ದೇಶದ ಅಥವಾ ರಾಜ್ಯ ತನ್ನ ರಾಜಧಾನಿ ಸ್ಥಳದಿಂದ ಇಡೀ ದೇಶವನ್ನೋ ಅಥವಾ ರಾಜ್ಯವನ್ನು ನಿಭಾಯಿಸುವುದಕ್ಕೆ ಸಾಧ್ಯವಿಲ್ಲ. ದೇಶದ ಹಳ್ಳಿ ಹಳ್ಳಿ ಪ್ರದೇಶಗಳಲ್ಲಿರುವ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಖಂಡಿತ ಸುಲಭವಿಲ್ಲ. ಅದು ಕಷ್ಟಸಾಧ್ಯ. ಹಾಗಾಗಿಯೇ, ಜಿಲ್ಲೆ, ತಾಲ್ಲೂಕು, ಪಟ್ಟಣ ಮತ್ತು ಹಳ್ಳಿಗಳಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ನಡೆಸಲು ಚುನಾಯಿತ ಸ್ವರಾಜ್ಯ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು. ಅಂತೆಯೇ, ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯತ್ ರಾಜ್ಯವೆಂಬ ಚುನಾಯಿತ ಸಂಸ್ಥೆ ಆಡಳಿತಕ್ಕೆ ಬಂದವು. ಪಂಚಾಯತ್ ವ್ಯವಸ್ಥೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದು ಇಂದಿಗೆ ಇತಿಹಾಸ.
ಇಂತಹ ಗ್ರಾಮ ಪಂಚಾಯತ್ ಒಂದರಲ್ಲಿ ಸುಮಾರು ಇಪತ್ತು ವರ್ಷಗಳಿಂದ ಅತ್ಯಂತ ಪ್ರಾಮಾಣಿಕವಾಗಿದ್ದುಕೊಂಡು ಇಂದಿಗೂ ಜನಪ್ರೀತಿ ಹೊಂದಿರುವ ಒಬ್ಬ ಮಹಿಳೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮ್ಮೊಂದಿಗಿದ್ದಾರೆ ಎನ್ನುವುದು ಹೆಮ್ಮೆ.
ರಾಜಕೀಯ ಅಂದಮೇಲೆ, ಅಲ್ಲಿನ ವ್ಯವಸ್ಥೆಯಲ್ಲಿ ಮೇಲಾಟಗಳಿರುತ್ತವೆ, ವೈಮನಸ್ಸಿರುತ್ತದೆ, ಪಟ್ಟಭದ್ರ ಹಿತಾಸಕ್ತಿಗಳಿರುತ್ತದೆ, ಹೊಗಳುವವರು, ತೆಗಳುವವರು ಸೇರಿ ಒಮ್ಮೊಮ್ಮೆ ಮಾಡದ ತಪ್ಪಿಗೆ ಕೆಸರು ಮೈಗಂಟಿಸಿಕೊಳ್ಳುವ ಸ್ಥಿತಿಯೂ ಎದುರಾಗುತ್ತದೆ. ಈ ಎಲ್ಲವನ್ನೂ ಎದುರಿಸಿ ಸಮಾಜದ ಪರವಾಗಿ, ಜನರ ಪರವಾಗಿ ನಿಂತು ಯಾವುದೇ ಲಾಭೋದ್ದೇಶಗಳಿಲ್ಲದೆ ಪ್ರಾಮಾಣಿಕವಾಗಿ, ನಿಸ್ವಾರ್ಥವಾಗಿ ದುಡಿದು ಜನರಲ್ಲಿ ಬೆರೆತಿರುವವರನ್ನು ದುರ್ಬಿನ್ ಹಿಡಿದು ಹುಡುಕಿದರೇ, ಅಲ್ಲೆಲ್ಲೋ ಒಬ್ಬರೋ ಇಬ್ಬರೋ ಸಿಗುತ್ತಾರೆ. ಅಂತವರಲ್ಲಿ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮ ಪಂಚಾಯತ್‌ನ ಮೊದಲ ಮಹಿಳಾ ಅಧ್ಯಕ್ಷೆ ಗುಲಾಬಿ ಅಮ್ಮ ಕೂಡ ಒಬ್ಬರು.
ನನಗೆ ಬಡವರಿಗೆ ಏನಾದ್ರೂ ಸಹಾಯ ಮಾಡಬೇಕು ಅಂತ ನನ್ನ ಮನಸಲ್ಲಿದ್ದಿತ್ತು. ಸೇವಾ ಮನೋಭಾವ ಎಳವೆಯಿಂದಲೂ ನನ್ನಲ್ಲಿತ್ತು. ಜನರಿಗಾಗಿ, ಸಮಾಜಕ್ಕಾಗಿ ಏನಾದರೂ ಮಾಡಬೇಕು ಎನ್ನುವ ಕನಸೇ, ರಾಜಕೀಯಕ್ಕೆ ಪ್ರವೇಶ ಪಡೆದುಕೊಳ್ಳುವುದಕ್ಕೆ ಪ್ರೇರಣೆ ನೀಡಿತು. ಈಗ ರಾಜಕೀಯ ಅವಕಾಶವಾದ ಮತ್ತು ಪುರುಷಾತಿರೇಕದ ಧೋರಣೆಗಳು ಮಹಿಳಾ ಪ್ರಾತಿನಿಧ್ಯತೆಯನ್ನು ವಿಫಲಗೊಳಿಸುತ್ತಿದೆ ಎನ್ನುತ್ತಾರೆ ಗುಲಾಬಿ ಅಮ್ಮ.
‘ಗುಲಾಬಿ ಅಮ್ಮ, ಇಂದು ಬೀಜಾಡಿ ಗ್ರಾಮ ಪಂಚಾಯತ್‌ನ ಹಿರಿಯ ಸದಸ್ಯೆ. ಈ ಇಳಿವಯಸ್ಸಿನಲ್ಲೂ ತಮ್ಮ ವಾರ್ಡ್ನ ಹತ್ತಾರು ಸಮಸ್ಯೆಗಳ ಪಟ್ಟಿಯನ್ನು ಇವತ್ತಿಗೂ ಹಿಡಿದು ತಿರುಗುತ್ತಾರೆ. ಇಂದಿಗೂ ಜನಪರ ಕಾರ್ಯಗಳನ್ನು ಮಾಡುವಲ್ಲಿ ಪ್ರಾಮಾಣಿಕತೆ ಎಳ್ಳಷ್ಟೂ ಕಡಿಮೆಯಾಗಿಲ್ಲ. ಬಡವರಿಗೆ, ನಿರ್ಗತಿಕರಿಗೆ, ಅಮಾಯಕರಿಗೆ ತಮ್ಮ ಸ್ವಂತ ಹಣದಿಂದಲೇ ಸಹಾಯ ಮಾಡಿದ ತಾಯಿ ಅವರು. ಹಾಗಾಗಿಯೇ, ಪ್ರತಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಈ ವಾರ್ಡ್ ನ ನಾಗರಿಕರು ಅವರನ್ನೇ ಗೆಲ್ಲಿಸುತ್ತಾರೆ. ಅದು ಅವರ ಪ್ರಾಮಾಣಿಕತೆಯನ್ನು ಹೇಳುತ್ತದೆ' ಅಂತ ಅಲ್ಲಿನ ಸ್ಥಳಿಯರಾದ ಸಂದೇಶ್ ಪೂಜಾರಿ ಮನಬಿಚ್ಚಿ ಹೇಳುತ್ತಾರೆ.
ಒಟ್ಟಿನಲ್ಲಿ, ಒಬ್ಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಆಡಳಿತ ಹೇಗಿರಬೇಕು..? ಜನರಿಗಾಗಿ ಯಾವ ರೀತಿಯಲ್ಲಿ ಗ್ರಾಮ ಪಂಚಾಯತ್ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಹೇಳಿಕೊಟ್ಟವರು ಗುಲಾಬಿ ಅಮ್ಮ.
ಇನ್ನು ಉಳಿದದ್ದೆಲ್ಲಾ ಸ್ವತಃ ಅವರೇ ಹೇಳುತ್ತಾರೆ ಕೇಳಿ :
ನಾನೊಬ್ಬಳು ಗೃಹಿಣಿ. ಆ ಕಾಲದಲ್ಲಿ ರಾಜಕೀಯಕ್ಕೆ ಕಾಲಿಡುವುದೆಂದರೇ ಮಹಿಳೆಯರಿಗೆ ಅಳುಕಿದ್ದಿತ್ತು. ಮೊದಲಿನಿಂದಲೂ ಬಡವರ ಬಗ್ಗೆ ನನಗೆ ಸೇವೆ ಮಾಡುವ ಮನಸ್ಸಿದ್ದಿತ್ತು. ಆ ಕಾಲದಲ್ಲಿಯೇ, ನಮ್ಮ ಮನೆಯ ಹೆಬ್ಬಾಗಿಲಿನಲ್ಲಿ ನಿರ್ಗತಿಕ ಕೆಲವರಿಗೆ ಆಸರೆಕೊಟ್ಟಂತಹ ತೃಪ್ತಿ ಇದೆ ನನಗೆ. ಇದನ್ನೆಲ್ಲಾ ನೋಡಿ ತಾತ್ಸಾರದಿಂದ ನೋಡಿದವರು ಇದ್ದಾರೆ. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನಲ್ಲಾಗುವ ಸಹಾಯ ಅಂತವರಿಗೆ ಮಾಡುತ್ತಿದ್ದೆ. ತೀರಾ ಬಡಸ್ಥಿಕೆಯಲ್ಲಿರುವವರಿಗೆ ಹಣ ಕೊಟ್ಟು ಸಹಾಯ ಮಾಡುವಷ್ಟು ಒಳ್ಳೆಯ ಸ್ಥಿತಿಯಲ್ಲಿರಲಿಲ್ಲ. ನಾಲ್ಕು ತೆಂಗಿನ ಕಾಯಿಯೋ ಅಥವಾ ಅವರು ಗಂಜಿಯಾದರೂ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲಿ ಅಂತ ಅಲ್ಪ ಸ್ವಲ್ಪ ಅಕ್ಕಿಯೋ ಕೊಟ್ಟು ಸಹಕರಿಸುತ್ತಿದ್ದೆ. ಬಡತನದಲ್ಲೇ ಹುಟ್ಟಿ ಬೆಳೆದಿರುವುದರಿಂದ ಆ ಕಷ್ಟಗಳೆಲ್ಲಾ ಗೊತ್ತಿತ್ತು ನನಗೆ. ಹೀಗೆ ಸಹಾಯ ಮಾಡುತ್ತಿದ್ದ ಸಂದರ್ಭದಲ್ಲಿ, ರಾಜಕೀಯಕ್ಕೆ ಬರುವ ಅವಕಾಶ ದೊರಕಿತು. ಮೊದಲ ಸಾಲಿನಲ್ಲೇ, ಬೀಜಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷತೆ ವಹಿಸಿಕೊಳ್ಳುವ ಜವಾಬ್ದಾರಿ ದೊರಕಿತು. 1999 ರಿಂದ 2001ರ ತನಕ ಅಧ್ಯಕ್ಷೆಯಾಗಿದ್ದೆ. ಸೇವಾ ಮನೋಭಾವ ಇದ್ದಿದ್ದರಿಂದ ರಾಜಕೀಯದಲ್ಲಿ ಪ್ರಾಮಾಣೀಕವಾಗಿ, ಜನಪರವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಯಿತು. ಗ್ರಾಮೀಣ ರಸ್ತೆಗಳಿಗೆ ಪ್ರಮುಖ ಆದ್ಯತೆ ಕೊಟ್ಟಿದ್ದೆ. ಸುಮಾರು 15-16 ಹೊಸ ರಸ್ತೆಗಳು ನನ್ನ ಅವಧಿಯಲ್ಲಾಗಿದೆ ಎನ್ನುವುದು ಹೆಮ್ಮೆ ನನಗೆ. ಕಾಲು ಸಂಕಗಳು, ಒಳಚರಂಡಿ, ನೀರಿನ ವ್ಯವಸ್ಥೆ, ಬೀದಿ ದೀಪ, ಸ್ವಚ್ಛ ಗ್ರಾಮ ಯೋಜನೆಯಡಿಯಲ್ಲಿ ಶೌಚಾಲಯಗಳು, ಗಿರಿಜನ ಸಮುದಾಯದವರಿಗೆ ಮನೆ ನಿರ್ಮಾಣ ನನ್ನ ಅವಧಿಯಲ್ಲಾಗಿದೆ. ಯಾವುದೇ ಯೋಜನೆಯಲ್ಲಿ ಒಂದು ರೂಪಾಯಿ ನಾನು ಇಟ್ಟುಕೊಂಡವಳಲ್ಲ, ಕೆಲಸಗಳಿಂದ ಲಾಭವಾಗಿಲ್ಲ ಎಂದು ಗುತ್ತಿಗೆದಾರರುಗಳೆಲ್ಲಾ ನನ್ನ ಬಗ್ಗೆ ಅಸಮಾಧಾನ ತೋರಿಸಿದ್ದು ಕೂಡ ಇದೆ. ಬಿಪಿಎಲ್ ಕಾರ್ಡ್, ಸಂಧ್ಯಾ ಸುರಕ್ಷಾ, ವಿಧವಾ ಮಾಸಾಶನಗಳನ್ನು ಬಡವರಿಗೆ ಮಾಡಿಸಿಕೊಟ್ಟಿದ್ದೇನೆ. ಜನ ಇಂದಿಗೂ ನನ್ನನ್ನು ‘ಗುಲಾಬಿ ಅಮ್ಮ’ ಅಂತ ಗೌರವದಿಂದ ನೋಡುತ್ತಾರೆ ಎನ್ನುವುದರ ಬಗ್ಗೆ ಆತ್ಮ ತೃಪ್ತಿಯಿದೆ. ನಾನು, ಕಾಂಗ್ರೇಸ್‌ನಿಂದ ಸ್ಪರ್ಧಿಸಿದ್ದರೂ ಕೂಡ ಜನ ನಿಸ್ಪಕ್ಷಪಾತವಾಗಿ ನನ್ನ ಸೇವೆ ನೋಡಿ ಮತ ಹಾಕಿ ಗೆಲ್ಲಿಸಿ ಸೇವೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರು. ವಿರೋಧ ಪಕ್ಷದವರೂ ಕೂಡ ನಾನು ಮಾಡಿದ ಕೆಲಸ ನೋಡಿ ಮತ ಹಾಕಿ ಬೆಂಬಲಿಸಿದ್ದಾರೆ. ಪಂಚಾಯತ್‌ನ ಆಡಳಿತ ಮಟ್ಟದಲ್ಲಿ ಈಗ ನನ್ನ ಬಗ್ಗೆ ಕೆಲವರು ಭಿನ್ನ ಧ್ವನಿಯಲ್ಲಿ ಮಾತಾಡುತ್ತಾರೆ. ಆದರೇ, ನಾನೆಂದೂ ದ್ವೇಷ ಸಾಧಿಸಿದವಳಲ್ಲ. ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೂ ಕೂಡ ತಪ್ಪು ಮಾತಾಡುತ್ತಾರೆ ಎನ್ನುವುದರ ಬಗ್ಗೆ ಅಸಮಾಧಾನವಿದೆ. ಈಗಂತೂ ಸ್ವಾರ್ಥ ರಾಜಕಾರಣ ತುಂಬಿ ಹೋಗಿದೆ.
ಆಗಿನ ಕಾಲದಲ್ಲಿ ತಿಂಗಳಿಗೆ ಸರ್ಕಾರದಿಂದ ಬರುತ್ತಿದ್ದ 300 ರೂಪಾಯಿ ಗೌರವಧನವನ್ನೂ ಕೂಡ ಎಷ್ಟೋ ಸಂದರ್ಭಗಳಲ್ಲಿ ಸಮಾಜದ ಒಳಿತಿಗಾಗಿ ಕೊಟ್ಟಿದ್ದೇನೆ. ಜನರು ಸಹಕಾರ ನೀಡಿದ್ದಾರೆ, ಗೌರವ ಕೊಟ್ಟಿದ್ದಾರೆ ಆ ಬಗ್ಗೆ ತುಂಬಾ ಸಂತೋಷವಿದೆ. ಅಂತ ಅಪ್ಪಟ ಕುಂದಾಪುರದ ಗ್ರಾಮ್ಯ ಭಾಷೆಯಲ್ಲೇ ಹೇಳುತ್ತಾ ಮಾತಿಗೆ ಚುಕ್ಕಿ ಇಟ್ಟರು ಗುಲಾಬಿ ಅಮ್ಮ.
-ಶ್ರೀರಾಜ್ ವಕ್ವಾಡಿ