ರಾಜಕೀಯದವರಿಗೆ ಯಾವ ಧರ್ಮವೂ ಬೇಕಾಗಿಲ್ಲ..! | ಜನರು ಮೂರ್ಖರಲ್ಲ
ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿದ್ದುಕೊಂಡು ಪ್ರಜಾಪ್ರಭುತ್ವವನ್ನು ನಾವೆಷ್ಟು ಅರ್ಥ ಮಾಡಿಕೊಂಡಿದ್ದೇವೆ ಎನ್ನುವುದು ಈಗ ಬಹಳ ಮುಖ್ಯವಾದ ಸಂಗತಿ ಎಂದೆನ್ನಿಸುತ್ತಿದೆ. ದೇಶದ ಕಾನೂನಿಗೆ ತಲೆ ಬಾಗುವ ಮನೋ ಧೋರಣೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಹೇಳಲಾಗುತ್ತದೆ. ಒಂದು ಗುಂಪು ಅಥವಾ ವರ್ಗಗಳ ಸ್ಥಾಪಿತ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸುವ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎಂದು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವಕ್ಕೆ ಅದರದ್ದೇ ಆದ ಘನತೆ ಇದೆ, ಮರ್ಯಾದೆ ಇದೆ.
ಪ್ರಜಾಪ್ರಭುತ್ವಕ್ಕೆ ಅದರದ್ದೇ ಆದ ಶಿಸ್ತಿದೆ. ಕಾನೂನಿನ ಚೌಕಟ್ಟಿದೆ. ಶಿಸ್ತಿಲ್ಲದ ಪ್ರಜಾಪ್ರಭುತ್ವ ಅಧಿಕಾರಿಯೊಬ್ಬನ ಸರ್ವಾಧಿಕಾರ ಧೋರಣೆಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಬಹುದು. ಶಿಸ್ತಿಲ್ಲದ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶಗಳು ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಸರ್ವಾಧಿಕಾರವನ್ನು ಕಂಡಿದ್ದು ಉಂಟು. ಆ ದೇಶ ಅವನತಿಗೆ ಹೋದದ್ದೂ ಉಂಟು. ಸರ್ವಾಧಿಕಾರಕ್ಕೆ ಆಯಾಯ ದೇಶಗಳ ಜನರ ಕೊಡುಗೆಯೂ ಅಪಾರವಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸುವ ಹಕ್ಕು ಮತ್ತು ಕರ್ತವ್ಯವನ್ನು ಪ್ರಜಾಪ್ರಭುತ್ವ ನೀಡಿದೆ. ದೇಶದ ಜನರು ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸುವ, ನೈತಿಕ ನೆಲೆಗಟ್ಟನ್ನು ಕಟ್ಟುವ ಮನಸ್ಸು ಮಾಡಿದರೇ, ನ್ಯಾಯ, ಸಮಾನತೆ, ಸಹೋದರತ್ವದ ಕಲ್ಪನೆಯಲ್ಲಿ ಅಥವಾ ಆಧಾರದಲ್ಲಿ ಹುಟ್ಟಿಕೊಂಡ ಪ್ರಜಾಪ್ರಭುತ್ವಕ್ಕೆ ನಿಜ ಅರ್ಥ ಬರುವುದಕ್ಕೆ ಸಾಧ್ಯ. ಸಮಾಜದ ಸ್ವಾಸ್ಥ್ಯ ಕಲ್ಯಾಣವೇ ಆ ಪ್ರಜಾಪ್ರಭುತ್ವದ ಪರಮ ಗುರಿ.
ಪ್ರಜಾಪ್ರಭುತ್ವ ದೇಶದ ನಾಗರಿಕರಿಗೆ ಕಾನೂನಿನ ಚೌಕಟ್ಟಿನನ್ವಯ ವಾಕ್ ಸ್ವಾತಂತ್ರ್ಯ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಂಘ ಸ್ವಾತಂತ್ರ್ಯ ರಾಜಕೀಯ ಸ್ವಾತಂತ್ರ್ಯ ಹೀಗೆ ಹತ್ತು ಹಲವು ಮಾದರಿಯಲ್ಲಿ ಸ್ವಾತಂತ್ರ್ಯವನ್ನು ನೀಡಿದೆ. ಈ ಸ್ವಾತಂತ್ರ್ಯ ಗಳು ಸ್ವೇಚ್ಛೆ ಅಲ್ಲ ಸರ್ವಸ್ವಾತಂತ್ರ್ಯವೂ ಅಲ್ಲ. ಹದ್ದುಬಸ್ತಿಲ್ಲದ ಸ್ವಾತಂತ್ರ್ಯ ಅಥವಾ ವಿಷಯ ಲಂಪಟತನದ ವರ್ತನೆ ಈ ವ್ಯವಸ್ಥೆಗೆ ಮಾರಕ ಶಕ್ತಿ.
ದೇಶಕ್ಕೆ ಬದಲಾವಣೆ ಅಷ್ಟೇ ಮುಖ್ಯವಲ್ಲ. ಪರಿವರ್ತನೆಯೂ ಮುಖ್ಯ. ಪ್ರಜಾಪ್ರಭುತ್ವದ ಕಲ್ಪನೆಯಲ್ಲೇ ದೇಶವನ್ನು ಅಭಿವೃದ್ಧಿಗೊಳಿಸುತ್ತೇವೆ ಎಂದು ಬಂದ ಎಲ್ಲಾ ಸರ್ಕಾರಗಳು ಮಾಡಿದ್ದು ಜನರ ಕತ್ತು ಹಿಸುಕುವ ಕೆಲಸವನ್ನೇ ಹೊರತು ಮತ್ತೇನಲ್ಲ. ತನ್ನ ಸುತ್ತಮುತ್ತಲಿರುವ ಮನುಷ್ಯರನ್ನು ಮಾನವೀಯ ದೃಷ್ಟಿಯಿಂದ ಕಾಣಲಾರದಷ್ಟು ವಿಷ ದುರ್ಬೀಜಗಳನ್ನು ಬಿತ್ತುವ ಅಪಾಪೋಲಿ ಖಾಲಿತಲೆಗಳನ್ನು ಮೆರೆಸುವ ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆ ಈ ಭಾರತದಂತಹ ವಿವಿಧತೆಯಲ್ಲಿ ಏಕತೆಯನ್ನು ಮೆರೆದು ಜಗತ್ತಿನ ಭೂಪಟದಲ್ಲಿ ವಿರಾಜಮಾನವಾಗಿ ಕಂಗೊಳಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೃಷ್ಟಿಯಾಗಿದೆ ಎನ್ನುವುದೇ ದುರಂತದ ಸಂಗತಿ.
ಅಧಿಕಾರ ಎಂದರೇ, ದೇಶದ ಜನರನ್ನು ಗುತ್ತಿಗೆ ತೆಗೆದುಕೊಳ್ಳುವುದಲ್ಲ. ತಮ್ಮ ಸೈದ್ಧಾಂತಿಕ ಒಲವುಗಳನ್ನು ಜನರ ತಲೆಯೊಳಗೆ ತುರುಕಿಸುವುದಲ್ಲ. ದೇಶವೊಂದಕ್ಕೆ ನ್ಯಾಯ ಸಮ್ಮತ ಆಡಳಿತ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಇಲ್ಲಿ ಷರತ್ತು ಅಂತಿದ್ದರೇ ಅದು ಪ್ರಜಾಪ್ರಭುತ್ವ ಮಾತ್ರ. ಪ್ರಜಾಪ್ರಭುತ್ವ ಹೇರಿಕೆಯನ್ನು ಒಪ್ಪುವುದಿಲ್ಲ. ಇಲ್ಲಿ ಎಲ್ಲದಕ್ಕೂ ಕಾನೂನಿನ ಚೌಕಟ್ಟಿದೆ. ಪ್ರಜಾಪ್ರಭುತ್ವದ ಅಡಿಯಲ್ಲಿ ಬರುವ ಪ್ರತಿಯೊಬ್ಬನಿಗೂ ತನ್ನ ಆಡಳಿತದ ಬಗ್ಗೆ ಸಮಾಧಾನ ಅಥವಾ ಅಸಮಾಧಾನ ಹೊರಹಾಕುವ ಅವಕಾಶವಿದೆ. ಆ ಅವಕಾಶಕ್ಕೂ ನಿರ್ಬಂಧಗಳಿವೆ ಎನ್ನುವುದು ಇಲ್ಲಿ ಗಮನಾರ್ಹ.
ಅಧಿಕಾರದಲ್ಲಿರುವವರ ಕುಂಡೆಗೆ ಗಾಳಿ ಹಾಕುವ ಮನೋಧೋರಣೆ ಈ ದೇಶದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯ ಆಧಾರ ಸ್ತಂಬಗಳಲ್ಲಿ ಒಂದಾದ ಮತ್ತು ಸಮಾಜದ ಧ್ವನಿಯಾಗಿ ಇರಬೇಕಾಗಿದ್ದ ಮಾಧ್ಯಮ ಅಥವಾ ಪತ್ರಿಕೋದ್ಯಮವೂ ಅದೇ ಸಾಲಿಗೆ ಸೇರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆಡಳಿತ ಪಕ್ಷಕ್ಕೆ ವಿರೋಧ ಪಕ್ಷವಾಗಿ ತಪ್ಪು ಒಪ್ಪುಗಳನ್ನು ವಿಮರ್ಶಿಸಬೇಕಾಗಿದ್ದ ಮಾದ್ಯಮಗಳು ಸರ್ಕಾರದ ಅಂಗಳದಲ್ಲಿ ಆಡುವ ಮಕ್ಕಳಾದವು. ಸರ್ಕಾರದ ಒಡೆತನದಲ್ಲಿರುವ ಆಕಾಶವಾಣಿ ಹಾಗೂ ದೂರದರ್ಶನಗಳನ್ನು ಅಧಿಕಾರಿಗಳು ತಮ್ಮ ಪ್ರಚಾರದ ಬೇಳೆ ಬೇಯಿಸಿಕೊಳ್ಳುವುದಕ್ಕೆ ಬಳಸಿಕೊಂಡು ಸಾರ್ವಜನಿಕರ ಹಾಗೂ ರಾಜಕೀಯ ವಲಯದ ಕಟು ಟೀಕಾಕಾರರ ಬಾಯಿಗೆ ತುತ್ತಾದ ಉದಾಹರಣೆಯೂ ಈ ದೇಶದಲ್ಲಿದೆ. ಈಗಲೂ ಅದೇ ಛಾಳಿ ಚಾಲ್ತಿಯಲ್ಲಿದೆ. ಆ ಸಾಲಿಗೆ ಈಗೀಗ ವೃತ್ತಿಧರ್ಮವೊಂದನ್ನು ಹೊರತು ಉಳಿದೆಲ್ಲವನ್ನೂ ಒಳಗೊಂಡಿರುವ ಕೆಲವು ಖಾಸಗಿ ಒಡೆತನದ ಮಾದ್ಯಮಗಳಂತೂ ಅಧಿಕಾರದಲ್ಲಿರುವವರ ಪುಂಗಿಯಾಗಿ ವರ್ತಿಸುತ್ತಿವೆ.
ಈ ಹಿಂದೆ ಈ ದೇಶದ ಸರ್ವಶ್ರೇಷ್ಠ ದಾರ್ಶನಿಕ, ಮಹಾ ಮೇಧಾವಿ ಸ್ವಾಮಿ ವಿವೇಕಾನಂದ ಒಂದೊಮ್ಮೆ, ‘ಭಾರತದ ರಾಜಕೀಯ ಜಾತಿ ಮೂಲವಾದ ಬಲದ ಆಧಾರದಲ್ಲಿ ಪ್ರತಿಷ್ಟಿತರ ಪಾಲಾಗುತ್ತದೆ’ ಎಂದು ಹೇಳಿದ್ದರಂತೆ. ಹಾಗೆಯೇ ಈಗ ಆದಂತಿದೆ. ಎಲ್ಲವೂ, ಅಂದರೇ ಮಾಧ್ಯಮಗಳನ್ನೂ ಒಳಗೊಂಡು ಇಲ್ಲಿ ಪ್ರತಿಷ್ಟಿತರ ಪಾಲಿಗೆ ಒದಗಿದೆ ಎಂದು ಹೇಳಿದರೇ, ತಪ್ಪಿಲ್ಲ. ಪ್ರಜಾಪ್ರಭುತ್ವದಂತಹ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು, ರಾಜಕೀಯ ಬೆಂಬಲಿತ ಸಂಘಟನೆಗಳು ಮಾಧ್ಯಮದ ಎಲ್ಲಾ ಆಯಾಮಗಳನ್ನು ತಮ್ಮ ಅಜೆಂಡಾಕ್ಕೆ ತಕ್ಕ ಹಾಗೆ ಬಳಸಿಕೊಂಡದ್ದು ಜನರಿಗೆ ತಿಳಿಯಲೇ ಇಲ್ಲ. ವ್ಯವಸ್ಥೆಯ ಆಳ ಅಗಲ ಗೊತ್ತಿಲ್ಲದೇ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನೇ ಸತ್ಯವೆಂದು ತಿಳಿಯುವಂತೆ ಮಾಡಿ ಮುಗ್ಧ ಜನರನ್ನು ನಯವಂಚನೆಯ ಜಾಲಕ್ಕೆ ಸಿಲುಕುವಂತೆ ಮಾಡಿದವು. ಮುಖಮುಖ ನೋಡಿಕೊಳ್ಳಲಾಗದಿರುವಷ್ಟು ದ್ವೇಷ ಬಿತ್ತುವ ರಾಜಕೀಯ, ಧರ್ಮ ಪ್ರೇರಿತ ಘಟನೆಗಳನ್ನು ಸೃಷ್ಟಿಸಲಾಯಿತು. ಅವುಗಳ ಅಸ್ಪಷ್ಟ ಮಾಹಿತಿ ಹಾಗೂ ಸುದ್ದಿ ಅನ್ನಿಸಿಕೊಳ್ಳುವುದಕ್ಕೆ ಯೋಗ್ಯವಲ್ಲದ ವಿಚಾರಗಳನ್ನು ಆಡಳಿತ ಸರ್ಕಾರದ ಸಸ್ನೇಹ ಬಾಂಧವ್ಯ ಬೆಳಸಿಕೊಂಡ ಬಹುತೇಕ ಎಲ್ಲಾ ಮಾಧ್ಯಮಗಳು ಬಿತ್ತರಿಸುವ ಮೂಲಕ ಈ ಸಮಾಜದಲ್ಲಿ ಸ್ವಾಸ್ಥö್ಯ ಹದಗೆಡುವಲ್ಲಿ ಹಗಲಿರುಳು ಶ್ರಮಿಸಿದವು. ಸಮಾಜದ ಕನ್ನಡಿಯಾಗಿ, ನಾಡಿಮಿಡಿತವಾಗಿ ಇರಬೇಕಾಗಿದ್ದ ಮಾಧ್ಯಮಗಳು ಏಕಪಕ್ಷೀಯವಾಗಿ ದುಡಿದವು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುವಂತೆ ವರ್ತಿಸಿದವು.
ಕನ್ನಡದ ಶ್ರೇಷ್ಠಮಾನ್ಯ ಪತ್ರಕರ್ತ, ಮುಂಗಾರು ಪತ್ರಿಕೆಯ ಸಂಪಾದಕರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಹೇಳುವ ಹಾಗೆ, ‘ಭಾರತೀಯರು ನಿವಾರಿಸಬೇಕಾದ ಮೂಲಭೂತ ಸಮಸ್ಯೆಯೆಂದರೇ ನಾವು ಭಾವುಕರಾಗಿ ಬೆಳೆಸಿರುವ ರಾಜಕೀಯ ವ್ಯವಸ್ಥೆ.’ ಹೌದು, ಭಾವುಕತೆ, ಭಾವನಾತ್ಮಕತೆ ಅಥವಾ ಸಂವೇದನಾಶೀಲತೆ ವಿಚಾರಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡುವ ವ್ಯವಸ್ಥೆ ಮೊದಲು ಬದಲಾಗಬೇಕಿದೆ. ರಾಜಕೀಯದವರಿಗೆ ಯಾವ ಧರ್ಮವೂ ಬೇಕಾಗಿಲ್ಲ. ಎಲ್ಲಾ ರಾಜಕೀಯದವರು ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ಬೇಕಾಗಿರುವುದು ಅಧಿಕಾರ ಅಷ್ಟೇ. ಇಲ್ಲಿ ಹಿಂದುತ್ವ ಅಂದರೇ, ನ್ಯಾಷನ್ಯಾಲಿಟಿ ಅಂದವರು ಮುಸ್ಲಿಂ ಧರ್ಮವನ್ನು ಪ್ರಶ್ನಿಸಿದರು, ತಮ್ಮದು ಸೆಕ್ಯುಲರಿಸಂ ಸಿದ್ಧಾಂತ ಎಂದವರು ಹಿಂದು ಧರ್ಮದ ಬಗ್ಗೆ ಸಂಶಯಪಟ್ಟರು. ಈ ರಾಜಕೀಯದ ರಚ್ಚೆ ಹಿಡಿಸಿಕೊಂಡ ಸೋ ಕಾಲ್ಡ್ ಧರ್ಮ ರಕ್ಷಕರು ಬೀದಿಗೆ ಬಂದರು, ಪ್ರತಿಷ್ಠಿತ ಮೇಲ್ವರ್ಗದ ರಾಜಕೀಯ ನಾಯಕರು ಧರ್ಮಗಳ ವೈಷಮ್ಯದ ಗಲಾಟೆಯ ಚೆಂದ ಕಾಣುತ್ತಾ ತಮ್ಮ ಸ್ಥಾನ ಗಟ್ಟಿ ಮಾಡಿಕೊಂಡರು. ಜನ ಇಲ್ಲೇ ಅರ್ಥ ಮಾಡಿಕೊಳ್ಳಬೇಕಿತ್ತು. ಪ್ರಜಾಪ್ರಭುತ್ವದ ಜವಾಬ್ದಾರಿ ನಮಗಿದೆ ಎಂದು ಒಮ್ಮೆಯಾದರೂ ನೆನಪಿಸಿಕೊಳ್ಳಬೇಕಿತ್ತು.
ಇನ್ನು, ದಿನಕ್ಕೊಂದು ಧರ್ಮ ಯುದ್ಧವನ್ನು ಸೃಷ್ಟಿಸುವುದೇ ಕೆಲವು ರಾಜಕೀಯ ಪಕ್ಷಗಳ ಅಜೆಂಡಾ ಆಗಿದೆಯೇ ಎಂಬ ಅಪಾಯಕಾರಿ ಪ್ರಶ್ನೆಯೊಂದು ಎದ್ದಿದೆ. ಹೌದು, ಧರ್ಮವನ್ನು ಬಿಟ್ಟು ರಾಜಕೀಯ ನಡೆದಿದ್ದು ತೀರಾತಿವಿರಳ. ಈ ಧರ್ಮಗಳ ಸಂಘರ್ಷವನ್ನು ಸಹಜವಾಗಿ ಆಡಳಿತದ ಪಕ್ಷವು ಬಳಸಿಕೊಳ್ಳುತ್ತದೆ. ಭಾರತದಲ್ಲಿ ಈಗ ಹೇಗಾಗಿದೆ ಎಂದರೇ ಧರ್ಮ, ಜಾತಿ ಆಧಾರದಲ್ಲಿಯೇ ಯಾವ ರಾಜಕೀಯ ಪಕ್ಷದ ಒಲವುಳ್ಳವರು ಎಂದು ಲೇಬಲ್ ಮಾಡುವ ಮನಸ್ಥಿತಿ ಎಲ್ಲರಲ್ಲೂ ಬಂದಾಗಿದೆ. ಜನರೇನು ಇಲ್ಲಿ ಮೂರ್ಖರಲ್ಲ. ತಮ್ಮ ಧರ್ಮಕ್ಕೆ ಒಳ್ಳೆಯದನ್ನು ಮಾಡುವ ರಾಜಕೀಯ ಪಕ್ಷಕ್ಕೆ ತಮ್ಮ ಬೆಂಬಲ ನೀಡುತ್ತಾರೆ. ಇನ್ನು, ಹೀಗೆ ಬೆಂಬಲ ನೀಡುವುದು ಆಯಾಯ ಧರ್ಮದವರ ಸ್ವಾರ್ಥವೆಂದು ಕಾಣಿಸಿಕೊಂಡರೂ ಕೂಡ ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಅದನ್ನು ಈ ದೇಶದ ಜನರು ಅನೇಕ ಬಾರಿ ತೋರಿಸಿಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಂತಹ ವ್ಯವಸ್ಥೆಯಲ್ಲಿ ರಾಜಕೀಯದೊಂದಿಗೆ ಧರ್ಮವನ್ನು ಸೇರಿಸಿಕೊಂಡೇ ಎಲ್ಲವನ್ನೂ ಎದುರಿಸುತ್ತೇವೆ ಎನ್ನುವುದು ಹಾಗೂ ಯಾವುದೇ ಧರ್ಮವನ್ನು ಯಾವುದೇ ರಾಜಕೀಯ ಪಕ್ಷವು ತನ್ನ ಶಾಶ್ವತ ಮತ ಬ್ಯಾಂಕ್ ಎಂದು ತಿಳಿದುಕೊಂಡು ರಾಜಕೀಯ ಮಾಡಿದರೇ ಆ ಪಕ್ಷ ತನ್ನ ಇತಿಹಾಸದಿಂದ ಪಾಠ ಕಲಿತಿಲ್ಲವೆಂದೇ ಅರ್ಥ. ಎಲ್ಲದಕ್ಕಿಂತ ಮೊದಲು ಪ್ರಜಾಪ್ರಭುತ್ವ ತಾರತಮ್ಯವನ್ನು ಒಪ್ಪುವುದಿಲ್ಲ ಎನ್ನುವುದು ಇಲ್ಲಿ ತಿಳಿದುಕೊಳ್ಳಬೇಕಾದ ವಿಚಾರ.
ಒಟ್ಟಿನಲ್ಲಿ, ಈ ದೇಶದಲ್ಲಿ ಈವರೆಗೆ ಯಾವ ಪಕ್ಷವೂ ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕಂತೆ ಆಡಳಿತ ನಡೆಸಿಲ್ಲ. ಇದೇ ಈ ದೇಶದಲ್ಲಿ ಆಗಾಗ ಧರ್ಮ ಸಂಘರ್ಷಗಳಿಗೆ ಕಾರಣವಾಗಿ ಕಾಣಿಸಿಕೊಂಡಿದೆ ಎನ್ನುವುದರಲ್ಲಿ ಸಂಶಯವಿಲ್ಲ. ನಿಜಕ್ಕೂ ಬದಲಾಗಬೇಕಾದದ್ದು ಇಲ್ಲಿ. ಈ ಭಾವುಕ ವಿಚಾರಗಳನ್ನು ದೂರವಿಡುವ ಆಡಳಿತ ಈ ದೇಶದ ಸ್ವಾಸ್ಥ್ಯ ಕ್ಕೆ ಬೇಕಾಗಿದೆ. ಧರ್ಮ ಪಾಲನೆಗೆ ಈ ದೇಶದ ಸಂವಿಧಾನ ಹೇರಳವಾದ ಅವಕಾಶವನ್ನು ಒದಗಿಸಿಕೊಟ್ಟಿದೆ. ತತ್ವ ವಿಚಾರಗಳ ಮೇಲೆ ಬೆಳಕು ಹರಿಸಬಲ್ಲ ರಾಜಕೀಯ ಈ ದೇಶದ ಪ್ರಜಾಪ್ರಭುತ್ವ ಬಯಸುತ್ತದೆ. ಹೌದು, ರಾಜಕೀಯ ತತ್ವ ವಿಚಾರಗಳ ಬಗ್ಗೆ ಮಾತನಾಡುವವರು, ಜನಪರ ಧ್ವನಿಯಾಗಿರುವವರು ಈ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾರೆ/ಯಾಗುತ್ತಾರೆ. ಪ್ರಜಾಪ್ರಭುತ್ವದಲ್ಲಿರುವ ಜನರು ಧರ್ಮ ರಾಜಕೀಯವನ್ನು ಪೋಷಿಸುವ ಧೋರಣೆಯನ್ನು ಬಿಟ್ಟು ತುರ್ತಾಗಿ ಹೊರಬರಬೇಕಿದೆ. ಆಗ ಮಾತ್ರ ಇಲ್ಲಿ ಹಿತ ಕಾಣುವುದಕ್ಕೆ ಸಾಧ್ಯ. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಗೌರವ ಸಲ್ಲುತ್ತದೆ.
-ಶ್ರೀರಾಜ್ ವಕ್ವಾಡಿ



