ್ನು ಮಣಿಸಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಬೇಕು ಎಂಬ ಸಾಮಾನ್ಯ ನಿಲುವನ್ನು ಹೊಂದಿದ್ದರು. ಆ ಒಮ್ಮತ ಇಂದು ಕಾಣೆಯಾಗಿದೆ. ಈಗ ಮೈತ್ರಿಗೆ ತಯಾರಾಗುತ್ತಿರುವ ಯಾವ ಪಕ್ಷಗಳಿಗೂ ತಮ್ಮ ಕನಸಿನ ಭಾರತದ ಬಗ್ಗೆ ಸ್ಪಷ್ಟ ಕಲ್ಪನೆಯೇ ಇಲ್ಲ. ಅಧಿಕಾರವನ್ನು ವಶಪಡಿಸಿಕೊಳ್ಳುವುದು ಮತ್ತು ಸರ್ಕಾರಗಳನ್ನು ರಚಿಸುವುದು ಅವರ ಪ್ರಾಥಮಿಕ ಗುರಿಯಾಗಿದೆ.  

ಇನ್ನು ಮುಲಾಯಂ ಸಿಂಗ್ ಯಾದವ್ (ಸಮಾಜವಾದಿ ಪಕ್ಷ), ಲಾಲೂ ಪ್ರಸಾದ್ ಯಾದವ್ (ರಾಷ್ಟ್ರೀಯ ಜನತಾ ದಳ), ಬಾಳಾ ಸಾಹೇಬ್ ಠಾಕ್ರೆ (ಶಿವಸೇನೆ), ವೈ ಎಸ್ ರಾಜಶೇಖರ್ ರೆಡ್ಡಿ (ಕಾಂಗ್ರೆಸ್ ಪಕ್ಷ. ಮಗ ವೈ ಎಸ್ ಜಗನ್ಮೋಹನ್ ರೆಡ್ಡಿ ಈಗ ವೈ ಎಸ್ ಆರ್ ಕಾಂಗ್ರೆಸ್ ಪಾರ್ಟಿಯ ಮುಖ್ಯಮಂತ್ರಿ) ಬಿಜು ಪಟ್ನಾಯಕ್ (ಜನತಾ ದಳ), ಎಂ ಕೆ ಕರುಣಾನಿಧಿ (ಡಿಎಂ.ಕೆ), ಶಿಬು ಸೋರೆನ್ (ಜಾರ್ಖಾಂಡ್ ಮುಕ್ತಿ ಮೋರ್ಚಾ), ದೇವೇ ಗೌಡ (ಜೆಡಿಎಸ್ ), ಫಾರೂಖ್ ಅಬ್ದುಲ್ಲಾ (ಜಮ್ಮು & ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ), ಮುಫ್ತಿ ಮೊಹಮ್ಮದ್ ಸಯ್ಯದ್ (ಜಮ್ಮು & ಕಾಶ್ಮೀರ ಪೀಪಲ್ಸ್ ಡೆಮೊಕ್ರೆಟಿಕ್ ಪಾರ್ಟಿ) ಇವರೆಲ್ಲಾ ಈ ದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಂದಲೇ ರಾಜಕೀಯ ಧೀಮಂತರೆನ್ನಿಸಿಕೊಂಡವರು. ಒಂದು ಥರದಲ್ಲಿ ಐಡಿಯಾಲಜಿ ಇವರ ಬಲವಲ್ಲ, ಪ್ರಾದೇಶಿಕ ಅಧಿಕಾರವೇ ಪ್ರೇರಕ ಶಕ್ತಿ. ಇವರದ್ದು ಮತ್ತಿವರ ಮಕ್ಕಳ ಭವಿಷ್ಯವನ್ನು ಅಧಿಕಾರ ಮತ್ತು ಕನ್ವಿಕ್ಷನ್ ಅವರ ರಾಜಕೀಯ ವ್ಯಾಖ್ಯಾನಿಸುವುದರಿಂದ ತಮ್ಮೊಂದಿಗೆ ಅಧಿಕಾರದ ಮೈತ್ರಿ ಮಾಡಿಕೊಳ್ಳಬಹುದಾದ ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಿದ್ಧರಿರುವವರು. ಇವರ ದೃಷ್ಟಿಯಲ್ಲಿ ಮೋದಿ ಹಾಗೂ ರಾಹುಲ್ ಗಾಂಧಿ ಇಬ್ಬರೂ ಒಂದೇ. ಅಧಿಕಾರದಲ್ಲಿ ಹೆಚ್ಚಿನ ಪಾಲುದಾರಿಕೆ ನೀಡುವವರು ಅವರ ಮೈತ್ರಿಯಾಗುತ್ತಾರೆ.  

ಇನ್ನು, ಮಾಯಾವತಿ ಮೋದಿ ಸರ್ಕಾರದ ಬಗ್ಗೆ ಮೃದು ಧೋರಣೆ ಇದೆ ಎಂಬ ವದಂತಿಗಳಿವೆ. ಮೋದಿ ವಿರುದ್ಧ ಹಗೆತನ ಮೆರೆದಿದ್ದ ಮಮತಾ ಬ್ಯಾನರ್ಜಿ ನಿಲುವು ಅಸ್ಪಷ್ಟ. ನವೀನ್ ಪಟ್ನಾಯಕ್ ಒಡಿಶಾದಲ್ಲಿ ಸಂತೋಷವಾಗಿದ್ದಾರೆ, ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿಗೆ ಮೋದಿ ಬಗ್ಗೆ ಮೃದು ಧೊರಣೆ ಇದೆ. ಕೇಜ್ರಿವಾಲ್ ಅವರು ತಮ್ಮ ರಾಜ್ಯಗಳಲ್ಲಿ ಅಸ್ತಿತವದಲ್ಲಿರಬೇಕಾದರೇ, ಬಿಜೆಪಿ ವಿರುದ್ಧ ಹೋರಾಡಬೇಕು. ಆದರೆ ಭವಿಷ್ಯದಲ್ಲಿ ರಾಜಿಗೆ ತೆರೆದ ಬಾಗಿಲು ಅನ್ನಿಸುತ್ತದೆ. ಕರ್ನಾಟಕದಲ್ಲಿ  ಕುಮಾರಸ್ವಾಮಿ ಮತ್ತು ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಈ ಹಿಂದೆ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡಿದ್ದಾರೆ. ಶರದ್ ಪವಾರ್ ೨೦೧೪ ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವನ್ನು ಉಳಿಸಲು ಸಹಾಯ ಮಾಡಿದರು. ಮೆಹಬೂಬಾ ಮುಫ್ತಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದರು.  

ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಕುತೂಹಲ ಕೆರಳಿಸಿದೆ. ಆದರೆ ಕೆಲವು ರಾಜ್ಯಗಳಲ್ಲಿ ಕೆಲವು ಸ್ಥಾನಗಳನ್ನು ಹೊರತುಪಡಿಸಿ, ಬಿಜೆಪಿ ವಿರುದ್ಧ ಏಕಾಂಗಿಯಾಗಿ ಗಣನೀಯವಾದ ಬದಲಾವಣೆ ತರಲಿದೆ ಎಂಬ ಸ್ಥಿತಿಯಲ್ಲಿಲ್ಲ. ಕಾಂಗ್ರೆಸ್ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಫೆಡರಲಿಸಂ ಬಗ್ಗೆ ಮಾತನಾಡುತ್ತದೆ, ಆದರೆ ಈ ವಿಷಯಗಳ ಬಗ್ಗೆ ಸಿದ್ಧಾಂತಗಳಲ್ಲಿ ಸ್ಪಷ್ಟತೆಯ ಕೊರತೆ ಕಾಂಗ್ರೆಸ್ ನಲ್ಲಿ ಎದ್ದು ಕಾಣುತ್ತದೆ. 

ಒಟ್ಟಿನಲ್ಲಿ, ವಿರೋಧ ಪಕ್ಷಗಳ ಮೈತ್ರಿಯ ವಿಷಯ ಜಟಿಲವಾದಂತಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಗೆ ಪ್ರಾದೇಶಿಕ ಪಕ್ಷಗಳ ನಿಲುವೇನು ?, ಬಿಜೆಪಿಯ ಅಸ್ತ್ರವೇನು..? ರಾಜಕೀಯ ಪಾಲುದಾರಿಕೆಯ ಗುಟ್ಟೇನು? ಮುಂದಿನ ಲೋಕಸಭಾ ಚುನಾವಣೆಯೊಳಗಾಗಿ ರಾಜಕೀಯದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದು ಸದ್ಯದ ಕುತೂಹಲ.  

-ಶ್ರೀರಾಜ್ ವಕ್ವಾಡಿ 


 


No comments:

Post a Comment