೨೦೦೬ರ ರಾಜಕೀಯ ಕ್ರಾಂತಿ ಪುನರಾವರ್ತನೆ | ಎಲೆಕ್ಶನ್ ಎಕ್ಸ್ ಪರ್ಟ್ ನ ಆಯ್ಕೆಗೆ ಕಾರಣವೇನು.?
ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್‌ವೈ ಅವರನ್ನು ಹೈಮಾಂಡ್ ಕೆಳಗಿಳಿಸಿರುವುದು, ಕರ್ನಾಟಕ ಬಿಜೆಪಿ ಸರ್ಕಾರದ ಇತ್ತೀಚೆಗಿನ ಬೆಳವಣಿಗೆಯ ಬಗ್ಗೆ ಹಿಂದೂ ಸಂಘಟನೆಗಳ ‘ಕ್ಲಾಸ್’, ಪ್ರತಿಪಕ್ಷಗಳ ಚುನಾವಣಾ ಪ್ರಚಾರದ ರನ್ ವೇಗ, ಮುಂಬರುವ ಚುನಾವಣೆಯಲ್ಲಿ ಹಿನ್ನೆಡೆಯಾಗಬಹುದು ಎಂಬ ಪಕ್ಷದ ಆಂತರಿಕ ಸಮೀಕ್ಷೆ ಬಿಜೆಪಿ ಹೈಕಮಾಂಡ್‌ಗೆ ತಲೆ ಮೇಲೆ ಕೈ ಇಟ್ಟುಕೊಳ್ಳುವ ಹಾಗಾಗಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಬಿಜೆಪಿಯ ಪಾಲಿಗೆ ಭಾಗ್ಯ ವಿಧಾತನಂತಿದ್ದ ಬಿಎಸ್‌ವೈ ಅವರನ್ನೇ ಹೊರಗಿಟ್ಟು ಮುಂಬರುವ ಚುನಾವಣೆಯನ್ನು ಎದುರಿಸುವುದಕ್ಕೆ ಸಾಧ್ಯವಿದೆಯೇ ಎಂಬ ಪ್ರಶ್ನೆ ಬಿಜೆಪಿಯಲ್ಲಿಯೇ ಮೂಡಿದ ಫಲವಾಗಿಯೇ ಅವರನ್ನು ರಾಷ್ಟ್ರೀಯ ಬಿಜೆಪಿಯಲ್ಲಿ ಪರಮ ಶ್ರೇಷ್ಟ ಅಧಿಕಾರ ಹೊಂದಿರುವ ಸಂಸದೀಯ ಮಂಡಳಿಯ ಸದಸ್ಯತ್ವ ಹಾಗೂ ವಿವಿಧ ಚುನಾವಣೆಗಳ ಟಿಕೇಟ್ ಅಂತಿಮಗೊಳಿಸುವ ಕೇಂದ್ರ ಚುನಾವಣಾ ಸಮಿತಿಯ ಸದಸ್ಯತ್ವ ಸ್ಥಾನವನ್ನು ನೀಡಿದೆ ಎಂದು ಕಾಣಿಸುತ್ತಿದೆ.
ರಾಜ್ಯ ಬಿಜೆಪಿ ಪಾಲಿಗೆ ಬಿಎಸ್‌ವೈ ಅವರೇ ಒಂದು ರೀತಿಯಲ್ಲಿ ಹೈಕಮಾಂಡ್ ಆಗಿದ್ದರು. ಅವರೇ ಮುಖ್ಯಮಂತ್ರಿಯಾಗಿದ್ದರು, ಅವರದ್ದೇ ಶಾಸಕರಿದ್ದರು, ಅವರದ್ದೇ ಮಾತು ಹೈಮಾಂಡ್‌ನಲ್ಲಿ ನಡೆಯುತ್ತಿತ್ತು. ಮುಖ್ಯಮಂತ್ರಿ ಸ್ಥಾನದಿಂದ ಇಳಿದಾದ ಮೇಲೂ ಹೈಕಮಾಂಡ್ ಯಡಿಯೂರಪ್ಪರ ಮಾತಿಗೆ ಒತ್ತು ನೀಡಿ ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ್ದು ಎನ್ನುವುದು ಇಲ್ಲಿ ಗಮನಾರ್ಹ. ಸುಮಾರು ಐದು ದಶಕಗಳಿಂದ ರಾಜಕೀಯದೊಂದಿಗೆ ತನ್ನನ್ನು ತೊಡಗಿಸಿಕೊಂಡಿರುವ ಬಿಎಸ್‌ವೈ ರಾಜ್ಯ ರಾಜಕಾರಣವನ್ನು ಸಲೀಸಾಗಿ ಲೆಕ್ಕಾಚಾರ ಹಾಕಬಲ್ಲರು. ಹೋರಾಟ ಹಾಗೂ ಸೋಲೊಪ್ಪದ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಪಾಲಿಗೆ ಮಹತ್ತರವಾದ ಬದಲಾವಣೆ ತಂದುಕೊಟ್ಟವರು. ಹಾಗಾಗಿಯೇ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪ್ರಶ್ನಾತೀತ ನಾಯಕ. ಹಂತ ಹಂತವಾಗಿ ರಾಜಕೀಯವಾಗಿ ಮೇಲೆ ಬಂದ ಯಡಿಯೂರಪ್ಪ ಪಕ್ಷದ ಬಹುತೇಕ ಎಲ್ಲಾ ಪ್ರಮುಖ ಹುದ್ದೆಗಳ ಅಧಿಕಾರವಹಿಸಿ ಅನುಭವ ಪಡೆದವರು. ಇನ್ನು, ಕರ್ನಾಟಕದ ರಾಜಕಾರಣದ ಚುನಾವಣೆಯ ಮಟ್ಟಿಗೆ ನಿರ್ಣಾಯಕ ಸಮುದಾಯ ಎಂದೆ ಹೇಳಿಸಿಕೊಳ್ಳುವ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ. ಹಾಗಾಗಿ ರಾಜಕಾರಣ ಮಾತ್ರವಲ್ಲದೇ, ಲಿಂಗಾಯತ ಸಮುದಾಯದಲ್ಲಿಯೂ ತಮ್ಮದೇ ಆದ ನಾಯಕತ್ವದ ವರ್ಚಸ್ಸನ್ನು ಹೊಂದಿರುವವರು ಯಡಿಯೂರಪ್ಪ. ಯಡಿಯೂರಪ್ಪರಂತಹ ಹಿರಿಯ ರಾಜಕಾರಣಿಯನ್ನು ಪಕ್ಕಕ್ಕಿಟ್ಟು ತಾವು ರಾಜ್ಯದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ ಎಂದರೇ ಅದು ಬಿಜೆಪಿ ಹೈಕಮಾಂಡ್‌ನ ಪೊಳ್ಳು ಶೂರತನವೇ ಸರಿ. ಅದು ಈಗ ಹೈಕಮಾಂಡ್‌ಗೆ ಅರಿವಾದಂತೆ ಕಾಣಿಸುತ್ತಿದ್ದು, ಹಾಗಾಗಿಯೇ ಬಿಎಸ್‌ವೈಗೆ ಹೈಕಮಾಂಡ್‌ನಲ್ಲಿ ‘ಟಾಪ್ ಫೈವ್’ ಸ್ಥಾನಮಾನ ಕೊಟ್ಟಿದ್ದು ಎಂದೇ ರಾಜಕೀಯ ಪಡಸಾಲೆಯಲ್ಲಿ ವಾಖ್ಯಾನವಾಗುತ್ತಿದೆ.
ರಾಜ್ಯದಲ್ಲಿದ್ದ ವರ್ಚಸ್ಸು ರಾಷ್ಟ್ರಮಟ್ಟದಲ್ಲಿ ಬಿಎಸ್‌ವೈಗೆ ಇದೆಯೇ..? : ಬಿಎಸ್‌ವೈ ಅವರ ಸಂಘಟನೆಯ ಹಾದಿ, ಹೋರಾಟದ ದಿನಗಳು, ರಾಜಕಾರಣದ ಹೆಜ್ಜೆಗುರುತು ಕರ್ನಾಟಕ ಬಿಜೆಪಿಯ ಪಾಲಿಗೆ ದೊಡ್ಡ ಇತಿಹಾಸ. ರಾಜ್ಯ ರಾಜಕಾರಣದ ಮಟ್ಟಿಗೂ ಬಿಎಸ್‌ವೈ ಒಬ್ಬ ಹಿರಿಯ, ಪ್ರಭಾವಿ ನಾಯಕ ಎನ್ನುವುದರಲ್ಲಿ ಅನುಮಾನವಿಲ್ಲ. ಕೇಂದ್ರ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯತ್ವ ಹಾಗೂ ಕೇಂದ್ರ ಚುನಾವಣಾ ಸಮಿತಿಯ ಸದಸ್ಯತ್ವವನ್ನು ಬಿಎಸ್‌ವೈಗೆ ಹೈಕಮಾಂಡ್ ನೀಡಿರುವುದು ರಾಜ್ಯದಲ್ಲಿದ್ದ ವರ್ಚಸ್ಸು ರಾಷ್ಟ್ರ ಮಟ್ಟದಲ್ಲಿ ಬಿಎಸ್‌ವೈ ಅವರಿಗೆ ಇದೆಯೇ..? ಅಥವಾ ಇದು ಬಿಎಸ್‌ವೈ ಅವರನ್ನು ಸಮಾಧಾನ ಮಾಡುವುದಕ್ಕಾಗಿ ಹೈಕಮಾಂಡ್ ಮಾಡಿದ ಮಾಸ್ಟರ್ ಪ್ಲ್ಯಾನ್..? ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವ ಕಾರಣದಿಂದಾಗಿ ಲಿಂಗಾಯತ ಮತಗಳು ವಿಮುಖವಾಗುತ್ತವೆ ಎಂಬ ಭಯದಿಂದ ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಳ್ಳುವ ಕಾರಣದಿಂದಾಗಿ ಬಿಎಸ್‌ವೈ ಅವರಿಗೆ ಈ ಹುದ್ದೆ ನಿಡಿದ್ದೆ ..? ಎಂಬ ಪ್ರಶ್ನೆಗಳು ಎಳುವ ಹಾಗೆ ಮಾಡಿದೆ. ಸಾಮಾನ್ಯವಾಗಿ ಈ ಸಮಿತಿಗಳಿಗೆ ಮಾಜಿ ಮುಖ್ಯಮಂತ್ರಿಗಳನ್ನು ಹೈಕಮಾಂಡ್ ಪರಿಗಣನೆ ಮಾಡುವುದು ರೂಢಿ ಇದೆ. ಆದರೇ, ಎಲ್ಲಾ ಮುಖ್ಯಮಂತ್ರಿಗಳನ್ನು ಪರಿಗಣಿಸಿದ ಉದಾಹರಣೆ ಇಲ್ಲ. ಮಾತ್ರವಲ್ಲದೇ ರಾಜಕಾರಣದ ವರ್ಚಸ್ಸಿನ ಆಧಾರದಲ್ಲಿ ಈ ಸಮಿತಿಗಳಿಗೆ ಆಯ್ಕೆ ಮಾಡಲಾಗುತ್ತದೆ. ಪಕ್ಷದ ರಾಷ್ಟ್ರೀಯ ನಿಲುವುಗಳ ಅಂತಿಮ ನಿರ್ಧಾರ, ಚುನಾವಣಾ ತಂತ್ರಗಾರಿಕೆ, ಟಿಕೇಟ್ ಹಂಚಿಕೆಯ ಅಂತಿಮ ನಿರ್ಧಾರ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆ, ಪಕ್ಷಕ್ಕೆ ಸಂಬಂಧಿಸಿದ ಇನ್ನಿತರ ಪ್ರಮುಖ ವಿಷಯಗಳ ಅಂತಿಮ ನಿರ್ಧಾರವನ್ನು ಕೇಂದ್ರ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯ ಮೂಲಕ ತೀರ್ಮಾನ ಮಾಡಲಾಗುತ್ತದೆ. ಒಟ್ಟಿನಲ್ಲಿ ಪಕ್ಷದ ಎಲ್ಲಾ ಚಟುವಟಿಕೆಗಳಿಗೆ ಸಂಸದೀಯ ಮಂಡಳಿಯೇ ‘ಸುಪ್ರೀಂ’. ರಾಷ್ಟ್ರ ರಾಜಕಾರಣದಲ್ಲಿ ಅನುಭವ ಅಥವಾ ಸೂಕ್ಷ್ಮತೆ ಬಿಎಸ್‌ವೈಗೆ ಕಡಿಮೆ. ಇಲ್ಲವೇ ಇಲ್ಲ ಎಂದೇ ಹೇಳಬಹುದು. ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಂಡ ಬಳಿಕ ರಾಜ್ಯದಲ್ಲಿ ಬುಗಿಲೆದ್ದ ಆಕ್ರೋಶ ಹೈಕಮಾಂಡ್‌ಗೆ ಚಿಂತೆಗೀಡು ಮಾಡಿತ್ತು. ಭವಿಷ್ಯದ ಪ್ರಶ್ನೆಯನ್ನೂ ಎಬ್ಬಿಸಿತ್ತು. ಯಡಿಯೂರಪ್ಪ ಅವರ ಹಿಸ್ಟರಿ ಕೂಡ ಹೈಕಮಾಂಡ್‌ಗೆ ಚೆನ್ನಾಗಿಯೇ ಗೊತ್ತಿದೆ. ಅಧಿಕಾರದಿಂದ ಕೆಳಗಿಳಿದ ಮೇಲೂ ಬಿಎಸ್‌ವೈ ಪರೋಕ್ಷವಾಗಿ ತನ್ನ ಪ್ರಭಾವ ತೋರಿಸಿತ್ತಿದ್ದಿದ್ದು ಕೂಡ ಹೈಕಮಾಂಡ್‌ಗೆ ತಲೆ ನೋವಾಗಿ ಪರಿಣಮಿಸಿತ್ತು. ಇದುವರೆಗೆ ಬಹುತೇಕ ಎಲ್ಲಾ ಬಿಎಸ್‌ವೈ ಅವರ ಡಿಮಾಂಡ್‌ಗೆ ದಿವ್ಯ ನಿರ್ಲಕ್ಷ್ಯವನ್ನೇ ಮಾಡುತ್ತಾ ಬಂದ ಹೈಕಮಾಂಡ್ ಏಕಾಏಕಿ ಈ ಸ್ಥಾನಮಾನ ನೀಡಿರುವುದು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಎಂದೇ ಕಾಣಿಸುತ್ತಿದೆ. ಹೇಳಿಕೇಳಿ ಬಿಎಸ್‌ವೈ ಪಕ್ಷ ಸಂಘಟನಾ ಚತುರ.
ಇನ್ನು, ಬಿಎಸ್‌ವೈ ರಾಜ್ಯಪಾಲರ ಹುದ್ದೆಗೆ ಒಲ್ಲೆ ಎಂದಿದ್ದರು, ತಾವು ರಾಜ್ಯ ರಾಜಕಾರಣದಲ್ಲಿಯೇ ಸಕ್ರೀಯವಾಗಿರುವ ಇಂಗಿತವನ್ನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ವ್ಯಕ್ತ ಪಡಿಸಿದ್ದರು. ಯಡಿಯೂರಪ್ಪನವರಿಗೆ ತಮ್ಮ ವ್ಯಾಪ್ತಿಯ ಬಗ್ಗೆ ಸ್ಪಷ್ಟವಾದ ಅರಿವಿದೆ. ಅದು ಹೈಕಮಾಂಡ್‌ಗೂ ತಿಳಿದಿದೆ. ಮಗ ವಿಜಯೇಂದ್ರ ಅವರಿಗೆ ರಾಜಕಾರಣದಲ್ಲಿ ಉನ್ನತ ಹುದ್ದೆಗೆ ಬೇಡಿಕೆ ಇಡುತ್ತಿದ್ದ ಬಿಎಸ್‌ವೈ ಹಾಗೂ ಮುನಿಸಿಕೊಂಡಿದ್ದ ಲಿಂಗಾಯತ ಸಮುದಾಯವನ್ನು ಸಮಾಧಾನ ಮಾಡುವುದಕ್ಕಾಗಿಯೇ ಈ ಸ್ಥಾನಮಾನ ನೀಡಿರುವುದು ಹೊರತು ಬಿಎಸ್‌ವೈಗಿರುವ ರಾಷ್ಟ್ರ ಮಟ್ಟದ ವರ್ಚಸ್ಸಿನಿಂದಲ್ಲ ಎಂದೆನ್ನಿಸುತ್ತಿದೆ. ಸಂಸದೀಯ ಮಂಡಳಿಯಲ್ಲಿ ಇರುವ ಒಟ್ಟು ಹನ್ನೊಂದು ಮಂದಿಯಲ್ಲಿ ಯಡಿಯೂರಪ್ಪನವರೇ ವಯಸ್ಸಿನಲ್ಲಿ ಹಿರಿಯರು. ಅದಕ್ಕಾಗಿಯೇ ಕೇಂದ್ರ ಬಿಜೆಪಿಯ ಟಾಪ್ ಮೋಸ್ಟ್ ನಾಲ್ವರು ನಾಯಕರು ಆದ ಮೇಲೆ ಬಿಎಸ್‌ವೈಗೆ ‘ಟಾಪ್ ಫೈವ್’ ಸ್ಥಾನಮಾನ ಕೊಟ್ಟಿರುವುದು. ಹಾಗೆ ನೋಡುವುದಕ್ಕೆ ಹೋದರೇ ಬಿ ಎಲ್ ಸಂತೋಷ್ ಕುಮಾರ್ ರಾಷ್ಟ್ರ ರಾಜಕಾರಣದಲ್ಲಿ ಯಡಿಯೂರಪ್ಪನವರಿಗಿಂತಲೂ ಹೆಚ್ಚಿನ ಹೋಲ್ಡ್ ಉಳ್ಳವರು. ಹೀಗಿರುವಾಗ ರಾಜ್ಯದ ‘ಎಲೆಕ್ಶನ್ ಎಕ್ಸ್ ಪರ್ಟ್ ’ನ ಮುಂದಿನ ನಡೆ ಹೇಗಿರಲಿದೆ ಎನ್ನುವುದು ಕುತೂಹಲ.
ಅಷ್ಟಕ್ಕೂ ಒಳಗೊಳಗೆ ಬಿ. ಎಲ್. ಸಂತೋಷ್ ಕುಮಾರ್‌ಗೆ ಹಾಗೂ ಯಡಿಯೂರಪ್ಪನವರಿಗೆ ಅಷ್ಟಕ್ಕಷೇ. ಹಳೆ ಮೈಸೂರು ಭಾಗದಲ್ಲಿ ಬಿಎಸ್‌ವೈ ಇಲ್ಲದೆಯೂ ಮುನ್ನಡೆಗೆ ಬರುತ್ತೇವೆ ಎಂದ ಸಂತೋಷ್ ತಂತ್ರಗಾರಿಕೆಯಲ್ಲಿ ಸೋಲು ಕಂಡರು. ತಮ್ಮ ಮಗನಿಗೆ ಆ ಭಾಗದ ಜವಾಬ್ದಾರಿಯನ್ನು ನೀಡುವಂತೆ ಪರೋಕ್ಷವಾಗಿ ಬೇಡಿಕೆ ಇಟ್ಟಿದ್ದರು. ಇವೆಲ್ಲಾ ಒಂದಿಷ್ಟು ಆಂತರಿಕ ಅಸಮಾಧಾನಕ್ಕೆ ಕಾರಣ. ಸಂಸದೀಯ ಮಂಡಳಿಯಲ್ಲಿ ಈವರೆಗೆ ರಾಜ್ಯದ ಮಟ್ಟಿಗೆ ಬಿ ಎಲ್ ಸಂತೋಷ್ ತೀರ್ಮಾನವೇ ಅಂತಿಮವಾಗುತ್ತಿತ್ತು. ಆದರೇ ಇನ್ಮೇಲೆ ಹಾಗಿಲ್ಲ. ಯಡಿಯೂರಪ್ಪ ರಾಜ್ಯ ಚುನಾವಣೆಯ ವಿಚಾರದಲ್ಲಿ ಬಿ ಎಲ್ ಸಂತೋಷ್ ಅವರನ್ನು ಓವರ್‌ಟೇಕ್ ಮಾಡುವುದರಲ್ಲಿ ಅನುಮಾನವೇ ಇಲ್ಲ.
೨೦೦೬ರ ರಾಜಕೀಯ ಕ್ರಾಂತಿ ಪುನರಾವರ್ತನೆ ? : ೨೦೦೪ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತದೆ ಎಂಬ ಹುಮ್ಮಸ್ಸಿನಲ್ಲಿದ್ದ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಜೋಡಿಗೆ ತಣ್ಣೀರೆರೆಚಿದ್ದು ಅಂದಿನ ಫಲಿತಾಂಶ. ಬಿಜೆಪಿ ೭೯ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳುವ ಹಾಗಾಯ್ತು. ಕಾರಣಾಂತರಗಳಿಂದ ಜೆಡಿಎಸ್‌ನೊಂದಿಗೆ ಬಿಜೆಪಿಗೆ ಮೈತ್ರಿ ಸಾಧಿಸುವುದಕ್ಕೆ ಸಾದ್ಯವಾಗಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಧರಂಸಿಂಗ್ ಸಿಎಂ ಆದರು. ಇತ್ತ ಅನಂತ್‌ಕುಮಾರ್ ರಾಷ್ಟ್ರ ರಾಜಕಾರಣದತ್ತ ಮತ್ತೆ ತೆರಳಿದರು. ಸುಮ್ಮನಾಗದ ಬಿಎಸ್‌ವೈ ಎಚ್‌ಡಿಕೆ ಮನವೊಲಿಸಿ ಜೆಡಿಎಸ್ ಜೊತೆಗೆ ೨೦೦೬ರಲ್ಲಿ ದೋಸ್ತಿ ಕುದುರಿಸಿದ್ದರು. ಜೆಡಿಎಸ್‌ನ ೪೦, ಬಿಜೆಪಿಯ ೭೯ ಶಾಸಕರ ಜಂಟಿ ಟ್ವೆಂಟಿ ಟ್ವೆಂಟಿ ಸರ್ಕಾರ ಅಧಿಕಾರಕ್ಕೆ ಬಂತು. ಯಡಿಯೂರಪ್ಪ ನಡೆ ರಾಷ್ಟ್ರೀಯ ಬಿಜೆಪಿಗೆ ಸಂತಸ ಉಂಟು ಮಾಡಿತ್ತು.
ಮುಂಬರುವ ಚುನಾವಣೆಯಲ್ಲಿ ಬಹುಮತ ಸಾಧಿಸುತ್ತೇವೆ ಎಂದ ಬಿಜೆಪಿಗೆ ಈಗ ಒಳಗೊಳಗೆ ಹಿನ್ನೆಡೆ ಆಗುವ ಆತಂಕವಿದೆ. ಯಡಿಯೂರಪ್ಪ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ವಿಶ್ವಾಸವನ್ನು ಕಳೆದುಕೊಳ್ಳಬಾರದು, ಒಂದೇ ಬಹುಮತ ತರುವಲ್ಲಿ ಕೆಲಸ ಮಾಡಬೇಕು, ಇಲ್ಲವಾದಲ್ಲಿ ೨೦೦೬ರ ಪುನರಾವರ್ತನೆಗೆ ಮನಸ್ಸು ಮಾಡಬೇಕು. ಒಟ್ಟಿನಲ್ಲಿ ಒಂದು ವೇಳೆ ಬಿಜೆಪಿಗೆ ಬಹುಮತ ಬಂದಿಲ್ಲವಾದರೇ, ಮತ್ತೆ ಎಚ್‌ಡಿಕೆ ಮನವೊಲಿಸುವುದರತ್ತ ಯಡಿಯೂರಪ್ಪ ಮುಂದಾಗುತ್ತಾರೆಯೇ ಎಂಬ ಪ್ರಶ್ನೆಯೊಂದು ಎದ್ದಿದೆ.
೨೦೦೪ರಲ್ಲಿ ಆದಂತೆ ೨೦೧೮ರಲ್ಲಿಯೂ ಆಯಿತು. ೨ನೇ ಹಾಗೂ ೩ನೇ ಸ್ಥಾನದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತು. ಇನ್ನು ೨೦೦೮ರಲ್ಲಿ ೧೧೦ ಸ್ಥಾನಗಳನ್ನು ಬಿಜೆಪಿ ಪಡೆದಿತ್ತಾದರೂ ಅಧಿಕಾರಕ್ಕೆ ಬರಲಾಗಿರಲಿಲ್ಲ. ಕಾಂಗ್ರೆಸ್-ಜೆಡಿಎಸ್ ಮತ್ತೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಆಪರೇಷನ್ ಕಮಲ ಬಿಎಸ್‌ವೈ ಕೈ ಹಿಡಿಯಿತು. ಪಕ್ಷದೊಳಗಿನ ಆಂತರಿಕ ಕಲಹದಿಂದಾಗಿ ಬಿಎಸ್‌ವೈ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಕೆಜೆಪಿ ಕಟ್ಟಿದರು. ಇದು ೨೦೧೩ರಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಪರೋಕ್ಷ ಕಾರಣವಾಯಿತು. ಮತ್ತೆ ಬಿಎಸ್‌ವೈ ಬಿಜೆಪಿಗೆ ಸೇರಿದರು. ೨೦೧೮ರ ಚುನಾವಣೆಗೆ ಸಜ್ಜಾದರು. ನಿರೀಕ್ಷೆ ಹುಸಿಯಾಯಿತು. ಸೋಲೊಪ್ಪಿಕೊಳ್ಳದ ಬಿಎಸ್‌ವೈ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ೨೮ ಲೋಕಸಭಾ ಕ್ಷೇತ್ರಗಳ ಪೈಕಿ ೨೫ ಸ್ಥಾನಗಳಲ್ಲಿ ಕಮಲ ಅರಳಿಸಿ ಮತ್ತೆ ಭರವಸೆ ಮೂಡಿಸಿದ್ದರು. ಆಮೇಲೆ ಆದದ್ದೆಲ್ಲವೂ ದೊಡ್ಡ ಇತಿಹಾಸ. ಬಿಎಸ್‌ವೈ ಬೇಡಿಕೆಗೆಲ್ಲಾ ಹೈಕಮಾಂಡ್ ಅಸ್ತು ಅಂದು ಬಿಡ್ತು. ತಮ್ಮನ್ನು ನಂಬಿ ಪಕ್ಷಾಂತರವಾಗಿ ಬಂದ ೧೭ ಶಾಸಕರಲ್ಲಿ ೧೫ ಶಾಸಕರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ಹಾಗೆ ಮಾಡಿದರು. ಈ ಮೂಲಕ ಆಪರೇಷನ್ ಚಾಣಾಕ್ಷ್ಯ ಎಂದೇ ಬಿಎಸ್‌ವೈ ಗುರುತಿಸಿಕೊಂಡರು. ಈಗ ದಕ್ಷಿಣ ಭಾರತದಲ್ಲಿ ಒಂದಾದರೂ ರಾಜ್ಯದಲ್ಲಿ ಕಮಲ ಅರಳಿಸಲೇಬೇಕು ಎಂಬ ಹಠ ಬಿಜೆಪಿಗಿದೆ. ಅದಕ್ಕೆ ಯಡಿಯೂರಪ್ಪರ ಅಗತ್ಯ ಬಹಳವಿದೆ. ಬಿಎಸ್‌ವೈ ೨೦೨೩ರ ಚುನಾವಣೆಯಲ್ಲಿ ಅಧಿಕಾರ ತಂದುಕೊಟ್ಟರೇ, ಆಮೇಲೆ ಮುಂದಿನ ಚುನಾವಣೆಗಳಿಗೆ ಹೊಸ ನಾಯಕತ್ವ ತಯಾರಿ ಮಾಡಿಕೊಳ್ಳಬಹುದು ಎನ್ನುವುದು ಹೈಕಮಾಂಡ್ ಲೆಕ್ಕಾಚಾರ. ಇದರ ಫಲವೇ ಬಿಎಸ್‌ವೈ ಪ್ರಮೋಷನ್ ಅಂತನ್ನಿಸುತ್ತಿದೆ.
-ಶ್ರೀರಾಜ್ ವಕ್ವಾಡಿ

No comments:
Post a Comment