ಫಿನಿಕ್ಸ್ ಹಕ್ಕಿಯ ರೂಪ ತಾಳಲಿದೆಯೇ ಕಾಂಗ್ರೆಸ್ ? | ತಂದೆಗೆ ಸಿಕ್ಕ ಸುಲಭ ದಾರಿ ರಾಹುಲ್‌ಗೆ ಸಿಕ್ಕಿಲ್ಲ.!
ಇಡೀ ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಕೇವಲ ಎರಡು ರಾಜ್ಯಗಳಲ್ಲಿ ಅಧಿಕಾರ ಹೊಂದಿದ್ದು, ಅದರಲ್ಲೂ ಅದು ಮೈತ್ರಿ ಸರ್ಕಾರದ ಅಧಿಕಾರ ಹೊಂದಿರುವ ಸಂದರ್ಭದಲ್ಲಿ ಪಕ್ಷದ ಪ್ರಭಾವಿ ಮುಖಗಳ ರಾಜೀನಾಮೆ ಪರ್ವ ಕಾಂಗ್ರೆಸ್‌ನನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ ಎಂದನ್ನಿಸುತ್ತಿದೆ. ಕಾಂಗ್ರೆಸ್ ರಾಷ್ಟ್ರಕ್ಕೆ ಮಾರಕ ಅಥವಾ ರಾಷ್ಟ್ರೀಯತೆಗೆ ಮಾರಕವಾಗುತ್ತಿದೆ ಎಂಬ ಸಾಮಾಜಿಕ ವಲಯದಲ್ಲಿ ಸೃಷ್ಟಿ ಮಾಡಲಾದ ಒಂದು ರಾಜಕೀಯ ಪ್ರಾಯೋಜಿತವಾದಂತಹ ‘ಫೀಡಿಂಗ್’ನಿಂದ ಕಾಂಗ್ರೆಸ್ ಕಳೆದ ಏಳೆಂಟು ವರ್ಷಳಿಂದೀಚೆಗೆ ಕಂಡುಕೊಂಡು ಬಂದ ವಿರೋಧ ಅಭಿಪ್ರಾಯ ಒಂದಿಷ್ಟು ಕಳೆದು ಹೋಗುತ್ತಿದೆ ಅಥವಾ ಬದಲಾಗುತ್ತಿದೆ ಎಂಬ ಕಾಲಘಟ್ಟದಲ್ಲಿ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಬಟ್ಟಬಯಲಾಗಿದ್ದು, ಪಕ್ಷದ ಭವಿಷ್ಯದ ಪ್ರಶ್ನೆಯನ್ನೆಬ್ಬಿಸಿದೆ.
ಭಾರತದಂತಹ ರಾಜಕೀಯ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರೀಯ ಪಕ್ಷ, ಈ ದೇಶವನ್ನು ಐದಾರು ದಶಕಗಳ ಕಾಲ ಆಳಿದ ಪಕ್ಷ ಕಾಂಗ್ರೆಸ್‌ಗೆ ಇಂತಹದ್ದೊಂದು ಹೀನಾಯ ಸ್ಥಿತಿ ಬಂದೊದಗಿರುವುದು ಅದರಲ್ಲಿನ ಆಂತರಿಕ ಅಸ್ಥಿರತೆಯನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷದ ಅಸ್ತಿತ್ವ ಖಂಡಿತ ಅಪಾಯದಲ್ಲಿದೆ ಎಂದೇ ಅನ್ನಿಸುತ್ತಿದೆ. ಫಿನಿಕ್ಸ್ ಹಕ್ಕಿಯಂತೆ ಮತ್ತೆ ಪುಟಿದೇಳಬೇಕು ಎಂಬ ಕನಸನ್ನು ಒಂದು ವೇಳೆ ಕಾಂಗ್ರೆಸ್ ಈ ದೇಶದಲ್ಲಿ ಕಾಣುತ್ತಿದೆ ಎಂತಾದರೇ ಮುಖ್ಯವಾಗಿ ಪಕ್ಷ ತನ್ನನ್ನು ತಾನು ಬದಲಾವಣೆಗೆ ಒಗ್ಗಿಸಿಕೊಳ್ಳುವುದಕ್ಕಿಂತ ಮೊದಲಾಗಿ ವಾಸ್ತವತೆಯಲ್ಲಿ ಪರಿವರ್ತನೆಗೆ ಒಗ್ಗಿಸಿಕೊಳ್ಳಬೇಕಾಗಿದೆ. ರಾಜಕೀಯ ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಪಕ್ಷದ ಮನಸ್ಥಿತಿಯ ಕಾರಣದಿಂದಾಗಿ ಇದೇ ಮೊದಲ ಬಾರಿಗೆ ರಾಜಕೀಯ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಸೋತಿದ್ದಲ್ಲ. ಎರಡು ಅವಧಿಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರವೂ ಕೂಡ ಈ ದೇಶದ ಜನ ಕಾಂಗ್ರೆಸ್‌ನನ್ನು ಹೊರತಾಗಿ ಮತ್ತೊಂದು ಪಕ್ಷಕ್ಕೆ ಒಲಿಯುತ್ತಾರೆ ಎಂದರೇ ಅದಕ್ಕೆ ಕಾಂಗ್ರೆಸ್ ಆಡಳಿತದ ಸಿದ್ದಾಂತದಲ್ಲಿನ ದ್ವಂದ್ವವೇ ಕಾರಣ. ದೇಶದಲ್ಲಿ ಕಾಂಗ್ರೆಸ್ ಈ ಮಟ್ಟಕ್ಕೆ ಸೋಲುತ್ತಿರುವುದಕ್ಕೆ ಮುಖ್ಯ ಕಾರಣವೇ ಅದರ ದ್ವಂದ್ವ ನಡೆ. ಇಂತಹ ದ್ವಂದ್ವ ನಡೆಯಿಂದ ರಾಜಕೀಯ ಸಮಗ್ರತೆಯನ್ನು ಕಾಪಾಡಿಕೊಂಡು, ಅಧಿಕಾರ ಉಳಿಸಿಕೊಂಡು ಯಾವುದೇ ಪಕ್ಷ ಈ ದೇಶದಲ್ಲಿ ಆಡಳಿತ ನಡೆಸಿದ ಉದಾಹರಣೆಯೇ ಇಲ್ಲ. ಅದು ಕಾಂಗ್ರೆಸ್‌ನಂತಹ ಅನುಭವಿ ರಾಷ್ಟ್ರೀಯ ಪಕ್ಷಕ್ಕೆ ಗೊತ್ತೇ ಆಗಿಲ್ಲ ಎನ್ನುವುದು ದುರಂತವೇ ಸರಿ. ಅಂತ್ಯಂತ ಪ್ರಾಮಾಣಿಕವಾಗಿ, ಅಥವಾ ನಿಲುವಿನ ಏಕಚಿತ್ತದ ಬದ್ಧತೆಯಲ್ಲಿಯೇ ವಿಮರ್ಶಿಸುವುದಾದರೇ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಕಂಡ ಎರಡು ಅವಧಿಗಳು ಈ ದೇಶದಲ್ಲಿ ರಾಜಕೀಯವಾಗಿ ಹೊಸ ಶಕ್ತಿಯೊಂದು ಉದಯವಾಗುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಂತಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕಾಂಗ್ರೆಸ್‌ಗೆ ಈಗ ಅತ್ಯಂತ ಅಗತ್ಯವಾಗಿ ಬೇಕಾಗಿರುವುದು ಪಕ್ಷಕ್ಕೆ ಅಂಟಿರುವ ಸಂಕಷ್ಟವನ್ನು ಮುಕ್ತಿಗೊಳಿಸುವ ಹಾಗೂ ಮತ್ತೆ ಹೊಸ ಮನ್ವಂತರದ ರೀತಿಯಲ್ಲಿ ಸ್ಪಷ್ಟ ನಿಲುವಿನೊಂದಿಗೆ ಅಧಿಕಾರಕ್ಕೆ ಬರುವುದಕ್ಕೆ ಈ ಕಾಲ ಪಕ್ವವಾಗಿದೆ ಎಂದು ಯೋಚಿಸುವ ಯೋಜನಾ ಕ್ಷಮತೆ, ಆತುರತೆ, ಚತುರತೆ ಇರುವ ಒಬ್ಬ ಕನಸು ಕಂಗಳ ನಾಯಕ. ದೇಶದಾದ್ಯಂತ ಈ ಪ್ರಮಾಣದಲ್ಲಿ ಹಿನ್ನೆಡೆಯಾಗುತ್ತಿರುವ ಸಂದರ್ಭದಲ್ಲಿಯೂ ರಾಜಕೀಯ ಕ್ಷೇತ್ರದಲ್ಲಿ ಹೊಸತನದ ಚಿಂತನೆಯತ್ತ ಕಾಂಗ್ರೆಸ್ ಗಮನ ಕೊಟ್ಟಿಲ್ಲವೆಂತಾದರೇ, ಕೆಲವು ದಶಕಗಳ ಕಾಲದವರೆಗೆ ಹೇಳಹೆಸರಿಲ್ಲದೇ ಇರಬೇಕಾಗುತ್ತದೆ ಮತ್ತು ಈ ಕಾಲದ ರಾಜಕೀಯ ವ್ಯವಸ್ಥೆಯಲ್ಲಿ ‘ಔಟ್‌ಡೇಟೆಟ್’ ಪಟ್ಟ ಹೊತ್ತುಕೊಳ್ಳಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಬಿಜೆಪಿಯಂತಹ ಪಕ್ಷದ ಆಡಳಿತದಲ್ಲಿ ಎಷ್ಟೆಲ್ಲಾ ಸಾಮಾಜಿಕ ಅಸ್ಥಿರತೆಗಳನ್ನು ಈ ದೇಶದ ಜನ ಕಂಡರೂ, ಪಕ್ಷ ಉಳಿಸಿಕೊಂಡ ನಿಲುವು ಮತ್ತು ತನ್ನ ಸಿದ್ಧಾಂತಕ್ಕೆ ಬದ್ಧವಾಗಿದ್ದಕ್ಕೆ ಅದು ಸೃಷ್ಟಿಸಿಕೊಂಡ, ಗಳಿಸಿಕೊಂಡ ‘ಜನತಾ ಅಲೆ’ ಇದೆ ಎಂದಾದರೇ, ರಾಜಕೀಯ ತಂತ್ರಗಾರಿಕೆಯೇ ಕಾರಣ. ಇಷ್ಟಾಗಿಯೂ ಸದ್ಯ, ದೇಶದಲ್ಲಿ ಆಡಳಿತ ಪಕ್ಷದ ಮೇಲೆ ಪೂರ್ಣ ಪ್ರಮಾಣದಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ ಎನ್ನುವುದು ಸತ್ಯ.
ಈ ನಾಡು ಕಂಡ ಶ್ರೇಷ್ಠ ಪತ್ರಕರ್ತರಲ್ಲೋರ್ವರಾದ ವಡ್ಡರ್ಸೆ ರಘುರಾಮ ಶೆಟ್ಟಿಯವರು ಹೇಳುವ ಹಾಗೆ, “ಆಡಳಿತ ಪಕ್ಷ ಜನರಿಗೆ ಬೇಡವಾಗಿದೆ, ವಿರೋಧ ಪಕ್ಷಗಳಿಗೆ ಜನರ ಇಲವು ಇಲ್ಲವೆಂದಾದರೇ, ಮುಂದೇನು..? ಗೊಂದಲ ಅಥವಾ ರಾಜಕೀಯ ಅಭದ್ರತೆ ಎಂಬುವುದೇ ಈ ಪ್ರಶ್ನೆಗೆ ಸಿಗುವ ಉತ್ತರ.” ಹೌದು, ಸದ್ಯ ಭಾರತದಲ್ಲಿ ಆಡಳಿತ ಪಕ್ಷದ ಜನವಿರೋಧಿ ಯೋಜನೆಗಳ ಕಾರಣದಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ ಸೇರಿ ಇತರ ಪಕ್ಷಗಳ ಮೇಲೆ ಮೊದಲೇ ಜನರ ವಿಶ್ವಾಸವಿಲ್ಲ. ದೇಶ ಅಕ್ಷರಶಃ ಎದುರುಗಾಣುತ್ತಿರುವುದು ರಾಜಕೀಯ ಅಭದ್ರತೆ. ಈ ರಾಜಕೀಯದ ಅಸ್ಥಿರತೆ ಇಡೀ ದೇಶಕ್ಕೆ ಅಹಿತಕರ ಮತ್ತು ಇದು ಸಾಮಾಜಿಕ ಅಸ್ಥಿರತೆಯನ್ನೂ ಅಲುಗಿಸುತ್ತದೆ. ಹಾಗಾಗಿ ಪ್ರಜಾಪ್ರಭುತ್ವದಂತಹ ವ್ಯವಸ್ತೆಯಲ್ಲಿ ಒಂದೋ ಆಡಳಿತ ಪಕ್ಷ ಜನಪರವಾಗಿರಬೇಕು, ಇಲ್ಲವಾದರೇ, ವಿರೋಧ ಪಕ್ಷಗಳು ಆಡಳಿತದ ನ್ಯೂನ್ಯತೆಯನ್ನು ಪ್ರಶ್ನಿಸುವುದಕ್ಕೆ ಗಟ್ಟಿ ಧ್ವನಿ ಹೊಂದಿರಬೇಕು. ಇವೆರಡೂ ಇಲ್ಲವಾದಲ್ಲಿ ಅದು ಸಾಮಾಜಿಕ ಸಂಘಟನೆಯ ಶಕ್ತಿ ಇಮ್ಮಡಿಯಾಗುವುದಕ್ಕೆ ಪ್ರೇರಕ ಶಕ್ತಿಯಾಗುತ್ತದೆ.
ಕಾಂಗ್ರೆಸ್ ಪಕ್ಷಕ್ಕೆ ಕೈಕೊಡುತ್ತಿರುವುದು ಒಂದು ಒಳ್ಳೆಯ ಸಾತ್ ಅಥವಾ ಬೆಂಬಲ. ೨೦೧೪ಕ್ಕೂ ಮುಂಚೆ ರಾಹುಲ್ ಗಾಂಧಿ ಹಿಂದಿದ್ದ ದೊಡ್ಡ ಯುವ ಸಮುದಾಯ ಈಗ ಎಲ್ಲಿ ಹೋಯಿತು ಎಂದು ಕೇಳಿದರೇ ಅದಕ್ಕೆ ಸ್ಪಷ್ಟವಾದ ಉತ್ತರವಿಲ್ಲ. ಬಹುಶಃ ಕಾಂಗ್ರೆಸ್ ಹಿಂದೆಂದೂ ಕಂಡಿರದ ಹಾಗೆ ರಾಹುಲ್ ಗಾಂಧಿ ಕಳೆದೆಂಟು ಹತ್ತು ವರ್ಷಗಳ ಹಿಂದೆ ದೊಡ್ಡ ಯುವ ಸಮುದಾಯವನ್ನೇ ಹೊಂದಿದ್ದರು. ಆದರೇ, ಆ ಸಮುದಾಯವನ್ನು ತನ್ನ ಬೆಂಬಲವಾಗಿ ಉಳಿಸಿಕೊಳ್ಳುವುದರಲ್ಲಿ ಸಂಪೂರ್ಣ ವಿಫಲರಾದರು. ರಾಹುಲ್ ಗಾಂಧಿ ಬೆಳೆಸಿಕೊಂಡ ರಾಜಕೀಯ ವರ್ಚಸ್ಸನ್ನು, ನಾಯಕತ್ವವನ್ನು ಒಪ್ಪಿಕೊಂಡಿದ್ದ ಯುವ ಸಮುದಾಯ ಹಠಾತ್ ಎಂಬಂತೆ ೨೦೧೪ರ ಅಂತ್ಯಕಾಲದಲ್ಲಿ ವಿಮುಖವಾಗುದಕ್ಕೆ ಮುಖ್ಯ ಕಾರಣವೇ ಅಂದು ಅವರಲ್ಲಿರದ ಆಡಳಿತ ಸಾಮರ್ಥ್ಯ. ಅದಾದ ಮೇಲೆ ದೇಶ ಕಂಡಿದ್ದು ಮೋದಿ ಅಲೆ. ಇಡೀ ದೇಶದ ಯುವ ಸಮುದಾಯ ಮೋದಿ ಎಂಬ ಹೆಸರಿಗೆ ‘ಅಡಿಕ್ಟ್’ ಆಗಿ ಬಿಟ್ಟಿತು. ರಾಹುಲ್ ಗಾಂಧಿಗೆ ಈ ದೇಶದಲ್ಲಿ ಮಹತ್ತರವಾದದ್ದೇನೋ ಮಾಡಬೇಕು ಎಂಬ ಮಹದಾಸೆ ಇದ್ದಿತ್ತೇನಾದರೂ ರೆಕ್ಕೆ ಕಳೆದುಕೊಂಡ ಹಕ್ಕಿಯಂತಾದರು. ಅದಾದ ಮೇಲೆ ರಾಹುಲ್ ಗಾಂಧಿ ಕಲಿತ ರಾಜಕೀಯ ಪಾಠ ನಿಜಕ್ಕೂ ಮೆಚ್ಚುವಂತದ್ದೆ ಸರಿ. ಆದರೇ, ಪಕ್ಷದೊಳಗೆ ತಂದೆ ರಾಜೀವ್ ಗಾಂಧಿ ಅನುಭವಿಸಿದಂತೆಯೇ ರಾಹುಲ್ ಗಾಂಧಿ ಅನುಭವಿಸಬೇಕಾಯಿತು. ಕಾಂಗ್ರೆಸ್ ಅವನತಿಗೆ ರಾಹುಲ್ ಗಾಂಧಿಯೇ ಕಾರಣ ಎಂಬಂತೆ ಪಕ್ಷದ ಕೆಲವು ನಾಯಕರೇ ವಿರೋಧ ವ್ಯಕ್ತ ಪಡಿಸುವುದಕ್ಕೆ ಆರಂಭಿಸಿದ್ದರು. ಸರಿಸುಮಾರು ೪೨-೪೪ ವರ್ಷದ ಯುವ ರಾಜಕೀಯ ನಾಯಕನೊಬ್ಬ ತಮ್ಮೆಲ್ಲರ ಮುಂದಿನ ಹಂತವನ್ನು ಏರಿದನೆಂಬ ಮಾತ್ರ‍್ಯವೂ ಇದಕ್ಕೆ ಕಾರಣವಿರಬಹುದು. ಈಗಿನ ರಾಹುಲ್ ಗಾಂಧಿ ಒಬ್ಬ ಪ್ರಬುದ್ಧ ರಾಜಕೀಯ ನಾಯಕನಾಗಿರಬಹುದು, ಆದರೇ ಪಕ್ಷ ಕಳೆದ ಏಳೆಂಟು ವರ್ಷಗಳಲ್ಲಿ ಕಳೆದುಕೊಂಡ ರಾಜಕೀಯ ವರ್ಚಸ್ಸನ್ನು ಮರಳಿ ತಂದು ಕೊಡುವುದಕ್ಕೆ ಅವರಿಗೆ ಸಾಧ್ಯವಿದೆಯೇ..? ಅಥವಾ ಅವರಲ್ಲಿ ಅದಕ್ಕೆ ಬೇಕಾದ ಬೆಂಬಲವಿದೆಯೇ ಎನ್ನುವುದು ಇಲ್ಲಿ ಬಹಳ ಮುಖ್ಯವಾದ ಪ್ರಶ್ನೆ.
ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್‌ರಂತಹ ಹಿರಿಯ ನಾಯಕರ ರಾಜೀನಾಮೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟಾಗದೇ ಇದ್ದರೂ ಕೂಡ, ಈ ರಾಜೀನಾಮೆ ಪರ್ವ ಆಡಳಿತ ಪಕ್ಷ ಬಿಜೆಪಿ ಪಾಲಿಗೆ ಇವೆಲ್ಲಾ ಅನಾಯಾಸ ತುತ್ತಾಗಿ ಸಿಕ್ಕಿವೆ. ಇನ್ನು, ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದಾಗಿನಿಂದ ಅವರ ನಾಯಕತ್ವವನ್ನು ನಿರಂತರವಾಗಿ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ಸೇರಿ ಮೊದಲಾದವರು ಇದ್ದ ಕಾಂಗ್ರೆಸ್‌ನ ಜಿ೨೩ ಬಳಗ ರಾಹುಲ್ ಗಾಂಧಿ ಅವರನ್ನು ಟೀಕಿಸುತ್ತಾ ಬಂದಿತ್ತು. ಹಾಗೆ ನೋಡುವುದಕ್ಕೆ ಹೋದರೇ, ಪ್ರಧಾನಿ ಹುದ್ದೆಗೆ ತಂದೆಗೆ ತೆರೆದುಕೊಂಡ ಸುಲಭ ದಾರಿ ಮಗ ರಾಹುಲ್ ಗಾಂಧಿಗೆ ದೊರಕಲಿಲ್ಲ. ಆದರೂ ಅಂದು ಗಾಂಧಿ ಕುಟುಂಬದ ಒಂದು ಕುಡಿ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿಯಾಗುತ್ತಾನೆ ಎಂದಾಗ ಕಟುವಾಗಿ ವಿರೋಧಿಸಿದ ದೊಡ್ಡ ಬಳಗ ಕಾಂಗ್ರೆಸ್‌ನಲ್ಲಿಯೇ ಇತ್ತು. ಪ್ರಧಾನಿಯಾಗಿ ರಾಜೀವ್ ಗಾಂಧಿ ಕಾಂಗ್ರೆಸ್‌ನನ್ನು ಮುನ್ನೆಡೆಸಿದಾಗ ಆ ಎಲ್ಲರೂ ತೆಪ್ಪಗಾಗಿದ್ದರು. ಆದರೇ, ರಾಹುಲ್ ಗಾಂಧಿ ಸ್ಥಿತಿ ಹಾಗಿಲ್ಲ. ‘ಗಾಂಧಿ ಕುಟುಂಬ ರಾಜಕೀಯ’ದ ವಿರುದ್ಧ ಭಿನ್ನ ಮಾತನಾಡುವ ಧೈರ್ಯವನ್ನು ಕಾಂಗ್ರೆಸ್ ಒಳಗಿನ ವಿರೋಧ ಬಣ ಪಡೆದುಕೊಂಡಿತು. ರಾಹುಲ್ ಏನೇ ಮಾಡುವುದಕ್ಕೆ ಹೊರಟರು ಭಿನ್ನ ಮಾತಾಡುವುದಕ್ಕೆ ಆರಂಭಿಸಿದರು. ರಾಹುಲ್ ಆಗಲಿ, ಸೋನಿಯಾ ಆಗಲಿ ಹೆಚ್ಚೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಇನ್ನು, ದೇಶದಾದ್ಯಂತ ಬಲ ಕಳೆದುಕೊಂಡು ಸೊರಗಿ ನಿಂತಿರುವ ಕಾಂಗ್ರೆಸ್‌ನ ಭವಿಷ್ಯವೇನು..? ಪ್ರಸ್ತುತ ರಾಜಕಾರಣಕ್ಕೆ ಸಲ್ಲದೇ ಉಳಿಯುವ ರಾಜಕೀಯ ಪಕ್ಷವಾಗಿ ಉಳಿಯುತ್ತದೆಯೇ..? ಈವರೆಗೆ ಆದ ಅನುಭವದಿಂದ ಪಾಠ ಕಲಿತು ಮತ್ತೆ ಹೊಸದೊಂದು ರಾಜಕೀಯ ಕ್ರಾಂತಿಯ ಇತಿಹಾಸ ಬರೆಯಲಿದೆಯೇ..? ಎಂಬೆಲ್ಲ ಪ್ರಶ್ನೆಗಳು ಎದ್ದಿವೆ. ಮಾತ್ರವಲ್ಲದೇ, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ನಡುವೆ ನಿಂತು ನೋಡುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
-ಶ್ರೀರಾಜ್ ವಕ್ವಾಡಿ

No comments:
Post a Comment