Tuesday, August 4, 2026

ಸಿಜೆಪಿ : ಕೋರ್ ಕಮಿಟಿ ಮೀಟಿಂಗ್ : ಆರೋಪಗಳಿಂದ ಮುಕ್ತ !?

ಸಿಜೆಪಿ ಆಗಸ್ಟ್‌ 5ಕ್ಕೆ ಕೋರ್‌ ಕಮಿಟಿ ಸಭೆ ಕರೆದಿದೆ. ಆಗಸ್ಟ್ 5ರಂದು ನಡೆಯಲಿರುವ ಕಾಕ್ರೋಚ್ ಜನತಾ ಪಾರ್ಟಿಯ ಕೋರ್ ಕಮಿಟಿ ಸಭೆ ಕೇವಲ ಸಂಘಟನೆಯ ಮುಂದಿನ ಕಾರ್ಯತಂತ್ರವನ್ನು ನಿರ್ಧರಿಸುವ ಸಭೆಯಲ್ಲ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದು ಸಂಘಟನೆಯ ವಿಶ್ವಾಸಾರ್ಹತೆ, ರಾಜಕೀಯ ನೈತಿಕತೆ ಮತ್ತು ಸಾರ್ವಜನಿಕ ಸ್ವೀಕಾರಾರ್ಹತೆಯನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಿದೆ. 

ನೀಟ್ ಅಕ್ರಮದ ವಿರುದ್ಧ ದೇಶವ್ಯಾಪಿ ವಿದ್ಯಾರ್ಥಿ ಆಕ್ರೋಶಕ್ಕೆ ಧ್ವನಿಯಾಗಿ ಹೊರಹೊಮ್ಮಿದ್ದ ಈ ಯುವಕರ ಸಂಘಟನೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ಪ್ರಮುಖ ಒತ್ತಡದ ಶಕ್ತಿಗಳಲ್ಲಿ ಒಂದೆನ್ನುವುದರಲ್ಲಿ ಅನುಮಾನವೇ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿನ ಅಕ್ರಮಗಳ ವಿರುದ್ಧ ನಿರಂತರ ಹೋರಾಟ ನಡೆಸಿದ ಕಾರಣ ಸಂಘಟನೆಗೆ ಯುವಜನರಲ್ಲಿ ಗಮನಾರ್ಹ ಬೆಂಬಲವೂ ದೊರಕಿದೆ. ಆದರೆ, ಹೋರಾಟದ ಯಶಸ್ಸಿನೊಂದಿಗೆ ಸಂಘಟನೆಯ ಮೇಲೆ ಕೆಲವು ಗಂಭೀರ ಆರೋಪಗಳೂ ಕೇಳಿಬರುತ್ತಿವೆ. ಯಾವುದೇ ಜನಾಂದೋಲನ ಬೆಳೆಯುತ್ತಿದ್ದಂತೆ ಅದರ ಉದ್ದೇಶ, ಹಣಕಾಸಿನ ಪಾರದರ್ಶಕತೆ, ಸಂಘಟನೆಯ ಕಾರ್ಯವೈಖರಿ ಹಾಗೂ ಕೆಲವು ಸದಸ್ಯರ ನಡೆ-ನುಡಿಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸುವುದು ಹೊಸದೇನಲ್ಲ. ಇಂತಹ ಸಂದರ್ಭಗಳಲ್ಲಿ ಸಂಘಟನೆಯ ಭವಿಷ್ಯ ಅದರ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಸಿಜೆಪಿ ಆರೋಪಗಳಿಂದ ಹೊರಬರಲು ಏನು ಮಾಡಬೇಕು? ಮೊದಲನೆಯದ್ದು ಪಾರದರ್ಶಕತೆ ಪ್ರದರ್ಶಿಸಬೇಕು.

ಸಂಘಟನೆಯ ವಿರುದ್ಧ ಕೇಳಿಬರುವ ಆರೋಪಗಳ ಬಗ್ಗೆ ಮೌನ ವಹಿಸುವ ಬದಲು, ವಾಸ್ತವಾಂಶಗಳನ್ನು ಸಾರ್ವಜನಿಕವಾಗಿ ಮಂಡಿಸುವುದು ಅಗತ್ಯ. ದಾಖಲೆಗಳು, ಹಣಕಾಸಿನ ವಿವರಗಳು ಹಾಗೂ ಸಂಘಟನೆಯ ನಿರ್ಧಾರ ಪ್ರಕ್ರಿಯೆಯನ್ನು ಬಹಿರಂಗಪಡಿಸಿದರೆ ಅನುಮಾನಗಳಿಗೆ ಉತ್ತರ ಸಿಗಬಹುದು. ಎರಡನೇಯದ್ದು ಸ್ವತಂತ್ರ ತನಿಖೆಗೆ ಸಹಕರಿಸಬೇಕು. ಆರೋಪಗಳು ಕಾನೂನು ಅಥವಾ ಆಡಳಿತಾತ್ಮಕ ಸ್ವರೂಪದ್ದಾಗಿದ್ದರೆ, ಸ್ವತಂತ್ರ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದು ವಿಶ್ವಾಸ ಹೆಚ್ಚಿಸುವ ಕ್ರಮವಾಗುತ್ತದೆ. ಆರೋಪಗಳು ನಿರಾಧಾರವಾಗಿದ್ದರೆ, ತನಿಖೆಯ ಮೂಲಕವೇ ಅದನ್ನು ಸ್ಪಷ್ಟಪಡಿಸಬಹುದು. ಮೂರನೇಯದ್ದು, ಆಂತರಿಕ ಶಿಸ್ತು ಬಲಪಡಿಸಬೇಕು. ಯಾವುದೇ ಸಂಘಟನೆಯ ವಿಶ್ವಾಸಾರ್ಹತೆ ಅದರ ಆಂತರಿಕ ಶಿಸ್ತಿನ ಮೇಲೆ ನಿಂತಿರುತ್ತದೆ. ಸದಸ್ಯರ ವಿರುದ್ಧ ದೂರುಗಳಿದ್ದರೆ ನಿಷ್ಪಕ್ಷಪಾತ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವುದು ಸಂಘಟನೆಯ ನೈತಿಕ ಬದ್ಧತೆಯನ್ನು ತೋರಿಸುತ್ತದೆ. ನಾಲ್ಕನೇಯದ್ದು ವೈಯಕ್ತಿಕ ಪ್ರತಿಕ್ರಿಯೆಗಳ ಬದಲು ಸಂಸ್ಥೆಯ ಪ್ರತಿಕ್ರಿಯೆ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಅಥವಾ ಆಕ್ರೋಶಭರಿತ ಪ್ರತಿಕ್ರಿಯೆಗಳಿಗಿಂತ, ಅಧಿಕೃತ ಹೇಳಿಕೆಗಳು ಮತ್ತು ದಾಖಲೆ ಆಧಾರಿತ ಸ್ಪಷ್ಟೀಕರಣಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ. ಇನ್ನು, ಈ ಎಲ್ಲಾ ಬೆಳವಣಿಗೆಗಳ ಸುತ್ತ ಮಾಧ್ಯಮಗಳ ಪಾತ್ರವೇನು!? ಯಾವುದೇ ವಿವಾದಾತ್ಮಕ ವಿಷಯದಲ್ಲಿ ಮಾಧ್ಯಮಗಳು ಪ್ರಶ್ನೆಗಳನ್ನು ಕೇಳುವುದು ಸಹಜ. 

ಆದರೆ ಆರೋಪಗಳನ್ನು ಅಂತಿಮ ಸತ್ಯವೆಂದು ಬಿಂಬಿಸುವುದೂ ಸರಿಯಲ್ಲ; ಆರೋಪಗಳನ್ನು ಸಂಪೂರ್ಣ ನಿರ್ಲಕ್ಷಿಸುವುದೂ ಸರಿಯಲ್ಲ. ಪತ್ರಿಕೋದ್ಯಮದ ಮೂಲ ತತ್ವಗಳಾದ ವಾಸ್ತವ ಪರಿಶೀಲನೆ, ಎರಡೂ ಪಕ್ಷಗಳಿಗೆ ಸಮಾನ ಅವಕಾಶ ಮತ್ತು ಸಾಕ್ಷ್ಯಾಧಾರಿತ ವರದಿ ಈ ಸಂದರ್ಭದಲ್ಲಿ ಅತ್ಯಂತ ಮುಖ್ಯವಾಗುತ್ತದೆ. ಸಿಜೆಪಿಯ ಆಗಸ್ಟ್ 5ರ ಸಭೆಯ ಮಹತ್ವ ಪಡೆಯುವುದು ಹೇಗೆ ? ಕೋರ್ ಕಮಿಟಿ ಸಭೆಯಲ್ಲಿ ಸಂಘಟನೆ ಕೇವಲ ಮುಂದಿನ ಹೋರಾಟದ ರೂಪುರೇಷೆಗಳನ್ನಷ್ಟೇ ಅಲ್ಲ, ತನ್ನ ವಿರುದ್ಧ ಕೇಳಿಬರುವ ಆರೋಪಗಳಿಗೆ ಯಾವ ರೀತಿಯ ಅಧಿಕೃತ ಉತ್ತರ ನೀಡಬೇಕು ಎಂಬುದರ ಬಗ್ಗೆಯೂ ಸ್ಪಷ್ಟ ನಿರ್ಧಾರ ಕೈಗೊಂಡರೆ ಅದು ಸಂಘಟನೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಬಹುದು. ಯುವಜನ ಚಳವಳಿಗಳಿಗೆ ಸಾರ್ವಜನಿಕ ಬೆಂಬಲ ದೀರ್ಘಕಾಲ ಉಳಿಯಬೇಕಾದರೆ, ಹೋರಾಟದ ತೀವ್ರತೆಯಷ್ಟೇ ನೈತಿಕತೆ ಮತ್ತು ಪಾರದರ್ಶಕತೆಯೂ ಮುಖ್ಯ. ಆರೋಪಗಳಿಂದ ಮುಕ್ತರಾಗುವ ಅತ್ಯುತ್ತಮ ಮಾರ್ಗ ಭಾವನಾತ್ಮಕ ಪ್ರತಿಕ್ರಿಯೆಯಲ್ಲ; ವಾಸ್ತವಾಂಶ, ಪಾರದರ್ಶಕತೆ, ಕಾನೂನು ಪ್ರಕ್ರಿಯೆಗೆ ಗೌರವ ಮತ್ತು ಸಾರ್ವಜನಿಕ ಉತ್ತರದಾಯಿತ್ವವೇ ಆಗಿದೆ. ಅಂತಿಮವಾಗಿ, ಒಂದು ಸಂಘಟನೆಯ ಭವಿಷ್ಯ ಅದರ ಹೋರಾಟಗಳಿಂದಷ್ಟೇ ನಿರ್ಧಾರವಾಗುವುದಿಲ್ಲ. ಹೋರಾಟದ ನಂತರ ಉದ್ಭವಿಸುವ ಪ್ರಶ್ನೆಗಳಿಗೆ ಅದು ಹೇಗೆ ಉತ್ತರಿಸುತ್ತದೆ ಎಂಬುದೇ ಅದರ ನಿಜವಾದ ಪರೀಕ್ಷೆಯಾಗುತ್ತದೆ. ಮುಂದೇ ಅದರ ಒಲವು, ನಿಲುವು ಏನು ಎನ್ನುವುದರಿಂದಲೂ ಈ ಎಲ್ಲಾ ಆರೋಪಗಳಿಗೆ ಉತ್ತರ ನೀಡಬಹುದು. ಕಾದುನೋಡೋಣ.

ಕಾವೇರಿ ವಿವಾದ : ರಾಜ್ಯ ಸರ್ಕಾರದ ಸರ್ವ ಪಕ್ಷ ಸಮನ್ವಯ ಸೂತ್ರ!

ಕಾವೇರಿ ನೀರಿನ ಹಂಚಿಕೆ ವಿಚಾರ ಮತ್ತೊಮ್ಮೆ ಕರ್ನಾಟಕದ ರಾಜಕೀಯ, ಆಡಳಿತ ಮತ್ತು ರೈತರ ಬದುಕಿನ ಕೇಂದ್ರಬಿಂದುವಾಗಿದೆ. ಆದರೆ ಈ ಬಾರಿ ಗಮನ ಸೆಳೆದಿರುವುದು ಕೇವಲ ನೀರಿನ ಕೊರತೆಯಲ್ಲ; ಸರ್ವಪಕ್ಷಗಳ ಸಭೆಯಲ್ಲಿ ವ್ಯಕ್ತವಾದ ಒಮ್ಮತವೂ ಹೌದು. ಸಾಮಾನ್ಯವಾಗಿ ಕಾವೇರಿ ವಿಷಯದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುತ್ತವೆ. ಆದರೆ ಈ ಬಾರಿ ಸರ್ಕಾರದ ನಿಲುವಿಗೆ ವಿಪಕ್ಷಗಳೂ ಬೆಂಬಲ ವ್ಯಕ್ತಪಡಿಸಿರುವುದು, ರಾಜ್ಯದ ಹಿತಾಸಕ್ತಿಯ ಪ್ರಶ್ನೆಯಲ್ಲಿ ರಾಜಕೀಯಕ್ಕಿಂತ ಜನಹಿತಕ್ಕೆ ಆದ್ಯತೆ ನೀಡುವ ಸಂದೇಶವಾಗಿ ಕಾಣುತ್ತಿದೆ. 

 ಸರ್ವಪಕ್ಷಗಳ ಸಭೆಯಲ್ಲಿ ಮುಖ್ಯಮಂತ್ರಿ ಡಿಕೆಶಿಯವರು ಸ್ಪಷ್ಟವಾಗಿ ಎರಡು ಆದ್ಯತೆಗಳನ್ನು ಮುಂದಿಟ್ಟಿದ್ದಾರೆ. ಮೊದಲನೆಯದು ಕುಡಿಯುವ ನೀರಿನ ಭದ್ರತೆ, ಎರಡನೆಯದು ಈಗಾಗಲೇ ಬೆಳೆದಿರುವ ರೈತರ ಬೆಳೆಗಳ ರಕ್ಷಣೆ. ಜಲಾಶಯಗಳಲ್ಲಿ ಕನಿಷ್ಠ 40 ಟಿಎಂಸಿ ನೀರನ್ನು ಕಾಯ್ದಿರಿಸುವ ನಿರ್ಧಾರವು ಇದೇ ಆದ್ಯತೆಯ ಪ್ರತಿಬಿಂಬವಾಗಿದೆ. ಅದರಲ್ಲಿ 36 ಟಿಎಂಸಿ ಕುಡಿಯುವ ನೀರಿಗಾಗಿ ಹಾಗೂ 4 ಟಿಎಂಸಿ ಆವಿಯಾಗುವ ನೈಸರ್ಗಿಕ ನಷ್ಟವನ್ನು ಗಮನದಲ್ಲಿಟ್ಟುಕೊಂಡಿರುವುದು ಆಡಳಿತಾತ್ಮಕ ಲೆಕ್ಕಾಚಾರದ ಭಾಗವಾಗಿದೆ. ಇದೇ ವೇಳೆ ಕೊಡಗು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದು ಮತ್ತು ಕಬಿನಿ, ಕೆಆರ್‌ಎಸ್, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿರುವುದು ಕರ್ನಾಟಕಕ್ಕೆ ಸದ್ಯದ ಮಟ್ಟಿಗೆ ತುಸು ನೆಮ್ಮದಿಯ ಸಂಗತಿ. ಆದಾಗ್ಯೂ ಕೇವಲ ಒಂದು ಅಥವಾ ಎರಡು ವಾರಗಳ ಉತ್ತಮ ಮಳೆಯ ಆಧಾರದ ಮೇಲೆ ದೀರ್ಘಾವಧಿಯ ನಿರ್ಧಾರಗಳನ್ನು ಕೈಗೊಳ್ಳುವುದು ಅಪಾಯಕಾರಿಯೂ ಆಗಬಹುದು. ಮಳೆ ಮುಂದುವರಿಯುವಿಕೆ, ಒಳಹರಿವಿನ ಸ್ಥಿರತೆ ಹಾಗೂ ಮುಂದಿನ ತಿಂಗಳ ಬೇಡಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ. ಸರ್ವಪಕ್ಷ ಸಭೆಯಲ್ಲಿ ವ್ಯಕ್ತವಾಗಿರುವ ಮತ್ತೊಂದು ವಿಷಯವೇನೆಂದರೆ, ಸಂಕಷ್ಟ ಸೂತ್ರ ಇನ್ನೂ ಸಿದ್ಧವಾಗಿಲ್ಲ ಎನ್ನುವುದು. ಹಾಗಾದರೇ, ಸರ್ಕಾರದ ಸಂಕಷ್ಟ ಸೂತ್ರ ಹೇಗಿರಬೇಕು? ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಅನುಸರಿಸಬೇಕಾದ ಕ್ರಮಗಳು ಸ್ಪಷ್ಟವಾಗಿರಬೇಕು. ಮೊದಲ ಆದ್ಯತೆ ಕುಡಿಯುವ ನೀರಿನ ಭದ್ರತೆ. ಎರಡನೆಯದು ಈಗಾಗಲೇ ಬೆಳೆದಿರುವ ಬೆಳೆಗಳ ರಕ್ಷಣೆ. ಜಲಾಶಯಗಳ ವಾಸ್ತವಿಕ ಸಂಗ್ರಹ, ಒಳಹರಿವು ಹಾಗೂ ಮಳೆಯ ಮುನ್ಸೂಚನೆ ಆಧರಿಸಿ ನೀರಿನ ಬಿಡುಗಡೆ. ರೈತರು, ತಜ್ಞರು ಹಾಗೂ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ನಿರಂತರ ಸಮಾಲೋಚನೆ. ನೀರಿನ ಬಳಕೆಯಲ್ಲಿ ಕಟ್ಟುನಿಟ್ಟಿನ ನಿರ್ವಹಣೆ ಮತ್ತು ಅನಗತ್ಯ ವ್ಯರ್ಥತೆಯ ನಿಯಂತ್ರಣ. ಕೇಂದ್ರ ಸರ್ಕಾರ, ಕಾವೇರಿ ನೀರು ನಿರ್ವಹಣಾ ಸಂಸ್ಥೆಗಳು ಹಾಗೂ ನ್ಯಾಯಾಂಗದ ಮುಂದೆ ರಾಜ್ಯದ ವಾಸ್ತವಿಕ ಪರಿಸ್ಥಿತಿಯನ್ನು ಸಮಗ್ರ ಅಂಕಿ-ಅಂಶಗಳೊಂದಿಗೆ ಮಂಡಿಸುವುದು ಮುಖ್ಯವಾಗಬೇಕು. ಇನ್ನು, ಒಗ್ಗಟ್ಟು ಮಾತ್ರ ಸಾಕಾಗುವುದಿಲ್ಲ

ಸರ್ವಪಕ್ಷಗಳ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನವಾಗಿರುವುದು ರಾಜಕೀಯವಾಗಿ ಸಕಾರಾತ್ಮಕ ಬೆಳವಣಿಗೆಯಾದರೂ, ಅದು ಶಾಶ್ವತ ಪರಿಹಾರವಲ್ಲ. ಪ್ರತಿವರ್ಷ ಮಳೆ ಕೊರತೆಯಾದಾಗ ಇದೇ ರೀತಿಯ ತುರ್ತು ಸಭೆಗಳು ನಡೆಯುತ್ತವೆ. ನಂತರ ಪರಿಸ್ಥಿತಿ ಸುಧಾರಿಸಿದಂತೆ ಸಮಸ್ಯೆಯೂ ಮರೆತುಹೋಗುತ್ತದೆ. ಇದೇ ಮುಂದುವರಿಯುತ್ತಿದೆ. ಕರ್ನಾಟಕ ದೀರ್ಘಾವಧಿಯ ಜಲ ನಿರ್ವಹಣಾ ನೀತಿಯನ್ನು ರೂಪಿಸುವ ಅಗತ್ಯವಿದೆ. ಮಳೆನೀರು ಸಂಗ್ರಹ, ಕೆರೆಗಳ ಪುನಶ್ಚೇತನ, ಸೂಕ್ಷ್ಮ ನೀರಾವರಿ ವ್ಯವಸ್ಥೆಗಳ ವಿಸ್ತರಣೆ, ಚಾನೆಲ್‌ ಗಳ ಜೊತೆಗೆ ಸಬ್‌ ಚಾನೆಲ್‌ ಗಳನ್ನು ನಿರ್ಮಿಸಿ ಮಳೆ ಹೆಚ್ಚಿರುವ ಸಂದರ್ಭದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ಹರಿಸಬಹುದು. ಆ ಮೂಲಕ ಕೆರಗಳನ್ನು ತುಂಬಿಸಬಹುದು, ಬೆಳೆ ಪದ್ಧತಿಯಲ್ಲಿ ವೈಜ್ಞಾನಿಕ ಬದಲಾವಣೆ ಹಾಗೂ ಜಲ ಸಂಪನ್ಮೂಲಗಳ ಸಮರ್ಪಕ ಬಳಕೆಯೇ ಭವಿಷ್ಯದ ಸಂಕಷ್ಟಗಳನ್ನು ಕಡಿಮೆ ಮಾಡುವ ಮಾರ್ಗಗಳಾಗಿವೆ. ಇನ್ನು, ಇಲ್ಲಿ ರಾಜಕೀಯಕ್ಕಿಂತ ಜನಹಿತವೇ ಮುಖ್ಯ. ಕಾವೇರಿ ಕೇವಲ ರಾಜಕೀಯ ವಿಚಾರವಲ್ಲ; ಅದು ಕೋಟ್ಯಂತರ ಜನರ ಕುಡಿಯುವ ನೀರು, ಲಕ್ಷಾಂತರ ರೈತರ ಬದುಕು ಮತ್ತು ರಾಜ್ಯದ ಆರ್ಥಿಕತೆಯೊಂದಿಗೆ ನೇರವಾಗಿ ಸಂಬಂಧಿಸಿದೆ. ಹೀಗಾಗಿ ಸರ್ಕಾರದ ಪ್ರತಿಯೊಂದು ನಿರ್ಧಾರವೂ ವೈಜ್ಞಾನಿಕ ಮಾಹಿತಿ, ಕಾನೂನುಬದ್ಧ ಹೊಣೆಗಾರಿಕೆ ಮತ್ತು ಜನಹಿತದ ಸಮತೋಲನದ ಮೇಲೆ ಆಧಾರಿತವಾಗಿರಬೇಕು. ಒಟ್ಟಿನಲ್ಲಿ, ಸರ್ವಪಕ್ಷಗಳ ಒಗ್ಗಟ್ಟು ರಾಜ್ಯಕ್ಕೆ ಬಲ ನೀಡಬಹುದು. ಆದರೆ ಆ ಒಗ್ಗಟ್ಟು ಕೇವಲ ಸಭೆಯ ಹೇಳಿಕೆಗಳಲ್ಲೇ ಸೀಮಿತವಾಗದೆ, ನೀರಿನ ಸಮಗ್ರ ನಿರ್ವಹಣೆ ಮತ್ತು ಶಾಶ್ವತ ಜಲ ನೀತಿಯಾಗಿ ರೂಪುಗೊಂಡಾಗ ಮಾತ್ರ ಕರ್ನಾಟಕವು ಪ್ರತಿವರ್ಷ ಎದುರಾಗುವ ಕಾವೇರಿ ಸಂಕಷ್ಟದಿಂದ ಹೊರಬರಲು ಸಾಧ್ಯವಾಗುವುದರಲ್ಲಿ ಅನುಮಾನವೇ ಇಲ್ಲ. 

-ಶ್ರೀರಾಜ್ ವಕ್ವಾಡಿ

Saturday, August 1, 2026

ಕಾವೇರಿ ವಿವಾದ ; ರಾಜ್ಯ ಬಿಜೆಪಿ ಕೇಂದ್ರಕ್ಕೆ ಒತ್ತಾಯಿಸಬಾರದೆ !? ಇದು ರಾಜ್ಯದ ಹಿತಾಸಕ್ತಿಯ ಪ್ರಶ್ನೆ.

 ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ನಿರ್ದೇಶನ ಇದೀಗ ಮತ್ತೊಮ್ಮೆ ರಾಜ್ಯದ ರಾಜಕೀಯವನ್ನು ಕಾವೇರಿಸಿದೆ. CWRC ಸೂಚನೆಯನ್ನು ಆಧರಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡುವಂತೆ ನಿರ್ದೇಶಿಸಿದೆ. ಇದರ ವಿರುದ್ಧ ಬಿಜೆಪಿ ರಾಜ್ಯದಲ್ಲಿ ಪ್ರತಿಭಟನೆ ನಡೆಸಿದೆ. ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿಯ ಆಕ್ಷೇಪದಲ್ಲಿ ರಾಜಕೀಯ ಅಂಶ ಇರಬಹುದು. ಆದರೆ ಅದಕ್ಕಿಂತ ದೊಡ್ಡ ಪ್ರಶ್ನೆ ಮತ್ತೊಂದಿದೆ. ಹಾಗಾದ್ರೆ ಅದು ಏನು ? 

ಗಮನಿಸಿ, ಕಾವೇರಿ ವಿವಾದದ ಅಂತಿಮ ಪರಿಹಾರದ ಹೊಣೆಗಾರಿಕೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವೇನು? ಇದು ಕೇಳಲೇಬೇಕಾದ ಪ್ರಶ್ನೆ. ಕಾವೇರಿ ನೀರಿನ ಹಂಚಿಕೆ ಹಲವು ದಶಕಗಳ ವಿವಾದದ ನಂತರ ನ್ಯಾಯಾಂಗ ಮತ್ತು ಸಾಂವಿಧಾನಿಕ ವ್ಯವಸ್ಥೆಗಳ ಮೂಲಕ ಒಂದು ನಿರ್ದಿಷ್ಟ ಚೌಕಟ್ಟಿಗೆ ಬಂದಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಅದರ ಅಡಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಕಾರ್ಯನಿರ್ವಹಿಸುತ್ತಿವೆ. ಇವೆಲ್ಲೌೂ ಕೇಂದ್ರ ಸರ್ಕಾರದ ಅಡಿಯಲ್ಲೇ ಕಾರ್ಯ ನಿರ್ವಹಿಸುತ್ತವೆ. ಅಂದರೆ ಇವು ಕೇವಲ ಕರ್ನಾಟಕ ಅಥವಾ ತಮಿಳುನಾಡು ಸರ್ಕಾರಗಳು ಪರಸ್ಪರ ಮಾಡಿಕೊಂಡಿರುವ ಅನೌಪಚಾರಿಕ ವ್ಯವಸ್ಥೆಗಳಲ್ಲ. ಇದು ಕೇಂದ್ರ ಸರ್ಕಾರದ ಸಾಂವಿಧಾನಿಕ ಮತ್ತು ಕಾನೂನುಬದ್ಧ ವ್ಯವಸ್ಥೆಯೊಳಗೆ ಕಾರ್ಯನಿರ್ವಹಿಸುವ ಅಂತರರಾಜ್ಯ ಜಲವಿವಾದದ ಆಡಳಿತಾತ್ಮಕ ವ್ಯವಸ್ಥೆ ಎನ್ನುವುದು ಇಲ್ಲಿ ಮುಖ್ಯಾಂಶ. ಹೀಗಿರುವಾಗ, ಪ್ರತಿಬಾರಿಯೂ CWRC ಆದೇಶ ಹೊರಬಂದಾಗ ರಾಜ್ಯ ಬಿಜೆಪಿಯ ರಾಜಕೀಯ ಪ್ರತಿಕ್ರಿಯೆ ಕೇವಲ ಕರ್ನಾಟಕ ಸರ್ಕಾರದ ವಿರುದ್ಧದ ಪ್ರತಿಭಟನೆಯಾಗಿಯೇ ಸೀಮಿತವಾಗಬೇಕೇ? ಬಿಜೆಪಿಗೆ ಕೇಂದ್ರದಲ್ಲಿ ಪ್ರಶ್ನೆ ಕೇಳುವ ಅವಕಾಶವಿಲ್ಲವೇ? ಇಲ್ಲಿಯೇ ಬಿಜೆಪಿಯ ರಾಜಕೀಯ ಹೊಣೆಗಾರಿಕೆಯ ಪ್ರಶ್ನೆ ಎದುರಾಗುತ್ತದೆ. ಬಿಜೆಪಿ ಇಂದು ರಾಜ್ಯದಲ್ಲಿ ಪ್ರತಿಪಕ್ಷ. ಆದರೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಕೇಂದ್ರ ಸಚಿವರಿದ್ದಾರೆ. ಕರ್ನಾಟಕದಿಂದ ಬಿಜೆಪಿ ಸಂಸದರೂ ಇದ್ದಾರೆ. ಕೇಂದ್ರ ಸರ್ಕಾರದ ಅಧೀನದಲ್ಲಿಯೇ ಜಲಶಕ್ತಿ ಸಚಿವಾಲಯವಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಂತಹ ವ್ಯವಸ್ಥೆಗಳು ಕೇಂದ್ರದ ಆಡಳಿತಾತ್ಮಕ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುತ್ತಿವೆ. ಹೀಗಿರುವಾಗ ಬಿಜೆಪಿಯ ರಾಜ್ಯ ನಾಯಕರು ಕರ್ನಾಟಕ ಸರ್ಕಾರವನ್ನು ಪ್ರಶ್ನಿಸುವುದು ಮಾತ್ರ ಸಾಕೇ? "ನೀರು ಬಿಡಬೇಡಿ" ಎಂದು ಬೆಂಗಳೂರಿನಲ್ಲಿ ಅಥವಾ ಮಂಡ್ಯದಲ್ಲಿ ಪ್ರತಿಭಟನೆ ನಡೆಸುವುದರ ಜೊತೆಗೆ, ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಏಕೆ ಮಾಡಬಾರದು? ಇದು ರಾಜಕೀಯ ಪಕ್ಷವೊಂದರ ವಿರುದ್ಧದ ಪ್ರಶ್ನೆಯಲ್ಲ. ಇದು ಕರ್ನಾಟಕದ ಹಿತಾಸಕ್ತಿಯ ಪ್ರಶ್ನೆ. ರಾಜ್ಯ ಸರ್ಕಾರಕ್ಕೆ ಕಾನೂನು ಹೋರಾಟದ ದಾರಿ ಇದೆ. ಆದರೂ, ಕೇಂದ್ರದ ಮಧ್ಯಪ್ರವೇಶ ಏಕೆ ಕಾಣುತ್ತಿಲ್ಲ? ಪ್ರಸ್ತುತ ಬೆಳವಣಿಗೆಯಲ್ಲಿ ಕರ್ನಾಟಕ ಸರ್ಕಾರ CWMA ನಿರ್ದೇಶನದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ಇದು ಕಾನೂನುಬದ್ಧ ದಾರಿ. 

ಆದರೆ ಪ್ರಶ್ನೆ ಏನೆಂದರೇ, ಪ್ರತಿ ಬಾರಿ ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ಹೋಗಬೇಕು, ರಾಜ್ಯ ಸರ್ಕಾರವೇ ವಕೀಲರನ್ನು ನೇಮಿಸಬೇಕು, ರಾಜ್ಯವೇ ತನ್ನ ವಾದ ಮಂಡಿಸಬೇಕು — ಕೇಂದ್ರ ಸರ್ಕಾರದ ಪಾತ್ರವೇನು? ಕೇಂದ್ರ ಸರ್ಕಾರವು "ನಾವು ನ್ಯಾಯಾಂಗ ಪ್ರಕ್ರಿಯೆಯಲ್ಲಿ ನೇರವಾಗಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ" ಎಂದು ಹೇಳಬಹುದು. ಅದು ಸರಿ. ಆದರೆ ರಾಜಕೀಯ ಮತ್ತು ಆಡಳಿತಾತ್ಮಕ ಮಟ್ಟದಲ್ಲಿ ಮಧ್ಯಸ್ಥಿಕೆ, ಸಂವಾದ, ಸಮನ್ವಯ ಮತ್ತು ದೀರ್ಘಕಾಲೀನ ಪರಿಹಾರದ ಪ್ರಯತ್ನಮಾಡುವ ಅವಕಾಶ ಕೇಂದ್ರಕ್ಕೆ ಇಲ್ಲವೇ? ಖಂಡಿತ ಇದೆ. ಗಮನಿಸಿ, "ಕೇಂದ್ರ ಸರ್ಕಾರದ ಮಧ್ಯಪ್ರವೇಶ" ಎಂದರೆ ನ್ಯಾಯಾಲಯದ ಆದೇಶ ಬದಲಿಸುವುದೇ? ಇಲ್ಲಿ ಒಂದು ಸೂಕ್ಷ್ಮ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ನೇರವಾಗಿ ಸಮಿತಿಯ ತೀರ್ಪನ್ನು ರದ್ದುಪಡಿಸಲು ಸಾಧ್ಯವಿಲ್ಲ. ಅಥವಾ ಕಾನೂನಿಗೆ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಸಮಿತಿಗೆ ಕಾನೂನಿನ ಚೌಕಟ್ಟಿನ ಹೊರಗೆ ಹೋಗಿ ಆದೇಶ ನೀಡುವಂತೆ ರಾಜಕೀಯವಾಗಿ ಒತ್ತಡ ಹೇರುವುದೂ ಸರಿಯಾದ ಮಾರ್ಗವಲ್ಲ. ಆದರೆ ಕೇಂದ್ರ ಸರ್ಕಾರ ಮಾಡಬಹುದಾದ ಕೆಲಸಗಳು ಸಾಕಷ್ಟಿವೆ. ಮೊದಲನೆಯದ್ದು, ಕಾವೇದಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕೂ ರಾಜ್ಯಗಳ ನಡುವೆ ನಿರಂತರ ರಾಜಕೀಯ ಸಂವಾದ ನಡೆಸಬಹುದಾಗಿದೆ. ಮುಖ್ಯವಾಗಿ ಕರ್ನಾಟಕ ಮತ್ತು ತಮಿಳುನಾಡಿನೊಂದಿಗೆ ಸಮನ್ವಯ ಸಭೆಯನ್ನು ನಡೆಸಬಹುದು. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರಗಳನ್ನು ಒಂದೇ ವೇದಿಕೆಯಲ್ಲಿ ಮಾತುಕತೆ ನಡೆಸಿ ಮಳೆ, ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಬೆಳೆ ಪದ್ಧತಿ, ಕುಡಿಯುವ ನೀರಿನ ಅಗತ್ಯ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಆಧರಿಸಿದ ಹೊಸ ಕಾರ್ಯವಿಧಾನ ರೂಪಿಸಬಹುದು. ಎರಡನೇಯದ್ದು, ರಿಯಲ್-ಟೈಮ್ ಡೇಟಾ ವ್ಯವಸ್ಥೆ. ಎಷ್ಟು ಮಳೆ ಬಿದ್ದಿದೆ? ಎಷ್ಟು ನೀರು ಜಲಾಶಯಗಳಿಗೆ ಬಂದಿದೆ? ಎಷ್ಟು ನೀರು ಸಂಗ್ರಹವಾಗಿದೆ? ಕುಡಿಯುವ ನೀರಿಗೆ ಎಷ್ಟು ಬೇಕು? ತಮಿಳುನಾಡಿನ ಜಲಾಶಯಗಳ ಪರಿಸ್ಥಿತಿ ಏನು? ಈ ಎಲ್ಲಾ ಮಾಹಿತಿಯನ್ನು ನಾಲ್ಕೂ ರಾಜ್ಯಗಳಿಗೆ ಒಂದೇ ರೀತಿಯಲ್ಲಿ ಲಭ್ಯವಾಗುವ ಪಾರದರ್ಶಕ ವ್ಯವಸ್ಥೆ ರೂಪಿಸಬಹುದು. ಮೂರನೇಯದ್ದು, ಬರಗಾಲದ ವರ್ಷಗಳಿಗೆ ಪ್ರತ್ಯೇಕ ನಿಯಮ.  ಕಾವೇರಿ ವಿವಾದದ ಬಹುತೇಕ ರಾಜಕೀಯ ಸಂಘರ್ಷದ ಮೂಲವೇ ಇದು. ನೀರು ಹೆಚ್ಚಿರುವ ವರ್ಷದಲ್ಲಿ ಹಂಚಿಕೆ ಸುಲಭ. ನೀರು ಕಡಿಮೆಯಿರುವ ವರ್ಷದಲ್ಲಿ ಯಾರಿಗೆ ಎಷ್ಟು? ಎನ್ನುವುದರ ಬಗ್ಗೆ ಪರಿಹಾರ ಕಂಡುಕೊಳ್ಳುವುದು.  ನಾಲ್ಕನೇಯದ್ದು, ಬೆಳೆ ಪದ್ಧತಿಯ ಕುರಿತು ಮಾತುಕತೆ ನಡೆಸಬಹುದು.  ಕಾವೇರಿ ಕೇವಲ "ಕರ್ನಾಟಕ ಎಷ್ಟು ನೀರು ಬಿಡಬೇಕು?" ಎಂಬ ಪ್ರಶ್ನೆಯಲ್ಲ. ಎರಡೂ ರಾಜ್ಯಗಳಲ್ಲಿ ಯಾವ ಬೆಳೆಗಳಿಗೆ ಎಷ್ಟು ನೀರು ಬೇಕು? ಯಾವ ಬೆಳೆ ಪದ್ಧತಿಯನ್ನು ಬದಲಾಯಿಸಬಹುದು? ನೀರಿನ ಬಳಕೆಯ ದಕ್ಷತೆಯನ್ನು ಹೇಗೆ ಹೆಚ್ಚಿಸಬಹುದು? ಇವುಗಳ ಬಗ್ಗೆ ಕೇಂದ್ರ ಸರ್ಕಾರ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡಬಹುದು. 

ಇನ್ನು, ಬಿಜೆಪಿಯ ಪ್ರತಿಭಟನೆಗೆ ಒಂದು ಪ್ರಶ್ನೆ. ಮಂಡ್ಯದಲ್ಲಿ ಪ್ರತಿಭಟನೆ ನಡೆಸುವುದು ರಾಜಕೀಯವಾಗಿ ಅರ್ಥವಾಗಬಹುದು. ರೈತರ ಪರವಾಗಿ ಧ್ವನಿ ಎತ್ತುವುದು ಪ್ರತಿಪಕ್ಷದ ಕರ್ತವ್ಯವೂ ಹೌದು. ಆದರೆ ಅದೇ ಬಿಜೆಪಿ ಕರ್ನಾಟಕದಲ್ಲಿ ಪ್ರತಿಪಕ್ಷವಾಗಿದ್ದರೂ, ಕೇಂದ್ರದಲ್ಲಿ ಆಡಳಿತ ಪಕ್ಷವಾಗಿದೆ. ಹೀಗಾಗಿ ಪ್ರಶ್ನೆ ಸರಳ.  ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ್ದು ಸರಿ, ಆದರೇ,  ದೆಹಲಿಯಲ್ಲಿ ಮಾತುಕತೆ ಯಾವಾಗ? ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಮಾಡಿದ್ದು, ವಿಪಕ್ಷವಾಗಿ ಸರಿ. ಆದರೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಯಾವಾಗ?  ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದು ಸರಿ, ಆದರೇ, ಕೇಂದ್ರದ ಜಲಶಕ್ತಿ ಸಚಿವಾಲಯಕ್ಕೆ ಪ್ರಶ್ನೆ ಯಾವಾಗ?  ಬಿಜೆಪಿ ರಾಜ್ಯ ನಾಯಕರ ಪ್ರತಿಭಟನೆ ಸರಿ, ಆದರೇ, ಬಿಜೆಪಿ ಸಂಸದರ ಒಕ್ಕೂಟದ ನಿಯೋಗ ದೆಹಲಿಗೆ ತೆರಳುವುದು ಯಾವಾಗ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. 

ನೋಡಿ, ಕಾವೇರಿ ಸಮಸ್ಯೆ ಕಾಂಗ್ರೆಸ್-ಬಿಜೆಪಿ ರಾಜಕೀಯಕ್ಕೆ ಸೀಮಿತವಾಗಬಾರದು. ಇಲ್ಲಿ ಮತ್ತೊಂದು ದೊಡ್ಡ ಅಪಾಯವಿದೆ. ಕಾವೇರಿ ವಿವಾದವನ್ನು ಪ್ರತಿಬಾರಿ "ಕಾಂಗ್ರೆಸ್ ಸರ್ಕಾರದ ವೈಫಲ್ಯ" ವರ್ಸಸ್ "ಬಿಜೆಪಿ ಸರ್ಕಾರದ ಸಾಧನೆ" ಎಂಬ ಚುನಾವಣಾ ರಾಜಕೀಯಕ್ಕೆ ಇಳಿಸಿದರೆ, ಸಮಸ್ಯೆಯ ಮೂಲವನ್ನು ನಾವು ತಪ್ಪಿಸಿದಂತಾಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಜೆಪಿ ಪ್ರಶ್ನಿಸುತ್ತದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪ್ರಶ್ನಿಸಿತ್ತು. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿದ್ದಾಗ ಎಐಎಡಿಎಂಕೆ ಪ್ರಶ್ನಿಸುತ್ತದೆ. ಎಐಎಡಿಎಂಕೆ ಅಧಿಕಾರದಲ್ಲಿದ್ದಾಗ ಡಿಎಂಕೆ ಪ್ರಶ್ನಿಸುತ್ತದೆ. ಈಗ ಟಿವಿಕೆ ಅಧಿಕಾರದಲ್ಲಿರುವಾಗ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಪ್ರಶ್ನಿಸುತ್ತವೆ.  ಆದರೆ ಕಾವೇರಿ ವಿವಾದ ಮಾತ್ರ ಅಲ್ಲಿಯೇ ಉಳಿಯುತ್ತದೆ. ಪ್ರತಿ ವರ್ಷವೂ ಜಲಾಶಯದ ಮಟ್ಟವೇ ರಾಜಕೀಯದ ಮಾಪಕವಾಗುತ್ತದೆ.

 ಇದು ಪರಿಹಾರವಲ್ಲ. ಹಾಗಾದರೇ, ಕೇಂದ್ರ ಸರ್ಕಾರದ ಪಾತ್ರ ಏಕೆ ನಿರ್ಣಾಯಕ? ಗಮನಿಸಿ, ಕಾವೇರಿ ಒಂದು ಅಂತರರಾಜ್ಯ ನದಿ. ಒಂದು ರಾಜ್ಯದ ಭೌಗೋಳಿಕ ಗಡಿಯಲ್ಲಿ ಹುಟ್ಟಿ ಮತ್ತೊಂದು ರಾಜ್ಯದ ಮೂಲಕ ಹರಿಯುವ ನದಿಯ ವಿಚಾರವನ್ನು ಕೇವಲ ಉಭಯ ರಾಜ್ಯಗಳ ಸಂಘರ್ಷವಾಗಿದೆ ಬಿಟ್ಟರೆ ಸಮಸ್ಯೆ ಎಂದಿಗೂ ಮುಗಿಯುವುದಿಲ್ಲ. ಇದಕ್ಕಾಗಿಯೇ ಭಾರತದಲ್ಲಿ ಅಂತರರಾಜ್ಯ ಜಲವಿವಾದಗಳಿಗೆ ಕೇಂದ್ರದ ಕಾನೂನು ಮತ್ತು ಸಂಸ್ಥೆಗಳ ವ್ಯವಸ್ಥೆ ನಿರ್ಮಿಸಲಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರದ ಪಾತ್ರ ಕೇವಲ "ಆದೇಶ ಪಾಲಿಸಿ" ಅಥವಾ "ರಾಜ್ಯಗಳು ನ್ಯಾಯಾಲಯಕ್ಕೆ ಹೋಗಲಿ" ಎಂಬ ಮಟ್ಟಕ್ಕೆ ಸೀಮಿತವಾಗಬಾರದು. ಕೇಂದ್ರವು ಮಧ್ಯಸ್ಥಿಕೆ ವಹಿಸಿ ಸಹಕಾರಾತ್ಮಕ ಫೆಡರಲಿಸಂ ಅನ್ನು ಕಾರ್ಯರೂಪಕ್ಕೆ ತರಬೇಕಾಗಿದೆ.  ಆದರೆ ತಮಿಳುನಾಡಿನ ಹಕ್ಕಿನ ಪ್ರಶ್ನೆಯೂ ಇದೆ. ಕರ್ನಾಟಕದ ಸಂಕಷ್ಟವನ್ನು ಹೇಳುವಾಗ ಮತ್ತೊಂದು ಸತ್ಯವನ್ನು ಮರೆಮಾಚಬಾರದು. ತಮಿಳುನಾಡಿಗೂ ತನ್ನ ನ್ಯಾಯಾಲಯ ಮಾನ್ಯಗೊಳಿಸಿದ ನೀರಿನ ಪಾಲಿನ ಪ್ರಶ್ನೆ ಇದೆ.  ಅಲ್ಲಿನ ರೈತರು ಕೂಡ ಕಾವೇರಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಆದ್ದರಿಂದ ಸಮಸ್ಯೆಗೆ ಪರಿಹಾರ "ಕರ್ನಾಟಕಕ್ಕೆ ನೀರು, ತಮಿಳುನಾಡಿಗೆ ಏನೂ ಬೇಡ"ಎಂಬುದಾಗಿರಲು ಸಾಧ್ಯವಿಲ್ಲ. ಅದೇ ರೀತಿ "ತಮಿಳುನಾಡಿನ ಬೇಡಿಕೆ ಬಂದರೆ ಕರ್ನಾಟಕ ಎಷ್ಟು ನೀರು ಇದ್ದರೂ ಬಿಡಬೇಕು" ಎಂಬ ಸರಳೀಕೃತ ನಿಲುವೂ ವಾಸ್ತವಿಕವಲ್ಲ. ಎರಡೂ ರಾಜ್ಯಗಳ ಹಕ್ಕು ಮತ್ತು ಸಂಕಷ್ಟವನ್ನು ಒಟ್ಟಿಗೆ ಪರಿಗಣಿಸುವ ವ್ಯವಸ್ಥೆ ಬೇಕಾಗಿದೆ. ಅದರಲ್ಲಿಯೇ ಕೇಂದ್ರದ ಪಾತ್ರ ಮಹತ್ವ ಪಡೆಯುತ್ತದೆ. 

ಒಟ್ಟಿನಲ್ಲಿ ಇದು, ಕಾಂಗ್ರೆಸ್‌ನ ಪ್ರಶ್ನೆಯಲ್ಲ. ಬಿಜೆಪಿಯ ಪ್ರಶ್ನೆಯೂ ಅಲ್ಲ. ಇದು ಕರ್ನಾಟಕದ ಪ್ರಶ್ನೆ. ಆದರೆ ಅದಕ್ಕಿಂತ ದೊಡ್ಡದಾಗಿ, ಇದು ಭಾರತದ ಒಕ್ಕೂಟ ವ್ಯವಸ್ಥೆಯ ಪರೀಕ್ಷೆ. ಕಾವೇರಿ ವಿವಾದ ರಾಜಕೀಯ ಸಂಘರ್ಷವಾಗಿ ಉಳಿಯಬಾರದು. ಅಥವಾ ಕೇಂದ್ರದ ನೇತೃತ್ವದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯನ್ನು ಒಳಗೊಂಡ ಶಾಶ್ವತ, ವೈಜ್ಞಾನಿಕ ಮತ್ತು ನ್ಯಾಯಸಮ್ಮತ ಜಲ ನಿರ್ವಹಣಾ ವ್ಯವಸ್ಥೆ ರೂಪಿಸಬೇಕಿದೆ. ಅದೇ  ಕಾವೇರಿಗೆ ಒದಗಿಸಬಹುದಾದ ಪರಿಹಾರ. 

-ಶ್ರೀರಾಜ್ ವಕ್ವಾಡಿ

ಹಾಯ್ ಫ್ರೆಂಡ್ಸ್ ಅಂದರೆ ಸಾಕೆ !? 2029ರ ಚುನಾವಣೆಗೆ ಮೋದಿ ರೀಲ್ಸ್ ತಂತ್ರ!?

 ಪ್ರಧಾನಿ ನರೇಂದ್ರ ಮೋದಿ ಅವರು ಸಿಜೆಪಿ ಪ್ರತಿಭಟನೆ ವೇಳೆ ತಮ್ಮನ್ನು ಹಾಗೂ ತಮ್ಮ ತಾಯಿಯನ್ನು ನಿಂದಿಸಿದ ಯುವಕರನ್ನು ಕ್ಷಮಿಸಿರುವುದಾಗಿ ಹೇಳಿರುವ ಇನ್‌ಸ್ಟಾಗ್ರಾಂ ರೀಲ್ಸ್ ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. "ಬಾಲ್ಯದಲ್ಲಿ ತಪ್ಪುಗಳು ಆಗುತ್ತವೆ. ಎಲ್ಲರೂ ತಪ್ಪುಗಳಿಂದ ಪಾಠ ಕಲಿತು ದೇಶ ಕಟ್ಟೋಣ" ಎಂಬ ಅವರ ಸಂದೇಶವನ್ನು ಬಿಜೆಪಿ ಬೆಂಬಲಿಗರು ದೊಡ್ಡ ಮನಸ್ಸಿನ ನಾಯಕತ್ವ ಎಂದು ಬಣ್ಣಿಸುತ್ತಿದ್ದರೆ, ಇನ್ನೊಂದೆಡೆ ಮೋದಿ ಅವರ ಫ್ರೆಂಡ್ಸ್‌ ರೀಲ್ಸ್‌ ಹಿಂದೆ ಯುವಕರನ್ನು ಮತ್ತೆ ಓಲೈಸುವ ತಂತ್ರ ಅಡಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಯುವಕರನ್ನು ಗುರಿಯಾಗಿಸಿಕೊಂಡ ಸಂದೇಶವೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನಿರುದ್ಯೋಗ, NEET ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ, ಶಿಕ್ಷಣ ವ್ಯವಸ್ಥೆಯ ಮೇಲಿನ ಅಸಮಾಧಾನ ಹಾಗೂ ಉದ್ಯೋಗ ಸೃಷ್ಟಿಯ ಕೊರತೆ ಕುರಿತಾಗಿ ಯುವಕರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಹಲವು ಪ್ರತಿಭಟನೆಗಳಲ್ಲಿ ಯುವಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಕಂಡುಬಂದಿದೆ. ಇತ್ತೀಚೆಗೆ ನಡೆದ ಸಿಜೆಪಿ ಪ್ರತಿಭಟನೆ, ಸಿಜೆಪಿಯ ಸಂಸತ್‌ ಚಲೋ, ರಾಹುಲ್‌ ನೇತೃತ್ವದ ಪ್ರತಿಭಟನೆ ಬಹಳ ದೊಡ್ಡ ಮಟ್ಟದಲ್ಲಿ ರಾಜಕೀಯ ವಲಯದಲ್ಲಿ ಬಹಳ ದೊಡ್ಡ ಚರ್ಚೆಯನ್ನೇ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ, ಮೋದಿ ಅವರ ಇನ್‌ಸ್ಟಾಗ್ರಾಂ ರೀಲ್ಸ್ ಕೇವಲ ಕ್ಷಮೆಯ ಸಂದೇಶವೇ, ಅಥವಾ ಯುವ ಸಮುದಾಯದೊಂದಿಗೆ ಹದಗೆಟ್ಟಿರುವ ಸಂಬಂಧವನ್ನು ಸುಧಾರಿಸಿಕೊಳ್ಳುವ ರಾಜಕೀಯ ಪ್ರಯತ್ನವೇ ಎಂಬ ಪ್ರಶ್ನೆ ಉದ್ಭವಿಸಿದೆ.

ಮೋದಿಯವರ ರೀಲ್ಸ್ ರಾಜಕೀಯ ಹೊಸದಲ್ಲ. ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ನಾಯಕ ಎಂಬುದು ಎಲ್ಲರಿಗೂ ತಿಳಿದ ಸಂಗತಿ. 2014ರಿಂದಲೂ ಅವರು ಡಿಜಿಟಲ್ ವೇದಿಕೆಗಳನ್ನು ರಾಜಕೀಯ ಸಂವಹನದ ಪ್ರಮುಖ ಸಾಧನವಾಗಿ ಬಳಸುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಯುವಜನರ ಗಮನ ಸೆಳೆಯುವ ಉದ್ದೇಶದಿಂದ ರೀಲ್ಸ್, ಶಾರ್ಟ್ ವಿಡಿಯೋ ಹಾಗೂ ಇನ್‌ಫ್ಲುಯೆನ್ಸರ್ ಶೈಲಿಯ ಸಂವಹನ ಹೆಚ್ಚಾಗಿದೆ. ಈ ಬಾರಿ "ಹಾಯ್ ಫ್ರೆಂಡ್ಸ್" ಎಂದು ಆರಂಭಿಸಿ ಯುವಕರಿಗೆ ನೇರವಾಗಿ ಮಾತನಾಡಿರುವುದು, ಭಾವನಾತ್ಮಕ ಸಂಪರ್ಕವನ್ನು ಮರುಸ್ಥಾಪಿಸುವ ಪ್ರಯತ್ನ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇನ್ನು, ಇದು ಪ್ರಶ್ನೆ ಕೇವಲ ಕ್ಷಮೆಯದ್ದಲ್ಲ,  ಪ್ರಶ್ನೆ ಯುವಕರನ್ನು ಕ್ಷಮಿಸಿರುವುದಲ್ಲ. ಯುವಕರು ಏಕೆ ಪ್ರತಿಭಟನೆ ನಡೆಸಿದರು ಎಂಬುದು ಮುಖ್ಯ. ಇನ್ನು,  ಯುವ ಸಮುದಾಯವು ನಿರಂತರವಾಗಿ ಎತ್ತುತ್ತಿರುವ ಪ್ರಶ್ನೆಗಳೇನು?  ನಿರುದ್ಯೋಗ ಕಡಿಮೆಯಾಗುವುದು ಯಾವಾಗ? ಸರ್ಕಾರಿ ನೇಮಕಾತಿಗಳು ವೇಗ ಪಡೆಯುವುದು ಯಾವಾಗ? ಪರೀಕ್ಷಾ ಅಕ್ರಮಗಳಿಗೆ ಶಾಶ್ವತ ಪರಿಹಾರ ಯಾವಾಗ?  ಶಿಕ್ಷಣ ಮತ್ತು ಉದ್ಯೋಗದ ನಡುವೆ ಇರುವ ಅಂತರವನ್ನು ಸರ್ಕಾರ ಹೇಗೆ ಕಡಿಮೆ ಮಾಡಲಿದೆ? ಈ ಪ್ರಶ್ನೆಗಳಿಗೆ ಉತ್ತರ ನೀಡದೆ ಕೇವಲ ಭಾವನಾತ್ಮಕ ಸಂದೇಶ ನೀಡುವುದರಿಂದ ಸಮಸ್ಯೆಗಳ ಪರಿಹಾರ ಸಾಧ್ಯವಿಲ್ಲ ಎನ್ನುವುದು ಇಲ್ಲಿ ಮುಖ್ಯಾಂಶ. ಇನ್ನು, ಇಲ್ಲಿ 2029ರ ಚುನಾವಣೆಯ ಲೆಕ್ಕಾಚಾರವಿದೆಯೇ ? ಇದರ ಪ್ರಶ್ನೆಯೇ ಉದ್ಭವವಾಗಲ್ಲ, ಇದು ಖಂಡಿತ ಇದ್ದೇ ಇದೆ. 2014 ಮತ್ತು 2019ರಲ್ಲಿ ಬಿಜೆಪಿ ಪರವಾಗಿ ದೊಡ್ಡ ಪ್ರಮಾಣದಲ್ಲಿ ಯುವ ಮತಗಳು ಹರಿದು ಬಂದಿದ್ದವು. 2024ರ ಚುನಾವಣೆಯಲ್ಲಿ ಬಿಜೆಪಿಗೆ ಸ್ವಲ್ಪ ಹಿನ್ನಡೆಯಾಗಿತ್ತು. ಆದರೆ ಮುಂದಿನ ಚುನಾವಣೆಯ ಹೊತ್ತಿಗೆ ಯುವ ಮತದಾರರ ಮನೋಭಾವದಲ್ಲಿ ಬದಲಾವಣೆ ಆಗಬಹುದು ಎನ್ನುವುದು ಇತ್ತೀಚೆಗೆ ನಡೆದ ಪ್ರತಿಭಟನೆಗಳು ಅಕ್ಷರಶಃ ತಿಳಿಸುತ್ತಿವೆ.

 ಇಂತಹ ಸಂದರ್ಭದಲ್ಲಿ ಯುವಕರೊಂದಿಗೆ ಮೃದು ಧೋರಣೆ ಪ್ರದರ್ಶಿಸುವುದು ಮುಂದಿನ ಚುನಾವಣೆಯ ದೃಷ್ಟಿಯಿಂದ ರಾಜಕೀಯ ಸಂದೇಶವೂ ಆಗಿರಬಹುದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಬರೀ, ರೀಲ್ಸ್ ಸಾಕಾಗುತ್ತದೆಯೇ? ಪ್ರಶ್ನೆ ಉದ್ಭವವಾಗುತ್ತದೆ. ಇಂದಿನ ಯುವಜನರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಆದ್ದರಿಂದ ರೀಲ್ಸ್ ಮೂಲಕ ಸಂದೇಶ ತಲುಪುವುದು ಸುಲಭ. ಆದರೆ ಅದರಿಂದ ಮಾತ್ರ ವಿಶ್ವಾಸವನ್ನು ಮರಳಿ ಗಳಿಸಲಾಗುತ್ತದೆಯೇ ಎಂಬುದು ಇಲ್ಲಿರುವ ಮುಖ್ಯ ಪ್ರಶ್ನೆ. ಮೋದಿ ಅವರ ರೀಲ್ಸ್ ಅನ್ನು ಎರಡು ರೀತಿಯಲ್ಲಿ ನೋಡಬಹುದು. ಇದು ನಿಂದನೆಗೆ ಪ್ರತಿಯಾಗಿ ಕ್ಷಮೆ ಮತ್ತು ಸಮನ್ವಯದ ಸಂದೇಶ. ಮತ್ತೊಂದು ಯುವ ಸಮುದಾಯದೊಂದಿಗೆ ರಾಜಕೀಯ ಸಂಪರ್ಕವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿದೆ. ಯುವಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಅಥವಾ ಮರಳಿ ಗಳಿಸಲು ಸಾಮಾಜಿಕ ಜಾಲತಾಣದ ಸಂದೇಶಗಳಷ್ಟೇ ಸಾಕಾಗುವುದಿಲ್ಲ. ಉದ್ಯೋಗ, ಶಿಕ್ಷಣ, ಪರೀಕ್ಷಾ ವ್ಯವಸ್ಥೆ ಮತ್ತು ಆರ್ಥಿಕ ಸಮತೋಲನದಂತಹ ಮೂಲಭೂತ ಸಮಸ್ಯೆಗಳಿಗೆ ಪರಿಣಾಮಕಾರಿ ಉತ್ತರ ನೀಡುವ ನೀತಿಗಳೇ ಅಂತಿಮವಾಗಿ ಯುವಜನರ ನಿರ್ಧಾರವನ್ನು ರೂಪಿಸುತ್ತವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

-ಶ್ರೀರಾಜ್ ವಕ್ವಾಡಿ 

ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣದ ಕ್ರಿಮಿನಲ್ ಮೊಕದ್ದಮೆಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ !

ಮಾಜಿ ಪ್ರಧಾನಿ, ದಿವಂಗತ ಡಾ. ಮನಮೋಹನ್ ಸಿಂಗ್ ವಿರುದ್ಧದ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು ಕೇವಲ ಒಬ್ಬ ಮಾಜಿ ಪ್ರಧಾನಿಗೆ ದೊರೆತ ಕಾನೂನಾತ್ಮಕ ನ್ಯಾಯವಲ್ಲ. ಇದು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ರಾಜಕೀಯವನ್ನು ಪ್ರಭಾವಿಸಿದ "ಕಲ್ಲಿದ್ದಲು ಹಗರಣ" ಎಂಬ ರಾಜಕೀಯ ಕಥನದ ಕುರಿತೂ ಹೊಸ ಪ್ರಶ್ನೆಗಳನ್ನು ಎತ್ತಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ನ್ಯಾಯಪೀಠ, ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಪರಿಗಣಿಸಿ, ಡಾ. ಮನಮೋಹನ್ ಸಿಂಗ್ ವಿರುದ್ಧ ಕ್ರಿಮಿನಲ್ ವಿಚಾರಣೆ ಮುಂದುವರಿಸಲು ಯಾವುದೇ ಕಾನೂನುಬದ್ಧ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ, ಅವರ ವಿರುದ್ಧ ಈ ಹಿಂದೆ ಹೊರಡಿಸಲಾಗಿದ್ದ ಸಮನ್ಸ್ ಆದೇಶವನ್ನೂ ರದ್ದುಗೊಳಿಸಿದೆ.

2005ರಲ್ಲಿ ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದಂತೆ ಮನ್ಮೋಹನ್ ಸಿಂಗ್, ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪರಾಖ್ ಹಾಗೂ ಇತರ ಮೂವರನ್ನು ವಿಶೇಷ ನ್ಯಾಯಾಲಯವು ಆರೋಪಿಗಳನ್ನಾಗಿ ಮಾಡಿ 2015ರಲ್ಲಿ ಸಮನ್ಸ್ ಜಾರಿಗೊಳಿಸಿತ್ತು. ಆ ಸಮನ್ಸ್‌ಗೆ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು. ಈ ನಡುವೆ, ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಇತ್ತೀಚೆಗೆ ಸಾಕ್ಷ್ಯಾಧಾರಗಳ ಕೊರತೆಯಿಂದ ಮುಕ್ತಾಯದ ವರದಿ ಸಲ್ಲಿಸಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ.

ರಾಜಕೀಯ ಆರೋಪ ಮತ್ತು ನ್ಯಾಯಾಂಗದ ತೀರ್ಪಿನ ಬಗ್ಗೆ ಗಮನಿಸೋಣ, ಯುಪಿಎ 2ನೇ ಅವಧಿಯ ಸರ್ಕಾರದ ಅವಧಿಯಲ್ಲಿ "ಕೋಲ್‌ಗೇಟ್" ಎಂದು ವ್ಯಾಪಕವಾಗಿ ಚರ್ಚೆಯಾದ ಕಲ್ಲಿದ್ದಲು ಬ್ಲಾಕ್ ಹಂಚಿಕೆ ವಿವಾದ ದೇಶದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಅಂದಿನ ವಿರೋಧ ಪಕ್ಷವಾಗಿದ್ದ ಬಿಜೆಪಿ, ಈ ಪ್ರಕರಣವನ್ನು ಭ್ರಷ್ಟಾಚಾರದ ಪ್ರತೀಕವಾಗಿ ಜನರ ಮುಂದೆ ಇಟ್ಟಿತ್ತು. ಸಂಸತ್ತಿನ ಕಲಾಪಗಳು ಸ್ಥಗಿತಗೊಂಡಿದ್ದವು; ಮಾಧ್ಯಮಗಳಲ್ಲಿ ತಿಂಗಳುಗಟ್ಟಲೆ ಚರ್ಚೆಗಳು ನಡೆದಿದ್ದವು. ಆದರೆ ಸುಪ್ರೀಂ ಕೋರ್ಟ್ ತೀರ್ಪು, ಕ್ರಿಮಿನಲ್ ಹೊಣೆಗಾರಿಕೆಯನ್ನು ಸ್ಥಾಪಿಸಲು ಕೇವಲ ರಾಜಕೀಯ ಆರೋಪಗಳು ಅಥವಾ ಸಾರ್ವಜನಿಕ ಚರ್ಚೆಗಳು ಸಾಕಾಗುವುದಿಲ್ಲ ಎಂಬುದನ್ನು ಮತ್ತೊಮ್ಮೆ ಒತ್ತಿ ಹೇಳಿದಂತಿದೆ. ತನಿಖಾ ಸಂಸ್ಥೆಯೇ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಪ್ರಕರಣ ಮುಕ್ತಾಯಗೊಳಿಸಲು ಶಿಫಾರಸು ಮಾಡಿದ ಸಂದರ್ಭದಲ್ಲಿ, ಅದನ್ನು ತಿರಸ್ಕರಿಸಲು ಯಾವುದೇ ಬಲವಾದ ಕಾನೂನು ಕಾರಣವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಿಬಿಐ ತನಿಖೆಯ ಮಹತ್ವವೇನು ಹಾಗಾದ್ರೆ, ಈ ಪ್ರಕರಣದಲ್ಲಿ ಗಮನಾರ್ಹ ಅಂಶವೆಂದರೆ, ತನಿಖೆ ನಡೆಸಿದ ಸಿಬಿಐ ಮನಮೋಹನ್ ಸಿಂಗ್ ಸೇರಿದಂತೆ ಆರೋಪಿತರ ವಿರುದ್ಧ ದೋಷಾರೋಪಣೆ ಮಾಡಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ತಿಳಿಸಿ ಮುಕ್ತಾಯ ವರದಿ ಸಲ್ಲಿಸಿತ್ತು. ಆ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿರುವುದು, ಕ್ರಿಮಿನಲ್ ನ್ಯಾಯವ್ಯವಸ್ಥೆಯಲ್ಲಿ ಸಾಕ್ಷ್ಯಾಧಾರವೇ ಅಂತಿಮ ಮಾನದಂಡ ಎಂಬ ಮೂಲಭೂತ ತತ್ವವನ್ನು ಪುನರುಚ್ಚರಿಸುತ್ತದೆ ಎನ್ನುವುದು ಇಲ್ಲಿ ಮುಖ್ಯಾಂಶ. ಇನ್ನು, ಕಲ್ಲಿದ್ದಲು ಹಗರಣದ ವಿಷಯ ಭಾರತೀಯ ಚುನಾವಣಾ ರಾಜಕೀಯದಲ್ಲಿ ಪ್ರಮುಖ ವಿಷಯವಾಗಿತ್ತು. ಅನೇಕ ರಾಜಕೀಯ ಭಾಷಣಗಳು, ಟಿವಿ ಚರ್ಚೆಗಳು ಮತ್ತು ಪ್ರಚಾರಗಳಲ್ಲಿ ಈ ಪ್ರಕರಣವನ್ನು ಭ್ರಷ್ಟಾಚಾರದ ಸಂಕೇತವಾಗಿ ಬಳಸಲಾಯಿತು. ಆದರೆ ಅಂತಿಮವಾಗಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಆರೋಪಗಳು ಸಾಬೀತಾಗದೇ ಪ್ರಕರಣ ವಜಾಗೊಂಡಿರುವುದು, ಸಾರ್ವಜನಿಕ ವಲಯದಲ್ಲಿ ನಿರ್ಮಾಣವಾಗುವ ರಾಜಕೀಯ ಕಥನ ಮತ್ತು ನ್ಯಾಯಾಲಯದಲ್ಲಿ ಸಾಬೀತಾಗಬೇಕಾದ ಕಾನೂನು ಸತ್ಯಗಳ ನಡುವಿನ ವ್ಯತ್ಯಾಸವನ್ನು ನೆನಪಿಸುತ್ತದೆ. ಇದು ಮಾಧ್ಯಮಕ್ಕೂ ಆತ್ಮಾವಲೋಕನದ ವಿಷಯವಾಗಿದೆ. ತನಿಖೆ ಪೂರ್ಣಗೊಳ್ಳುವ ಮುನ್ನವೇ ವ್ಯಕ್ತಿಗಳನ್ನು ಅಪರಾಧಿಗಳೆಂದು ಬಿಂಬಿಸುವ ಪ್ರವೃತ್ತಿ ಪ್ರಜಾಪ್ರಭುತ್ವದ ನ್ಯಾಯತತ್ವಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬರಬಹುದು. ಈ ತೀರ್ಪು ಯುಪಿಎ ಸರ್ಕಾರದ ಅವಧಿಯ ಬಗ್ಗೆ ನಡೆದಿದ್ದ ಕೆಲವು ರಾಜಕೀಯ ಆರೋಪಗಳ ಮರುಮೌಲ್ಯಮಾಪನಕ್ಕೆ ಕಾರಣವಾಗಬಹುದು. ಮತ್ತೊಂದೆಡೆ, ಬಿಜೆಪಿ ಮತ್ತು ಅದರ ಬೆಂಬಲಿಗರು ಈ ತೀರ್ಪನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಆದ್ದರಿಂದ, ಈ ತೀರ್ಪು ಎಲ್ಲಾ ರಾಜಕೀಯ ಚರ್ಚೆಗಳಿಗೆ ಅಂತಿಮ ತೆರೆ ಎಳೆಯುತ್ತದೆ ಎಂದು ಹೇಳುವುದು ಸರಿಯಲ್ಲ. ಆದರೆ ಒಂದು ವಿಷಯ ಸ್ಪಷ್ಟವಾಗಿದೆ. ನ್ಯಾಯಾಲಯ ಕ್ರಿಮಿನಲ್ ಹೊಣೆಗಾರಿಕೆಯನ್ನು ನಿರ್ಧರಿಸುವಾಗ ರಾಜಕೀಯ ಪ್ರಚಾರಕ್ಕಿಂತ ಸಾಕ್ಷ್ಯಾಧಾರಗಳಿಗೆ ಹೆಚ್ಚಿನ ಮಹತ್ವ ನೀಡಿದೆ. ಇನ್ನು, ಇದರಿಂದ ಪ್ರಜಾಪ್ರಭುತ್ವಕ್ಕೆ ಸಂದೇಶವೇನು ನೋಡಿದರೆ, ಈ ತೀರ್ಪು, ಯಾವುದೇ ವ್ಯಕ್ತಿಯ ವಿರುದ್ಧ ಗಂಭೀರ ಆರೋಪಗಳಿದ್ದರೂ ಅವು ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಮೂಲಕ ಸಾಬೀತಾಗಬೇಕು ಎಂಬ ಸಂವಿಧಾನಾತ್ಮಕ ತತ್ವವನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಸಾರ್ವಜನಿಕ ಚರ್ಚೆಗಳು, ರಾಜಕೀಯ ಆರೋಪಗಳು ಮತ್ತು ಮಾಧ್ಯಮದ ನಿರೂಪಣೆಗಳು ಪ್ರತ್ಯೇಕವಾದರೆ, ನ್ಯಾಯಾಂಗದ ತೀರ್ಪು ಪ್ರತ್ಯೇಕವಾಗಿರಬಹುದು ಎಂಬುದನ್ನು ಇದು ತೋರಿಸುತ್ತದೆ. ಒಟ್ಟಿನಲ್ಲಿ, ಡಾ. ಮನಮೋಹನ್ ಸಿಂಗ್ ಅವರ ವಿರುದ್ಧದ ಈ ಪ್ರಕರಣದ ವಜಾ, ಭಾರತೀಯ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಸಾಕ್ಷ್ಯಾಧಾರಗಳ ಮಹತ್ವವನ್ನು ಪುನಃ ಒತ್ತಿಹೇಳುವುದರ ಜೊತೆಗೆ, ರಾಜಕೀಯ ಆರೋಪಗಳನ್ನು ಅಂತಿಮ ಸತ್ಯವೆಂದು ಪರಿಗಣಿಸಬಾರದು ಎಂಬ ಸಂದೇಶವನ್ನೂ ನೀಡುತ್ತದೆ. ಇದೇ ವೇಳೆ, ದೀರ್ಘಕಾಲದ ಸಾರ್ವಜನಿಕ ಚರ್ಚೆ ಮತ್ತು ರಾಜಕೀಯ ಆರೋಪಗಳ ಪರಿಣಾಮವಾಗಿ ರೂಪುಗೊಂಡ ಸಾರ್ವಜನಿಕ ಅಭಿಪ್ರಾಯವನ್ನು ಮರುಪರಿಶೀಲಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನೂ ಈ ತೀರ್ಪು ಸಮಾಜದ ಮುಂದೆ ಇಟ್ಟಿದೆ ಎನ್ನುವುದು ಇಲ್ಲಿ ಮುಖ್ಯಾಂಶ. 

ಈ ನಡುವೆ ತಮ್ಮ ವಿರುದ್ಧ ಆರೋಪಗಳು ಮತ್ತು ನಾನಾ ರೀತಿಯಲ್ಲಿ ದಾಳಿಗಳು ನಡೆದಾಗ ಮನಮೋಹನ್‌ ಸಿಂಗ್‌ ಅವರು, “ಸಮಕಾಲೀನ ಮಾಧ್ಯಮಗಳು ಅಥವಾ ಸಂಸತ್ತಿನಲ್ಲಿರುವ ವಿರೋಧ ಪಕ್ಷಗಳಿಗಿಂತ ಇತಿಹಾಸವೇ ನನ್ನ ಬಗ್ಗೆ ಹೆಚ್ಚು ಉದಾರವಾಗಿರಲಿದೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ” ಎಂದು ಹೇಳಿದ್ದರು ಎಂಬುದನ್ನೂ ನಾವು ಸ್ಮರಿಸಬೇಕಿದೆ.

-ಶ್ರೀರಾಜ್ ವಕ್ವಾಡಿ 

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಪ್ರಯೋಗ : ಪ್ರಿಯಾಂಕಾ ಆರೋಪ ! ಕೇಂದ್ರದ ದಮನಕಾರಿ ನೀತಿ

 ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ಹಾಗೂ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯ ಕುರಿತಾಗಿ ದೇಶದಾದ್ಯಂತ ವಿದ್ಯಾರ್ಥಿಗಳ ಅಸಮಾಧಾನ ಹೆಚ್ಚುತ್ತಿರುವ ಸಂದರ್ಭದಲ್ಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಮೇಲೆ ಪೊಲೀಸರು ಬಲಪ್ರಯೋಗ ನಡೆಸಿರುವುದು ಹೊಸ ರಾಜಕೀಯ ಮತ್ತು ಮಾನವ ಹಕ್ಕುಗಳ ಚರ್ಚೆಗೆ ಕಾರಣವಾಗಿದೆ. ಈ ಘಟನೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರವಾಗಿ ಖಂಡಿಸಿದ್ದು, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಮತ್ತು AK-47 ನಂತಹ ಮಾರಕಾಸ್ತ್ರಗಳನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೂ ಮಾಧ್ಯಮಗಳ ಮುಂದೆ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಪ್ರಯೋಗಿಸಲಾಗಿದೆ ಎಂದು ಸಾಕ್ಷ್ಯಗಳೊಂದಿಗೆ ಆರೋಪಿಸಿದ್ದಾರೆ. ಈ ಆರೋಪಗಳು ಸತ್ಯವೇ ಎಂಬುದು ಸ್ವತಂತ್ರ ತನಿಖೆಯ ಮೂಲಕ ಸ್ಪಷ್ಟವಾಗಬೇಕಿದೆ. ಆದರೆ, ಈ ಬೆಳವಣಿಗೆ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ ಎನ್ನುವುದು ಇಲ್ಲಿ ಮುಖ್ಯಾಂಶ. 

ಪ್ರತಿಭಟನೆಯ ಮೇಲೆ ಪೆಲೆಟ್ ಗನ್ ಬಳಕೆ ಕಾನೂನುಬದ್ಧವೇ? ಎನ್ನುವ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಪೆಲೆಟ್ ಗನ್ ಅನ್ನು ಸಾಮಾನ್ಯವಾಗಿ Less Lethal ಅಸ್ತ್ರ ಎಂದು ಹೇಳಲಾಗುತ್ತದೆ. ಆದರೆ ಅದು ನಿರಪಾಯವಲ್ಲ. ಕಾಶ್ಮೀರದಲ್ಲಿ ಜನಸ್ತೋಮ ನಿಯಂತ್ರಣದ ಹೆಸರಿನಲ್ಲಿ ಪೆಲೆಟ್ ಗನ್ ಬಳಕೆಯಿಂದ ನೂರಾರು ಜನರು ದೃಷ್ಟಿ ಕಳೆದುಕೊಂಡ ಘಟನೆಗಳು ಈ ಹಿಂದೆ ದಾಖಲಾಗಿವೆ. ಮಾನವ ಹಕ್ಕುಗಳ ಸಂಘಟನೆಗಳು ಈ ಅಸ್ತ್ರದ ಬಳಕೆಯನ್ನು ಹಲವು ಬಾರಿ ಪ್ರಶ್ನಿಸಿವೆ. ಭಾರತದಲ್ಲಿ ಜನಸ್ತೋಮ ನಿಯಂತ್ರಣಕ್ಕೆ ಸಾಮಾನ್ಯವಾಗಿ ಅನುಸರಿಸುವ ಕ್ರಮಗಳು ಏನೆಂದ್ರೆ, ಮಾತುಕತೆ ಮತ್ತು ಎಚ್ಚರಿಕೆ ನೀಡುವುದು,  ಬ್ಯಾರಿಕೇಡ್ ಮತ್ತು ನಿಯಂತ್ರಿತ ತಡೆ ಹಾಕುವುದು, ವಾಟರ್ ಫಿರಂಗಿ ಬಳಸುವುದು, ಅಶ್ರುವಾಯುವನ್ನು ಸಹಜವಾಗಿ ಬಳಕೆ ಮಾಡುತ್ತಾರೆ. ಅಗತ್ಯವಿದ್ದರೆ ಮಾತ್ರ ಸೀಮಿತ ಬಲಪ್ರಯೋಗವನ್ನು ಮಾಡಲಾಗುತ್ತದೆ. ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯ ಸಂದರ್ಭದಲ್ಲೇ ಪೆಲೆಟ್ ಗನ್ ಬಳಕೆ ನಡೆದಿದ್ದರೆ, ಅದು Proportional Use of Force ಎಂಬ ತತ್ವಕ್ಕೆ ವಿರುದ್ಧವಾಗಿದೆಯೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

 ಹಾಗಾದರೇ, ವಿದ್ಯಾರ್ಥಿಗಳು ಭಯೋತ್ಪಾದಕರೇ? ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಹೊಸ ವಿಷಯವಲ್ಲ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಮಂಡಲ್ ಆಯೋಗ, ಶಿಕ್ಷಣ ನೀತಿ, ಉದ್ಯೋಗ, ಪರೀಕ್ಷಾ ಅಕ್ರಮಗಳವರೆಗೆ ವಿದ್ಯಾರ್ಥಿ ಚಳವಳಿಗಳು ಭಾರತೀಯ ಪ್ರಜಾಪ್ರಭುತ್ವದ ಪ್ರಮುಖ ಭಾಗವಾಗಿವೆ. ವಿದ್ಯಾರ್ಥಿಗಳು ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಅವರ ಸಂವಿಧಾನಾತ್ಮಕ ಹಕ್ಕು. ಅವರು ಶಸ್ತ್ರಸಜ್ಜಿತ ಹಿಂಸಾಚಾರ ನಡೆಸದಿದ್ದರೆ ಅಥವಾ ಸಾರ್ವಜನಿಕ ಸುರಕ್ಷತೆಗೆ ತೀವ್ರ ಅಪಾಯ ಉಂಟುಮಾಡದಿದ್ದರೆ, ಅವರನ್ನು ಭಯೋತ್ಪಾದಕರಂತೆ ಪರಿಗಣಿಸುವುದು ಅಥವಾ ಅದಕ್ಕೆ ಸಮಾನವಾದ ಕಠಿಣ ಕ್ರಮಗಳನ್ನು ಬಳಸುವುದು ಗಂಭೀರ ಪ್ರಜಾಪ್ರಭುತ್ವದ ಚರ್ಚೆಗೆ ಕಾರಣವಾಗುತ್ತದೆ. ಯಾವುದೇ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊಂದಿದೆ. ಆದರೆ ಬಲಪ್ರಯೋಗ ಯಾವಾಗಲೂ ಕೊನೆಯ ಆಯ್ಕೆಯಾಗಿರಬೇಕು. ಅದರಲ್ಲೂ ವಿದ್ಯಾರ್ಥಿಗಳಂತಹ ನಾಗರಿಕರ ವಿರುದ್ಧ ಬಳಸುವ ಕ್ರಮವು ಅಗತ್ಯ, ಸಮಂಜಸವಾಗಿರಬೇಕು. ಯಾವುದೇ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಅತಿಯಾದ ಬಲಪ್ರಯೋಗ ಬಳಸಲಾಗಿದೆ ಎಂಬುದು ಸಾಬೀತಾದರೆ, ಅದು ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ. ಮತ್ತೊಂದೆಡೆ, ಪ್ರತಿಭಟನೆ ಹಿಂಸಾತ್ಮಕವಾಗಿತ್ತು ಎಂದು ಸರ್ಕಾರ ಹೇಳುತ್ತಿದ್ದರೆ, ಅದರ ಬಗ್ಗೆ ಪಾರದರ್ಶಕ ತನಿಖೆ, ದೃಶ್ಯ ಸಾಕ್ಷ್ಯಗಳು ಮತ್ತು ಅಧಿಕೃತ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗುವುದು ಅಗತ್ಯ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ವಿವಾದಗಳು ವಿದ್ಯಾರ್ಥಿಗಳಲ್ಲಿ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಗ್ಗಿಸಿವೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವುದಕ್ಕಿಂತ ಪ್ರತಿಭಟನೆಗಳ ನಿರ್ವಹಣೆ ಹೆಚ್ಚು ಸುದ್ದಿಯಾಗುತ್ತಿದ್ದರೆ, ಅದು ಆಡಳಿತದ ಆದ್ಯತೆಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಸಂವಿಧಾನಾತ್ಮಕ ಹಕ್ಕಾಗಿದೆ. ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಹೊಂದಿದ್ದರೂ, ಆ ಜವಾಬ್ದಾರಿಯ ಅನುಷ್ಠಾನದಲ್ಲಿ ಮಾನವ ಹಕ್ಕುಗಳು, ಅನುಪಾತಬದ್ಧ ಬಲಪ್ರಯೋಗ ಮತ್ತು ನಾಗರಿಕ ಸ್ವಾತಂತ್ರ್ಯಗಳ ಗೌರವ ಅತ್ಯಗತ್ಯ. 

ಒಟ್ಟಿನಲ್ಲಿ, ವಿದ್ಯಾರ್ಥಿಗಳ ಮೇಲಿನ ಪೆಲೆಟ್ ಗನ್ ಬಳಕೆಯ ಆರೋಪಗಳು ನಿಜವೇ ಅಥವಾ ಅಲ್ಲವೇ ಎಂಬುದನ್ನು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ಸ್ಪಷ್ಟಪಡಿಸಬೇಕು. ಸತ್ಯಾಂಶಗಳು ಹೊರಬಂದ ನಂತರವೇ ಅಂತಿಮ ಹೊಣೆಗಾರಿಕೆ ನಿರ್ಧಾರವಾಗಬೇಕು. ಆದರೆ ಒಂದು ವಿಷಯ ಸ್ಪಷ್ಟ. ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುವುದು ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಆಲಿಸುವುದು ಯಾವುದೇ ಪ್ರಜಾಪ್ರಭುತ್ವ ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

‌-ಶ್ರೀರಾಜ್ ವಕ್ವಾಡಿ

ವಿಶ್ವಾಸವೇ ಗೆಲ್ಲುವ ತಂತ್ರ ! : ಕೇಂದ್ರ, ರಾಜ್ಯ ಸಮನ್ವಯಕ್ಕೆ ಡಿಕೆಶಿ ಒತ್ತು !

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರನ್ನೊಳಗೊಂಡು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಭೆ ಮಾಡಿದ್ದಾರೆ. ಜನರ ಕಲ್ಯಾಣಕ್ಕೆ ಪಕ್ಷ ರಾಜಕಾರಣ ಪಕ್ಕಕ್ಕೆ ಇಟ್ಟು ಅಭಿವೃದ್ಧಿ ವಿಚಾರ ಬಂದಾಗ, ಕರ್ನಾಟಕದ ಹಿತಕ್ಕಾಗಿ ನಾವೆಲ್ಲ ಒಟ್ಟಿಗೇ ಕೆಲಸ ಮಾಡೋಣ ಅಂದಿದ್ದಾರೆ. ರಾಜ್ಯದ ಪ್ರಗತಿಗೆ ನಿಮ್ಮ ಸಹಕಾರ ಬಯಸುತ್ತೇನೆ. ಕೇಂದ್ರ ಸರಕಾರದ ಮುಂದೆ ಬಾಕಿ ಉಳಿದಿರುವ ವಿವಿಧ ಯೋಜನೆಗಳಿಗೆ ಅನುಮತಿ ದೊರಕಿಸಿಕೊಡಲು ನಿಮ್ಮ ಸಹಕಾರ ಬಹುಮುಖ್ಯ ಎಂದಿದ್ದಾರೆ. ಸಿಎಂ ಡಿಕೆಶಿ ಅವರು ವಿಶ್ವಾಸದಿಂದ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದ್ದಾರೆ.

ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ನವದೆಹಲಿಯ ಕರ್ನಾಟಕ ಭವನದಲ್ಲಿ ಇಂದು ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿ, ಕೇಂದ್ರ ಸರ್ಕಾರದ ಬಳಿ ಬಾಕಿ ಇರುವ ರಾಜ್ಯದ ಹಿತದೃಷ್ಟಿಯ 13 ಪ್ರಮುಖ ಯೋಜನೆಗಳು ಹಾಗೂ ಅನುದಾನಗಳ ಶೀಘ್ರ ಬಿಡುಗಡೆಗಾಗಿ ಒತ್ತಡ ಹೇರುವ ನಿಟ್ಟಿನಲ್ಲಿ ಚರ್ಚಿಸಿದರು. 15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿ ಅನುದಾನ ಬಿಡುಗಡೆ, ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR) ಯೋಜನೆ, ಬೆಂಗಳೂರು ಉಪನಗರ ರೈಲು ಯೋಜನೆ, ಕೋಲಾರ ರೈಲ್ವೇ ಕೋಚ್ ಕಾರ್ಖಾನೆ, ಹೆಚ್‌ಎಎಲ್ ವಿಮಾನ ನಿಲ್ದಾಣ ಪುನರಾರಂಭ, ಸಾಗರಮಾಲಾ 2.0 ಕಾರ್ಯಯೋಜನೆ ಅನುಮೋದನೆ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ತೆಂಗು ಹಾಗೂ ಅಡಿಕೆ ಬೆಳೆಗಳ ಕೀಟ ನಿಯಂತ್ರಣಕ್ಕೆ ನೆರವು, ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರ, ರಕ್ಷಣಾ ಇಲಾಖೆಯ ಭೂಮಿ ರಾಜ್ಯ ಸರ್ಕಾರಕ್ಕೆ ವರ್ಗಾವಣೆ, ಅತಿ ವೇಗದ ರೈಲು ಮಾರ್ಗ, ಪೊಲೀಸ್ ವ್ಯವಸ್ಥೆ ಆಧುನೀಕರಣ, ಕೇಂದ್ರ ಗೃಹ ಸಚಿವಾಲಯದಲ್ಲಿ ಬಾಕಿ ಇರುವ ರಾಜ್ಯದ ಪ್ರಮುಖ ವಿಧೇಯಕಗಳು ಸೇರಿದಂತೆ ಕರ್ನಾಟಕದ ಹಕ್ಕುಗಳು, ಕನ್ನಡಿಗರ ಹಿತಾಸಕ್ತಿ ಹಾಗೂ ರಾಜ್ಯದ ಸಮಗ್ರ ಪ್ರಗತಿಗಾಗಿ ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಶ್ರಮಿಸಲು ಈ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಆಗ್ರಹಿಸಿದರು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನ ಬಿಡುಗಡೆ ಮಾಡಿಸಲು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ಡಿಕೆಶಿ ರಾಜ್ಯವನ್ನು ಪ್ರತಿನಿಧಿಸುವ ಎಲ್ಲಾ ಕೇಂದ್ರ ಸಚಿವರಿಗೆ, ಸಂಸದರಿಗೆ ಸೂಚಿಸಿದರು. 

"ಪಕ್ಷಪಾತದ ರಾಜಕೀಯವನ್ನು ಬದಿಗಿಟ್ಟು ರಾಜ್ಯದ ಹಿತಕ್ಕಾಗಿ ಒಂದಾಗಿ ಕೆಲಸ ಮಾಡೋಣ" ಎಂದು ಡಿಕೆಶಿ ಕರೆ ನೀಡಿದ್ದಾರೆ. ವಿಶ್ವಾಸವೇ ಗೆಲುವಿನ ದಾರಿ ಎಂಬ ನಿಲುವಿಗೆ ಡಿಕೆಶಿ ಬಂದಿದ್ದಾರೆ. ಆದರೇ, ಇದರ ಲಾಭ ವಿಮುಖವಾಗದ ಹಾಗೆ ನೋಡಿಕೊಳ್ಳುವ ಅನಿವಾರ್ಯತೆಯೂ ಡಿಕೆಶಿ ಮುಂದೆ ಸವಾಲಾಗಿ ಇದೆ. ಮೊದಲ ನೋಟಕ್ಕೆ ಇದು ಪ್ರಜಾಪ್ರಭುತ್ವದ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಸೂಕ್ತವಾದ ಕರೆಯಂತೆ ಕಂಡರೂ, ಇದರ ಆಳದಲ್ಲಿ ಕರ್ನಾಟಕ ಪ್ರಸ್ತುತ ಎದುರಿಸುತ್ತಿರುವ ಆಡಳಿತಾತ್ಮಕ, ವಾತಾವರಣದ ಮತ್ತು ರಾಜಕೀಯ ಸವಾಲುಗಳ ಸ್ಪಷ್ಟ ಚಿತ್ರಣವಿದೆ.  ಕೇಂದ್ರದಲ್ಲಿ ಒಂದು ಪಕ್ಷ ಹಾಗೂ ರಾಜ್ಯದಲ್ಲಿ ಮತ್ತೊಂದು ಪಕ್ಷ ಆಡಳಿತದಲ್ಲಿದ್ದಾಗ, ಪ್ರಾದೇಶಿಕ ಅಭಿವೃದ್ಧಿ ಯೋಜನೆಗಳು ರಾಜಕೀಯ ಮೇಲಾಟಕ್ಕೆ ಸಿಲುಕುವುದು ಭಾರತೀಯ ರಾಜಕೀಯದಲ್ಲಿ ಹೊಸದೇನಲ್ಲ. ಪಕ್ಷಾತೀತ ಸಹಕಾರದ ಅಗತ್ಯವನ್ನು ಡಿಕೆ ಶಿವಕುಮಾರ್‌ ಅವರು ಎತ್ತಿ ಹೇಳಿದ್ದಾರೆ. 

ರಾಜ್ಯದಿಂದ ಆಯ್ಕೆಯಾದ ಕೇಂದ್ರ ಸಚಿವರು ಮತ್ತು ಸಂಸದರು ಪಕ್ಷದ ಗಡಿಯಾಚೆಗೆ ನಿಂತು ರಾಜ್ಯದ ಹಿತಾಸಕ್ತಿಯನ್ನು ಪ್ರತಿಪಾದಿಸಬೇಕಿದೆ. ತೆರಿಗೆ ಹಂಚಿಕೆ ಮತ್ತು ಯೋಜನೆಗಳ ಅನುಮತಿಯಲ್ಲಿ ರಾಜ್ಯಗಳಿಗೆ ನೀಡಬೇಕಾದ ನ್ಯಾಯಯುತ ಪಾಲನ್ನು ತಡೆಹಿಡಿಯುವುದು ಒಕ್ಕೂಟ ತತ್ತ್ವಕ್ಕೆ ವಿರುದ್ಧವಾದುದು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರು ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ವಿಶ್ವಾಸದಿಂದ ಮುಂದಡಿಯಿಡುತ್ತಿರುವುದು ಮತ್ತು "ವಿಶ್ವಾಸವೇ ಗೆಲುವಿನ ದಾರಿ" ಎಂಬ ಧೋರಣೆ ತಳೆದಿರುವುದು ಅವರ ಆಡಳಿತಾತ್ಮಕ ಸಕ್ರಿಯತೆಯನ್ನು ತೋರಿಸುತ್ತದೆ. ಆದರೆ, ಈ ವಿಶ್ವಾಸದ ರಾಜಕೀಯಕ್ಕೆ ತನ್ನದೇ ಆದ ಇತಿಮಿತಿಗಳಿವೆ. ಲಾಭ ವಿಮುಖವಾಗದಂತೆ ನೋಡಿಕೊಳ್ಳುವ ಹೊಣೆ ಡಿಕೆಶಿ ಮೇಲಿದೆ. ಕೇಂದ್ರದ ಬೆಂಬಲ ಸಿಗದೆ ಯೋಜನೆಗಳು ವಿಳಂಬವಾದರೆ, ಅಥವಾ ಈ ರಾಜಕೀಯ ತಂತ್ರಗಾರಿಕೆ ಸಾರ್ವಜನಿಕರ ಹಿತಾಸಕ್ತಿಗೆ ಪೂರಕವಾಗದಿದ್ದರೆ, ಅದರ ರಾಜಕೀಯ ನಷ್ಟವನ್ನು ಆಡಳಿತಾರೂಢ ಸರ್ಕಾರವೇ ಅನುಭವಿಸಬೇಕಾಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಬೃಹತ್ ಯೋಜನೆಗಳಿಗೆ ನೀಡುವ ಆದ್ಯತೆಯು ಸಮಾಜದ ಕೆಳವರ್ಗದ ಮತ್ತು ರೈತರ ತಕ್ಷಣದ ಅಗತ್ಯಗಳನ್ನು ಮೂಲೆಗುಂಪು ಮಾಡದಂತೆ ನೋಡಿಕೊಳ್ಳುವುದು ಪ್ರಗತಿಪರ ರಾಜಕೀಯದ ಸವಾಲಾಗಿದೆ.

ಒಟ್ಟಿನಲ್ಲಿ , ಕರ್ನಾಟಕದ ಇಂದಿನ ಸ್ಥಿತಿಗೆ 'ಪಕ್ಷಾತೀತ ಒಕ್ಕೂಟ ರಾಜಕೀಯ' ಅತ್ಯಗತ್ಯ. ಆದರೆ, ದೆಹಲಿ ಮಟ್ಟದಲ್ಲಿ ನಡೆದ ಸಂಸದರ ಸಭೆಗಳು ಕೇವಲ ಸಾಂಕೇತಿಕ ಹೇಳಿಕೆಗಳಿಗೆ ಸೀಮಿತವಾಗದೆ, ನಿಜವಾದ ಅನುದಾನ ಮತ್ತು ಯೋಜನೆಗಳ ರೂಪದಲ್ಲಿ ರಾಜ್ಯಕ್ಕೆ ತಲುಪಬೇಕಿದೆ. ಡಿಕೆಶಿ ಅವರ ವಿಶ್ವಾಸದ ರಾಜಕೀಯ ರಾಜ್ಯದ ಕಟ್ಟಕಡೆಯ ನಾಗರಿಕನ ಬೇಡಿಕೆ ತೀರಿಸುವಲ್ಲಿ ಯಶಸ್ವಿಯಾದರೆ ಮಾತ್ರವೇ ಅವರ ಈ ಹೆಜ್ಜೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಾರ್ಥಕವೆನಿಸಿಕೊಳ್ಳುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

-ಶ್ರೀರಾಜ್ ವಕ್ವಾಡಿ 

ಹೆಚ್ಚುವರಿ ಡಿಸಿಎಂ ಸ್ಥಾನಕ್ಕೆ ಡಿಕೆಶಿ ಒಲವು : ಮಾಸ್ಟರ್ ಪ್ಲ್ಯಾನ್ !

 ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹೈಕಮಾಂಡ್ ಮಟ್ಟದ ಹೈವೋಲ್ಟೇಜ್ ಮೀಟಿಂಗ್ ಕುತೂಹಲ ಸೃಷ್ಟಿಸಿದೆ. ಸಿಎಂ ಡಿಕೆ ಶಿವಕುಮಾರ್ ಅವರು ಮತ್ತೆರಡು ಡಿಸಿಎಂ ಹುದ್ದೆ ಸೃಷ್ಟಿಸಲು ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಲಿಂಗಾಯತ ಸಮುದಾಯದಿಂದ ಒಬ್ಬರು, ಹಿಂದುಳಿದ ವರ್ಗದಿಂದ ಒಬ್ಬರಿಗೆ ಡಿಸಿಎಂ ಹುದ್ದೆಯನ್ನು ಸೃಷ್ಟಿಸಿದರೇ 2028ರ ಚುನಾವಣೆಗೆ ಅನುಕೂಲವಾಗಲಿದೆ ಮತ್ತು ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟನ್ನು ಬಗೆಹರಿಸಬಹುದು ಎನ್ನುವುದು ಡಿಕೆಶಿ ಲೆಕ್ಕಾಚಾರ.

 ರಾಜ್ಯ ರಾಜಕಾರಣದಲ್ಲಿ ಹೊಸ ದಾಳವನ್ನು ಡಿಕೆಶಿ ಉರುಳಿಸಿದ್ದಾರೆ. ಹೆಚ್ಚುವರಿ ಡಿಸಿಎಂ ಹುದ್ದೆಗಳ ಹೆಚ್ಚಳದ ಹಿಂದೆ ಡಿಕೆಶಿ ‘ಮಾಸ್ಟರ್ ಪ್ಲಾನ್’ ಎನ್ನುವುದರಲ್ಲಿ ಅನುಮಾನವೇ ಇಲ್ಲ.  

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಅಧಿಕಾರದ ಹೊಸ ತಕ್ಕಡಿ ತೂಗುವ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯ ಸಚಿವ ಸಂಪುಟ ಪುನಾರಚನೆ ಮತ್ತು ವಿಸ್ತರಣೆಯ ಸುಳಿವಿನ ನಡುವೆ, ನವದೆಹಲಿಯಲ್ಲಿ ಹೈಕಮಾಂಡ್ ಮಟ್ಟದ ‘ಹೈವೋಲ್ಟೇಜ್’ ಸಭೆಗಳು ಕಾವೇರಿವೆ. ಆದರೆ, ಈ ಬಾರಿ ವಿಸ್ತರಣೆಯ ಚರ್ಚೆ ಬರೀ ಸಚಿವ ಸ್ಥಾನಗಳಿಗಷ್ಟೇ ಸೀಮಿತವಾಗಿಲ್ಲ; ಎರಡು ಹೆಚ್ಚುವರಿ ಉಪಮುಖ್ಯಮಂತ್ರಿ (DCM) ಹುದ್ದೆಗಳ ಸೃಷ್ಟಿಯ ಪ್ರಸ್ತಾಪ ಈಗ ದೆಹಲಿಗೆ ತಲುಪಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ವಿಶೇಷವೆಂದರೆ, ಈ ಬಾರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಒಲವು ತೋರಿದ್ದಾರೆ ಎನ್ನುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಮಾಸ್ಟರ್‌ ಪ್ಲ್ಯಾನ್‌ ಹಿಂದೆ ಕೇಲವೇ ಕೆಲ ವ್ಯಕ್ತಿಗಳ ಅಧಿಕಾರದ ದಾಹಕ್ಕಿಂತ ಹೆಚ್ಚಾಗಿ ಸಾಮಾಜಿಕ ಪ್ರಾತಿನಿಧ್ಯದ ರಾಜಕಾರಣ ಮತ್ತು 2028ರ ಚುನಾವಣೆಯ ದೀರ್ಘಕಾಲೀನ ತಂತ್ರಗಾರಿಕೆ ಎದ್ದು ಕಾಣುತ್ತದೆ.

‘ಅಧಿಕಾರ ಹಂಚಿಕೆ’ಯಿಂದ ‘ಸಾಮಾಜಿಕ ನ್ಯಾಯದ’ ಹಾದಿಯತ್ತ? ಸಾಗುವುದಕ್ಕೆ ಡಿಕೆಶಿ ಮನಸ್ಸು ಮಾಡಿರುವುದು ಕೂಡ ಇಲ್ಲಿ ಉಲ್ಲೇಖನೀಯ. ಹಿಂದುಳಿದ ವರ್ಗಗಳು (OBC), ದಲಿತರು ಮತ್ತು ಅಲ್ಪಸಂಖ್ಯಾತರ ರಾಜಕೀಯ ಪಾಲುದಾರಿಕೆ ಯಾವಾಗಲೂ ಮುಖ್ಯ ಚರ್ಚಾವಸ್ತುವಾಗಿದೆ. ಲಿಂಗಾಯತ ಮತ್ತು ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ನೀಡುವುದಕ್ಕೆ ಮುಂದಾಗಿರುವುದು ಕಾಣಿಸುತ್ತಿದೆ. ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಸಮುದಾಯ ಮತ್ತು ಹಿಂದುಳಿದ ವರ್ಗಗಳು ಪ್ರಮುಖ ನಿರ್ಣಾಯಕ ಮತಬ್ಯಾಂಕ್‌ಗಳಾಗಿವೆ. ಲಿಂಗಾಯತ ಸಮುದಾಯದಿಂದ ಒಬ್ಬರು ಹಾಗೂ ಹಿಂದುಳಿದ ವರ್ಗಗಳಿಂದ ಮತ್ತೊಬ್ಬರನ್ನು ಡಿಸಿಎಂ ಸ್ಥಾನಕ್ಕೇರಿಸುವುದು ಎಂದರೆ, ಕೇವಲ ಒಬ್ಬ ವ್ಯಕ್ತಿಗೆ ಹುದ್ದೆ ನೀಡುವುದಲ್ಲ; ಬದಲಿಗೆ ಆ ಬೃಹತ್ ಸಮುದಾಯಗಳಿಗೆ ಭರವಸೆ ನೀಡುವುದು ಮತ್ತು ಆ ಸಮುದಾಯಗಳಲ್ಲಿ ಕಾಂಗ್ರೆಸ್‌ ಬಗ್ಗೆ ವಿಶ್ವಾಸ ಮೂಡಿಸುವ ಲೆಕ್ಕಾಚಾರವಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.  ಬಿಜೆಪಿ ಮತ್ತು ಆರ್‌ಎಸ್ಎಸ್ ರೂಪಿಸುವ ಹಿಂದುತ್ವದ ಮತಧ್ರುವೀಕರಣದ ರಾಜಕಾರಣಕ್ಕೆ ಪ್ರತಿಯಾಗಿ, ಕಾಂಗ್ರೆಸ್ ತಾನು 'ಸಾಮಾಜಿಕ ಸಮತೋಲನ' ಕಾಯ್ದುಕೊಂಡಿದೆ ಎಂದು ತೋರಿಸಲು ಇದು ಅತ್ಯಂತ ಪರಿಣಾಮಕಾರಿ ಅಸ್ತ್ರ.

ಡಿಕೆಶಿ ಲೆಕ್ಕಾಚಾರ: ಪಕ್ಷದ ಮೇಲಿನ ಹಿಡಿತವೇ ಅಥವಾ ಸಂಘಟನಾ ಬಲವೇ? ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ. ಡಿಕೆ ಶಿವಕುಮಾರ್ ಅವರು ತಾವೊಬ್ಬರೇ ‘ನಿರ್ಣಾಯಕ’ ಆಗಿ ಉಳಿಯಲು ಬಯಸುತ್ತಾರೆ ಎಂಬ ಆರಂಭಿಕ ಕಲ್ಪನೆಯನ್ನು ಈ ಬೆಳವಣಿಗೆ ಸುಳ್ಳಾಗಿಸುವಂತೆ ಕಾಣುತ್ತಿದೆ. ಇದರ ಹಿಂದೆ ಮೂರು ಪ್ರಮುಖ ರಾಜಕೀಯ ತಂತ್ರಗಳಿವೆ ಎನ್ನುವುದು ಕೂಡ ಇಲ್ಲಿ ಮುಖ್ಯಾಂಶ.  ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಹಲವು ಪ್ರಭಾವಿ ನಾಯಕರು ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದರು. ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ನೀಡುವ ಮೂಲಕ ಶಾಸಕರು ಮತ್ತು ನಾಯಕರ ಅಸಮಾಧಾನವನ್ನು ಶಮನಗೊಳಿಸಬಹುದು. ತಮ್ಮ ಮೇಲಿನ ಒತ್ತಡ ಕಡಿಮೆ ಮಾಡಿಕೊಂಡ ಹಾಗೆಯೂ ಆಗುತ್ತದೆ. ತಾವೇ ಎಲ್ಲಾ ಸಾಮಾಜಿಕ ವರ್ಗಗಳನ್ನು ಪ್ರತಿನಿಧಿಸುವ ಬದಲು, ಇತರ ಸಮುದಾಯದ ಪ್ರಬಲವಾದ ನಾಯಕರನ್ನು ಡಿಸಿಎಂ ಮಾಡಿ ಒಟ್ಟಾರೆ ಪಕ್ಷ ಸಂಘಟನೆಯ ಹೊಣೆಯನ್ನು ಹಂಚಿಕೊಳ್ಳುವುದಕ್ಕೆ ಇಲ್ಲಿ ಮಾಸ್ಟರ್‌ ಪ್ಲ್ಯಾನ್‌ ಮಾಡಲಾಗಿದೆ ಎಂಬಂತೆ ಕಾಣಿಸುತ್ತಿದೆ. ಇನ್ನು, ಇದು 2028ರ ವಿಧಾನಸಭಾ ಚುನಾವಣೆಗೆ ಇದು ತಡಿರಹಿತ ಯೋಜನೆ ಎಂಬಂತೆಯೂ ಕಾಣಿಸುತ್ತಿದೆ. 2028ರ ವಿಧಾನಸಭಾ ಚುನಾವಣೆಯ ವೇಳೆಗೆ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಎದುರಿಸಲು ಕಾಂಗ್ರೆಸ್‌ಗೆ ಪ್ರಾದೇಶಿಕ ಮತ್ತು ಸಮುದಾಯ ಆಧಾರಿತ ಗಟ್ಟಿ ನಾಯಕತ್ವದ ಅಗತ್ಯವಿದೆ. ಅದರ ಭಾಗವಾಗಿ ಈ ರಣತಂತ್ರಕ್ಕೆ ಡಿಕೆಶಿ ವ್ಯೂಹ ರಚನೆ ಮಾಡಿದ್ದಾರೆ ಎಂಬಂತೆ ಕಾಣಿಸುತ್ತಿದೆ. ಡಿಸಿಎಂ ಹುದ್ದೆ ನೀಡುವುದು ಬರೀ ಚುನಾವಣಾ ತಂತ್ರ ಅಥವಾ ಸಾಂಕೇತಿಕ ರಾಜಕಾರಣವಾಗಬಾರದು. ಆ ಹುದ್ದೆಗಳಿಗೆ ಸೂಕ್ತ ಅಧಿಕಾರ ಮತ್ತು ಆಯಾ ಸಮುದಾಯಗಳ ನೈಜ ಅಭಿವೃದ್ಧಿಗೆ ಶ್ರಮಿಸುವ ಅವಕಾಶವೂ ಸಿಗಬೇಕು. ಹೆಚ್ಚು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವುದರಿಂದ ಆಡಳಿತದಲ್ಲಿ ಅನಗತ್ಯ ಶಕ್ತಿ ಕೇಂದ್ರಗಳು (Power Centers) ಸೃಷ್ಟಿಯಾಗದಂತೆ ಕಂಡುಕೊಳ್ಳಬೇಕು.  ಹಾಗಾದರೇ, ಯಾರಿಗೆ ಸಿಗಬಹುದು ಡಿಸಿಎಂ ಪಟ್ಟ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಕಾಂಗ್ರೆಸ್‌ ಹೈಕಮಾಂಡ್ ಹೆಚ್ಚುವರಿ ಉಪಮುಖ್ಯಮಂತ್ರಿ (DCM) ಹುದ್ದೆಗಳನ್ನು ಸೃಷ್ಟಿಸಲು ಮುಂದಾದರೆ, ಲಿಂಗಾಯತ ಮತ್ತು ಹಿಂದುಳಿದ ವರ್ಗಗಳ (OBC) ಕೋಟಾದಲ್ಲಿ ಯಾರಿಗೆ ಒಲಿಯಬಹುದು ಎನ್ನುವ ಪ್ರಶ್ನೆ ಕುತೂಹಲವಾಗಿ ಕಾಡುತ್ತಿದೆ. 

ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಿದರೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಪಕ್ಷಕ್ಕೆ ಹಿಡಿದಿರುವ ಪಟ್ಟನ್ನು ಮತ್ತಷ್ಟು ಗಟ್ಟಿಗಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವಿದೆ.  ಮೊದಲು ಕೇಳಿ ಬರುತ್ತಿರುವ ಹೆಸರು ಎಂ. ಬಿ. ಪಾಟೀಲ್ ಅವರು ಕಾಂಗ್ರೆಸ್‌ ನ ಲಿಂಗಾಯತ ನಾಯಕರಲ್ಲಿ ಅಗ್ರಗಣ್ಯರು. ಉತ್ತರ ಕರ್ನಾಟಕ ಭಾಗದಲ್ಲಿ ಗಟ್ಟಿ ಬೆಂಬಲ ಹೊಂದಿದ್ದು, ಹೈಕಮಾಂಡ್ ಮಟ್ಟದಲ್ಲಿ ಉತ್ತಮ ಸಂಪರ್ಕ ಹೊಂದಿದ್ದಾರೆ.ಲಿಂಗಾಯತ ಕೋಟಾದಲ್ಲಿ ಡಿಸಿಎಂ ಸ್ಥಾನಕ್ಕೆ ಅತ್ಯಂತ ಪ್ರಬಲ ಸ್ಪರ್ಧಿ ಕೂಡ ಹೌದು. ಎರಡನೆಯದಾಗಿ ಕೇಳಿ ಬರುತ್ತಿರುವ ಹೆಸರು ಈಶ್ವರ್ ಖಂಡ್ರೆ,  ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಾಧ್ಯಕ್ಷರಾಗಿರುವ ಇವರು ಕಲ್ಯಾಣ ಕರ್ನಾಟಕ ಭಾಗದ ಹಿರಿಯ ನಾಯಕ. ಸಚಿವರಾಗಿ ಮತ್ತು ಸಂಘಟಕರಾಗಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸಲು ಇವರ ಹೆಸರು ಮುಂಚೂಣಿಗೆ ಬರಬಹುದು.  ಮೂರನೇಯದಾಗಿ ಕೇಳಿಬರುತ್ತಿರುವ ಹೆಸರು ಡಾ. ಶರಣಪ್ರಕಾಶ್ ಪಾಟೀಲ್, ಕಲ್ಯಾಣ ಕರ್ನಾಟಕ ಭಾಗದ ಮತ್ತೊಬ್ಬ ಪ್ರಭಾವಿ ಲಿಂಗಾಯತ ಮುಖಂಡ. ಆ ನೆಲೆಯಲ್ಲಿ ಶರಣಪ್ರಕಾಶ್‌ ಪಾಟೀಲ್‌ ಅವರಿಗೆ ಡಿಸಿಎಂ ಹುದ್ದೆ ಒಲಿಯಬಹುದು. ಇನ್ನು, ಹಿಂದುಳಿದ ವರ್ಗಗಳ (OBC) ಸಮುದಾಯದಿಂದ ಯಾರಿಗೆ ಡಿಸಿಎಂ ಹುದ್ದೆ ಸಿಗಬಹುದು ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಾಗ, ಸಿದ್ದರಾಮಯ್ಯ ಅವರ ನಾಯಕತ್ವದ ನಂತರ ಹಿಂದುಳಿದ ವರ್ಗದ ಮತಬ್ಯಾಂಕ್  ವಿಮುಖವಾಗದಂತೆ ಕಾಯ್ದುಕೊಳ್ಳಲು OBC ನಾಯಕರಿಗೆ ಆದ್ಯತೆ ನೀಡುವುದು ಅನಿವಾರ್ಯ. ಮೊದಲನೆಯದಾಗಿ ಕೇಳಿ ಬರುತ್ತಿರುವ ಹೆಸರು ಸತೀಶ್ ಜಾರಕಿಹೊಳಿ,  ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ, ವಾಲ್ಮೀಕಿ ಸಮುದಾಯದ ನಾಯಕ  ಹಾಗೂ ಪ್ರಗತಿಪರ ವಿಚಾರಧಾರೆ ಹೊಂದಿರುವ ಮುಖಂಡ. ಹಿಂದುಳಿದ ಮತ್ತು ಪರಿಶಿಷ್ಟ ವರ್ಗಗಳ ನಾಯಕತ್ವಕ್ಕೆ ಇವರು ಪ್ರಥಮ ಆದ್ಯತೆಯ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡನೇಯದಾಗಿ ಕೇಳಿಬರುತ್ತಿರುವ ಹೆಸರು ಬಿ. ಕೆ. ಹರಿಪ್ರಸಾದ್, ಈಡಿಗ ಸಮುದಾಯವನ್ನು ಪ್ರತಿನಿಧಿಸುವ ಹಿರಿಯ ನಾಯಕ. ಹೈಕಮಾಂಡ್ ಜೊತೆಗೆ ದಶಕಗಳ ನಿಕಟ ಬಾಂಧವ್ಯವಿದ್ದು, ಹಿಂದುಳಿದ ವರ್ಗದ ಗಟ್ಟಿ ಧ್ವನಿಯಾಗಿದ್ದಾರೆ. 

  ಕರಾವಳಿ ಮತ್ತು ಮಲೆನಾಡು ಭಾಗದ OBC ಲೆಕ್ಕಾಚಾರದಲ್ಲಿ ಇವರ ಹೆಸರೂ ಚರ್ಚೆಯಲ್ಲಿದೆ.  ಮೂರನೇಯದಾಗಿ ಬೈರತಿ ಸುರೇಶ್ ಅವರ ಹೆಸರು ಕೇಳಿ ಬರುತ್ತಿದೆ. ಕುರುಬ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಕುರುಬ ಸಮುದಾಯಕ್ಕೆ ಡಿಸಿಎಂ ಪ್ರಾತಿನಿಧ್ಯ ನೀಡಲೇಬೇಕು ಎಂಬ ಒತ್ತಡ ಬಂದಾಗ ಇವರ ಹೆಸರು ಮುಂಚೂಣಿಗೆ ಬರಬಹುದು.  ಒಟ್ಟಿನಲ್ಲಿ, ಕಾಂಗ್ರೆಸ್‌ಗೆ ಇದು ಬರೀ ಸಚಿವ ಸಂಪುಟದ ವಿಸ್ತರಣೆಯಲ್ಲ, ಅಸ್ತಿತ್ವದ ಪರೀಕ್ಷೆಯಾಗಿದೆ. ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಸಭೆಯ ನಿರ್ಧಾರಗಳು ಕರ್ನಾಟಕದ ರಾಜಕೀಯ ದಿಸೆಯನ್ನು ನಿರ್ಧರಿಸಲಿವೆ. ಡಿಕೆ ಶಿವಕುಮಾರ್ ಅವರ ಈ ಹೊಸ 'ಸೋಶಿಯಲ್ ಇಂಜಿನಿಯರಿಂಗ್' ತಂತ್ರಕ್ಕೆ ಹೈಕಮಾಂಡ್ ಸಮ್ಮತಿ ಸೂಚಿಸಿದರೆ, ಅದು 2028ರ ಚುನಾವಣೆಗೆ ಕಾಂಗ್ರೆಸ್‌ನ ಬಲವಾದ ಮುನ್ನುಡಿಯಾಗುವುದರಲ್ಲಿ ಸಂಶಯವಿಲ್ಲ.

-ಶ್ರೀರಾಜ್ ವಕ್ವಾಡಿ