ರಾಗಾ ವೈಚಾರಿಕ ಚಿಂತನೆಗೆ ದೇಶ ಒಲಿಯಲಿದೆಯೇ ? | ರಾಜಕೀಯದಲ್ಲಿ ರಾಹುಲ್ ಸೋತಿದ್ದೇಕೆ..?
ರಾಜಕೀಯ ಪಡಸಾಲೆಯ ಆಗು-ಹೋಗುಗಳ ಬಗ್ಗೆ ಸ್ವಲ್ಪವಾದರೂ ಜ್ಞಾನವುಳ್ಳವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಈಗ ಅಸಮರ್ಥ ನಾಯಕ ಎಂದು ಕರೆಯುವುದಕ್ಕೆ ಸಾಧ್ಯವೇ ಇಲ್ಲ. ರಾಹುಲ್ ಗಾಂಧಿ ಸಮರ್ಥರೇ ಹೌದು, ಆದರೇ ಅವರು ಒಬ್ಬ ಈ ಕಾಲದ ರಾಜಕೀಯದ ನತದೃಷ್ಟ ನಾಯಕ. ಅವರು ಈಗಿನ ರಾಜಕೀಯ ವ್ಯವಸ್ಥೆಗೆ ಸಲ್ಲದ ನಾಯಕ ಅಂತೂ ಅಲ್ಲವೇ ಅಲ್ಲ. ಆದರೇ, ಒಂದು ರಾಜಕೀಯ ಶಕ್ತಿ ರಾಹುಲ್ ಗಾಂಧಿಯವರನ್ನು ಈ ಸಮಾಜ ‘ಪಪ್ಪು’, ‘ಅಸಮರ್ಥ’ ಎಂಬಿತ್ಯಾದಿಯಾಗಿ ಗುರುತಿಸುವ ಹಾಗೆ ಮಾಡಿರುವುದು ರಾಹುಲ್ ಗಾಂಧಿಯವರ ದುರ್ವಿಧಿ. ಅದು ಈ ಕಾಲದ ದುರ್ವಿಧಿಯೂ ಹೌದು. ಸತ್ತ ಮೇಲೆ ದೇವರ ಪೀಠ ಹಾಕಿ ಕೂರಿಸಿ ಪೂಜಿಸುವ ಭಾರತವಿದು. ಇದೇ ರಾಹುಲ್ ಗಾಂಧಿ ಅವರನ್ನು ಇಡೀ ದೇಶ ಅರೆಹುಚ್ಚನ ಹಾಗೆ ಕಾಣುವಂತೆ ಮಾಡುವಲ್ಲಿ ಒಂದು ರಾಜಕೀಯ ಶಕ್ತಿಯ ಜೊತೆಗೆ ಮಾಧ್ಯಮಗಳ ಪಾತ್ರವೂ ದೊಡ್ಡದಿದೆ. ಸಾರ್ವಜನಿಕ ಹಿತಾಸಕ್ತಿ ಇಲ್ಲದ, ಈ ದೇಶದ ಶ್ರೀಮಂತ ಕುಟುಂಬವನ್ನು ಮಾತ್ರ ಪೊರೆಯುವ ಒಬ್ಬ ನಾಯಕನನ್ನು ಪೂಜೆ ಮಾಡುವ ಅವಿವೇಕಿತನ ಈ ದೇಶದಲ್ಲಿದೆ ಎಂದಾದರೇ ಅದರಷ್ಟು ಬಡತನ ಈ ದೇಶಕ್ಕೆ ಮತ್ತೊಂದಿಲ್ಲ.
ಪ್ರಧಾನಿ ಮೋದಿಗೆ ಈ ದೇಶದ ಸಮಸ್ಯೆಗಳನ್ನು ಹೋಗಲಾಡಿಸುವ ಪ್ರಾಮಾಣಿಕ ಬಯಕೆ ಇಲ್ಲವೇ ಇಲ್ಲ ಎಂಬ ಮಾತನ್ನು ಗಟ್ಟಿ ಧ್ವನಿಯಲ್ಲಿ ಹೇಳುವ ತಾಕತ್ತು ಯಾರಿಗಾದರೂ ಇದೆ ಈ ದೇಶದಲ್ಲಿ ಎಂದಾದರೇ ಅದು ಈಗಿನ ರಾಜಕೀಯ ಸ್ಥಿತಿಯಲ್ಲಿ ರಾಹುಲ್ ಗಾಂಧಿಗೆ ಮಾತ್ರ. ಕಾಂಗ್ರೆಸ್ ಕುಟುಂಬ ರಾಜಕಾರಣದ ಮಸಿಯಿಂದ ತನ್ನ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿಕೊಂಡಿರಬಹುದು, ಅಥವಾ ಅದರ ವಿರುದ್ಧವಿರುವ ರಾಜಕೀಯ ಶಕ್ತಿ ಈ ವಿಷಯದಲ್ಲಿ ಧಕ್ಕೆ ಉಂಟು ಮಾಡಿರಬಹುದು. ಅದು ಬೇರೆಯದ್ದೇ ವಿಚಾರ. ಆದರೇ, ರಾಹುಲ್ ಗಾಂಧಿ ಅಂತಹ ನಿಖರವಾದ ವೈಚಾರಿಕ ಒಲವು ಉಳ್ಳ ಒಬ್ಬ ನಾಯಕ ಈ ದೇಶಕ್ಕೆ ಬೇಕು ಎನ್ನುವುದರಲ್ಲಿ ಸಂಶಯವೇ ಇಲ್ಲ.
ರಾಹುಲ್ ಗಾಂಧಿ ರಾಜಕೀಯ ತಂತ್ರಗಾರಿಕೆಯಲ್ಲಿ ಸೋತಿರಬಹುದು, ಪಕ್ಷದ ಒಳಗೆಯೇ ವಿಶ್ವಾಸ ಕಳೆದುಕೊಂಡಿರಬಹುದು, ಪಕ್ಷದ ಅಧ್ಯಕ್ಷನಾಗಿದ್ದಾಗ ಪಕ್ಷವನ್ನು ಮುನ್ನೆಡೆಸುವಲ್ಲಿ ಎಡವಿರಬಹುದು, ಹಾಗೆಂದ ಮಾತ್ರಕ್ಕೆ ರಾಹುಲ್‌ಗೆ ಈ ದೇಶದ ಸ್ವಾಸ್ಥ್ಯದ ಬಗ್ಗೆ ಕನಸು ಇಲ್ಲವೆಂದಲ್ಲ, ಸಾಮಾಜಿಕ ಹಾಗೂ ರಾಜಕೀಯ ಸುಸ್ಥಿರ ಸ್ಥಿತಿ ಕಾಪಾಡಿಕೊಳ್ಳುವ ಆಸೆ ಇಲ್ಲವೆಂದಲ್ಲ. ಆದರೇ ಅವೆಲ್ಲವನ್ನು ಕಾರ್ಯರೂಪಕ್ಕೆ ತರುವಲ್ಲಿ ಬೇಕಾದ ಸಮರ್ಥ ಬೆಂಬಲ ಅವರಿಗಿಲ್ಲ.
೨೦೧೪ ರಲ್ಲಿ ದೇಶದಾದ್ಯಂತ ಮುನ್ನೆಲೆಗೆ ಬಂದ ಕಾಂಗ್ರೆಸ್ ವಿರೋಧಿ ಅಲೆಯ ಕಾರಣದಿಂದಾಗಿ ಕಾಂಗ್ರೆಸ್ ಅಧಿಕಾರದಿಂದ ಕೆಳಕ್ಕೆ ಉದುರಿತು. ಗುಜರಾತ್‌ನ ಹಾಳಾದ ಗೋಡೆಗೆ ಚೆಂದದ ಬಣ್ಣ ಹಚ್ಚಿ, ಇದೇ ‘ದೇಶದ ಪರಮೋಚ್ಛ ಸೋ ಕಾಲ್ಡ್ ಅಭಿವೃದ್ಧಿ’ ಎಂದು ಬಿಂಬಿಸುವುದರೊಂದಿಗೆ ‘ಅಚ್ಛೆ ದಿನ್ ಆನೆ ವಾಲಾ ಹೇ’ ಎಂಬ ಹಸಿ ಹಸಿ ಸುಳ್ಳು ಘೋಷಣೆ ಮಾಡಿ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟಿಸಿ ಅಧಿಕಾರಕ್ಕೆ ಬಂದ ಮೋದಿ ಇಡೀ ದೇಶದ ಜನರಿಗೆ ಎರಡೇ ವರ್ಷಗಳಲ್ಲಿ ಭ್ರಮ ನಿರಸನಗೊಳಿಸಿದರು. ದೇಶದ ಜನರು ಭ್ರಮ ನಿರಸನಕ್ಕೆ ಒಳಗಾಗದಂತೆ ಬಹು ಚರ್ಚಿತ ಮಣ್ಣಂಗಟ್ಟಿ ‘ಗುಜರಾತ್ ಮಾದರಿ’ ಅಭಿವೃದ್ಧಿಯನ್ನು ಒರಗೆ ಹಚ್ಚಲಾಯಿತು, ಅದಕ್ಕೆ ಆಡಳಿತ ಪಕ್ಷದ ಕೃಪಾಪೋಷಿತ ಕೆಲವು ಮಾಧ್ಯಮಗಳು ಸಾಥ್ ನೀಡಿದವು. ಹಾಗೆ ನೋಡುವುದಕ್ಕೆ ಹೋದರೇ ಗುಜರಾತ್‌ನಲ್ಲಿ ಕೈಗಾರಿಕಾ ಪ್ರಗತಿ ೧೯೯೫ರಿಂದಲೇ ಪ್ರಗತಿಯಲ್ಲಿತ್ತು. ಇನ್ನು, ಗುಜರಾತ್‌ನಲ್ಲಿ ಮೋದಿ ಅಧಿಕಾರವಧಿಯಲ್ಲಿ, ಕೈಗಾರಿಕೋದ್ಯಮಗಳಿಗೆ ಒಂದಿಷ್ಟು ಅಭಿವೃದ್ಧಿಯ ಹೆಸರಿನಲ್ಲಿ ಹೊಸ ಬಣ್ಣ ಹಚ್ಚಲಾಗಿದೆ ಹೊರತಾಗಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆಯೇ ಉಳಿದಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಮಾಧ್ಯಮಗಳ ಕ್ಯಾಮರಾಗಳಿಗೆ ಅಲ್ಲಿನ ಹುಳುಕುಗಳು ಕಾಣಿಸಲೇ ಇಲ್ಲ. ‘ಸಿಟಿ ಅಭಿವೃದ್ಧಿಯನ್ನೇ’ ಇಡೀ ಗುಜರಾತ್‌ನ ಅಭಿವೃದ್ಧಿ ಎಂದು ಬಿಂಬಿಸುವಲ್ಲಿ ಮಾಧ್ಯಮಗಳು ಯಶಸ್ವಿಯಾದವು. ಸದ್ಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಇದೇ ಮೋದಿ ನೇತೃತ್ವದ ಸರ್ಕಾರಾವಧಿಯಲ್ಲಿ ಈ ವರ್ಷ ಜಗತ್ತಿನ ಒಟ್ಟು ೧೯೧ ದೇಶಗಳ ಪೈಕಿ ಭಾರತ ೧೩೨ನೇ ಸ್ಥಾನದಲ್ಲಿದೆ, ಎನ್ನುವಲ್ಲಿಗೆ ಎಲ್ಲವನ್ನೂ ಇಲ್ಲಿಯೇ ಅಳೆಯಬಹುದಾಗಿದೆ. ಮೋದಿ ಒಬ್ಬ ಜಾಣ ನಡೆಯ ರಾಜಕಾರಣಿ, ತಾನು ಮಾಡಿದ ಸಣ್ಣ ಸಣ್ಣ ಬಣ್ಣ ಹಚ್ಚುವ ಕೆಲಸವನ್ನೂ ಇಡೀ ದೇಶಕ್ಕೆ ಗೊತ್ತಾಗುವ ಹಾಗೆ ವೈಭವೀಕರಿಸಿಕೊಂಡ ನಾಯಕ. ರಾಹುಲ್ ಈ ವಿಚಾರದಲ್ಲಿ ನಿಜಕ್ಕೂ ಹಿಂದೆ ಉಳಿದರು. ಇನ್ನು, ಮೋದಿಗಿದ್ದ ಒಲವು ಜನರಲ್ಲಿ ಮೊದಲಿನಂತೆಯೇ ಈಗಲೂ ಇದೆಯೇ ಎಂದರೇ ಖಂಡಿತ ಇಲ್ಲ. ರಾಹುಲ್ ಪರವಾಗಿ ದೇಶದ ಜನರ ಒಲವು ಇದೆಯೇ ಕೇಳಿದರೇ, ಸದ್ಯಕ್ಕಂತೂ ದೊಡ್ಡ ಪ್ರಮಾಣದಲ್ಲಿ ಇಲ್ಲ. ಆದರೇ, ದೇಶದ ಜನರ ಮನಸ್ಥಿತಿ ನಿಧಾನ ಗತಿಯಲ್ಲಿ ಬದಲಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.
ಇನ್ನು, ರಾಹುಲ್ ಗಾಂಧಿ ರಾಜಕಾರಣದಲ್ಲಿ ಸೋತಿದ್ದು ಈ ದೇಶದ ಯುವಕರನ್ನು ಕಳೆದುಕೊಂಡಿದ್ದರಿಂದಲೇ ಹೊರತು ಮತ್ಯಾವುದರಿಂದಲೂ ಅಲ್ಲ. ೨೦೧೪ಕ್ಕಿಂತಲೂ ಹಿಂದೆ ರಾಹುಲ್ ಗಾಂಧಿಯ ಜೊತೆಗಿದ್ದ ಈ ದೇಶದ ಬಹುದೊಡ್ಡ ಆಸ್ತಿ ಯುವ ಸಮುದಾಯವನ್ನೇ ಬಿಜೆಪಿ ರಾಜಕೀಯಕ್ಕೋಸ್ಕರ ಟಾರ್ಗೇಟ್ ಮಾಡಿಕೊಂಡಿತ್ತು. ಅದು ರಾಹುಲ್ ಗಾಂಧಿಗೆ ಗೊತ್ತೇ ಆಗಿಲ್ಲ. ವೈಚಾರಿಕ ನೆಲೆಯಲ್ಲಿ ಇಡೀ ದೇಶದ ಯುವ ಸಮುದಾಯವನ್ನು ಸೆಳೆದುಕೊಂಡಿದ್ದ ರಾಹುಲ್ ಗಾಂಧಿಗೆ, ಕೇವಲ ಒಂದೇ ಒಂದು ಧಾರ್ಮಿಕ ವಿಚಾರದ ಮೂಲಕ ಏಕಾಏಕಿಯಾಗಿ ಬಿಜೆಪಿ ತನ್ನತ್ತ ಧಿಡೀರ್ ಎಂದು ಯುವ ಸಮುದಾಯವನ್ನು ಸೆಳೆದುಕೊಳ್ಳುತ್ತದೆ ಎಂಬುವುದು ಊಹೆಗೂ ಸಿಕ್ಕಿರಲಿಲ್ಲ. ಇಡೀ ದೇಶದ ಯುವ ಸಮುದಾಯ ಉದ್ಯೋಗ, ಭವಿಷ್ಯ, ಸಮಗ್ರತೆಗಿಂತಲೂ ಮಿಗಿಲಾಗಿ ಧಾರ್ಮಿಕ ವಿಚಾರವೇ ಹೆಚ್ಚು ಎಂದು ಹೇಳುವಷ್ಟರ ಮಟ್ಟಿಗೆ ಬಿಜೆಪಿ ಈ ದೇಶದ ಯುವ ಸಮುದಾಯವನ್ನು ಮೈಂಡ್ ವಾಷ್ ಮಾಡಿ ಬಿಟ್ಟಿತು. ಟೀಕೆ ಮಾಡುವುದಕ್ಕೆ ಬೇರೆ ಯಾವುದೂ ಇಲ್ಲದೇ ಬಿಜೆಪಿ ರಾಹುಲ್ ವ್ಯಕ್ತಿತ್ವವನ್ನು, ಧರಿಸುವ ಟೀ ಶರ್ಟ್ನ ಬಗ್ಗೆಯೇ ಟೀಕೆ ಮಾಡಿ ಯುವ ಸಮುದಾಯಕ್ಕೆ ಕಂಪ್ಯೂಟಿಂಗ್ ಮಾಡಿದ ಕಾರಣದಿಂದಾಗಿ, ತಮ್ಮ ಬೆಂಬಲಕ್ಕೆ ಪ್ರಾಮಾಣಿಕವಾಗಿ ನಿಂತಿದ್ದ ರಾಹುಲ್ ಗಾಂಧಿ ವಿರುದ್ಧವೇ ತಿರುಗಿ ಬೀಳುವಷ್ಟರ ಮಟ್ಟಿಗೆ ಯುವ ಸಮುದಾಯವನ್ನು ಬಿಜೆಪಿ ಬಳಸಿಕೊಂಡಿತ್ತು. ಯುವ ಸಮುದಾಯವನ್ನು ಇಡೀ ದೇಶದಾದ್ಯಂತ ಕಾಡುತ್ತಿರುವ ನಿರುದ್ಯೋಗದಂತಹ ಸಮಸ್ಯೆಗಳಿರುವಾಗಲೂ, ಯುವ ಸಮುದಾಯ ಈ ಧಾರ್ಮಿಕ ವಿಚಾರಕ್ಕೆ ಬಲಿಯಾಗಿ ಇರುವಂತೆ ಬಿಜೆಪಿ ಮಾಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಅಸಮರ್ಥವಿರಬಹುದು, ಆದರೇ, ರಾಹುಲ್ ಗಾಂಧಿ ಅಸಮರ್ಥ ನಾಯಕ ಅಲ್ಲ. ಕಾಂಗ್ರೆಸ್ ಬಗ್ಗೆ ಈ ದೇಶದಲ್ಲಿ ಸದ್ಯಕ್ಕೆ ಅಷ್ಟೊಂದು ಒಳ್ಳೆಯ ಅಭಿಪ್ರಾಯ ಇಲ್ಲ ಯಾಕೆಂದರೇ, ಕಾಂಗ್ರೆಸ್‌ನಲ್ಲಿಲ್ಲದ ಸಿದ್ಧಾಂತದ ಸ್ಪಷ್ಟತೆ. ಜನತಂತ್ರದ ಕೊರಳು ಹಿಸುಕುವುದಕ್ಕೆ ಮುಂದಾಗುತ್ತಿರುವ ರಾಜಕೀಯ ಶಕ್ತಿಯೊಂದರ ವಿರುದ್ಧ ಸೆಟೆದು ನಿಲ್ಲುವ, ಮತ್ತು ಅದನ್ನು ತಪ್ಪಿಸುವ ಇಚ್ಛೆ ರಾಹುಲ್ ಗಾಂಧಿಗೆ ಇದೆ. ಈ ಎಂಟು ಹತ್ತು ವರ್ಷಗಳಿಂದೀಚೆಗೆ ಬದಲಾಗಬಾರದ ರೀತಿಯಲ್ಲಿ ಬದಲಾದ ರಾಜಕೀಯದ ಬಗ್ಗೆ ಆಳವಾಗಿ ರಾಹುಲ್ ತಿಳಿದುಕೊಂಡಿದ್ದಾರೆ ಎನ್ನುವುದು ಸತ್ಯ. ಅವರ ಇತ್ತೀಚೆಗಿನ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಇದು ಅರಿವಾಗಿರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
ರಾಜಕೀಯ ವಿಶ್ಲೇಷಕರ ಪ್ರಕಾರ, ಸದ್ಯ ರಾಜಕೀಯ ಪಡಸಾಲೆಯಲ್ಲಿ ಆಡಳಿತ ಪಕ್ಷಕ್ಕೆ ರಾಹುಲ್ ಗಾಂಧಿಯವರನ್ನು ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಬಿಟ್ಟರೇ ಬೇರೆ ಯಾವುದೇ ರೀತಿಯಲ್ಲಿ ಟೀಕೆ ಮಾಡುವಂತಹ ವಿಷಯ ಇಲ್ಲವೇ ಇಲ್ಲ. ಇದು ಸತ್ಯ ಕೂಡ. ಈ ಮನಸ್ಥಿತಿವೊಂದರಲ್ಲೇ ಬಿಜೆಪಿ ಇನ್ನೂ ಕೆಲ ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸುತ್ತದೆ ಎಂಬ ಭ್ರಮೆಯಲ್ಲಿ ಇದ್ದರೇ, ಅದರಷ್ಟು ಶತಮೂರ್ಖತನ ಮತ್ತೊಂದಿಲ್ಲ. ಇನ್ನು, ರಾಹುಲ್‌ರ ಚಿಂತನೆಯಿಂದ ಈ ದೇಶ ಏಕಾಏಕಿಯಾಗಿ ಊಹಿಸಲಾರದಷ್ಟರ ಮಟ್ಟಿಗೆ ಬದಲಾಗಿ, ಮಹತ್ತರವಾದ ಎತ್ತರಕ್ಕೆ ಸಮಗ್ರತೆಯ ಚಿಂತನೆಯಲ್ಲಿ ಮುನ್ನಡೆಯಲಿದೆಯೇ ಎಂದು ಕೇಳಿದರೇ, ಅದು ಕೂಡ ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲ. ರಾಹುಲ್ ಅವರಲ್ಲಿ ಇರುವ ಉದ್ದೇಶವನ್ನು ತಮ್ಮ ಪಕ್ಷ ಹಾಗೂ ಈ ದೇಶದ ಜನರಿಗೆ ತಲುಪಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ.
ಒಟ್ಟಿನಲ್ಲಿ, ತಂದೆಯಂತೆಯೇ ತಾತ್ವಿಕ ನೆಲೆಗಟ್ಟಿನಲ್ಲಿ, ವೈಚಾರಿಕ ಚಿಂತನೆಗಳ ನಡುವೆ ನಿಂತು ಈ ದೇಶದ ಭವಿಷ್ಯವನ್ನು ಕಾಣುವುದಕ್ಕೆ ಬಯಸುತ್ತಿರುವ ರಾಹುಲ್ ಗಾಂಧಿ ಅವರ ನಾಳೆಗಳು ಹೇಗಿರಲಿದೆ ಎನ್ನುವುದು ಸದ್ಯದ ಕುತೂಹಲ.
-ಶ್ರೀರಾಜ್ ವಕ್ವಾಡಿ

No comments:
Post a Comment