ಅದಾನಿ ಹಿಂದೆ ಯಾರ ಕೃಪಾಶೀರ್ವಾದ .? । ಅಂಕಿಅಂಶಗಳ ಆಚೆಗಿನ ಸತ್ಯ.. !
ಅದಾನಿ ಗ್ರೂಪ್ ಆಫ್ ಕಂಪೆನಿ ಹಿಂಡನ್ ಬರ್ಗ್ ರೀಸರ್ಚ್ ಸಂಸ್ಥೆಯ ವಿರುದ್ಧ ತಯಾರಿಸಿದ ೪೧೩ ಪುಟಗಳ ವರದಿಯಲ್ಲಿ ʼಇದು ಭಾರತದ ಮೇಲೆ ನಡೆಸಿದ ದಾಳಿʼ ಎಂದು ಹೇಳಿದ್ದಕ್ಕೆ ಹಿಂಡನ್ ಬರ್ಗ್ ರೀಸರ್ಚ್ ಸಂಸ್ಥೆಯು ತಿರುಗೇಟು ನೀಡಿದ್ದು, ವಂಚನೆಯನ್ನು ʼರಾಷ್ಟ್ರೀಯತೆಯ ಹೆಸರಿನಲ್ಲಿ ಮುಚ್ಚಿಹಾಕುವುದಕ್ಕೆ ಸಾಧ್ಯವಿಲ್ಲʼ ಎಂದು ಮುಖಕ್ಕೆ ರಾಚುವಂತೆ ಹೇಳಿದೆ.
ಜಾಗತಿಕ ವಹಿವಾಟಿನ ವಿಚಾರದಲ್ಲಿ ತೀವ್ರ ಮುಖಭಂಗ ಅನುಭವಿಸಿದ ಅದಾನಿ ಸಂಸ್ಥೆ ಈಗ ಆರೋಪಗಳಿಂದ ಹೊರಬರುವುದಕ್ಕೆ ಮತ್ತೆ ನಿರೀಕ್ಷೆಯಂತೆ ತನ್ನ ರಾಷ್ಟ್ರೀಯತೆಯ ಅಸ್ತ್ರವನ್ನು ಮುಂದಿಟ್ಟಿದೆ. ಈ ನಡುವೆ ಅದಾನಿಯಂತಹ ಒಬ್ಬ ಉದ್ಯಮಿ, ದೇಶದ ಮತ್ತು ಜಗತ್ತಿನ ಅತ್ಯಂತ ಪ್ರಬಲ ಉದ್ಯಮಿಯಾಗಿ, ಇಂತಹ ಒಂದು ವಹಿವಾಟನ್ನು ನಿರ್ವಹಿಸುವುದಕ್ಕೆ ಸಾಧ್ಯವಾಗದೆ ಸೋತಿದ್ದು ಎಲ್ಲಿ..? ಮತ್ತು ಇಂತಹದ್ದೊಂದು ವಂಚನೆಯ ಆರೋಪವನ್ನು ಎದುರಿಸುತ್ತಾರೆ ಎನ್ನುವುದಾದರೇ ಏನೆಂಬುವುದು ಸದ್ಯಕ್ಕೆ ದೇಶದ ಮುಂದೆ ಇರುವ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ವಂಚನೆ, ಮನಿ ಲಾಂಡರಿಂಗ್ ಹಗರಣ, ಸೆಬಿ ನಿಯಮಗಳ ಉಲ್ಲಂಘನೆ, ತೆರಿಕೆ ಡಾಲರ್ ಕಳ್ಳತನ, ನಕಲಿ ಹಾಗೂ ಕಾನೂನು ಬಾಹೀರ ವಹಿವಾಟು ಮತ್ತು ಲಿಸ್ಟಡ್ ಕಂಪೆನಿಗಳಿಂದ ಹಣವನ್ನು ಪಡೆಯುವುದಕ್ಕೆ ಪ್ರಯತ್ನ, ನಕಲಿ ಆಪದು/ರಫ್ತು ದಾಖಲೆಗಳು, ಸ್ಟಾಕ್ ಮ್ಯಾನಿಪುಲೇಶನ್ಗಳನ್ನು ಉಲ್ಲೇಖಿಸಿ ಅದಾನಿ ಸಮೂಹದ ಮೇಲೆ ಹೊರಿಸಿದ ಆರೋಪವನ್ನು ಸಮರ್ಥಿಸಿಕೊಳ್ಳುತ್ತಿರುವ ಹಿಂಡನ್ ಬರ್ಗ್, ಕಾನೂನು ಹೋರಾಟಕ್ಕೂ ಸೈ ಎಂದು ಸವಾಲೆಸೆದಿದೆ.
ಅದಾನಿ ಸಂಸ್ಥೆ ಮಾಡಲಾಗಿದೆ ಎಂಬ ಹಿಂಡನ್ ಬರ್ಗ್ ಸಂಸ್ಥೆ ಸಲ್ಲಿಸಿದ ವರದಿ ಈಗ ಭಾರತೀಯ ರಾಜಕೀಯ ವಲಯದಲ್ಲಿ ಒಂದಿಷ್ಟು ಚರ್ಚೆಗೆ ಕಾರಣವಾಗಿದ್ದು, ಈ ವಿಷಯ ಕಾಂಗ್ರೆಸ್ ಸೇರಿ ಇತರ ವಿರೋಧ ಪಕ್ಷಗಳಿಗೆ ಒಂದು ರಾಜಕೀಯ ದಾಳ ಸಿಕ್ಕಂತಾಗಿದೆ.
ಇದೊಂದು ಸಂದಿಗ್ಧ ಪರಿಸ್ಥಿತಿ : ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್ನ ಮೂಲದವರಾದ ಗೌತಮ್ ಅದಾನಿ, ಭಾರತದ ಪ್ರಮುಖ ಬಂಧರುಗಳು, ವಿಮಾನ ನಿಲ್ದಾಣಗಳು, ರಾಷ್ಟ್ರೀಯ ಹೆದ್ದಾರಿಗಳು, ಡೇಟಾ ಸೆಂಟರ್ಗಳು, ಧಾನ್ಯ ಸಂಗ್ರಹಣೆ ಸಿಲೋಸ್ ಹಾಗೂ ಸೋಲಾರ್ ಫಾರ್ಮ್ಗಳಿಗೆ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದಾರೆ. ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿಯಾದಾಗಿನಿಂದ ಅದಾನಿ ಮೋದಿ ಆಪ್ತ ಬಳಗದಲ್ಲಿದ್ದರು ಎಂಬುವುದು ಕೂಡ ಸತ್ಯ. ಇನ್ನು, ೨೦೧೪ರ ನಂತರದ ದಿನಗಳಲ್ಲಿ ಮೋದಿ ನೇತೃತ್ವದ ಸರ್ಕಾರದ ಕಾರ್ಪೋರೇಟಿಕರಣ ಪಾಲಿಸಿಯಲ್ಲಿ ಸರ್ಕಾರದ ಸ್ವಾಮ್ಯದಲ್ಲಿದ್ದ ಸಂಸ್ಥೆಗಳನ್ನು ಅದಾನಿಯಂತಹ ಬಹು ಬಂಡವಾಳ ಹೂಡಿಕೆದಾರರಿಗೆ ಮಾರಿದ್ದು ಈ ದೇಶದ ದುರಂತಗಳಲ್ಲೊಂದು. ಇಂತಹ ಸಂಸ್ಥೆಗಳ ನಿರ್ವಹಣೆ ಮಾಡುವುದು ಸರ್ಕಾರದ ಕೆಲಸವಲ್ಲ, ಅದು ಉದ್ಯಮ ಸಂಸ್ಥೆಗಳ ಕೆಲಸ, ಸರ್ಕಾರಕ್ಕಿಂತ ಉದ್ಯಮ ಸಂಸ್ಥೆಗಳು ಚೆನ್ನಾಗಿ ನಿರ್ವಹಿಸುತ್ತವೆ ಎಂದು ಮೋದಿ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳಿಗೆ ಮಾರಾಟ ಮಾಡಿದ್ದನ್ನು ಈ ದೇಶ ಕಂಡು ಕಣ್ತುಂಬಿಸಿಕೊಂಡಿರುವುದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ. ಹಿಂಡನ್ ಬರ್ಗ್ ಸಂಸ್ಥೆ ಅದಾನಿ ಸಮೂಹದ ವಿರುದ್ಧ ಸಲ್ಲಿಸಿದ ಆರೋಪ ವರದಿ ಸಾಬೀತಾದರೇ, ಅದಕ್ಕೆ ಮೋದಿ ಕೃಪಾಶಿರ್ವಾದವೂ ಇದೆ ಎನ್ನುವುದು ಕೂಡ ಬಟ್ಟಬಯಲಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ಇದು ರಾಜಕೀಯವಾಗಿಯೂ ಒಂದು ಚರ್ಚೆಯಾಗಿರುವುದರಿಂದ ವಿರೋಧ ಪಕ್ಷಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಅನಿವಾರ್ಯತೆಯೂ ಮೋದಿ ಸರ್ಕಾರಕ್ಕಿದೆ. ಇದಕ್ಕಾಗಿ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ತನ್ನ ಆರ್ಥಿಕ ತಂತ್ರವನ್ನು ಮರುಪರಿಶೀಲಿಸಬೇಕಾಗುತ್ತದೆ. ಷೇರು ಪ್ರಸ್ತಾಪವು ವಿಫಲವಾದರೇ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮತ್ತು ಜೀವ ವಿಮೆದಾರ ಸಂಸ್ಥೆಗಳಲ್ಲಿ ಹೆಚ್ಚು ಹತೋಟಿ ಹೊಂದಿರುವ ಅದಾನಿ ಸಂಸ್ಥೆಯ ಸಾಲದಿಂದ ಉಂಟಾಗುವ ಮುಂದಿನ ಗತಿ ಏನು ಎಂಬುದರ ಬಗ್ಗೆ ಸಾರ್ವಜನಿಕ ಆತಂಕ ಸೃಷ್ಟಿ ಆಗಿದೆ.
ಇದು ಅಕ್ಷರಶಃ ಸುಳ್ಳಲ್ಲ. ಸರ್ಕಾರದ ಸ್ವಾಮ್ಯದಲ್ಲಿದ್ದ ಬಂದರುಗಳು, ವಿಮಾನ ನಿಲ್ದಾಣಗಳು, ರಸ್ತೆಗಳು ವಿದ್ಯುತ್ ಘಟಕಗಳಿಗೆ ಅದಾನಿ ಗ್ರೂಪ್ ಹೂಡಿಕೆ ಮಾಡಿದೆ. ಆದರೇ ಈಗ ಇಂತಹದ್ದೊಂದು ಜಾಗತಿಕ ಮಟ್ಟದ ಆರೋಪ ಅದಾನಿ ಸಮೂಹದ ಮೇಲೆ ಕೇಳಿ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಆರ್ಥಿಕ ಕನಸುಗಳಿಗೆ ಬ್ರೇಕ್ ಬಿದ್ದಂತಾಗಿದೆ. ಅದಾನಿ ಸಾಮ್ರಾಜ್ಯದ ಆಧಾರವಾಗಿರುವ ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ಸಾಲದ ಸುಳಿಯಲ್ಲಿ ಸಿಲುಕಿದೆ. ಇಂತಹ ಒಂದು ದೊಡ್ಡ ಆರೋಪವನ್ನು ಎದುರಿಸುತ್ತಿರುವ ಅದಾನಿ ಸಮೂಹ, ಹೇಳಿದ್ದನ್ನು ಮಾಡಿ ಪೂರೈಸುವುದಕ್ಕೆ ಸಾಧ್ಯವಿದೆಯೇ..? ಅದು ಖಂಡಿತ ಅಷ್ಟು ಸುಲಭ ಸಾಧ್ಯವಿಲ್ಲ. ಈಗ ಭಾರತೀಯರ ನಿಜವಾದ ಭಯ ಬೇರೆಯೇ ಇದೆ. ಗೌತಮ್ ಅದಾನಿ ಹಾಗೂ ಅವರ ನೇತೃತ್ವದ ಕಂಪನಿಗಳು ತಾನು ಹೇಳಿದ್ದನ್ನು ಖಂಡಿತವಾಗಿ ಸೃಳವಾಗಿ ಮಾಡುವುದಕ್ಕೆ ಸಾಧ್ಯವಿಲ್ಲ. ಇಂತಹದ್ದೊಂದು ವಂಚನೆಯ ಆರೋಪ ಎದರುರಿಸುತ್ತರುವ ಅದಾನಿ, ಭರವಸೆ ನೀಡಿದ ರಸ್ತೆಗಳನ್ನು ನಿರ್ಮಿಸಬಹುದೇ..? ಅವರಿಗೆ ಹೂಡಿಕೆಗೆ ಮಾರಲಾದ ಬಂದರುಗಳು ಸುಧಾರಣೆಯಾಗಬಹುದೇ ? ಬಿಡ್ನಲ್ಲಿ ಗೆದ್ದ ವಿಮಾನ ನಿಲ್ದಾಣಗಳ ಗತಿ ಏನು ?. ಎಲ್ಲದಕ್ಕಿಂಥ ಮಿಗಿಲಾಗಿ ಭಾರತದ ಅಭಿವೃದ್ಧಿಯಲ್ಲಿ ಬಹು ವಲಯಗಳ ಹೂಡಿಕೆ ಪಾಲುದಾರಿಕೆಗೆ ಮೋದಿ ಸರ್ಕಾರದ ಮೊದಲ ಆಯ್ಕೆ ಅದಾನಿ ಸಮೂಹವಾಗಿತ್ತು ಎನ್ನುವುದು ಇಲ್ಲಿ ಗಮನಾರ್ಹ ವಿಷಯ.
ಈ ಮಹತ್ವಕಾಂಕ್ಷೆಗಳ ಸೇವೆಗಾಗಿ ಅಥವಾ ಅಭಿವೃದ್ಧಿಗಾಗಿ ಅದಾನಿ ಗ್ರೂಪ್ ಹೇಗೆ ಈ ಏಲ್ಲಾ ವಂಚನೆ ಆರೋಪಗಳಿಂದ ಹೊರಬರಲಿದೆ ಎಂಬುವುದು ದೇಶದ ಚಿಂತೆಯಲ್ಲ. ಆದಾಗ್ಯೂ ಅನುಷ್ಟಾನ ಸಾಮರ್ಥ್ಯದ ಕೊರತೆ ದೇಶಕ್ಕಿದೆ. ಇದನ್ನೇ ಅದಾನಿ ಕಂಪೆನಿಗಳು ಪೂರೈಸುವ ಭರವಸೆ ನೀಡಿತ್ತು. ಆದರೇ, ಇಂತಹ ವಂಚನೆ ಆರೋಪ ಎದುರಿಸುತ್ತಿರುವ ಸಂದರ್ಭದಲ್ಲಿ ಅದಾನಿ ಗ್ರೂಪ್ಗೆ ಹೂಡಿಕೆಯ ಆಧಾರದಲ್ಲಿ ಮಾರಿದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಗತಿ ಏನು..? ಇದಕ್ಕೆ ಹೊಣೆಗಾರರು ಯಾರು..? ಸರ್ಕಾರದ ಪಾತ್ರವೇನು.? ಇಂತೆಲ್ಲಾ ಪ್ರಶ್ನೆಗಳು ಸಾರ್ವಜನಿಕ ವಲಯವನ್ನು ಕಾಡುತ್ತಿವೆ.
ಭಾರತವನ್ನು ಲೂಟಿ ಮಾಡುತ್ತಿದೆಯೇ ಅದಾನಿ ಸಮೂಹ ? : ಅದಾನಿ ಗ್ರೂಪ್ನ ಮೇಲೆ ಗಂಭೀರವಾದ ವಂಚನೆಯ ಆರೋಪ ಮಾಡಿರುವ ಹಿಂಡನ್ ಬರ್ಗ್ ಸಂಸ್ಥೆ, ಅದಾನಿ ಭಾರತದ ಅಭಿವೃದ್ಧಿಗೆ ಮಾರಕ ಎಂದು ಹೇಳಿದ್ದು, ಹುಬ್ಬೇರಿಸುವಂತೆ ಮಾಡಿದೆ. ಮಾತ್ರವಲ್ಲದೇ, ಅದಾನಿ ಸಮೂಹ ವ್ಯವಸ್ಥಿತವಾಗಿ ಭಾರತವನ್ನು ಲೂಟಿ ಮಾಡುತ್ತಿದೆ ಎಂಬುವುದನ್ನೂ ಕೂಡ ಹೇಳಿದೆ. ಭಾರತದ ಯಶಸ್ಸನ್ನು ಬಳಸಿಕೊಂಡೇ ಯೋಜಿತವಾಗಿ ಅದಾನಿ ಸಂಸ್ಥೆ ದೇಶವನ್ನು ಲೂಟಿ ಮಾಡಿ ತಿಂದು ತೇಗುತ್ತಿದೆ. ಅದಾನಿ ಗ್ರೂಪ್ನಿಂದಾಗಿ ಭಾರತದ ಭವಿಷ್ಯಕ್ಕೆ ತೊಡಕಾಗಲಿದೆ ಎಂದು ಆರೋಪಿಸಿದೆ.
ಇನ್ನು, ರಾಜಕೀಯ ಆರ್ಥಿಕತೆಯನ್ನು ಹೇಗೆ ಅರ್ಥೈಸಿಕೊಳ್ಳುವುದು ಎಂಬುವುದು ಇನ್ನೂ ಭಾರತದಲ್ಲಿ ನಿರ್ಣಾಯಕ ಪ್ರಶ್ನೆಗಳಲ್ಲಿ ಒಂದಾಗಿದೆ. ಮತ್ತು ಅದಾನಿ ಮೇಲಿನ ಗಂಭೀರ ಆರೋಪದ ಪರಿಣಾಮ ಏನು ? ಮತ್ತು ಯಾವ ಸತ್ಯಾಂಶ ಹೊರತರಲಿದೆ ಎನ್ನುವುದು ಸದ್ಯದ ಕುತೂಹಲ.
ಹಿಂದಿನ ಸರ್ಕಾರದಲ್ಲಿ ಇದ್ದ ಭ್ರಷ್ಟಾಚಾರವನ್ನು ಕಿತ್ತೊಗೆಯುವುದಾಗಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈಗ ಮೋದಿ ಆಪ್ತ ಉದ್ಯಮಿ ಇಂತಹದ್ದೊಂದು ದೊಡ್ಡ ವಂಚನೆ ಆರೋಪದಲ್ಲಿ ಸಿಕ್ಕಿರುವುದು ಸಹಜವಾಗಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿವೆ.
ಬಹು ಬಂಡವಾಳ ಸಂಸ್ಥೆಗಳ ಕಾರಣದಿಂದಾಗಿ ದೇಶದ ಸಮಗ್ರ ಆರ್ಥಿಕ ಪ್ರಗತಿಕೆ ಸಹಾಯವಾಗಲಿದೆ ಎಂಬ ಒಂದು ಅನಿಸಿಕೆ ಅಥವಾ ವಾದ ಇದೆ. ಆದರೇ, ಸರ್ಕಾರಿ ಸ್ವಾಮ್ಯದಲ್ಲಿರುವ ಘಟಕಗಳು ಇಂತಹ ಬಹು ಬಂಡಳವಾಳಶಾಹಿ ಅಥವಾ ವಸಾಹುತುಶಾಹಿ ಅಧಿಕಾರದ ಅಡಿಯಲ್ಲಿ ನಿರ್ವಹಣೆಗೆ ಒಳಪಟ್ಟರೇ, ದೇಶದ ನಾಗರಿಕರ ಗತಿ ಏನು? ಈ ವಂಚನೆ ಸತ್ಯವಾಗಿದ್ದರೇ, ಇದು ಭಾರತೀಯ ಹಣಕಾಸು ವಹಿವಾಟಿಗೆ ಎಷ್ಟೊಂದು ಅಪಾಯವಿದೆ ಎನ್ನುವುದು ಆಶ್ಚರ್ಯದ ಸಂಗತಿ. ಇದು ಕೇವಲ ಸತ್ಯ ಹಾಗೂ ಅಂಕಿ ಅಂಶಗಳ ವಿಷಯವಲ್ಲ. ಇದು ಒಟ್ಟಾರೆಯ ಅಪಾಯದ ವಿಷಯ ಎನ್ನುವುದು ಗಮನಾರ್ಹ.
ಮುಂದೆ ಏನಾಗಲಿದೆ ಎಂಬುವುದು ನಮಗೆ ತಿಳಿದಿಲ್ಲ. ಅದಾನಿ ಸಮೂಹದ ಮೇಲೆ ಹಿಂಡನ್ ಬರ್ಗ್ ಸಂಸ್ಥೆ ಮಾಡಿದ ವಂಚನೆಯ ಆರೋಪದ ಬಗ್ಗೆ ಅಷ್ಟೇ ಗೊತ್ತು. ಒಂದು ವರದಿಯಿಂದ ದೇಶದ ಬಿಲಿಯನೆರ್ ಒಬ್ಬ ಆರ್ಥಿಕ ಹೊಡೆತಕ್ಕೊಳಗಾಗಿದ್ದಾನೆ. ದೇಶದ ಸರ್ಕಾರದ ಅಧೀನದಲ್ಲಿದ್ದ ರೈಲು, ವಿಮಾನ ನಿಲ್ದಾಣಗಳು, ರಸ್ತೆಗಳು, ಬಂಧರುಗಳು ಆತನ ಹೂಡಿಕೆಯಲ್ಲಿವೆ. ಅವುಗಳ ಭವಿಷ್ಯವೇನು ? ದೆಹಲಿ ರಾಜಕಾರಣ ಅದಾನಿಗೆ ನಿಷ್ಠತೆ ತೋರುತ್ತದೆಯೆ? ವಿರೋಧ ಪಕ್ಷಗಳು ಸಿಕ್ಕ ಈ ವಿಷಯವನ್ನು ರಾಜಕೀಯ ದಾಳವಾಗಿ ಹೇಗೆ ಬಳಸಿಕೊಳ್ಳಲಿವೆ ? ಮೋದಿ ಪಾತ್ರವೇನು ? ರಾಜಕೀಯ ಒಳಜಗಳಗಳು ಹೇಗಿರಲಿವೆ..? ಇವೆಲ್ಲವೂ ಸದ್ಯದ ಪ್ರಶ್ನೆಗಳು.
-ಶ್ರೀರಾಜ್ ವಕ್ವಾಡಿ

No comments:
Post a Comment