(ಸಾಂದರ್ಭಿಕ ಚಿತ್ರ)
ಬಿಜೆಪಿಗೆ ಕಂಟಕವಾಗಲಿದೆಯೇ ‘ಕಮಿಷನ್’..? | ಕಮಿಷನ್ ಸುಳಿಯಲ್ಲಿ ಪ್ರಮುಖ ಸಚಿವರು..!?ಈ ದೇಶ ೧೯೪೦ರ ದಶಕದಿಂದ ಇಲ್ಲಿಯ ತನಕ ದೊಡ್ಡ ದೊಡ್ಡ ಹಗರಣಗಳ ಪಟ್ಟಿಯನ್ನೇ ಕಂಡಿದೆ. ರಾಜಕೀಯ, ಹಣಕಾಸು ಹಾಗೂ ಕಾರ್ಪೋರೇಟ್ ಹಗರಣಗಳನ್ನೊಳಗೊಂಡು ಈ ದೇಶದಲ್ಲಿ ಸ್ವಾತಂತ್ರ್ಯ ನಂತರ ಸಾಬೀತಾಗಿರುವ ಹಗರಣಗಳ ಪಟ್ಟಿ ನೋಡಿದರೆಯೇ ಸಾಕು ಆಶ್ಚರ್ಯವಾಗುತ್ತದೆ. ಇನ್ನು, ರಾಜಕೀಯ ಕುಳಗಳು ಹಗರಣದಲ್ಲಿ ಲಾಬಿ ಮಾಡಿ ನುಂಗಿ ತೇಗಿದ್ದು ಎಷ್ಟಿರಬಹುದು ನೀವೇ ಯೋಚಿಸಿ. ಹೌದು, ಭ್ರಷ್ಟಾಚಾರ, ಅರಾಜಕತೆ, ಅನಕ್ಷರತೆ, ಅದಕ್ಷತೆ, ರಾಜಕೀಯ ಬಿಕ್ಕಟ್ಟು, ಆರ್ಥಿಕ ಅಸ್ಥಿರತೆ ಹೀಗೆ ಹತ್ತು ಹಲವಾರು ವಿಷಯಗಳು ಈ ದೇಶದ ಅತ್ಯಂತ ಕೆಟ್ಟ ಸಂಗತಿಗಳು.
ಅಧಿಕಾರಶಾಹಿ ಧೋರಣೆಯ ಫಲವಾಗಿ ಈ ದೇಶ ಈವರೆಗೆ ಕಂಡಿದ್ದು ಕಳಪೆ ಆಡಳಿತವನ್ನೇ ಹೊರತು ಮತ್ತೇನಲ್ಲ. ರಾಜಕೀಯದಲ್ಲಿ ಏನನ್ನು ಬೇಕಾದರೂ ಮಾಡಬಹುದು, ಮಾಡುವುದಕ್ಕೆ ಸಾಧ್ಯವಿದೆ ಎಂದು ತಿಳಿದ ಬಲಿಷ್ಠ ರಾಜಕೀಯ ನಾಯಕರು ಈ ದೇಶದ ಜನರನ್ನು ನಯವಂಚನೆಗೆ ಸಿಲುಕಿಸಿ ತಮಗೆ ಬೇಕಾದ ಹಾಗೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ದೇಶವನ್ನು ಹಲವು ದಶಕಗಳಿಂದ ಕಾಡುತ್ತಿರುವ ಭ್ರಷ್ಟಾಚಾರ ಹಾಗೂ ಹಗರಣಗಳು ರಾಷ್ಟ್ರೀಯತೆಗೆ ಮಾರಕವಾಗುತ್ತಿದೆ ಎನ್ನುವುದು ಸತ್ಯ. ಮೋಸ್ಟ್ ಕರಪ್ಟಡ್ ಕಂಟ್ರೀಸ್ ಪಟ್ಟಿಯಲ್ಲಿ ನಮ್ಮ ಭಾರತ ಸದ್ಯಕ್ಕೆ ೪೦ನೇ ಸ್ಥಾನದಲ್ಲಿದೆ. ಇದಕ್ಕೆ ನಾವು ನೀವು ಆರಿಸಿ ಅಧಿಕಾರದಲ್ಲಿ ಕೂರಿಸಿದ ಸೋ ಕಾಲ್ಡ್ ರಾಜಕಾರಣಿಗಳ ಹಗಲಿರುಳು ಪರಿಶ್ರಮ ಇದೆ.
ಭ್ರಷ್ಟಾಚಾರದಲ್ಲಿ ಲಾಬಿ, ಪರ‍್ಸಂಟೇಜ್, ಕಮಿಷನ್ ಆಧಾರದಲ್ಲಿ ರಾಜಕೀಯ ಕುರ್ಚಿಯಲ್ಲಿ ಕುಳಿತ ಕುಳಗಳಿಗೆ ಪಾಲು ತಲುಪುತ್ತಿರುವುದು ಈ ದೇಶ ಹಲವು ದಶಕಗಳಿಂದ ಕಂಡುಕೊಂಡು ಬಂದ ಒಂದು ವಿಕೃತ ಸಂಪ್ರದಾಯ. ದೇಶದಲ್ಲಿ ಸಾವಿರಾರು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದರೂ ಪ್ರಕರಣಕ್ಕೆ ಸಂಬಂಧಿಸಿದ ತಪ್ಪಿತಸ್ಥರಿಗೆ ಶಿಕ್ಷೆ ಆದದ್ದು ಅರ್ಧದಷ್ಟು ಮಾತ್ರ. ಈ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಆಡಳಿತಕ್ಕೆ ಬಂದ ಎಲ್ಲಾ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಈ ದೇಶಕ್ಕೆ ಭ್ರಷ್ಟಾಚಾರದ ಸೋಂಕು ಅಂಟಿಸಿದವು. ಎಷ್ಟರ ಮಟ್ಟಿಗೆ ಈ ದೇಶದಲ್ಲಿ ಭ್ರಷ್ಟಾಚಾರ ಎತ್ತರಕ್ಕೆ ತಲುಪಿದೆ ಎಂದರೇ, ನ್ಯಾಯವನ್ನು ಖರೀದಿಸುವಷ್ಟು. ಅದಕ್ಕೆ ಬೇಕಾದ ಎಲ್ಲಾ ಪೂರಕ ವ್ಯವಸ್ಥೆ ಅಧಿಕಾರಿ ವಲಯದಲ್ಲಿ ಸೃಷ್ಟಿಯಾಗಿದೆ. ಸುದ್ದಿ ಹರದಡಂತೆ ಮಾಡುವುದಕ್ಕೆ ನ್ಯಾಯಾಲಯ ಸ್ಟೇ ನೀಡುತ್ತದೆ. ಅಧಿಕಾರಿಯೊಬ್ಬನ ಅಂಗೈಯೊಳಗೆ ಸುಳ್ಳನ್ನು ಸತ್ಯ ಮಾಡುವ, ಸತ್ಯವನ್ನು ಸುಳ್ಳು ಮಾಡುವ ತಾಖತ್ತು ಇರುವಾಗ ಈ ಭ್ರಷ್ಟಾಚಾರದ ಪ್ರಯೋಜನ ಇಲ್ಲದ ನಿರ್ಮೂಲನೆಯ ಮಾತು ಯಾವುದಕ್ಕೆ..?
ಸದ್ಯ, ರಾಜ್ಯದಲ್ಲಿ ಲೋಕಾಯುಕ್ತ ‘ಹಲ್ಲಿಲ್ಲದ ಹಾವು’ ಆಗಿದೆ. ಸರ್ಕಾರವೂ ಕೂಡ ಲೋಕಾಯುಕ್ತರ ನೇಮಕಕ್ಕೆ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಸ್ವತಃ ಕಾನೂನು ಇಲಾಖೆ ಹೇಳುತ್ತದೆ. ಬಹಳ ಮುಖ್ಯವಾಗಿ ರಾಜ್ಯದಲ್ಲಿ ಬಲಿಷ್ಠ ಹಾಗೂ ನಿಷ್ಪಕ್ಷಪಾತ ಲೋಕಾಯುಕ್ತ ಸಂಸ್ಥೆ ಇರುವುದು ಯಾವುದೇ ರಾಜಕೀಯ ಪಕ್ಷಗಳಿಗೆ ಬೇಕಾಗಿಲ್ಲ ಎನ್ನುವುದು ಇಲ್ಲಿ ಸ್ಪಷ್ಟ.
ರಾಜ್ಯದ ಬಿಜೆಪಿ ಸರ್ಕಾರದ ಆಡಳಿತವನ್ನು ಈಗ ಬಲವಾಗಿ ಕಾಡುತ್ತಿರುವ ವಿಷಯವೆಂದರೇ, ಕಮಿಷನ್ ಭ್ರಷ್ಟಾಚಾರ. ಹೌದು ಹಿಜಾಬ್, ಹಿಂದೂ ದೇವಸ್ಥಾನಗಳ ಹಬ್ಬಗಳಲ್ಲಿ ಮುಸ್ಲೀಂ ಅಂಗಡಿ ನಿಷೇಧ, ಹಲಾಲ್ ಕಟ್ ವಿವಾದಗಳ ಬಳಿಕ ಈಗ ಸಚಿವ ಕೆ. ಎಸ್ ಈಶ್ವರಪ್ಪ ರಾಜೀನಾಮೆ ನಿಜಕ್ಕೂ ಬಿಜೆಪಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳೆದ ಕೆಲವು ತಿಂಗಳುಗಳಿಂದ ‘40% ಕಮಿಷನ್’ ವಿಚಾರವನ್ನು ತನ್ನ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿದ್ದ ವಿರೋಧ ಪಕ್ಷ ಕಾಂಗ್ರೆಸ್ ಅಂತಿಮವಾಗಿಯೂ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪರಿಂದ ರಾಜೀನಾಮೆ ಕೊಡಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಪ್ರಕರಣ ತನಿಖೆಯ ಹಂತದಲ್ಲಿದ್ದು, ಪ್ರಕರಣ ಒಂದು ವೇಳೆ ಸಾಬೀತಾದರೇ, ಈಶ್ವರಪ್ಪ ೧೦ ವರ್ಷ ಜೈಲೂಟ ತಿನ್ನಬೇಕಾಗುವುದರಲ್ಲಿ ಸಂಶಯವೇ ಇಲ್ಲ. ನ್ಯಾಯ, ಕಾಯ್ದೆ ಆಳುವವರ ಕೈಯೊಳಗಿದೆ. ಸಾಮಾಜಿಕ ಅನ್ಯಾಯ ಈ ದೇಶ ಈವರೆಗೆ ಕಂಡುಕೊಂಡು ಬಂದ ವಿಕೃತ ಸಂಸ್ಕೃತಿ.
ಸದಾ ವಿರೋಧ ಪಕ್ಷಗಳ ವಿರುದ್ಧವಾಗಿ ತಮ್ಮ ಹರಕು ಬಾಯಿಯಿಂದ ಟೀಕಾ ಪ್ರಹಾರ ಮಾಡುತ್ತಿದ್ದ, ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಸ್ವತಃ ಈಶ್ವರಪ್ಪರಿಗೆ ಈ ಸ್ಥಿತಿ ಬರಬಾರದಿತ್ತು. ಸ್ವತಃ ಮೃತ ಗುತ್ತಿಗೆದಾರ ಸಂತೋಷ್ ಪಾಟಿಲ್ ಹಿಂದೆ ನೇರಾನೇರವಾಗಿ ಮಾಡಿದ ಆರೋಪಗಳು, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ, ಕಮಿಷನ್ ದಂಧೆಯಿಂದ ನರಳುತ್ತಿರುವ ಗುತ್ತಿಗೆದಾರರ ಸಮಸ್ಯೆಗಳನ್ನು ಆಲಿಸಿ ೧೫ ದಿನಗಳೊಳಗೆ ಪರಿಹಾರ ಒದಗಿಸದಿದ್ದರೇ ಐದಾರು ಸಚಿವರು ಹಾಗೂ ೨೫ಕ್ಕೂ ಹೆಚ್ಚು ಶಾಸಕರ ಭ್ರಷ್ಟಾಚಾರವನ್ನು ದಾಖಲೆ ಸಹಿತ ಬಯಲಿಗೆಳೆಯುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ರಾಜ್ಯ ಸರ್ಕಾರಕ್ಕೆ ನೇರವಾಗಿ ಕಠೋರ ಎಚ್ಚರಿಕೆ ನೀಡಿದೆಯಾದರೂ ಇದು ಷಡ್ಯಂತ್ರ, ರಾಜಕೀಯ ವೈಷಮ್ಯ ಎಂದು ಸಮರ್ಥಿಸಿಕೊಳ್ಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ.
ಆರ್‌ಎಸ್‌ಎಸ್ ನಿಂದ ಬಂದ ಈಶ್ವರಪ್ಪ, ರಾಜಕೀಯ ಪ್ರವೇಶ ಮಾಡಿದಾಗಲಿಂದಲೂ ಶಕ್ತಿ ಪ್ರದರ್ಶನ ಮಾಡುತ್ತಲೇ ಬಂದ ನಾಯಕ. ರಾಜೀನಾಮೆ ನೀಡುವ ಸಂದರ್ಭದಲ್ಲಿಯೂ ಅದೇ ಛಾಳಿ ಮುಂದುವರಿಸಿದ್ದರು. ರಾಜಕೀಯದಲ್ಲಿ ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳಬೇಕು ಎಂಬ ಕಾರಣದಿಂದ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮುದಾಯದಲ್ಲಿ ಪ್ರವರ್ದಮಾನಕ್ಕೆ ಬರುತ್ತಿರುವುದನ್ನು ಸಹಿಸಿಕೊಳ್ಳುವುದಕ್ಕಾಗದೇ ಹಾಗೂ ಬಿಜೆಪಿಗೆ ತಾನೇನೆಂಬುವುದನ್ನು ತೋರಿಸಿಕೊಡುವುದಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ಕುರುಬರ ಬೃಹತ್ ಸಮಾವೇಶ ಮಾಡಿದ ನಾಯಕನಿಗೆ ಈಗ ತೀವ್ರ ಮುಖಭಂಗವಾಗಿದೆ. ಬಿಜೆಪಿ ಪಕ್ಷದಲ್ಲಿ ಬಣ ರಾಜಕೀಯ ಸೃಷ್ಟಿಯಾದಾಗ ಈಶ್ವರಪ್ಪ ಇದೇ ಬ್ರಿಗೇಡ್‌ನನ್ನು ಮುಂದೆ ಬಿಟ್ಟುಕೊಂಡಿದ್ದರು, ಒಂದೊಮ್ಮೆ ನಾನಿನ್ನು ಬ್ರಿಗೆಡ್ ಕಡೆ ತಲೆ ಹಾಕುವುದಿಲ್ಲ ಎಂದೂ ಕೂಡ ಇದೇ ಹರಕು ಬಾಯಿ ಹೇಳಿತ್ತು. ಆದರೇ, ಈಗ ಅದೇ ಬೇಕಾಗಿದೆ ಎಂದು ಕಾಣಿಸುತ್ತಿದೆ.
ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವೆ ಇರುವ ಭಿನ್ನಾಭಿಪ್ರಾಯ ಗೊತ್ತಿರುವ ವಿಚಾರ. ಬಿಎಸ್‌ವೈ ಮುಖ್ಯಮಂತ್ರಿ ಹುದ್ದೆಗೆ ಕಳೆದ ವರ್ಷ ರಾಜೀನಾಮೆ ನೀಡಿದಾಗ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ್ ಬೊಮ್ಮಾಯಿ ಅವರನ್ನು ಸೂಚಿಸಿದಾಗ ಇದೇ ಈಶ್ವರಪ್ಪ ಪರೋಕ್ಷವಾಗಿ ಭಿನ್ನ ಮಾತಾಡಿದ್ದರು. ಯಡಿಯೂರಪ್ಪ ಹೇಳಿ ಕೇಳಿ ರೆಬಲ್ ನಾಯಕ. ಬಿಜೆಪಿ ಅಂತಹ ರಾಷ್ಟ್ರೀಯ ಪಕ್ಷವನ್ನು ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಕೊಡಿಸಿದ ನಾಯಕ. ಪಕ್ಷದ ಆಳ ಅಗಲ ಗೊತ್ತಿರುವ ರಾಜಕಾರಣಿ. ಯಾರಿಗೂ ಹೆದರುವವರಲ್ಲ. ಒಂದೊಮ್ಮೆ ಬಿಎಸ್‌ವೈ ವ್ಯಂಗ್ಯವಾಗಿ ಬ್ರಿಗೇಡ್ ಕೆಲಸ ಮಾಡಿಕೊಂಡಿರಲಿ ಎಂದು ಈಶ್ವರಪ್ಪಗೆ ಹೇಳಿದ್ದರು. ಹಿಂದೊಮ್ಮೆ ಶಿವಮೊಗ್ಗ ನಗರ ಕ್ಷೇತ್ರದಿಂದ ಈಶ್ವರಪ್ಪರಿಗೆ ಟಿಕೆಟ್ ನೀಡಬಾರದು, ಅವರಿಗೆ ಟಿಕೇಟ್ ನಿಡಿದರೆ ಠೇವಣಿಯೂ ದೊರಕುವುದಿಲ್ಲ ಎಂದು ಕೆಲ ಬಿಎಸ್‌ವೈ ಬೆಂಬಲಿಗರು ಟೀಕೆ ಮಾಡಿದ್ದರು. ತಮಗೆ ಟಿಕೇಟ್ ತಪ್ಪಿಸಲು ಯತ್ನಿಸಿದ ಬಿಎಸ್‌ವೈ ವಿರುದ್ಧ ಬಹಿರಂಗವಾಗಿ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಳಿಕ ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವೆ ಬಣ ರಾಜಕಾರಣ ತೀವ್ರಗೊಂಡಿತ್ತು. ರಾಜ್ಯ ಕಮಲ ಪಾಳಯದಲ್ಲಿ ಭಿನ್ನಮತದ ಹೊಗೆಯಾಡುವಂತೆ ಮಾಡಿತ್ತು. ಈ ಎಲ್ಲಾ ವೈಷಮ್ಯಗಳು ಮುಗಿದು ಹೋದ ಕಥೆ ಎಂದುಕೊಂಡರೇ ಅದು ತಪ್ಪು. ಖಂಡಿತ ಇದೆ. ಈಶ್ವರಪ್ಪ ರಾಜೀನಾಮೆಗೂ ಬಿಎಸ್‌ವೈಗೂ ಏನು ಸಂಬಂಧ ಇದೆ ಎನ್ನಿಸಬಹುದು. ಆದರೇ, ಒಂದು ಇಂಟ್ರೆಸ್ಟಿಂಗ್ ವಿಚಾರ ಇದೆ. ತಮ್ಮ ರಾಜಕೀಯ ವರ್ಚಸ್ಸಿಗೆ ಧಕ್ಕೆ ತಂದ ಈಶ್ವರಪ್ಪ ವಿರುದ್ಧ ಬಿಎಸ್‌ವೈಗೆ ಇನ್ನೂ ಕೋಪ ಇದೆ. ಬಿಎಸ್‌ವೈ ಕೆಜೆಪಿ ಕಟ್ಟಿದಾಗ ಈಶ್ವರಪ್ಪ ಬಿಎಸ್‌ವೈ ವಿರುದ್ಧ ಮಾತಾಡಿದವರು ಈ ಎಲ್ಲಾ ಹಗೆ ಇನ್ನೂ ಇದೆ. ಇದೇ ಕಾರಣದಿಂದಾಗಿ ರಾಜಕೀಯ ವಲಯದಲ್ಲಿ ಈಶ್ವರಪ್ಪ ರಾಜೀನಾಮೆಗೆ ಬಿಎಸ್‌ವೈ ಕೂಡ ಪರೋಕ್ಷವಾಗಿ ಒತ್ತಡ ಹೇರಿದ್ದರು ಎನ್ನುವ ಮಾತು ಕೇಳಿ ಬರುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.
ಇನ್ನು, ಗೋಮಾತೆಯನ್ನೇ ತನ್ನ ರಾಜಕೀಯದ ಅಜೆಂಡಾದೊಳಗೆ ಸೇರಿಸಿಕೊಂಡ ಬಿಜೆಪಿ ಪಕ್ಷದಲ್ಲಿ ಗೋಶಾಲೆಗಳ ಮೇವಿನ ಹಣ ಬಿಡುಗಡೆಗೂ 4೦% ಕಮಿಷನ್ ಪಡೆಯಲಾಗುತ್ತದೆ ಎಂಬ ಬಲವಾದ ಆರೋಪ ಕೇಳಿಬಂದಿದ್ದು, ಮೇವು ಸರಬರಾಜುದಾರರಿಂದ ಅಧಿಕಾರಿಗಳು ಕಮಿಷನ್ ಬೇಡಿಕೆ ಇಡುತ್ತಿದ್ದಾರೆಂಬ ಆರೋಪದ ಪತ್ರ ಪ್ರಧಾನಿಗೆ ಸಲ್ಲಿಕೆಯಾಗಿದೆ. ಇನ್ನು, ಮಠಗಳಿಗೆ ನೀಡುವ ಅನುಧಾನಗಳಿಂದಲೂ ಕಮಿಷನ್ ಕೇಳಲಾಗುತ್ತಿದೆ ಎಂಬ ಆರೋಪದ ವರದಿಯೊಂದು ಆಗಿತ್ತು. ಈ ಪ್ರಕರಣ ಸಚಿವ ಪ್ರಭು ಚೌಹಾಣ್, ಆರ್ ಅಶೋಕ್, ಡಾ. ಸುಧಾಕರ್ ಸೇರಿ ಹಲವರ ಪಾಲಿಗೆ ಕಂಟಕವಾಗಲಿದೆಯೇ ಎಂಬ ಪ್ರಶ್ನೆಯೊಂದು ಎದ್ದಿದೆ.
ಹಿಂದೊಮ್ಮೆ ನಡೆದಿತ್ತು ಮೇವು ಹಗರಣ : ಬಿಹಾರದಲ್ಲಿ ನಡೆದಿದ್ದ ೯೫೦ ಕೋಟಿ ಮೊತ್ತದ ಮೇವು ಹಗರಣದಲ್ಲಿ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಖಜಾನೆಗಳಿಂದ ಅಕ್ರಮವಾಗಿ ಹಣವನ್ನು ಪಡೆದುಕೊಳ್ಳಲಾಗಿತ್ತು. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕೂಡ ಈ ಪ್ರಮುಖ ಆರೋಪಿಯಾಗಿದ್ದರು. ಇದೇ ಮೇವು ಹಗರಣದ ದುಮ್ಕಾ, ದಿಯೋಘರ್, ಚೈಬಾಸ ಖಜಾನೆಗಳಿಂದ ಹಣ ಪಡೆದುಕೊಂಡ ನಾಲ್ಕು ಪ್ರಕರಣಗಳಲ್ಲಿ ಲಾಲು ಅವರಿಗೆ ಈಗಾಗಲೇ ೧೪ ವರ್ಷಗಳ ಕಾಲ ಜೈಲು ಶಿಕ್ಷೆಯಾಗಿತ್ತು, ಇತ್ತೀಚೆಗೆ ಇದೇ ಹಗರಣದ ಐದನೇ ಪ್ರಕರಣ ಡೋರಂಡ ಹಗರಣದಲ್ಲಿಯೂ ಲಾಲೂ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಈ ಮೇವು ಹಗರಣದ ಹಾಗೆ ಕರ್ನಾಟಕದಲ್ಲಿಯೂ ಆಗಬಹುದೇ ಎಂಬ ಚರ್ಚೆ ಎದ್ದಿದೆ.
ಒಟ್ಟಿನಲ್ಲಿ, ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಈ ‘ಕಮಿಷನ್’ ದೊಡ್ಡ ಕಂಟಕದಂತೆ ಭಾಸವಾಗುತ್ತಿದೆ. ಸದ್ಯ, ಈ ಕಮಿಷನ್ ವಿಚಾರವನ್ನು ಕಾಂಗ್ರೆಸ್ ಚುನಾವಣಾ ಬ್ರಹ್ಮಾಸ್ತ್ರವಾಗಿ ಇಟ್ಟುಕೊಂಡಿದ್ದು, ಹೇಗೆ ಪ್ರಯೋಗ ಮಾಡುತ್ತದೆ ಹಾಗೂ ಬಿಜೆಪಿ ಇದರಿಂದ ಹೇಗೆ ಪಾರಾಗುತ್ತದೆ ಎನ್ನುವುದು ಸದ್ಯದ ಕುತೂಹಲ.
-ಶ್ರೀರಾಜ್ ವಕ್ವಾಡಿ




