Tuesday, January 31, 2023

ಬಯಲಾಯಿತೇ ಅದಾನಿ ಸಾಮ್ರಾಜ್ಯದ ಮೋಸದ ಜಾಲ ..?

 


ಅದಾನಿ ಹಿಂದೆ ಯಾರ ಕೃಪಾಶೀರ್ವಾದ .? ।  ಅಂಕಿಅಂಶಗಳ ಆಚೆಗಿನ ಸತ್ಯ.. !

ಅದಾನಿ ಗ್ರೂಪ್ ಆಫ್ ಕಂಪೆನಿ  ಹಿಂಡನ್ ಬರ್ಗ್ ರೀಸರ್ಚ್ ಸಂಸ್ಥೆಯ ವಿರುದ್ಧ ತಯಾರಿಸಿದ ೪೧೩ ಪುಟಗಳ ವರದಿಯಲ್ಲಿ ʼಇದು ಭಾರತದ ಮೇಲೆ ನಡೆಸಿದ ದಾಳಿʼ ಎಂದು ಹೇಳಿದ್ದಕ್ಕೆ ಹಿಂಡನ್ ಬರ್ಗ್ ರೀಸರ್ಚ್ ಸಂಸ್ಥೆಯು ತಿರುಗೇಟು ನೀಡಿದ್ದು, ವಂಚನೆಯನ್ನು ʼರಾಷ್ಟ್ರೀಯತೆಯ ಹೆಸರಿನಲ್ಲಿ ಮುಚ್ಚಿಹಾಕುವುದಕ್ಕೆ ಸಾಧ್ಯವಿಲ್ಲʼ ಎಂದು ಮುಖಕ್ಕೆ ರಾಚುವಂತೆ ಹೇಳಿದೆ. 

ಜಾಗತಿಕ ವಹಿವಾಟಿನ ವಿಚಾರದಲ್ಲಿ ತೀವ್ರ ಮುಖಭಂಗ ಅನುಭವಿಸಿದ ಅದಾನಿ ಸಂಸ್ಥೆ ಈಗ ಆರೋಪಗಳಿಂದ ಹೊರಬರುವುದಕ್ಕೆ ಮತ್ತೆ ನಿರೀಕ್ಷೆಯಂತೆ ತನ್ನ ರಾಷ್ಟ್ರೀಯತೆಯ ಅಸ್ತ್ರವನ್ನು ಮುಂದಿಟ್ಟಿದೆ. ಈ ನಡುವೆ ಅದಾನಿಯಂತಹ ಒಬ್ಬ ಉದ್ಯಮಿ, ದೇಶದ ಮತ್ತು ಜಗತ್ತಿನ ಅತ್ಯಂತ ಪ್ರಬಲ ಉದ್ಯಮಿಯಾಗಿ, ಇಂತಹ ಒಂದು ವಹಿವಾಟನ್ನು ನಿರ್ವಹಿಸುವುದಕ್ಕೆ ಸಾಧ್ಯವಾಗದೆ ಸೋತಿದ್ದು ಎಲ್ಲಿ..? ಮತ್ತು ಇಂತಹದ್ದೊಂದು ವಂಚನೆಯ ಆರೋಪವನ್ನು ಎದುರಿಸುತ್ತಾರೆ ಎನ್ನುವುದಾದರೇ ಏನೆಂಬುವುದು ಸದ್ಯಕ್ಕೆ ದೇಶದ ಮುಂದೆ ಇರುವ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ. 

ವಂಚನೆ, ಮನಿ ಲಾಂಡರಿಂಗ್ ಹಗರಣ, ಸೆಬಿ ನಿಯಮಗಳ ಉಲ್ಲಂಘನೆ, ತೆರಿಕೆ ಡಾಲರ್ ಕಳ್ಳತನ, ನಕಲಿ ಹಾಗೂ ಕಾನೂನು ಬಾಹೀರ ವಹಿವಾಟು ಮತ್ತು ಲಿಸ್ಟಡ್ ಕಂಪೆನಿಗಳಿಂದ ಹಣವನ್ನು ಪಡೆಯುವುದಕ್ಕೆ ಪ್ರಯತ್ನ, ನಕಲಿ ಆಪದು/ರಫ್ತು ದಾಖಲೆಗಳು, ಸ್ಟಾಕ್ ಮ್ಯಾನಿಪುಲೇಶನ್ಗಳನ್ನು ಉಲ್ಲೇಖಿಸಿ ಅದಾನಿ ಸಮೂಹದ ಮೇಲೆ ಹೊರಿಸಿದ ಆರೋಪವನ್ನು ಸಮರ್ಥಿಸಿಕೊಳ್ಳುತ್ತಿರುವ ಹಿಂಡನ್ ಬರ್ಗ್, ಕಾನೂನು ಹೋರಾಟಕ್ಕೂ ಸೈ ಎಂದು ಸವಾಲೆಸೆದಿದೆ. 

ಅದಾನಿ ಸಂಸ್ಥೆ ಮಾಡಲಾಗಿದೆ ಎಂಬ ಹಿಂಡನ್ ಬರ್ಗ್ ಸಂಸ್ಥೆ ಸಲ್ಲಿಸಿದ ವರದಿ ಈಗ ಭಾರತೀಯ ರಾಜಕೀಯ ವಲಯದಲ್ಲಿ ಒಂದಿಷ್ಟು ಚರ್ಚೆಗೆ ಕಾರಣವಾಗಿದ್ದು, ಈ ವಿಷಯ ಕಾಂಗ್ರೆಸ್ ಸೇರಿ ಇತರ ವಿರೋಧ ಪಕ್ಷಗಳಿಗೆ ಒಂದು ರಾಜಕೀಯ ದಾಳ ಸಿಕ್ಕಂತಾಗಿದೆ. 

ಇದೊಂದು ಸಂದಿಗ್ಧ ಪರಿಸ್ಥಿತಿ :  ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್ನ ಮೂಲದವರಾದ ಗೌತಮ್ ಅದಾನಿ, ಭಾರತದ ಪ್ರಮುಖ ಬಂಧರುಗಳು, ವಿಮಾನ ನಿಲ್ದಾಣಗಳು, ರಾಷ್ಟ್ರೀಯ ಹೆದ್ದಾರಿಗಳು, ಡೇಟಾ ಸೆಂಟರ್ಗಳು, ಧಾನ್ಯ ಸಂಗ್ರಹಣೆ ಸಿಲೋಸ್ ಹಾಗೂ ಸೋಲಾರ್ ಫಾರ್ಮ್ಗಳಿಗೆ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದಾರೆ. ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿಯಾದಾಗಿನಿಂದ ಅದಾನಿ ಮೋದಿ ಆಪ್ತ ಬಳಗದಲ್ಲಿದ್ದರು ಎಂಬುವುದು ಕೂಡ ಸತ್ಯ. ಇನ್ನು, ೨೦೧೪ರ ನಂತರದ ದಿನಗಳಲ್ಲಿ ಮೋದಿ ನೇತೃತ್ವದ ಸರ್ಕಾರದ ಕಾರ್ಪೋರೇಟಿಕರಣ ಪಾಲಿಸಿಯಲ್ಲಿ ಸರ್ಕಾರದ ಸ್ವಾಮ್ಯದಲ್ಲಿದ್ದ ಸಂಸ್ಥೆಗಳನ್ನು ಅದಾನಿಯಂತಹ ಬಹು ಬಂಡವಾಳ ಹೂಡಿಕೆದಾರರಿಗೆ ಮಾರಿದ್ದು ಈ ದೇಶದ ದುರಂತಗಳಲ್ಲೊಂದು. ಇಂತಹ ಸಂಸ್ಥೆಗಳ ನಿರ್ವಹಣೆ ಮಾಡುವುದು ಸರ್ಕಾರದ ಕೆಲಸವಲ್ಲ, ಅದು ಉದ್ಯಮ ಸಂಸ್ಥೆಗಳ ಕೆಲಸ, ಸರ್ಕಾರಕ್ಕಿಂತ ಉದ್ಯಮ ಸಂಸ್ಥೆಗಳು ಚೆನ್ನಾಗಿ ನಿರ್ವಹಿಸುತ್ತವೆ ಎಂದು ಮೋದಿ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳಿಗೆ ಮಾರಾಟ ಮಾಡಿದ್ದನ್ನು ಈ ದೇಶ ಕಂಡು ಕಣ್ತುಂಬಿಸಿಕೊಂಡಿರುವುದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ.  ಹಿಂಡನ್ ಬರ್ಗ್ ಸಂಸ್ಥೆ ಅದಾನಿ ಸಮೂಹದ ವಿರುದ್ಧ ಸಲ್ಲಿಸಿದ ಆರೋಪ ವರದಿ ಸಾಬೀತಾದರೇ, ಅದಕ್ಕೆ ಮೋದಿ ಕೃಪಾಶಿರ್ವಾದವೂ ಇದೆ ಎನ್ನುವುದು ಕೂಡ ಬಟ್ಟಬಯಲಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. 

ಇದು ರಾಜಕೀಯವಾಗಿಯೂ ಒಂದು ಚರ್ಚೆಯಾಗಿರುವುದರಿಂದ ವಿರೋಧ ಪಕ್ಷಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಅನಿವಾರ್ಯತೆಯೂ ಮೋದಿ ಸರ್ಕಾರಕ್ಕಿದೆ. ಇದಕ್ಕಾಗಿ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ತನ್ನ ಆರ್ಥಿಕ ತಂತ್ರವನ್ನು ಮರುಪರಿಶೀಲಿಸಬೇಕಾಗುತ್ತದೆ. ಷೇರು ಪ್ರಸ್ತಾಪವು ವಿಫಲವಾದರೇ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮತ್ತು ಜೀವ ವಿಮೆದಾರ ಸಂಸ್ಥೆಗಳಲ್ಲಿ ಹೆಚ್ಚು ಹತೋಟಿ ಹೊಂದಿರುವ ಅದಾನಿ ಸಂಸ್ಥೆಯ ಸಾಲದಿಂದ ಉಂಟಾಗುವ ಮುಂದಿನ ಗತಿ ಏನು ಎಂಬುದರ ಬಗ್ಗೆ ಸಾರ್ವಜನಿಕ ಆತಂಕ ಸೃಷ್ಟಿ ಆಗಿದೆ. 

ಇದು ಅಕ್ಷರಶಃ ಸುಳ್ಳಲ್ಲ. ಸರ್ಕಾರದ ಸ್ವಾಮ್ಯದಲ್ಲಿದ್ದ ಬಂದರುಗಳು, ವಿಮಾನ ನಿಲ್ದಾಣಗಳು, ರಸ್ತೆಗಳು ವಿದ್ಯುತ್ ಘಟಕಗಳಿಗೆ ಅದಾನಿ ಗ್ರೂಪ್ ಹೂಡಿಕೆ ಮಾಡಿದೆ. ಆದರೇ ಈಗ ಇಂತಹದ್ದೊಂದು ಜಾಗತಿಕ ಮಟ್ಟದ ಆರೋಪ ಅದಾನಿ ಸಮೂಹದ ಮೇಲೆ ಕೇಳಿ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಆರ್ಥಿಕ ಕನಸುಗಳಿಗೆ ಬ್ರೇಕ್ ಬಿದ್ದಂತಾಗಿದೆ. ಅದಾನಿ ಸಾಮ್ರಾಜ್ಯದ ಆಧಾರವಾಗಿರುವ ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ಸಾಲದ ಸುಳಿಯಲ್ಲಿ ಸಿಲುಕಿದೆ. ಇಂತಹ ಒಂದು ದೊಡ್ಡ ಆರೋಪವನ್ನು ಎದುರಿಸುತ್ತಿರುವ ಅದಾನಿ ಸಮೂಹ, ಹೇಳಿದ್ದನ್ನು ಮಾಡಿ ಪೂರೈಸುವುದಕ್ಕೆ ಸಾಧ್ಯವಿದೆಯೇ..? ಅದು ಖಂಡಿತ ಅಷ್ಟು ಸುಲಭ ಸಾಧ್ಯವಿಲ್ಲ. ಈಗ ಭಾರತೀಯರ ನಿಜವಾದ ಭಯ ಬೇರೆಯೇ ಇದೆ. ಗೌತಮ್ ಅದಾನಿ ಹಾಗೂ ಅವರ ನೇತೃತ್ವದ ಕಂಪನಿಗಳು ತಾನು ಹೇಳಿದ್ದನ್ನು ಖಂಡಿತವಾಗಿ ಸೃಳವಾಗಿ ಮಾಡುವುದಕ್ಕೆ ಸಾಧ್ಯವಿಲ್ಲ.  ಇಂತಹದ್ದೊಂದು ವಂಚನೆಯ ಆರೋಪ ಎದರುರಿಸುತ್ತರುವ ಅದಾನಿ, ಭರವಸೆ ನೀಡಿದ ರಸ್ತೆಗಳನ್ನು ನಿರ್ಮಿಸಬಹುದೇ..? ಅವರಿಗೆ ಹೂಡಿಕೆಗೆ ಮಾರಲಾದ ಬಂದರುಗಳು ಸುಧಾರಣೆಯಾಗಬಹುದೇ ? ಬಿಡ್ನಲ್ಲಿ ಗೆದ್ದ ವಿಮಾನ ನಿಲ್ದಾಣಗಳ ಗತಿ ಏನು ?. ಎಲ್ಲದಕ್ಕಿಂಥ ಮಿಗಿಲಾಗಿ ಭಾರತದ ಅಭಿವೃದ್ಧಿಯಲ್ಲಿ ಬಹು ವಲಯಗಳ ಹೂಡಿಕೆ ಪಾಲುದಾರಿಕೆಗೆ ಮೋದಿ ಸರ್ಕಾರದ ಮೊದಲ ಆಯ್ಕೆ ಅದಾನಿ ಸಮೂಹವಾಗಿತ್ತು ಎನ್ನುವುದು ಇಲ್ಲಿ ಗಮನಾರ್ಹ ವಿಷಯ. 

ಈ ಮಹತ್ವಕಾಂಕ್ಷೆಗಳ ಸೇವೆಗಾಗಿ ಅಥವಾ ಅಭಿವೃದ್ಧಿಗಾಗಿ ಅದಾನಿ ಗ್ರೂಪ್ ಹೇಗೆ ಈ ಏಲ್ಲಾ ವಂಚನೆ ಆರೋಪಗಳಿಂದ ಹೊರಬರಲಿದೆ ಎಂಬುವುದು ದೇಶದ ಚಿಂತೆಯಲ್ಲ. ಆದಾಗ್ಯೂ ಅನುಷ್ಟಾನ ಸಾಮರ್ಥ್ಯದ ಕೊರತೆ ದೇಶಕ್ಕಿದೆ. ಇದನ್ನೇ ಅದಾನಿ ಕಂಪೆನಿಗಳು ಪೂರೈಸುವ ಭರವಸೆ ನೀಡಿತ್ತು. ಆದರೇ, ಇಂತಹ ವಂಚನೆ ಆರೋಪ ಎದುರಿಸುತ್ತಿರುವ ಸಂದರ್ಭದಲ್ಲಿ ಅದಾನಿ ಗ್ರೂಪ್ಗೆ ಹೂಡಿಕೆಯ ಆಧಾರದಲ್ಲಿ ಮಾರಿದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಗತಿ ಏನು..? ಇದಕ್ಕೆ ಹೊಣೆಗಾರರು ಯಾರು..? ಸರ್ಕಾರದ ಪಾತ್ರವೇನು.? ಇಂತೆಲ್ಲಾ ಪ್ರಶ್ನೆಗಳು ಸಾರ್ವಜನಿಕ ವಲಯವನ್ನು ಕಾಡುತ್ತಿವೆ. 

ಭಾರತವನ್ನು ಲೂಟಿ ಮಾಡುತ್ತಿದೆಯೇ ಅದಾನಿ ಸಮೂಹ ? :  ಅದಾನಿ ಗ್ರೂಪ್ನ ಮೇಲೆ ಗಂಭೀರವಾದ ವಂಚನೆಯ ಆರೋಪ ಮಾಡಿರುವ ಹಿಂಡನ್ ಬರ್ಗ್ ಸಂಸ್ಥೆ, ಅದಾನಿ ಭಾರತದ ಅಭಿವೃದ್ಧಿಗೆ ಮಾರಕ ಎಂದು ಹೇಳಿದ್ದು, ಹುಬ್ಬೇರಿಸುವಂತೆ ಮಾಡಿದೆ. ಮಾತ್ರವಲ್ಲದೇ, ಅದಾನಿ ಸಮೂಹ ವ್ಯವಸ್ಥಿತವಾಗಿ ಭಾರತವನ್ನು ಲೂಟಿ ಮಾಡುತ್ತಿದೆ ಎಂಬುವುದನ್ನೂ ಕೂಡ ಹೇಳಿದೆ. ಭಾರತದ ಯಶಸ್ಸನ್ನು ಬಳಸಿಕೊಂಡೇ ಯೋಜಿತವಾಗಿ ಅದಾನಿ ಸಂಸ್ಥೆ ದೇಶವನ್ನು ಲೂಟಿ ಮಾಡಿ ತಿಂದು ತೇಗುತ್ತಿದೆ. ಅದಾನಿ ಗ್ರೂಪ್ನಿಂದಾಗಿ ಭಾರತದ ಭವಿಷ್ಯಕ್ಕೆ ತೊಡಕಾಗಲಿದೆ ಎಂದು ಆರೋಪಿಸಿದೆ. 

ಇನ್ನು, ರಾಜಕೀಯ ಆರ್ಥಿಕತೆಯನ್ನು ಹೇಗೆ ಅರ್ಥೈಸಿಕೊಳ್ಳುವುದು ಎಂಬುವುದು ಇನ್ನೂ ಭಾರತದಲ್ಲಿ ನಿರ್ಣಾಯಕ ಪ್ರಶ್ನೆಗಳಲ್ಲಿ ಒಂದಾಗಿದೆ. ಮತ್ತು ಅದಾನಿ ಮೇಲಿನ ಗಂಭೀರ ಆರೋಪದ ಪರಿಣಾಮ ಏನು ? ಮತ್ತು ಯಾವ ಸತ್ಯಾಂಶ ಹೊರತರಲಿದೆ ಎನ್ನುವುದು ಸದ್ಯದ ಕುತೂಹಲ. 

ಹಿಂದಿನ ಸರ್ಕಾರದಲ್ಲಿ ಇದ್ದ ಭ್ರಷ್ಟಾಚಾರವನ್ನು ಕಿತ್ತೊಗೆಯುವುದಾಗಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈಗ ಮೋದಿ ಆಪ್ತ ಉದ್ಯಮಿ ಇಂತಹದ್ದೊಂದು ದೊಡ್ಡ ವಂಚನೆ ಆರೋಪದಲ್ಲಿ ಸಿಕ್ಕಿರುವುದು ಸಹಜವಾಗಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿವೆ. 

ಬಹು ಬಂಡವಾಳ ಸಂಸ್ಥೆಗಳ ಕಾರಣದಿಂದಾಗಿ ದೇಶದ ಸಮಗ್ರ ಆರ್ಥಿಕ ಪ್ರಗತಿಕೆ ಸಹಾಯವಾಗಲಿದೆ ಎಂಬ ಒಂದು ಅನಿಸಿಕೆ ಅಥವಾ ವಾದ ಇದೆ. ಆದರೇ,  ಸರ್ಕಾರಿ ಸ್ವಾಮ್ಯದಲ್ಲಿರುವ ಘಟಕಗಳು ಇಂತಹ ಬಹು ಬಂಡಳವಾಳಶಾಹಿ ಅಥವಾ ವಸಾಹುತುಶಾಹಿ ಅಧಿಕಾರದ ಅಡಿಯಲ್ಲಿ ನಿರ್ವಹಣೆಗೆ ಒಳಪಟ್ಟರೇ, ದೇಶದ ನಾಗರಿಕರ ಗತಿ ಏನು? ಈ ವಂಚನೆ ಸತ್ಯವಾಗಿದ್ದರೇ, ಇದು ಭಾರತೀಯ ಹಣಕಾಸು ವಹಿವಾಟಿಗೆ ಎಷ್ಟೊಂದು ಅಪಾಯವಿದೆ ಎನ್ನುವುದು ಆಶ್ಚರ್ಯದ ಸಂಗತಿ. ಇದು ಕೇವಲ ಸತ್ಯ ಹಾಗೂ ಅಂಕಿ ಅಂಶಗಳ ವಿಷಯವಲ್ಲ. ಇದು ಒಟ್ಟಾರೆಯ ಅಪಾಯದ ವಿಷಯ ಎನ್ನುವುದು ಗಮನಾರ್ಹ. 

ಮುಂದೆ ಏನಾಗಲಿದೆ ಎಂಬುವುದು ನಮಗೆ ತಿಳಿದಿಲ್ಲ. ಅದಾನಿ ಸಮೂಹದ ಮೇಲೆ ಹಿಂಡನ್ ಬರ್ಗ್ ಸಂಸ್ಥೆ ಮಾಡಿದ ವಂಚನೆಯ ಆರೋಪದ ಬಗ್ಗೆ ಅಷ್ಟೇ ಗೊತ್ತು. ಒಂದು ವರದಿಯಿಂದ ದೇಶದ ಬಿಲಿಯನೆರ್ ಒಬ್ಬ ಆರ್ಥಿಕ ಹೊಡೆತಕ್ಕೊಳಗಾಗಿದ್ದಾನೆ. ದೇಶದ ಸರ್ಕಾರದ ಅಧೀನದಲ್ಲಿದ್ದ ರೈಲು, ವಿಮಾನ ನಿಲ್ದಾಣಗಳು, ರಸ್ತೆಗಳು, ಬಂಧರುಗಳು ಆತನ ಹೂಡಿಕೆಯಲ್ಲಿವೆ. ಅವುಗಳ ಭವಿಷ್ಯವೇನು ? ದೆಹಲಿ ರಾಜಕಾರಣ ಅದಾನಿಗೆ ನಿಷ್ಠತೆ ತೋರುತ್ತದೆಯೆ? ವಿರೋಧ ಪಕ್ಷಗಳು ಸಿಕ್ಕ ಈ ವಿಷಯವನ್ನು ರಾಜಕೀಯ ದಾಳವಾಗಿ ಹೇಗೆ ಬಳಸಿಕೊಳ್ಳಲಿವೆ ? ಮೋದಿ ಪಾತ್ರವೇನು ? ರಾಜಕೀಯ ಒಳಜಗಳಗಳು ಹೇಗಿರಲಿವೆ..? ಇವೆಲ್ಲವೂ ಸದ್ಯದ ಪ್ರಶ್ನೆಗಳು.

-ಶ್ರೀರಾಜ್ ವಕ್ವಾಡಿ   



 


Wednesday, January 25, 2023

ಮೌಲಿಕ ವಿಚಾರಗಳಷ್ಟೇ ತಂತ್ರಗಾರಿಕೆಗೆ ಸಾಲದು..!

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತತ್ವ ರಾಜಕೀಯಕ್ಕೆ ಗೆಲುವು ತಂದುಕೊಡುವ ಅಸ್ತ್ರ..!

ಕಾಂಗ್ರೆಸ್ ತನ್ನ ಪ್ರಚಾರದ ಕಾರ್ಯ ವೈಖರಿಯನ್ನು ಇನ್ನಾದರೂ ಬದಲಾಯಿಸಿಕೊಳ್ಳದೆ ಹೋದರೇ, ಬರುವ ಚುನಾವಣಾ ಸುತ್ತಿನಲ್ಲೂ ಸೋಲಿನ ಫಲಿತಾಂಶದೊಂದಿಗೆ ತೃಪಿಪಟ್ಟುಕೊಳ್ಳಬೇಕಾಗಬಹುದು ಎನ್ನುವುದು ಬಹುತೇಕ ನಿಶ್ಚಿತ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಮೌಲಿಕವಾದ ವಿಚಾರಗಳನ್ನು ಮುನ್ನೆಲೆಗೆ ತರುವುದರ ಮುಖೇನ ಮುಖ್ಯ ಅನ್ನಿಸುವ ಚಿಂತನೆ ಮತ್ತು ನಂಬಿಕೆಗಳನ್ನು ಎತ್ತಿ ಹಿಡಿಯುವುದಷ್ಟನ್ನೇ ರಾಜಕೀಯ ಪ್ರಚಾರದಲ್ಲಿ ಕಾಂಗ್ರೆಸ್ ಬಳಸಿದರಷ್ಟೇ ಸಾಲದು ಎಂಬುವುದು ಬಹುತೇಕ ಎಲ್ಲಾ ರಾಜ್ಯಗಳ ಚುನಾವಣೆಯಲ್ಲಿ ಕಾಣಸಿಕ್ಕಿದೆ. ವೇದಿಕೆಯಲ್ಲಿ, ಸಾರ್ವಜನಿಕ ಸಂಪರ್ಕ ಸಭೆಗಳಲ್ಲಿ ಜನರನ್ನು ಉದ್ದೀಪ್ತಗೊಳಿಸುವ ಬಿರುಸಾದ ಭಾಷಣ ಬಿಗಿಯುವುದು, ನ್ಯೂ ಮೀಡಿಯಗಳನ್ನು ಅಪಪ್ರಚಾರ ಮಾಡುವ ಪಾಲಿಟಿಕಲ್ ಟೂಲ್ ಆಗಿ ಪರಿಣಾಮಕಾರಿಯಾಗಿ ಪರಿವರ್ತಿಸಿಕೊಳ್ಳದಿದ್ದರೇ ಚುನಾವಣೆಯನ್ನು ಗೆಲ್ಲುವುದಕ್ಕೆ ಪರ್ಯಾಯ ದಾರಿ ಯಾವುದೂ ಇಲ್ಲವೆಂಬಷ್ಟರ ಮಟ್ಟಿಗೆ ಸ್ಥಿತಿ ಬಂದೊದಗಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.

ತನ್ನ ಅತ್ಯಮೂಲ್ಯ ಸಿದ್ಧಾಂತವನ್ನು ಅಥವಾ ತಾನು ನಂಬಿಕೊಂಡು ಬಂದಿರುವ ವಿಚಾರಗಳನ್ನು ಎತ್ತಿಹಿಡಿಯುವುದು ಪ್ರಸ್ತುತ ರಾಜಕೀಯದಲ್ಲಿ ಔಟ್‌ಡೇಟಡ್ ಪಾಲಿಟಿಕಲ್ ಟೂಲ್ ಆಗಿಹೋದಂತಿದೆ. ಪ್ರತಿರೋಧಿಸುವ ಬಗೆಯನ್ನೇ ಬದಲಾಯಿಸಿ ಸಾರ್ವಜನಿಕ ಬುದ್ಧಿಯನ್ನು ಮಂಕಾಗಿಸಿದ ರಾಜಕೀಯ ಈ ದೇಶದಲ್ಲಿ ಆಳ್ವಿಕೆ ನಡೆಸುತ್ತಿರುವಾಗ ಅದಕ್ಕೆ ಸರಿಯಾಗಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ತತ್ವವನ್ನು ಅಗತ್ಯವಾಗಿ ಪಾಲಿಸಲೇಬೇಕಿದೆ. ಅದು ಈ ರಾಜಕೀಯದ ಸ್ಥಿತಿಯಲ್ಲಿ ತುರ್ತು ಕೂಡ ಹೌದು. 

ವಾಸ್ತವವೆಂದರೇ ಕಣ್ಣಿಗೆ ತೋರುವ ಪದರವಷ್ಟೇ ಅಲ್ಲ, ವಾಸ್ತವ ಅಂದರೇ ಪದರದ ಆಳ ಅಗಲವೂ ಹೌದು ಎನ್ನುವುದನ್ನು ಒಪ್ಪಿಕೊಳ್ಳುವುದಿರಲಿ, ಆ ಬಗ್ಗೆ ಯೋಚಿಸುವುದಕ್ಕೂ ಮುಂದಾಗದಷ್ಟರ ಮಟ್ಟಿಗೆ ಸಾರ್ವಜನಿಕ ಬುದ್ಧಿಯನ್ನು ಈ ಹೊಲಸು ರಾಜಕೀಯ ಬಡವಾಗಿಸಿದೆ.

ಚುನಾವಣಾ ಪೂರ್ವ ಸಿದ್ಧತೆಯ ದೃಷ್ಟಿಕೋನದಲ್ಲಿ ಆಳುವ ಪಕ್ಷಕ್ಕಿರುವ ಪರಮೋಚ್ಚ ಗುರಿ ಏನು ಕೇಳಿದರೇ, ವಿರೋಧಕ್ಕೆ ಜನರನ್ನು ಉತ್ತೇಜಿಸುವುದೇ ಆಗಿದೆ. ಈವರೆಗೆ ರಾಜಕೀಯ ನಡೆದುಕೊಂಡು ಬಂದಿದ್ದು ಕೂಡ ಹಾಗೆಯೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಸಮಾಜ ಹಾಗೂ ರಾಜಕೀಯ ನಾವು ತಿಳಿದುಕೊಂಡಿರುವುದಕ್ಕಿಂತ ತೀರಾ ಭಿನ್ನ ಎನ್ನುವುದು ಸತ್ಯ. ಅವಶ್ಯಕ ಹಾಗೂ ಅನಿವಾರ್ಯ ಸಂಗತಿಗಳನ್ನು ತನಗೆ ಬೇಕಾಗುವ ಹೊತ್ತಿಗೆ ದಾಖಲಿಸಿಕೊಳ್ಳುವುದಷ್ಟೇ ಅಲ್ಲದೇ ಪ್ರತಿಪಕ್ಷದ ಮೇಲೆ ಪ್ರತಿರೋಧದ ಅಲೆ ಎಬ್ಬಿಸುವುದು/ಹಬ್ಬಿಸುವುದು ಮಾತ್ರವಲ್ಲದೇ ರಾಜಕೀವಾಗಿ, ಸಾಮಾಜಿಕವಾಗಿ ಗೊಂದಲ ಸೃಷ್ಟಿಸುವುದರ ಮುಖೇನ ಯಾವುದರ ಮೇಲೆ ಅಗತ್ಯವಾಗಿ ಗಂಭೀರವಾದ ಗಮನವಿರಬೇಕೋ ಅಥವಾ ಚಿಂತನೆ ಇರಬೇಕೋ ಅದರ ಕಣ್ತಪ್ಪಿಸಿ ಅದಾಗದಂತೆ ಮಾಡಿ ದಿಕ್ಕು ತಪ್ಪಿಸುವುದೇ ಡಬ್ಬಲ್ ಥಿಂಕ್ ಸ್ಟ್ರ್ಯಾಟಜಿಯ ರಾಜಕೀಯ. ಅದು ಈ ಕಾಲಘಟ್ಟದಲ್ಲಿ ಗೆಲ್ಲುತ್ತಿರುವ ರಾಜಕೀಯವೂ ಹೌದು.

ಪ್ರಯೋಗಗಳು ಕೆಲವೊಮ್ಮೆ ತುಂಬಾ ಸುಲಭವಾಗಿ ಪ್ರಭಾವಕ್ಕೊಳಗಾಗುತ್ತವೆ, ಮತ್ತೆ ಕೆಲವೊಮ್ಮೆ ಅದು ಎಂಥದ್ದೇ ಪ್ರಯೋಗ ಮಾಡಿದರೂ ಅಷ್ಟು ಸುಲಭದಲ್ಲಿ ಪ್ರಭಾವಕ್ಕೊಳಗಾಗುವುದಿಲ್ಲ. ಪ್ರಯೋಗಗಳ ಅಂತಿಮ ಸುತ್ತಿನ ಫಲಿತಾಂಶ ಭವಿಷ್ಯದ ಗರ್ಭದಲ್ಲಿರುತ್ತದೆ. ರಾಜಕೀಯದಲ್ಲಿ ಹಾಗಲ್ಲ. ಪ್ರಯೋಗ ಮಾಡಿದ ಆರಂಭಿಕ ಹಂತದಲ್ಲಿಯೇ ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯ. ಇದು ಕೆಲವೊಮ್ಮೆ ಸುಳ್ಳಾಗಿದ್ದು ಕೂಡ ರಾಜಕೀಯದ ಇತಿಹಾಸದಲ್ಲಿದೆ. ಆದರೇ, ಮೊದಲು ಪ್ರಯೋಗಿಸಿದವ ಸಾಮಾನ್ಯವಾಗಿ ಗೆಲ್ಲುತ್ತಾನೆ. ಎರಡನೇಯವ ಎಷ್ಟೇ ಪ್ರಭಾವಿಸುವುದಕ್ಕೆ ಪ್ರಯತ್ನ ಪಟ್ಟರೂ ಅವನ ಭವಿಷ್ಯದ ಗರ್ಭದಲ್ಲಿ ಸುಫಲವಿರುವುದು ತೀರಾ ವಿರಳ. ಇಲ್ಲಿ ಒಂದೇ, ಪ್ರಯೋಗ ಹೊಸತಾಗಿರಬೇಕು ಅಥವಾ ಅನುಷ್ಠಾನಗೊಳಿಸುವ ಮಾದರಿ ಬದಲಾಗಿರಬೇಕು. ಯಾವಾಗಲೂ ಮೊದಲಿಗೆ ಹೆಚ್ಚು ಪ್ರಾಶಸ್ಯ. ನಂತರದವುಗಳಿಗೆ ಪ್ರಾಶಸ್ಯ ಕಡಿಮೆ. ರಾಜಕೀಯದಲ್ಲಿ ಇದನ್ನು ಬಲ್ಲವ ಗೆಲ್ಲಬಲ್ಲ. ಭಾರತೀಯ ರಾಜಕೀಯದಲ್ಲಿ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಸೋಲುತ್ತಿರುವುದು ಈ ಕಡೆಗಿನ ಕೊರತೆಯಲ್ಲಿಯೇ. ಕಾಂಗ್ರೆಸ್ ಕೂಡ ಜನರ ಒಲವನ್ನು ಪಡೆಯುವಲ್ಲಿ ಸೋಲುತ್ತಿರುವುದು ಇಲ್ಲೇ. ಬಿಜೆಪಿ ೨೦೧೪ರಲ್ಲಿ ನ್ಯೂ ಮೀಡಿಯಾಗಳನ್ನು ಪಾಲಿಟಿಕಲ್ ಟೂಲ್ ಆಗಿ ಪರಿವರ್ತಿಸಿಕೊಂಡು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡ ಮಾದರಿಯನ್ನು ಕಾಂಗ್ರೆಸ್ ಈಗ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಅದಕ್ಕೆ ಈ ಸ್ಥಿತಿಗತಿಯಲ್ಲಿ ಕಾಂಗ್ರೆಸ್‌ನ ತಂತ್ರಗಾರಿಕೆ ಔಟ್‌ಡೇಟಡ್ ಅಂತ ಹೇಳುವುದು. ಇಂತಹ ತಂತ್ರಗಾರಿಕೆಯಲ್ಲಿ ಬಿಜೆಪಿ ಈಗ ಕಾಂಗ್ರೆಸ್ ಸೇರಿ ಎಲ್ಲಾ ಪ್ರತಿಪಕ್ಷಗಳಿಗಿಂತ ಮತ್ತಷ್ಟು ಮುಂದೆ ಹೋಗಿರಬಹುದು. ಈಗ ಅಭಿವೃದ್ಧಿಯ ಕೆಲಸವನ್ನು ಪ್ರಚಾರ ಮಾಡುವುದಕ್ಕಿಂತ ವೈಯಕ್ತಿಕ ಹಾಗೂ ಪಕ್ಷದ ರಾಜಕೀಯ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವಂತದ್ದೇ ಪರಿಣಾಮಕಾರಿಯಾಗಿ ಚುನಾವಣಾ ಟೂಲ್ ಬದಲಾಗಿದೆ. ಅದು ಚುನಾವಣಾ ರಾಜಕೀಯದ ಟ್ರೆಂಡ್ ಕೂಡ ಹೌದು. 

ಬಿಜೆಪಿ ಚುನಾವಣಾ ತಂತ್ರಗಾರಿಕೆಯಲ್ಲಿ ಸ್ಪಷ್ಟವಾಗಿದೆ ! : ಕೇಂದ್ರದಲ್ಲಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವುದಕ್ಕಾಗಿ ಎಲ್ಲಾ ಹಂತದಲ್ಲಿ ಬಿಜೆಪಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ೨೦೨೪ರ ಮೊದಲು ಒಂಬತ್ತು ಚುನಾವಣೆಗಳು ನಡೆಲಿಕ್ಕಿದೆ. ಎಲ್ಲಾ ಚುನಾವಣೆಗಳಲ್ಲಿ ಗೆಲ್ಲುವ ಹಸಿವು ಬಿಜೆಪಿಗಿದೆ. ಮೋದಿ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕ. ಮೋದಿಯನ್ನು ರಾಜಕೀಯವಾಗಿ ಬಿಂಬಿಸಿದ ಅವತಾರಗಳನ್ನೆಲ್ಲಾ ಈ ದೇಶ ಕಂಡಿದೆ. ಹಿಂದೂ ಹೃದಯ ಸಾಮ್ರಾಟ, ಅಭಿವೃದ್ಧಿಯ ಹರಿಕಾರ ಹೀಗೆ ಇನ್ನೂ ಹಲವು. ಇವೆಲ್ಲವೂ ರಾಜಕೀಯವಾಗಿ ಸೃಷ್ಟಿಯಾದ ಸಂಗತಿಗಳು. ಅದು ವಾಸ್ತವದಲ್ಲಿ ಹೌದೋ ಅಲ್ಲವೋ, ಆದರೇ, ಅದನ್ನು ಬಹಳ ವ್ಯವಸ್ಥಿತವಾಗಿ ಪಕ್ಷದ ಟಾರ್ಗೇಟ್ ವೋರ‍್ಸ್ ತಲೆ ಒಳಗೆ ಕಂಪ್ಯೂಟಿಂಗ್ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈಗ ಒಂದೆರಡು ವರ್ಷಗಳಿಂದ ‘ಜಾಗತೀಕ ರಾಜನೀತಿ ತಜ್ಞ’ ಮತ್ತೊಂದು ಹೊಸ ಅವತಾರದಲ್ಲಿ ಮೋದಿಯವರನ್ನು ಬಿಂಬಿಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಲ್ಲಿದೆ. ಇದೂ ಕೂಡ ಹಾಗೆ, ಇಡಿ ಜಗತ್ತು ಮೋದಿಯನ್ನು ಒಪ್ಪಿಕೊಂಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೇ, ದೇಶದ ಜನರ ತಲೆಯೊಳಗೆ ವ್ಯವಸ್ಥಿತವಾಗಿ ಈ ಅಭಿಪ್ರಾಯವನ್ನು ತುಂಬಿಸುವ ಪ್ರಯತ್ನಗಳನ್ನು ಮಾಧ್ಯಮಗಳಿಂದಾದಿಯಾಗಿ ಎಲ್ಲಾ ಸಾಧ್ಯವಿರುವ ಮಾರ್ಗಗಳಿಂದ ಬಿಜೆಪಿ ಮಾಡಿದೆ. ಇನ್ನು, ೨೦೨೪ ಬರುವಷ್ಟರಲ್ಲಿ ರಾಮ ಮಂದಿರ ತಲೆ ಎತ್ತಿ ನಿಲ್ಲಲಿದೆ. ಅದು ಬಿಜೆಪಿಗೆ ಮತ್ತಷ್ಟು ರಾಜಕೀಯ ಮೈಲೇಜ್ ಖಂಡಿತ ನೀಡಲಿದೆ. ಇನ್ನು, ರಾಮ ಸೇತುವನ್ನು ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವುದಕ್ಕೆ ಕೇಂದ್ರ ಸರ್ಕಾರ ಈ ಚುನಾವಣೆಯ ಕಾಲದಲ್ಲಿ ಮುಂದಾಗಿದೆ. ಹೀಗೆ ಹಲವು ಧಾರ್ಮಿಕ ವಿಚಾರಗಳನ್ನು ರಾಜಕೀಯಕ್ಕೆ ಉರುಳಿಸುವ ತನ್ನ ಹಳೆಯ ಛಾಳಿಯನ್ನು ಮತ್ತೆ ಈ ಬಾರಿಯೂ ಬಿಜೆಪಿ ಮುಂದುವರಿಸಿದೆ.

ಬಿಜೆಪಿ ಹೈಕಮಾಂಡ್ ತಲೆಯಲ್ಲಿರುವುದು ಸದ್ಯಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ. ಕಳೆದ ಎರಡು ಮೂರು ವರ್ಷಗಳಿಂದ ಹಲವು ವಿವಾದಗಳಿಗೆ ಸಾಕ್ಷಿಯಾದ ಬಿಜೆಪಿ ತನ್ನ ವರ್ಚಸ್ಸನ್ನು ಮರು ಸೃಷ್ಟಿಸಿಕೊಳ್ಳುವ ಪ್ರಯತ್ನದಲ್ಲಿದೆ. ಬಿಎಸ್‌ವೈ ಪದತ್ಯಾಗ, ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅನಿರಿಕ್ಷಿತ ಆಯ್ಕೆ, ಜಾರಕಿಹೊಳಿ ಸಿ.ಡಿ ಪ್ರಕರಣ, ಈಶ್ವರಪ್ಪ ರಾಜೀನಾಮೆ, ೪೦% ಕಮಿಷನ್, ಪಿಎಸ್‌ಐ ಹಗರಣ, ಬಿಜೆಪಿಯ ಪ್ರಭಾವಿ ನಾಯಕರ ಆಪ್ತ ಸ್ಯಾಂಟ್ರೋ ರವಿ ಪ್ರಕರಣ ಎಲ್ಲವೂ ರಾಜ್ಯ ಬಿಜೆಪಿ ಸರ್ಕಾರದ ರಾಜಕೀಯದ ಓಟಕ್ಕೆ ಒಂದಿಷ್ಟು ಬ್ರೇಕ್ ಹಾಕಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾರ್ವಜನಿಕ ಸಂಪರ್ಕಗಳ ಮೂಲಕ ಚುನಾವಣಾ ಸಮೀಕ್ಷೆಯಲ್ಲಿ ಮುಳುಗಿರುವ ಬಿಜೆಪಿ, ಕಾಂಗ್ರೆಸ್ ನೀಡುತ್ತಿರುವ ಭರವಸೆ, ದೇಶದಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ತುಸು ಹೆದರಿಯೇ ಚುನಾವಣೆಗೆ ಸಜ್ಜಾಗುತ್ತಿದೆ. 

ಇನ್ನು, ದೊಡ್ಡ ಮಟ್ಟಿಗಿನ ಕಾರ್ಯಕರ್ತರ ಬಳಗ, ಫಂಡ್, ಪ್ರಭಾವ ಎಲ್ಲವನ್ನೂ ಒಳಗೊಂಡಿರುವ ಬಿಜೆಪಿ, ಕೇಂದ್ರದಲ್ಲಿ ಗೆಲ್ಲುವ ಎಲ್ಲಾ ಟ್ರೆಂಡ್ ಹೊಂದಿದೆಯಾದರೂ ದಕ್ಷಿಣ ಭಾರತದಲ್ಲಿ ಬಿಜೆಪಿಯ ಹವಾ ನಡೆಯುವುದಿಲ್ಲವೆಂಬ ಸತ್ಯ ಸ್ವತಃ ಬಿಜೆಪಿಗೂ ಗೊತ್ತಿದೆ. ದಕ್ಷಿಣದಲ್ಲಿ ಗೆಲ್ಲುವ ಸೂತ್ರವನ್ನು ಭೇದಿಸುವ ತಂತ್ರಗಾರಿಕೆಯನ್ನು ಬಿಜೆಪಿ ತಯಾರು ಮಾಡಿಕೊಳ್ಳಬೇಕಾಗಿದೆ. ದಕ್ಷಿಣ ಭಾರತದ ಉದ್ದಗಲಕ್ಕೂ ಕರ್ನಾಟಕವನ್ನು ಹೊರತುಪಡಿಸಿದರೇ, ಬೇರೆ ಎಲ್ಲೂ ಬಿಜೆಪಿ ಅಜೆಂಡಾ, ಸಿದ್ಧಾಂತವನ್ನು ಒಪ್ಪುವ ಮತದಾರರು ಇಲ್ಲ. ಇದ್ದರೂ ತೀರಾ ವಿರಳ. ಮೋದಿಯನ್ನು ಮುಂದಿಟ್ಟುಕೊಂಡು ಎಂಥಾ ಅವತಾರದಲ್ಲಿ ಬಿಂಬಿಸಿ ಚುನಾವಣೆಗೆ ಬಂದರೂ ಇಲ್ಲಿ ಯಃಕಶ್ಚಿತ್ ಎಂಬ ಧೋರಣೆಯನ್ನೇ ಬಿಜೆಪಿ ಎದುರಿಸಬೇಕು. ಇದು ಅಪ್ಪಟ ಸತ್ಯ. ‘ಮೋದಿ ಶುದ್ಧತ್ವ’ ಇಲ್ಲಿ ನಡೆಯುವುದಿಲ್ಲ. ಅಲ್ಲೋ ಇಲ್ಲೋ ಮೈತ್ರಿ ಮಾಡಿಕೊಳ್ಳಬಹುದಷ್ಟೇ ಬಿಟ್ಟರೇ, ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಕ್ಕೆ ಖಂಡಿತ ಬಿಜೆಪಿಗೆ ಸಾಧ್ಯವಿಲ್ಲ. ಅದು ಕರ್ನಾಟಕದಲ್ಲಿಯೂ ಬಿಜೆಪಿಗೆ ಈವರೆಗೆ ಆಗಿಲ್ಲ ಎನ್ನುವುದು ಗಮನಾರ್ಹ. ಈ ವಿಧಾನ ಸಭಾ ಚುನಾವಣೆಯಲ್ಲಿಯೂ ಅದು ಸಂಶಯವೇ ಆಗಿದೆ. 

ಈ ವರ್ಷದ ಕೇಂದ್ರ ಬಜೆಟ್ ಹಾಗೂ ಬಿಜೆಪಿಯ ಈ ಅವಧಿಯ ಬಹುತೇಕ ಕೊನೆಯ ಬಜೆಟ್ ಬಗ್ಗೆ ಕುತೂಹಲ ಹೆಚ್ಚಿದೆ. ರಾಜಕೀಯ ಬದ್ಧ ವೈರಿ ರಾಹುಲ್ ಗಾಂಧಿ ಕೆಲವು ತಿಂಗಳುಗಳಿಂದ ದೇಶದುದ್ದಗಲಕ್ಕೂ ಭಾರತ್ ಜೋಡೋ ಯಾತ್ರೆ ಮೂಲಕ ಬೃಹತ್ ಸಾರ್ವಜನಿಕ ಸಂಪರ್ಕ ಮಾಡುವುದರ ಜೊತೆಗೆ ಜನರ ಸಮಸ್ಯೆಗಳನ್ನು ಆಲಿಸುತ್ತಿರುವುದು, ಜನ ಕೂಡ ರಾಹುಲ್ ಗಾಂಧಿಗೆ ನಿರೀಕ್ಷೆಗೂ ಮೀರಿ ಬೆಂಬಲಿಸುತ್ತಿರುವುದು ಸಹಜವಾಗಿ ಬಿಜೆಪಿಯಲ್ಲಿ ಆತಂಕ ಸೃಷ್ಟಿಸಿದೆ. ರಾಹುಲ್ ಗಾಂಧಿ ಪಾದಯಾತ್ರೆಯಿಂದ ಬಿಜೆಪಿಗೆ ಆದ ಎಲ್ಲಾ ಧಕ್ಕೆಯನ್ನು ಬಿಜೆಪಿ ಬಜೆಟ್ ಮೂಲಕ ಸರಿಪಡಿಸಿಕೊಳ್ಳುವ ಪ್ರಯತ್ನದಲ್ಲಿದೆ. ಬಜೆಟ್ ಮೂಲಕ ದೇಶದ ನಾಗರಿಕರನ್ನು ಸಮಾಧಾನ ಮಾಡುವ ಸಲುವಾಗಿ ತಯಾರಿಯಲ್ಲಿರುವ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಮತ್ತೊಂದು ಹೆಜ್ಜೆಯ ತಂತ್ರಗಾರಿಕೆಗೆ ತಯಾರಾಗದಿದ್ದರೇ ಇಷ್ಟೆಲ್ಲ ಮಾಡಿಯೂ ಏನೂ ಪ್ರಯೋಜನವಿಲ್ಲದಂತಾಗುತ್ತದೆ. ಅದಕ್ಕೆ ಹೇಳುವುದು ಬಿಜೆಪಿ ರಾಜಕೀಯ ತಂತ್ರಗಾರಿಕೆಯ ವಿಚಾರದಲ್ಲಿ ಕಾಂಗ್ರೆಸ್‌ಗಿಂತಲೂ ಕ್ಲೆವರ್. ಒಟ್ಟಿನಲ್ಲಿ, ರಾಜಕೀಯ ತಂತ್ರಗಾರಿಕೆಗಳ ನಡುವೆ ಚುನಾವಣೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ. 

-ಶ್ರೀರಾಜ್ ವಕ್ವಾಡಿ              


Thursday, January 19, 2023

ಕಾಂಗ್ರೆಸ್‌ಗೆ ಒಲಿಯುವಳೇ ‘ನಾ ನಾಯಕಿ’ಯ ಗೃಹಲಕ್ಷ್ಮೀ .?!

ಉ.ಪ್ರದೇಶದಲ್ಲಾಗದ ವರ್ಕೌಟ್ ಇಲ್ಲಾದೀತೆ ? | ಅಜ್ಜಿಯನ್ನು ನೆನಪಿಸಿ ಹವಾ ಸೃಷ್ಟಿಸಿದ್ದರು ಪ್ರಿಯಾಂಕ.! 

ಮಹಿಳಾ ಕೇಂದ್ರಿತ ವಿಚಾರಗಳು ಚುನಾವಣೆಯ ಪ್ರಚಾರದ ವಸ್ತುವಾಗಿ ಕಂಡಿದ್ದು ಬಹಳ ವಿರಳ. ಹಾಗೆಂದ ಮಾತ್ರಕ್ಕೆ ಅದು ಹೊಸ ವಿಚಾರವೇನಲ್ಲ. ಕಾಂಗ್ರೆಸ್‌ನಲ್ಲಿ ಪ್ರಿಯಾಂಕಾ ಗಾಂಧಿ ಹೆಚ್ಚು ಮುನ್ನೆಲೆಗೆ ಬಂದ ಮೇಲೆ ಚುನಾವಣೆಯಲ್ಲಿ ಮಹಿಳೆಯರ ವಿಚಾರದಲ್ಲಿ ಹೆಚ್ಚು ಗಮನ ನೀಡುತ್ತಿರುವುದು ಉಲ್ಲೇಖನಾರ್ಹ. ಇದು ಪ್ರಿಯಾಂಕ ಗಾಂಧಿ ಸೃಷ್ಟಿಸಿದ ಹೊಸ ಟ್ರೆಂಡ್. ಅದು ರಾಜಕೀಯವಾಗಿ ಗೆದ್ದಿದೆಯೋ ಅಥವಾ ಸೋತಿದೆಯೋ ಎನ್ನುವುದು ಎರಡನೇ ಹಂತದ ಚರ್ಚೆ. ಆದರೇ, ಹೊಸ ಅಲೆಯನ್ನಂತೂ ಸೃಷ್ಟಿಸಿದೆ ಎನ್ನುವುದಂತೂ ಸತ್ಯ. 

ಅಧಿಕಾರ ಶ್ರೇಣಿಯ ವಿಚಾರಕ್ಕೆ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಮಹಿಳೆಯರು ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಎನ್ನುವುದು ಸತ್ಯ. ಮಹಿಳೆಯರನ್ನು ಮುನ್ನೆಲೆಗೆ ತರುವಲ್ಲಿ ಬಿಜೆಪಿ ಸೇರಿ ಯಾವ ಪಕ್ಷವೂ ಹೆಚ್ಚು ಗಮನ ಈವರೆಗೆ ನೀಡಿರಲಿಲ್ಲ. ರಾಷ್ಟ್ರಪತಿ ಹುದ್ದೆ ಈ ಸುತ್ತಿನಲ್ಲಿ ಬಿಜೆಪಿಯಿಂದ ಮಹಿಳೆಯೋರ್ವರಿಗೆ ಒಲಿದಿತ್ತಾದರೂ, ಅದನ್ನು ಮಹಿಳೆ ಎಂಬುದಕ್ಕಿಂತ ಹೆಚ್ಚಾಗಿ ಬುಡಕಟ್ಟು ವರ್ಗಕ್ಕೆ ಪ್ರಾಶಸ್ಯ ನೀಡಿದ್ದು ಎಂದು ಸ್ವತಃ ಬಿಜೆಪಿಯೇ ಹೇಳಿಕೊಂಡಿದೆ. ಅದು ರಾಜಕೀಯದ ಚತುರ ಆಟ. ಹಾಗೆ ನೋಡುವುದಕ್ಕೆ ಹೋದರೇ, ಇಂದಿರಾ ಗಾಂಧಿಯವರನ್ನು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ, ಪ್ರತಿಭಾ ಪಾಟೀಲ್ ಅವರನ್ನು ದೇಶದ ಮೊದಲ ಮಹಿಳಾ ರಾಷ್ಟ್ರಪತಿಯನ್ನಾಗಿ ಕಾಂಗ್ರೆಸ್ ಈ ಮೊದಲೇ ಮಾಡಿದೆ. ಈಗ ಮತ್ತೆ ಅದೇ ಕಾಂಗ್ರೆಸ್‌ನ ಮುಂದಿನ ಪೀಳಿಗೆ ಪ್ರಿಯಾಂಕ ಗಾಂಧಿ ಕೆಲವು ವರ್ಷಗಳಿಂದ ಮಹಿಳಾ ಪ್ರಾತಿನಿಧ್ಯದ ಬಗ್ಗೆ ತುಸು ಹೆಚ್ಚೆ ಗಮನ ನೀಡುತ್ತಿರುವುದು ಅವರ ರಾಜಕೀಯದ ನಡೆಯ ಬಗ್ಗೆ ಕುತೂಹಲ ಹೆಚ್ಚಿಸಿದೆ. 

ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಆಯೋಜಿಸಿದ ಅಭಿಯಾನ ‘ಲಡ್ಕಿ ಹೂ ಲಡ್ ಸಕ್ತಿ ಹೂ’ ಮಾದರಿಯಲ್ಲಿ ‘ನಾ ನಾಯಕಿ’ ಆಯೋಜಿಸಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಭವಿಷ್ಯವನ್ನು ಪುನರುಜ್ಜೀವನಗೊಳಿಸುವ ಆಶಯ ಹೊಂದಿದ್ದ ಪ್ರಿಯಾಂಕ, ಮಹಿಳಾ ಮತದಾರರಲ್ಲಿ ಬಿಜೆಪಿ ಮೇಲಿನ ಒಲವನ್ನು ಕುಸಿಯುವುದರಲ್ಲಿ ವಿಫಲರಾಗಿದ್ದರು. ಪ್ರಿಯಾಂಕ ಗಾಂಧಿ ಹೋದಲೆಲ್ಲ ಅವರನ್ನು ಹತ್ತಿಕ್ಕುವ ಪ್ರಯತ್ನವನ್ನು ಬಿಜೆಪಿ ಮಾಡಿತ್ತು. ಅಷ್ಟಾಗಿಯೂ ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ಗಾಂಧಿ ಅವರಿಗೆ ಮಹಿಳೆಯರ ಅಪಾರ ಬೆಂಬಲ ದೊರಕಿತ್ತು ಎನ್ನುವುದು ಗಮನಾರ್ಹ. 

ಹೇಳಿಕೇಳಿ ಇದು ಕರ್ನಾಟಕ, ಪ್ರಿಯಾಂಕರ ರಾಜಕೀಯ ವರ್ಚಸ್ಸು ಅಷ್ಟಾಗಿ ಇಲ್ಲಿಲ್ಲ. ಕರ್ನಾಟಕ ರಾಜಕೀಯದ ಸ್ಥಿತಿಗತಿ ಹಾಗೂ ಉತ್ತರ ಭಾರತದ ರಾಜ್ಯಗಳ ರಾಜಕೀಯ ಸ್ಥಿತಿಗತಿ ಬೇರೆಯೇ ಇದೆ. ಹೋರಾಟ ಮತ್ತು ರಾಜಕೀಯದಲ್ಲಿ ಹೊಸತನದ ಬಯಕೆ ಪ್ರಿಯಾಂಕ ಅವರಿಗಿದ್ದರೂ, ಅನುಭವದ ಕೊರತೆ ಇದೆ. ಚುನಾವಣೆಯ ವರ್ಷ, ಸಹೋದರ ರಾಹುಲ್ ಗಾಂಧಿ ಇಲ್ಲಿ ಇತ್ತೀಚೆಗಷ್ಟೇ ಭಾರತ್ ಜೋಡೋ ಯಾತ್ರೆ ಮುಗಿಸಿ ಹೋಗಿದ್ದಾರೆ. ಆ ಎಲ್ಲದರ ಅಲೆ, ಚುನಾವಣೆಯ ಬಿಸಿ ಕರ್ನಾಟಕ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿದೆ. ಈ ಹೊತ್ತಿಗೆ ಪ್ರಿಯಾಂಕ ಸಮಾವೇಶ ಚುನಾವಣೆಗೆ ಎಷ್ಟು ಪ್ರಭಾವ ಬೀರಲಿದೆ ಎನ್ನುವುದು ಕುತೂಹಲ. ಅಧಿಕಾರದಲ್ಲಿ ಹೆಚ್ಚು ಮಹಿಳೆಯರಿಗೆ ಸ್ಥಾನಮಾನ ನೀಡುವ ಕಾಂಗ್ರೆಸ್‌ನ ಉದ್ದೇಶ ಫಲಿಸಲಿದೆಯೇ ಎಂಬುವುದು ಪ್ರಶ್ನೆಯಾಗಿ ಉಳಿದಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿಯೇ ಚುನಾವಣೆಯಲ್ಲಿ ಇಂತಹ ಅನೇಕ ಪ್ರಯೋಗ ಮಾಡಿ ಸೋತಿದ್ದರು ಪ್ರಿಯಾಂಕ, ಇನ್ನು ಇಲ್ಲಿ ಒಂದು ದಿನ ಸಮಾವೇಶದಲ್ಲಿ ‘ಗೃಹಲಕ್ಷ್ಮೀ’ ಘೋಷಣೆ ಮಾಡಿ ಹೋದರೇ, ಅದು ಎಷ್ಟರ ಮಟ್ಟಿಗೆ ರಾಜಕೀಯವಾಗಿ ಪ್ರಭಾವಿಸಬಹುದು ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಎದ್ದಿದೆ. ಅಷ್ಟಕ್ಕೂ ಮಿಗಿಲಾಗಿ ಪ್ರಿಯಾಂಕ ಸಮಾವೇಶ ಕರ್ನಾಟಕ ರಾಜಕೀಯದಲ್ಲಿ ಮಹತ್ತರವಾದ ಬದಲಾವಣೆ ತರಲಿದೆ, ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಲಿದೆ ಎಂಬ ಮಾತನ್ನು ರಾಜಕೀಯ ವಿಶ್ಲೇಷಕರು ಅಲ್ಲಗೆಳೆಯುತ್ತಿರುವುದು ಇಲ್ಲಿ ಇಂಟ್ರೆಸ್ಟಿಂಗ್ ಆಗಿದೆ.   

ಉ. ಪ್ರದೇಶದಲ್ಲಾಗದ ವರ್ಕೌಟ್ ಇಲ್ಲಿ ಆದೀತೆ ? : ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮೇಲೆ ದಾಳಿ ಮಾಡುವ ಉದ್ದೇಶದಿಂದ ವ್ಯವಸ್ಥೆಯ ಸಮಸ್ಯೆಗಳ ಮಹಾ ಮೂಟೆಯೊಂದಿಗೆ ಶಸ್ತçಸಜ್ಜಿತವಾಗಿದ್ದ ಪ್ರಿಯಾಂಕ, ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗೆ ಬೆಂಬಲವಾಗಿ ನಿಂತರು, ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿದ್ದ ರೈತರಿಗೆ ಹೆಗಲು ಕೊಟ್ಟರು, ಹತ್ರಾಸ್ ಅತ್ಯಾಚಾರ ಪ್ರಕರಣದ ವಿರುದ್ಧ ಹೋರಾಡಿದರು. ಲಖಿಂಪುರ ಖೇರಿಯಲ್ಲಿ ರೈತ ಕುಟುಂಬಗಳನ್ನು ಭೇಟಿ ಮಾಡಲು ಹೊರಟಿದ್ದ ಪ್ರಿಯಾಂಕರನ್ನು ಪೋಲಿಸರು ತಡೆದು ಗೃಹಬಂಧನದಲ್ಲಿರಿಸಿದರು. ಈ ವೇಳೆಗೆ ಹುಟ್ಟಿಕೊಂಡ ಚುನಾವಣಾ ಕೂಗೆ ‘ಲಡ್ಕಿ ಹೂ ಲಡ್ ಸಕ್ತಿ ಹೂ’ ಸೇರಿ ‘ಸ್ಕೂಟಿ ಪಾವೋ’, ‘ಬಟನ್ ಡಬಾವೊ’, ‘ಪಿಂಕ್ ಮ್ಯಾರಥಾನ್’ ಕೂಡ ಆರಂಭವಾಯಿತು.  

ಪ್ರಿಯಾಂಕ ಬಹುತೇಕ ಉತ್ತರ ಪ್ರದೇಶದ ಎಲ್ಲಾ ಭಾಗಗಳಲ್ಲಿ ಅಪಾರವಾದ ಮಹಿಳೆಯರ ಬೆಂಬಲದೊಂದಿಗೆ ಹೋರಾಟ ಮಾಡಿದರು. ಮಹಿಳಾ ಸಮಸ್ಯೆಗಳ ಬಗ್ಗೆ ಧ್ವನಿಯಾದರು, ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ಆಡಳಿತ ಪಕ್ಷ ಸೃಷ್ಟಿಸಿದ ಸಮಸ್ಯೆಗಳ ವಿರುದ್ಧ ಹರಿಹಾಯ್ದರು. ಚುನಾವಣೆಗಾಗಿ ಸರ್ವಪ್ರಯತ್ನ ಮಾಡಿದರಾದರೂ, ೪೦೩ ವಿಧಾನ ಸಭಾ ಕ್ಷೇತ್ರಗಳಲ್ಲಿ ಕೇವಲ ೨ ಸ್ಥಾನವನ್ನಷ್ಟೇ ಗೆಲ್ಲುವುದರ ಮೂಲಕ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪ್ರಿಯಾಂಕ ಅವರ ಹೋರಾಟ ರಾಜಕೀಯವಾಗಿ ಲಾಭ ಮಾಡಿಕೊಟ್ಟಿಲ್ಲ. ಕಾನೂನು ಅವ್ಯವಸ್ಥೆ, ಅತ್ಯಾಚಾರಗಳಿಂದಲೇ ಸುದ್ದಿಯಾಗುತ್ತಿದ್ದ ಉತ್ತರ ಪ್ರದೇಶ ಸರ್ಕಾರ ಚುನಾವಣೆಯ ಹೊತ್ತಿಗೆ ಸುಧಾರಿತ ಕಾನೂನುಗಳ ಅನುಷ್ಠಾನಕ್ಕೆ ತಂದಿತು. ಉನ್ನಾವ್, ಹತ್ರಾಸ್ ಅತ್ಯಾಚಾರ ಪ್ರಕರಣಗಳು ಆಡಳಿತ ಪಕ್ಷವನ್ನು ಕಾಡುತ್ತಲೇ ಇತ್ತಾದರೂ, ಇವರೆಡು ಪ್ರಕರಣಗಳಿಂದಷ್ಟೇ ಕಾಂಗ್ರೆಸ್‌ಗೆ ಯಾವುದೇ ರೀತಿಯ ಬದಲಾವಣೆ ಕಾಣುವುದಕ್ಕೆ ಸಾಧ್ಯವಾಗಿಲ್ಲ. ಯೋಗಿ ಸರ್ಕಾರದ ಕ್ಲೆವರ್ ಗೇಮ್ ಕಾಂಗ್ರೆಸ್‌ನನ್ನು ಸೋಲಿಸಿತು. 

ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿದ್ದ ಪ್ರಿಯಾಂಕ ದೊಡ್ಡ ಮಟ್ಟದ ವೈಫಲ್ಯ ಕಂಡಿದ್ದರು, ಗುಜರಾತ್‌ನಲ್ಲಿ ಪ್ರಿಯಾಂಕ ಪ್ರಚಾರ ನಡೆಸಿದರಾದರೂ ನಿರೀಕ್ಷಿತ ಫಲಿತಾಂಶ ಕಾಂಗ್ರೆಸ್‌ಗೆ ತಂದುಕೊಡಲಿಲ್ಲ. ಆದರೇ, ಹಿಮಾಚಲ ಪ್ರದೇಶದಲ್ಲಿ ಪ್ರಿಯಾಂಕ ಗಾಂಧಿ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಸಂಪ್ರದಾಯದಂತೆ ಹಿಮಾಚಲದ ಜನತೆ ಪ್ರತಿಪಕ್ಷಕ್ಕೆ ಅಧಿಕಾರದ ಭಾಗ್ಯ ಕೊಟ್ಟಿದೆಯಂತಾದರೂ ಈ ಸಾಧನೆ ಹಿಂದೆ ಪ್ರಿಯಾಂಕ ಶ್ರಮ ಇದೆ. ಈಗ ಕರ್ನಾಟಕದ ಅವಧಿ, ಕರ್ನಾಟಕದಲ್ಲಿಯೂ ಉತ್ತರ ಪ್ರದೇಶದಲ್ಲಿ ಪ್ರಯೋಗಿಸಿದ ಮಾದರಿಯಲ್ಲೇ ಮೊದಲ ಪ್ರಯತ್ನವೊಂದು ಮುಗಿದಿದೆ. ಆದರೇ, ಇಲ್ಲಿ ಪ್ರಿಯಾಂಕ ಬಂದಿದ್ದಕ್ಕೆ ಕಾಂಗ್ರೆಸ್‌ಗೆ ದೊಡ್ಡ ಮೈಲೇಜ್ ಸಿಗಲಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸೃಷ್ಟಿಯಾಗಿದೆ. 

ಉ.ಪ್ರದೇಶದಲ್ಲಿ ಹವಾ ಸೃಷ್ಟಿಸಿದ್ದರು ಪ್ರಿಯಾಂಕ : ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ಅಕ್ಷರಶಃ ಅಜ್ಜಿ ಇಂದಿರಾ ಗಾಂಧಿಯವರನ್ನ ನೆನಪಿಸಿದ್ದರು. ಹೌದು, ಬಿಹಾರದ ಬೆಲ್ಚಿ ಎಂಬ ಪುಟ್ಟ ಹಳ್ಳಿಯಲ್ಲಿ ೧೯೭೭ರಲ್ಲಿ ದಲಿತರ ನರಮೇದವೊಂದು ನಡೆದಿತ್ತು. ‘ಶ್ರಮಕ್ಕೆ ತಕ್ಕ ಕಾಳು ಕೊಡಿ’ಎಂದು ಕೇಳಿದ್ದ ೧೪ ಮಂದಿ ದಲಿತರನ್ನು ಅಲ್ಲಿನ ಜಮೀನ್ದಾರರು ಜೋಳದ ಹುಲ್ಲಿನ ಮೆದೆಗೆ ಹಾಕಿ ಪೆಟ್ರೊಲ್ ಸುರಿದು ಜೀವಂತ ಸುಟ್ಟು ಬಿಟ್ಟರು. ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸ್ಥಳೀಯ ರಾಜಕಾರಣಿಗಳು ತಮ್ಮ ಪ್ರಭಾವದಿಂದ ಉರಿವ ಹೆಣಗಳ ಮುಂದೆ ಹೋಳಿ ಹಬ್ಬ ಆಚರಿಸಿಕೊಂಡಿದ್ದರು. ಅಂದು ಜನತಾ ಸರ್ಕಾರ ಆಡಳಿತದಲ್ಲಿದ್ದ ಕಾಲ. ಇಂದಿರಾ ಗಾಂಧಿ ಹೋದಲ್ಲೆಲ್ಲಾ ಘೇರಾವ್ ಹಾಕಿಸುತ್ತಿದ್ದ ಆಡಳಿತ ಸರ್ಕಾರದ ನಡುವೆಯೂ ಇಂದಿರಾ ಬೆಲ್ಚಿಗೆ ತೆರಳಿ ನೊಂದ ದಲಿತ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದರು. ಈ ಪ್ರಕರಣದ ನಂತರ ಎಲ್ಲಿಲ್ಲದ ಹುರುಪು ಇಂದಿರಾ ಅವರಲ್ಲಿ ಸೃಷ್ಟಿಯಾಗಿತ್ತು. ದೇಶದಾದ್ಯಂತ ಸಂಚಾರ ಮಾಡಿದ್ದರು. ಯಾವ ಜನರಿಂದ ಸೋತಿದ್ದರೋ, ಅದೇ ಜನರಿಂದ ಗೆದ್ದು ಬಂದರು(ರಾಯ್ ಬರೆಲಿ). ದೇಶದಾದ್ಯಂತ ೫೪೨ ಕ್ಷೇತ್ರಗಳಲ್ಲಿ ೩೫೧ ಕ್ಷೇತ್ರಗಳಲ್ಲಿ ಗೆದ್ದು ದೆಹಲಿ ಅಧಿಕಾರದ ಗದ್ದುಗೆಯನ್ನು ಮತ್ತೆ ಕಾಂಗ್ರೆಸ್ ಹಿಡಿದಿದ್ದು ಈ ದೇಶ ಕಂಡ ಸುವರ್ಣ ಇತಿಹಾಸ. 

ಈ ಘಟನೆ ನಡೆದು ೪೩ ವರ್ಷಗಳ ನಂತರ ಮತ್ತೆ ಇದನ್ನು ನೆನಪಿಸಿದ್ದು ಪ್ರಿಯಾಂಕ. ಉ. ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯೊಬ್ಬಳ ಮೇಲೆ ಅಲ್ಲಿನ ಠಾಕೂರ್ ಜನಾಂಗದ ೪ ಹುಡುಗರು ಅತ್ಯಾಚಾರವೆಸಗಿ ಆಕೆಯ ನಾಲಿಗೆ ಕತ್ತರಿಸಿ ನಿರ್ಧಯವಾಗಿ ಕೊಂದಿದ್ದರು. ಇಡೀ ದೇಶ ಈ ಪ್ರಕರಣದಿಂದಾಗಿ ಬೆಚ್ಚಿ ಬಿದ್ದಿತ್ತು. ಆಡಳಿತದಲ್ಲಿದ್ದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಪೊಲೀಸರ ಮೂಲಕ ಯುವತಿಯ ಹೆಣವನ್ನು  ಅಪರಾತ್ರಿಯಲ್ಲಿ ಯುವತಿಯ ಕುಟುಂಬದ ಅನುಮತಿಯೂ ಇಲ್ಲದೇ ಸುಟ್ಟು ಹಾಕಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಕ್ಕೋತ್ತಾಯಕ್ಕೆಂದು ಬಂದಿದ್ದ ಪ್ರಿಯಾಂಕ ನಡೆ ನಿಜಕ್ಕೂ ಸ್ತುತ್ಯಾರ್ಹ. ಆ ಕುಟುಂಬದ ಪರವಾಗಿ ಪ್ರಿಯಾಂಕ ನಿಂತರು. ಸಹೋದರ ರಾಹುಲ್ ಅವರೊಂದಿಗೆ ಕುಟುಂಬದ ಬೆಂಬಲಕ್ಕೆಂದು ತೆರಳುವಾಗ ಪ್ರಿಯಾಂಕ ಅವರನ್ನು ಪೋಲಿಸರು ಮಾರ್ಗ ಮಧ್ಯದಲ್ಲಿ ತಡೆದರು. ಮತ್ತೆ ಮರುದಿನವೇ ಲಕ್ಷಾಂತರ ಮಂದಿಯ ಬೆಂಬಲದೊಂದಿಗೆ ಪ್ರಿಯಾಂಕ ರಾಹುಲ್ ಜೊತೆ ಹತ್ರಾಸ್‌ಗೆ ತೆರಳಿದರು. ಮಾರ್ಗ ಮಧ್ಯೆ ಪೊಲೀಸರ ಬಿಗಿ ಬಂದೋಬಸ್ತ್ ಇದ್ದಿತ್ತಾದರೂ ಪ್ರಿಯಾಂಕ ಜೊತೆಗಿದ್ದ ಜನ ಸಂಖ್ಯೆ ನೋಡಿ ಯೋಗಿ ಸರ್ಕಾರ ನಡುಗಿತ್ತು. ಕೊನೆಗೂ ನೊಂದ ಕುಟುಂಬವನ್ನು ಪ್ರಿಯಾಂಕ ಸೇರಿ ಐವರು ಭೇಟಿ ಮಾಡಲು ಅವಕಾಶ ಸಿಕ್ಕಿತು. ಸಾಂತ್ವಾನ ಹೇಳಿದರು. ಮನೆ ಒಳಗೆ ತೆರಳಿದ ಪ್ರಿಯಾಂಕ ಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿಯ ತಾಯಿಯನ್ನು ತಮ್ಮ ಎದೆಗವಚಿಕೊಂಡು ಸಮಾಧಾನಿಸಿದ್ದು ಅಜ್ಜಿ ಇಂದಿರಾ ಗಾಂಧಿಯನ್ನ ನೆನಪಿಸಿತ್ತು. ಇಡೀ ದೇಶ ಪ್ರಿಯಾಂಕ ನಡೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿತ್ತು. ಉ.ಪ್ರದೇಶದಲ್ಲಿ ರಾಜಕೀಯವಾಗಿ ಸೋತರೂ ಪ್ರಿಯಾಂಕ ಹವಾ ಸೃಷ್ಟಿಸಿದ್ದರು ಎನ್ನುವುದು ಈ ಸಂದರ್ಭದಲ್ಲಿ ಉಲ್ಲೇಖಾರ್ಹ.  

-ಶ್ರೀರಾಜ್ ವಕ್ವಾಡಿ   

     


Thursday, January 12, 2023

ರಾಜಕೀಯಕ್ಕೆ ಇಂದೂ ಅನಿವಾರ್ಯವಾದ ಅಯೋಧ್ಯೆ..!

 


(ಸಾಂದರ್ಭಿಕ ಚಿತ್ರ)

ಧಾರ್ಮಿಕ ಸಂಘರ್ಷಗಳ ರಕ್ತ ಇತಿಹಾಸ ಬರೆದ ರಾಜಕೀಯ | ಮತ್ತೊಂದು ಅನಾಯಾಸ ಮಾರ್ಗ ಸೃಷ್ಟಿಸಿಕೊಂಡ ಬಿಜೆಪಿ.!    

ಅಯೋಧ್ಯೆ ರಾಮ ಮಂದಿರ ೨೦೨೪ರ ಜನವರಿಯ ಮೊದಲ ದಿನದಂದು ಲೋಕಾರ್ಪಣೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆಯೂ ಕೂಡ ಅದೇ ವರ್ಷದಲ್ಲಿ ಇರುವುದರಿಂದ ಇದು ಕೇಂದ್ರ ಬಿಜೆಪಿ ಸರ್ಕಾರದ ಚುನಾವಣಾ ಪ್ರಚಾರಕ್ಕೆ ಪೂರಕವಾದ ಆರಂಭ ಸಿಕ್ಕಂತಾಗಿದೆ. ರಾಮ ಮಂದಿರವನ್ನು ತಮ್ಮ ರಾಜಕೀಯಕ್ಕಾಗಿಯೇ ಬಳಸಿಕೊಂಡ ಬಿಜೆಪಿ ಈ ಲೋಕಸಭಾ ಚುನಾವಣೆಯ ಸುತ್ತಿನಲ್ಲಿ ಶ್ರೀರಾಮ ಮಂದಿರದಿಂದಾಗಿ ಮಹತ್ತರವಾದ ಮೈಲೇಜ್ ಪಡೆದುಕೊಳ್ಳಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 

ರಾಮನ ಗಗನದೆತ್ತರದ ಕಟೌಟ್‌ಗಳು ತಯಾರಿಯಲ್ಲಿವೆ, ಬಿಜೆಪಿಗರ ಆಕ್ರೋಶಭರಿತ ಭಾಷಣಗಳ ಸ್ಕ್ರಿಪ್ಟ್ ಸಿದ್ಧತೆಯಲ್ಲಿದೆ, ಬಿಜೆಪಿಯ ಚುನಾವಣಾ ರ‍್ಯಾಲಿಗಳಿಗೆ ಬೇಕಾಗಿ ಶ್ರೀರಾಮನ ಚಿತ್ರಗಳುಳ್ಳ ಬ್ಯಾನರ್‌ಗಳು ತಯಾರಿಯಲ್ಲಿವೆ. ಹೌದು, ಬಿಜೆಪಿಗೆ ರಾಮ ಮಂದಿರವೂ ಆದಂತಾಯಿತು, ಚುನಾವಣೆಯ ಒಂದು ಟೂಲ್ ಕೂಡ ಆದಂತಾಯಿತು. ೧೯೯೦ರ ದಶಕದಿಂದಲೂ ರಾಮ ಮಂದಿರ ನಿರ್ಮಾಣವನ್ನು ಚುನಾವಣಾ ಪ್ರಚಾರ ಹಾಗೂ ಪ್ರಣಾಳಿಕೆಯ ಪ್ರಮುಖ ಭಾಗವಾಗಿಸಿಕೊಂಡು ಬಂದಿದ್ದ ಬಿಜೆಪಿಗೆ ಇದು ಮಹತ್ವದ ಮೈಲಿಗಲ್ಲು, ವಿರೋಧಿ ಬಣವನ್ನು ಮತ್ತೊಂದು ಸುತ್ತು ಅಧಿಕಾರದಿಂದ ದೂರವಿರುವಂತೆ ಮಾಡುವ ಮಹಾ ಸಂಕಲ್ಪಕ್ಕೆ ಬಿಜೆಪಿ ಅನಾಯಾಸ ಮಾರ್ಗ ಸೃಷ್ಟಿಸಿಕೊಂಡತ್ತಾಗಿದೆ.  

ಹಾಗೆ ನೋಡುವುದಕ್ಕೆ ಹೋದರೇ, ಈ ಶ್ರೀರಾಮ ಮಂದಿರವನ್ನು ರಾಜಕಾರಣಕ್ಕೆ ಒಂದು ವಿಷಯವಾಗುವ ಹಾಗೆ ಮಾಡಿಕೊಟ್ಟಿದ್ದೇ ಕಾಂಗ್ರೆಸ್. ಕಾಂಗ್ರೆಸ್ ಮಾಡಿದ ಬಹುತೇಕ ಎಲ್ಲವನ್ನೂ ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ ಎನ್ನುವುದು ಇಲ್ಲಿ ಗಮನಾರ್ಹ. ನೀವು ಆಶ್ಚರ್ಯಪಡಬೇಕಾಗಿಲ್ಲ, ಹಿಂದುತ್ವಕ್ಕೆ ಸ್ವತಃ ರಾಜೀವ್ ಗಾಂಧಿಯವರೇ ಕರೆದು ಶ್ರೀರಾಮ ಮಂದಿರವನ್ನು ಒಂದು ಅಸ್ತçದಂತೆ ಕೊಟ್ಟು ತಮ್ಮ ರಾಜಕೀಯ ವರ್ಚಸ್ಸನ್ನು ತಾವೇ ಕಳೆದುಕೊಂಡರು..! ಇನ್ನು, ಅಯೋಧ್ಯೆಯ ರಾಮಮಂದಿರ ವಿಚಾರ ಇಂದಿಗೂ ರಾಜಕೀಯದ ಅಸ್ತçವಾಗಿಯೇ ಇದೆ. ಭಾವನ್ಮಾತಕವಾಗಿ ರಾಜಕೀಯಕ್ಕೆ ಉರುಳಿದ ಅಯೋಧ್ಯೆಯ ವಿಷಯ ಈವರೆಗೆ ರಾಜಕೀಯವನ್ನು ಪೊರೆಯುತ್ತಾ ಬಂದಿದೆ. ಮತ್ತು ರಾಜಕಾರಣ ಅಯೋಧ್ಯೆಯನ್ನು ಬಳಸಿಕೊಳ್ಳುತ್ತಾ ಬಂದಿದೆ.    

ರಾಮ ಮಂದಿರದ ಬೀಗ ತೆಗೆಸಿದ ಶಾಬಾನೋ ಪ್ರಕರಣ ! : ಅಯೋಧ್ಯೆ ಭೂಮಿ ವಿವಾದದ ದಿಕ್ಕನ್ನು ಬದಲಿಸಿದ್ದು ಶಾಬಾನೋ ಪ್ರಕರಣದ ತೀರ್ಪು. ಹೌದು, ಏಪ್ರಿಲ್ ೨೩ ೧೯೮೫ರಂದು ಸುಪ್ರೀಂ ಕೋರ್ಟ್ ವಿಚ್ಛೇದಿತ ಮಹಿಳೆ ಶಾಬಾನೋ, ತನ್ನ ಮಾಜಿ ಪತಿಯಿಂದ ಜೀವನಾಂಶವನ್ನು ಪಡೆಯುವುದಕ್ಕೆ ಅರ್ಹಳು ಎಂದು ತೀರ್ಪು ಕೊಟ್ಟಿದ್ದೇ ಈ ಎಲ್ಲದಕ್ಕೂ ಕಾರಣವೆಂಬುವುದು ಆಶ್ಚರ್ಯವೆನ್ನಿಸಿದರೂ ಸತ್ಯ. 

ಸುಪ್ರೀಂ ಕೋರ್ಟ್ ನೀಡಿದ ಈ ತೀರ್ಪಿಗೆ ಮುಸ್ಲೀಂ ಮೂಲಭೂತವಾದಿಗಳು ಸಂಪೂರ್ಣವಾಗಿ ತಿರುಗಿ ಬಿದ್ದರು. ಅಂದು ಈ ದೇಶದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಮೇಲೆ ‘ಮುಸ್ಲೀಂ ವೈಯಕ್ತಿಕ ಕಾನೂನುಗಳನ್ನು ತಿದ್ದುವ/ ಬದಲಾಯಿಸುವ ಯಾವುದೇ ಅಧಿಕಾರ ಯಾರಿಗೂ ಇಲ್ಲ’ ಎಂಬ ಒತ್ತಡ ಹೇರಿದ ಪರಿಣಾಮ, ರಾಜೀವ್ ಗಾಂಧಿ ಇದು ತಮ್ಮ ರಾಜಕೀಯಕ್ಕೆ ಅಡಚಣೆಯಾಗಬಹುದು ಎಂದು ಭಾವಿಸಿ ಕಾನೂನು ತಿದ್ದುಪಡಿ ಮೂಲಕ ಸುಪ್ರೀಂ ಕೋರ್ಟ್ನ ತೀರ್ಪು ಅಸಿಂಧುವಾಗುವಂತೆ ಮಾಡಿದರು. ರಾಜೀವ್ ಗಾಂಧಿ ಕೈಗೊಂಡ ಈ ತೀರ್ಮಾನ ವಿಶ್ವಹಿಂದೂ ಪರಿಷತ್‌ಗೆ ಹೊಸ ಅಸ್ತçವಾಗಿ ಪ್ರಾಪ್ತಿಯಾಯಿತು. ರಾಜೀವ್ ವಿರುದ್ಧ ಹಿಂದೂ ಪರ ಸಂಘಟನೆಗಳ ವಿರೋಧ ಈ ದೇಶದಲ್ಲಿ ಹೊಸ ಚರ್ಚೆ ಹುಟ್ಟುಹಾಕಿತ್ತು. ‘ಧರ್ಮದ ಆಧಾರದಲ್ಲಿ ಕಾಂಗ್ರೆಸ್ ಹುಸಿ ಜಾತ್ಯಾತೀತ ನೀತಿ’ ಪಾಲಿಸುತ್ತಿದೆ ಎಂಬ ವಿರೋಧವನ್ನು ರಾಜೀವ್ ಗಾಂಧಿ ಎದುರಿಸಬೇಕಾಯಿತು. ಪಕ್ಷದ ಒಳಗೂ, ಹೊರಗೂ ರಾಜೀವ್‌ಗೆ ವಿರೋಧಿ ಬಣ ದೊಡ್ಡದಾಗುತ್ತಾ ಹೋಯಿತು. ಹಿಂದೂ ಮತಗಳು ಕಾಂಗ್ರೆಸ್‌ನನ್ನು ತೊರೆದು ಬೇರೆ ಕಡೆ ವಾಲುತ್ತಿರುವುದು ರಾಜೀವ್‌ಗೆ ಕಾಣಿಸಿತು. ತೊರೆದು ಹೋಗುತ್ತಿರುವ ಹಿಂದೂ ಮತಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಕಾರಣದಿಂದ ತಂತ್ರ ಹೂಡಿದ್ದ ರಾಜೀವ್, ವಿವಾದದಲ್ಲಿದ್ದ ರಾಮ ಮಂದಿರದ ಬೀಗ ತೆಗೆಸಿ ಹಿಂದೂ ಧರ್ಮದವರಿಗೆ ಪೂಜೆಗೆ ಅವಕಾಶ ಮಾಡಿಕೊಟ್ಟರು. 

‘ಕೈ’ಗೆ ಕೈಕೊಟ್ಟ ಸದ್ಭಾವನಾ ಯಾತ್ರೆ : ಎರಡೂ ಧರ್ಮಗಳಲ್ಲಿ ಎದ್ದಿದ್ದ ಭಿನ್ನಾಭಿಪ್ರಾಯಗಳನ್ನು ಈ ಮೂಲಕ ನಿವಾರಿಸಬಹುದು ಎಂದುಕೊಂಡಿದ್ದ ರಾಜೀವ್ ಲೆಕ್ಕಾಚಾರ ಇಲ್ಲಿ ಅದಲು ಬದಲಾಯಿತು. ಮುಸ್ಲೀಂ ವೈಯಕ್ತಿಕ ಕಾನೂನಿನ ನಿಯಂತ್ರಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ರಾಜೀವ್ ಗಾಂಧಿ ಮಧ್ಯಪ್ರವೇಶಿಸಿದ್ದೇ ಕಾಂಗ್ರೆಸ್‌ಗೆ ಒಂದು ರೀತಿಯಲ್ಲಿ ಮುಳುವಾಗಿ ಪರಿಣಮಿಸಿತು. ರಾಜೀವ್ ಗಾಂಧಿ ಮೇಲೆ ಈವರೆಗಿದ್ದ ಒಂದು ಅಭಿಪ್ರಾಯ ಸಂಪೂರ್ಣವಾಗಿ ಬದಲಾಯಿತು. ದೇಶದಲ್ಲಿ ತುಷ್ಟೀಕರಣ ರಾಜಕಾರಣ ನಡೆಯುತ್ತಿದೆ ಎಂಬ ಹಿಂದೂ ಸಂಘಟನೆಗಳ ಬಲವಾದ ವಿರೋಧ ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್‌ಗೆ ರಾಜಕೀಯವಾಗಿ ದೊಡ್ಡ ಪೆಟ್ಟು ಕೊಟ್ಟಿತು. ರಾಜೀವ್ ಗಾಂಧಿ ನಿರ್ಧಾರಗಳಿಂದ ಆತಂಕಕ್ಕೆ ಒಳಗಾದ ಹಿಂದೂ ಮತಗಳು ಬಿಜೆಪಿಯತ್ತ ವಾಲಿತು. ಹಿಂದುತ್ವದ ರಾಜಕಾರಣ ಪ್ರವರ್ಧಮಾನಕ್ಕೆ ಬರಲಾರಂಭಿಸಿತು. ಕಾಂಗ್ರೆಸ್ ವಿರುದ್ಧ ಹಾಗೂ ರಾಜೀವ್ ಗಾಂಧಿ ವಿರುದ್ಧ ದೇಶದಾದ್ಯಂತ ಹಿಂದೂ ಪರ ಸಂಘಟನೆಗಳು ವಿರೋಧದ ಅಲೆ ಎಬ್ಬಿಸಿದವು. ೧೯೮೯ರಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಶದಾದ್ಯಂತ ಇಟ್ಟಿಗೆ ಸಂಗ್ರಹ ಅಭಿಯಾನ ಆರಂಭವಾಯಿತು. ೧೯೮೯ರಲ್ಲಿ ಸರ್ಕಾರದ ಅನುಮತಿಯಲ್ಲಿ ಶಿಲನ್ಯಾಸವೂ ಮುಗಿಯಿತು. 

ರಾಜೀವ್ ಈ ಸಂದರ್ಭದಲ್ಲಿಯೂ ಕ್ಲೆವರ್ ಗೇಮ್ ಆಡುವುದಕ್ಕೆ ಪ್ರಯತ್ನಿಸಿದರಾದರೂ, ಕಾಂಗ್ರೆಸ್ ನಾಯಕರೇ ಅವರನ್ನು ತಡೆದರು. ರಾಮಮಂದಿರ ಶಿಲನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಮುಂದಾಗಿದ್ದ ರಾಜೀವ್ ಗಾಂಧಿಯವರ ಮೇಲೆ ಕಾಂಗ್ರೆಸ್‌ನ ಕೆಲವು ನಾಯಕರು ಭಿನ್ನ ಮಾತಾಡಿದರು. ಶಿಲನ್ಯಾಸದಲ್ಲಿ ರಾಜೀವ್ ಪಾಲ್ಗೊಂಡಿದ್ದಿದ್ದರೇ, ಪರಿಣಾಮ ಇಷ್ಟು ಖಾರವಾಗಿ ಕಾಂಗ್ರೆಸ್‌ಗೆ ಬೀರುತ್ತಿರಲಿಲ್ಲವೇನೋ, ಆದರೇ ಇದರ ಪರಿಣಾಮ ಕಾಂಗ್ರೆಸ್‌ಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. 

ರಾಜೀವ್ ಗಾಂಧಿ ಕೈಗೊಂಡ ನಿರ್ಣಯದಿಂದ ಹಾಗೂ ಹಿಂದೂ ಸಂಘಟನೆಗಳ ವಿರೋಧದಿಂದಾಗಿ ಕಾಂಗ್ರೆಸ್‌ಗೆ ಉಂಟಾಗಿದ್ದ ಹಾನಿಯನ್ನು ಸರಿಪಡಿಸುವುದಕ್ಕೆ ರಾಜೀವ್ ಸದ್ಭಾವನಾ ಯಾತ್ರೆ ಆರಂಭಿಸಿದರಾದರೂ ಯಾವುದೇ ಲಾಭವಾಗಿಲ್ಲ. ಕೆಲವೇ ತಿಂಗಳ ಬಳಿಕ ನಡೆದ ಚುನಾವಣೆ ಬಿಜೆಪಿಗೆ ವರದಾನವಾಯಿತು. ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಬಿಜೆಪಿಯ ೮೬ ಸ್ಥಾನಗಳ ಬಾಹ್ಯ ಬೆಂಬಲದೊಂದಿಗೆ ವಿ. ಪಿ ಸಿಂಗ್ ನೇತೃತ್ವದ ಸರ್ಕಾರ ರಚನೆಯಾಯಿತು. 

ರಾಮಮಂದಿರ ರಾಜಕೀಯಕ್ಕೆ ಉರುಳಲು ಯಾರು ಕಾರಣ ? : ಹಿಂದೂ ಧರ್ಮದವರನ್ನು ಓಲೈಸಿಕೊಳ್ಳುವುದಕ್ಕಾಗಿ ರಾಮಮಂದಿರದಲ್ಲಿ ಪೂಜೆ ಸಲ್ಲಿಸುವುದಕ್ಕೆ ಅವಕಾಶ ನೀಡುವ ತನಕವೂ ಧರ್ಮದ ಪರಿಧಿಯೊಳಗೆಯೇ ಇದ್ದ ಅಯೋಧ್ಯ ವಿಚಾರ, ೧೯೮೬ರಲ್ಲಿ ರಾಜಕೀಯಕ್ಕೆ ಉರುಳಿತು. ದೇಶದಲ್ಲಿನ ಧಾರ್ಮಿಕ ವಿಚಾರವೊಂದು ರಾಜಕೀಯಕ್ಕೆ ಉರುಳುವುದಕ್ಕೆ ರಾಜೀವ್ ಪರೋಕ್ಷ ಕಾರಣರಾದರು ಎನ್ನುವುದು ಸತ್ಯ. ರಾಮಮಂದಿರ ಶಿಲನ್ಯಾಸದ ನಂತರ ಬಾಬರಿ ಮಸಿದಿ-ರಾಮಮಂದಿರ ಹೋರಾಟ ರಾಜಕೀಯ ಹೋರಾಟವಾಗಿ ಹೊಸರೂಪ ಪಡೆದುಕೊಂಡಿತು. ಬಿಜೆಪಿ ತನ್ನ ರಾಜಕೀಯ ಅಸ್ತçವಾಗಿ ಬಳಸಿಕೊಳ್ಳುವುದಕ್ಕೆ ಆರಂಭಿಸಿತು. ಒಂದು ರೀತಿಯಲ್ಲಿ ಕಾಂಗ್ರೆಸ್ ಈ ದೇಶದಲ್ಲಿ ಧಾರ್ಮಿಕ ಧಗೆ ಏಳುವುದಕ್ಕೆ ಕಾರಣವಾಯಿತು. ಬಿಜೆಪಿ ಕಾಂಗ್ರೆಸ್ ಮಾಡಿದ ತಪ್ಪನ್ನು ರಾಜಕೀಯವಾಗಿ ಚೆನ್ನಾಗಿಯೇ ಬಳಸಿಕೊಂಡಿತು. ವಿಶ್ವ ಹಿಂದೂ ಪರಿಷತ್ ಸೇರಿ ಇತರೆ ಹಿಂದೂ ಸಂಘಟನೆಗಳು, ಆರ್‌ಎಸ್‌ಎಸ್, ಬಿಜೆಪಿ.. ಕಾಂಗ್ರೆಸ್ ವಿರುದ್ಧ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟುವುದರ ಮೂಲಕ ದೇಶದ ಉದ್ದಗಲಕ್ಕೂ ಪಸರಿಸಿತು. ನಂತರ ನಡೆದ ಎಲ್ ಕೆ. ಅಡ್ವಾಣಿ ನೇತೃತ್ವದ ‘ರಾಮ ರಥಯಾತ್ರೆ’ ಬಿಜೆಪಿಯ ಹಿಂದೂ ಪರ ಸಿದ್ಧಾಂತವನ್ನು ದೇಶದಾದ್ಯಂತ, ಅದರಲ್ಲೂ ಪ್ರಮುಖವಾಗಿ ಉತ್ತರ ಭಾರತದಲ್ಲಿ ಬಲವಾಗಿ ಪ್ರತಿಷ್ಠಾಪಿಸಿತು. ಇದು ಎಲ್ಲಿಯವರೆಗೆ ಪ್ರಭಾವಿಸಿತು ಎಂದರೇ, ವಿವಾದಿತ ಕಟ್ಟಡವನ್ನು ಕೆಡವುವರೆಗೆ ಮುಂದುವರಿಯಿತು. 

ಇಂದೂ ರಾಜಕೀಯಕ್ಕೆ ಅನಿವಾರ್ಯವಾದ ಅಯೋಧ್ಯೆ :  ೧೯೮೯ರ ಬಳಿಕ ಅಯೋಧ್ಯೆ, ರಾಮ ಮಂದಿರ ಎಲ್ಲಾ ರಾಜಕೀಯ ಪಕ್ಷಗಳಿಗೂ ಅನಿವಾರ್ಯ ವಿಷಯವಾಗಿ ಬದಲಾಯಿತು. ಬಲ, ಎಡ ಧೋರಣೆಯ ಬುದ್ಧಿ ಜೀವಿಗಳು ತಮ್ಮ ತಮ್ಮ ವಾದವನ್ನು ಮುಂದಿಡುವುದಕ್ಕೆ ಆರಂಭಿಸಿದರು. ಉಭಯ ವಾದಗಳನ್ನು ಬದಲಾಯಿಸುವ ಪ್ರಯತ್ನಗಳು ಎರಡು ಕಡೆಯ ಧೋರಣೆಗಳಿಂದ ನಡೆದವು. ಧರ್ಮದ ವಿಷಯದಲ್ಲಿ ಧ್ರುವೀಕರಣ ತೀವ್ರ ರೂಪವನ್ನು ಪಡೆದುಕೊಳ್ಳುತ್ತಾ ಬಂತು. ವಿ.ಪಿ ಸಿಂಗ್ ನೇತೃತ್ವದ ಸರ್ಕಾರದ ಮೇಲೆ ಅಯೋಧ್ಯೆ ವಿಚಾರದಲ್ಲಿ ಚರ್ಚೆ ಆಯೋಜಿಸುವಂತೆ ಒತ್ತಡ ತಂದಿತ್ತಾದರೂ, ಚರ್ಚೆಯಲ್ಲಿ ವಾದವನ್ನು ಸಮರ್ಥಿಸಿಕೊಳ್ಳುವುದಕ್ಕೆ ಪುರಾವೆ ನೀಡುವುದರಲ್ಲಿ ಎಡಪಂಥೀಯರು ಸೋಲನುಭವಿಸಿದರು. ಆ ಸಮಯದಲ್ಲೇ ಚರ್ಚೆಯನ್ನು ವಿಸ್ತರಿಸಿ, ಮುಸ್ಲೀಂ ಸಮುದಾಯದವರಿಗೆ ಪರಿಹಾರ ನೀಡಿ, ಜಾಗವನ್ನು ಹಿಂದೂಗಳಿಗೆ ಒಪ್ಪಿಸಿದ್ದರೇ, ಅಯೋಧ್ಯೆ ವಿವಾದ ಅಂತ್ಯ ಕಂಡು ಇಂದಿಗೆ ಮೂರು ದಶಕಗಳು ಕಳೆಯುತ್ತಿತ್ತು. ‘ರಾಜಕೀಯವಾಗಿ ಈ ಅಯೋಧ್ಯೆ’ ಎಲ್ಲಾ ಪಕ್ಷಗಳಿಗೂ ಬೇಕಿತ್ತು. ಪ್ರತಿ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಇದೇ ಅಯೋಧ್ಯೆ ವಿಚಾರ ಮುನ್ನೆಲೆಗೆ ತಂದು ರಾಜಕೀಯ ಬೇಳೆ ಬೇಯಿಸಿಕೊಂಡವು. ಸಮಾಜ ಧರ್ಮದ ಆಧಾರದಲ್ಲಿ ಧ್ರುವೀಕರಣಗೊಂಡು ಒಡೆದು ಹೋಯಿತು. ಧಾರ್ಮಿಕ ಸಂಘರ್ಷಗಳ ರಕ್ತ ಇತಿಹಾಸಗಳಿಗೆ ರಾಜಕೀಯ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಧೋರಣೆ ಮೆರೆಯಿತು. ಸುಪ್ರೀಂ ಕೋರ್ಟ್ ತೀರ್ಪು ಬಂದಾದ ಮೇಲೂ ಅಯೋಧ್ಯೆ ರಾಜಕೀಯ ವಿಷಯವಾಗಿಯೇ ಉಳಿದಿದೆ. ಮಾತ್ರವಲ್ಲದೇ, ಬೇರೆ ಯಾವುದೂ ಇಲ್ಲದೇ, ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಯೋಧ್ಯೆಯನ್ನು ಮತ್ತೆ ಒಂದು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ ಎಲ್ಲಾ ಹಂತದ ತಯಾರಿಯಲ್ಲಿರುವುದು ಈ ದೇಶದ ಮತ್ತೊಂದು ದುರಂತ. 

-ಶ್ರೀರಾಜ್ ವಕ್ವಾಡಿ           


Tuesday, January 10, 2023

ಸಾರಾ ಎಂಬ ಅನಂತ ಬೆಳಕು


ಹೆಣ್ಣು ಮಕ್ಕಳ ನಡುಕ ಧ್ವನಿಗೆ ಧೈರ್ಯ ತುಂಬಿಸಿದ ಶಕ್ತಿ ಸಾರಾ ಅಬೂಬಕ್ಕರ್

ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸಿದವರನ್ನು/ಪ್ರಶ್ನಿಸುವವರನ್ನು ಈ ಸಮಾಜ ಜರೆಯುತ್ತಲೇ ಬಂದಿದೆ. ಆ ಸಾಲಿಗೆ ನಾವು, ನಿವೂ ಎಲ್ಲರೂ ಸೇರಿದ್ದೇವೆ. ಪ್ರಶ್ನಿಸದೇ ಒಪ್ಪಲಾರೆ ಎಂದು ಇದ್ದವರಿಗೆ ಈ ಸಮಾಜ ತನ್ನ ಕ್ರೂರ ಮುಖ ತೋರಿಸಿದೆ. ಅಂತಹ ಮುಖವನ್ನು ತಮ್ಮ ಬದುಕಿನುದ್ದಕ್ಕೂ ಸವೆಸಿಕೊಂಡು ಬಂದವರಲ್ಲಿ ಹಿರಿಯ ಲೇಖಕಿ, ಕಾದಂಬರಿಗಾರ್ತಿ ನಾಡೋಜ  ಸಾರಾ ಅಬೂಬಕ್ಕರ್ ಕೂಡ ಒಬ್ಬರು. 

ಸಾರಾ ಅವರದ್ದು ಬದುಕು ಬೇರೆ, ಬರಹ ಬೇರೆ ಎಂದೂ ಆಗಿರಲಿಲ್ಲ. ಮತ್ತವರ ಬದುಕು ಹೂವಿನ ನೆಲಹಾಸು ಕೂಡ ಆಗಿರಲಿಲ್ಲ. ಸಾರಾ ಎದುರು ಹಾಕಿಕೊಂಡಿದ್ದು ತನ್ನ ಸಮುದಾಯವನ್ನೇ. ಸುಮಾರು ನಾಲ್ಕು ದಶಕಗಳ ಸಾಹಿತ್ಯದ ಬದುಕಿನ ಹೋರಾಟದುದ್ದಕ್ಕೂ ಸಾರಾ ಎಂದೂ ಲೇಖನಿ ಕೆಳಗಿಟ್ಟವರಲ್ಲ. ಅಂತಹ ಬದ್ಧತೆ ಅವರಲ್ಲಿತ್ತು ಎನ್ನುವುದು ಇದರ ಅರ್ಥ. 

ಪ್ರತಿ ಮುಸ್ಲೀಂ ಮಹಿಳೆ ಸ್ವತಂತ್ರಳಾಗಬೇಕೆಂಬ ಆಶಯದಲ್ಲೇ ತನ್ನ ಸಾಹಿತ್ಯದ ಪಾತ್ರಗಳ ಮೂಲಕ ತಾನು ಹುಟ್ಟಿದ ಧರ್ಮ/ಸಮುದಾಯದ ವಿರುದ್ಧವೇ ಲೇಖನಿ ಯುದ್ಧ ಸಾರಿದ ಸಾರಾ ಬಿಚ್ಚಿಟ್ಟ ಸತ್ಯಗಳನ್ನು ಇನ್ಯಾರೂ ಆ ಸಮುದಾಯದಿಂದ ಬಿಚ್ಚಿಟ್ಟಿರಲಿಕ್ಕಿಲ್ಲ. ಸಂದರ್ಶನವೊಂದರಲ್ಲಿ  'ನಾನಿಂದು ಜೀವಂತವಾಗಿರುವುದೇ ಆಶ್ಚರ್ಯ' ಎಂದು ಸ್ವತಃ ಅವರೇ ಹೇಳಿಕೊಂಡಿರುವ ಮಾತು ಗಮನಿಸಿದರೇ, ಸಾರಾ  ಅನುಭವಿಸಿದ ಸಂಕಷ್ಟಗಳೆಂತದ್ದು ಎನ್ನುವುದನ್ನು ತಿಳಿಯುವುದಕ್ಕೆ ಸಾಧ್ಯ. 

ಯಾರ ಉದ್ದೇಶ ಪರಿಶುದ್ಧವಾಗಿದೆಯೋ ಅಂತವರನ್ನು ದೇವರು ಅಂತಿಮವಾಗಿ ಕಾಪಾಡುತ್ತಾನೆ ಎಂಬ ಮಾತು ಸಾರಾ ಬದುಕಿನಲ್ಲಿ ಅಕ್ಷರಶಃ ಜೀವಂತಿಸಿದೆ ಎಂದರೇ ತಪ್ಪಿಲ್ಲ. ಮುಂದೆ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಎಂದೂ ಸಾರಾ ಒಂದಿಂಚೂ ಚಿಂತಿಸಿರಲಿಕ್ಕಿಲ್ಲ ಎನ್ನುವುದನ್ನು ಅವರ ಕೃತಿಗಳಲ್ಲಿನ ಪಾತ್ರಗಳು ಹೇಳುತ್ತವೆ. ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರ ಮೇಲೆ ಆಗುವ ಅನ್ಯಾಯಗಳು, ಮುಸ್ಲಿಂ ಸಮುದಾಯದಲ್ಲಿ ಹೆಣ್ಣೊಬ್ಬಳು ಅನುಭವಿಸುವ ಅವಮಾನ, ಧರ್ಮದ ನಿಯಮವನ್ನು ಬದಲಿಸಿ, ಧರ್ಮದ ನೆಪದಲ್ಲಿ ನಡೆಸುವ ಕ್ರೌರ್ಯ, ಬಹುಪತ್ನಿತ್ವ,  ತಲಾಖ್ ಪದ್ಧತಿ- ಇವನ್ನು ಅನುಷ್ಠಾನಗೊಳಿಸುತ್ತಿರುವ ವ್ಯವಸ್ಥೆಯನ್ನು ಅವರ ಬಹುತೇಕ ಎಲ್ಲಾ ಪಾತ್ರಗಳು ಪ್ರಶ್ನಿಸಿವೆ ಎಂಬ ಕಾರಣಕ್ಕೆ ಕೊಲೆ ಬೆದರಿಕೆ, ಮಾನಸಿಕ ಕಿರುಕುಳ ಅಷ್ಟೇ ಏಕೆ,  1985ರಲ್ಲಿ ಪುತ್ತೂರಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಏರ್ಪಡಿಸಿದ್ದ ಜಾತಿ ಜನಾಂಗಗಳ ಸ್ಥಿತಿಗತಿ ಬಗೆಗಿನ ವಿಚಾರ ಸಂಕಿರಣದಲ್ಲಿ ಸಾರಾ ಅವರು ಮಾತನಾಡಲು ಮುಂದಾದಾಗ ಮುಸ್ಲಿಂ ಮೂಲಭೂತವಾದಿ  ಗುಂಪೊಂದು ಅವರ ಮೇಲೆ ಹಲ್ಲೆಯ ಯತ್ನಕ್ಕೂ  ಮುಂದಾಯಿತು ಎನ್ನುವುದು ಉಲ್ಲೇಖನೀಯ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೂ ಏರಿದ್ದರು ಸಾರಾ. ತನ್ನ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡವರಲ್ಲ ಸಾರಾ ಎಂಬುವುದು ಇದರ ಅರ್ಥ. 

ಹೆಣ್ಣನ್ನು ಲೋಕದ ಕ್ರೂರ ಕಣ್ಣು ಕಾಣುವ ಬಗೆಯನ್ನು ಬಿಚ್ಚಿಟ್ಟವರು ಸಾರಾ. ಹೆಣ್ಣಿನ ಜಗತ್ತಿನಲ್ಲಿ ಹೆಣ್ತನವೆಂದರೆ ಬಸುರು, ಅಡುಗೆ, ದಾಸ್ಯ, ಲೈಂಗೀಕತೆಗೆ ಬೇಕಾಗಿ ಬರಿ ಅಂಗಾಂಗ ಅಷ್ಟೇ. ಕೂಪದೊಳಗಿನ ಜಿಗಿದಾಟದ ಬದುಕಿನಲ್ಲಿ ಕಳೆದುಕೊಂಡದ್ದರ ಬಗೆಗೆ ಈ ಸಮಾಜಕ್ಕೆ ಸ್ಪಷ್ಟ ಅರಿವಿಲ್ಲ. ಪ್ರಶ್ನೆಗಳು ಏಳುವುದಿಲ್ಲ, ಬದಲಾವಣೆಯ ಬಯಸುವುದಿಲ್ಲ. ಉಲ್ಲಂಘಿಸುವ ಎದೆಗಾರಿಕೆ ಇಲ್ಲ. ಆರೋಗ್ಯಕರ ಧಾರ್ಮಿಕತೆಯೂ ಇಲ್ಲದ ತೀರಾ ಕುರುಡು ಅನುಯಾಯಿತ್ವದಲ್ಲಿ ಅಧ್ಯಾತ್ಮದ ಬಯಲಿಗೊಯ್ಯುವ ಬೆಳಕಿಲ್ಲ. ವೈಚಾರಿಕತೆ, ಸ್ವಾತಂತ್ರ್ಯ, ಸಮಾನತೆ, ಸ್ನೇಹಭಾವಗಳು ಅವರ ಬದುಕಿನ ಪದಕೋಶದಲ್ಲಿ ಇಲ್ಲವೇ ಇಲ್ಲ. ಹಕ್ಕುಗಳಿಗಾಗಿ ಹೋರಾಡುವುದು ಒತ್ತಟ್ಟಿಗಿರಲಿ, ಸ್ವಾಯತ್ತ ಬದುಕಿನ ಕನಸೇ ಅವರಿಗಿಲ್ಲ. ಅಂತಹ ಎಲ್ಲಾ 'ಇಲ್ಲ'ಗಳನ್ನು ಪ್ರಶ್ನಿಸುವ ಮೂಲಕ ಧಾರ್ಮಿಕ ಮೂಲಭೂತವಾದಿಗಳ ಬೆದರಿಕೆಗೆ ಜಗ್ಗದೆ ವಸ್ತುಸ್ಥಿತಿಯನ್ನು ನಿರೂಪಿಸುವ ಧೈರ್ಯ ಸಾರಾ ಅಂತಹ ಕೆಲವರಿಗಷ್ಟೇ ಇರುವುದು ಎನ್ನುವುದು ಈ ಜಗತ್ತಿನ ದುರಂತಗಳಲ್ಲಿ ಒಂದು. 

'ಚಂದ್ರಗಿರಿ ತೀರದಲ್ಲಿ, ಸಹನಾ, ವಜ್ರಗಳು' ಅಂತಹ ಅನೇಕ ಕಾದಂಬರಿಗಳಿಂದ, ಬರಹಗಳಿಂದ ಸಾರಾ ಇಂದಿಗೂ ಎಂದಿಗೂ ಪ್ರಸ್ತುತ. ಸಾಹಿತ್ಯ ಲೋಕ ಎಂದೆಂದಿಗೂ ಬೆರಗುಗಣ್ಣುಗಳಿಂದ ನೋಡುವ ಅಚ್ಚರಿ ಸಾರಾ.  ಇನ್ನು, ಸಾರಾ ಎಂದಿಗೂ ಇಸ್ಲಾಂ ನನ್ನು ದೂಷಿಸಿಲ್ಲ  ಎನ್ನುವುದು ಇಲ್ಲಿ ಗಮನಾರ್ಹ. ಇಸ್ಲಾಂ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದ ಸಾರಾ, ವಿರೋಧಿಸಿದ್ದು ಸೌದಿ ಅರೇಬಿಯಾ ಮೂಲದ 'ವಹಾದಿಸಂ' ನನ್ನು ಎನ್ನುವುದನ್ನು ಅರ್ಥೈಸಿಕೊಳ್ಳುವುದರಲ್ಲಿ ಮುಸ್ಲಿಂ ಮೂಲಭೂತವಾದಿಗಳು ಸೋತಿರುವುದು ಅಸಹನೀಯ ಸಂಗತಿ. 

ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದಲೇ ಲೇಖನಿಯ ಹೋರಾಟ ನಡೆಸಿದ ಸಾರಾ, ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸಬೇಕೆಂಬ ಮೂಲಭೂತವಾದಿಗಳ ನಿಯಮವನ್ನು ಅತ್ಯಂತ ವಿರೋಧಿಸಿದವರು ಎಂಬುವುದು ಇಲ್ಲಿ ಗಮನಾರ್ಹ. ಬುರ್ಖಾ ಹೊಗಲಾಡಿಸಲು ತನ್ನ ಹೋರಾಟ ಸದಾ ಇದೆ ಎಂದು ಹೇಳುತ್ತಲೇ ಇದ್ದ ಸಾರಾ ಇಸ್ಲಾಂ ನ ಮೂಲದಲ್ಲಿ ಹೆಣ್ಣಿಗೆ ಅಪಾರ ಗೌರವವಿದೆ ಎಂದೂ ಕೂಡ ಹೇಳುತ್ತಿದ್ದರು. ಮಿಗಿಲಾಗಿ ಸಾರಾ ಒಬ್ಬರು ಅತ್ಯಂತ ಧಾರ್ಮಿಕ ನಿಷ್ಠೆಯ ವ್ಯಕ್ತಿತ್ವದವರಾಗಿದ್ದರು ಎನ್ನುವುದು ಉಲ್ಲೇಖನೀಯ. ಆದರೇ, ಇಸ್ಲಾಂ ನ ಗೌರವದ ಪದ್ಧತಿಗಳನ್ನು ಬಿಗಿ ನಿಯಮಗಳನ್ನಾಗಿ ಪರಿವರ್ತಿಸಿದವರ ವಿರುದ್ಧ ಅವರ ಲೇಖನಿಯ ಹೋರಾಟವಾಗಿತ್ತು ಅಷ್ಟೇ. ಎಲ್ಲದಕ್ಕಿಂತಲೂ ಮಿಗಿಲಾಗಿ ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿಗಳ ಹುಳುಕುಗಳನ್ನು ಮಾತ್ರ ಎತ್ತಿ ತೋರಿಸಲಿಲ್ಲ. ಎಲ್ಲ ಧರ್ಮಗಳಲ್ಲೂ ಹೆಣ್ಣುಮಕ್ಕಳನ್ನು ಹೇಗೆ ಶೋಷಿಸಲಾಗುತ್ತಿದೆ ಎಂಬುದನ್ನು ಸಾಹಿತ್ಯದಲ್ಲಿ ಪರಿಣಮಕಾರಿಯಾಗಿ ಬಿಂಬಿಸಿದವರು.   

ಇನ್ನು, ಕೇರಳದ ಕಾಸರಗೋಡು, ಕರ್ನಾಟಕದ ಮಂಗಳೂರಿನ ಬದುಕನ್ನು ಕಂಡ ಸಾರಾ ಹೆಣ್ಣು ಮಕ್ಕಳ ಧ್ಬನಿಯನ್ನು ಅಡಗಿಸುವ ಶಕ್ತಿಗಳ ವಿರುದ್ಧ ಧ್ವನಿಯಾಗಿದ್ದವರು. ಎರಡೂ ಕಡೆಗಳಲ್ಲಿ ಇದ್ದ ಮತಾಂಧತೆಗಳನ್ನು ಕಟುವಾಗಿ ಟೀಕಿಸಿದವರು. ಹೆಣ್ಣು ಮಕ್ಕಳ ನಡುಕು ಧ್ವನಿಗಳಿಗೆ ಧೈರ್ಯದ ಶಕ್ತಿ ತುಂಬಿಸಿ ಈ ನೊಂದ ದನಿಗಳ ಕೃತಜ್ಞತೆಗೆ ಪಾತ್ರರಾದವರು ಎನ್ನುವುದು ಪದಶಃ ಸತ್ಯ. 

ಸಾರಾ ಇಷ್ಟಕ್ಕಷ್ಟೇ ಅನನ್ಯತೆಯ ಸಾಕಾರ ರೂಪ ಎಂದೆನ್ನಿಸಿಕೊಂಡಿದ್ದಲ್ಲ. ಅವರೊಳಗಿದ್ದ ಹೆಣ್ಣು ಹೃದಯದ ದುಃಖ, ದುಮ್ಮಾನ, ಸಂಕಟಗೆಲ್ಲ ಅವರು ಸೃಷ್ಟಿಸಿದ ಪಾತ್ರಗಳ ಮೂಲಕ ಗೋಚರವಾಗಿ ಈ ಸಮಾಜದಲ್ಲಿ ಚರ್ಚಿಸಲೇ ಬೇಕಾದ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದ್ದಕ್ಕೂ ಹೌದು ಎನ್ನುವುದು ಕೂಡ ಅಷ್ಟೇ ಸತ್ಯ. ಇಂತಹ ಒಬ್ಬ ಹೆಚ್ಚು ಎದೆಗಾರಿಕೆಯ ಬರಹಗಾರ್ತಿ ಒಬ್ಬಳು ನಮ್ಮ ಕಾಲದಲ್ಲಿ ಜೀವಿಸಿದ್ದರು ಎನ್ನುವುದಕ್ಕೆ ಈ ಸಮಾಜ ಹೆಮ್ಮೆ ಪಡಬೇಕು. ಸಾರಾ ಇಂದು ನಮ್ಮೊಂದಿಗೆ ಇಲ್ಲದಿರಬಹುದು ಅವರು ಬಿಟ್ಟು ಹೋದ ಆದರ್ಶಗಳಿವೆ. ಅದು ಈ ಸಮಾಜವನ್ನು ಪೊರೆಯಲಿ. ಸಾರಾ ಎಂಬ ಒಂದು ಧ್ವನಿ ಎದ್ದ ಕಾರಣಕ್ಕೆ ಕನ್ನಡ ಸಾಹಿತ್ಯ ಲೋಕದಲ್ಲಿ ಅನೇಕ ದಮನಿತ ಧ್ವನಿಗಳು ಧೈರ್ಯ ತೋರಿ ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸುವ ಛಾಳಿ ಬೆಳೆಸಿಕೊಂಡಿವೆ ಎನ್ನುವುದಷ್ಟೇ ಸಾಕಲ್ಲವೇ ಸಾರಾ ಅಬೂಬಕ್ಕರ್ ಬದುಕು ಸಾರ್ಥಕ ಎನ್ನಿಸಿಕೊಳ್ಳುವುದಕ್ಕೆ ..? 

-ಕಾವ್ಯ ಬೈರಾಗಿ 

(ಶ್ರೀರಾಜ್ ವಕ್ವಾಡಿ)

(10/01/2023)

Wednesday, January 4, 2023

ಜೋಡೋ ಯಾತ್ರೆ ಕಾಂಗ್ರೆಸ್‌ನ ಒಂದು ಮಹತ್ವದ ಹೆಜ್ಜೆ..! ಆದರೂ...


(ಸಾಂದರ್ಭಿಕ ಚಿತ್ರ)

ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಹೊರಟವರು ಸೋಲುತ್ತಿರುವುದೆಲ್ಲಿ..?  

ಸನ್ ಆಫ್ ರಾಜೀವ್ ಗಾಂಧಿ ಭಾರತ್ ಜೋಡೋ ಯಾತ್ರೆ ಈ ದೇಶದುದ್ದಕ್ಕೂ ಮಾಡಬೇಕು ಎಂಬ ಸಂಕಲ್ಪ ಮಾಡಿಕೊಂಡಾಗ ಈ ಮಟ್ಟಿಗೆ ಬೆಂಬಲ ದೊರಕ್ಕುತ್ತದೆ ಎಂದು ಕನಸು ಕೂಡ ಕಂಡಿರಲಿಕ್ಕಿಲ್ಲ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಬಗೆಗಿನ ಮಾಧ್ಯಮಗಳ ದಿವ್ಯ ನಿರ್ಲಕ್ಷ್ಯದ ಹೊರತಾಗಿಯೂ ಜನ ರಾಹುಲ್ ನಡೆದಲ್ಲೆಲ್ಲಾ ಅಪ್ಪಿ ಒಪ್ಪಿ ಕೊಂಡಾಡಿರುವುದನ್ನು ಈ ದೇಶದ ಕಣ್ಣುಗಳು ಕಂಡಿವೆ. ಬಿಜೆಪಿಯಂತಹ ದೊಡ್ಡ ಕಾರ್ಯಕರ್ತರ ಬೆಂಬಲವಿರುವ ರಾಷ್ಟ್ರೀಯ ಪಕ್ಷ ಸೃಷ್ಟಿಸಿದ ಕಾಂಗ್ರೆಸ್ ವಿರುದ್ಧದ ರಾಜಕೀಯ ತಂತ್ರಗಾರಿಕೆಯ ನಡುವೆಯೂ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಇಷ್ಟರ ಮಟ್ಟಿಗೆ ಜನಪ್ರೀತಿ ಗಳಿಸಿದ್ದು/ಗಳಿಸುತ್ತಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ದಾಟ್ಸ್ ರಿಯಲಿ ಗ್ರೇಟ್. 

ರಾಹುಲ್ ಗಾಂಧಿ ನೇತೃತ್ವದ ಜೋಡೋ ಯಾತ್ರೆ ನಿಸ್ಸಂದೇಹವಾಗಿ ರಾಜಕೀಯದ ಸಾರ್ವಜನಿಕ ಸಂಪರ್ಕವೇ ಆಗಿದ್ದರೂ, ಅಲ್ಲಿ ಭ್ರಾತೃತ್ವದ ನಗು ಹೊರಸೂಸುತ್ತಿತ್ತು. ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್‌ನ ಒಂದು ಮಹತ್ವದ ಹೆಜ್ಜೆ ಕೂಡ ಹೌದು. ಮತ್ತು ಅದು ಸಾರ್ವಜನಿಕ ವಲಯದಲ್ಲಿ ಸೃಷ್ಟಿಸಿದ ಪ್ರಭಾವವನ್ನು ತಳ್ಳಿ ಹಾಕುವುದಕ್ಕೆ ಖಂಡಿತ ಸಾಧ್ಯವಿಲ್ಲ. ಈ ದೇಶದ ಹಿರಿಯ ರಾಜಕೀಯ ಪಕ್ಷದ ನಾಯಕ, ಗಾಂಧಿ ಕುಟುಂಬದ ಕುಡಿ, ಕಾಂಗ್ರೆಸ್ ನಾಯಕ ಎಂಬೆಲ್ಲಾ ಪ್ರಭಾವಳಿಯನ್ನು ಕಳಚಿಟ್ಟು ಸಾರ್ವಜನಿಕರೊಂದಿಗೆ ತೀರಾ ಸಾಮಾನ್ಯನಂತೆಯೇ ನಡೆದು ಜಾತಿ, ಮತ, ಧರ್ಮಗಳನ್ನು ನೋಡದೇ ತನ್ನೆಡೆಗೆ ಓಡಿ ಬಂದವರನ್ನು ಅಪ್ಪಿ ಮಾತನಾಡಿಸಿ, ಅವರ ಸಂಕಷ್ಟಗಳಿಗೆ ದನಿಯಾಗುವುದಿದೆಯಲ್ವಾ..? ಅದು ಎಲ್ಲರಿಗೂ ಸಾಧ್ಯವಿಲ್ಲ. ರಾಹುಲ್ ಗಾಂಧಿ ಅಂತಹ ತೆರೆದ ಮನಸ್ಸಿನ, ಈ ದೇಶದ ಬಗೆಗೆ ದೂರದೃಷ್ಟಿ ಇಟ್ಟುಕೊಂಡವನಿಂದ ಮಾತ್ರ ಸಾಧ್ಯ. ಆ ಕಾರಣಕ್ಕೆ ಪಕ್ಷಾತೀತವಾಗಿ ರಾಹುಲ್ ಗಾಂಧಿಯನ್ನು ಮೆಚ್ಚಲೇಬೇಕು. ಇನ್ನು, ಈ ಯಾತ್ರೆ ಕಾಂಗ್ರೆಸ್‌ಗೆ ಮರುಜನ್ಮ ನೀಡುವಷ್ಟರ ಮಟ್ಟಿಗೆ ಬಲ ತುಂಬಿಸಿದೆಯೇ ಎಂದು ಕೇಳಿದರೇ, ಖಂಡಿತ ಅದಿನ್ನೂ ಸ್ಪಷ್ಟವಿಲ್ಲ. ಅದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೂ, ಯಾತ್ರೆಯ ಸಂಕಲ್ಪ ಈ ದೇಶದಲ್ಲಿ ಒಂದು ಆಶಾಕಿರಣವನ್ನು ಮೂಡಿಸಿದೆ ಎನ್ನುವುದು ಸತ್ಯ. 

ಈ ಯಾತ್ರೆಯ ಸಂಕಲ್ಪದಂತೆ ಈ ದೇಶದ ಜನ ಸಮೂಹವನ್ನು ಸಜ್ಜುಗೊಳಿಸುವ ಮತ್ತು ತನ್ನೊಂದಿಗೆ ಒಳಗೊಳ್ಳಿಸುವ ಇಚ್ಛಾಶಕ್ತಿ ಕಾಂಗ್ರೆಸ್‌ಗಿದೆ. ಆ ಬಗ್ಗೆ ಭಾರತೀಯರಲ್ಲಿ ಕುತೂಹಲ ಮೂಡಿಸಿದೆ. ಮೋದಿ ನೇತೃತ್ವದ ಸರ್ಕಾರ ಈ ದೇಶದ ಜನರಿಗೆ ಕೊಡುಗೆಯಾಗಿ ನೀಡಿದ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಇತ್ಯಾದಿ ಸಮಸ್ಯೆಗಳಿಂದ ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬಳಲಿದ ಈ ದೇಶದ ಎಲ್ಲಾ ಹಂತದ ನಾಗರಿಕರಲ್ಲಿ ಈ ಯಾತ್ರೆ ಸಣ್ಣ ಮಟ್ಟಿಗೆ ಭರವಸೆ ಮೂಡಿಸಿದೆ ಎನ್ನುವುದನ್ನು ಖಂಡಿತ ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ರಾಜಕೀಯವಾಗಿ ಕಾಂಗ್ರೆಸ್ ದೇಶದ ಎಲ್ಲಾ ಭಾಗಗಳಲ್ಲಿ ಗೆಲ್ಲುವುದಕ್ಕೆ ಅಥವಾ ಅಧಿಕಾರ ಪಡೆಯುವುದಕ್ಕೆ ಸಮರ್ಥವಿದೆಯೇ.. ಎನ್ನುವುದು ಅದು ಎರಡನೇ ಹಂತದ ಪ್ರಶ್ನೆ ಮತ್ತು ಚರ್ಚೆ. ಆದರೇ, ಸಾಮಾಜಿಕ ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದ್ದ ಈ ದೇಶದ ನಾಗರಿಕರಿಗೆ ತಮ್ಮ ಕಷ್ಟಗಳನ್ನು ಕೇಳುವ ಕಿವಿಯಂತೆ ಕಾಂಗ್ರೆಸ್ ದೊರಕಿದೆ ಎಂಬ ಸಮಾಧಾನ ಮೂಡಿಸಿದೆ ಎನ್ನುವುದನ್ನು ಯಾತ್ರೆಯುದ್ದಕ್ಕೂ ರಾಹುಲ್ ಗಾಂಧಿ ಜೊತೆಗೆ ಬಂದ ಜನಸಮೂಹದಿಂದ ತಿಳಿದುಕೊಳ್ಳಬಹುದಾಗಿದೆ. 

ಎಲ್ಲಾ ಹಂತದಲ್ಲಿಯೂ ಪ್ರಬಲ ಪಕ್ಷ ಸಂಘಟನೆ ಮಾಡಿಕೊಳ್ಳುವುದು ಈಗ ಕಾಂಗ್ರೆಸ್‌ಗೆ ತುರ್ತಿದೆ. ಮಕಾಡೆ ಮಲಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಈ ಯಾತ್ರೆ ಬಡಿದೆಬ್ಬಿಸಿದೆ. ಈ ಯಾತ್ರೆಯಲ್ಲಿ ಭಾರತೀಯರೊಂದಿಗೆ ಕಾಂಗ್ರೆಸ್ ಸಂಪರ್ಕ ಪ್ರಬಲವಾಗಬೇಕು ಎಂಬ ಒಂದು ಹಿಡೆನ್ ಅಜೆಂಡಾ ಇದೆ ಎಂದಾದರೂ ಈ ಕಾಲಕ್ಕೆ ಇಂತಹದ್ದೊಂದು ಯಾತ್ರೆಯೋ ಅಥವಾ ಸಾರ್ವಜನಿಕ ಸಂಪರ್ಕ ಆಗಲೇಬೇಕಿತ್ತು. ೧೯೨೦, ೧೯೩೦, ೧೯೪೦ರ ದಶಕದಲ್ಲಿ ಕಾಂಗ್ರೆಸ್ ಸಾರ್ವಜನಿಕರೊಂದಿಗೆ ಉಳಿಸಿಕೊಂಡಿದ್ದ ಸಂಪರ್ಕ ನಿಜಕ್ಕೂ ಪ್ರಬಲವಾಗಿತ್ತು. ಅಂದಿನ ಕಾಂಗ್ರೆಸ್ ನಾಯಕರು ಪಕ್ಷ ಸಂಘಟನನೆಯಲ್ಲಿ ಹಗಲಿರುಳು ದುಡಿದಿದ್ದರು. ಅದಾದ ಮೇಲೆ ವರ್ಷ ಕಳೆದಂತೆ ರಾಜಕೀಯ, ಸೈದ್ಧಾಂತಿಕ ಭಿನ್ನತೆಯ ಮೇಲೆ ಇತರೆ ಪಕ್ಷಗಳ ಉಗಮವಾಯಿತು. ಆ ಎಲ್ಲಾ ಪಕ್ಷಗಳು ತಮ್ಮ ಸೈದ್ಧಾಂತಿಕ ನಿಲುವನ್ನು ಬಿತ್ತಿದವು. ಅದು ರಾಜಕೀಯ ಧ್ರುವೀಕರಣಕ್ಕೆ ಕೂಡ ಕಾರಣವಾಯಿತು. ಈ ದೇಶದಲ್ಲಿ ಹುಟ್ಟಿಕೊಂಡ ಹಲವು ಸಿದ್ಧಾಂತಗಳು ತಮ್ಮದೇ ಸಾಮ್ರಾಜ್ಯವನ್ನು ಸೃಷ್ಟಿ ಮಾಡಿಕೊಂಡವು. ಸಹಜವಾಗಿ ಕಾಂಗ್ರೆಸ್‌ಗೆ ಕೂಡ ಇದು ಪೆಟ್ಟಾಯಿತು. ಈಗ ಬಲವಾದ ಒಂದು ಸೈದ್ಧಾಂತಿಕ ಹೋರಾಟವನ್ನು ಕಾಂಗ್ರೆಸ್ ಎದುರಿಸಬೇಕಿದೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ತಾವಿಬ್ಬರೇ ಈ ದೇಶದಲ್ಲಿ ಕಾಂಗ್ರೆಸ್‌ನನ್ನು ಉಳಿಸುತ್ತೇವೆ ಎಂದರೇ ಸಾಕಾಗಲಿಕ್ಕಿಲ್ಲ. ಆಂತರಿಕವಾಗಿ ಪಕ್ಷ ಬಲಗೊಳ್ಳಬೇಕಿದೆ. 

ಕಾಂಗ್ರೆಸ್ ಇವತ್ತಿಗೂ ಸೋಲುತ್ತಿರುವುದೆಲ್ಲಿ ? : ಗಮನಿಸಿ, ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶ್ನಾತೀತ ನಾಯಕರಾದರೂ ಕೂಡ, ಬಿಜೆಪಿಯಲ್ಲಿ ಮತ್ತು ಆರ್‌ಎಸ್‌ಎಸ್ ಪರಿವಾರದಲ್ಲಿ ಮೋದಿಯನ್ನು ಹೊರತಾಗಿಯೂ ಸಾಕಷ್ಟು ಮಂದಿ ಪಕ್ಷ ಸಂಘಟನೆಗೆ, ಪಕ್ಷ ಬಲವರ್ಧನೆಗೆಂದೇ ಇದ್ದಾರೆ. ಆದರೇ, ಕಾಂಗ್ರೆಸ್‌ನ ಸ್ಥಿತಿ ಹಾಗಲ್ಲ. ಕಾಂಗ್ರೆಸ್‌ನ ಬಹುತೇಕ ಎಲ್ಲಾ ಪ್ರಧಾನ ಹುದ್ದೆಗಳು ಕೇವಲ ನಾಮಕಾವಸ್ಥೆಗಷ್ಟೇ ಎಂಬಂತಿದ್ದು, ಆಳುವವರು ಮತ್ತ್ಯಾರೋ ಇದ್ದಾರೆ ಎನ್ನುವುದು ಕಾಂಗ್ರೆಸ್ ಪಕ್ಷದೊಳಗಿನ ಕೊರತೆ. ಅಂದರೇ, ಕಾಂಗ್ರೆಸ್ ತನಗೆ ಬೇಕಾಗುವಷ್ಟು ಪ್ರಭಾವಿ ನಾಯಕರನ್ನು ಬೆಳೆಸಿಲ್ಲ ಎಂಬುವುದು ಇದರ ಅರ್ಥ. ಇದು ಕಾಂಗ್ರೆಸ್‌ನ ಜೋಡೋ ಯಾತ್ರೆಯಲ್ಲಿಯೂ ಅಲ್ಲಲ್ಲಿ ಕಾಣಸಿಕ್ಕಿದೆ. ಎಲ್ಲೋ ಸಾಂದರ್ಭಿಕವಾಗಿ ಜೈರಾಂ ರಮೇಶ್, ಶಶಿ ತರೂರ್, ಕನ್ಹಯ್ಯಾ ಕುಮಾರ್, ಜಿಗ್ನೇಷ್ ಮೇವಾನಿ, ಅಶೋಕ್ ಗೆಹ್ಲೋಟ್‌ರಂತವರು ಈ ಸಾಲಿನಲ್ಲಿ ಇದ್ದಾರೆ ಹೊರತಾಗಿ ಹಲವರನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಅಷ್ಟಕ್ಕೂ ಮಿಗಿಲಾಗಿ ಪ್ರಭಾವಿ ಯುವ ನಾಯಕರನ್ನು ಕಾಂಗ್ರೆಸ್‌ನಲ್ಲಿ ಕಾಣುವುದಕ್ಕೆ ಸಾಧ್ಯವಿಲ್ಲ. ಸೈದ್ಧಾಂತಿಕ ಸಂಗ್ರಾಮಕ್ಕೆ ಇಂತಹ ಹಲವರ ಸೃಷ್ಟಿ ಅಗತ್ಯವಿದೆ ಎನ್ನುವುದು ಕಾಂಗ್ರೆಸ್‌ಗೆ ಗೊತ್ತಾಗದೇ ಇರುವುದು ಎಲ್ಲೋ ಒಂದು ಕಡೆಯಲ್ಲಿ ಅದರ ಸೈದ್ಧಾಂತಿಕ ಹೋರಾಟದ ಕಡೆಗಿರುವ ಕೊರತೆಯನ್ನೋ, ಅಸಮರ್ಥತೆಯನ್ನೋ ಸೂಚಿಸುತ್ತದೆ.

ಇನ್ನು, ಕಾಂಗ್ರೆಸ್‌ಗೆ ಒಂದು ಅಧಿಕೃತ ಪ್ರಬಲ ಮುಖವಾಣಿ ಮಾಧ್ಯಮ ಬೇಕು. ತನ್ನ ನಿಲುವನ್ನು ಅತ್ಯಂತ ಪರಿಣಾಮಕಾರಿಯಾಗಿ ಸಾರ್ವಜನಿಕ ವಲಯಕ್ಕೆ ತಲುಪಿಸಬಲ್ಲ ಒಂದು ಮಾಧ್ಯಮ ಸೇತುವನ್ನು ಕಾಂಗ್ರೆಸ್ ಬೆಳೆಸದರಿರುವುದು ಕಾಂಗ್ರೆಸ್ ಮಾಡಿದ ತಪ್ಪುಗಳಲ್ಲೊಂದು. ವಿರೋಧಿಗಳ ಆಕ್ರೋಶ ಭರಿತ ಭಾಷಣಗಳ ನಡುವೆ ದೇಶದ ಸಮಸ್ಯೆಗಳ ಬಗ್ಗೆ ಅಲ್ಲೊಬ್ಬ ಇಲ್ಲೊಬ್ಬ ಧ್ವನಿಯೆತ್ತಿದರೇ ಏನು ಪ್ರಯೋಜನವಿದೆ..?   ತನ್ನ ಸಿದ್ಧಾಂತವನ್ನು ಸ್ಪಷ್ಟವಾಗಿ ಪಾಲಿಸುವವನ್ನು ಕಾಂಗ್ರೆಸ್ ಕಣ್ಣೆತ್ತಿಯೂ ನೋಡಿಲ್ಲ. ಈ ದೇಶದ ಹಿರಿಯ ಪಕ್ಷ ಎಂದು ಗುರುತಿಸಿಕೊಂಡಿದ್ದರೂ ಕೂಡ ಸಾರ್ವಜನಿಕ ವರ್ತನೆಯನ್ನು ಬದಲಾಯಿಸಿದ ತನ್ನ ವಿರೋಧ ಪಕ್ಷದ ಡಬಲ್ ಸ್ಪೀಕ್ ಸಿದ್ಧಾಂತವನ್ನು ಮಣಿಸುವಲ್ಲಿ ಕಾಂಗ್ರೆಸ್ ಸೋಲನುಭವಿಸಿತು. ಸಾರ್ವಜನಿಕ ವಲಯದಲ್ಲಿ ಬಿಜೆಪಿ ಹೆಣೆದ ರಾಜಕೀಯ ತಂತ್ರಕ್ಕೆ ಪ್ರತಿಯಾಗಿ ತಂತ್ರ ಹೂಡುವುದರಲ್ಲಿ ಸಂಪೂರ್ಣ ವಿಫಲತೆ ಅನುಭವಿಸಿದ್ದು ಈ ದೇಶ ಕಂಡಿದೆ. ಧ್ರುವೀಕರಣ ಮಾಡುವ ಸಿದ್ಧಾಂತಗಳ ವಿರುದ್ಧ ಪ್ರತಿಕ್ರಿಯಿಸುವ ಶಕ್ತಿ ಕಾಂಗ್ರೆಸ್‌ನಲ್ಲಿ ಇಲ್ಲದಿರುವುದೇ ಸೋಲಿಗೆ ಪ್ರಧಾನ ಕಾರಣಗಳಲ್ಲಿ ಮತ್ತೊಂದು. ‘ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇನೆ’ ಎಂಬ ರಾಹುಲ್ ಅವರ ನಿಲುವಷ್ಟೇ ಈ ರಾಜಕೀಯ ಸಂಗ್ರಾಮವನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಪ್ರಜಾಸತ್ತಾತ್ಮಕ ಹಕ್ಕುಗಳು ಮಾತ್ರ ಭಾರತದ ಮುಂದಿರುವ ಏಕಮಾತ್ರ ವಿಷವೇನಲ್ಲ. ಈ ದೇಶದಲ್ಲಿ ಸಮಸ್ಥಿತಿಗೆ ತುರ್ತಾಗಿ ಬರಲೇಬೇಕಾದ ಸಮಸ್ಯೆಗಳು ಹಲವಿವೆ. ಪ್ರಜಾಪ್ರಭುತ್ವವನ್ನು ರಕ್ಷಿಸುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕಾಂಗ್ರೆಸ್ ಮಾಡಿಕೊಳ್ಳಬೇಕಿದೆ ಮತ್ತು ತನ್ನ ಅಸ್ತಿತ್ವವನ್ನೂ ಕೂಡ ಭದ್ರಪಡಿಸಿಕೊಳ್ಳಬೇಕಿದೆ ಎನ್ನುವುದು ಅಷ್ಟೇ ಮುಖ್ಯ.  

ಕರ್ನಾಟಕವನ್ನು ಗಮನಿಸಿ, ಇನ್ನು ಕೆಲವು ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವ ರಾಜ್ಯ. ಆಡಳಿತ ಪಕ್ಷದ ಮೇಲೆ ಜನರ ಒಲವಿಲ್ಲ. ವಿರೋಧ ಪಕ್ಷ ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರುಗಳಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ಮುಸುಕಿನ ಗುದ್ದಾಟ. ಕಾಂಗ್ರೆಸ್‌ನ ವಿರೋಧ ಬಿಜೆಪಿಯೊಂದಿಗಿರಬೇಕೆ ಹೊರತು ಆಂತರಿಕ ಬಣಗಳೊಂದಿಗಲ್ಲ. ಒಂದು ಪ್ರಬಲವಾದ ಒಗ್ಗಟ್ಟಿನ ಕೊರತೆ ಕಾಂಗ್ರೆಸ್‌ನಲ್ಲಿದೆ ಎನ್ನುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಇಂತಹದ್ದೇ ಕಾರಣಕ್ಕೆ ತನ್ನ ಚಕ್ರಾದಿಪತ್ಯದಲ್ಲಿದ್ದ ರಾಜ್ಯವನ್ನು ಕಳೆದುಕೊಂಡ ಇತಿಹಾಸವನ್ನೂ ಕೂಡ ಕಾಂಗ್ರೆಸ್ ಕಂಡಿದೆ ಎನ್ನುವುದು ಗಮನಾರ್ಹ. ಅದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ. ಇನ್ನು, ಕಾಂಗ್ರೆಸ್‌ನಲ್ಲಿ ಇಂತಹ ಬೆಳವಣಿಗೆ ಹೀಗೆಯೇ ಮುಂದುವರಿದರೇ, ಇನ್ನೊಬ್ಬನಿಗೆ ರಾಜಕೀಯ ಲಾಭ ಮಾಡಿಕೊಡಬಹುದು ಎಂಬ ರಾಜಕೀಯ ಪಡಸಾಲೆಯಲ್ಲಿನ ಚರ್ಚೆಯನ್ನು ಅಲ್ಲಗಳೆಯುವಂತಿಲ್ಲ. ‘ಜೋಡೋ’ ಪಕ್ಷದ ಒಳಗೂ ಆಗಬೇಕಿದೆ ಎನ್ನುವುದನ್ನು ಕಾಂಗ್ರೆಸ್ ಅರ್ಥೈಸಿಕೊಳ್ಳಬೇಕಿದೆ. 

ಏನೇ ಇರಲಿ, ರಾಹುಲ್ ಗಾಂಧಿಯವರ ಬದುಕಿನಲ್ಲಿ ಹಾಗೂ ಕಾಂಗ್ರೆಸ್ ಇತಿಹಾಸದಲ್ಲಿ ಭಾರತ್ ಜೋಡೋ ಯಾತ್ರೆ ಒಂದು ಹೆಗ್ಗುರುತಾಗಿ ಉಳಿಯಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶದುದ್ದಕ್ಕೂ ಸಾರ್ವಜನಿಕರೊಂದಿಗೆ ಸಂಪರ್ಕ ಬೆಸೆಯುವುದಕ್ಕೆ ಸೃಷ್ಟಿಸಿಕೊಂಡ ಈ ಯಾತ್ರೆ, ರಾಹುಲ್ ಗಾಂಧಿಯವರ ವೈಯಕ್ತಿಕ ವರ್ಚಸ್ಸಿಗೂ ಘನತೆಯನ್ನು ತಂದುಕೊಟ್ಟಿದೆ. ಕಾಂಗ್ರೆಸ್‌ನನ್ನು ಇನ್ನಷ್ಟು ಪ್ರಬಲವಾಗಿಸಿದೆ. 

ಪ್ರಜಾಸತ್ತಾತ್ಮಕ ಹಕ್ಕುಗಳ ಹೋರಾಟದ ಗುರುತರವಾದ ಬಲವರ್ಧನೆ ಹೇಗಾಗುತ್ತದೆ ಎಂಬುವುದು ರಾಹುಲ್ ಗಾಂಧಿಯ ಮುಂದಿನ ನಡೆ ಹೇಗಿರಲಿದೆ ಎಂಬುವುದರ ಮೇಲೆ ಅಲ್ಲ. ಯಾತ್ರೆಯ ಜೊತೆಗಿದ್ದವರು/ಜೊತೆಗಿರುವವರು ಹೇಗೆ ಇರಲಿದ್ದಾರೆ ಎನ್ನುವುದರ ಮೇಲೆ ಅವಲಂಭಿತವಾಗಿದೆ ಎನ್ನುವುದು ಅಪ್ಪಟ ಸತ್ಯ. 

-ಶ್ರೀರಾಜ್ ವಕ್ವಾಡಿ 


Thursday, December 29, 2022

ಕೋವಿಡ್ ಎಂಬ ಪಾಲಿಟಿಕಲ್ ಟೂಲ್..!

 


(ಸಾಂದರ್ಭಿಕ ಚಿತ್ರ)

ವೈರಸ್‍ನ ಮರೆಯಲ್ಲಿ ನಡೆದ ರಾಜಕೀಯದ ಹಗಲು ದಂಧೆಗಳು ಹಾಗೂ ಸೇಲ್ಸ್ ರಿವ್ಯೂ 

ಹೌದು, ಮತ್ತೆ ದೇಶದಲ್ಲಿ ಬ್ರಹನ್ನಾಟಕಕ್ಕೆ ವೇದಿಕೆ ಸಜ್ಜಾಗುತ್ತಿದೆ. ಸುಳ್ಳಿನ ಮಹಾ ಕಂತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುವುದಕ್ಕೆ ತಯಾರಿಯಲ್ಲಿವೆ, ವಿರೋಧಿಗಳ ವಿರುದ್ಧ ಕಿರುಚುವುದಕ್ಕೆ ಆಕ್ರೋಶ ಭರಿತ ಭಾಷಣಗಳ ಸ್ಕ್ರಿಪ್ಟ್‍ಗಳು ತಯಾರಿಯ ಹಂತದಲ್ಲಿವೆ, ಟಿವಿ ಪರದೆಯ ಮೇಲೆ ಓಡಾಡುವುದಕ್ಕಾಗಿ ಗ್ರಾಫಿಕ್ ಸೃಷ್ಟಿಯ ಕೋವಿಡ್ ಮುಳ್ಳು ಬೊಂಬೆಗಳು ಸಿದ್ಧತೆಯಲ್ಲಿವೆ, ಕೋರೋನಾ ಮಹಾಮಾರಿ ಎಂದು ಮತ್ತೊಮ್ಮೆ ಬೊಬ್ಬೆ ಹಾಕುವುದಕ್ಕೆ ಆಡಳಿತ ಪಕ್ಷದ ಮಡಿಲ ಕೂಸುಗಳಂತೆ ವರ್ತಿಸುವ ಕೆಲವು ಮಾಧ್ಯಮಗಳ ಕೂಗುಮಾರಿಗಳು ಸಿದ್ಧತೆಯಲ್ಲಿದ್ದಾರೆ, ಬಿಎಫ್.7 ಎಂಬ ಹೊಸ ರೂಪಾಂತರಿ ಕೋವಿಡ್ ಸೋಂಕು ಅತಿ ವೇಗದಲ್ಲಿ ಹರಡಿ ಆಸ್ಪತ್ರೆಗಳೆಲ್ಲಾ ತುಂಬಿ ತುಳುಕುತ್ತಿದ್ದಾವೆ, ‘ಡೇಂಜರಸ್ ವೈರಸ್’, ‘ಡೆಡ್ಲಿ ವೈರಸ್’, ‘ಕೋವಿಡ್ ಮರಣ ಮೃದಂಗ’, ‘ಕಿಲ್ಲರ್ ಕೊರೋನಾ’ ಎಂಬಿತ್ಯಾದಿ ಟೈಟಲ್‍ನ ಅಡಿಯಲ್ಲಿ ಸ್ಕ್ರಿಪ್ಟ್ ಬರೆಯುವುದಕ್ಕೆ, ಹಾರರ್ ಮ್ಯೂಸಿಕ್ ಹಾಕಿ ಎಡಿಟ್ ಮಾಡುವುದಕ್ಕೆ ಟಿವಿ ಮಾಧ್ಯಮಗಳ ಸೋ ಕಾಲ್ಡ್ ಪತ್ರಕರ್ತರು ತುದಿಗಾಲಲ್ಲಿ ನಿಂತಿದ್ದಾರೆ, ಸರ್ಕಾರದ ಲಘು ಹಾಸ್ಯ ಮುನ್ನೆಚ್ಚರಿಕೆಯ ಕ್ರಮಗಳ ಪಟ್ಟಿಗಳು ಹೊರಬಿದ್ದಿವೆ, ಬಿಳಿಕೋಟಿನ ದಂಧೆಕೋರರ ಪಡೆ ಸಿದ್ಧವಾಗಿದೆ, ಹೈಟೆಕ್ ಆಸ್ಪತ್ರೆಗಳಲ್ಲಿ “ಸೇಲ್ಸ್ ರಿವ್ಯೂ” ಮಾಡಲಾಗುತ್ತಿದೆ. 

ಮೂರು ವರ್ಷಗಳ ಹಿಂದೆ ಚೀನಾದ ವುಹಾನ್ ಎಂಬಲ್ಲಿ ಹುಟ್ಟಿಕೊಂಡ ಈ ವೈರಸ್, ಜಗತ್ತಿನ 227 ದೇಶಗಳಿಗೆ ಹರಡಿ, ಈವರೆಗೆ ಜಗತ್ತಿನ ಸುಮಾರು 6.7 ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡಿದೆ. ಭಾರತದ ಸುಮಾರು 44,677,554 ಮಂದಿಗೆ ಈ ಸೋಂಕು ಹರಡಿದೆ ಎಂಬ ವರದಿ ಇದೆ. ಈ ವರದಿಯ ಜೊತೆಗೆ ಬಿಳಿಕೋಟಿನ ದಂಧೆಕೋರರ, ಪ್ರಭಾವಿ ರಾಜಕಾರಣ ಗಳ, ಅಧಿಕಾರಿಗಳ ಶಾಮೀಲಿದೆ ಎನ್ನುವುದು ಲೋಕಸತ್ಯ. 

ಕಳೆದ ಎರಡು ಮೂರು ಕೋವಿಡ್ ಅಲೆಗಳಲ್ಲಿ ಆದ ಅವ್ಯವಸ್ಥೆಗಳಿಂದಾಗಿ ಇದೊಂದು ಮೆಡಿಕಲ್ ಗ್ಲೋಬಲ್ ಮಾಫಿಯಾ ಎಂದೆ ಹೇಳಲಾಯಿತು. ಹೈಟೆಕ್ ಆಸ್ಪತ್ರೆಗಳಲ್ಲಿ “ಸೇಲ್ಸ್ ರಿವ್ಯೂ” ಮಾಡಲಾಗುತ್ತದೆ ಎಂಬ ವಿಚಾರ ನಿಮಗೂ ಗೊತ್ತಿರಬಹುದು. ಡಾಕ್ಟರ್‍ಗಳನ್ನು ಕೂರಿಸಿಕೊಂಡು ಎಷ್ಟು ಲಾಭ ಬಂತು ..? ಅಂತ ಮೀಟಿಂಗ್ ಮಾಡಲಾಗ್ತದೆ. ಯಾವ ಡಾಕ್ಟರ್ ಎಷ್ಟು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುತ್ತಾನೆ. ಆತನಿಂದ ಎಷ್ಟು ಲಾಭ ಆಸ್ಪತ್ರೆಗೆ ಬರುತ್ತದೆ ಎಂಬ ಲೆಕ್ಕಾಚಾರ ಮಾಡಲಾಗ್ತದೆ. ‘ಆಪರೇಷನ್ ಟಾರ್ಗೇಟ್’, ಒಬ್ಬ ರೋಗಿಯನ್ನು ಬದುಕಿಸುವುದು ಮತ್ತು ಸಾಯಿಸುವುದನ್ನು ಆಸ್ಪತ್ರೆಯ ಆಡಳಿತ ಮಂಡಳಿ ಡಿಸೈಡ್ ಮಾಡುತ್ತದೆ ಅಂದರೆ ನೀವು ಅಚ್ಚರಿ ಪಡಬೇಕಾಗಿಲ್ಲ. ಹೌದು. ಈ ಕೋವಿಡ್ ಆರಂಭವಾದ ಮೇಲೆ ಆಗಿದ್ದೆಲ್ಲವೂ ಇಂತದ್ದೇ ಅಂತ ಬಿಡಿಸಿ ಬಿಡಿ ಬಿಡಿಯಾಗಿ ಹೇಳುವ ಅಗತ್ಯವೇನೂ ಇಲ್ಲ. ಇದೊಂದು ಪಕ್ಕಾ ದಂಧೆ ಆಗಿ ಬಿಟ್ಟಿದೆ. ಕೋವಿಡ್ ಪರೀಕ್ಷಾ ಪರಿಕರಗಳಿಂದಾದಿಯಾಗಿ ಟ್ರೀಟ್‍ಮೆಂಟ್, ಕ್ವಾರಂಟೈನ್, ಸೀಲ್ಡೌನ್ ತನಕವೂ ಕೂಡ ಆಳುವ ರಾಜಕೀಯ ನಾಯಕರ ಪ್ರಭಾವ ಇದೆ ಎನ್ನುವುದು ಪದಶಃ ಸತ್ಯ. ಇನ್ನು, ಖಾಸಗಿ ಆಸ್ಪತ್ರೆಗಳು ಡಬ್ಬಲ್ ಬಿಲ್ ಮಾಡಿದ್ದಾಯ್ತು, ಸಾಮಾನ್ಯ ಹೊರ ರೋಗಿಗಳನ್ನು ನಿರ್ಲಕ್ಷಿಸಿದ್ದಾಯ್ತು, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಡ ಹಾಗೂ ನಿರ್ಗತಿಕ ರೋಗಿಗಳನ್ನು ಅಪರಾತ್ರಿಯಲ್ಲಿ ಎಲ್ಲೆಲ್ಲೋ ನಡು ದಾರಿಯಲ್ಲಿ ಬಿಟ್ಟು ಕ್ರೂರತನ ತೋರಿಸಿದ್ದೂ ಮುಗಿಯಿತು. ಕ್ವಾರಂಟೈನ್ ವಿಷಯದಲ್ಲಿ ಆಸ್ಪತ್ರೆಯೊಂದಿಗೆ, ಹೋಟೇಲ್ ಮಾಲೀಕರೊಂದಿಗೆ ರಾಜಕೀಯ ನಾಯಕರುಗಳು, ಅಧಿಕಾರಿ ವರ್ಗದವರು ಶಾಮೀಲು ಮಾಡಿಕೊಂಡು ಬಡವರ ಕಷ್ಟದ ಹಣವನ್ನು ನುಂಗಿ ಕಕ್ಕಿದ್ದೂ ಆಯ್ತು, ಅಷ್ಟೇ ಏಕೆ ಈ ಕೋವಿಡ್‍ನನ್ನು ರಾಜಕೀಯಕ್ಕಾಗಿ ಬಳಸಿಕೊಂಡಿದ್ದನ್ನೂ/ಬಳಸಿಕೊಳ್ಳುತ್ತಿರುವುದನ್ನು ಈ ದೇಶ ಕಂಡಿದೆ. ಇಡೀ ದೇಶ ಕೋವಿಡ್‍ನ ಆತಂಕದಲ್ಲಿರುವಾಗ ರಾಜಕಾರಣ ಗಳು, ಅಧಿಕಾರಿಗಳು, ಮೆಡಿಸಿನ್ ಕಂಪೆನಿಗಳು, ಡಾಕ್ಟರ್ಸ್ ದುಡ್ಡು ಮಾಡಿಕೊಂಡು ಹಬ್ಬ ಮಾಡಿಕೊಂಡ್ರು, ಅಷ್ಟೇ ಏಕೆ..? ಈ ದೇಶದ ಆಡಳಿತ ಸರ್ಕಾರ ಬಿಜೆಪಿ, ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡ ನಂತರದ ಕೆಲವೇ ದಿನಗಳಲ್ಲಿ ಪಿಎಂ-ಕೇರ್ಸ್ ಎಂಬ ನಿಧಿಯೊಂದನ್ನು ಸ್ಥಾಪಿಸಿ, ಅದು ಹಣಕಾಸಿನ ಕಪ್ಪು ಕುಳಿಯೇ ಎಂಬಂತಾಗಿ ಹೋದದ್ದೂ ಕೂಡ ಈ ದೇಶ ಕಂಡು ಸಹಿಸಿಕೊಂಡಿದೆ. ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳದ, ಈ ಪಿಎಂ-ಕೇರ್ಸ್‍ನ ಡೀಡ್ ಹೇಳುವ ಪ್ರಕಾರ, ಈ ನಿಧಿ ಅಥವಾ ಫಂಡ್ ಸರ್ಕಾರದ ಅಧೀನದಲ್ಲಿ ಇಲ್ಲ. ಹಾಗಾದರೇ, ಸಂವಿಧಾನದ ಹುದ್ದೆಯೊಂದನ್ನು ಬಳಸಿಕೊಂಡು ಜನರಿಂದ ಸಂಗ್ರಹಿಸಿದ ಕೋಟಿ ಕೋಟಿ ಹಣ ಎಲ್ಲಿಗೆ ಹೋಯ್ತು..? ಆ ಟ್ರಸ್ಟ್ ಗೆ ಸರ್ಕಾರದ ವೆಬ್‍ಸೈಟ್‍ನಲ್ಲಿ ಪ್ರಾಯೋಜಕತ್ವ ನೀಡುವ ದರ್ದೇನಿತ್ತು..? ಇವೆಲ್ಲವೂ ಕೋವಿಡ್ ವೈರಸ್‍ನ ಮರೆಯಲ್ಲಿ ಪಾಲಿಟಿಕಲ್ ಟೂಲ್ ಆಗಿ ಬಳಸಿಕೊಂಡು ಸರ್ಕಾರ ನಡೆಸಿದ ಹಗಲು ದಂಧೆಗಳು.

ಕೋವಿಡ್ ಎಂಬ ಪಾಲಿಟಿಕಲ್ ಟೂಲ್ : ರಾಜಕೀಯವನ್ನು ಮಾತಾಡುವುದಾದರೇ, ಕೋವಿಡ್ ಸೋಂಕು 2019ರಲ್ಲಿ ಜಾಗತಿಕವಾಗಿ ಹರಡಲಾರಂಭಿಸಿದಾಗ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ಮೊದಲು ಎಚ್ಚರಿಸಿದ್ದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಅಷ್ಟಾಗಿಯೂ ಕೇಂದ್ರ ಸರ್ಕಾರ ಅಗತ್ಯವಾಗಿ ಕೈಗಳ್ಳೊಲೇ ಬೇಕಾದ ಕ್ರಮಗಳನ್ನು ಮಾಡದೇ ಇರುವ ಕಾರಣಕ್ಕೆ ಈ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ತತ್ತರಿಸಿ ಹೋಯ್ತು. ರಾಹುಲ್ ಗಾಂಧಿ ಸರ್ಕಾರದ ಅವ್ಯವಸ್ಥೆಗಳನ್ನು ಪದೇ ಪದೇ ಪ್ರಶ್ನಿಸಿದರು. ಕೋವಿಡ್‍ನಂತಹ ಆತಂಕದ ಸಂದರ್ಭದಲ್ಲಿಯೂ ಬಿಜೆಪಿ ರಾಹುಲ್ ವಿರುದ್ಧ ರಾಜಕೀಯ ಮಾಡಿತ್ತು. ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಪ್ರಧಾನಿಯಾಗಿದ್ದಿದ್ದರೇ ದೇಶದ ಅವ್ಯವಸ್ಥೆಯ ಸ್ಥಿತಿಯಲ್ಲಿರುತ್ತಿತ್ತು ಎಂಬುವುದನ್ನು ಸಾಮಾಜಿಕ ವಲಯದಲ್ಲಿ ಹಬ್ಬಿಸಲಾಯಿತು. ಅದಾದ ಬಳಿಕ ಕೋವಿಡ್‍ನ ಅವ್ಯವಸ್ಥೆಗಳೆಲ್ಲಾ ಒಂದೊಂದಾಗಿಯೇ ಬಟಾಬಯಲಾಗಿ ಹೋಯ್ತು. 2020ರಲ್ಲಿ ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಯ ವಿರುದ್ಧ ಆರಂಭವಾದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಏನೆಲ್ಲಾ ಆರೋಪ ಹೊರಿಸುವುದಕ್ಕೆ ಪ್ರಯತ್ನ ಮಾಡಿತ್ತು ಎನ್ನುವುದು ಗೊತ್ತೇ ಇದೆ. ಅದೇನೇ ಇರಲಿ, ಕೊನೆಗೆ ಕೇಂದ್ರ ಸರ್ಕಾರವೇ ಈ ಕಾಯ್ದೆಗಳನ್ನು ವಾಪಾಸ್ ಪಡೆದುಕೊಂಡಿರುವುದು ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ರಚಿಸಿರುವ ಹಾಸ್ಯ ಪ್ರಸಂಗಗಳಲ್ಲೊಂದು. ಒಟ್ಟಿನಲ್ಲಿ, ರಾಹುಲ್ ಗಾಂಧಿಯನ್ನು ರಾಜಕೀಯವಾಗಿ ಹೇಗೆಲ್ಲಾ ಸೋಲಿಸುವುದಕ್ಕೆ ಸಾಧ್ಯವಾಗುತ್ತೋ ಅಷ್ಟೂ ಪ್ರಯತ್ನವನ್ನು ಕೇಂದ್ರ ಸರ್ಕಾರ ಈ ಕೋವಿಡ್ ಸಂದರ್ಭದಲ್ಲಿ ಮಾಡಿತ್ತು ಎನ್ನುವುದು ಇಲ್ಲಿ ಗಮನಾರ್ಹ. 

ಕೋವಿಡ್‍ನ ಎರಡನೇ ಅಲೆ ವ್ಯಾಪಕವಾಗಿ ಮಿತಿಮೀರುತ್ತಿರುವ ಹೊತ್ತಿನಲ್ಲಿ ಪಂಚರಾಜ್ಯ ಚುನಾವಣೆ(ಪ.ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ, ಪುದುಚೆರಿ)ಯ ಸಂದರ್ಭದಲ್ಲಿ, ಹಾಗೂ ಪಂಜಾಬ್, ಉತ್ತರಪ್ರದೇಶ, ಉತ್ತರಾಖಂಡ, ಮಣ ಪುರ, ಗೋವಾ ಚುನಾವಣೆಯ ಸಂದರ್ಭದಲ್ಲಿ ನಡೆಸಿದ ನಿಮ್ಮ ಪಬ್ಲಿಕ್ ರ್ಯಾಲಿಗಳಲ್ಲಿ, ಇತ್ತೀಚೆಗೆ ನಡೆದ ಗುಜರಾತ್, ಹಿಮಾಚಲ್ ಪ್ರದೇಶ್ ಚುನಾವಣೆಯ ಸಂದರ್ಭದಲ್ಲಿ ಮೋದಿ, ಅಮಿತ್ ಶಾ ಸೇರಿ ಬಿಜೆಪಿ ಮುಖಂಡರು, ಹಾಗೂ ಕಾಂಗ್ರೆಸ್ ಸೇರಿ ಇತರೆ ಪಕ್ಷದ ನಾಯಕರು ಮಾಡಿದ ಪಬ್ಲಿಕ್ ರ್ಯಾಲಿಗಳಿಗಿಲ್ಲದ ಕೋವಿಡ್ ನಿಯಮಾವಳಿಗಳು ಈಗ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಮಾತ್ರ ಯಾಕೆ..? ಭಾರತ್ ಜೋಡೋ ಯಾತ್ರೆಯಿಂದ ಕೋವಿಡ್ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ರಾಹುಲ್‍ಗೆ ಪತ್ರ ಬರೆದ ಕೇಂದ್ರ ಸರ್ಕಾರ, ಕೋವಿಡ್ ಸೋಂಕಿನ ಉಚ್ಛ್ರಾಯ ಸ್ಥಿತಿಯಲ್ಲಿಯೇ ಲಕ್ಷಾಂತರ ಮಂದಿಯನ್ನು ಸೇರಿಸಿ ಪಬ್ಲಿಕ್ ರ್ಯಾಲಿಗಳನ್ನು ಮಾಡಿ ರಾಜಕೀಯ ವರ್ಚಸ್ಸು ವೃದ್ಧಿಸಿಕೊಳ್ಳುವಾಗ ತನ್ನ ಜವಾಬ್ದಾರಿಯನ್ನು ಮರೆತಿತ್ತೇ ? ಅಥವಾ ಕೋವಿಡ್ ಈ ನಡುವೆ ದೇಶದಲ್ಲಿ ಇರಲೇ ಇಲ್ವೇ..? ಹೀಗೆಲ್ಲಾ ಇರುವಾಗ, ಜೋಡೋ ಯಾತ್ರೆಗೆ ಜನರು ವ್ಯಾಪಕವಾಗಿ ಸ್ಪಂದಿಸುತ್ತಿರುವಾಗ ಕೇಂದ್ರ ಸರ್ಕಾರ ಯಾತ್ರೆಯನ್ನು ತಡೆಯೊಡ್ಡಲು ಬಳಸುತ್ತಿರುವ ಅಸ್ತ್ರ ಎಂದು ಕಾಂಗ್ರೆಸ್ ಆರೋಪಿಸುತ್ತಿರುವುದನ್ನು ಹೇಗೆ ಅಲ್ಲಗಳೆಯುವುದಕ್ಕೆ ಸಾಧ್ಯ..? ವಿರೋಧಿಗಳನ್ನು ಮಣ ಸುವುದಕ್ಕೆ ಕೋವಿಡ್ ಕೂಡ ಒಂದು ‘ಪಾಲಿಟಿಕಲ್ ಟೂಲ್’ ಆಗಿ ಬದಲಾಗುತ್ತಿರುವುದು ಈ ದೇಶದ ಮತ್ತೊಂದು ದುರಂತ.        

ಚೀನಾ ವರದಾನವಾಗಿ ಕೊಟ್ಟಿರುವ ಈ ವೈರಸ್‍ನನ್ನು ಕೇವಲ ಭಾರತ ಮಾತ್ರವಲ್ಲ, ಜಗತ್ತಿನ ಅನೇಕ ದೇಶಗಳು ತಮ್ಮ ರಾಜಕೀಯ ವಿರೋಧಿಯನ್ನು ಗುರಿಯಾಗಿಸಲು ಬಳಸಿಕೊಂಡಿವೆ ಎನ್ನುವುದು ಸತ್ಯ. ಏನೇಯಾಗಲಿ, ಕೋವಿಡ್ ಎಂಬ ವೈರಸ್ ಹಬ್ಬುತ್ತಿದೆಯಾದಲ್ಲಿ ಸರ್ಕಾರ ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿ. ದೇಶದಲ್ಲಿ ಸುಮಾರು 200ಕೋಟಿಗೂ ಹೆಚ್ಚು ಲಸಿಕೆಯ ಡೋಸ್‍ಗಳನ್ನು ನೀಡಲಾಗಿದೆ ಎಂದು ಸರ್ಕಾರ ವರದಿಯಲ್ಲಿ ಹೇಳುತ್ತಿದೆ. ಅಷ್ಟಾಗಿಯೂ ಈ ದೇಶದ ದೊಡ್ಡ ಸಂಖ್ಯೆಯ ಜನರನ್ನು ಉಳಿಸಿಕೊಳ್ಳುವಲ್ಲಿ ಈ ದೇಶ ಸೋತಿದೆ. ವ್ಯವಸ್ಥಿತವಾಗಿ ನಿಭಾಯಿಸುವಲ್ಲಿಯೂ ಸರ್ಕಾರ ಎರಡನೇ ಮೂರನೇ ಅಲೆಯಲ್ಲಿಯೂ ವಿಫಲವಾಗಿದೆ. ಮೆಡಿಸಿನ್ ಕಂಪೆನಿಗಳ ಟೆಂಡರ್ ಲಾಭ, ರಾಜಕೀಯ ಲಾಭ, ದಂಧೆಗಳನ್ನು ಬಿಟ್ಟು ದೇಶವನ್ನು ಆರ್ಥಿಕ, ಸಾಮಾಜಿಕ ಸುಸ್ಥಿತಿಯತ್ತ ಕೊಂಡೊಯ್ಯುವುದಕ್ಕೆ ಸರ್ಕಾರ ಪ್ರಯತ್ನಿಸಲಿ. 

ಇನ್ನು, ತಮ್ಮ ಮೂಗಿನ ನೇರಕ್ಕೆ ಸಮರ್ಥಿಸಿಕೊಳ್ಳುವುದಕ್ಕೆ ಸಿಗದ ‘ರಾಹುಲ್ ಗಾಂಧಿ ಜೋಡೋ ಯಾತ್ರೆ’ಯ ವಿರುದ್ಧ ಕೇಂದ್ರ ಸರ್ಕಾರ ಈ ಕೋವಿಡ್ ವಿಚಾರದಲ್ಲಿ ವಿರೋಧಿಸುವುದನ್ನು ನಿಲ್ಲಿಸಲಿ. ಸರ್ಕಾರದ ಕೋವಿಡ್ ನಿಯಮಾವಳಿಗಳು ಈ ಹಿಂದೆ ಸಾರ್ವಜನಿಕ ಲಜ್ಜೆಗೆ ಒಳಗಾಗಿದ್ದು ಈ ದೇಶ ಕಂಡಿದೆ. ಕೊನೆಯ ಪಕ್ಷ ಈ ಬಾರಿಯಾದರೂ, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಗಳಾದೇ ನಿಭಾಯಿಸುವಂತಾಗಲಿ. ಪಾಲಿಟಿಕಲ್ ಮೈಲೇಜ್‍ಗೆ ಕೋವಿಡ್‍ನನ್ನು ಬಳಸಿಕೊಳ್ಳುವ ಸರ್ಕಾರದ ಕೀಳು ಅಭಿರುಚಿಗೆ ಈ ದೇಶದ ಜನರೇ ಉತ್ತರಿಸುವಂತಾಗಲಿ.   

ಪೋಷಕ ಮಾಹಿತಿಯನ್ನು ಮುಚಿಟ್ಟ ಚೀನಾ : ಹೌದು, ಈ ಕೋವಿಡ್ ಎಂಬ ವೈರಸ್ ಬಿಟ್ಟು ಚೀನಾ ಕುತಂತ್ರ ಮಾಡಿದೆ ಎಂಬ ವರದಿಗಳನ್ನು ಈ ಹಿಂದೆಯೇ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು. ವುಹಾನ್ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಸೋಧಕರು ವೈರಸ್‍ನ ಪೋಷಕ ಮಾಹಿತಿಯನ್ನು ಚೀನಾ ಸರ್ಕಾರ ಮುಚ್ಚಿ ಹಾಕಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಕೂಡ ವರದಿ ಮಾಡಿತ್ತು. ಅಷ್ಟಕ್ಕೂ ಚೀನಾ ಕೋವಿಡ್ ಸೋಂಕು ಮೊದಲು ಹಬ್ಬಿದಾಗ ಚೀನಾ ಅಗತ್ಯವಾಗಿ ಮಾಡಲೇ ಬೇಕಾದ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ವೈರಸ್ ಹಬ್ಬಿದ ನಂತರ ಇತರೆ ದೇಶಗಳಿಗೆ ತಿಳಿಸಬೇಕಾದ ಮಾಹಿತಿಯನ್ನೂ ಕೂಡ ಚೀನಾ ತಿಳಿಸಿರಲಿಲ್ಲ ಎಂಬ ಆರೋಪವೂ ಕೂಡ ಕೆಲವು ಸುದ್ದಿ ಸಂಸ್ಥೆಗಳು ಮಾಡಿದ್ದಿದೆ. ವುಹಾನ್‍ನ ವೈದ್ಯೆ ಲೀ ವೆನ್ ಲಿಯಾಂಗ್ ಈ ವೈರಸ್ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದರು, ಅದಾದ ಕೆಲವೇ ಹೊತ್ತಿನಲ್ಲಿ ಚೀನಾ ಸರ್ಕಾರ ಅವರನ್ನು ಬಂಧಿಸಿತ್ತು. ವೈರಸ್‍ನ ಬಗ್ಗೆ ಇದ್ದ ಸಾಕ್ಷ್ಯಗಳನ್ನು ಚೀನಾ ಸರ್ಕಾರ ನಾಶ ಮಾಡಿತ್ತಲ್ಲದೇ, ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೀನೀ ಸಂಶೋಧಕರ ಸಾವುಗಳನ್ನು ಮುಚ್ಚಿ ಹಾಕಿತ್ತು ಎನ್ನುವುದು ಗಮನಾರ್ಹ. 

-ಶ್ರೀರಾಜ್ ವಕ್ವಾಡಿ 


Tuesday, December 20, 2022

ಬಣ್ಣಗಳನ್ನು ನೋಡುವ ದೃಷ್ಟಿ ಬದಲಾಗಬೇಕಿದೆ..!


(ಸಾಂದರ್ಭಿಕ ಚಿತ್ರ)

‘ಬೇಷರಂ’ ಎಂಬ ಪದ ಒಂದು ನಿರ್ದಿಷ್ಟ ಬಣ್ಣಕ್ಕೆ ಸೇರಿದ್ದೆ..? | ಬಣ್ಣದ ಮೇಲೆ ರಾಜಕೀಯ..!

ಸಮಾಜದಲ್ಲಿ ಸಮಾನತೆಯನ್ನು ಎಂದೂ ಕಾಣುವುದಕ್ಕೆ ಸಾಧ್ಯವಿಲ್ಲ. ಸಾಮಾಜಿಕ ವಲಯದಲ್ಲಿ ಇಂದು ಸಾಮೂಹಿಕ ಅಭಿಪ್ರಾಯವನ್ನು ಹುಟ್ಟು ಹಾಕುವ ಒಬ್ಬ ವ್ಯಕ್ತಿ ಇಡಿ ಸಮಾಜವನ್ನು ಆಳುತ್ತಾನೆ. ಸಮಾಜವೂ ಆತ ಹೇಳಿದ್ದೆಲ್ಲವನ್ನೂ ಸತ್ಯವೆಂದೇ ಕುರುಡಾಗಿ ನಂಬುತ್ತದೆ. ಸಾಮಾಜಿಕ ಸ್ತರಗಳ ಆಧಾರದ ಮೇಲೆ ಪ್ರಯೋಗಿಸಲ್ಪಡುವ ಈ ‘ಸಾಮೂಹಿಕ ಅಭಿಪ್ರಾಯ’ಗಳಿಗೆ ಸ್ವಂತ ಬುದ್ಧಿ ಶಕ್ತಿಯಿಲ್ಲ. ಸಾಮೂಹಿಕ ಅಭಿಪ್ರಾಯವನ್ನು ಹುಟ್ಟು ಹಾಕುವ ವ್ಯಕ್ತಿ ಯಾವುದರ ಪರವಾಗಿದ್ದಾನೆಯೋ ಅದರ ಪರವಾಗಿಯೇ ಸಮಾಜವಿರುವಂತೆ ಮಾಡುವುದು ಈ ಅಜೆಂಡಾದ ಮುಖ್ಯ ಗುರಿ. ಇವೆಲ್ಲವೂ ಬುದ್ಧಿಜೀವಿಗಳ ಮಿತಿಯ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತವೆ. ಈಗೀಗ ಸೋ ಕಾಲ್ಡ್ ಬುದ್ಧಿಜೀವಿಗಳೇ ‘ಸೋಶಿಯಲ್ ಬ್ರೈನ್ಸ್' ಎಂಬಂತಾಗಿದೆ. ಇದು ಕ್ರಿಯಾತ್ಮಕ ಸಿದ್ಧಾಂತವನ್ನು ಅವಲಂಭಿಸಿ ಕೆಲಸ ಮಾಡುತ್ತದೆ. ಸಾಮೂಹಿಕವಾಗಿ ಹುಟ್ಟಿಸಿದ ಒಂದು ಅಭಿಪ್ರಾಯ ಅಸಂಘಟಿದ ಸಮಾಜದ ಮೇಲೆ ಪ್ರಭಾವ ಹೇರಿ ಆಳುವುದಕ್ಕೆ ಪ್ರಯತ್ನ ಮಾಡುತ್ತದೆ. ಈ ಸಿದ್ಧಾಂತ ಹೆಚ್ಚು ದಬ್ಬಾಳಿಕೆಯ ಧೋರಣೆಯನ್ನೇ ಅನುಸರಿಸುತ್ತದೆ. ಈಗ ಸುದ್ದಿಯಲ್ಲಿರುವ ‘ಬೇಷರಂ ರಂಗ್’ ವಿವಾದದ ಅಭಿಪ್ರಾಯವೂ ಹೀಗೆಯೇ ಹರಡಿದ್ದು ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಒಂದು ಕೇಸರಿ ಬಣ್ಣದ ಬಿಕಿನಿಯ ವಿಚಾರದಲ್ಲಿ ಹರಡಿಸಲಾದ ಅಭಿಪ್ರಾಯ ಕೆಲವೇ ಕ್ಷಣದಲ್ಲಿ ಅದು ‘ಸಾಮೂಹಿಕ ಅಭಿಪ್ರಾಯ’ವಾಗಿ ಬದಲಾಗಿ ಬಿಟ್ಟಿತು. ಸಾಮಾಜಿಕ ವಲಯದಲ್ಲಿ ಅದನ್ನು ಎಂದೂ, ಎಲ್ಲೂ ಇಲ್ಲದ ಗಂಭೀರ ಮೂಲಭೂತ ಸಮಸ್ಯೆಯೆಂಬಂತೆ ರೂಪು ಕೊಟ್ಟು ಹಬ್ಬಿಸಲಾಯಿತು. ಈ ದೇಶದ ಮೂಲಭೂತ ಸಮಸ್ಯೆಗಳಿಗೆ ಎಂದೂ ಈ ಪರಿಯಾಗಿ ಧ್ವನಿ ಎತ್ತದ ಸಮಾಜ ಇಂತಹ ವಿಷಯಗಳಿಗೆ ಪದೇ ಪದೇ ಇಷ್ಟೆಲ್ಲಾ ಆಕ್ರೋಶಗೊಳ್ಳುತ್ತಿರುವುದನ್ನು ನೋಡಿದರೇ, ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ.    

ಬೇಷರಂ ರಂಗ್ ಹಾಡನ್ನು ಒಳ್ಳೆಯ ದೃಷ್ಟಿಯಿಂದ ನೋಡುವ ಒಬ್ಬನಿಗೆ ನಿಜಕ್ಕೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಖಂಡಿತ ಅನ್ನಿಸುವುದಿಲ್ಲ. ದೀಪೀಕಾ ಪಡುಕೋಣೆ ಒಬ್ಬ ಭಾರತೀಯ ಚಿತ್ರರಂಗದ ಮೋಹಕ ನಟಿ. ‘ಪಠಾಣ್’ ಸಿನೆಮಾ ನಿರ್ದೇಶನಕ ಸಿದ್ಧಾರ್ಥ್ ಆನಂದ್ ಹಾಗೂ ನಿರ್ಮಾಪಕ ಆದಿತ್ಯ ಚೋಪ್ರಾ ದೀಪಿಕಾರನ್ನು ಗ್ಲಾಮರ್ ಆಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಹೊರತಾಗಿ, ಎಲ್ಲಿಯೂ ಅವರು ಹಿಂದೂ ಧರ್ಮದವರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದಲೇ ದೀಪಿಕಾ ಪಡುಕೋಣೆಯವರನ್ನು ಕೇಸರಿ ಬಿಕಿನಿಯಲ್ಲಿ ತೋರಿಸಿದ್ದಾರೆ ಎಂದು ನನಗಂತೂ ಅನ್ನಿಸುವುದಿಲ್ಲ. ಅಥವಾ ದೀಪಿಕಾರ ವಸ್ತ್ರ ವಿನ್ಯಾಸಗಾರರು ಕೇಸರಿ ಬಣ್ಣದ ಬಿಕಿನಿ ತಯಾರಿಸುವಾಗ ಈ ಧರ್ಮದ ವಿಚಾರಗಳನ್ನೆಲ್ಲಾ ತಲೆಗೆ ಹಾಕಿಕೊಂಡಿರಲಿಕ್ಕಿಲ್ಲ. ಇನ್ನು, ೨೦೨೦ರಲ್ಲಿ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅಲ್ಲಿನ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ್ದಕ್ಕೆ ನೆಟ್ಟಿಗರು ತುಕ್ಡೆ ಗ್ಯಾಂಗ್‌ನೊಂದಿಗೆ ದೀಪಿಕಾ ಪಡುಕೋಣೆ ಸೇರಿಕೊಂಡು ದೇಶದ್ರೋಹ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಬಿಂಬಿಸಿದ್ದ ಕಾರಣಕ್ಕೆ ಪ್ರತಿಕಾರ ತೀರಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದಲೇ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ನಟಿಸಿರಲಿಕ್ಕಿಲ್ಲ. ಅಷ್ಟಕ್ಕೂ, ಈ ಹಾಡಿನಲ್ಲಿ ದೀಪಿಕಾ ಹಸಿರು ಬಣ್ಣದ ಬಿಕಿನಿಯನ್ನೂ ಕೂಡ ಧರಿಸಿ ‘ಬೇಷರಂ ರಂಗ್’ ಎಂದು ನಡು ಬಳುಕಿಸಿದ್ದಾರೆ. ಮಾತ್ರವಲ್ಲದೇ ಯೂಟ್ಯೂಬ್‌ನಲ್ಲಿರುವ ಬೇಷರಂ ರಂಗ್ ಹಾಡಿನ ವಿಡಿಯೋದಲ್ಲಿ ಕೇಸರಿ ಬಿಕಿನಿಯಲ್ಲಿ ದೀಪಿಕಾ ಕಾಣಿಸಿಕೊಳ್ಳುವುದು ಕೇವಲ ೧೦ ರಿಂದ ೧೨ ಸೆಂಕೆಂಡುಗಳಷ್ಟೇ. ಉಳಿದ ಸಮಯದಲ್ಲಿ ಬೇರೆ ಬೇರೆ ಬಣ್ಣದ ಧಿರಿಸಿನಲ್ಲಿ ಕೂಡ ದೀಪಿಕಾ ‘ಬೇಷರಂ ರಂಗ್’ಗೆ ಹೆಜ್ಜೆ ಹಾಕಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ. 

ಇವೆಲ್ಲದಕ್ಕೂ ರಾಜಕೀಯ ಬಣ್ಣವನ್ನು ಸುಲಭವಾಗಿ ಹಚ್ಚಲಾಗುತ್ತಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಸರ್ಫಾನ್ ಬಿಜೆಪಿಯ ರಾಯಲ್ಟಿಯಲ್ಲಿ ಇರಬಹುದು ಆದರೇ, ಕಿತ್ತಳೆ ಬಣ್ಣವಲ್ಲ. ೨೦೨೦ರಲ್ಲಿ ತೆರೆಕಂಡ ದೀಪಿಕಾ ಪಡುಕೋಣೆ ನಟನೆಯ ಅತ್ಯಂತ ಸಾಮಾಜಿಕ ಕಾಳಜಿ ಹೊಂದಿರುವ ‘ಚಪಾಕ್’ ಚಿತ್ರವನ್ನು ಕೂಡ ಜೆಎನ್‌ಯು ವಿದ್ಯಾರ್ಥಿಗಳ ಹೋರಾಟಕ್ಕೆ ದೀಪಿಕಾ ಬೆಂಬಲ ಸೂಚಿಸಿದ್ದಾರೆ ಎಂಬ ಕಾರಣಕ್ಕೆ ನೆಟ್ಟಿಗರು ಬಾಯ್‌ಕಾಟ್ ಮಾಡುವುದಕ್ಕೆ ಮುಂದಾಗಿದ್ದನ್ನೂ ಈ ದೇಶ ಕಂಡಿದೆ. ರಾಜಕೀಯ ನಾಯಕರನ್ನು ಒಳಗೊಂಡು  ಆಸಿಡ್ ದಾಳಿಗೆ ಒಳಗಾಗಿ, ಕಾನೂನು ಹೋರಾಟ ಮಾಡಿ, ದಿಟ್ಟತನದಿಂದ ಬದುಕು ಕಟ್ಟಿಕೊಂಡ ಲಕ್ಷ್ಮೀ ಅಗರ್ವಾಲ್ ಎಂಬ ಸುಂದರ ತರುಣಿಯ ಬದುಕಿನ ನೈಜ ಘಟನೆಯನ್ನು ಆಧರಿಸಿದ ಸಿನೆಮಾದಲ್ಲಿ ದೀಪಿಕಾ, ತಾನೊಬ್ಬ ಗ್ಲಾಮರ್ ನಟನೆಗೆ ಮಾತ್ರ ಸೀಮಿತವಲ್ಲದೇ ಉತ್ತಮ ನಟಿ ಎಂದು ತೋರಿಸಿಕೊಟ್ಟಿದ್ದರು. ಆದರೇ, ಈ ದೇಶದ ಒಂದು ವರ್ಗ ದೀಪಿಕಾ ಅವರನ್ನು ಒಬ್ಬ ಉತ್ತಮ ನಟಿ ಎಂದು ಸ್ವೀಕರಿಸುವುದಕ್ಕೂ ಒಪ್ಪಲಿಲ್ಲ ಎನ್ನುವುದು ಒಂದು ಕೆಟ್ಟ ಮಾನಸೀಕತೆ. ಜನಪ್ರಿಯ ನಟಿಯೊಬ್ಬಳು ತನ್ನ ಪ್ರಭಾವಳಿಯಿಂದ ಆಚೆಗೆ ಬಂದು ಇಂತಹ ಸಿನೆಮಾವೊಂದರಲ್ಲಿ ನಟಿಸಿದ್ದನ್ನು ಮೆಚ್ಚುವಂತಹ ಮನಸ್ಥಿತಿಯಲ್ಲಿಯೂ ಆ ಒಂದು ವರ್ಗ ಇರಲಿಲ್ಲ. ಈಗ ಮತ್ತೆ ಅದೇ ಛಾಳಿ ಮುಂದುವರಿಸಿದೆ. 

ಎಲ್ಲದಕ್ಕೂ ಧಾರ್ಮಿಕ ಬಣ್ಣವನ್ನು ಹಚ್ಚುವ ಮನಸ್ಥಿತಿ ಈ ದೇಶದ ಸಮಸ್ಯೆಗಳಲ್ಲಿ ಒಂದಾಗಿ ಬಿಟ್ಟಿದೆ. ಪಿಎಚ್‌ಡಿ ಪದವಿ ಹೊಂದಿದ ಒಬ್ಬ ಮಂತ್ರಿ(ಮಧ್ಯಪ್ರದೇಶ ಸರ್ಕಾರದ ಗೃಹ ಸಚಿವ ಡಾ. ನರೋತ್ತಮ್ ಮಿಶ್ರಾ) ಸಿನೆಮಾ ಹಾಗೂ ಹಾಡಿನ ಬಗ್ಗೆ ಕೆಟ್ಟದಾಗಿ ಪ್ರತಿಕ್ರಿಯಿಸಿರುವುದು ಆತನ ಬೌದ್ಧಿಕ ಬಡತನ ತೋರಿಸುತ್ತದೆ. ಪ್ರಜಾಪ್ರಭುತ್ವದ ಮುಖ್ಯ ಭಾಗವಾಗಿರುವ ಒಂದು ಸರ್ಕಾರದ ಮಂತ್ರಿ ಒಂದು ದೃಶ್ಯ ಮಾಧ್ಯಮದ ಸಹಜ ಮನರಂಜನೆಯ ದೃಶ್ಯಕ್ಕೆ ಧಾರ್ಮಿಕ ಬಣ್ಣ ಹಚ್ಚಿ ಮಾತನಾಡಿದ್ದು ಹಿಂಸಾತ್ಮಕ ನಡೆಗೂ ಕಾರಣವಾಗಿದೆ ಎನ್ನುವುದು ಇಲ್ಲಿ ಗಮನಾರ್ಹ. ದೀಪಿಕಾ ಧರಿಸಿರುವ ಬಿಕಿನಿ ಅದು ಭಗವಧ್ವಜದ ಬಣ್ಣದ್ದು ಎಂದು ಹೇಳುವ ಆತನ ಹಾಗೂ ಆ ವರ್ಗದ ಮನಸ್ಥಿತಿ ಎಂಥದ್ದಿರಬಹುದು..?      

ರೆಸ್ಪೆಕ್ಟೆಡ್ ಮಿನಿಷ್ಟರ್ ಡಾ. ನರೋತ್ತಮ್ ಮಿಶ್ರಾ ಅವರೇ, ನಿಮಗೆ ಒಂದಿಷ್ಟು ಪ್ರಶ್ನೆಗಳಿವೆ. ದೀಪಿಕಾ ಧರಿಸಿದ ಬಟ್ಟೆಯ ಬಣ್ಣವನ್ನು ಬದಲಿಸಬೇಕು ಎಂದು ಹೇಳುವುದಕ್ಕೆ ಈ ಸ್ವತಂತ್ರ ದೇಶದಲ್ಲಿ ನಿಮಗೆ ಹಕ್ಕೇನಿದೆ..? ಮಾತ್ರವಲ್ಲ, ನೀವು ಹಾಡಿನ ಶೀರ್ಷಿಕೆ ಹಾಗೂ ಸಾಹಿತ್ಯವನ್ನು ಕೂಡ ಬದಲಾಯಿಸಬೇಕು ಎಂದು ಹೇಳಿದ್ದಲ್ಲದೇ, ಶಾರುಖ್ ಖಾನ್, ದೀಪಿಕಾ ಪಡುಕೋಣೆ ಕೇಸರಿ ಧಿರಿಸು ಧರಿಸಿರುವಾಗ ಹಸಿರು ಬಣ್ಣದ ಬಟ್ಟೆ ಧರಿಸಿದ್ದಾರೆ (ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಧಿರಿಸು ಧರಿಸಿರುವಾಗ ಖಾನ್ ಕಪ್ಪು ಬಟ್ಟೆ ಧರಿಸಿರುವುದನ್ನು ಗಮನಿಸಬಹುದು), ಇದರ ಉದ್ದೇಶವೇ ಬೇರೆ ಇದೆ ಎಂಬ ಅರ್ಥದಲ್ಲಿ ಮಾತನಾಡಿದ್ದೀರಿ, ಇದು ನಿಮಗೆ ಸಮಾಜದ ಮತ್ತು ಪ್ರಜಾಪ್ರಭುತ್ವದ ಸ್ವಾಸ್ಥ್ಯ ಕೆಡಿಸಬಲ್ಲ ಹೇಳಿಕೆ ಎಂದು ಅನ್ನಿಸುವುದಿಲ್ಲವೇ ? ಬಾಬಿ(೧೯೭೩) (ಆಗಿನ್ನು ನೀವು ೧೩ ವರ್ಷದ ಬಾಲಕ) ಸಿನೆಮಾದಲ್ಲಿ ನಟಿ ಡಿಂಪಲ್ ಕಪಾಡಿಯಾ ಧರಿಸಿದ ಬಿಕಿನಿ ಕೇಸರಿಯದ್ದಲ್ಲವೇ..? ಗಲೆ ಲಗ್ ಜಾ ಹಾಡಿನಲ್ಲಿ ಕತ್ರಿನಾ ಕೈಫ್ ಕೇಸರಿ ಧಿರಿಸು ಧರಿಸಿರುವಾಗ ಅಕ್ಷಯ್ ಕುಮಾರ್ ಆಕೆಯ ಮೈತುಂಬಾ ಕೈ ಓಡಿಸುವಾಗ ನಿಮಗೆ ಅದು ಅಶ್ಲೀಲವೆಂದು ಅನ್ನಿಸಲಿಲ್ಲವೇ..? ಅನುಷ್ಕಾ ಶರ್ಮಾ, ಪ್ರಿಯಾಂಕ ಚೋಪ್ರಾ, ಆಲಿಯಾ ಭಟ್, ಜಾನ್ಹವಿ ಕಪೂರ್, ಸರಾ ಅಲಿ ಖಾನ್, ಅನನ್ಯಾ ಪಾಂಡೆ, ಮಲೈಕಾ ಅರೋರಾ, ರಕುಲ್ ಪ್ರೀತ್ ಸಿಂಗ್ ಮೊದಲಾದವರು ಕೇಸರಿ ಬಿಕನಿ ಧರಿಸಿದ್ದು(ಅವರವರ ಆಯ್ಕೆಯ ಸ್ವಾತಂತ್ರ್ಯಕ್ಕೆ) ನಿಮ್ಮ ಕಣ್ಣಿಗೆ ಬಿದ್ದಿಲ್ವೇ..? ನಿಮಗೆ ಆಗ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರಲಿಲ್ವಾ..? ದೀಪಿಕಾ ಮೇಲೆ ನಿಮಗೆ ವೈಯಕ್ತಿಕ ದ್ವೇಷವೇ? ‘ಬೇಷರಂ’ ಎಂಬ ಪದ ಒಂದು ನಿರ್ದಿಷ್ಟ ಬಣ್ಣಕ್ಕೆ ಸೇರಿದ್ದೆ..? ಇವೆಲ್ಲಾ ನಿಮ್ಮ ಬಣ್ಣದ ಮೇಲಿನ ರಾಜಕೀಯನಾ.? ನಿಮ್ಮ ಇಂತಹ ವಿವಾದಾತ್ಮಕ ಹೇಳಿಕೆಗಳಿಂದ ಸಾರ್ವಜನಿಕ ವಲಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಒಬ್ಬ ರಾಷ್ಟ್ರೀಯ ಪಕ್ಷದ ಸದಸ್ಯನಾಗಿ ಈಗಲೂ ಅನ್ನಿಸುತ್ತಿಲ್ಲವೇ..? ಒಂದು ವೇಳೆ ದೀಪಿಕಾ ಹಸಿರು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರೇ ? ಕೇಸರಿ ಬಣ್ಣದ ಮೇಲೆ ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಹಕ್ಕುಸ್ವಾಮ್ಯವಿದೆಯೆ? ಕೇಸರಿ ಖಾವಿ ತೊಟ್ಟು ಅನಾಚಾರವೆಸಗಿದ, ಯಾರದ್ದೋ ಮನೆಯ ಹೆಣ್ಣು ಮಕ್ಕಳ ಅಂಗಾಂಗಳನ್ನು ತನ್ನ ಕಾಮ ತೃಷೆಗೆ ಬಳ್ಳಸಿಕೊಂಡ ಕಳ್ಳ ಸನ್ಯಾಸಿಗಳ ವಿರುದ್ಧ ಯಾಕೆ ನೀವು ಧ್ವನಿ ತೆಗೆಯುವುದಿಲ್ಲ? ನಿಮಗೆ ಎಲ್ಲಿ ನೋಡಿದರೂ ನಿಮ್ಮ ಪಕ್ಷದ ‘ಕೇಸರಿ ಸಿದ್ಧಾಂತ’ವೇ ಕಾಣಿಸುತ್ತದೆ ಎಂದರೇ ನೀವು ದೃಷ್ಟಿಯನ್ನು ಬದಲಾಯಿಸಿಕೊಳ್ಳಬೇಕಾಗುವುದು ತುರ್ತಿದೆ. 

ಹೌದು, ಮಾತಾಡಿದ್ದೆಲ್ಲವನ್ನೂ, ನಡೆದಿದ್ದೆಲ್ಲವನ್ನು ಧಾರ್ಮಿಕ ವಿಚಾರಗಳಿಗೆ ಅಂಟಿಸುವ ರಾಜಕೀಯದ ವಾತಾವರಣದಲ್ಲಿ ಎಲ್ಲವನ್ನು ತಿರುಚುವುದಕ್ಕೆ ಸಾದ್ಯವಿದೆ. ಸತ್ಯವನ್ನು ಸುಳ್ಳು ಮಾಡುವುದಕ್ಕೆ ಸುಳ್ಳನ್ನು ಸತ್ಯ ಮಾಡುವುದಕ್ಕೆ ಈ ಅಸ್ತç ಅತ್ಯಂತ ಉಪಯುಕ್ತ. ಇದೇ ಅಸ್ತವನ್ನು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಮೈಲೇಜ್ ವೃದ್ಧಿಸಿಕೊಳ್ಳುವುದಕ್ಕೆ ಬಳಸಿಕೊಂಡಿರುವುದನ್ನು ಪದಶಃ ಈ ದೇಶ ಕಂಡಿದೆ. ಇಷ್ಟಾದ ಮೇಲೂ ಈ ದೇಶದ ಒಂದು ವರ್ಗ ಎಲ್ಲವನ್ನೂ ಸ್ವಂತ ಯೋಚನೆಯಿಲ್ಲದೇ ಕುರುಡಾಗಿ ನಂಬುತ್ತಿರುವುದು ವಿಷಾದನೀಯ. ಒಂದಂತೂ ಸತ್ಯ. ನೀವು ಏನೇ ಮಾಡಿ, ಆಕೆ ನಿಮ್ಮ ಟೀಕೆಗಳ ನಡುವೆಯೇ ಫಿಫಾ ಫುಟ್ ಬಾಲ್ ವಿಶ್ವ ಕಪ್ ೨೦೨೨ರ ಪ್ರಶಸ್ತಿ ಫಲಕವನ್ನು ಅನಾವರಣ ಮಾಡಿ ಬಂದಿದ್ದಾಳೆ. ಇದು ಆಕೆ ಏರಿದ ಎತ್ತರದ ಗುರುತು.  



(Deepika Padukone, former Spanish goalkeeper Iker Casillas unveil the FIFA World Cup trophy -2022)

ಭಗವದ್ವಜ ಹಿಂದೂ ಧರ್ಮದ ಭಕ್ತಿ ಸಂಕೇತ. ಅದಕ್ಕೆ ಅದರದ್ದೇ ಆದ ಗೌರವವಿದೆ. ವೈದಿಕವಾಗಿ ಅದರದ್ದೇ ಆದ ಮಹತ್ವವಿದೆ. ಭಗವದ್ವಜಕ್ಕೆ ಅದರದ್ದೇ ಆದ ಆಯಕಟ್ಟಿದೆ. ಅದು ಆ ಆಯಕಟ್ಟಿನಲ್ಲಿಯೇ ತಯಾರಾಗಬೇಕು. ಅದಕ್ಕೆ ಇಡೀ ಭಾರತ ಗೌರವ ಸಲ್ಲಿಸುತ್ತದೆ. ಭಗವದ್ವಜ ಕೇಸರಿ ಬಣ್ಣದಲ್ಲಿದೆ ಎಂಬ ಕಾರಣಕ್ಕೆ ಬೇರೆ ಯಾವುದಕ್ಕೂ ಕೇಸರಿಯನ್ನು ಬಳಸಬಾರದೆಂಬ ಯಾವ ನಿಯಮಗಳಿಲ್ಲ. ಪ್ರತಿಯೊಂದಕ್ಕೂ ರಾಜಕೀಯ, ಧಾರ್ಮಿಕ ಬಣ್ಣ ಹಚ್ಚುವುದನ್ನು ನಿಲ್ಲಿಸಬೇಕಿದೆ. ನಿಮ್ಮ ಗಮನಕ್ಕಿರಲಿ.., ಮಂಜಿನ ಪ್ರದೇಶಗಳಲ್ಲಿ ಕೇಸರಿ ಬಣ್ಣದ ಸೋಡಿಯಂ ವೆಪರ್ ಲ್ಯಾಂಪ್‌ಗಳನ್ನು ಬಳಸಲಾಗುತ್ತದೆ, ರಾತ್ರಿ ಹೊತ್ತಿನಲ್ಲಿ ಟ್ರಾಫಿಕ್ ಬ್ಲಿಂರ‍್ಸ್ ಆಗಿ ಬಳಸುವುದು ಹಳದಿ ಮಿಶ್ರಿತ ಕೆಂಪು ಬಣ್ಣ(ಆಂಬರ್), ರೆಸ್ಕ್ಯೂ ಸಿಗ್ನಲ್ ಆಗಿ ಬಳಸುವುದು ಕೇಸರಿ ಬಣ್ಣದ ಹೊಗೆಯನ್ನು, ಲೈಫ್ ಜಾಕೇಟ್ ಬಣ್ಣವು ಸಾಮಾನ್ಯವಾಗಿ ಕೇಸರಿ ಬಣ್ಣದಲ್ಲಿಯೇ ಇರುತ್ತವೆ. ಪಬ್ ಬಾರ್ ಪಾರ್ಟಿಗಳಲ್ಲಿ ಆಕರ್ಷಕ ಬಣ್ಣ ಎಂಬ ಕಾರಣಕ್ಕೆ ಹೆಚ್ಚಾಗಿ ಕೇಸರಿ ಬಣ್ಣದ ಲೇಸರ್ ಲೈಟ್‌ಗಳನ್ನು ಬಳಸಲಾಗುತ್ತದೆ. ಕೇಸರಿ ಬಣ್ಣದಲ್ಲಿ ವಿಧವಿಧದ ಬಟ್ಟೆಗಳು ಈ ಹಿಂದೆಯೂ ಬಂದಿವೆ. ಹಾಗಾದರೇ, ಇವೆಲ್ಲಾ ಭಗವದ್ವಜಕ್ಕೆ ಮಾಡಿದ ಅವಮಾನವೇ? ಖಂಡಿತ ಅಲ್ಲ. ನೋಡುವ ದೃಷ್ಟಿ ಬದಲಾಗಬೇಕಷ್ಟೇ. 

-ಶ್ರೀರಾಜ್ ವಕ್ವಾಡಿ