Thursday, September 15, 2022

ರಾಹುಲ್ ಅಸಮರ್ಥರಲ್ಲ, ಈ ಕಾಲದ ನತದೃಷ್ಟ ನಾಯಕ..!

 

ರಾಗಾ ವೈಚಾರಿಕ ಚಿಂತನೆಗೆ ದೇಶ ಒಲಿಯಲಿದೆಯೇ ? | ರಾಜಕೀಯದಲ್ಲಿ ರಾಹುಲ್ ಸೋತಿದ್ದೇಕೆ..? 

ರಾಜಕೀಯ ಪಡಸಾಲೆಯ ಆಗು-ಹೋಗುಗಳ ಬಗ್ಗೆ ಸ್ವಲ್ಪವಾದರೂ ಜ್ಞಾನವುಳ್ಳವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಈಗ ಅಸಮರ್ಥ ನಾಯಕ ಎಂದು ಕರೆಯುವುದಕ್ಕೆ ಸಾಧ್ಯವೇ ಇಲ್ಲ. ರಾಹುಲ್ ಗಾಂಧಿ ಸಮರ್ಥರೇ ಹೌದು, ಆದರೇ ಅವರು ಒಬ್ಬ ಈ ಕಾಲದ ರಾಜಕೀಯದ ನತದೃಷ್ಟ ನಾಯಕ. ಅವರು ಈಗಿನ ರಾಜಕೀಯ ವ್ಯವಸ್ಥೆಗೆ ಸಲ್ಲದ ನಾಯಕ ಅಂತೂ ಅಲ್ಲವೇ ಅಲ್ಲ. ಆದರೇ, ಒಂದು ರಾಜಕೀಯ ಶಕ್ತಿ ರಾಹುಲ್ ಗಾಂಧಿಯವರನ್ನು ಈ ಸಮಾಜ ‘ಪಪ್ಪು’, ‘ಅಸಮರ್ಥ’ ಎಂಬಿತ್ಯಾದಿಯಾಗಿ ಗುರುತಿಸುವ ಹಾಗೆ ಮಾಡಿರುವುದು ರಾಹುಲ್ ಗಾಂಧಿಯವರ ದುರ್ವಿಧಿ. ಅದು ಈ ಕಾಲದ ದುರ್ವಿಧಿಯೂ ಹೌದು. ಸತ್ತ ಮೇಲೆ ದೇವರ ಪೀಠ ಹಾಕಿ ಕೂರಿಸಿ ಪೂಜಿಸುವ ಭಾರತವಿದು. ಇದೇ ರಾಹುಲ್ ಗಾಂಧಿ ಅವರನ್ನು ಇಡೀ ದೇಶ ಅರೆಹುಚ್ಚನ ಹಾಗೆ ಕಾಣುವಂತೆ ಮಾಡುವಲ್ಲಿ ಒಂದು ರಾಜಕೀಯ ಶಕ್ತಿಯ ಜೊತೆಗೆ ಮಾಧ್ಯಮಗಳ ಪಾತ್ರವೂ ದೊಡ್ಡದಿದೆ. ಸಾರ್ವಜನಿಕ ಹಿತಾಸಕ್ತಿ ಇಲ್ಲದ, ಈ ದೇಶದ ಶ್ರೀಮಂತ ಕುಟುಂಬವನ್ನು ಮಾತ್ರ ಪೊರೆಯುವ ಒಬ್ಬ ನಾಯಕನನ್ನು ಪೂಜೆ ಮಾಡುವ ಅವಿವೇಕಿತನ ಈ ದೇಶದಲ್ಲಿದೆ ಎಂದಾದರೇ ಅದರಷ್ಟು ಬಡತನ ಈ ದೇಶಕ್ಕೆ ಮತ್ತೊಂದಿಲ್ಲ. 

ಪ್ರಧಾನಿ ಮೋದಿಗೆ ಈ ದೇಶದ ಸಮಸ್ಯೆಗಳನ್ನು ಹೋಗಲಾಡಿಸುವ ಪ್ರಾಮಾಣಿಕ ಬಯಕೆ ಇಲ್ಲವೇ ಇಲ್ಲ ಎಂಬ ಮಾತನ್ನು ಗಟ್ಟಿ ಧ್ವನಿಯಲ್ಲಿ ಹೇಳುವ ತಾಕತ್ತು ಯಾರಿಗಾದರೂ ಇದೆ ಈ ದೇಶದಲ್ಲಿ ಎಂದಾದರೇ ಅದು ಈಗಿನ ರಾಜಕೀಯ ಸ್ಥಿತಿಯಲ್ಲಿ ರಾಹುಲ್ ಗಾಂಧಿಗೆ ಮಾತ್ರ. ಕಾಂಗ್ರೆಸ್ ಕುಟುಂಬ ರಾಜಕಾರಣದ ಮಸಿಯಿಂದ ತನ್ನ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿಕೊಂಡಿರಬಹುದು, ಅಥವಾ ಅದರ ವಿರುದ್ಧವಿರುವ ರಾಜಕೀಯ ಶಕ್ತಿ ಈ ವಿಷಯದಲ್ಲಿ ಧಕ್ಕೆ ಉಂಟು ಮಾಡಿರಬಹುದು. ಅದು ಬೇರೆಯದ್ದೇ ವಿಚಾರ. ಆದರೇ, ರಾಹುಲ್ ಗಾಂಧಿ ಅಂತಹ ನಿಖರವಾದ ವೈಚಾರಿಕ ಒಲವು ಉಳ್ಳ ಒಬ್ಬ ನಾಯಕ ಈ ದೇಶಕ್ಕೆ ಬೇಕು ಎನ್ನುವುದರಲ್ಲಿ ಸಂಶಯವೇ ಇಲ್ಲ. 

ರಾಹುಲ್ ಗಾಂಧಿ ರಾಜಕೀಯ ತಂತ್ರಗಾರಿಕೆಯಲ್ಲಿ ಸೋತಿರಬಹುದು, ಪಕ್ಷದ ಒಳಗೆಯೇ ವಿಶ್ವಾಸ ಕಳೆದುಕೊಂಡಿರಬಹುದು, ಪಕ್ಷದ ಅಧ್ಯಕ್ಷನಾಗಿದ್ದಾಗ ಪಕ್ಷವನ್ನು ಮುನ್ನೆಡೆಸುವಲ್ಲಿ ಎಡವಿರಬಹುದು, ಹಾಗೆಂದ ಮಾತ್ರಕ್ಕೆ ರಾಹುಲ್‌ಗೆ ಈ ದೇಶದ ಸ್ವಾಸ್ಥ್ಯದ ಬಗ್ಗೆ ಕನಸು ಇಲ್ಲವೆಂದಲ್ಲ, ಸಾಮಾಜಿಕ ಹಾಗೂ ರಾಜಕೀಯ ಸುಸ್ಥಿರ ಸ್ಥಿತಿ ಕಾಪಾಡಿಕೊಳ್ಳುವ ಆಸೆ ಇಲ್ಲವೆಂದಲ್ಲ. ಆದರೇ ಅವೆಲ್ಲವನ್ನು ಕಾರ್ಯರೂಪಕ್ಕೆ ತರುವಲ್ಲಿ ಬೇಕಾದ ಸಮರ್ಥ ಬೆಂಬಲ ಅವರಿಗಿಲ್ಲ. 

೨೦೧೪ ರಲ್ಲಿ ದೇಶದಾದ್ಯಂತ ಮುನ್ನೆಲೆಗೆ ಬಂದ ಕಾಂಗ್ರೆಸ್ ವಿರೋಧಿ ಅಲೆಯ ಕಾರಣದಿಂದಾಗಿ ಕಾಂಗ್ರೆಸ್ ಅಧಿಕಾರದಿಂದ ಕೆಳಕ್ಕೆ ಉದುರಿತು. ಗುಜರಾತ್‌ನ ಹಾಳಾದ ಗೋಡೆಗೆ ಚೆಂದದ ಬಣ್ಣ ಹಚ್ಚಿ, ಇದೇ ‘ದೇಶದ ಪರಮೋಚ್ಛ ಸೋ ಕಾಲ್ಡ್ ಅಭಿವೃದ್ಧಿ’ ಎಂದು ಬಿಂಬಿಸುವುದರೊಂದಿಗೆ ‘ಅಚ್ಛೆ ದಿನ್ ಆನೆ ವಾಲಾ ಹೇ’ ಎಂಬ ಹಸಿ ಹಸಿ ಸುಳ್ಳು ಘೋಷಣೆ ಮಾಡಿ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟಿಸಿ ಅಧಿಕಾರಕ್ಕೆ ಬಂದ ಮೋದಿ ಇಡೀ ದೇಶದ ಜನರಿಗೆ ಎರಡೇ ವರ್ಷಗಳಲ್ಲಿ ಭ್ರಮ ನಿರಸನಗೊಳಿಸಿದರು. ದೇಶದ ಜನರು ಭ್ರಮ ನಿರಸನಕ್ಕೆ ಒಳಗಾಗದಂತೆ ಬಹು ಚರ್ಚಿತ ಮಣ್ಣಂಗಟ್ಟಿ ‘ಗುಜರಾತ್ ಮಾದರಿ’ ಅಭಿವೃದ್ಧಿಯನ್ನು ಒರಗೆ ಹಚ್ಚಲಾಯಿತು, ಅದಕ್ಕೆ ಆಡಳಿತ ಪಕ್ಷದ ಕೃಪಾಪೋಷಿತ ಕೆಲವು ಮಾಧ್ಯಮಗಳು ಸಾಥ್ ನೀಡಿದವು. ಹಾಗೆ ನೋಡುವುದಕ್ಕೆ ಹೋದರೇ ಗುಜರಾತ್‌ನಲ್ಲಿ ಕೈಗಾರಿಕಾ ಪ್ರಗತಿ ೧೯೯೫ರಿಂದಲೇ ಪ್ರಗತಿಯಲ್ಲಿತ್ತು. ಇನ್ನು, ಗುಜರಾತ್‌ನಲ್ಲಿ ಮೋದಿ ಅಧಿಕಾರವಧಿಯಲ್ಲಿ, ಕೈಗಾರಿಕೋದ್ಯಮಗಳಿಗೆ ಒಂದಿಷ್ಟು ಅಭಿವೃದ್ಧಿಯ ಹೆಸರಿನಲ್ಲಿ ಹೊಸ ಬಣ್ಣ ಹಚ್ಚಲಾಗಿದೆ ಹೊರತಾಗಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆಯೇ ಉಳಿದಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಮಾಧ್ಯಮಗಳ ಕ್ಯಾಮರಾಗಳಿಗೆ ಅಲ್ಲಿನ ಹುಳುಕುಗಳು ಕಾಣಿಸಲೇ ಇಲ್ಲ. ‘ಸಿಟಿ ಅಭಿವೃದ್ಧಿಯನ್ನೇ’ ಇಡೀ ಗುಜರಾತ್‌ನ ಅಭಿವೃದ್ಧಿ ಎಂದು ಬಿಂಬಿಸುವಲ್ಲಿ ಮಾಧ್ಯಮಗಳು ಯಶಸ್ವಿಯಾದವು. ಸದ್ಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಇದೇ ಮೋದಿ ನೇತೃತ್ವದ ಸರ್ಕಾರಾವಧಿಯಲ್ಲಿ ಈ ವರ್ಷ ಜಗತ್ತಿನ ಒಟ್ಟು ೧೯೧ ದೇಶಗಳ ಪೈಕಿ ಭಾರತ ೧೩೨ನೇ ಸ್ಥಾನದಲ್ಲಿದೆ, ಎನ್ನುವಲ್ಲಿಗೆ ಎಲ್ಲವನ್ನೂ ಇಲ್ಲಿಯೇ ಅಳೆಯಬಹುದಾಗಿದೆ. ಮೋದಿ ಒಬ್ಬ ಜಾಣ ನಡೆಯ ರಾಜಕಾರಣಿ, ತಾನು ಮಾಡಿದ ಸಣ್ಣ ಸಣ್ಣ ಬಣ್ಣ ಹಚ್ಚುವ ಕೆಲಸವನ್ನೂ ಇಡೀ ದೇಶಕ್ಕೆ ಗೊತ್ತಾಗುವ ಹಾಗೆ ವೈಭವೀಕರಿಸಿಕೊಂಡ ನಾಯಕ. ರಾಹುಲ್ ಈ ವಿಚಾರದಲ್ಲಿ ನಿಜಕ್ಕೂ ಹಿಂದೆ ಉಳಿದರು. ಇನ್ನು, ಮೋದಿಗಿದ್ದ ಒಲವು ಜನರಲ್ಲಿ ಮೊದಲಿನಂತೆಯೇ ಈಗಲೂ ಇದೆಯೇ ಎಂದರೇ ಖಂಡಿತ ಇಲ್ಲ. ರಾಹುಲ್ ಪರವಾಗಿ ದೇಶದ ಜನರ ಒಲವು ಇದೆಯೇ ಕೇಳಿದರೇ, ಸದ್ಯಕ್ಕಂತೂ ದೊಡ್ಡ ಪ್ರಮಾಣದಲ್ಲಿ ಇಲ್ಲ. ಆದರೇ, ದೇಶದ ಜನರ ಮನಸ್ಥಿತಿ ನಿಧಾನ ಗತಿಯಲ್ಲಿ ಬದಲಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. 

ಇನ್ನು, ರಾಹುಲ್ ಗಾಂಧಿ ರಾಜಕಾರಣದಲ್ಲಿ ಸೋತಿದ್ದು ಈ ದೇಶದ ಯುವಕರನ್ನು ಕಳೆದುಕೊಂಡಿದ್ದರಿಂದಲೇ ಹೊರತು ಮತ್ಯಾವುದರಿಂದಲೂ ಅಲ್ಲ. ೨೦೧೪ಕ್ಕಿಂತಲೂ ಹಿಂದೆ ರಾಹುಲ್ ಗಾಂಧಿಯ ಜೊತೆಗಿದ್ದ ಈ ದೇಶದ ಬಹುದೊಡ್ಡ ಆಸ್ತಿ ಯುವ ಸಮುದಾಯವನ್ನೇ ಬಿಜೆಪಿ ರಾಜಕೀಯಕ್ಕೋಸ್ಕರ ಟಾರ್ಗೇಟ್ ಮಾಡಿಕೊಂಡಿತ್ತು. ಅದು ರಾಹುಲ್ ಗಾಂಧಿಗೆ ಗೊತ್ತೇ ಆಗಿಲ್ಲ. ವೈಚಾರಿಕ ನೆಲೆಯಲ್ಲಿ ಇಡೀ ದೇಶದ ಯುವ ಸಮುದಾಯವನ್ನು ಸೆಳೆದುಕೊಂಡಿದ್ದ ರಾಹುಲ್ ಗಾಂಧಿಗೆ, ಕೇವಲ ಒಂದೇ ಒಂದು ಧಾರ್ಮಿಕ ವಿಚಾರದ ಮೂಲಕ ಏಕಾಏಕಿಯಾಗಿ ಬಿಜೆಪಿ ತನ್ನತ್ತ ಧಿಡೀರ್ ಎಂದು ಯುವ ಸಮುದಾಯವನ್ನು ಸೆಳೆದುಕೊಳ್ಳುತ್ತದೆ ಎಂಬುವುದು ಊಹೆಗೂ ಸಿಕ್ಕಿರಲಿಲ್ಲ. ಇಡೀ ದೇಶದ ಯುವ ಸಮುದಾಯ ಉದ್ಯೋಗ, ಭವಿಷ್ಯ, ಸಮಗ್ರತೆಗಿಂತಲೂ ಮಿಗಿಲಾಗಿ ಧಾರ್ಮಿಕ ವಿಚಾರವೇ ಹೆಚ್ಚು ಎಂದು ಹೇಳುವಷ್ಟರ ಮಟ್ಟಿಗೆ ಬಿಜೆಪಿ ಈ ದೇಶದ ಯುವ ಸಮುದಾಯವನ್ನು ಮೈಂಡ್ ವಾಷ್ ಮಾಡಿ ಬಿಟ್ಟಿತು. ಟೀಕೆ ಮಾಡುವುದಕ್ಕೆ ಬೇರೆ ಯಾವುದೂ ಇಲ್ಲದೇ ಬಿಜೆಪಿ ರಾಹುಲ್ ವ್ಯಕ್ತಿತ್ವವನ್ನು, ಧರಿಸುವ ಟೀ ಶರ್ಟ್ನ ಬಗ್ಗೆಯೇ ಟೀಕೆ ಮಾಡಿ ಯುವ ಸಮುದಾಯಕ್ಕೆ ಕಂಪ್ಯೂಟಿಂಗ್ ಮಾಡಿದ ಕಾರಣದಿಂದಾಗಿ, ತಮ್ಮ ಬೆಂಬಲಕ್ಕೆ ಪ್ರಾಮಾಣಿಕವಾಗಿ ನಿಂತಿದ್ದ ರಾಹುಲ್ ಗಾಂಧಿ ವಿರುದ್ಧವೇ ತಿರುಗಿ ಬೀಳುವಷ್ಟರ ಮಟ್ಟಿಗೆ ಯುವ ಸಮುದಾಯವನ್ನು ಬಿಜೆಪಿ ಬಳಸಿಕೊಂಡಿತ್ತು. ಯುವ ಸಮುದಾಯವನ್ನು ಇಡೀ ದೇಶದಾದ್ಯಂತ ಕಾಡುತ್ತಿರುವ ನಿರುದ್ಯೋಗದಂತಹ ಸಮಸ್ಯೆಗಳಿರುವಾಗಲೂ, ಯುವ ಸಮುದಾಯ ಈ ಧಾರ್ಮಿಕ ವಿಚಾರಕ್ಕೆ ಬಲಿಯಾಗಿ ಇರುವಂತೆ ಬಿಜೆಪಿ ಮಾಡಿದೆ. 

ಕಾಂಗ್ರೆಸ್ ಅಧಿಕಾರಕ್ಕೆ ಅಸಮರ್ಥವಿರಬಹುದು, ಆದರೇ, ರಾಹುಲ್ ಗಾಂಧಿ ಅಸಮರ್ಥ ನಾಯಕ ಅಲ್ಲ. ಕಾಂಗ್ರೆಸ್ ಬಗ್ಗೆ ಈ ದೇಶದಲ್ಲಿ ಸದ್ಯಕ್ಕೆ ಅಷ್ಟೊಂದು ಒಳ್ಳೆಯ ಅಭಿಪ್ರಾಯ ಇಲ್ಲ ಯಾಕೆಂದರೇ, ಕಾಂಗ್ರೆಸ್‌ನಲ್ಲಿಲ್ಲದ ಸಿದ್ಧಾಂತದ ಸ್ಪಷ್ಟತೆ. ಜನತಂತ್ರದ ಕೊರಳು ಹಿಸುಕುವುದಕ್ಕೆ ಮುಂದಾಗುತ್ತಿರುವ ರಾಜಕೀಯ ಶಕ್ತಿಯೊಂದರ ವಿರುದ್ಧ ಸೆಟೆದು ನಿಲ್ಲುವ, ಮತ್ತು ಅದನ್ನು ತಪ್ಪಿಸುವ ಇಚ್ಛೆ ರಾಹುಲ್ ಗಾಂಧಿಗೆ ಇದೆ. ಈ ಎಂಟು ಹತ್ತು ವರ್ಷಗಳಿಂದೀಚೆಗೆ ಬದಲಾಗಬಾರದ ರೀತಿಯಲ್ಲಿ ಬದಲಾದ ರಾಜಕೀಯದ ಬಗ್ಗೆ ಆಳವಾಗಿ ರಾಹುಲ್ ತಿಳಿದುಕೊಂಡಿದ್ದಾರೆ ಎನ್ನುವುದು ಸತ್ಯ. ಅವರ ಇತ್ತೀಚೆಗಿನ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಇದು ಅರಿವಾಗಿರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ರಾಜಕೀಯ ವಿಶ್ಲೇಷಕರ ಪ್ರಕಾರ, ಸದ್ಯ ರಾಜಕೀಯ ಪಡಸಾಲೆಯಲ್ಲಿ ಆಡಳಿತ ಪಕ್ಷಕ್ಕೆ ರಾಹುಲ್ ಗಾಂಧಿಯವರನ್ನು ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಬಿಟ್ಟರೇ ಬೇರೆ ಯಾವುದೇ ರೀತಿಯಲ್ಲಿ ಟೀಕೆ ಮಾಡುವಂತಹ ವಿಷಯ ಇಲ್ಲವೇ ಇಲ್ಲ. ಇದು ಸತ್ಯ ಕೂಡ. ಈ ಮನಸ್ಥಿತಿವೊಂದರಲ್ಲೇ ಬಿಜೆಪಿ ಇನ್ನೂ ಕೆಲ ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸುತ್ತದೆ ಎಂಬ ಭ್ರಮೆಯಲ್ಲಿ ಇದ್ದರೇ, ಅದರಷ್ಟು ಶತಮೂರ್ಖತನ ಮತ್ತೊಂದಿಲ್ಲ. ಇನ್ನು, ರಾಹುಲ್‌ರ ಚಿಂತನೆಯಿಂದ ಈ ದೇಶ ಏಕಾಏಕಿಯಾಗಿ ಊಹಿಸಲಾರದಷ್ಟರ ಮಟ್ಟಿಗೆ ಬದಲಾಗಿ, ಮಹತ್ತರವಾದ ಎತ್ತರಕ್ಕೆ ಸಮಗ್ರತೆಯ ಚಿಂತನೆಯಲ್ಲಿ ಮುನ್ನಡೆಯಲಿದೆಯೇ ಎಂದು ಕೇಳಿದರೇ, ಅದು ಕೂಡ ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲ. ರಾಹುಲ್ ಅವರಲ್ಲಿ ಇರುವ ಉದ್ದೇಶವನ್ನು ತಮ್ಮ ಪಕ್ಷ ಹಾಗೂ ಈ ದೇಶದ ಜನರಿಗೆ ತಲುಪಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. 

ಒಟ್ಟಿನಲ್ಲಿ, ತಂದೆಯಂತೆಯೇ ತಾತ್ವಿಕ ನೆಲೆಗಟ್ಟಿನಲ್ಲಿ, ವೈಚಾರಿಕ ಚಿಂತನೆಗಳ ನಡುವೆ ನಿಂತು ಈ ದೇಶದ ಭವಿಷ್ಯವನ್ನು ಕಾಣುವುದಕ್ಕೆ ಬಯಸುತ್ತಿರುವ ರಾಹುಲ್ ಗಾಂಧಿ ಅವರ ನಾಳೆಗಳು ಹೇಗಿರಲಿದೆ ಎನ್ನುವುದು ಸದ್ಯದ ಕುತೂಹಲ.

-ಶ್ರೀರಾಜ್ ವಕ್ವಾಡಿ               


Thursday, September 8, 2022

ವಿರೋಧ ಪಕ್ಷದ ಅಸ್ಥಿರತೆ ಪ್ರಜಾಪ್ರಭುತ್ವಕ್ಕೆ ಹಿತವಲ್ಲ..!

ತಾತ್ವಿಕ ನೆಲೆಯ ಚಿಂತನೆಯಿಲ್ಲದಿದ್ದರೇ ತಪ್ಪಿದ್ದಲ್ಲ ಬವಣೆ | ಕಾಂಗ್ರೆಸ್‌ಗೀಗ ‘ಜೋಡೋ’ ಫಲಿಸಲ್ಲ..! 

ಎದುರಾಳಿಯನ್ನು ಆರೋಗ್ಯಕರವಾದ ಪೈಪೋಟಿಯಲ್ಲಿ ಎದುರಿಸುವ ವಿಶಾಲವಾದ ಮನಸ್ಸು ಕಾಂಗ್ರೆಸ್‌ಗೆ ಇದ್ದರೂ ಕೂಡ, ಪ್ರತಿಸ್ಪರ್ಧಿ ಬಿಜೆಪಿಯ ರಾಜಕೀಯ ತಂತ್ರಗಾರಿಕೆಯೇ ಬೇರೆಯಾಗಿರುವುದರಿಂದ ಕಾಂಗ್ರೆಸ್‌ಗೆ ಏನೇ ಮಾಡಿದರೂ ಎಲ್ಲದರಲ್ಲೂ ಸೋಲುವ ಸ್ಥಿತಿ ಬಂದೊದಗಿದೆ. ಕಾಂಗ್ರೆಸ್‌ನ ಹಾದಿ ಇನ್ನಷ್ಟು ದುರ್ಗಮವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಕಾಂಗ್ರೆಸ್‌ನ ಒಳಗೆ ಸಮಸ್ಯೆಗಳ ಸರಮಾಲೆ ನಿರೀಕ್ಷೆಗೂ ಮೀರಿ ಉದ್ದಕ್ಕೆ ಬೆಳೆಯುತ್ತಿದೆ. ಕಾಂಗ್ರೆಸ್‌ನ ನಿರೀಕ್ಷೆಯಂತೆ ಜನಪ್ರಿಯತೆ ಹೆಚ್ಚಲಿಲ್ಲ. ಬಿಜೆಪಿ ಸರ್ಕಾರದಲ್ಲಿನ ಇಷ್ಟೆಲ್ಲಾ ಬೆಲೆ ಏರಿಕೆ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆಗಳಿದ್ದರೂ ಜನ ಬಿಜೆಪಿಯ ಮೇಲೆ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆಯೇ ಹೊರತು ಕಾಂಗ್ರೆಸ್ ಮೇಲೆ ಯಾಕೆ ಒಲವು ತೋರಿಸುತ್ತಿಲ್ಲ ಎನ್ನುವುದಕ್ಕೆ ಕಾಂಗ್ರೆಸ್ ಒಳಗಿನ ‘ಸೈದ್ಧಾಂತಿಕ ಸಂಘರ್ಷ’ವೇ ಕಾರಣ. 

ಸಮಸ್ಯೆಗಳ ಸರಮಾಲೆಯೇ ಸಮಾಜದಲ್ಲಿದ್ದರೂ ಕೂಡ ಇಡೀ ದೇಶದ ಜನರನ್ನು ಆಡಳಿತ ಪಕ್ಷ ಬಿಜೆಪಿ ರಾಜಕೀಯ ವ್ಯವಸ್ಥೆಯನ್ನು ತನಗೆ ಪ್ರತಿಕೂಲವಾಗುವಂತೆ ಜಾಣ ನಡೆಯಿಂದ ಭಾವುಕರಾಗಿ ಬೆಳೆಸಿಕೊಂಡಿತು ಮಾತ್ರವಲ್ಲದೇ ಬಳಸಿಕೊಂಡಿತು. ಪ್ರಜಾಪ್ರಭುತ್ವದ ಮೂಲ ಆಶಯವನ್ನು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಾಗದ ಮಟ್ಟಿಗೆ ಬಿಜೆಪಿ ಜನರ ಯೋಚನಾ ಕ್ರಮವನ್ನು ಬದಲಾಯಿಸಿತು. ಆ ಲಾಭವನ್ನು ರಾಜಕೀಯವಾಗಿ ಯಶಸ್ವಿಯಾಗಿ ಬಳಸಿಕೊಂಡಿತು. ಹಾಗಾಗಿಯೇ ಕಾಂಗ್ರೆಸ್‌ಗೆ ಎಂಥದ್ದೇ ‘ಜೋಡೋ’ ಅಭಿಯಾನ ಮಾಡಿದರೂ ಜನರನ್ನು ತನ್ನತ್ತ ಸೆಳೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಇವತ್ತು ಜನರನ್ನು ವ್ಯಕ್ತಿ ಪ್ರತಿಷ್ಠೆಯನ್ನು ಪೋಷಿಸುವ ರಾಜಕೀಯ ಮನಸ್ಥಿತಿಯಿಂದ ಜನರನ್ನು ಹೊರತಂದು ತತ್ವನಿಷ್ಠೆಯನ್ನು ಮೆಚ್ಚಿಸುವಂತೆ ಮಾಡಬೇಕಾಗಿದೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಪಕ್ಷಗಳ ಎಲ್ಲಾ ನಿಷ್ಠೆಗಳಿಗೂ ಇದೇ ಮೂಲವಾಗಬೇಕಿದೆ. 

ಕಾಂಗ್ರೆಸ್ ಬಗ್ಗೆ ಇಷ್ಟೆಲ್ಲಾ ಆತಂಕ ಯಾಕೆ ಕೇಳಿದರೇ, ಭಾರತದಂತಹ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಂದು ಪ್ರಬಲವಾದ ವಿರೋಧ ಪಕ್ಷ ಬೇಕಾಗಿದೆ. ಕಾಂಗ್ರೆಸ್ ಹೊರತಾಗಿ ಇರುವ ಇತರೆ ಪ್ರತಿಪಕ್ಷಗಳು ರಾಜಕೀಯ ಪ್ರಾದೇಶಿಕ ಪಕ್ಷಗಳಾಗಿ ಉಳಿದುಕೊಂಡಿರುವ ಕಾರಣದಿಂದಾಗಿ ದೇಶ ಮಟ್ಟದಲ್ಲಿ ವ್ಯಕ್ತಿ ಭಜಕ ಕೂಟದ ಎದುರಾಳಿಯಾಗಿ ಒಂದು ತತ್ವ ಭಜಕ ಕೂಟ ಗಟ್ಟಿಯಾಗಿ ಅಸ್ತಿತ್ವ ಕಂಡುಕೊಳ್ಳಬೇಕಾಗಿದೆ. ಸದ್ಯದ ಮಟ್ಟಿಗೆ ಭಾರತದಲ್ಲಿ ಆ ಸ್ಥಾನವನ್ನು ಅಲಂಕರಿಸುವುದಕ್ಕೆ ಸಾಧ್ಯವಿದ್ದರೇ ಅದು ಕಾಂಗ್ರೆಸ್‌ಗೆ ಮಾತ್ರ. ಗೆಲ್ಲುವ ಮೊದಲು ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿರುವುದು ಅಗತ್ಯವಿದೆ. ಸೈದ್ಧಾಂತಕ ಸ್ಪಷ್ಟತೆಯ ಬಗ್ಗೆ ಹೆಚ್ಚು ಗಮನ ನೀಡಬೇಕಾದ ತುರ್ತಿದೆ. ಕ್ಷಿಪ್ರ ಬದಲಾವಣೆ ಬಯಸುವುದಕ್ಕೆ ಮುಂದಾಗದೇ ಕಾಂಗ್ರೆಸ್ ಈಗ ಸುದೀರ್ಘವಾದ ರಾಜಕೀಯ ಶ್ರಮಪಡಬೇಕಾಗಿದೆ. ಕಳೆದೆಂಟು ವರ್ಷಗಳಲ್ಲಿ ಉಂಟಾದ ಸಮಸ್ಯೆಗಳಿಂದ ಮೋದಿ ಅಥವಾ ಬಿಜೆಪಿ ಮೇಲಿನ ಜನರ ಮನಸ್ಥಿತಿ ಸಂಪೂರ್ಣ ಬದಲಾಗಿದೆ ಎಂದು ತಿಳಿದುಕೊಂಡಿದ್ದರೇ ಅದು ಕಾಂಗ್ರೆಸ್‌ನ ಶತ ಮೂರ್ಖತನವೇ ಸರಿ. ಕಳೆದ ಎಂಟ್ಹತ್ತು ವರ್ಷಗಳಲ್ಲಿ ಕಳೆದುಕೊಂಡದ್ದೆಲ್ಲವನ್ನು ಮರಳಿ ಹಿಂಪಡೆಯುವುದು ಕಾಂಗ್ರೆಸ್‌ಗೆ ಅಷ್ಟೊಂದು ಸುಲಭವಿಲ್ಲ. ಅದಕ್ಕೆ ಒಂದು ಚುನಾವಣೆಗೆ ಆಗುವಷ್ಟೇ ಪೂರ್ವ ತಯಾರಿ ಮಾಡಿದರೇ ಸಾಲದು, ತತ್‌ಕ್ಷಣದ ಬದಲಾವಣೆ ಬಯಸುವುದಕ್ಕಿಂತ ಕಾಂಗ್ರೆಸ್ ತನ್ನನ್ನು ತಾನು ವಿಮರ್ಶಿಸಿಕೊಂಡು ಪಕ್ಷಕ್ಕೆ ಈ ಕಾಲಮಾನಕ್ಕೆ ಸೂಕ್ತವಾದ ತಾತ್ವಿಕ ನೆಲೆ ಕಟ್ಟಿ ಬೆಳೆಸದೇ ಇದ್ದರೇ ಕಾಂಗ್ರೆಸ್ ಮತ್ತೊಂದು ದೊಡ್ಡ ಬವಣೆ ಎದುರಿಸಲೇ ಬೇಕು. 

ಸ್ವಾತಂತ್ರ್ಯೊತ್ತರ ಭಾರತದಲ್ಲಿ ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಹೇಗೆ ಈ ದೇಶದಲ್ಲಿ ಅಭೇದ್ಯ ಕೋಟೆಯಂತೆ ಆಡಳಿತ ನಡೆಸಿತ್ತೋ, ಅದೇ ರೀತಿಯಲ್ಲಿ ಬಿಜೆಪಿ ಇನ್ಮುಂದೆ ದೇಶದಲ್ಲಿ ಆಡಳಿತ ನಡೆಸಲಿದೆ ಎಂಬ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, ಕಾಂಗ್ರೆಸ್‌ಗೆ ಆತಂಕ ಎದುರಾಗಿದೆ. ಬಿಜೆಪಿಗೆ ತನ್ನ ರಾಜಕೀಯ ತಂತ್ರಗಾರಿಕೆಯ ಬಗ್ಗೆ ಆಳವಾದ ಮತ್ತು ಗಂಭೀರವಾದಂತಹ ಸ್ಪಷ್ಟತೆ ಇದೆ. ಒಡೆದು ಆಳುವ ನೀತಿಯನ್ನು ಪಾಲಿಸುತ್ತಿರುವ ಬಿಜೆಪಿ ಈಗೊಂದು ಹೊಸ ತಂತ್ರಗಾರಿಕೆ ಆರಂಭಿಸಿದೆ. ಅಧಿಕಾರ ಇಲ್ಲದ ರಾಜ್ಯಗಳಲ್ಲಿ ಅಧಿಕಾರ ಒಡೆಯುವ ನಾಯಕನಿಗೆ ಕೋಟಿ ಕೋಟಿ ಆಫರ್, ಪಕ್ಷದ ಪ್ರಧಾನ ಹುದ್ದೆಯ ಆಮಿಷ ಒಡ್ಡಿ ಅಧಿಕಾರಕ್ಕೇರಿದ ತಂತ್ರಗಾರಿಕೆ ಮಹಾರಾಷ್ಟçದಲ್ಲಿ ಯಶಸ್ಸು ಕಂಡಿರುವ ಉದಾಹರಣೆ ನಿಮ್ಮ ಮುಂದೆಯೇ ಇದೆ. ಇದಕ್ಕೆ ಬೇಕಾದ ಪರಿಹಾರವನ್ನು ಕಂಡುಕೊಳ್ಳದೇ ಇದ್ದರೇ ನಿಜಕ್ಕೂ ಕಾಂಗ್ರೆಸ್‌ನ ಅಸ್ತಿತ್ವಕ್ಕೆ ನಿಶ್ಚಿತವಾಗಿ ಅಪಾಯವಿದೆ. 

ಕಾಂಗ್ರೆಸ್‌ನಲ್ಲಿನ ಒಂದೊಂದೇ ಕೈ ತಪ್ಪಿ ಹೋಗುತ್ತಿದೆ. ಇದು ಪಕ್ಷ ಮತ್ತು ಶಾಸಕರ, ನಾಯಕರ ನಡುವೆ ಸಮನ್ವಯ ಇಲ್ಲ ಎಂದೇ ತೋರಿಸುತ್ತಿದೆ. ಆಡಳಿತ ಪಕ್ಷ ಒಂದಿಷ್ಟು ವಿವಾದಗಳನ್ನು, ಸಮಸ್ಯೆಗಳನ್ನು, ಆಡಳಿತದ ಮೇಲಿನ ಜನರ ಅಸಮಾಧಾನವನ್ನು ಎದುರಿಸುತ್ತಿದ್ದರೂ ಕೂಡ ಪ್ರಬಲವಾದ ವಿರೋಧ ಪಕ್ಷ ಇಲ್ಲದೇ ಇರುವ ಕಾರಣದಿಂದಾಗಿ ಅದು ಚುನಾವಣೆಯ ಮೇಲೆ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಮರ್ಮಾಘಾತ ಮಾಡುತ್ತದೆ ಎಂದು ಕಾಣಿಸುತ್ತಿಲ್ಲ. ಯಾಕೆಂದರೇ, ಅಷ್ಟು ಸುಲಭದಲ್ಲಿ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಾರದೇ ಇರುವ ಹಾಗೆ ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ತಂತ್ರಗಾರಿಕೆ ಹೆಣೆದಿದೆ. ಹೀಗೆ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಕಾಂಗ್ರೆಸ್‌ನ ಪರಮ ಗುರಿ ಬರುವ ಚುನಾವಣೆಗಷ್ಟೇ ಇರಬಾರದು. ಮಿಗಿಲಾಗಿ ಭವ್ಯ ಭವಿಷ್ಯದಲ್ಲಿ ತನ್ನ ಹಳೆ ಖದರ್ ಮತ್ತೆ ಮರಳಿ ಪಡೆಯುವಂತೆ ಕಾರ್ಯತಂತ್ರ ಮಾಡಬೇಕಿದೆ. ಇನ್ನು, ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನೂ ಕೂಡ ರಾಜಕೀಯ ತಲ್ಲಣಗಳ ಬಗ್ಗೆ ಆತಂಕ ವ್ಯಕ್ತ ಪಡಿಸಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಬ್ಬ ನಿಜವಾದ ನಾಗರಿಕ ಎಂದೆನ್ನಿಸಿಕೊಳ್ಳಬೇಕೆಂದರೇ, ಆತ ಒಂದೇ ಪಕ್ಷದ ರಾಜಕಾರಣವನ್ನು ಓಲೈಸಬಾರದು. ಆತನಿಗೆ ವಿರೋಧ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವುದರ ಬಗ್ಗೆಯೂ ಆತಂಕವಿರಬೇಕು. ಪ್ರಜಾತಂತ್ರದ ಮೂಲ ಆಶಯವನ್ನು ಕಿತ್ತೊಗೆಯುವ ಅಪಾಯಕಾರಿ ಪ್ರವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜಕೀಯ ಕುತಂತ್ರದ ಶಕ್ತಿಯ ವಿರುದ್ಧ ಪ್ರಶ್ನೆ ಕೇಳುವ ಮನೋಧೋರಣೆ ಇಲ್ಲದ ವ್ಯಕ್ತಿ ಒಬ್ಬ ಉತ್ತಮ ನಾಗರಿಕನಾಗಲಾರ. ಪ್ರಜಾತಂತ್ರದಲ್ಲಿ ಬಲಿಷ್ಠ ಒಂದು ವಿರೋಧ ಪಕ್ಷವಿಲ್ಲ ಎನ್ನುವ ಆತಂಕ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇರಬೇಕು. ಪ್ರಾದೇಶಿಕ ಪಕ್ಷಗಳ ಮೈತ್ರಿಯಾಗಿ ವಿರೋಧ ಪಕ್ಷಗಳಾಗುವುದು ಪ್ರಜಾತಂತ್ರಕ್ಕೆ ಯೋಗ್ಯವಾದುದ್ದಲ್ಲ, ಮತ್ತೆ ಅದು ರಾಜಕೀಯದಲ್ಲಿ ಒಳ್ಳೆಯ ಬೆಳವಣಿಗೆಯೂ ಅಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಬಲ ಪ್ರತಿಪಕ್ಷದ ಪಾತ್ರ ಬಹಳ ಮುಖ್ಯ. 

ಸಮರ್ಥ ನಾಯಕತ್ವದ ವಿಚಾರದಲ್ಲಿ ಬಳಲುತ್ತಿರುವ ಅಪ್ಪ ಅಮ್ಮನಿಲ್ಲದಂತಿರುವ ಕಾಂಗ್ರೆಸ್ ಇತಿಹಾಸದಲ್ಲಿ ಹಿಂದೆಂದೂ ಇಷ್ಟೊಂದು ಅತಂತ್ರ ಸ್ಥಿತಿಗೆ ಬಂದು ತಲುಪಿಲ್ಲ ಎನ್ನುವುದು ಸತ್ಯ. ಈ ದೇಶದಲ್ಲಿ ಒಂದು ಪ್ರಬಲವಾದ ವಿರೋಧ ಪಕ್ಷವಿಲ್ಲವಾದರೇ, ಈ ಪ್ರಜಾಪ್ರಭುತ್ವದ ಭವಿಷ್ಯ ಏನು..? ರಾಜಕೀಯ ಅರಾಜಕತೆ ಸೃಷ್ಟಿಗೆ ಈ ದೇಶ ಅವಕಾಶ ಕೊಡಬಾರದು. ನಾಲ್ಕು ದಶಕಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್‌ನಂತಹ ಪಕ್ಷ ಈ ದೇಶದ ಜನರಿಗೆ ಬೇಡವಾಗಿದೆ ಎಂಬ ಪರಿಸ್ಥಿತಿ ಎದುರಾಗಿದ್ದು, ಅದೇ ಪಕ್ಷದ ಬೌದ್ಧಿಕ ತಂತ್ರಗಾರಿಕೆಯ ಕೊರತೆಯಿಂದಾಗಿಯೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಒಮ್ಮೊಮ್ಮೆ ವಿರೋಧ ಪಕ್ಷ ಈ ಪ್ರಜಾತಂತ್ರದಲ್ಲಿ ಇಲ್ಲದಂತಾಗಿ ಎಲ್ಲಾ ತಲೆಬುಡವಾಗಿ ಹೊಸತನದ ರಾಜಕೀಯ ಸಮೃದ್ಧವಾಗಿ ಬೆಳೆಯುವುದಕ್ಕೆ ಹೇರಳ ಅವಕಾಶವನ್ನು ಜನರೇ ಒದಗಿಸುವುದು ಕೂಡ ಸೂಕ್ತವೆನ್ನಿಸಿದರೂ ಅದು ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸೂಕ್ತವಲ್ಲ. ಪ್ರಜಾಪ್ರಭುತ್ವ ರಾಜಕೀಯ ಅಸ್ಥಿರತೆಯನ್ನು ಒಪ್ಪುವುದಿಲ್ಲ. ಪ್ರಜಾತಂತ್ರದ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗುವುದಕ್ಕೆ ಸಮರ್ಥವಾದ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷವೂ ಮುಖ್ಯ. ಇವೆರಡರಲ್ಲಿ ಯಾವುದಾದರೂ ಒಂದು ಅಸಮರ್ಥತೆಯ ಪಟ್ಟ ಧರಿಸಿದರೂ ಈ ಪ್ರಜಾತಂತ್ರದ ಮೂಲ ಆಶಯ ಕೆಟ್ಟು ಹೋಗಿ ಅಪಾಯವನ್ನು ಎದುರಿಸುವುದರಲ್ಲಿ ಸಂಶಯವಿಲ್ಲ. ಪ್ರಬಲವಾದ ಬಿಜೆಪಿಗೆ ಎದುರಾಳಿಯಾಗಿ ಪ್ರಬಲವಾದ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಮೊದಲು ಇರಬೇಕು. ಆಮೇಲೆ ಚುನಾವಣೆ, ಸೋಲು, ಗೆಲುವು, ಅಧಿಕಾರ ಮತ್ತೊಂದು ಮಗದೊಂದು. ಕಾಂಗ್ರೆಸ್ ಎಂದರೇ ಅಸ್ಥಿರತೆ ಎಂಬ ಪಟ್ಟವನ್ನು ಮೊದಲು ಕಳಚಿಕೊಳ್ಳಬೇಕಾಗಿದೆ.

ಇನ್ನು, ರಾಜಕೀಯದಲ್ಲಿ ಅಸ್ಥಿರತೆ ಆಡಳಿತ ಪಕ್ಷದಲ್ಲಾಗಲಿ ಅಥವಾ ವಿರೋಧ ಪಕ್ಷದಲ್ಲಾಗಲಿ ಸೃಷ್ಟಿಯಾದರೇ ಅದು ಪ್ರಜಾಪ್ರಭುತ್ವಕ್ಕೆ ಹಿತವಲ್ಲ. ಪ್ರಜಾಪ್ರಭುತ್ವದಲ್ಲಿ ಅದು ಒಳ್ಳೆಯ ಬೆಳವಣಿಗೆಯೂ ಅಲ್ಲ. ಕಾಂಗ್ರೆಸ್‌ನಂತಹ ಪಕ್ಷ ಪ್ರಜಾಪ್ರಭುತ್ವದಲ್ಲಿ ಅಸ್ಥಿರತೆಗೆ ಕಾರಣವಾಗಬಾರದು. ಅಸ್ಥಿರತೆ ಅವಕಾಶ ಮಾಡಿಕೊಟ್ಟರೇ ಬಹುಶಃ ಕಾಂಗ್ರೆಸ್ ಎದುರಿಸಬೇಕಾದ ಪರಿಣಾಮವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಕಾಂಗ್ರೆಸ್ ನಿಜಕ್ಕೂ ಈಗ ಪುನಶ್ಚೇತನಕ್ಕೆ ಸಂಕಲ್ಪ ಮಾಡಬೇಕಿದೆ. ಪಕ್ಷದೊಳಗೆ ಸ್ಥಿರತೆ ಕಾಪಾಡಿಕೊಳ್ಳುವುದಕ್ಕೆ ಪ್ರಬಲ ರಾಜಕೀಯ ಹೋರಾಟವಷ್ಟೇ ಸಾಲದು, ಪಕ್ಷ ಬೂತ್ ಮಟ್ಟದಿಂದಲೇ ಪ್ರಬಲವಾಗಬೇಕು, ಪಕ್ಷದ ವರ್ಚಸ್ಸು ವೃದ್ಧಿಸಿಕೊಳ್ಳಲು ಬೇಕಾದ ಎಲ್ಲಾ ರಾಜಕೀಯ ತಂತ್ರಗಾರಿಕೆ ಮಾಡುವುದರೊಂದಿಗೆ ಆಡಳಿತ ವೈಫಲ್ಯವನ್ನು ಪ್ರಬಲ ವಿರೋಧ ಪಕ್ಷವಾಗಿ ಜನರಿಗೆ ಮನದಟ್ಟು ಮಾಡಿಕೊಡಬೇಕು. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಹೇಳಹೆಸರಿಲ್ಲದ ಸ್ಥಿತಿಯಿಂದ ಹೊರಬರಬೇಕಿರುವುದು ಕಾಂಗ್ರೆಸ್‌ಗೆ ತುರ್ತಿದೆ. 

-ಶ್ರೀರಾಜ್ ವಕ್ವಾಡಿ 


Thursday, September 1, 2022

ಈ ಕಾಲದ ರಾಜಕೀಯಕ್ಕೆ ಕಾಂಗ್ರೆಸ್ ಔಟ್‌ಡೇಟೆಡ್..!?


ಫಿನಿಕ್ಸ್ ಹಕ್ಕಿಯ ರೂಪ ತಾಳಲಿದೆಯೇ ಕಾಂಗ್ರೆಸ್ ? | ತಂದೆಗೆ ಸಿಕ್ಕ ಸುಲಭ ದಾರಿ ರಾಹುಲ್‌ಗೆ ಸಿಕ್ಕಿಲ್ಲ.! 

ಇಡೀ ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಕೇವಲ ಎರಡು ರಾಜ್ಯಗಳಲ್ಲಿ ಅಧಿಕಾರ ಹೊಂದಿದ್ದು, ಅದರಲ್ಲೂ ಅದು ಮೈತ್ರಿ ಸರ್ಕಾರದ ಅಧಿಕಾರ ಹೊಂದಿರುವ ಸಂದರ್ಭದಲ್ಲಿ ಪಕ್ಷದ ಪ್ರಭಾವಿ ಮುಖಗಳ ರಾಜೀನಾಮೆ ಪರ್ವ ಕಾಂಗ್ರೆಸ್‌ನನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ ಎಂದನ್ನಿಸುತ್ತಿದೆ. ಕಾಂಗ್ರೆಸ್ ರಾಷ್ಟ್ರಕ್ಕೆ ಮಾರಕ ಅಥವಾ ರಾಷ್ಟ್ರೀಯತೆಗೆ ಮಾರಕವಾಗುತ್ತಿದೆ ಎಂಬ ಸಾಮಾಜಿಕ ವಲಯದಲ್ಲಿ ಸೃಷ್ಟಿ ಮಾಡಲಾದ ಒಂದು ರಾಜಕೀಯ ಪ್ರಾಯೋಜಿತವಾದಂತಹ ‘ಫೀಡಿಂಗ್’ನಿಂದ ಕಾಂಗ್ರೆಸ್ ಕಳೆದ ಏಳೆಂಟು ವರ್ಷಳಿಂದೀಚೆಗೆ ಕಂಡುಕೊಂಡು ಬಂದ ವಿರೋಧ ಅಭಿಪ್ರಾಯ ಒಂದಿಷ್ಟು ಕಳೆದು ಹೋಗುತ್ತಿದೆ ಅಥವಾ ಬದಲಾಗುತ್ತಿದೆ ಎಂಬ ಕಾಲಘಟ್ಟದಲ್ಲಿ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಬಟ್ಟಬಯಲಾಗಿದ್ದು, ಪಕ್ಷದ ಭವಿಷ್ಯದ ಪ್ರಶ್ನೆಯನ್ನೆಬ್ಬಿಸಿದೆ. 

ಭಾರತದಂತಹ ರಾಜಕೀಯ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರೀಯ ಪಕ್ಷ, ಈ ದೇಶವನ್ನು ಐದಾರು ದಶಕಗಳ ಕಾಲ ಆಳಿದ ಪಕ್ಷ ಕಾಂಗ್ರೆಸ್‌ಗೆ ಇಂತಹದ್ದೊಂದು ಹೀನಾಯ ಸ್ಥಿತಿ ಬಂದೊದಗಿರುವುದು ಅದರಲ್ಲಿನ ಆಂತರಿಕ ಅಸ್ಥಿರತೆಯನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷದ ಅಸ್ತಿತ್ವ ಖಂಡಿತ ಅಪಾಯದಲ್ಲಿದೆ ಎಂದೇ ಅನ್ನಿಸುತ್ತಿದೆ. ಫಿನಿಕ್ಸ್ ಹಕ್ಕಿಯಂತೆ ಮತ್ತೆ ಪುಟಿದೇಳಬೇಕು ಎಂಬ ಕನಸನ್ನು ಒಂದು ವೇಳೆ ಕಾಂಗ್ರೆಸ್ ಈ ದೇಶದಲ್ಲಿ ಕಾಣುತ್ತಿದೆ ಎಂತಾದರೇ ಮುಖ್ಯವಾಗಿ ಪಕ್ಷ ತನ್ನನ್ನು ತಾನು ಬದಲಾವಣೆಗೆ ಒಗ್ಗಿಸಿಕೊಳ್ಳುವುದಕ್ಕಿಂತ ಮೊದಲಾಗಿ ವಾಸ್ತವತೆಯಲ್ಲಿ ಪರಿವರ್ತನೆಗೆ ಒಗ್ಗಿಸಿಕೊಳ್ಳಬೇಕಾಗಿದೆ. ರಾಜಕೀಯ ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಪಕ್ಷದ ಮನಸ್ಥಿತಿಯ ಕಾರಣದಿಂದಾಗಿ ಇದೇ ಮೊದಲ ಬಾರಿಗೆ ರಾಜಕೀಯ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಸೋತಿದ್ದಲ್ಲ. ಎರಡು ಅವಧಿಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರವೂ ಕೂಡ ಈ ದೇಶದ ಜನ ಕಾಂಗ್ರೆಸ್‌ನನ್ನು ಹೊರತಾಗಿ ಮತ್ತೊಂದು ಪಕ್ಷಕ್ಕೆ ಒಲಿಯುತ್ತಾರೆ ಎಂದರೇ ಅದಕ್ಕೆ ಕಾಂಗ್ರೆಸ್ ಆಡಳಿತದ ಸಿದ್ದಾಂತದಲ್ಲಿನ ದ್ವಂದ್ವವೇ ಕಾರಣ. ದೇಶದಲ್ಲಿ ಕಾಂಗ್ರೆಸ್ ಈ ಮಟ್ಟಕ್ಕೆ ಸೋಲುತ್ತಿರುವುದಕ್ಕೆ ಮುಖ್ಯ ಕಾರಣವೇ ಅದರ ದ್ವಂದ್ವ ನಡೆ. ಇಂತಹ ದ್ವಂದ್ವ ನಡೆಯಿಂದ ರಾಜಕೀಯ ಸಮಗ್ರತೆಯನ್ನು ಕಾಪಾಡಿಕೊಂಡು, ಅಧಿಕಾರ ಉಳಿಸಿಕೊಂಡು ಯಾವುದೇ ಪಕ್ಷ ಈ ದೇಶದಲ್ಲಿ ಆಡಳಿತ ನಡೆಸಿದ ಉದಾಹರಣೆಯೇ ಇಲ್ಲ. ಅದು ಕಾಂಗ್ರೆಸ್‌ನಂತಹ ಅನುಭವಿ ರಾಷ್ಟ್ರೀಯ ಪಕ್ಷಕ್ಕೆ ಗೊತ್ತೇ ಆಗಿಲ್ಲ ಎನ್ನುವುದು ದುರಂತವೇ ಸರಿ. ಅಂತ್ಯಂತ ಪ್ರಾಮಾಣಿಕವಾಗಿ, ಅಥವಾ ನಿಲುವಿನ ಏಕಚಿತ್ತದ ಬದ್ಧತೆಯಲ್ಲಿಯೇ ವಿಮರ್ಶಿಸುವುದಾದರೇ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಕಂಡ  ಎರಡು ಅವಧಿಗಳು ಈ ದೇಶದಲ್ಲಿ ರಾಜಕೀಯವಾಗಿ ಹೊಸ ಶಕ್ತಿಯೊಂದು ಉದಯವಾಗುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಂತಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಕಾಂಗ್ರೆಸ್‌ಗೆ ಈಗ ಅತ್ಯಂತ ಅಗತ್ಯವಾಗಿ ಬೇಕಾಗಿರುವುದು ಪಕ್ಷಕ್ಕೆ ಅಂಟಿರುವ ಸಂಕಷ್ಟವನ್ನು ಮುಕ್ತಿಗೊಳಿಸುವ ಹಾಗೂ ಮತ್ತೆ ಹೊಸ ಮನ್ವಂತರದ ರೀತಿಯಲ್ಲಿ ಸ್ಪಷ್ಟ ನಿಲುವಿನೊಂದಿಗೆ ಅಧಿಕಾರಕ್ಕೆ ಬರುವುದಕ್ಕೆ ಈ ಕಾಲ ಪಕ್ವವಾಗಿದೆ ಎಂದು ಯೋಚಿಸುವ ಯೋಜನಾ ಕ್ಷಮತೆ, ಆತುರತೆ, ಚತುರತೆ ಇರುವ ಒಬ್ಬ ಕನಸು ಕಂಗಳ ನಾಯಕ. ದೇಶದಾದ್ಯಂತ ಈ ಪ್ರಮಾಣದಲ್ಲಿ ಹಿನ್ನೆಡೆಯಾಗುತ್ತಿರುವ ಸಂದರ್ಭದಲ್ಲಿಯೂ ರಾಜಕೀಯ ಕ್ಷೇತ್ರದಲ್ಲಿ ಹೊಸತನದ ಚಿಂತನೆಯತ್ತ ಕಾಂಗ್ರೆಸ್ ಗಮನ ಕೊಟ್ಟಿಲ್ಲವೆಂತಾದರೇ, ಕೆಲವು ದಶಕಗಳ ಕಾಲದವರೆಗೆ ಹೇಳಹೆಸರಿಲ್ಲದೇ ಇರಬೇಕಾಗುತ್ತದೆ ಮತ್ತು ಈ ಕಾಲದ ರಾಜಕೀಯ ವ್ಯವಸ್ಥೆಯಲ್ಲಿ ‘ಔಟ್‌ಡೇಟೆಟ್’ ಪಟ್ಟ ಹೊತ್ತುಕೊಳ್ಳಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಬಿಜೆಪಿಯಂತಹ ಪಕ್ಷದ ಆಡಳಿತದಲ್ಲಿ ಎಷ್ಟೆಲ್ಲಾ ಸಾಮಾಜಿಕ ಅಸ್ಥಿರತೆಗಳನ್ನು ಈ ದೇಶದ ಜನ ಕಂಡರೂ, ಪಕ್ಷ ಉಳಿಸಿಕೊಂಡ ನಿಲುವು ಮತ್ತು ತನ್ನ ಸಿದ್ಧಾಂತಕ್ಕೆ ಬದ್ಧವಾಗಿದ್ದಕ್ಕೆ ಅದು ಸೃಷ್ಟಿಸಿಕೊಂಡ, ಗಳಿಸಿಕೊಂಡ ‘ಜನತಾ ಅಲೆ’ ಇದೆ ಎಂದಾದರೇ, ರಾಜಕೀಯ ತಂತ್ರಗಾರಿಕೆಯೇ ಕಾರಣ. ಇಷ್ಟಾಗಿಯೂ ಸದ್ಯ, ದೇಶದಲ್ಲಿ ಆಡಳಿತ ಪಕ್ಷದ ಮೇಲೆ ಪೂರ್ಣ ಪ್ರಮಾಣದಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ ಎನ್ನುವುದು ಸತ್ಯ. 

ಈ ನಾಡು ಕಂಡ ಶ್ರೇಷ್ಠ ಪತ್ರಕರ್ತರಲ್ಲೋರ್ವರಾದ ವಡ್ಡರ್ಸೆ ರಘುರಾಮ ಶೆಟ್ಟಿಯವರು ಹೇಳುವ ಹಾಗೆ, “ಆಡಳಿತ ಪಕ್ಷ ಜನರಿಗೆ ಬೇಡವಾಗಿದೆ, ವಿರೋಧ ಪಕ್ಷಗಳಿಗೆ ಜನರ ಇಲವು ಇಲ್ಲವೆಂದಾದರೇ, ಮುಂದೇನು..? ಗೊಂದಲ ಅಥವಾ ರಾಜಕೀಯ ಅಭದ್ರತೆ ಎಂಬುವುದೇ ಈ ಪ್ರಶ್ನೆಗೆ ಸಿಗುವ ಉತ್ತರ.” ಹೌದು, ಸದ್ಯ ಭಾರತದಲ್ಲಿ ಆಡಳಿತ ಪಕ್ಷದ ಜನವಿರೋಧಿ ಯೋಜನೆಗಳ ಕಾರಣದಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ ಸೇರಿ ಇತರ ಪಕ್ಷಗಳ ಮೇಲೆ ಮೊದಲೇ ಜನರ ವಿಶ್ವಾಸವಿಲ್ಲ. ದೇಶ ಅಕ್ಷರಶಃ ಎದುರುಗಾಣುತ್ತಿರುವುದು ರಾಜಕೀಯ ಅಭದ್ರತೆ. ಈ ರಾಜಕೀಯದ ಅಸ್ಥಿರತೆ ಇಡೀ ದೇಶಕ್ಕೆ ಅಹಿತಕರ ಮತ್ತು ಇದು ಸಾಮಾಜಿಕ ಅಸ್ಥಿರತೆಯನ್ನೂ ಅಲುಗಿಸುತ್ತದೆ. ಹಾಗಾಗಿ ಪ್ರಜಾಪ್ರಭುತ್ವದಂತಹ ವ್ಯವಸ್ತೆಯಲ್ಲಿ ಒಂದೋ ಆಡಳಿತ ಪಕ್ಷ ಜನಪರವಾಗಿರಬೇಕು, ಇಲ್ಲವಾದರೇ, ವಿರೋಧ ಪಕ್ಷಗಳು ಆಡಳಿತದ ನ್ಯೂನ್ಯತೆಯನ್ನು ಪ್ರಶ್ನಿಸುವುದಕ್ಕೆ ಗಟ್ಟಿ ಧ್ವನಿ ಹೊಂದಿರಬೇಕು. ಇವೆರಡೂ ಇಲ್ಲವಾದಲ್ಲಿ ಅದು ಸಾಮಾಜಿಕ ಸಂಘಟನೆಯ ಶಕ್ತಿ ಇಮ್ಮಡಿಯಾಗುವುದಕ್ಕೆ ಪ್ರೇರಕ ಶಕ್ತಿಯಾಗುತ್ತದೆ. 

ಕಾಂಗ್ರೆಸ್ ಪಕ್ಷಕ್ಕೆ ಕೈಕೊಡುತ್ತಿರುವುದು ಒಂದು ಒಳ್ಳೆಯ ಸಾತ್ ಅಥವಾ ಬೆಂಬಲ. ೨೦೧೪ಕ್ಕೂ ಮುಂಚೆ ರಾಹುಲ್ ಗಾಂಧಿ ಹಿಂದಿದ್ದ ದೊಡ್ಡ ಯುವ ಸಮುದಾಯ ಈಗ ಎಲ್ಲಿ ಹೋಯಿತು ಎಂದು ಕೇಳಿದರೇ ಅದಕ್ಕೆ ಸ್ಪಷ್ಟವಾದ ಉತ್ತರವಿಲ್ಲ. ಬಹುಶಃ ಕಾಂಗ್ರೆಸ್ ಹಿಂದೆಂದೂ ಕಂಡಿರದ ಹಾಗೆ ರಾಹುಲ್ ಗಾಂಧಿ ಕಳೆದೆಂಟು ಹತ್ತು ವರ್ಷಗಳ ಹಿಂದೆ ದೊಡ್ಡ ಯುವ ಸಮುದಾಯವನ್ನೇ ಹೊಂದಿದ್ದರು. ಆದರೇ, ಆ ಸಮುದಾಯವನ್ನು ತನ್ನ ಬೆಂಬಲವಾಗಿ ಉಳಿಸಿಕೊಳ್ಳುವುದರಲ್ಲಿ ಸಂಪೂರ್ಣ ವಿಫಲರಾದರು. ರಾಹುಲ್ ಗಾಂಧಿ ಬೆಳೆಸಿಕೊಂಡ ರಾಜಕೀಯ ವರ್ಚಸ್ಸನ್ನು, ನಾಯಕತ್ವವನ್ನು ಒಪ್ಪಿಕೊಂಡಿದ್ದ ಯುವ ಸಮುದಾಯ ಹಠಾತ್ ಎಂಬಂತೆ ೨೦೧೪ರ ಅಂತ್ಯಕಾಲದಲ್ಲಿ ವಿಮುಖವಾಗುದಕ್ಕೆ ಮುಖ್ಯ ಕಾರಣವೇ ಅಂದು ಅವರಲ್ಲಿರದ ಆಡಳಿತ ಸಾಮರ್ಥ್ಯ. ಅದಾದ ಮೇಲೆ ದೇಶ ಕಂಡಿದ್ದು ಮೋದಿ ಅಲೆ. ಇಡೀ ದೇಶದ ಯುವ ಸಮುದಾಯ ಮೋದಿ ಎಂಬ ಹೆಸರಿಗೆ ‘ಅಡಿಕ್ಟ್’ ಆಗಿ ಬಿಟ್ಟಿತು. ರಾಹುಲ್ ಗಾಂಧಿಗೆ ಈ ದೇಶದಲ್ಲಿ ಮಹತ್ತರವಾದದ್ದೇನೋ ಮಾಡಬೇಕು ಎಂಬ ಮಹದಾಸೆ ಇದ್ದಿತ್ತೇನಾದರೂ ರೆಕ್ಕೆ ಕಳೆದುಕೊಂಡ ಹಕ್ಕಿಯಂತಾದರು. ಅದಾದ ಮೇಲೆ ರಾಹುಲ್ ಗಾಂಧಿ ಕಲಿತ ರಾಜಕೀಯ ಪಾಠ ನಿಜಕ್ಕೂ ಮೆಚ್ಚುವಂತದ್ದೆ ಸರಿ. ಆದರೇ, ಪಕ್ಷದೊಳಗೆ ತಂದೆ ರಾಜೀವ್ ಗಾಂಧಿ ಅನುಭವಿಸಿದಂತೆಯೇ ರಾಹುಲ್ ಗಾಂಧಿ ಅನುಭವಿಸಬೇಕಾಯಿತು. ಕಾಂಗ್ರೆಸ್ ಅವನತಿಗೆ ರಾಹುಲ್ ಗಾಂಧಿಯೇ ಕಾರಣ ಎಂಬಂತೆ ಪಕ್ಷದ ಕೆಲವು ನಾಯಕರೇ ವಿರೋಧ ವ್ಯಕ್ತ ಪಡಿಸುವುದಕ್ಕೆ ಆರಂಭಿಸಿದ್ದರು. ಸರಿಸುಮಾರು ೪೨-೪೪ ವರ್ಷದ ಯುವ ರಾಜಕೀಯ ನಾಯಕನೊಬ್ಬ ತಮ್ಮೆಲ್ಲರ ಮುಂದಿನ ಹಂತವನ್ನು ಏರಿದನೆಂಬ ಮಾತ್ರ‍್ಯವೂ ಇದಕ್ಕೆ ಕಾರಣವಿರಬಹುದು. ಈಗಿನ ರಾಹುಲ್ ಗಾಂಧಿ ಒಬ್ಬ ಪ್ರಬುದ್ಧ ರಾಜಕೀಯ ನಾಯಕನಾಗಿರಬಹುದು, ಆದರೇ ಪಕ್ಷ ಕಳೆದ ಏಳೆಂಟು ವರ್ಷಗಳಲ್ಲಿ ಕಳೆದುಕೊಂಡ ರಾಜಕೀಯ ವರ್ಚಸ್ಸನ್ನು ಮರಳಿ ತಂದು ಕೊಡುವುದಕ್ಕೆ ಅವರಿಗೆ ಸಾಧ್ಯವಿದೆಯೇ..? ಅಥವಾ ಅವರಲ್ಲಿ ಅದಕ್ಕೆ ಬೇಕಾದ ಬೆಂಬಲವಿದೆಯೇ ಎನ್ನುವುದು ಇಲ್ಲಿ ಬಹಳ ಮುಖ್ಯವಾದ ಪ್ರಶ್ನೆ. 

ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್‌ರಂತಹ ಹಿರಿಯ ನಾಯಕರ ರಾಜೀನಾಮೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟಾಗದೇ ಇದ್ದರೂ ಕೂಡ, ಈ ರಾಜೀನಾಮೆ ಪರ್ವ ಆಡಳಿತ ಪಕ್ಷ ಬಿಜೆಪಿ ಪಾಲಿಗೆ ಇವೆಲ್ಲಾ ಅನಾಯಾಸ ತುತ್ತಾಗಿ ಸಿಕ್ಕಿವೆ. ಇನ್ನು, ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದಾಗಿನಿಂದ ಅವರ ನಾಯಕತ್ವವನ್ನು ನಿರಂತರವಾಗಿ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ಸೇರಿ ಮೊದಲಾದವರು ಇದ್ದ ಕಾಂಗ್ರೆಸ್‌ನ ಜಿ೨೩ ಬಳಗ ರಾಹುಲ್ ಗಾಂಧಿ ಅವರನ್ನು ಟೀಕಿಸುತ್ತಾ ಬಂದಿತ್ತು. ಹಾಗೆ ನೋಡುವುದಕ್ಕೆ ಹೋದರೇ, ಪ್ರಧಾನಿ ಹುದ್ದೆಗೆ ತಂದೆಗೆ ತೆರೆದುಕೊಂಡ ಸುಲಭ ದಾರಿ ಮಗ ರಾಹುಲ್ ಗಾಂಧಿಗೆ ದೊರಕಲಿಲ್ಲ. ಆದರೂ ಅಂದು ಗಾಂಧಿ ಕುಟುಂಬದ ಒಂದು ಕುಡಿ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿಯಾಗುತ್ತಾನೆ ಎಂದಾಗ ಕಟುವಾಗಿ ವಿರೋಧಿಸಿದ ದೊಡ್ಡ ಬಳಗ ಕಾಂಗ್ರೆಸ್‌ನಲ್ಲಿಯೇ ಇತ್ತು. ಪ್ರಧಾನಿಯಾಗಿ ರಾಜೀವ್ ಗಾಂಧಿ ಕಾಂಗ್ರೆಸ್‌ನನ್ನು ಮುನ್ನೆಡೆಸಿದಾಗ ಆ ಎಲ್ಲರೂ ತೆಪ್ಪಗಾಗಿದ್ದರು. ಆದರೇ, ರಾಹುಲ್ ಗಾಂಧಿ ಸ್ಥಿತಿ ಹಾಗಿಲ್ಲ. ‘ಗಾಂಧಿ ಕುಟುಂಬ ರಾಜಕೀಯ’ದ ವಿರುದ್ಧ ಭಿನ್ನ ಮಾತನಾಡುವ ಧೈರ್ಯವನ್ನು ಕಾಂಗ್ರೆಸ್ ಒಳಗಿನ ವಿರೋಧ ಬಣ ಪಡೆದುಕೊಂಡಿತು. ರಾಹುಲ್ ಏನೇ ಮಾಡುವುದಕ್ಕೆ ಹೊರಟರು ಭಿನ್ನ ಮಾತಾಡುವುದಕ್ಕೆ ಆರಂಭಿಸಿದರು. ರಾಹುಲ್ ಆಗಲಿ, ಸೋನಿಯಾ ಆಗಲಿ ಹೆಚ್ಚೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಇನ್ನು, ದೇಶದಾದ್ಯಂತ ಬಲ ಕಳೆದುಕೊಂಡು ಸೊರಗಿ ನಿಂತಿರುವ ಕಾಂಗ್ರೆಸ್‌ನ ಭವಿಷ್ಯವೇನು..? ಪ್ರಸ್ತುತ ರಾಜಕಾರಣಕ್ಕೆ ಸಲ್ಲದೇ ಉಳಿಯುವ ರಾಜಕೀಯ ಪಕ್ಷವಾಗಿ ಉಳಿಯುತ್ತದೆಯೇ..? ಈವರೆಗೆ ಆದ ಅನುಭವದಿಂದ ಪಾಠ ಕಲಿತು ಮತ್ತೆ ಹೊಸದೊಂದು ರಾಜಕೀಯ ಕ್ರಾಂತಿಯ ಇತಿಹಾಸ ಬರೆಯಲಿದೆಯೇ..? ಎಂಬೆಲ್ಲ ಪ್ರಶ್ನೆಗಳು ಎದ್ದಿವೆ. ಮಾತ್ರವಲ್ಲದೇ, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ನಡುವೆ ನಿಂತು ನೋಡುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. 

-ಶ್ರೀರಾಜ್ ವಕ್ವಾಡಿ 

 

         


Thursday, August 25, 2022

ಬಿಜೆಪಿಗೆ ಜಯ ತಂದುಕೊಡಲಿದೆಯೇ ಬಿಎಸ್‌ವೈ ಪ್ರಮೋಷನ್.?

೨೦೦೬ರ ರಾಜಕೀಯ ಕ್ರಾಂತಿ ಪುನರಾವರ್ತನೆ | ಎಲೆಕ್ಶನ್ ಎಕ್ಸ್  ಪರ್ಟ್ ನ ಆಯ್ಕೆಗೆ ಕಾರಣವೇನು.?

ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್‌ವೈ ಅವರನ್ನು ಹೈಮಾಂಡ್ ಕೆಳಗಿಳಿಸಿರುವುದು, ಕರ್ನಾಟಕ ಬಿಜೆಪಿ ಸರ್ಕಾರದ ಇತ್ತೀಚೆಗಿನ ಬೆಳವಣಿಗೆಯ ಬಗ್ಗೆ ಹಿಂದೂ ಸಂಘಟನೆಗಳ ‘ಕ್ಲಾಸ್’, ಪ್ರತಿಪಕ್ಷಗಳ ಚುನಾವಣಾ ಪ್ರಚಾರದ ರನ್ ವೇಗ, ಮುಂಬರುವ ಚುನಾವಣೆಯಲ್ಲಿ ಹಿನ್ನೆಡೆಯಾಗಬಹುದು ಎಂಬ ಪಕ್ಷದ ಆಂತರಿಕ ಸಮೀಕ್ಷೆ ಬಿಜೆಪಿ ಹೈಕಮಾಂಡ್‌ಗೆ ತಲೆ ಮೇಲೆ ಕೈ ಇಟ್ಟುಕೊಳ್ಳುವ ಹಾಗಾಗಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಬಿಜೆಪಿಯ ಪಾಲಿಗೆ ಭಾಗ್ಯ ವಿಧಾತನಂತಿದ್ದ ಬಿಎಸ್‌ವೈ ಅವರನ್ನೇ ಹೊರಗಿಟ್ಟು ಮುಂಬರುವ ಚುನಾವಣೆಯನ್ನು ಎದುರಿಸುವುದಕ್ಕೆ ಸಾಧ್ಯವಿದೆಯೇ ಎಂಬ ಪ್ರಶ್ನೆ ಬಿಜೆಪಿಯಲ್ಲಿಯೇ ಮೂಡಿದ ಫಲವಾಗಿಯೇ ಅವರನ್ನು ರಾಷ್ಟ್ರೀಯ ಬಿಜೆಪಿಯಲ್ಲಿ ಪರಮ ಶ್ರೇಷ್ಟ ಅಧಿಕಾರ ಹೊಂದಿರುವ ಸಂಸದೀಯ ಮಂಡಳಿಯ ಸದಸ್ಯತ್ವ ಹಾಗೂ ವಿವಿಧ ಚುನಾವಣೆಗಳ ಟಿಕೇಟ್ ಅಂತಿಮಗೊಳಿಸುವ ಕೇಂದ್ರ ಚುನಾವಣಾ ಸಮಿತಿಯ ಸದಸ್ಯತ್ವ ಸ್ಥಾನವನ್ನು ನೀಡಿದೆ ಎಂದು ಕಾಣಿಸುತ್ತಿದೆ.

ರಾಜ್ಯ ಬಿಜೆಪಿ ಪಾಲಿಗೆ ಬಿಎಸ್‌ವೈ ಅವರೇ ಒಂದು ರೀತಿಯಲ್ಲಿ ಹೈಕಮಾಂಡ್ ಆಗಿದ್ದರು. ಅವರೇ ಮುಖ್ಯಮಂತ್ರಿಯಾಗಿದ್ದರು, ಅವರದ್ದೇ ಶಾಸಕರಿದ್ದರು, ಅವರದ್ದೇ ಮಾತು ಹೈಮಾಂಡ್‌ನಲ್ಲಿ ನಡೆಯುತ್ತಿತ್ತು. ಮುಖ್ಯಮಂತ್ರಿ ಸ್ಥಾನದಿಂದ ಇಳಿದಾದ ಮೇಲೂ ಹೈಕಮಾಂಡ್ ಯಡಿಯೂರಪ್ಪರ ಮಾತಿಗೆ ಒತ್ತು ನೀಡಿ ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ್ದು ಎನ್ನುವುದು ಇಲ್ಲಿ ಗಮನಾರ್ಹ. ಸುಮಾರು ಐದು ದಶಕಗಳಿಂದ ರಾಜಕೀಯದೊಂದಿಗೆ ತನ್ನನ್ನು ತೊಡಗಿಸಿಕೊಂಡಿರುವ ಬಿಎಸ್‌ವೈ ರಾಜ್ಯ ರಾಜಕಾರಣವನ್ನು ಸಲೀಸಾಗಿ ಲೆಕ್ಕಾಚಾರ ಹಾಕಬಲ್ಲರು. ಹೋರಾಟ ಹಾಗೂ ಸೋಲೊಪ್ಪದ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಪಾಲಿಗೆ ಮಹತ್ತರವಾದ ಬದಲಾವಣೆ ತಂದುಕೊಟ್ಟವರು. ಹಾಗಾಗಿಯೇ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪ್ರಶ್ನಾತೀತ ನಾಯಕ. ಹಂತ ಹಂತವಾಗಿ ರಾಜಕೀಯವಾಗಿ ಮೇಲೆ ಬಂದ ಯಡಿಯೂರಪ್ಪ ಪಕ್ಷದ ಬಹುತೇಕ ಎಲ್ಲಾ ಪ್ರಮುಖ ಹುದ್ದೆಗಳ ಅಧಿಕಾರವಹಿಸಿ ಅನುಭವ ಪಡೆದವರು. ಇನ್ನು, ಕರ್ನಾಟಕದ ರಾಜಕಾರಣದ ಚುನಾವಣೆಯ ಮಟ್ಟಿಗೆ ನಿರ್ಣಾಯಕ ಸಮುದಾಯ ಎಂದೆ ಹೇಳಿಸಿಕೊಳ್ಳುವ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ. ಹಾಗಾಗಿ ರಾಜಕಾರಣ ಮಾತ್ರವಲ್ಲದೇ, ಲಿಂಗಾಯತ ಸಮುದಾಯದಲ್ಲಿಯೂ ತಮ್ಮದೇ ಆದ ನಾಯಕತ್ವದ ವರ್ಚಸ್ಸನ್ನು ಹೊಂದಿರುವವರು ಯಡಿಯೂರಪ್ಪ. ಯಡಿಯೂರಪ್ಪರಂತಹ ಹಿರಿಯ ರಾಜಕಾರಣಿಯನ್ನು ಪಕ್ಕಕ್ಕಿಟ್ಟು ತಾವು ರಾಜ್ಯದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ ಎಂದರೇ ಅದು ಬಿಜೆಪಿ ಹೈಕಮಾಂಡ್‌ನ ಪೊಳ್ಳು ಶೂರತನವೇ ಸರಿ. ಅದು ಈಗ ಹೈಕಮಾಂಡ್‌ಗೆ ಅರಿವಾದಂತೆ ಕಾಣಿಸುತ್ತಿದ್ದು, ಹಾಗಾಗಿಯೇ ಬಿಎಸ್‌ವೈಗೆ ಹೈಕಮಾಂಡ್‌ನಲ್ಲಿ ‘ಟಾಪ್ ಫೈವ್’ ಸ್ಥಾನಮಾನ ಕೊಟ್ಟಿದ್ದು ಎಂದೇ ರಾಜಕೀಯ ಪಡಸಾಲೆಯಲ್ಲಿ ವಾಖ್ಯಾನವಾಗುತ್ತಿದೆ. 

ರಾಜ್ಯದಲ್ಲಿದ್ದ ವರ್ಚಸ್ಸು ರಾಷ್ಟ್ರಮಟ್ಟದಲ್ಲಿ ಬಿಎಸ್‌ವೈಗೆ ಇದೆಯೇ..? : ಬಿಎಸ್‌ವೈ ಅವರ ಸಂಘಟನೆಯ ಹಾದಿ, ಹೋರಾಟದ ದಿನಗಳು, ರಾಜಕಾರಣದ ಹೆಜ್ಜೆಗುರುತು ಕರ್ನಾಟಕ ಬಿಜೆಪಿಯ ಪಾಲಿಗೆ ದೊಡ್ಡ ಇತಿಹಾಸ. ರಾಜ್ಯ ರಾಜಕಾರಣದ ಮಟ್ಟಿಗೂ ಬಿಎಸ್‌ವೈ ಒಬ್ಬ ಹಿರಿಯ, ಪ್ರಭಾವಿ ನಾಯಕ ಎನ್ನುವುದರಲ್ಲಿ ಅನುಮಾನವಿಲ್ಲ. ಕೇಂದ್ರ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯತ್ವ ಹಾಗೂ ಕೇಂದ್ರ ಚುನಾವಣಾ ಸಮಿತಿಯ ಸದಸ್ಯತ್ವವನ್ನು ಬಿಎಸ್‌ವೈಗೆ ಹೈಕಮಾಂಡ್ ನೀಡಿರುವುದು ರಾಜ್ಯದಲ್ಲಿದ್ದ ವರ್ಚಸ್ಸು ರಾಷ್ಟ್ರ ಮಟ್ಟದಲ್ಲಿ ಬಿಎಸ್‌ವೈ ಅವರಿಗೆ ಇದೆಯೇ..? ಅಥವಾ ಇದು ಬಿಎಸ್‌ವೈ ಅವರನ್ನು ಸಮಾಧಾನ ಮಾಡುವುದಕ್ಕಾಗಿ ಹೈಕಮಾಂಡ್ ಮಾಡಿದ ಮಾಸ್ಟರ್ ಪ್ಲ್ಯಾನ್..? ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವ ಕಾರಣದಿಂದಾಗಿ ಲಿಂಗಾಯತ ಮತಗಳು ವಿಮುಖವಾಗುತ್ತವೆ ಎಂಬ ಭಯದಿಂದ ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಳ್ಳುವ ಕಾರಣದಿಂದಾಗಿ ಬಿಎಸ್‌ವೈ ಅವರಿಗೆ ಈ ಹುದ್ದೆ ನಿಡಿದ್ದೆ ..? ಎಂಬ ಪ್ರಶ್ನೆಗಳು ಎಳುವ ಹಾಗೆ ಮಾಡಿದೆ. ಸಾಮಾನ್ಯವಾಗಿ ಈ ಸಮಿತಿಗಳಿಗೆ ಮಾಜಿ ಮುಖ್ಯಮಂತ್ರಿಗಳನ್ನು ಹೈಕಮಾಂಡ್ ಪರಿಗಣನೆ ಮಾಡುವುದು ರೂಢಿ ಇದೆ. ಆದರೇ, ಎಲ್ಲಾ ಮುಖ್ಯಮಂತ್ರಿಗಳನ್ನು ಪರಿಗಣಿಸಿದ ಉದಾಹರಣೆ ಇಲ್ಲ. ಮಾತ್ರವಲ್ಲದೇ ರಾಜಕಾರಣದ ವರ್ಚಸ್ಸಿನ ಆಧಾರದಲ್ಲಿ ಈ ಸಮಿತಿಗಳಿಗೆ ಆಯ್ಕೆ ಮಾಡಲಾಗುತ್ತದೆ. ಪಕ್ಷದ ರಾಷ್ಟ್ರೀಯ ನಿಲುವುಗಳ ಅಂತಿಮ ನಿರ್ಧಾರ, ಚುನಾವಣಾ ತಂತ್ರಗಾರಿಕೆ, ಟಿಕೇಟ್ ಹಂಚಿಕೆಯ ಅಂತಿಮ ನಿರ್ಧಾರ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆ, ಪಕ್ಷಕ್ಕೆ ಸಂಬಂಧಿಸಿದ ಇನ್ನಿತರ ಪ್ರಮುಖ ವಿಷಯಗಳ ಅಂತಿಮ ನಿರ್ಧಾರವನ್ನು ಕೇಂದ್ರ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯ ಮೂಲಕ ತೀರ್ಮಾನ ಮಾಡಲಾಗುತ್ತದೆ. ಒಟ್ಟಿನಲ್ಲಿ ಪಕ್ಷದ ಎಲ್ಲಾ ಚಟುವಟಿಕೆಗಳಿಗೆ ಸಂಸದೀಯ ಮಂಡಳಿಯೇ ‘ಸುಪ್ರೀಂ’. ರಾಷ್ಟ್ರ ರಾಜಕಾರಣದಲ್ಲಿ ಅನುಭವ ಅಥವಾ ಸೂಕ್ಷ್ಮತೆ ಬಿಎಸ್‌ವೈಗೆ ಕಡಿಮೆ. ಇಲ್ಲವೇ ಇಲ್ಲ ಎಂದೇ ಹೇಳಬಹುದು. ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಂಡ ಬಳಿಕ ರಾಜ್ಯದಲ್ಲಿ ಬುಗಿಲೆದ್ದ ಆಕ್ರೋಶ ಹೈಕಮಾಂಡ್‌ಗೆ ಚಿಂತೆಗೀಡು ಮಾಡಿತ್ತು. ಭವಿಷ್ಯದ ಪ್ರಶ್ನೆಯನ್ನೂ ಎಬ್ಬಿಸಿತ್ತು. ಯಡಿಯೂರಪ್ಪ ಅವರ ಹಿಸ್ಟರಿ ಕೂಡ ಹೈಕಮಾಂಡ್‌ಗೆ ಚೆನ್ನಾಗಿಯೇ ಗೊತ್ತಿದೆ. ಅಧಿಕಾರದಿಂದ ಕೆಳಗಿಳಿದ ಮೇಲೂ ಬಿಎಸ್‌ವೈ ಪರೋಕ್ಷವಾಗಿ ತನ್ನ ಪ್ರಭಾವ ತೋರಿಸಿತ್ತಿದ್ದಿದ್ದು ಕೂಡ ಹೈಕಮಾಂಡ್‌ಗೆ ತಲೆ ನೋವಾಗಿ ಪರಿಣಮಿಸಿತ್ತು. ಇದುವರೆಗೆ ಬಹುತೇಕ ಎಲ್ಲಾ ಬಿಎಸ್‌ವೈ ಅವರ ಡಿಮಾಂಡ್‌ಗೆ ದಿವ್ಯ ನಿರ್ಲಕ್ಷ್ಯವನ್ನೇ ಮಾಡುತ್ತಾ ಬಂದ ಹೈಕಮಾಂಡ್ ಏಕಾಏಕಿ ಈ ಸ್ಥಾನಮಾನ ನೀಡಿರುವುದು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಎಂದೇ ಕಾಣಿಸುತ್ತಿದೆ. ಹೇಳಿಕೇಳಿ ಬಿಎಸ್‌ವೈ ಪಕ್ಷ ಸಂಘಟನಾ ಚತುರ. 

ಇನ್ನು, ಬಿಎಸ್‌ವೈ ರಾಜ್ಯಪಾಲರ ಹುದ್ದೆಗೆ ಒಲ್ಲೆ ಎಂದಿದ್ದರು, ತಾವು ರಾಜ್ಯ ರಾಜಕಾರಣದಲ್ಲಿಯೇ ಸಕ್ರೀಯವಾಗಿರುವ ಇಂಗಿತವನ್ನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ವ್ಯಕ್ತ ಪಡಿಸಿದ್ದರು. ಯಡಿಯೂರಪ್ಪನವರಿಗೆ ತಮ್ಮ ವ್ಯಾಪ್ತಿಯ ಬಗ್ಗೆ ಸ್ಪಷ್ಟವಾದ ಅರಿವಿದೆ. ಅದು ಹೈಕಮಾಂಡ್‌ಗೂ ತಿಳಿದಿದೆ. ಮಗ ವಿಜಯೇಂದ್ರ ಅವರಿಗೆ ರಾಜಕಾರಣದಲ್ಲಿ ಉನ್ನತ ಹುದ್ದೆಗೆ ಬೇಡಿಕೆ ಇಡುತ್ತಿದ್ದ ಬಿಎಸ್‌ವೈ ಹಾಗೂ ಮುನಿಸಿಕೊಂಡಿದ್ದ ಲಿಂಗಾಯತ ಸಮುದಾಯವನ್ನು ಸಮಾಧಾನ ಮಾಡುವುದಕ್ಕಾಗಿಯೇ ಈ ಸ್ಥಾನಮಾನ ನೀಡಿರುವುದು ಹೊರತು ಬಿಎಸ್‌ವೈಗಿರುವ ರಾಷ್ಟ್ರ ಮಟ್ಟದ ವರ್ಚಸ್ಸಿನಿಂದಲ್ಲ ಎಂದೆನ್ನಿಸುತ್ತಿದೆ. ಸಂಸದೀಯ ಮಂಡಳಿಯಲ್ಲಿ ಇರುವ ಒಟ್ಟು ಹನ್ನೊಂದು ಮಂದಿಯಲ್ಲಿ ಯಡಿಯೂರಪ್ಪನವರೇ ವಯಸ್ಸಿನಲ್ಲಿ ಹಿರಿಯರು. ಅದಕ್ಕಾಗಿಯೇ ಕೇಂದ್ರ ಬಿಜೆಪಿಯ ಟಾಪ್ ಮೋಸ್ಟ್ ನಾಲ್ವರು ನಾಯಕರು ಆದ ಮೇಲೆ ಬಿಎಸ್‌ವೈಗೆ ‘ಟಾಪ್ ಫೈವ್’ ಸ್ಥಾನಮಾನ ಕೊಟ್ಟಿರುವುದು. ಹಾಗೆ ನೋಡುವುದಕ್ಕೆ ಹೋದರೇ ಬಿ ಎಲ್ ಸಂತೋಷ್ ಕುಮಾರ್ ರಾಷ್ಟ್ರ ರಾಜಕಾರಣದಲ್ಲಿ ಯಡಿಯೂರಪ್ಪನವರಿಗಿಂತಲೂ ಹೆಚ್ಚಿನ ಹೋಲ್ಡ್ ಉಳ್ಳವರು. ಹೀಗಿರುವಾಗ ರಾಜ್ಯದ ‘ಎಲೆಕ್ಶನ್ ಎಕ್ಸ್‌ ಪರ್ಟ್ ’ನ ಮುಂದಿನ ನಡೆ ಹೇಗಿರಲಿದೆ ಎನ್ನುವುದು ಕುತೂಹಲ. 

ಅಷ್ಟಕ್ಕೂ ಒಳಗೊಳಗೆ ಬಿ. ಎಲ್. ಸಂತೋಷ್ ಕುಮಾರ್‌ಗೆ ಹಾಗೂ ಯಡಿಯೂರಪ್ಪನವರಿಗೆ ಅಷ್ಟಕ್ಕಷೇ. ಹಳೆ ಮೈಸೂರು ಭಾಗದಲ್ಲಿ ಬಿಎಸ್‌ವೈ ಇಲ್ಲದೆಯೂ ಮುನ್ನಡೆಗೆ ಬರುತ್ತೇವೆ ಎಂದ ಸಂತೋಷ್ ತಂತ್ರಗಾರಿಕೆಯಲ್ಲಿ ಸೋಲು ಕಂಡರು. ತಮ್ಮ ಮಗನಿಗೆ ಆ ಭಾಗದ ಜವಾಬ್ದಾರಿಯನ್ನು ನೀಡುವಂತೆ ಪರೋಕ್ಷವಾಗಿ ಬೇಡಿಕೆ ಇಟ್ಟಿದ್ದರು. ಇವೆಲ್ಲಾ ಒಂದಿಷ್ಟು ಆಂತರಿಕ ಅಸಮಾಧಾನಕ್ಕೆ ಕಾರಣ. ಸಂಸದೀಯ ಮಂಡಳಿಯಲ್ಲಿ ಈವರೆಗೆ ರಾಜ್ಯದ ಮಟ್ಟಿಗೆ ಬಿ ಎಲ್ ಸಂತೋಷ್ ತೀರ್ಮಾನವೇ ಅಂತಿಮವಾಗುತ್ತಿತ್ತು. ಆದರೇ ಇನ್ಮೇಲೆ ಹಾಗಿಲ್ಲ. ಯಡಿಯೂರಪ್ಪ ರಾಜ್ಯ ಚುನಾವಣೆಯ ವಿಚಾರದಲ್ಲಿ ಬಿ ಎಲ್ ಸಂತೋಷ್ ಅವರನ್ನು ಓವರ್‌ಟೇಕ್ ಮಾಡುವುದರಲ್ಲಿ ಅನುಮಾನವೇ ಇಲ್ಲ. 

೨೦೦೬ರ ರಾಜಕೀಯ ಕ್ರಾಂತಿ ಪುನರಾವರ್ತನೆ ? : ೨೦೦೪ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತದೆ ಎಂಬ ಹುಮ್ಮಸ್ಸಿನಲ್ಲಿದ್ದ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಜೋಡಿಗೆ ತಣ್ಣೀರೆರೆಚಿದ್ದು ಅಂದಿನ ಫಲಿತಾಂಶ. ಬಿಜೆಪಿ ೭೯ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳುವ ಹಾಗಾಯ್ತು. ಕಾರಣಾಂತರಗಳಿಂದ ಜೆಡಿಎಸ್‌ನೊಂದಿಗೆ ಬಿಜೆಪಿಗೆ ಮೈತ್ರಿ ಸಾಧಿಸುವುದಕ್ಕೆ ಸಾದ್ಯವಾಗಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಧರಂಸಿಂಗ್ ಸಿಎಂ ಆದರು. ಇತ್ತ ಅನಂತ್‌ಕುಮಾರ್ ರಾಷ್ಟ್ರ ರಾಜಕಾರಣದತ್ತ ಮತ್ತೆ ತೆರಳಿದರು. ಸುಮ್ಮನಾಗದ ಬಿಎಸ್‌ವೈ ಎಚ್‌ಡಿಕೆ ಮನವೊಲಿಸಿ ಜೆಡಿಎಸ್ ಜೊತೆಗೆ ೨೦೦೬ರಲ್ಲಿ ದೋಸ್ತಿ ಕುದುರಿಸಿದ್ದರು. ಜೆಡಿಎಸ್‌ನ ೪೦, ಬಿಜೆಪಿಯ ೭೯ ಶಾಸಕರ ಜಂಟಿ ಟ್ವೆಂಟಿ ಟ್ವೆಂಟಿ ಸರ್ಕಾರ ಅಧಿಕಾರಕ್ಕೆ ಬಂತು. ಯಡಿಯೂರಪ್ಪ ನಡೆ ರಾಷ್ಟ್ರೀಯ ಬಿಜೆಪಿಗೆ ಸಂತಸ ಉಂಟು ಮಾಡಿತ್ತು. 

ಮುಂಬರುವ ಚುನಾವಣೆಯಲ್ಲಿ ಬಹುಮತ ಸಾಧಿಸುತ್ತೇವೆ ಎಂದ ಬಿಜೆಪಿಗೆ ಈಗ ಒಳಗೊಳಗೆ ಹಿನ್ನೆಡೆ ಆಗುವ ಆತಂಕವಿದೆ. ಯಡಿಯೂರಪ್ಪ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ವಿಶ್ವಾಸವನ್ನು ಕಳೆದುಕೊಳ್ಳಬಾರದು, ಒಂದೇ ಬಹುಮತ ತರುವಲ್ಲಿ ಕೆಲಸ ಮಾಡಬೇಕು, ಇಲ್ಲವಾದಲ್ಲಿ ೨೦೦೬ರ ಪುನರಾವರ್ತನೆಗೆ ಮನಸ್ಸು ಮಾಡಬೇಕು. ಒಟ್ಟಿನಲ್ಲಿ ಒಂದು ವೇಳೆ ಬಿಜೆಪಿಗೆ ಬಹುಮತ ಬಂದಿಲ್ಲವಾದರೇ, ಮತ್ತೆ ಎಚ್‌ಡಿಕೆ ಮನವೊಲಿಸುವುದರತ್ತ ಯಡಿಯೂರಪ್ಪ ಮುಂದಾಗುತ್ತಾರೆಯೇ ಎಂಬ ಪ್ರಶ್ನೆಯೊಂದು ಎದ್ದಿದೆ.  

೨೦೦೪ರಲ್ಲಿ ಆದಂತೆ ೨೦೧೮ರಲ್ಲಿಯೂ ಆಯಿತು. ೨ನೇ ಹಾಗೂ ೩ನೇ ಸ್ಥಾನದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತು. ಇನ್ನು ೨೦೦೮ರಲ್ಲಿ ೧೧೦ ಸ್ಥಾನಗಳನ್ನು ಬಿಜೆಪಿ ಪಡೆದಿತ್ತಾದರೂ ಅಧಿಕಾರಕ್ಕೆ ಬರಲಾಗಿರಲಿಲ್ಲ. ಕಾಂಗ್ರೆಸ್-ಜೆಡಿಎಸ್ ಮತ್ತೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಆಪರೇಷನ್ ಕಮಲ ಬಿಎಸ್‌ವೈ ಕೈ ಹಿಡಿಯಿತು. ಪಕ್ಷದೊಳಗಿನ ಆಂತರಿಕ ಕಲಹದಿಂದಾಗಿ ಬಿಎಸ್‌ವೈ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಕೆಜೆಪಿ ಕಟ್ಟಿದರು. ಇದು ೨೦೧೩ರಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಪರೋಕ್ಷ ಕಾರಣವಾಯಿತು. ಮತ್ತೆ ಬಿಎಸ್‌ವೈ ಬಿಜೆಪಿಗೆ ಸೇರಿದರು. ೨೦೧೮ರ ಚುನಾವಣೆಗೆ ಸಜ್ಜಾದರು. ನಿರೀಕ್ಷೆ ಹುಸಿಯಾಯಿತು. ಸೋಲೊಪ್ಪಿಕೊಳ್ಳದ ಬಿಎಸ್‌ವೈ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ೨೮ ಲೋಕಸಭಾ ಕ್ಷೇತ್ರಗಳ ಪೈಕಿ ೨೫ ಸ್ಥಾನಗಳಲ್ಲಿ ಕಮಲ ಅರಳಿಸಿ ಮತ್ತೆ ಭರವಸೆ ಮೂಡಿಸಿದ್ದರು. ಆಮೇಲೆ ಆದದ್ದೆಲ್ಲವೂ ದೊಡ್ಡ ಇತಿಹಾಸ. ಬಿಎಸ್‌ವೈ ಬೇಡಿಕೆಗೆಲ್ಲಾ ಹೈಕಮಾಂಡ್ ಅಸ್ತು ಅಂದು ಬಿಡ್ತು. ತಮ್ಮನ್ನು ನಂಬಿ ಪಕ್ಷಾಂತರವಾಗಿ ಬಂದ ೧೭ ಶಾಸಕರಲ್ಲಿ ೧೫ ಶಾಸಕರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ಹಾಗೆ ಮಾಡಿದರು. ಈ ಮೂಲಕ ಆಪರೇಷನ್ ಚಾಣಾಕ್ಷ್ಯ ಎಂದೇ ಬಿಎಸ್‌ವೈ ಗುರುತಿಸಿಕೊಂಡರು. ಈಗ ದಕ್ಷಿಣ ಭಾರತದಲ್ಲಿ ಒಂದಾದರೂ ರಾಜ್ಯದಲ್ಲಿ ಕಮಲ ಅರಳಿಸಲೇಬೇಕು ಎಂಬ ಹಠ ಬಿಜೆಪಿಗಿದೆ. ಅದಕ್ಕೆ ಯಡಿಯೂರಪ್ಪರ ಅಗತ್ಯ ಬಹಳವಿದೆ. ಬಿಎಸ್‌ವೈ ೨೦೨೩ರ ಚುನಾವಣೆಯಲ್ಲಿ ಅಧಿಕಾರ ತಂದುಕೊಟ್ಟರೇ, ಆಮೇಲೆ ಮುಂದಿನ ಚುನಾವಣೆಗಳಿಗೆ ಹೊಸ ನಾಯಕತ್ವ ತಯಾರಿ ಮಾಡಿಕೊಳ್ಳಬಹುದು ಎನ್ನುವುದು ಹೈಕಮಾಂಡ್ ಲೆಕ್ಕಾಚಾರ. ಇದರ ಫಲವೇ ಬಿಎಸ್‌ವೈ ಪ್ರಮೋಷನ್ ಅಂತನ್ನಿಸುತ್ತಿದೆ. 

-ಶ್ರೀರಾಜ್ ವಕ್ವಾಡಿ     


Thursday, August 18, 2022

ಲೋಕಾಯುಕ್ತಕ್ಕೆ ಪವರ್ : ಅಧಿಕಾರಿಗಳ ‘ಕ್ರಮಬಾಹೀರ’ ಬಟ್ಟಬಯಲು.?

ಸರ್ವಪಕ್ಷದ ನಾಯಕರು ಲೋಕಾಯುಕ್ತದ ಬಲ ಕುಂದುವುದನ್ನೇ ಕಾದು ಕುಳಿತಿದ್ದರು..!

2016ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡಲು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅಪರಾಧ ದಾಖಲಿಸಲು ಹಾಗೂ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ಹೊಂದಿದ್ದ ಅಧಿಕಾರವನ್ನು ಹಿಂಪಡೆದು ಹೊರಡಿಸಿದ್ದ ಎರಡು ಅಧಿಸೂಚನೆಗಳನ್ನು ರದ್ದುಪಡಿಸಿ ರಾಜ್ಯ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಈ ತೀರ್ಪಿನಿಂದ ಎಸಿಬಿ ಪೂರ್ಣ ಪ್ರಮಾಣದಲ್ಲಿ ರದ್ದಾಗಿದೆ. ಈ ತೀರ್ಪು ಈಗ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ. 

ರಾಜಕಾರಣಿಗಳ ಸಿಂಹಸ್ವಪ್ನದಂತಿದ್ದ ಲೋಕಾಯುಕ್ತರ ಅಧೀನದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೇರ್ಪಡಿಸಿ ಸರ್ಕಾರದ ಅಧೀನಕ್ಕೆ ತೆಗೆದುಕೊಂಡಿದೆ ಎಂಬ ಆರೋಪವೂ ಇದೆ. ೨೦೧೫ರಲ್ಲಿ ಮುಖ್ಯ ಲೋಕಾಯುಕ್ತರಾಗಿದ್ದ ಭಾಸ್ಕರ್ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು, ಮಾತ್ರವಲ್ಲದೇ ಈ ಪ್ರಕರಣದಲ್ಲಿ ಅವರ ಮಗ ಜೈಲು ಪಾಲಾಗಿದ್ದರು. ಬಹುತೇಕ ರಾಜ್ಯಗಳಲ್ಲಿ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಬೇರೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ತನಿಖಾ ಸಂಸ್ಥೆಯನ್ನು ರಚಿಸಿಕೊಂಡಿದ್ದವು ಎಂಬ ಕಾರಣಕೊಟ್ಟು ಸಿದ್ದರಾಮಯ್ಯ ಸರ್ಕಾರ, ಜನ ಪ್ರತಿನಿಧಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿಯೇ ಬೆಳಕಿಗೆ ಬಂದ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪ್ರತ್ಯೇಕ ಭ್ರಷ್ಟಾಚಾರ ನಿಗ್ರಹ ದಳವೊಂದನ್ನು ತನ್ನ ಅಧೀನಕ್ಕೊಳಪಡುವ ಹಾಗೆ ರಚಿಸಿತ್ತು. ಇದಕ್ಕೂ ಮುಂಚೆ ಈ ಭ್ರಷ್ಟಾಚಾರ ನಿಗ್ರಹ ದಳ ಲೋಕಾಯುಕ್ತ ಸಂಸ್ಥೆಯ ಒಂದು ಮುಖ್ಯ ಅಂಗವಾಗಿತ್ತು. ಆಡಳಿತ ಸುಧಾರಣೆ ಇಲಾಖೆಯ ಅಧೀನಕ್ಕೆ ಒಳಪಡುವ ಭ್ರಷ್ಟಾಚಾರ ನಿಗ್ರಹ ದಳವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ತನ್ನ ಅಧೀನಕ್ಕೆ ತೆಗೆದುಕೊಂಡಿತ್ತು ಎನ್ನುವುದು ಇಲ್ಲಿ ಗಮನಾರ್ಹ ವಿಷಯ. ಒಟ್ಟಿನಲ್ಲಿ, ಈಗ ಲೋಕಾಯುಕ್ತ ತನ್ನ ಹಳೆ ಖದರ್ ಪಡೆಯುವಂತಾಗಬೇಕು ಎಂಬ ಹೈಕೋರ್ಟ್ ನೀಡಿದ ಆದೇಶದಿಂದಾಗಿ ಕೆಲವು ರಾಜಕಾರಣಿಗಳಲ್ಲಿ ನಡುಕ ಹುಟ್ಟಿಸಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ರದ್ದು - ಮರುಜೀವ ಕಂಡ ಲೋಕಾಯುಕ್ತ : ಲೋಕಾಯುಕ್ತ ರದ್ದು – ಮರು ಜೀವ ಕಂಡಿದ್ದು ಇದೇ ಮೊದಲಲ್ಲ. ಇದ್ದೂ ಇಲ್ಲದಂತೆ ಕೂಡ ಆಗಿದ್ದಿದೆ. ನಾಗರಿಕರ ಕುಂದುಕೊರತೆಗಳಿಗೆ ಪರಿಹಾರ ನೀಡುವುದಕ್ಕೆ ಸಲುವಾಗಿ ೧೯೬೬ರಲ್ಲಿ ಆಡಳಿತ ಸುಧಾರಣಾ ಆಯೋಗದ ವರದಿಯು ಫೆಡರಲ್ ಮಟ್ಟದಲ್ಲಿ ಲೋಕಪಾಲ ಹಾಗೂ ರಾಜ್ಯ ಮಟ್ಟದಲ್ಲಿ ಲೋಕಾಯುಕ್ತವನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿತ್ತು. ದೇವರಾಜ್ ಅರಸ್ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಆರ್ಡಿನೆನ್ಸ್ ಆಕ್ಟ್ ೧೯೭೯ನನ್ನು ಮೊಟ್ಟಮೊದಲ ಬಾರಿಗೆ ಚಲಾಯಿಸಿದರು ಮತ್ತು ರಾಜ್ಯಕ್ಕೆ ಮೊದಲ ಲೋಕಾಯುಕ್ತರನ್ನು ನೇಮಕ ಮಾಡಿಕೊಳ್ಳಲಾಯಿತು. ದೇವರಾಜ್ ಅರಸ್ ಅವರ ನಿಧನದ ನಂತರ ಆರ್. ಗುಂಡೂರಾವ್ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದಾಗ ಇದೇ ಸಂಸ್ಥೆಯನ್ನು ರದ್ದುಗೊಳಿಸಲಾಯಿತು ಎನ್ನುವುದು ಇಲ್ಲಿ ಗಮನಾರ್ಹ. ತರುವಾಯ ರಾಮಕೃಷ್ಣ ಹೆಗ್ಡೆ ಅವರು ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ವಿಧಾನಸಭೆಯಲ್ಲಿ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತ ಮಸೂದೆಯನ್ನು ೧೯೮೩ರ ಚುನಾವಣಾ ಪ್ರಣಾಳಿಕೆಯ ಅನ್ವಯ ಪರಿಚಯಿಸಿದ ನಂತರ ಈ ಸಂಸ್ಥೆಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆ ೧೯೮೪ರ ಮೂಲಕ ರಾಜ್ಯದಲ್ಲಿ ಮರುಜೀವ ತುಂಬಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಒಮ್ಮೊಮ್ಮೆ ಜೀವನ್ಮೃತ ಸ್ಥಿತಿಯಲ್ಲಿಯೂ ಈ ಸಂಸ್ಥೆ ಕಾರ್ಯ ನಿರ್ವಹಿಸಿದ ಉದಾಹರಣೆಯೂ ಇದೆ. ೨೦೧೫ರಲ್ಲಿ ಸಂಸ್ಥೆಯಲ್ಲಿಯೇ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಸಂಸ್ಥೆಯ ಬಲ ಕುಂದಿಸಿ ಪ್ರತ್ಯೇಕ ಎಸಿಬಿಯನ್ನು ರಚಿಸಿ ತನ್ನ ಅಧೀನದಲ್ಲಿ ಇರುವ ಹಾಗೆ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿತ್ತು. ಇನ್ನು, ಅಧಿಕಾರಕ್ಕೆ ಬಂದರೇ ಎಸಿಬಿಯನ್ನು ರದ್ದುಗೊಳಿಸುವುದಾಗಿ ತನ್ನ ಚುನಾವಣಾ ಪ್ರಣಾಳಿಯಲ್ಲಿ ಬಿಜೆಪಿ ಹೇಳಿಕೊಂಡಿತ್ತು, ಅದಕ್ಕೆ ಪೂರಕವೆಂಬಂತೆ ಈಗ ಹೈಕೋರ್ಟ್ ತೀರ್ಪು ನೀಡಿದೆ. ಅಂತೆಯೇ ಬಿಜೆಪಿ ಸರ್ಕಾರ ರಾಜಕೀಯ ಲಾಭ ಹಾಗೂ ಮುಂದೆ ಎದುರಾಗಬಲ್ಲ ಎಲ್ಲಾ ಅನಾಹುತಗಳನ್ನು ಅಳೆದು ತೂಗಿ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯಂತೆಯೇ, ಲೋಕಾಯುಕ್ತಕ್ಕೆ ಮತ್ತೆ ಮೊದಲಿನ ಬಲ ನೀಡುವಂತೆ ಹೈಕೋರ್ಟ್ ಆದೇಶಿಸಿದಂತೆಯೇ ನಡೆದುಕೊಳ್ಳುವುದಾಗಿ ಹೇಳಿರುವುದು ಗಮನಾರ್ಹ.   

ಖದರ್ ವೆಂಕಟಾಚಲ ಬೇಟೆಗೆ ಬೆದರಿದ ರಾಜಕಾರಣ : ೨೦೦೧ ರಿಂದ ೨೦೦೬ರವರೆಗೆ ಕರ್ನಾಟಕದ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್. ವೆಂಕಟಾಚಲ ಭ್ರಷ್ಟಾಚಾರದ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ ಕೆಲವೇ ಕೆಲವು ಲೋಕಾಯುಕ್ತರಲ್ಲಿ ಒಬ್ಬರು. ಕರ್ಣಾಟಕದ ಎಲ್ಲಾ ಜಿಲ್ಲೆಗಳಲ್ಲಿ ಓಡಾಡಿ ಆಸ್ಪತ್ರೆ, ಸರ್ಕಾರಿ ಕಚೇರಿಗಳು, ಖಾಸಗಿ, ಅರೆಖಾಸಗಿ ಕಚೇರಿಗಳು, ಸರ್ಕಾರಕ್ಕೆ ಒಳಪಡುವ ಎಲ್ಲಾ ಇಲಾಖೆಗಳ ಮೇಲೆ ದಾಳಿ ಮಾಡಿ ಭ್ರಷ್ಟಾಚಾರದ ಕರಾಳ ಮುಖವನ್ನು ಬಟ್ಟಬಯಲಾಗಿಸಿದರು. ಅಧಿಕಾರದ ಮದದಲ್ಲಿ ಆಸ್ತಿಬಾಕ ಅಧಿಕಾರಿಗಳ ಅಕ್ರಮ ಆಸ್ತಿಪಾಸ್ತಿಗಳನ್ನು ಹೊರಕ್ಕೆ ತೆಗೆದರು. ಅಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಸೇವೆಯಿಂದ ಅಮಾನತುಗೊಳಿಸಲು ಶಿಫಾರಸು ಮಾಡಿದರು. ರಾಜ್ಯ ರಾಜಧಾನಿ ಬೆಂಗಳೂರಿನ ಸುತ್ತಮುತ್ತಲಿದ್ದ ಐದು ನಗರ ಸಭೆಗಳಲ್ಲಿ ನಡೆದ ಸಾವಿರಾರು ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು, ಅವ್ಯವಹಾರವನ್ನು ತೆರೆದಿಟ್ಟರು. ಲೋಕಾಯುಕ್ತ ಸಂಸ್ಥೆಯ ಪವರ್‌ನನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟರು. ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ವೆಂಕಟಾಚಲ ಅವರ ನಿವೃತ್ತಿಯ ಬಳಿಕ ಅವರ ಸಾಮಾಜಿಕ ಕಾಳಜಿ, ಪ್ರಾಮಾಣಿಕತೆ, ನ್ಯಾಯ ನಿಷ್ಠುರತೆ ನೋಡಿ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನೇತೃತ್ವದ ಕರ್ನಾಟಕ ಸರ್ಕಾರ ಇವರನ್ನು ಲೋಕಾಯುಕ್ತರನ್ನಾಗಿ ನೇಮಿಸಿಕೊಂಡಿತ್ತು. ಭ್ರಷ್ಟಾಚಾರ ಆರೋಪಕ್ಕೆ ಗುರಿಯಾದಲ್ಲಿ ದೇಶದ ಪ್ರಧಾನಿಯನ್ನೂ ಕೂಡ ಸ್ವತಂತ್ರ ತನಿಖಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸುವಂತಹ ಬ್ರಿಟನ್‌ನಲ್ಲಿರುವ ಭ್ರಷ್ಟಾಚಾರ ತಡೆ ಕಾನೂನು ನಮ್ಮ ದೇಶದಲ್ಲಿಯೂ ಬರಬೇಕು ಎಂಬ ಅಭಿಪ್ರಾಯವನ್ನು ವೆಂಕಟಾಚಲ ಹೊಂದಿದ್ದರು. ಕಾರ್ಯಾಂಗದಲ್ಲಿನ ಲಂಚಬಾಕತನದ ಕರಾಳ ಮುಖಕ್ಕೆ ಬಿಗ್ ಶಾಕ್ ನೀಡಿದ ಅಂದಿನ ಲೋಕಾಯುಕ್ತರಾಗಿದ್ದ ವೆಂಕಟಾಚಲವರ ಕಾರ್ಯವೈಖರಿಗೆ ಲೋಕಾಯುಕ್ತರಾಗಿ ನೇಮಿಸಿಕೊಂಡಿದ್ದ ಅಂದಿನ ಸರ್ಕಾರದ ಕೆಲವು ಸಚಿವರು ಹಾಗೂ ಇಡೀ ರಾಜಕೀಯ ವಲಯವೂ ಕೂಡ ಬೆದರಿತ್ತು ಎನ್ನುವುದು ಇಲ್ಲಿ ಮುಖ್ಯಾಂಶ.

ಸಂತೋಷ್ ಹೆಗ್ಡೆ ಎಂಬ ರಾಜಕಾರಣಿಗಳ ಪಾಲಿನ ದುಸ್ವಪ್ನ :  ರಾಜಕಾರಣಿಗಳ ಕನಸಿನಲ್ಲಿಯೂ ಲೋಕಾಯುಕ್ತಾ ಕಾಣುವ ಹಾಗೆ ಮಾಡಿದ ನಾಡು ಕಂಡ ಉತ್ತಮ ಲೋಕಾಯುಕ್ತರೆಂದರೇ ಅದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ. ವೆಂಕಟಾಚಲ ಅವರ ಲೋಕಾಯುಕ್ತ ಅಧಿಕಾರವಧಿಯ ಬಳಿಕ ಕರ್ನಾಟಕ ಲೋಕಾಯುಕ್ತರಾಗಿ ನೇಮಕಗೊಂಡವರು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ಹೆಗ್ಡೆ, ಭ್ರಷ್ಟರ ಹುಟ್ಟಡಗಿಸಿ ಇಡೀ ದೇಶಕ್ಕೆ ಲೋಕಾಯುಕ್ತದ ಖದರ್, ಪವರ್ ಏನು ಎಂಬುವುದನ್ನು ಮತ್ತೆ ಪರಿಚಯಿಸಿಕೊಟ್ಟರು. ಬಳ್ಳಾರಿ ಗಣಿಗಳಲ್ಲಿ ಕಂಡು ಬಂದ ಕ್ರಮಬಾಹೀರ ಚಟುವಟಿಕೆಗಳನ್ನು ಹೆಗ್ಡೆ ಬಟ್ಟಬಯಲುಗೊಳಿಸಿ, ಗಣಿ ದೊರೆಗಳ ಅಟ್ಟಹಾಸದ ಹುಟ್ಟಡಗಿಸಿದರು. ಓಬಳಾಪುರಂ ಮೈನಿಂಗ್ ಕಂಪೆನಿಯ ಸ್ವಾಮ್ಯತ್ವದಲ್ಲಿರುವ ಹಾಗೂ ರಾಜ್ಯ ಸರ್ಕಾರದ ಸಂಪುಟದಲ್ಲಿ ಸಚಿವರಾಗಿದ್ದ ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ ಮಾಲೀಕತ್ವದ ಗಣಿಗಳೂ ಕೂಡ ಇವುಗಳಲ್ಲಿ ಸೇರಿದ್ದವು ಎನ್ನುವುದು ಇಲ್ಲಿ ಗಮನಾರ್ಹ.

ಬಳ್ಳಾರಿಯ ಕಬ್ಬಿಣ ಹಾಗೂ ಅದಿರಿನ ಗಣಿಗಾರಿಕೆಯಲ್ಲಿ ನಡೆಯುತ್ತಿದ್ದ ನಿಯಮ ಬಾಹೀರ ಚಟುವಟಿಕೆಗಳು, ಭ್ರಷ್ಟಾಚಾರಗಳನ್ನು ವರದಿ (೧೬೦. ೮೫ ಶತಕೋಟಿ ವಂಚನೆ ಪ್ರಕರಣ) ಮೂಲಕ ಹೆಗ್ಡೆ ಬಹಿರಂಗಗೊಳಿಸಿದರು. ಗಣಿಗಾರಿಕೆಗೆ ಅವಕಾಶ ನೀಡಿದ್ದ ಭೌಗೋಳಿಕ ಪ್ರದೇಶದಲ್ಲಿನ ಉಲ್ಲಂಘನೆ, ಅರಣ್ಯ ಪ್ರದೇಶದ ಒತ್ತುವರಿ, ರಾಜ್ಯ ಗಣಿಗಾರಿಕೆಯ ರಾಯಧನಗಳು ತುಲನಾತ್ಮಕವಾಗಿ ತೀರಾ ಅಲ್ಪ ಪ್ರಮಾಣದಲ್ಲಿ ಪಾವತಿಯಾಗಿರುವುದು ಹಾಗೂ ಸರ್ಕಾರದ ಗಣಿಗಾರಿಕಾ ಅಸ್ತಿತ್ವದಲ್ಲಿನ ಅವ್ಯವಸ್ಥೆಗಳೆಲ್ಲವೂ ಹೆಗ್ಡೆ ಸೃಷ್ಟಿಸಿದ ವರದಿಗೆ ಸಾಕ್ಷಿಗಳಾಗಿ ದೊರೆತವು. ಗಣಿದೊರೆಗಳಿಗೆ  ಜೈಲೂಟ ಉಣ್ಣಿಸಿದರು. ಇನ್ನು, ಅವ್ಯಾಹತವಾಗಿ ನಡೆದ ಪ್ರತಿಭಟನೆ, ಸಾರ್ವಜನಿಕ ವಲಯದ ಒತ್ತಡದ ತರುವಾಯ ೩೫ ಲಕ್ಷ ಮೆಟ್ರಿಕ್ ಟನ್ನುಗಳಷ್ಟು ಕಬ್ಬಿನದ ಅದಿರಿನ ಒಳಗೊಂಡಿರುವ, ಬೇಲಿಕೇರಿ ಬಂದರಿನಲ್ಲಿ ನಡೆದ ಕಾನೂನು ಬಾಹೀರ ಕಬ್ಬಿಣ – ಅದಿರಿನ ರಫ್ತು ವ್ಯವಹಾರವನ್ನು ರಾಜ್ಯ ಸರ್ಕಾರದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ. ಎಸ್ ಯಡಿಯೂರಪ್ಪ ಒಪ್ಪಿಕೊಂಡರು. ಈ ಪ್ರಕರಣವು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಹುದ್ದೆಗೆ ರಾಜೀನಾಮೆ ನೀಡುವಂತಾಗಿ ಜೈಲಿಗೆ ಕಳುಹಿಸಿತ್ತು. 

ಇನ್ನು, ಕೈಗಾರಿಕಾ ಯೋಜನೆಗಳಿಗೆ ಸಂಬAಧಿಸಿದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿನ ೧೦೭ ಕೋಟಿ ಮೌಲ್ಯದ ವಂಚನೆಯನ್ನು ಹೆಗ್ಡೆ ಬಯಲುಗೊಳಿಸಿದ್ದರು. ಹೀಗೆ ಲಂಚಬಾಕ, ಅಧಿಕಾರ ದಾಹಿ ಜನ ಪ್ರತಿನಧಿಗಳ ವಿರುದ್ಧ ಸರಣಿ ಕೇಸುಗಳನ್ನು ದಾಖಲಿಸಿ ಸೇವೆಯಿಂದ ಅಮಾನತು ಮಾಡುವಂತೆ ಶಿಪಾರಸ್ಸು ಮಾಡುವುದರ ಮೂಲಕ ಅಧಿಕಾರಿಳು ಹಾಗೂ ರಾಜಕಾರಣಿಗಳ ಪಾಲಿಗೆ ಹೆಗ್ಡೆ ದುಸ್ವಪ್ನದಂತಾಗಿದ್ದಂತೂ ಸತ್ಯ. 

ಲೋಕಾಯುಕ್ತ ಬಲ ಕುಂದುವುದನ್ನೇ ಕಾದಿದ್ದ ಸರ್ವಪಕ್ಷದ ನಾಯಕರು :  ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರ ಮೇಲೆಯೇ ಕೇಳಿ ಬಂದಿದ್ದ ಭ್ರಷ್ಟಾಚಾರದ ಆರೋಪದಿಂದಾಗಿ ವಿಶೇಷ ತನಿಖಾ ಸಂಸ್ಥೆಗೆ ಪ್ರಕರಣದ ತನಿಖೆ ನಡೆಸುವ ಬೆಳವಣಿಗೆ ನಡೆಯಿತು. ತನಿಖೆಯಲ್ಲಿ ಅಂದು ಲೋಕಾಯುಕ್ತರಾಗಿದ್ದ ಭಾಸ್ಕರ್ ರಾವ್ ಪುತ್ರ ಅಶ್ವಿನ್ ಲೋಕಾಯುಕ್ತ ಹೆಸರಿನಲ್ಲಿ ಲಂಚ ಕೇಳಿದ ವಿಚಾರ ಬಯಲಾಯಿತು. ನಂತರ ಸಿದ್ದರಾಮಯ್ಯ ಸರ್ಕಾರ ಪರೋಕ್ಷವಾಗಿ ಲೋಕಾಯುಕ್ತದಿಮದ ಎಸಿಬಿಯನ್ನು ಬೇರ್ಪಡಿಸಿ ಲೋಕಾಯುಕ್ತದ ಬಲ ಕುಂದಿಸುವ ಹಾಗೆ ಮಾಡಿತ್ತು. ಅದು ಲೋಕಾಯುಕ್ತ ಇದ್ದರೂ ಇಲ್ಲದ ಹಾಗಿನ ಸ್ಥಿತಿಗೆ ತಂದಿಟ್ಟಿತ್ತು. ಇದು ರಾಜಕಾರಣಿಗಳ ಪಾಲಿಗೆ ಸಿಹಿ ಸುದ್ದಿಯಾಗಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಲೋಕಾಯುಕ್ತದಿಂದಾಗಿ ಹಲವಾರು ಅಧಿಕಾರಿಗಳು, ರಾಜಕಾರಣಿಗಳು ಜೈಲು ವಾಸ ಕಾಣುವಂತಾಗಿದೆ. ಹಲವು ಘಟಾನುಘಟಿ ನಾಯಕರ ವಿರುದ್ಧ ದೂರು ಕೂಡ ದಾಖಲಾಗಿದ್ದವು. ಎಸಿಬಿ ರಚನೆಯಿಂದಾಗಿ ಲೋಕಾಯುಕ್ತ ತನ್ನ ಬಲಕಳೆದುಕೊಂಡಿತ್ತು. ದೂರುಗಳು ವಿಚಾರಣೆಯಾಗದೇ ಹಾಗೆ ಉಳಿದಿದ್ದವು. ಈಗ ಮತ್ತೆ ಲೋಕಾಯುಕ್ತಕ್ಕೆ ಬಲಬರುವಂತಾಗಿದ್ದು, ಘಟಾನುಘಟಿಗಳ ಎದೆಯಲ್ಲಿ ಕಂಪನ ಆರಂಭವಾಗಿದೆ. 

-ಶ್ರೀರಾಜ್ ವಕ್ವಾಡಿ      

Wednesday, August 10, 2022

ಒಡವೆ ಇದ್ದರೂ ಬಡತನದ ಚಿಂತೆಯಲ್ಲಿ ಬಿಜೆಪಿ..!?


(Photo : Internet)

‘ಬಿಜೆಪಿ ಕಥೆ ಮುಗಿತು’ ಶಾಮನೂರು ಭವಿಷ್ಯಕ್ಕೆ ಒತ್ತು ನೀಡಿ ದಾವಣಗೆರೆಯಲ್ಲಿ ಕಾಂಗ್ರೆಸ್ ಹೈಡ್ರಾಮ..!

ಕೆಲವು ಮಾಧ್ಯಮಗಳು ಹಾಗೂ ಆಡಳಿತ ಪಕ್ಷ ಸೃಷ್ಟಿಮಾಡಿದ ದೊಡ್ಡ ಮಟ್ಟದ ‘ಕಾಂಗ್ರೆಸ್ ಆಂತರಿಕ ರಾಜಕೀಯ’, ‘ಒಡೆದು ಇಬ್ಭಾಗವಾದ ಕಾಂಗ್ರೆಸ್’, ‘ಟಗರು ವರ್ಸಸ್ ಬಂಡೆ’ ಎಂಬಿತ್ಯಾದಿ ವಿರೋಧಾಭಿಪ್ರಾಯ, ವಿವಾದಗಳ ನಡುವೆಯೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ನೇಯ ವರ್ಷದ ಹುಟ್ಟಹಬ್ಬದ ಅಮೃತಮಹೋತ್ಸವದ ಹೆಸರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ‘ಶೋ ಆಫ್’  ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಆಡಳಿತ ಪಕ್ಷ ಬಿಜೆಪಿಯಲ್ಲಿ ತುಸು ಆತಂಕ ಸೃಷ್ಟಿ ಮಾಡಿದೆ. ಈ ನಡುವೆ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಹೆಸರಿನಲ್ಲಿ ಕಾಂಗ್ರೆಸ್ ಅಧಿಕೃತ ಚುನಾವಣಾ ಕ್ಯಾಂಪೇನ್‌ಗೆ ಚಾಲನೆ ನೀಡಿದೆ ಎಂಬಂತೆಯೇ ಆಗಿದೆ. 

ಹೌದು, ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಅಮೃತಮಹೋತ್ಸವಕ್ಕೆ ಯಾವುದೇ ಇತರೆ ಪಕ್ಷಗಳ ನಾಯಕರಿಗೆ ಆಹ್ವಾನವಿರಲಿಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ೭೫ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡು ತಮ್ಮ ಆಪ್ತ ಬಳಗದ ರಾಜಕೀಯ ನಾಯಕರನ್ನು ಬಿಎಸ್‌ವೈ ಆಹ್ವಾನಿಸಿದ್ದರು. ಆ ಸಂಭ್ರಮದಲ್ಲಿ ಸಿದ್ದು, ಬಿಎಸ್‌ವೈ ರಾಜಕೀಯ ಮರೆತು ಪರಸ್ಪರ ಗುಣಗಾನ ಮಾಡಿಕೊಂಡಿದ್ದರು. ಆದರೇ, ಸಿದ್ದರಾಮಯ್ಯ ಅಮೃತಮಹೋತ್ಸವಕ್ಕೆ ಯಾವುದೇ ಇತರೆ ಪಕ್ಷದ ನಾಯಕರಿಗೆ ಆಹ್ವಾನವೇ ಇದ್ದಿರಲಿಲ್ಲ. ಅಷ್ಟಕ್ಕೂ ಈ ಸಿದ್ದು ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದು ಗುಣಗಾನಕ್ಕಿಂತ ಆಡಳಿತ ಪಕ್ಷವನ್ನು ಹಿಗ್ಗಾಮುಗ್ಗಾ ದೂಷಿಸುತ್ತಾ ‘ಭ್ರಷ್ಟ, ಕೋಮುವಾದಿ ಪಕ್ಷ ಬಿಜೆಪಿಯನ್ನು ಕಿತ್ತೊಗೆಯುವ ಸಂಕಲ್ಪ’ ಎಂಬ ಮಾತೇ ಹೆಚ್ಚು ಕೇಳಿಸಿದ್ದು ಈ ಅನುಮಾನಕ್ಕೆ ಪುಷ್ಟಿ ನೀಡುತ್ತಿದೆ. ಕಾಂಗ್ರೆಸ್‌ಗೆ ಚುನಾವಣೆಗೂ ಮುನ್ನ ಒಂದು ಬೃಹತ್ ಜನ ಸಮಾವೇಶ ಮಾಡಿಕೊಳ್ಳುವುದರ ಮೂಲಕ ಜನಾಭಿಪ್ರಾಯ ಪಡೆದುಕೊಳ್ಳುವ ತುರ್ತಿತ್ತು, ಕಳೆದ ಮೂರು ವರ್ಷಗಳಲ್ಲಿನ ಬಿಜೆಪಿ ಆಡಳಿತದ ಬಗ್ಗೆ ಜನರಲ್ಲಿ ವಿರೋಧಾಭಿಪ್ರಾಯವನ್ನು ಹುಟ್ಟಿಸುವ ಅಗತ್ಯ ಕಾಂಗ್ರೆಸ್‌ಗಿತ್ತು. ಅಲ್ಲಿಗೆ, ಎಂದೂ ಹುಟ್ಟುಹಬ್ಬ ಆಚರಿಸಿಕೊಳ್ಳದ ಸಿದ್ದರಾಮಯ್ಯ ಅವರ ೭೫ನೇ ಹುಟ್ಟುಹಬ್ಬವೂ ಬಂದಿತ್ತು/ಸಿಕ್ಕಿತ್ತು. ಹೇಳಿಕೇಳಿ ಸಿದ್ದರಾಮಯ್ಯ ರಾಜ್ಯದಲ್ಲಿ ಯಶಸ್ವಿ ಐದು ವರ್ಷಗಳನ್ನು ಪೂರೈಸಿದ ಮಾಜಿ ಮುಖ್ಯಮಂತ್ರಿ, ರಾಜ್ಯದ ಹಿರಿಯ ರಾಜಕಾರಣಿಗಳಲ್ಲೊಬ್ಬರು, ಕಾಂಗ್ರೆಸ್ ಪಕ್ಷದ ಪ್ರಭಾವಿ ಅಹಿಂದ ನಾಯಕ. ಇದೇ ‘ಪರ್ವ ಕಾಲ’ ಎಂದು ಕಾಂಗ್ರೆಸ್ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ನೆಪದಲ್ಲಿ ಚುನಾವಣಾ ಕ್ಯಾಂಪೇನ್‌ಗೆ ಚಾಲನೆ ನೀಡಿದೆ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಡಿ.ಕೆ ಶಿವಕುಮಾರ್ ಸೇರಿ ಕೆಲವು ಕಾಂಗ್ರೆಸ್ ನಾಯಕರು, ಕಾರ್ಯಕ್ರಮಕ್ಕೂ ಮುಂಚೆ ಮಾಧ್ಯಮಗಳ ಮುಂದೆ ಇದೊಂದು ‘ಪಕ್ಷದ ಕಾರ್ಯಕ್ರಮ’ ಎಂದೇ ಹೇಳಿಕೆ ನೀಡಿದ್ದರು. 

ಒಡವೆ ಇದ್ದರೂ ಬಿಜೆಪಿಗೆ ಬಡತನದ ಆತಂಕ..? : ಸಿದ್ದರಾಮಯ್ಯ ಅಮೃತಮಹೋತ್ಸವದ ಯಶಸ್ವಿ ಕಾರ್ಯಕ್ರಮ ಆಡಳಿತ ಪಕ್ಷಕ್ಕೆ ಆತಂಕ ಸೃಷ್ಟಿಸಿದೆ. ಅಧಿಕಾರ ಹಿಡಿದಾಗಲಿಂದ ಒಂದಿಲ್ಲೊಂದು ಆರೋಪಗಳಿಗೆ, ವಿರೋಧಗಳಿಗೆ ಕೊರಳು ಕೊಡುತ್ತಿರುವ ಆಡಳಿತ ಪಕ್ಷ ಬಿಜೆಪಿ, ತನ್ನ ರಾಜಕೀಯ ಅಲೆಯ ವರ್ಚಸ್ಸಿಗೆ ಮುಸುಕಾಗಿರುವ ಕಳಂಕಗಳನ್ನು ಸರಿಪಡಿಸಿಕೊಳ್ಳಲೆತ್ನಿಸುತ್ತಿರುವಾಗಲೇ ಸಿದ್ದರಾಮಯ್ಯ ಅಮೃತಮಹೋತ್ಸವದ ಯಶಸ್ಸು, ಬಿಜೆಪಿಯಲ್ಲಿ ಭವಿಷ್ಯದ ಪ್ರಶ್ನೆ ಎಬ್ಬಿಸಿರುವುದು ಅಕ್ಷರಶಃ ‘ಒಡವೆ ಇದ್ದರೂ ಬಡವ’ ಎಂಬ ಸ್ಥಿತಿಯಂತಾಗಿದೆ. ಸಿದ್ದು ಅಮೃತಮಹೋತ್ಸವ ಇನ್ನೇನು ಮುಗಿಯತ್ತಿದೆ ಎನ್ನುವಾಗಲೇ ದೆಹಲಿಯಿಂದ ರಾಜ್ಯದತ್ತ ಅಧಿಕೃತ ಕಾರ್ಯಕ್ರಮದ ನಿಮಿತ್ತ ಹೊರಟ ಅಮಿತ್ ಶಾ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿ ಪಕ್ಷದ ಪ್ರಮುಖ ನಾಯಕರನ್ನು ಕರೆಸಿ ಸರ್ಕಾರದ ವರ್ಚಸ್ಸು ಕುಂಟಿತಗೊಂಡಿರುವುದಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಅಧಿಕಾರವನ್ನು ಅಪರಿಮಿತವಾಗಿ ತೆಗಳಿ ತೆಗಳಿ ಅಧಿಕಾರ ಹಿಡಿದ ಬಿಜೆಪಿಗೆ, ಮಾಜಿ ಮಾಸ್ ಮುಖ್ಯಮಂತ್ರಿಯೊಬ್ಬರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ ಜನಸ್ತೋಮ ನೋಡಿ ಬುಡ ಅಲುಗಾಡಿದಂತಾಗಿದೆ ಎಂಬುವುದಂತೂ ಸತ್ಯ. ಅಮಿತ್ ಶಾ ಕರೆದ ಖಾಸಗಿ ಸಭೆಯಲ್ಲಿ ಶಾ ಸೇರಿ, ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಪ್ರತಿಪಕ್ಷಗಳ ಸಂಘಟನಾ ವೇಗಕ್ಕೆ ಸರಿಯಾಗಿ ಬಿಜೆಪಿ ಸರ್ಕಾರ ನಿರೀಕ್ಷಿತ ಹೆಜ್ಜೆಯಿಡುವಲ್ಲಿ ಕುಂಟಿತಗೊಳ್ಳುತ್ತಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿರುವುದರಿಂದಲೇ, ಬಿಜೆಪಿಗೆ ಎದೆ ನಡುಗಿರುವುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದಾಗಿದೆ. ಊಹಿಸಿಕೊಳ್ಳಲಾಗದ ಹಿಂದೂ ಕಾರ್ಯಕರ್ತರ ದೊಡ್ಡ ಮಟ್ಟದ ವಿರೋಧ, ೪೦% ಕಮಿಷನ್ ಭ್ರಷ್ಟಾಚಾರ, ಪಿಎಸ್‌ಐ ನೇಮಕಾತಿ ಅಕ್ರಮ ಇತ್ಯಾದಿ ಆರೋಪಗಳ ನಡುವೆ ರಾಜ್ಯದ ಜನರಲ್ಲಿನ ವಿಶ್ವಾಸ ಕಳೆದುಕೊಂಡಿರುವ ಆಡಳಿತ ಪಕ್ಷ, ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳುವ ಸಲುವಾಗಿ ತರಹೇವಾರಿ ರಾಜಕೀಯ ಲೆಕ್ಕಾಚಾರ ಮಾಡುವುದರ ಜೊತೆಜೊತೆಗೆ ಹಿಂದುಳಿದ ವರ್ಗಗಳ ಮತ ಸೆಳೆಯುವ ಪ್ರಯತ್ನಕ್ಕೆ ವ್ಯೂಹ ಸೃಷ್ಟಿಸುತ್ತಿರುವಾಗಲೇ ‘ಸಮಸ್ತ ಹಿಂದುಳಿದ ವರ್ಗಗಳ ನಾಯಕ’ ಎಂದೇ ಬಿಂಬಿತವಾಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿಕೊಂಡು ಬಂದ ಜನವರ್ಗದ ಬಗ್ಗೆ ಆಡಳಿತ ಪಕ್ಷಕ್ಕೆ ನಡುಕ ಹುಟ್ಟಿಸಿರುವುದಂತೂ ಸತ್ಯ. 

ಅನಾಯಾಸ ತುತ್ತಾಗಿ ಒಲಿದಿತ್ತು ಕಾಂಗ್ರೆಸ್ ಆಂತರಿಕ ರಾಜಕೀಯ :  ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮವಹಿಸಿ ಎಂಬ ಕಾಂಗ್ರೆಸ್ ಹೈಕಮಾಂಡ್‌ನ ಖಡಕ್ ಸೂಚನೆ ಇರುವಾಗಲೂ ‘ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ’ ಎಂಬ ಕೂಗು ಕಾಂಗ್ರೆಸ್‌ನಲ್ಲಿ ಎದ್ದಿತ್ತು, ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಾನೂ ಕೂಡ ಸಿಎಂ ಹುದ್ದೆಗೆ ದಾವೆದಾರ ಎಂಬುವುದನ್ನು ಬಹಿರಂಗ ಪಡಿಸಿದ್ದು, ಆಡಳಿತ ಪಕ್ಷಕ್ಕೆ ಒಂದು ಅನಾಯಾಸ ತುತ್ತಾಗಿ ಒಲಿದಿತ್ತು. ಕಾಂಗ್ರೆಸ್‌ನಲ್ಲಿ ಒಂದಿಷ್ಟು ಒಳ ರಾಜಕೀಯ ಇದ್ದರೂ ಕೂಡ ಅದು ಹೈಕಮಾಂಡ್ ಸೂಚನೆಯಾದ ಮೇಲೆ ಸ್ವಲ್ಪ ತಣ್ಣಗಾಗಿತ್ತು. ಆದರೇ, ಬಿಜೆಪಿ ಪದೇ ಪದೇ ‘ಬಣ ರಾಜಕೀಯ’ದ ಕೂಗನ್ನು ಎಬ್ಬಿಸುತ್ತಾ ಜನರಲ್ಲಿ ಕಾಂಗ್ರೆಸ್ ಬಗ್ಗೆ ಎಬ್ಬಿಸಿದ್ದ ವಿರೋಧ ಅಲೆಯನ್ನು ಸಿದ್ದರಾಮಯ್ಯ ಅಮೃತಮಹೋತ್ಸವದಲ್ಲಿ ‘ಬಿಜೆಪಿ ಆರೋಪ ಸುಳ್ಳು’ ಎಂಬ ಅಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಕಣ್ಣಿಗೆ ಇದು ನಾಟಕದಂತೆಯೇ ಕಂಡರೂ, ‘ಇಲ್ಲ ನಮ್ಮಲ್ಲಿ ಅಂತಹ ಯಾವುದೇ ಆಂತರಿಕ ವೈಮಸ್ಸು ಇಲ್ಲವೇ ಇಲ್ಲ’ ಎಂಬುವುದನ್ನು ಜನತೆಗೆ ತೋರಿಸಿಕೊಡುವ ಪ್ರಯತ್ನದಲ್ಲಿ ‘ರಾಹುಲ್ ಗಾಂಧಿ ನಿರ್ದೇಶನ’ವೂ ಕೂಡ ಇಲ್ಲಿ ಯಶಸ್ವಿಯಾಗಿದೆ. ಇನ್ನು, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ, ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಅವರನ್ನೇ ಹೈಕಮಾಂಡ್ ಆಯ್ಕೆ ಮಾಡಿದರೇ, ಚಿಂತೆ ಏನೂ ಇಲ್ಲ. ಅಬ್ಬಬ್ಬ ಎಂದರೇ ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿ ಇನ್ನೊಂದು ಐದು ವರ್ಷಗಳಿರಬಹುದು, ತನಗಿನ್ನು ಕಾಲಾವಕಾಶವಿದೆ, ಮುಂದೆ ನೋಡಿದರೇ ಆಯ್ತು, ಆದರೇ, ಆ ಹಾದಿಯ ಸುಗಮಕ್ಕೆ ಇಂದೇ ನೀಲಿ ನಕ್ಷೆ ಹಾಕಿಕೊಳ್ಳುವುದು ಒಳ್ಳೆಯದು” ಎಂಬ ನಿರ್ಧಾರಕ್ಕೆ ಡಿಕೆಶಿ ಬಂದಿರಬಹುದು, ಹಾಗಾಗಿಯೇ ಸಿದ್ದರಾಮಯ್ಯ ಅಮೃತಮಹೋತ್ಸವದ ಮುನ್ನಾ ದಿನ ವರಿಷ್ಠ ರಾಹುಲ್ ಗಾಂಧಿ ನಿರ್ದೇಶಿಸಿದಂತೆ ಡಿಕೆಶಿ ನಡೆದುಕೊಂಡರೇ ಎಂಬ ಪ್ರಶ್ನೆಯೂ ಕೂಡ ಮೂಡುತ್ತಿದೆ. ಕಾರ್ಯಕ್ರಮದಲ್ಲಿದ್ದವರೆಲ್ಲಾ ‘ರೋಬೋ ಪಬ್ಲಿಕ್’ ಆದರೂ ಕೂಡ ಕಾರ್ಯಕ್ರಮದಲ್ಲಿ ‘ಸಿದ್ದರಾಮಯ್ಯ’ ಎಂದು ಹೆಸರು ಕೇಳಿಸಿದಾಗೆಲ್ಲಾ ಜನರು ಹುಚ್ಚೆದ್ದು ಕುಣಿದು, ಕೇಕೆ ಹಾಕಿದ್ದನ್ನು ನೋಡಿ ಕೂಡ ಡಿಕೆಶಿಗೆ ಈ ಸಾರ್ತಿ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡವೆಂದುಕೊಂಡಿರಬಹುದು ಎಂದೇ ಕಾಣಿಸುತ್ತಿದೆ. ಹಾಗಾಗಿಯೇ ಡಿಕೆಶಿ, ಸಿದ್ದರಾಮಯ್ಯ ಮುಂದಾಳತ್ವ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಲಿದೆ ಎಂದು ಹೇಳಿರುವುದಾಗಿ ಎಂದೆನ್ನಿಸುತ್ತಿದೆ. ಒಟ್ಟಿನಲ್ಲಿ, ಮೇಲ್ನೋಟಕ್ಕೆ ಹೈಕಮಾಂಡ್‌ನ ‘ಭಿನ್ನವಾಗಿ ನಡೆದುಕೊಂಡವರು ಎಷ್ಟೇ ದೊಡ್ಡವರಾಗಿದ್ದರೂ ಕಠಿಣ ಕ್ರಮ’ದ ಸೂಚನೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆಯಾಗಿ ಪರಿಣಮಿಸಿರುವುದು ಸತ್ಯ.    

ನಿಜವಾಗಲಿದೆಯೇ ಶಾಮನೂರು ಭವಿಷ್ಯ..? : ಕಳೆದ ಪಂಚರಾಜ್ಯ ಚುನಾವಣೆಗಳಲ್ಲಿನ ಹೀನಾಯ ಸೋಲಿನ ರುಚಿ ಕಂಡ ಕಾಂಗ್ರೆಸ್, ಮುಂಬರುವ ವರ್ಷದ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯ ಬಗ್ಗೆ ಹಿಂದೆಂದೂ ಮಾಡಿರದ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದೆ. ಕಾಂಗ್ರೆಸ್ ಹೂಡುತ್ತಿರುವ ರಾಜಕೀಯ ಲೆಕ್ಕಾಚಾರದ ಬಗ್ಗೆ, ನಿರಂತರವಾಗಿ ತನ್ನ ನ್ಯೂನ್ಯತೆಗಳನ್ನು ಕಡ್ಡಿ ಮುರಿದಂತೆ ವಿರೋಧಿಸುತ್ತಿರುವುದರಿಂದಾಗಿ ಬಿಜೆಪಿಗೆ ಸಣ್ಣ ಪುಕ್ಕಲತನ ಶುರುವಾಗಿದೆ. ಇನ್ನು, ತನ್ನ ಹಡಗನ್ನು ಅಷ್ಟು ಸುಲಭವಾಗಿ ಮುಳುಗಿಹೋಗುವುದಕ್ಕೆ ಬಿಡಬಾರದು ಎಂಬ ಎಚ್ಚರದ ಮನಸ್ಥಿತಿಯೂ ತಡವಾಗಿಯಾದರೂ ಕಾಂಗ್ರೆಸ್‌ಗೀಗ ಬಂದಿದೆ. ಹಾಗಾಗಿ ‘ಯುದ್ಧ ಕಾಲೇ ಶಸ್ತ್ರಾಭ್ಯಾಸ’ಕ್ಕೆ ಮೊರೆ ಹೋಗಿರುವ ಕಾಂಗ್ರೆಸ್, ಕ್ಷೇತ್ರವಾರು, ಜಾತಿವಾರು, ಜಿಲ್ಲವಾರು ಲೆಕ್ಕಾಚಾರದತ್ತ ಗಮನಹರಿಸದಂತೆ ಕಾಣಿಸುತ್ತಿದೆ. ಕರ್ನಾಟಕ ರಾಜ್ಯದ ಮಧ್ಯ ಭಾಗದ ಪ್ರಮುಖ ಜಿಲ್ಲೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತಮಹೋತ್ಸವದ ಹಿಂದೆ ಕಾಂಗ್ರೆಸ್ ದೊಡ್ಡ ರಣತಂತ್ರವನ್ನೇ ಸೃಷ್ಟಿಸಿದೆ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನ ಹರಿದಾಡುತ್ತಿದೆ. ಲಿಂಗಾಯತ ಸಮುದಾಯದ ಪ್ರಭಾವಿ ಭಾಗವಾಗಿರುವ ದಾವಣಗೆರೆಯಲ್ಲಿಯೇ ಕಾಂಗ್ರೆಸ್ ಈ ಅಮೃತಮಹೋತ್ಸವ ಆಯೋಜಿಸಲು ಉದ್ದೇಶವೇನು..? ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಿದಾಗ ಇಡೀ ಲಿಂಗಾಯತ ಸಮುದಾಯ ಬಿಜೆಪಿ ಹೈಕಮಾಂಡ್ ಮೇಲೆ ಮುನಿಸಿಕೊಂಡಿರುವುದು ಗೊತ್ತಿರುವ ವಿಷಯ. ಈ ಸಂಬAಧಿಸಿ ಹಿಂದೊಮ್ಮೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ‘ಇಡೀ ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರ ಪರವಾಗಿದೆ, ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೇ ಬಿಜೆಪಿ ಕಥೆ ಮುಗಿತು’ ಎಂದು ಬಿಎಸ್‌ವೈ ಪರ ವಯಿಸಿಕೊಂಡು ಮಾತನಾಡಿದ್ದರು. ಶಾಮನುರು ಭವಿಷ್ಯಕ್ಕೆ ಒತ್ತು ನೀಡಿ, ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಕ್ಕಾಗಿ ಮುನಿಸಿಕೊಂಡ ಲಿಂಗಾಯತ ಸಮುದಾಯದ ಮತ ಸೆಳೆಯುವುದಕ್ಕಾಗಿಯೇ ದಾವಣಗೆರೆಯಲ್ಲಿ ಕಾಂಗ್ರೆಸ್ ಅಮೃತಮಹೋತ್ಸವದ ‘ಹೈಡ್ರಾಮ’ ಮಾಡಿದೆಯೇ ಎಂಬ ಆಶ್ಚರ್ಯಚಕಿತ ಪ್ರಶ್ನೆ ಎದ್ದಿದೆ. ಇನ್ನು, ರಾಹುಲ್ ಗಾಂಧಿ ಲಿಂಗಧಾರಣೆ, ವೇದಿಕೆ ಮೇಲೆ ಕಾಂಗ್ರೆಸ್ ನಾಯಕರ ಭಕ್ತಿ ಭಂಡಾರಿ ಬಸವಣ್ಣರ ಜಪ ಎಲ್ಲವೂ ಕೂಡ ಇದರದ್ದೇ ಭಾಗ ಅಂತನ್ನಿಸುತ್ತಿದೆ.      

-ಶ್ರೀರಾಜ್ ವಕ್ವಾಡಿ 


ಮಜಬೂತು‌

 



ನೀನು ಎತ್ತರವ ಮೀರಿದವಳು 

ಬಹುಶಃ ನಿನಗಷ್ಟೇ ಗೊತ್ತು 

ನಿನ್ನ ಕಣ್ಣು ಕಂಡ ಕೊನೆ ದೃಶ್ಯ 


ಎಷ್ಟೊಂದು ಮಜಬೂತು ನೀನು ಮತ್ತು ನಿನ್ನೊಲವು 

ನೀನಿನ್ನು ಮರೆತಿರಲಿಕ್ಕಿಲ್ಲ 

ನಿನ್ನ ಕಣ್ಣಲ್ಲಿ ನಕ್ಕ ನಿನ್ನದೇ ನೇಹ.


ನೆನಪಿದೆಯಾ ನಿನಗೆ 

ನೀನು ಸದಾ ಗುನುಗಿಸುವ ಹಾಡು..? 

ಅದೇ ರಾಗ ಸುರಿಯುತ್ತಿದೆ ಶ್ರಾವಣದ ಮಳೆ. 


ನಿನ್ನ ಆಪ್ತತೆಗೆ ರಚ್ಚೆ ಹಿಡಿದ ಕನಸಿಗೆ ಬಣ್ಣವಿಲ್ಲ ಎಂಬ 

ವಿಷಾದ ನಿನಗಷ್ಟೇ ತಿಳಿದಿರಲಿ.

ಅದಕ್ಕಷ್ಟೇ ನಗುತ್ತೇನೆ. 

 

ನಗುವಿಗೆ ರಾಯಭಾರಿ ನೀನೇ ಆಗಿದ್ದೆ

ಎನ್ನುವುದನ್ನಿನ್ನೂ ಮರೆತಿಲ್ಲ. 

#ಕಾವ್ಯಬೈರಾಗಿ 

#ShreerajVakwady

Thursday, August 4, 2022

‘ಕೋಮು ಹತ್ಯೆ’ಯಿಂದ ‘ಪಾಲಿಟಿಕಲ್ ಮೈಲೇಜ್’ !?

(ಸಾಂದರ್ಭಿಕ ಚಿತ್ರ)

ಕಾಂಗ್ರೆಸ್‌ಗೆ ಪ್ಲಸ್, ಕನ್ನುಗೋಲು ಮಾಸ್ಟರ್ ಸ್ಟ್ರ್ಯಾಟಜಿ ? | ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡ ಬಿಜೆಪಿ !

‘ಕೋಮು ಹತ್ಯೆ’ ರಾಜಕೀಯ ಪಕ್ಷಗಳಿಗೆ ‘ಪಾಲಿಟಿಕಲ್ ಮೈಲೇಜ್’  ತಂದುಕೊಡುತ್ತಲೇ ಇದ್ದು, ಸಂಘಟನೆಗಳಲ್ಲಿ ತೊಡಗಿಸಿಕೊಂಡ ಅಮಾಯಕರು ನೋವು ಅನುಭವಿಸುವಂತೆ ಆಗಿದೆ ಎನ್ನುವುದಕ್ಕೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಹಾಗೂ ಆ ನಂತರ ಆದ ಘಟನೆಗಳೇ ಸಾಕ್ಷಿ. ತನ್ನ ಪರವಾಗಿಯೇ ಇದ್ದ ರಾಜಕೀಯ ಪಕ್ಷ ಬಿಜೆಪಿಯ ವಿರುದ್ಧವಾಗಿ ಪ್ರವೀಣ್ ಕೊಲೆ ಸಂಬಂಧ ಹಿಂದೂ ಸಂಘಟನೆಗಳು ತಿರುಗಿ ಬಿದ್ದಿರುವುದು ಈಗ ಆಡಳಿತ ಪಕ್ಷ ಬಿಜೆಪಿಗೆ ತೀವ್ರ ಮುಖಭಂಗವಾದಂತಾಗಿದೆ. ಬಿಜೆಪಿಗೆ ಪರ್ಯಾಯವಾಗಿ ಒಂದು ಪ್ರಖರ ಹಿಂದುತ್ವದ ಅಜೆಂಡಾವಿರುವ ರಾಜಕೀಯ ಪಕ್ಷವೊಂದು ಈ ರಾಜ್ಯಕ್ಕೆ ಅಗತ್ಯವಿದೆ ಎಂಬ ಕೂಗು ಹಿಂದೂ ಸಂಘಟನೆಗಳಲ್ಲಿ ಎದ್ದಿರುವುದು ಬಿಜೆಪಿಗೂ ಆತಂಕ ಸೃಷ್ಟಿಸಿದೆ. ಯಾವ ಭರವಸೆಯನ್ನು ಕೊಟ್ಟು ಅಧಿಕಾರಕ್ಕೇರಿತ್ತೋ ಆ ಭರವಸೆಯ ಮಾತನ್ನೇ ಮರೆತು ನಡೆದಿದ್ದಕ್ಕೆ ಬಿಜೆಪಿ ಅನುಭವಿಸಿದ ತಕ್ಕ ಪಾಠವಿದು. ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸಾವು ಎರಡಂಕಿ ದಾಟಿದ್ದರೂ ಕೂಡ ಈ ಮಟ್ಟಿಗೆ ಆಕ್ರೋಶ ವ್ಯಕ್ತಪಡಿಸಿರದ ಹಿಂದೂ ಸಂಘಟನೆಗಳು, ತನ್ನ ಪರವಾಗಿಯೇ ಇದ್ದ ಬಿಜೆಪಿ ಸರ್ಕಾರ ಮಾತು ಉಳಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಬಂಡಾಯವೆದ್ದ ಪರಿ ನೋಡಿದರೇ, ಬಿಜೆಪಿಯ ಭವಿಷ್ಯದ ಕನಸೆಲ್ಲವೂ ಬದಲಾಗಿ ಹೋಗುತ್ತವೆ ಎಂದೇ ಅನ್ನಿಸುತ್ತಿದೆ. 

ಅಗೈನ್ ಐಂಡ್ ಅಗೈನ್ ಐಂಡ್ ಅಗೈನ್... ಹೂ ಈಸ್ ಸೇಫ್..? ದುಷ್ಕರ್ಮಿಗಳಿಗೆ ದಕ್ಷಿಣ ಕನ್ನಡವೇ ಯಾಕೆ ಟಾರ್ಗೇಟ್..? ಅಮಾಯಕ ಯುವಕರೇ ಕೋಮು ಸಂಘರ್ಷಗಳಿಗೆ ಬಲಿಪಶುವಾಗುತ್ತಿರುವುದಾದರೂ ಯಾಕೆ..? ಹತ್ತು ದಿನಗಳ ಅಂತರದಲ್ಲಿ ಮೂರು ಯುವಕರ ಬರ್ಬರ ಹತ್ಯೆಯನ್ನು ಕಂಡು ದಕ್ಷಿಣ ಕನ್ನಡ ಜಿಲ್ಲೆ ಬೆಚ್ಚಿಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜಕ್ಕೂ ಎಲ್ಲಿಲ್ಲದ ಭಯದ ವಾತಾವರಣ ಸೃಷ್ಟಿಯಾಗಿದೆ. ಸ್ವಲ್ಪ ಹೊತ್ತಿನ ಹಿಂದಷ್ಟೇ ಸಿಕ್ಕಿ ನಕ್ಕವ ಹೆಣವಾಗಿ ಸುದ್ದಿಯಾಗುತ್ತಿರುವುದು ನೋಡಿದರೇ ರಾಜ್ಯದಲ್ಲಿ ಕಾನೂನಿನ ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ. ಎಲ್ಲದಕ್ಕೂ ಕಾನೂನಿನ ವೈಫಲ್ಯವೇ ಕಾರಣ. 

ಸರ್ಕಾರ ಇಂತಹ ಘಟನೆಗಳಿಗೆ ಸಂಬಂಧಿಸಿದ ಹಾಗೆ ಯಾವುದೇ ತನಿಖೆಯನ್ನು ಬೇಕಾದರೂ ಮಾಡಲಿ, ಕಾನೂನು ಬಾಹೀರವಾಗಿ ಕೆಲಸ ಮಾಡುತ್ತಿರುವ ಯಾವುದೇ ಸಂಘಟನೆಗಳನ್ನು ನಿಷೇಧಿಸುವ ಮಾತಾಡಲಿ, ಆಕ್ರೋಶವೆದ್ದ ಜನರನ್ನು ಸಮಾಧಾನ ಮಾಡುವುದಕ್ಕೆ ಸಲುವಾಗಿ ಏನನ್ನೇ ಬೇಕಾದರೂ ಮಾಡಲಿ, ಮೊದಲು ರಾಜ್ಯದಲ್ಲಿ ಕಾನೂನಿನ ಸುವ್ಯವಸ್ಥೆ ಕಾಪಾಡಬೇಕು, ಕೊಲೆಯಾದವ ಯಾವುದೇ ಧರ್ಮಕ್ಕೋ, ಜಾತಿಗೆ ಸೇರಿದವನಾಗಿರಲಿ, ಅಂತಿಮವಾಗಿ ಕೊಲೆಯಾದವ ಒಬ್ಬ ಅಮಾಯಕ ಮನುಷ್ಯ. ಕೊಂದ ದುಷ್ಕರ್ಮಿಗಳಿಗೆ ಶಿಕ್ಷೆ ಒದಗಿಸಲಿ, ಶಾಂತಿಯ ವಾತಾವರಣ ಸೃಷ್ಟಿಯಾಗಲಿ ಎನ್ನುವುದೇ ಇಲ್ಲಿನ ಪರಮ ಆಶಯ.

ಈ ದೇಶದ ಸಂಸ್ಕೃತಿ ಹಾಗೂ ಪರಂಪರೆಗೆ ನಾಲ್ಕು ಸಾವಿರ ವರ್ಷಗಳ ದೊಡ್ಡ ಇತಿಹಾವಿದೆ. ಈ ನೆಲದ ಜನರಲ್ಲಿ ಆಧ್ಯಾತ್ಮಿಕತೆ ಆಳವಾಗಿ ಬೇರು ಬಿಟ್ಟಿದೆ. ಆ ಹಿನ್ನೆಲೆಯಲ್ಲಿಯೇ ಈ ದೇಶ ನಡೆದುಕೊಂಡು ಬಂದಿದೆ. ಇಡೀ ಪ್ರಪಂಚದಲ್ಲಿ ವಿವಿಧ ಸಂಸ್ಕೃತಿ, ಆಚರಣೆಗಳಿಗೆ ಸ್ವಾತಂತ್ರ್ಯಾವಕಾಶಕೊಟ್ಟ ದೇಶವೊಂದಿದ್ದರೇ ಅದು ಈ ಭಾರತ. ಅದಕ್ಕೆ ಗೌರವಿಸುವುದು ಈ ನೆಲದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ಆಧ್ಯಾತ್ಮಿಕತೆ, ಸಂಸ್ಕೃತಿ, ಪರಂಪರೆಯ ಜೊತೆಜೊತೆಗೆ ಸೇರಿಕೊಂಡ ಜಾತಿ, ಧರ್ಮಗಳ ವಿಚಾರದಲ್ಲಿ ಮುಂದೆ ಬಂದಂತೆ ಸಂಘರ್ಷಗಳದ್ದೂ ದೊಡ್ಡ ಇತಿಹಾಸವಿದೆ. ಸಾವಿರಾರು ಕೊಲೆಗಳಾಗಿವೆ. ಮತೀಯ ದ್ವೇಷಗಳ ಕೆನ್ನಾಲಿಗೆಗಳು ಈ ದೇಶದ ಶಾಂತಿಯನ್ನು ಕದಡಿವೆ. ಸಂವಿಧಾನವನ್ನೇ ನಂಬಿ ಬಂದ ದೇಶದಲ್ಲಿ ನ್ಯಾಯ ಎಲ್ಲರಿಗೂ ದೊರೆತಿಲ್ಲ ಎನ್ನುವುದೇ ದೊಡ್ಡ ದುರಂತ. ಸ್ವಾತಂತ್ರ್ಯ ನಂತರದಲ್ಲಿ ಗಮನಿಸುವುದಾದರೇ ಅನ್ಯಾಯಕ್ಕೆ ಶಿಕ್ಷೆಯಾಗಿರುವುದು ತೀರಾತಿವಿರಳ. ಶಿಕ್ಷೆಯಾಗಿರುವುದು ಒಂದು ವರ್ಗದ ಜನರಿಗೆ ಮಾತ್ರ. ಹಣ, ಅಧಿಕಾರದ ಬಲ ಇರುವವರಿಗೆ ಶಿಕ್ಷೆಯ ಮಾತೇ ಇಲ್ಲ. ನಮ್ಮ ಕಾನೂನು ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಎನ್ನುವುದನ್ನು ನೇರವಾಗಿ ಹೇಳುವುದಕ್ಕೂ ಅಸಹ್ಯವೆನ್ನಿಸುತ್ತಿದೆ. ಇಂದಿಗೂ ಈ ದೇಶದಲ್ಲಿ ಇತ್ಯರ್ಥ ಕಾಣದ ಪ್ರಕರಣಗಳು ನೂರಾರಿವೆ. ಸರ್ಕಾರಗಳು ಕಾನೂನಿನ ವ್ಯವಸ್ಥೆಯಲ್ಲಿನ ಸುಧಾರಣೆಯ ಬಗ್ಗೆ ನಿರಾಸಕ್ತಿ ವಯಿಸಿವೆ. ಇಂದಿಗೆ ಅಗತ್ಯವಾಗಿ ಕಾನೂನಿನ ವ್ಯವಸ್ಥೆಯಲ್ಲಿನ ದೋಷ ಮತ್ತು ನ್ಯೂನ್ಯತೆಗಳನ್ನು ಸರಿಪಡಿಸಿ ವೇಗ ನೀಡಬೇಕಿದೆ. ಕಾನೂನಿನಲ್ಲಿರುವ ದೋಷಗಳನ್ನು ಸರಿಪಡಿಸಿದಾಗ ಮಾತ್ರ ಆದರ್ಶ ಸಮಾಜದ ನಿರ್ಮಾಣ ಮಾಡುವುದಕ್ಕೆ ಸಾಧ್ಯ. ಎಲ್ಲಿಯವರೆಗೆ ಕಾನೂನು ಸಾಮಾಜಿಕ ಸ್ವಾಸ್ಥ್ಯ ವನ್ನು ಉಳಿಸುವುದಕ್ಕೆ ವಿಫಲವಾಗುತ್ತದೋ ಅಲ್ಲಿಯವರಗೆ ಈ ಸಮಾಜ ಪ್ರವೀಣನಂತಹ, ಹರ್ಷನಂತಹ ಮಸೂದನಂತಹ, ಫಾಜೀಲ್‌ನಂತಹ ನೂರಾರು ಅಮಾಯಕ ಯುವಕರ ಕೊಲೆಗಳನ್ನು, ಮತೀಯ ಬರ್ಕುಡಿ ಸಂಘರ್ಷಗಳನ್ನು ಕಾಣಲೇಬೇಕು. 

ವಿಶ್ವಾಸ ಕಳೆದುಕೊಂಡಿತೇ ಬಿಜೆಪಿ : ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆ ಬಳಿಕ ಹಿಂದೂ ಸಂಘಟನೆಗಳು ಬಿಜೆಪಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿವೆ. ಸಾಂತ್ವಾನ ಹೇಳಲು ಬಂದ ತಾವೇ ಬೆಂಬಲಿಸದ ಮುಖ್ಯಮಂತ್ರಿಯಾದಿಯಾಗಿ ಸಚಿವರು, ಪ್ರಮುಖ ಬಿಜೆಪಿ ನಾಯಕರಿಗೆ ಸಂಘಟಕರು ಗೇರಾವ್, ಛೀಮಾರಿ ಹಾಕಿದರು. ತಮ್ಮ ಪಕ್ಷದ ಕಾರ್ಯಕರ್ತರಿಗೇ ರಕ್ಷಣೆ ನೀಡುವುದಕ್ಕಾಗದೇ ಬಿಜೆಪಿ ಮುಖಭಂಗ ಅನುಭವಿಸಿತು. ‘ಬಿಜೆಪಿಯಿಂದ ಹಿಂದುತ್ವವಲ್ಲ, ಹಿಂದುತ್ವದಿಂದ ಬಿಜೆಪಿ’ ಎಂಬ ಕೂಗು ಸಂಘಟಕರಿಂದ ಬಂದಿದ್ದು, ಬಿಜೆಪಿಗರಿಗೆ ನಿಜಕ್ಕೂ ಆತಂಕ ಮೂಡಿಸಿತು. ನೂರಾರು ಯುವ ನಾಯಕರ ರಾಜೀನಾಮೆ ಪರ್ವ ಬಿಜೆಪಿ ಪಕ್ಷ ಸಂಘಟನೆಯ ಭವಿಷ್ಯದ ಪ್ರಶ್ನೆ ಎಬ್ಬಿಸಿತು. ಹೌದು, ಖಂಡಿತ ಬಿಜೆಪಿ ತನ್ನನ್ನ ಬೆಂಬಲಿಸಿದ ಸಂಘಟಕರಿಂದಲೇ ವಿಶ್ವಾಸ ಕಳೆದುಕೊಂಡಿದೆ. ಇದು ಬಿಜೆಪಿಯ ಭವಿಷ್ಯದ ರಾಜಕೀಯಕ್ಕೆ ಮುಳುವಾಗಲಿದೆಯೇ ಎಂಬ ಚರ್ಚೆಯೂ ಕೂಡ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಹಿಂದೂ ಕಾರ್ಯಕರ್ತರ ‘ವೋಟ್ ಫಾರ್ ನೋಟಾ’ ಅಭಿಯಾನವೂ ಸಾಮಾಜಿಕ ಜಾಲತಾಣಗಳಾದ್ಯಂತ ಸಂಚಲನ ಮೂಡಿಸಿದೆ. ಹಿಂದೂ ಸಂಘಟಕರ ಮತಗಳು ಬಿಜೆಪಿಯಿಂದ ಪೂರ್ಣ ಪ್ರಮಾಣದಲ್ಲಿ ವಿಮುಖವಾಗುತ್ತದೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲವಾದರೂ, ಒಂದಿಷ್ಟು ಪರಿಣಾಮವಂತೂ ಖಂಡಿತ ಆಗಿಯೇ ಆಗುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. 

ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಉತ್ತರವೇನು..? : ಸಿದ್ದರಾಮಯ್ಯ ಸರ್ಕಾರದಲ್ಲಿ ಆದ ಹಿಂದೂ ಕಾರ್ಯಕರ್ತರ ಕೊಲೆಯನ್ನೇ ತಮ್ಮ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ, ಅವ್ಯಾಹತವಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಹೊರಿಸಿ ಸಾರ್ವಜನಿಕರಲ್ಲಿ ಒಂದಿಷ್ಟು ಕೆಟ್ಟ ಅಭಿಪ್ರಾಯಗಳನ್ನು ಫೀಡ್ ಮಾಡಿ, ಕಂಪ್ಯೂಟಿಂಗ್ ಮಾಡಿ ಪಾಲಿಟಿಕಲ್ ಮೈಲೇಜ್ ವೃದ್ಧಿಸಿಕೊಂಡಿತ್ತು. ಅವೆಲ್ಲವೂ ಈಗ ಉಲ್ಟಾ ಹೊಡೆದಂತೆ ಕಾಣಿಸುತ್ತಿದೆ. ಬಿಜೆಪಿ ಆರೋಪಕ್ಕೆ ಪ್ರತಿಯಾಗಿ ಕಾಂಗ್ರೆಸ್ ‘ಬಿಜೆಪಿ ಅಲೀಗ್ಡ್ ಹಿಡನ್ ಮರ್ಡರ್ಸ್, ದಿ ರಿಯಲ್ ಟ್ರುತ್ (ಬಿಜೆಪಿ ಹೇಳಿದ ಮತ್ತು ಹೇಳದೇ ಮರೆಮಾಚಿದ ಸಾವುಗಳ ಹಿಂದಿನ ನಗ್ನ ಸತ್ಯ) ಎಂಬ ಪುಸ್ತಕದಲ್ಲಿ ೨೦೧೩-೨೦೧೭ರವರೆಗೆ ೨೩ ಕೋಮು ಹತ್ಯೆಗಳಾಗಿದ್ದು, ಅವುಗಳಲ್ಲಿ ೧೨ ಹಿಂದೂಗಳ ಹತ್ಯೆಗಳಲ್ಲಿ ೮ ಪ್ರಕರಣಗಳಲ್ಲಿ ಪಿಎಫ್‌ಐ/ಎಸ್‌ಡಿಪಿಐ ಕಾರ್ಯಕರ್ತರು ಆರೋಪಿಗಳಾಗಿದ್ದಾರೆ, ಒಂದು ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಆರೋಪಿಯಾಗಿದ್ದಾನೆ, ಈ ಪೈಕಿ ೯೯ ಆರೋಪಿಗಳನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ. ಉಳಿದಂತೆ ೧೧ ಮುಸ್ಲೀಂ ಹತ್ಯೆಗಳ ಪೈಕಿ ೮ ಪ್ರಕರಣಗಳಲ್ಲಿ ಬಜರಂಗದಳ, ತಲಾ ಒಂದು ಪ್ರಕರಣದಲ್ಲಿ ಹಿಂದೂ ಜಾಗರಣಾ ವೇದಿಕೆ, ಶ್ರೀರಾಮ ಸೇನೆ, ಹಿಂದೂ ಪರಿಷತ್‌ನ ಕಾರ್ಯಕರ್ತರು ಆರೋಪಿಗಳಾಗಿದ್ದರು. ೧೧೫ ಆರೋಪಿಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಿಸಿದ್ದಲ್ಲದೇ, ಹೊನ್ನಾವರದ ಪರೇಶ್ ಮೇಸ್ತಾ ಕೊಲೆ ಪ್ರಕರಣವನ್ನು ಸಿಬಿಐಗೆ, ಬೆಂಗಳೂರಿನ ರುದ್ರೇಶ್ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿದೆ, ವೈಯಕ್ತಿಕ ಕಾರಣಗಳಿಂದ ಹತ್ತು ಹತ್ಯೆಗಳಾಗಿದ್ದು ೬೧ ವ್ಯಕ್ತಿಗಳನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಪ್ರಕಟಿಸಿ ತಿರುಗೇಟು ನಿಡಿದೆ. ಇತ್ತೀಚೆಗೆ ಸಿದ್ದರಾಮಯ್ಯ ಕೂಡ ಇದೇ ವಿಷಯವನ್ನು ಬಿಜೆಪಿ ವಿರುದ್ಧ ಟ್ವೀಟಾಸ್ತ್ರ ಬಿಟ್ಟಿದ್ದರು. ಏನೇ ಇರಲಿ, ಆರೋಪ ಪ್ರತ್ಯಾರೋಪಗಳಲ್ಲಿಯೇ ಕಾಲ ಕಳೆದ ಉಭಯ ಪಕ್ಷಗಳು ಕಾನೂನು ಸುವ್ಯವಸ್ಥೆ ಕಾಪಾಡದೇ ಈ ಅಮಾಯಕರ ಹತ್ಯೆಗಳಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದಂತೂ ಸತ್ಯ. 

ಕಾಂಗ್ರೆಸ್‌ಗಿದು ಪ್ಲಸ್ | ಕನ್ನುಗೋಲು ಮಾಸ್ಟರ್ ಸ್ಟ್ರ್ಯಾಟಜಿ ? : ಖಂಡಿತವಾಗಿ ಕಾಂಗ್ರೆಸ್ ಈ ಪ್ರಕರಣಗಳನ್ನು ತನ್ನ ರಾಜಕೀಯ ಮೈಲೇಜ್‌ಗಾಗಿ ಬಳಸಿಕೊಳ್ಳುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅಧಿಕಾರದಲ್ಲಿದ್ದಾಗ ಇಂತಹ ಘಟನೆಗಳ ಬಗ್ಗೆ ಸಣ್ಣ ನಿರ್ಲಕ್ಷ್ಯ ತೋರಿದ್ದ ಕಾಂಗ್ರೆಸ್ ಈಗ ಅಂದು ಬಿಜೆಪಿ ಆಡಿದ್ದ ಧ್ವನಿಯಲ್ಲಿ ಮಾತನಾಡುತ್ತಿದೆ. ಈ ಬಾರಿಯಂತೂ ಕಾಂಗ್ರೆಸ್ ಪರ ಸ್ಟ್ರ್ಯಾಟಜಿ ಮಾಸ್ಟರ್ ಪ್ಲ್ಯಾನ್ ಮಾಡುವುದಕ್ಕೆ ಚುನಾವಣಾ ತಂತ್ರಜ್ಞ ಸುನೀಲ್ ಕನ್ನುಗೋಲು ಇದ್ದಾರೆ. ಈಗಾಗಲೇ ಒಂದಿಷ್ಟು ರನತಂತ್ರ ಹೂಡಿದ್ದು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವಂತೂ ಕಾಂಗ್ರೆಸ್‌ಗೆ ಅನಾಯಾಸವಾಗಿ ಗ್ರಾಸವಾಗಿ ಸಿಕ್ಕಂತಾಗಿದೆ. ಇಂತಹ ಕೋಮು ಹತ್ಯೆ, ಸಂಘರ್ಷಗಳನ್ನು, ಕಾನೂನು ಅವ್ಯವಸ್ಥೆಯಂತಹ ವಿಚಾರಗಳನ್ನೇ ಚುನಾವಣಾ ಸಾಧನಗಳಾಗಿ ಬಳಸಿಕೊಂಡು ಸಾರ್ವಜನಿಕರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಂಪ್ಯೂಟಿಂಗ್ ಮಾಡಿ ತೀವ್ರವಾಗಿ ಅಸಮಾಧಾನ ಮೂಡಿಸುವುದರ ಬಗ್ಗೆ ಕಾರ್ಯೋನ್ಮುಖವಾಗುವುದರತ್ತ ಕನ್ನುಗೋಲು ಕಾಂಗ್ರೆಸ್‌ಗೆ ಗೈಡ್‌ಲೈನ್ಸ್ ರೂಪಿಸುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಹಿಂದೆ ಬಿಜೆಪಿ ಹೇಗೆ ಕಾಂಗ್ರೆಸ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ವಿರೋಧಾಭಿಪ್ರಾಯವನ್ನು ಫೀಡ್ ಮಾಡಿ ತನ್ನ ಪರವಾದ ‘ರೋಬೋ ಪಬ್ಲಿಕ್’ನನ್ನು ಸೃಷ್ಟಿ ಮಾಡಿಕೊಂಡಿತ್ತೋ, ಹಾಗೆಯೇ ಕಾಂಗ್ರೆಸ್ ಈಗ ಅದೇ ಪ್ರಯತ್ನದಲ್ಲಿ ಮುಂದಾಗುತ್ತಿದೆ. ಈ ಪ್ಲ್ಯಾನ್ ವರ್ಕೌಟ್ ಆದರೇ, ಕಾಂಗ್ರೆಸ್‌ಗೆ ಲಾಭವಾಗುವುದಂತೂ ಪಕ್ಕಾ ಎಂದೇ ಹೇಳಲಾಗುತ್ತಿದೆ. 

-ಶ್ರೀರಾಜ್ ವಕ್ವಾಡಿ