ಸುಳ್ಸುದ್ದಿಗಳನ್ನು ಹಬ್ಬುವ ಟೀಮ್ ಜಾರ್ಜ್ ಜತೆಗೆ ಕೇಂದ್ರ ಸರ್ಕಾರಕ್ಕೆ ಸಂಬಂಧ..?
ಕೇಂದ್ರ ಸರ್ಕಾರದ ವಿರುದ್ಧ ಇಸ್ರೇಲ್ ಮೂಲದ ಪೆಗಾಸಸ್ ಬೇಹುಗಾರಿಕೆ ಉಪಕರಣಗಳನ್ನು ಬಳಸಿದ ಆರೋಪ ಮಾಡಿದ ಅಂತರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಈಗ ಮತ್ತೊಂದು ತನಿಖಾ ವರದಿಯೊಂದನ್ನು ಹೊರಗೆ ಹಾಕಿದ್ದು, ಇಸ್ರೇಲ್ ನ ಮಿಲಿಟರಿ ಏಜೆನ್ಸಿಗಳ ತಂಡ ಟೀಮ್ ಜಾರ್ಜ್ ಅಮೆರಿಕಾ, ಬ್ರಿಟನ್, ಕೆನಡಾ, ಜರ್ಮನಿ, ಸ್ವಿಜರ್ ಲ್ಯಾಂಡ್, ಮೆಕ್ಸಿಕೋ, ಸೆನೆಗಲ್ ಸೇರಿ ಭಾರತ ಹಾಗೂ ಯುಎಇಗಳಲ್ಲಿ ನಕಲಿ ಸಾಮಾಜಿಕ ಜಾಲತಾಣಗಳ ಮೂಲಕ ಚುನಾವಣಾ ಪ್ರಚಾರಾಂದೋಲನಗಳಲ್ಲಿ ಭಾಗಿಯಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದು, ಮಾತ್ರವಲ್ಲದೇ ಜಗತ್ತಿನ ಸುಮಾರು ಮೂವತ್ತು ದೇಶಗಳಲ್ಲಿ ಚುನಾವಣಾ ಫಲಿತಾಂಶವನ್ನೇ ತಿರುಚುವಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸಿದೆ ಎಂಬ ವಿಷಯ ಈಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆತಂಕಕ್ಕೆ ಒಳಪಡಿಸಿದೆ.
ಚುನಾವಣೆಯನ್ನೇ ತಿರುಚುವಷ್ಟರ ಮಟ್ಟಿಗೆ ಫೆಸ್ ಬುಕ್ ಆದಿಯಾಗಿ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದ ನಕಲಿ ಸುದ್ಧಿಗಳನ್ನು ಪಾಪ್-ಅಪ್ ಮಾಡುವುದರ ಮೂಲಕ ಅದನ್ನೇ ಬಳಕೆದಾರ ನಂಬುವಂತೆ ಮಾಡಿ, ಸಾಮಾಜಿಕ ಬುದ್ದಿಯನ್ನು ನಿಷ್ಕ್ರಿಯಗೊಳಿಸುವ ಹಾಗೂ ಹಾದಿ ತಪ್ಪಿಸುವ ಸಾಲು ಸಾಲು ಸುಳ್ಳು ಮಾಹಿತಿಗಳನ್ನು ವ್ಯವಸ್ಥಿತವಾಗಿ ಹಬ್ಬಿಸಿ ಪ್ರತಿಪಕ್ಷಗಳ ವಿರುದ್ಧ ವಿರೋಧಾಭಿಪ್ರಾಯವನ್ನು ಹುಟ್ಟಿಸುವುದು ಈ ಏಜೆನ್ಸಿಗಳ ಕಾರ್ಯ ವೈಖರಿ. ಈ ಟೀಂ ಜಾರ್ಜ್ ಎಂಬ ಬೇಹುಗಾರಿಕೆ ಸಂಸ್ಥೆಯನ್ನು ಮುನ್ನಡೆಸುತ್ತಿರುವುದು ಇಸ್ರೇಲ್ ನ ತಾಲ್ ಹನಾನ್ ಎಂಬ ೫೦ ವರ್ಷದ ಮಾಜಿ ಮಿಲಿಟರಿ ಅಧಿಕಾರಿ. ಜಾರ್ಜ್ ಎಂಬ ಸುಳ್ಳು ಹೆಸರಿನೊಂದಿಗೆ ಆತ ಈ ಬೇಹುಗಾರಿಕೆ ಕೆಲಸ ಮಾಡುತ್ತಾನೆ. ಇನ್ನು, ಈ ಜಾಗತಿಕ ಮಟ್ಟದಲ್ಲಿ ಹೊರಗೆ ಬಿದ್ದ ಆಘಾತಕಾರಿ ವರದಿಯೊಂದನ್ನು ಮುಂದಿಟ್ಟುಕೊಂಡು ಈಗ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧವೂ ಕಾಂಗ್ರೆಸ್ ಆರೋಪ ಮಾಡಿದ್ದು, ಇಂತಹ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ತೀರಾ ಹಗುರವಾಗಿ ಅಲ್ಲಗಳೆಯುವಂತಿಲ್ಲ. ಕಳೆದೆರಡು ವರ್ಷಗಳ ಹಿಂದೆ ಇದೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫೋನ್ ಕದ್ದಾಲಿಕೆಯ ಪೆಗಾಸಸ್ ಸೈಬರ್ ಟೂಲ್ ನನ್ನು ವಿರೋಧ ಪಕ್ಷದ ಪ್ರಮುಖ ಪ್ರಭಾವಿ ನಾಯಕರನ್ನೂ ಒಳಗೊಂಡು, ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು, ಪತ್ರಕರ್ತರ ಮೇಲೆ ಪ್ರಯೋಗಿಸಿದ್ದು ಈ ದೇಶ ಕಂಡಿದೆ. ಅಷ್ಟಾಗಿಯೂ ಮೋದಿ ಇಸ್ರೇಲ್ ಸರ್ಕಾರದೊಂದಿಗೆ ಕೆಲವು ವರ್ಷಗಳಿಂದ ರಾಜತಾಂತ್ರಿಕ ಕಾರ್ಯತಂತ್ರಗಳಲ್ಲಿಯೂ ಒಳ್ಳೆಯ ಸಂಬಂಧ ಹೊಂದಿದೆ ಎನ್ನುವ ಆರೋಪ ಕೇಳಿ ಬಂದಿದ್ದು ಕೂಡ ಇಲ್ಲಿ ಉಲ್ಲೇಖಾರ್ಹ.
ಟೀಮ್ ಜಾರ್ಜ್ ನೀಡುವ ಸೇವೆಗಳು ಹೇಗಿವೆ ? : ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಹಾರೆಟ್ಸ್ ನ್ಯೂಸ್ ವರದಿಯ ಪ್ರಕಾರ, ಟೀಮ್ ಜಾರ್ಜ್ ತನ್ನ ಕ್ಲೈಂಟ್ ಗೆ ನೀಡುವ ಸೇವೆಗಳನ್ನು ಗಮನಿಸಿದರೇ ಆಶ್ಚರ್ಯವಾಗುತ್ತದೆ. ಮೆಸೆಜಿಂಗ್ ಅಪ್ಲಿಕೇಶನ್ ಗಳನ್ನು, ಈಮೇಲ್ ಖಾತೆಗಳನ್ನು ಹ್ಯಾಕ್ ಮಾಡುವುದು, ಕಾಂಪ್ರಮೈಸ್ಡ್ ಅಕೌಂಟ್ ಗಳಲ್ಲಿ ಮೆಟಿರಿಯಲ್ ಗಳನ್ನು ಪ್ಲ್ಯಾಂಟ್ ಮಾಡುವುದು, ಮಾಹಿತಿಗಳನ್ನು ಗೂಢಚರ್ಯೆಯ ಮೂಲಕ ಹ್ಯಾಕ್ ಮಾಡಿ ಸುಳ್ಳು ಮಾಹಿತಿಗಳನ್ನು ಲೀಕ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಅಕೌಂಟ್ ಗಳನ್ನು ಮ್ಯಾನುಪಲೇಟ್ ಮಾಡುವುದು, ಮತದಾರರನ್ನು ನಿಗ್ರಹಿಸುವುದು ಹಾಗೂ ಚುನಾವಣೆಗೆ ಅಡ್ಡಿ ಮಾಡುವುದು ಟೀಮ್ ಜಾರ್ಜ್ ತನ್ನ ಕ್ಲೈಂಟ್ ಗಾಗಿ ಮಾಡುತ್ತದೆ ಎಂದರೇ ನೀವು ನಂಬಲೇ ಬೇಕು. ಈ ಎಲ್ಲಾ ಟೂಲ್ ಗಳು ರಾಜಕೀಯ ಪ್ರತಿರೋಧವನ್ನು ಅಡ್ಡಿಪಡಿಸುವುದು ಅಥವಾ ರಾಜಕೀಯ ವೈರಿಯನ್ನು ಸೋಲಿಸಲು ಬಳಸುವ ಸಾಧನಗಳು.
ಜಗತ್ತಿನ ಸುಮಾರು ೩೩ ದೇಶ ಮಟ್ಟದ ಚುನಾವಣೆಗಳಲ್ಲಿ ಮಧ್ಯಪ್ರವೇಶಿಸಿದ ಟೀಮ್ ಜಾರ್ಜ್ ರಾಜಕೀಯ ಕುತಂತ್ರದ ಪರವಾಗಿ ಕೆಲಸ ಮಾಡಿದೆ. ಅವುಗಳಲ್ಲಿ ಸುಮಾರು ೨೭ ಚುನಾವಣೆಗಳಲ್ಲಿ ಟೀಮ್ ಯಶಸ್ವಿಯಾಗಿದೆ ಎಂದು ಅಂತರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ತನ್ನ ತನಿಖಾ ವರದಿಯಲ್ಲಿ ಹೇಳಿದೆ. ಮಾತ್ರವಲ್ಲದೇ, ತನ್ನ ಗ್ರಾಹಕರನ್ನು ಮೆಚ್ಚಿಸುವುದಕ್ಕೆ ಬೇಕಾಗಿ ಕೀನ್ಯಾ ಹಾಗೂ ಮೊಜಾಂಬಿಕ್ ನಲ್ಲಿನ ಕ್ಯಾಬಿನೇಟ್ ಮಿನಿಸ್ಟರ್ ಗಳ ಜೀಮೇಲ್ ಖಾತೆಗಳು, ಟೆಲಿಗ್ರಾಂ ಖಾತೆಗಳ ಸಂವಹನಗಳನ್ನು ಹ್ಯಾಕ್ ಮಾಡಿರುವ ಹಾಗೂ ಆಫ್ರಿಕನ್ ಮೂಲದ ಪ್ರಭಾವಿ ವ್ಯಕ್ತಿಯೊಬ್ಬರ ಪತ್ರವ್ಯವಹಾರಗಳನ್ನು ಹ್ಯಾಕ್ ಮಾಡಿರುವ ವಿಚಾರವನ್ನು ಒಳಗೊಂಡು ಹಲವು ವಿಚಾರಗಳು ತನ್ನ ಗ್ರಾಹಕರಿಗೆ ಹೇಳಿರುವುದು ಕೂಡ ವರದಿಯಲ್ಲಿ ಬಹಿರಂಗಗೊಳಿಸಲಾಗಿದೆ.
ಜಗತ್ತು ಬೆಚ್ಚಿ ಬೀಳಿಸುವ ಸೈಬರ್ ಅಟ್ಯಾಕ್ ಗಳಲ್ಲಿ ಭಾಗಿ : ಹೌದು, ೨೦೧೪ರ ಕ್ಯಾಟಲಾನ್ ಸ್ವಾತಂತ್ರ್ಯದ ಕುರಿತಾದ ಜನಾಭಿಪ್ರಾಯವನ್ನು ಹಾಳುಗೆಡವಲು ಉದ್ದೇಶಿಸಿರುವ ಕುಖ್ಯಾತ ಸೈಬರ್ ಅಟ್ಯಾಕ್ ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಇದೇ ಟೀಮ್ ಜಾರ್ಜ್ ಸಂಸ್ಥೆ. ಲೈಂಗಿಕ ಅಪರಾಧದ ವಿಚಾರಕ್ಕೆ ಸಂಬಂಧಸಿದಂತೆ ಕೆನಡಾದ ಫ್ಯಾಶನ್ ಕ್ಷೇತ್ರದ ಉದ್ಯಮಿ ಪೀಟರ್ ನೈಗಾರ್ಡ್ ಅವರನ್ನು ಬಂಧಿಸುವಲ್ಲಿ ಕಾರ್ಯತಂತ್ರ ಮಾಡಿದ್ದಕ್ಕಾಗಿ ಗ್ರಾಹಕರು ಸಂಸ್ಥೆಗೆ ನೀಡಿದ ಮೊತ್ತದ ಬಗ್ಗೆ ಸಂಸ್ಥೆ ಹೆಮ್ಮೆ ಪಟ್ಟುಕೊಳ್ಳುತ್ತದೆ. ೨೦೧೫ರಲ್ಲಿ ನೈಜೀರಿಯಾದ ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷದ ಫೋನ್ ಕರೆಗಳ ಕದ್ದಾಲಿಕೆ ಮಾಡಿ ಚುನಾವಣಾ ಪ್ರಚಾರಕ್ಕೆ ಅಲ್ಲಿನ ಆಡಳಿತ ಪಕ್ಷದ ಪರವಾಗಿ ಕಾರ್ಯತಂತ್ರ ಹೆಣೆದಿದ್ದು, ಕುಖ್ಯಾತ ಯುಕೆ ಪಾಲಿಟಿಕಲ್ ಕನ್ಸಲ್ಟಿಂಗ್ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕ್ ನೊಂದಿಗೆ ಕೆಲಸ ಮಾಡಿದ್ದು ತನಿಖೆಯಲ್ಲಿ ಹೊರಬಂತು. ೨೦೧೯ರ ಇಂಡೋನೇಷ್ಯಾದ ಕೇಂದ್ರ ಚುನಾವಣಾ ಸಮಿತಿಯ ವಿರುದ್ಧ ಸೈಬರ್ ಅಟ್ಯಾಕ್, ೨೦೨೨ರ ಕೀನ್ಯಾ ಚುನಾವಣೆಯಲ್ಲಿ ಪ್ರಭಾವಿ ಐವರು ರಾಜಕೀಯ ಮುಖಂಡರ ಖಾತೆಗಳನ್ನು ಹ್ಯಾಕ್ ಮಾಡಿ, ಚುನಾವಣಾ ಫಲಿತಾಂಶವನ್ನೇ ತಿರುಚಿದ್ದು, ಹೀಗೆ ಒಂದಲ್ಲ ಎರಡಲ್ಲ ೩೩ ದೇಶಗಳ ಹಲವು ರಾಜಕೀಯ ಅಭಿಯಾನಗಳಲ್ಲಿ ಈ ಸಂಸ್ಥೆ ತನ್ನ ಗೂಢಚರ್ಯೆಯನ್ನು ನಡೆಸಿದೆ. ಕ್ಲೈಂಟ್ ನ ಟಾರ್ಗೇಟ್ ವ್ಯಕ್ತಿಯ ಸಾಮಾಜಿಕ ಜಾಲತಾಣಗಳ ಮೇಲೆ ಸೈಬರ್ ಅಟ್ಯಾಕ್ ಮಾಡುವುದರ ಮೂಲಕ ಈಮೇಲ್, ಡಾಕ್ಯುಮೆಂಟ್ ಗಳನ್ನು ಸೋರಿಕೆ ಮಾಡುವುದನ್ನು ಒಳಗೊಂಡಿರುವ ಹ್ಯಾಕ್ & ಲೀಕ್ ಕಾರ್ಯಾಚರಣೆಯಿಂದ ರಾಜಕೀಯ ವರ್ಚಸ್ಸನ್ನೇ ಹಾಳುಗೆಡುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ ಎನ್ನುವುದು ಇಲ್ಲಿ ಗಮನಾರ್ಹ.
ಆರ್ಮಿ ಆಫ್ ಅವತಾರ್ : ಟೀಮ್ ಜಾರ್ಜ್ ತನ್ನ ಕ್ಲೈಂಟ್ ಗಳಿಗೆ ನೀಡುವ ಸೇವೆಗಳಲ್ಲಿ ಪ್ರಮುಖವಾದದ್ದಿದು. ತನ್ನ ಗ್ರಾಹಕರು ಹಿಂದೆಂದೂ ನೋಡಿರದ ತಂತ್ರಾಂಶದ ಪ್ರಸ್ತುತಿಯನ್ನು ಈ ಸೇವೆಯ ಮೂಲಕ ನೀಡುತ್ತದೆ. ಈ ಟೂಲ್ ನ ಮೂಲಕ ನಕಲಿ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ರಚಿಸಿ ಸುಳ್ಳು ವದಂತಿಗಳನ್ನು ಹಬ್ಬಿಸುವುದಲ್ಲದೇ, ವಿರೋಧಿಗಳ ಮಾನನಷ್ಟ ಮತ್ತು ಕ್ಲೈಂಟ್ ನ ಪರ ಪ್ರಚಾರ, ಗ್ರಾಹಕ ಏನು ಕೇಳುತ್ತಾನೋ ಆ ಸೇವೆಯನ್ನು ಟೀಮ್ ಜಾರ್ಜ್ ಈ ಮೂಲಕ ಮಾಡಿಕೊಡುತ್ತದೆ.
ಆಕ್ಟಿವ್ ಇಂಟೆಲಿಜೆನ್ಸ್ ಹೇಗೆ ಕೆಲಸ ಮಾಡುತ್ತದೆ ? : ಹ್ಯಾಕ್ ಮಾಡಲಾದ ಖಾತೆಯ ,ಮೂಲಕ ಸಂದೇಶಗಳನ್ನು ಕಳುಹಿಸುವುದರ ಮೂಲಕ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಜಿಮೇಲ್ ಖಾತೆಯ ಹ್ಯಾಕಿಂಗ್ ಲೋಕಲ್ ಸೆಲ್ಯುಲರ್ ಪ್ರೋವೈಡರ್ ನ ಸಹಕಾರದಿಂದ ಹಾಗೂ ಒಂದು ಸಣ್ಣ ಡಿವೈಸ್ ನನ್ನು ಇನ್ಸ್ಟಾಲ್ ಮಾಡುವುದರ ಮೂಲಕ ಟಾರ್ಗೇಟ್ ಖಾತೆಯನ್ನು ತಲುಪಲಾಗುತ್ತದೆ. ಗೂಗಲ್ ಸೇರಿದಂತೆ ಅನೇಕ ಆನ್ ಲೈನ್ ಸರ್ವರ್ ಗಳ ಪಾಸ್ ವರ್ಡ್ ಬದಲಾಯಿಸುವ ವಿಧಾನವು ಐಡೆಂಟಿಟಿ ವೆರಿಫಿಕೇಶನ್ ಟೆಕ್ಸ್ಟ್ ಮೆಸೇಜ್ ಮೂಲಕ ಕಳುಹಿಸುವುದರ ಮೂಲಕ ಮಾಡಲಾಗುತ್ತದೆ. ಆ ಮೆಸೇಜ್ ಗಳನ್ನು ಹೈಜಾಕ್ ಮಾಡುವುದರ ಮೂಲಕ ಹ್ಯಾಕರ್ ಗಳಿಗೆ ಟಾರ್ಗೇಟಡ್ ಖಾತೆಗಳಿಗೆ ಒಳ ನುಸುಲು ಅನುವು ಮಾಡಿಕೊಡುತ್ತದೆ.
ಇನ್ನು, ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಐಟಿ ಘಟಕಗಳ ಸಂಪರ್ಕದೊಂದಿಗೆ ಕಾರ್ಯ ನಿರ್ವಹಿಸುವ ಇಂತಹ ಬೇಹುಗಾರಿಕಾ ಸಂಸ್ಥೆಗಳು , ರಾಜಕೀಯ ಪ್ರೊಪಗಂಡಾಗಳನ್ನು ಮೆರೆಸುತ್ತದೆ. ಸುಳ್ಳನ್ನು ವೈಭವೀಕರಿಸಿ ಸತ್ಯವನ್ನು ಪಾತಾಳಕ್ಕೆ ನೂಕುತ್ತವೆ. ರಾಜಕೀಯದ ಧ್ರುವೀಕರಣದ ವಿಷಯಗಳು ದೇಶದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಸ್ಥಿತಿಗಳನ್ನು ಹದಗೆಡಿಸುತ್ತವೆ.
ಪೆಗಾಸಸ್ ಗೂಢಚರ್ಯಕ್ಕೆ ಛೀಮಾರಿ ಹಾಕಿತ್ತು ಸುಪ್ರೀಂ : ೨೦೨೧ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಬೆಂಬಿಡದೆ ಕಾಡಿದ ಸಮಸ್ಯೆಗಳಲ್ಲಿ ಪೆಗಾಸಸ್ ಕೂಡ ಒಂದು. ದೇಶದ ಪ್ರಮುಖ ಪ್ರಭಾವಿ ರಾಜಕಾರಣಿಗಳು, ಪತ್ರಕರ್ತರು, ನ್ಯಾಯಾಧೀಶರು ಸೇರಿ ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿಯ ದೂರವಾಣಿ ಕದ್ದಾಲಿಕೆಯ ಮೂಲಕ ಬೇಹುಗಾರಿಕೆ ನಡೆಸಿತ್ತು ಎಂಬ ಆರೋಪ ಕೇಂದ್ರ ಸರ್ಕಾರದ ಮೇಲೆ ಕೇಳಿ ಬಂದಿತ್ತು. ಸರ್ಕಾರೇತರ ಸಂಸ್ಥೆಗಳಿಗೆ ಪೆಗಾಸಸ್ ಸ್ಪೈವೇರ್ ಮಾರಾಟಕ್ಕೆ ಇಸ್ರೇಲ್ ಸರ್ಕಾರದ ಅನುಮತಿ ಇಲ್ಲ. ಇನ್ನು, ಸರ್ಕಾರದ ಅನುಮತಿ ಇಲ್ಲದೇ ಈ ಸ್ಪೈವೇರ್ ನನ್ನು ರಫ್ತು ಮಾಡುವುದಿಲ್ಲ. ಎನ್ನುವಲ್ಲಿಗೆ ಸರ್ಕಾರದ ಅನಮತಿಯ ಮೇಲೆಯೇ ಪೆಗಾಸಸ್ ಪ್ರಯೋಗ ಮಾಡಲಾಗಿತ್ತು ಎನ್ನುವುದು ಸ್ಪಷ್ಟ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆಗಿತ್ತು. ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ಗೂಢಚರ್ಯೆಯಂತಹ ಬೇಹುಗಾರಿಕೆ ಮಾಡುವುದಕ್ಕೆ ಅವಕಾಶವಿಲ್ಲ. ವೈಯಕ್ತಿಕ ಗೌಪ್ಯತೆಯನ್ನು ಉಲ್ಲಂಘಿಸಿ ಒಬ್ಬ ವ್ಯಕ್ತಿಯ ಮೇಲೆ ಗೂಢಚರ್ಯೆ ಮಾಡುವುದಕ್ಕೆ ಸಾಧ್ಯವಿಲ್ಲ. ಭದ್ರತೆಯ ನೆಪ ಹೇಳಿ ಸರ್ಕಾರ ಸುಮ್ಮನೆ ಕೂರುವುದಕ್ಕೆ ಸಾಧ್ಯವಿಲ್ಲ. ಎಂದು ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ (ಅಂದು ಎನ್. ವಿ ರಮಣ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು) ಛೀಮಾರಿ ಹಾಕಿದ್ದನ್ನು ಈ ದೇಶ ಕಂಡಿತ್ತು. ತನಿಖೆಗಾಗಿ ತಜ್ಞರ ಸಮಿತಿಯನ್ನೂ ರಚಿಸಲಾಗಿತ್ತು. ಆದರೇ, ಕಳೆದ ಆಗಸ್ಟ್ ೨೫ ೨೦೨೨ರಲ್ಲಿ ತನಿಖಾ ಸಮಿತಿ ನೀಡಿದ ವರಿದಿಯ ಅನ್ವಯ, ೨೯ ಫೋನ್ ಗಳನ್ನು ಪರಿಶೀಲಿಸಲಾಗಿದೆ ಮತ್ತು ಐದರಲ್ಲಿ ಒಂದರಲ್ಲಿ ಮಾಲ್ವೇರ್ ಕಂಡುಬಂದಿರುವುದು ಹೊರತಾಗಿ ಕೇಂದ್ರ ಸರ್ಕಾರ ಪೆಗಾಸಸ್ ಸ್ಪೈವೇರ್ ಬಳಸಿ ಗೂಢಚರ್ಯೆ ಮಾಡಿದೆ ಎಂಬುವುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂಬ ತನಿಖಾ ತೀರ್ಪು ನೀಡಿತ್ತು.
ಈಗ ವಿದೇಶಿ ಮಿಲಿಟರಿ ಏಜನ್ಸಿಗಳಿಂದ ನರೇಂದ್ರ ಪ್ರಧಾನಿ ಮೋದಿ ಚುನಾವಣೆಗಳ ಮೇಲೆ ಪ್ರಭಾವ ಬೀರಿ ಗೆಲ್ಲುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಮತ್ತೆ ಕೇಂದ್ರ ಸರ್ಕಾರ ನೈತಿಕ ಸೈಬರ್ ಟೂಲ್ ಗಿರಿಯಲ್ಲಿ ಭಾಗಿಯಾಗಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಇನ್ನು, ಎಂದಿನಂತೆ ಕೇಂದ್ರ ಬಿಜೆಪಿ ಸರ್ಕಾರ ಮೌನವಹಿಸಿದ್ದು, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕು.
-ಶ್ರೀರಾಜ್ ವಕ್ವಾಡಿ
.jpeg)
No comments:
Post a Comment