ಚುನಾವಣಾ ಕಣದಿಂದ ದೂರಕ್ಕುಳಿಯುವ ಯಡಿಯೂರಪ್ಪ ಮತ್ತು ಬಿಜೆಪಿ !
ಯಡಿಯೂರಪ್ಪ ಹೋರಾಟದ ಹಿನ್ನೆಲೆಯಿಂದ ಬಂದವರು, ಆರ್ ಎಸ್ ಎಸ್ ನ ನಿಜ ಶಿಸ್ತು ಅವರಲ್ಲಿದೆ. ರಾಜ್ಯ ಬಿಜೆಪಿಯ ಪಾಲಿಗೆ ಜೀವ ತುಂಬಿಸಿದ ನಾಯಕ. ಸಿಟ್ಟು, ಅವಸರದ ನಿರ್ಧಾರ, ಏಕ್ ದಿನ್ ಕಾ ಮುಖ್ಯಮಂತ್ರಿ, ಭ್ರಷ್ಟಾಚಾರದ ಮೇಲೆ ಸೆರೆಮನೆ ವಾಸ ಹೊರತು ಪಡಿಸಿದರೇ, ಯಡಿಯೂರಪ್ಪ ಕರ್ನಾಟಕ ಬಿಜೆಪಿಗೆ ಮಹತ್ತರ ಪಾತ್ರ. ಸದ್ಯದ ರಾಜಕಾರಣಿಗಳ ಪಟ್ಟಿಯಲ್ಲಿ ಯಡಿಯೂರಪ್ಪ ಹಿರಿಯ ಹಾಗೂ ಅನುಭವಿ ರಾಜಕಾರಣಿ. ಸುಮಾರು ಐವತ್ತು ವರ್ಷಗಳ ಸುದೀರ್ಘ ರಾಜಕೀಯ ಅನುಭವವಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಇದೇ ಮೊಟ್ಟಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿಯದಿರುವ ನಿರ್ಧಾರ ಮಾಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದರಲ್ಲಿ ಬಿಜೆಪಿ ಹೈಕಮಾಂಡ್ ಸೃಷ್ಟಿಸಿದ ರಾಜಕೀಯ ಹೈಡ್ರಾಮ ದೇಶದ ರಾಜಕಾರಣವನ್ನೇ ಕರ್ನಾಟಕ ರಾಜಕಾರಣದತ್ತ ತಿರುಗಿ ನೋಡುವಂತೆ ಮಾಡಿತ್ತು. ಅದಾದ ಮೇಲೆ ನಡೆದ ಬಿಜೆಪಿಯ ಸಾಲು ಸಾಲು ಬೃಹನ್ನಾಟಕವನ್ನು ಈ ರಾಜ್ಯದ ಜನ ಕಂಡು ಕಣ್ತುಂಬಿಸಿಕೊಂಡಿದ್ದಾರೆ. ಯಡಿಯೂರಪ್ಪ ತುಂಬಾ ಭಾವುಕರಾಗಿಯೇ ಪದತ್ಯಾಗ ಮಾಡಿದರು. ಕರ್ನಾಟಕ ಬಿಜೆಪಿಯ ದೆಸೆ ಬದಲಾಯಿಸಿದ ಒಬ್ಬ ರಾಜಕಾರಣಿಯ ರಾಜಕೀಯ ಬದುಕಿನಲ್ಲಿ ಎಂದೂ, ಯಾರೂ ಊಹಿಸಿರದಂತೆ ನಡೆದ ಘಟನೆಯದು. ಯಡಿಯೂರಪ್ಪ ರಾಜಕೀಯದ ಜೀವನದಲ್ಲಿ ಅಂತದ್ದೊಂದು ದಿನ ಎದುರಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ. ಆ ಒಂದು ಬೆಳವಣಿಗೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಅನೇಕ ಬದಲಾವಣೆಗೆ ಸಾಕ್ಷಿಯಾಯಿತು.
ಮಂಡ್ಯ ಜಿಲ್ಲೆಯ ಬೂಕನಕೆರೆಯಿಂದ ಮಲೆನಾಡಿನ ಶಿಕಾರಿಪುರಕ್ಕೆ ಆರ್ಎಸ್ಎಸ್ ಭದ್ರ ಪಡಿಸಬೇಕು ಎಂಬ ಮಹದಾಸೆಯಿಂದ ಬಂದ ಯಡಿಯೂರಪ್ಪರ ನಡೆ ರಾಜ್ಯ ರಾಜಕಾರಣದಲ್ಲಿ ಅನೇಕ ಬದಲಾವಣೆ ತರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಯಡಿಯೂರಪ್ಪ ಬೂಕನಕೆರೆಯಿಂದ ಶಿಕಾರಿಪುರಕ್ಕೆ ಪಡೆದ ಪ್ರವೇಶ ರಾಜಕಾರಣಕ್ಕೆ ಮಹತ್ವದ ಬಾಗಿಲು ತೆರೆದುಕೊಟ್ಟಿತ್ತು. ಯಡಿಯೂರಪ್ಪ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುವುದಕ್ಕೆ ಮಲೆನಾಡು ಸೀಮೆ ಶಿಕಾರಿಪುರ ಮಹತ್ವದ ಬೆಂಬಲ ನೀಡಿತ್ತು ಎನ್ನುವುದು ಉಲ್ಲೇಖಾರ್ಹ. ಇಂತಹ ಒಬ್ಬ ರಾಜಕಾರಣಿ ಈಗ ಚುನಾವಣೆಯಿಂದ ದೂರ ಉಳಿಯುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಕಳೆದ ವರ್ಷ ಶೀಕಾರಿಪುರದಿಂದ ನಾನು ಸ್ಪರ್ಧಿಸುವುದಿಲ್ಲ, ನನ್ನ ಮಗನಿಗೆ ಬೆಂಬಲಿಸಿ ಎಂದು ಕೇಳಿಕೊಂಡ ಯಡಿಯೂರಪ್ಪರ ಘೋಷಣೆ ರಾಜಕೀಐ ಪಡಸಾಲೆಯಲ್ಲಿ ಚರ್ಚೆಗೆ ಕಾರಣವಾಗಿತ್ತು.
ಶಾಕ್ ಮೇಲೆ ಶಾಕ್ ಕೊಟ್ಟ ಬಿ ಎಸ್ ವೈ : ಸೇರೆಮನೆ ಪೂರೈಸಿ ಬಂದಾಗ ಸ್ವಪಕ್ಷದ ವರ್ತನೆ ಬಿಎಸ್ ವೈ ಶಾಕ್ ಆಗಿತ್ತು, ಮಾತ್ರವಲ್ಲದೇ, ಸಿಟ್ಟು, ಸೆಡವು, ಕೋಪ, ತಾಪ, ದ್ವೇಷ, ಅಸೂಯೆಗಳಿಗೆ ತುಪ್ಪ ಸುರಿದು ಪ್ರಜ್ವಲಿಸಿಕೊಂಡಂತಾಗಿತ್ತು. ಸ್ವಲ್ಪ ಹಿಂದಕ್ಕೆ ಹೋಗಿ ಗಮನಿಸೋಣ, ೨೦೧೧ರ ಜುಲೈ ತಿಂಗಳ ೩೧ನೇ ತಾರೀಕನ್ನು ನೆನಪಿಸಿಕೊಳ್ಳಬೇಕು (ಭ್ರಷ್ಟಾಚಾರದ ಆರೋಪದ ಮೇಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ), ೨೦೧೨ರ ಜನವರಿ ೩೧ನೇ ತಾರೀಕನ್ನು ಈ ರಾಜ್ಯ ನೆನಪಿಸಿಕೊಳ್ಳಬೇಕು (ಸ್ವಪಕ್ಷದಿಂದಲೇ ಅವಮಾನ, ಶಾಸಕ ಸ್ಥಾನ, ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ), ೨೦೧೨ರ ಡಿಸೆಂಬರ್ ೯ನೇ ತಾರೀಕನ್ನು ನೆನಪಿಸಿಕೊಳ್ಳಬೇಕು (ಕೆಜೆಪಿ ಎಂಬ ನೂತನ ರಾಜಕೀಯ ಪಕ್ಷ ಸ್ಥಾಪನೆ) ೨೦೧೩ರ ವಿಧಾನ ಸಭಾ ಚುನಾವಣೆಯ ಫಲಿತಾಂಶವನ್ನು ಗಮನಿಸಬೇಕು. ಕೆಜೆಪಿ ಪಕ್ಷದಿಂದ ಶಿಕಾರಿಪುರದಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು. ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದ ಯಡಿಯೂರಪ್ಪರ ನಡೆಯಿಂದ ೧೧೦ ಶಾಸಕರ ಬೆಂಬಲ ಹೊಂದಿದ್ದ ಬಿಜೆಪಿ ಕೇವಲ ೪೦ಕ್ಕೆ ಕುಸಿಯುವಂತೆ ಆಯ್ತು. ಕೆಜೆಪಿ ಶೇ. ೧೦ರಷ್ಟು ಮತಗಳಿಸಿ ೮ ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಇದರ ಪರಿಣಾಮವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರೋಬ್ಬರಿ ೧೨೨ ಶಾಸಕರ ಬಹುಮತಗಳೊಂದಿಗೆ ರಾಜ್ಯದ ಅಧಿಕಾಋ ಹಿಡಿಯುವುದಕ್ಕೆ ಕಾರಣವಾಯಿತು. ಪರೋಕ್ಷವಾಗಿ ಬಿಜೆಪಿ ಸೋಲಿಗೆ ಬಿ ಎಸ್ ವೈ ಕಾರಣರಾದರು, ಯಡಿಯೂರಪ್ಪರಿಲ್ಲದ ಬಿಜೆಪಿ ತೀವ್ರ ಮುಖಭಂಗಕ್ಕೊಳಗಾಯ್ತು. ಇದು ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಕೊಟ್ಟ ಶಾಕ್, ಇದು ಅಂದಿನ ಬಿಜೆಪಿಯ ಹೈಕಮಾಂಡ್ಗೂ ತಾನು ಏನೆಂಬುವುದನ್ನು ತೋರಿಸಿಕೊಟ್ಟಿದ್ದೂ ಹೌದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇದು ಯಡಿಯೂರಪ್ಪ ರಾಜ್ಯ ರಾಜಕಾರಣಲ್ಲಿ ಕೊಟ್ಟ ಶಾಕ್. ಬಿ ಎಸ್ ವೈ ಬಿಜೆಪಿ ಕಣದಲ್ಲಿಲ್ಲದ ಪರಿಣಾಮ ಬಿಜೆಪಿ ನೆಲ ಮುಕ್ಕಿದ್ದು ಈ ರಾಜ್ಯ ಕಂಡಿದೆ. ಆಮೇಲೆ ೨೦೧೩ರ ನವೆಂಬರ್ ನಲ್ಲಿ ಕೆಜೆಪಿಯಿಂದ ಮತ್ತೆ ಮರಳಿ ಬಿಜೆಪಿಗೆ ಬಂದಿದ್ದು, ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನ ಆಡಿದ್ದೆಲ್ಲವೂ ರಾಜಕೀಯ ಭವಿಷ್ಯಕ್ಕೆ ಬಿಡಿ, ಅದು ಎರಡನೇ ಹಂತದ ಚರ್ಚೆ. ಆದರೇ, ಇದು ಕೂಡ ಒಂದು ರೀತಿಯಲ್ಲಿ ಶಾಕ್ ಆಗಿತ್ತು.
ಎಲ್ಲವೂ ಮಗ ವಿಜಯೇಂದ್ರನಿಗೋಸ್ಕರ ..! : ಈಗ ರಾಜ್ಯ ವಿಧಾನಸಭಾ ಕಣದಲ್ಲಿ ಬಿಎಸ್ವೈ ಇಲ್ಲ. ಇದು ಕೂಡ ಬಿಜೆಪಿಗೆ ಶಾಕ್. ವಂಶರಾಜಕಾರಣವನ್ನು ಮುಕ್ತಿಗೊಳಿಸಬೇಕು ಎಂಬ ನಿಲುವು ಹೊಂದಿರುವ ಹೈಕಮಾಂಡ್, ತಮ್ಮ ಮಗ ವಿಜಯೇಂದ್ರ ಅವರಿಗೆ ಸ್ಥಾನಮಾನ ಕೊಡಿಸುವ ದೃಷ್ಟಿಯಲ್ಲಿ ಒತ್ತಡ ಹೇರಿದ್ದರು, ತಮ್ಮ ಜಾತಿ ಸ್ವಾಮೀಜಿಗಳ ಬೆಂಬಲದಿಂದ ಲಿಂಗಾಯತ ಸಮುದಾಯಲ್ಲಿ ತಾನು ಬಿಟ್ಟರೇ, ಮತ್ಯಾರೂ ಲಿಂಗಾಯತ ಸಮಾಜದಲ್ಲಿ ʼಸಮುದಾಯದ ನಾಯಕʼ ಎಂದು ಗುರುತಿಸಿಕೊಂಡವರಿಲ್ಲ ಎಂದು ತೋರಿಸಿದ್ದು, ಲಿಂಗಾಯತ ಸಮುದಾಯವೇ ಇಲ್ಲಿ ನಿರ್ಣಾಯಕ ಎಂಬಂತೆ ತೋರಿಸಿದ್ದೆಲ್ಲವೂ ಹೈಕಮಾಂಡ್ಗೆ ಒಳಗಿಂದೊಳಗೆ ಸಿಟ್ಟಿತ್ತು. ಅದಕ್ಕಾಗಿಯೇ ಬಲವಂತವಾಗಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಎನ್ನುವ ಮಾತುಗಳ್ಯಾವುವು ಸುಳ್ಳಲ್ಲ. ಆದರೂ ಯಡಿಯೂರಪ್ಪ ಇರುವವರೆಗೆ ಬಿಜೆಪಿಗೆ ಯಡಿಯೂರಪ್ಪರೇ ಆಧಾರ. ಹಾಗಾಗಿಯೇ, ಬಿಜೆಪಿಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ಆಯ್ಕೆ ಮಾಡಿದ್ದು, ಬಿಎಸ್ ವೈಗೆ ಮನಸಾರೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಂಡಿರುವುದು ಮಗನ ರಾಜಕೀಯ ಭವಿಷ್ಯಕ್ಕಾಗಿ ಮತ್ತು ತನ್ನ ರಾಜಕೀಯ ಇತಿಹಾಸದಲ್ಲಿ ರಾಷ್ಟ್ರಮಟ್ಟದ ರಾಜಕಾರಣದ ಒಂದು ಪುಟವಿರಲಿ ಎಂಬುವುದಕ್ಕೆ ಅಷ್ಟೇ ಹೊರತು, ಯಡಿಯೂಪ್ಪರಿಗೆ ರಾಷ್ಟ್ರ ರಾಜಕಾರಣದಲ್ಲಿ ಅಷ್ಟಾಗಿ ಹೋಲ್ಡ್ ಇಲ್ಲ ಎನ್ನುವುದು ಸ್ವತಃ ಅವರಿಗೂ ಗೊತ್ತಿದೆ. ಮತ್ತೆ ಹೈಕಮಾಂಡ್ ಗೆ ಯಡಿಯೂರಪ್ಪ ಮಾಧ್ಯಮಗಳ ಮುಂದೆ, ವೇದಿಕೆ ಮೇಲೆ ವಿಧಯತೆ ತೋರಿಸುವುದೆಲ್ಲಾ ಬರೀ ನಾಟಕವಷ್ಟೇ. ಇನ್ನು, ಬಿಎಸ್ವೈ ಅವರ ಇತ್ತೀಚೆಗಿನ ಎಲ್ಲಾ ನಡೆಯೂ ಮಗ ವಿಜಯೇಂದ್ರರಿಗಾಗಿಯೇ ಎಂಬ ಅಭಿಪ್ರಾಯ ಸೃಷ್ಟಿಯಾಗಿದೆ.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಮಗನಿಗೆ ಏನಾದರೂ ರಾಜ್ಯದಲ್ಲಿ ಏನಾದರೂ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು, ೨೦೧೮ರಲ್ಲಿ ವಿಜಯೇಂದ್ರರಿಗೆ ವರುಣಾ ಕ್ಷೇತ್ರದ ಟಿಕೇಟ್ ಕೊಡಿಸುವ ಪ್ರಯತ್ನ ಬಿಎಸ್ ವೈ ಮಾಡಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆಯೂ ಪ್ರಯತ್ನಿಸಿದ್ದರು. ಅದು ಯಾವುದೂ ಸಾಕಾರಗೊಳ್ಳಲಿಲ್ಲ. ವಿಧಾನ ಪರಿಷತ್ ಚುನಾವಣೆಗೆ ಅಂತಿಮ ಹಂತದವರೆಗೂ ಸಂಭಾವ್ಯರ ಪಟ್ಟಿಯಲ್ಲಿ ವಿಜಯೇಂದ್ರ ಹೆಸರಿತ್ತು, ಆದಾಗ್ಯೂ ಕೊನೆಗೆ ಎಲ್ಲವೂ ಬದಲಾಯಿತು. ಸ್ವತಃ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಡ್ತೇನೆ ಎಂಬ ಶಾಕಿಂಗ್ ನ್ಯೂಸ್ ಕೊಟ್ಟರು. ಸದ್ಯ, ಬಿಎಸ್ ವೈ ತಲೆಯಲ್ಲಿರುವುದು ಮಗನಿಗೊಂದು ಗಟ್ಟಿ ಅಡಿಪಾಯ ಹಾಕಿಕೊಡುವ ಪ್ರಯತ್ನದಲ್ಲಿದ್ದಾರೆ. ಇದೆ ಅವರ ಪರಮ ಗುರಿಯೂ ಕೂಡ ಹೌದು ಎನ್ನುವುದರಲ್ಲಿ ಅನುಮಾನವಿಲ್ಲ.
ಶಿಕಾರಿಪುರದಲ್ಲಿ ವಿಜಯೇಂದ್ರಗೆ ವರ್ಚಸ್ಸಿದೆಯೇ ? : ೧೯೮೩ ರಲ್ಲಿ ಶಿಕಾರಿಪುರ ವಿಧಾನಸಭೆ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷ ನಿರ್ಧರಿಸಿತು. ಆರ್ ಎಸ್ ಎಸ್ ಹೋರಾಟದಿಂದ ಬಂದ ಯಡಿಯೂರಪ್ಪ ಅವರನ್ನು ನಿಲ್ಲಿಸಲಾಯಿತು. ಆಗ ಶಿಕಾರಿಪುರದಿಂದ ಕಾಂಗ್ರೆಸ್ ನ ಪರವಾಗಿ ನಿಲ್ಲುತ್ತಿದ್ದ ಯಂಕಟಪ್ಪ ಸತತವಾಗಿ ಗೆಲ್ಲುತ್ತಿದ್ದರು. ಯಂಕಟಪ್ಪ ಎದುರು ಯಡಿಯೂರಪ್ಪ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದೇ ಆ ಸಂದರ್ಭದಲ್ಲಿ ಚರ್ಚೆ ಆಗಿತ್ತು. ಆದರೇ, ಫಲಿತಾಂಶ ಎಲ್ಲಾ ರಾಜಕೀಯ ಚರ್ಚೆಯನ್ನು ಸುಳ್ಳಾಗಿಸಿತ್ತು. ರಾಜ್ಯದ ಗಮನ ಕೂಡ ಶಿಕಾರಿಪುರದತ್ತ ಗಮನ ಸೆಳೆಯಿತು. ಅಲ್ಲಿಂದ ಸತತವಾಗಿ ಗೆಲ್ಲುತ್ತಲೇ ಬಂದರು, ಯಡಿಯೂರಪ್ಪರ ಜೈತ್ರಯಾತ್ರೆ ಪ್ರಾರಂಭ ಕೊನೆ ಕಾಣದಂತಾಗುತ್ತದೆ ಎಂದು ಯಾರೂ ಊಹಿಸಿಕೊಂಡಿರಲಿಲ್ಲ. ಅಲ್ಲಿಂದ ರಾಜಕೀಯಕ್ಕೆ ಪ್ರವೇಶ ಪಡೆದ ಬಿಎಸ್ವೈ ಒಂದು ಬಾರಿ ಸೋತಿದ್ದು ಬಿಟ್ಟರೇ ಮತ್ತೆಲ್ಲವೂ ಜಯ. ಅಲ್ಲಿಂದ ರಾಜ್ಯ ಬಿಜೆಪಿ ಮೊಳಕೆಯೊಡೆಯುವುದಕ್ಕೆ ಆರಂಭವಾಗಿದ್ದು, ನಿಧಾನಕ್ಕೆ ಬಿಜೆಪಿ ರಾಜ್ಯಾದ್ಯಂತ ವಿಸ್ತರಣೆ ಆಗುವುದಕ್ಕೆ ಮೂಲ ಕಾರಣವೇ ಯಡಿಯೂರಪ್ಪ. ಆದರೇ, ಅದೇ ಪಕ್ಷ ಯಡಿಯೂಪ್ಪರನ್ನು ರಾಜ್ಯ ರಾಜಕಾರಣದಿಂದ ದೂರ ಇರುವ ಹಾಗೆ ಮಾಡಿದೆ. ಈ ಬಾರಿ ಚುನಾವಣೆಯಲ್ಲಿಯೂ ಯಡಿಯೂರಪ್ಪ ಸ್ಪರ್ಧಿಸುತ್ತಿಲ್ಲ. ಮಗ ವಿಜಯೇಂದ್ರ ಶಿಕಾರಿಪುರದಿಂದ ಹೊರಗೆ ಇದ್ದಿದ್ದೇ ಹೆಚ್ಚು. ಗೆದ್ದರೇ, ತಂದೆ ಉಳಿಸಿಕೊಂಡ ವಿಶ್ವಾಸದ ಮೇಲೆ ಗೆಲ್ಲಬೇಕಷ್ಟೇ. ಇಲ್ಲವಾದ್ರೇ, ಕಾಂಗ್ರೆಸ್ ವಶ ಆಗಬಹುದು ಎಂದೇ ಹೇಳಲಾಗುತ್ತಿದೆ. ಕಳೆದ ಬಾರಿ ಸುಮಾರು ೩೫,೦೦೦ ಮತಗಳ ಅಂತರದಿಂದ ಸೋತ ಕಾಂಗ್ರೆಸ್ ಗೆ, ಈ ಬಾರಿ ಯಡಿಯೂರಪ್ಪ ಕಣದಿಂದ ಹೊರಗುಳಿದಿರುವುದು ಲಾಭದ ನಿರೀಕ್ಷೆಯಲ್ಲಿ ಇದೆ. ಗೆಲ್ಲುವುದಕ್ಕೆ ಸಾಧ್ಯವಾಗದಿದ್ದರೇ, ಯಡಿಯೂರಪ್ಪ ಸ್ಥಾನಕ್ಕೆ ಮಗನೇ ಬರುವುದಾದರೇ, ಕಾಂಗ್ರೆಸ್ ಒಂದಿಷ್ಟು ಬಿಜೆಪಿ ಮತ ಸೆಳೆದುಕೊಳ್ಳಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ.
ಇನ್ನು, ಯಡಿಯೂರಪ್ಪರಿಗೆ ಸಮನಾಧ ಸಮುದಾಯದ ನಾಯಕ ಬಿಜೆಪಿಯಲ್ಲಿಯೂ ಇಲ್ಲ, ಕಾಂಗ್ರೆಸ್ ನಲ್ಲಿಯೂ ಇಲ್ಲ. ಯಡಿಯೂರಪ್ಪ ಈಗ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಚುಕ್ಕಾಣಿ ಹಿಡಿಯುವಂತೆ ಶ್ರಮಿಸುತ್ತೇನೆ ಎಂದು ಹೇಳ್ತಿದ್ದಾರೆ. ಆದರೇ, ಇವೆಲ್ಲವೂ ಮಗ ವಿಜಯೇಂದ್ರರ ಭವಿಷ್ಯಕ್ಕಾಗಿ ಎನ್ನುವುದು ಯಡಿಯೂರಪ್ಪ ರಾಜಕೀಯ ನಡೆ ಸತ್ಯ. ಯಡಿಯೂರಪ್ಪ ತನ್ನ ಸಮುದಾಯವನ್ನು ಯಾವ ಕ್ಷಣದಲ್ಲಿ ಬೇಕಾದರೂ ಯಾವ ಕಡಗೆ ಬೇಕಾದರೂ ತಿರುಗಿಸಬಲ್ಲರು. ಅಂತಹ ಹೋಲ್ಡ್ ಯಡಿಯೂರಪ್ಪ ಸಮುದಾಯದ ಮೇಲೆ ಇಟ್ಟುಕೊಂಡಿದ್ದಾರೆ. ಮಗನಿಗೆ ಅವಕಾಶ ಸಿಗದೇ ಇದ್ದರೇ ಮತ್ತೆ ಯಡಿಯೂರಪ್ಪರಲ್ಲಿನ ಕೋಪಾಗ್ನಿ ಮತ್ತೆ ಬುಗ್ಗೆ ಏಳುವುದು ಪದಶಃ ಸತ್ಯ.
ಒಟ್ಟಿನಲ್ಲಿ, ರಾಜಕೀಯ ಪ್ರವೇಶ ಪಡೆದ ಮೇಲೆ ಇದೆ ಮೋಟ್ಟ ಮೊದಲ ಬಾರಿಗೆ ಚುನಾವಣಾ ಕಣದಿಂದ ಹೊರಗುಳಿದಿರುವುದು ಬಿಜೆಪಿಗೂ ಒಂದು ಸಂಕಟದ ಸ್ಥಿತಿ. ಪರೋಕ್ಷ ಬೆಂಬಲವಿದ್ದರೂ ಇದು ಚುನಾವಣೆ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುವುದು ಸದ್ಯದ ಕುತೂಹಲ.
-ಶ್ರೀರಾಜ್ ವಕ್ವಾಡಿ

No comments:
Post a Comment