ತಾತ್ವಿಕ ನೆಲೆಯ ಚಿಂತನೆಯಿಲ್ಲದಿದ್ದರೇ ತಪ್ಪಿದ್ದಲ್ಲ ಬವಣೆ | ಕಾಂಗ್ರೆಸ್‌ಗೀಗ ‘ಜೋಡೋ’ ಫಲಿಸಲ್ಲ..!
ಎದುರಾಳಿಯನ್ನು ಆರೋಗ್ಯಕರವಾದ ಪೈಪೋಟಿಯಲ್ಲಿ ಎದುರಿಸುವ ವಿಶಾಲವಾದ ಮನಸ್ಸು ಕಾಂಗ್ರೆಸ್‌ಗೆ ಇದ್ದರೂ ಕೂಡ, ಪ್ರತಿಸ್ಪರ್ಧಿ ಬಿಜೆಪಿಯ ರಾಜಕೀಯ ತಂತ್ರಗಾರಿಕೆಯೇ ಬೇರೆಯಾಗಿರುವುದರಿಂದ ಕಾಂಗ್ರೆಸ್‌ಗೆ ಏನೇ ಮಾಡಿದರೂ ಎಲ್ಲದರಲ್ಲೂ ಸೋಲುವ ಸ್ಥಿತಿ ಬಂದೊದಗಿದೆ. ಕಾಂಗ್ರೆಸ್‌ನ ಹಾದಿ ಇನ್ನಷ್ಟು ದುರ್ಗಮವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಕಾಂಗ್ರೆಸ್‌ನ ಒಳಗೆ ಸಮಸ್ಯೆಗಳ ಸರಮಾಲೆ ನಿರೀಕ್ಷೆಗೂ ಮೀರಿ ಉದ್ದಕ್ಕೆ ಬೆಳೆಯುತ್ತಿದೆ. ಕಾಂಗ್ರೆಸ್‌ನ ನಿರೀಕ್ಷೆಯಂತೆ ಜನಪ್ರಿಯತೆ ಹೆಚ್ಚಲಿಲ್ಲ. ಬಿಜೆಪಿ ಸರ್ಕಾರದಲ್ಲಿನ ಇಷ್ಟೆಲ್ಲಾ ಬೆಲೆ ಏರಿಕೆ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆಗಳಿದ್ದರೂ ಜನ ಬಿಜೆಪಿಯ ಮೇಲೆ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆಯೇ ಹೊರತು ಕಾಂಗ್ರೆಸ್ ಮೇಲೆ ಯಾಕೆ ಒಲವು ತೋರಿಸುತ್ತಿಲ್ಲ ಎನ್ನುವುದಕ್ಕೆ ಕಾಂಗ್ರೆಸ್ ಒಳಗಿನ ‘ಸೈದ್ಧಾಂತಿಕ ಸಂಘರ್ಷ’ವೇ ಕಾರಣ.
ಸಮಸ್ಯೆಗಳ ಸರಮಾಲೆಯೇ ಸಮಾಜದಲ್ಲಿದ್ದರೂ ಕೂಡ ಇಡೀ ದೇಶದ ಜನರನ್ನು ಆಡಳಿತ ಪಕ್ಷ ಬಿಜೆಪಿ ರಾಜಕೀಯ ವ್ಯವಸ್ಥೆಯನ್ನು ತನಗೆ ಪ್ರತಿಕೂಲವಾಗುವಂತೆ ಜಾಣ ನಡೆಯಿಂದ ಭಾವುಕರಾಗಿ ಬೆಳೆಸಿಕೊಂಡಿತು ಮಾತ್ರವಲ್ಲದೇ ಬಳಸಿಕೊಂಡಿತು. ಪ್ರಜಾಪ್ರಭುತ್ವದ ಮೂಲ ಆಶಯವನ್ನು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಾಗದ ಮಟ್ಟಿಗೆ ಬಿಜೆಪಿ ಜನರ ಯೋಚನಾ ಕ್ರಮವನ್ನು ಬದಲಾಯಿಸಿತು. ಆ ಲಾಭವನ್ನು ರಾಜಕೀಯವಾಗಿ ಯಶಸ್ವಿಯಾಗಿ ಬಳಸಿಕೊಂಡಿತು. ಹಾಗಾಗಿಯೇ ಕಾಂಗ್ರೆಸ್‌ಗೆ ಎಂಥದ್ದೇ ‘ಜೋಡೋ’ ಅಭಿಯಾನ ಮಾಡಿದರೂ ಜನರನ್ನು ತನ್ನತ್ತ ಸೆಳೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಇವತ್ತು ಜನರನ್ನು ವ್ಯಕ್ತಿ ಪ್ರತಿಷ್ಠೆಯನ್ನು ಪೋಷಿಸುವ ರಾಜಕೀಯ ಮನಸ್ಥಿತಿಯಿಂದ ಜನರನ್ನು ಹೊರತಂದು ತತ್ವನಿಷ್ಠೆಯನ್ನು ಮೆಚ್ಚಿಸುವಂತೆ ಮಾಡಬೇಕಾಗಿದೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಪಕ್ಷಗಳ ಎಲ್ಲಾ ನಿಷ್ಠೆಗಳಿಗೂ ಇದೇ ಮೂಲವಾಗಬೇಕಿದೆ.
ಕಾಂಗ್ರೆಸ್ ಬಗ್ಗೆ ಇಷ್ಟೆಲ್ಲಾ ಆತಂಕ ಯಾಕೆ ಕೇಳಿದರೇ, ಭಾರತದಂತಹ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಂದು ಪ್ರಬಲವಾದ ವಿರೋಧ ಪಕ್ಷ ಬೇಕಾಗಿದೆ. ಕಾಂಗ್ರೆಸ್ ಹೊರತಾಗಿ ಇರುವ ಇತರೆ ಪ್ರತಿಪಕ್ಷಗಳು ರಾಜಕೀಯ ಪ್ರಾದೇಶಿಕ ಪಕ್ಷಗಳಾಗಿ ಉಳಿದುಕೊಂಡಿರುವ ಕಾರಣದಿಂದಾಗಿ ದೇಶ ಮಟ್ಟದಲ್ಲಿ ವ್ಯಕ್ತಿ ಭಜಕ ಕೂಟದ ಎದುರಾಳಿಯಾಗಿ ಒಂದು ತತ್ವ ಭಜಕ ಕೂಟ ಗಟ್ಟಿಯಾಗಿ ಅಸ್ತಿತ್ವ ಕಂಡುಕೊಳ್ಳಬೇಕಾಗಿದೆ. ಸದ್ಯದ ಮಟ್ಟಿಗೆ ಭಾರತದಲ್ಲಿ ಆ ಸ್ಥಾನವನ್ನು ಅಲಂಕರಿಸುವುದಕ್ಕೆ ಸಾಧ್ಯವಿದ್ದರೇ ಅದು ಕಾಂಗ್ರೆಸ್‌ಗೆ ಮಾತ್ರ. ಗೆಲ್ಲುವ ಮೊದಲು ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿರುವುದು ಅಗತ್ಯವಿದೆ. ಸೈದ್ಧಾಂತಕ ಸ್ಪಷ್ಟತೆಯ ಬಗ್ಗೆ ಹೆಚ್ಚು ಗಮನ ನೀಡಬೇಕಾದ ತುರ್ತಿದೆ. ಕ್ಷಿಪ್ರ ಬದಲಾವಣೆ ಬಯಸುವುದಕ್ಕೆ ಮುಂದಾಗದೇ ಕಾಂಗ್ರೆಸ್ ಈಗ ಸುದೀರ್ಘವಾದ ರಾಜಕೀಯ ಶ್ರಮಪಡಬೇಕಾಗಿದೆ. ಕಳೆದೆಂಟು ವರ್ಷಗಳಲ್ಲಿ ಉಂಟಾದ ಸಮಸ್ಯೆಗಳಿಂದ ಮೋದಿ ಅಥವಾ ಬಿಜೆಪಿ ಮೇಲಿನ ಜನರ ಮನಸ್ಥಿತಿ ಸಂಪೂರ್ಣ ಬದಲಾಗಿದೆ ಎಂದು ತಿಳಿದುಕೊಂಡಿದ್ದರೇ ಅದು ಕಾಂಗ್ರೆಸ್‌ನ ಶತ ಮೂರ್ಖತನವೇ ಸರಿ. ಕಳೆದ ಎಂಟ್ಹತ್ತು ವರ್ಷಗಳಲ್ಲಿ ಕಳೆದುಕೊಂಡದ್ದೆಲ್ಲವನ್ನು ಮರಳಿ ಹಿಂಪಡೆಯುವುದು ಕಾಂಗ್ರೆಸ್‌ಗೆ ಅಷ್ಟೊಂದು ಸುಲಭವಿಲ್ಲ. ಅದಕ್ಕೆ ಒಂದು ಚುನಾವಣೆಗೆ ಆಗುವಷ್ಟೇ ಪೂರ್ವ ತಯಾರಿ ಮಾಡಿದರೇ ಸಾಲದು, ತತ್‌ಕ್ಷಣದ ಬದಲಾವಣೆ ಬಯಸುವುದಕ್ಕಿಂತ ಕಾಂಗ್ರೆಸ್ ತನ್ನನ್ನು ತಾನು ವಿಮರ್ಶಿಸಿಕೊಂಡು ಪಕ್ಷಕ್ಕೆ ಈ ಕಾಲಮಾನಕ್ಕೆ ಸೂಕ್ತವಾದ ತಾತ್ವಿಕ ನೆಲೆ ಕಟ್ಟಿ ಬೆಳೆಸದೇ ಇದ್ದರೇ ಕಾಂಗ್ರೆಸ್ ಮತ್ತೊಂದು ದೊಡ್ಡ ಬವಣೆ ಎದುರಿಸಲೇ ಬೇಕು.
ಸ್ವಾತಂತ್ರ್ಯೊತ್ತರ ಭಾರತದಲ್ಲಿ ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಹೇಗೆ ಈ ದೇಶದಲ್ಲಿ ಅಭೇದ್ಯ ಕೋಟೆಯಂತೆ ಆಡಳಿತ ನಡೆಸಿತ್ತೋ, ಅದೇ ರೀತಿಯಲ್ಲಿ ಬಿಜೆಪಿ ಇನ್ಮುಂದೆ ದೇಶದಲ್ಲಿ ಆಡಳಿತ ನಡೆಸಲಿದೆ ಎಂಬ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, ಕಾಂಗ್ರೆಸ್‌ಗೆ ಆತಂಕ ಎದುರಾಗಿದೆ. ಬಿಜೆಪಿಗೆ ತನ್ನ ರಾಜಕೀಯ ತಂತ್ರಗಾರಿಕೆಯ ಬಗ್ಗೆ ಆಳವಾದ ಮತ್ತು ಗಂಭೀರವಾದಂತಹ ಸ್ಪಷ್ಟತೆ ಇದೆ. ಒಡೆದು ಆಳುವ ನೀತಿಯನ್ನು ಪಾಲಿಸುತ್ತಿರುವ ಬಿಜೆಪಿ ಈಗೊಂದು ಹೊಸ ತಂತ್ರಗಾರಿಕೆ ಆರಂಭಿಸಿದೆ. ಅಧಿಕಾರ ಇಲ್ಲದ ರಾಜ್ಯಗಳಲ್ಲಿ ಅಧಿಕಾರ ಒಡೆಯುವ ನಾಯಕನಿಗೆ ಕೋಟಿ ಕೋಟಿ ಆಫರ್, ಪಕ್ಷದ ಪ್ರಧಾನ ಹುದ್ದೆಯ ಆಮಿಷ ಒಡ್ಡಿ ಅಧಿಕಾರಕ್ಕೇರಿದ ತಂತ್ರಗಾರಿಕೆ ಮಹಾರಾಷ್ಟçದಲ್ಲಿ ಯಶಸ್ಸು ಕಂಡಿರುವ ಉದಾಹರಣೆ ನಿಮ್ಮ ಮುಂದೆಯೇ ಇದೆ. ಇದಕ್ಕೆ ಬೇಕಾದ ಪರಿಹಾರವನ್ನು ಕಂಡುಕೊಳ್ಳದೇ ಇದ್ದರೇ ನಿಜಕ್ಕೂ ಕಾಂಗ್ರೆಸ್‌ನ ಅಸ್ತಿತ್ವಕ್ಕೆ ನಿಶ್ಚಿತವಾಗಿ ಅಪಾಯವಿದೆ.
ಕಾಂಗ್ರೆಸ್‌ನಲ್ಲಿನ ಒಂದೊಂದೇ ಕೈ ತಪ್ಪಿ ಹೋಗುತ್ತಿದೆ. ಇದು ಪಕ್ಷ ಮತ್ತು ಶಾಸಕರ, ನಾಯಕರ ನಡುವೆ ಸಮನ್ವಯ ಇಲ್ಲ ಎಂದೇ ತೋರಿಸುತ್ತಿದೆ. ಆಡಳಿತ ಪಕ್ಷ ಒಂದಿಷ್ಟು ವಿವಾದಗಳನ್ನು, ಸಮಸ್ಯೆಗಳನ್ನು, ಆಡಳಿತದ ಮೇಲಿನ ಜನರ ಅಸಮಾಧಾನವನ್ನು ಎದುರಿಸುತ್ತಿದ್ದರೂ ಕೂಡ ಪ್ರಬಲವಾದ ವಿರೋಧ ಪಕ್ಷ ಇಲ್ಲದೇ ಇರುವ ಕಾರಣದಿಂದಾಗಿ ಅದು ಚುನಾವಣೆಯ ಮೇಲೆ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಮರ್ಮಾಘಾತ ಮಾಡುತ್ತದೆ ಎಂದು ಕಾಣಿಸುತ್ತಿಲ್ಲ. ಯಾಕೆಂದರೇ, ಅಷ್ಟು ಸುಲಭದಲ್ಲಿ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಾರದೇ ಇರುವ ಹಾಗೆ ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ತಂತ್ರಗಾರಿಕೆ ಹೆಣೆದಿದೆ. ಹೀಗೆ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಕಾಂಗ್ರೆಸ್‌ನ ಪರಮ ಗುರಿ ಬರುವ ಚುನಾವಣೆಗಷ್ಟೇ ಇರಬಾರದು. ಮಿಗಿಲಾಗಿ ಭವ್ಯ ಭವಿಷ್ಯದಲ್ಲಿ ತನ್ನ ಹಳೆ ಖದರ್ ಮತ್ತೆ ಮರಳಿ ಪಡೆಯುವಂತೆ ಕಾರ್ಯತಂತ್ರ ಮಾಡಬೇಕಿದೆ. ಇನ್ನು, ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನೂ ಕೂಡ ರಾಜಕೀಯ ತಲ್ಲಣಗಳ ಬಗ್ಗೆ ಆತಂಕ ವ್ಯಕ್ತ ಪಡಿಸಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಬ್ಬ ನಿಜವಾದ ನಾಗರಿಕ ಎಂದೆನ್ನಿಸಿಕೊಳ್ಳಬೇಕೆಂದರೇ, ಆತ ಒಂದೇ ಪಕ್ಷದ ರಾಜಕಾರಣವನ್ನು ಓಲೈಸಬಾರದು. ಆತನಿಗೆ ವಿರೋಧ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವುದರ ಬಗ್ಗೆಯೂ ಆತಂಕವಿರಬೇಕು. ಪ್ರಜಾತಂತ್ರದ ಮೂಲ ಆಶಯವನ್ನು ಕಿತ್ತೊಗೆಯುವ ಅಪಾಯಕಾರಿ ಪ್ರವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜಕೀಯ ಕುತಂತ್ರದ ಶಕ್ತಿಯ ವಿರುದ್ಧ ಪ್ರಶ್ನೆ ಕೇಳುವ ಮನೋಧೋರಣೆ ಇಲ್ಲದ ವ್ಯಕ್ತಿ ಒಬ್ಬ ಉತ್ತಮ ನಾಗರಿಕನಾಗಲಾರ. ಪ್ರಜಾತಂತ್ರದಲ್ಲಿ ಬಲಿಷ್ಠ ಒಂದು ವಿರೋಧ ಪಕ್ಷವಿಲ್ಲ ಎನ್ನುವ ಆತಂಕ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇರಬೇಕು. ಪ್ರಾದೇಶಿಕ ಪಕ್ಷಗಳ ಮೈತ್ರಿಯಾಗಿ ವಿರೋಧ ಪಕ್ಷಗಳಾಗುವುದು ಪ್ರಜಾತಂತ್ರಕ್ಕೆ ಯೋಗ್ಯವಾದುದ್ದಲ್ಲ, ಮತ್ತೆ ಅದು ರಾಜಕೀಯದಲ್ಲಿ ಒಳ್ಳೆಯ ಬೆಳವಣಿಗೆಯೂ ಅಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಬಲ ಪ್ರತಿಪಕ್ಷದ ಪಾತ್ರ ಬಹಳ ಮುಖ್ಯ.
ಸಮರ್ಥ ನಾಯಕತ್ವದ ವಿಚಾರದಲ್ಲಿ ಬಳಲುತ್ತಿರುವ ಅಪ್ಪ ಅಮ್ಮನಿಲ್ಲದಂತಿರುವ ಕಾಂಗ್ರೆಸ್ ಇತಿಹಾಸದಲ್ಲಿ ಹಿಂದೆಂದೂ ಇಷ್ಟೊಂದು ಅತಂತ್ರ ಸ್ಥಿತಿಗೆ ಬಂದು ತಲುಪಿಲ್ಲ ಎನ್ನುವುದು ಸತ್ಯ. ಈ ದೇಶದಲ್ಲಿ ಒಂದು ಪ್ರಬಲವಾದ ವಿರೋಧ ಪಕ್ಷವಿಲ್ಲವಾದರೇ, ಈ ಪ್ರಜಾಪ್ರಭುತ್ವದ ಭವಿಷ್ಯ ಏನು..? ರಾಜಕೀಯ ಅರಾಜಕತೆ ಸೃಷ್ಟಿಗೆ ಈ ದೇಶ ಅವಕಾಶ ಕೊಡಬಾರದು. ನಾಲ್ಕು ದಶಕಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್‌ನಂತಹ ಪಕ್ಷ ಈ ದೇಶದ ಜನರಿಗೆ ಬೇಡವಾಗಿದೆ ಎಂಬ ಪರಿಸ್ಥಿತಿ ಎದುರಾಗಿದ್ದು, ಅದೇ ಪಕ್ಷದ ಬೌದ್ಧಿಕ ತಂತ್ರಗಾರಿಕೆಯ ಕೊರತೆಯಿಂದಾಗಿಯೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಒಮ್ಮೊಮ್ಮೆ ವಿರೋಧ ಪಕ್ಷ ಈ ಪ್ರಜಾತಂತ್ರದಲ್ಲಿ ಇಲ್ಲದಂತಾಗಿ ಎಲ್ಲಾ ತಲೆಬುಡವಾಗಿ ಹೊಸತನದ ರಾಜಕೀಯ ಸಮೃದ್ಧವಾಗಿ ಬೆಳೆಯುವುದಕ್ಕೆ ಹೇರಳ ಅವಕಾಶವನ್ನು ಜನರೇ ಒದಗಿಸುವುದು ಕೂಡ ಸೂಕ್ತವೆನ್ನಿಸಿದರೂ ಅದು ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸೂಕ್ತವಲ್ಲ. ಪ್ರಜಾಪ್ರಭುತ್ವ ರಾಜಕೀಯ ಅಸ್ಥಿರತೆಯನ್ನು ಒಪ್ಪುವುದಿಲ್ಲ. ಪ್ರಜಾತಂತ್ರದ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗುವುದಕ್ಕೆ ಸಮರ್ಥವಾದ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷವೂ ಮುಖ್ಯ. ಇವೆರಡರಲ್ಲಿ ಯಾವುದಾದರೂ ಒಂದು ಅಸಮರ್ಥತೆಯ ಪಟ್ಟ ಧರಿಸಿದರೂ ಈ ಪ್ರಜಾತಂತ್ರದ ಮೂಲ ಆಶಯ ಕೆಟ್ಟು ಹೋಗಿ ಅಪಾಯವನ್ನು ಎದುರಿಸುವುದರಲ್ಲಿ ಸಂಶಯವಿಲ್ಲ. ಪ್ರಬಲವಾದ ಬಿಜೆಪಿಗೆ ಎದುರಾಳಿಯಾಗಿ ಪ್ರಬಲವಾದ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಮೊದಲು ಇರಬೇಕು. ಆಮೇಲೆ ಚುನಾವಣೆ, ಸೋಲು, ಗೆಲುವು, ಅಧಿಕಾರ ಮತ್ತೊಂದು ಮಗದೊಂದು. ಕಾಂಗ್ರೆಸ್ ಎಂದರೇ ಅಸ್ಥಿರತೆ ಎಂಬ ಪಟ್ಟವನ್ನು ಮೊದಲು ಕಳಚಿಕೊಳ್ಳಬೇಕಾಗಿದೆ.
ಇನ್ನು, ರಾಜಕೀಯದಲ್ಲಿ ಅಸ್ಥಿರತೆ ಆಡಳಿತ ಪಕ್ಷದಲ್ಲಾಗಲಿ ಅಥವಾ ವಿರೋಧ ಪಕ್ಷದಲ್ಲಾಗಲಿ ಸೃಷ್ಟಿಯಾದರೇ ಅದು ಪ್ರಜಾಪ್ರಭುತ್ವಕ್ಕೆ ಹಿತವಲ್ಲ. ಪ್ರಜಾಪ್ರಭುತ್ವದಲ್ಲಿ ಅದು ಒಳ್ಳೆಯ ಬೆಳವಣಿಗೆಯೂ ಅಲ್ಲ. ಕಾಂಗ್ರೆಸ್‌ನಂತಹ ಪಕ್ಷ ಪ್ರಜಾಪ್ರಭುತ್ವದಲ್ಲಿ ಅಸ್ಥಿರತೆಗೆ ಕಾರಣವಾಗಬಾರದು. ಅಸ್ಥಿರತೆ ಅವಕಾಶ ಮಾಡಿಕೊಟ್ಟರೇ ಬಹುಶಃ ಕಾಂಗ್ರೆಸ್ ಎದುರಿಸಬೇಕಾದ ಪರಿಣಾಮವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಕಾಂಗ್ರೆಸ್ ನಿಜಕ್ಕೂ ಈಗ ಪುನಶ್ಚೇತನಕ್ಕೆ ಸಂಕಲ್ಪ ಮಾಡಬೇಕಿದೆ. ಪಕ್ಷದೊಳಗೆ ಸ್ಥಿರತೆ ಕಾಪಾಡಿಕೊಳ್ಳುವುದಕ್ಕೆ ಪ್ರಬಲ ರಾಜಕೀಯ ಹೋರಾಟವಷ್ಟೇ ಸಾಲದು, ಪಕ್ಷ ಬೂತ್ ಮಟ್ಟದಿಂದಲೇ ಪ್ರಬಲವಾಗಬೇಕು, ಪಕ್ಷದ ವರ್ಚಸ್ಸು ವೃದ್ಧಿಸಿಕೊಳ್ಳಲು ಬೇಕಾದ ಎಲ್ಲಾ ರಾಜಕೀಯ ತಂತ್ರಗಾರಿಕೆ ಮಾಡುವುದರೊಂದಿಗೆ ಆಡಳಿತ ವೈಫಲ್ಯವನ್ನು ಪ್ರಬಲ ವಿರೋಧ ಪಕ್ಷವಾಗಿ ಜನರಿಗೆ ಮನದಟ್ಟು ಮಾಡಿಕೊಡಬೇಕು. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಹೇಳಹೆಸರಿಲ್ಲದ ಸ್ಥಿತಿಯಿಂದ ಹೊರಬರಬೇಕಿರುವುದು ಕಾಂಗ್ರೆಸ್‌ಗೆ ತುರ್ತಿದೆ.
-ಶ್ರೀರಾಜ್ ವಕ್ವಾಡಿ

No comments:
Post a Comment